Sunday, October 19, 2008

ನಾಚಿಕೆಯಿಲ್ಲದ ಪಾರಿವಾಳ ಕುಟುಂಬ

ನನ್ನ ಮಡದಿ 'ರ್ರೀ ಅಡುಗೆ ಮನೆಯಲ್ಲಿ ಏನೋ ಸೇರಿಕೊಂಡಿದೆ ನೋಡಿ ಬನ್ನಿ" ಎಂದು ನನ್ನನ್ನೂ ಕರೆದಳು. ನಾನು ಹೋಗಿ ನೋಡಿ ಏನು ಇಲ್ಲದಿರುವುದನ್ನು ನೋಡಿ " ಏನೂ ಇಲ್ವಲ್ಲೋ" ಅಂದೆ. "ಅಯ್ಯೋ ನೀವೊಂದು ನೀವಿಲ್ಲಿ ನಿಂತು ಸರಿಯಾಗಿ ಕೇಳಿಸಿಕೊಳ್ಳಿ........ಸ್ವಲ್ಪ ತಡೆದು "ನೋಡಿದ್ರಾ ಒಂಥರಾ ಶಬ್ದ ಬರ್ತಿದೆ ಅಲ್ವಾ, ಕೇಳಿಸಿಕೊಳ್ಳಿ" ಎಂದಳು.
ನಾನು ಸ್ವಲ್ಪ ಹೊತ್ತು ಮೈಯೆಲ್ಲಾ ಕಿವಿಯಾಗಿಸಿಕೊಂಡಾಗ "ಗುಟುರ್ ಗುಟುರ್, ಗುಟುರ್........ " ಎನ್ನುವ ಶಬ್ದ ಕೇಳಿಸಿತು. ತಕ್ಷಣ ನನಗೆ ಅದು ಪಾರಿವಾಳದ ಸದ್ದೆಂದು ಗೊತ್ತಾಯಿತು. ನಾನು ಆಡುಗೆ ಮನೆಯ ಮೇಲೆ ಕೆಳಗೆ ಸಜ್ಜೆ, ಎಲ್ಲಾ ಜಾಗದಲ್ಲಿ ಹುಡುಕಿದೆ. ಎಲ್ಲಾದರೂ ನಮಗೇ ಗೊತ್ತಾಗದ ಹಾಗೆ ಬಂದು ಸೇರಿಕೊಂಡಿರಬಹುದಾ ಎಂದು. ಎಲ್ಲಿಯೂ ಇರಲಿಲ್ಲ. ಆದರೆ ಶಬ್ದ ಮಾತ್ರ ಬರುತ್ತಿತ್ತು. ಸ್ವಲ್ಪ ಹೊತ್ತು ನಿದಾನವಾಗಿ ಕೇಳಿಸಿಕೊಂಡಾಗ ತಿಳಿಯಿತು. ಪಾರಿವಾಳ ಶಬ್ದ ಮಾಡುತ್ತಿರುವುದು ಆಡುಗೆ ಮನೆಯ ಕಿಟಕಿಯ ಹೊರಗೆ ಅಂತ.
ತಕ್ಷಣ ಹೊರಬಂದು ನಮ್ಮ ಮನೆಯ ಟೆರೆಸಿಗೆ ಹೋಗಿ ನೋಡಿದರೆ, ಅಡುಗೆ ಮನೆಯ ಕಿಟಕಿಯ ಹೊರಗೆ ಸಜ್ಜೆ ಮೇಲೆ ನಿದಾನವಾಗಿ ಗೂಡುಕಟ್ಟಲು ಕಸ ಕಡ್ಡಿಗಳನ್ನು ತಂದು ಹಾಕುತ್ತಿದೆ. ಒಂದು ವಾರದ ನಂತರ ನೋಡಿದರೆ ಅದರ ಗೂಡು ಸಿದ್ದವಾಗಿದೆ. ಆ ಗೂಡಿಗೆ ಒಮ್ಮೆ ಗಂಡು ಮತ್ತೊಮ್ಮೆ ಹೆಣ್ಣು ಎರಡು ಬಂದು ಹೋಗುವುದು ನಡೆದೇ ಇತ್ತು. ಇತ್ತ ನಾವು ಗಣೇಶ ಹಬ್ಬಕ್ಕೆ ತುಮಕೂರಿಗೆ ಅಣ್ಣನ ಮನೆಗೆ ಹೋಗಿದ್ದವರು ವಾಪಸು ಬಂದು ನೋಡುತ್ತೇವೆ, ಆಗಲೇ ಎರಡು ಮೊಟ್ಟೆ!.
ಸರಿ ಶುರುವಾಯ್ತಲ್ಲ ಸುಧ್ದಿ. ಪಕ್ಕದ ಮನೆಯವರು, ಮಹಡಿ ಮನೆಯವರು, ಕೆಳಗಿನವರು ಹೊರಗಿನವರು ನೆಂಟರು ಒಬ್ಬೊಬ್ಬರಾಗಿ ಬಂದು ನೋಡಿ "ಆಹಾ ಎಷ್ಟು ಚೆನ್ನಾಗಿದೆ ಮೊಟ್ಟೆಗಳು, ಮರಿ ಹಾಕೋದು ಯಾವಾಗ? ಮಳೆ ಬಂದಾಗ ಹೇಗಿರುತ್ತವೆ?! ಇವಕ್ಕೆ ಮಳೆಗಾಲದಲ್ಲಿಯೇ ಗೂಡು ಕಟ್ಟಬೇಕಾಗಿತ್ತ? ನಾವು ನಮ್ಮ ಮನೆಯನ್ನು ಮಳೆಗಾಲದಲ್ಲಿ ಕಟ್ಟಲು ಶುರುಮಾಡಿ ಪಟ್ಟ ಕಷ್ಟ ಒಂದೊರೆಡಲ್ಲ, ಹೀಗೆ ನಾನಾ ಪ್ರಶ್ನೋತ್ತರಗಳು. ನನಗಂತೂ ಯಾಕದ್ರೂ ಗೊತ್ತಾಯ್ತೋ ಇವರಿಗೆಲ್ಲಾ, ಗಂಟೆಗೊಂದು ಬಾರಿ ಗಳಿಗೆಗೊಂದು ಬಾರಿ ನೋಡಿಕೊಂಡು ಹೋಗ್ತಾರಲ್ಲ! ಇವರಿಂದ್ ಅವಕ್ಕೆ ತೊಂದರೆಯೆನಿಸಿ ಈ ಜಾಗ ಸರಿಯಲ್ಲ ನಮಗೆ ಎಂದು ಖಾಲಿಮಾಡಿಬಿಟ್ಟರೆ? ಎನಿಸಿತ್ತು.
ನನಗೆ ಹಾಗೆ ಅನ್ನಿಸಿದರೂ ನಾನೆ ದಿನಕ್ಕೆ ೫-೬ ಬಾರಿ ಟೆರಸ್ಸಿಗೆ ಹೋಗಿ ಕುತೂಹಲದಿಂದ ಇಣುಕಿನೋಡಿ ಬರುತ್ತಿದ್ದೆ. ಅವುಗಳಿಗೆ ಬೇರೆಯವರಿಗಿಂತ ನನ್ನಿಂದಲೇ ಹೆಚ್ಚು ತೊಂದರೆಯುಂಟಾಗುತ್ತಿದೆ ಅನಿಸಿತ್ತು.
ನಾವು ಬೇರೆ ಎಲ್ಲೂ ಜಾಗ ಸಿಗೋದಿಲ್ಲವೆಂದು ಇಲ್ಲಿ ಬಾಡಿಗೆಗೆ ಬಂದರೆ ಏನಪ್ಪ ಇದು ಓನರ್[ನಾನು]ಸೇರಿದಂತೆ ಎಲ್ಲರಿಂದಲೂ ಇಷ್ಟೊಂದು ತೊಂದರೆಯಲ್ಲಪ್ಪ, ನಾವು ನೆಮ್ಮದಿಯಾಗಿ ಒಂದು ತಿಂಗಳು ಸಂಸಾರ ಮಾಡಿ ಅಮೇಲೆ ಹೋಗಿಬಿಡ್ತೀವಿ, ನಮ್ಮನೆಯಲ್ಲಿ ಏನು ನಡೀತಿದೆ ಅಂತ ಒಬ್ಬರಾದ ಮೇಲೆ ಒಬ್ಬರು ಇಣುಕುತ್ತಿದ್ದರೆ ನಮ್ಮ ಪ್ರೈವೇಸಿಗೆ ಏನಾಗಬೇಡ? ನಾವೇನು ಹಾಗೆ ಅವರ ಮನೆಗೆಲ್ಲಾ ಹೋಗಿ ನೋಡ್ತೀವಾ?!..........ಹೀಗೆ ನಾನಾ ರೀತಿ ಆ ಜೋಡಿ ಪಾರಿವಾಳಗಳು ಅಂದುಕೊಂಡಿರಬಹುದು. ಕೊನೆಗೆ ನಾನೆ ತೀರ್ಮಾನಿಸಿದೆ. ಮೂರು ದಿನಕೊಮ್ಮೆ ಮಾತ್ರ ಹೋಗಿ ನೋಡುವುದು ಅಥವಾ ಫೋಟೋ ತೆಗೆಯುವುದು ಅಂತ. ಅವು ಪಾಪ ಏನು ಮಾಡುತ್ತವೆ? ಹೇಳಿ! ನಾವಾದರೂ ಯಾರಮನೆಯಲ್ಲಾದರೂ ಬಸುರಿ ಹೆಣ್ಣು ಇದ್ದರೆ ಡೆಲಿವರಿ ಆಗುವವರೆಗೂ ಮನೆ ಖಾಲಿಮಾಡುವಂತಿಲ್ಲವಲ್ಲ! ಹಾಗೆ ಇಲ್ಲೂ ನನ್ನಂತ ತೊಂದರೆ ಕೊಡುವ ಓನರ್ ಇದ್ದರೂ ಮೊಟ್ಟೆ ಇಟ್ಟಾಗಿದೆ ಅದು ಒಂದು ಲೆಕ್ಕದಲ್ಲಿ ಬಸುರಿಯಾದಂತೆಯೇ...!
ಆ ಮೊಟ್ಟೆಗಳ ಮೇಲೆ ಕೂತು ಹಗಲು-ರಾತ್ರಿ ಕಾವು ಕೊಡುವುದು , ಒಂದು ಹೆಣ್ಣು ಬಸುರಿಯಾಗುವುದು ಎರಡು ಒಂದೇ ಅಂತ ಆ ಪಾರಿವಾಳಗಳಿಗೆ ಅನ್ನಿಸಿ ಏನಾದರಾಗಲಿ ನಮ್ಮ ಸಂಸಾರವನ್ನು ಇಲ್ಲೇ ಚೆನ್ನಾಗಿ ಮಾಡಿಹೋಗೋಣವೆಂದು ಅವು ಮೊಂಡು ಬಿದ್ದು ತೀರ್ಮಾನಿಸಿರಬೇಕು! ಅವು ನಮ್ಮನ್ನೂ ಕೇರ್ ಮಾಡದೆ ತಮ್ಮ ಕೆಲಸ ಮುಂದುವರಿಸಿದವು..
ಈಗ ಹೆಣ್ಣು ಪಾರಿವಾಳ ಸದಾಕಾಲ ತತ್ತಿಯ ಮೇಲೆ ಕೂತು ಕಾವು ಕೊಡುತ್ತಿದ್ದರೆ ಗಂಡು ಹೊರಹೋಗಿ ದುಡಿದು[ಆಹಾರ ಹುಡುಕಿ] ಬಂದು ತನ್ನ ಶ್ರೀಮತಿಗೆ ಆಹಾರ ಕೊಡುತ್ತಿತ್ತು. ಇದು ಸರಿ ಸುಮಾರು ೨೧ ದಿನ ಕಳೆದಿರಬಹುದು. ನಾನು ಆಗಾಗ ಅವುಗಳ ದಿನಚರಿಗಳನ್ನೆಲ್ಲಾ ಕ್ಲಿಕ್ಕಿಸುತ್ತಿದ್ದೆ. ಇವನೇನಾದ್ರು ಮಾಡಿಕೊಂಡು ಸಾಯಲಿ ಎಂದು ಆ ಪಾರಿವಾಳಗಳು ತಮ್ಮ ಪಾಡಿಗೆ ತಾವು ಇದ್ದವು.
ಒಂದು ದಿನ ನಾನು ಸ್ವಲ್ಪ ರಾಗಿಯನ್ನು ಟೆರಸಿನಲ್ಲಿ ಹಾಕಿದೆ. ಅವು ಮುಟ್ಟಲಿಲ್ಲ. ಬಿಕ್ಷೆಯನ್ನೆಲ್ಲಾ ನಾವು ತಿನ್ನುವುದಿಲ್ಲ, ಪ್ರತಿದಿನ ದುಡಿದು ತಿನ್ನುತ್ತೇವೆ ಎನ್ನುವ ಆತ್ಮವಿಶ್ವಾಸ, ಸ್ವಾಬಿಮಾನ ಅವುಗಳಿಗೆ ಸ್ವಲ್ಪ ಹೆಚ್ಚೇ ಇರಬೇಕೆಂದುಕೊಂಡು ಸುಮ್ಮನಾದೆ.
ಅಂದು ಭಾನುವಾರ ೨೧ನೇ ತಾರೀಖು. ಬೆಳಿಗ್ಗೆ ನೋಡುತ್ತೇನೆ. ಗೂಡಿನಲ್ಲಿ ಎರಡು ಪುಟ್ಟಮರಿಗಳು. ಅವು ಹೊರಗೆ ಕಾಣದಂತೆ ತಾಯಿಹಕ್ಕಿ ರೆಕ್ಕೆಯಲ್ಲಿ ಬಚ್ಚಿಟ್ಟುಕೊಂಡಿತ್ತು. ಮೂರುದಿನದ ನಂತರ ಮರಿಗಳು ಸ್ವಲ್ಪ ದೊಡ್ಡವಾದವಲ್ಲದೇ ಪಿಳಿಪಿಳಿ ಕಣ್ಣು ಬಿಡಲಾರಂಭಿಸಿದವು. ನಾನು ಮತ್ತು ನನ್ನ ಶ್ರೀಮತಿ ಇಬ್ಬರೂ ಧಾರಾಳವಾಗಿ ಹಕ್ಕಿ, ರಾಗಿ, ಗೋದಿ, ಬಿಸಾಡುವ ಸೊಪ್ಪು, ಸಿಪ್ಪೆಗಳು, ಎಲ್ಲವನ್ನೂ ಹಾಕತೊಡಗಿದವು. ನಾನು ಹಾಕಿದ್ದನ್ನು ಇದುವರೆಗೂ ಮುಟ್ಟದಿದ್ದ ಈ ಹಕ್ಕಿಗಳು, ನಾನು ಇಲ್ಲದಿರುವಾಗ ಅವನ್ನು ತಾವು ತಿಂದು ಮರಿಗಳಿಗೂ ಕೊಕ್ಕಿನಲ್ಲಿ ತೆಗೆದುಕೊಂಡು ಹೋಗಿ ಗುಟುಕು ಕೊಡಲಾರಂಭಿಸಿದವು.
"ಈಗಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಈ ಬೆಂಗಳೂರಲ್ಲಿ ಎಷ್ಟು ಕಷ್ಟವಿದೆ ಅಂತ ನಮಗೇ ಗೊತ್ತು. ಇಷ್ಟಕ್ಕೂ ನಾವೇನೂ ಬಿಟ್ಟಿ ತಿನ್ನುತ್ತಿಲ್ಲವಲ್ಲ! ಅದಕ್ಕೆ ಪ್ರತಿಫಲವಾಗಿ ಅವನು ನಮ್ಮ ಫೋಟೊ ತೆಗೆಯುತ್ತಿದ್ದಾನಲ್ಲ! ಅದೇನೋ ಫೋಟೊ ಕ್ಲಿಕ್ ಮಾಡಿಕೊಂಡು ಸಾಯಲಿ ನಮಗೇನು" ಅಂತ ಅವುಗಳಿಗೂ ಅನ್ನಿಸಿರಬೇಕು. ನಾವು ಹಾಕಿದ ಯಾವುದೇ ಆಹಾರವನ್ನು ಮುಟ್ಟದೇ ತಾವೆ ಹುಡುಕಿತಂದು ತಿನ್ನಬೇಕೆನ್ನುವ ಸ್ವಾಬಿಮಾನ ಇರುವ ಕಾಡಿನ ಪಾರಿವಾಳಗಳಿಗಿಂತ, ನಗರದಲ್ಲೇ ಹುಟ್ಟಿಬೆಳೆದು ನಗರದ ಎಲ್ಲಾ ಗುಣಸ್ವಾಭಾವಗಳನ್ನೂ ಅಳವಡಿಸಿಕೊಂಡು ಇಲ್ಲಿ ಬದುಕಬೇಕಾದರೆ ಸಮಯಕ್ಕೆ ತಕ್ಕಂತೆ ತಮ್ಮ ಗುಣಲಕ್ಷಣಗಳನ್ನೂ ನಾಚಿಕೆಯಿಲ್ಲದೆ ಬದಲಿಸಿಕೊಳ್ಳುವ ಮನುಷ್ಯ ಗುಣದ ಪ್ರಬಾವ ಈ ಜೋಡಿಹಕ್ಕಿಗಳ ಮೇಲು ಆಗಿರಬೇಕು.
ಹೀಗೆ ಒಂದು ವಾರ ಕಳೆಯಿತು. ಮರಿಗಳು ದೊಡ್ಡವಾಗುತ್ತಾ ಇದ್ದವು. ಒಂದು ದಿನ ನಾನು ಪಾರಿವಾಳಗಳಿಗೆ ಟೆರಸಿನಲ್ಲಿ ಗೋದಿಯನ್ನು ಹಾಕಿ ಅಲ್ಲೇ ಹತ್ತಿರದಲ್ಲಿ ಕುಳಿತು ಇವುಗಳ ಬಗ್ಗೆ ಲೇಖನ ಬರೆಯಲಾರಂಭಿಸಿದೆ. ಸ್ವಲ್ಪ ಹೊತ್ತಿನಲ್ಲೇ ಗಂಡು ಪಾರಿವಾಳ ಬಂದು ಟೆರಸ್ ಕಂಬಿಯ ಮೇಲೆ ಕುಳಿತುಕೊಂಡಿತು. ಅದರ ಕಡೆ ಗಮನಿಸಿದರೂ ನೋಡದಂತೆ ಬರೆಯುತ್ತಿದ್ದೆ.
"ಫೋಟೊ ತೆಗೆದಿದ್ದಾಯ್ತು, ಈಗೇನೋ ಬರೆಯುತ್ತಿದ್ದಾನೆ, ನಮ್ಮ ಬಗ್ಗೆಯೇ ಇರಬೇಕು. ಎಂದುಕೊಂಡಿತ್ತೇನೋ, ಒಮ್ಮೆ ಜೋರಾಗಿ ಕೂಗು ಹಾಕಿತು. ಅ ಕೂಗಿಗೆ ಹೆಣ್ಣು ಪಾರಿವಾಳವೂ ಬಂತು. ಎರಡು ಸ್ವಲ್ಪ ಹೊತ್ತು ಮುಖ-ಮುಖಿ ನೋಡಿಕೊಂಡವು. ಕೊನೆಗೆ ಧೈರ್ಯವಾಗಿ ಕೆಳಗಿಳಿದು ಬಾಯಿತುಂಬಾ ಗೋದಿ ರಾಗಿ ತುಂಬಿಕೊಂಡು ಮರಿಗಳಿಗೆ ಹೋಗಿ ಕೊಡಲಾರಂಬಿಸಿದವು. ಕೆಲವೇ ನಿಮಿಷಗಳಲ್ಲಿ ನಾನು ಹಾಕಿದನ್ನೆಲ್ಲಾ ಖಾಲಿ ಮಾಡಿ ಎದುರಿಗೆ ನಿಂತು ನನ್ನ ಕಡೆ ನೋಡತೊಡಗಿದವು.
"ನಮ್ಮ ಫೋಟೋ ತೆಗೆಯುತ್ತಿದ್ದೀಯಾ, ಜೊತೆಗೆ ಈಗ ಲೇಖನಾನೂ ಬರಿತಿದ್ದೀಯ, ಇದೆಲ್ಲವನ್ನೂ ಯಾವುದೋ ಪತ್ರಿಕೆಗೆ ಕಳಿಸಿ ಎಲ್ಲಾ ಕ್ರೆಡಿಟ್ ನೀನೇ ತಗೋತೀಯಾ. ಇಷ್ಟೆಲ್ಲಾ ಉಪಯೋಗ ನಮ್ಮಿಂದ ಆಗುತ್ತಿರುವಾಗ ನಮಗೆ ಸ್ವಲ್ಪ ಗೋದಿ ರಾಗಿ ತಂದು ಹಾಕಲಿಕ್ಕೇನು ದಾಡಿ, ಈ ರೀತಿ ಕೇಳುವುದು ನಮ್ಮ ಹಕ್ಕು" ಎಂದು ತಮ್ಮ ಹಕ್ಕು ಚಲಾಯಿಸಲು ಸಿದ್ಧವಾಗಿವೆಯೇನೋ ಅಂತ ನನಗನ್ನಿಸಿತು. ಇರಬಹುದು. ಇವು ಹೇಳಿಕೇಳಿ ಸಿಟಿ ಪಾರಿವಾಳಗಳು, ಸಿಟಿ ಜನರ ಹಾಗೆ ಇಲ್ಲಿ ಬದುಕಲು ನಾಚಿಕೆ ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟರೆ ಹಾಗೂ ಆಗಾಗ ನಮ್ಮ ಹಕ್ಕನ್ನೂ ನೆನಪಿಸುತ್ತಿದ್ದರೇ ಮಾತ್ರ ಇಲ್ಲಿ ಬದುಕಲು ಸಾಧ್ಯ ಅಂತ ಇವಕ್ಕೂ ಅನ್ನಿಸಿರಬೇಕು. ಅದಕ್ಕೇ ನಾನು ಹಾಕಿದನ್ನೆಲ್ಲಾ ಖಾಲಿ ಮಾಡಿ ಇನ್ನಷ್ಟು ತಂದು ಹಾಕುತ್ತಾನೇನೋ ಅಂತ ಕಾಯುತ್ತಿರಬಹುದು ಅನ್ನಿಸಿತ್ತು.
ಇದುವರೆಗೂ ಈ ಪಾರಿವಾಳಗಳ ಜೀವನದ ಬಗ್ಗೆ, ಅವುಗಳ ಸಂಸಾರದ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಂಡು ಫೋಟೊ ಮತ್ತು ಲೇಖನ ಬರೆಯುತ್ತಿದ್ದವನಿಗೆ ದಸರ ಹಬ್ಬಕ್ಕಾಗಿ ನನ್ನ ಶ್ರೀಮತಿ ನನ್ನ ಕೈಗಿತ್ತ ದೊಡ್ಡ ಸಾಮಾನು ಪಟ್ಟಿಯನ್ನು ನೋಡಿದಾಗ, ನನ್ನ ಸಂಸಾರದ ಕಡೆಗೆ ಗಮನವನ್ನೇ ಹರಿಸಿರಲಿಲ್ಲವೆಂಬ ಜ್ಜಾನೋಧಯವಾಯಿತು. ಮುಗಿಯಿತಲ್ಲ ಹಬ್ಬ. ಬಂದು ಹೋಗುವವರ ನಡುವೆ ಮತ್ತು ನನ್ನ ಕೆಲಸದಲ್ಲಿ ನಿರತನಾಗಿ ನನ್ನ ಗಮನ ಈ ಪಾರಿವಾಳಗಳ ಕಡೆ ಹರಿಯುವಷ್ಟರಲ್ಲಿ ಹತ್ತು ದಿನಗಳು ಕಳೆದು ಹೋಗಿತ್ತು. ಸ್ವಲ್ಪ ಬಿಡುವು ಮಾಡಿಕೊಂಡು ಕ್ಯಾಮೆರಾ ಸೆಟ್ ಮಾಡಿಕೊಂಡು ಮತ್ತೆ ಟೆರೆಸ್ಸಿನಲ್ಲಿ ಕೂತೆ.
ನಾನು ಬಂದಿದ್ದು ನೋಡಿ ಅವಕ್ಕೆ ಮತ್ತೆ ಇರಿಸುಮುರಿಸುಂಟಾಯಿತೇನೋ! ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಗಾಧೆ ಅವುಗಳಿಗೂ ನೆನಪಾಗಿರಬೇಕು. ಅದರೇನು ಮಾಡುವುದು? ಮಕ್ಕಳನ್ನು ಸಾಕುವ ಜವಾಬ್ದಾರಿ ಇದ್ದೇ ಇದೆಯಲ್ಲ! ನನ್ನನ್ನು ಗಮನಿಸದೇ ಆ ದಂಪತಿ ಪಾರಿವಾಳಗಳು ಹಾರಿಹೋದವು. ನನಗೂ ಬೇಕಾಗಿದ್ದುದ್ದು. ಅದೆ ತಾನೆ! ಇವುಗಳ ಮೇಲೆ ಸಾಕಷ್ಟು ಫೋಟೋಗಳನ್ನು ತೆಗೆದಿದ್ದಾಗಿತ್ತು. ಒಂದು ರೀತಿಯಲ್ಲಿ ನನ್ನ ಪ್ರಕಾರ ಅವುಗಳ ಮಾರ್ಕೆಟ್ ಇಳಿದಿದೆ ಅಂತ ನನಗೂ ಅನಿಸಿತ್ತು. ಈಗೇನಿದ್ದರೂ ಬೆಳೆಯುತ್ತಿರುವ ಮರಿಗಳ ನಟನೆ ಹಾವಭಾವ ಚಟುವಟಿಕೆಗಳನ್ನು ಸೆರೆಯಿಡಿಯುವಲ್ಲಿ ನಾನು ತಲ್ಲೀನನಾದೆ.
ಮರಿಗಳು ನಾನು ಬರುತ್ತಿರುವುದು ಗೊತ್ತಾಗುತ್ತಿದ್ದಂತೆ ಗೂಡಿನ ಪಕ್ಕದ ಸ್ಯಾನಿಟರಿ ಪೈಪಿನ ಮರೆಗೆ ಹೋಗಿ ನನ್ನ ಕ್ಯಾಮೆರಾ ಕಡೆಗೆ ತಮ್ಮ ಹಿಂಬಾಗವನ್ನು ತೋರಿಸುತ್ತಾ ನಿಂತುಬಿಡುತ್ತಿದ್ದವು. ಫೋಟೊ ತೆಗೆಯುವುದಾದರೇ ನಮ್ಮ ಹಿಂಬಾಗದ [ಮರ್ಮಾಂಗವನ್ನು ಸೇರಿದಂತೆ]ಫೋಟೊ ಹೊಡ್ಕೊ ಹೋಗ್! ಅಂತ ನನ್ನನ್ನೂ ಅಣಕಿಸಿದಂತಾಯಿತು.
ಆದರೆ ಇಂತ ಎಷ್ಟು ಹಕ್ಕಿಗಳ ಆಟಗಳನ್ನು ನೋಡಿದ್ದೀನಿ ನನ್ನ ಪಕ್ಷಿಲೋಕದ ಛಾಯಾಗ್ರಹಣದಲ್ಲಿ! ಇವು ಇನ್ನೂ ಸಣ್ಣಮರಿಗಳು ಇರಲಿ ಬಿಡು ಅಂತ ನಾನೇ ತಾಳ್ಮೆ ತಂದುಕೊಂಡು ಕಾಯುತ್ತ ಕುಳಿತೆ. ಈ ಸರ್ಕಸ್ ಮೂರು ದಿನ ನಡೆಯಿತು. ನಾನು ಪಟ್ಟು ಬಿಡದೇ ಕಾಯುತ್ತಿದ್ದೆ. ಇದರ ನಡುವೆ ಅವುಗಳ ಪೇರೆಂಟ್ ಪಾರಿವಾಳಗಳು ಗುಟುಕು ತಂದು ಕಾಯುತ್ತಿರುತ್ತಿದ್ದವು. ಆ ಸಮಯದಲ್ಲಿ ಕೆಳಗೆ ಬಂದುಬಿಡುತ್ತಿದ್ದೆ. ಮರಿಗಳಿಗೆ ಗುಟುಕು ಕೊಟ್ಟು ಸುಮಾರು ಹೊತ್ತು ಕಳೆದ ಮೇಲೆ ಮತ್ತೆ ಕ್ಯಾಮೆರಾ ಏರಿಸಿಕೊಂಡು ಮತ್ತೆ ಟೆರೆಸಿನಲ್ಲಿ ಸೆಟ್ಲ್ ಆಗಿಬಿಡುತ್ತಿದ್ದೆ. ನಾಲ್ಕನೇ ದಿನ ಕೊನೆಗೂ ನನ್ನಿಂದ ಏನು ತೊಂದರೆ ಇಲ್ಲ ಅಂತ ಪಾರಿವಾಳ ಮರಿಗಳಿಗೆ ಅರಿವಾಗಿರಬೇಕು ಅಥವ ಅವುಗಳ ಅಪ್ಪ ಅಮ್ಮ ನನ್ನಿಂದೇನು ತೊಂದರೆ ಇಲ್ಲ ಅಂತ ತಿಳುವಳಿಕೆ ನೀಡಿರಬಹುದೇನೋ! ನಿದಾನವಾಗಿ ಪೈಪಿನ ಮರಿಯಿಂದ ಬಂದು ತಮ್ಮ ಗೂಡಿನ ಬಳಿ ಬರುವುದು ಅರಾಮವಾಗಿ ಓಡಾಡುವುದು ಎಲ್ಲಾ ಮಾಡತೊಡಗಿದವು.
ಮತ್ತೆರಡು ದಿನ ನಾನು ಮರಿಗಳ ಫೋಟೊಗಳನ್ನು ಧಾರಾಳವಾಗಿ ತೆಗೆದೆ. ಆವುಗಳು ದೊಡದಾಗುತ್ತಾ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನುವುದನ್ನು ಗಮನಿಸತೊಡಗಿದವು. ಅದು ಅವುಗಳ ಹಾವಭಾವ ಚಟುವಟಿಕೆಗಳನ್ನು ನಾನು ಕ್ಯಾಮೆರಾದ ವ್ಯೂಫೈಂಡರಿನಿಂದ ನೋಡುವಾಗ ತಿಳಿಯುತ್ತಿತ್ತು.
ಒಂದು ಸಂಜೆ ಆರು ಗಂಟೆ ದಾಟಿತ್ತು. ನಾನು ಕತ್ತಲಾಯಿತಲ್ಲ ಎಂದು ಕ್ಯಾಮೆರಾವನ್ನು ಸ್ಟ್ಯಾಂಡಿನಿಂದ ಬಿಚ್ಚಲು ಸಿದ್ದನಾಗುತ್ತಿದ್ದಂತೆ ಅದುವರೆಗೂ ಸುಮ್ಮನೇ ಕುಳಿತಿದ್ದ ಒಂದು ಪಾರಿವಾಳ ಮರಿ ಎದ್ದು ನಿಂತಿತು. ಅದು ಎದ್ದು ನಿಲ್ಲಲು ಕಾರಣ ನನ್ನ ಆಡುಗೆ ಮನೆಯ ಕುಕ್ಕರ್ ಕೂಗಿದ ಶಬ್ದಕ್ಕೆ ಕುತೂಹಲ ಉಂಟಾಯಿತೇನೋ! ನಾನು ತಕ್ಷಣ ಕ್ಯಾಮೆರಾವನ್ನು ಸ್ಟ್ಯಾಂಡಿನಿಂದ ತೆಗೆಯದೆ ನೋಡೋಣ ಏನು ಮಾಡುತ್ತದೆ ಅಂತ ಹಾಗೆ ಕ್ಯಾಮೆರಾ ಕಿಂಡಿಯಿಂದ ನೋಡತೊಡಗಿದೆ. ಮತ್ತೊಂದು ವಿಷಲ್ ಕುಕ್ಕರಿನಿಂದ ಬಂತಲ್ಲ! ಎದ್ದು ನಿಂತಿದ್ದ ಅದು ಅದರ ಆಳತೆಯ ನಾಲ್ಕು ಹೆಜ್ಜೆ ಮುಂದೆ ಬಂದು ಕೆಳಗೆ ಬಗ್ಗಿ ನೋಡತೊಡಗಿತು. ನಾನು ಅದು ಆಡಿಗೆ ಮನೆ ಕಡೆಗೆ ನೋಡುವುದನ್ನು ಫೋಟೊ ತೆಗೆದೆ. ಮೂರನೇ ಬಾರಿ ಕೂಗಿದಾಗಲೂ ಅಲ್ಲೇ ನಿಂತು ಇಣುಕಿತ್ತು. ಅದು ಕುಕ್ಕರಿನಿಂದ ಹೊರಬಂದ ಹಬೆಗಾಳಿಯಲ್ಲಿರುವ ಮಸಾಲೆ ವಾಸನೆಯನ್ನು ಎಂಜಾಯ್ ಮಾಡುತ್ತಿದೆಯಾ? ಅಥವಾ ಆಡುಗೆ ಮನೆ ಕಿಟಕಿಯ ಒಳಗಿರುವವರನ್ನು[ನನ್ನ ಶ್ರೀಮತಿ]ಗಮನಿಸುತ್ತಿದೆಯಾ? ಗೊತ್ತಿಲ್ಲ. ಮತ್ತೊಂದು ಮರಿ ಮೂಲೆಯಲ್ಲಿ ಕುಳಿತು ಇದನ್ನೇ ಗಮನಿಸುತ್ತಿತ್ತು. ಐದು ನಿಮಿಷ ಕಳೆದಿರಬಹುದು. ಅದಕ್ಕೇನನ್ನಿಸಿತೊ ಏನೋ ! ಇದ್ದಕ್ಕಿದ್ದಂತೆ ಹಿಂದಕ್ಕೆ ತಿರುಗಿ ತನ್ನ ಗುದದ್ವಾರದಿಂದ ಪಚಕ್ಕನೆ ಹಿಕ್ಕೆ ಹಾಕಿತಲ್ಲ! ಅದೇ ಕ್ಷಣಕ್ಕೆ ನಾನು ಕ್ಲಿಕ್ಕಿಸಿ ಆ ದೃಶ್ಯವನ್ನು ಸೆರೆಹಿಡಿದೆನಲ್ಲ! ಎಲ್ಲವೂ ಮಿಂಚಿ ಮರೆಯಾದಂತೆ ಆಗಿಹೋಯಿತು.
ಆ ಮರಿ ಪಾರಿವಾಳ ಬಹುಶ: ಈ ರೀತಿ ಸಿಟ್ಟಿನಿಂದ ಮಾಡಿರಬಹುದೇ ? ಇರಬಹುದು ನಾನು ಬಿಟ್ಟಿ ಫೋಟೊ ತೆಗೆಯುತ್ತಿದ್ದೇನೆ, ಅತ್ತ ಆಡಿಗೆಮನೆಯಿಂದ ಕೇವಲ ವಾಸನೆ ಮಾತ್ರ ಬರುತ್ತಿದೆ, ಅಥವಾ ಆ ಶಬ್ದವೇ ಅದಕ್ಕೆ ಕಿರಿಕಿರಿ ಉಂಟು ಮಾಡುತ್ತಿತ್ತೇನೋ! ಎಷ್ಟೇ ಆದರೂ ಅದು ಅಪ್ಪ ಅಮ್ಮನಿಂದ ಕಲಿತ ಸಿಟಿ ಪಾಠ ಇರಬಹುದು. ಬಿಟ್ಟಿ ಏನನ್ನು ಕೊಡಬಾರದು ಕೊಟ್ಟರೂ ಅದು ಉಪಯೋಗಕ್ಕೆ ಬರಬಾರದು, ಅಥವ ಹಿಂಭಾಗ ತೋರಿಸಿ ಆಣಕಿಸುವ ಬುದ್ದಿ ಸಿಟಿಯಲ್ಲಿ ಹುಟ್ಟಿದ ಈ ಮರಿಪಾರಿವಾಳದ ಹುಟ್ಟುಗುಣವೋ ? ಒಂದು ಅರಿಯದೆ ನಾನು ತಬ್ಬಿಬ್ಬಾಗಿದ್ದೆ. ಕೊನೆಗೊಂದು ದಿನ ಇವುಗಳನ್ನು ಏಮಾರಿಸಿ ಹೇಗಾದರೂ ಫೋಟೊ ತೆಗೆಯಬೇಕಲ್ಲ ಅಂದು ಒಂದು ಉಪಾಯ ಮಾಡಿದೆ. ರಾತ್ರಿ ಎಂಟು ಗಂಟೆಯ ಕತ್ತಲಿನಲ್ಲಿ ಯಾರು ನೋಡುವುದಿಲ್ಲವೆಂದು ಗೂಡಿನಿಂದ ಹೊರಬಂದಾಗ ನಾನು ಫೋಟೊ ತೆಗೆಯುವುದೆಂದುಕೊಂಡು ಕತ್ತಲಲ್ಲಿ ಸ್ಟ್ಯಾಂಡಿಗೆ ಕ್ಯಾಮೆರಾ ಮತ್ತು ಪ್ಲಾಶ್ ಸೆಟ್ ಮಾಡಿದೆ. ಕತ್ತಲಲ್ಲಿ ಏನು ಕಾಣುತ್ತಿರಲಿಲ್ಲ. ಫೋಕಸ್ ಕೂಡ ಆಗುತ್ತಿರಲಿಲ್ಲ. ಕ್ಯಾಮೆರಾ ಕೂಡ ಕಂಡ ವಸ್ತುವನ್ನು ಮನನ ಮಾಡಿಕೊಳ್ಳಲು ಅದಕ್ಕೂ ಬೆಳಕು ಬೇಕಲ್ಲವೆ? ಕೊನೆಗೆ ನಾನೇ ನನಗೆ ತಿಳಿದಂತೆ ಕತ್ತಲಿಗೆ ನನ್ನ ಕಣ್ಣು ಹೊಂದಿಸಿಕೊಂಡು ನಿದಾನವಾಗಿ ಅಂದಾಜಿನ ಮೇಲೆ ಮ್ಯಾನ್ಯೂವಲ್ ಫೋಕಸ್ ಮಾಡುತ್ತಾ ಐದಾರು ಕ್ಲಿಕ್ ಮಾಡಿದ್ದೆ.
ಕ್ಲಿಕ್ಕಾದಾಗ ಬಂದ ಪ್ಲಾಶ್ ಬೆಳಕಿಗೆ ಗೂಡಿನಿಂದ ಈ ಕಡೆ ಬಂದು ಕುಳಿತಿದ್ದ ಆ ಮರಿಗಳು ಒಮ್ಮೆ ಗಾಬರಿಯಾಗಿ ನಂತರ ಕತ್ತಲಲ್ಲಿ ಅವಕ್ಕೆ ಏನೂ ಕಾಣದೆ ಮತ್ತೆ ಸುಮ್ಮನಾದವು. ನಂತರ ಆಗ ತೆಗೆದ ಚಿತ್ರಗಳನ್ನು ಕಂಪ್ಯೂಟರಿಗೆ ವರ್ಗಾಯಿಸಿದಾಗ ತೆಗೆದ ಐದಾರು ಫೋಟೊಗಳಲ್ಲಿ ಎರಡು ಚೆನ್ನಾಗಿ ಶಾರ್ಪಾಗಿ ಬಂದಿತ್ತು. ನನ್ನ ಪ್ರಯೋಗ ಯಶಸ್ವಿಯಾಗಿತ್ತು. ಮುಂದೆ ಮತ್ತಷ್ಟು ಫೋಟೊ ತೆಗೆಯಬೇಕೆಂದು ನನಗೇನು ಅನ್ನಿಸಲಿಲ್ಲ. ಅಂಥ ಫೋಸುಗಳೇ ಸಿಕ್ಕಿರುವಾಗ ನನಗೇ ಮತ್ತೆ ಅದಕ್ಕಿಂತ ವಿಶೇಷ ಫೋಟೊ ಸಿಗಲಿಕ್ಕಿಲ್ಲವೆಂದು ಅನಿಸಿತ್ತು. ಈ ಮದ್ಯೆ ನನ್ನ ಹೆಂಡತಿ ಬೇರೆ "ಆದೇನ್ರಿ ನೀವು ಇನ್ನೂ ಫೋಟೊ ತೆಗೆಯುತ್ತಿದ್ದೀರಿ? ಆವು ನಿಮಗೆ ಫೋಸ್ ಕೊಡೊಲ್ಲ, ನೀವು ಬಿಡಲ್ಲ. ಅವತ್ತು ಆದ ಅವಮಾನ ಸಾಕಲ್ವ? ಎಂದು ಅಂಗಿಸುತ್ತಿದ್ದಳು. ನನಗೂ ಅವಳ ಮಾತು ಸರಿಯೆನಿಸಿತ್ತು.
ಅಷ್ಟರಲ್ಲಿ ಮರಿಗಳು ಮತ್ತಷ್ಟು ದೊಡ್ಡವಾಗಿದ್ದವು. ಟೆರೆಸ್ಸಿನ ಮೇಲೆಲ್ಲಾ ಓಡಾಡುತ್ತಿದ್ದವು. ದೀಪಾವಳಿ ಹತ್ತಿರ ಬಂತಲ್ಲ! ಮತ್ತೆ ನನ್ನ ಕೆಲಸ ಕಡೆ ಗಮನ ಕೊಡಬೇಕಲ್ಲ. ಸಾಕೆನಿಸಿತ್ತು ಎರಡು ತಿಂಗಳಿಂದ ಈ ಹಕ್ಕಿಗಳ ಸಹವಾಸ ಅಂತಲೂ ಅನಿಸಿತ್ತು.
ಮತ್ತೊಂದು ವಾರ ಕಳೆಯಿತು. ನನ್ನದು ಮೊಂಡು ಬುದ್ದಿಯ ಹುಟ್ಟುಗುಣವೋ ? ಮತ್ತೆ ಕುತೂಹಲದಿಂದ ಟೆರೆಸ್ಸಿಗೆ ಹೋಗಿ ನೋಡಿದೆ. ಪಾರಿವಾಳಗಳು ಸಂಸಾರ ಸಮೇತ ಮನೆ ಖಾಲಿ ಮಾಡಿ ಹೋಗಿದ್ದವು. ಗಲೀಜಾದ ಗೂಡು ಮಾತ್ರ ಖಾಲಿಯಾಗಿ ಬಿದ್ದಿತ್ತು.
ಶಿವು.ಕೆ

Monday, October 6, 2008

ಚಂದ್ರ ಮಕುಟ ಹಕ್ಕಿಯ ದಿನಚರಿ

ಮನುಷ್ಯ ತನ್ನ ಜೀವನಪೂರ್ತಿ ಸೋಮಾರಿಯಾಗಿ ಕಳೆಯುವುದೇ ಹೆಚ್ಚು. ಆದರೆ ಪ್ರಾಣಿ, ಪಕ್ಷಿ, ಕೀಟಗಳು ಹಾಗಲ್ಲ. ಹುಟ್ಟಿದ ಮರುಕ್ಷಣದಿಂದಲೇ ಚಟುವಟಿಕೆ ಪ್ರಾರಂಭಿಸುತ್ತವೆ.

ಅದಕ್ಕೊಂದು ತಾಜಾ ಉದಾಹರಣೆ ಈ ಚಂದ್ರಮಕುಟ ಹಕ್ಕಿ. ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಕೇವಲ ಒಂದು ನಿಮಿಷದಲ್ಲಿ ಅದೆಷ್ಟು ಭಂಗಿಗಳಲ್ಲಿ ಕಾಣಿಸಿಕೊಂಡಿತು ನೋಡಿ!


ನನ್ನ ಮಕ್ಕಳಿಗೆ ಪ್ರೀತಿಯಿಂದ ಊಟ ಕೊಡ್ತೀನಿ.....

ತತ್!...... ಈ ಕಾಗೆ ಹದ್ದುಗಳು ಕೆಳಗೆ ಗೂಡಿನ ಹತ್ತಿರವೇ ಹೊಂಚು ಹಾಕುತ್ತಿವೆಯಲ್ಲಾ!
{ಬಲಗಡೆ ತಿರುಗಿ] ನೋಡ್ರೋ ಹದ್ದುಗಳಾ! ನನ್ನ ರಾಕ್ಷಸ ರೂಪವನ್ನು, ನನ್ನ ಪುಟ್ಟಮರಿಗಳ ತಂಟೆಗೆ ಬಂದರೆ ಹುಷಾರ್!!.

ಹೇ ದರಿದ್ರಾ ಕಾಗೆಗಳಾ ನೋಡಿದ್ರಾ? ನನ್ನ ರೌದ್ರಾವತಾರವನ್ನು! ನನ್ನ ಗೂಡಿನ ಕಡೆ ಬಂದ್ರೇ ಹುಷಾರ್!!.'
ಸದ್ಯ ತೊಲಗಿದವು ಪೀಡೆಗಳು, ಒಮ್ಮೆ ಮೈ ಕೊಡವಿಕೊಳ್ಳೋಣ!.
ಗಡಿಯಾರದ ಮುಳ್ಳುಗಳ ಮೇಲೆ ಒಂದು ಕಣ್ಣು ಮತ್ತು ಚಂದ್ರ ಮಕುಟ ಹಕ್ಕಿಯ ಮೇಲೆ ಇನ್ನೊಂದು ಕಣ್ಣು ನೆಟ್ಟಿದ್ದೆ. ಸರಿಯಾಗಿ ಅರವತ್ತು ಸೆಕೆಂಡಿನಲ್ಲಿ ಅದು ಎಷ್ಟು ಚಟುವಟಿಕೆಯಿಂದ ಇರುತ್ತದೆ. ಎಂಬುದನ್ನು ಕಂಡುಂಡಾಗ ಮೈ ಜುಮ್ಮೆಂದಿತು.

ಹೇಗಿದೆ ನನ್ನ ಬ್ಯಾಲೆ ಸ್ಟೈಲ್?
ಕುತ್ತಿಗೆ ಕೆಳಗೆ ತಾಳಲಾರದ ಕಡಿತ!.

ಬೆನ್ನಗರಿಗಳ ಕೆಳಗೆ ಕೆರೆತ.

ಗರಿಗಳಿಗೊಮ್ಮೆ ನಯವಾದ ಮಾಲಿಶ್.
ಓಹ್, ಒಂದು ಸಣ್ಣ ಮೈ ಮುರಿತ.
ಛೇ!.... ಗುದದ್ವಾರದಲ್ಲಿ ಎಂಥದೋ ನವೆ[ನಾಚಿಕೆಯಾಗುತ್ತೆ!!........ನೋಡಬೇಡಿ ಕಣ್ಣು ಮುಚ್ಚಿಕೊಳ್ಳಿ!] ಚಳಿಗಾಲ ಬಂತೆಂದರೆ ಇದು ಸಹನೀಯ ಹವೆ ಇರುವೆಡೆಗೆ ವಲಸೆ ಹೋಗುತ್ತದೆ. ಕ್ಷಣಾರ್ಧದಲ್ಲಿ ಕೀಟಗಳನ್ನು ಹಿಡಿಯುವುದರಲ್ಲಿ ಇದು ನಿಸ್ಸೀಮ. ಮರಿಗಳನ್ನು ಜತನ ಮಾಡುವ ರೀತಿ ಆಹಾರ ತಂದು ಕೊಡುವ ಪರಿ, ಮರಿಗಳನ್ನು ನೋಡಿಕೊಳ್ಳುವ ಕಾಳಜಿ ಅದ್ಬುತ.

ಶಿವು.ಕೆ

Sunday, September 28, 2008

ಮನೆಯಲ್ಲಿ ಹುಟ್ಟಿದ ಚಿಟ್ಟೆ ಕಥೆ.

ಎಂದಿನಂತೆ ಹೆಸರುಘಟ್ಟದ ಕಡೆಗೆ ಚಿಟ್ಟೆ ಪೋಟೊ ತೆಗೆಯಲು ಹೋದಾಗ ಯಾವ ಚಿಟ್ಟೆಯು ಸಿಗಲಿಲ್ಲ. ಚಳಿಗಾಲ ಮುಗಿಯುತ್ತಾ ಬಂದಿತ್ತಾದ್ದರಿಂದ ಚಿಟ್ಟೆಗಳ ಸಂಖ್ಯೆ ಕಡಿಮೆಯಾಗಿತ್ತು. ಇಲ್ಲಿಗೆ ಬಂದಿದ್ದಕ್ಕೆ ಏನಾದರೂ ಪೋಟೊ ತೆಗೆಯೋಣ ಎಂದು ಹುಡುಕತೊಡಗಿದೆ. ಅಲ್ಲೊಂದು ಕೆಂಪು ಕಣಗಲು ಗಿಡ. ಎಲೆಗಳ ಮಧ್ಯೆ ಒಂದಿಂಚು ಉದ್ದದ ತಿಳಿ ಕಂದುಬಣ್ಣದ ಬೆನ್ನ ಮೇಲೆ ಕಪ್ಪು ಪಟ್ಟಿ ಇರುವ ಹುಳುವೊಂದು ಎಲೆಯನ್ನು ತಿನ್ನುತ್ತಿದ್ದ ದೃಶ್ಯ ಕಾಣಿಸಿತು. ಪಕ್ಕದ ಎಲೆಯ ಮೇಲೆ ಕಂಡರೂ ಕಾಣದ ಹಾಗೆ ಒಂದು ಸಣ್ಣ ಹಳದಿ ಮಿಶ್ರಿತ ಬಿಳಿ ಬಣ್ಣದ ರಾಗಿಕಾಳಿನ ಗಾತ್ರದ ವಸ್ತು ಕಾಣಿಸಿತು.
ನನ್ನ ಮ್ಯಾಕ್ರೋ ಲೆನ್ಸ್ ನಿಂದ ನೋಡಿದಾಗ ಮತ್ತೊಂದು ಹುಳುವಾಗಲು ಸಿದ್ಧವಾಗಿರುವ ಮೊಟ್ಟೆ ಎಂದು ತಿಳಿಯಿತು. ತಕ್ಷಣ ಅದರ ಪೋಟೊ ತೆಗೆದೆ. ಜೊತೆಗೆ ಒಯ್ದಿದ್ದ ಕೃಷ್ಣಮೇಘ ಕುಂಟೆರವರ "ಬಟರ್ ಫ್ಲೈಸ್ ಆಫ್ ಪೆನೆನ್ಸುಲಾರ್ ಇಂಡಿಯ" ಪುಸ್ತಕ ತೆಗೆದು ನೋಡಿದೆ. ಅದು "ಇಂಡಿಯನ್ ಕಾಮನ್ ಕ್ರೋ" ಚಿಟ್ಟೆಯ ಲಾರ್ವ ಎಂದು ತಿಳಿಯಿತು. ಆ ಪುಸ್ತಕದಲ್ಲಿ ಲಾರ್ವಾದಿಂದ ಚಿಟ್ಟೆಯಾಗುವವರೆಗೆ ಪೂರ್ತಿ ಫೋಟೊ, ವಿವರಣೆ ಇತ್ತು. ತಕ್ಷಣ ನನಗೊಂದು ಆಲೋಚನೆ ಬಂತು. ನಾನೂ ಏಕೆ ಈ ರೀತಿ ಪೋಟೊ ಹಂತ ಹಂತವಾಗಿ ತೆಗೆಯಬಾರದು? ಎನಿಸಿತು. ತಕ್ಷಣ ನನ್ನ ಕ್ಯಾಮೆರ ಕಿಟ್ ನಲ್ಲಿದ್ದ ಕತ್ತರಿ ತೆಗೆದು ಆ ಹುಳುವಿದ್ದ ಎಲೆಗಳ ಕಾಂಡವನ್ನು ಕತ್ತರಿಸಿ ಹುಳು ಸಮೇತ ಮನೆಗೆ ತಂದು ಸಣ್ಣ ಹೂ ಕುಂಡದಲ್ಲಿ ನೀರು ತುಂಬಿಸಿ ಆ ಕಾಂಡವನ್ನು ಅದರಲ್ಲಿಟ್ಟೆ. ಅಲ್ಲಿಂದ ಶುರುವಾಯಿತು ಲಾಲನೆ ಪಾಲನೆ.

ಮರುದಿನ ಬೆಳಿಗ್ಗೆ ಕಣಗಲು ಗಿಡದ ಎಲೆಗಳನ್ನು ತರಲು ಹೊರಟೆ. ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತದೆ? ಈ ಕಾಂಕ್ರೀಟು ಕಾಡಿನಲ್ಲಿ ಬೆಳೆದ ಕೆಲವು ಗಿಡಗಳನ್ನು ನೋಡಿದರೆ ಎಲ್ಲವೂ ಅಲಂಕಾರಿಕ ಸಸ್ಯಗಳೆ. ಕ್ರೋಟನ್, ಇನ್ನಿತರ ಎಲೆಗಳಿರುವ ಸಸ್ಯಗಳೇ ತುಂಬಿದ್ದವು. ಕೊನೆಗೂ ಹುಡುಕಿ ತಂದು ಸಣ್ಣ ಹೂ ಕುಂಡದಲ್ಲಿ ನೀರು ತುಂಬಿಸಿ ಅದನ್ನಿಟ್ಟು ಆ ಹುಳುವನ್ನು ಒಂದು ಎಲೆಯ ಮೇಲೆ ಬಿಟ್ಟೆ. ಸ್ವಲ್ಪ ಸಮಯದ ನಂತರ ಅದು ಎಲೆಯನ್ನು ತಿನ್ನಲಾರಂಭಿಸಿತು. ಕೇವಲ ಅರ್ಧಗಂಟೆಯ ಹೊತ್ತಿಗೆ ಮೂರು ಇಂಚು ಉದ್ದದ ಎಲೆಯನ್ನು ಆ ಹುಳು ತಿಂದು ಮುಗಿಸಿತ್ತು. ಆನಂತರ ಸ್ವಲ್ಪ ಸಮಯ ವಿರಾಮ. ನನ ಶ್ರೀಮತಿಯಂತೂ ಆ ಹುಳುವಿನ ಚಟುವಟಿಕೆಯನ್ನು ಆಶ್ಚರ್ಯದಿಂದ ಗಮನಿಸತೊಡಗಿದಳು.


ನನ್ನ ಮೈಕ್ರೋ ಲೆನ್ಸ್ ಮುಖಾಂತರ ಅದರ ಬಾಯಿ, ತಿನ್ನುವ ಪರಿ ನೋಡಿ " ಎಷ್ಟು ಚೆನ್ನಾಗಿ ಗರಗಸದಲ್ಲಿ ಕತ್ತರಿಸಿದಂತೆ ಕತ್ತರಿಸಿ ತಿನ್ನುತ್ತದೆ ಪಾಪ" ಎಂದು ಪ್ರೀತಿಯಿಂದ ನೋಡುತ್ತಿದ್ದಳು. ಅಕ್ಕನ ಮಕ್ಕಳಾದ ಚೇತನ ವರ್ಷಿಣಿ ಇಬ್ಬರಿಗೂ ಹೊಸ ಗೆಳೆಯ ಸಿಕ್ಕ ಆನಂದ.

ಮರುದಿನ ಮತ್ತೆ ನಾನು ಹೋಗಿ ಹೊಸ ಎಲೆಗಳನ್ನು ತಂದು ಇಟ್ಟೆ. ಆ ಹುಳುವಿಗಂತೂ ತಿನ್ನುವುದೇ ಕೆಲಸ. ಮೊದಲ ದಿನ ಒಂದು ಅಂಗುಲವಿದ್ದ ಹುಳು ಎರಡನೇ ದಿನಕ್ಕೆ ಕಾಲು ಇಂಚು ಬೆಳೆದಿತ್ತು. ಮೂರನೆ ದಿನಕ್ಕೆ ಮುಕ್ಕಾಲು ಇಂಚಿನವರೆಗೆ ಬೆಳೆಯಿತು. ಆ ಚಿಟ್ಟೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಅತಿಯಲು " ದಕ್ಷಿಣ ಭಾರತದ ಚಿಟ್ಟೆಗಳು" ಪುಸ್ತಕ ನೋಡಿದಾಗ ಅದರಲ್ಲಿ ಲಾರ್ವಾ ಹಂತದಿಂದ ಪ್ಯೂಪ, ಪ್ಯೂಪದಿಂದ ಚಿಟ್ಟೆಯಾಗುವಿಕೆ, ಅದರ ಸಮಯ ಇನ್ನಿತರ ವಿಷಯ ತಿಳಿಯಿತು. ಮೂರು ದಿನ ಕಳೆಯಿತು.


ಅಂದು ಸಂಜೆ ಇದ್ದಕ್ಕಿದ್ದಂತೆ ಅದರ ನಡುವಳಿಕೆಯಲ್ಲಿ ಕೊಂಚ ಬದಲಾವಣೆ ಕಂಡಿತು. ಹಿಂದಿನ ದಿನ ತಿನ್ನುವುದು, ನಿದ್ರೆಮಾಡುವುದು, ತನ್ನ ಗುದದ್ವಾರದಿಂದ ಹಿಕ್ಕೆ ಹಾಕುವುದು ಇವು ನಿದಾನಗತಿಯಲ್ಲಿ ನಡೆದಿತ್ತು. ಆದರೆ ಇಂದು ಸಂಜೆ ಅದರ ಚಟುವಟಿಕೆಯಲ್ಲಿ ಕೊಂಚ ಹೆಚ್ಚಿನ ವೇಗವಿತ್ತು.

ಆದೇನೆಂದರೆ ಅದು ಮೊದಲು ಒಂದೊಂದೆ ಎಲೆಗಳ ಮೇಲೆ ತೆವಳಿ ಮತ್ತೆ ಹಿಂತಿರುವುದು, ಕಾಂಡದ ಮೇಲೆ ತೆವಳಿ ಮತ್ತೆ ಹಿಂತಿರುವುದು, ಕಾಂಡದ ಕೆಳಗೆ ಸರಿದಾಡುವುದು ನಡೆದೇ ಇತ್ತು. ಅನಂತರ ಯಾವುದೋ ಒಂದು ಎಲೆಯನ್ನು ಆಯ್ಕೆ ಮಾಡಿಕೊಂಡು ಅದರ ಕೆಳಗೆ ತೆವಳಿ ಹೋಗಿ ನಿಂತಿತು. ಸ್ವಲ್ಪ ಸಮಯದ ನಂತರ ಆ ಎಲೆಯ ಮುಂಭಾಗವನ್ನು ತಿಂದು ಮುಗಿಸಿ ಎಲೆಯ ಕೆಳಭಾಗದ ಮಧ್ಯಕ್ಕೆ ಬಂದು ತನ್ನ ಹಿಂಭಾಗ ಎಂಥದೋ ಆಂಟುದ್ರವ ಸುರಿಸಿ ತಲೆಕೆಳಕಾಗಿ ಆ ಎಲೆಗೆ ಅಂಟಿಕೊಂಡು ನೇತಾಡತೊಡಗಿತು.

ಈ ಮಧ್ಯೆ ನಮಗೆ ಕಾಣದ ಹಾಗೆ ಇನ್ನೊಂದು ಬದಲಾವಣೆಯಗಿತ್ತು. ಅದೇನೆಂದರೆ ತನ್ನ ಹೊರ ಮೈ ಕವಚವನ್ನು ಕಾಲು ಸಮೇತ ಕಳಚಿಹಾಕಿತ್ತು. ಅದು ನನಗೆ ತಿಳಿದ ಬಗೆ ಹೇಗೆಂದರೆ ಆ ಹುಳುವಿನ ಆಕಾರ ಚಿಕ್ಕದ್ದಾಗಿತ್ತು. ಹಾಗೆ ಅದರ ಬಣ್ಣ ಹಳದಿ ಮಿಶ್ರಿತ ತಿಳಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಕೆಳಗೆ ಹಿಕ್ಕೆಗಳ ಜೊತೆ ಅದರ ಕಳಚಿದ ಪೊರೆ ಇದ್ದದ್ದು ಕಂಡುಬಂತು.

ನನ್ನ ಅಕ್ಕ ಭಾವ ಆ ಹುಳು ಆ ರೀತಿ ನೇತಾಡುತ್ತಿರುವುದನ್ನು ನೋಡಿ, ಅದು ಕೆಳಗೆ ಬಿದ್ದು ಸತ್ತುಹೋಗುವುದೇನೋ ಎಂದು ಆತಂಕ ವ್ಯಕ್ತಪಡಿಸಿದರು. ಇಲ್ಲ ಹಾಗೇನು ಆಗುವುದಿಲ್ಲ. ಬಹುಶಃ ಅದು ಪ್ಯೂಪ ಆಗುವುದಕ್ಕೆ ಮೊದಲಿನ ಸ್ಥಿತಿ ಹೀಗಿರಬಹುದು ಎಂದು ತಿಳಿಸಿದೆ. ಸರಿ, ನಾಳೆ ನೋಡೋಣವೆಂದು ಅವರು ಹೊರಟುಹೋದರು.

ನನ್ನ ಕುತೂಹಲ ಏನೆಂದರೆ ಇದು ಹೇಗೆ ಪ್ಯೂಪ ಆಗುತ್ತದೆ ನೋಡಬೇಕೆಂಬ ಕುತೂಹಲ ನನಗೆ. ರಾತ್ರಿ ೧೨ ಗಂಟೆಯವರೆಗೆ ಎದ್ದಿದ್ದು ಗಮನಿಸುತ್ತಿದ್ದೆ. ಆ ಕತ್ತಲಲ್ಲೂ ಅದರದೊಂದು ಫೋಟೊ ತೆಗೆದೆ. ನನ್ನ ಫ್ಲಾಷ್ ಬೆಳಕು ಅ ಹುಳದ ಮೇಲೆ ಬಿದ್ದಾಗ ಒಮ್ಮೆ ಹುಳು ಬೆಚ್ಚಿದಂತೆ ಆಗಿ ಸುಮ್ಮನಾಯಿತು. ತಕ್ಷಣ ನನಗೆ ನನ್ನ ಬಗ್ಗೆ ಅಪರಾಧಿ ಮನೋಭಾವನೆ ಉಂಟಾಯಿತು. ನಾನು ಅದರ ಜೀವನ ಚಟುವಟಿಕೆಗಳಿಗೆ ತೊಂದರೆ ಕೊಡುತ್ತಿದ್ದೇನೇನೋ ಎನ್ನಿಸಿತು. ಆ ಮಂದ ಬೆಳಕಿನಲ್ಲಿ ಅದನ್ನು ಗಮನಿಸುವಷ್ಟೂ ಕಾಲ ಏನೂ ಬದಲಾವಣೆ ಕಾಣಲಿಲ್ಲ. ನಂತರ ಆ ಮಂದ ಬೆಳಕನ್ನು ಆರಿಸಿ ಮಲಗಿಬೆಟ್ಟೆ.

ಬೆಳಿಗ್ಗೆ ಎದ್ದು ನೋಡಿದರೆ ಎಲ್ಲಿದೆ ಹುಳ? ಆ ಜಾಗದಲ್ಲಿ ಒಂದು ಸಣ್ಣ ಕಡಲೇಕಾಯಿ ಗಾತ್ರದ ಪ್ಯೂಪ ಎಲೆಗೆ ಅಂಟಿಕೊಂಡಿತ್ತು. ಬಹುಶಃ ಕತ್ತಲಲ್ಲಿ ಮಾತ್ರ ಜೀವಸೃಷ್ಟಿಯಾಗಲಿ, ಬದಲಾವಣೆಯಾಗಲೀ ನಡೆಯುತ್ತದೆ ಎನ್ನುವ ಸತ್ಯ ನನ್ನ ಅರಿವಿಗೆ ಬಂತು. ಮನೆಗೆ ಬಂದ ಅಕ್ಕ, ಭಾವ, ಅವರ ಮಕ್ಕಳು, ನನ್ನ ಶ್ರೀಮತಿ ಎಲ್ಲರಿಗೂ ಇದು ಆಶ್ಚರ್ಯವಾಗಿತ್ತು. ಎಲ್ಲರೂ ನನ್ನನ್ನೂ ಪ್ರಶ್ನೆ ಕೇಳಲಾರಂಬಿಸಿದರು, ಹುಳು ಎಲ್ಲಿ ಹೋಯಿತು. ಈ ಕಡಲೇಕಾಯಿ ಬೇಜದೊಳಗೆ ಅಷ್ಟು ದೊಡ್ಡ ಹುಳ ಹೇಗೆ ಹೋಯಿತು? ಈಗ ಅದರೊಳಗೆ ಏನು ಮಾಡುತ್ತಿದೆ? ಮೊದಲಾದ ಪ್ರಶ್ನೆಗಳ ಸುರಿಮಳೆ.
ನನಗೆ ಗೊತ್ತಿದ್ದಷ್ಟನ್ನು ಮಾತ್ರ ಅವರಿಗೆ ಹೇಳಿದೆ. ಉಳಿದಂತೆ ನನಗೂ ಇದು ಮೊದಲನೇ ಬಾರಿ ಈ ರೀತಿ ನೋಡುತ್ತಿರುವ ಅನುಭವ ಕುತೂಹಲ. ಮೂರುವರೇ ವರ್ಷದ ವಷೀಣಿಯಂತೂ " ಮಾಮ ಆ ಕಡಲೇಕಾಯಿ ಬೀಜದ ಒಳಗೆ ಕುಳಿತು ಅದು ಏನು ಮಾಡುತ್ತಿದೆ? ಅದು ಆಟ ಆಡುವುದಿಲ್ಲವೇನು? ಊಟ ಮಾಡುವುದಿಲ್ಲವಾ? ಟಾಯ್ಲೆಟ್ಟಿಗೆ ಹೋಗುವುದಿಲ್ಲವಾ? ಅದು ಯಾವಾಗ ಹೊರಗೆ ಬರುತ್ತೆ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಳು.

ನಾನು " ಅದು ಒಂದು ವಾರದ ನಂತರ ಹೊರಬರುತ್ತದೆ. ಆಗ ಪೂರ್ತಿಯಾಗಿ ಬೆಳೆದ ಜೋಡಿ ರೆಕ್ಕೆಗಳು, ಕಾಲುಗಳು, ಮೀಸೆ ಎಲ್ಲಾ ಇರುತ್ತದೆ. ಆಮೇಲೆ ಹಾರಿಹೋಗುತ್ತದೆ" ಎಂದಾಗ ಅವಳ ಮುಖದಲ್ಲಿ ಸಂಭ್ರಮ ಆಶ್ಚರ್ಯ.

ಇದಾದ ಮೂರು ನಾಲ್ಕು ದಿನ ಏನೂ ಬದಲಾವಣೆ ಕಾಣಲಿಲ್ಲ. ಮನೆಯಲ್ಲಿ ಮಾತ್ರ ಅದನ್ನು ಗಮನಿಸುವುದು ಪ್ರಶ್ನೆ-ಉತ್ತರಗಳ ಮಾತುಕತೆ ನಡೆದೇ ಇತ್ತು. ಮೂರನೇ ದಿನಕ್ಕೆ ಪ್ಯೂಪ ಚಿನ್ನದ ಬಣ್ಣಕ್ಕೆ ತಿರುಗಿತ್ತು. ಐದನೇ ದಿನಕ್ಕೆ ನಿದಾನವಾಗಿ ಅದರ ಬಣ್ಣ ಮತ್ತೆ ಬದಲಾಗತೊಡಗಿತ್ತು. ಚಿನ್ನದ ಬಣ್ಣವೆಲ್ಲಾ ಕರಗಿ ಒಳಗಿನ ಕೋಶಗಳಲ್ಲಿ ಕಾಣುವಂತೆ ಪಾರದರ್ಶಿಯಾಗಿ ಬದಲಾಗತೊಡಗಿತು.
ಸರಿಯಾಗಿ ಎಂಟನೇ ದಿನ ಬೆಳಿಗ್ಗೆ ೫ ಗಂಟೆಗೆ ನೋಡಿದರೆ ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ! ಒಳಗೆ ಪೂರ್ತಿ ಬೆಳದ ಚಿಟ್ಟೆ ಅಸ್ಪಷ್ಟವಾಗಿ ಕಾಣಿಸುತ್ತಿದೆ. ಆ ತಕ್ಷಣ ನಾನು ಪುಸ್ತಕವನ್ನು ನೋಡಿದೆ.ಅದರಲ್ಲಿ ಕಪ್ಪು ಬಣ್ಣ ಬಂದ ನಂತರ ಚಿಟ್ಟೆ ಬರುತ್ತದೆ ಎಂದು ಬರೆದಿತ್ತು. ಕೂಡಲೇ ಎದ್ದು ಅವಸರದಲ್ಲಿ ನನ್ನ ಕ್ಯಾಮೆರ, ಸ್ಟ್ಯಾಂಡ್, ರೋಲ್ ಎಲ್ಲವನ್ನು ಸಿದ್ದಪಡಿಸಿಕೊಂಡು ತಯಾರಾದೆ. ಅಷ್ತರಲ್ಲಿ ನನ್ನ ಶ್ರೀಮತಿ ಬಂದಳು. ಅವಳಿಗೂ ಕುತೂಹಲ. ಒಂದು ವಾರದಿಂದ ಈ ಕಡಲೆಕಾಯಿ ಗಾತ್ರದ ಬೀಜದ ಒಳಗೆ ಬೆಳೆದು ಹೊರಬರುವ ಚಿಟ್ಟೆಯನ್ನು ನೋಡುವ ಕುತೂಹಲ.

ಸುಮಾರು ೭ ಗಂಟೆಯ ಸಮಯಕ್ಕೆ ನಿದಾನವಾಗಿ ಬಾಗಿಲು ತೆಗೆದು ಹೊರಬರುವಂತೆ ಚಿಟ್ಟೆ ಹೊರಕ್ಕೆ ಬರತೊಡಗಿತು. ಮೊದಲು ತಲೆ ಭಾಗ ಬಂತು. ನಂತರ ನಿಧಾನವಾಗಿ ಮೀಸೆ, ಹೊಟ್ಟೆ ಭಾಗ, ಕೆಳಭಾಗ ಎಲ್ಲವೂ ನೋಡು ನೋಡುತ್ತಿದ್ದಂತೆ ಆ ವ್ಯೂಹದಿಂದ ಹೊರಬಂದು, ಅನಂತರ ಆ ಪ್ಯೂಪವನ್ನೇ ತನ್ನ ಕಾಲುಗಳಿಂದ ಹಿಡಿದುಕೊಂಡು ನೇತಾಡತೊಡಗಿತು. ನಾನಂತೂ ಪೋಟೋ ತೆಗೆಯುವುದನ್ನು ಬಿಟ್ಟು ಪ್ರಾಕೃತಿಕ ಸೃಷ್ಟಿಯನ್ನು ತದೇಕಚಿತ್ತದಿಂದ ನೋಡುತ್ತಿದ್ದೆ. ನನ್ನ ಶ್ರೀಮತಿ ಫೋಟೋ ತೆಗೀರಿ ಎಂದಾಗಲೇ ನಾನು ತಕ್ಷಣ ಕೆಲವು ಫೋಟೊ ತೆಗೆದಿದ್ದು, ಆ ಸಮಯದಲ್ಲಿ ಅದರ ರೆಕ್ಕೆಗಳು ಒದ್ದೆ ಬಟ್ಟೆಯಂತೆ ಮಡಿಕೆ ಹಾಕಿಕೊಂಡಿದ್ದವು. ನಿದಾನವಾಗಿ ಸೂರ್ಯನ ಶಾಖ ಅದರ ರೆಕ್ಕೆಯ ಮೇಲೆ ಬೀಳತೊಡಗಿದಾಗ ಬೆಳಕಿಗೆ ಅಭಿಮುಖವಾಗಿ ಚಿಟ್ಟೆ ನೇತಾಡತೊಡಗಿತ್ತು. ಸುಮಾರು ಒಂದು ಗಂಟೆಯ ಕಾಲಹಾಗೆ ತನ್ನ ರೆಕ್ಕೆಗಳನ್ನು ಒಣಗಿಸಿಕೊಳ್ಳುವುದು, ನಡುವೆ ತನ್ನ ಉದ್ದ ನಾಲಗೆಯನ್ನು ಹೊರತೆಗೆದು ಸುರುಳಿಯಂತೆ ಸುತ್ತುವುದು ನಡೇದೇ ಇತ್ತು.
ಅಕ್ಕನ ಮಕ್ಕಳು " ಮಾಮ ಈ ಚಿಟ್ಟೆ ಹುಡುಗನೋ, ಹುಡುಗಿಯೋ ಎಂದು ಕೇಳಿದ ಪ್ರಶ್ನೆಗೆ ನಾನು ದಂಗಾಗಿದ್ದೆ. ಕೊನೆಗೆ ನಾನು ಆ ಪ್ರಶ್ನೆಗೆ ಉತ್ತರ ಹೇಳಲಾಗದೆ ಹಾರಿಕೆ ಉತ್ತರ ನೀಡಿ ಸುಮ್ಮನಾದೆ. ಸುಮಾರು ಹೊತ್ತಿನವರೆಗೆ ಆ ಮಕ್ಕಳ ನನ್ನ ಪ್ರಶ್ನೋತ್ತರ ಹಾಗೂ ಫೋಟೊ ತೆಗೆಯುವುದು ನಡೆದಿತ್ತು. ಎಂಟು ಗಂಟೆಯ ಹೊತ್ತಿಗೆ ಒಂದೆರಡು ಬಾರಿ ಚಿಟ್ಟೆ ರೆಕ್ಕೆ ಬಡಿಯಿತು.
ಮತ್ತೆ ಎರಡು ನಿಮಿಷದ ನಂತರ ಅದು ರೆಕ್ಕೆ ಬಡಿದು ಹಾರಿ ಮತ್ತೊಂದು ಜಾಗದಲ್ಲಿ ಕೂತಿತು. ನಾನು "ಈಗ ಎಲ್ಲರೂ ಟಾಟಾ ಮಾಡಿ ಬೈ ಬೈ ಹೇಳಿ! ಅದು ಹಾರಿ ಹೋಗುತ್ತದೆ" ಎಂದೆ. ಎಲ್ಲರೂ ಟಾಟಾ ಬೈ ಬೈ ಹೇಳಿದರು. ನಂತರ ಆ ಚಿಟ್ಟೆ ರೆಕ್ಕೆ ಬಡಿಯುತ್ತಾ ಹಾರಿ ಹೋಗಿ ಪ್ರಕೃತಿಯೊಳಗೆ ಒಂದಾಯಿತು.

ಸುಮಾರು ಹದಿನೈದು ದಿನಗಳಿಂದ ನಮ್ಮ ಮನೆಯ ಅತಿಥಿಯಾಗಿ ಎಲ್ಲರ ಆಶ್ಚರ್ಯ ಕುತೂಹಲ ಕೆರಳಿಸಿ ಚರ್ಚೆಗಳಿಗೆ ಈಡು ಮಾಡಿ ಎಲ್ಲರಿಗೂ ಹೊಸ ವಿಭಿನ್ನ ಅನುಭವ ನೀಡಿದ್ದ ಆ "ಪಾತರಗಿತ್ತಿ ಸುಂದರಿ" ಆ ಸುಂದರ ಮುಂಜಾವಿನಲ್ಲಿ ಹಾರಿಹೋಗಿತ್ತು.

ಶಿವು ಕೆ
[ಜೂನ್ ೧ ನೇ ೨೦೦೬ ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಫೋಟೊ ಸಹಿತ ಪ್ರಕಟವಾದ ಲೇಖನ]

Saturday, September 20, 2008

ಪಕ್ಷಿಲೋಕದ ಸಂದೇಶ

ನೀಲಿ ಬಾಲದ ಕಳ್ಳಿಪೀರ ಪಕ್ಷಿಗಳ ಸಚಿತ್ರ ಜೀವನ ಚರಿತ್ರೆ. ಅವನ್ನು ನೋಡಿ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ಪ್ರತಿ ಚಳಿಗಾಲಕ್ಕೂ ಛಾಯಗ್ರಹಣ ನೆಪದ ಮೇಲೆ ರಂಗನತಿಟ್ಟಿನಲ್ಲಿ ಸರ್ಕೀಟು ಹೋಡೆಯುತ್ತಾ ಪಕ್ಷಿಗಳನ್ನು ಕಂಡು ಪುಳಕಿತನಾಗುವುದು ನನ್ನ ಇಷ್ಟದ ಹವ್ಯಾಸ. ಬೇಸಿಗೆಯಲ್ಲೂ ಕಣ್ಣಿಗೆ ತಂಪಾಗುವ ತಾಣ ಯಾವುದಾದರೂ ಇವೆಯೇ ಎಂದು ಹುಡುಕಿದಾಗ ನಮಗೆ ಕಣ್ಡಿದ್ದು ಶ್ರೀರಂಗಪಟ್ಟಣದಿಂದ ಎಂಟು ಕಿ.ಮೀ. ದೂರದಲ್ಲಿರುವ ನಗುವನಹಳ್ಳಿ ಗ್ರಾಮದ ಕಾವೇರಿ ದಂಡೆ. ಇದಕ್ಕೆ ಸಮೀಪದಲ್ಲೇ ವಿಶಾಲ ಹುಲ್ಲುಗಾವಲಿನಂತಿರುವ ಮೈದಾನವಿದೆ. ಅದನ್ನು ಸೀಳುವ ಒಂದು ಕಾಲುವೆ ನದಿಯನ್ನು ಸೇರುತ್ತದೆ.

ಈ ಕಾಲುವೆಯಲ್ಲಿ ಸುತ್ತ ಮುತ್ತ ನೀಲಿಬಾಲದ ಹಕ್ಕಿಗಳ ಇಂಚರ ಹುಡುಗಾಟ-ಬೇಟೆ-ಬೇಟ. ಕಾಲುವೆ ಗೋಡೆಯಲ್ಲಿ ೨ ರಿಂದ ೫ ಆಡಿ ಎತ್ತರದಲ್ಲಿ ಹಳ್ಳಗಳು ಈ ನೀಲಿಬಾಲದ ಪಕ್ಷಿಗಳ ಗೂಡು ಕಟ್ಟುವ ತಾಣ.

ಇಲ್ಲಿ ಈ ಪಕ್ಷಿಗಳು ಒಟ್ಟಾಗಿ ಹಾರಾಡುವುದು, ಒಟ್ಟಾಗಿ ವಿದ್ಯುತ್ ತಂತಿ ಮೇಲೆ ಕುಳಿತುಕೊಳ್ಳುವುದು, ಆಕಾಶದಲ್ಲಿ ಚಿಟ್ಟೆ, ಡ್ರ್ಯಾಗನ್ ಫ್ಲೈ, ಜೇನುಹುಳು,ದುಂಬಿ ಸೇರಿದಂತೆ ಎಷ್ಟೋ ಕೀಟಗಳನ್ನು ಗುರಿ ತಪ್ಪದ ಹಾಗೆ ಹಾರುತ್ತಲೇ ತನ್ನ ಕೊಕ್ಕಿನಲ್ಲಿ ಬೇಟೆಯಾಡುವ ಪರಿ ಚಂದಕ್ಕಿಂತ ಚಂದ. ಮೇಲ್ಮುಖ-ಕೆಳಮುಖ-ಲಂಬಕಾರ ಹೀಗೆ ಹೇಗೆಂದರೆ ಹಾಗೆ ಹಾರಾಡಬಲ್ಲ-ಹಾರುತ್ತಲೇ ಹಠಾತ್ತನೆ ದಿಕ್ಕು ಬದಲಿಸಬಲ್ಲ ಇವು ಯುದ್ಧ ವಿಮಾನಗಳನ್ನು ನೆನಪಿಸುತ್ತವೆ. ಬೇಟೆಯ ಹಿಂದೆ ಬಿದ್ದು ತನ್ನ ಕೊಕ್ಕಿನಿಂದ ಹಿಡಿದಾಗ "ಪಟ್" ಶಬ್ದ ಕೇಳಿಸಿತೆಂದರೆ ಬಡಪಾಯಿ ಕೀಟಕ್ಕೆ ಮೋಕ್ಷ ಸಿಕ್ಕಿದೆ ಎಂದೆ ಅರ್ಥ. ಇದನ್ನು ಕಾಣಲು ಕಣ್ಣಿನ ಸಾಮಾರ್ಥ್ಯ ಸಾಕಾಗುವುದಿಲ್ಲ. ಅದಕ್ಕೆ ಬೈನಾಕ್ಯುಲರಿನ ನೆರವು ಬೇಕೇಬೇಕು. ಮೇ ತಿಂಗಳು ಉರಿಬಿಸಿಲು. ಈ ಪಕ್ಷಿಗಳು ಬೇಸಿಗೆಯಲ್ಲಿ ಗೂಡು ಕೊರೆದು ಮೊಟ್ಟೆಯಿಟ್ಟು, ಕಾವು ಕೊಟ್ಟು ಹೊರಬಂದ ಮರಿಗಳಿಗೆ ಆಹಾರ ಕೊಡುತ್ತವೆ. ಏಕೆಂದರೆ ಆ ಸಮಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಕಾಲುವೆ ಬದಿಗಳು ಗೂಡು ಕೊರೆಯಲು ಸಹಾಯಕವಾಗಿರುತ್ತವೆ. ಇಂಥ ೩-೪ ಅಡಿ ಎತ್ತರದ ಕಾಲುವೆ ಬದಿಗಳಲ್ಲಿ ೫-೬ ಗೂಡುಗಳು, ಕೆಲವೊಂದು ಕಡೆ ೧೦-೧೨ಕ್ಕೂ ಹೆಚ್ಚು ಗೂಡುಗಳು ಕಂಡುಬರುತ್ತವೆ. ಇನ್ನು ಕೆಲವು ಕಡೆ ಇಪ್ಪತ್ತಕ್ಕೂ ಹೆಚ್ಚು ಪಕ್ಷಿಗೂಡುಗಳಿದ್ದು ಒಳಗಿರುವ ಮರಿಗಳಿಗೆ ಸೂಚನೆ ನೀಡಿ ಆಹಾರ ಕೊಡುವಾಗ ಸಂಭ್ರಮಿಸುವ ರೀತಿ ಆಶ್ಚರ್ಯವನ್ನುಂಟು ಮಾಡುತ್ತವೆ. ಕ್ಯಾಮರ, ಲೆನ್ಸುಗಳನ್ನು ಸ್ಟ್ಯಾಂಡಿಗೆ ಸೆಟ್ ಮಾಡಿ ಕೇಬಲುಗಳನ್ನು ಕ್ಯಾಮರಗಳಿಗೆ ತಗುಲಿಸಿ ಸುಮಾರು ೭೦ ಅಡಿಗಳಷ್ಟು ದೂರದಲ್ಲಿ ರಿಮೋಟ್ ಸ್ವಿಚ್ ಹಿಡಿದು ಕುಳಿತಾಗ ಬೆವರು ಇಳಿಯುತ್ತಿದ್ದರೂ ಕ್ಯಾಮೆರಾ ಫೋಕಸ್ ಮಾಡಿದ ಗಿಡದ ಕಡ್ಡಿಯ ಮೇಲೆ ನೀಲಿ ಬಾಲದ ಕಳ್ಳಿ ಪೀರ ಹಕ್ಕಿಗಳು ಯಾವಾಗ ಬಂದು ಕುಳಿತುಕೊಳ್ಳುತ್ತವೋ ಎಂದು ಎದೆ ಹೊಡೆದುಕೊಳ್ಳುತ್ತಿತ್ತು. ಎರಡು ಗಂಟೆ ಕಳೆದ ನಂತರ ಒಂದು ಹಕ್ಕಿ ಬಂದು ಕುಳಿತುಕೊಂಡಿತು.

ಹತ್ತು ಸೆಕೆಂಡಿನ ನಂತರ ತನ್ನ ಗೂಡಿಗೆ ಹೋಗಿ ತಾನು ಹಿಡಿದು ತಂಡಿದ್ದ ಆಹಾರವನ್ನು ಮರಿಗಳಿಗೆ ಕೊಟ್ಟು ವಾಪಾಸ್ ಹೊರಗೆ ಹಾರಿಹೋಯಿತು. ಸ್ವಲ್ಪ ಹೊತ್ತಿನ ನಂತರ ಇನ್ನೊಂದು, ಮಗದೊಂದು ಬಂದು ಆ ಕಡ್ಡಿಯ ಮೇಲೆ ಕೂರಲಾರಂಭಿಸಿದೆವು. ಪ್ರತಿಯೊಂದು ಹಕ್ಕಿ ತನ್ನದೇ ಆದ ಪ್ರತಿಭೆಯಿಂದ ಕೊಕ್ಕಿನಲ್ಲಿ ಹಿಡಿದುತಂದ ಆಹಾರದಲ್ಲಿ ವಿಭಿನ್ನತೆಗಳೆಷ್ಟು? ಪ್ರತಿಯೊಬ್ಬರಲ್ಲೂ ಒಂದೊಂದು ವಿಭಿನ್ನ ಪ್ರತಿಭೆ ಇರುವಂತೆ, ಒಂದು ಹಕ್ಕಿ ಕಡುನೀಲಿ ಬಣ್ಣದ ದುಂಬಿ ಹಿಡಿದು ತಂದರೆ,
ಮತ್ತೊಂದರ ಬಾಯಲ್ಲಿ ಜೀಬ್ರಾ ಬಣ್ಣದ ಪಟ್ಟಿಯಿರುವ ಡ್ರ್ಯಾಗನ್ ಫ್ಲೇ. ಇನ್ನೊಂದು ಹಕ್ಕಿ ಕೆಂಪು ಬಣ್ಣದ ಮಿರುಗುವ ಡ್ರ್ಯಾಗನ್ ಫ್ಲೇ ತಂದರೆ ಮಗದೊಂದು ಹಕ್ಕಿ ಹಳದಿ ಬಣ್ಣದಲ್ಲಿ ಕಪ್ಪು ಚುಕ್ಕಿಗಳಿರುವ "ಲೈಮ್ ಬಟರ್ ಫ್ಲೇ" ಎಂಬ ಹೆಸರಿನ ಸುಂದರ್ ಚಿಟ್ಟೆಯನ್ನೇ ಬಾಯಲ್ಲಿರಿಸಿಕೊಂಡಿದೆ.

ಜೇನು ಹುಳು, ಮಿಡತೆಗಳು ಇನ್ನು ಆನೇಕ ಜಾತಿಯ ಕೀಟಗಳು ಇವುಗಳ ಕಣ್ಣಿಗೆ ಮಾತ್ರ ಬೀಳುತ್ತವೆಯೇನೋ! ಬೈನಾಕ್ಯುಲರಿನಲ್ಲಿ ಎಲ್ಲವನ್ನು ನೋಡುತ್ತಿದ್ದರೆ ಇವೆಲ್ಲವನ್ನು ಸೃಷ್ಟಿಸಿದ, ನೋಡುವ ಭಾಗ್ಯ ಕರುಣಿಸಿದ ಪ್ರಕೃತಿ ದೇವನಿಗೆ ನಮೋ ನಮಃ ಎಂದು ಮನಸ್ಸಿನಲ್ಲಿಯೇ ಹೇಳುವಂತಾಯಿತು.

ಹೊಳೆಯಲ್ಲಿ ಬಟ್ಟೆ ತೊಳೆಯಲು ಬರುವ ಹಳ್ಳಿಯ ಜನರು ಹಕ್ಕಿಗಳ ಗೂಡುಗಳಿವೆ ಎಂದು ತಿಳಿಯದೆ, ಪಕ್ಷಿಗೂಡುಗಳು ಮುಚ್ಚಿಹೋಗುವಂತೆ ಬಟ್ಟೆ ಒಣಹಾಕುತ್ತಿದ್ದರು. ಈ ಬಟ್ಟೆಗಳಿಂದ ಹೆದರಿದ ಹಕ್ಕಿಗಳು ಬಾಯಲ್ಲಿ ಆಹಾರ ತಂದರೂ ಗೂಡಿಗೆ ಹೋಗಲು ಹಿಂಜರಿಯುತ್ತಿದ್ದವು. ಅಲ್ಲಿಯೇ ಇದ್ದ ನಾನು ಆ ಹಳ್ಳಿ ಜನರಿಗೆ ಅವರೇ ಹಾಕಿರುವ ಬಟ್ಟೆಗಳ ಹತ್ತಿರದಲ್ಲಿರುವ ಗೂಡುಗಳನ್ನು ತೋರಿಸಿ, ಒಳಗೆ ಮರಿಗಳು ಇವೆ. ವಿದ್ಯುತ್ ತಂತಿ ಮೇಲೆ ಆಹಾರ ಕೊಡಲು ಕಾಯುತ್ತಿರುವ ಹಕ್ಕಿಗಳು ನೀವು ಹಾಕಿರುವ ಬಟ್ಟೆಗಳಿಂದಾಗಿ ಹೆದರಿಕೊಂಡು ಗೂಡಿಗೆ ಬರಲು ಹಿಜರಿಯುತ್ತಿವೆಯೆಂದು, ಇದರಿಂದಾಗಿ ಮರಿಗಳು ಉಪವಾಸದಿಂದ ಸತ್ತುಹೋಗುತ್ತವೆ ಎಂದು ಅವರಿಗೆ ವಿವರಿಸಿದಾಗ ಅವರಿಗೆ ತಮ್ಮ ತಪ್ಪಿನ ಅರಿವಾಗಿ, ತಮ್ಮ ಬಟ್ಟೆಗಳನ್ನು ಅಲ್ಲಿಂದ ತೆಗೆದುಹಾಕಿದರು.
ಇದೆಲ್ಲದರ ನಡುವೆ ಈ ಪಕ್ಷಿಗಳ ಛಾಯಾಚಿತ್ರ ಸೆರೆಹಿಡಿಯುವ ನಮ್ಮ ಕಾಯಕವು ಮುಂದುವರಿದಿತ್ತು. ಎಲ್ಲಾ ಮುಗಿಸಿ ಸಂಜೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ರೈಲ್ವೇ ನಿಲ್ದಾಣದಲ್ಲಿ ಬೆಂಗಳೂರಿನ ರೈಲು ಹತ್ತಿದಾಗ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸುತ್ತಿದ್ದ. ನನ್ನ ಮನಸ್ಸಿನಲ್ಲಿ ನೀಲಿ ಬಾಲದ ಕಳ್ಳಿ ಪೀರ ಪಕ್ಷಿಗಳು, ಅವುಗಳ ಚಿತ್ರಗಳೇ ಅಚ್ಚೊತ್ತಿದ್ದವು. ಅವು ನೀಡಿದ ಭಾತೃತ್ವದ ಸಂದೇಶ ಹಸಿರಾಗಿತ್ತು.
ಶಿವು ಕೆ.
[ದಿನಾಂಕ ೨೩ ಆಗಸ್ಟ್ ೨೦೦೭ರ ಸುಧಾ ವಾರಪತ್ರಿಕೆಯಲ್ಲಿ ಫೋಟೊ ಸಹಿತ ಪ್ರಕಟಗೊಂಡ ಲೇಖನ].

Wednesday, August 27, 2008

ಮತ್ತೊಮ್ಮೆ ತಾಯಿಹಕ್ಕಿ ಗ್ರೀನ್ ಬೀ ಹೀಟರ್ ಗೂಡಿಗೆ ಮರಳುವುದನ್ನು ದೊಡ್ಡ ಪೊದೆಯೊಂದರಲ್ಲಿ ಅಡಗಿ ಕುಳಿತು ಹೊಂಚು ಹಾಕಿ ಕಾಯುತ್ತಿದ್ದೆ. ಪೊದೆಯಿಂದ ಹೊರಬಂದಾಗ ಮೈಯಿಡೇ ರಕ್ತ. ಹಕ್ಕಿಯ ಧ್ಯಾನದಲ್ಲಿದ್ದವನಿಗೆ ಪೊದೆಯ ಮುಳ್ಳುಕಡ್ಡಿಗಳು ಗೀರಿದ್ದು ಗೊತ್ತೆ ಆಗಿರಲಿಲ್ಲ.