Friday, September 21, 2012

ಏಕದಂ ತಲೆಮೇಲೆ ಹಂಡೆ ನೀರು ಬಗ್ಗಿಸಿದಂತೆ!


      "ಎದ್ದೇಳು ಮಂಜುನಾಥ...ಎದ್ದೇಳು...ಬೆಳಗಾಯಿತು.".ಹಾಡು ನಿದಾನವಾಗಿ ಕೇಳತೊಡಗಿದಾಗ ಎಚ್ಚರವಾಗಿತ್ತು. ಸಮಯ ನೋಡಿಕೊಂಡೆ. ಇನ್ನೂ ಮುಂಜಾನೆ ನಾಲ್ಕು ಇಪ್ಪತ್ತು.  ಇನ್ನೂ ಐದುವರೆಯವರೆಗೆ ಸಮಯವಿದೆ ಅಂತ ಮಲಗಿಕೊಂಡೆ. ನನ್ನ ಅಕ್ಕಪಕ್ಕದಲ್ಲಿದವರೆಲ್ಲಾ ಎದ್ದು ತಮ್ಮ ಲಗ್ಗೇಜು ಚಪ್ಪಲಿಗಳನ್ನು ಎತ್ತಿಕೊಳ್ಳುತ್ತಾ ಬಸ್ಸಿನಿಂದ ಇಳಿಯಲು ಸಿದ್ದರಾಗುತ್ತಿದ್ದರು. ನನಗೆ ಇನ್ನಷ್ಟು ನಿದ್ರೆ ಮಾಡುವ ಆಸೆಯಿದ್ದರೂ ಯಾಕೋ ಸಂದೇಹವಾಗಿ ಪಕ್ಕದವರನ್ನು ಕೇಳಿದೆ. "ಧರ್ಮಸ್ಥಳ ಬಂತಾ" ಹೌದು" ಅಂತ ಉತ್ತರ ಬಂತು.  ಅರೆರೆ..ಇದೇನಿದೂ ಈ ನಮ್ಮ ಕೆ.ಎಸ್. ಅರ್.ಟಿ.ಸಿ ಸ್ಲೀಪರ್ ಕೋಚ್ ಬಸ್ಸು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲೇ ಬಂದುಬಿಟ್ಟಿದ್ದಾನಲ್ಲ ಅಂದುಕೊಂಡು ನನ್ನ ಕ್ಯಾಮೆರ ಬ್ಯಾಗ್ ಮತ್ತು ಬಟ್ಟೆಗಳಿರುವ ಲಗ್ಗೇಜುಗಳನ್ನು ಎತ್ತಿಕೊಂಡು ಕೆಳಗಿಳಿದವನು ಇರ್ಷಾದ್‍ಗೆ ಫೋನ್ ಮಾಡಿದೆ. "ಆಗಲೇ ಧರ್ಮಸ್ಥಳಕ್ಕೆ ಬಂದುಬಿಟ್ರಾ...ಐದೇ ನಿಮಿಷದಲ್ಲಿ ಅಲ್ಲಿರುತ್ತೇನೆ" ಅಂತ ಹೇಳಿ ಫೋನ್ ಕಟ್ ಮಾಡಿದರು. ನನ್ನ ಕರೆಗಾಗಿ ಕಾಯುತ್ತಾ ರಾತ್ರಿಯೆಲ್ಲಾ ನಿದ್ರೆಗೆಟ್ಟು ಕೂತಿರಬಹುದೇನೋ ಈ ಇರ್ಷಾದ್.  ನನ್ನ ಅದೃಷ್ಟಕ್ಕೆ ಮಳೆಯಿರಲಿಲ್ಲ. ಆದ್ರೆ ರಾತ್ರಿ ಜೋರಾಗಿ ಮಳೆ ಬಂದಿರುವ ಕುರುಹಾಗಿ ನೆಲವೆಲ್ಲಾ ಒದ್ದೆಯಾಗಿ ಅಲ್ಲಲ್ಲಿ ನೀರು ನಿಂತು ವಾತಾವರಣ ತಂಪಾಗಿತ್ತು.

     ದೂರದಿಂದ ಬೈಕಿನಲ್ಲಿ ಒಬ್ಬ ವ್ಯಕ್ತಿ ಬರುತ್ತಿರುವುದನ್ನು ನೋಡಿ ಕೈಸನ್ನೆ ಮಾಡಿದೆ. ಅತ್ತಲಿಂದಲೂ ಆತ ಕೈಸನ್ನೆ ಮಾಡಿ ತಮ್ಮ ಯಮಾಹ ಬೈಕನ್ನು ನಿಲ್ಲಿಸಿದರು.  "ನಾನೇ ಇರ್ಷಾದ್ ಅಂತ ಹೇಗೆ ಗುರುತಿಸಿದ್ರಿ ಸರ್" ಅಂತ ಕೇಳಿದರು.  "ಅಂದಾಜು ಮಾಡಿ ನೀವೆ ಇರಬಹುದು ಅಂತ ಅಂದುಕೊಂಡು ಕೈ ತೋರಿಸಿದೆ".  ನಮ್ಮಿಬ್ಬರ ಪರಿಚಯ ಕೇವಲ ಬ್ಲಾಗ್, ಫೇಸ್ ಬುಕ್, ಫೋನ್ ಮೂಲಕ ಮಾತ್ರವಾಗಿದ್ದರೂ ಮುಖತ: ಬೇಟಿಯಾಗುತ್ತಿರುವುದು ಇಬ್ಬರಿಗೂ ಇದೇ ಮೊದಲಾಗಿದ್ದರಿಂದ  ಅ ಕತ್ತಲಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ಗುರುತಿಸಿದ್ದೂ ಇಬ್ಬರಿಗೂ ಆಶ್ಚರ್ಯವನ್ನು ತಂದಿತ್ತು.

    "ಹೋಗೋಣವಾ ಸರ್" ತನ್ನ ಬೈಕನ್ನು ಚಾಲು ಮಾಡಿದರು ಇರ್ಷಾದ್. ಇದೇ ಮೊದಲ ಬಾರಿಗೆ ನಸುಕಿನ ಐದುಗಂಟೆಯಲ್ಲಿ ಧರ್ಮಸ್ಥಳದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಉಜಿರೆಗೆ ಬೈಕಿನಲ್ಲಿ ಹೋಗುವಾಗ ಎರಡೂ ಕಡೆಯ ದಟ್ಟ ಮರಗಳು ಸೊಗಸಾದ ರಸ್ತೆ, ಮೇಲೆ ಚಂದ್ರನ ಅಹ್ಲಾದಕರ ಬೆಳಕು, ಸಾಗುವಾಗ ಹಿತವಾದ ಗಾಳಿ ಮೈಸೋಕಿ ರಾತ್ರಿ ಬಸ್ ಪ್ರಯಾಣದ ಅಯಾಸವೆಲ್ಲಾ ಮಾಯವಾದಂತೆ ಅನಿಸಿ ಒಂಥರ ಹಾಯ್ ಎನ್ನಿಸತೊಡಗಿತು. ಮಾತಾಡುತ್ತಾ ಬೈಕಿನಲ್ಲಿ ಸಾಗುತ್ತಿದ್ದಂತೆ ಉಜಿರೆಯ ಕಾಲೇಜು ಬಂತು. ಇರ್ಷಾದ್‍ಗೆ ತಾನು ಓದಿದ ಕಾಲೇಜು ಊರು ಎಂದರೆ ತುಂಬಾ ಅಭಿಮಾನ. ಅವರಿಗೆ ಮಾತ್ರವಲ್ಲ ಎಲ್ಲರಿಗೂ ಅವರವರ ಕಾಲೇಜು ಊರು ಕಂಡರೆ ಅಭಿಮಾನವಿದ್ದೇ ಇರುತ್ತದೆ. ದಾರಿಯ ನಡುವೆ ಕಾಣುವ ರುಡ್‍ಸೆಟ್, ಉಜಿರೆ ಪೇಟೆ, ಕಾಲೇಜು, ಇತ್ಯಾದಿಗಳನ್ನು ಖುಷಿಯಿಂದ ತೋರಿಸುತ್ತಾ ಬರುವ ಹೊತ್ತಿಗೆ ನಾವು ತಲುಪಬೇಕಾದ ಕಾಲೇಜಿನ ಪಿ.ಜಿ.ಹಾಸ್ಟೆಲ್ಲಿನ ರೂಮ್ ಬಂತು. ನನಗಾಗಿ ಅಲ್ಲೊಂದು ರೂಮ್ ಎಸ್.ಡಿ.ಎಂ. ಉಜಿರೆ ಕಾಲೇಜಿನವರು ಕಾಯ್ದಿರಿಸಿದ್ದರು. "ನೀವು ಸ್ವಲ್ಪ ರೆಸ್ಟ್ ಮಾಡಿ" ನಾನು ಸರಿಯಾಗಿ ಏಳುವರೆಯ ಹೊತ್ತಿಗೆ ಬರುತ್ತೇನೆ" ಅಂತ ಮತ್ತೆ ಹೊರಟೇಬಿಟ್ಟರು ಇರ್ಷಾದ್. ಸ್ವಲ್ಪ ಕುಳ್ಳಗೆ ದಪ್ಪವಾಗಿ ಕಾಣುವ ಇರ್ಷಾದ್ ಗಾತ್ರಕ್ಕೂ ಆತನ ಲವಲವಿಕೆಯ ಚಟುವಟಿಕೆಗಳಿಗೂ ಒಂದಕ್ಕೊಂದು ಸಂಭಂದವೇ ಇಲ್ಲವೇನೋ ಎನ್ನುವಂತೆ ಆತ ನನ್ನೊಂದಿಗೆ ಇಡೀ ದಿನ ಇದ್ದರು. ಹಾಗೆ ನೋಡಿದರೆ ನನ್ನನ್ನು ಕಾಲೇಜಿಗೆ ಪರಿಚಯಿಸಿ, ನನ್ನ ಬಗ್ಗೆ ಎಲ್ಲವನ್ನು ತಿಳಿಸಿ ಉಜಿರೆಯ "ಎಸ್ ಡಿ ಎಂ ಕಾಲೇಜಿನ ಫೋಟೊ ಜರ್ನಲಿಸ್ಟ್ ವಿಧ್ಯಾರ್ಥಿಗಳಿಗಾಗಿ ಕಾಲೇಜಿನ ವ್ಯವಸ್ಥಾಪಕರ ಮೂಲಕವೇ ನನ್ನ ಕಡೆಯಿಂದ ಒಂದು ಸಂವಾದವನ್ನು ವ್ಯವಸ್ಥಿತಗೊಳಿಸಿದ್ದು ಇದೇ ಇರ್ಷಾದ್.

 ನಾನು ಏಳುವರೆಯ ಹೊತ್ತಿಗೆ ಸಿದ್ದನಾಗುವಷ್ಟರಲ್ಲಿ ಮಂಗಳೂರಿನ ರಾಕೇಶ್ ಕುಮಾರ್ ಕೊಣಾಜೆ ಜೊತೆ ಇರ್ಷಾದ್ ಹಾಜರ್. ರಾಕೇಶ್ ಕುಮಾರ್ ಕೊಣಾಜೆಯನ್ನು ಕೂಡ ಬ್ಲಾಗ್, ಫೇಸ್ ಬುಕ್ ಮತ್ತು ಫೋನ್ ಮೂಲಕ ಮಾತ್ರವೇ ಪರಿಚಯವಿದ್ದಿದ್ದು. ಮುಖತ: ಮೊದಲ ಬೇಟಿಯಾಗಿದ್ದು ಕೂಡ ಅವತ್ತು.  ಬೆಳಗಿನ ತಿಂಡಿ ಮುಗಿಸಿದ ಮೇಲೆ ನೇರವಾಗಿ ಕಾಲೇಜಿಗೆ. ಉಜಿರೆಯ ಎಸ್.ಡಿ.ಎಮ್ ಕಾಲೇಜು ಕರ್ನಾಟಕದಲ್ಲೇ ಅತ್ಯುತ್ತಮವಾದುದು. ಅಷ್ಟು ದೊಡ್ದ ಕಾಲೇಜು ಕ್ಯಾಂಪಸ್‍ನೊಳಗೆ ನಾನು ಕಾಲಿಟ್ಟಾಗ ಮುಜುಗರ ಉಂಟಾಯಿತು. ನಾನು ಕಲಿಯಲು ಬರುವ ವಿಧ್ಯಾರ್ಥಿಯಾಗಿದ್ದಲ್ಲಿ ನನಗೆ ಹಾಗೆ ಅನ್ನಿಸುತ್ತಿರಲಿಲ್ಲ. ನನ್ನೆತ್ತರಕ್ಕೆ ಬೆಳೆದ ವಿಧ್ಯಾರ್ಥಿಗಳಿಗೆ ನಾನು "ವಿಭಿನ್ನವಾದ ಫೋಟೊ ಜರ್ನಲಿಸಂ" ವಿಚಾರವಾಗಿ ಮೂರು ಗಂಟೆಗಳ ಕಾಲ ನನ್ನ ಅನುಭವವನ್ನು ಹಂಚಿಕೊಳ್ಳಬೇಕಿತ್ತು. ಇರ್ಷಾದ್ ನೇರವಾಗಿ ಅಲ್ಲಿನ ಹೆಡ್ ಅಪ್ ದಿ ಜರ್ನಲಿಸಂ ವಿಭಾಗದ ಭಾಸ್ಕರ್ ಹೆಗಡೆಯರ ಬಳಿ ಕರೆದುಕೊಂಡು ಹೋದರು. ಪಕ್ಕದಲ್ಲಿಯೇ ಇದ್ದ ನೂರಕ್ಕೂ ಹೆಚ್ಚು ಜನರು ಕೂರುವಂತ ಸೆಮಿನಾರ್ ಹಾಲ್ ನಲ್ಲಿ ವಿಧ್ಯಾರ್ಥಿಗಳು ಆಸೀನರಾಗಿದ್ದರು. ಕಾಲೇಜು ಮಕ್ಕಳಲ್ಲವೇ...ಅವರಿಗೆ ಹೇಳಿಕೊಡುವುದು ಸುಲಭವೆಂದುಕೊಂಡಿದ್ದವನಿಗೆ ಜರ್ನಲಿಸ್ಟುಗಳಾದ ಲಕ್ಷ್ಮಿ ಮಚ್ಚಿನ, ಉಜಿರೆಯ ಛಾಯಗ್ರಾಹಕ ವಸಂತ್ ಶರ್ಮ, ಮಂಗಳೂರಿನಿಂದ ಮೋಹನ್ ಕುತ್ತಾರ್, ಸುಭಾಶ್ ಸಿದ್ದಮೂಲೆ, ಅಪುಲ್ ಅಳ್ವಾ ಇರ, ರವಿ ಪರಕ್ಕಜೆ.. ಇನ್ನೂ ಅನೇಕ ಫೋಟೊ ಜರ್ನಲಿಸ್ಟುಗಳು ಬಂದಿದ್ದು ನೋಡಿ ನನಗೆ ಸ್ವಲ್ಪ ದಿಗಿಲುಂಟಾಗಿತ್ತು.

 ಹತ್ತು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯ್ತು. ಸ್ವಾಗತ ಭಾಷಣದ ನಂತರ ಫೋಟೊ ತೆಗೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ, ಪರಿಚಯ ಇತ್ಯಾದಿಗಳೆಲ್ಲ ಆಗಿ ಇಡೀ ವೇದಿಕೆಯನ್ನು ನನಗೊಪ್ಪಿಸಿಬಿಟ್ಟರು ಬಾಸ್ಕರ್ ಹೆಗಡೆ ಸರ್. ಅಲ್ಲಿಂದ ಮುಂದೆ ಛಾಯಚಿತ್ರಗಳ ಪ್ರದರ್ಶನದ ಜೊತೆಗೆ ಜೊತೆಗೆ ಸಂವಾದ, ಅನುಭವಗಳ ಹಂಚಿಕೆ, ಅಭಿಪ್ರಾಯಗಳು, ಪ್ರಶ್ನೋತ್ತರ ಕಾರ್ಯಕ್ರಮ....ಇವುಗಳ ಕೆಲವು ಫೋಟೊಗಳನ್ನು ಇರ್ಷಾದ್ ಎಂ.ವೇಣೂರು ಮತ್ತು ರಾಕೇಶ್ ಕುಮಾರ್ ಕೊಣಾಜೆ ಕ್ಲಿಕ್ಕಿಸಿದ್ದಾರೆ. ಅವೆಲ್ಲವೂ ನಿಮಗಾಗಿ.

        ಇರ್ಷಾದ್‍ರಿಂದ ಸ್ವಾಗತ


  
ಫೋಟೊ ತೆಗೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ. ಯಾವ ಫೋಟೊ ಕ್ಲಿಕ್ಕಿಸಲಿ...

ಉದ್ಘಾಟನೆಯ ಫೋಟೊ ತೆಗೆಯಲು ಸಿದ್ದರಾಗಿದ್ದ ನನ್ನ ಕ್ಯಾಮೆರ ಕಣ್ಣಿಗೆ ಕಂಡಿದ್ದು ಹೀಗೆ..

ಸಂವಾದ ಕಾರ್ಯಕ್ರಮ ಪ್ರಾರಂಭ

ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು enjoy ಮಾಡಿದ್ದು ಹೀಗೆ...
 
ಕಾರ್ಯಕ್ರಮದ ನಡುವೆ ಛಾಯಪತ್ರಕರ್ತರಿಂದ ಪ್ರಶ್ನೆಗಳು...

  
 ಮಂಗಳೂರಿನ ರಾಕೇಶ್ ಕುಮಾರ್ ಕೊಣಜೆ
  
ಕಾಲೇಜು ವಿದ್ಯಾರ್ಥಿ ಅಭಿಲಾಶ್

ಪಾಠದ ಜೊತೆಗೆ ಆಟವೂ ಇದ್ದರೆ ಚೆಂದ ತಾನೆ...ಇವು ಇರ್ಷಾದ್ ಕ್ಯಾಮೆರ ಕೈಚಳಕ
 
  

 ಸಂವಾದ ಕಾರ್ಯಕ್ರಮದ ಸಮಯ ಹತ್ತು ಗಂಟೆಯಿಂದ ಹನ್ನೆರಡು ಗಂಟೆಯವರೆಗೆ ಅಂತ ತಿಳಿಸಿದ್ದರು. ಆದ್ರೆ ಪೂರ್ತಿ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಒಂದುವರೆ ಗಂಟೆಯಾಗಿತ್ತು.  ಮೂರು ಕಾಲು ಗಂಟೆಗಳ ಕಾಲದಲ್ಲಿ ನಡುವೆ ಹತ್ತು ನಿಮಿಷದ ಟೀ ಬ್ರೇಕ್ ಬಿಟ್ಟರೆ ವಿಧ್ಯಾರ್ಥಿಗಳ ಸಹಿತ ಇತರ ಫೋಟೊ ಜರ್ನಲಿಸ್ಟುಗಳು ಕೂಡ ಸಂವಾದ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತಮ್ಮ ಅನುಭವಗಳನ್ನು ಸಹಜವಾಗಿ ಹಂಚಿಕೊಂಡಿದ್ದು ಖುಷಿಯೆನಿಸಿತ್ತು. ಲಗ್ಗೇಜು ಹೆಚ್ಚು  ಅಂದುಕೊಂಡು ನನ್ನೆರಡು ಪುಸ್ತಕಗಳನ್ನು ಹೆಚ್ಚು ತೆಗೆದುಕೊಂಡು ಹೋಗಿರಲಿಲ್ಲ. ಆದ್ರೆ ತೆಗೆದುಕೊಂಡು ಹೋಗಿದ್ದ ೩೦ ವೆಂಡರ್ ಕಣ್ಣು ಮತ್ತು ಇಪ್ಪತ್ತು ಗುಬ್ಬಿ ಎಂಜಲು ಪುಸ್ತಕಗಳು ಹತ್ತೇ ನಿಮಿಷದಲ್ಲಿ ಕಾಲಿಯಾಗಿದ್ದು ಕಂಡು ನನಗಂತೂ ಅಚ್ಚರಿಯಾಗಿತ್ತು.

   

      ನಂತರ ಊಟ ಮಾಡಿ. ರೂಮಿನ ಕಡೆಗೆ ಹೊರಟೆವು.  ಅಲ್ಲಿ ಕಾಲೇಜಿನ ಇಬ್ಬರು ವಿಧ್ಯಾರ್ಥಿಗಳಿಂದ ಫೋಟೊಗ್ರಫಿ ವಿಚಾರವಾಗಿ ಸಂದರ್ಶನ. ನಂತರ ಸ್ವಲ್ಪ ವಿಶ್ರಾಂತಿ. ಸಂಜೆ ಉಜಿರೆಯಿಂದ ೪೬ ಕಿಲೋಮೀಟರ್ ದೂರದ ಮೂಡಬಿದ್ರಿಗೆ ಬಂದೆವು. ಅಲ್ಲಿ ನಮಗಾಗಿ ಅಭಿಲಾಶ್ ತಂದೆ ಕಾರಿನಲ್ಲಿ ತಮ್ಮ ಊರಾದ ಕೊಡ್ಯಡ್ಕಾಗೆ ಕರೆದುಕೊಂಡು ಹೋಗಲು ಸಿದ್ದರಾಗಿದ್ದರು. ಅದು ಹದಿನಾಲ್ಕು ಕಿಲೋಮೀಟರ್ ಪ್ರಯಾಣ. ಅಲ್ಲಿಯೇ ನನಗೆ ಆ ಕಡೆಯ ಜೋರು ಮಳೆಯ ಅನುಭವವಾಗಿದ್ದು.  ಎರಡು ಕಿಲೋಮೀಟರ್ ದಾಟಿಲ್ಲ ಇದ್ದಕ್ಕಿದ್ದಂತೆ ತಲೆಯ ಮೇಲೆ ಹಂಡೆಯ ನೀರನ್ನು ಸುರಿದಾಗ ಹೇಗಾಗುತ್ತದೊ ಹಾಗೆ ಇದ್ದಕ್ಕಿದ್ದಂತೆ ಊರಿನ ಹತ್ತರಷ್ಟು ದೊಡ್ಡದಾದ ಹಂಡೆಯಲ್ಲಿ ಒಂದೇ ಸಮನೆ ಆಕಾಶದಿಂದ ಆ ಊರಿನ ಮೇಲೆ ನೀರು ಸುರಿದಂತೆ ಮಳೆ ಸುರಿದು ಕೆಲವೇ ಕ್ಷಣಗಳಲ್ಲಿ ನಮ್ಮ ಕಣ್ಣ ಮುಂದೆ ಏನು ಕಾಣದಂತಾಗಿತ್ತು. ಈ ನಡುವೆ ಬೈಕಿನಲ್ಲಿ ಕಾರಿನ ಹಿಂದೆಯೇ ಬರುತ್ತಿದ್ದ ಇರ್ಷಾದ್‍ನನ್ನು ನೆನೆಸಿಕೊಂಡ ಮೇಲಂತೂ ನಮಗೆ ದಿಗಿಲಾಯ್ತು...ಕಾರನ್ನು ನಿಲ್ಲಿಸಿ ಆತನಿಂದ ಕ್ಯಾಮೆರವನ್ನು ಪಡೆದು ಕಾರಿನಲ್ಲಿಟ್ಟುಕೊಂಡೆವು. ಆತ ನಡುರಸ್ತೆಯಲ್ಲಿ ತನ್ನ ಬೈಕ್ ಬಿಟ್ಟು ಬರುವಂತಿರಲಿಲ್ಲ ಸಧ್ಯ ಒಳ್ಳೆಯ ಮಳೆಯ  ಜರ್ಕಿನ್ ಹಾಕಿದ್ದರಿಂದ ಆತ ಹೇಗೋ ತನ್ನನ್ನು ಅಂತ ಮಳೆಯಿಂದ ಕಾಪಾಡಿಕೊಳ್ಳುವಂತಾಯಿತು. ಐದೇ ನಿಮಿಷ ಹಂಡೆಯ ನೀರು ಕಾಲಿಯಾದ ಮೇಲೆ ನೀರೆಲ್ಲಿರುತ್ತದೆ? ಹಾಗೆ ಇಲ್ಲಿಯೂ ತಕ್ಷಣಕ್ಕೆ ಮಳೆನಿಂತು ಇನ್ನೆರಡು ನಿಮಿಷದಲ್ಲಿ ಅಲ್ಲಿ ಮಳೆಯೇ ಬಂದಿಲ್ಲವೇನೋ ಎನ್ನುವಂತೆ ಸೆಕೆಯುಂಟಾಯಿತು. ಇಂಥ ವಿಭಿನ್ನ ಅನುಭವ ಪಡೆದುಕೊಂಡು ಕೊಡ್ಯಡ್ಕಗೆ ತಲುಪಿದಾಗ ರಾತ್ರಿ ಏಳುವರೆ. ಅವರ ಮನೆ ವಾತಾವರಣ ಮಲೆನಾಡಿನಂತೆ. ಸುತ್ತ ಕಾಡು, ಇವರ ಮನೆಯ ಸುತ್ತ ಕೈತೋಟ. ಅವರ ಮನೆಯಲ್ಲಿ ನಮಗಾಗಿ ಸೊಗಸಾದ ಊಟ. ಅಭಿಲಾಶ್ ತಂದೆ ತಾಯಿಯವರ ಅತಿಥ್ಯ ನಿಜಕ್ಕೂ ನಮಗೆ ಮರೆಯಲಾಗದ ಅನುಭವ. ಒಳ್ಳೆಯ ಊಟವಾದ್ದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬಂತು.


 ಮರುದಿನ ಬೆಳಿಗ್ಗೆ ಐದು ಗಂಟೆಗೆ ಎದ್ದು ಸಿದ್ದರಾಗಿ ಅಲ್ಲಿಂದ ಆರು ಕಿಲೋಮೀಟರ್ ದೂರದ ಬೆಳ್ವಾಯಿಯಲ್ಲಿರುವ ಸಮ್ಮಿಲನ ಶೆಟ್ಟಿಯವರ ಪರಿಶ್ರಮದಿಂದ ಹುಟ್ಟಿಕೊಂಡಿರುವ ಚಿಟ್ಟೆಗಳ ಉದ್ಯಾನವನಕ್ಕೆ ಹೊರಟೆವು. ಅಲ್ಲಿನ ಫೋಟೊಗ್ರಫಿ ಅನುಭವ ಮುಂದಿನ ಭಾಗದಲ್ಲಿ.

    ಅಂದಹಾಗೆ ನನ್ನ ಛಾಯಾಕನ್ನಡಿ ಬ್ಲಾಗಿಗೆ ಕಳೆದ ತಿಂಗಳಿಗೆ ನಾಲ್ಕು ವರ್ಷ ತುಂಬಿತು. ಈಗ ಐದನೇ ವರ್ಷಕ್ಕೆ ಕಾಲಿಟ್ಟಿದೆ.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಲೇಖನ : ಶಿವು.ಕೆ
ಚಿತ್ರಗಳು. ಇರ್ಷಾದ್ ಎಂ.ವೇಣೂರು ಮತ್ತು ರಾಕೇಶ್ ಕುಮಾರ್ ಕೊಣಜೆ

20 comments:

ಮನಸು said...

ವಾಹ್..!! ಒಳ್ಳೆಯ ಅನುಭವಾ ಅಲ್ಲವೇ ಶಿವು.. ಎಷ್ಟೋಂದು ಜನ ಸೇರಿದ್ದಾರೆ ಬಹಳ ಖುಷಿ ಆಯ್ತು. ಶುಭವಾಗಲಿ ಹೀಗೆ ಒಳ್ಳೊಳ್ಳೆ ಕಾರ್ಯಕ್ರಮಗಳು ಜರುಗುತ್ತಿರಲಿ..

Badarinath Palavalli said...

ಮೊದಲಿಗೆ ನಿಮ್ಮ ಅತ್ಯುತ್ತಮ ಬ್ಲಾಗಿನ ೫ ನೇ ವರ್ಷದ ಸಂಭ್ರಮಕ್ಕೆ ನನ್ನ ಮನಃಪೂರ್ವಕ ಅಭಿನಂದನೆಗಳು. ಅತ್ಯಂತ ಸಂವೇದನಾ ಶೀಲ, ಬಹು ಪ್ರತಿಭೆಯ ಆಗರವಾದ ನಿಮ್ಮಿಂದ ಬ್ಲಾಗ್ ಕಳೆಕಟ್ಟಿದೆ.

ಒಮ್ಮೊಮ್ಮೆ ನನಗನಿಸಿದ್ದು ಈ ಫೇಸ್ ಬುಕ್ ಮತ್ತು ಬ್ಲಾಗ್ ನಮ್ಮನ್ನು ಹೊಸ ಗೆಳೆಯರ ಕರಡಿ ತೆಕ್ಕೆಗೆ ಸಿಕ್ಕಿಸುತ್ತದೆ. ಮುದುಡಿದ ಮನಗಳಿಗೆ ಚೇತೋಹಾರಿಯಾಗುತ್ತದೆ.

ಉಜಿರೆಯ ನಿಮ್ಮ ಅನುಭವಗಳು ನಮಗೆ ಹೊಸ ದಿಶೆ ತೋರಿದವು. ನಮ್ಮಲ್ಲಿರುವ ಜ್ಞಾನವನ್ನು ಹಲವರಿಗೆ ಹಂಚಿದಾಗಲೇ ಕಲೆಗೂ ಸಾರ್ಥಕ್ಯ.

ದಕ್ಷಿಣ ಕನ್ನಡದ ಮಳೆಯ ಜೋರು ಅನುಭವಿಸಿದವರಿಗೆ ಗೊತ್ತು ಅಲ್ವಾ ಶಿವು ಸಾರ್?

ನನಗೆ ತುಂಬಾ ಖುಷಿಯಾಯಿತು.

shivu.k said...

ಸುಗುಣಕ್ಕ,
ಅಲ್ಲಿ ನನಗೆ ಸಿಕ್ಕ ಸ್ವಾಗತ ಮತ್ತು ಮರ್ಯಾದೆ ಮರೆಯಲಾಗದ್ದು. ಇನ್ನೂ ಅನೇಕ ಕಾರ್ಯಕ್ರಮಗಳಿಗೆ ಆ ಕಡೆಗೆ ಹೋಗುವ ಸಾಧ್ಯತೆಗಳಿವೆ...ಧನ್ಯವಾದಗಳು.

shivu.k said...

ಬದರಿನಾಥ್ ಪಲವಳ್ಳಿ ಸರ್,
ಛಾಯಕನ್ನಡಿಗೆ ಐದನೇ ವರ್ಷ ಪ್ರಾರಂಭವಾಗಿರುವುದು ಮರೆತುಹೋಗಿತ್ತು. ನನ್ನ ಬ್ಲಾಗನ್ನು ಅತ್ಯಂತ ಸಂವೇದನಾ ಶೀಲವೆನ್ನುವುದರ ಜೊತೆಗೆ ನನ್ನನ್ನು ಹೊಗಳಿರುವುದು ಖುಷಿಯಾದರೂ ಎಲ್ಲೋ ಒಂಥರ ಭಯವೂ ಆಗುತ್ತದೆ.
ನಿಮಗೆ ಬ್ಲಾಗ್ ಮತ್ತು ಫೇಸ್ ಬುಕ್ ಒಳ್ಳೆಯದನ್ನು ಮಾಡಿದ್ದಕ್ಕೆ ಸಂತೋಷ.
ನನಗೆ ಬ್ಲಾಗ್ ಮತ್ತು ಫೇಸ್ ಬುಕ್‍ನಿಂದ ಅಲ್ಲಲ್ಲಿ ಸ್ವಲ್ಪ ಕೆಟ್ಟದ್ದು ಆಗಿದ್ದು ಬಿಟ್ಟರೆ ನನಗೆ ಕೂಡ ಒಳ್ಳೆಯದು ತುಂಬಾ ಆಗಿದೆ.
ಉಜಿರೆಯ ಅನುಭವಗಳು ನನ್ನ ಬದುಕಿಗೂ ಹೊಸದಿಕ್ಕನ್ನು ತೋರಿಸಿವೆ.
ದಕ್ಷಿಣ ಕನ್ನಡದ ಮಳೆಯ ವಿಚಾರವಾಗಿ ಇನ್ನಷ್ಟು ಬರೆಯುವ ಆಸೆ ಬರೆಯುತ್ತೇನೆ...ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

umesh desai said...

ತುಂಬಾ ಚೆನ್ನಾಗಿದೆ ಸರ್ ಹೊಸ ಹೊಸ ಅನುಭವ ಕೊಡುತ್ತೀದ್ದೀರಿ..
ಅಭಿನಂದನೆಗಳು..

shivu.k said...

ಉಮೇಶ್ ದೇಸಾಯ್ ಸರ್,

ಪ್ರತಿಕ್ರಿಯೆಗೆ ಧನ್ಯವಾದಗಳು.

ಚುಕ್ಕಿಚಿತ್ತಾರ said...

ಸು೦ದರ ಫೋಟೋಗಳು ತಕ್ಕ೦ತೆ ವಿವರಣೆ. ಉತ್ತಮ ಅನುಭವ. ಬ್ಲಾಗ್ ವಾರ್ಷಿಕೋತ್ಸವಕ್ಕೆ ಶುಭ ಆಶಯಗಳು.

balasubramanya said...

ಶಿವೂ ನಿಮ್ಮ ಅನುಭವ ಚೆನ್ನಾಗಿದೆ. ಒಳ್ಳೆಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸಿ ಬಂದಿದ್ದು ಹೆಮ್ಮೆಯ ವಿಚಾರ, ಖುಶಿಯಾಯಿತು , "ಛಾಯ ಕನ್ನಡಿ" ಬ್ಲಾಗಿಗೆ ಐದು ವರ್ಷ ಪೂತಿಯಾಗಿದ್ದು ನಮಗೆಲ್ಲಾ ಹೆಮ್ಮೆಯ ವಿಚಾರ. ನಿಮಗೆ ಅಭಿನಂದನೆಗಳು , ನಿಮ್ಮ ಕಾರ್ಯ ಹೀಗೆ ನಿರಂತರ ಸಾಗುತ್ತಿರಲಿ. ಸಂತೋಷ ಪಡಲು ನಾವಿದ್ದೇವೆ.

vijaya aditya said...

ಇಂತಹ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಆದ ಅನುಭವಗಳನ್ನೂ ತುಂಬ ಚೆನ್ನಾಗಿ ಬರೆದಿದ್ದೀರಿ.. ನಿಜಕ್ಕೂ ಸಂತೋಷವಾಯಿತು.. ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕೆಂಬುದು ನಮ್ಮೆಲ್ಲರ ಆಸೆ..

sunaath said...

Best wishes for the blog and yourself.

ಚಿನ್ಮಯ ಭಟ್ said...

ಲೇಖನ ಚೆನಾಗಿದೆ ಸಾರ್....
ಮತ್ತೆ ನಿಮ್ಮ ಬ್ಲಾಗಿನ ಐದನೇ ವರ್ಷಕ್ಕೆ ಶುಭ ಹಾರೈಕೆಗಳು..ಛಾಯಾಕನ್ನಡಿ ಹೀಗೇ ಫಳಫಳಿಸುತ್ತಿರಲಿ....

ಮಲ್ಲಿಕಾರ್ಜುನ said...


5ನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ನಿಮ್ಮ ಬ್ಲಾಗಿಗೆ ಶುಭಾಷಯಗಳು ನಿಮ್ಮ ಬ್ಲಾಗಿನಲ್ಲಿ ಹಲವಾರು ವಿಷಯ&ಅನುಭವಗಳು ಮೂಡಿ ಬಂದಿವೆ ಇನ್ನಷ್ಟು ಹೊಸ ವಿಚಾರ ಮತ್ತು ಫೋಟೋಗ್ರಾಪಿಯ ಅನುಭವ ದೊರೆಯಲೇಂದು ಆಶಿಸುತ್ತೆನೆ..

Srikanth Manjunath said...

ನಿಮ್ಮ ಬ್ಲಾಗಿಗೆ ಐದನೇ ವರುಷದ ಹುಟ್ಟು ಹಬ್ಬದ ಶುಭಾಶಯಗಳು
ಲೇಖನ ಬಿಡಿಸಿದ ಪರಿ ತುಂಬಾ ಚೆನ್ನಾಗಿದೆ..ನಾವು ನಿಮ್ಮ ಪಕ್ಕದಲ್ಲಿಯೇ ಇದ್ದೀವಿ ಅನ್ನುವ ಭಾವನೆ ಮೂಡುತ್ತದೆ..ನಿಮ್ಮ ಎಲ್ಲ ಕಾರ್ಯಗಳು ಶುಭವಾಗಲಿ..ಇನ್ನಷ್ಟು ಕೀರ್ತಿ, ಹೆಸರು ನಿಮ್ಮದಾಗಲಿ..ಶುಭವಾಗಲಿ..ಶಿವೂ ಸರ್

shivu.k said...

ಚುಕ್ಕಿ ಚಿತ್ತಾರ..

ಧನ್ಯವಾದಗಳು.

shivu.k said...

ಬಾಲು ಸರ್,
ಛಾಯಕನ್ನಡಿಗೆ ನಾಲ್ಕು ತುಂಬಿ ಐದಕ್ಕೆ ಕಾಲಿಟ್ಟಿರುವ ವಿಚಾರವನ್ನು ಮರೆತಿದ್ದೆ. ನನ್ನ ಗೆಳೆಯರು ನೆನಪಿಸಿದರು. ಉಜಿರೆ ಕಾಲೇಜಿನ ಅನುಭವ ನಿಜಕ್ಕೂ ಮರೆಯಲಾಗದಂತದ್ದು...ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ವಿಜಯ ಅದಿತ್ಯ...
ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಥ್ಯಾಂಕ್ಸ್.

shivu.k said...

ಚಿನ್ಮಯ್ ಭಟ್: ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ನನ್ನ ಬ್ಲಾಗಿಗೆ ಸ್ವಾಗತ. ಹಲವಾರು ಲೇಖನವನ್ನು ಓದುತ್ತಿರುವುದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ಶ್ರೀಕಾಂತ್ ಮಂಜುನಾಥ್ ಸರ್,

ನನ್ನ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಪ್ರೀತಿಪೂರ್ವಕ ಹಾರೈಕೆ ಮತ್ತು ಆಶಯಕ್ಕೆ ಧನ್ಯವಾದಗಳು.