Monday, April 20, 2009

ನಾನದನ್ನು ನೋಡಬಾರದಿತ್ತು...ನೋಡಿಬಿಟ್ಟೆ..!!

ನಾನದನ್ನು ನೋಡಬಾರದಿತ್ತು....ನೋಡಿಬಿಟ್ಟೆ.!! ಕಣ್ಣಿಗಂಟಿಕೊಂಡಿದ್ದ [10x50DPS I] ಒಲಂಪಸ್ ಬೈನಕ್ಯೂಲರ್‌ನಿಂದ ಅವರಿಬ್ಬರ ರೊಮ್ಯಾನ್ಸ್ ನನ್ನಲ್ಲಿ ಕುತೂಹಲ ಕೆರಳಿಸಿದ್ದವು. ಅವೇ ಕಳ್ಳಿಪೀರ ಜೋಡಿ ಹಕ್ಕಿಗಳು. ನಾನು ಹೊರಗಿನ ಪ್ರಪಂಚವನ್ನು ಮರೆತು ಅವೆರಡನ್ನು ಗಮನಿಸುತ್ತಿದ್ದರೂ ಅವು ಅರಿವಿಲ್ಲದೇ ತಮ್ಮ ಸಂಸಾರ ಸಾಗರದಲ್ಲಿ ಮುಳುಗಿದ್ದವು.

ಬಾಯಲ್ಲಿರುವ ನೊಣವನ್ನು ಗಿಫ್ಟ್ ಕೊಟ್ಟು ಗೆಳತಿಯನ್ನು ಒಲಿಸಿಕೊಳ್ಳುವ ಕಲೆ!!


ಬಹುಶಃ ಇಲ್ಲೇ ಹತ್ತಿರದಲ್ಲಿ ಅವುಗಳ ಗೂಡಿರಬೇಕು ಅಂದುಕೊಳ್ಳುತ್ತಿದ್ದಂತೆ ಅವು ಅತ್ತಿತ್ತ ಹಾರಾಡಿದವು. ನಾನು ಬೇಕಂತಲೇ ನನ್ನ ಗಮನವನ್ನು ಬೇರೆಡೆಗೆ ಹರಿಸಿದೆ... ಅವು ಸ್ವಲ್ಪ ಹೊತ್ತು ಸುತ್ತ ಮುತ್ತ ನೋಡಿ ನಾನು ಕಣ್ಣು ಮಿಟುಕುವಷ್ಟರಲ್ಲಿ..ಬೇಲಿಯಾಚೆಗಿದ್ದ ನೆಲಮಟ್ಟದಿಂದ ಒಂದು ಆಡಿ ಎತ್ತರದಲ್ಲಿ ತೂತು ಕೊರೆದು ಮಾಡಿದ್ದ ಗೂಡಿಗೆ ರಾಕೆಟಿನಂತೆ ಗಂಡು ಹಕ್ಕಿ ನುಗ್ಗಿತ್ತು. ಅದರ ಹಿಂದೆಯೇ...ಹೆಣ್ಣು ಕೂಡ ಹೋಯಿತು. ಒಳಗೆ ಇನ್ನೇನು ಸರಸ ಸಲ್ಲಾಪ ನಡೆದಿದೆಯೋ ನಮಗ್ಯಾಕೆ "ಮಾಡಿದವರ ಪಾಪ ನೋಡಿದವರ ಕಣ್ಣಲ್ಲಿ" ಅಂದುಕೊಂಡು ಗೂಡನ್ನು ಕಂಡುಹಿಡಿದ ಖುಷಿಯಲ್ಲಿ ವಾಪಸು ಬಂದುಬಿಟ್ಟೆ.


ಹಕ್ಕಿಗೂಡು ಒಂದು...ಮುದ್ದು ಮುದ್ದಾಗಿ ಒಳಗೇನು ನಡೆದಿದೆಯೋ...!!


ನಂತರ ಪ್ರತಿವಾರಕ್ಕೊಮ್ಮೆ ಹೋಗಿ ಅವುಗಳ ಚಲನವಲನವನ್ನು ವೀಕ್ಷಿಸುತ್ತಿದ್ದೆ. ಸರಿಯಾಗಿ ೩೫ ನೇ ದಿನ ಹೆಣ್ಣು ಕಳ್ಳಿಪೀರ ಬಾಯಲ್ಲಿ ಸಣ್ಣ ಹುಳುವನ್ನು ಹಿಡಿದುಕೊಂಡು ಗೂಡಿನ ಹತ್ತಿರದಲ್ಲೇ ಸಣ್ಣ ಕಡ್ಡಿಯ ಮೇಲೆ ಕುಳಿತಿತ್ತು. ಗಂಡು ಮರದ ಮೇಲೆ ಕುಳಿತಿತ್ತು. ನಾನು ಬೈನಾಕ್ಯೂಲರ್‌ನಲ್ಲಿ ನೋಡಿದ ಆ ಮೂರು ತಾಸಿನಲ್ಲಿ ಹೆಣ್ಣು ಹಕ್ಕಿ ಮಾತ್ರ ಆಹಾರವನ್ನು ಬಾಯಲ್ಲಿ ಹಿಡಿದುತಂದು ಗೂಡಿಗೆ ಹೋಗಿ ಮರಿಗಳಿಗೆ ಕೊಟ್ಟು ಬರುತ್ತಿತ್ತು.

ಆಹಾರ ಬೇಟೆಗೆ ಈಗ ಹಾರಬೇಕು...!!


ಈ ಗಂಡು ಹಕ್ಕಿಗೆ ಇತ್ತೀಚಿನ ಸಾಮಾಜಿಕ ನ್ಯಾಯದ ಅರಿವಿಲ್ಲವೇ ? ಒಂದು ಮನೆ, ಮಕ್ಕಳು ಸಂಸಾರ ಚೆನ್ನಾಗಿ ನಡೆಯಬೇಕಾದರೆ ಈಗಿನ ಕಾಲದಲ್ಲಿ ಇಬ್ಬರೂ ದುಡಿಯಬೇಕು ಎನ್ನುವ ಸೂಕ್ಷ್ಮ ತಿಳಿವಳಿಕೆಯೂ ಈ ಗಂಡು ಹಕ್ಕಿಗೆ ಬೇಡವೇ ಎಂದು ನನ್ನ ಮನಸ್ಸಿಗೆ ಖೇದವಾಯಿತು.

ನಿಮ್ಮ ವಿಮಾನಗಳಿಗೆ ನನ್ನಂತೆ ಲ್ಯಾಂಡ್ ಆಗಲಿಕ್ಕೆ ಬರುತ್ತಾ..!!


ಸರಿಯಾಗಿ ೪೦ನೇ ದಿನಕ್ಕೆ ನಾನು ನನ್ನ ಛಾಯಾಗ್ರಹಣದ ಪರಿಕರಗಳಾದ ಕ್ಯಾಮೆರಾ, ಲೆನ್ಸ್, ಸ್ಟ್ಯಾಂಡ್, ನನಗೆ ಬೇಕಾದ ಆಹಾರ,ನೀರು ಇನ್ನಿತರ ಪರಿಕರಗಳೊಂದಿಗೆ ಸಿದ್ದನಾಗಿಹೋಗಿದ್ದೆ.

ಸ್ವಲ್ಪ ಹೊತ್ತು ಅತ್ತ ಇತ್ತ ನೋಡಬೇಕು....ನಂತರ ಗೂಡಿಗೆ ಹೋಗೋಣ...


ಅಲ್ಲೇ ಪೊದೆಯ ಮರೆಯಲ್ಲಿ ನನ್ನ ಕ್ಯಾಮೆರಾವನ್ನು ಅಣಿಗೊಳಿಸಿ ರಿಮೋಟ್ ಕೇಬಲ್ ಎಳೆದು ದೂರದಲ್ಲಿ ಮರೆಯಾಗಿ ಕುಳಿತುಬಿಟ್ಟೆ. ಮೊದಲಿಗೆ ಮರಿಗಳು ಚಿಕ್ಕದಾಗಿದ್ದರಿಂದ ಹೆಣ್ಣು ಹಕ್ಕಿ ಸಣ್ಣ ಸಣ್ಣ ಹುಳುಗಳನ್ನು ಹಿಡಿದು ತರುತ್ತಿತ್ತು. ಕಡ್ಡಿಯ ಮೇಲೆ ಕುಳಿತು ಸ್ವಲ್ಪ ಹೊತ್ತು ಅತ್ತ ಇತ್ತ ನೋಡಿ ಗೂಡಿಗೆ ಹಾರಿ ಮರಿಗಳಿಗೆ ಗುಟುಕು ಕೊಟ್ಟು ಬರುತ್ತಿತ್ತು. ನಾನು ಒಂದೇ ಸಮನೆ ಕ್ಲಿಕ್ಕಿಸುತ್ತಿದ್ದೆ.

ನನ್ನನ್ನೂ ನೋಡಿಯೇ ತಾನೇ ನಿಮ್ಮ ಸುಕೋಯ್..ಮೀರಜ್ ಹಾರೋದು ಕಲಿತದ್ದು....!!ಆರನೇ ದಿನ ನನ್ನ ಸಮಾಜಿಕ ನ್ಯಾಯದ ಲೆಕ್ಕಾಚಾರ ತಲೆಕೆಳಗಾಯಿತು. ಎಂದಿನಂತೆ ಹೆಣ್ಣು ಕಳ್ಳಿಪೀರ ಒಂದು ಏರೋಪ್ಲೇನ್ ಚಿಟ್ಟೆಯನ್ನು ಹಿಡಿದು ತಂದಿತ್ತು. ನಾನು ಅದನ್ನು ಕ್ಲಿಕ್ಕಿಸಬೇಕೆನ್ನುವಷ್ಟರಲ್ಲಿ ಅದೆಲ್ಲಿಂದಲೋ ಇನ್ನೂ ದೊಡ್ಡದಾದ ಹುಳುವನ್ನು ಹಿಡಿದುಕೊಂಡು ಬಂದ ಗಂಡು ಕಳ್ಳಿಪೀರ ತನ್ನ ಶ್ರೀಮತಿಯ ಪಕ್ಕದಲ್ಲೇ ಕಡ್ಡಿಯ ಮೇಲೆ ಕುಳಿತುಕೊಂಡಿತು.

ಗಂಡು ಹಕ್ಕಿಯ ಬಾಯಲ್ಲಿ ದೊಡ್ಡ ಚಿಟ್ಟೆ....


ನನಗೆ ಒಂದು ಕ್ಷಣ ಖುಷಿ, ಗಲಿಬಿಲಿ, ಆಶ್ಚರ್ಯ ಒಟ್ಟೊಟ್ಟಿಗೆ ಆಗಿ ಕ್ಲಿಕ್ಕಿಸುವುದು ಮರೆತೇ ಹೋಯಿತು. ಏಕೆಂದರೆ ಇದುವರೆಗೆ ಗಂಡು ಕಳ್ಳೀಪೀರವನ್ನು ಮನಸ್ಸಿನಲ್ಲೇ ಹೀಯಾಳಿಸಿ, ಅದರ ಸೋಮಾರಿತನವನ್ನು ಖಂಡಿಸಿದ್ದೆನಲ್ಲಾ....ಮರಿಗಳು ದೊಡ್ಡದಾಗಿರುವುದರಿಂದ ಗಂಡಿಗೆ ತನ್ನ ಜವಾಬ್ದಾರಿ ಅರಿತಿದ್ದಕ್ಕೆ ನನಗೆ ಖುಷಿಯಾಯಿತು. ಇದೆಲ್ಲಾ ಅಂದುಕೊಳ್ಳುತ್ತಿರುವಾಗಲೇ ಎರಡು ಒಂದರ ನಂತರ ಮತ್ತೊಂದು ಗೂಡಿಗೆ ಹಾರಿ ಮರಿಗಳಿಗೆ ಆಹಾರಕೊಟ್ಟು ಹೊರ ಹಾರಿಹೋಗಿದ್ದವು. ಆರೆರೆ...... ಎಂಥ ಒಳ್ಳೇ ಅವಕಾಶವನ್ನು ಕ್ಲಿಕ್ಕಿಸಲು ಮರೆತನಲ್ಲಾ.. ಈ ರೀತಿ ಬೇರೆಯವರ ಬಗ್ಗೆ ಯೋಚಿಸಿದರೆ ಹೀಗೆ ತಾನೆ ಆಗುವುದು ಅಂತ ಸಂಕಟವಾಗಿ ಇನ್ನಾದರೂ ಅಂಥ ಮತ್ತೊಂದು ಅಂಥ ಕ್ಷಣ ಸಿಗುವುದೋ ಅಂತ ಕಾಯತೊಡಗಿದೆ..

ನಾನು ಇಳಿಯುವಾಗ ನನ್ನ ರೆಕ್ಕೆಗಳ ಅಂದ ನೋಡು....

ಹದಿಮೂರನೇ ದಿನ ಮತ್ತೆ ದಂಪತಿಗಳಿಬ್ಬರೂ ದೊಡ್ಡ ಮಿಡತೆ ಮತ್ತು ಚಿಟ್ಟೆಯನ್ನು ಬಾಯಿಯಲ್ಲಿ ಹಿಡಿದು ಒಟ್ಟಿಗೆ ಕುಳಿತ ದೃಶ್ಯ ನನ್ನ ಕ್ಯಾಮೆರಾದಲ್ಲಿ ಸೆರೆಯಾಯಿತು. ನಂತರದ ದಿನಗಳಲ್ಲಿ ಎಲ್ಲಾ ರೀತಿಯ ದೊಡ್ಡ ದೊಡ್ಡ ಚಿಟ್ಟೆಗಳು, ಹುಳುಗಳು, ದುಂಬಿಗಳು, ಡ್ರ್ಯಾಗನ್ ಪ್ಲೈಗಳು, ಗೆದ್ದಲು ಹುಳುಗಳು....ಹಿಡಿದು ತರುತ್ತಿದ್ದವು. ಇತ್ತೀಚೆಗೆ ನಾನು ಕ್ಲಿಕ್ಕಿಸಿದ ಮಡಿವಾಳ ಹಕ್ಕಿ, ಚಿಟ್ಟು ಮಡಿವಾಳ ಹಕ್ಕಿ, ಬೇಲಿ ಚಟುಕಗಳಂತೆ ಒಮ್ಮೆಯೂ ಹಣ್ಣು ಇನ್ನಿತರ ಸಸ್ಯಹಾರವನ್ನು ಇವು ತರಲಿಲ್ಲವಲ್ಲ. ಪಕ್ಕಾ ವಿದೇಶಿ ಆಹಾರಪದ್ದತಿಯನ್ನು[ನಾನ್‌ವೆಜ್]ಮೈಗೂಡಿಸಿಕೊಂಡಿವೆಯಲ್ಲ...ಅನ್ನಿಸಿದರೂ ಬೇರೆಯವರ ಸಮಾಚಾರ ನಮಗೇಕೆ ಅಂದುಕೊಂಡು ಸುಮ್ಮನೆ ಕ್ಲಿಕ್ಕಿಸತೊಡಗಿದೆ.

ಕೂಡಿ ಬಾಳಿದರೆ ಸ್ವರ್ಗ ಸುಖ....ನನಗೂ ಸ್ವಲ್ಪ ಜಾಗ ಕೊಡೆ...!!ಅವು ಆಕಾಶದಲ್ಲೇ ಹುಳುಗಳನ್ನು ಬೇಟೆಯಾಡುವ ಪರಿ, ಉಲ್ಟಾ ಲಾಗ ಹಾಕುವುದು, ಲಗಾಟಿ ಹೊಡೆಯುವುದು, ಕೆಳಮುಖ ಹಾರುವುದು, ಇಳಿಯುವಾಗ ಮತ್ತು ಹಾರುವಾಗ ದೇಹದ ಮುಂಭಾಗ ಮೇಲೆತ್ತಿ ಬ್ಯಾಲೆನ್ಸ್ ಮಾಡುವುದು, ತಲೆಕೆಳಕಾಗಿ ಹಾರುತ್ತಾ ತಕ್ಷಣವೇ ತಿರುವು ತೆಗೆದುಕೊಂಡು ಮೇಲ್ಮುಖವಾಗುವುದು, ರೆಕ್ಕೆ ಕದಲಿಸದೇ ನೇರವಾಗಿ ಗೂಡಿಗೆ ಗುರಿತಪ್ಪದೆ ಹೋಗುವಲ್ಲಿನ ನಿಖರತೆ, ಚಾಕಚಕ್ಯತೆಗಳೆಲ್ಲಾ ನಮ್ಮ ಯುದ್ದವಿಮಾನಗಳಾದ ಜಾಗ್ವಾರ್, ಸುಖೋಯ್, ಮೀರಜ್, ಸೂರ್ಯಕಿರಣಗಳನ್ನು ನೆನಪಿಸಿತ್ತು.

ನಾನು ನೀನು ಜೋಡಿ...ಈ ಜೀವನ ಎತ್ತಿನ ಗಾಡಿ....!!

ಈ ಮದ್ಯ ಮತ್ತೊಂದು ವಿಚಿತ್ರ ಘಟನೆ ನಡೆಯಿತು. ಒಬ್ಬ ಹುಡುಗ ತನ್ನಲ್ಲಿ ಆಡಗಿಸಿಕೊಂಡಿದ್ದ ಚಾಟರಬಿಲ್ಲಿನಿಂದ ಈ ಕಳ್ಳೀ ಪೀರ ಹಕ್ಕಿಗಳಿಗೆ ಗುರಿಯಿಟ್ಟಿದ್ದ. ನಾನು ಅದನ್ನು ಗಮನಿಸಿ "ಏನು ಮಾಡುತ್ತಿದ್ದೀಯಾ" ಅಂದೆ. ಅದಕ್ಕವನು "ಸುಮ್ಮನೆ " ಅಂದ. ತಕ್ಷಣ ಅವನದೊಂದು ಫೋಟೊ ತೆಗೆದು ನೋಡಿಲ್ಲಿ "ನೀನು ಪಕ್ಷಿಗಳನ್ನು ಸಾಯಿಸುತ್ತೀಯಾ ಅಂತ ಹೇಳಿ ನಿನ್ನ ಅರಣ್ಯ ಇಲಾಖ ಪೋಲಿಸರಿಗೆ ಕೊಟ್ಟರೆ ನಿನ್ನನ್ನು ಹಿಡಿದು ಜೈಲಿಗೆ ಹಾಕುತ್ತಾರೆ ಗೊತ್ತಾ.. ನಿನ್ನಂತೆ ಅವುಗಳಿಗೂ ಸ್ವತಂತ್ರವಾಗಿ ಜೀವಿಸುವ ಆಸೆಯಿರುತ್ತೆ...ಅಲ್ವಾ..."ಅಂತ ಬುದ್ದಿ ಹೇಳಿ ಕಳಿಸಿದ್ದಾಯಿತು.


ಈ ಹಕ್ಕಿಗಳ ಛಾಯಾಗ್ರಹಣ ಇಪ್ಪತ್ತಮೂರನೇ ದಿನಕ್ಕೆ ಕೊನೆಗೊಂಡಿತ್ತು. ಅವತ್ತು ಹೇಮಾಶ್ರಿಯೂ ಬಂದಿದ್ದಳು.., ಬೈನಾಕ್ಯೂಲರನಲ್ಲಿ ಹಕ್ಕಿಗಳ ಆಟ ಪಾಠಗಳ ಚಟುವಟಿಕೆಯೆಲ್ಲಾ ನೋಡಿ ಬೆರಗಾಗಿದ್ದಳು...

ಎರಡು ತಿಂಗಳ ಹಿಂದೆ ರೋಮ್ಯಾನ್ಸ್‌ನಿಂದ ಪ್ರಾರಂಭವಾದ ಕಳ್ಳಿಪೀರ ಸಂಸಾರ ಕತೆ., ಈಗ ಮರಿಗಳು ದೊಡ್ಡವಾಗಿ ಗೂಡಿನಿಂದ ಹಾರಿಹೋಗುವಲ್ಲಿಗೆ ಮುಗಿದಿತ್ತು.

[ಈ ಮೊದಲು ಇದೇ ಜಾತಿಗೆ ಸೇರಿದ blue tailed green bee eater ಪಕ್ಷಿಯ ಸಂಪೂರ್ಣ ದಿನಚರಿಯನ್ನು "ಪಕ್ಷಿ ಲೇಕದ ಸಂದೇಶ" http://chaayakannadi.blogspot.com/2008/09/blog-post_20.html ಅನ್ನುವ ಶೀರ್ಷಿಕೆಯಲ್ಲಿ ಚಿತ್ರ-ಲೇಖನವನ್ನು ಬರೆದಿದ್ದೆ. ಅದರ ಸಂಪೂರ್ಣ ಚಿತ್ರಣವನ್ನು ಕ್ಲಿಕ್ಕಿಸಿದ್ದು ಮೈಸೂರಿನ ನಗುವನಹಳ್ಳಿ ಎಂಬ ಊರಿನಲ್ಲಿ....ಅದೇ ಜಾತಿಯ ಈ " Small green bee eater" ಹಕ್ಕಿಯ ಚಿತ್ರಗಳನ್ನು ಕ್ಲಿಕ್ಕಿಸಿದ್ದು..ಹೆಸರಘಟ್ಟದ ಸಮೀಪ..ಇವು ಗಾತ್ರದಲ್ಲಿ ಅವುಗಳಿಗಿಂತ ಸ್ವಲ್ಪ ಚಿಕ್ಕದಾಗಿದ್ದು ಬಾಲ ನೀಲಬಣ್ಣವಾಗಿರುವುದಿಲ್ಲ..]

ವಿಶೇಷ ಸೂಚನೆ:

ಬ್ಲಾಗ್ ಗೆಳೆಯರೆ....

ಕಳೆದೊಂದು ವಾರದಿಂದ ಈ ತಿಂಗಳ ಅಂತ್ಯದವರೆಗೆ ಮದುವೆಗಳನ್ನು ಮಾಡಿಸುವ ಅಲ್ಲಲ್ಲ .. ಮದುವೆ ಫೋಟೋ ತೆಗೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ...[ನಾವು ಬದುಕಬೇಕಲ್ಲಾ ಸ್ವಾಮಿ] ಈ ಕಾರಣದಿಂದಾಗಿ ಬ್ಲಾಗ್ ಲೋಕಕ್ಕೆ ಕಾಲಿಡಲು ಸಮಯವಾಗುತ್ತಿಲ್ಲ....ಮುಗಿದ ಕೂಡಲೇ ಎಲ್ಲರ ಲೇಖನಗಳನ್ನು ಚಿತ್ರಗಳನ್ನು ನೋಡುವ ಹಂಬಲವಿದೆ. ಅಲ್ಲಿಯವರೆಗೆ ಸಹಕರಿಸಿ...ಸಾಧ್ಯವಾದರೆ ಮದುವೆ ಮನೆಗಳಲ್ಲಿ ನಮ್ಮ ಫೋಟೊ ಮತ್ತು ವಿಡಿಯೋಗ್ರಫಿ ಗೆಳೆಯರ ಕಥೆ...ವ್ಯಥೆ....ಹಾಸ್ಯಗಳನ್ನು ಹೊತ್ತು ತರಲೆತ್ನಿಸುತ್ತೇನೆ.....ಧನ್ಯವಾದಗಳು..

ಚಿತ್ರ-ಲೇಖನ.
ಶಿವು.ಕೆ ARPS.

99 comments:

PaLa said...

[[ಬಾಯಲ್ಲಿರುವ ನೊಣವನ್ನು ಗಿಫ್ಟ್ ಕೊಟ್ಟು ಗೆಳತಿಯನ್ನು ಒಲಿಸಿಕೊಳ್ಳುವ ಕಲೆ!!]]

ಮನುಷ್ಯರಲ್ಲೂ ಹಿಂಗಿದ್ದಿದ್ರೆ, ಒಲಿಸಿಕೊಳ್ಳೋ ಕೆಲಸ ಎಷ್ಟು ಈಸಿ ಇರ್ತಿತ್ತು.

ಚಿತ್ರಗಳು ಬಹಳ ಚೆನ್ನಾಗಿವೆ. ಅದೂ ಎಲ್ಲವೂ ಚಲನೆಯಲ್ಲಿರುವ ಫೋಟೋಗಳು ಮತ್ತು ಅವು ಹಕ್ಕಿಯ ಕ್ಯಾರೆಕ್ಟರ್ ಬಿಂಬಿಸೋ ಚಿತ್ರಗಳು.

ಚಿತ್ರಗಳೊಂದಿಗೆ ಒದಗಿಸಿದ ಗ್ರೀನ್ ಬೀ ಈಟರ್ನ ದಾಂಪತ್ಯ ಜೀವನ, ಆಹಾರಾಭ್ಯಾಸ, ಹಾರಾಟದ ವಿವರಳೂ ಉಪಯುಕ್ತವಾಗಿದೆ. ವಂದನೆಗಳು

ಇನ್ನೊಮ್ಮೆ, ಫೋಟೋಗಳು ಮಾತ್ರ ಅತ್ಯದ್ಭುತ.

shivu.k said...

ಪಾಲಚಂದ್ರ,

ಈ ಚಿತ್ರ ಲೇಖನ ಬ್ಲಾಗಿಗೆ ಹಾಕಿದ ಇಪ್ಪತ್ತನೇ ನಿಮಷಕ್ಕೆ ನಿಮ್ಮ ಮೊದಲ ಕಾಮೆಂಟು ಬಂತಲ್ಲ...ನನಗಂತೂ ಖುಷಿಯಾಯಿತು...ನೀವು ಒಬ್ಬ ಛಾಯಾಚಿತ್ರಕಾರರಾಗಿ ನನ್ನ ಚಿತ್ರ ಲೇಖನವನ್ನು ಮೆಚ್ಚಿದ್ದೀರಿ...

ಮನುಷ್ಯರಲ್ಲೂ ಈ ರೀತಿ ಗಿಫ್ಟ್ ಕೊಟ್ಟು ಒಲಿಸಿಕೊಂಡರೂ..ಪಡೆದುಕೊಂಡ ಮೇಲೆ ಕೈ ಕೊಡೋದು ಜಾಸ್ತಿ....ಏನಂತೀರಿ...

ಚಿತ್ರ-ಲೇಖನ ಅದರಲ್ಲೂ ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಏ ಜೆ ಜಾವೀದ್ said...

Simply Superb!!!!!!!!!!! Shivu, Hats off to you

shivu.k said...

ಜಾವೀದ್,

ಥ್ಯಾಂಕ್ಯೂ ವೆರಿ ಮಚ್...

ಹೀಗೆ ಬರುತ್ತಿರಿ....

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಹಕ್ಕಿ ಜೀವನದ ವಿವರಣೆ ಮತ್ತು ಎಲ್ಲಾ ಫೋಟೋಗಳು ತುಂಬಾ ಚೆನ್ನಾಗಿವೆ...
ನಿಮ್ಮ ತಾಳ್ಮೆ ಮತ್ತು ಛಾಯಾಚಿತ್ರ ಸೆರೆ ಹಿಡಿಯುವಲ್ಲಿ ನಿಮ್ಮ ಶ್ರಧ್ಧೆಗೆ ಎಂತಹವರಾದರು ತಲೆದೂಗಲೇ ಬೇಕು.

shivu.k said...

ರಾಜೇಶ್,

ಈ ರೀತಿ ಹಕ್ಕಿ ಫೋಟೋ ತೆಗೆಯಲಿಕ್ಕೆ ಹೋದರೆ ನಮಗರಿವಿಲ್ಲದಂತೆ ತಾಳ್ಮೆ ಮತ್ತು ಶ್ರದ್ಧೆ ಬಂದು ಬಿಡುತ್ತದೆ.

ಇದು ಪ್ರಕೃತಿ ನಮಗೆ ಕಲಿಸಿಕೊಡುವ ಪಾಠ.

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Keshav.Kulkarni said...

ಶಿವು,
ನಿಮ್ಮ ಈ ಫೋಟೋಗಾಳು ಅದ್ಭುತ. ಹಿತವಾದ ಬರವಣಿಗೆ ಕೂಡ.
ಕೇಶವ

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಹಾರುತ್ತಿರುವ ಹಕ್ಕಿಗಳ ರೆಕ್ಕೆಗಳೆಣಿಸುವಂತಿದೆ. ನಿಮ್ಮ ವಿವರಣೆ ವಿಡಿಯೂ ಚಿತ್ರೀಕರಣದಂತೆ ನಡೆದ ಘಟನೆಗಳನ್ನು ಕಲ್ಪಿಸಿಕೊಡುತ್ತದೆ. ಹಕ್ಕಿಗಳ ಪ್ರೇಮಸಲ್ಲಾಪ, ಸಂಸಾರ ನಿರ್ವಹಣೆ, ಮಕ್ಕಳ ಲಾಲನೆ ಪೋಷಣೆಗಳನ್ನೆಲ್ಲಾ ಚಿತ್ರ ಮತ್ತು ವಿವರಣೆಗಳೊಂದಿಗೆ ಸೊಗಸಾಗಿ ಮೂಡಿಸಿದ್ದೀರಿ.
ಈ ಹಕ್ಕಿ ಚಿತ್ರ ತೆಗೆಯುವಾಗ ನನ್ನನ್ನು ದಿನಾ ಕರೆಯುತ್ತಿದ್ರಿ. ನಾನು ೨೦ನೇ ದಿನ ಇರ್ಬೇಕು ಹೆಸರುಘಟ್ಟಕ್ಕೆ ಬಂದೆ. ನಮ್ಮಿಬ್ಬರ ಕ್ಯಾಮೆರಾ ಜೋಡಿಸಿದೆವು. ನಾನು ಹೋಟೆಲ್ ನಿಂದ ಊಟ ತಂದೆ. ಅಲ್ಲೇ ಜಮಖಾನ ಹಾಸಿ ಪಿಕ್ ನಿಕ್ ತರ ಊಟ ಮಾಡುತ್ತಲೇ ಕೇಬಲ್ ಬಳಸಿ ಹಕ್ಕಿ ಬಂದಾಗ ಕ್ಲಿಕ್ ಮಾಡಿದೆವು. ಆಗೆಲ್ಲಾ ರೋಲ್ ಗಳನ್ನು ಬಳಸುತ್ತಿದ್ದುದು. ಎಷ್ಟೆಲ್ಲಾ ಕಷ್ಟಪಟ್ಟಿದ್ರಿ ನೀವು. ಅದಕ್ಕೇ ಈ result.

shivu.k said...

ಕುಲಕರ್ಣಿ ಸರ್,

ಬರವಣಿಗೆ ಮತ್ತು ಹಕ್ಕಿ ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..

shivu.k said...

ಮಲ್ಲಿಕಾರ್ಜುನ್,

ಈ ಹಕ್ಕಿಗಳ ಒಡನಾಟ ಯಾವರೀತಿ ಆವರಿಸಿತ್ತೆಂದರೆ, ನಾನು ನನ್ನ ಸಂಸಾರವನ್ನೇ ಮರೆಯುವಷ್ಟು...ಅದಕ್ಕೆ ಅದೇನು ಫೋಟೋ ತೆಗೆಯುತ್ತೀರೋ ನಾನು ನೋಡೇಬಿಡುತ್ತೇನೆ ಅಂತ ಕೊನೇ ದಿನ ಹೇಮಾಶ್ರೀಯೂ ಬಂದಿದ್ದಳು.

ನೀವು ಇಪ್ಪತ್ತನೇ ದಿನ ನನ್ನ ಫೋಟೊ ತೆಗೆಯಲು ಬಂದಾಗ ಆದ ಅನುಭವವನ್ನು ಬರೆದರೆ ಅದೇ ಒಂದು ಲೇಖನವಾಗುತ್ತದೆ...

ನೀವೇಳಿದಂತೆ ರೋಲ್ ಕ್ಯಾಮೆರಾ ಬಳಸುತ್ತಿದ್ದುದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ಕ್ಲಿಕ್ಕಿಸಿದ್ದನ್ನು ಸಂಜೇ ಲ್ಯಾಬ್‌ನಲ್ಲಿ ಡೆವೆಲಪ್ ಮಾಡಿಸಿ ನೋಡಿ ಚೆನ್ನಾಗಿಲ್ಲದನ್ನು ಬಿಸಾಡಿ ಆಗಿರುವ ತಪ್ಪನ್ನು ಮರುದಿನ ತಿದ್ದಿಕೊಳ್ಳುವ ಪ್ರಕ್ರಿಯೆ ಇತ್ತಲ್ಲ...ಅದೆಲ್ಲಾ ಬರೆದರೆ ಮತ್ತೊಂದು ಲೇಖನವಾಗುವುದು ಖಂಡಿತ...

ಧನ್ಯವಾದಗಳು...

Unknown said...

ಅದ್ಭುತ ಶಿವು! ಹಕ್ಕಿಗಳ ರೆಕ್ಕೆಯ ಗೆರೆಗಳನ್ನು ಏಣಿಸುವಷ್ಟು ಸ್ಪಷ್ಟವಾಗಿ ಫೊಟೋಗಳು ಬಂದಿರುವುದು ಅದ್ಭತ! ಜೊತೆಗೆ ನಿಮಗಿರುವ ತಾಳ್ಮೆ, ಅದೂ ಒಂದು ಅದ್ಭುತವೇ! ಫೋಟೋಗಳಂತು ಮತ್ತೆ ಮತ್ತೆ ನೋಡುವಂತೆ ಮೋಹಿಸಿಬಿಟ್ಟಿವೆ. ನಾನು ನನ್ನ ಸ್ನೇಹಿತರಿಗೆಲ್ಲಾ ಇದನ್ನು ಫಾರ್ವರ್ಡ್ ಮಾಡುತ್ತಿದ್ದೇನೆ.
ಅಂದ ಹಾಗೆ ನಿಮ್ಮ ಮಾತು 'ಪಕ್ಕಾ ವಿದೇಶಿ ಆಹಾರಪದ್ದತಿಯನ್ನು[ನಾನ್‌ವೆಜ್]ಮೈಗೂಡಿಸಿಕೊಂಡಿವೆಯಲ್ಲ...' ಏಕೋ ಇಷ್ಟವಾಗಲಿಲ್ಲಾರಿ. ಏಕೆಂದರೆ, ನಾನೂ ನಾನ್ ವೆಜ್ ಪ್ರಿಯ. ನೀವೂ ನನ್ನನ್ನೂ ವಿದೇಶಿ ಆಹಾರಪದ್ಧತಿಯವ ಎಂದುಕೊಂಡುಬಿಟ್ಟರೆ, ಎಂಬ ಭಯ ಅಷ್ಟೆ!

shivu.k said...

ಡಾ.ಸತ್ಯನಾರಾಯಣ ಸರ್,

ಈ ರೀತಿಯ ಫೋಟೋಗಳೇ ಬೇಕು[ರೆಕ್ಕೆಗಳ ಗರಿಗಳನ್ನು ಎಣಿಸುವಷ್ಟು] ಎಂದುಕೊಂಡ ಮೇಲೆ ಅದಕ್ಕಾಗಿ ತಾಂತ್ರಿಕವಾಗಿ...ಮತ್ತು ಚೌಕಟ್ಟು[ಕಂಪೌಸ್]ವಿಚಾರವಾಗಿ ಪ್ರತಿದಿನ ಟ್ರೈಯಲ್ ಮತ್ತು ಎರರ್ ಅಧಾರದ ಮೇಲೆ ಹತ್ತನೇ ದಿನ ನನಗೆ ಈ ಯಶಸ್ಸು ಸಿಕ್ಕಿತು...ಅದು ತಡವಾಗಿದ್ದಕ್ಕೆ ಕಾರಣ...ಆಗ ನನ್ನ ಬಳಿ ಡಿಜಿಟಲ್ ಕ್ಯಾಮೆರಾ ಇಲ್ಲದಿದ್ದುದ್ದು...ತೆಗೆದ ಪಲಿತಾಂಶ ತಿಳಿಯುತ್ತಿದ್ದುದ್ದು ಮರುದಿನ ಲ್ಯಾಬಿನಿಂದ ಹೊರಬಂದಾಗ ಮಾತ್ರ....
ನೀವು ಈ ಚಿತ್ರಲೇಖನವನ್ನು ನಿಮ್ಮ ಗೆಳೆಯರಿಗೂ forward ಮಾಡಿರುವುದು ನನ್ನ ಶ್ರಮಕ್ಕೆ ಸಂದ ಫಲ..

ಮತ್ತೆ ಆಹಾರದ ವಿಚಾರದಲ್ಲಿ ನಾನು ಕ್ಲಿಕ್ಕಿಸಿದ ಅಷ್ಟು ದಿನಗಳಲ್ಲಿ ಒಂದು ದಿನವೂ ಹಣ್ಣು, ಬೀಜ ಇತ್ಯಾದಿಗಳನ್ನು ತರಲಿಲ್ಲವಾದ್ದರಿಂದ ನಾನು ಈ ತೀರ್ಮಾನಕ್ಕೆ ಬಂದೆ ಅದಕ್ಕೆ ನನ್ನಲ್ಲಿರುವ ಫೋಟೋಗಳೇ ಸಾಕ್ಷಿ...ವಿದೇಶಿಯರು ಹಾಗೆ ಅಲ್ಲವೇ...ಅವರು ಪ್ರತಿನಿತ್ಯವೂ ನಾನ್‌ವೆಜ್ ಬೇಕಲ್ಲವೇ...

ಅದ್ರೆ ನೀವು ಭಾರತೀಯರು...ಪ್ರತಿನಿತ್ಯ ನಾನ್‌ವೆಜ್ ತಿನ್ನುವುದಿಲ್ಲವೆಂದು ನನ್ನ ನಂಬಿಕೆ.. ಅದ್ದರಿಂದ ನಿಮ್ಮನ್ನು ವಿದೇಶಿ ಅಂತ ಹೇಳಲಾರೆ...

ಚಿತ್ರ-ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..

ಗಿರಿ said...

ನಮಸ್ಕಾರ ಶಿವಣ್ಣಾ,

ನಿಮ್ಮದು ಅಪರೂಪದ ವ್ಯಕ್ತಿತ್ವ... ಅದೇನು ಒಲವು ಪ್ರಕೃತಿಯೆಡೆಗೆ... ? ನಿಸರ್ಗದೊಳಗೊಂದಾಗಿ ಬಿಡ್ತೀರಲ್ಲಾ...
ಪ್ರಕೃತಿಯಾಟಕ್ಕೇ ಕಣ್ಣಾಗಿ ಬಿಡ್ತೀರಲ್ಲಾ ಶಿವಣ್ಣಾ...

ಹಕ್ಕಿಗಳ ಒಡನಾಟ ಒಂದುವರೆ ತಿಂಗಳ ಕಾಲ ನಿಮ್ಮನ್ನು ಸೆಳೆಯಿತು ಅಂದ್ರ... ಅದರ ರಮ್ಯತೆ ಏನಿರಬಹುದು...? ವಾವ್......
ಬರಹ ಛಾಯಾಚಿತ್ರಗಳ ಶೀರ್ಶಿಕೆಗಳು ತುಂಬಾ ಚೆನ್ನಾಗಿ ಹೊಂದಿಕ್ಕೊಳ್ಳುತ್ತಿದ್ದವು....ಆಪ್ಯಾಯಮಾನವೆನಿಸಿದವು...
ವಿವರಣೆಗಳನ್ನು ಚೆನ್ನಗಿ ನೀಡಿ, ಸ್ವಾರಸ್ಯಕರವಾಗಿದ್ದುದರಿಂದ ಮನಸ್ಸು ಖುಶಿಯಾಯ್ತು...
ಬೇಸಿಗೆಯ ಈ ಸೆಕೆಯಲ್ಲಿ, ನಿಸರ್ಗದ ಮೃಷ್ಟನ್ನ ಭೋಜನ ನೀಡಿದ್ದಕ್ಕೆ ಧನ್ಯವಾದಗಳು...

-ಗಿರಿ

PARAANJAPE K.N. said...

ಶಿವೂ
ಎ೦ದಿನ೦ತೆ ನಿಮ್ಮ ಚಿತ್ರ-ಲೇಖನಕ್ಕೆ distinction marks. ಇ೦ತಹ ಅಪರೂಪದ ಫೋಟೋ ತೆಗೆಯುವಲ್ಲಿ ನಿಮಗಿರುವ ತಾಳ್ಮೆ,,ಶ್ರದ್ಧೆ ಮೆಚ್ಚುವ೦ಥಾದ್ದು

shivu.k said...

ಪರಂಜಪೆ ಸರ್,

ಗ್ರೀನ್ ಬೀ ಈಟರ್ ಪಕ್ಷಿಗಳ ಚಿತ್ರಲೇಖನವನ್ನು ನೀವು ಮೆಚ್ಚಿ ಪ್ರೋತ್ಸಾಹಿಸುತ್ತಿರುವುದು....ನನಗೆ ಸ್ಫೂರ್ತಿ ನೀಡಿದಂತೆ...
ಮತ್ತಷ್ಟು ಹಕ್ಕಿಗಳ ಛಾಯಾಗ್ರಹಣ, ಚಿತ್ರಗಳು, ಅನುಭವ, ಅನನಭವ, ಇತ್ಯಾದಿಗಳನ್ನೆಲ್ಲಾ ಮುಂದೆಂದಾದರೂ ಹಂಚಿಕೊಳ್ಳುವ ಮನಸ್ಸಾಗುತ್ತಿದ್ದೆ...

ಧನ್ಯವಾದಗಳು...

shivu.k said...
This comment has been removed by the author.
shivu.k said...

ಗಿರಿ,

ಅದೇನೋ ಗೊತ್ತಿಲ್ಲ...ಪ್ರಕೃತಿಯೆಂದರೆ ಮೈಮರೆಯುತ್ತೇನೆ... ಈ ಪಕ್ಷಿಗಳ ಜೊತೆ
ಬೆಳಿಗ್ಗೆ ಮೂರುಗಂಟೆ ಮತ್ತು ಸಂಜೆ ಮೂರುಗಂಟೆಯಂತೆ ಸುಮಾರು ಒಂದುವರೆ ತಿಂಗಳು ಜೊತೆಗಿದ್ದುದ್ದು ನಾನೇನಾ ಅಂತ ಈಗಲೂ ಸಂಶಯ ಬರುತ್ತದೆ..

ಅದೆಷ್ಟು ಪಳಗಿಬಿಟ್ಟಿದ್ದೆನೆಂದರೆ...ಮಲ್ಲಿಕಾರ್ಜುನ್ ಬಂದಾಗ...ಕೇವಲ ದೂರದಲ್ಲೇಲ್ಲೋ ಅದರ ಸಣ್ಣ ಸಿಳ್ಳೇ ಕೇಳಿದರೆ ಸಾಕು ಅದು ಬಾಯಲ್ಲಿ ಆಹಾರ ತಂದಿದೆ ಮರಿಗಳಿಗೆ ಸೂಚನೆ ಕೊಡುತ್ತಿದೆ....ಈಗ ನೀವು ಫೋಟೊ ತೆಗೆಯಲು ಸಿದ್ಧರಾಗಿ ಅಂತ ನಿಖರವಾಗಿ ಹೇಳುತ್ತಿದ್ದೆ...

ಪ್ರಾರಂಭದಲ್ಲಿ ಅವು ನಮ್ಮ ದಿಕ್ಕುತಪ್ಪಿಸಿ ಗೂಡಿಗೆ ಹೋಗುವುದು...ನಾನು ಅವುಗಳಿಗೆ ಏಮಾರಿಸಿ ಅವುಗಳ ಫೋಟೊ ತೆಗೆದಿರುವುದು ಅದಕ್ಕಾಗಿ ಮಾಡುವ ಉಪಾಯಗಳು..ಮತ್ತು ಅದರಿಂದಾದ ಅಪಾಯಗಳು...ಎಲ್ಲಾ ಬರೆದರೆ ಮತ್ತೊಂದು ಲೇಖನವಾಗುವುದು ಖಂಡಿತ...
ಮುಂದೆಂದಾದರೂ ಪ್ರಯತ್ನಿಸುತ್ತೇನೆ...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ...

ಧನ್ಯವಾದಗಳು...

ಗಿರಿ said...

ಶಿವಣ್ಣಾ, ನೆನಪಾಗುತ್ತಿದೆಯೊಂದು ಗೀತೆ...

ಯಾವ ಮೋಹನ ಮುರಳಿ ಕರೆಯಿತೊ.. ದೂರ ತೀರಕೆ ನಿನ್ನನು.....

ಮನಸು said...

ಅದ್ಬುತ ಚಿತ್ರಗಳು ಅದಕ್ಕೆ ತಕ್ಕ ಬರಹ ನಿಮ್ಮ ಸಾಹಸಕ್ಕೆ ಮತ್ತೊಂದು ಮಾತಿಲ್ಲ ಇಸ್ಟೆಲ್ಲಾ ಬರೆಯಲು ಫೋಟೋ ತೆಗೆಯಲು ಸಮಯ ಹೇಗೆ ರೂಡಿಸಿಕೊಂಡಿದ್ದೀರಿ ಎಂಬುದೇ ಆಶ್ಚರ್ಯ ಜೊತೆ ಖುಷಿ ಕೂಡ ಹೀಗೆ ಮುಂದುವರಿಯಲಿ.
ನಿಮ್ಮ ಸಾಹಸ ಕೆಲಸಕ್ಕೆ ಜೊತೆಗೊಡಿರುವ ನಿಮ್ಮಾಕೆಗೂ ನಾವು ವಂದನೆಗಳನ್ನ ಹೇಳಲೇಬೇಕು...

ಧನ್ಯವಾದಗಳು

ಧರಿತ್ರಿ said...

ಶಿವಣ್ಣ...
ಛಾಯಾಕನ್ನಡಿ ನೋಡಿದಾಗಲೆಲ್ಲಾ.."ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ..ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ" ಅ.ನ.ಕೃ. ಹೇಳಿರುವ ಮಾತು ನೆನಪಾಗುತ್ತದೆ.

ನಿಮ್ಮ ಫೋಟೋಗಳಿಗೆ ಅವುಗಳೇ ಸಾಟಿ..ಅದರ ಬಗ್ಗೆ ಹೇಳೋ ಮಾತುಗಳು ಉಳಿದಿಲ್ಲ. ಫೋಟೋಗಳು ಕಣ್ತುಂಬಿ ಮನಸ್ಸಲ್ಲೇ ಉಳಿದುಬಿಡುವಷ್ಟು ಸುಂದರವಾಗಿವೆ. ಅಲ್ಲಿ ನಿಮ್ಮ ಸೂಕ್ಷ್ಮ ಕಣ್ಣುಗಳು, ಪ್ರತಿಭೆ ಎದ್ದು ಕಾಣುತ್ತೆ. ಶುಭವಾಗಲೀ ಶಿವಣ್ಣ..ಅಭಿನಂದನೆಗಳು.

-ಪ್ರೀತಿಯಿಂದ
ಧರಿತ್ರಿ

Umesh Balikai said...

ಶಿವು ಸರ್,

ನೀವೊಂದು ಅದ್ಭುತ ಪ್ರತಿಭೆ!
ನಿಮಗಿರುವ ತಾಳ್ಮೆ, ಪಕ್ಷಿ ಸಂಕುಲದ ಬಗೆಗಿನ ಜ್ಞಾನ, ಛಾಯಾ ಚಿತ್ರ ಕೌಶಲ್ಯ ತಲೆದೂಗುವಂತದ್ದು. ಒಂದು ಐದು ನಿಮಿಷ ಒಂದು ಕೆಲಸದ ಮೇಲೆ ಗಮನವಿರಿಸೋಕೆ ಆಗಲ್ಲ ನನಗೆ, ಬೇರೆ ಯಾವುದೋ ಕೆಲಸದ ನೆನಪಾಗುತ್ತೆ. ಇನ್ನೂ ನೀವು ಇಪ್ಪತ್ತು ಇಪ್ಪತ್ತೈದು ದಿನಗಳವರೆಗೆ, ರೋಲ್ ಕ್ಯಾಮರ ಇಟ್ಟುಕೊಂಡು, ಒಂದು ಪಕ್ಷಿ ದಂಪತಿಗಳ ಬೆನ್ನು ಹತ್ತಿ ಗಮನವಿಟ್ಟು ಅವುಗಳ ದಿನಚರಿಯಫೋಟೋ ತೆಗೆಯುತ್ತೀರಲ್ಲ, ಮೆಚ್ಚಬೇಕಾದ್ದೇ.

ಹ್ಯಾಟ್ಸ್ ಆಫ್ ಶಿವು ಸರ್!

-ಉಮೀ

Guruprasad said...

ಶಿವೂ,,,
ಗ್ರೇಟ್ ......ನಿಮ್ಮ ತಾಳ್ಮೆಗೆ, ಅದ್ಬುತ ಕಲೆಗೆ,, ಫೋಟೋಗ್ರಫಿ ಗೆ ಎಷ್ಟು ಅಬಿನಂದನೆ ಸಲ್ಲಿಸಿದರು ಸಾಲದು.... ತುಂಬ ಕುಶಿ ಆಯಿತು ಹಕ್ಕಿಗಳ romance ನೋಡಿ.... (ನೀವ್ ಮೇಲ್ ಕಳಿಸಿದನ್ನ ನೋಡಿ, ಹಾಗು ನಿಮ್ಮ ಹಿಂದಿನ ಲೇಖನದ ಬಗ್ಗೆ ಎಲ್ಲರೂ ರಸಿಕರಾಜ ಅಂತ ಹೊಗಳಿದ್ದು ನೋಡಿ....ಏನೋ ನೋಡಬಾರದನ್ನೇ ನೋಡಿ ನಮಗೂ ತೋರಿಸುವ ಹಾಗಿದೆ ಅಂತ ಅನ್ಕೊಂಡೆ :-)) ಹಾ ಹಾ..
ರೆಕ್ಕೆ ಬಿಚ್ಚಿ ಹಾರುತಿರುವ ಫೋಟೋ ಮಾತ್ರ ತುಂಬ ಚೆನ್ನಾಗಿ ಇದೆ..... ಹೀಗೆ ಮುಂದುವರಿಯಲಿ.....

ಗುರು

shivu.k said...

ಉಮೀ ಸರ್,

ನನ್ನ ಗುಣ ನಡತೆಯ ಬಗ್ಗೆ ಹೆಚ್ಚು ಹೊಗಳುತ್ತಿದ್ದೀರಿ...ನನ್ನ ಗುಣವೆಂಥದ್ದು ಅಂತ ಹಿಂದಿನ "ಹಿಂಬದಿ ಕಣ್ಣಿನ" ಲೇಖನದಲ್ಲಿ ಎಲ್ಲರಿಗೂ ಗೊತ್ತಾಗಿದೆ.

ಇನ್ನೂ ರೋಲ್ ಕ್ಯಾಮೆರಾದ ವಿಚಾರ ಬಂದಾಗ ಈ ಹಕ್ಕಿಗಳ ಫೋಟೊ ತೆಗೆಯಲು ತುಂಬಾ ಸರ್ಕಸ್ ಮಾಡಿದ್ದೇನೆ...

ಅದಕ್ಕೆ ಪ್ರತಿಫಲವಾಗಿ ಈ ಹಕ್ಕಿಗಳ ಚಿತ್ರಗಳು [ಬ್ಲಾಗಿನಲ್ಲಿರುವಂಥ ಎಲ್ಲಾ ಚಿತ್ರಗಳು]ನನಗೆ ಹತ್ತಾರು ಬಹುಮಾನ, ಮೆಡಲುಗಳನ್ನು ಗಳಿಸಿಕೊಟ್ಟಿವೆ..

ಧನ್ಯವಾದಗಳು...

shivu.k said...

ಗುರು,

ನೀವು ಕೂಡ ನನ್ನನ್ನು ತುಂಬಾ ಹೊಗಳುತ್ತಿದ್ದೀರಿ...

ತಾಳ್ಮೆ, ಶ್ರದ್ಧೆ, ನನಗೆ ಪ್ರಕೃತಿ ಕಲಿಸಿಕೊಟ್ಟ ಪಾಠ.

ಈ ಪಕ್ಷಿಗಳ ವೀಕ್ಷಣೆಯೂ ಒಂದು ಸುಂದರ ಹವ್ಯಾಸ...ಒಂದು ಒಳ್ಳೇ ಬೈನಾಕ್ಯೂಲರ್ ಇಟ್ಟುಕೊಂಡಿದ್ದರೆ..ಬೆಂಗಳೂರು ಬಿಟ್ಟು ಹೊರಗೆ ಯಾವುದಾದರೂ ಕೆರೆ ಕಟ್ಟೆಗಳ ಬಳಿ ಟೆಂಟ್ ಹಾಕಿ ಬುತ್ತಿ ಕಟ್ಟಿಕೊಂಡು ಕುಳಿತುಬಿಟ್ಟರೆ ನಿಜಕ್ಕೂ ಅದು ಸ್ವರ್ಗ ಸುಖ..
ನಾನು ಅಬ್ಯಾಸ ಬೆಳೆಸಿಕೊಂಡಿದ್ದು...ಹೀಗೆ...
ಅದು ಕೊನೆಗೆ ಬೇರೆಲ್ಲಾ ಚಟುವಟಿಕೆಗೂ ದಾರಿದೀಪವಾಗುತ್ತದೆ...ಈ ರೀತಿ ಬರೆಯಲಿಕ್ಕೂ ಕಾರಣವಾಗುತ್ತದೆ....

ಚಿತ್ರ=ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu.k said...

ಗಿರಿ,

ನಿಮ್ಮ ಈ ಹಾಡು ನನಗೆ ತುಂಬಾ ಮೆಚ್ಚಿಗೆಯಾದುದು...

ನನಗೆ ಈ ಬ್ಲಾಗ್...ಮದುವೆ ಫೋಟೋಗ್ರಫಿ...ದಿನಪತ್ರಿಕೆ ವಿತರಣೆಯೆಲ್ಲಾ ಕೆಲವೊಮ್ಮೆ ಬೇಸರ ತರಿಸುತ್ತದೆ...

ನಾನು ಸಮಯ ಕಾಯುತ್ತಿದ್ದೇನೆ...ಮಲ್ಲಿಕಾರ್ಜುನ್ ಕೂಡ ನನ್ನ ಮೇಲೆ ಒತ್ತಡ ಹಾಕಿ ಕಾಯುತ್ತಿದ್ದಾರೆ....ಯಾವಾಗ ಈ ಎಲ್ಲಾ ಅಂಗಡಿ[ತಾತ್ಕಾಲಿಕವಾಗಿ]ಮುಚ್ಚಿ ಪ್ರಕೃತಿಯಲ್ಲಿ ಹೀಗೆ ಕಳೆದುಹೋಗುತ್ತೇವೋ...ಸಿದ್ದತೆಯಂತೂ ನಡೆಯುತ್ತಿದೆ...
ಮತ್ತೆ ಬಂದಿದ್ದಕ್ಕೆ ಧನ್ಯವಾದಗಳು..

mukhaputa said...

nimma photos nodi naanatu fida aagibittiddene innu adakke takantha barvanige nijakkoo great

shivu.k said...

ಮನಸ್ಸು ಮೇಡಮ್,

ಆಗ ನನ್ನ ಉಳಿದ ಸಮಯಗಳಲ್ಲಿ ಚಿಟ್ಟೆ..ಹಕ್ಕಿಗಳು...ಎಲ್ಲದಕ್ಕೂ ಸಮಯ ಹೊಂದಿಸಿಕೊಳ್ಳುತ್ತಿದ್ದೆ...

ಈಗ ಈ ಇಂಟರ್‌ನೆಟ್ ಮತ್ತು ಬ್ಲಾಗ್ ಅಂತೆಲ್ಲಾ ಬಂದು ಅವುಗಳಿಗೆಲ್ಲಾ ಹೆಚ್ಚಾಗಿ ಹೋಗಲಾಗುತ್ತಿಲ್ಲ...ಆದರೂ ಒಂದು ಸಣ್ಣ ಸಿದ್ಧತೆ ನಡೆಯುತ್ತಿದೆ...

ನನ್ನಾಕೆ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಇರದಿದ್ದುದರಿಂದ ಅದೇನು ಸಾಧನೆಯೋ ನಿಮ್ಮದು ನೋಡೇ ಬಿಡುತ್ತೇನೆ ಅಂತ ಬಂದಿದ್ದು...ಅವಳಿಗೆ ಅಲ್ಲಿ ಪಕ್ಷಿಗಳ ಜೊತೆ ಪಿಕ್‌ನಿಕ್ ರೀತಿಯ ಅನುಭವವಾಯಿತಂತೆ...

ಹೀಗೆ ಬರುತ್ತಿರಿ...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಕ್ಷಣ... ಚಿಂತನೆ... said...

ಶಿವು ಸರ್‍,

ಲೇಖನ ಚೆನ್ನಾಗಿದೆ. ಹಕ್ಕಿಗಳ ಛಾಯಾಗ್ರಹಣಕ್ಕೆ ತಾಳ್ಮೆ, ಸಂಯಮ, ಸಮಯ ಇವೆಲ್ಲ ಹೆಚ್ಚು ಬೇಕಾಗುತ್ತದೆ. ಅಂತಹ ಒಂದು ಸೂಕ್ಷ್ಮ ವಿಷಯಗಳನ್ನು ಲೇಖನದಲ್ಲಿ ವಿವಿರಿಸಿದ್ದೀರಿ. ನಿಜಕ್ಕೂ ಪಕ್ಷಿಲೋಕ ಒಂದು ಅದ್ಭುತ ಪ್ರಪಂಚ. ಒಟ್ಟಾರೆ ರಮ್ಯವಾದ ಚಿತ್ರ-ಲೇಖನವನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.

shivu.k said...

ಧರಿತ್ರಿ,

"ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ..ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ" ಅ.ನ.ಕೃ. ಹೇಳಿರುವ ಮಾತು ನೆನಪಾಗುತ್ತದೆ.

ಈ ಮಾತು ನನಗೆ ಬಲು ಅಚ್ಚುಮೆಚ್ಚು...

ನಾನಂದು ಕ್ಲಿಕ್ಕಿಸಿದ ನೂರಾರು ಕ್ಲಿಕ್‌ಗಳಲ್ಲಿ ಕೆಲವು ಇವು ಸ್ಥಗಿತ ತುಣುಕುಗಳು ಮಾತ್ರ...
ಬೈನಾಕ್ಯೂಲರ್‌ನಲ್ಲಿ ನೋಡುತ್ತಿದ್ದರೇ... ಹುಳುಗಳನ್ನು ಕೊಕ್ಕಿನಲ್ಲೇ ತಿರುಗಿಸಿಕೊಳ್ಳುವ ಪರಿ, ಬಾಲಿನಂತೆ ಕೊಂಚ ಮೇಲೆಸೆದು ಹಿಡಿದುಕೊಳ್ಳುವ ನಿಖರತೆ...ಒಂದು ಕ್ಷಣವೂ ಸುಮ್ಮನೇ ಕೂರದೇ...ಕತ್ತು..ಕಣ್ಣು..ಕೊಕ್ಕು..ಬಾಲದ ಚಟುವಟಿಕೆ...ಹೀಗೆ ಒಂದೇ ಎರಡೇ....ನೋಡುತ್ತಿದ್ದರೆ...ಅದೊಂದು ಹೊಸಲೋಕವೇ ಅನ್ನಿಸುತ್ತೆ....

ನೀವೆಲ್ಲಾ ನನ್ನ ಮೆಚ್ಚುವುದಕ್ಕಿಂತ ಅವುಗಳ ಇಂಥ ಚಟುವಟಿಕೆಗಳನ್ನು ನೋಡಬೇಕು ಮೆಚ್ಚಬೇಕು..ಎನ್ನುವುದು ನನ್ನ ಬಯಕೆ...

ಧನ್ಯವಾದಗಳು...

shivu.k said...

ಅಜಿತ್...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಹೀಗೆ ಬರುತ್ತಿರಿ..

ಧನ್ಯವಾದಗಳು...

shivu.k said...

ಕ್ಷಣ ಚಿಂತನೆ ಸರ್,

ತಾಳ್ಮೆ, ಶ್ರದ್ಧೆಯಿಂದ ಅಬ್ಯಾಸಿಸಿದರೆ ಪಕ್ಷಿಲೋಕ ನಿಜಕ್ಕೂ ಅದ್ಬುತ..ಅನನ್ಯ....

ನಾನು ಕ್ಲಿಕ್ಕಿಸುವಾಗಿನ ಸಂತೋಷವನ್ನು ನಿಮ್ಮೊಂದಿಗೂ ಹಂಚಿಕೊಳ್ಳುವ ಬಯಕೆಯೇ ಈ ಚಿತ್ರ-ಲೇಖನ...

ಧನ್ಯವಾದಗಳು...

ವಿ.ರಾ.ಹೆ. said...

ಚಿತ್ರಗಳು ಬಹಳಾ ಇಷ್ಟವಾಯಿತು..

ಇಂತ ಚಿತ್ರಗಳನು ತೆಗೆಯುವ ನಿಮ್ಮ ತಾಳ್ಮೆ ಅದ್ಭುತ!

ಶಿವಪ್ರಕಾಶ್ said...

Dear Shivu,
photos are really superb..
nice article too...

thank you...

ವಿನುತ said...

ಇ೦ತಹ ಅದ್ಭುತ ಕಲಾಕೃತಿಗಳು ಸ೦ಪೂರ್ಣ ಶ್ರದ್ಧೆ, ಪರಿಶ್ರಮ ಹಾಗು ಆಸಕ್ತಿಯಿ೦ದ ಮಾತ್ರ ಸಾಧ್ಯ. ಆ ನಿಮ್ಮ ಚೈತನ್ಯಕ್ಕೆ ಹ್ಯಾಟ್ಸ್ ಆಫ. ಹಕ್ಕಿಗಳ ಚಿತ್ರ ಮತ್ತವುಗಳ ಜೀವನಶೈಲಿಯನ್ನು ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.

Laxman (ಲಕ್ಷ್ಮಣ ಬಿರಾದಾರ) said...

ಪ್ರೀತಿಯ ಶಿವು,
ನಿಮ್ಮ ಚಿತ್ರಲೇಖನ ತುಂಬಾ ಚೆನ್ನಾಗಿ ಬಂದಿದೆ.
ನಮಗೆ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು.

“ಪರಿಶ್ರಮಕ್ಕೆ ಫಲ ಇದ್ದೆ ಇರುತ್ತದೆ.
ನೋಡಿದ ತಕ್ಷಣ ನಮಗೂ ಸಚಿನ ಥರ ಕ್ರಿಕೆಟ
ಆಡಬೇಕೆನಿಸುತ್ತದೆ. ಆದ್ರೆ ಅವನು ಆ ಮಟ್ಟಕ್ಕೆ
ತಲುಪಲು ಪಟ್ಟ ಶ್ರಮ ಕಣ್ಣಿಗೆ ಕಾಣುವದಿಲ್ಲ.”

ನಿಮ್ಮ ಪರಿಶ್ರಮ ನಮಗೆ ಆರ್ಥವಾಗುತ್ತೆ ಸರ್.

ಪ್ರೀತಿಯಿಂದ
ಲಕ್ಷ್ಮಣ

ಕುಕೂಊ.. said...

ಶಿವು ಚಂದದ ತಿಟ್ಟಗಳು(ಚಿತ್ರ)...ನೀವು ಬಳಸುವ ತಿಟ್ಟಿಗ (ಕ್ಯಾಮರ)ಯಾವುದು?

ಸ್ವಾಮಿ
ಪುನೆ

ಸಾಗರದಾಚೆಯ ಇಂಚರ said...

ಶಿವೂ,
ತುಂಬಾ ಚಂದದ ಫೋಟೋಗಳು, ನಿಮ್ಮ ತಾಳ್ಮೆಗೆ ಹಾಟ್ಸ್ ಆಪ್ . ಒಳ್ಳೆಯ ಬರಹ ಕೂಡಾ

Anonymous said...

ಫೋಟೋ ತೆಗೆಯುವಲ್ಲಿ ನಿಮಗಿರುವ ತಾಳ್ಮೆ,,ಶ್ರದ್ಧೆ ಮೆಚ್ಚುವ೦ಥಾದ್ದು... Wonderful Shivu

shivu.k said...

ವಿಕಾಶ್ ಹೆಗಡೆ,

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಶಿವಪ್ರಕಾಶ್,

ಚಿತ್ರ ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ವಿನುತಾ ಮೇಡಮ್,

ಈ ಚಿತ್ರಗಳು ನಿಮಗೆ ಇಷ್ಟೊಂದು ಮೆಚ್ಚಿಗೆಯಾಗುತ್ತವೆ ಅಂದುಕೊಂಡಿರಲಿಲ್ಲ...ಅಂದು ನಾನು ಪಟ್ಟ ಶ್ರಮ ಇವತ್ತು ಸಾರ್ಥಕವೆನಿಸುತ್ತದೆ....

ಫೋಟೊ ತೆಗೆಯುವ ನೆಪದಲ್ಲಿ ಹಕ್ಕಿಗಳ ಜೀವನಕ್ರಮ ಶೈಲಿಗಳೆಲ್ಲಾ ತಿಳಿಯಲು ಸಾಧ್ಯವಾಯಿತು...

ಧನ್ಯವಾದಗಳು...

shivu.k said...

ಲಕ್ಷಣ ಸರ್,

ನೀವು ನನ್ನ ಬ್ಲಾಗಿನಲ್ಲಿರುವ ಹಕ್ಕಿಚಿತ್ರಗಳನ್ನು ಮೆಚ್ಚಿದ್ದೀರಿ....

ಮತ್ತೆ ನಿಮ್ಮ ಬ್ಲಾಗಿನ ಚದುರಂಗದಾಟದ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ...ನನಗೆ ಇಷ್ಟವಾಯಿತು....

ಹೀಗೆ ಬರುತ್ತಿರಿ...

ಧನ್ಯವಾದಗಳು...

shivu.k said...

ಕುಕುಹೂ...ಸರ್,

ನನ್ನ ಬ್ಲಾಗಿಗೆ ಸ್ವಾಗತ....

ಫೋಟೋಗಳನ್ನು ತಿಟ್ಟಗಳು ಅಂತಲು ಮತ್ತು ಕ್ಯಾಮೆರವನ್ನು ತಿಟ್ಟಗ ಅಂತ ಹೊಸ ಹೆಸರಿನಿಂದ ಕರೆಯುತ್ತಿದ್ದೀರಿ...ನನಗದು ತಿಳಿದಿರಲಿಲ್ಲವಾಗಿತ್ತು...

ನನ್ನ " ತಿಟ್ಟಗ" ದ ಹೆಸರು canon 30D ಮತ್ತು ಈ ಹಕ್ಕಿ ಚಿತ್ರಗಳಿಗಾಗಿ..೧೦೦-೪೦೦ IS Lens Canon ಕಂಪನಿಯದನ್ನು ಉಪಯೋಗಿಸುತ್ತಿದ್ದೇನೆ...

ಧನ್ಯವಾದಗಳು...

shivu.k said...

ಗುರುಮೂರ್ತಿ ಹೆಗಡೆ ಸರ್,

ನೀವು ಹಕ್ಕಿ ಚಿತ್ರಗಳು ಮತ್ತು ಲೇಖನಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು
ಹೀಗೆ ಬರುತ್ತಿರಿ...

shivu.k said...

ಕಲ್ಲರೇ ಮಹೇಶ್,

ನನ್ನ ಬ್ಲಾಗಿಗೆ ಸ್ವಾಗತ....ನಿಮ್ಮನ್ನು ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ಬಾದಾಮಿ ಹೌಸ್ ನಲ್ಲಿ ಬೇಟಿಯಾಗಿದ್ದೆ...
ನಿಮ್ಮ ಕವನ ಓದುತ್ತೇನೆ...ಮತ್ತು ಕಳೆದ ಭಾನುವಾರ ನಿಮ್ಮ ಕತೆ ಕನ್ನಡಪ್ರಭದಲ್ಲಿ ಬಂದಿತ್ತು ಓದಿದ್ದೇನೆ..ಚೆನ್ನಾಗಿದೆ...

ನನ್ನ ಬ್ಲಾಗಿನ ಚಿತ್ರ-ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಹೀಗೆ ಬರುತ್ತಿರಿ...

SSK said...

ಶಿವೂ ಅವರೇ, ನಿಜವಾದ ಮಣ್ಣಿನ ಮಗ ಅಂದರೆ ನೀವೇ, ನೋಡಿ! ಫೋಟೋ ಮತ್ತು ಲೇಖನ ಅಧ್ಬುತವಾಗಿವೆ! ನಿಮ್ಮ ಪರಿಶ್ರಮಕ್ಕೆ ನನ್ನದೊಂದು ನಮನ!

Veena DhanuGowda said...

Hello,

abbbbaab :)
idela nijavaglu sadyana ????
yets thalme ide nimge...
great work Mr Shivu
hats off....

shivu.k said...

ssk ಸರ್...

ಚಿತ್ರ ಲೇಖನಕ್ಕೆ ನೀವು ಮೆಚ್ಚಿಗೆ ವ್ಯಕ್ತಪಡಿಸಿರುವುದು ನನಗೆ ಖುಷಿಯಾದರೂ ನೀವು ಮಣ್ಣಿನ ಮಗ ಅಂತ ಹೇಳಿರುವುದು ಈ ಚುನಾವಣೆಯ ಸಮಯದಲ್ಲಿ ಅಪಾರ್ಥ ಬರುವ ಸಾಧ್ಯತೆಯಿದೆ ಸರ್ ![ತಮಾಷೆಗೆ ಹೇಳಿದೆ..]
ಧನ್ಯವಾದಗಳು..

shivu.k said...

ವೀಣಾ ಮೇಡಮ್,

ಇದೆಲ್ಲಾ ಖಂಡಿತ ಸಾಧ್ಯವಾಗಿದೆ..ಏಕೆಂದರೆ ಸಾಕ್ಷಿಯಾಗಿ ಚಿತ್ರಗಳಿವೆಯಲ್ಲಾ...ಮತ್ತು ಇದು ಯಾವುದೇ ಗ್ರಾಫಿಕ್ಸ್ ಇನ್ನಿತರ ತಂತ್ರಗಾರಿಕೆ ಇಲ್ಲ.

ನೇರ ಕ್ಲಿಕ್ಕಿಸಿರುವುದು ಮತ್ತು ಆ ಸಮಯದಲ್ಲಿ ಆದ ಅನುಭವವನ್ನೇ ಬರೆದಿರುವುದು...

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

Anonymous said...

"Green bee eater"ನ ಫೋಟೋಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಬರಹದ ಹಾಸ್ಯ ಮಾತ್ರ ಹಿಡಿಸಲಿಲ್ಲ.

CSMysore said...

ನಿಜಕ್ಕೂ ಒಂದು ಅದ್ಭುತ ಅನುಭವ ಕಟ್ಟಿಕೊಡಬಲ್ಲ ಫೋಟೊಗಳು. ಅಭಿನಂದನೆಗಳು ಹಾಗೂ ಧನ್ಯವಾದಗಳು!

shivu.k said...

ಸಿಂಚನ ಮೇಡಮ್,

ಬರಹದಲ್ಲಿ ವಿಚಾರಾನ್ನು ಮಾತ್ರ ಹೇಳಿದರೆ...ಅದು ಡಾಕ್ಯುಮೆಂಟರಿ ಆಗಿಬಿಡುತ್ತೆ ಅಲ್ಲವೇ...ಅದಕ್ಕಾಗಿ ನಾನು ನನ್ನ ಅನುಭವಗಳ ಜೊತೆಗೆ ಒಂದಷ್ಟು ಹಾಸ್ಯವನ್ನು ಸೇರಿಸಿ ಬರೆಯುವಾಗ ನಾನೇ ಖುಷಿ ಪಡುತ್ತೇನೆ...

ಅದರೂ ನಿಮ್ಮ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಸ್ವೀಕರಿಸುತ್ತೇನೆ...ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu.k said...

ಧತ್ತಾತ್ರಿ ಸರ್,

ನನ್ನ ಬ್ಲಾಗಿಗೆ ಸ್ವಾಗತ...

ನೀವು ಫೋಟೋ ಮತ್ತು ಲೇಖನವನ್ನು ಮೆಚ್ಚಿದ್ದೀರಿ...

ಬಿಡುವಿನಲ್ಲಿ ನನ್ನ ಬ್ಲಾಗಿನ ಮತ್ತಷ್ಟು ಲೇಖನಗಳನ್ನು ಓದಿ...ನಿಮಗೆ ಮತ್ತಷ್ಟು ವಿಭಿನ್ನ ಅನುಭವ ಖಂಡಿತ ಆಗುತ್ತದೆ...

ಧನ್ಯವಾದಗಳು...ಹೀಗೆ ಬರುತ್ತಿರಿ...

ಕೃಪಾ said...

ನಮಸ್ತೆ... ಶಿವಣ್ಣ....

ಫೋಟೋ.. ನಿರೂಪಣೆ..... ಎರಡು..... ಸೂಪರ್.....

ಅದೆಲ್ಲ ಸರಿ.... ಹೆಮಾಶ್ರಿ.... ಪಕ್ಷಿ ಸಂಸಾರ ವೇಕ್ಷಿಸಿಸಲು....ಅವರೇ.... ಬಂದಿದ್ದರೋ......ಅಥವಾ... ನೀವೇ ಕರೆದುಕೊಂಡು ಹೋಗಿದ್ದಿರೋ......

ನಿಮ್ಮದೇ... ಶೈಲಿಯಲ್ಲಿ ನಿರೂಪಿಸಿದರೆ.........
ಸುಮ್ನೆ......ತಮಾಷೆಗೆ...... ಅಷ್ಟೇ.....

ಮಹೇಶ್ ಪುಚ್ಚಪ್ಪಾಡಿ said...

ಓಹ್ ಸೂಪರ್ ಆಗಿದೆ...

Anonymous said...

ಶಿವು, ಚಿತ್ರಗಳು ಎಂದಿನಂತೆ ಚೆನ್ನಾಗಿವೆ, ತುಂಬಾ ತುಂಬಾನೇ ಚೆನ್ನಾಗಿವೆ.
ನೀವು ಕೇಬಲ್ ಅಂದಾಗ ಕೇಬಲ್ ರಿಲೀಸ್ ಬಗ್ಗೆ ಹೇಳ್ತಿದೀರಾ? ಹಾಗಿದ್ದರೆ ನೀವು ಅದನ್ನ ದೂರ ಕೂತು ಬಳಸುವಾಗ compositionಗಳನ್ನು ಹೇಗೆ ಬದಲುಸುತ್ತೀರಾ? ಒಂದೇ ಜಾಗದಲ್ಲಿ ಫೋಕಸ್ ಮಾಡಿದಾಗ ಹಕ್ಕಿಗಳು ಅಲ್ಲಿಗೆ ಬರುತ್ತವೆ ಎಂಬ ಲೆಕ್ಕಾಚಾರದಲ್ಲಿ ಕುಳಿತಿರುತ್ತೀರಾ?
ಹಾಗೆ ಸ್ವಲ್ಪ technical ಮಾಹಿತಿ ಕೂಡ ಕೊಟ್ರೆ ನಮ್ಮಂತವರಿಗೆ ಸಹಾಯ ಆಗಬಹುದು :)

shivu.k said...

ಪಚ್ಚಾಪ್ಪಾಡಿ ಸರ್,

ಚಿತ್ರ-ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಕೃಪಾ ಅಕ್ಕ..

ಫೋಟೊಗಳನ್ನು ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

ಈ ಪಕ್ಷಿಗಳ ಫೋಟೊ ತೆಗೆಯಲು ನಾನು ಪ್ರತಿದಿನ ಹೋಗುವಾಗ ಮನೆ ಮಠ ಸಂಸಾರಕ್ಕಿಂತ ಹಕ್ಕಿಗಳೇ ಹೆಚ್ಚಾಯಿತಾ ಅಂತಾ ಕೊನೆ ಕೊನೆಯಲ್ಲಿ ಹೇಮಾಶ್ರೀ ಗೊಣಗಾಟವಿತ್ತು....ಅದಕ್ಕೆ ಇದೆಲ್ಲಾ ಪ್ರತಿದಿನ ಇದ್ದೇ ಇರುತ್ತೇ ಅದು ಸಿಗೋದಿಲ್ಲ ನೀನೊಮ್ಮೆ ನೋಡಿದರೆ ಅದರ ಆನಂದ ಗೊತ್ತಾಗುತ್ತೆ...ಅಂದಾಗ ಅವಳು ಕೊನೆ ದಿನ ಹೊರಟು ನಿಂತಳು....ನೋಡಿ ಸಂತೋಷ ಪಟ್ಟಳು..

ಧನ್ಯವಾದಗಳು...

ಮತ್ತೆ ನಿಮ್ಮ ಬಾಸ್ ಬಗ್ಗೆ ಒಂದು ಸುಂದರವಾದ[ಹೊಗಳಿಕೆಯ] ಲೇಖನವನ್ನು ಬರೆದು ಬ್ಲಾಗಿನಲ್ಲಿ ಹಾಕಿ..ನಂತರ ಬಂದ ಪ್ರತಿಕ್ರಿಯೆಗಳನ್ನು ನಿಮ್ಮ ಬಾಸ್‌ಗೆ ತೋರಿಸಿದರೆ ಬ್ಲಾಗ್ ಮಹತ್ವ ಅವರಿಗೂ ಅರಿವಾಗಿ ನಿಮಗೂ ಬ್ಲಾಗ್ ಇತ್ಯಾದಿಗೆ ಅವರು ಸಹಕರಿಸಬಹುದು...ಏನಂತೀರಿ...ಟ್ರೈ ಮಾಡಿ..ಕಳೆದುಕೊಳ್ಳೋದು ಏನು ಇಲ್ಲಾ..ಅಲ್ವಾ...

shivu.k said...

creatam ಸರ್,

ನನ್ನ ಬ್ಲಾಗಿಗೆ ಸ್ವಾಗತ...ಮೊದಲಿಗೆ ನಿಮ್ಮ ಹೆಸರು ತಿಳಿಯಲಿಲ್ಲ...

ಮತ್ತೆ ಕೇಬಲ್ ರಿಲೀಸ್, composition, ಇತ್ಯಾದಿಗಳ ಬಗ್ಗೆ ಕೇಳಿದ್ದೀರಿ...ನೀವು ಪಕ್ಷಿ ಛಾಯಾಗ್ರಾಹಣವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವ ಹಾಗಿದ್ದಲ್ಲಿ ಇದರ ರಹಸ್ಯಗಳನ್ನು ನಾನು ಹೇಳಬಹುದು...ಇಲ್ಲದಿದ್ದಲ್ಲಿ ಎಲ್ಲ ಕೇಳಿದ ಮೇಲೆ ಇದು ಇಷ್ಟೇನಾ ಅಂತಾ ಹಗುರಾಗಿ ಮಾತನಾಡುವುದುಂಟು...

ಅದಕ್ಕಾಗಿ ನಿಮ್ಮ flickr.com ಗೆ ಹೋಗಿದ್ದೆ. ಅದರಲ್ಲಿನ ಫೋಟೋಗಳೂ ತಾಂತ್ರಿಕವಾಗಿ ಚೆನ್ನಾಗಿವೆ..ಮತ್ತು ನೀವು SLR ಕ್ಯಾಮೆರಾವನ್ನು ಉಪಯೋಗಿಸಬಹುದು ಅನ್ನಿಸುತ್ತೆ....

ನಿಮ್ಮ ಬ್ಲಾಗಿನ ಚಿತ್ರಗಳನ್ನು ನೋಡಿದಾಗ ಫೋಟೋಗ್ರಫಿ ನಿಮಗೆ ತುಂಬಾ ಇಷ್ಟ ಅಂತಾ ಗೊತ್ತಾಯಿತು ಅದನ್ನು ನೋಡಿದ ಮೇಲೆ ಕೆಲವು ರಹಸ್ಯಗಳನ್ನು ಹೇಳುತ್ತೇನೆ...

ಮೊದಲಿಗೆ ಪಕ್ಷಿ ಕೂತುಕೊಳ್ಳುವ ಜಾಗವನ್ನು ಗುರುತಿಸಿ...ಅದಕ್ಕೆ ಸುಮಾರು ದೂರದಲ್ಲಿ ನಮ್ಮ ಸ್ಟ್ಯಾಂಡ್‌ಗೆ ಕ್ಯಾಮೆರಾ ಸೆಟ್ ಮಾಡಬೇಕು...ಕ್ಯಾಮೆರಾಗೆ [೪೦ ಆಡಿಯಷ್ಟು]ಕೇಬಲ್ ಕನೆಕ್ಟ್ ಮಾಡಿ ನಾವು ದೂರದಲ್ಲಿ ಮರೆಯಲ್ಲಿ ಕುಳಿತು ಕೈಯಲ್ಲಿ ರಿಮೋಟ್ ಮುಖಾಂತಾರ ಹಕ್ಕಿ ಹಾರಿಬಂದು ಕುಳಿತುಕೊಂಡಾಗ ರೆಮೋಟ್‌ನಿಂದ ಕ್ಲಿಕ್ಕಿಸಬೇಕು...ಹಕ್ಕಿ ಹಾರಿಹೋದ ಮೇಲೆ ಈಗ ಡಿಜಿಟಲ್ ಕ್ಯಾಮೆರಾ ಇರುವುದರಿಂದ ಹೋಗಿ ತಕ್ಷಣ ನೋಡಿ..compisition .Sharpness, dept of field ಸರಿಯಾಗಿದೆಯಾ ಪರೀಕ್ಷಿಸಿ.. ಇಲ್ಲದಿದ್ದಲ್ಲಿ ಮತ್ತೆ ಸರಿಪಡಿಸಿಕೊಂಡು ಮತ್ತೆ ಸಿದ್ದರಾಗಬೇಕು ಹೀಗೆ ಇದು ದಿನವೆಲ್ಲಾ ನಡೆಯುತ್ತದೆ...
ನಾನು ಈ ಪಕ್ಷಿಯನ್ನು ಕ್ಲಿಕ್ಕಿಸುವಾಗ ರೋಲ್ ಕ್ಯಾಮೆರಾವಿದ್ದುದರಿಂದ ತೆಗೆದ ಚಿತ್ರಗಳು ಸರಿಯಾಗಿದೆಯ ಅಂತ ತಿಳಿಯುತ್ತಿದ್ದುದು ಬೆಂಗಳೂರಿಗೆ ಬಂದು ಲ್ಯಾಬ್‌ನಲ್ಲಿ ಡೆವೆಲಪ್ ಆಂಡ್ ಪ್ರಿಂಟ್ ಮಾಡಿಸಿದ ನಂತರವೇ ತಿಳಿಯುತ್ತಿದ್ದು..ತಪ್ಪುಗಳನ್ನು ಸರಿಪಡಿಸಲು ಪ್ರತಿದಿನ..ಹೋಗುತ್ತಿದ್ದೆನು....
ಇದೆಲ್ಲಾದಕ್ಕಿಂತ ಮೊದಲು ಹಕ್ಕಿಗಳು ನಮ್ಮ ಗೆಳೆಯರಾಗುವಂತೆ ಮಾಡಿಕೊಳ್ಳುವುದು ಒಂದು ಕಲೆ..ಅದಕ್ಕೆ ತೊಂದ್ರೆ ಕೊಡದಂತೆ...ಅವುಗಳಿಗೆ ನಾವು ಹೊಂದಿಕೊಳ್ಳಬೇಕಾದರೆ ಕಡಿಮೆಯೆಂದರೂ ಒಂದು ವಾರವಾದರೂ ನಾವು ಹೋಗಬೇಕು ಮತ್ತು ಅವುಗಳ ಜೊತೆ ಇರಬೇಕು....ಅಬ್ಯಾಸ ಮಾಡಬೇಕು...[ನಾನು ಈ ಹಕ್ಕಿಗಳಿಗಾಗಿ ಒಂದು ತಿಂಗಳು ಅಬ್ಯಾಸ ಮಾಡಿದ್ದೆ]

ಅಂದ್ರೆ ನೂರಕ್ಕೆ ೯೯ ಭಾಗ ಪೂರ್ತಿ ಅಬ್ಯಾಸಿಸಿ ಕೊನೆಯಲ್ಲಿ ೧% ಮಾತ್ರ ಕ್ಲಿಕ್...ಕ್ಲಿಕ್...ಅದೇ ನಮ್ಮ ಅಂತಿಮ ಭಾಗ...ಎಲ್ಲರಿಗೂ ಬೇಕಾಗಿರುವುದು...

ಧನ್ಯವಾದಗಳು...

ಚಿತ್ರಾ said...

ಅಂತೂ ಗಿಫ್ಟ್ ಕೊಟ್ಟು ಒಲಿಸಿಕೊಳ್ಳೋ ಪದ್ಧತಿ ಎಲ್ಲ ಕಡೆನೂ ಇದೆ ಅಂತಾಯ್ತು.
ಚಿತ್ರ ಲೇಖನ ಚೆನ್ನಾಗಿ ಬಂದಿದೆ ಶಿವು. ನಿಮ್ಮ ಇಂತಹ ಲೇಖನಗಳನ್ನು ಓದಿದಾಗೆಲ್ಲ ನಾನು ನಿಮ್ಮ ತಾಳ್ಮೆಗೆ ಫೋಟೋಗ್ರಾಫಿಯ ಬಗ್ಗೆ ನಿಮಗಿರುವ ಆಸಕ್ತಿಗೆ ಬೆರಗಾಗುತ್ತೇನೆ !

Unknown said...

ಫೋಟೋಗಳು ಚೆನ್ನಾಗಿವೆ...

Ittigecement said...

ಶಿವು ಸರ್...

ಇಷ್ಟು ತಡವಾಗಿ ಬಂದಿದ್ದು ಮೊದಲ ಬಾರಿ..

ನಿಮ್ಮ ಚಿತ್ರ ಲೇಖನ ನೋಡಿ ನನ್ನ ಮಗ
ನಿಮ್ಮ ಫ್ಯಾನ್ ಆಗಿದ್ದಾನೆ...
ಕ್ಯಾಮರಾ ತಗೊಂಡು .. ಜೊತೆಗೆ ನನ್ನನ್ನೂ ಕರೆದು ಕೊಂಡು
ಹಕ್ಕಿಗಳ ಫೋಟೊ ತೆಗೆಯುತ್ತಿದ್ದಾನೆ..
ನಮ್ಮ ಲೇಔಟಿನ ಕೆರೆಯ ಪಕ್ಕದಲ್ಲಿ..

ನಿಮ್ಮ ತಾಳ್ಮೆ ಶ್ರದ್ಧೆ ನಿಮ್ಮ ಫೋಟೊದಲ್ಲಿ ಕಾಣ ಬಹುದು...

ನನ್ನ ಹಾಗೂ ನನ್ನ ಮಗನ ಕಡೆಯಿಂದ
ನಿಮಗೆ ಅಭಿನಂದನೆಗಳು

ನನ್ನ ಮಗನಿಗೆ ಈ ಗೀಳು ಶುರು ಮಾಡಿಸಿದ್ದಕ್ಕೆ ಪ್ರತ್ಯೇಕವಾಗಿ ಧನ್ಯವಾದಗಳು...
ಇಂಥಹ ಚಿತ್ರ ಲೇಖನ ಇನ್ನಷ್ಟು ಬರಲಿ...

ಅಂತರ್ವಾಣಿ said...

ಶಿವಣ್ಣ,
ಈ ಕಲೆ ಇರೋ ಹೊತ್ತಿಗೆ ನಿಮಗ ಆ ಗೌರವ ದಕ್ಕಿರೋದು.. :)

NiTiN Muttige said...

ಶಿವು ಅವರೇ, ಫೋಟೊಸ್ ಎಲ್ಲಾ ಸುಪರ್ ಕಣ್ರಿ... ನಿಮ್ಮ ತಾಳ್ಮೆಗೆ ಹ್ಯಾಟ್ಸ್ ಅಪ್.

ಪಾಚು-ಪ್ರಪಂಚ said...

ಶಿವೂ ಅವರೇ,

ಅದ್ಭುತ ಫೋಟೋಗಳು...ಅಷ್ಟೇ ಸುಂದರ ವಿವರಣೆ...ನಿಮ್ಮ ಶ್ರಮಕ್ಕೆ hats off.

ಹೀಗೆಯೇ ಮುಂದುವರಿಯಲಿ ನಿಮ್ಮ ನಿಸರ್ಗ ಪ್ರೇಮ...
ಅಭಿನಂದನೆಗಳು
ಪ್ರಶಾಂತ್ ಭಟ್

Anonymous said...

:-) ಭಲೇ!

Archu said...

ನಾನು ನಿಮ್ಮ ಟಿ.ವಿ. ಸಂದರ್ಶನದ ವಿಡಿಯೋ ನೋಡಿದೆ. ಖುಷಿಯಾಯಿತು !
ಅಭಿನಂದನೆಗಳು!

ಚಿತ್ರಗಳು ಬಹಳ ಚೆನ್ನಾಗಿವೆ!ನಿಮ್ಮ ತಾಳ್ಮೆಯನ್ನು ಮೆಚ್ಚಬೇಕು! ನಾನು ಚಿಕ್ಕದಿರುವಾಗ ಪಕ್ಷಿ ವೀಕ್ಷಣೆ ನನ್ನ ಅತಿ ಪ್ರಿಯವಾದ ಹವ್ಯಾಸವಾಗಿತ್ತು. ನಮ್ಮ ಮನೆಯ ಹತ್ತಿರ ಸುಳಿದಾಡುತ್ತಿದ್ದ ಹಕ್ಕಿಗಳನ್ನೆಲ್ಲ ನೋಡುತ್ತಿದ್ದೆ.ಅವುಗಳ ಗೂಡು ,ತಾಯಿ ಹಕ್ಕಿ ತೋರಿಸುವ ಪ್ರೀತಿ ಎಲ್ಲ ಸೊಗಸು!!ಬಣ್ಣ ಬಣ್ಣದ ಹಕ್ಕಿ ಗರಿಗಳನ್ನೆಲ್ಲ ಸಂಗ್ರಹಿಸುವ ಹವ್ಯಾಸವಿತ್ತು. ನನ್ನ ಹತ್ತಿರ ಕೆಲವು ಹಕ್ಕಿ ಗೂಡುಗಳೂ ಇದ್ದವು. ಒಂದು ಸಲ ಮಳೆ ಬಂದು ಎಲ್ಲ ಗೂಡುಗಳೂ ಹಾಳಾಗ ಹೋದಾಗ ನನಗೆ ಬಹಳ ಬೇಜಾರಾಗಿತ್ತು..

ಆಗ ನನ್ನ ಬಳಿ ಕ್ಯಾಮರ ಇರಲಿಲ್ಲ ..
ಈಗ ಇದೆ ..ಆದರೆ ಈಗ ಇಲ್ಲಿ ಮನೆಯ ಹತ್ತಿರ ಹಕ್ಕಿಗಳೇ ಇಲ್ಲ !

ಶರಶ್ಚಂದ್ರ ಕಲ್ಮನೆ said...

ಅದ್ಭುತ ಛಾಯಾಗ್ರಹಣ... ತುಂಬಾ ಸಂತೋಷವಾಯಿತು ಚಿತ್ರಗಳನ್ನು ನೋಡಿ ಶಿವೂ ಅವ್ರೆ :)

ವನಿತಾ / Vanitha said...

ಅದ್ಭುತ ಫೋಟೋ ಗಳೊಂದಿಗೆ ಸುಂದರ ವಿವರಣೆ...ಹಾಗೇನೇ ವೀಡಿಯೊ ನೋಡಿದೆ...ತುಂಬ ಥ್ಯಾಂಕ್ಸ್ upload ಮಾಡಿದ್ದಕ್ಕೆ...

shivu.k said...

ಚಿತ್ರಾ ಮೇಡಮ್,

ಏನನ್ನಾದರೂ [ಅದರಲ್ಲೂ ಪ್ರೀತಿಯನ್ನು]ಪಡೆಯಲೇ ಬೇಕಾದರೆ ಗಿಫ್ಟ್ ಕೊಡಲೇಬೇಕು ಅನ್ನುವ ಪರಿಸ್ಥಿತಿ ಈಗ. ಇದು ಪ್ರಾಣಿ ಪಕ್ಷಿಗಳಿಗೂ ಅನ್ವಯಿಸುತ್ತದೆ...ಅಂದರೆ ಕಾಲ ಮಟ್ಟಿಗೆ ಕೆಟ್ಟಿದೆ ಅನ್ನೋಣವೇ....

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

shivu.k said...

ರವಿಕಾಂತ್ ಸರ್,

ತುಂಬಾ ಧನ್ಯವಾದಗಳು...

shivu.k said...

ಪ್ರಕಾಶ್ ಸರ್,

ಚಿತ್ರ-ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ನಾನು ತೆಗೆದ ಚಿತ್ರಗಳನ್ನು ನೋಡಿ ನಿಮ್ಮ ಮಗನೂ ಹಕ್ಕಿಗಳ ಫೋಟೋ ತೆಗೆಯಲಾರಂಭಿಸಿರುವುದು ನನಗೆ ಖುಷಿಯ ವಿಚಾರ...

ನಿಮ್ಮ ಮಗ ನನ್ನ ಪ್ಯಾನ್ ಆಗೋದು ಬೇಡ...ಆ ಮಟ್ಟಿಗೆ ನಾನೇನು ಸೆಲೆಬ್ರಿಟಿ ಅಲ್ಲ....ಒಟ್ಟಾರೆ ನಾವೆಲ್ಲಾ ಪ್ರಕೃತಿಯೆಡೆಗೆ ಪ್ರಾಣಿ ಪಕ್ಷಿಗಳೆಗೆ ಅಭಿಮಾನಿಗಳಾಗೋಣ...

ನಿಮ್ಮ ಮಗನಿಗೆ ಕಿವಿಮಾತು...

ಹವ್ಯಾಸ ಬೇಕು..ಅದಕ್ಕಿಂತ ಮುಖ್ಯವಾಗಿ ಈ ವಯಸ್ಸಿನಲ್ಲಿ ಓದು ಮುಖ್ಯ. ಅದು ಮುಗಿದ ಮೇಲೆ ಯಾವ ಒಳ್ಳೆಯ ಹವ್ಯಾಸವನ್ನಾದರೂ ಬೆಳೆಸಿಕೊಳ್ಳಲಿ...ಸಾಧನೆ ಮಾಡಲಿ...

ಧನ್ಯವಾದಗಳು...

shivu.k said...

ಜಯಶಂಕರ್,

ಧನ್ಯವಾದಗಳು...

shivu.k said...

ನಿತಿನ್,

ಚಿತ್ರಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಮತ್ತೆ ನೀವು ಸೇರಿದಂತೆ ಎಲ್ಲರೂ ನನ್ನ ತಾಳ್ಮೆಯನ್ನು ಮೆಚ್ಚುತ್ತಿದ್ದೀರಿ....

ಕಳೆದೊಂದು ವಾರದಿಂದ ಮದುವೆ ಫೋಟೊ ತೆಗೆಯುವುದರಲ್ಲಿ ಬ್ಯುಸಿಯಾಗಿದ್ದೇನೆ...ಅಲ್ಲಿನ ಕೆಲವು ಪರಿಸ್ಥಿತಿಗಳಲ್ಲಿ ಅದೆಷ್ಟು ಸಲ ತಾಳ್ಮೆ ಗೆಟ್ಟಿದ್ದೆನೋ ನೀವು ನೋಡಿದ್ದರೇ ಈ ಹೊಗಳಿಕೆ ಮಾತು ಹೇಳುತ್ತಿರಲಿಲ್ಲ...
ಹೀಗೆ ಬರುತ್ತಿರಿ...

shivu.k said...

ಪ್ರಶಾಂತ್ ಭಟ್,

ಪ್ರಕೃತಿಯೆಡೆಗಿನ ನನ್ನ ಅಭಿಮಾನವನ್ನು ಗುರುತಿಸಿದ್ದೀರಿ...

ಎಲ್ಲರೂ ಇದೇ ರೀತಿ ಅಭಿಮಾನ ಪ್ರೀತಿ ತೋರಿಸಬೇಕೆನ್ನುವುದು ನನ್ನ ಆಸೆ..

ಹೀಗೆ ಬರುತ್ತಿರಿ...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರದೀಪ್, ಥ್ಯಾಂಕ್ಸ್....

shivu.k said...

ಅರ್ಚನ ಮೇಡಮ್,

ನಿಮ್ಮ ಬಾಲ್ಯದಲ್ಲಿ ಪಕ್ಷಿ ವೀಕ್ಷಣೆ, ಅದರ ಬಗೆಗಿನ ಕಾಳಜಿ, ಗೂಡಗಳನ್ನು ಶೇಖರಣೆ..ಇತ್ಯಾದಿ ವಿಚಾರಗಳನ್ನು ನೆನೆಪಿಸಿಕೊಂಡಿದ್ದೀರಿ....ಇಲ್ಲಿ ಹಂಚಿಕೊಂಡಿದ್ದೀರಿ....

ನಮ್ಮ ಸಂದರ್ಶನದ ವಿಡಿಯೋ ನೋಡಿ ಮೆಚ್ಚಿದ್ದೀರಿ..

ಈ ಹಕ್ಕಿಚಿತ್ರಗಳನ್ನು ಇಷ್ಟಪಟ್ಟು ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

shivu.k said...

ಶರತ್ ಚಂದ್ರ...

ನೀವು ಬಿಡುವು ಮಾಡಿಕೊಂಡು ನನ್ನ ಬ್ಲಾಗ್ ನೋಡುವುದು ನನಗೆ ಖುಷಿಯಾಗುತ್ತೆ...ನಿಮ್ಮ ಪರೀಕ್ಷೆ ತಯಾರಿ ಚೆನ್ನಾಗಿದೆಯಾ...ಒಳ್ಳೆಯದಾಗಲಿ....

ಧನ್ಯವಾದಗಳು...

shivu.k said...

ವನಿತಾ...

ಹಕ್ಕಿ ಚಿತ್ರಗಳ ಜೊತೆಗೆ ಬರವಣಿಗೆಯನ್ನು ಮೆಚ್ಚಿದ್ದೀರಿ...

ನಮ್ಮ ಸಂದರ್ಶನದ ವಿಡಿಯೋ ನೀವೆಲ್ಲಾ ನೋಡಲು ಸಾಧ್ಯವಾಗಿರುವುದು...ಗೆಳೆಯ ರಾಜೇಶ್ ಮಂಜುನಾಥ್‌ನಿಂದಾಗಿ...

ಇದಕ್ಕಾಗಿ ಪೂರ್ತಿ ದಿನವೆಲ್ಲಾ ಶ್ರದ್ಧೆಯಿಂದ ನಮಗಾಗಿ upload ಮಾಡಿದ ಆತನಿಗೆ ನಿಮ್ಮಲ್ಲಾ ಹೊಗಳಿಕೆಯನ್ನು ಅರ್ಪಿಸುತ್ತೇನೆ...

ಧನ್ಯವಾದಗಳು..

b.saleem said...

ಶಿವು ಸರ್
ಇಂತ ಚಿತ್ರಗಳನು ತೆಗೆಯುವ ನಿಮ್ಮ ತಾಳ್ಮೆ ಅದ್ಭುತ!
ಪಕ್ಷಿ ಛಾಯಗ್ರಹಣದಲ್ಲಿ ಆಸಕ್ತಿ ಇರುವವರಿಗೆ ಇದೊಂದು ಪಾಠವೆ ಸರಿ

shivu.k said...

ಸಲೀಂ,

ನೀವು ತಡವಾಗಿಯಾದರೂ ಬಂದೇ ಬರುತ್ತೀರಿ ಅಂತ ನನಗೆ ಗೊತ್ತು...ಮೊದಲೇ ನೀವು ಪ್ರಕೃತಿಪ್ರಿಯರಲ್ಲವೇ....

ಹೀಗೆ ಬರುತ್ತಿರಿ...ಸಾದ್ಯವಾದರೆ ಮುಂದಿನ ಲೇಖನಗಳಲ್ಲಿ..ನಮ್ಮದೇ ಮದುವೆ[ನಿಮ್ಮದು ಅದೇ ಕಾಯಕವಲ್ಲವೇ]ಫೋಟೋಗ್ರಫಿಯಲ್ಲಿನ ನಮ್ಮ ಫೋಟೋಗ್ರಾಫರುಗಳು ಮತ್ತು ವಿಡಿಯೋಗ್ರಫರುಗಳ ವಿಭಿನ್ನ ಮಾತುಗಳ ಬಗ್ಗೆ...ಹಾಗೂ ಮಳೆ...ಮಳೆ....ಅಂತನ್ನುವ ನಮ್ಮ ಜನರಿಗೆ ಮಳೆ ಒಮ್ಮೆ ಎಂಥ ಕೆಲಸ ಮಾಡಿತು..ಅದರಿಂದ ಆದ ತರಲೇ ತಾಪತ್ರಯಗಳೇನು ಅಂತ ಹೊಸ ಲೇಖನವನ್ನು ಬರೆಯುತ್ತಿದ್ದೇನೆ....

ಓದಲು ಮರೆಯದಿರಿ...

ಧನ್ಯವಾದಗಳು...

Godavari said...

Very beautiful photos..

ಶಿವೂ ಅವರೇ ಅತ್ಯಂತ ಸುಂದರವಾಗಿ ಸುಂದರ ಹಕ್ಕಿಗಳ ಪುಟ್ಟ ಸಂಸಾರವನ್ನು ಸೆರೆ ಹಿಡಿದಿದ್ದೀರಿ.. ಅಭಿನಂದನೆಗಳು..

shivu.k said...

ಗೋದವರಿ,

ನನ್ನ ಬ್ಲಾಗಿಗೆ ಸ್ವಾಗತ...

ನನ್ನ ಹಕ್ಕಿಚಿತ್ರಗಳ ಜೊತೆಗೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು....ಹೀಗೆ ಬರುತ್ತಿರಿ...

ಸಾಧ್ಯವಾದರೆ ನನ್ನ ಬ್ಲಾಗಿನ ಇನ್ನಿತರ ಲೇಖನಗಳನ್ನು ಓದಿ ನಿಮಗೆ ಖುಷಿಯಾಗಬಹುದು...

ಮತ್ತೊಮ್ಮೆ ಧನ್ಯವಾದಗಳು...

Prashanth Arasikere said...

hi shivu...

nimma photo bagge erdu matilla bidi astu chennagi hakki gala chitrana madiddira nivu patta shrama estu ide endu nivu tegidiruva photo gale sakshi..tumba chennagide..hagu nimma mundina photo hagu maduve maneya lekhana yavaga enu kayutta iddene...shigra dalli barali..

shivu.k said...

ಪ್ರಶಾಂತ್,

ಹಕ್ಕಿಗಳ ಚಿತ್ರ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.... ಮದುವೆ ಮನೆಯಲ್ಲಿ ನಮ್ಮ ಮಾತುಕತೆಯ ಲೇಖನ ಬರೆಯುತ್ತಿದ್ದೇನೆ...

ನಿಮಗೆ ಗೊತ್ತಲ್ಲ...ಈಗ ನಾನು ಬ್ಯುಸಿಯಾಗಿರುವುದು....

ಶೀಘ್ರದಲ್ಲೇ ಬ್ಲಾಗಿಗೆ ಹಾಕುತ್ತೇನೆ....

ಧನ್ಯವಾದಗಳು...

Prabhuraj Moogi said...

ನೀವು ನೋಡಿದ್ದು ಒಳ್ಳೆದಾಯ್ತು .. ಇಲ್ಲಾಂದ್ರೆ ನಮಗೆಲ್ಲಿ ನೋಡಲು ಸಿಗುತ್ತಿತ್ತು ಇದೆಲ್ಲ...

shivu.k said...

ಪ್ರಭುರಾಜ್,

ಇದನ್ನು ನಾನು ಮಾತ್ರ ನೋಡಿದ್ದಕ್ಕೆ ಒಳ್ಳೆಯದು ಅಂತೀರಿ...ನೀವು ಬೇಕಾದರೆ ನೋಡಬಹುದು...ನೋಡುವ ಮನಸ್ಸು..ಮತ್ತು ಸಮಯವಿದ್ದರೆ ಬೆಂಗಳೂರು ಬಿಟ್ಟು ಐವತ್ತು ಕಿಲೋ ಮೀಟರ್ ದಾಟಿದರೆ ಇವೆಲ್ಲಾ ಸಿಗುತ್ತವೆ...

ಧನ್ಯವಾದಗಳು..

Anonymous said...

ಶಿವು, ನೀವು ಕೊಟ್ಟ ಮಾಹಿತಿಗೆ ಧನ್ಯವಾದಗಳು.
ಹೆಸರು ಹೇಳಲಿಕ್ಕೆ ಮರೆತೆ, ನಾನು ಮನೋಜ್ ಅಂತ. ನಿಮ್ಮ ಬ್ಲಾಗಿಗೆ ಕೆಲ ವಾರಗಳ ಹಿಂದಿನಿಂದ ಬರ್ತಾ ಇದ್ದೀನಿ. ಫೋಟೋಗ್ರಾಫಿಯಲ್ಲಿ ಆಸಕ್ತಿ ಇದೆ, ಸುಮಾರು ೪ ವರ್ಷದ ಹಿಂದೆ ಒಂದು ಚಿಕ್ಕ ಡಿಜಿಟಲ್ ಕ್ಯಾಮೆರಾದಿಂದ ಶುರು ಮಾಡಿದೆ, ಈಗ ಡಿಜಿಟಲ್ ಎಸ್ಸೆಲ್ಲಾರ್ ಬಳಸುತ್ತಿದ್ದೇನೆ. ಲ್ಯಾಂಡ್ಸ್ಕೇಪ್ನಲ್ಲಿ ಆಸಕ್ತಿ ಜಾಸ್ತಿ. ಹೆಚ್ಚಾಗಿ ಹಲವು ನೈಸರ್ಗಿಕವಾಗಿ ಸುಂದರ, ಅದ್ಭುತ ಅನ್ನುವಂತಹ ಜಾಗಗಳಿಗೆ ಭೇಟಿ ಕೊಡುವುದರಿಂದ ಫೋಟೋ ತೆಗೆಯೋದಕ್ಕೂ ಸಹಾಯ ಆಗುತ್ತೆ. ಹಾಗೇ ಸ್ಟ್ರೀಟ್ ಫೊಟೊಗ್ರಾಫಿಯಲ್ಲೂ ಆಸಕ್ತಿಯೇನೋ ಇದೆ, ಆದರೆ ಜನರ ಫೋಟೋಗಳನ್ನು ಅವರ ಒಪ್ಪಿಗೆ ಇಲ್ಲದೇ ತೆಗೆಯೋದಕ್ಕೆ ಸ್ವಲ್ಪ ಭಯ.
ನನ್ನ flickr ಪುಟಕ್ಕೆ ಭೇಟಿ ಕೊಟ್ಟು ನಿಮ್ಮ ವಿಶ್ಲೇಷಣೆಗೆ ಥ್ಯಾಂಕ್ಸ್. ನಿಜಕ್ಕೂ ನಿಮಗೆ ತಾಳ್ಮೆ ಜಾಸ್ತಿ :).
ನನಗೆ ಪಕ್ಷಿ ಫೊಟೋಗ್ರಾಫಿಯಲ್ಲಿ ಸದ್ಯದಲ್ಲಿ ಅಂತಹ ಆಸಕ್ತಿ ಇಲ್ಲವಾದರು ನೀವು ಹೇಗೆ ಆ ಫೋಟೋಗಳನ್ನು ತೆಗೆದಿರಿ ಅನ್ನುವ ಕುತೂಹಲ ಇತ್ತು, ಅದಕ್ಕಾಗಿ ವಿವರಗಳನ್ನು ಕೇಳಿದೆ. ಹಾಗೆಯೇ ಸದ್ಯದಲ್ಲಿ ಆಸಕ್ತಿ ಇಲ್ಲವಾದ್ರೂ ಅದು ಯಾವಾಗ ಬೇಕಾದರೂ ಬರಬಹುದಲ್ಲವೇ, ಬಂದಾಗ ಗೊತ್ತಿರಬೇಕಾದದ್ದೆಲ್ಲ ಗೊತ್ತಿರಲಿ ಅಂತ ;). ನನ್ನ ಹತ್ರ ಕೇಬಲ್ ರಿಲೀಸ್ ಇಲ್ಲ, ಆದರೆ ಕಡಿಮೆ ಬೆಳಕಿನಲ್ಲಿ ಫೋಟೋ ತೆಗೆಯುವಾಗ IR ರೆಮೋಟ್ ಬಳಸುತ್ತೇನೆ.
ನಿಮ್ಮ ಬ್ಲಾಗ್ ಮೂಲಕ ನಿಮ್ಮ ಕಲೆಯನ್ನ ಮತ್ತೆ ಮತ್ತೆ ನೋಡುವ ಅವಕಾಶಕ್ಕಾಗಿ ಖುಶಿಯಾಗಿದೆ. ಹಾಗೆ ಕೆಲವೊಮ್ಮೆ ಕೆಲವು ಪ್ರಶ್ನೆಗಳನ್ನು ಕೇಳಿ ನಿಮಗೆ ತೊಂದರೆ ಕೊಡುತ್ತಿರುತ್ತೇನೆ ;)

shivu.k said...

ಮನೋಜ್,

ನಾನು ಕೊಟ್ಟ ಮಾಹಿತಿಯನ್ನು ನೀವು ಸ್ವೀಕರಿಸಿದ್ದೀರಿ....ಮತ್ತು ನಿಮ್ಮ ಬಗ್ಗೆ ಹೇಳಿದ್ದು ನನಗೆ ತುಂಬಾ ಖುಷಿಯಾಯಿತು.

ಹಕ್ಕಿ ಚಿತ್ರಗಳ ವಿವರಣೆಯಿಂದ ನಿಮಗೆ ಮುಂದೆ ಉಪಯುಕ್ತವಾಗುತ್ತದೆಂದು ತಿಳಿದಿದ್ದೇನೆ.

ಧನ್ಯವಾದಗಳು..

Anonymous said...

ಹಕ್ಕಿಗಳ ಪೋಟೋ, ಅವುಗಳಿಗೆ ನೀವು ಕೊಟ್ಟ ವಿವರಣೆ ತುಂಬ ಚೆನ್ನಾಗಿದೆ; ನಿಮ್ಮ ತಾಳ್ಮೆ-ಆಸಕ್ತಿಯನ್ನು ಮೆಚ್ಚಲೇಬೇಕು.

ಮನಸ್ವಿ said...

ನಿಮ್ಮ ಸಚಿತ್ರ ಲೇಖನದ ತಲೆ ಬರಹ ನನ್ನ ತಲೆ ಕೆಡಿಸಿತು... ಏನಿರಬಹುದು ಎಂದು ಕುತೂಹಲ ಮೂಡಿತು... ಇಲ್ಲಿ ಬಂದು ನೋಡಿದಾಗ ಚಿತ್ರ ಲೇಖನ ತುಂಬಾ ಖುಶಿ ಕೊಟ್ಟಿತು...

VENU VINOD said...

ಶಿವು,
ಈ ಪೋರ್ಟ್ ಫೋಲಿಯೋ ಚೆನ್ನಾಗಿದೆ, ನನಗೂ ಹಕ್ಕಿ ಛಾಯಾಗ್ರಹಣ ಆಸಕ್ತಿ...ಯಾವ ಕ್ಯಾಮೆರ ಮತ್ತು ಲೆನ್ಸ್ ಬಳಸಿದ್ದೀರೆಂದು(ಯಾವ ಟೆಲಿಙೂಮ್) ಎಂದು ತಿಳಿಸಿದ್ದರೆ ಚೆನ್ನಾಗಿತ್ತು..ನಾನು ಮೊನ್ನೆ canon dslr ಖರೀದಿಸಿದ್ದೇನೆ, ಇಂತಹ ಫೋಟೋ ತೆಗೆಯೋ ಯತ್ನ ಮಾಡಬೇಕು

shivu.k said...

ಗ್ರೀಷ್ಮ ಮೇಡಮ್,

ಹಕ್ಕಿ ಚಿತ್ರ-ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ....

shivu.k said...

ಮನಸ್ವಿ....

ಶೀರ್ಷಿಕೆ ಸ್ವಲ್ಪ ವಿಭಿನ್ನವಾಗಿರಲಿ...ಅಂತ ಹಾಗೆ ಇಟ್ಟೆ...ಇನ್ನುಳಿದಂತೆ ಚಿತ್ರ ಲೇಖನ ನೇರ ಆಗಿರುವ ಅನುಭವವನ್ನು ಹೇಳಿರುವಂತದ್ದು...

ಧನ್ಯವಾದಗಳು...

shivu.k said...

ವೇಣು ವಿನೋದ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ನಾನು ಈ ಹಕ್ಕಿ ಚಿತ್ರಗಳಿಗಾಗಿ..ಮೊದಲು EOS 5 camera,[ನೆಗಟೀವ್ ಕ್ಯಾಮೆರಾ] ಮತ್ತು ೧೦೦-೪೦೦ IS canon Lens, remote cable, Stand, ಇತ್ಯಾದಿಗಳನ್ನು ಬಳಸಿದ್ದೇನೆ...ಈಗ ನನ್ನ ಬಳಿ Canon DSLR camera ಇದೆ....ಅದರಲ್ಲಿ ತೆಗೆಯುತ್ತಿರುವ ಚಿತ್ರಗಳನ್ನು ಬ್ಲಾಗಿನಲ್ಲಿ ಹಾಕುತ್ತಿರುತ್ತೇನಲ್ಲ....

guruve said...

ಅದ್ಭುತ ಫೋಟೋಗಳು!

shivu.k said...

ಗುರುಪ್ರಸಾದ್,

ಥ್ಯಾಂಕ್ಸ್....

ಸಾಧ್ಯವಾದರೆ ನನ್ನ ಮುಂದಿನ ಮದುವೆ ಲೇಖನವನ್ನು ಓದಿ ಖುಷಿಪಡುತ್ತೀರಿ...

ಜಲನಯನ said...

ಶಿವು, ನನ್ನ ಆತ್ಮೀಯ ಮತ್ತು ಘನಿಷ್ಟ ಮಿತ್ರರಲ್ಲಿ ಮೂವರು ಶಿವ...ಗಳು. ಈಗ ನಿಮ್ಮ ಈಮೈತ್ರಿ...
ನಿಮ್ಮ ಛಾಯಾಗ್ರಹಣದ ವೈಖರಿ ಅತ್ಯದ್ಭುತ..marvellous ಎನ್ನದೇ ವಿಧಿಯಿಲ್ಲ...
ಅದಕ್ಕೆ ಮೆರಗೆನ್ನುವಂತೆ ಚಿತ್ರ ವಿವರಣೆಗಳ ಪದ ಬಳಕೆ ನೀವು ಕಲೆಯಲ್ಲಿ ಪಳಗಿದ ಕೈ ಎಂದು ತೋರುತ್ತದೆ.
ನಿಮ್ಮೆಲ್ಲ ಪ್ರಯತ್ನಗಳಿಗೆ ಅಮೋಘ್ಹ ಜಯ ಮತ್ತು ಯಶಸ್ಸು ಸಿಗಲೆಂದು ಹಾರೈಸುವ...
ಜಲನಯನ

shivu.k said...

ಜಲನಯನ ಸರ್,

ಹಕ್ಕಿ ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು..ಜೊತೆಗೆ ನನ್ನ ಬರವಣಿಗೆಯ ಸೂಕ್ಷ್ಮವನ್ನು ಗುರುತಿಸಿದ್ದೀರಿ...

ನಿಮ್ಮ ಮಾತುಗಳು ನನಗೆ ಟಾನಿಕ್ ನೀಡಿದಂತೆ...
ಧನ್ಯವಾದಗಳು...