"ನಮಗೆ ಸ್ನಾನಕ್ಕೆ ಹಾಟ್ ವಾಟರ್ ಬೇಕಲ್ಲ?" ನಾನು ಕೇಳಿದೆ.
ಆತ ನಮ್ಮಿಬ್ಬರನ್ನು ಆಶ್ಚರ್ಯದಿಂದ ನೋಡಿದ. ಬಹುಶಃ ನನ್ನ ಕೇಳುವಿಕೆಯೇ ಅವನಿಗೆ ವಿಚಿತ್ರವೆನಿಸಿರಬೇಕು.
ಅವನಿಗೆ ಕೇಳಿಸಲಿಲ್ಲವೇನೋ ಅಂದುಕೊಂಡು ಮತ್ತೊಮ್ಮೆ ಕೇಳಿದೆ.
"ನಮ್ಮಲ್ಲಿ ಹಾಟ್ ವಾಟರ್ ಸಿಗೋಲ್ಲ ಸರ್" ಹೇಳಿದ.
"ಇಷ್ಟು ದೊಡ್ದ ರಿಸಾರ್ಟ್ ಇಟ್ಟುಕೊಂಡಿದ್ದೀರಿ... ಯಾಕೆ ಸಿಗೋಲ್ಲ"...ಮತ್ತೆ ನನ್ನ ಅಸಮಧಾನ
"ಸಾರಿ ಸರ್, ಅದನ್ನು ನಮ್ಮ ಬಾಸ್ ಬಳಿ ಕೇಳಿಕೊಳ್ಳಿ....ಅವರನ್ನೇ ಕಳಿಸುತ್ತೇನೆ"
ರಾತ್ರಿಯೆಲ್ಲಾ ರೈಲಲ್ಲಿ ನಿದ್ರೆಯಿಲ್ಲದೇ ಪ್ರಯಾಣ ಮಾಡಿ ಮುಂಜಾನೆ ಏಳುಗಂಟೆಗೆ ಆ ರಿಸಾರ್ಟ್ ಸೇರಿಕೊಂಡಿದ್ದೆವು. ಮತ್ತೆ ನಮ್ಮ ಆ ದಿನದ ಚಟುವಟಿಕೆಗೆ ಸಿದ್ಧರಾಗಲೂ ಸ್ನಾನವಾಗಲೇ ಬೇಕಿತ್ತು. ಆ ರೀಸಾರ್ಟ್ ನೋಡಲು ಬಲುಸುಂದರವಾಗಿದ್ದು ಸುತ್ತ ಮರಗಳಿದ್ದು ಅಹ್ಲಾದಕರ ವಾತಾವರಣವಿದ್ದರೂ ಬಾತ್‍ರೂಮಿನಲ್ಲಿ ಬಿಸಿನೀರಿನ ವ್ಯವಸ್ಥೆಯಿರಲಿಲ್ಲ. ಅದಕ್ಕಾಗಿ ಅಲ್ಲಿನ ರೂಂಬಾಯ್‍ನನ್ನು ಕೇಳಿದಾಗ ಅವನಿಂದ ಇಂಥ ಉತ್ತರ ಬಂದಿತ್ತು. ಅದೋ ಅವನ ಬಾಸ್ ಬರುತ್ತಿದ್ದಾನೆ. ನೋಡಲು ಆಫ್ರಿಕನ್ ತರ ಕಾಣುವ ಆತ ಕೂದಲಿಗೆ ಜಡೆಹಾಕಿ ರಬ್ಬರ್ ಬ್ಯಾಂಡ್ ಹಾಕಿದ್ದ. ದೇಹಬಣ್ಣವಂತೂ ಕಪ್ಪುಮಸಿಯಂತಿತ್ತು. ಜಾಗಿಂಗ್ ಪ್ಯಾಂಟ್ ಮಾತ್ರ ಹಾಕಿಕೊಂಡು ಟಾಪ್ ಲೆಸ್ ಹಾಗಿದ್ದ ಅವನನ್ನು ಮತ್ತೆ ಸ್ನಾನಕ್ಕೆ ನೀರು ಕೊಡಬೇಕೆಂದು ಕೇಳಿದೆ.
"ಸಾರಿ ಸರ್, ನಮ್ಮಲ್ಲಿ ಬಿಸಿನೀರು ಸಿಗೋಲ್ಲ."
"ಯಾಕೆ ಸಿಗೋಲ್ಲ, ನಾವು ಈಗ ತಾನೆ ಪ್ರಯಾಣ ಮಾಡಿ ಬಂದಿದ್ದೇವೆ. ನಮ್ಮ ಆಯಾಸ ಪರಿಹಾರಕ್ಕಾಗಿ ಬಿಸಿನೀರು ಸ್ನಾನ ಮಾಡಲೇಬೇಕು ನೀವು ಅದನ್ನು ವ್ಯವಸ್ಥೆ ಮಾಡಬೇಕು?" ನಾನು ಆರ್ಡರ್ ಮಾಡುವಂತೆ ಮಾತಾಡಿದೆ.
"ನೋಡಿಸರ್, ಫಾರಿನರ್ಸ್ ಯಾರು ಬಿಸಿನೀರು ಕೇಳಲ್ಲ.....ಮತ್ತೆ ಅವರು ಲೈಕ್ ಮಾಡಲ್ಲ....ಅದಕ್ಕೆ ನಮ್ಮಲ್ಲಿ ಅದರ ಫೆಸಿಲಿಟಿ ಇಲ್ಲ ಸರ್"
"ಆರೆರೆ....ನಾವು ಇಂಡಿಯನ್ಸ್ ನಮಗೆ ಬೇಕಲ್ಲ" ನೀವು ಕೊಡಲಿಲ್ಲ ಅಂದ್ರೆ ನಾವು ಬೇರೆ ರೆಸಾರ್ಟಿಗೆ ಹೋಗುತ್ತೇವೆ."
"ಸಾರಿ ಸರ್, ಇವತ್ತು ಸಿಗೋಲ್ಲ. ಇವತ್ತೊಂದು ದಿನ ಅಡ್ಜೆಸ್ಟ್ ಮಾಡಿಕೊಳ್ಳಿ ನಾಳೆ ಬೇಕಾದ್ರೆ ವ್ಯವಸ್ಥೆ ಮಾಡುತ್ತೇನೆ'
ನಮ್ಮನ್ನು ಸಮಾಧಾನಿಸಲು ಅವನು ಹೇಳಿದಾಗ ನಾವು ಆಗಲೇ ಸುಸ್ತಾಗಿದ್ದರಿಂದ ಮತ್ತು ಬೇರೆ ಹೋಟಲ್ಲುಗಳನ್ನು ಹುಡುಕುವ ಮನಸ್ಸು ಇರಲಿಲ್ಲವಾದ್ದರಿಂದ ಒಪ್ಪಿಕೊಂಡೆವು.
ಸ್ವಲ್ಪ ಹೊತ್ತಿಗೆ ಅವನ್ಯಾಕೆ ನಮಗೆ ಬಿಸಿನೀರು ಕೊಡಲಿಲ್ಲವೆನ್ನುವುದು ನಮ್ಮ ಆನುಭವಕ್ಕೆ ಬರತೊಡಗಿತು. ಬೆಳಗಿನ ಎಂಟುಗಂಟೆಗೆ ನಮ್ಮ ಮೈಯಲ್ಲಾ ಬಿಸಿಯಾಗಿ ಬೆವರು ಸುರಿಯಲಾರಂಭಿಸಿತು. ತಿಂಡಿ ಮುಗಿಸಿ ಒಂದಷ್ಟು ಹೊತ್ತು ಸುತ್ತಾಡಿ ಬರುವ ಹೊತ್ತಿಗಾಗಲೇ ಸಮಯ ಹನ್ನೊಂದುಗಂಟೆ ಆಗಂತೂ ನಮ್ಮ ಮೈಯಲ್ಲಾ ಒದ್ದೆಯಾಗುವಷ್ಟು ಬೆವರು ಬಂದು ನಮಗೆ ನಡೆಯಲಾರದಷ್ಟು ಸುಸ್ತು ಆಗಿಬಿಟ್ಟಿತ್ತು. ವಾಪಸ್ ರಿಸಾರ್ಟಿಗೆ ಬಂದು ಚೆನ್ನಾಗಿ ತಣ್ಣೀರು ಸ್ನಾನ ಮಾಡಿ ಎರಡು ಗಂಟೆ ಚೆನ್ನಾಗಿ ನಿದ್ರೆ ಮಾಡಿದ ಮೇಲೆ ನಮ್ಮ ಆಯಾಸ ಪರಿಹಾರವಾಗಿತ್ತು. ಇದು ಅಲೆಪ್ಪಿ ಅನ್ನುವ ಕೇರಳದ ಪುಟ್ಟ ನಗರದ ಕತೆ. ನಂತರ ಗೊತ್ತಾಯಿತು ಅಲ್ಲಿ ಬಿಸಿನೀರಿನ ಕಾನ್ಸೆಪ್ಟೇ ಇಲ್ಲ ಅಂತ. ಮತ್ತೆ ಇಷ್ಟು ಸೆಕೆಯಿರುವ ಈ ಊರಿನಲ್ಲಿ ಯಾರು ಬಿಸಿನೀರಿನ ಸ್ನಾನ ಮಾಡುತ್ತಾರೆ ಹೇಳಿ! ಅಲ್ಲೆಲ್ಲಾ ಪ್ರತಿಯೊಬ್ಬರೂ ತಣ್ಣೀರು ಸ್ನಾನ ಮಾಡುವುದೇ ಅಭ್ಯಾಸ. ಇಡೀ ನಗರದ ತುಂಬಾ ಫೊನ್ನುಮಡ ಸರೋವರದ ಕಾಲುವೆಗಳಿದ್ದರೂ ಸದಾ ಸೆಕೆ ವಾತಾವರಣವಿರುತ್ತದೆ.
ಅಲ್ಲಿನ ಹೆಂಗಸರೂ ತಣ್ಣೀರು ಸ್ನಾನವಾದ ನಂತರ ತಲೆ ಒಣಗಿಸದೆ ದಿನಪೂರ್ತಿ ತಲೆ ತಂಪಾಗಿರಲು ಎಣ್ಣೆ ಹಚ್ಚಿ ನೀರು ಜಡೆ ಹಾಕಿಕೊಂಡು ಬಿಡುತ್ತಾರೆ. ಅದಕ್ಕಾಗಿ ಇಡೀ ಊರಿನ ತುಂಬಾ ಹುಡುಗಿಯರ, ಹೆಂಗಸರ ನೀರಜಡೆಗಳೇ ಕಾಣುತ್ತಿರುತ್ತವೆ. ಹೊರಗೆ ಚೆನ್ನಾಗಿ ಬಿಸಿಲು ಬರುತ್ತಿದ್ದರೂಆಗಾಗ ಮಳೆಯೂ ಬರುತ್ತದೆಯಾದ್ದರಿಂದ ಎಲ್ಲ ಹೆಂಗಸರು,ಹೆಣ್ಣುಮಕ್ಕಳುಕೊಡೆಯ ಜೊತೆಯಲ್ಲಿಯೇ ಮನೆಯಿಂದ ಹೊರಬರುವುದು.
ಮತ್ತೆ ಗಂಡಸರ ಕತೆಯೂ ಬೇರೆಯೇನಲ್ಲ. ಎಲ್ಲರೂ ಪಂಚೆಧಾರಿಗಳು. ರಸ್ತೆಯಲ್ಲಿ ಓಡಾಡುವವರು, ಸೈಕಲ್ ತುಳಿಯುವವರು, ಆಟೋ ಓಡಿಸುವವರು, ಕಾರು ಓಡಿಸುವವರು, ಸಣ್ಣ-ದೊಡ್ಡ ದೋಣಿಗಳ ಅಂಬಿಗರು, ರಸ್ತೆ ಮಾಡಿಸುವ ಗುತ್ತಿಗೆದಾರರು, ಹೋಟಲ್ ಮಾಲಿಕರು, ದೊಡ್ಡ ದೊಡ್ಡ ಇಂಡಸ್ಟ್ರೀಯಲಿಷ್ಟ್, [ಕೊನೆಗೆ ನಮ್ಮ ರಕ್ಷಣಾ ಮಂತ್ರಿಯಾದ ಎ.ಕೆ ಆಂಟನಿ ಸಹ ಸದಾ ಪಂಚೆಯಲ್ಲಿರುತ್ತಾರೆ.] ರಸ್ತೆ ಬದಿಯ ವ್ಯಾಪಾರಿಗಳು, ಹೀಗೆ ಪ್ರತಿಯೊಂದು ಪಂಚೆಮಯ.
ಮತ್ತೊಂದು ವಿಚಾರವೇನೆಂದರೇ ಅಲೆಪ್ಪಿಯಲ್ಲಿ ಬಹುತೇಕ ಗಂಡಸರು ಬಾಲ್ಡಿತಲೆಯವರೆ ಆಗಿದ್ದರು. ಅಲ್ಲಿನ ಬಿಸಿ ವಾತವರಣಕ್ಕೆ ಅವರ ತಲೆಕೂದಲೆಲ್ಲಾ ತರಾವರಿ ಶೈಲಿಯಲ್ಲಿ ಉದುರಿಹೋಗಿ ವೈವಿಧ್ಯಮಯ ಭೂಪಟಗಳೇ ಆಗಿದ್ದವು. ಅವುಗಳನ್ನು ನೋಡಿ ನಾನಂತೂ ಖುಷಿಯಿಂದ ಕ್ಲಿಕ್ಕಿಸಿದ್ದೆ.
ಇಷ್ಟೆಲ್ಲಾ ಆದಮೇಲೆ ಮರುದಿನ ಬಿಸಿನೀರಿನ ಕಾನ್ಸೆಪ್ಟನ್ನು ನಾವು ಕೈ ಬಿಟ್ಟೆವು.
ಇದೆಲ್ಲಾ ದೊಡ್ಡವರ ಕತೆಯಾಯ್ತು. ಇನ್ನೂ ಅಲ್ಲಿನ ಮಕ್ಕಳ ಬದುಕೇನು ಅಂತ ಗಮನಿಸಲಾರಂಭಿಸಿದಾಗ ತುಂಬಾ ವಿಭಿನ್ನವಾದ ಆನುಭವವಾಯ್ತು. ಆ ಆನುಭವಗಳನ್ನೆಲ್ಲಾ ಮಾತಿನಲ್ಲಿ ಕೇಳುವುದಕ್ಕಿಂತ ಕ್ಯಾಮೆರಾ ಕಣ್ಣಿನಿಂದ ನೋಡಿದರೇ ಚೆನ್ನಾ ಅಲ್ವೇ!. ಒಂದಷ್ಟು ನೀರ ಮೇಲಿನ ಮಕ್ಕಳು, ನೀರ ಜೊತೆ ಗೆಳೆತನದ ಮಕ್ಕಳು, ನೀರಿಗಂಟಿಕೊಂಡ ಮಕ್ಕಳನ್ನು ನೋಡೋಣ ಬನ್ನಿ.
ನೋಡಿ ಇವರು ನೀರ ಮೇಲಿನ ಮಕ್ಕಳು....
೧. ಹೇ ಸುಮ್ನಿರೋ...ಫೋಟೋ ತೆಗಿತಾವ್ರೇ......

೨. ಅಮ್ಮ ಇನ್ನೂ ಬರ್ಲೇ ಇಲ್ಲಾ.....ಬೇಜಾರಾಗ್ತಿದೆ.

೩. ಅಜ್ಜೀ ಅಲ್ನೋಡು......ಯಾರೋ ನಮ್ಮೂರಿಗೆ ಹೊಸಬರು ಬಂದವ್ರೇ..... 
೪. ಅಪ್ಪಾಜಿ ಎಲ್ಲೋದ್ರು.....ನಾನು ಅಮ್ಮ ಅವಾಗಿಂದ ಕಾಯ್ತಾನೇ ಇದ್ದೀವಿ..... 
೫. ಈ ಸೆಕೇಲಿ ಬರೆಯೋದಿಕ್ಕೆ ಆಗ್ತ ಇಲ್ಲಾ, ಏನಾದ್ರು ಆಗ್ಲಿ ಇವಗ್ಲೇ ಹೋಂವರ್ಕ್ ಮುಗಿಸಿಬಿಟ್ರೆ ಆಟವಾಡಲು ಹೋಗಬಹುದು.....
೬. ಬೇಡ ನೋಡು, ಎಮ್ಮೆ ತರ ಇದ್ದೀಯಾ....ನಿನಗೆ ಸ್ವಲ್ಪನಾದ್ರು ಬುದ್ಧಿ ಬೇಡ್ವ.......

೭. ಏನ್ ಎಲ್ಲಾ ಇಂಗ್ ಕುಣಿತಾವ್ರೆ.... ನನ್ನಮ್ಮ ನನಗೂ ಚೆನ್ನಾಗಿ ಮೇಕಪ್ ಮಾಡಿದ್ದಾಳೆ, ನಾನು ಒಂದು ಕೈ ನೋಡಿಬಿಡ್ಲಾ?
೮. ಅಲ್ಲಿ ಯಾಕೆ ಅಷ್ಟೊಂದು ಜನ ಪೋಲಿಸರು ಅವ್ರೇ.....ಓಹ್ ಸೋನಿಯಾ ಗಾಂಧಿ ಬರುತ್ತಾಳಲ್ಲ....ಅದಕ್ಕೆ ಇಷ್ಟೊಂದು ಸೆಕ್ಯುರಿಟಿ ಇರಬೇಕು.

೯. ಏನ್ ಸ್ಫೀಡಾಗಿ ದೋಣಿ ನಡೆಸ್ತಾರೆ ಅಲ್ವಾ ಅಣ್ಣ....ನೋಡು ಅವರೇ ನೆಹರು ಟ್ರೋಪಿ ಗೆದ್ರು...[ಚಪ್ಪಾಳೆ]
ನೋಡಿ ಇವರೆಲ್ಲಾ ನೀರ ಜೊತೆಗಿನ ಮಕ್ಕಳು.....
೧೦. ಅಲ್ನೋಡ್ ಅಕ್ಕ ಆ ಬೋಟ್ ಮೇಲೆ ಎಂಗೆ ಡ್ಯಾನ್ಸ್ ಮಾಡ್ತಾವ್ರೇ......ಸಕ್ಕತ್ ಮಜಾ ಅಲ್ವಾ....

೧೧. ನಮ್ಮ ಸ್ನೇಕ್ ಬೋಟ್ ರೇಸ್ ವರ್ಲ್ಡ್ ಫೇಮಸ್ಸು, ಅದಕ್ಕೆ ನಾವು ಸ್ಕೂಲಿಗೆ ಚಕ್ಕರ್ ಹೊಡೆದು ನೋಡಕ್ಕೆ ಬಂದಿದ್ದೀವಿ...
೧೨. ಸ್ನೇಕ್ ಬೋಟ್ ರೇಸ್ ಸ್ಪರ್ಧೆಗೆ ಹೋಗಕ್ಕೆ ಮೊದಲು ಈ ರೀತಿನೇ ಅಬ್ಯಾಸ ಮಾಡಬೇಕು ಗೊತ್ತ...ಅದಕ್ಕೇ ನಾನು ಮಾಡ್ತಾ ಇದ್ದೀನಿ.... 
೧೩. ಈ ಸೆಕೇಲಿ ಏನಣ್ಣ ಮೀನ್ ಹಿಡಿಯೋದು, ಇವತ್ತು ಬೋಟ್ ರೇಸ್ ಅಲ್ವಾ ಅದಕ್ಕೆ ಮೀನುಗಳು ರಜಾಹಾಕಿ ನೆಂಟರ ಮನೆಗೆ ಹೋಗಿಬಿಟ್ಟಿರಬೇಕು...

೧೪. ಇವತ್ತು ಸ್ಕೂಲಿಗೆ ರಜಾ ಅಲ್ವಾ......ಅದಕ್ಕೆ ನನ್ನ ಬಟ್ಟೆಗಳನ್ನ ಜಾಲಿಸಿಕೊಳ್ಳುತ್ತಿದ್ದೀನಿ..

೧೫. ಅಮ್ಮ ಹೇಳ್ತಾ ಇದ್ದ ಸಮುದ್ರ ಅಂದ್ರೆ ನೀನೇನಾ!.....ಎಷ್ಟೊಂದು ಗಲಾಟೆ ಮಾಡ್ತಿಯಪ್ಪ ನೀನು........
೧೬. ನಾನು ನಿನ್ನ ನೋಡಕ್ಕೆ ಬಂದಿದ್ದೀನಿ, ಸ್ವಲ್ಪ ಗಂಭೀರವಾಗಿ ಇರಬಾರದಾ...
ಆಹಾ..! ಇವರಂತೂ ನೀರಿಗಂಟಿದ ಮಕ್ಕಳು.....
೧೭. ನೀರಲ್ಲಿ ಬಿದ್ಯಾ, ಒಳ್ಳೇದಾಯ್ತು ಬಿಡು. ಈ ಸೆಕೇಲಿ ಸ್ವಲ್ಪ ತಂಪಾಗುತ್ತೆ.

೧೮. ನೀರು ಅನ್ನೊದು ಎಂಥವರನ್ನೂ ಮಕ್ಕಳನ್ನಾಗಿ ಮಾಡಿಬಿಡುತ್ತೇ ಅಲ್ವಾ....
೧೯. ಹೇ..ಹೇ...ಅಣ್ಣಾ...ನೀರಲ್ಲಿ ಆಡೋದು ಎಂಥ ಮಜಾ ಅಲ್ವಾ...
೨೦. ಆಣ್ಣಾ ಬೇಡ ಕಣೊ, ನನಗೆ ಭಯವಾಗುತ್ತೆ......

೨೧. ಹೋಗ್ಲೀ, ಕಣ್ಣು ಮುಚ್ಚಿಕೊಂಡುಬಿಡ್ತೀನಿ ಇರೋ....ಸ್ವಲ್ಪ.....

೨೨. ವಾಹ್!!....ಎಂಥಾ ಮಜಾ.....

೨೩. ನೋಡಿದ್ಯಾ ಅಣ್ಣಾ........ನೀನು ನೀರು ಎರಚಿದ್ರೂ ನನಗೇನು ಭಯವಾಗಲಿಲ್ಲ...ಎಂಗೆ.....

ಮುಂದಿನ ಭಾಗಗಳಲ್ಲಿ ಸ್ನೇಕ್ ಬೋಟ್ ಸ್ಪರ್ಧೆ, ವೈವಿಧ್ಯಮಯ ಅಲೆಪ್ಪಿ, ಜೊತೆಗೆ ಕೆಲವು ಅಲೆಪ್ಪಿ ಭೂಪಟಗಳು ಬರುತ್ತವೆ...
ಗೆಳೆಯರೆ ನನ್ನ ಲೇಖನಗಳ ಪುಸ್ತಕವೊಂದು ಸಿದ್ದವಾಗುತ್ತಿದೆ.....ಶೀಘ್ರದಲ್ಲಿ ಅದರ ಬಗ್ಗೆ ಇನ್ನಷ್ಟು ವಿವರಗಳನ್ನು ಕೊಡುತ್ತೇನೆ...ಧನ್ಯವಾದಗಳು.
ಚಿತ್ರಗಳು ಮತ್ತು ಲೇಖನ.
ಶಿವು.ಕೆ. ARPS.








































