Wednesday, January 14, 2009
ತಂಗಿ......ಇದೋ ನಿನಗೊಂದು ಪತ್ರ.....
ವಿಂಧ್ಯಾ ಪುಟ್ಟಿ........... ನಿನಗೇಕೆ ಪತ್ರ ಬರೆಯಬೇಕು ? ನೀನೇನು ಒಡಹುಟ್ಟಿದವಳಾ ? ಅಥವಾ ಹತ್ತಾರು ವರ್ಷದ ಆತ್ಮೀಯ ಗೆಳೆತಿಯ ?
ಈ ಪ್ರಶ್ನೆ ಇಂದು ಬೆಳಿಗ್ಗೆ ನೂರನೆ ಸಲ ಉದ್ಭವಿಸಿತ್ತು. ಅದೇ ಸಮಯಕ್ಕೆ
" ಅಣ್ಣಾ ಗುಡ್ ಮಾರ್ನಿಂಗ್, ಇವತ್ತು ಬೇಗ ಎದ್ದೆ. "
ನಿನ್ನಿಂದ ಮೆಸೇಜು....................
ಮತ್ತೊಂದು ಗಂಟೆ ಕಳೆದಿರಬಹುದು. ನಿನ್ನಿಂದ ಮಿಸ್ಡ್ ಕಾಲ್......................
ಇನ್ನೂ ತಡೆಯಲಾರದೆ ಸಿಟ್ಟಿನಿಂದ ಆ ಪ್ರಶ್ನೆಯನ್ನು ಮತ್ತು ಅದನ್ನು ಹುಟ್ಟಿಸಿದ ಬುದ್ಧಿಯನ್ನು ಕಸದ ಬುಟ್ಟಿಗೆ ಹಾಕಿ ನಿನಗೊಂದು ಪತ್ರ ಬರೆಯತೊಡಗಿದೆ.
ಅಂದ ಮಾತ್ರಕ್ಕೆ ನಾನೇನು ಮಹಾನ್ ಪತ್ರಗಾರನಲ್ಲ. ನಿಜ ಹೇಳಬೇಕೆಂದರೆ ಇದು ನನ್ನ ಜೀವನದ " ಮೂರನೆ " ಪತ್ರ.
ಮೊದಲನೆ ಪತ್ರ ಬರೆದಿದ್ದು ನಾನು ದ್ವಿತೀಯ ಪಿ, ಯು. ಸಿ. ಅಂತಿಮ ಪರೀಕ್ಷೆಯಲ್ಲಿ. ಒಂದು ಪತ್ರ ಬರೆದರೆ ೧೨ ಆಂಕ ಕೊಡುತ್ತಿದ್ದುದರಿಂದ ಬೇಕೊ ಬೇಡವೋ ಒಂದು ವ್ಯವಹಾರದ ಪತ್ರ ಬರೆದು ಎಂಟು ಆಂಕ ಗಿಟ್ಟಿಸಿದ್ದೆ. ಎರಡನೆಯ ಪತ್ರದ ಸಮಯವನ್ನು ಮುಂದೆ ಹೇಳುತ್ತೇನೆ.
ಇಂದಿಗೆ ಸರಿಯಾಗಿ ಒಂದು ತಿಂಗಳು ಹಿಂದೆ........... ಸೋಮವಾರ ನಾನು ಟೂ ವೀಲರ್ನಲ್ಲಿ ಹೋಗುತ್ತಿದ್ದಾಗ ಒಂದು ಫೋನ್ ಕಾಲ್!
" ಹಲೋ ಶಿವಣ್ಣ ನಾನು ವಿಂಧ್ಯಾ ... ಅಂತಾ........
ಮಗುವಿನಂತಹ ದ್ವನಿಯಿರುವ ಹುಡುಗಿಯ ಮಾತು ಮೊದಲ ಸಲ ಕೇಳಿದಾಗ ನನಗೆ ಗೊತ್ತಾಗಲಿಲ್ಲ. ನನ್ನ ಟೂ ವೀಲರ್ ಸೈಡಿಗೆ ಹಾಕಿ. "ಈಗ ಹೇಳಿ ಯಾರು ಅಂತಾ..........." ಎಂದೆ. ಮತ್ತೆ ನಿನ್ನಿಂದ ಅದೇ ಮಾತು.
ಮುಂದುವರಿದು " ನಿಮ್ಮ ನಂಬರನ್ನು ಇಂಟರ್ನೆಟ್ನಿಂದ ಕದ್ದೆ ನಿಮಗೆ ಬೇಸರವಿಲ್ಲವಲ್ಲ " ಎಂದು ಹೇಳಿ ನಿನ್ನ ಪರಿಚಯ ಮಾಡಿಕೊಂಡೆ. ಆಗ ನನಗೆ ಗೊತ್ತಾಗಿದ್ದು ನೀನು ನನ್ನ ಬ್ಲಾಗನ್ನು ಪ್ರತಿನಿತ್ಯ ಓದಿ ಬ್ಲಾಗಿನಲ್ಲಿ ಕಾಮೆಂಟ್ ಮಾಡದೇ ಮೇಲ್ನಲ್ಲಿ ಪ್ರತಿಕ್ರಿಯಿಸುತ್ತಿರುವ ಹುಡುಗಿ......ಅಂತ.
ಸ್ವಲ್ಪ ಹೊತ್ತು ಮಾತಾಡಿದ ನಂತರ ನಿಮ್ಮ ಫೋನ್ ನಂಬರನ್ನು ನಿಮ್ಮ ಗೆಳೆಯರೊಬ್ಬರಿಂದ ಕೇಳಿ ಪಡೆದುಕೊಂಡೆ ಎಂದು ಹೇಳಿ ನಿನ್ನ ನಂಬರನ್ನು ಮೆಸೇಜ್ ಮಾಡಿದೆ.
ಅಮೇಲೆ ಹರಿದಾಡಿತಲ್ಲ ಎಸ್ ಎಮ್ ಎಸ್ ಗಳು............... ಮೊದಲ ದಿನವೇ ನಿನ್ನ ವಿಚಾರ ಸ್ವಲ್ಪ ತಿಳಿಯಿತು. ದಿನದ ಕೊನೆಯಲ್ಲಿ ನಿನ್ನಿಂದ ಬಂತಲ್ಲ ಒಂದು ಮೆಸೇಜು.
" ನನಗೆ ಆಣ್ಣಾ ಇಲ್ಲಾ, ಅದಕ್ಕೆ ನಿಮ್ಮನ್ನೆ ಅಣ್ಣಾ ಅಂತೀನಿ "
"ನನಗೆ ತಂಗಿ ಇಲ್ಲ ನಿನ್ನನ್ನೇ ತಂಗಿ ಅಂತೀನಿ "
ನಾನು ತಕ್ಷಣ ಎಸ್ ಎಮ್ ಎಸ್ ಕಳುಹಿಸಿದ್ದೆ. ಆ ಕ್ಷಣ ಹಾಗೇಕೆ ಮಾಡಿದೆನೋ ಗೊತ್ತಿಲ್ಲ.
ಅನಿರೀಕ್ಷಿತವಾದದ್ದು ಲಭಿಸುವಾಗ
ಪ್ರತಿಕ್ಷಣದಲ್ಲೂ ಅಚ್ಚರಿ ಮತ್ತು ಆನಂದ......
ಆ ರೋಮಾಂಚನ ನಿರೀಕ್ಷಿತವಾದದ್ದು
ಸಿಗುವಾಗ ಇರಲಾರದು........................
ಇಲ್ಲಿ ನನ್ನ ಒಡಹುಟ್ಟಿದ ತಂಗಿಯ ವಿಚಾರವನ್ನು ಸ್ವಲ್ಪ ನಿನಗೆ ಹೇಳಬೇಕಿದೆ.
ಬಾಲ್ಯದಲ್ಲಿ ಅಪ್ಪ ನನಗೆ ಐದು ಪೈಸೆ ಕೊಟ್ಟು ಅವಳಿಗೆ ತಿಂಡಿ ಕೊಡಿಸು ಅಂತ ಕಳಿಸುತ್ತಿದ್ದರು. ನಾನು ಆ ಐದು ಪೈಸೆಯಲ್ಲಿ, ಪೈಸಕ್ಕೊಂದರಂತೆ ಸಿಗುವ ನಮ್ಮ ಪುಟ್ಟ ಪುಟ್ಟ ಕೈ ಬೆರಳುಗಳಿಗೆ ಸಿಕ್ಕಿಸಿಕೊಳ್ಳುವ ಕೋಡುಬಳೆಯನ್ನು ಕೊಂಡುಕೊಂಡು ಅವಳಿಗೆ ಮೂರು ಕೊಟ್ಟು ಎರಡನ್ನು ಜೇಬಿಗಿಳಿಸುತ್ತಿದ್ದೆ.
ಕಲ್ಮಶ ತುಸು ಇಲ್ಲ.......
ನಿರ್ಮಲ ಖುಷಿ ಎಲ್ಲಾ.........
ಒಂದು ಗೂಡಿ ಕಳೆಯುವ ಕ್ಷಣದಲ್ಲಿ.......
ಗೆಳೆತನ ಎಂಥ ಮೋಡಿ...............
ಅವಳಿಗೆ ಬುದ್ದಿ ಬರುವವರೆಗೆ "ಟೋಪಿ" ಹಾಕಿಸಿಕೊಳ್ಳುವ ತಂಗಿಯಾಗಿದ್ದ ಅವಳು ನಾನು ಕಾಲೇಜಿಗೆ ಹೋಗುವ ಸಮಯಕ್ಕೆ ಅಮ್ಮನಾಗತೊಡಗಿದಳು.
ನಮ್ಮ ಮನೆಯಲ್ಲಿ ಬಡತನ. ನಾನಾಗ ಬೆಳಿಗ್ಗೆ ೫ ಗಂಟೆಗೆ ಎದ್ದು ಮನೆ ಮನೆಗೆ ಪತ್ರಿಕೆ ಹಂಚಲು ಹೋಗುತ್ತಿದ್ದೆ. ೬-೩೦ ಕ್ಕೆ ವಾಪಸ್ಸು ಬಂದು ಅರ್ದ ಗಂಟೆಯಲ್ಲಿ ರೆಡಿಯಾಗಿ ೭-೩೦ರ ಹೊತ್ತಿಗೆ ಕಾಲೇಜಿಗೆ ಹೋಗಬೇಕಿತ್ತು.
ನನಗಾಗಿ ಬೇಗ ಎದ್ದೇಳುತ್ತಿದ್ದ ತಂಗಿ ರುಕ್ಕು[ರುಕ್ಮಿಣಿದೇವಿ] ಏನಾದರೂ ತಿಂಡಿ ಮಾಡಿಕೊಡುತ್ತಿದ್ದಳು. ಮನೆಯಲ್ಲಿ ರೇಷನ್ ಇಲ್ಲದ ದಿನ ರಾತ್ರಿ ಉಳಿದ ಅನ್ನ ಸಾರು ಬಿಸಿ ಮಾಡಿ ಅಮ್ಮನಂತೆ ಬಡಿಸುತ್ತಿದ್ದಳು.
ಕೆಲವೊಂದು ದಿನ ಏನು ಇಲ್ಲದೆ ನಾನು ಹಾಗೆ ಹೋಗುವಾಗ
" ಅಣ್ಣಾ ಏನು ಅಂದುಕೋಬೇಡ. ಇವತ್ತು ಏನು ಮಾಡಲಿಕ್ಕಾಗಲಿಲ್ಲ." ವೆಂದಾಗ ನಾನು ಮರು ಮಾತಾಡದೆ ಹೋಗಿಬಿಡುತ್ತಿದ್ದೆ.
ಮದ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಕಾಲೇಜು ಮುಗಿಸಿ ಹೊಟ್ಟೆ ಹಸಿದು ಸುಸ್ತಾಗಿ ಬಂದಾಗ ಬಿಸಿ ಬಿಸಿ ರಾಗಿ ಮುದ್ದೆ ಬಸ್ಸಾರು ಮಾಡಿ ಬಡಿಸಲು ಕಾಯುತ್ತಿದ್ದಳು.
ದೇವರು ಅವಳನ್ನು ನನಗೆ ಯಾಕೆ
ಪರಿಚಯಿಸಿದ ಎಂಬುದಕ್ಕಿಂತ ನನಗೊಂದು
ಪ್ರೀತಿಸುವ ಹೃದಯದ ಅಗತ್ಯವಿತ್ತು ಅಂತ
ದೇವರಿಗೆ ಗೊತ್ತಾದದ್ದಾದರೂ ಹೇಗೆ !!..............
ಹಾಗಂತ ನನಗೆ ಅಪ್ಪ.. ಅಮ್ಮ.. ಅಕ್ಕ.. ತಮ್ಮ.. ಯಾರು ಈ ರೀತಿ ನೋಡಿಕೊಳ್ಳುತ್ತಿರಲಿಲ್ಲವೇ ಅಂತ ನಿನಗೆ ಅನ್ನಿಸಬಹುದು. ಅಪ್ಪ ಸಂಸಾರದ ನೊಗ ಹೊತ್ತಿದ್ದರು. ಅಮ್ಮ ಅಪ್ಪನಿಗೆ ಸಾತಿಯಾಗಿದ್ದಳು. ಅಕ್ಕ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳಾದರೂ ಕೆಲವೇ ದಿನಗಳಲ್ಲಿ ಅಕ್ಕನ ಮದುವೆಯಾಗಿ ತಂಗಿಯೇ ಮನೆಯ ಒಳಗಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಎಲ್ಲರಿಗೂ ಅಮ್ಮ ಆಗಿದ್ದಳು.
ಇಂಥ ತಂಗಿಗೆ ಮದುವೆಯಾಗಿ ಗಂಡನ ಮನೆಗೆ ಹೋದಾಗ ನನ್ನ ಎರಡನೆ ಅಮ್ಮ ದೂರವಾದಳೇನೋ ಅನ್ನಿಸಿತ್ತು. ಕೆಲವೇ ದಿನಗಳಲ್ಲಿ ಅಪ್ಪನಿಗೆ ನಿವೃತ್ತಿಯಾಗಿ ಮನೆಯ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು.
ತಂಗಿಯ ಚೊಚ್ಚಲ ಹೆರಿಗೆ ಕಷ್ಟವಾಗಿ ತಾಯಿ-ಮಗು ಇಬ್ಬರ ಜೀವಕ್ಕೂ ಅಪಾಯ ಅಂತ ಡಾಕ್ಟರಮ್ಮ ಹೇಳಿದಾಗ ನನ್ನ ಪಾಲಿಗೆ ಭೂಮಿ ಬಿರಿದಂತಾಗಿತ್ತು.
ಅವಳಿಗೆ ರಕ್ತ ಕೊಡಬೇಕೆಂದಾಗ ನನ್ನ ರಕ್ತವನ್ನೇ ಕೊಟ್ಟಿದ್ದೆ. ನನ್ನದು " ಎ ಪಾಸಿಟೀವ್ " ಆಗಿದ್ದರಿಂದ ಹೆಚ್ಚು ಮೌಲ್ಯವುಳ್ಳದ್ದು ಅಂತ ಯಾರೋ ಹೇಳಿದ ನೆನಪು. ಆ ಬೆಲೆಯುಳ್ಳ ರಕ್ತವೂ ನನ್ನ ತಂಗಿಯನ್ನು, ಅವಳ ಮಗುವನ್ನು ಉಳಿಸಿಕೊಳ್ಳಲಾಗದೆ ಬೆಲೆ ಕಳೆದುಕೊಂಡಿತ್ತು...........
ಇನ್ನೊಬ್ಬರಿಗೆ ತಿಳಿಯಬಾರದೆಂದು ನಮ್ಮ
ನೋವನ್ನು ಎಷ್ಟು ಬಚ್ಚಿಟ್ಟರೂ..........
ಅದು ಪ್ರಕಟವಾಗದೆ ಇರದು.
ಅಂತೆಯೇ ಪ್ರೀತಿಯೂ.......... !!
ಶವಗಳನ್ನು ಮನೆಗೆ ತಂದ ರಾತ್ರಿ ನಾನು ನನ್ನ ಜೀವನದ ಎರಡನೆ ಪತ್ರವನ್ನು ಅಮ್ಮನ ಪಾತ್ರದಲ್ಲಿದ್ದ ತಂಗಿ ರುಕ್ಮಿಣಿಗೆ ಬರೆದಿದ್ದೆ.
ಆದರೆ ವಿಂಧ್ಯಾ ಪುಟ್ಟಿ............. ನಿನಗೆ ಈ ಮೂರನೆ ಪತ್ರವನ್ನು ಬರೆಯಬೇಕು ಅಂತ ಏಕೆ ಅನ್ನಿಸಿತೋ ಗೊತ್ತಿಲ್ಲ.
ಮೂರು ದಿನಗಳ ಹಿಂದೆ ರಾತ್ರಿ " ಆಣ್ಣಾ ನನಗೆ ಬೇಜಾರಾಗ್ತಿದೆ, ಜ್ವರಾನು ಬಂದಿದೆ " ಬಂತಲ್ಲ ನಿನ್ನಿಂದ ಒಂದು ಮೇಸೇಜು.
" ಯಾಕೊ ಮರಿ ಏನಾಯ್ತು " ನನ್ನ ಕಡೆಯಿಂದ.
" ನನ್ ತಮ್ಮ ನನಗೆ ಹೇಳದೆ ಅವನ ಪ್ರೆಂಡ್ ಮನೆಗೆ ಹೋದ. ನನಗೆ ಒಬ್ಬಳೇ ಅಂತ ಬೇಸರವಾಗಿದೆ ಅಣ್ಣಾ " ನಿನ್ನ ಕಡೆಯಿಂದ..
ನನಗೆ ನಗು ಬಂತು. ಚಿಕ್ಕಂದಿನಲ್ಲಿ ನನ್ನ ತಂಗಿಯೂ ಕೂಡ ಇಂಥದ್ದೇ ಕೆಲವು ಸಣ್ಣ [ಕ್ಷಮಿಸು ಸಣ್ಣದು ಅಂದಿದ್ದಕ್ಕೆ] ಸಣ್ಣ ಕಾರಣಗಳಿಗೆ ನನ್ನ ತಮ್ಮನ ಮೇಲೆ ದೂರು ಹೇಳುತ್ತಿದ್ದುದ್ದು ನೆನಪಾಯಿತು.........ಇದು ಹೀಗೆ ಮುಂದುವರಿದಿತ್ತು.
ನೀನು ಮತ್ತು ನಾನು ಪ್ರತಿದಿನ ಚಿಕ್ಕಮಕ್ಕಳ ಹಾಗೆ, ನಮ್ಮ ದಿನನಿತ್ಯದ ವಿಚಾರಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ನನ್ನೆಲ್ಲಾ ಕೆಲಸದ ನಡುವೆ ನಿನ್ನ ಒಂದು ಫೋನ್ ಕಾಲ್ ಅಥವ ಒಂದು ಎಸ್ ಎಮ್ ಎಸ್ ನನಗೊಂತರ ರಿಲೀಪ್ ಕೊಡಲಾರಂಭಿಸಿತು. ನಿನಗೆ ಹಾಗೆ ಆನ್ನಿಸುತ್ತಿತ್ತಾ ? ಗೊತ್ತಿಲ್ಲಾ.........
ಕೆಲವೊಮ್ಮೆ ನಿನ್ನ ಮಾತು ಕೇಳುತ್ತಿದ್ದಾಗ ಚಿಕ್ಕಂದಿನಲ್ಲಿ ನನ್ನ ತಂಗಿ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಇಬ್ಬರೂ ಹೊರಪ್ರಪಂಚದ ಹರಿವಿಲ್ಲದೆ ಮಾತಾಡುತ್ತಾ, .......ಒಂದು ಕ್ಷಣ............. ನಗು, ಮರುಕ್ಷಣ ಹುಸಿಮುನಿಸು...........ಟೂ ಟೂ..... ಶೇ..................................
ಮಲ್ಲಿಗೆ ಗುಲಾಬಿಗೆ ತನ್ನ ಪರಿಮಳದ
ಒಂದಂಶವನ್ನು ಕೊಟ್ಟಂತೆ................
ಗುಲಾಬಿ ಮಲ್ಲಿಗೆಗೆ ತನ್ನ ಸೌಂದರ್ಯದ
ಕೊಂಚ ಭಾಗವನ್ನು ಕೊಟ್ಟಂತೆ...............
ನೆನಪು ಮರುಕಳಿಸಿತ್ತು. ಅದಕ್ಕಾಗಿ ನಿನಗೆ ಸಾವಿರ ಸಾವಿರ ಥ್ಯಾಂಕ್ಸ್.............
ಇಷ್ಟಕ್ಕೂ ನಾವಿಬ್ಬರೂ ಮುಖಾ ಮುಖಿ ಭೇಟಿಯಾಗೆ ಇಲ್ಲ. ಫೋನಿನಲ್ಲಿ ನಿನ್ನ ಮಾತು ಮತ್ತು ದ್ವನಿ ಮಗುವಿನಂತೆ... ನಿನ್ನ ಕಾಮೆಂಟುಗಳನ್ನು ಓದಿದಾಗ ನನಗನ್ನಿಸಿದ್ದು ನೀನು ಬುದ್ಧಿವಂತೆ. ತುಂಬಾ ಪುಸ್ತಕ ಓದಿದ್ದೀಯಾ ನಿನ್ನ ವಯಸ್ಸಿಗೆ ಮೀರಿದ ಕಷ್ಟಗಳನ್ನು ಅನುಭವಿಸಿದ ಅಮ್ಮನ ಹಾಗೆ ಅಂತ. ನಾನಂತೂ ನಿನ್ನೆರಡೂ ಪಾತ್ರಗಳನ್ನು "Enjoy" ಮಾಡುತ್ತಿದ್ದೇನೆ.
ನನಗೆ ಇವತ್ತು ಬೆಳಿಗ್ಗೆ ಈ ಪತ್ರ ಬರೆಯುವ ತುಡಿತ ಹೆಚ್ಚಾದಾಗ ನಾನು ದಿನಪತ್ರಿಕೆಗಳ ಹಣ ವಸೂಲಿಗಾಗಿ ಮನೆ ಮನೆಗೆ ಅಲೆಯುತ್ತಿದ್ದೆ. ಈ ಪತ್ರ ಬರೆಯಲು ಕಾಗದವಿರಲಿಲ್ಲ. ಕೊನೆಗೆ ನನ್ನ ಹಣ ವಸೂಲಿಯ ಅಂಗೈ ಅಗಲದ ರಸೀತಿಯ ಹಿಂಭಾಗದಲ್ಲೇ ಮನೆ ಮನೆ ಅಲೆಯುತ್ತಾ ಈ ಪತ್ರ ಬರೆದು ಮುಗಿಸಿದೆ.
ಈ ಕಾರಣಕ್ಕೆ ರಸೀತಿಯೆಲ್ಲಾ ಖಾಲಿಯಾಗಿ ಪೂರ್ತಿ ಹಣ ವಸೂಲಿಯಾಗಲಿಲ್ಲ. ಇದಕ್ಕೆ ನೀನು ಕಾರಣ. ಹಣ ವಸೂಲಿ ಸರಿಯಾಗಿ ಆಗದಿದ್ದರೂ ರಸೀತಿಯ ಹಿಂದೆ ನನ್ನ ಭಾವನೆಗಳು ಸಂಪೂರ್ಣ ವಸೂಲಾಗಿದೆಯೆಂಬ ಖಾತ್ರಿಯಾಗಿದೆ........
ಕೊನೆಯ ಮಾತು. ನೀನು ಇದಕ್ಕೆ ಬೈಯಬಹುದು. ಮೊದಲೇ ಸಿಟ್ಟಿನ ಹುಡುಗಿಯೆಂದು ನಿನಗೆ ನೀನೆ ಸರ್ಟಿಫಿಕೇಟ್ ಕೊಟ್ಟುಕೊಂಡಿರುವುದರಿಂದ ಮತ್ತು ನಿನ್ನ ಮೆಸೇಜ್ ಹಾಗು ಮಿಸ್ಸ್ಡ್ ಕಾಲ್ಗೆ ನಾನು ಉತ್ತರಿಸದಿರುವ ಕಾರಣ ಇದೊಂದೆ ಎಂದು ಹೇಳಿದರೂ ನಿನ್ನ ಬಗ್ಗೆ ವಾತ್ಸಲ್ಯ ತುಂಬಿದ ಪ್ರೀತಿಯ ಜೊತೆಗೆ ಭಯವಿದೆಯೆಂದು ಹೇಳುತ್ತಾ ಈ ಪತ್ರವನ್ನು ಮುಗಿಸುತ್ತೇನೆ......
ಬೇಗ ಹುಷಾರಾಗು ತಂಗಿ.........ಇವತ್ತಿನ ದಿನ ನಿನ್ನದಾಗಲಿ...................
ನಿನ್ನ ಪ್ರೀತಿಯ ಅಣ್ಣ...........
ಶಿವು.
-------------------------------------
ನನ್ನ ತಂಗಿ ರುಕ್ಮಿಣಿ ದೇವಿ.
ಇಂದು ಜನವರಿ ೧೬. ನನ್ನ ತಂಗಿ ರುಕ್ಮಿಣಿಯ ಜನ್ಮ ದಿನ. ಅವಳಿದ್ದಿದ್ದರೆ ಇಂದಿಗೆ ೨೯ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಅವಳ ನೆನಪಿಗಾಗಿ ಮತ್ತೊಬ್ಬ ಸಹೋದರಿ ವಿಂಧ್ಯಾಳ ಅನುಮತಿ ಪಡೆದು ಈ ಪತ್ರವನ್ನು ಬ್ಲಾಗಿಗೆ ಹಾಕಿದ್ದೇನೆ......
ಧನ್ಯವಾದಗಳು.
ಶಿವು.
Subscribe to:
Post Comments (Atom)
65 comments:
ಶಿವು ಅವರೆ...
ಏನಂತ ಹೇಳುವುದೇ ಗೊತ್ತಾಗುತ್ತಿಲ್ಲ. ನಿಮ್ಮ ಭಾವನೆಗಳನ್ನು ನಮ್ಮ ಮುಂದಿಟ್ಟಿದ್ದೀರಲ್ಲ, ನಾವೆಲ್ಲ ಸ್ವಲ್ಪ ಸ್ವಲ್ಪ ಹಂಚಿಕೊಳ್ಳುತ್ತೇವೆ ನಿಮ್ಮ ನೋವನ್ನು. ಹೀಗಾದರೂ ನಿಮ್ಮ ಬೇಸರದ ಭಾವಗಳ ಭಾರ ಸ್ವಲ್ಪ ಕಡಿಮೆಯಾಗಲೆಂಬ ಭಾವನೆ.
ಮುಂದೇನೂ ಹೇಳಲು ತೋಚುತ್ತಿಲ್ಲ. ಇಂಥಹ ವಿಚಾರಗಳಿಗೆ ಮೌನವಾಗಿದ್ದು ಬಿಡುತ್ತೇನೆ. ಅದರೂ ಇಷ್ಟು ಹೇಳಬೇಕೆನ್ನಿಸಿತು ಇವತ್ತು.
ಶಿವು....
ನೀವು ಇದೆಲ್ಲವನ್ನೂ ನನಗೆ ಹೇಳಿದ್ದರೂ ..
ಆ ದುಖಃದ ಪರಿ ಅರ್ಥವಾಗಿದ್ದು ಈ ಲೇಖನದಿಂದ...
ಕೆಲವೊಮ್ಮೆ ಆ ದೇವರಿಗೆ ಚೆನ್ನಾಗಿ ಬಯ್ದು ಬಿಡೋಣ ಅನ್ನಿಸುತ್ತದೆ,,,
ಆದರೆ ಆ ಕರುಣಾಳು..
ವಿಂಧ್ಯಾ" ರನ್ನು ಕೊಟ್ಟಿದ್ದಾನಲ್ಲ..
ಅವಳೂ ಜೀವನದಲ್ಲಿ ನೋವುಂಡ ಹುಡುಗಿ...
ನಿಮ್ಮಿಬ್ಬರ ಈ ಬಾಂಧವ್ಯ...
ನೂರು ಕಾಲ ಚಿರಾಯುವಾಗಿರಲಿ...
ನಿಮ್ಮ ದುಖಃ ತ್ರಪ್ತ ಹರದಯಕ್ಕೆ...
ನನ್ನೆರಡು ಕಣ್ಣ ಹನಿಗಳ ಸಾಂತ್ವನ....
ಮನಸ್ಸೆಲ್ಲ ಭಾರವಾಯಿತು...
ಶಿವು...
ಕ್ಷಮಿಸಿ...
ಎಲ್ಲಾ ಅವನ ಆಟ
ಸೂತ್ರದಬೊಂಬೆಗಳಂತೆ ನಾವು
ಕಣ್ಣು ತುಂಬಿ ಬಂತುಬರಹ
ಶಾಂತಲಾ ಮೇಡಮ್,
ಈ ವಿಚಾರದಲ್ಲಿ ನನಗೇನು ಹೇಳಬೇಕೊ ಗೊತ್ತಾಗುತ್ತಿಲ್ಲ....ಪ್ರತಿವರ್ಷ ನನ್ನ ಅಕ್ಕನ ತಮ್ಮನ ಹುಟ್ಟಿದ ದಿನಗಳನ್ನು ಸಂಬ್ರಮದಿಂದ ಆಚರಿಸಿಕೊಳ್ಳುತ್ತೇವೆ...ಅದರೆ ತಂಗಿಯ ಹುಟ್ಟಿದ ದಿನ ಬಂದಾಗ ನಾನಂತೂ ನನಗರಿವಿಲ್ಲದೇ ಭಾವುಕನಾಗುತ್ತೇನೆ.......ಥ್ಯಾಂಕ್ಸ್......
ಪ್ರಕಾಶ್ ಸರ್,
ನನ್ನ ಜೀವನದ ಸಂಪೂರ್ಣ ವಿಚಾರ ನಿಮಗೆ ಹೇಳಿದ್ದೆ....ಈ ವಿಚಾರವನ್ನು ನಿಮಗೆ ಪೂರ್ತಿ ಹೇಳಿರಲಿಲ್ಲ.... ದೇವರು ನನಗೆ ಇಷ್ಟಪಟ್ಟು ಮಾಡುವ ಕೆಲಸ, ಗೆಳೆತಿಯಂತ ಸಂಗಾತಿ.. ಗೆಳೆಯರಿಂದ ಪಡೆಯುವ ನಿರ್ಮಲ ಆನಂದ ...ಇದೆಲ್ಲವನ್ನು ಅತ್ಮತೃಪ್ತಿಯಂದ ಅನುಭವಿಸುವ ಖುಷಿ... .ಈಗ ವಿಂದ್ಯಾಳಂತ ತಂಗಿಯನ್ನು ಕೊಟ್ಟಿದ್ದಾನೆ....
ಒಂದು ಕೊಟ್ಟು....ಕೆಲಸಮಯದ ನಂತರ ವಾಪಸು ಪಡೆದು ಬೇರೊಂದು ಕೊಡುವುದು....ದೇವರ ಕೆಲಸವಾ.......ಗೊತ್ತಿಲ್ಲಾ.....ಥ್ಯಾಂಕ್ಸ್....
ಶಿವು ಅವರೆ...
ನಿಮ್ಮೊಡನೆ ನನ್ನದೂ ಎರಡು ಕಣ್ಣಹನಿಗಳು.
ರಾಘವೇಂದ್ರ ಶರ್ಮ ಸಾರ್,
ನಿಮ್ಮ ಮಾತು ನಿಜ ....
ನನ್ನ ಭಾವನೆಗಳಿಗೆ ಜೊತೆಯಾದುದ್ದಕ್ಕೆ ಥ್ಯಾಂಕ್ಸ್....
ಶಾಂತಲಾ ಮೇಡಮ್,
ಥ್ಯಾಂಕ್ಸ್......
ಶಿವೂ ಸರ್,
"ನಿನ್ನ ನೆನಪಾಗುವುದು ಅತ್ತತ್ತು ಕರಗುವೇನು"
ಈ ಸಾಲುಗಳು ತುಂಬಾ ನೆನಪಾಯಿತು, ಕಣ್ಣೀರ ಜಡಿ ಮಳೆಯಾಗುತ್ತಿದೆ ಇಲ್ಲಿ. ನೆನಪಿಗಳಿಗೊಂದು ದಿವ್ಯ ನಮಸ್ಕಾರ, ನಿಮ್ಮ ತಂಗಿಗೊಂದು ಭಾವ ಪೂರ್ಣ ಶ್ರಧ್ಧಾಂಜಲಿಗಳು. ಮತ್ತೇನು ಹೇಳಲು ಗೊತ್ತಾಗುತ್ತಿಲ್ಲ, ವಿಂದ್ಯ,
ಒಬ್ಬ ಅಣ್ಣನಂತ ಅಣ್ಣನನ್ನು ಪಡೆದಿದ್ದೀರಿ, ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.
-ರಾಜೇಶ್ ಮಂಜುನಾಥ್
ಪ್ರಿಯ ಶಿವು
ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ.ಅಣ್ಣ ತಂಗಿಯ ಬಾಂಧವ್ಯ ಎಷ್ಟು ಮಧುರವಾದದ್ದು ಎಂಬುದು ನಿಮ್ಮ ಮಾತುಗಳಲ್ಲಿ ತಿಳಿಯುತ್ತದೆ.
ನಿಮ್ಮನ್ನು ಅಗಲಿದ ತಂಗಿಗೆ ಭಾವ ಪೂರ್ಣ ಶ್ರಧ್ಧಾಂಜಲಿಗಳು.
ಅಶೋಕ ಉಚ್ಚಂಗಿ.
ರಾಜೇಶ್,
ಸಾವಿರ ಸ್ನೇಹಿತರನ್ನು ಸಂಪಾದಿಸುವ ನಗುವಿಗಿಂತ ಪ್ರೀತಿಸುವ ಒಬ್ಬನನ್ನು ದೊರಕಿಸುವ ಅಳುವೇ ಮಹತ್ತರವಾದುದು.....
ನಿಮ್ಮ ಅಭಿಪ್ರಾಯವನ್ನು ವಿಂದ್ಯಾ ಓದುತ್ತಾಳೆ......
ನಿಮಗೆ ಸಾವಿರ ಥ್ಯಾಂಕ್ಸ್......
ಆಶೋಕ್,
ಭಾವನೆಗಳಿಗೆ ಭಾವನೆಗಳ ಸಾಂತ್ವಾನವಿದ್ದಾಗಲೇ ಅದನ್ನು ಪಡೆದುಕೊಳ್ಳುವ ಮನಸ್ಸು ಹಗುರಾಗುತ್ತದೆ.......ಥ್ಯಾಂಕ್ಸ್......
ಶಿವು ಸರ್
ಮೊದಲ ಬಾರಿಗೆ ನಿಮ್ಮ ಮನೆಗೆ ಬಂದಾಗ ಅವರ ಫೊಟೊ ನೊಡಿ ದುಖಾಃವಾಗಿದ್ದು ಸಹಜ.ಆದರೆ ವಿಂದ್ಯಾ ಅವರಿಗೆ ಬರೆದ ಪತ್ರ ಓದಿ ಅವರ ಬಗ್ಗೆ ಹೆಮ್ಮೆ ಮತ್ತು ದುಖಃ ಇನ್ನೂ ಹೆಚ್ಚಾಗಿದೆ
ಮನಸ್ಸು ಭಾರವಗಿದೆ
ನಿಮ್ಮ ದುಖಃವನ್ನು ಹೆಚ್ಚಿಸಿದ್ದಕ್ಕೆ ಕ್ಷಮಿಸಿ...
ಶಿವು ಅವರೆ
ಹಗುರವಾಗಿ ಪ್ರಾರಂಭವಾದ ನಿಮ್ಮ ಬರಹ ಸಾಂದ್ರವಾಗುತ್ತಾ ರುಕ್ಮಿಣಿಯ ಸೋದರ ಪ್ರೀತಿ ನೋಡಿ ಸಂತಸಪಡುತ್ತಾ ಮಾತೃ ಹೃದಯವನ್ನು ಬೆರಗಿನಿಂದ ನೋಡುತ್ತಾ ಹೋದ ನನಗೆ ಅವರ ಅಕಾಲಿಕ ಅಗಲಿಕೆಯನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
ನಿಮ್ಮ ಛಾಯಾಕನ್ನಡಿಯಲ್ಲಿಇದನ್ನು ಇಳಿಸಿದ್ದರಿಂದ ನಿಮ್ಮ ದುಃಖ ಕಡಿಮೆಯಾಯಿತೆಂದು ಹೇಳಲಾರೆ. ಆದರೆ ನಿಮ್ಮ ನೋವಿನಲ್ಲಿ ಭಾಗಿಯಾಗಿರುವ ಇಷ್ಟೊಂದು ಹೃದಯಗಳಿವೆ ಎಂಬ ಭಾವನೆ ಖಂಡಿತ ನಿಮ್ಮ ನೋವನ್ನು ಸಹನೀಯಗೊಳಿಸುತ್ತದೆ.
ಇನ್ನು ಮುಂದೆ ಪ್ರತಿ ಸಂಕ್ರಾಂತಿಯ ಆಸುಪಾಸು ರುಕ್ಮಿಣಿ ನೆನಪಾಗೇ ಆಗುತ್ತಾರೆ.ಸಂಕ್ರಾಂತಿ ನನ್ನ ಹಿರಿಯಣ್ಣ ಹುಟ್ಟಿದ ದಿನವೂ ಹೌದು.
ಭಾವ ತುಂಬಿದ ನಿಮ್ಮ ಬರಹ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಶಿವು
ಶಿವಣ್ಣ....
ಮನಸು ಭಾರವಾಗಿದೆ. ಏನು ಹೇಳಬೇಕೆ೦ದು ತೋಚುತ್ತಿಲ್ಲ.
ನಿಮ್ಮ ನೋವಿಗೆ ತ೦ಗಿಯ ಪಾತ್ರದ ಮೂಲಕ ಸಾ೦ತ್ವಾನ ನೀಡುವ ’ವಿ೦ದ್ಯಾ’ ಅವರಿಗೆ ನನ್ನ ಕಡೆಯಿ೦ದ ಹೃದಯಪೂರ್ವಕ ಧನ್ಯವಾದಗಳು.
ಅಣ್ಣ -ತಂಗಿ ಪ್ರೀತಿ ಅನುಭವಿಸಿದವರಿಗೇ ಗೊತ್ತು. ಶಿವು, ನಿಮ್ಮ ನೋವು ಹಂಚಿಕೊಳ್ಳುತ್ತೇನೆ..
ಸಲೀಂ,
ನಮ್ಮ ಮನೆಯಲ್ಲಿ ನೀವು ನನ್ನ ತಂಗಿಯ ಬಗ್ಗೆ ಕೇಳಿದಾಗ ನಿಮಗೂ ಮತ್ತು ಪ್ರಕಾಶ್ರವರಿಗೂ ಆಕೆಯ ಸಾವಿನ ಬಗ್ಗೆ ಚುಟುಕಾಗಿ ಹೇಳಿದ್ದೆ.....ನಿಮ್ಮ ಅಭಿಮಾನ ತುಂಬಿದ ಸಾಂತ್ವನಕ್ಕೆ ಥ್ಯಾಂಕ್ಸ್......
ಪಾಲಚಂದ್ರ, ಸುಧೇಶ್, ಹರೀಶ್,
"ಸ್ನೇಹಿತರು ಸಾವಿರ ಮಂದಿ ಇರಬಹುದು. ನಮ್ಮವರೆನ್ನುವರೆನ್ನುವವರು ಕೆಲವೇ ಮಂದಿ. ಅವರು ಗಾಳಿಯಂತೆ ಕಾಣಲು ಸಿಗುವುದಿಲ್ಲ. ಅನುಭವಕ್ಕೆ ದಕ್ಕುತ್ತಾರೆ" ಅಂತ ಎಲ್ಲೋ ಓದಿದ ನೆನಪು. ನನಗೀಗ ಅದೇ ಅನುಭವ. ನಿಮಗೆಲ್ಲಾ ಥ್ಯಾಂಕ್ಸ್.......
ಸುಧೇಶ್ "ವಿಂದ್ಯಾ" ಳಿಗೆ ತಿಳಿಸಿದ ನಿಮ್ಮ ಹೃತ್ಪೂರ್ವಕ ಧನ್ಯವಾದಗಳು ಅವಳಿಗೆ ತಲುಪಿವೆ. ಅವಳು ಇದನ್ನು ನೋಡುತ್ತಿರುತ್ತಾಳೆ......
ಒಬ್ಬ ತಂಗಿಯನ್ನು ಕಳೆದುಕೊಂಡಿರುವಿರಿ, ಆದರೆ ಮತ್ತೊಬ್ಬ ತಂಗಿ ಸಿಕ್ಕಿದ್ದಾಳೆ. ನಿಮ್ಮಿಬ್ಬರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ಬಾಂಧವ್ಯ ನಿಮಗೆ ಹಾಗೂ ನಮಗೆಲ್ಲರಿಗೂ ಆಹ್ಲಾದ ತರುತ್ತಿರಲಿ.
ಚಂದ್ರಕಾಂತ ಮೇಡಮ್,
ಕೆಲವು ನೋವುಗಳನ್ನು ಮರೆಯಲು ಸಾದ್ಯವಿಲ್ಲ. ಮರೆಯಬೇಕೆಂದು ಪ್ರಯತ್ನಿಸಿ ಪುಟ ತಿರುಗಿಸಿದರು ಮತ್ತೆ ಅದೇ ದಿನ ಬರುತ್ತದೆ....ನೆನಪಾಗುತ್ತದೆ. ಈ ರೀತಿ ಹಂಚಿಕೊಂಡು ಹಗುರಾದೆನು ಅಂದುಕೊಂಡರೂ........................
ನಿಮ್ಮ ಪ್ರೀತಿಪೂರ್ವಕ ಸಾಂತ್ವಾನಕ್ಕೆ ಥ್ಯಾಂಕ್ಸ್.....
ಸುನಾಥ್ ಸಾರ್, ಥ್ಯಾಂಕ್ಸ್.....
ಶಿವು,
ಅಣ್ಣ-ತಂಗಿ, ಅಕ್ಕ-ತಮ್ಮ ಸಂಬಂಧಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ತಂಗಿ ರುಕ್ಮಿಣಿ ಅವರನ್ನು ನೀವು ವಿಂದ್ಯಾರಲ್ಲಿ ಕಾಣುತ್ತಿದ್ದೀರಿ....
ನಿಮ್ಮಿಬ್ಬರ ಬಾಂಧವ್ಯ ಹೀಗೇ ಸಾಗಲಿ...ಶುಭವಾಗಲಿ..
ರಾಘವ ಶರ್ಮ,
ನಿಮ್ಮ ಮಾತು ನಿಜ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್...
ಶಿವು ಅವರೆ,
ಮನದುಂಬಿ ಬಂತು. ನಿಜವಾಗಿಯೂ ಇದು ತುಂಬಾ ಬಾವಪೂರ್ಣ ನಮನವೇ ಸರಿ. ನಿಮ್ಮ ತಂಗಿಯ ಪ್ರತಿ ನೀವಿಟ್ಟಿದ್ದ, ಇಟ್ಟಿರುವ ಅಪಾರ ಪ್ರೀತಿಯನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೀರಿ. ವಿಂದ್ಯಾ ನಿಜಕ್ಕೂ ಅದೃಷ್ಟಶಾಲಿ. ರುಕ್ಮಿಣಿಯವರ ಪಾಲಿನ ಕಿಂಚತ್ ಸೋದರ ಪ್ರೀತಿಯನ್ನಾದರೂ ಆಕೆ ಪಡೆಯುತ್ತಿದ್ದಾರೆ. ನಿಮ್ಮಿಬ್ಬರ ಸೋದರ ಬಾಂಧವ್ಯಕ್ಕೆ ಯಾವ ಕುತ್ತೂ ಬರದಿರಲೆಂದು ಹಾರೈಸುವೆ. ಧನ್ಯವಾದಗಳು.
ಏನೂ ಹೇಳಲು ತಿಳಿತಾಇಲ್ಲ. ನೀವು ಪ್ರಕಟಿಸಿ ಒಂದು ಗಂಟೆ ಸಹ ಆಗಿರಲಿಲ್ಲ ನಾನು ಓದಿದಾಗ. ಮನಸ್ಸು ಭಾರವಾಗಿ ಕಣ್ತುಂಬಿ ಬಂತು. ಅಗಲಿದ ಸಹೋದರಿಯನ್ನು ವಿಂದ್ಯಾಳಲ್ಲಿ ಕಾಣುವಂತೆ ಮಾಡಿದ್ದಾನೆ.ನಿಮ್ಮಿಬ್ಬರ ಅಣ್ಣ ತಂಗಿ ಬಾಂಧವ್ಯ ಯಾವಾಗಲೂ ಹೀಗೆ ಇರಲಿ. ನಿಮ್ಮ ಜೀವನದಲ್ಲಿ ಸುಖಸಂತೋಷ ಶಾಂತಿ ನೆಮ್ಮದಿ ತುಂಬಿರಲಿ.
ಬದುಕೆಂಬುದು ಹಾಗಲ್ಲವೇ..? ಮಣ್ಣಾಗುವ ಈ ದೇಹದಲ್ಲಿ ಉಳಿಯುವುದು "ಈ ಆತ್ಮ.." , ಸಂಬಂಧಗಳು..., ಅದರ ಹೊರತಾಹಿ ಏನಿದೆ?. ಹಾಗಾಗಿ ನಿಮ್ಮ ಭಾವನೆಗಳೊಂದಿಗೆ ನಾನೂ ಭಾಗಿ.
"ಆತ್ಮ"ಕ್ಕೆ ಶಾಂತಿ ಸಿಗಲಿ
ತೇಜಸ್ವಿನಿ ಮೇಡಮ್, ಭಾರ್ಗವಿ ಮೇಡಮ್, ಮಹೇಶಣ್ಣ,
ನನ್ನ ತಂಗಿ ರುಕ್ಮಿಣಿಯ ಹುಟ್ಟುಹಬ್ಬದ ನೆನಪಿಗೆ ಇದಕ್ಕಿಂತ ಉತ್ತಮವಾದುದು ಇಲ್ಲ ಎನಿಸಿತ್ತು ನನಗೆ. ನಿಮ್ಮೆಲ್ಲರ ಪ್ರತಿಕ್ರಿಯೆಗಳಿಂದಾಗಿ ನನಗೆ ಕಣ್ತುಂಬಿ ಬಂತು. ಕಣ್ಣು ಮುಚ್ಚಿದರೆ ಅದು ಕಂಬನಿಯಾಗಿ ಕೆನ್ನೆಗೆ ಇಳಿಯುತ್ತಿದೆ.... ಮತ್ತು ಹೃದಯದಲ್ಲಿ ಶಾಶ್ವತವಾಗಿ ಉಳಿಯತ್ತಿದೆ.......ನಿಮಗೆಲ್ಲರಿಗೂ ಥ್ಯಾಂಕ್ಸ್....
ಶಿವು,
ಅನಿರೀಕ್ಷಿತವಾದದ್ದು ಲಭಿಸುವಾಗ
ಪ್ರತಿಕ್ಷಣದಲ್ಲೂ ಅಚ್ಚರಿ ಮತ್ತು ಆನಂದ......
ಆ ರೋಮಾಂಚನ ನಿರೀಕ್ಷಿತವಾದದ್ದು
ಸಿಗುವಾಗ ಇರಲಾರದು.........
ಹಾಗೆಯೇ, ನಮ್ಮ ಭಾವಲೋಕದ ಅತ್ಯಮೂಲ್ಯ ಭಾಗವೊಂದು ಅನಿರೀಕ್ಷಿತವಾಗಿ ಕಳಚಿ ಬಿದ್ದಾಗ ಆಗುವ ದುಃಖ ಇದೆಯಲ್ಲಾ, ಅದು ಮರೆಯುವುದು ಬಹಳ ಕಷ್ಟ.
'ತಂಗಿ' ಎಂಬುದು ಒಂದು ಅದ್ಭುತ ದೈವಿಕ ಕೊಡುಗೆ ಅಲ್ವಾ? ಬುದ್ದಿ ಬರುವರೆಗೆ ಟೋಪಿ ಹಾಕಿಸಿಕೊಳ್ಳುವವಳು ಮುಂದೆ ಅಮ್ಮನ ಪಾತ್ರವಹಿಸುವುದು.........
ದೇವರಿಗೂ ತನ್ನ ತಪ್ಪು ಅರಿವಾಗಿರಬೇಕು, ಅದಕ್ಕೆ ನಿಮ್ಮ ತಂಗಿಯ ಪಾತ್ರಕ್ಕೆ ವಿಂಧ್ಯಾಳನ್ನು ಪರಿಚಯಿಸಿದ್ದಾನೆ. ಇಬ್ಬರಿಗೂ ಅಭಿನಂದನೆಗಳು. ನಿಮಗೆ ತಂಗಿ ಸಿಕ್ಕಿದ್ದಕ್ಕೆ ಹಾಗು ವಿಂಧ್ಯಾಳಿಗೆ ಅಣ್ಣ ಸಿಕ್ಕಿದ್ದಕ್ಕೆ. ನಿಮ್ಮಿಬ್ಬರ ಭಾವ ಸಂಬಂಧ ಸದಾ ಹಸಿರಾಗಿರಲಿ.
ಮನಸ್ಸು ಭಾರವಾಗಿದೆ.
ಶಿವಣ್ಣ,
ಮನ ಕಲುಕುವಂತ ಲೇಖನ...ಹಳೆಯದನ್ನು ನೆನಪಿಸಿಕೊಳ್ಳುತ್ತಾ ದುಃಖ ಪಡಬೇಡಿ.. ಹೊಸ ತಂಗಿ ಸಿಕ್ಕಿದ್ದಾರೆ.
ಶಿವು,
ಅನಿರೀಕ್ಷಿತವಾದದ್ದು ಲಭಿಸುವಾಗ
ಪ್ರತಿಕ್ಷಣದಲ್ಲೂ ಅಚ್ಚರಿ ಮತ್ತು ಆನಂದ......
ಆ ರೋಮಾಂಚನ ನಿರೀಕ್ಷಿತವಾದದ್ದು
ಸಿಗುವಾಗ ಇರಲಾರದು.........
ಹಾಗೇಯೆ, ನಮ್ಮ ಭಾವಲೋಕದ ಅತ್ಯಮೂಲ್ಯ ಭಾಗವೊಂದು ಅನಿರೀಕ್ಷೀತವಾಗಿ ಕಳಚಿ ಬಿದ್ದಾಗ ಆಗುವ ದುಖ ಇದೆಯಲ್ಲಾ.....ಅದು ಬಹಳ ಕಾಲ ಕಾಡುತ್ತಲೇ ಇರುತ್ತದೆ. ಅದು ಸೃಷ್ಟಿಸುವ ನಿರ್ವಾತವನ್ನು ಪೂರ್ತಿ ತುಂಬಲಾಗುವುದಿಲ್ಲ.
'ತಂಗಿ' ಎಂಬುದು ಒಂದು ಅದ್ಭುತ ದೈವಿಕ ಕೊಡುಗೆ ಅಲ್ವಾ? ಬುದ್ದಿ ಬರುವವರೆಗೆ ಟೋಪಿ ಹಾಕಿಸಿಕೊಂಡವಳು ಮುಂದೆ ಅಮ್ಮನ ಪಾತ್ರ ವಹಿಸಿಕೊಳ್ಳುವುದು.........
ದೇವರಿಗೂ ತನ್ನ ತಪ್ಪಿನ ಅರಿವಾಗಿರಬೇಕು...ಅದಕ್ಕೆ ನಿಮ್ಮ ತಂಗಿಯ ಪಾತ್ರಕ್ಕೆ ವಿಂಧ್ಯಾಳನ್ನು ಪರಿಚಯಿಸಿದ್ದಾನೆ. ಇಬ್ಬರಿಗೂ ಅಭಿನಂದನೆಗಳು. ಅಣ್ಣಾ ಇಲ್ಲದ ವಿಂದ್ಯಾಗೆ ಅಣ್ಣಾ ಸಿಕ್ಕಿದ್ದಕ್ಕೆ, ನಿಮಗೆ ತಂಗಿ ರೂಪದ ವಿಂದ್ಯಾ ಸಿಕ್ಕಿದಕ್ಕೆ.
ನಿಮ್ಮೀ ಭಾವಸಂಬಂಧ ಸದಾ ಹಸಿರಾಗಿರಲಿ.
ಮನಸ್ಸು ಭಾರವಾಗಿದೆ.........
ಜಯಶಂಕರ್,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್....
ಜಾವೀದ್,
ನಿಮ್ಮ ಭಾವಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು... ಇದೆಲ್ಲಾ ಹೇಗಾಗುತ್ತೇ ಅಂತ ಗೊತ್ತಾಗೊಲ್ಲ.....ನೋಡುತ್ತಿರುವಂತೆ ಚಲಿಸುವ ಚಿತ್ರಗಳ ಹಾಗೆ ಬಂದು ಹೋಗುತ್ತಿರುತ್ತವೆ.....ಆ ಕ್ಷಣದಲ್ಲಿ ಬದುಕು ನಿಜಕ್ಕೂ ನಿರ್ವಾತ ಸ್ಥಿತಿಯೇ. ದೇವರದು ಯಾವಾಗಲು exchanage ವ್ಯಾಪಾರವೇ...
ಪುಟ್ಟ ಹುಡುಗನೊಬ್ಬ ತನಗೆ ಶೂಗಳಿಲ್ಲವೆಂದು ಆಳುತಿದ್ದವನು ತಕ್ಷಣ ಅಳು ನಿಲ್ಲಿಸಿದ. ಏಕೆಂದರೆ ಬೀದಿಯಲ್ಲಿ ಒಬ್ಬ ತೆವಳುತ್ತಾ ಹೋಗುತ್ತಿದ್ದ. ಅವನಿಗೆ ಕಾಲುಗಳೇ ಇರಲಿಲ್ಲ....ಇಂಥವನ್ನು ನೆನಸಿಕೊಂಡಾಗ ದೇವರು ನಮ್ಮ ವಿಚಾರದಲ್ಲಿ ಕರುಣಾಮಯಿ ಅನ್ನಿಸಿ ಸಮಾಧಾನವಾಗುತ್ತದೆ..... ಥ್ಯಾಂಕ್ಸ್.....
ಶಿವು,
ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಸಂಬಂಧ ತುಂಬ ವೈಯಕ್ತಿಕ, ಆದರೆ ನೋವು ಸಾರ್ವತ್ರಿಕ. ನಿಮ್ಮ ನೋವಿನ ಪತ್ರ ಮನ ಕಲುಕಿದ್ದು ಸುಳ್ಳಲ್ಲ.
-ಕೇಶವ (www.kannada-nudi.blogspot.com)
ಕುಲಕರ್ಣಿ ಸರ್.... ಥ್ಯಾಂಕ್ಸ್.....
ಚೆನ್ನಾಗಿದೆ ಅಂತ ಹೇಳಲು ಮನಸ್ಸು ಬರುತ್ತಿಲ್ಲ.!!!
’ಅನ್ನಾ ಕರೇನಿನಾ’ ದಲ್ಲಿ ಒಂದು ಮಾತಿದೆ.ಸಂತೋಷಕ್ಕೆ ಅಭಿವ್ಯಕ್ತಿ ಒಂದೇ. ಆದರೆ ಪ್ರತಿಯೊಬ್ಬರ ದುಖದ ಅಭಿವ್ಯಕ್ತಿ ಮಾತ್ರ ಬೇರೆ ಬೇರೆಯೇ.
ನಿಮ್ಮ ತಂಗಿಯ ನೆನಪುಗಳಲ್ಲಿ ನಾನೂ ಭಾಗಿ.
ಕಳೆದು ಹೋಗಿರುವ ಒಬ್ಬ ತಂಗಿಯನ್ನು ಇನ್ನೊಬ್ಬಳ ರೂಪದಲ್ಲಿ ನಿಮಗೆ ದೇವರು ಪರಿಚಯಿಸಿದ್ದಾನೆ.. ಈ ನಿಮ್ಮಿಬ್ಬರ ಸಂಬಂಧ ಸದಾ ಹಸಿರಾಗಿರಲಿ.
ಶಿವೂ ಅವರೇ,
.........................................................
ಇಂತ ಸಂದರ್ಭಗಳಲ್ಲಿ ಶಬ್ದಗಳು ಕೃತಕವೆನಿಸುತ್ತವೆ. :(
ನಿಮ್ಮ ಭಾಂದವ್ಯ ಸದಾ ಹಸಿರಾಗಿರಲಿ....
ಪ್ರೀತಿಯಿಂದ
-ವೈಶಾಲಿ
ಶಿವು ಅವರೇ,
ತುಂಬಾ ಭಾವಪೂರ್ಣವಾದ ಲೇಖನ, ನಿಜಕ್ಕೂ ಮನಸ್ಸಿಗೆ ಮುಟ್ಟುವಂತೆ ಬರೆದಿದ್ದೀರ. ನಿಮಗೆ ವಂದನೆಗಳು. ನಿಮ್ಮ ತಂಗಿಯವರ ಆತ್ಮಕ್ಕೆ ಸದಾ ಶಾಂತಿ ಸಿಗಲಿ.
ನಿಮ್ಮ ಸುನಿಲ್
ಶಿವು ಸರ್..
ನಿಮ್ಮ ಬರಹಗಳು ಚೆನ್ನಾಗಿದ್ದಾವೆ..... ನನಗೆ ನನ್ನ ಅಣ್ಣನ ನೆನಪಾಯಿತು ಅವನಿಗೆ ಒಮ್ಮೆ ನಾನು ಸತ್ತ ಕನಸು ಬಿದಿದ್ದಿದಕ್ಕೆ ತುಂಬಾ ಅಳುತಿದ್ದ(ಅಂದಿನ ದುಃಖ ತಡೆಯಲಾಗುತಿರಲಿಲ್ಲ ಅವನಿಗೆ), ಇನ್ನು ನಿಮಗೆ ಹೇಗಾಗಿರಬೇಕು ಎಂದು ನಾ ಊಹಿಸಬಲ್ಲೇ... ಯಾವುದೆ ಹೆಣ್ಣಿಗೆ ಅಣ್ಣ ಅಥವಾ ತಮ್ಮ ಇರಲೆಬೇಕು...
ನಿಮ್ಮ ದುಃಖ ವಿಂಧ್ಯನ ಮೊಲಕ ದೂರವಾಗಲೆಂದು ಬಯಸುತ್ತೆನೆ....ದೇವರು ನಿಮ್ಮ ತಂಗಿಯ ಆತ್ಮಕ್ಕೆ ಶಾಂತಿ ಕೊಡಲೆಂದು ದೇವರಲ್ಲಿ ಪ್ರಾಥಿಸುತ್ತೇನೆ... ನಿಮ್ಮಂತ ಅಣ್ಣನ್ನ ಪಡೆದೆ ಆ ತಂಗಿಯೆ ಪುಣ್ಯವಂತೆ...
ಶಿವೂ ,
ಮೂಕವಾಗಿದೆ ಮನಸು
ಭಾರವಾಗಿದೆ ಹೃದಯ
ಏನೆಂದು ಬರೆಯುವುದೋ
ತಿಳಿಯದಾಗಿದೆ ಈಗ...
ನಮ್ಮ ಅತ್ಯಂತ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಎಂದಿಗೂ ಕಮ್ಮಿಯಾಗುವುದಿಲ್ಲ ಅಲ್ಲವೆ?
ಹಾಗಿದ್ದರೂ ನಿಮ್ಮ ಬೇಸರವನ್ನು ಕೊಂಚವಾದರೂ ಹಂಚಿಕೊಳ್ಳುತ್ತೇವೆ. ಆ ದೇವರು ಒಂದನ್ನು ಕಿತ್ತುಕೊಂಡಾಗ ಮತ್ತೊಂದನ್ನು ಕೊಡುತ್ತಾನಂತೆ. ಬಹುಶಃ ನಿಮಗೆ ’ ವಿಂಧ್ಯಾ’ ಎಂಬ ತಂಗಿ ಸಿಕ್ಕಿದ್ದೂ ಅದಕ್ಕಾಗಿಯೇ ಇರಬಹುದೆ? ನಿಮ್ಮ ಬಾಂಧವ್ಯಕ್ಕೆ ನಮ್ಮ ಶುಭ ಹಾರೈಕೆಗಳು.
ನಿಮ್ಮ ತಂಗಿಯ ನೆನಪಿಗೆ ನನ್ನದೂ ಭಾವಾಂಜಲಿಯ ಅರ್ಪಣೆ !
ಹೇಮಾಶ್ರೀ ಮೇಡಮ್,
ನನ್ನ ಭಾವುಕತೆ ಭಾವನೆಗಳಲ್ಲಿ ಭಾಗಿಯಾಗಿದ್ದಕ್ಕೆ ಥ್ಯಾಂಕ್ಸ್...
ಹರೀಶ್,......ಥ್ಯಾಂಕ್ಯೂಉಉಉಉಉಉಊ...
ವೈಶಾಲಿ ಮೇಡಮ್,
ನಿಮ್ಮ ಮೌನದ ಸಾಂತ್ವಾನ ನನ್ನ ತಂಗಿಯ ಅತ್ಮವನ್ನು ನವಿರಾಗಿ ಮುಟ್ಟುತ್ತದೆ...ಥ್ಯಾಂಕ್ಸ್......
ಸುನಿಲ್, ಥ್ಯಾಂಕ್ಸ್........
ಮನಸು,
ಒಬ್ಬನೇ ಇದ್ದರೇ ನಾನು ನಡೆಯುವ ರಸ್ತೆ ಬೇಗ ಕೊನೆಗೊಳ್ಳುತ್ತದೆ.....ಅದರೆ ಜೊತೆ ನೀನು ಇದ್ದರೇ ರಸ್ತೆ ಕೊನೆಯಾಗುವುದಿಲ್ಲವಂತೆ.....ಅದಕ್ಕೆ ಬಾಲ್ಯದಲ್ಲಿ ಸಹೋದರ-ಸಹೋದರಿಯರು ಜೊತೆಗಿರಬೇಕಂತೆ...ಗುರಿಯೆಂಬ ದಾರಿ ಸಾಗಿಸಲು...
ನಿಮ್ಮ ಅಣ್ಣ ತಂಗಿ ಪ್ರೀತಿ ಸದಾ ಕಾಲ ಅಚ್ಚ ಹಸುರಾಗಿರಲಿ......
ಧನ್ಯವಾದಗಳು.......
ಚಿತ್ರಾ ಮೇಡಮ್,
ಭಾವನೆಗಳಿಲ್ಲದ ಬದುಕು ಬೆಂಗಾಡಿನಂತೆ ಅನ್ನುತ್ತಾರೆ....ಭಾವನೆಗಳನ್ನು ಹಂಚಿಕೊಳ್ಳಲು ಅಣ್ಣ-ತಂಗಿ, ಅಕ್ಕ-ತಮ್ಮ ಇರಬೇಕಂತೆ... ಕೆಲವೊಮ್ಮೆ ಈ ವಿಚಾರದಲ್ಲಿ ದೇವರ ತಕ್ಕಡಿಯ ವ್ಯತ್ಯಾಸಗಳಾದಾಗ ಹೀಗಾಗುತ್ತದಂತೆ....ನಂತರ ಅವನೇ ಎಚ್ಚೆತ್ತುಕೊಂಡು ವಿಂಧ್ಯಾಳನ್ನು ಕೊಡುವ ಮೂಲಕ ತಕ್ಕಡಿ ಸರಿಮಾಡುತ್ತಾನಂತೆ.......ನನ್ನ ಭಾವನೆಗಳಿಗೆ ಜೊತೆಯಾದುದ್ದಕ್ಕೆ ......ತುಂಬಾ ಧನ್ಯವಾದಗಳು....
ನನಗೆ ಮಾತೇ ಹೊರಡುತ್ತಿಲ್ಲ ಶಿವು ಸರ್...ಇವತ್ತು ರಾತ್ರಿ ನಿದ್ದೆ ಬರತ್ತೋ ಇಲ್ವೋ ಅದೂ ಗೊತ್ತಿಲ್ಲ..ಮನಸ್ಸು ಕಲಕುವಂಥಾ ಲೇಖನ.ವಿಂಧ್ಯಾ ಬೇಗ ಹುಶಾರಾಗಲಿ.
ಲಕ್ಷ್ಮಿ ಮೇಡಮ್,
ನಿಮ್ಮ ಅತ್ಮೀಯ ಭಾವುಕ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್....ನನ್ನ ಪತ್ರ ಅವಳಿಗೆ ತಲುಪಿದ ದಿನವೇ ಅವಳು ಹುಶಾರಾಗಿ ಹೋದಳು.......ನಿಮ್ಮೆಲ್ಲರ ಪ್ರತಿಕ್ರಿಯೆಯನ್ನು ಅವಳು ಓದುತ್ತಿರುತ್ತಾಳೆ....ಬರುತ್ತಿರಿ....ಥ್ಯಾಂಕ್ಸ್....
ಬ್ಲಾಗ್ ಅಂಡ್ ಮಿ. ಜ್ಯೋತಿ ಹೇಳಿದರು.,
ನಿಮ್ಮ ಬ್ಲಾಗ್ ಓದಿದೆ, ಏನು ಹೇಳೋದೋ ಗೊತ್ತಾಗ್ಲಿಲ್ಲ.
ಮನ ಮುಟ್ಟುವಂತಾ ಲೇಖನ.
ನನಗೂ ಕಳೆದು ಹೋದ ದಿನಗಳು ನೆನಪಾಗುತ್ತಿವೆ.
ದಿನ ಹೋದಂತೆ ಎಲ್ಲಾ ದುಖ ತಾನೇ ತಾನಾಗಿ ಕಡಿಮೆ ಆಗುತ್ತದೆ ಅನ್ನುವುದು ನನ್ನ ಸ್ವಂತ ಅನುಭವ. ಕಾಲಾಯ ತಸ್ಮೈ ನಮಃ
ಈಗ ವಿಂಧ್ಯಾ ತಂಗಿಯಾಗಿ ಬಂದಿರುವುದರಿಂದ ನೋವು ಮರೆತು ಆನಂದವಾಗಿರಿ.
ಮುಂದೆ ಏನು ಹೇಳುವುದಕ್ಕೂ ನನಗೆ ಮಾತು ಬರುತ್ತಿಲ್ಲ.
ನಾಗೇಶ್ ಹೆಗಡೆ ಹೇಳಿದರು.
ಪ್ರೀತಿಯ ಶಿವು,
ಓದಿದೆ. ಭಾವಪೂರ್ಣವಾಗಿದೆ. ಆದರೆ ತುಸು ಅಪೂರ್ಣವೂ ಆಗಿದೆ ಅಂತನಿಸುತ್ತದೆ. ಕೊನೇ ವಾಕ್ಯ, 'ಬೇಗ ಹುಷಾರಾಗು ತಂಗಿ' ಎಂದಿದ್ದಿದ್ದರೆ ಅದಕ್ಕೊಂದು ಪೂರ್ಣವಿರಾಮ ಸಿಗುತ್ತಿತ್ತು. ಅದನ್ನು ಓದುಗರ ಕಲ್ಪನೆಗೇ ಬಿಟ್ಟಿದ್ದರಿಂದ, ಕೆಲವರಿಗೆ ಆ ಕಲ್ಪನೆ ಬರದೇ ಇರಬಹುದಾದದ್ದರಿಂದ ಅಪೂರ್ಣ, ಅಸಂಗತ ಎನ್ನಿಸಬಹುದು. ಟಚಿ ಕಥಾನಕ. ಕೀಪಿಟಪ್.
'ವಿಂದ್ಯ' ಎಂದು ತಪ್ಪಾಗಿ ಬರೆದಿದ್ದೀರಿ. ಅದು 'ವಿಂಧ್ಯ'. ( ವಿಧ್ಯೆ ಅನ್ನೋದು ಎಷ್ಟು ತಪ್ಪೋ 'ವಿಂದ್ಯೆ' ಅನ್ನೋದು ಅಷ್ಟೇ ತಪ್ಪೂ).
ಹಾಯ್,
ತುಂಬ ಪ್ರೀತಿ, ಅಕ್ಕರೆಯಿಂದ ಪತ್ರ ಬರೆದಿದ್ದೀರಿ; ಮಧ್ಯೆ ಮಧ್ಯೆ ಕವನದ ರೀತಿ ಇದ್ದ ಸಾಲುಗಳು ತುಂಬ ಇಷ್ಟವಾದವು.ಬದುಕೆಂದರೆ ಹೀಗೇ ಅನಿರೀಕ್ಷಿತಗಳ ಸರಮಾಲೆ ಅಲ್ಲವೇ? ನಮಗೆ ಬೇಕಾದವರನ್ನು ಕಳೆದುಕೊಂಡಾಗ ಅದನ್ನು ಭರಿಸುವುದು ತುಂಬ ಕಷ್ಟಾನೆ . . .ಆದರೂ ಮತ್ಯಾವುದೋ ಮತ್ಯಾರದೋ ರೂಪದಲ್ಲಿ ಸಿಗಬಹುದು . . .ಗುರುತುಸುವ ಪ್ರೀತಿಸುವ ಸಹೃದಯತೆ ಬೇಕಷ್ಟೆ.
ಮಾತು ಮಾತಿಗೂ ಅಣ್ಣಾ ಒಂದು ಕೂಗುವ ತಂಗಿ, ಅಮ್ಮನಂತೆ ತಂಗೀನ ಪ್ರೀತಿಸುವ ಅಣ್ಣ...ಪ್ರೀತಿಯಿಂದ ತೋಯುವ ಎರಡೂ ಹೃದಯಗಳು..ಇದರಿಂದ ಸಿಗುವ ಸಂತೋಷ, ಮಡಿಲ ಅಕ್ಕರೆ ಬಹುಶಃ ಎಲ್ಲೂ ಸಿಗಲಾರದು. ಮೌನ, ಮಾತಿನಲ್ಲಿ ತಂಗಿಯ ಪ್ರೀತಿಯ ಸವಿಯುವ ಅಣ್ಣಂದಿರಿದ್ದರೆ ಬದುಕೆಷ್ಟು ಚೆನ್ನ ಅಲ್ವಾ? ಶಿವಣ್ಣ ..ನಿಮ್ಮ ತಂಗಿ ವಿಂಧ್ಯಾಳ ರೂಪದಲ್ಲಿ ಬಂದಿದ್ದಾಳೆ. 'ಒಂದು ಬಾಗಿಲು ಮುಚ್ಚಿದರೆ, ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ' ರಸ್ಕಿನ್ ಬಾಂಡ್ ಮಾತು ನೆನಪಾಯಿತು.ನಾವೇನನ್ನೋ ಕಳೆದುಕೊಳ್ತಿವಿ..ಆದರೆ ಎಲ್ಲೋ ಒಂದು ಕಡೆ ಖಾಲಿ ಜಾಗನ ದೇವ್ರು ತುಂಬಿಸ್ತಾನೆ. ಅಕ್ಕರೆ, ಮುಗ್ಧತೆ, ಪ್ರಾಮಾಣಿಕ ಎಲ್ಲವನ್ನೂ ಜೊತೆಜೊತೆಗೆ ಅದ್ದಿ ತೆಗೆದ ನಿಮ್ಮ ಪತ್ರ ಓದಿ..ನಾ ಸಾಂತ್ವಾನ ಹೇಳಲ್ಲ..ಅಣ್ಣ-ತಂಗಿ ಬದುಕಿನಲ್ಲಿ ನಿತ್ಯ ನಗೆಬೆಳು ತುಂಬಲಿ. ವಿಂಧ್ಯಾ ನಿಮ್ಮನ್ನು ತುಂಬಾ ಪ್ರೀತಿಸುವ ತಂಗಿಯಾಗಿರ್ತಾಳೆ ಅನ್ನೋ ಭರವಸೆ ನನ್ನದು...ನನ್ನದೂ ಒಂದು ಅಕ್ಕರೆಯ ಸಾಥ್,ಶುಭ ಹಾರೈಕೆ. ಸಾಧ್ಯವಾದ್ರೆ ನಾನು ಹಿಂದೆ ಬರೆದ 'ಲೇ ಅಣ್ಣ ಬೇಗ ಬಾರೋ' ಲೇಖನ ಓದಿ.
-ಪ್ರೀತಿಯಿಂದ,
ಚಿತ್ರಾ
ಶಿವು, ತಡವಾಗಿ ಓದಿದೆ ಇದನ್ನ.
ಏನು ಹೇಳುವುದು ಅಂತ ತಿಳಿಯುತ್ತಿಲ್ಲ. ಇದನ್ನು ಹಂಚಿಕೊಂಡದ್ದಕ್ಕೆ ನಿಮಗೆ ಧನ್ಯವಾದಗಳು.
ಗ್ರೀಷ್ಮಾ ಮೇಡಮ್,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.....ಗೆಳೆಯರೊಬ್ಬರು ಹೇಳಿದ್ದರು...ಪ್ರೀತಿಸುವವರು ಸಿಕ್ಕಾಗ ಪಡೆದುಕೊಳ್ಳಿ ಕಳೆದುಕೊಳ್ಳಬೇಡಿ....ಕಳೆದುಕೊಂಡರೆ ಮತ್ತೆ ಸಿಕ್ಕೊಲ್ಲ ಅಂದಿದ್ದರು....ನಾನು ಅದನ್ನು ಅನುಸರಿಸುತ್ತಿದ್ದೇನೆ....ಪತ್ರದ ನಡುವೆ ಕವನದಂತ ಸಾಲುಗಳು ನಾನು ತುಂಬಾ ಇಷ್ಟಪಟ್ಟು ಅನುಭವಿಸಿ ಬರೆದಿದ್ದು. ಅದನ್ನು ನೀವು ಮೆಚ್ಚಿದ್ದು ನನಗೆ ಖುಷಿಯಾಯಿತು.....
ತಂಗಿ ಚಿತ್ರಾ....
.................................
................................
..................................
......................................................................
......................................
.................................
...........................................................ಥ್ಯಾಂಕ್ಸ್.....
ಶಿವು ಸರ್,
ಮನಸ್ಸು ಭಾವುಕವಾಯಿತು ಓದಿ.
ಉದ್ದೇಶಗಳನ್ನಿಟ್ಟುಕೊಂಡೇ ಪರಿಚಯ ಬೆಳೆಸಿಕೊಂಡು ನಾಟಕವಾಡುವವರ ಲೋಕದಲ್ಲಿ ಕೆಲವು ಸಂಬಂಧಗಳು ಬರೀ ಪ್ರೀತಿ ಬೇರಿನಿಂದಲೇ ಹುಟ್ಟಿರುತ್ತವೆ.ನಮ್ಮ ಬದುಕಿನ ಸೋಲು,ಗೆಲುವು ಬೀಳು,ಹಾರು ಗಳಲ್ಲೆಲ್ಲ ಅವರ ದೃಷ್ಟಿಕೋನ ಒಂದೇ ಇರುತ್ತದೆ, ’ಇವನಿಗೆ ಒಳ್ಳೆಯದಾಗಲಿ” ಎಂದಷ್ಟೇ!
ಅಂಥವರು ಸಿಕ್ಕುವುದು ನಮ್ಮ ಅದೃಷ್ಟವೆಂದೇ ನನ್ನ ಭಾವನೆ.
ರಂಜಿತ್,
ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.....ಈ ವಿಚಾರದಲ್ಲಿ ನಾನು ಮತ್ತೇನು ಹೇಳಲಾರೆ.....ಬರುತ್ತಿರಿ....
ವಸುದೇಂಧ್ರ ಹೇಳಿದರು....
ಶಿವೂ,
ತಂಗಿಯ ಲೇಖನ ಜಾಸ್ತಿ ಭಾವುಕವಾಗಿದೆ. ಇನ್ನಷ್ಟು ಸಂಯಮ ವಹಿಸಿದ್ದರೆ ಚೆನ್ನಾಗಿತ್ತು.
ವಸು
ಶಿವೂ ಸಾರ್ , ಏನ್ ಕಾಮೆಂಟ್ ಮಾಡ್ಲಿ ಅಂತ ಗೊತ್ತಾಗ್ತಾ ಇಲ್ಲ ..
ಯಾಕೋ ಗೊತ್ತಿಲ್ಲ ಮೂರೂ ಸಲ ಓದಿದೆ
ಸಂತೋಷ್,
ನೀವು ಮತ್ತೆ ಮತ್ತೆ ಓದಿದ್ದು ನನಗೆ ಖುಷಿಯಾಯಿತು....ನಾನು ಬರೆದ ಮೇಲೆ ಅದೆಷ್ಟು ಸಲ ಓದಿದ್ದೇನೊ ಗೊತ್ತಿಲ್ಲ.....ನೀವು ಏನು ಕಾಮೆಂಟ್ ಮಾಡದಿದ್ದರೂ ನನಗೆ ಅರ್ಥವಾಗುತ್ತೆ.....ಕೆಲವೊಮ್ಮೆ ಮೌನವೇ ಹೆಚ್ಚು ಮಾತಾಡುತ್ತೆ....ಕೊನೆಯವರಾಗಿ ನೀವು ಬಂದರೂ ನನಗೆ ಸಂತೋಷವಾಗಿದೆ.....ಥ್ಯಾಂಕ್ಸ್.....
ಹಾಯ್ ಶಿವು,
ನೆನಪುಗಳು ಮಾಸದ ಗಾಯಗಳಿದ್ದಂತೆ.
ಅದರಲ್ಲೂ ನೋವುಣಿಸಿದ ನೆನಪುಗಳು, ಯಾವಾಗಲು ಕಣ್ಣಿರು ಬಾರಿಸುತ್ತಲೇ ಇರುತ್ತದೆ.
ನಿಮ್ಮ ಲೇಖನ ಓದಿ ದುಃಖವಾಯಿತು.
ಸಾಂತ್ವನ ಹೇಳುವಸ್ಟು ದೊಡ್ಡವನು ನಾನಲ್ಲ
ಕ್ಷಮಿಷು ....
ಶಿವುಪ್ರಕಾಶ್,
ಬ್ಲಾಗಿಗೆ ಸ್ವಾಗತ...ಮೊಟ್ಟ ಮೊದಲಿಗೆ ನನ್ನ ಅಚ್ಚುಮೆಚ್ಚಿನ ಲೇಖನಕ್ಕೆ ಬಂದಿದ್ದೀರಿ.....ಥ್ಯಾಂಕ್ಸ್......
ನನ್ನ ಭಾವನೆಗಳಿಗೆ ಜೊತೆಯಾದುದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ.....
ಶಿವೂ ಸರ್ ಏನ್ ಹೇಳಬೇಕೋ ಗೊತ್ತಾಗ್ತಿಲ್ಲ
ನಿಮ್ಮ ಈ ಲೇಖನ ಓದಿ ನನಗೂ ಅಣ್ಣ ಇಲ್ಲ ಅಲ್ವಾ ಅನ್ನೋ ಒಂದು ಭಾವನೆ ಕಾಡಲು ಶುರುವಾಗಿದೆ. ನಿಮ್ಮ ಲೇಖನ ಓದುತ್ತಾ ಕಣ್ಣು ಮನಸ್ಸು ಒದ್ದೆ ಮಾಡಿಕೊಂಡೆ. ನಿಮ್ಮ ಮನಸ್ಸಿನ ಭಾವನೆಗಳನ್ನ ಪತ್ರದ ಮುಖೇನ ನಮ್ಮಲ್ಲಿ ಹಂಚಿ ಕೊಂಡಿದ್ದಕ್ಕೆ ಧನ್ಯವಾದಗಳು. ಯಾರೋ ಒಬ್ಬರು ಪರಿಚಯನೇ ಇಲ್ಲದವರು ಮೊದಲ ಮಾತಲ್ಲೇ ನಾವು ಕಳಕೊಂಡ ಒಂದು ಭಾವನೆನ ಮತ್ತೆ ಚಿಗುರಿಸಬಲ್ಲರು. ನಿಮ್ಮ ಜೀವನದಲ್ಲಿ ವಿಂದ್ಯಾ ಆ ಕೆಲಸ ಮಾಡಿದ್ದರೆ ನನ್ನ ಕಡೆಯಿಂದ ಅವರಿಗೂ ಧನ್ಯವಾದಗಳು. ಈ ಅಣ್ಣ ತಂಗಿಯ ಪ್ರೀತಿ ಯಾವತ್ತು ಹೀಗೆ ಇರಲಿ . ಇಷ್ಟು ಮಾತ್ರ ಕೇಳಿಕೊಳ್ಳಬಲ್ಲೆ.
ಭಾವನಲಹರಿ,
ನೀವು ನನ್ನ ಬ್ಲಾಗಿಗೆ ಬಂದು ಈ ಲೇಖನಕ್ಕೆ ಪ್ರತಿಕ್ರಿಯಿಸಿದ ತಕ್ಷಣ ನೀವ್ಯಾರು ಅಂತ ತಿಳಿಯಲು ನಿಮ್ಮ ಬ್ಲಾಗಿಗೆ ಹೋದೆ...ರೋಹಿಣಿ ಎನ್ನುವ ಪುಟ್ಟ ಪುಟಾಣಿ ಮುಖದ ಸಹೋದರಿ ಎನಿಸಿತು.....ಒಬ್ಬ ಸಹೋದರನ ಭಾವನೆಗಳು ಮತ್ತೊಬ್ಬ ಸಹೋದರಿಗೆ ಬೇಗ ಅರ್ಥವಾಗುತ್ತದೆ....ನೀವು ನನ್ನ ಭಾವನೆಗಳಿಗೆ ಜೊತೆಯಾಗಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....
ನನಗೂ ಒಬ್ಬ ತಂಗಿಯಿದ್ದಾರೆ. ಅವರ ಹೆಸರು ನಿತಕ್ಕ {ನಿತ್ಯಶ್ರೀ},ಕ್ಸೆರಾಕ್ಸ್ ಕಂಪನಿಯ ಕಾರಿನಲ್ಲಿ ಸಹೋದ್ಯೋಗಿಗಳು ಅಂಕಲ್, ಸರ್ ಎಂದು ಕರೆದಾಗ ನಿತಕ್ಕ ಮಾತ್ರ ನನ್ನನ್ನು ಅಣ್ಣ ಎಂದು ಕರೆದರು ಮತ್ತು ತುಂಬಾ ಅಕ್ಕರೆಯಿಂದ ನೋಡಿಕೊಂಡರು. ವಯಸ್ಸಿನಲ್ಲಿ ಚಿಕ್ಕವರಿದ್ದರೂ ನೆಲಮಂಗಲದಲ್ಲಿರುವ ಅಕ್ಕನನ್ನು ನೆನಪಿಸುತ್ತಾರೆ.ನಾವಿಬ್ಬರೂ ಬೇರೆ ಕಂಪನಿಗೆ ಸೇರಿದಾಗ ತುಂಬಾ ಬೆಜಾರಾದರೂ ಇನ್ನೂ ಸಂಪರ್ಕದಲ್ಲಿದ್ದೀರ ಎಂಬ ಸಮಾಧಾನ ಇದೆ. ನನ್ನ ಮದುವೆಯ ನಂತರ ಮನೆಗೆ ಕರೆದುಕೊಂಡು ಹೋಗುವೆ ಮತ್ತು ನಾನು ನೀವು ಮತ್ತು ಅತ್ತಿಗೆ ಮೂವರು ಇಡ್ಲಿ ವಡೆ ತಿನ್ನೋಣ. ಹಂಚಿಕೊಳ್ಳಲು ಬ್ಲಾಗ್ ಸಾಕಾಗುತ್ತಿಲ್ಲ.
Post a Comment