Saturday, May 21, 2011

ಪ್ರಳಯವಾಗೋಯ್ತು...



      ನನ್ನ ಕೈ ಬೆರಳುಗಳು ನಿದಾನವಾಗಿ ಜಾರುತ್ತಿವೆ.....ಮೈಯೆಲ್ಲಾ ನಡುಗುತ್ತಿದೆ ಯಾವಕ್ಷಣದಲ್ಲಿ ಬೇಕಾದರೂ ನನ್ನ ಜೀವ ಹಾರಿ ಹೋಗಬಹುದು, ಕೇವಲ ಎರಡು ಕೈ ಬೆರಳುಗಳ ಆಧಾರದಲ್ಲಿ ನೇತಾಡುತ್ತಿದ್ದ ನಾನು ಒಮ್ಮೆ ಭಯದಿಂದ ಕೆಳಗೆ ನೋಡಿದೆ.  ಪಾತಾಳ ಕಂಡಂತೆ ಆಗಿತ್ತು.  ಏಕೆಂದರೆ ನಾನು ಆ ಕಟ್ಟಡದ ಸಜ್ಜೆಯನ್ನೆ ಬೆರಳಗಳ ಆಧಾರದಲ್ಲಿ ಹಿಡಿದು ನೇತಾಡುತ್ತಿದೆ. ಆ ಕಟ್ಟಡದ ಗೋಡೆಗೆ ಸರಿಯಾಗಿ ಆಳಕ್ಕೆ ಭೂಮಿ ಬಿರುಕು ಬಿಟ್ಟಿತ್ತು. ಎಷ್ಟು ಆಳಕ್ಕೆ ಎಂದರೆ ಕಡಿಮೆ ಎಂದರೂ ಒಂದು ಸಾವಿರ ಅಡಿಗಳಿರಬಹುದು.  ಇಷ್ಟಕ್ಕೂ ನಾನೊಬ್ಬನೇ ನೇತಾಡುತ್ತಿಲ್ಲ.  ಆ ಸಾಲಿನ ಎಲ್ಲಾ ಕಟ್ಟಡಗಳಲ್ಲಿ ಅನೇಕರು ಪೈಪುಗಳು, ಮುರಿದ ಬಾಗಿಲುಗಳು, ಕಿಟಕಿಗಳು, ಸಜ್ಜೆಗಳನ್ನಿಡಿದು ನೇತಾಡುತ್ತಿದ್ದರೆ ಎಷ್ಟೋ ಜನ ಗಾಳಿಯಲ್ಲಿ ತೇಲಿ ಕೆಳಗೆ ಬೀಳುತ್ತಿದ್ದಾರೆ. ಬಿದ್ದವರು ಸಾವಿರ ಅಡಿ ಆಳಕ್ಕೆ.  ಬೀಳುವಾಗಲೇ ಅವರ ಜೀವ ಹೋಗಿಬಿಟ್ಟಿರುತ್ತದೋ,, ಕೆಳಗೆ ಬಿದ್ದ ಮೇಲೆ ದೇಹ ಚೂರುಚೂರಾಗಿ ಸಾಯುತ್ತಾರೋ ಒಟ್ಟಾರೆ ಒಂದಲ್ಲ ಒಂದು ರೀತಿ ಎಲ್ಲರೂ ಸಾಯುತ್ತಿದ್ದಾರೆ.  ನನ್ನ ಸಾವಿನ ಕ್ಷಣಗಣನೆಯೂ ಆಗುತ್ತಿದೆ. ಇಡೀ ಬೆಂಗಳೂರಿಗೆ ಬೆಂಗಳೂರು, ಕರ್ನಾಟಕ, ಭಾರತ, ಅಷ್ಟೇ ಇಡೀ ಪ್ರಪಂಚವೇ ಪ್ರಳಯಕ್ಕೆ ಸಿಲುಕಿ ಸುನಾಮಿ, ಭೂಕಂಪ, ಬಿರುಗಾಳಿ, ಚಂಡಮಾರುತ.....ಪ್ರವಾಹ ಎಲ್ಲವೂ ಒಟ್ಟಿಗೆ ಆಗುತ್ತಿದ್ದೂ  ಪ್ರಪಂಚಕ್ಕೆ ಪ್ರಪಂಚವೇ ನಾಶವಾಗುತ್ತಿದೆ!   ಅಂತ ಪರಿಸ್ಥಿತಿಯಲ್ಲೂ ಒಮ್ಮೆ ಇದೆಲ್ಲವನ್ನು ನೆನಪಿಸಿಕೊಳ್ಳತೊಡಗಿದೆ.  ಇವತ್ತು ಸರಿಯಾಗಿ ಮೇ ತಿಂಗಳ ೨೧ನೇ ತಾರೀಖು. ಸಂಜೆ ಒಂದು ಮದುವೆ ಅರತಕ್ಷತೆ ಫೋಟೊಗ್ರಫಿಗೆ ಬಂದಿದ್ದ ನಾನು ಮುಗಿಯುವ ಹೊತ್ತಿಗೆ ರಾತ್ರಿ ಹತ್ತು ಗಂಟೆಯಾಗಿತ್ತು.

    ನಾನು ಬರುವುದು ತಡವಾಗುತ್ತದೋ ಇಲ್ಲವೋ ಎನ್ನುವ ವಿಚಾರಕ್ಕಾಗಿ ಎಂದಿನಂತೆ ಹೇಮಾಳಿಂದ ಒಂದು ಪೋನ್ ಕಾಲ್ ಬಂತು. "ರೀ ಇಲ್ಲಿ ಬಿರುಗಾಳಿ ಬೀಸುತ್ತಿದೆ, ಕಿಟಕಿ ಬಾಗಿಲುಗಳೆಲ್ಲಾ ಕಿತ್ತುಕೊಂಡು ಹೋಗಿವೆ, ಒಳಗೆ ನಿಲ್ಲಲಾರದಷ್ಟು ಗಾಳಿಯಿದೆ, ನಮ್ಮ ಮನೆಯ ಗೋಡೆ ಮದ್ಯಕ್ಕೆ ಸೀಳಾಗಿ ಅಡುಗೆ ಮನೆ ಮತು ಬೆಡ್ ರೂಮ್ ಎಲ್ಲ ನಾಶವಾಗಿಬಿಟ್ಟಿದೆ. ನಾನಿದ್ದ ಮತ್ತೊಂದು ರೂಮ್ ಕೂಡ ಅಲುಗಾಡುತ್ತಿದೆ. ನಾನು ಆಕಡೆಗೆ ಹೋಗಲಾಗುತ್ತಿಲ್ಲ, ಮೆಟ್ಟಿಲುಗಳು ಕುಸಿದುಬಿಟ್ಟಿವೆ,  ಎಲ್ಲರ ಮನೆಯಲ್ಲೂ ಹೀಗೆ ಅವರ ಮನೆಗಳಾಗಲೇ ನೆಲಸಮವಾಗಿವೆ,  ಅಕ್ಕಪಕ್ಕದ ಮನೆಯವರು ಯಾರು ಬದುಕಿದಂತೆ ಕಾಣುತ್ತಿಲ್ಲ. ನನಗೆ ಭಯವಾಗುತ್ತಿದೆ"...ಎನ್ನುವಷ್ಟರಲ್ಲಿ ಅವಳ ಫೋನ್ ಕಟ್ಟಾಗಿತ್ತು.  ನಾನು ಫೋಟೊ ತೆಗೆಯುವುದು ಬಿಟ್ಟು ಅಲ್ಲಿಂದ ಹೊರಗೆ ಓಡಿಬಂದೆ ಅಷ್ಟೇ. ಮುಂದೆ ಹೆಜ್ಜೆ ಇಡಲಾಗಲಿಲ್ಲ. ನನ್ನ ಮುಂದಿದ್ದ ಮೆಟ್ಟಿಲುಗಳ ಸಮೇತ ಅರ್ಧ ಕಟ್ಟಡವೇ ನಿದಾನವಾಗಿ ನನ್ನ ಕಣ್ಣೆದುರೇ ಕುಸಿಯತೊಡಗಿತ್ತು. ಒಂದು ಕ್ಷಣ ನಾನು ಮೈಮರೆತು ಹೆಜ್ಜೆಇಟ್ಟಿದ್ದರೂ ನಾನು ಅದರ ಜೊತೆ ನೆಲಸಮವಾಗಿಬಿಡುತ್ತಿದೆ.  ಹಿಂದಕ್ಕೆ ಓಡಿಬಂದು ನೋಡುವಷ್ಟರಲ್ಲಿ ಮದುವೆ ಮನೆಯಲ್ಲಿನ ಸಂಭ್ರಮವೆಲ್ಲಾ ಮಾಯವಾಗಿ ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಎಲ್ಲ ಬೇರೆ ಊರುಗಳಲ್ಲಿಯೂ ಹೀಗೆ ಆಗಿ ಊರಿಗೆ ಊರೇ ಮುಳುಗಿಹೋಗುತ್ತಿರುವುದು ಅವರ ಆತಂಕದಿಂದ ಮಾತಾಡುತ್ತಿರುವ ಮೊಬೈಲುಗಳಿಂದ ಕೇಳಿಸುತ್ತಿದೆ.  ಇನ್ನೇನು ನನ್ನ ಕತೆಯೂ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ನಾನು ನಿಂತಿದ್ದ ನೆಲವೇ ನಿದಾನವಾಗಿ ಬಿರುಕುಬಿಡತೊಡಗಿತ್ತು.  ಎಚ್ಚೆತ್ತ ನಾನು ಓಡಿ ಅಲ್ಲೊಂದು ಸಜ್ಜೆಯನ್ನು ಎರಡು ಕೈಗಳಿಂದ ಹಿಡಿದು ನೇತಾಡತೊಡಗಿದೆ. ನನ್ನ ಕ್ಯಾಮೆರ ಬ್ಯಾಗ್ ಎಲ್ಲಿಹೋಯಿತೋ ಗೊತ್ತಿಲ್ಲ. ಆದ್ರೆ ಕ್ಯಾಮೆರಾ ಮಾತ್ರ ಬೆಲ್ಟಿನ ಸಮೇತ ಭುಜದಲ್ಲಿ ನೇತಾಡುತ್ತಿತ್ತು.

ಕೊನೆಯ ಬಾರಿ ಎನ್ನುವಂತೆ ನಿದಾನವಾಗಿ ಮೇಲೆ  ನೋಡಿದೆನಲ್ಲಾ, ಆಕಾಶದೆತ್ತರಕ್ಕೆ ಈ  ಬಾರಿ ಬ್ರಹ್ಮಾಂಡ ಸ್ವಾಮೀಜಿ  ನಿಂತು ನಗುತ್ತಿದ್ದಾನೆ. ನಾನು ಹೇಳಿದ್ದು ಹೇಗೆ ನಿಜವಾಯಿತು ನೋಡಿ ಅಂತ ಜೋರಾಗಿ ಗಹಗಹಿಸಿ ನಗುತ್ತಿದ್ದಾನೆ. "ಪಾಪಿ ಮುಂಡೇವ, ನಾನು ಎಷ್ಟು ಹೇಳಿದ್ರೂ ನಂಬಲಿಲ್ಲ ಅಲ್ವಾ ನಿಮ್ಮ ಕರ್ಮಕಾಂಡವನ್ನು ಅನುಭವಿಸಿ"  ಅಂತ ಒಂದು ಕೈಯಲ್ಲಿ ಷಣ್ಮುಖನ ಪುಟ್ಟ ಈಟಿ ಮತ್ತೊಂದು ಕೈಯಲ್ಲಿ ಮೊಸರನ್ನದ ಪೊಟ್ಟಣವನ್ನು ಹಿಡಿದುಕೊಂಡು ಗಹಗಹಿಸಿ ನಗುತ್ತಿದ್ದಾನೆ.  ಆತ ಈ ಭೂಮಿಯನ್ನೇ ನಾಶ ಮಾಡುವ ರಾಕ್ಷಸನಂತೆ ಕಾಣುತ್ತಿದ್ದಾನೆ. ಆಷ್ಟರಲ್ಲೇ ದೂರದಲ್ಲೊಂದು ಬಸ್ಸು ಹೊರಡಲು ನಿಂತಿದೆ.    ಆ ಬಸ್ಸಿನೊಳಗೆ ಆಗಲೇ ನೂರಕ್ಕಿಂತ ಹೆಚ್ಚು ಜನ ಒಳಗೆ ತುಂಬಿದ್ದಾರೆ.  ಇನ್ನಷ್ಟೂ ಮತ್ತಷ್ಟೂ, ಬಸ್ಸಿನ ಮೇಲೆ ಬಸ್ಸಿನ ಅಕ್ಕಪಕ್ಕ ಹೀಗೆ ಒಂದು ಸಾವಿರಕ್ಕೂ ಹೆಚ್ಚು ಜನರೂ ತುಂಬಿ ಆದು ಯಾವ ಕಾಣುತ್ತಿದೆಯೆಂದರೆ ಒಂದುದೊಡ್ಡ ಬಾಲ್ ಆಕಾರದಲ್ಲಿ ಕಂಡು ಕೆಳಗೆ ನಾಲ್ಕು ಚಕ್ರಗಳನ್ನು ಬಿಟ್ಟರೆ ಅದೊಂದು ಬಸ್ಸು ಅನ್ನುವ ಸೂಚನೆಯೇ ಇಲ್ಲದಂತೆ ಅದನ್ನು ಸುತ್ತುವರಿದುಬಿಟ್ಟಿದ್ದಾರೆ.  ಬಸ್ಸಿನ ಹಿಂಭಾಗದಲ್ಲೊಂದು ಬೋರ್ಡು ಅದರ ಮೇಲೆ "ಬೆಳಗಾವಿಯ ಹತ್ತಿರದ ಹಳ್ಳಿಗೆ" ಅಂತ ಬರೆದಿದೆ. ಪ್ರಪಂಚವೇ ಪ್ರಳಯದಲ್ಲಿ ಮುಳುಗಿ ನಾಶವಾದರೂ ಅದೊಂದು ಹಳ್ಳಿ ಉಳಿದುಕೊಳ್ಳುತ್ತದೆ ಅಂತ ಈ ಬ್ರಹ್ಮಾಂಡ ಸ್ವಾಮೀಜಿ ಹೇಳಿದ್ದರಿಂದ ಎಲ್ಲರೂ ಆ ಬಸ್ಸನ್ನು ಈ ಪರಿ ಹತ್ತಿದ್ದಾರೆ.  ನಿದಾನವಾಗಿ ಆ ಬಸ್ಸು ಹೊರಟಿತು.  ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಬ್ಬೊಬ್ಬರೇ ಕೆಳಗೆ ಹಾರಿ ಬೀಳುತ್ತಿದ್ದಾರೆ. ಮತ್ತಷ್ಟು ದೂರ ಸಾಗಿರಬಹುದು,  ಬಸ್ಸಿನ ಮುಂಭಾಗದ ಸೇತುವೆ ನಿದಾನವಾಗಿ ಕುಸಿಯುತ್ತಿದೆ, ಅದರ ಮೇಲೆ ಚಲಿಸುತ್ತಿರುವ ಬಸ್ಸು ಕೂಡ ಸೇತುವೆ ಸಮೇತ ಕುಸಿಯುತ್ತಾ ನಿದಾನವಾಗಿ ನೀರಿನೊಳಗೆ ಮುಳುಗುತ್ತಿದೆ...
    
       ಇದನ್ನು ನೋಡಿ ಈ ರಾಕ್ಷಸ ಸ್ವಾಮಿ ಜೋರಾಗಿ ಗಹಗಹಿಸಿ ನಗುತ್ತಿದ್ದಾನೆ.  ಅಯ್ಯೋ ನನ್ನ ಕೈ  ಜಾರಿಹೋಗುತ್ತಿದೆಯಲ್ಲಾ  ಇನ್ನೇನು ನಾನು ಕೆಳಗೆ ಬಿದ್ದು ಸಾಯುತ್ತಿದ್ದೇನೆ ಅಂದುಕೊಳ್ಳುತ್ತಿರುವಷ್ಟರಲ್ಲಿ ನನ್ನ ಆಶ್ಚರ್ಯ " ನನ್ನ ಕೈಬೆರಳುಗಳು ರಬ್ಬರಿನಂತೆ ಬೆಳೆಯುತ್ತಿವೆ! ಇಡೀ ದೇಹವೇ ಮತ್ತೆ ರಬ್ಬರಿನಂತೆ ಆಗಿ ದೇಹ ಹೂವಿನಂತೆ ಹಗುರಾಗುತ್ತಿದೆ!  ಒಮ್ಮೆ ನಾನು ಕೈಬೆರಳುಗಳನ್ನು ಒತ್ತಿದೆನಲ್ಲ. ಚಂಗನೆ ಹಾರಿದಂತೆ ಟೆರಸ್ ಹತ್ತಿಬಿಟ್ಟಿದ್ದೆ.  ನನಗೇನೋ ಈಗ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹಾರಬೇಕೆನಿಸುತ್ತಿದೆ! ಹಾರಿದೆ. ಹಾಗೇ ಗಾಳಿಯಲ್ಲಿ ತೇಲುತ್ತಿರುವ ಅನುಭವ! ಆ ಕಟ್ಟಡದಲ್ಲಿ ನಿದಾನವಾಗಿ ಕಾಲೂರಿ ನಿಂತ ಅನುಭವ.  ಸರಿ ಹೇಗಾದರೂ ಸಾಯುತ್ತೇನೆಲ್ಲ ಅಂದುಕೊಂಡು ಕಟ್ಟಡದಿಂದ ಕಟ್ಟಡಕ್ಕೆ ಹಾರಿ ನಾಶವಾಗುತ್ತಿರುವ ಈ ಎಲ್ಲಾ ದೃಶ್ಯಗಳನ್ನು ಫೋಟೊ ತೆಗೆಯತೊಡಗಿದೆ.   ಈ ಪ್ರಪಂಚ ಮುಳುಗಿ ಎಲ್ಲಾ ನಾಶವಾಗಿ ಮುಂದೆ ಎಷ್ಟೋ ಸಾವಿರ ವರ್ಷಗಳ ನಂತರ ಈ ಭೂಮಿಯಲ್ಲಿ ಮುಂದೆಂದೋ ಹುಟ್ಟುವ ಜೀವಿಗೆ  ನಮ್ಮ ಹಿಂದಿನ ಪ್ರಪಂಚ ಹೇಗಿತ್ತೋ ಅನ್ನುವುದನ್ನು ತಿಳಿದುಕೊಳ್ಳಲು ಈ ಫೋಟೊಗಳು ಸಹಕಾರಿಯಾಗಲಿ ಅಂತ ತನ್ಮಯತೆಯಿಂದ ಫೋಟೊ ತೆಗೆಯುತ್ತಿದ್ದೆ.

     ಮೊಸರನ್ನವನ್ನು ಆಗ ತಾನೆ ತಿಂದು ಮುಗಿಸಿದ್ದ ಈ ಬಾಡಿ ಬ್ರಹ್ಮಂಡ ನಾನು ಸಾಯದೇ ಉಳಿದಿರುವುದನ್ನು ನೋಡಿದನಲ್ಲ, ತನ್ನ ಕೈಯಲಿದ್ದ ಈಟಿಯಿಂದ ತಿವಿಯಲು ಓಡಿಬಂದ. ಮತ್ತೊಂದು ಕೈಯಲ್ಲಿ ದೇವರ ಗಂಟೆಯನ್ನು ಅಲುಗಾಡಿಸುತ್ತಾ ಶಬ್ದ ಮಾಡುತ್ತಿದ್ದ.  ನನ್ನ ಮುಂದೆ ಆಕಾಶದೆತ್ತರಕ್ಕೆ ಬಾಡಿ ಬ್ರಹ್ಮಾಂಡ ನಿಂತಿದೆ. ಸಾಯಿಸುವ ಮುನ್ನ ಒಮ್ಮೆ ಗಹಗಹಿಸಿ ನಕ್ಕು ಜೋರಾಗಿ ಗಂಟೆ ಬಾರಿಸತೊಡಗಿದ..... ಆ ಸದ್ದು ಕೇಳಲಾಗದೇ ನಾನು ಕಿವಿಮುಚ್ಚಿಕೊಂಡರೂ  ತಡೆಯಲಾಗುತ್ತಿಲ್ಲ. ಒಮ್ಮೆ ಶಂಖವನ್ನು ಊದಿ ಜೋರಾಗಿ ಗಂಟೆ ಬಾರಿಸಿ ಇನ್ನೇನು ನನ್ನ ಎದೆಗೆ ಈಟಿಯನ್ನು ಚುಚ್ಚಿ ಸಾಯಿಸಬೇಕು.... 

"ರೀ...ರೀ...ಎದ್ದೇಳ್ರಿ.... ಮೊಬೈಲ್ ಅಲಾರಂ ಆಗಿನಿಂದ ಒಂದೇ ಸಮನೆ ಹೊಡ್ಕೋತಿದ್ರೂ ಯಾಕೆ ಇವತ್ತು ನಿಮಗೆ  ಎಚ್ಚರವಾಗುತ್ತಿಲ್ಲ. ಎದ್ದೇಳ್ರೀ ಆಗಲೇ ಗಂಟೆ ನಾಲ್ಕುವರೆಯಾಯ್ತು"... ನನ್ನನ್ನು ಅಲುಗಾಡಿಸಿದ್ದಳು ನನ್ನ ಶ್ರೀಮತಿ.

"ಅರೆರೆ...ಇದೇನಿದೂ ನಾನಿನ್ನು ಮಲಗೇ ಇದ್ದೀನಲ್ಲ. ಸತ್ತೋಗಿಲ್ವಾ",  ಸುತ್ತಲೂ ಕಣ್ಣು ತೆರೆದು ನೋಡಿದೆ. ಮಸುಕುಮಸುಕಾಗಿಯೇ ಎಲ್ಲವೂ ಕಾಣುತ್ತಿತ್ತು. ಓಹ್! ಮಲಗುತ್ತಲೇ ಸಾಯುತ್ತಿದ್ದೇನೆ, ಬ್ರಹ್ಮಾಂಡ ಗುರುಜೀ ಹೇಳಿದ್ದಾನಲ್ಲ ಅದು ತಪ್ಪುವುದಿಲ್ಲವೆಂದು ಮತ್ತೆ ಕಣ್ಣು ಮುಚ್ಚಿದೆ. "ಏನ್ರೀ ನೀವು ಮತ್ತೆ ಮಲಗಿಕೊಳ್ಳುತ್ತಿದ್ದೀರಿ, ಇವತ್ತು ಪೇಪರ್ ಕೆಲಸಕ್ಕೆ ರಜಾನಾ"  ಅಂತ ಮತ್ತೆ ಅಲುಗಾಡಿಸಿದಳಲ್ಲ ಈ ಬಾರಿ ಪೂರ್ತಿ ಎಚ್ಚರವಾಯಿತು.   ಎದ್ದು ನೋಡುತ್ತೇನೆ. ನನ್ನ ಪಕ್ಕ ಹೇಮಾಶ್ರೀ, ನನ್ನ ಮನೆ, ರೂಮು, ಎದುರಿದ್ದ ಕಪಾಟಿನಲ್ಲಿರುವ ಪುಸ್ತಕಗಳು, ಇತ್ಯಾದಿಗಳೆಲ್ಲಾ ಹಾಗೆ ಇವೆ.  ನಾನು ಸತ್ತಿಲ್ಲ. ಇವು ಯಾವುವು ಪ್ರಳಯದಿಂದ ಕೊಚ್ಚಿಕೊಂಡುಹೋಗಿಲ್ಲ. ಎಲ್ಲಿವಿಯೋ ಆಗೆ ಇವೆಯಲ್ಲಾ!  ಹಾಗಾದರೆ ಇದುವರೆಗೂ ಕಂಡಿದ್ದೆಲ್ಲಾ ಕನಸು ಅಂದುಕೊಂಡಾಗ"  ಆ ನಿದ್ರೆ ಕಣ್ಣಿನಲ್ಲಿ ನಗುಬಂತು.  "ನಿಮಗೇನೋ ಆಗಿದೆ ಇವತ್ತು ಎದ್ದ ತಕ್ಷಣ ಮೊದಲ ಬಾರಿಗೆ ಹೀಗೆ ನಗುತ್ತಿದ್ದೀರಿ"  ಅಂದುಕೊಂಡು ಅಂತ ಮುಂಜಾನೆಯಲ್ಲೇ ಚಿಂತೆಗೊಳಗಾದಳು.

"ಓಹ್! ಹಾಗಾದರೆ ನಿನ್ನೆ ದಿನಾಂಕ ಮೇ ಇಪ್ಪತ್ತೊಂದು ಬಾಡಿ ಬ್ರಹ್ಮಾಂಡ ಗುರೂಜಿ ಹೇಳಿದಂತೆ ಪ್ರಳಯವಾಗಿ ಯಾರು ಉಳಿಯೊಲ್ಲವೆಂದುಕೊಂಡು ಅದೇ ರಾತ್ರಿ ಅದೇ ಯೋಚನೆಯಲ್ಲಿ ಮಲಗಿದ್ದೆನಲ್ಲಾ ಅದಕ್ಕೆ ರಾತ್ರಿಯೆಲ್ಲಾ ಕನಸಿನಲ್ಲಿ ಪ್ರಳಯ, ಭೂಕಂಪ, ಸುನಾಮಿಗಳೇ ಕಾಣಿಸಿಕೊಂಡು ನಮ್ಮನ್ನೆಲ್ಲಾ ನಾಶಮಾಡುತ್ತಿರುವ ದೃಶ್ಯಾವಳಿಗಳೇ ಕಾಣಿಸುತ್ತಿದ್ದಿದ್ದು ಇದಕ್ಕೇ ಇರಬೇಕು"   ಎಂದುಕೊಂಡು ಎದ್ದು ಮುಖತೊಳೆದುಕೊಂಡು ಬಟ್ಟೆಬದಲಾಯಿಸಿಕೊಂಡು ಮುಂಜಾನೆ ನಾಲ್ಕು ಮುಕ್ಕಾಲಿನ ಕತ್ತಲಲ್ಲಿ ನನ್ನ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊರಟೆ.  ಪ್ರಳಯದ ಕನಸಿನಿಂದ ಹೊರಬಂದು ಇವತ್ತು ಏನೇನು ಕೆಲಸವುಂಟು ಅಂತ ಒಮ್ಮೆ ಯೋಚಿಸಿದಾಗ ಆಗಾಧಪಟ್ಟಿಯೇ ಹೊರಬಿತ್ತು.

       ಮೊದಲನೆಯದು ದಿನಪತ್ರಿಕೆಯ ವಿತರಣೆಯ ಕೆಲಸ, ನಂತರ ಸ್ನಾನ ತಿಂಡಿ, ಅರ್ಧವಾಗಿರುವ ಫೋಟೊಗ್ರಫಿ ಲೇಖನದ  ನಾಲ್ಕನೇ ಭಾಗವನ್ನು ಮುಗಿಸಬೇಕು, ಆಗಬೇಕಾಗಿರುವ ಐದು ಮದುವೆ ಫೋಟೊಗಳ ಅಲ್ವಂಗಳಲ್ಲಿ ಒಂದನ್ನಾದರೂ ಇವತ್ತು ಸಿದ್ಧಗೊಳಿಸಬೇಕು, ಕಳೆದ ಒಂದು ತಿಂಗಳಿಂದ ಭಾನುವಾರದ ಯಶವಂತಪುರ ತರಕಾರಿ ಸಂತೆಗೆ ಹೋಗಲಾಗಿರಲಿಲ್ಲ. ಇವತ್ತಾದರೂ ನನ್ನಾಕೆ ಜೊತೆ ಹೋಗಿಬಂದರೇ ಆಕೆಗೆ ಖಂಡಿತ ಖುಷಿಯಾಗುತ್ತದೆ.   ನಡುವೆ ಬಿಡುವಾದರೆ ಹೆಂಡತಿಗೆ ಇಷ್ಟವಾದ "ಹುಡುಗರು" ಅಥ್ವ  "ಸಂಜು ವೆಡ್ಸ್ ಗೀತ" ಚಿತ್ರಕ್ಕೆ ಕರೆದುಕೊಂಡು ಹೋಗಬೇಕು, ಅಥವ ನಾನೊಬ್ಬನೇ "ಪೈರೈಟ್ಸ್ ಅಫ್ ಕೆರೆಬಿಯನ್-ಭಾಗ ನಾಲ್ಕು"  ನೋಡಿಬಿಡಬೇಕು. ಸಂಜೆ ನನ್ನ ದಿನಪತ್ರಿಕೆ ವಿತರಣೆ ಗೆಳೆಯನ ಅಕ್ಕನ ಮದುವೆಯ ಅರತಕ್ಷತೆಯಿದೆ. ಅದಕ್ಕೆ ತಪ್ಪಿಸಿಕೊಳ್ಳುವಂತಿಲ್ಲ. ತುಮಕೂರಿನಿಂದ ಅಣ್ಣನ ಮಕ್ಕಳಾದ ಮೋಹನ, ಮೇಘನ ಮತ್ತು ತೇಜು ಬರುತ್ತಿದ್ದಾರೆ  . ಅವರನ್ನು ಸಂಜೆ ಹೊರಗೆ ಕರೆದುಕೊಂಡು ಹೋಗಬೇಕು.     ಬಳ್ಳಾರಿಯಿಂದ ಕಾಶಿನಾಥ್ ನಗಲೂರ್ ಮಠ್ ಮತ್ತು ಹಾವೇರಿಯಿಂದ ಶಶಿಧರ್ ಹಿರೇಮಠ್ ಫೋಟೊಗ್ರಫಿ ವಿಚಾರವಾಗಿ ಮನೆಗೆ ಬರುತ್ತಿದ್ದಾರೆ ಅವರೊಂದಿಗೆ ಕೆಲವೊತ್ತು ಕಳೆಯಬೇಕು!.............ಅಯ್ಯೋ ಇವತ್ತು ಭಾನುವಾರ ಒಂದೇ ಎರಡೇ ಇಷ್ಟೇಲ್ಲಾ ಇರುವಾಗ ನಾನು ಈ ಬೂಟಾಟಿಕೆ ಬಾಡಿ ಬ್ರಹ್ಮಾಂಡ ಮೊಸರನ್ನ ಗುರುಜೀ ಪ್ರಳಯವಾಗುತ್ತೆ ಅನ್ನುವ ಮಾತನ್ನು ಯೋಚಿಸುತ್ತಲ್ಲೇ ಮಲಗಿ ಪ್ರಳಯದ ಕನಸನ್ನು ಕಂಡು ಹಾಳಾದೆನಲ್ಲಾ....ಛೇ ಇವನಿಂದಾಗಿ ನಿನ್ನೆ ರಾತ್ರಿ ಒಂದು ಸುಂದರ ಕನಸು ಕಾಣುವ ಸಮಯ ಹಾಳಾಯಿತಲ್ಲ ಎಂದುಕೊಂಡು ನನ್ನ ಪತ್ರಿಕೆ ವಿತರಣೆ ಕೆಲಸಕ್ಕೆ ಹೊರಟೆ.  ಆ ಕೆಲಸ ಮುಗಿಸಿ ಮನೆಗೆ ಬಂದು ಸ್ವಲ್ಪ ವ್ಯಾಯಾಮ, ಸ್ನಾನ ತಿಂಡಿ ಮುಗಿಸಿ ಟಿ ವಿ ಹಚ್ಚಿದರೆ!  ಅದೇ ಬಾಡಿ ಬ್ರಹ್ಮಾಂಡವಿಲ್ಲದ ಗುರುಜೀ ಕಾಣಿಸಿಕೊಂಡಿದ್ದಾನೆ.  "ನಿನ್ನೆ ಪ್ರಳಯವಾಗಲಿಲ್ಲ. ಕಾರಣ ನಿಮ್ಮ ಮನೆಯ ಹೆಂಗಸರೆಲ್ಲಾ ನಿನ್ನೆ ರಾತ್ರಿ ಲಕ್ಷಣವಾಗಿ ರೇಷ್ಮೇ ಸೀರೆಯುಟ್ಟು ನಿಮ್ಮ ಮನೆಯ ಆಡುಗೆ ಕೆಲಸ ಮಾಡಿದ್ದಾರೆ ಅದರ ಪ್ರಭಾವದ ಪವಿತ್ರತೆಯಿಂದಾಗಿ ಭೂಮಿಗೆ ಒದಗಬಹುದಾದ ಭೂಕಂಪ ಮುಂದಕ್ಕೆ ಹೋಗಿದೆ"
ಆ ದಿನಾಂಕವನ್ನು ಮುಂದೆ ತಿಳಿಸಲಾಗುವುದು"   ಅಂದನಲ್ಲ ಅವನ ಮಾತನ್ನು ಕೇಳಿಸಿಕೊಳ್ಳುತ್ತಲ್ಲೇ  ಹೇಮಾಶ್ರೀಯ ಕಡೆಗೆ ನೋಡಿದೆ.  ನಿನ್ನೆ ರಾತ್ರಿ ಅವಳು ಕೆಂಪುಬಣ್ಣದ ನೈಟಿಯನ್ನು ಧರಿಸಿದ್ದಾಳೆ. ಹೋಗಲಿ ನಮ್ಮ ಓಣಿಯ ಎಲ್ಲಾ ಹೆಣ್ಣುಮಕ್ಕಳು ರಾತ್ರಿ ನೈಟಿಯಲ್ಲಿಯೇ ಇದ್ದಿದ್ದು ನೆನಪಾಗಿ,  "ತತ್,  ಇವನು ನನಗೆ ಎಲ್ಲಾದರೂ ಒಬ್ಬಂಟಿಯಾಗಿ ಸಿಗಲಿ ಆಗ ವಿಚಾರಿಸಿಕೊಳ್ಳುತ್ತೇನೆ"  ಅಂದುಕೊಳ್ಳುತ್ತಾ ಮಾಡಬೇಕಾದ ದೊಡ್ದಪಟ್ಟಿಯಲ್ಲಿ ಯಾವುದನ್ನು ಮೊದಲು ಪ್ರಾರಂಭಿಸಲಿ ಎಂದು ಯೋಚಿಸುತ್ತಿದ್ದವನಿಗೆ ನಮ್ಮ ಓಣಿಯ ಮಕ್ಕಳು ಆಗಲೆ ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದುದ್ದು ನೋಡಿ,   ಇಷ್ಟೆಲ್ಲಾ ಕೆಲಸಗಳ ಮನೆ ಹಾಳಾಗಲಿ ಅದನ್ನು ಅಮೇಲೆ ನೋಡಿಕೊಳ್ಳೋಣ ಸ್ವಲ್ಪ ಹೊತ್ತು ಈ ಮಕ್ಕಳ ಜೊತೆ ಕ್ರಿಕೆಟ್ ಆಡೋಣವೆಂದುಕೊಂಡು ಹೊರ ನಡೆದೆ.

 ಲೇಖನ :  ಶಿವು.ಕೆ   

30 comments:

Guruprasad said...

ಹಾ ಹಾ ಚೆನ್ನಾಗಿ ಇದೆ ನಿಮ್ಮ ಕನಸು,,,, ಇಂಥ ಬೂಟಾಟಿಕೆ ಸ್ವಾಮೀಜಿ ಗಳು ಇದ್ದರೆ,, ಇದೆ ಗತಿ

shivu.k said...

ಗುರು,

ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನದಾಳದಿಂದ............ said...

Shivanna,
Papa, namma body swamige bahala bejaaragirabeku, nimma kanasu kevala kanasaytalla anta avanige dodda chinteyagirabekalwaa?
hha hha hha..........
channagide nimma kanasina puraana!

ಉಷಾ said...

ಬರಹ ಚೆನ್ನಾಗಿದೆ.ಓದಿ ನಗು ಬಂತು.
ಉಷಾ

shivu.k said...

ಪ್ರವೀಣ್,
ಆತ ಹೇಳಿದ್ದೆಲ್ಲಾ ಆಗುವುದಿದ್ದರೇ ಆತ ದೇವಮಾನವನಾಗಿಬಿಡುತ್ತಿದ್ದ. ಆತನ ಮೊಂಡುವಾದ ಮತ್ತು ಬಾಯಿಬಡುಕತನವನ್ನು ನೋಡಿ ನಗು ಮತ್ತು ಮರುಕ ಉಂಟಾಗುತ್ತದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಉಷಾ ಮೇಡಮ್,

ಥ್ಯಾಂಕ್ಸ್.

ವಾಣಿಶ್ರೀ ಭಟ್ said...

super!!!

shivu.k said...

ವಾಣಿಶ್ರೀ ಮೇಡಮ್,

ಥ್ಯಾಂಕ್ಸ್.

ಮನಸು said...

hahaha mast

umesh desai said...

shivu avare kanasinallu bandu kaaduva aa body brahmandana mahime helalu padagale siguttiilla.

plz visit my blog--usdesai.blogspot.com--updated recently

ಸವಿಗನಸು said...

ಓದಿ ನಗು ಬಂತು....
ಚೆನ್ನಾಗಿದೆ....

ಸುಮ said...

:) nice.

Badarinath Palavalli said...

sakath comedy aagithu shivanna.
super mathe sixer!

ವನಿತಾ / Vanitha said...

ಹ್ಹಿ ಹ್ಹಿ..ಚೆನ್ನಾಗಿದೆ.
ತುಂಬಾ ದಿನ ಆಯ್ತು, ನಿಮ್ಮೂರ ಕಡೆ ಬಂದಿರಲಿಲ್ಲ, ಇನ್ನು ರೆಗುಲರ್!! ಹಾಗೆ ಹೇಮಶ್ರೀಗೆ ನಮ್ ಕಡೆಯಿಂದ ಒಂದು ಹಾಯ್ ತಿಳ್ಸಿ:)

ಭಾಶೇ said...

hahahahhahah!

there are other predictions about the Last Day in 2012. Keep watching! ;)

Chaithrika said...

ಹ ಹ್ಹ ಹ್ಹಾ... ಚೆನ್ನಾಗಿದೆ. ಕನಸಲ್ಲಿ ಮೊಸರನ್ನ ಎಲ್ಲಿಂದ ಬಂತೋ ಆಶ್ಚರ್ಯ. ಪ್ರಳಯದ ಕಲ್ಪನೆ ಸೂಪರ್.

ಜಲನಯನ said...

ಹಹಹಹ ಶಿವು,,,ಬ್ರಹ್ಮಾಂಡದ ಗುರುವಿನ ಪಿಂಡ...!!! ಅದನ್ನ ನೆನಪಿಸಿಕೊಂಡು ಮಲಗಿದ್ರಾ,,,ಕನಸಲ್ಲೂ ಕಾಡಬೇಕಾ ಆ ಪ್ರಲಾಪಿತ ಉವಾಚ...???
ಚನ್ನಾಗಿತ್ತು...

ಸುಧೇಶ್ ಶೆಟ್ಟಿ said...

thumba dinagaLaagittu nimma blog annu odade... photography ya barahagaLa jotege e lekhanavannoo ottige odhi bitte...

yentha kanasu!!!

V.R.BHAT said...

:))

shivu.k said...

ಸುಗುಣಕ್ಕ,
ಥ್ಯಾಂಕ್ಸ್.

shivu.k said...

ಉಮೇಶ್ ಸರ್,

ಬಾಡಿ ಬ್ರಹ್ಮಾಂಡದ ಮಹಿಮೆಯ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಬ್ಲಾಗಿಗೆ ಖಂಡಿತ ಬೇಟಿಕೊಡುತ್ತೇನೆ.

shivu.k said...

ಮಹೇಶ್ ಸರ್,

ಲೇಖನ ಓದಿ ನಕ್ಕಿದ್ದಕ್ಕೆ ಥ್ಯಾಂಕ್ಸ್.

shivu.k said...

ಸುಮ ಮೇಡಮ್,

ಥ್ಯಾಂಕ್ಸ್.

shivu.k said...

ಬದ್ರಿನಾಥ್ ಸರ್,

ಈ ಕಾಮಿಡಿಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ವನಿತಾ,

ನೀವು ಕುವೈಟ್ ಸೇರಿದ ಮೇಲೆ ಬ್ಯುಸಿಯಾಗಿದ್ದೀರಿ ಅಂತ ಗೊತ್ತು. ಆದ್ರೂ ಬಿಡುವು ಮಾಡಿಕೊಂಡು ಬರುತ್ತೀರಿ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಭಾಶೇ,

ನೀವು ಹೇಳಿದಂತೆ ೨೦೧೨ರ ದಿನಾಂಕವನ್ನು ನಾನು ಕಾಯಬೇಕೆಂದುಕೊಂಡಿದ್ದೆ. ಆದ್ರೆ ಅದನ್ನು ಈ ಬಾಡಿ ಬ್ರಹ್ಮಾಂಡವನ್ನು ಜೀ ಕನ್ನಡದಿಂದ ಒದ್ದು ಓಡಿಸಿದ್ದಾರೆ. ಅದರಿಂದ ಅದಕ್ಕೆ ಈಗ ಬೆಲೆಯಿಲ್ಲವೆಂದು ನನ್ನ ನಂಬಿಕೆ.
ಧನ್ಯವಾದಗಳು.

shivu.k said...

ಚೈತ್ರಿಕ ಮೇಡಮ್,

ಕನಸಲ್ಲಿ ಮೊಸರನ್ನ ಮಾತ್ರವಲ್ಲ..ಇನ್ನೂ ಏನೇನೋ ಬಂದಿತ್ತು. ಅದನ್ನೆಲ್ಲಾ ಸೆನ್ಸಾರ್ ಮಾಡಿ ಬರೆದಿದ್ದೇನೆ. ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಅಜಾದ್,

ಅವತ್ತು ರಾತ್ರಿ ಸುಮ್ಮನೆ ನೆನೆಸಿಕೊಂಡೆ. ಅದರ ಪರಿಣಾಮ ಇದು. ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ವಿ.ಅರ್.ಭಟ್ ಸರ್,
ಥ್ಯಾಂಕ್ಸ್.

shivu.k said...

ಸುಧೇಶ್,

ಫೋಟೊಗ್ರಫಿಯ ಲೇಖನದ ಜೊತೆಗೆ ಈ ತಮಾಷೆಯ ಲೇಖನವನ್ನು ಓದಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ..