ಬೆಳಿಗ್ಗೆ ಸಮಯ ೮-೩೦. ಅವರು ವರಾಂಡದಲ್ಲಿ ದಿನಪತ್ರಿಕೆ ಓದುತ್ತಾ ಕುಳಿತಿದ್ದರು. "ಸರ್, ನ್ಯೂಸ್ ಪೇಪರ್ ಬಿಲ್" ಅಂದೆ. ಒಮ್ಮೆ ಕತ್ತೆತ್ತಿ ನೋಡಿ, ಎಷ್ಟಾಯ್ತು ಅಂದರು. ಹೇಳಿದೆ. ಜೇಬಿಗೆ ಕೈ ಹಾಕಿದರು. ಅವರು ನನ್ನ ಅತ್ಯಂತ ಆತ್ಮೀಯವಾದ ಗ್ರಾಹಕ. ಅವರಿಗೆ ಹದಿಮೂರು ವರ್ಷಗಳಿಂದ ನನ್ನ ಕಡೆಯಿಂದಲೇ ದಿನಪತ್ರಿಕೆ ತಲುಪುತ್ತಿದೆ. ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದಿದ್ದಲ್ಲದೇ ನನ್ನೆಲ್ಲಾ ಚಟುವಟಿಕೆಗಳನ್ನು ಅರಿತವರು. ಜೇಬಿನಿಂದ ಒಂದು ಸಾವಿರದ ನೋಟನ್ನು ತೆಗೆದುಕೊಟ್ಟರು.
"ಸಾರ್ ಚಿಲ್ಲರೆ ಇಲ್ಲವಲ್ಲ"
ನನ್ನ ಕಡೆಗೊಮ್ಮೆ ವ್ಯಂಗ್ಯವಾಗಿ ನೋಡಿ,
"ನಿನ್ನ ಬಳಿ ಸಾವಿರ ರೂಪಾಯಿಗೆ ಚಿಲ್ಲರೆ ಇಲ್ವಾ, ಬೆಕ್ಕಿಗೆ ಜ್ವರ ಬರೋ ಮಾತಾಡಬೇಡ"
ಅವರ ಮಾತಿಗೆ ಮರುಉತ್ತರ ಹೇಳದೆ ಚಿಲ್ಲರೆ ಎಣಿಸಿಕೊಟ್ಟು,
"ಸರ್ ಬೆಕ್ಕಿಗೆ ನಿಜಕ್ಕೂ ಜ್ವರ ಬರುತ್ತಾ" ಕೇಳಿದೆ.
ನನ್ನನ್ನೊಮ್ಮೆ ನೋಡಿ ನಕ್ಕು ಹಣ ಎಣಿಸಿಕೊಂಡರು.
"ಪೋಟೊ ತೆಗಿತೀಯಾ, ಪತ್ರಿಕೆಗೆ ಲೇಖನ ಬರೀತೀಯ, ಬ್ಲಾಗ್ ಬರೀತೀಯಾ, ಪುಸ್ತಕ ಬರೀತೀಯಾ, ಇದನ್ನು ಕಂಡುಹಿಡಿಯಕಾಗೊಲ್ವಾ?" ಅಂದರು.
ನನಗೂ ಹೌದಲ್ವಾ ಅನ್ನಿಸಿತು. ಅವರಿಗೆ ಥ್ಯಾಂಕ್ಸ್ ಹೇಳಿ ಅ ಮನೆಯಿಂದ ಹೊರಬರುವ ಹೊತ್ತಿಗೆ ನನ್ನ ತಲೆಯಲ್ಲಿ ಹೊಸ ಹುಳುವೊಂದು ಹೊಕ್ಕಿತ್ತು.
ಹೌದು ಬೆಕ್ಕಿಗೆ ನಿಜಕ್ಕೂ ಜ್ವರ ಬರುತ್ತಾ? ಜ್ವರ ಬಂದಾಗ ಬೆಕ್ಕು ಏನೇನು ಮಾಡಬಹುದು, ಇದನ್ನು ತಿಳಿಯುವುದು ಹೇಗೆ? ಇಷ್ಟಕ್ಕೂ ಈ ಪದ ಹುಟ್ಟಿದ್ದು ಹೇಗೆ? ಯಾರಾದರೂ ಕನ್ನಡ ಪಂಡಿತರನ್ನು ಕೇಳಿದರೆ ಹೇಗೆ ಅನ್ನಿಸಿತು ಇನ್ನೇಕೆ ತಡ,
ಓವರ್ ಟು ಡಾ.ಶೇಷಾಶಾಸ್ತ್ರಿ.
"ಸಾರ್, ಬೆಕ್ಕಿಗೆ ಜ್ವರ ಬರುತ್ತಾ?" ನೇರ ಕೇಳಿದೆ.
"ಇದೇನಪ್ಪ ಹೀಗೆ ಕೇಳ್ತೀಯಾ...ಫೋಟೋ ತೆಗೆಯುವುದು ಬಿಟ್ಟು ಬೆಕ್ಕಿನ ಹಿಂದೆ ಬಿದ್ದಿದ್ದು ಯಾಕೆ" ಅಂದರು.
ಅವರಿಗೆ ನಡೆದ ವಿಚಾರವನ್ನು ವಿವರಿಸಿ ಅವರ ಉತ್ತರಕ್ಕಾಗಿ ಕಾಯುತ್ತಿದ್ದೆ.
"ನೋಡಪ್ಪ ಶಿವು, ಬೆಕ್ಕಿಗೆ ಜ್ವರ ಬರುತ್ತಾ ಅನ್ನುವ ಪದ ಇಲ್ಲ ಅದು ನಿಜಕ್ಕೂ ಬೆಂಕಿಗೆ ಜ್ವರ ಬರುತ್ತಾ ಅಂತ ಇತ್ತು. ಬೆಂಕಿ ಅಂದರೆ ಬಿಸಿ, ಜ್ವರ ಅಂದರೂ ಬಿಸಿ, ಬೆಂಕಿಗೆ ಜ್ವರ ಬರುತ್ತಾ ಅನ್ನುವ ಮಾತು ಆಡಿಕೊಂಡು ಬಂದ ಜನ ಒಂದು ದಿನ ಸೊನ್ನೆಯನ್ನು ನುಂಗಿಹಾಕಿ ಬೆಕ್ಕು ಮಾಡಿದರು. ಇಷ್ಟಕ್ಕೂ ಅದು ತಪ್ಪೇನಲ್ಲ. ಬೆಕ್ಕಿನ ಮೈ ಕೂಡ ಯಾವಾಗಲೂ ಬಿಸಿಯಾಗಿರುತ್ತದೆ. ಹೀಗಿರುವಾಗ ಅದು ಜ್ವರದಲ್ಲಿದ್ದಂತೆ ತಾನೆ. ಮತ್ತೆ ಅದಕ್ಕೆ ಹೊಸದಾಗಿ ಬಂದ ಜ್ವರಕ್ಕೆ ಜಾಗವೆಲ್ಲಿ ಇರುತ್ತದೆ? ಅಂದರು.
ನನಗೂ ಹೌದಲ್ವಾ ಅನ್ನಿಸಿತು.
"ಇಷ್ಟೇ ಅಲ್ಲಪ್ಪ ಶಿವು, ಬೆಕ್ಕಿನ ಹಿಂದೆ ಬಿದ್ದಿದ್ದೀಯಾ ಅಂತ ಹೇಳ್ತೇನೆ ಕೇಳು, ಬೆಕ್ಕಿನ ಬಗ್ಗೆ ತುಂಬಾ ಮಾತುಗಳಿವೆ, ಬೆಕ್ಕನ್ನು ಕಂಕುಳಲ್ಲಿ ಇಟ್ಟುಕೊಂಡಂತೆ ಆಯ್ತು" ಅಂತ ಹೇಳ್ತಾರೆ ಗೊತ್ತಾ? ಹಾಗಂದರೆ ಬೆಕ್ಕು ಅಪಶಕುನ, ಅದು ಎದುರಿಗೆ ಬಂದರೆ ಅಪಶಕುನ ಅಂತ ಎಲ್ಲರೂ ಹೇಳ್ತಾರೆ, ಇನ್ನು ಅದನ್ನೇ ಕಂಕುಳಲ್ಲಿ ಇಟ್ಟುಕೊಂಡು ಬಂದರೆ ಯಾವ ಶುಭಕೆಲಸವೂ ಆಗುವುದಿಲ್ಲವೆಂದು ಅರ್ಥ" ಅಂದರು.
ನಾನು ಸುಮ್ಮನಿರಲಿಲ್ಲ. "ಸಾರ್, ಈ ಮಾತು ಅಷ್ಟು ಸತ್ಯವಲ್ಲ ಅಂತ ನನ್ನ ಭಾವನೆ ಏಕೆಂದರೆ ನನಗೆ ಪ್ರತಿನಿತ್ಯ ಬೆಳಗಿನ ನಾಲ್ಕು ಗಂಟೆಗೆ ಹೋಗುವಾಗ ಒಂದು ಬೆಕ್ಕು ನನ್ನ ದಾರಿಗೆ ಆಡ್ಡಬರುತ್ತಿರುತ್ತದೆ. ಆದರೂ ನನಗೇನು ತೊಂದರೆಯಾಗಿಲ್ಲ ಅಪಶಕುನವಾಗಿಲ್ಲವಲ್ಲ ಸರ್?" ಅಂದೆ.
"ನೋಡಪ್ಪ, ನಿನಗೆ ಮತ್ತು ನನಗೆ ಅಪಶಕುನ ಆಗಿಲ್ಲದಿರಬಹುದು, ಆದ್ರೆ ಹೊರಪ್ರಪಂಚದಲ್ಲಿ ಈ ಮಾತನ್ನು ಎಲ್ಲರೂ ನಂಬುತ್ತಾರೆ, ಅವರ ನಂಬಿಕೆಯಿಂದ ಅವರಿಗೆ ಖುಷಿಯಾಗುವುದಾದರೆ ಅದು ತಪ್ಪು ಅಂತ ಹೇಳಲು ನಾನು ನೀನು ಯಾರು ?" ಅಂದರು.
ಅವರ ಮಾತು ಕೂಡ ಒಂದು ರೀತಿಯಲ್ಲಿ ಸರಿಯೆನಿಸಿತು. ನಮಗಾಗದ ಅನುಭವ ಬೇರೆಯವರಿಗೆ ಆಗಿರಬಹುದಲ್ಲವೇ? ಆಗಿಲ್ಲದಿದ್ದರೂ ಆದರ ಹಿಂದೆ ಏನೋ ಒಳ್ಳೇ ಉದ್ದೇಶವೇ ಇರುವುದರಿಂದ ಆ ಮಾತು ರೂಡಿಯಲ್ಲಿರಬಹುದು ಅನ್ನಿಸಿತು.
ಹಾಗೆ ಮತ್ತಷ್ಟು ಬೆಕ್ಕಿನ ಕತೆ ಹೇಳಿದರು. ಬಡವರ ಮನೆಯ ಒಲೆಯಲ್ಲಿ ಮಲಗಿದ ಬೆಕ್ಕು ಏಳಲಿಲ್ಲವೆಂದರೆ ಅವತ್ತು ಒಲೆ ಹಚ್ಚಲಿಲ್ಲವೆಂದು ಅರ್ಥ. ಹೇಗೆಂದರೆ ಬೆಕ್ಕು ಸಹಜವಾಗಿ ಬಿಸಿಮೈಯನ್ನು ಹೊಂದಿರುತ್ತದೆ. ಅದು ಮಲಗಿಬಿಟ್ಟಿತೆಂದರೆ ಅದರ ಬಿಸಿ ಇಲ್ಲ. ಅಂದಮೇಲೆ ಬಿಸಿಯಿಲ್ಲದ ಒಲೆ ಎಂದರೆ ಬೆಂಕಿಯಿಲ್ಲದ ಒಲೆ ಅಂತಲೇ ಅರ್ಥವಲ್ಲವೇ? ಅಂದರು. ಜೊತೆಗೆ ತೆನಾಲಿ ರಾಮನ ಬೆಕ್ಕು, ತೆಲುಗಿನಲ್ಲಿ ಬೆಕ್ಕಿನ ಮಾತುಗಳು, ಗಾದೆಗಳು, ಮಠದಲ್ಲಿ ಧ್ಯಾನ ಮಾಡುತ್ತಾ ಕುಳಿತ ಬೆಕ್ಕು, ಸನ್ಯಾಸಿ ಸಾಕಿದ ಬೆಕ್ಕು, ಹೀಗಿನ ಮಾಡ್ರನ್ ಬೆಕ್ಕು,..........ಹೀಗೆ ಬೆಕ್ಕಿನ ಅನೇಕ ಕತೆ ಹೇಳಿದರು.
ಅವರ ಉತ್ತರ ನನಗೆ ಸಮಂಜಸವೆನಿಸಿತ್ತು. ಆದರೂ ನನ್ನ ಮನಸ್ಸಿನಲ್ಲೊಂದು ಕಡೆ ಇದನ್ನು ಪ್ರಾಕ್ಟಿಕಲ್ ಆಗಿ ನೋಡಿದರೆ ಹೇಗೆ? ಅನ್ನಿಸತೊಡಗಿತ್ತು. ಹಾಗಾದರೆ ಅದನ್ನು ಕಂಡುಹಿಡಿಯುವುದು ಹೇಗೆ? ನೇರ ಪಶುವೈದ್ಯರನ್ನೇ ಸಂಪರ್ಕಿಸಿದರೇ?
ಹೌದಲ್ವಾ ಅನ್ನಿಸಿತು. ನನ್ನ ಆರುನೂರು ಗ್ರಾಹಕರನ್ನು ಮನಸ್ಸಿನಲ್ಲಿಯೇ ಸ್ಕ್ಯಾನ್ ಮಾಡಿದೆ. ಅರೆರೆ ನನ್ನ ಕಡೆಯಿಂದಲೇ ದಿನಪತ್ರಿಕೆ ಕೊಳ್ಳುವ ಪಶುವೈದ್ಯರೊಬ್ಬರು ಮಲ್ಲೇಶ್ವರಂನಲ್ಲಿದ್ದಾರಲ್ಲಾ? ಇನ್ನೇಕೆ ತಡ ಹೊರಟೇಬಿಟ್ಟೆ ಅವರ ಮನೆಕಡೆಗೆ.
ಓವರ್ ಟು ವೆಟರ್ನರಿ ಡಾಕ್ಟರ್.
"ಸರ್" ಕೂಗಿದೆ. ಅವರು ಹೊರಬಂದು ನನ್ನನ್ನು ನೋಡಿ,
"ರೀ ನಿಮಗೆ ಎರಡು ದಿನಗಳ ಹಿಂದೆ ಪೇಪರ್ ದುಡ್ಡು ಕೊಟ್ಟಿದ್ದೀನಲ್ರೀ?" ಅಂದರು.
"ಸರ್, ನಾನು ಹಣಕ್ಕಾಗಿ ಬರಲಿಲ್ಲ."
"ಮತ್ಯಾಕೆ ಬಂದ್ರಿ,"
"ನೀವು ಪಶುವೈದ್ಯರಲ್ಲವೇ, ನಿಮ್ಮಿಂದ ಒಂದು ವಿಚಾರ ತಿಳಿಯಬೇಕಿತ್ತು." ಕೇಳಿದೆ.
"ಏನದು"
"ಸರ್, ಬೆಕ್ಕಿಗೆ ಜ್ವರ ಬರುತ್ತಾ? ಜ್ವರ ಬಂದ ಬೆಕ್ಕುಗಳಿಗೆ ಚಿಕಿತ್ಸೆ ಮಾಡುತ್ತೀರಾ?" ಕೇಳಿದೆ.
ಅವರು ನನ್ನ ಮುಖವನ್ನೊಮ್ಮೆ ನೋಡಿದರು. ಬೇರೆಯವರು ಬೆಳಿಗ್ಗೆ ಇಂಥ ಪ್ರಶ್ನೆ ಕೇಳಿದ್ದರೇ ಬೈದುಕಳಿಸುತ್ತಿದ್ದರೇನೋ. ನನ್ನ ಇಂಥ ತೆವಲುಗಳನ್ನು ಅರಿತಿದ್ದ ಅವರು,
"ನೋಡ್ರೀ ಶಿವು, ಬೆಕ್ಕಿಗೆ ಜ್ವರ ಬರುತ್ತೇ ಕಣ್ರೀ, ನಮ್ಮಂತೆ ಅದಕ್ಕೂ ಬಾಡಿ ಟೆಂಪರೇಚರ್ ಇರುತ್ತೆ ಅದು ಹೆಚ್ಚಾದಾಗ ಜ್ವರ ಬರುತ್ತೆ ಗೊತ್ತಾ?"
"ಅದಕ್ಕೆ ಜ್ವರ ಬಂದಿದೆ ಅಂತ ನಾವು ಹೇಗೆ ಕಂಡುಹಿಡಿದುಕೊಳ್ಳುವುದು? ಅದನ್ನು ನೀವು ಹೇಗೆ ಪರೀಕ್ಷೆ ಮಾಡುತ್ತೀರಿ?"
"ಮನೆಯಲ್ಲಿ ಸಹಜವಾಗಿರುವ ಬೆಕ್ಕು ಸುಮ್ಮನೆ ಕೂಗಾಡುವುದು, ಊಟ ಸರಿಯಾಗಿ ಮಾಡದಿರುವುದು, ಹೀಗೆ ಅದರ ಚಟುವಟಿಕೆಯಲ್ಲಿ ವ್ಯತ್ಯಾಸ ಕಂಡಾಗ ಮನೆಯ ಯಜಮಾನರು ಅದನ್ನು ನೋಡಿ ಬೆಕ್ಕಿಗೆ ಏನೋ ಕಾಯಿಲೆ ಬಂದಿದೆ ಅಂತ ತಿಳಿದುಕೊಳ್ಳಬೇಕು, ನಮ್ಮಲ್ಲಿಗೆ ಅವನನ್ನು ಕರೆತರಬೇಕು. ನಾವು ಅದನ್ನು ಪರೀಕ್ಷೆ ಮಾಡುತ್ತೇವೆ."
"ನೀವು ನಮ್ಮ ಬಾಯಿಗೆ ಥರ್ಮಾಮೀಟರ್ ಇಟ್ಟಂತೆ ಅದರ ಬಾಯಿಗೂ ಇಟ್ಟು ನೋಡುತ್ತೀರಾ?"
" ನೋಡಿ ಶಿವು ಇಲ್ಲೊಂದು ಸೂಕ್ಷ್ಮವಿದೆ. ಪ್ರತಿಯೊಂದು ಜೀವದ ಗುದದ್ವಾರದಲ್ಲಿ ಥರ್ಮಾಮೀಟರ್ ಇಟ್ಟಾಗ ಮಾತ್ರ ಸರಿಯಾದ ಟೆಂಪರೇಚರ್ ಗೊತ್ತಾಗುವುದು. ನಾವು ಮನುಷ್ಯರು ಆ ವಿಚಾರದಲ್ಲಿ ಮಾನ ಮರ್ಯಾದೆ, ನಾಚಿಕೆ ಅಂತ ಮಾಡಿಕೊಂಡು ಆ ಕೆಲ ಮರ್ಮಗಳನ್ನು ಹೊರ ಪ್ರಪಂಚಕ್ಕೆ ತೋರಿಸಲಾಗದ ಮಟ್ಟದ ಸಂಸ್ಕಾರವಂತರಾಗಿದ್ದೇವೆ. ಈ ಕಾರಣದಿಂದಾಗಿ ನಾವು ಬಾಯಿಯಲ್ಲಿ ಥರ್ಮಾಮೀಟರ್ ಇಟ್ಟು ಜ್ವರ ಬಂದಿದೆಯಾ ಅಂತ ನೋಡುತ್ತೇವೆ. ಆದ್ರೆ ಬೆಕ್ಕಿಗೆ ಅದರ ಗುದದ್ವಾರದಲ್ಲೇ ಥರ್ಮಾಮೀಟರ್ ಇಟ್ಟು ನೋಡಬೇಕು. ಮನುಷ್ಯನ ದೇಹದ ಸಹಜ ಉಷ್ಣಾಂಶ ೯೮ ಡಿಗ್ರಿ ಆಸುಪಾಸು ಇರುತ್ತದೆ. ಅದು ಎರಡು ಮೂರು ಡಿಗ್ರಿ ಹೆಚ್ಚಾದಾಗ ಜ್ವರ ಬಂತು ಅಂದುಕೊಳ್ಳುತ್ತೇವೆ. ಬೆಕ್ಕಿನ ಉಷ್ಣಾಂಶ ಮನುಷ್ಯರಿಗಿಂತ ೨-೩ [ಬೆಕ್ಕಿನ ಸಹಜ ಉಷ್ಣತೆ ೧೦೧.೭]ಡಿಗ್ರಿ ಹೆಚ್ಚೇ ಇರುತ್ತದೆ. ಅದಕ್ಕಿಂತ ಹೆಚ್ಚಾದಾಗ ಅದಕ್ಕೆ ಜ್ವರ ಬಂದಿದೆ ಅಂತ ಅರ್ಥ."
"ಸರ್ ನಮಗೆ ನೀರು, ಊಟದ ವ್ಯತ್ಯಾಸ, ವಾತಾವರಣ, ಕೆಲಸ ಒತ್ತಡದಿಂದ ಜ್ವರ ಬರಬಹುದು. ಆದ್ರೆ ಬೆಕ್ಕಿಗೆ ಜ್ವರ ಬರಲು ಕಾರಣಗಳೇನು?"
"ಬೆಕ್ಕು ಸದಾ ಶುಚಿಯಾಗಿರಲು ಇಷ್ಟಪಡುತ್ತದೆ. ಆದಕ್ಕೆ ಜ್ವರ ಬರುವುದು ಕಡಿಮೆ. ಅದು ತನ್ನ ಆಯುಷ್ಷಿನ ೭೫ % ತನ್ನ ದೇಹದ ಎಲ್ಲಾ ಭಾಗವನ್ನು ನೆಕ್ಕಿ ನಿಕ್ಕಿ ಶುಚಿಮಾಡಿಕೊಳ್ಳುವುದರಲ್ಲೇ ಕಳೆಯುತ್ತದೆ. ಈ ಸಮಯದಲ್ಲಿ ಬಾಯಿಯ ಮೂಲಕ ಅದರದೇ ದೇಹದ ಕೂದಲುಗಳು ದೇಹವನ್ನು ಸೇರಿ ಕರುಳಿನಲ್ಲಿ ಕೂದಲಗಂಟು[ಏರ್ಬಾಲ್]ಶೇಖರಣೆಯಾಗಿ ಆಹಾರ ಜೀರ್ಣಕ್ರಿಯೆಗೆ ತೊಂದರೆಯಾಗಿ ಅದರ ಚಟುವಟಿಕೆಯಲ್ಲಿ ವ್ಯತ್ಸಾಸವಾಗುತ್ತದೆ. ಅದು ಇಲಿಯನ್ನು ಹಿಡಿದು ತಿನ್ನುವುದರಿಂದ ಇಲಿಯ ದೇಹದ ಚಿಗುಟಗಳು ಬೆಕ್ಕಿನ ಮೈಮೇಲೆ ಬಂದು ಚರ್ಮದ ತೊಂದರೆಯಾಗಿ ಹೊಟ್ಟೆಯಲ್ಲಿ ಲಾಡಿಹುಳ ಆಗುತ್ತದೆ. ಆಗ ಡಾಕ್ಟರಿಗೆ ತೋರಿಸಬೇಕು. ಬೆಕ್ಕಿಗೂ ರೇಬಿಸ್ ರೋಗ ಬರುವುದರಿಂದ ವರ್ಷಕ್ಕೆ ಒಂದೆರಡು ಬಾರಿ ಚುಚ್ಚು ಮದ್ದು ಕೊಡಿಸಬೇಕು."
"ಅದಕ್ಕೆ ಚಿಕಿತ್ಸೆ ಮಾಡುವಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ?"
ಈ ಪ್ರಶ್ನೆಗೆ ನನ್ನ ಮುಖವನ್ನು ನೋಡಿ " ನೀವು ನಮ್ಮ ಆಸ್ಪತ್ರೆ ಬನ್ನಿ ಅಲ್ಲೇ ನೋಡುವಿರಂತೆ ಅಂದರು."
ಓವರ್ ಟು ಪಶು ವೈದ್ಯಶಾಲ.
ಟೇಬಲ್ಲಿನ ಮೇಲೆ ಕುಳಿತ ಬೆಕ್ಕಿನ ಕುತ್ತಿಗೆಗೆ ಒಂದು ಬೆಲ್ಟ್ ಹಾಕಿದ್ದರು. ಅದರ ಮತ್ತೊಂದು ತುದಿಯನ್ನು ಟೇಬಲ್ಲಿನ ಒಂದು ಭಾಗಕ್ಕೆ ಕಟ್ಟಿದ್ದರು. ಹೊಸ ವಾತಾವರಣದಲ್ಲಿ ಚಿಕಿತ್ಸೆ ಮಾಡುವಾಗ ಹೆದರಿ ತಪ್ಪಿಸಿಕೊಳ್ಳಬಾರದೆಂದು ಈ ಕ್ರಮ. ಮೇಲೆ ಹೇಳಿದಂತೆ ಗುದದ್ವಾರದಲ್ಲಿ ಥರ್ಮಾಮೀಟರ್ ಇಟ್ಟು ಜ್ವರವೆಷ್ಟಿದೆಯೆಂದು ತಿಳಿದು ಚುಚ್ಚುಮದ್ದು ಸಿದ್ದಮಾಡಿಕೊಂಡರು. ಇಲ್ಲಿ ತನಗೇನೋ ಮಾಡಲು ಯತ್ನಿಸುತ್ತಿದ್ದಾರೆ ಅಂತ ಬೆಕ್ಕಿಗೆ ಅನ್ನಿಸಿತೇನೋ, ಜೋರಾಗಿ ಕಿರುಚಿತು. ಡಾಕ್ಟರಿಗೆ ಪರಚಲು ಪ್ರಯತ್ನಿಸಿತು. ಈ ವಿಚಾರದಲ್ಲಿ ಡಾಕ್ಟರಿಗೆ ಮೊದಲೇ ಅನುಭವವಿದ್ದದ್ದರಿಂದ ಹುಷಾರಾದರು. ಬೆಕ್ಕಿನ ಎರಡು ಕಿವಿಗಳ ನಡುವೆ ನೇವೇರಿಸಲು ಅದರ ಯಜಮಾನನಿಗೆ ಹೇಳಿದರು. ಆವರು ಹಾಗೆ ಮಾಡಿದಾಗ ಬೆಕ್ಕು ಸಮಾಧಾನವಾಯಿತು. ಅದೇ ಸಮಯದಲ್ಲಿ ನಿದಾನವಾಗಿ ಚುಚ್ಚುಮದ್ದು ಕೊಟ್ಟಾಗ ಒಮ್ಮೇ ಜೋರಾಗಿ ಬಾಯಿ ತೆರೆದು ಮುಖ ಕಿವುಚಿದಂತೆ ಮಾಡಿತು. ಅಷ್ಟರಲ್ಲಿ ಡಾಕ್ಟರು ತಮ್ಮ ಕೆಲಸ ಮುಗಿಸಿದ್ದರು. ಯಜಮಾನನಿಗೆ ಬೆಕ್ಕಿಗೆ ಬೇಕಾದ ಹಾಗೆ ಪತ್ಯವನ್ನು ಹೇಳಿ ಮಾತ್ರೆ ಇತ್ಯಾದಿಗಳನ್ನು ಕೊಟ್ಟು ಕಳಿಸಿದರು.
"ಈಗ ಗೊತ್ತಾಯ್ತಾ ಬೆಕ್ಕಿಗೆ ಜ್ವರ ಬರುತ್ತೇ ಅಂತ?"
"ನಿಮ್ಮಿಂದ ತುಂಬಾ ತುಂಬಾ ವಿಚಾರ ತಿಳಿಯಿತು ಸರ್" ಅಂತ ಅವರಿಗೆ ಧನ್ಯವಾದ ಹೇಳಿ ಮನೆಗೆ ಬಂದೆ. ನಾನು ಬರುವುದನ್ನೇ ಕಾಯುತ್ತಿದ್ದ ಹೇಮಾಶ್ರಿ "ರ್ರೀ.... ಗ್ಯಾಸ್ ಬುಕ್ ಮಾಡಿದ್ರಾ, ಲೈಟ್ ಬಿಲ್ಲಿಗೆ ಇವತ್ತು ಕೊನೇ ದಿನ ಕಟ್ಟಿದ್ರಾ, ಗೋದಿಹಿಟ್ಟು ಖಾಲಿಯಾಗಿತ್ತು ತರಲಿಕ್ಕೆ ಹೇಳಿದ್ದೆ ತಂದ್ರ?" ಕೇಳಿದಳು.
"ಅಯ್ಯೋ ಸಾರಿ ಕಣೆ. ಬೆಕ್ಕಿಗೆ ಜ್ವರ ಬರುತ್ತಾ’ ಅಂತ ತಿಳಿದುಕೊಳ್ಳೋದಿಕ್ಕೆ ಹೋಗಿ ಇವೆಲ್ಲಾ ಮರೆತುಹೋಯ್ತು ನೋಡು." ಹೇಳಿದೆ.
"ರ್ರೀ ಸಾಕು ಸುಮ್ಮನಿರಿ, ಬೆಕ್ಕಿಗೆ ಜ್ವರ ಬರೋ ಮಾತು ಆಡಬೇಡ್ರಿ" ತಕ್ಷಣ ಅವಳಿಂದ ಉತ್ತರ ಬಂತು. ಈ ವಿಚಾರವಾಗಿ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಅವಳಿಗೆ ನಾನು ಮರು ಉತ್ತರ ಕೊಡದೆ ಸುಮ್ಮನಾಗಿದ್ದೆ.
"ಈಗ ಹೇಳಿ ಬೆಕ್ಕಿಗೆ ಜ್ವರ ಬರುತ್ತಾ?"
ಚಿತ್ರಗಳು ಮತ್ತು ಲೇಖನ.
ಶಿವು.ಕೆ
106 comments:
ಬರುತ್ತೇ ಶಿವು ಸರ್, ಅದನ್ನ ನೀವೇ ಸಾಕ್ಷಿ ಸಮೇತ ಹೇಳಿಬಿಟ್ಟಿದ್ದೀರಲ್ಲ..:)....ಉತ್ತಮ ಮಾಹಿತಿಯ ಜೊತೆಗೆ ಒಂದು ಸೊಗಸಾದ, ನವಿರಾದ ಬರಹವನ್ನು ಕೊಟ್ಟಿದ್ದಕ್ಕೆ ಧನ್ಯವಾದ ನಿಮಗೆ.
ಶಿವು,
ಲೇಖನ ಅಂದರೆ ಹೀಗಿರಬೇಕು. ವಾಸ್ತವ ವಿಚಾರಗಳನ್ನು ಎಷ್ಟು ವಿನೋದಮಯವಾಗಿ ತಿಳಿಸಿದ್ದೀರಿ. ಜೊತೆಗೆ ಸುಂದರವಾದ ಫೋಟೋಗಳು ಬೇರೆ. ಇನ್ನು ಬೆಕ್ಕೊಂದನ್ನು ನೋಡಿದಾಗ ನನಗೆ ನಿಮ್ಮದೇ ನೆನಪು ಬರುವದು ಖಂಡಿತ!
hha..........hha.....
nice post....
nimma blogge idu nanna modalane beti sir..olleya mahiti..nanagu ee sandeha tumba dinadinda ittu sir :)
article chennagide shivu nange bekku andre thumba prithi ooralli maneyalle sumaru 15-20 bekku ede but ee vishaya gottilla thumba thanks
ಶಂಭುಲಿಂಗ ಸರ್,
ನನಗೂ ಗೊತ್ತಿರದಿದ್ದುದ್ದಕ್ಕೆ ಇಷ್ಟೆಲ್ಲಾ ಸಾಧ್ಯವಾಯಿತು. ಲೇಖನವನ್ನು ಮೆಚ್ಚಿದ್ದಕ್ಕೆ ಮೊದಲು ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್..
ಸುನಾಥ್ ಸರ್,
ಲೇಖನದಲ್ಲಿನ ಹಾಸ್ಯತನವನ್ನು ಗುರುತಿಸಿದ್ದೀರಿ. ಬೆಕ್ಕಿನ ಫೋಟೊಗಳನ್ನು ಈ ಮೊದಲು ಕ್ಲಿಕ್ಕಿಸಿದ್ದೆ. ಇಲ್ಲಿ ಕೆಲಸಕ್ಕೆ ಬಂತು. ವಾಸ್ತವ ಅಂಶಗಳ ಹಿಂದೆ ಬೀಳುವುದರಲ್ಲಿ ತುಂಬಾ ಮಜವಿದೆ ಅನ್ನಿಸುತ್ತೆ ಸರ್...
ಧನ್ಯವಾದಗಳು.
ಚುಕ್ಕಿ ಚಿತ್ತಾರ...
ನಿಮ್ಮಂತೆ ನಾನು ನಗುತ್ತಲೇ ಬ್ಲಾಗ್ ಪೋಸ್ಟ್ ಮಾಡಿದ್ದೆ...
ಲೇಖನ ನಿಮ್ಮನ್ನು ನಗಿಸಿದ್ದಕ್ಕೆ ಥ್ಯಾಂಕ್ಸ್...
snow white,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಸಂದೇಹ ನನ್ನ ಈ ಲೇಖನದಿಂದ ನಿವಾರಣೆಯಾಗಿದ್ದಕ್ಕೆ ನನಗೂ ಖುಷಿಯಾಗಿದೆ...ಧನ್ಯವಾದಗಳು. ಹೀಗೆ ಬರುತ್ತಿರಿ..
Chandra sir,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಊರಿನಲ್ಲಿ ತುಂಬಾ ಬೆಕ್ಕುಗಳನ್ನು ಸಾಕಿರುವುದು ಅದರ ಮೇಲೆ ನಿಮಗಿರುವ ಪ್ರೀತಿಯನ್ನು ತೋರಿಸುತ್ತದೆ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ...
lovely research! liked it.:)
ಶ್ರೀನಿಧಿ,
ಥ್ಯಾಂಕ್ಸ್...
ಖ೦ಡಿತ ಶಿವು ಅವರೆ.....ನೀವು ಫೊಟೊ,ಪುಸ್ತಕ,ಪೇಪರ್....ಹೀಗೆ ಹಲವಾರು ಕೆಲಸಗಳ ಮಧ್ಯೆ ಈ....ಆಡು ಭಾಷೆಗಳ ಜಾಡನ್ನು ಹಿಡಿದು ಹೊರಟಿದ್ದಿರಿ......ಮತ್ತು ಅವುಗಳನ್ನು ಹಾಸ್ಯ ಮಿಶ್ರಿತವಾಗಿ ವಣಿಸಿದ್ದಿರಿ....ತು೦ಬಾ ಚೆನ್ನಾಗಿದೆ...
ಆದರೆ ಕೊನಯಲ್ಲಿ ನಿಮ್ಮ ಪತ್ನಿಯ ಬಗ್ಗೆ ಬರೆದ್ದಿದ್ದಿರಲ್ಲ ಅವರು ನಿಮ್ಮನ್ನು ಬಯ್ಯದೆ ಸುಮ್ಮನೆ ಬಿಡ್ತಾರಾ....?ಮೊದಲೆ ಈಗ ಮಹಿಳಾ ಮಸೂದೆ ಅ೦ಗಿಕಾರ ಅಗಿದೆ....ಅಲ್ಲವೆ..!!!!ಹ,ಹ,ಹ......!!!!
ಶಿವೂ ಸಾರ್ ಹಲವರಿಗೆ ಗೊತ್ತಿಲ್ಲದ ವಿಚಾರ ಬೆನ್ನುಹತ್ತಿ ಉತ್ತಮ ಲೇಖನ ನೀಡಿ ನೀವು ಮಿಂಚಿದ್ದೀರಿ.ನಿಮ್ಮ ಮಿಂಚು ಹಾಗೆ ಇರಲಿ. ಉತ್ತಮ ಮಾಹಿತಿಯ ಲೇಖನ.ನಿಮಗೆಧನ್ಯವಾದಗಳು.
ಶಿವೂ,, ಏನೋ ಹೊಸ ಕಾನ್ಸೆಪ್ಟ್ ಹುಡುಕಿಕೊಂಡ್ ಬಂದಿದ್ದೀರಿ....ಚೆನ್ನಾಗಿ ಇದೆ.. ಬೆಕ್ಕಿಗೆ ಗಂಟೆ ಕಟ್ಟಕ್ಕೆ ಹಾಗುತ್ತ ಅಂತ ಇತ್ತು,,, ಆದರೆ ಬೆಕ್ಕಿಗೆ ಜ್ವರ ಬಗ್ಗೆ ಕೇಳಿರಲಿಲ್ಲ.. ಒಟ್ಟಿನಲ್ಲಿ ಒಂದು ಒಳ್ಳೆಯ ನವಿರಾದ ಬರಹದ ಜೊತೆ,, ಬೆಕ್ಕಿನ ಬಗ್ಗೆ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದಿರಿ....
ಗುರು
ಬೆಕ್ಕಿನ ಬಗ್ಗೆ ಫೋಟೋದೊಂದಿಗೆ ಒಳ್ಳೆ ಮಾಹಿತಿ ಕೂಡ ನೀಡಿದ್ದೀರಾ. ತುಂಬಾ ದಿನದಿಂದ ಇದ್ದ ಸಮಸ್ಯೆಗೊಂದು ಪರಿಹಾರ ಕಂಡು ಕೊಟ್ಟಿದ್ದೀರಾ. ಹ್ಹ ಹ್ಹಾ ಹ್ಹಾ!
ನವಿರಾದ ಹಾಸ್ಯದೊಂದಿಗೆ ವಾಸ್ತವಿಕತೆಯ ಚಿತ್ರಣ ನೀಡಿದ್ದೀರಾ, ದನ್ಯವಾದಗಳು
ಹೀಗೆ ಬರೆಯುತ್ತೀರಿ, ಬರೆದು ನಗಿಸುತ್ತೀರಿ!
ಮಾಹಿತಿಪೂರ್ಣ
ಶಿವು...ಹಹಹ...ನಿಮ್ಮ ಮಾತಿಗೆ ಹೇಮಾಶ್ರೀ ಹೇಳಿದ್ದು...ಅವರ ತತ್ಕ್ಷಣದ ಪರಿತಿಕ್ರಿಯೆ ಪರಿಣಾಮ..ಅಂದರೆ ಯಾವುದೇ ಮಾತು ಬಹಳ ಅಸಹಜ ಎನಿಸಿದರೆ ಬೆಕ್ಕಿಗೆ ಜ್ವರ ಬರೋ ಮಾತು ನಿನ್ನದು ಅನ್ನೋದು ವಾಡಿಕೆ....ಇದಕ್ಕೆ ಕಾರಣ ಇದೆ....ಬೆಕ್ಕು ನಮಗೆ ಕಾನ ಸಿಗೋದು ಅದು ಆರಾಮವಾಗಿದ್ದಾಗ್ ಮಾತ್ರ...ಅದಕ್ಕೆ ನಮಗೆ ಅದರ ಜ್ವರದ ಗಮನವೇ ಇರೊಲ್ಲ..ಹಾಗಾಗಿ ಬೆಕ್ಕಿಗೆ ಜ್ವರ ಬರುತ್ತೆ ಅನ್ನೋದು ನಮಗೆ ಅಸಜ ಅನ್ನಿಸೋದು..... ಮೀನಿನ ಹೆಜ್ಜೆನ ಹುಡುಕಬಹುದು ..ಇವನ ಮರ್ಮ ತಿಳಿಯೋದು ಕಷ್ಟ..ಅನ್ನೋದೂ ಇನ್ನೊಂದು ವಾಡಿಕೆ ಶಬ್ದ.....ಹಹಹ ಇನ್ನೊಂದು ಹುಳು ಬಿಟ್ನಾ ನಿಮ್ಮ ಮಿದುಳಿಗೆ...!!!
ಸೊಗಸಾಗಿದೆ ಚಿತ್ರಲೇಖನ
Shivu sir r
ಬರತ್ತೆ ಅಂತ ನೀವೇ ಉದಾಹರಣೆ ಕೊಟ್ಟು ಹೇಳಿಬಿಟ್ರಲ್ಲ ಸರ್
ಮುದ್ದಾದ ಬೆಕ್ಕುಗಳ ಚಿತ್ರದೊಂದಿಗೆ ಒಳ್ಳೆ ಮಾಹಿತಿಯನ್ನ ಕೊಟ್ಟಿದ್ದಿರಿ ಧನ್ಯವಾದಗಳು ಸರ್ :)
ಶಿವು,
ಒಂಥರಾ ವಿಶಿಷ್ಟ ವಿಷಯವನ್ನು ನವಿರು ಹಾಸ್ಯದೊಂದಿಗೆ,
ಚಂದದ ಫೊಟೊಗಳನ್ನು ಸೇರಿಸಿ,ಭಿನ್ನ ಶೈಲಿಯ ಬರಹದೊಡನೆ ಕೊಟ್ ಬಿಟ್ರಲ್ರೀ...
ಏನೇನ್ ಬೆನ್ ಹತ್ತಿ ಹೋಗ್ತೀರೋ ಆ ದೇವ್ರೇ ಬಲ್ಲ!!.
ಬರಹ ಇಷ್ಟ ಆಯ್ತು.
ಶಿವು ಎಂಥಾ ಸೊಗಸಾದ ಮಾಹಿಪೂರ್ಣ ಬರಹ ಇದು. ಅಭಿನಂದನೆಗಳು.
ಒಂದು ಪ್ರಶ್ನೆಯ ಬೆನ್ನತ್ತಿ..
ಸೊಗಸಾದ ಮಾಹಿತಿಯುಳ್ಳ ಲೇಖನ. ಧನ್ಯವಾದಗಳು.
Shivu sir,
tumba chennagide ..ondu hosa conceptu tilitu...
thank you!
ಬಹಳ ಚೆನ್ನಾಗಿದೆ ಶಿವೂ, ವಿನೋದದೊ೦ದಿಗೆ ವಿಷಯವನ್ನು ಪ್ರಸ್ತುತ ಪಡಿಸುತ್ತಾ, ನಮ್ಮ ಸುತ್ತ ಚಾಲ್ತಿಯಲ್ಲಿರುವ ಕೆಲವು ನುಡಿಗಟ್ಟು ಗಳ ಹಿ೦ದಿನ ವಾಸ್ತವವನ್ನು ಕೆದಕಿದ್ದೀರಿ. ಉತ್ತಮ ಲೇಖನ.
ನಗೆಯೊಂದಿಗೆ ವಿಷಯ ಮುಂದಿಟ್ಟಿದ್ದೀರಿ, ಬೆಕ್ಕಿಗೂ ಜ್ವರ ಬರುತ್ತೆ ಎಂದು ಚೆನ್ನಾಗಿ ತಿಳಿಸಿದ್ದೀರಿ. ಒಳ್ಳೆಯ ಚಿತ್ರಗಳೂ ಕೂಡ
chennagide! :D
ಶಿವು ಸರ್,
ಬೆಕ್ಕಿಗೆ ಜ್ವರ ಬರುವಹಾಗೆ ಮಾಡಿ
ಜ್ವರಕ್ಕೆ ಕಾರಣ ಮತ್ತು ಚಿಕೆತ್ಸೆ ಕೊಡಿಸಿದ್ದಿರಿ
ಧನ್ಯವಾದಗಳು.
ಶಿವು ಅವರೆ,
ನಗು ಖರ್ಚುಮಡ್ಕೋಬೇಡಿ.. ಹಾಸ್ಯ ಲೇಖನಗಳು ತು೦ಬಾ ಇದೆ ಅ೦ತೀರಾ? ಬರೀರಿ..ಹಾಸ್ಯ ಇರೋವರ್ಗೂ ನಗು ಖರ್ಚಾಗಲ್ಲ!
’ಬೆಕ್ಕಿಗೆ ಜ್ವರ ಬರೊ ಮಾತು’ಬರಹ ಮಜವಾಗಿದೆ.
ಶಿವು ಸಾರ್...
ಸಕ್ಕತ್ ಮಾಹಿತಿಯುಳ್ಳ ಲೇಖನ..... ಅವಧಿಯಲ್ಲೂ ನೋಡಿದೆ ನಿಮ್ಮ ಲೇಖನ... congrats... ಅಂತು ಏನಾದರು ಒಂದು ಹೊಸತನ್ನು ಹುಡುಕುತ್ತಿರುತ್ತೀರಿ.... ಚಿತ್ರಗಳಂತೂ ತುಂಬಾ ಮುದ್ದಾಗಿವೆ. ಏನು ಪೋಸ್ ಗಳು... super....
'shivu.k ' ಅವ್ರೆ..,
ಬೆಕ್ಕಿಗೆ ಜ್ವರ ಬರುತ್ತಾ..? ಚೆನ್ನಾಗಿದೆ.
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com (ಮಾರ್ಚ್ 15 ರಂದು ನವೀಕರಿಸಲಾಗಿದೆ)
ಶಿವೂ..
ಪರವಾಗಿಲ್ಲ ರೀ, ತುಂಬಾ ಹುಡುಕಾಟ ನಡೆಸಿದ್ದೀರಾ . ಉತ್ತಮ ಮಾಹಿತಿ ಕೊಟ್ಟಿದ್ದೀರಾ .ಅದೂ ಹಾಸ್ಯಮಯವಾಗಿ !
ಜೊತೆಗೆ ಫೋಟೋಗಳೂ ಚೆನ್ನಾಗಿ ಬಂದಿವೆ.ಬೆಕ್ಕಿನ ಜ್ವರ ದ ಬಗ್ಗೆ ತಿಳಿದು ಕೊಂಡಂತಾಯ್ತು .
ಓವರ್ ಟು ಕಾಮೆಂಟ್:
ಬೆಕ್ಕಿಗೆ ಜ್ವರ ಬರುತ್ತೆ ಅಂತ ಬಲ್ಲೆ, ನಮ್ಮನೆ ಬೇಕ್ಕಿದೆ ಡಾಕ್ಟರ ಸಿಕ್ಕಾಪಟ್ಟೆ ಮದ್ದು ಕೊಟ್ಟಿದ್ರು.
ಲೇಖನ ಚೆನ್ನಾಗಿದೆ, ನಿರೂಪಣಾ ಶೈಲಿ ಹಿಡಿಸಿತು.
ಮಂಜುರವರೆ,
ನಾನು ಮೂರು ನಾಲ್ಕು ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದ್ದರೂ ಅವೆಲ್ಲ ಕೆಲವೊಮ್ಮೆ ಬೋರ್ ಹೊಡಿಸಿಬಿಡುತ್ತವೆ. ಆಗ ಇಂಥವುಗಳ ಹಿಂದೆ ಬೀಳುತ್ತೇನೆ. ಇದರಿಂದ ಖುಷಿ, ಥ್ರಿಲ್, ಸಿಕ್ಕು enjoy ಮಾಡುತ್ತೇನೆ. ಹಾಗೆ ಮತ್ತೊಮ್ಮೆ ಹಳೆಯ ಕೆಲಸಗಳಿಗೆ ಹುರುಪಿನಿಂದ ವಾಪಸಾಗಲು ಸಹಕಾರಿಯಾಗುತ್ತದೆ ಎನ್ನುವುದು ನನ್ನ ಭಾವನೆ.
ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ನಮ್ಮೊಳಗೊಬ್ಬ ಬಾಲು ಸರ್,
ಹೊಸ ವಿಚಾರಗಳ ಬೆನ್ನು ಹತ್ತುವುದರಲ್ಲಿರುವ ಆನಂದವೇ ಬೇರೆ. ಇಂಥ ವಿಚಾರಗಳನ್ನು ನೀವು ಮೆಚ್ಚುತ್ತೀರಿ. ಅದೇ ನನಗೆ ಖುಷಿ. ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್...
ಗುರು,
ಬೆಕ್ಕಿಗೆ ಗಂಟೆ ಕಟ್ಟುವ ವಿಚಾರವನ್ನು ನಮ್ಮ ಬಾಲ್ಯದಲ್ಲಿ ಓದಿದ್ದ ನೆನಪು. ಬೆಕ್ಕಿಗೆ ಜ್ವರ ಬರುತ್ತಾ ಅನ್ನುವುದು ನನಗೂ ನಿಮ್ಮಷ್ಟೇ ಕುತೂಹಲವಿತ್ತು. ಈಗ ನೋಡಿ ಅದರ ಪಲಿತಾಂಶ ಬಯಲಾಗಿದೆ...ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
Akkareya Shivu,
hudugaata da lekhana ve hudukaata da lekhana kooda aagiddu tumbaa khushiya vichaara...
baraha tumba ista aaytu...
Manikanth.
ಮನದಾಳದ ಪ್ರವೀಣ್ ಸರ್,
ನೀವು ಹೇಳಿದಂತೆ ಇದೇನು ಪರಿಹಾರವಲ್ಲ..ಒಂದು ತಮಾಷೆಯ ವಿಚಾರವಷ್ಟೆ. ಸುಮ್ಮನೆ ಅದರ ತುದಿಯನ್ನು ಹಿಡಿದು ಹೊರಟಾಗ ಆದ ಆನುಭವವನ್ನು ಹಂಚಿಕೊಂಡಿದ್ದೇನೆ ಅಷ್ಟೆ. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಹರೀಶ್ ಮಾಂಬಾಡಿ,
ಥ್ಯಾಂಕ್ಸ್...
ರಂಜಿತ,
ಮುದ್ದಾದ ಬೆಕ್ಕುಗಳ ಫೋಟೊಗಳನ್ನು ತುಂಬಾ ಹಿಂದೆ ಕ್ಲಿಕ್ಕಿಸಿದ್ದೆ. ಜ್ವರ ಬರುತ್ತೆ ಅನ್ನೋದು ಮಾತು ಪಲಿತಾಂಶ ಗೊತ್ತಾಗಿದೆ..ಲೇಖನವನ್ನು ಓದಿ ಖುಷಿ ಪಟ್ಟಿದ್ದಕ್ಕೆ ಥ್ಯಾಂಕ್ಸ್..
ಆಜಾದ್,
ನಮ್ಮ ಮಾತಿಗೆ ಹೇಮಾಶ್ರೀ ಮಾತ್ರವಲ್ಲ. ಪ್ರತಿಯೊಬ್ಬರೂ ಹೇಳುವುದು ತಟ್ಟಂತ ಇದನ್ನೇ ಅಲ್ಲವೇ. ಬೆಕ್ಕು ಸದಾ ಅರಾಮವಾಗಿಯೇ ಇರುತ್ತದೆ. ಅದು ಸುಮ್ಮನೆ ಇರುವುದು ಕಡಿಮೆ. ಅಂದಮೇಲೆ ಬೆಕ್ಕಿಗೆ ಜ್ವರಬಂದು ಸುಮ್ಮನೇ ಮಲಗುವುದಿಲ್ಲವೆಂದು ತರ್ಕ. ಮೀನಿನ ಹೆಜ್ಜೆ ಹುಡುಕಬಹುದು ಆದ್ರೆ ಇವಳ ಮರ್ಮ ಹುಡುಕೋದು ಕಷ್ಟ, ಅನ್ನೋ ಮಾತು ಕೂಡ ಒಂದು ರೂಡಿ ಮಾತು. ಆದ್ರೆ ನೀವು ಹೇಳಿದಂತೆ ಸದ್ಯ ಅದಕ್ಕೆ ತಲೆ ಬಿಸಿ ಮಾಡಿಕೊಳ್ಳೋದಿಲ್ಲ. ಅದು ಒಂದು ಕಡೆ ಮನಸ್ಸಿನಲ್ಲಿ ಆಡಗಿ ಕೂತಿರುತ್ತದೆ. ಯಾವತ್ತು ಅದು ಚಿಗುರೊಡೆದು ಆಚೆ ಬರುತ್ತೋ ಅವತ್ತು ಮತ್ತೊಂದು ಇಂಥ ಲೇಖನವಾಗುತ್ತೆ. ಏನಂತೀರಿ. ಒಟ್ಟಾರೆ ಇಂಥ ಲೇಖನವನ್ನು enjoy ಮಾಡಿದ್ದಕ್ಕೆ ಧನ್ಯವಾದಗಳು.
ಕೇಶವ ಕುಲಕರ್ಣಿ ಸರ್,’
ಧನ್ಯವಾದಗಳು.
ಕೃಷಿಕನ ಕಣ್ಣು ನಾಗೇಂದ್ರ,
ಲೇಖನವನ್ನು ವಿಶಿಷ್ಟ ನಿರೂಪಣೆ ಅಂತ ಹೊಗಳಿದ್ದೀರಿ. ನನಗನ್ನಿಸುತ್ತೆ ನಾವು ಆಯ್ಕೆ ಮಾಡಿಕೊಳ್ಳುವ ವಿಚಾರಗಳಲ್ಲೇ ಪ್ರಾರಂಭದಲ್ಲಿ ವಿಶಿಷ್ಟತೆಯನ್ನು ಕಂಡುಕೊಂಡುಬಿಟ್ಟರೆ ಹೀಗೆ ಆಗಬಹುದು ಅಂತ. ನಿಮಗೂ ಅಡಿಕೆ ಬಿಡಿಸುವಾಗಿನ ಗಾದೆ ಮಾತುಗಳು, ಆಡಿಕೆಯೊಳಗೆ, ಆಡಿಕೆಯಾಚೆ, ಆಡಿಕೆ ಬಾಯಿಗೆ ಹೋದಾಗ, ಆಡಿಕೆ ಸಿಗಿಯುವಾಗ........ಹೀಗೆ ಅನೇಕ ಮಾತುಗಳು ಸಾಗಿಬರುತ್ತವಲ್ಲ. ಅದರಲ್ಲಿ ಒಮ್ಮೆ ಸಿಕ್ಕಿಹಾಕಿಕೊಳ್ಳಿ. ಬಿಡಿಸಿಕೊಳ್ಳಲಾಗದಿದ್ದಾಗ ನಿಮ್ಮಿಂದಲೂ ಒಂದು ಲೇಖನ ಹೊರಬರಬಹುದು.
ಧನ್ಯವಾದಗಳು.
ದೇಸಾಯ್ ಸರ್,
ತಮಾಷೆಯ ಲೇಖನವನ್ನು ಮಾಹಿತಿ ಪೂರ್ಣವೆಂದಿದ್ದೀರಿ. ಥ್ಯಾಂಕ್ಸ್.
ವಿನುತಾ,
ಒಂದು ಪ್ರಶ್ನೆಯ ಬೆನ್ನತ್ತಿ....ಹೌದಲ್ವ ಅನ್ನಿಸಿತು...
ಧನ್ಯವಾದಗಳು.
ವಿನುತಾ,
ಒಂದು ಪ್ರಶ್ನೆಯ ಬೆನ್ನತ್ತಿ....ಹೌದಲ್ವ ಅನ್ನಿಸಿತು...
ಧನ್ಯವಾದಗಳು.
ಶ್ವೇತ ಮೇಡಮ್,
ನಿಮಗೆ ಸಿಕ್ಕಂತೆ ನನಗೂ ಕೂಡ ಇದು ಹೊಸ ಕಾನ್ಸೆಪ್ಟು. ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ಪರಂಜಪೆ ಸರ್,
ಹೊಸದರ ಹಿಂದೆ ಬಿದ್ದಾಗ ವಿನೋದವನ್ನು ರುಚಿಗೆ ತಕ್ಕಷ್ಟು ಉಪ್ಪಿನಂತೆ ಸೇರಿಸಿಕೊಂಡಾಗ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ ಅನ್ನುವುದು ನನ್ನ ಅನಿಸಿಕೆ. ನಮ್ಮ ಅಕ್ಕ ಪಕ್ಕದಲ್ಲೇ ಇನ್ನೂ ಅನೇಕ ವಿಚಾರಗಳಿವೆ ಸರ್. ನಿದಾನವಾಗಿ ಅವುಗಳನ್ನು ಕೆದಕುವ ಆಸೆ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..
ಬೆಕ್ಕಿಗೇ ಜ್ವರ ನನ್ನ ತಲೆಲ್ಲೂ ಕಾಡುತ್ತಾ ಇದ್ದ ಪ್ರಶ್ನೇ. ಅದೇ ಪ್ರಶ್ನೇ ಹಿ೦ದೇ ತಿರುಗಿ ಉತ್ತರ ಕ೦ಡುಕೊ೦ಡು, ಅದನ್ನು ನವಿರು ಹಾಸ್ಯದ ಮುಖಾ೦ತರ ಹೇಳಿ, ಬೆಕ್ಕುಗಳ ಸು೦ದರ ಚಿತ್ರ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಶಿವೂರವರೇ. ತಮ್ಮ ಈ ರೀತಿ ತೆವಲುಗಳು (ನೀವೆ ಅನ್ನುವ೦ತೆ) ನಮಗೆಲ್ಲಾ ಖುಷಿ ಮಾಹಿತಿ ನೀಡ್ತಾ ಇವೇ ಅಲ್ಲವೇ!
ಮನಸು ಮೇಡಮ್,
ಅದೇನೋ ಗೊತ್ತಿಲ್ಲ ಸಹಜವಾಗಿಯೇ ಲೇಖನದಲ್ಲಿ ಹಾಸ್ಯ ಬಂದುಬಿಡುತ್ತದೆ. ಅದರಿಂದ ನಿಮಗೆಲ್ಲರಿಗೂ ಖುಷಿಯಾಗುತ್ತಲ್ಲ ಅದೇ ನನಗೂ ಖುಷಿ. ಧನ್ಯವಾದಗಳು.
ಭಾಶೇ...
ಧನ್ಯವಾದಗಳು.
ಸಲೀಂ,
ಬೆಕ್ಕಿಗೆ ನಾನು ಜ್ವರ ಬರುವ ಹಾಗೆ ನಾನು ಮಾಡಿಲ್ಲ. ಅಂತ ಒಂದು ಮಾತಿನ ಹಿಂದೆ ಏನಿರಬಹುದು ರಹಸ್ಯ ಅಂತ ಹುಡುಕಾಟಕ್ಕೆ ಬಿದ್ದೆ. ಅಷ್ಟೇ. ಪಲಿತಾಂಶ ತಾನಾಗೆ ಬಂತು. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಮನಮುಕ್ತ ರವರೆ,
ನಕ್ಕಷ್ಟು ಅದು ಖರ್ಚಾಗುವುದಿಲ್ಲ. ಹಾಸ್ಯ ಲೇಖನಗಳನ್ನು ಬರೆಯಬೇಕೆಂದು ಬರೆಯುವುದಿಲ್ಲ. ವಿಚಾರದ ನಡಾವಳಿಗಳ ನಡೆಯಲ್ಲಿ ಹೀಗೆ ಸಹಜವಾಗಿ ಹಾಸ್ಯ ಎಡತಾಕುತ್ತವೆ. ಅದನ್ನು ನಾನು enjoy ಮಾಡುತ್ತೇನೆ. ನಿಮ್ಮೊಂದಿಗೂ ಹಂಚುತ್ತೇನೆ...ಲೇಖನವನ್ನು enjoy ಮಾಡಿದ್ದಕ್ಕೆ ಧನ್ಯವಾದಗಳು.
ಶ್ಯಾಮಲ ಮೇಡಮ್,
ಲೇಖನದಲ್ಲಿ ಮಾಹಿತಿ ಸಕ್ಕತ್ ಆಗಿದೆ ಅಂದಿದ್ದೀರಿ ಥ್ಯಾಂಕ್ಸ್..ಇದನ್ನು ಅವಧಿಯಲ್ಲಿ ಪ್ರಕಟಿಸಿದ ಆವಧಿ ಬಳಗಕ್ಕೂ ಧನ್ಯವಾದಗಳು.ಹೊಸತರ ಹಿಂದೆ ಬೀಳದಿದ್ದಲ್ಲಿ ಬದುಕು ಬೋರ್ ಆಗಿಬಿಡುತ್ತಲ್ಲ ಮೇಡಮ್,
ಧನ್ಯವಾದಗಳು.
ಗುರು ದೆಸೆ,
ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್...ನಿಮ್ಮ ಬ್ಲಾಗಿನ ಪೋಸ್ಟ್ ನೋಡಿದೆ. ಚೆನ್ನಾಗಿದೆ...
ಧನ್ಯವಾದಗಳು.
ಚಿತ್ರ ಮೇಡಮ್,
ನಾನು ನಿಜಕ್ಕೂ ಗಂಭೀರವಾಗಿ ಇದರ ಹಿಂದೆ ಬೀಳಲಿಲ್ಲ. ಮಣಿಕಾಂತ್ ಹೇಳಿದಂತೆ ಹುಡುಗಾಟಕ್ಕಾಗಿ ಮಾಡಿದ್ದು ಹೀಗೆ ಹುಡುಕಾಟಕ್ಕೆ ದಾರಿಯಾಗುತ್ತದೆ ಅಂತ ನನಗೂ ಗೊತ್ತಿರಲಿಲ್ಲ. ಫೋಟೊಗಳು ಮತ್ತು ಮಾಹಿತಿಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..
ಓವರ್ ಟು ಬಾಲು,
ನಿಮ್ಮನೆ ಬೆಕ್ಕಿನ ಆಟವನ್ನು ಇನ್ನು ಮುಂದೆ ನೀವು ಹೆಚ್ಚು ಗಮನಿಸಬಹುದು ಅಲ್ವಾ ಡಾಕ್ಟರ್ ಮದ್ದು ಕೊಟ್ಟ ವಿಚಾರವನ್ನು ಬ್ಲಾಗಿನಲ್ಲಿ ಬರೆಯಿರಿ..
ಧನ್ಯವಾದಗಳು.
ಬೆಕ್ಕಿಗೆ ಜ್ವರದ ಮಾಹಿತಿ ಚಿತ್ರ ಸಹಿತ ಚೆನ್ನಾಗಿದೆ, ಮಾಹಿತಿಗಾಗಿ ವಂದನೆಗಳು
ಸರ್,
ಒಳ್ಳೆ ಮಾಹಿತಿ ಕೊಟ್ಟಿದ್ದಿರಿ....
ಧನ್ಯವಾದಗಳು :)
ಶಿವು,
"ಬೆಕ್ಕಿಗೆ ಜ್ವರ ಬರುತ್ತಾ" ಕೊಡಿತವಾಗಿಯು ಬರುತ್ತೆ .
ನಿಮ್ಮ ಈ ವಾಕ್ಯದ ವಿಮರ್ಶೆ ಬಹಳ ಚನ್ನಾಗಿ ಮೂಡಿಬಂದಿದೆ. ಅದರ ನಿರೂಪಣೆ, ಸತ್ಯ - ಅಸಥ್ಯತೆಯ ವಿವರ ಬಹಳ ಚನ್ನಾಗಿದೆ.
ಎಷ್ಟೋ ಪದಗಳನ್ನ ವಾಕ್ಯಗಳನ್ನ ಅರ್ಥ ತಿಳಿಯದೆ ಮಾತನಾಡುತ್ತೇವೆ..... ಬರಿ ಮಾತಿಗಾಗಿ
ನೇರವಾಗಿ ಹೇಳಬಹುದದ್ದನು ಕೊಣೆಕಿನಿಂದ ಹೇಳುವ ಪರಿ
" ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೆ "
ಡಾ.ದೇವರಾಜ್
ಸರ್,
ಬೆಕ್ಕಿಗೆ ಜ್ವರ ತುಂಬಾ ಹಾಸ್ಯಮಯವಾಗಿ ಹೇಳಿದ್ದಿರಿ
ಬಹಳ ಇಷ್ಟವಾಯಿತು ಲೇಖನ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ನಮ್ಮ ಮನೆಗಳಲ್ಲಿ ಬೆಕ್ಕು ಮನೆಯ ಸದಸ್ಯನ ಥರ ಇರುವುದರಿಂದ ಆ ಸಲುಗೆಯಲ್ಲಿ ಮತ್ತು ಬೆಕ್ಕು ಸ್ವಲ್ಪ ನಾಜೂಕಿನ ಪ್ರಾಣಿ ಆಗಿರುವುದರಿಂದ ಬೆಕ್ಕಿಗೆ ಜ್ವರ ಬರುವ ಮಾತಾಡಬೇಡಿ ಎನ್ನುತ್ತೇವೆ, ಲೇಖನ ಸುಂದರವಾಗಿದೆ !
bekkina chitra chennagittu.
mala
ಮಣಿಕಾಂತ್,
ಇದು ಖಂಡಿತ ಹುಡುಗಾಟಕ್ಕೆ ಮಾಡಿದ್ದು. ಆದ್ರೆ ಇದರ ಪರಿಣಾಮ ಈ ಮಟ್ಟಕ್ಕೆ ಇರುತ್ತೆ ಅಂತ ನನಗೆ ಗೊತ್ತಿರಲಿಲ್ಲ. ಚಿತ್ರಸಹಿತ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
Nice
ಓಹೋ!
ಸೂರ್ಯಂಗೇ ಟಾರ್ಚ??
:) ಚೆನ್ನಾಗಿದೆ
ಶಿವು ಸರ್...
ತುಂಬಾ ಸೊಗಸಾಗಿ ಬರೆದಿದ್ದೀರಿ...
ನಿಮ್ಮ ಹುಡುಕಾಟಕ್ಕೆ ನನ್ನದೊಂದು ಸಲಾಮ್ !
ಯುಗಾದಿ ಹಬ್ಬದ ಶುಭಾಶಯಗಳು..
ಈ ಸಂವತ್ಸರ ನಿಮ್ಮ ಪ್ರಯತ್ನಗಳಿಗೆ ಇನ್ನಷ್ಟು ಯಶಸ್ಸು ತರಲೆಂದು ಹಾರೈಸುವೆ...
nagi nagisuttale tumbaa upayukta vichaaragalannu tilisideri sir..... dhanyavaada.....
ತುಂಬಾ ಹಾಸ್ಯಮಯವಾಗಿ ಮತ್ತು ವಿನೋದಮಯವಾಗಿ ಬೆಕ್ಕಿಗೆ ಜ್ವರ ಬರುವ ವಿಚಾರವನ್ನು ತಿಳಿಸಿದ್ದೀರಿ. ಹಿಂದೆ ಕೂದಲು ಪುರಾಣದ ಬಗ್ಗೆ ಬರಿದಿದ್ದಿರಿ. ಈಗ ಬೆಕ್ಕಿನ ಜ್ವರದ ಬಗ್ಗೆ. ಇದನ್ನೆಲ್ಲಾ ನೋಡಿ ನಾನು ನಿಮಗೆ ಲಲಿತ ಪ್ರಬಂಧಗಳ ಸರದಾರ ಎಂದು ಹೆಸರಿಟ್ಟಿದ್ದೇನೆ. ತುಂಬಾಚನ್ನಾಗಿದೆ. ಬಹಳ ದಿನವಾದ ಮೇಲೆ ನನ್ನನ್ನು ರಂಜಿಸಿದ ಬರಹ ಇದು. Thanks for that.
ಶಿವು..'ಬೆಕ್ಕಿಗೆ ಜ್ವರ ಬರತ್ತಾ..' - ಆಡುಮಾತು ನಮಗಿಬ್ಬರಿಗೂ ಗೊತ್ತಿರಲಿಲ್ಲ....ತುಂಬಾ ಚೆನ್ನಾಗಿ ವಿಶಿಷ್ಟ ರೀತಿಯಲ್ಲಿ (ಓವರ್ ಟು) ಬರ್ದಿದ್ದೀರಿ ..
ನಿಮಗಿಬ್ಬರಿಗೂ ಯುಗಾದಿ ಹಬ್ಬದ ಶುಭಾಶಯಗಳು:)
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ
hi shivu,
Tumba nagu bartha ittu nodtha iddaga,chennagide nimma lekana..hage innondu matide..
"andu suttu bekku tara adbeda" anthare idunna yar nodidro gottilla idra baggenu mahite idre tilsi..
ಅರೇ! ಚೆನ್ನಾಗಿದ್ಯಲ್ಲಾ!! ನಮ್ಮ ಬೆಕ್ಕಿಗೆ ಜ್ವರ ಬರೋ ವಿಚಾರವೇ ಹೊಳೆದಿಲ್ವೇ!
ಜ್ವರ ಗಿರ ಹಂಗಿರ್ಲಿ ಸಾರ್! ಒಳ್ಳೇ ಸಿನಿಮಾ ಹೊಡೆದಾಟದಾ ಪೋಸ್ಗಳಲ್ಲಿ ನಿಮ್ಮ ಮಾರ್ಜಾಲಗಳ ಸಕ್ಖತ್ ಚಿತ್ರಿಸಿದ್ದೀರ!! ;-)
ಒಂದು ಜೀವಂತ ಭಾಷೆಯಲ್ಲಿ ಈ ರೀತಿಯ ಪಲ್ಲಟಗಳು ಸಾಮಾನ್ಯ. ಬೆಂಕಿಗೆ ಜ್ವರ ಹೋಗಿ ಬೆಕ್ಕಿಗೆ ಜ್ವರ ಎಂದಾಗಿದೆ. ಆದರೂ ಅಷ್ಟೊಂದು ಹೀನಾರ್ಥ ಪ್ರಾಪ್ತವಾಗಿಲ್ಲ. ಹಾಗೇ ಶಿವಪೂಜೆಯಲ್ಲಿ ಕರಡಿಗೆ ಬಿಟ್ಟರು ಎಂಬುದು ಕರಡಿ ಬಿಟ್ಟರು ಎಂದಾಗಿದೆ. ಇನ್ನೊಂದು ಉಂಡು ಮಾವು ತಿನ್ನು ಹಸಿದು ಹಲಸು ತಿನ್ನು ಎಂಬುದರ ಬದಲಾಗಿ ಉಂಡೆ ಮಾವು ತಿನ್ನು ಹಿಸಿದು ಹಲಸು ತಿನ್ನು ಎಂಬ ಪ್ರಯೋಗಗಳೂ ಇವೆ. ಇಲ್ಲಿಯೋ ಅಷ್ಟೆ ಹೀನಾರ್ಥ ಪ್ರಾಪ್ತವಾಗಿಲ್ಲ. ಿದು ಜೀವಂತ ಭಾಷೆಗಳ ಲಕ್ಷಣಗಳಲ್ಲಿ ಒಂದು.
ಲೇಖನ, ಮಾಹಿತಿ, ಶೈಲಿ ಮತ್ತೆ ಬೆಕ್ಕಿನ ಫೋಟೊ ಎಲ್ಲವೂ ಮನಸ್ಸನ್ನು ರಿಫ್ರೆಶ್ ಮಾಡಿತು. ಧನ್ಯವಾದಗಳು
ಹೆಹೆ.. ಚನಾಗಿದೆ ನಿಮ್ ರಿಸರ್ಚು.. ಇವತ್ತು ಮತ್ತೊಮ್ಮೆ ಓದ್ಕೊಂಡೆ. :-)
ಸೀತಾರಾಂ ಸರ್.
ನಿಮ್ಮಂತೆ ನನಗೂ ಅನೇಕ ಪ್ರಶ್ನೆಗಳು ಹೀಗೆ ಕಾಡುತ್ತಿರುತ್ತವೆ. ಅದರಲ್ಲಿ ಒಂದರ ಹಿಂದೆ ಹೀಗೆ ಬಿದ್ದಾಗ ಸಿಕ್ಕ ಪಲಿತಾಂಶವೇ ಇದು.
ಲೇಖನವನ್ನು ಖುಶಿಯಿಂದ ಓದಿ ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
ಉಮೇಶ್ ವಶಿಷ್ಟ ಸರ್,
ಚಿತ್ರ ಲೇಖನ ಮತ್ತು ಮಾಹಿತಿಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಸವಿಗನಸು ಸರ್,
ಧನ್ಯವಾದಗಳು.
ಡಾ.ದೇವರಾಜ್,
ಈ ವಿಚಾರವಾಗಿ ನಿಮ್ಮೊಂದಿಗೆ ಚರ್ಚಿಸಿದ್ದೆ. ಚರ್ಚಿಯಲ್ಲಿನ ಆನಂದವೇ ಬೇರೆ ಅಲ್ಲವೇ. ನಂತರ ಅದರ ಹಿಂದೆ ಬಿದ್ದಾಗ ನೀವು ಹೇಳಿದಂತೆ ಆಯಿತು. ಆದ್ರೆ ಲೇಖನ, ವಾಕ್ಯ ರಚನೆ, ಇತ್ಯಾದಿಗಳನ್ನು ಮೆಚ್ಚಿದ್ದೀರಿ. ಮತ್ತು ಹೊಸ ವಿಚಾರವನ್ನು ಮತ್ತೆ ಹೇಳೀದ್ದೀರಿ. ಧನ್ಯವಾದಗಳು.
ಗುರುಮೂರ್ತಿ ಹೆಗಡೆ ಸರ್,
ಲೇಖನದಲ್ಲಿ ಜ್ವರವನ್ನು[ಬೆಕ್ಕಿಗೆ ಜ್ವರ]enjoy ಮಾಡಿದ್ದೀರಿ. ಧನ್ಯವಾದಗಳು. ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.
ವಿ.ಅರ್.ಭಟ್ ಸರ್,
ಬೆಕ್ಕು ನಿಮ್ಮ ಮನೆಯ ಸದಸ್ಯ. ಅಂದ ಮೇಲೆ ನಿಮಗೆ ಅದರ ಬಗ್ಗೆ ಅಭಿಮಾನ ಹೆಚ್ಚಿರಬೇಕಲ್ಲವೇ...ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಪ್ರಶಾಂತ್,
ಅಂಡು ಸುಟ್ಟ ಬೆಕ್ಕು" ಅನ್ನುವ ಮಾತು ಕೂಡ ಚಾಲ್ತಿಯಲ್ಲಿದೆ. ನೀವು ಲೇಖನವನ್ನು ಓದುತ್ತಾ ನಗುತ್ತಾ ಆನಂದಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..
ಮಾಲಾ ಲಹರಿ ಮೇಡಮ್,
ಬೆಕ್ಕಿನ ಚಿತ್ರಗಳು ಇಷ್ಟವಾದದ್ದು ನನಗೂ ಖುಷಿ. ಲೇಖನ ಇಷ್ಟವಾಗಲಿಲ್ಲವೇ?.
ಆಗ್ನಿಹೋತ್ರಿ ಸರ್,
ಧನ್ಯವಾದಗಳು.
ಲೋದ್ಯಾಶಿ ಸರ್,
ಸೂರ್ಯನಿಗೆ ಟಾರ್ಚ್ ವಿಚಾರವನ್ನು ಕಂಡುಹಿಡಿಯುವುದಕ್ಕಿಂತ ಇಂಥ ವಿಚಾರಗಳ ಹಿಂದೆ ಬೀಳುವುದು ಸುಲಭವಲ್ಲವೇ...
ಪ್ರಕಾಶ್ ಸರ್,
ನನ್ನ ಹುಡುಕಾಟ ಮತ್ತು ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.
ದಿನಕರ್ ಸರ್,
ಲೇಖನವನ್ನು ಓದುತ್ತಾ ಜೊತೆಯಲ್ಲಿ ನಗುತ್ತಾ ಲೇಖನವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ..
ಉದಯ್ ಸರ್.
ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್..ನೀವು ಸಹಜವಾಗಿ ನಗುವಾಗ ಹೇಗೆ ಕಾಣುತ್ತೀರಿ ಅಂತ ನೋಡಿದ್ದೇನೆ. ನನಗೆ ನಿಮ್ಮ ಬಿರುದುಗಳಿಗಿಂತ ಬರಹವನ್ನು ಪ್ರಾಮಾಣಿಕವಾಗಿ ವಿಮರ್ಶಿಸುವುದು ಹೆಚ್ಚು ಅಗತ್ಯವೆಂದು ನನ್ನ ಅನಿಸಿಕೆ. ಹೀಗೆ ಬರುತ್ತಿರಿ..ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.
ವನಿತಾ,
ಇದೊಂದೆ ಅಲ್ಲ ಅನೇಕ ಆಡುಮಾತುಗಳಿವೆ. ಬೇರೆಯವರು ಹೀಗೆ ಮಾತಿನ ಹಿಂದೆ ಬಿದ್ದರೆ ಇಂಥ ಅನೇಕ ವಿಚಾರಗಳು ಎಲ್ಲರಿಗೂ ತಿಳಿಯಬಹುದು. ಓವರು ಟು ಒಂದು ಸಣ್ಣ ಪ್ರಯೋಗವಷ್ಟೇ. ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.
ಪ್ರದೀಪ್,
ಈ ವಿಚಾರ ನಿತ್ಯದ ಆಡುಮಾತು ಕಣ್ರಿ...
ಮತ್ತೆ ಲೇಖನವನ್ನು ಓದುತ್ತಾ enjoy ಮಾಡಿದ್ದಕ್ಕೆ ಥ್ಯಾಂಕ್ಸ್..ಮತ್ತು ಬೆಕ್ಕುಗಳ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಡಾ.ಸತ್ಯನಾರಾಯಣ ಸರ್,
ನಮ್ಮ ಭಾಷೆ ನೀವು ಹೇಳಿದಂತೆ ಒಂದು ಜೀವಂತೆ ಭಾಷೆ ಅನ್ನುವುದರಲ್ಲಿ ಸಂಶಯವಿಲ್ಲ. ಮತ್ತೆ ನೀವು ಹೇಳಿದ ಅನೇಕ ಮಾತುಗಳನ್ನು ಡಾ.ಶೇಷಾಶಾಸ್ತ್ರಿಗಳ ಜೊತೆ ಚರ್ಚಿಸಿದ್ದೇನೆ. ಅವರು ಅನೇಕ ವಿಚಾರಗಳನ್ನು ಹೇಳೀದ್ದಾರೆ. ಅದನ್ನೆಲ್ಲಾ ಬ್ಲಾಗಿನಲ್ಲಿ ಹಾಕಿದರೆ ಬರಹದ ವಸ್ತುವಿನ ಸ್ಥಾನಪಲ್ಲಟವಾಗಬಹುದೆಂಬ ದಿಗಿಲಿನಿಂದಾಗಿ ಒಂದೇ ವಿಚಾರಕ್ಕೆ ಲೇಖನವನ್ನು ಬರೆದಿದ್ದೇನೆ...
ಧನ್ಯವಾದಗಳು.
ಸಾಗರಿ,
ಲೇಖನ, ಮಾಹಿತಿ, ಶೈಲಿ ನಿಮ್ಮ ಮನಸ್ಸನ್ನು ರಿಪ್ರೇಶ್ ಮಾಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..
ಸುಶ್ರೂತಾ,
ಲೇಖನವನ್ನು ಮತ್ತೆ ಮತ್ತೆ ಓದಿ ಮೆಚ್ಚಿಕೊಳ್ಳುತ್ತಿರುವುದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ...
ಶಿವು, ಒಂದು ಸಣ್ಣ ಮಾತಿನ ಜಾಡನ್ನು ಹಿಡಿದು ತುಂಬಾ ಚೆನ್ನಾಗಿ ಬರೆದಿರುವಿರಿ. ಹೀಗೂ ಆಲೋಚಿಸಬಹುದೇ ಎಂಬುದಕ್ಕೆ ಇದು ಉದಾಹರಣೆ. ಅನೇಕ ಹೊಸ ವಿಷಯ ತಿಳಿಯುವಂತಾಯಿತು.
ಮಲ್ಲಿಕಾರ್ಜುನ್,
ಪ್ರಯೋಗ ಮಾಡುವುದರಲ್ಲಿ ಒಂಥರ ಥ್ರಿಲ್ ಇದೆ. ಪಲಿತಾಂಶವೇನೇ ಇರಲಿ, ಅದರ ಪ್ರಕ್ರಿಯೆಯನ್ನು ಸಕ್ಕತ್ enjoy ಮಾಡಬಹುದು.
ಧನ್ಯವಾದಗಳು.
Pavitra.H said
Good read! Thanks for sharing and giving detailed writing on facts to support the common saying related to Cats.
Looking forward to see you with many more writings :)
ಪವಿತ್ರ ಮೇಡಮ್,
ಬೆಕ್ಕಿನ ಬಗೆಗಿನ ಲೇಖನ ಮತ್ತು ಚಿತ್ರಗಳನ್ನು ಇಷ್ಟಪಟ್ಟು ಮೇಲ್ ಮಾಡಿದ್ದೀರಿ. ಧನ್ಯವಾದಗಳು.
ಶಿವು ಸರ್, ನಿಮ್ಮ ಲೇಖನವನ್ನು ತಪ್ಪಿಸಿಕೊಂಡಿಲ್ಲ. ಓದಿದ್ದೆ. ಆದರೆ, ಕಾಮೆಂಟಿಸಲು ಕಷ್ಟವಾಗಿತ್ತು. ತಡವಾಗಿದ್ದಕ್ಕೆ ಬೇಸರಿಸದಿರಿ.
ಬೆಕ್ಕಿಗೆ ಜ್ವರ ಬರುವ ... ಲೇಖನ ಮಾಹಿತಿದಾಯಕವಾಗಿದ್ದು ಚೆನ್ನಾಗಿದೆ. ನಿಮ್ಮ ಸೊಗಸಾದ ನಿರೂಪಣೆ, ಶ್ರಮ ಎಲ್ಲ ಸಾರ್ಥಕವಾಗಿದ್ದು, ಚಿತ್ರಗಳೂ ಚಿತ್ತೋಪಹಾರಿಯಾಗಿವೆ.
ಸ್ನೇಹದಿಂದ,
ಧನ್ಯವಾದಗಳು.
vow!!!
thumba chennaagi investigation maadideera shivanna :)
bekkina chithragalu muddaagive :)
ಚಂದ್ರು ಸರ್,
ನೀವು ತಡವಾಗಿ ಬಂದರೂ ಲೇಟೆಷ್ಟಾಗಿ ನೂರನೆ ಕಾಮೆಂಟಿಗೆ ಸರಿಯಾಗಿ ಬಂದಿದ್ದೀರಿ....ಜೊತೆಗೆ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಸುಧೇಶ್,
ಸಂಶೋಧನೆಯಂಥ ದೊಡ್ಡ ಪದವೇನು ಸುದೇಶ್, ಸುಮ್ಮನೇ ಒಂದು ತರಲೇ ಆಟವಷ್ಟೇ....
ಮೆಚ್ಚಿದ್ದಕ್ಕೆ ಧನ್ಯವಾದಗಳು.
ನಗೆಯೊಂದಿಗೆ ವಿಷಯ ಮುಂದಿಟ್ಟಿದ್ದೀರಿ, ಬೆಕ್ಕಿಗೂ ಜ್ವರ ಬರುತ್ತೆ ಎಂದು ಚೆನ್ನಾಗಿ ತಿಳಿಸಿದ್ದೀರಿ. ಒಳ್ಳೆಯ ಚಿತ್ರಗಳೂ ಕೂಡ
Travis: Thank you very much..ಈ ಲೇಖನದ ಜೊತೆಗೆ ಮತ್ತಷ್ಟು ಲೇಖನಗಳು ಸೇರಿ ಗುಬ್ಬಿ ಎಂಜಲು ಪುಸ್ತಕವಾಗಿದೆ...ಬೆಂಗಳೂರಿನ BBC ಗಾಂಧಿಬಜಾರ್ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತದೆ.
ತುಂಬಾ ಚೆನ್ನಾಗಿದೆ....ಇಷ್ಟವಾಯಿತು.
Post a Comment