Monday, May 18, 2009

ಮಾಡೆಲ್ ಒಂದೇ. ಅದ್ರೆ ತಂದೆ ತಾಯಿ ಬೇರೆ."

" ಮೊಬೈಲಿನ ಮೇಲೆ ಅದರ ಮಾಡೆಲ್ ನಂಬರ್ ಯಾಕಿರೊಲ್ಲ.."

" ನಿನ್ ತಲೆ ನಿನ್ನ್ ಮುಖದ ಮೇಲೆ ನೀನು ಸುಬ್ಬ ಅಂತ ಹೆಸರಿದೆಯ...? ಇಲ್ಲವಲ್ಲ...ಹಾಗೇ ಅದರ ಮೇಲು ಇರಲ್ಲ..."

" ಆದ್ರೆ ಇದೇ ಮಾಡಲ್ ನಂಬರಿನ ಮೊಬೈಲ್ ಇವರತ್ರ ಇದೆ. ಹಾಗೇ ನಿಮ್ಮ ಅಪ್ಪನತ್ರನೂ ಇದೆ. ಇವೆರಡರು ನೋಡಲಿಕ್ಕೆ ಒಂದೇ ತರಹ ಇದೆ. ಅದ್ರೂ ಅದು ನಿಮ್ಮಪ್ಪನದು.....ಇದು ಇವರದು ಇದು ಹೇಗೆ ಗೊತ್ತಾಗುತ್ತೆ...."

"ಇವನು ಸಿಕ್ಕಾಪಟ್ಟೆ ತರಲೆ....ಆದ್ರೂ ಇವನು ಫೂರ್ಣ ಪ್ರಜ್ಞ. ನಮ್ಮ ಕ್ಲಾಸಲ್ಲಿ ಇವನ ತರಾನೇ ಇದ್ದಾನೆ. ನೋಡಲಿಕ್ಕೆ ಇವನೇ....ಅದ್ರೆ ಅವನು ಫೂರ್ಣಪ್ರಜ್ಞನಲ್ಲ. ಅವನು ಅಪ್ರಮೇಯ.....ಈಗ ಗೊತ್ತಾಯ್ತಲ್ಲ..ಮಾಡೆಲ್ ಒಂದೇ. ಅದ್ರೆ ತಂದೆ ತಾಯಿ ಬೇರೆ."

------------- ------------------------

" ಶೆಟಲ್ ಕಾಕ್ ಹೋದ್ರೆ ಹೊಸದು ತರಬಹುದು ಜೀವ ಹೋದ್ರೆ ತರಲಿಕ್ಕೆ ಆಗುತ್ತಾ..." ಬ್ಯಾಟ್‌ಮಿಂಟನ್ ಆಡುತ್ತಿದ್ದಾಗ ರಸ್ತೆಯಲ್ಲಿ ವೇಗವಾಗಿ ಬಂದ ಟೂವೀಲರ್ ನೋಡಿ ಎರಡನೇ ತರಗತಿಯ ಆಲೋಕ್ ಕೇಳಿದ...

" ಆಯ್ಯೋ....ಹೋಗೋ....ನಾನಿಲ್ಲ ಅಂದ್ರೆ ನನಗೆ ಇನ್ನೋಬ್ಬ ತಮ್ಮ ಇದ್ದಾನೆ.." ಗಣೇಶ ಪ್ರತಿಕ್ರಿಯಿಸಿದ್ದ....

ಇವರಿಬ್ಬರ ಮಾತನ್ನು ದೂರದಿಂದ ಗಮನಿಸಿದ್ದ ನಾನು ಆ ಕ್ಷಣ ದಂಗಾಗಿದ್ದೆ...

ಹಾಗೆ ಹೇಳಿದ ಗಣೇಶನ ಜೀವನದ ಮುಖ್ಯ ಗುರಿ ರೇಡಿಯೋ ಜಾಕಿ ಆಗುವುದಂತೆ.

-------------- ----------------------

" ಅಂಕಲ್ ನೀವು ನಿಮ್ಮ ಗಾಡಿ ಅಲ್ಲಿ ನಿಲ್ಲಿಸುವಂತಿಲ್ಲ.."

"ಯಾಕೋ ಪ್ರೇರಿತ್"

" ಅಂಕಲ್ ನಾನು ಸೈಕಲ್ ನಮ್ಮ ಓಣಿಯಲ್ಲಿ ಕಲಿತಿದ್ದೀನಲ್ವ...? ನಮ್ಮ ಮನೆಯಿಂದ ಓಣಿಯ ಗೇಟಿನವರೆಗೆ ಹೋಗಿ ಅಲ್ಲಿ ವಾಪಸ್ ಯೂ ಟರ್ನ್ ತೆಗೆದುಕೊಳ್ಳಲು ನಿಮ್ಮ ಗಾಡಿ ನನಗೆ ಆಡ್ಡವಾಗುತ್ತೆ. ಅದಕ್ಕೆ ಇಲ್ಲಿ ನಿಲ್ಲಿಸಿ" ಅವನು ವಯಸ್ಸು ನಾಲ್ಕು. ಆದ್ರೆ ಅವನಿಂದ ಬಂದ ಆರ್ಡರನ್ನು ನಾನು ಪ್ರತೀದಿನ ಪಾಲಿಸುತ್ತಿದ್ದೇನೆ.

---------- ---------------------- -------------

"ಯಾಕೇ ಇಷ್ಟು ತಡವಾಗಿ ಬಂದೆ ?" ಮೈಸೂರಿಂದ ಬೇಸಿಗೆ ರಜೆಗಾಗಿ ಬಂದಿದ್ದ ಅಮಿತ್ ಕೇಳಿದ್ದ. ಅವನು ೯ನೇ ತರಗತಿ.

"ಬಸ್ ವೆರಿ ಸ್ಲೋ. ಅದಕ್ಕೆ ಲೇಟಾಗಿಬಿಡ್ತು ಕಣೋ..." ಆಗ ತಾನೆ ಬಂದ ತೇಜಸ್ವಿನಿ ಉತ್ತರ. ಅವಳು ಮೊದಲ ಪಿ.ಯು.ಸಿ.

"ಮತ್ತೆ ನಿಮ್ಮ ಕಡೇ ಹೇಗೇ ಸಮಾಚಾರ ?"

"ನೋ ಪ್ರಾಬ್ಲಂ ಕಣೋ...ಚಲ್ತಾ ಹೈ...ಅದ್ಸರಿ ಅಲ್ಲಿ ವೆದರ್ ಹೇಗೇ ಕೂಲ್ ಆಗಿದೆಯಾ...?"

"ಪರ್ವಾಗಿಲ್ಲ.......ಆದ್ರೆ ನಿಮ್ಮ ಕಡೆಯಷ್ಟು ತಂಪಿಲ್ಲ ನೋಡು.....?"

"ಹೌದು ನಿಮ್ಮ ರೆಸಲ್ಟ್ ಯಾವಾಗ ಬರುತ್ತೆ?"

"ನಮ್ಮದು ಹದಿನೈದನೇ ತಾರೀಖು. ನಿಮ್ಮ ಪರೀಕ್ಷೆ ಪಲಿತಾಂಶ ಯಾವಾಗ ?"

"ನಮ್ಮದು ದಿಸ್ ಮಂಥ್ ಟೆಂತ್ ಗೆ ಬರುತ್ತೆ."

ಅವರಿಬ್ಬರ ನಡುವೆ ಮಾತು ಸಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಪ್ರಶಾಂತ್ ಬಂದ. ಅವನು ೭ನೇ ತರಗತಿ.

" ಹೇ ಪೌಡ್ರು......ಎಲ್ಲಿ ಹೋಗಿದ್ಯೋ..." ಅವನನ್ನು ನೋಡಿ ತೇಜಸ್ವಿನಿ ಕೇಳಿದಳು.

"ಮನೆಗೆ ಹೋಗಿದ್ದೆ ಕಣೆ ಸೆಂಟು....". ಅವಳ ಮಾತಿಗೆ ಪ್ರಶಾಂತನ ಉತ್ತರ.

"ಅರೆರೆ ಇದೇನೇ, ನೀನು ಇವನನ್ನು ಪೌಡ್ರು ಅಂತೀಯಾ..?" ಅಮಿತ್ ಕೇಳಿದ ಆಶ್ಚರ್ಯದಿಂದ.

"ಹೂ ಕಣೋ ಇವನು ಹುಡುಗ ಅಲ್ವಾ ಅದಕ್ಕೆ ಅವನ ಹೆಸರು ಪೌಡ್ರೂ...ಅಂತೀವಿ..".

"ಅಂಗಾದ್ರೆ ಹುಡುಗಿಯರಿಗೆ ಸೆಂಟ್ ಅನ್ನಬೇಕಾ...."

"ಹೌದು ನನಗಿವಳು ಪೌಡ್ರು ಅಂದ್ರೆ ನಾನು ಇವಳನ್ನು ಸೆಂಟು ಅಂತೀನಿ.."...ಪ್ರಶಾಂತ್ ತಟ್ಟನೆ ಹೇಳಿದ್ದ.

ಅಲ್ಲೇ ನಿಂತು ಇವರ ಮಾತು ಕೇಳಿಸಿಕೊಳ್ಳುತ್ತಿದ್ದ ನಾನು ಅವರ ಬಳಿ ಹೋದೆ.

ಅಮಿತ್ ಬಂದು ಒಂದು ವಾರವಾಗಿತ್ತು. ನನಗಾಗಲೇ ಗೆಳೆಯನಾಗಿಬಿಟ್ಟಿದ್ದ. ಇವರ ಮಾತುಗಳನ್ನೆಲ್ಲಾ ಕೇಳಿ ಅವನಿಗೆ ಸಿಟ್ಟು ಬಂದಿರಬೇಕು. ನಾನು ಬರುವುದನ್ನೇ ಕಾಯುತ್ತಿದ್ದವನು,

"ನೋಡಿ ಅಂಕಲ್ ಇವರಿಬ್ಬರ ಮಾತುಗಳು...! ಥೂ....ಇವರಿಬ್ಬರದೂ ಅದೇನು ಭಾಷೇನೋ.....ಇವಳು ಪೌಡ್ರು ಅಂತಾಳೆ..ಅವನು ಸೆಂಟು ಅಂತಾನೆ. ಮತ್ತೆ ಇವಳ ಮಾತಿನಲ್ಲಿ ಅದೇಷ್ಟು ಇಂಗ್ಲೀಷ್ ಪದಗಳು ಇವೆ ನೋಡಿ....ನಿಮ್ಮ ಬೆಂಗಳೂರಿನವರೇ ಹೀಗೆ! ಎಲ್ಲಾ ಭಾಷೆಯನ್ನು ಕನ್ನಡಕ್ಕೆ ಮಿಕ್ಸ್ ಮಾಡಿ ಮಾತಾಡೋದು....ಇಲ್ಲಿ ನೋಡಿ..ನಮ್ಮ ಮೈಸೂರಿನವರದೂ ಅಚ್ಚ ಕನ್ನಡ, ಮಂಗಳೂರಿನವರದು ಸ್ವಚ್ಚ ಕನ್ನಡ, ಅದ್ರೆ ನಿಮ್ಮ ಬೆಂಗಳೂರಿನವರದು ಕಚ್ಚಾ ಅಥವ ಮಿಕ್ಸ್ ಕನ್ನಡ ಕಣ್ರೀ...."

ಅಮಿತ್ ಮಾತನ್ನು ನಾನು ಒಪ್ಪಿಲೇ ಬೇಕಾಗಿತ್ತು...

-------------- -------------- --------------

ನಮ್ಮ ಓಣೀಯ ಮಕ್ಕಳಿಗೆ ನನ್ನ ಸ್ಕೂಟಿಯ ಮೇಲೆ ಕೂತುಕೊಳ್ಳಬೇಡಿ ಅಂದಿದ್ದೆ. ಅದರ ಸೆಂಟರ್ ಸ್ಟ್ಯಾಂಡ್ ಸರಿಯಾಗಿಲ್ಲದ ಕಾರಣ ಕೂತರೆ ಬಿದ್ದುಹೋಗುತ್ತದೆಂಬ ಭಯ ನನಗೆ. ಆದರೂ ನಾನಿಲ್ಲದಾಗ ಅವರು ಕೂತುಬಿಡುತ್ತಿದ್ದರು....ಅದನ್ನು ಬದಲಾಯಿಸಲು ಪ್ರಯತ್ನಿಸಿದರೂ ನನ್ನ ಗಾಡಿಯ ಮಾಡೆಲ್ ಈಗ ಬರುತ್ತಿಲ್ಲವಾದ್ದರಿಂದ ಅದರ ಸ್ಪೇರ್ ಪಾರ್ಟುಗಳು ಸಿಗುತ್ತಿರಲಿಲ್ಲವಾದ್ದರಿಂದ ನಾನು ಅದನ್ನೇ ಮೇನೇಜ್ ಮಾಡಬೇಕಿತ್ತು. ಇನ್ನೂ ಸೈಡ್ ಸ್ಟ್ಯಾಂಡ್ ಮೊದಲೇ ಹಾಳಾಗಿತ್ತು...ಅದರ ಕತೆಯೂ ಹೀಗೆ ಆಗಿತ್ತು.

ನಮ್ಮ ಹುಡುಗರಿಗೆ ಇದೆಲ್ಲಾ ಕತೆ ವಿವರಿಸಿದಾಗ ಅಲ್ಲೇ ಇದ್ದ ಅಮಿತ್ "ಬನ್ನಿ ಅಂಕಲ್ ನಾನು ಕೊಡಿಸುತ್ತೀನಿ" ಅಂದ.

ನನಗೆ ಸಿಗದಿರುವುದು ಮೈಸೂರಿನವನಾದ ಇವನಿಗೆ ಹೇಗೆ ಸಾಧ್ಯ ಅಂದುಕೊಂಡರೂ ಕುತೂಹಲಕ್ಕಾಗಿ ಅವನ ಜೊತೆ ಹೊರಟೆ. ಅಲ್ಲಿಗೆ ಹೋಗುವ ಮೊದಲು ನನ್ನ ಗಾಡಿಯ ಮಾಡೆಲ್ ತಯಾರಾದ ವರ್ಷ ಎಲ್ಲವನ್ನು ನನ್ನ ಬಳಿ ಕೇಳಿ ತಿಳಿದುಕೊಂಡಿದ್ದ. ಅಧಿಕೃತ ಸ್ಪೇರ್ ಪಾರ್ಟ್ ಷೋ ರೂಂಗೆ ಹೋದೆವು.

"ಸರ್ ಎರಡು ಸಾವಿರದ ಮೂರರಲ್ಲಿ ತಯಾರಾದ ಸ್ಕೂಟಿಯ ಸೆಂಟರ್ ಸ್ಟ್ಯಾಂಡ್ ಕೊಡಿ.!"

"ಅದು ಇಲ್ಲಪ್ಪ.."

" ಯಾಕಿಲ್ಲ..."

"ಆ ಮಾಡೆಲ್ ಬರುತ್ತಿಲ್ಲವಾದ್ದರಿಂದ ಅದರ ಸ್ಪೇರ್ಸ್ ಕೂಡ ಬರುತ್ತಿಲ್ಲ..."

"ಹಾಗಾದರೆ ಈ ಸ್ಕೂಟಿಯನ್ನೇನು ಮಾಡಬೇಕು ?"

"ಬೇಕಾದ್ರೆ ನೀವು ಬೇರೆ ಲೋಕಲ್ ಆಟೋ ಸ್ಪೇರ್ಸ್ ಅಂಗಡಿಯಲ್ಲಿ ಪ್ರಯತ್ನಿಸಬಹುದು.!"

"ನಿಮ್ಮ ಕಂಪನಿಯ ಗಾಡಿ ನೀವು ಮಾರಿದ ಮೇಲೆ ಅದು ರಸ್ತೆ ಮೇಲೆ ಓಡಾಡುವವರೆಗೂ ಅದರ ಸ್ಪೇರ್ಸ್ ತಯಾರಿಸುತ್ತಿರಬೇಕು ಮತ್ತು ಮಾರ್ರಬೇಕು ಅಲ್ವಾ ಸರ್ ?"

"ಹೌದಪ್ಪ ನಿನ್ನ ಮಾತು ಒಪ್ಪುತ್ತೀನಿ..ಅದ್ರೆ ಕಂಪನಿಯವರಿಗೆ ಮೇಲಾಧಿಕಾರಿಗಳಿಗೆ ಇದು ಗೊತ್ತಾಗಲ್ವಲ್ಲ..."

"ಅವರಿಗೆ ಗೊತ್ತಾಗಲಿಲ್ಲವೆಂದ ಮೇಲೆ ಅಂಗಡಿ ಯಾಕೆ ಇಟ್ಟುಕೊಂಡಿದ್ದೀರಿ...ಬಾಗಿಲು ಮುಚ್ಚಿಬಿಟ್ಟು ಮನೆಗೆ ಹೋಗಿ ಮಲಕ್ಕೊಳ್ಳಿ. !"

ಅಮಿತ್‌ನ ಪಟ್ ಪಟ್ ಪಟಾಕಿಯಂತ ಮಾತಿಗೆ ಅಂಗಡಿಯವನು ಚೆನ್ನಾಗಿ ಬೈಯ್ಯಬಹುದು ಅಂದುಕೊಂಡಿದ್ದೆ. ಅದರೆ ಅವನು ಈ ಹುಡುಗನ ಪಟಾಕಿಯಂತ ಮಾತಿಗೆ ಮಂಕಾಗಿದ್ದ. ಅಮಿತ್ ಮಾತ್ರವಲ್ಲ ನಮ್ಮ ಓಣಿಯ ಎಲ್ಲಾ ಮಕ್ಕಳು ಹೀಗೇನೇ. ಪಟ್ ಪಟ್ ಪಟಾಕಿಯ ಹಾಗೆ. ಯಾವಾಗಲು ಹೀಗೆ ಸಿಡಿಯುತ್ತಿರುತ್ತಾರೆ.[ನಮ್ಮ ಓಣಿಯ ಮಕ್ಕಳು ಮಾತ್ರವಲ್ಲ ನಿಮ್ಮ ಓಣಿಯ ಮಕ್ಕಳು ಹೀಗೇನೇ. ನೀವು ಗಮನಿಸಬೇಕಷ್ಟೆ.]

ಹೊಸಮನೆಗೆ ಬಂದು ಮೂರು ತಿಂಗಳಾಗಿತ್ತು. ಕೆಲಸದ ಒತ್ತಡದಿಂದ ಆಯಾಸ ಪರಿಹರಿಸಿಕೊಳ್ಳಲು ಸಂಜೆ ಒಂದು ಗಂಟೆ ಈ ಮಕ್ಕಳ ಜೊತೆ ಬ್ಯಾಟ್‌ಮಿಂಟನ್, ಕ್ರಿಕೆಟ್, ಮಾತುಕತೆಗಳು ಅಂತ ಕಳೆಯುತ್ತಿದ್ದೇನೆ. ಈಗ ಬೇಸಿಗೆ ರಜೆ. ಅದರ ಪರಿಣಾಮವೇ ಈ ಲೇಖನ.. ಬರೆದಷ್ಟು ದೊಡ್ಡದಾಗುತ್ತಾ ಹೋದ ಈ ಲೇಖನ ನಿಮಗೆಲ್ಲಾ ಓದಲು ಬೋರಾಗಬಾರದೆಂದು ಸಾಕಷ್ಟು ಟ್ರಿಂ ಮಾಡಿದ್ದೇನೆ. ಓದಿ ಖುಷಿಯಾದರೆ ನನಗೂ ಖುಷಿ...

ಲೇಖನ

ಶಿವು.ಕೆ ARPS.

Monday, May 11, 2009

ಕೂತ ಜಾಗದಲ್ಲಿ ಕೂರುತ್ತಿಲ್ಲ...ನಿಂತ ಜಾಗದಲ್ಲಿ ನಿಲ್ಲುತ್ತಿಲ್ಲ.... ಆ ಭೂಪಟ.....!!

ಮೂಂಜಾನೆ ಏಳು ಗಂಟೆಗೆ ಶುರುವಾದ ನಾಂದಿ ಪೂಜೆಯ ಫೋಟೋಗಳನ್ನು ಮದುವೆಮನೆಯಲ್ಲಿ ಕ್ಲಿಕ್ಕಿಸುತ್ತಿದ್ದೆ. ಅನೇಕ ಅತಿಥಿಗಳಂತೆ ಆ ಬಾಲ್ಡಿ ತಲೆಯು ಬಂದಿತ್ತು. ಬಾಲ್ಡಿ ತಲೆ ಕಂಡಾಗ ನನ್ನ ಕ್ಯಾಮೆರಾ ಅತ್ತ ತಿರುಗುವುದು ಖಚಿತ.

ಆ ಬಾಲ್ಡಿ ತಲೆ ವಿಭಿನ್ನವಾಗಿತ್ತು. ಥೇಟ್ ಥೋತಾಪುರಿ ಮಾವಿನಕಾಯಿ ಆಗಿತ್ತು. ಖುಷಿಯಿಂದ ಕ್ಲಿಕ್ಕಿಸಲೆತ್ನಿಸಿದೆ. ಆಗಲಿಲ್ಲ...ಆ ಬಾಲ್ಡಿತಲೆಯ ವ್ಯಕ್ತಿ ಹತ್ತು ನಿಮಿಷ ಕುಂತಜಾಗದಲ್ಲಿ ಕೂರುತ್ತಿಲ್ಲ, ನಿಂತ ಜಾಗದಲ್ಲಿ ನಿಲ್ಲುತ್ತಿಲ್ಲ. ಕಾಲಿಗೆ ಚಕ್ರಹಾಕಿಕೊಂಡಂತೆ ಓಡಾಡುತ್ತಿದ್ದಾನೆ.

ಆತ ಕುಂತಾಗ...ಅಥವ ನಿಂತು ಯಾರೊಡನೆಯೋ ಮಾತಾಡುವಾಗ ನನಗೆ ಪೂಜೆ ಇತ್ಯಾದಿ ಫೋಟೋ ತೆಗೆಯುವ ಕೆಲಸವಿರುತ್ತಿತ್ತು. ಹೀಗೆ ಆತನ ಮಾವಿನಕಾಯಿ ಬಾಲ್ಡಿ ಮದ್ಯಾಹ್ನದವರೆಗೆ ತಪ್ಪಿಸಿಕೊಂಡಿತ್ತು.

ಸಂಪೂರ್ಣ ಎಣ್ಣೆಮಯವಾಗಿರುವ ಮದುವೆ ಊಟಗಳು ನಮಗೆ ಆಷ್ಟು ಇಷ್ಟವಾಗೊಲ್ಲ. ನಾಲ್ಕು ದಿನ ಸತತವಾಗಿ ಅದೇ ಊಟ ತಿಂದರೆ[ನಮಗೆ ಅದೇ ಗತಿ] ಖಂಡಿತ ದೇಹ ತೂಕ ಹೆಚ್ಚಾಗಿ ಆರೋಗ್ಯ ಅಲ್ಲೋಲಕಲ್ಲೋಲವಾಗುವುದು ಖಚಿತವಾಗುವುದರಿಂದ ಏನಾದರೂ ನೆಪಹೇಳಿ ಅಲ್ಲಿನ ಊಟದಿಂದ ತಪ್ಪಿಸಿಕೊಳ್ಳುತ್ತೇವೆ.

ಆ ಮದುವೆ ಇದ್ದುದ್ದು ಮೈಸೂರಲ್ಲಿ. ಮದ್ಯಾಹ್ನ ಮೂರು ಗಂಟೆಗೆ ಅವರೇ ವ್ಯವಸ್ಥೆ ಮಾಡಿದ್ದ ಬಸ್ಸಿನಲ್ಲಿ ಹೋಗಬೇಕಿತ್ತು. ನಾನು ಮೊದಲೇ ಬಸ್ಸು ಹತ್ತಿ ಕುಳಿತ್ತಿದ್ದೆ. ಮದುವೆ ಸಂಭ್ರಮ, ಗದ್ದಲ. ಅವುಗಳಿಂದ ತಪ್ಪಿಸಿಕೊಳ್ಳಲು ನಾನು ತೇಜಸ್ವಿಯವರ "ಅಲೆಮಾರಿ ಆಂಡಮಾನ್" ಎತ್ತಿಕೊಂಡಿದ್ದೆ. ಮತ್ತೆ ಕಣ್ಣಿಗೆ ಬಿತ್ತಲ್ಲ ಮಾವಿನಕಾಯಿ... ಆ ತಲೆಯೂ ಮೈಸೂರಿಗೆ ಬರಲು ಸಿದ್ದವಾಗಿತ್ತು. ಸದ್ಯ ನನ್ನ ಜೊತೆಯಲ್ಲೇ ಬರುತ್ತಿದೆಯಲ್ಲ ಮೈಸೂರಿನ ಮದುವೆ ಮಂಟಪದಲ್ಲಿ ಎಲ್ಲಾದರೂ ಕೂತಾಗ ಕ್ಲಿಕ್ಕಿಸಿಬಿಡಬೇಕು ಅಂದುಕೊಂಡು ಅಂಡಮಾನ್‌ನಲ್ಲಿ ಮುಳುಗಿದೆ.

ರಾತ್ರಿ ವರಪೂಜೆ, ಊಟ ಇತ್ಯಾದಿಗಳ ನಡುವೆ ಪ್ರಯತ್ನಿಸಿದೆ. ಆಗಲಿಲ್ಲ. ಮರುದಿನ ಬೆಳಿಗ್ಗೆಯಿಂದ ಕಾಶಿಯಾತ್ರೆ, ಗೌರಿಪೂಜೆ, ಮಹೂರ್ತ, ಹೋಮ, ಸಪ್ತಪದಿ, ಭೂಮದೂಟ, ಲಾಜವಾಮ್, ಹೆಣ್ಣೊಪ್ಪಿಸುವುದು, ಕೊನೆಯಲ್ಲಿ ಮನೆತುಂಬಿಸಿಕೊಳ್ಳುವುದು... ಎಲ್ಲಾ ಮುಗಿಯುವ ಹೊತ್ತಿಗೆ ಸಂಜೆ ನಾಲ್ಕು ಗಂಟೆ. ಒಂದು ಕಣ್ಣಲ್ಲಿ ಇವೆಲ್ಲಾ ಕ್ಲಿಕ್ಕಿಸುತ್ತಿದ್ದರೂ ಮತ್ತೊಂದು ಕಣ್ಣಲ್ಲಿ ಆ ಮಾವಿನ ಕಾಯಿ ಎಲ್ಲಿದೆ ಅಂತ ಹುಡುಕುತ್ತಲೇ ಇದ್ದೆ.

ಅದೋ ಅಲ್ಲಿ ಕುಳಿತಿದೆ. ಯಾರೊಂದಿಗೋ ಹರಟುತ್ತಿದೆ. ಈಗ ಹೋಗಿಬಿಡಬೇಕು ಅಂದುಕೊಂಡು ಅಲ್ಲಿ ಸಾಗುವಷ್ಟರಲ್ಲಿ ಜಾಗ ಬದಲಾಯಿಸಿಬಿಡುತ್ತಿತ್ತು. ಇಡೀದಿನ ಪ್ರಯತ್ನಿಸಿದರೂ ಆದು ಸಿಗಲಿಲ್ಲ. ಅದರ ಬದಲಾಗಿ ಬೇರೆ ಅನೇಕ ಭೂಪಟಗಳು ಸಿಕ್ಕಿದ್ದವು. ಕಣ್ಣ ಮುಂದೆ ಚಂಪಾಕಲಿ, ಮೈಸೂರ್‌ಪಾಕ್ ಇತ್ಯಾದಿ ಸಿಹಿತಿಂಡಿಗಳಿದ್ದರೂ........ಉಪ್ಪು ಹುಣಸೇಹಣ್ಣು ಮೆಣಸು ಹಾಕಿ ಮಾಡಿದ ಬಾಲ್ಯದ ಆ ತಿಂಡಿಯೇ ಬೇಕು ಅಂದಾಗ ಇವೆಲ್ಲಾ ನಗಣ್ಯವೆನಿಸುವ ಹಾಗೆ ನನಗೂ ಮಾವಿನಕಾಯಿ ಭೂಪಟವೇ ಬೇಕಾಗಿತ್ತು.

ಸಂಜೆ ಅರತಕ್ಷತೆ ಪ್ರಾರಂಭವಾಗುವ ಮುನ್ನ ಏನಾದರೂ ಮಾಡಬೇಕು. ಸತಾಯ ಗತಾಯ ಪ್ರಯತ್ನಿಸಿ ಕ್ಲಿಕ್ಕಿಸಬೇಕು ಅಂದುಕೊಂಡೆ.

ಸಮಯ ಸಂಜೆ ಆರುಗಂಟೆ. ರೇಷ್ಮೆ ಪಂಚೆ ಮತ್ತು ಜುಬ್ಬದಾರಿಯಾಗಿ ಪ್ರೆಶ್ಶಾಗಿ ರೆಡಿಯಾಗಿಬಂದಿದ್ದ ಮಾವಿನಕಾಯಿ ಬಾಲ್ಡಿ ತಲೆ ಬಂದು ಸುಮ್ಮನೆ ಕುಳಿತಿತ್ತು. ಎರಡು ದಿನದಿಂದ ಕುಳಿತಲ್ಲಿ ಕೂರದೆ ನಿಂತಲ್ಲಿ ನಿಲ್ಲದೇ ಎಡಬಿಡದೇ ಓಡಾಡಿಕೊಂಡಿದ್ದರಿಂದ ಸುಸ್ತಾಗಿತ್ತೇನೋ ಸುಮ್ಮನೇ ಕುಳಿತಿತ್ತು. ಇದೇ ಸಮಯವೆಂದು ನಾನು ಮದುವೆ ಮನೆಯ ಬಲಬಾಗಿಲಲ್ಲಿ ಹೋಗಿ ಊಟದ ಹಾಲ್ ದಾಟಿ ಮುಖ್ಯದ್ವಾರದಿಂದ ಕ್ಯಾಮೆರಾ ಸಿದ್ದವಾಗಿಟ್ಟುಕೊಂಡೇ ಆತನ ಹಿಂಬಾಗ ಬಂದು ಅರತಕ್ಷತೆಯ ಆಲಂಕಾರವನ್ನು ಕ್ಲಿಕ್ಕಿಸುವ ನೆಪದಲ್ಲಿ ಆ ಭೂಪಟವನ್ನು ನನಗೆ ಬೇಕಾದ ಹಾಗೆ ಕ್ಲಿಕ್ಕಿಸಿದ್ದೆ.

ಮನೆಯಲ್ಲಿ ನಕಾಶೆ ಪುಸ್ತಕ ತೆಗೆದುನೋಡಿ ಹೋಲಿಸಿದಾಗ ಅದು ಪಕ್ಕಾ ವೆಸ್ಟ್ ಇಂಡೀಸ್ ದ್ವೀಪಸಮಾಹ ರಾಷ್ಟವಾದ " ಗ್ರೆನೆಡ" ಆಗಿತ್ತು. ನನಗಂತೂ "ಗ್ರೆನೇಡ"ಗೆ ಹೋಗಿ ಬಂದಷ್ಟು ಖುಷಿಯಾಗಿತ್ತು.

ಸೂಡಾನ್ ದೇಶದ ಭೂಪಟ !



"ಗ್ರೆನೆಡ" ದೇಶದ ಭೂಪಟ.


ಭಾರ್ಬಡೋಸ್ ದ್ವೀಪ ದೇಶದ ಭೂಪಟ!

ಭೂತಾನ್ ದೇಶದ ಭೂಪಟ!


ಚಿತ್ರ ಮತ್ತು ಲೇಖನ
ಶಿವು.ಕೆ ARPS.

Sunday, May 3, 2009

ಆ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆಯಲ್ವೇ ಸರ್........



ಕಳೆದೊಂದು ತಿಂಗಳಿಂದ ಮದುವೆ ಫೋಟೋ ತೆಗೆಯುವುದರಲ್ಲಿ ನಿರತನಾಗಿದ್ದ ನನಗೆ ಈ ಸಮಯದಲ್ಲಿ ನಮ್ಮದೇ ವೃತ್ತಿಯಲ್ಲಿನ ಜೊತೆಗಾರರ ಮಾತುಕತೆಗಳು ಬಲು ಸೋಜಿಗವೆನಿಸಿ ತುಂಬಾ ಎಂಜಾಯ್ ಮಾಡಿದ್ದೇನೆ...ಅವುಗಳಲ್ಲಿ ಕೆಲವನ್ನು ನಿಮ್ಮೊಂದಿಗೂ ಹಂಚಿಕೊಳ್ಳುವ ಆಸೆ. ಇಲ್ಲಿ ಕೆಲವನ್ನು ಸಂದರ್ಭೋಚಿತವಾಗಿ ನಡೆಯುವ ಸನ್ನಿವೇಶಗಳಲ್ಲಿ ನಮ್ಮ ನಡುವೆ ನಡೆಯುವ ಮಾತಿನ ತುಣುಕುಗಳನ್ನು ತೆರೆದಿಡುತ್ತಿದ್ದೇನೆ...



ಮದುವೆ ಹೆಣ್ಣಿನ ಅಲಂಕಾರ ರೂಮಿನಲ್ಲಿ ಭರ್ಜರಿಯಾಗಿ ನಡೆಯುತ್ತಿತ್ತು.. ಮದುಮಗಳು ಹೇಗೇ ಇರಲಿ ಅವಳನ್ನು ರಾಜಕುಮಾರಿಯಂತೆ ಇನ್ನಷ್ಟು ಚೆಂದವಾಗಿ ಸುಂದರವಾಗಿ, ಸಹಜವಾಗಿ ಫೋಟೋ ಮತ್ತು ವಿಡಿಯೋ ತೆಗೆಯುವುದು ಮದುವೆಯಲ್ಲಿ ನಮಗಿರುವ ದೊಡ್ಡ ಜವಾಬ್ದಾರಿ ಆಷ್ಟೇ ರಿಸ್ಕು ಕೂಡ.




ಮೊದಲಿಗೆ ಅವರು ಹೇಗಿರುತ್ತಾರೆ ನೋಡಬೇಕು. ಇದರಲ್ಲಿ ಎರಡು ವಿಧ. ವಿದ್ಯೆ ಬುದ್ಧಿಯ ಜೊತೆಗೆ ಸಹಜ ಸೌಂದರ್ಯವಿರುವವರು ಮಗುವಿನಂತೆ ಮುಗ್ದತೆಯಿದ್ದರೆ ನಮ್ಮ ಕೆಲಸ ನೀರು ಕುಡಿದಷ್ಟು ಸುಲಭ. ಅವರನ್ನು ಸುಲಭವಾಗಿ ರಾಜಕುಮಾರಿಯನ್ನಾಗಿ ಮಾಡಬಹುದು.


ಅವರ ಜೊತೆ ನಮ್ಮ ಮಾತುಕತೆ ಹೀಗೆ ಸಾಗುತ್ತದೆ.


"ಮೇಡಮ್, ಹೇಗಿದ್ದೀರಿ........ನಿಮಗೆ ಈ ಕಲ್ಯಾಣಮಂಟಪ ಇಷ್ಟವಾಯಿತಾ"...ನಮ್ಮ ಕುತ್ತಿಗೆಯಲ್ಲಿನ ಕ್ಯಾಮೆರಾವನ್ನು ನೋಡಿ ನಮ್ಮ ಮಾತಿಗೆ ಖಂಡಿತ ಒಂದು ಮುಗುಳ್ನಗು ಚಿಮ್ಮಿರುತ್ತದೆ.


"ಹೇಗಿದ್ದರೂ ನಾವೆಲ್ಲಾ ಇರುವುದು ಕೇವಲ ೨೪ ಗಂಟೆ ಇಲ್ಲಿರುತ್ತೇವೆ ಅಲ್ವೇ.....ನೀವೇನು ಇಲ್ಲಿ ಸಂಸಾರ ಮಾಡಬೇಕಿಲ್ಲವಲ್ಲ.....ಹೊಂದಿಕೊಂಡರೇ ಆಯ್ತು.....


ನಮ್ಮ ಮಾತಿಗೆ ಮತ್ತೊಂದು ಸುಂದರ ಮುಗ್ದ ಮುಗಳ್ನಗು ಮದುಮಗಳಿಂದ.


ಇಷ್ಟು ಸಾಕು ನಾವು ಮುಂದುವರಿಯಲು......ಆಕೆಯ ವಿದ್ಯೆಯೆಲ್ಲಾ ಮದುವೆ ಕಾರ್ಡಿನಲ್ಲಿರುತ್ತದೆ. ಬುದ್ಧಿ ಇನ್ನು ಸ್ವಲ್ಪ ಹೊತ್ತಿನಲ್ಲೇ ಗೊತ್ತಾಗುತ್ತದೆ.


" ಆರೆರೆ...ಮೇಡಮ್, ನಿಮಗ್ಯಾರು ಮೇಕಪ್ ಮಾಡಿದ್ದು ?"


ಆಕೆಯ ಮುಖದಲ್ಲಿ ತಕ್ಷಣ ಆಶ್ಚರ್ಯ...ಗೊಂದಲ ಉಂಟಾಗುತ್ತದೆ...


ಪಕ್ಕದಲ್ಲಿರುವವರ ಕಡೆ ಕೈ ತೋರಿಸುತ್ತಾಳೆ. ಅವರ ಕಡೆ ನೋಡಿ "ಅಯ್ಯೋ ನೀವು ಯಾಕೆ ಮೇಕಪ್ ಮಾಡಿದ್ರಿ"........ಆಕೆಗೂ ಕೂಡ ನನ್ನ ಮಾತಿನಿಂದ ಆಶ್ಚರ್ಯ..


ಅವರು ಮಾತಿಗೆ ಅವಕಾಶ ಕೊಡದೇ... " ನೀವು ಇವರಿಗೆ ಮೇಕಪ್ ಮಾಡಬೇಕಾಗಿಲ್ಲ...ಹಾಕಿದ ಪೌಡರನ್ನು ನಿದಾನವಾಗಿ ಒರೆಸುತ್ತಾ ಬಂದರೆ ಸಾಕು. ಅದೇ ನಿಜವಾದ ಮೇಕಪ್. ಮೇಕಪ್ ಅನ್ನೋದು ಇವರಿಗಲ್ಲ....ರಾಜಕುಮಾರಿಗೆ ಯಾರಿದ್ರು ಮೇಕಪ್ ಮಾಡಲಿಕ್ಕೆ ಸಾದ್ಯವೇ....ಆವರಿಗೆ ಅವಮಾನ....."

ಇಷ್ಟು ಹೇಳುತ್ತಿದ್ದಂತೆ ಮೇಕಪ್ ಹಾಕಿದವಳ ಮುಖದಲ್ಲಿ ಇರಿಸು ಮುರಿಸು....ಮತ್ತು ಮದುಮಗಳ ಮುಖದಲ್ಲಿ ಚಂದ್ರನಷ್ಟು ಕಾಂತಿ ಹೊರಹೊಮ್ಮಿರುತ್ತದೆ....ಆ ಕ್ಷಣದಲ್ಲೇ ಒಂದೆರೆಡು ಫೋಟೊ ಅವರಿಗರಿವಿಲ್ಲದಂತೆ ಕ್ಲಿಕ್ಕಿಸಿರುತ್ತೇನೆ.... ಆಕೆಯ ಗೆಳತಿಯರು ಇದ್ದರಂತೂ ನಮ್ಮ ಕೆಲಸ ಮತ್ತಷ್ಟು ಸುಲಭ. ನಮ್ಮ ಮಾತಿಗೆ ಅವರು ಮಾತು ಬೆರೆಸುತ್ತಾರೆ...ಇದರಿಂದ ಮದುಮಗಳ ಮುಖದಲ್ಲಿ ಎಲ್ಲಾ ರೀತಿಯ ಭಾವನೆಗಳು ಹೊರಹೊಮ್ಮುತ್ತಿರುತ್ತವೆ....ಜೊತೆಗೆ ನಮ್ಮ ಕ್ಯಾಮೆರಾ ಕೂಡ ಅವರಿಗೆ ಗೊತ್ತಾಗದಂತೆ ಕ್ಲಿಕ್ ...ಕ್ಲಿಕ್ ಅನ್ನುತ್ತಿರುತ್ತದೆ. ಅಲ್ಲಿಗೆ ಒಂದು ಜವಾಬ್ದಾರಿ ಮುಗಿದಂತೆ.


ಮತ್ತೆ ವಿದ್ಯೆ ಬುದ್ಧಿ ಎರಡು ಕಡಿಮೆಯಿರುವ ಮದುಮಗಳನ್ನು ಕೂಡ ನಾವು ಸುಂದರ ರಾಜಕುಮಾರಿಯನ್ನಾಗಿ ಕ್ಲಿಕ್ಕಿಸಬಹುದು. ಏಕೆಂದರೆ ಅವರಲ್ಲಿ ಖಂಡಿತ ಮುಗ್ದತೆಯಿರುತ್ತದೆ.. ಯಾವುದೇ ಬಣ್ಣವಿದ್ದರೂ ಅದೊಂದು ಗುಣವಿದ್ದರೇ ಸಾಕು...ಅವರಿಗೂ ಬೇರೆ ಬೇರೆ ರೀತಿಯ ಮಾತುಗಳನ್ನಾಡಿ ಮತ್ತಷ್ಟು ಪ್ರಕೃತಿ ಸಹಜ ಮುಗ್ದನಗು ಹೊರಹೊಮ್ಮಿಸಿ ಫೋಟೋದಲ್ಲಿ ಚಂದವಾಗಿಸಬಹುದು....


ವಿದ್ಯೆ ಬುದ್ಧಿ ಎರಡೂ ಇದ್ದು ಮುಗ್ದತೆ ಇಲ್ಲದ ಹೆಣ್ಣಿನ ಫೋಟೋ ಕ್ಲಿಕ್ಕಿಸುವುದು. ನಮಗಂತೂ ಕಷ್ಟಸಾಧ್ಯವೇ ಸರಿ....ನಾವು ಏನೇ ಪ್ರಯತ್ನ ಪಟ್ಟರೂ ಅವರಿಂದ ಅದಕ್ಕೆ ವಿರುದ್ಧವಾದ ಭಾವನೆಗಳೇ ಹೊರಹೊಮ್ಮುತ್ತವೆ.. ಎಷ್ಟು ಪ್ರಯತ್ನಿಸಿದರೂ ನಗುಮುಖವಿರುವುದಿಲ್ಲ. ನಕ್ಕರೂ ಅದರಲ್ಲಿ ತೋರಿಕೆಯ ನಗುವಿರುತ್ತದೆ...ನಡುವೆ ಮೊಬೈಲು ಫೋನ್ ಮಾತುಗಳು ಸತತವಾಗಿ ನಡೆದಿರುತ್ತವೆ. ಅವರಿಂದ ಬೈಸಿಕೊಳ್ಳುವುದು ಉಂಟು....ಇವರು ಎರಡನೇ ವಿಧಕ್ಕೆ ಸೇರುತ್ತಾರೆ.


----------- ---------------- ------------


ಕಳೆದ ವಾರ ಮೈಸೂರಿನಲ್ಲಿ ಹೆಣ್ಣಿನ ಫೋಟೋ ತೆಗೆಯುವಾಗ ನನ್ನ ವಿಡಿಯೋ ಗ್ರಾಫರ್ ಸುಮ್ಮನಿರಲಾರದೇ...

" ಮೇಡಮ್, ನಿಮ್ಮ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆ" ಅಂದುಬಿಟ್ಟ.

ಆಷ್ಟಕ್ಕೆ ಆ ಹುಡುಗಿಯ ಮುಖದಲ್ಲಿ ಗುಲಾಬಿಯಂತ ಕಾಂತಿ. ನಂತರ ಪೂರ್ತಿ ಮದುವೆಯಲ್ಲಾ ಅವಳಿಗೆ ಅದೇ ಕಾಂತಿಯಿತ್ತು....ಕೊನೆಯಲ್ಲಿ ನಾನು ವಾಪಸ್ಸು ಬರುವಾಗ ನವಜೋಡಿಗೆ ಶುಭಾಶಯ ತಿಳಿಸುವುದು ನನ್ನ ಪದ್ದತಿ....ಆಗ ನಾನು ಅದೇ ಮಾತನ್ನು ಹೇಳಿ ಅದನ್ನು ಮುಂದಿನ ನಿಮ್ಮ ಇಪ್ಪತ್ತೈದನೇ ಮದುವೆ ವಾರ್ಷಿಕೋತ್ಸವದವರೆಗೆ ನಿಮ್ಮ ಮೂಗಿನ ಅಂದವನ್ನು ಹೀಗೆ ಕಾಪಾಡಿಕೊಳ್ಳಿ ಅಂದೆ. ಅವಳ ಮುಖವಂತೂ ನೂರು ಕ್ಯಾಂಡಲ್ ಲೈಟಿನಷ್ಟು ಅರಳಿತ್ತು.


----------- ------------- --------------


ಮದುವೆ ಮನೆಯಲ್ಲಿ ನಮ್ಮ ಫೋಟೊ ಮತ್ತು ವಿಡಿಯೋ ಕ್ಯಾಮೆರಾಗಳಿಗೆ ಆಡ್ಡ ಬರುವವರನ್ನು ಕಂಡರೇ ನಮಗೆಲ್ಲಾ ಸಿಟ್ಟು ಬರುತ್ತದೆ...ಸ್ವಲ್ಪ ಸಮಯದ ನಂತರ ಹೊಂದಿಕೊಂಡುಬಿಡುತ್ತೇವೆ...ಅದರಲ್ಲೂ ಪುರೋಹಿತ ಯಾವಾಗಲೂ ಅಡ್ಡ ಬರುವುದರಿಂದ ಅವನ ಮೇಲೆ ನಮಗೇ ಸದಾ ಸಿಟ್ಟಿರುತ್ತದೆ.... ನಾವು ಏನು ಹೇಳಿದರೂ ಅದಕ್ಕೆ ವಿರುದ್ಧವಾಗಿ ಮಾಡುವುದೇ ಅವನಿಗೆ ಇಷ್ಟ. ಅದೇ ನಮಗೇ ಕಷ್ಟ. ಪ್ರತಿ ನಿಮಿಷವೂ ಅವನ ಕೈಕಾಲು ಮತ್ತು ತಲೆ ನಮ್ಮ ಫೋಟೊದೊಳಗೆ ನುಸುಳುತ್ತಿರುತ್ತವೆ. ಅದಕ್ಕೆ ನಮ್ಮ ವಿಡಿಯೋಗ್ರಾಫರುಗಳು ಹೇಳುವುದು ಹೀಗೆ "ಸಾರ್ ಮದುವೆ ಮನೆಯಲ್ಲಿ ಖರ್ಚಿಲ್ಲದೇ ತುಂಬಾ ದಾರಾಳವಾಗಿ ಬೇಸರವಾಗುವಷ್ಟು ಸಿಗೋದು ಇದೊಂದೇ ನೋಡಿ..."


------------- ------------- --------------


ಮದುವೆ ಮನೆಗಳಲ್ಲಿ ಮಂಗಳಾರತಿಗೆ ಮಹಾನ್ ಸ್ಥಾನ. ಒಂದು ಮದುವೆಯಲ್ಲಿ ಕನಿಷ್ಟ ೨೫ ಆರತಿ ಎತ್ತುತ್ತಾರೆ. ನಂತರ ಆರತಿ ಎತ್ತಿಸಿಕೊಂಡವರು ಹಣ ಹಾಕಲೇ ಬೇಕು....ಇದಕ್ಕೆ ನಾವುಗಳು " ಪಾರ್ಕಿಂಗ್ ಅನ್ನುತ್ತೇವೆ.... ನಾವು ನಮ್ಮ ಗಾಡಿಯಲ್ಲಿ ಎಲ್ಲೇ ಸುತ್ತಾಡಿದರು ಅಲ್ಲಿಲ್ಲಿ ಪಾರ್ಕಿಂಗ್ ಮಾಡುತ್ತೇವಲ್ಲ....ಮತ್ತೆ ಅಲ್ಲಲ್ಲಿ ಅದಕ್ಕೆ ಪಾರ್ಕಿಂಗ್ ಶುಲ್ಕವನ್ನು ತೆರಬೇಕಲ್ವ....ಹಾಗೇ ಮದುವೆಮನೆಯಲ್ಲೂ ಸುಮಾರು ಪಾರ್ಕಿಂಗು...ಶುಲ್ಕ ವಸೂಲಿ ನಡೆಯುತ್ತಿರುತ್ತದೆ....


------------- --------------- ------------


ಸಮಯ ರಾತ್ರಿ ಹನ್ನೊಂದು ಗಂಟೆ. ಮೈಸೂರಲ್ಲಿ ರೆಸೆಪ್ಷನ್ ಮುಗಿಯುವ ಹಂತದಲ್ಲಿತ್ತು. ತಕ್ಷಣ ಅಲ್ಲೊಂದು ಆರತಿ ಎತ್ತುವ ಹೆಂಗಳೆಯರ ಗುಂಪು ಬಂತು. ನಾನು ಕೇಳಿದೆ.. " ರೆಸೆಪ್ಷನ್ ಅನ್ನುವುದು ವಿದೇಶಿ ಶೈಲಿ ಇದಕ್ಕೂ ಆರತಿ ಎತ್ತಿ ಮುಗಿಸುತ್ತಾರಲ್ಲ...ಇದನ್ನೂ ಫೋಟೊ ತೆಗೆಯಬೇಕಾ ?" ಅಂದೆ... ತಕ್ಷಣ ವಿಡಿಯೋ ಗ್ರಾಪರ್


"ಶಿವು.... ನಿಮಗೆ ಬೇಕಾದ್ರೆ ಕ್ಲಿಕ್ ಮಾಡಬಹುದು...ಬೇಡದಿದ್ದಲ್ಲಿ ಬಿಡಬಹುದು.....ಇದೊಂದರ ಸರ್ಕಾರದ ಸಿ.ಎಲ್[ಬೇಕಾದರೆ ಹಾಕಿಕೊಳ್ಳುವ ರಜೆ] ರಜೆ ತೆಗೆದುಕೊಂಡಂತೆ." ಅನ್ನಬೇಕೆ...






ಈ ಲೇಖನ ನಿಮಗಿಷ್ಟವಾದಲ್ಲಿ ನಗುವೇ ಗೊತ್ತಿರದ ಮದುವೆಗಂಡು, ಮತ್ತು ಸದಾ ನಗುತ್ತಿರುವ ಮಧುಮಗನ ಬಗ್ಗೆ, ಅವನ ಗೆಳೆಯರು, ಬಂದುಹೋದ ಜನಗಳು....ಪುರೋಹಿತನ ಹಾವಭಾವಗಳು, ಆಡಿಗೆ ಭಟ್ಟರ ಮಾತಿಲ್ಲದ ನವರಸಗಳು..... ಜೊತೆ ಜೊತೆಯಲ್ಲಿ ನಮ್ಮ ಮಾತುಕತೆಗಳ ಬಗ್ಗೆ ಇನ್ನೂ ಅನೇಕ ವಿಚಾರಗಳನ್ನು ಮುಂದಿನ ಸಂಚಿಕೆಗಳಲ್ಲಿ ಬರೆಯುತ್ತೇನೆ...


ಚಿತ್ರ ಮತ್ತು ಲೇಖನ
ಶಿವು.ಕೆ ARPS.

Monday, April 20, 2009

ನಾನದನ್ನು ನೋಡಬಾರದಿತ್ತು...ನೋಡಿಬಿಟ್ಟೆ..!!

ನಾನದನ್ನು ನೋಡಬಾರದಿತ್ತು....ನೋಡಿಬಿಟ್ಟೆ.!! ಕಣ್ಣಿಗಂಟಿಕೊಂಡಿದ್ದ [10x50DPS I] ಒಲಂಪಸ್ ಬೈನಕ್ಯೂಲರ್‌ನಿಂದ ಅವರಿಬ್ಬರ ರೊಮ್ಯಾನ್ಸ್ ನನ್ನಲ್ಲಿ ಕುತೂಹಲ ಕೆರಳಿಸಿದ್ದವು. ಅವೇ ಕಳ್ಳಿಪೀರ ಜೋಡಿ ಹಕ್ಕಿಗಳು. ನಾನು ಹೊರಗಿನ ಪ್ರಪಂಚವನ್ನು ಮರೆತು ಅವೆರಡನ್ನು ಗಮನಿಸುತ್ತಿದ್ದರೂ ಅವು ಅರಿವಿಲ್ಲದೇ ತಮ್ಮ ಸಂಸಾರ ಸಾಗರದಲ್ಲಿ ಮುಳುಗಿದ್ದವು.

ಬಾಯಲ್ಲಿರುವ ನೊಣವನ್ನು ಗಿಫ್ಟ್ ಕೊಟ್ಟು ಗೆಳತಿಯನ್ನು ಒಲಿಸಿಕೊಳ್ಳುವ ಕಲೆ!!


ಬಹುಶಃ ಇಲ್ಲೇ ಹತ್ತಿರದಲ್ಲಿ ಅವುಗಳ ಗೂಡಿರಬೇಕು ಅಂದುಕೊಳ್ಳುತ್ತಿದ್ದಂತೆ ಅವು ಅತ್ತಿತ್ತ ಹಾರಾಡಿದವು. ನಾನು ಬೇಕಂತಲೇ ನನ್ನ ಗಮನವನ್ನು ಬೇರೆಡೆಗೆ ಹರಿಸಿದೆ... ಅವು ಸ್ವಲ್ಪ ಹೊತ್ತು ಸುತ್ತ ಮುತ್ತ ನೋಡಿ ನಾನು ಕಣ್ಣು ಮಿಟುಕುವಷ್ಟರಲ್ಲಿ..ಬೇಲಿಯಾಚೆಗಿದ್ದ ನೆಲಮಟ್ಟದಿಂದ ಒಂದು ಆಡಿ ಎತ್ತರದಲ್ಲಿ ತೂತು ಕೊರೆದು ಮಾಡಿದ್ದ ಗೂಡಿಗೆ ರಾಕೆಟಿನಂತೆ ಗಂಡು ಹಕ್ಕಿ ನುಗ್ಗಿತ್ತು. ಅದರ ಹಿಂದೆಯೇ...ಹೆಣ್ಣು ಕೂಡ ಹೋಯಿತು. ಒಳಗೆ ಇನ್ನೇನು ಸರಸ ಸಲ್ಲಾಪ ನಡೆದಿದೆಯೋ ನಮಗ್ಯಾಕೆ "ಮಾಡಿದವರ ಪಾಪ ನೋಡಿದವರ ಕಣ್ಣಲ್ಲಿ" ಅಂದುಕೊಂಡು ಗೂಡನ್ನು ಕಂಡುಹಿಡಿದ ಖುಷಿಯಲ್ಲಿ ವಾಪಸು ಬಂದುಬಿಟ್ಟೆ.


ಹಕ್ಕಿಗೂಡು ಒಂದು...ಮುದ್ದು ಮುದ್ದಾಗಿ ಒಳಗೇನು ನಡೆದಿದೆಯೋ...!!


ನಂತರ ಪ್ರತಿವಾರಕ್ಕೊಮ್ಮೆ ಹೋಗಿ ಅವುಗಳ ಚಲನವಲನವನ್ನು ವೀಕ್ಷಿಸುತ್ತಿದ್ದೆ. ಸರಿಯಾಗಿ ೩೫ ನೇ ದಿನ ಹೆಣ್ಣು ಕಳ್ಳಿಪೀರ ಬಾಯಲ್ಲಿ ಸಣ್ಣ ಹುಳುವನ್ನು ಹಿಡಿದುಕೊಂಡು ಗೂಡಿನ ಹತ್ತಿರದಲ್ಲೇ ಸಣ್ಣ ಕಡ್ಡಿಯ ಮೇಲೆ ಕುಳಿತಿತ್ತು. ಗಂಡು ಮರದ ಮೇಲೆ ಕುಳಿತಿತ್ತು. ನಾನು ಬೈನಾಕ್ಯೂಲರ್‌ನಲ್ಲಿ ನೋಡಿದ ಆ ಮೂರು ತಾಸಿನಲ್ಲಿ ಹೆಣ್ಣು ಹಕ್ಕಿ ಮಾತ್ರ ಆಹಾರವನ್ನು ಬಾಯಲ್ಲಿ ಹಿಡಿದುತಂದು ಗೂಡಿಗೆ ಹೋಗಿ ಮರಿಗಳಿಗೆ ಕೊಟ್ಟು ಬರುತ್ತಿತ್ತು.

ಆಹಾರ ಬೇಟೆಗೆ ಈಗ ಹಾರಬೇಕು...!!


ಈ ಗಂಡು ಹಕ್ಕಿಗೆ ಇತ್ತೀಚಿನ ಸಾಮಾಜಿಕ ನ್ಯಾಯದ ಅರಿವಿಲ್ಲವೇ ? ಒಂದು ಮನೆ, ಮಕ್ಕಳು ಸಂಸಾರ ಚೆನ್ನಾಗಿ ನಡೆಯಬೇಕಾದರೆ ಈಗಿನ ಕಾಲದಲ್ಲಿ ಇಬ್ಬರೂ ದುಡಿಯಬೇಕು ಎನ್ನುವ ಸೂಕ್ಷ್ಮ ತಿಳಿವಳಿಕೆಯೂ ಈ ಗಂಡು ಹಕ್ಕಿಗೆ ಬೇಡವೇ ಎಂದು ನನ್ನ ಮನಸ್ಸಿಗೆ ಖೇದವಾಯಿತು.

ನಿಮ್ಮ ವಿಮಾನಗಳಿಗೆ ನನ್ನಂತೆ ಲ್ಯಾಂಡ್ ಆಗಲಿಕ್ಕೆ ಬರುತ್ತಾ..!!


ಸರಿಯಾಗಿ ೪೦ನೇ ದಿನಕ್ಕೆ ನಾನು ನನ್ನ ಛಾಯಾಗ್ರಹಣದ ಪರಿಕರಗಳಾದ ಕ್ಯಾಮೆರಾ, ಲೆನ್ಸ್, ಸ್ಟ್ಯಾಂಡ್, ನನಗೆ ಬೇಕಾದ ಆಹಾರ,ನೀರು ಇನ್ನಿತರ ಪರಿಕರಗಳೊಂದಿಗೆ ಸಿದ್ದನಾಗಿಹೋಗಿದ್ದೆ.

ಸ್ವಲ್ಪ ಹೊತ್ತು ಅತ್ತ ಇತ್ತ ನೋಡಬೇಕು....ನಂತರ ಗೂಡಿಗೆ ಹೋಗೋಣ...


ಅಲ್ಲೇ ಪೊದೆಯ ಮರೆಯಲ್ಲಿ ನನ್ನ ಕ್ಯಾಮೆರಾವನ್ನು ಅಣಿಗೊಳಿಸಿ ರಿಮೋಟ್ ಕೇಬಲ್ ಎಳೆದು ದೂರದಲ್ಲಿ ಮರೆಯಾಗಿ ಕುಳಿತುಬಿಟ್ಟೆ. ಮೊದಲಿಗೆ ಮರಿಗಳು ಚಿಕ್ಕದಾಗಿದ್ದರಿಂದ ಹೆಣ್ಣು ಹಕ್ಕಿ ಸಣ್ಣ ಸಣ್ಣ ಹುಳುಗಳನ್ನು ಹಿಡಿದು ತರುತ್ತಿತ್ತು. ಕಡ್ಡಿಯ ಮೇಲೆ ಕುಳಿತು ಸ್ವಲ್ಪ ಹೊತ್ತು ಅತ್ತ ಇತ್ತ ನೋಡಿ ಗೂಡಿಗೆ ಹಾರಿ ಮರಿಗಳಿಗೆ ಗುಟುಕು ಕೊಟ್ಟು ಬರುತ್ತಿತ್ತು. ನಾನು ಒಂದೇ ಸಮನೆ ಕ್ಲಿಕ್ಕಿಸುತ್ತಿದ್ದೆ.

ನನ್ನನ್ನೂ ನೋಡಿಯೇ ತಾನೇ ನಿಮ್ಮ ಸುಕೋಯ್..ಮೀರಜ್ ಹಾರೋದು ಕಲಿತದ್ದು....!!



ಆರನೇ ದಿನ ನನ್ನ ಸಮಾಜಿಕ ನ್ಯಾಯದ ಲೆಕ್ಕಾಚಾರ ತಲೆಕೆಳಗಾಯಿತು. ಎಂದಿನಂತೆ ಹೆಣ್ಣು ಕಳ್ಳಿಪೀರ ಒಂದು ಏರೋಪ್ಲೇನ್ ಚಿಟ್ಟೆಯನ್ನು ಹಿಡಿದು ತಂದಿತ್ತು. ನಾನು ಅದನ್ನು ಕ್ಲಿಕ್ಕಿಸಬೇಕೆನ್ನುವಷ್ಟರಲ್ಲಿ ಅದೆಲ್ಲಿಂದಲೋ ಇನ್ನೂ ದೊಡ್ಡದಾದ ಹುಳುವನ್ನು ಹಿಡಿದುಕೊಂಡು ಬಂದ ಗಂಡು ಕಳ್ಳಿಪೀರ ತನ್ನ ಶ್ರೀಮತಿಯ ಪಕ್ಕದಲ್ಲೇ ಕಡ್ಡಿಯ ಮೇಲೆ ಕುಳಿತುಕೊಂಡಿತು.

ಗಂಡು ಹಕ್ಕಿಯ ಬಾಯಲ್ಲಿ ದೊಡ್ಡ ಚಿಟ್ಟೆ....


ನನಗೆ ಒಂದು ಕ್ಷಣ ಖುಷಿ, ಗಲಿಬಿಲಿ, ಆಶ್ಚರ್ಯ ಒಟ್ಟೊಟ್ಟಿಗೆ ಆಗಿ ಕ್ಲಿಕ್ಕಿಸುವುದು ಮರೆತೇ ಹೋಯಿತು. ಏಕೆಂದರೆ ಇದುವರೆಗೆ ಗಂಡು ಕಳ್ಳೀಪೀರವನ್ನು ಮನಸ್ಸಿನಲ್ಲೇ ಹೀಯಾಳಿಸಿ, ಅದರ ಸೋಮಾರಿತನವನ್ನು ಖಂಡಿಸಿದ್ದೆನಲ್ಲಾ....ಮರಿಗಳು ದೊಡ್ಡದಾಗಿರುವುದರಿಂದ ಗಂಡಿಗೆ ತನ್ನ ಜವಾಬ್ದಾರಿ ಅರಿತಿದ್ದಕ್ಕೆ ನನಗೆ ಖುಷಿಯಾಯಿತು. ಇದೆಲ್ಲಾ ಅಂದುಕೊಳ್ಳುತ್ತಿರುವಾಗಲೇ ಎರಡು ಒಂದರ ನಂತರ ಮತ್ತೊಂದು ಗೂಡಿಗೆ ಹಾರಿ ಮರಿಗಳಿಗೆ ಆಹಾರಕೊಟ್ಟು ಹೊರ ಹಾರಿಹೋಗಿದ್ದವು. ಆರೆರೆ...... ಎಂಥ ಒಳ್ಳೇ ಅವಕಾಶವನ್ನು ಕ್ಲಿಕ್ಕಿಸಲು ಮರೆತನಲ್ಲಾ.. ಈ ರೀತಿ ಬೇರೆಯವರ ಬಗ್ಗೆ ಯೋಚಿಸಿದರೆ ಹೀಗೆ ತಾನೆ ಆಗುವುದು ಅಂತ ಸಂಕಟವಾಗಿ ಇನ್ನಾದರೂ ಅಂಥ ಮತ್ತೊಂದು ಅಂಥ ಕ್ಷಣ ಸಿಗುವುದೋ ಅಂತ ಕಾಯತೊಡಗಿದೆ..

ನಾನು ಇಳಿಯುವಾಗ ನನ್ನ ರೆಕ್ಕೆಗಳ ಅಂದ ನೋಡು....

ಹದಿಮೂರನೇ ದಿನ ಮತ್ತೆ ದಂಪತಿಗಳಿಬ್ಬರೂ ದೊಡ್ಡ ಮಿಡತೆ ಮತ್ತು ಚಿಟ್ಟೆಯನ್ನು ಬಾಯಿಯಲ್ಲಿ ಹಿಡಿದು ಒಟ್ಟಿಗೆ ಕುಳಿತ ದೃಶ್ಯ ನನ್ನ ಕ್ಯಾಮೆರಾದಲ್ಲಿ ಸೆರೆಯಾಯಿತು. ನಂತರದ ದಿನಗಳಲ್ಲಿ ಎಲ್ಲಾ ರೀತಿಯ ದೊಡ್ಡ ದೊಡ್ಡ ಚಿಟ್ಟೆಗಳು, ಹುಳುಗಳು, ದುಂಬಿಗಳು, ಡ್ರ್ಯಾಗನ್ ಪ್ಲೈಗಳು, ಗೆದ್ದಲು ಹುಳುಗಳು....ಹಿಡಿದು ತರುತ್ತಿದ್ದವು. ಇತ್ತೀಚೆಗೆ ನಾನು ಕ್ಲಿಕ್ಕಿಸಿದ ಮಡಿವಾಳ ಹಕ್ಕಿ, ಚಿಟ್ಟು ಮಡಿವಾಳ ಹಕ್ಕಿ, ಬೇಲಿ ಚಟುಕಗಳಂತೆ ಒಮ್ಮೆಯೂ ಹಣ್ಣು ಇನ್ನಿತರ ಸಸ್ಯಹಾರವನ್ನು ಇವು ತರಲಿಲ್ಲವಲ್ಲ. ಪಕ್ಕಾ ವಿದೇಶಿ ಆಹಾರಪದ್ದತಿಯನ್ನು[ನಾನ್‌ವೆಜ್]ಮೈಗೂಡಿಸಿಕೊಂಡಿವೆಯಲ್ಲ...ಅನ್ನಿಸಿದರೂ ಬೇರೆಯವರ ಸಮಾಚಾರ ನಮಗೇಕೆ ಅಂದುಕೊಂಡು ಸುಮ್ಮನೆ ಕ್ಲಿಕ್ಕಿಸತೊಡಗಿದೆ.

ಕೂಡಿ ಬಾಳಿದರೆ ಸ್ವರ್ಗ ಸುಖ....ನನಗೂ ಸ್ವಲ್ಪ ಜಾಗ ಕೊಡೆ...!!



ಅವು ಆಕಾಶದಲ್ಲೇ ಹುಳುಗಳನ್ನು ಬೇಟೆಯಾಡುವ ಪರಿ, ಉಲ್ಟಾ ಲಾಗ ಹಾಕುವುದು, ಲಗಾಟಿ ಹೊಡೆಯುವುದು, ಕೆಳಮುಖ ಹಾರುವುದು, ಇಳಿಯುವಾಗ ಮತ್ತು ಹಾರುವಾಗ ದೇಹದ ಮುಂಭಾಗ ಮೇಲೆತ್ತಿ ಬ್ಯಾಲೆನ್ಸ್ ಮಾಡುವುದು, ತಲೆಕೆಳಕಾಗಿ ಹಾರುತ್ತಾ ತಕ್ಷಣವೇ ತಿರುವು ತೆಗೆದುಕೊಂಡು ಮೇಲ್ಮುಖವಾಗುವುದು, ರೆಕ್ಕೆ ಕದಲಿಸದೇ ನೇರವಾಗಿ ಗೂಡಿಗೆ ಗುರಿತಪ್ಪದೆ ಹೋಗುವಲ್ಲಿನ ನಿಖರತೆ, ಚಾಕಚಕ್ಯತೆಗಳೆಲ್ಲಾ ನಮ್ಮ ಯುದ್ದವಿಮಾನಗಳಾದ ಜಾಗ್ವಾರ್, ಸುಖೋಯ್, ಮೀರಜ್, ಸೂರ್ಯಕಿರಣಗಳನ್ನು ನೆನಪಿಸಿತ್ತು.

ನಾನು ನೀನು ಜೋಡಿ...ಈ ಜೀವನ ಎತ್ತಿನ ಗಾಡಿ....!!

ಈ ಮದ್ಯ ಮತ್ತೊಂದು ವಿಚಿತ್ರ ಘಟನೆ ನಡೆಯಿತು. ಒಬ್ಬ ಹುಡುಗ ತನ್ನಲ್ಲಿ ಆಡಗಿಸಿಕೊಂಡಿದ್ದ ಚಾಟರಬಿಲ್ಲಿನಿಂದ ಈ ಕಳ್ಳೀ ಪೀರ ಹಕ್ಕಿಗಳಿಗೆ ಗುರಿಯಿಟ್ಟಿದ್ದ. ನಾನು ಅದನ್ನು ಗಮನಿಸಿ "ಏನು ಮಾಡುತ್ತಿದ್ದೀಯಾ" ಅಂದೆ. ಅದಕ್ಕವನು "ಸುಮ್ಮನೆ " ಅಂದ. ತಕ್ಷಣ ಅವನದೊಂದು ಫೋಟೊ ತೆಗೆದು ನೋಡಿಲ್ಲಿ "ನೀನು ಪಕ್ಷಿಗಳನ್ನು ಸಾಯಿಸುತ್ತೀಯಾ ಅಂತ ಹೇಳಿ ನಿನ್ನ ಅರಣ್ಯ ಇಲಾಖ ಪೋಲಿಸರಿಗೆ ಕೊಟ್ಟರೆ ನಿನ್ನನ್ನು ಹಿಡಿದು ಜೈಲಿಗೆ ಹಾಕುತ್ತಾರೆ ಗೊತ್ತಾ.. ನಿನ್ನಂತೆ ಅವುಗಳಿಗೂ ಸ್ವತಂತ್ರವಾಗಿ ಜೀವಿಸುವ ಆಸೆಯಿರುತ್ತೆ...ಅಲ್ವಾ..."ಅಂತ ಬುದ್ದಿ ಹೇಳಿ ಕಳಿಸಿದ್ದಾಯಿತು.


ಈ ಹಕ್ಕಿಗಳ ಛಾಯಾಗ್ರಹಣ ಇಪ್ಪತ್ತಮೂರನೇ ದಿನಕ್ಕೆ ಕೊನೆಗೊಂಡಿತ್ತು. ಅವತ್ತು ಹೇಮಾಶ್ರಿಯೂ ಬಂದಿದ್ದಳು.., ಬೈನಾಕ್ಯೂಲರನಲ್ಲಿ ಹಕ್ಕಿಗಳ ಆಟ ಪಾಠಗಳ ಚಟುವಟಿಕೆಯೆಲ್ಲಾ ನೋಡಿ ಬೆರಗಾಗಿದ್ದಳು...

ಎರಡು ತಿಂಗಳ ಹಿಂದೆ ರೋಮ್ಯಾನ್ಸ್‌ನಿಂದ ಪ್ರಾರಂಭವಾದ ಕಳ್ಳಿಪೀರ ಸಂಸಾರ ಕತೆ., ಈಗ ಮರಿಗಳು ದೊಡ್ಡವಾಗಿ ಗೂಡಿನಿಂದ ಹಾರಿಹೋಗುವಲ್ಲಿಗೆ ಮುಗಿದಿತ್ತು.

[ಈ ಮೊದಲು ಇದೇ ಜಾತಿಗೆ ಸೇರಿದ blue tailed green bee eater ಪಕ್ಷಿಯ ಸಂಪೂರ್ಣ ದಿನಚರಿಯನ್ನು "ಪಕ್ಷಿ ಲೇಕದ ಸಂದೇಶ" http://chaayakannadi.blogspot.com/2008/09/blog-post_20.html ಅನ್ನುವ ಶೀರ್ಷಿಕೆಯಲ್ಲಿ ಚಿತ್ರ-ಲೇಖನವನ್ನು ಬರೆದಿದ್ದೆ. ಅದರ ಸಂಪೂರ್ಣ ಚಿತ್ರಣವನ್ನು ಕ್ಲಿಕ್ಕಿಸಿದ್ದು ಮೈಸೂರಿನ ನಗುವನಹಳ್ಳಿ ಎಂಬ ಊರಿನಲ್ಲಿ....ಅದೇ ಜಾತಿಯ ಈ " Small green bee eater" ಹಕ್ಕಿಯ ಚಿತ್ರಗಳನ್ನು ಕ್ಲಿಕ್ಕಿಸಿದ್ದು..ಹೆಸರಘಟ್ಟದ ಸಮೀಪ..ಇವು ಗಾತ್ರದಲ್ಲಿ ಅವುಗಳಿಗಿಂತ ಸ್ವಲ್ಪ ಚಿಕ್ಕದಾಗಿದ್ದು ಬಾಲ ನೀಲಬಣ್ಣವಾಗಿರುವುದಿಲ್ಲ..]

ವಿಶೇಷ ಸೂಚನೆ:

ಬ್ಲಾಗ್ ಗೆಳೆಯರೆ....

ಕಳೆದೊಂದು ವಾರದಿಂದ ಈ ತಿಂಗಳ ಅಂತ್ಯದವರೆಗೆ ಮದುವೆಗಳನ್ನು ಮಾಡಿಸುವ ಅಲ್ಲಲ್ಲ .. ಮದುವೆ ಫೋಟೋ ತೆಗೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ...[ನಾವು ಬದುಕಬೇಕಲ್ಲಾ ಸ್ವಾಮಿ] ಈ ಕಾರಣದಿಂದಾಗಿ ಬ್ಲಾಗ್ ಲೋಕಕ್ಕೆ ಕಾಲಿಡಲು ಸಮಯವಾಗುತ್ತಿಲ್ಲ....ಮುಗಿದ ಕೂಡಲೇ ಎಲ್ಲರ ಲೇಖನಗಳನ್ನು ಚಿತ್ರಗಳನ್ನು ನೋಡುವ ಹಂಬಲವಿದೆ. ಅಲ್ಲಿಯವರೆಗೆ ಸಹಕರಿಸಿ...ಸಾಧ್ಯವಾದರೆ ಮದುವೆ ಮನೆಗಳಲ್ಲಿ ನಮ್ಮ ಫೋಟೊ ಮತ್ತು ವಿಡಿಯೋಗ್ರಫಿ ಗೆಳೆಯರ ಕಥೆ...ವ್ಯಥೆ....ಹಾಸ್ಯಗಳನ್ನು ಹೊತ್ತು ತರಲೆತ್ನಿಸುತ್ತೇನೆ.....ಧನ್ಯವಾದಗಳು..

ಚಿತ್ರ-ಲೇಖನ.
ಶಿವು.ಕೆ ARPS.

Friday, April 17, 2009

ಕಸ್ತೂರಿ ಕನ್ನಡ ಮತ್ತು ಸುವರ್ಣ ಸಂದರ್ಶನ.

ಅತ್ಮೀಯ ಬ್ಲಾಗ್ ಗೆಳೆಯರೆ,

ನನ್ನ ಛಾಯಾಕನ್ನಡಿ ಬ್ಲಾಗಿನ "ಭೂಪಟಗಳ ಚಿತ್ರ-ಲೇಖನ" ವಿಚಾರವಾಗಿ "ಕಸ್ತೂರಿ ಕನ್ನಡ" ಛಾನಲ್ಲಿನವರು ನಡೆಸಿದ ಸಂದರ್ಶನ ದಿನಾಂಕ [ 25-3-2009] ರಂದು ಪ್ರಸಾರವಾಯಿತು. ಇದರ ವಿಡಿಯೋ ತುಣುಕುಗಳು......

ಹಾಗೂ ಇತ್ತೀಚೆಗೆ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ ಗೌರವ[ARPS Distinction] ನನಗೆ ಮತ್ತು ಮಲ್ಲಿಕಾರ್ಜುನ್‌ಗೆ ದೊರಕಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಈ ಸಂಧರ್ಭದಲ್ಲಿ "ಸುವರ್ಣ ನ್ಯೂಸ್" ಚಾನಲ್ಲಿನಲ್ಲಿ ದಿನಾಂಕ[10-4-2009]ರಂದು ನಮ್ಮನ್ನು ಸಂದರ್ಶಿಸಿದ್ದರು. ಅದರ ವಿಡಿಯೋ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇವೆ...

ಅದನ್ನು ನೋಡಲು ಅಥವ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ....


Part 1 - http://video.google.com/videoplay?docid=3023628538498416913

Part 2 - http://video.google.com/videoplay?docid=6131706322515531053

ಪ್ರೀತಿಯಿಂದ ಶಿವು.ಕೆ ARPS.

Sunday, April 12, 2009

ನನ್ ಹಿಂಬದಿ ಕಣ್ಣು ಒಡೆದೊಯ್ತು....ಅಮೇಲೆ...ಏನೇನಾಯ್ತು...?

ಅಯ್ಯೋ..ನನ್ನ ಬಲ ಹಿಂಬದಿ ಕಣ್ಣು ಹೋಯ್ತಲ್ಲ.......



ನನ್ನ ಟೂವೀಲರ್ ಮತ್ತು ಅದರ ಮೇಲೆ ಕುಳಿತ ನಾನು ಟ್ರಾಫಿಕ್‌ನಲ್ಲಿ ನಿಂತಿದ್ದರೂ ನನ್ನ ತಲೆ ಅಲ್ಲಲ್ಲ ನನ್ನ ತಲೆಯೊಳಗಿನ ಅಲೋಚನೆಗಳು ಎಲ್ಲೆಲ್ಲೋ ಊರೂರು ಸುತ್ತಿ ಬರುತ್ತಿದ್ದವು. ನನ್ನ ಮುಂದೆ ಬಿ.ಎಂ.ಟಿ.ಸಿ ಬಸ್ಸಿತ್ತು. ಅದರ ಮುಂದೆ ಈ ವರ್ಷ ರಾಷ್ಟ್ರದಲ್ಲೇ ಅತ್ಯುತ್ತಮ ಸೇತುವೆ ಅಂತ ರಾಷ್ಟ್ರ ಪ್ರಶಸ್ತಿ ಪಡೆದ ಕೆ.ಅರ್.ಪುರಂ ತೂಗು ಸೇತುವೆಯ ರಸ್ತೆ ಇತ್ತು.


ಕೆ.ಅರ್. ಪುರಂನಲ್ಲಿರುವ ಅಣ್ಣನ ಮನೆಗೆ ಹೋಗುತ್ತಿದ್ದವನು ಆ ಟ್ರಾಫಿಕ್‌ನಲ್ಲಿ ನಿಂತಿದ್ದೆ. ಇದ್ದಕ್ಕಿದ್ದಂತೆ ಕಾಲೇಜು ಹುಡುಗನೊಬ್ಬ ಹಿಂಬಾಗದಿಂದ ವೇಗವಾಗಿ ಓಡಿಬಂದಿದ್ದು ನನಗೆ ಗೊತ್ತಾಗಲಿಲ್ಲ. ಅವನ ಉದ್ದೇಶ ಮುಂದಿರುವ ಬಸ್ಸನ್ನು ಹತ್ತುವುದು. ಹಿಂದಿನಿಂದ ಜೋರಾಗಿ ಓಡಿಬಂದವನು ನನ್ನ ಪಕ್ಕದಲ್ಲಿ ಸಾಗಿ ಹೋಗಿದ್ದ. ಹಾದುಹೋಗುವಾಗ ಅವನ ವೇಗಕ್ಕೆ ಬೆನ್ನಿಗೆ ಹಾಕಿದ್ದ ಕಾಲೇಜ್ ಬ್ಯಾಗ್ ನನ್ನ ಸ್ಕೂಟಿಯ ಬಲಗಡೆಯ ಮಿರರಿಗೆ ತಗುಲಿ "ಪಟ್" ಅಂತ ಶಬ್ದವಾಯಿತು. ಏನಾಯಿತು ಅಂತ ನೋಡಿಕೊಳ್ಳುವಷ್ಟರಲ್ಲಿ ಆ ಮಿರರ್ ಕಳಚಿ ಕೆಳಗೆ ಬಿದ್ದು ಒಡೆದು ಹೋಗಿತ್ತು. ಅವನು ಅದೇ ವೇಗದಲ್ಲಿ ನನ್ನ ಮುಂದಿದ್ದ ಬಿ.ಎಮ್.ಟಿ.ಸಿ. ಬಸ್ಸನ್ನು ಹತ್ತಿಬಿಟ್ಟಿದ್ದ.

ನನಗೆ ಕೆಳಗೆ ಬಿದ್ದ ಮಿರರ್ ಮತ್ತು ಮುಂದೆ ಬಸ್ಸು ಹತ್ತಿದ್ದ ಹುಡುಗನನ್ನು ನೋಡುತ್ತಾ,. "ಹೇ...ನಿಂತುಕೊಳ್ಳೋ...ನಿನಗೆ ಕಣ್ಣು ಕಾಣೋಲ್ವ".....ಕೂಗಿದೆ...ಅಷ್ಟರಲ್ಲಿ ಬಸ್ಸು ಮುಂದೆ ಸಾಗಿತ್ತು.

ಎಲ್ಲಾ ಕ್ಷಣಮಾತ್ರದಲ್ಲೇ ಆಗಿಹೋಗಿತ್ತು. ಅಣ್ಣನ ಮನೆಗೆ ಹೋಗಿ ವಾಪಸ್ಸು ಬಂದೆ. ಅವತ್ತು ಏನು ಅನ್ನಿಸಲಿಲ್ಲ.


ಮರುದಿನ ಮತ್ತೆ ಎಂದಿನಂತೆ ಮನೆಯಿಂದ ಹೊರಟಾಗ ಮೊದಲ ಟ್ರಾಫಿಕ್ ಸಿಗುವುದು ಶೇಷಾದ್ರಿಪುರಂನಲ್ಲಿ. ಅಲ್ಲಿ ನಿಂತಿದ್ದೆ. ನನ್ನ ಪಕ್ಕ ಸ್ವಲ್ಪ ಹಿಂದೆ ಸುಂದರವಾದ ಹುಡುಗಿ ಆಕ್ಟೀವ್ ಹೋಂಡದ ಮೇಲೆ ಕುಳಿತಿದ್ದಳು. ಒಂದು ಕ್ಷಣ ಹಿಂದೆ ತಿರುಗಿದೆ....! ನೋಡಲು ಸುಂದರವಾಗಿದ್ದಾಳಲ್ಲ...ಕತ್ತನ್ನು ಸ್ವಲ್ಪ ತಿರುಗಿಸಿದೆ....ಯಾಕೋ ಬೇಡವೆನಿಸಿತ್ತು. ಮೊದಲ ಸಲ ಆಚಾನಕ್ಕಾಗಿ ನೋಡಿದರೆ ಆ ಹುಡುಗಿಗೂ ಏನು ಅನ್ನಿಸುವುದಿಲ್ಲ....ಅದ್ರೆ ಈಗ ಮತ್ತೆ ತಿರುಗಿನೋಡಿದರೆ ಅವಳಿಗೆ ಗೊತ್ತಾಗುವುದರ ಜೊತೆಗೆ ಅವಳ ಮನಸ್ಸಿಗೆ ಇರಿಸುಮುರಿಸು ಉಂಟುಮಾಡಿದಂತಾಗುತ್ತದೆ. ಕಿರಿಕಿರಿ ಅಂತ ನನ್ನ ಬಗ್ಗೆ ಅನ್ನಿಸಬಹುದು. ಆದರೆ ಮನಸ್ಸು ಮತ್ತೆ ಮತ್ತೆ ನೋಡಲು ಆಸೆಪಡುತ್ತಿದೆಯಲ್ಲಾ..!! ಈಗ ಬಲಗಡೆಯ ಮಿರರ್ ಇದ್ದಿದ್ದರೇ.... ಹೆಲ್ಮೆಟ್ಟಿನ ಕಪ್ಪುಗ್ಲಾಸನ್ನು ಪೂರ್ತಿ ಮುಚ್ಚಿಕೊಂಡು ನನ್ನ ಕತ್ತನ್ನು ತಿರುಗಿಸದೆ ಬಲಗಡೆಯ ಮಿರರ್ ಮುಖಾಂತರ ಟ್ರಾಫಿಕ್ ಗ್ರೀನ್ ಸಿಗ್ನಲ್ ಬೀಳುವವರೆಗೂ ಆ ಹುಡುಗಿಯನ್ನು ನೋಡಬಹುದಿತ್ತಲ್ಲ.


ಛೇ! ಎಂಥ ಕೆಲಸವಾಯಿತು. ನಿನ್ನೆಯವರೆಗೂ ಬಲಗಡೆಯ ಮಿರರ್ ಇತ್ತು... ಆ ಹುಡುಗ ನನ್ನ ಕೈಗೆ ಸಿಕ್ಕರೇ.....ಅವನ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು....ಆಷ್ಟರಲ್ಲಿ ಗ್ರೀನ್ ಸಿಗ್ನಲ್ ಬಿತ್ತು. ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಮುಂದೆ ಸಾಗಿದೆ.


ಮೊದಲು ಇದೇ ರೀತಿ ಎಷ್ಟೋ ಟ್ರಾಫಿಕ್ಕುಗಳಲ್ಲಿ ಬಲಗಡೆಯ ಮಿರರ್‌ನಿಂದ ನೋಡಿರುವ ಹುಡುಗಿಯರೆಷ್ಟು......ಲೆಕ್ಕಹಾಕಲು ಸಾಧ್ಯವಿಲ್ಲ....ಈ ಒಂದು ಕಾರಣಕ್ಕೂ ನನಗೆ ಬೆಂಗಳೂರಿನ ಟ್ರಾಫಿಕ್ ಇಷ್ಟವಾಗುತ್ತೆ.


ಕೆಲವೊಮ್ಮೆ ಟ್ರಾಫಿಕ್‌ನಲ್ಲಿ ಹಿಂಭಾಗ ಇದೇ ರೀತಿ ಕಂಡ ಹುಡುಗಿಯರನ್ನು ಹಾಗೇ ನೋಡುತ್ತಾ ಡ್ರೈವ್ ಮಾಡಬೇಕೆನಿಸಿದರೆ.....ಅದೇ ಟ್ರಾಫಿಕ್‌ನಲ್ಲಿ ನಮಗೆ ಬೇಕಾದ ಹಾಗೆ ಬಲಗಡೆಯ ಮಿರರ್ [ಹುಡುಗಿಯ ಮುಖ ಚೆನ್ನಾಗಿ ಕಾಣುವಂತೆ] ಸ್ವಲ್ಪ ಅಕ್ಕಪಕ್ಕ ತಿರುಗಿಸಿ ಸೆಟ್ ಮಾಡಿಕೊಳ್ಳಬಹುದು. ಮುಂದೆ ರಸ್ತೆಯ ಎಡಬದಿಯಲ್ಲೇ ಚಲಿಸುತ್ತಾ ನಮ್ಮ ಹಿಂದೆ ಟೂವೀಲರ್‌ನಲ್ಲಿ ಬರುತ್ತಿರುವ ಹುಡುಗಿ ರಸ್ತೆಯುದ್ದಕ್ಕೂ ನಮಗೆ ಮಿರರ್‌ನಲ್ಲಿ ಕಾಣುವಂತೆ ನಿದಾನವಾಗಿ ಒಂದೇ ಅಳತೆಯ ವೇಗದಲ್ಲಿ ಟೂವೀಲರ್‌ನಲ್ಲಿ ಸಾಗಬಹುದು..


ಹೆಲ್ಮಟ್ಟಿನ ಹಿಂದಿರುವ ಕಣ್ಣು ಮುಂದಿರುವ ರಸ್ತೆ, ಅಕ್ಕಪಕ್ಕ ಇರುವ ವಾಹನಗಳು, ಸಿಗ್ನಲ್, ಪೋಲಿಸ್ ಎಲ್ಲವನ್ನು ಗಮನಿಸುತ್ತಿದ್ದರೇ... ಮನಸೊಳಗಿನ ಕಣ್ಣು ನನ್ನ ಟೂ ವೀಲರ್‌ನ ಹಿಂಬದಿ ಕಣ್ಣಿನ[ಬಲಗಡೆಯ ಮಿರರ್] ಜೊತೆಸೇರಿ ಹೀಗೆ ಹುಡುಗಿಯರನ್ನು ನೋಡಿ ಆನಂದಿಸಬಹುದಿತ್ತು.


ಇದಿಷ್ಟೇ ಅಲ್ಲದೇ ಎಲ್ಲಾದರೂ ಬಸ್‌ಸ್ಟಾಂಡಿಗೆ ಸ್ವಲ್ಪ ಮುಂದೆ ಯಾವುದೋ ಕಾರಣಕ್ಕೆ ರಸ್ತೆ ಪಕ್ಕ ಟೂವೀಲರ್ ನಿಲ್ಲಿಸಿಕೊಂಡಿದ್ದಾಗ... ಹಿಂಬಾಗದಲ್ಲಿ ಬಸ್ ಸ್ಟಾಪ್ ಇದ್ದರಂತೂ...ಅಲ್ಲಿ ಬಸ್ಸಿಗೆ ಕಾಯುತ್ತಿರುವ ಹತ್ತಾರು ಹುಡುಗಿಯರನು ಹೋಲ್‌ಸೇಲಾಗಿ ಈ ಮಿರರ್ ಸಹಾಯದಿಂದ ನೋಡಿ ಖುಷಿಪಡಬಹುದಿತ್ತು.
ಇಂಥ ಅನೇಕ ಮಜಗಳನ್ನು ರಸ್ತೆಯಲ್ಲಿ ನನ್ನ ಹಿಂಬದಿಯ ಕಣ್ಣಿನ ಸಹಾಯದಿಂದ ಅನುಭವಿಸುತ್ತಿದ್ದೆ. ಅರೆರೆ......ಅಯ್ಯೋ ಇದೆಲ್ಲಾ ಸೀಕ್ರೇಟನ್ನು ನಿಮ್ಮತ್ರ ಹೇಳಿಬಿಟ್ಟೆನಲ್ಲ.....ಇದು ಯಾವುದು ನನ್ನ ಹೆಂಡತಿಗೆ ಗೊತ್ತಿಲ್ಲಾರ್ರೀ......ದಯವಿಟ್ಟು ಅವಳಿಗೆ ಹೇಳಬೇಡ್ರೀ......


ಸರಿ ಇವೆಲ್ಲಾ ತಮಾಷೆಯ ವಿಚಾರಗಳಾಯ್ತಲ್ಲ.......ಅನಿರೀಕ್ಷಿತವಾಗಿ ಏನಾದರೂ ಟ್ರ್‍ಆಫಿಕ್ ಸಿಗ್ನಲ್ ಜಂಪ್ ಮಾಡಿಬಿಟ್ಟಿರೇ......ಅಥವ ಹಾಗೇ ಸಾಗಿ ಬರುತ್ತಿದ್ದರೇ.....ಅಲ್ಲಿ ನಿಂತಿರುವ ಪೋಲಿಸ್ ಗಮನಿಸಿದನಾ....ಗಮನಿಸಿದರೂ ಏನಾದರೂ ನೋಟ್ ಮಾಡಿಕೊಳ್ಳುತ್ತಿದ್ದಾನಾ.....ಆಗ ನಾವೇನು ಮಾಡಬೇಕು....ಇತ್ಯಾದಿಗಳನ್ನು ತಿಳಿಯಬಹುದು.

ಹತ್ತಾರು ವರ್ಷ ನಮ್ಮ ಜೊತೆಗಿದ್ದರೂ ಅದರ ಕಡೆಗೆ ಗಮನ ಕೊಡದೆ ಕಡೆಗಾಣಿಸುವ ನಾವು ಅವು ಒಂದೆರಡು ದಿನ ಇಲ್ಲವಾದಾಗ ಆಗುವ ತೊಂದರೆ...ಅಲ್ಲಲ್ಲ ತಪ್ಪಿಹೋದ ಅನಂದಗಳಿಂದಾಗಿ ಅವುಗಳ ಮಹತ್ವ ಗೊತ್ತಾಗುತ್ತದೆ ಅಲ್ವೇ...


ಸರಿ ಅದು ಇಲ್ಲದಿದ್ದರೇ ಏನಾಯ್ತು...ನಷ್ಟವೇನಾಗುತ್ತೇ.....ನೋಡೇ ಬಿಡುವ ಅಂತ ಒಂದಷ್ಟು ದಿನ ಹಾಗೇ ಓಡಾಡಿದೆ. ನಿಜಕ್ಕೂ ಹೇಳ್ತೀನಿ......ನನಗೆ ರಸ್ತೆಗಳು ಬೇಸರದ ಸಂಗತಿಗಳೇನೋ ಅನ್ನಿಸತೊಡಗಿದವು. ಚಿಕ್ಕರಸ್ತೆಗಳಾದರೂ ಮಿಗಿಯದ ರಸ್ತೆಗಳಂತೆ ಕಾಡತೊಡಗಿದವು. ಅನೇಕ ಬಾರಿ ಹಿಂದೆ ಬರುತ್ತಿರುವ ವಾಹನಗಳನ್ನು ಕತ್ತು ತಿರುಗಿಸಿ ನೋಡಲಾಗದೆ[ಟೂ ವೀಲರ್ ಓಡಿಸುವಾಗ ಹಾಗೆ ನೋಡಲುಬಾರದು] ಮತ್ತು ದೊಡ್ಡ ರಸ್ತೆಗಳಲ್ಲಿ ಯಾವ ವೇಗದಲ್ಲಿ ಹೋಗಬೇಕೆಂದು ಗೊತ್ತಾಗದೇ ಅನೇಕರಿಂದ ಬೈಸಿಕೊಂಡಿದ್ದೇನೆ.


ಇಷ್ಟೆಲ್ಲಾ ಹೇಳಿದ ಮೇಲು ನೀವು ಕೇಳಬಹುದು. "ಅಯ್ಯೋ ಎಡಬದಿಯ ಹಿಂಬದಿಯ ಕಣ್ಣು ಇತ್ತಲ್ಲ, ಅದನ್ನು ಉಪಯೋಗಿಸಬಹುದಿತ್ತಲ್ಲ ಅಂತ" ನಿಮಗನ್ನಿಸಿದ್ದು ಸರಿ....ನಾನು ಹಾಗೆ ಅಂದುಕೊಂಡು ಆ ಕಣ್ಣನ್ನು ಮೇಲೆ ಹೇಳಿದ ಎಲ್ಲಾ ರೀತಿ ಉಪಯೋಗಿಸಲೆತ್ನಿಸಿದೆ........


ಆಗಲಿಲ್ಲ ಕಣ್ರೀ.....ಅದು ಸರಿಯಾಗಿ ವರ್ಕೌಟ್ ಆಗಲೇ ಇಲ್ಲ. ತುಂಬಾ ಪ್ರಯತ್ನಿಸಿದೆ...ಅದೇಕೋ ಏನೋ ಅದರಲ್ಲಿ ಹುಡುಗಿಯರು ಕಾಣೋದೆ ಇಲ್ಲ. ಕಂಡರೂ ಸುಂದರವಾಗಿ ಕಾಣೋದಿಲ್ಲ.. ಮತ್ತೆ ವೇಗವನ್ನು ಅದರಲ್ಲಿ ನೋಡಿ ನಿಯಂತ್ರಿಸಿಕೊಳ್ಳೋಕಂತೂ ಆಗೋದೆ ಇಲ್ಲ. ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸದೆ ಒಮ್ಮೆ ಪೋಲೀಸಪ್ಪ ದಂಡವನ್ನು ವಸೂಲಿ ಮಾಡಿದ್ದ. ನಮ್ಮಜ್ಜಿ ಹೇಳಿದಂತೆ ಎಡಗೈ ಏನಿದ್ದರೂ ಅದಕ್ಕೆ ಸರಿ ಅನ್ನುವಂತೆ ಇಲ್ಲೂ ಕೂಡ ಈ ಎಡ ಹಿಂಬದಿ ಕಣ್ಣು ತನ್ನ ಬೆಲೆ ಕಳೆದುಕೊಂಡಿತ್ತು.

ಎಡ-ಅಥವ ಬಲ ತಿರುವು ತೆಗೆದುಕೊಳ್ಳುವಾಗ ನನ್ನ ಹಿಂಬದಿ ಕಣ್ಣಿಲ್ಲದೇ ಕತ್ತನ್ನು ಆಗಾಗ ತಿರುಗಿಸಿ....ಕತ್ತು ನೋವು ಬರತೊಡಗಿತ್ತು. ಸುಮಾರು ಒಂದು ವಾರಕ್ಕೆ ಇಷ್ಟೇಲ್ಲಾ ತೊಂದರೆಯಾದರೆ ಮುಂದೆ ಏನೇನು ಆಗುವುದೋ ಅನ್ನುವ ಭಯಕ್ಕೆ ಮರುದಿನವೇ ನನ್ನ ಮೆಚ್ಚಿನ ಇನ್ನೂ ಚೆನ್ನಾಗಿ ಕಾಣುವ ಬಲ ಹಿಂಬದಿಕಣ್ಣನ್ನು ಹಾಕಿಸಿದ್ದೆ.


ಮತ್ತೆ ಹೊಸ ಹಿಂಬದಿ ಕಣ್ಣನ್ನು ಹಾಕಿಸಿದ ಮೇಲೆ........ಮತ್ತದೇ ಖುಷಿ....


ಚಿತ್ರ ಮತ್ತು ಲೇಖನ.
ಶಿವು.ಕೆ ARPS.

Saturday, April 4, 2009

ಹಿರಿಯಜ್ಜನಿಗೆ ಕತೆ ಹೇಳಿದ ಕರಿಬೇವು.

ಗೆಳೆಯರೆ, ನನ್ನ ಛಾಯಾಕನ್ನಡಿ ಬ್ಲಾಗಿನಲ್ಲಿ ಇದು ಐವತ್ತನೇ ಪೋಸ್ಟಿಂಗ್.
ಮನುಷ್ಯನ ಜೀವನದಲ್ಲಿ ಐವತ್ತನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ವೃದ್ಧಾಪ್ಯದ ಕಡೆಗೆ ನೋಟ ನೆಟ್ಟಂತೆ ಲೆಕ್ಕ. ಮತ್ತೆ ಇಂದು ವಿಶ್ವ ಹಿರಿಯರ ದಿನ. ಅದಕ್ಕಾರಿ ಅವರನ್ನು ಗೌರವಿಸಲು ಈ ಚಿತ್ರ ಲೇಖನ.


ಜಿಗುಪ್ಸೆಯಿಂದ ಭಾರವಾದ ಹೆಜ್ಜೆಗಳನ್ನಿಡುತ್ತಿದ್ದರೂ ನೆಲದಲ್ಲಿ ಬಿದ್ದಿದ್ದ ತರಗಲೆಗಳು ಸದ್ದು ಮಾಡದೇ ಅವನ ನೋವಿಗೆ ಸಹಕರಿಸುತ್ತಿದ್ದವು. ಆತ ಹಗುರಾಗಿ ಆ ಕಟ್ಟೆಯ ಮೇಲೆ ಕುಳಿತರೂ ಮೈ ಮನಸೆಲ್ಲಾ ಭಾರವಾಗಿದೆ ಎನಿಸುತ್ತಿತು.

ವಯಸ್ಸು ೭೦ ದಾಟಿರಬಹುದು. ತೊಡೆಯ ಮೇಲೆ ಏನೋ ಸ್ಪರ್ಶವಾಯಿತು, ಮುಗ್ಧ ಮಗು ತನ್ನ ಬೆರಳುಗಳಿಂದ ಆತನ ಕೆನ್ನೆಯನ್ನು ಸೋಕಿದಷ್ಟು ನುಣುಪಾಗಿ.ಆತನ ದೃಷ್ಟಿ ತನ್ನ ತೊಡೆಯ ಮೇಲೆ ಬಿತ್ತು. ವಯಸ್ಸಾದ, ಮುಟ್ಟಿದರೆ ಪುಡಿಯಾಗುವಷ್ಟು ಒಣಗಿದ ಕರಿಬೇವಿನ ಎಲೆ ಗಾಳಿಗೆ ತೂರಾಡಿ, ಮಕ್ಕಳು ಕಾಗದದಲ್ಲಿ ಮಾಡಿ ಮೇಲೆ ಎಸೆದಾಗ ಹಾರಿದ ಪೇಪರ್ ಪಾರಿವಾಳದ ಹಾಗೆ ಗಾಳಿಯಲ್ಲಿ ಜೀಕಿ, ತೊಯ್ದಾಡಿ ನಿದಾನವಾಗಿ ಆತನ ತೊಡೆಯನ್ನಲಂಕರಿಸಿತ್ತು.

ಆತ ಅದನ್ನು ಮುಟ್ಟಬೇಕೆನ್ನುವಷ್ಟರಲ್ಲಿ ಆ ಕರಿಬೇವು ಮಾತಾಡಲಾರಂಬಿಸಿತು.

"ಗೆಳೆಯ ನನ್ನನ್ನು ಮುಟ್ಟುತ್ತಿದ್ದೀಯ?, ನೀನನಲ್ಲದೆ ಇನ್ಯಾರು ನನ್ನನ್ನು ಸ್ಪರ್ಶಿಸಲು ಸಾಧ್ಯ. ನಿನಗೆ ನಾನು ನನಗೆ ನೀನು ಅಲ್ಲವೇ, ಸೆಳೆಯುತ್ತಿವೆಯೇ ಭಾರವಾದ ಹೆಜ್ಜೆಗಳು ಬದುಕಿನ ಕೊನೆಯ ಹಾದಿಗೆ, ಕೊರಗಿ ಕರಗುತ್ತಿವೆಯೇ ಅಂದಿನ ಭಾವ ತುಂಬಿದ ನೂರಾರು ಅನುಭವಗಳು........ ಗೆಳೆಯ ನೀ ಹುಟ್ಟಿದಂತೆ ನಾನೂ ಚಿಗುರಿದೆ, ದಿನಕಳೆದಂತೆ ಬೆಳೆದೆ, ಬೀಸುವ ಗಾಳಿಯಲ್ಲಿ ನಲಿದೆ, ರವಿಕಿರಣಗಳಲ್ಲಿ ಜಿಗಿದು ಜೋಕಾಲಿಯಾಡಿದ್ದೆ. ಅತ್ತ ನೀನು ನಿನ್ನ ಸಂಕ್ರಮಣಕಾಲದಲ್ಲಿ ಗಮಗಮಿಸಿದ್ದೆ ನನ್ನಂತೆ".

ವೃದ್ದ ಎಲೆಯ ಮಾತುಗಳನ್ನು ಕೇಳುತ್ತಾ...ಭಾವಪೂರ್ಣನಾಗಿದ್ದ..... ಆ ಹಣ್ಣೆಲೆ ಒಮ್ಮೆ ನಿಟ್ಟುಸಿರು ಬಿಟ್ಟಿತು... ಮತ್ತೆ ಮಾತು ಮುಂದುವರಿಸಿತು......

"ತಳ್ಳೇಬಿಟ್ಟರಲ್ಲ ನಿನ್ನನ್ನು ಹೆದ್ದಾರಿಯಿಂದ ಕಾಲುದಾರಿಗೆ ಸಮಾಜದ ಜೊತೆಗೂಡಿದ ನಿನ್ನ ಮಕ್ಕಳು, ಊಟದ ಎಲೆಯಿಂದ ಎತ್ತಿ ಬಿಸಾಡಿ ತಿರಸ್ಕರಿಸಿದರು ನಿನ್ನಂತೆ. ಆದರೇನು ನಾನು ಕೊರಗಲಾರೆನು. ಮತ್ತೆ ಮಣ್ಣಲ್ಲಿ ಮಣ್ಣಾಗಿ ನನ್ನ ಕಣಕಣಗಳು ಮತ್ತೊಂದು ಚಿಗುರುವ ಬೇರಿಗೆ ಮೂಲಸತುವಾಗುವ ಉತ್ಸಾಹದಲ್ಲಿ ನೀಡುತ್ತೇನೆ ನಿನಗೆ ಚಿಟಿಕೆಯಷ್ಟು ವಿಶ್ವಾಸ, ಒಂದಿಡಿ ಆತ್ಮೀಯತೆ, ಗುಟುಕಿನಷ್ಟು ಪ್ರೀತಿ. ಹೋಗಿಬರುತ್ತೇನೆ"

ಮತ್ತೆ ಗಾಳಿ ನಿದಾನವಾಗಿ ಬೀಸತೊಡಗಿತು. ವೃದ್ಧ ಮತ್ತೊಮ್ಮೆ ಆ ಕರಿಬೇವನ್ನು ಮುಟ್ಟಿದ ಮಗುವಿನ ಕಿರುಬೆರಳು ಸೋಕಿದಷ್ಟು ನವಿರಾಗಿ. ಮನದೊಳಗೆಲ್ಲೋ ಮಗುವಾದ ಅನುಭವ. ಕಣ್ಣಂಚಿಗೆ ಇಳಿದ ಹನಿಗಳಲ್ಲಿ ಅಮ್ಮನ ನೆನಪು..... ನಿರೀಕ್ಷೆಗಳಿಲ್ಲದ ಆನಂದದ ದಾರಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಭಾವುಕತೆ.

ಅಷ್ಟರಲ್ಲಿ ಗಾಳಿ ಮತ್ತಷ್ಟು ಜೋರಾಗಿ ಬೀಸಿತು. ತೊಡೆಯ ಮೇಲಿದ್ದ ಕರಿಬೇವು ಹಾರಿಹೋಯಿತು ಗಾಳಿ ಬೀಸಿದೆಡೆಗೆ, ಮರಳಿ ಮಣ್ಣಿನೆಡೆಗೆ, ಮಣ್ಣಿನ ಕಣದೊಳಗೆ ಸೇರಿ ಮೂಲಸತುವಾಗುವ ಸಾರ್ಥಕತೆಯ ಕಡೆಗೆ.

ಚಿತ್ರ ಮತ್ತು ಲೇಖನ.
ಶಿವು ಕೆ.