Tuesday, February 21, 2012

ಜನಶತಾಬ್ದಿ ರೈಲಿನೊಳಗೆ
        ಹತ್ತಾರು ಬಾರಿ ಅರಸೀಕೆರೆಯಲ್ಲಿ ಈ ರೈಲಿಗೆ ಟಿಕೆಟ್ ಕೇಳಿದ್ದೇನೆ. ಕಣ್ಣ ಮುಂದೆ ನಿಂತು ಹೊರಡಲು ಸಿದ್ದವಾಗಿದ್ದರೂ ಒಮ್ಮೆಯೂ ಟಿಕೆಟ್ ಸಿಗದಿರುವುದು! ವಾರಕ್ಕೆ ಮೊದಲೇ ಟಿಕೆಟ್ಟುಗಳು ಬುಕ್ ಆಗಿಬಿಡುವ, ಅತ್ಯಂತ ವೇಗವಾಗಿ ಚಲಿಸುವ ಈ ರೈಲಿನ ಬಗ್ಗೆ ನನಗೆ ವಿಚಿತ್ರವಾದ ಕಲ್ಪನೆಯಿತ್ತು. ಈ ರೈಲು ಪ್ರಾರಂಭವಾಗಿ ಎರಡು ವರ್ಷಗಳಾದರೂ ಒಮ್ಮೆಯೂ ಪ್ರಯಾಣಿಸುವ ಅವಕಾಶ ಸಿಗಲಿಲ್ಲವಲ್ಲ ಎನ್ನುವ ನಿರಾಶೆ ಆಗಾಗ ಕಾಡುತ್ತಿತ್ತು. ಅದು ಮತ್ಯಾವುದು ಅಲ್ಲ ಬೆಂಗಳೂರು-ಹುಬ್ಬಳ್ಳಿ ನಡುವೆ ಚಲಿಸುವ ಜನಶತಾಬ್ದಿ ರೈಲು.

       ಈ ರೈಲಿನ ಬಗ್ಗೆ ನನಗೆ ಕುತೂಹಲ ಹೆಚ್ಚಾಗಲು ಅನೇಕ ಕಾರಣಗಳಿವೆ. ರಾತ್ರಿ ಊಟ ಮುಗಿದ ಮೇಲೆ ಮುಕ್ಕಾಲು ಗಂಟೆ ನಮ್ಮ ಮಲ್ಲೇಶ್ವರಂ ರೈಲು ನಿಲ್ಡಾಣದ ಪ್ಲಾಟ್ ಫಾರ್‍ಂನಲ್ಲಿ  ನನ್ನ ಶ್ರೀಮತಿ ಜೊತೆ ವಾಕಿಂಗ್ ಮಾಡುವಾಗ ಸರಿಯಾಗಿ ಒಂಬತ್ತು ವರೆಯ ಹೊತ್ತಿಗೆ ದೂರದಿಂದಲೇ ಕೂಗೆಬ್ಬಿಸಿಕೊಂಡು ನಿಲ್ಡಾಣದಲ್ಲಿ ನಿಂತು ಕುಳಿತವರೆಲ್ಲರ ಗಮನವನ್ನು ಸೆಳೆಯುತ್ತಾ, ಆಗಿನ ಕಾಲದಲ್ಲಿ ಪಾಳೆಯಗಾರನೊಬ್ಬ ಊರ ನಡುವಿನ ರಸ್ತೆಯಲ್ಲಿ ಧೂಳೆಬ್ಬಿಸಿಕೊಂಡು ವೇಗವಾಗಿ ಕುದುರೆ ಮೇಲೆ ಸಾಗುವಾಗ ಆ ರಬಸಕ್ಕೆ ತಲ್ಲಣಗೊಂಡು ದಿಗಿಲಿನಿಂದ ಒಬ್ಬರಿಗೊಬ್ಬರು ಗುಸುಗುಸು ಮಾತಾಡಿಕೊಳ್ಳುವಂತೆ ಇಲ್ಲಿಯೂ ಈ ಜನಶತಾಬ್ಧಿ ರೈಲು ಅದೇ ವೇಗದಲ್ಲಿ ಬಂದುಬಿಡುತ್ತದೆ.  ನನ್ನ ಶ್ರೀಮತಿ " ರೀ ಸ್ವಲ್ಪ ಇರ್ರೀ....ಆ ಧನ ಶತಾಬ್ಧಿ ಹೋಗಿಬಿಡಲಿ" ಎಂದು ನನ್ನ ತೋಳನ್ನು ತನ್ನ ಕೈಗಳಲ್ಲಿ ಗಟ್ಟಿಯಾಗಿ ಹಿಡಿದು ನಿಂತುಬಿಡುವಳು. ಹಾಗೆ ನೋಡಿದರೆ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣದಲ್ಲಿ ಸಾಗುವಾಗ ಇತರೆಲ್ಲಾ ರೈಲಿಗಿಂತ ಇದು ವೇಗವಾಗಿಯೇ ಚಲಿಸುತ್ತದೆ. ಎಷ್ಟು ವೇಗವೆಂದರೆ ಪ್ಲಾಟ್ ಫಾರಂನಲ್ಲಿರುವ ದೂಳೆಲ್ಲಾ ಹಾರಿಹೋಗಿ ಸಂಪೂರ್ಣವಾಗಿ ಪ್ಲಾಟ್‍ಫಾರಂ ಸ್ವಚ್ಛವಾಗುವಷ್ಟು. ಮತ್ತೆ  ಅದೇ ದೂಳಿನ ಕಣಗಳು ನನ್ನ ಬರಿಕಣ್ಣಿಗೆ ಮತ್ತು ಹೇಮಶ್ರೀ ಕನ್ನಡಕದೊಳಗಿನ ಕಣ್ಣಿಗೆ ಇಳಿಯುವಷ್ಟು.  ರಾತ್ರಿ ಊಟವಾದ ನಂತರ ಮುಕ್ಕಾಲು ಗಂಟೆ ರೈಲು ನಿಲ್ದಾಣದ ಪ್ಲಾಟ್ ಫಾರಂನಲ್ಲಿ ವಾಕ್ ಮಾಡುವುದನ್ನು ನಾವು ಕಳೆದ ಒಂದುವರ್ಷದಿಂದ ಚಾಲ್ತಿಯಲ್ಲಿಟ್ಟುಕೊಂಡಿದ್ದೇವೆ.  ಊಟವಾದ ತಕ್ಷಣ ಮಲಗುವ ಬದಲು ಸ್ವಲ್ಪ ಹೊತ್ತು ಹೀಗೆ ವಾಕ್ ಮಾಡಿದರೆ ತಿಂದ ಊಟ ಜೀರ್ಣವಾಗಿ ಅರಾಮವಾಗಿ ನಿದ್ರೆ ಬರುತ್ತದೆ ಎನ್ನುವುದು ಒಂದು ಕಾರಣವಾದರೆ ಅವತ್ತಿನ ದಿನಪೂರ್ತಿ ಓಡಾಟ, ಕೆಲಸ, ನಡೆದ ಘಟನೆಗಳು...ಇತ್ಯಾದಿಗಳನ್ನು ಅವಳೊಂದಿಗೆ ಹಂಚಿಕೊಳ್ಳುವ ಅವಕಾಶ ನನಗಾದರೆ, ಮನೆಯೊಳಗಿನ-ಹೊರಗಿನ  ನೆರೆಹೊರೆಯವರ ಜೊತೆಗಿನ ಒಡನಾಟ-ಕಾಟ ಇತ್ಯಾದಿಗಳನ್ನು ನನ್ನೊಂದಿಗೆ ಹಂಚಿಕೊಳ್ಳುವ ಅವಕಾಶ ಅವಳಿಗೆ. ಆ ಪ್ಲಾಟ್ ಫಾರಂನಲ್ಲಿ ಪ್ರತಿರಾತ್ರಿ ಹೀಗೆ ನಡೆದಾಡುತ್ತಾ ಅವತ್ತಿನ ವಿಚಾರಗಳನ್ನು ಹಂಚಿಕೊಳ್ಳುವಾಗ ನಡುವೆ ಸಿಗುವ ಖುಷಿ, ನಗು, ತಮಾಷೆ,ದುಗುಣ, ತಲ್ಲಣ, ವಿಷಾಧ, ಇತ್ಯಾದಿಗಳನ್ನೆಲ್ಲಾ ಒಂದರ್ಧ ನಿಮಿಷ ನಿಲ್ಲಿಸಿ, ನಮ್ಮನ್ನು ಬೆದರಿಸುವುದಲ್ಲದೇ ನಮ್ಮ ಹೃದಯದ ಮಿಡಿತದ ವೇಗವನ್ನೇ ಬದಲಾಯಿಸಿಬಿಡುವ ಈ ರೈಲನ್ನು ಕಂಡರೆ ಒಂಥರ ಕೋಪ ಅವಳಿಗೆ. "ಜನಶತಾಬ್ಧಿ" ಎನ್ನುವ ಬದಲು ಅವಳು "ದನಶತಾಬ್ಧಿ" ಅಂತ ಕರೆಯಲು ಮತ್ತೂ ಒಂದು ಕಾರಣವಿದೆ. ಅವಳು ಚಿಕ್ಕವಳಿದ್ದಾಗ ರಸ್ತೆಬದಿಯಲ್ಲಿ ಆಟವಾಡಿಕೊಳ್ಳುವಾಗ ಆ ಊರಿನಲ್ಲಿ ಮೂಗುದಾರವಿಲ್ಲದ ಉಂಡಾಡಿ ದನವೊಂದು ತಲೆಕೆಟ್ಟಂತೆ ರಸ್ತೆಯಲ್ಲಿ ಓಡಾಡಿ ಎಲ್ಲರನ್ನು ಭಯಪಡಿಸುತ್ತಿತ್ತಂತೆ.  ಈ ರೈಲಿನಿಂದಾಗಿ ತನ್ನ ಬಾಲ್ಯದ ನೆನಪು ಮರುಕಳಿಸಿ ಇದಕ್ಕೆ ಧನಶತಾಬ್ಧಿ ಅಂತ ಹೆಸರಿಟ್ಟಿದ್ದಾಳೆ.

      ಹೀಗೆ ಮನಸೋ ಇಚ್ಚೆ ಆಕೆ ಬೈದುಕೊಂಡರೂ ನನಗೆ ಈ ರೈಲಿನ ಮೇಲೆ ಬೇಸರವಿರಲಿಲ್ಲ. ಬದಲಾಗಿ ಇದರ ವೇಗ, ಯಾವಾಗಲೂ ಟಿಕೆಟ್ ಸಿಗದ ಪರಿಸ್ಥಿತಿ, ಹೊರಗಿನಿಂದ ನೋಡಿದರೆ ಇಷ್ಟೆಲ್ಲಾ ಬಹುಪರಾಕುಗಳನ್ನು ಹೊಂದಿರುವ ಈ ರೈಲಿನಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂದು ಆಸೆಪಟ್ಟಿದ್ದೆ. ಈ ಆಸೆ ಗಟ್ಟಿಯಾಗಲು ಮತ್ತೊಂದು ಕಾರಣವಿದೆ. ನಾನು ಬೇರೆ ಬೇರೆ ರೈಲಿನಲ್ಲಿ ಬರುವಾಗ ಎದುರಿಗೆ ಅಥವ ಹಿಂದಿನಿಂದಲೇ ಈ ರೈಲು ಬರುತ್ತಿದೆಯೆಂದು ತಿಳಿದರೆ ಮುಗಿಯಿತು. ಅಲ್ಲಿಗೆ ನಾನಿರುವ ರೈಲು ಇದಕ್ಕೆ ದಾರಿ ಬಿಟ್ಟುಕೊಡುವ ಸಲುವಾಗಿ ರಾಜಮಾರ್ಗವನ್ನು ಬಿಟ್ಟುಕೊಟ್ಟು  ಕ್ರಾಸಿಂಗ್ ನೆಪದಲ್ಲಿ ಅರ್ಧ-ಮುಕ್ಕಾಲುಗಂಟೆ ಕೈಕಾಲು ಬಿದ್ದುಹೋದ ಹೆಳವನಂತಾಗಿಬಿಡುತ್ತಿತ್ತಲ್ಲ...ಇಂಥ ರಾಜಮರ್ಯಾದೆಯುಳ್ಳ, ವೇಗದಲ್ಲಿ ಸಾಟಿಯೇ ಇಲ್ಲದ ಇದರಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕು, ಪ್ರತಿನಿಲ್ದಾಣದಲ್ಲಿಯೂ ಇದು ಬರುವುದಕ್ಕೆ ಮೊದಲೇ ಬೇರೆ ಬೇರೆ ರೈಲುಗಳು ಸಾಮಂತ ರಾಜರಂತೆ ಕಪ್ಪಕಾಣಿಕೆಯಿತ್ತು, ಸಲಾಂ ಹಾಕಿ ದಾರಿ ಬಿಟ್ಟುಕೊಡುವುದನ್ನು ನಾನು ಅದರೊಳಗೆ ಕುಳಿತು ಕಣ್ಣಾರೆ ನೋಡಿ ಆನಂದಿಸಬೇಕು! 

ಒಮ್ಮೆ ಹೀಗೆ ಪ್ಲಾನ್ ಮಾಡಿಕೊಂಡು ಬೆಂಗಳೂರಿನಿಂದ ಅರಸೀಕೆರೆಗೆ ಹೊರಡಲು ಸಿದ್ದನಾಗಿ ಟಿಕೆಟ್ ರೆಸರ್ವ ಮಾಡಿಸಲು ಹಿಂದಿನ ರಾತ್ರಿ ಹೋದರೆ ಎಲ್ಲಾ ಟಿಕೆಟ್ಟುಗಳು ಬುಕ್ ಆಗಿಬಿಟ್ಟಿದೆ ಅಂದುಬಿಟ್ಟರಲ್ಲ!  ತತ್ ಇದೆಂಥ ರೈಲು ಒಮ್ಮೆಯಾದರೂ ಹೋಗೋಣವೆಂದರೆ ಟಿಕೆಟ್ ಸಿಗುವುದಿಲ್ಲವಲ್ಲ ಅಂತ ಬೇಸರಿಸಿಕೊಂಡರೂ....ಈ ರೈಲಿನಲ್ಲಿ ಹೋಗಬೇಕಾದರೆ ಬೆಳಿಗ್ಗೆ ಆರುಗಂಟೆಯೊಳಗೆ ಸಿಟಿ ರೈಲು ನಿಲ್ದಾಣದಲ್ಲಿರಬೇಕು, ಅಷ್ಟರಲ್ಲಿ ನನ್ನ ದಿನಪತ್ರಿಕೆ ವಿತರಣೆ ಕೆಲಸವನ್ನು ಬಿಟ್ಟು ಯಾವನು ಹೋಗುತ್ತಾನೆ?  ಈ ರೈಲಿನ ಸಹವಾಸವೇ ಬೇಡ......ಎಂದು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಾ ಕೈಗೆಟುಕದ ಹುಳಿದ್ರಾಕ್ಷಿಯನ್ನು ಬಿಟ್ಟು ಬಂದ ನರಿಯ ಹಾಗೆ ಅನೇಕ ಸಾರಿ ಸಮಾಧಾನ ಮಾಡಿಕೊಳ್ಳುತ್ತ ವಾಪಸ್ಸು ಬಂದಿದ್ದೇನೆ.

   ಕಾಲ ಚಕ್ರ ತಿರುಗಿದಂತೆ ಹುಳಿ ದ್ರಾಕ್ಷಿ ಸಿಹಿಯಾಗಿ ಸುಲಭವಾಗಿ ಕೈಗೆ ಸಿಗುವಂತ ಪ್ರಸಂಗ ಒದಗಿಬಂತು. ಮೂರುದಿನಗಳ ಫೋಟೊಗ್ರಫಿ ಪ್ರವಾಸ ಎರಡೇ ದಿನಕ್ಕೆ ಮುಗಿದು ಮೊನ್ನೆ ಭಾನುವಾರ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದೆವಲ್ಲ,    ಹುಬ್ಬಳ್ಳಿಯಿಂದ ಬೆಂಗಳೂರಿಗೆ ಎರಡು ಗಂಟೆಗೆ ಹೊರಡುವ ಜನಶತಾಬ್ಧಿ ರೈಲಿಗೆ ಟಿಕೆಟ್ ಕಾಯ್ದಿರಿಸೋಣವೆಂದು ಪ್ರಯತ್ನಿಸಿದರೆ ಸಿಕ್ಕೇ ಬಿಟ್ಟಿತಲ್ಲ! ಅರೆರೆ....ಇದೇನಿದು ರೈಲು ಹೊರಡಲು ಇನ್ನು ಕೇವಲ ಎರಡು ಗಂಟೆ ಮಾತ್ರವಿದ್ದರೂ ಇನ್ನೂ  ನನ್ನ ಟಿಕೆಟ್ ಹಿಂದೆ ಇನ್ನೂ ನಲವತ್ತೆರಡು ಸೀಟುಗಳು ಕಾಲಿ ಇವೆಯಲ್ಲಾ....ಇಷ್ಟು ಸುಲಭವಾಗಿ ನಾನು ತುಂಬಾ ದಿನದಿಂದ ಬಯಸಿದ್ದ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಒದಗಿಬಂತಲ್ಲ ಅಂತ ತುಂಬಾ ಖುಷಿಯಾಯ್ತು.  ಗೆಳೆಯರಿಬ್ಬರೂ ಅವರ ಊರುಗಳಿಗೆ ಬೇರೆ ಬೇರೆ ರೈಲುಗಳಲ್ಲಿ ಹೊರಟ ಮೇಲೆ ಹತ್ತು ನಿಮಿಷ ಮೊದಲೇ ಈ ರೈಲಿನೊಳಗೆ ಕಾಲಿಟ್ಟೆ.  ಇದೇನಿದು...ಎರಡೂ ಕಡೆ ಒಂದರ ಹಿಂದೆ ಒಂದರಂತೆ ಮೂರು ಮೂರು ಸೀಟುಗಳಿರುವ ಇದು ಥೇಟ್ ನಮ್ಮ ಬಸ್ಸಿನ ಸೀಟುಗಳಂತಿವೆಯಲ್ಲ, ಇದರಲ್ಲಿ ಒಮ್ಮೆ ಕುಳಿತುಕೊಂಡರೆ ಮುಗಿಯಿತು. ಎದ್ದು ಹೊರಬರಬೇಕೆಂದರೆ ಪಕ್ಕ ಕುಳಿತವರು ಎದ್ದು ಇವರಿಗೆ ದಾರಿ ಬಿಡಬೇಕು! ಆದರೂ ನನಗೆ ಕಿಟಕಿಯ ಬಳಿ ೬೬ ನಂಬರಿನ ಸೀಟು ಸಿಕ್ಕಿದೆಯಲ್ಲ ಅಂತ ಸಮಾಧಾನ ಮಾಡಿಕೊಂಡೆ ಕುಳಿತುಕೊಂಡೆ.


    ಎರಡು ಗಂಟೆಗೆ ಸರಿಯಾಗಿ ಹುಬ್ಬಳ್ಳಿಯಿಂದ ಹೊರಟಿತಲ್ಲ! ಅದರ ಸಮಯ ಪಾಲನೆ ಮೆಚ್ಚುಗೆಯಾಯಿತು ಮನಸ್ಸಿಗೆ. ಅದೇ ಖುಷಿಯಲ್ಲಿ ಕಿಟಕಿಯ ಹೊರಗಿನ ದೃಶ್ಯಗಳನ್ನು ನೋಡುತ್ತಿರುವಾಗಲೇ ಪಕ್ಕದಲ್ಲಿ ಯಾರೋ ಡೀಸೆಂಟ್ ಆಗಿ ವಾದಿಸುತ್ತಿರುವ ದ್ವನಿ ಕೇಳಿ ಅತ್ತ ತಿರುಗಿದೆ. "ಸರ್, ನೀವು ನನ್ನ ಸೀಟ್ ನಂಬರಿನ ಮೇಲಿನ ಲಗ್ಗೇಜ್ ಇಡುವ ಜಾಗದಲ್ಲಿ ನಿಮ್ಮ ಲಗ್ಗೇಜ್ ಇಟ್ಟಿದ್ದೀರಿ...ಸ್ವಲ್ಪ ತೆಗೆದುಕೊಳ್ಳುತ್ತೀರಾ..ನನ್ನ ಲಗ್ಗೇಜ್ ಇಡಬೇಕು....ಅದಕ್ಕೆ ಈ ಬದಿಯಲ್ಲಿ ಕುಳಿತವನು...ಹೌದಾ...ಸಾರಿ ಬೇಕಾದರೆ ನಾವು ಕುಳಿತಿರುವ ಸೀಟಿನ ಮೇಲಿನ ಲಗ್ಗೇಜ್ ಸ್ಥಳದಲ್ಲಿ ನಿಮ್ಮ ಲಗ್ಗೇಜು ಇಡಬಹುದು, ಈಗ ನಾನು ಬದಲಿಸಬೇಕಾದರೆ ನಮ್ಮ ಮಲಗಿರುವ ಮಗುವನ್ನು ಎದ್ದೇಳಿಸಬೇಕಾಗುತ್ತದೆ" ತನ್ನ ಹೆಂಡತಿ ಮತ್ತು ಮಗುವನ್ನು ತೋರಿಸುತ್ತಾ ಹೇಳಿದ ಈತ. "ಈಗ ಓಕೆ ಸರ್, ಆದ್ರೆ ಇಳಿಯುವ ಸಮಯದಲ್ಲಿ ನಿಮ್ಮ ಜಾಗಕ್ಕೆ ನಾನು ನನ್ನ ಲಗ್ಗೇಜ್ ತೆಗೆದುಕೊಳ್ಳುವುದು, ನೀವು ನನ್ನ ಜಾಗದಲ್ಲಿ ನಿಮ್ಮ ಲಗ್ಗೇಜ್ ತೆಗೆದುಕೊಳ್ಳುವುದು, ಇಳಿಯುವ ಗಡಿಬಿಡಿಯಲ್ಲಿ ಎಳೆದು ತಲೆಮೇಲೆ ಬೀಳಿಸುವುದು ಇದೆಲ್ಲಾ ಬೇಕಾ.....ಪ್ಲೀಸ್ ನಿಮ್ಮ ಜಾಗದಲ್ಲಿ ನಿಮ್ಮ ಲಗ್ಗೇಜ್ ಇಟ್ಟುಕೊಳ್ಳಿ.." ಆವನ ಮಾತಿಗೆ ಮರು ಮಾತಿಲ್ಲದೇ ತಮ್ಮ ಲಗ್ಗೇಜು ಜಾಗವನ್ನು ಬದಲಾಯಿಸಿಕೊಂಡರು.  ಹೀಗೆ ಇವರಿಬ್ಬರೂ ಡೀಸೆಂಟ್ ವಾದಗಳನ್ನು ಮಾಡುತ್ತಿದ್ದರೂ ಇಡೀ ಬೋಗಿಯಲ್ಲಿ ಕುಳಿತಿದ್ದ ಪ್ರತಿಯೊಬ್ಬರೂ ಇದಕ್ಕೂ ತಮಗೂ ಏನೂ ಸಂಭಂದವಿಲ್ಲವೇನೋ ಎನ್ನುವಂತೆ ಕುಳಿತಿದ್ದರು.  ಬಹುಷಃ ಇಂಥ ಕಾಯ್ದಿರಿಸಿದ ರೈಲುಗಳಲ್ಲಿ ಎಲ್ಲರೂ ತಮ್ಮ ತಮ್ಮ ಘನತೆ ಗಂಭೀರದಿಂದ ಇರಬೇಕು  ಅಂತ ಈ ರೈಲಿನಲ್ಲಿ ಕುಳಿತ ತಕ್ಷಣವೇ ತೀರ್ಮಾನಿಸಿರಬೇಕು!  ಪುಸ್ತಕವನ್ನು ತೆಗೆದುಕೊಳ್ಳುವ ನೆಪದಲ್ಲಿ ಒಮ್ಮೆ ನಿಂತು ಸುತ್ತಲೂ ನೋಡಿದೆ. ಹೌದು! ಎಲ್ಲರೂ ತುಂಬಾ ಡೀಸೆಂಟ್ ಆಗಿ ತಮ್ಮ ಸೀಟುಗಳಲ್ಲಿ ಕುಳಿತುಬಿಟ್ಟಿದ್ದಾರೆ! ಪಕ್ಕದಲ್ಲಿ ಕುಳಿತವರನ್ನು ಮಾತಾಡಿಸಲು ಕೂಡ ಒಂಥರ ಸಂಕೋಚವೆನ್ನುವಂತೆ ತಮ್ಮ ತಮ್ಮ ಸೀಟುಗಳಲ್ಲಿ ಸೈಲೆಂಟ್ ಆಗಿ ಕುಳಿತುಬಿಟ್ಟಿದ್ದಾರೆ!  ಹಾಗೆ ನಾನು ಸೇರಿದಂತೆ ಇಲ್ಲಿರುವವರು ಯಾರು ಕೂಡ ಈ ಮಟ್ಟಿಗಿನ ಗಂಭೀರತೆಯನ್ನು ಹೊಂದಿದವರಲ್ಲ...ಮಾನವ ಸಹಜ ಗುಣವುಳ್ಳವರು ಅನ್ನಿಸಿದರೂ ಅಲ್ಲಿನ ವಾತಾವರಣವನ್ನು ನೋಡಿ ಅವರಂತೆ ನಾನು ಕೂಡ ಘನಗಂಭೀರನಂತೆ ಪುಸ್ತಕದ ಪುಟಗಳನ್ನು ತಿರುವುತ್ತಾ ನಾನು ಇದೇ ಸಮಯದಲ್ಲಿ ಪ್ಯಾಸಿಂಜರ್ ಅಥವ ಪಾಸ್ಟ್ ಪ್ಯಾಸಿಂಜರ್ ರೈಲಿನಲ್ಲಿ ಹೊರಟಿದ್ದರೆ ಹೇಗಿರಬಹುದು ಅಂದುಕೊಂಡೆ...

    ಪ್ಯಾಸಿಂಜರ್ ರೈಲು ಬಂದು ನಿಲ್ಲುತ್ತಿದ್ದಂತೆ ಈ ಬದಿಯಿಂದ ಒಬ್ಬ ಸೀಟಿಗಾಗಿ ಕಿಟಕಿಯಿಂದಲೇ ಕರವಸ್ತ್ರವನ್ನು ಹಾಕಿದರೆ ಆ ಬದಿಯಿಂದ ಮತ್ತೊಬ್ಬ ಅದೇ ಸೀಟಿನ ಮೇಲೆ ತನ್ನ ಬ್ಯಾಗನ್ನೇ ಹಾಕಿಬಿಡುತ್ತಾನೆ.  ನಾ ಮುಂದು ತಾ ಮುಂದು ಅನ್ನುವ ನೂಕಾಟ, ಗಲಾಟೆ..... ಅಲ್ಲಿಗೆ ಎಲ್ಲಾ ಘನತೆ ಗಂಭೀರತೆಗಳು ಬಾಗಿಲ ಬಳಿಯೇ ಮಣ್ಣುಪಾಲು!  ಮತ್ತೆ ಕರವಸ್ತ್ರ ಮತ್ತು ಬ್ಯಾಗ್ ಹಾಕಿದವನ ನಡುವೆ ಸೀಟಿಗಾಗಿ ಜಗಳ...ಮಾತಿಗೆ ಮಾತು..ಹಳ್ಳಿಯವರಾದರೆ ಹಳ್ಳಿ ಮಾತು...ಪಟ್ಟಣದವರಾದರೆ ಪಟ್ಟಣದ ಮಾತು ಇದು ಇದೊಂದೇ ಸೀಟಿನಲ್ಲಿ ಮಾತ್ರವಲ್ಲ ಪೂರ್ತಿ ರೈಲಿನ ಹತ್ತಾರು ಬೋಗಿಗಳ ನೂರಾರು ಸೀಟುಗಳ ನಡುವೆ ಏಕಕಾಲದಲ್ಲಿ ನಡೆಯುತ್ತದೆ.  ಈ ಗಲಾಟೆಗಳೆಲ್ಲಾ ಮುಗಿದ ಸ್ವಲ್ಪ ಹೊತ್ತಿಗೆ ಸೀಟಿಗಾಗಿ ಮಾತಿಗೆ ಮಾತು ಬೆಳೆಸಿದವರೆಲ್ಲಾ ಈಗ ಎದುರು-ಎದುರು ಕುಳಿತು ಆತ್ಮೀಯ ಗೆಳೆಯರಂತೆ ಮಾತಾಡುತ್ತಿರುತ್ತಾರೆ. ಏಕೆಂದರೆ ಪ್ಯಾಸೆಂಜರ್ ಸೀಟಿನಲ್ಲಿರುವ ವಿಶೇಷತೆಯೇ ಅದು. ಎದುರು-ಬದುರಾಗಿ ಇದ್ದು ನಮಗೆ ಅವರು ಅವರಿಗೆ ನಾವು ಕಾಣಿಸುತ್ತಿರುತ್ತೇವೆ. ಒಂಥರ ಮನೆಯಲ್ಲಿ ಕುಳಿತುಕೊಂಡ ಹಾಗೆ. ಜಗಳವಾಡಿದವರು ಎಷ್ಟು ಹೊತ್ತು ಹಾಗೆ ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಕುಳಿತುಕೊಳ್ಳುವುದು?  ಒಂದರ್ಧಗಂಟೆಯಲ್ಲಿ ಎಲ್ಲವನ್ನು ಮರೆತುಬಿಡುತ್ತಾರೆ. ಕರವಸ್ತ್ರವನ್ನು ಹಾಕಿದವನು ಬ್ಯಾಗ್ ಹಾಕಿದವನ ಬಳಿಯಲ್ಲಿರುವ ದಿನಪತ್ರಿಕೆಯನ್ನು ನೋಡಿ "ಸ್ವಲ್ಪ ಪೇಪರ್ ಕೊಡಿ" ಅನ್ನುತ್ತಾನೆ. ಈತನೂ ಕೂಡ ಆಗಲೇ ಸೀಟಿನ ವಿಚಾರವನ್ನು ಮರೆತಿದ್ದರಿಂದ ದಿನಪತ್ರಿಕೆ ಕೊಡುತ್ತಾನೆ. ಅದಕ್ಕೆ ಪ್ರತಿಯಾಗಿ ಈತನ ಬಳಿ ಇರುವ ನೀರನ್ನು ಆತ ಕೇಳುತ್ತಾನೆ. ಇವನು ಕೊಡುತ್ತಾನೆ.  ಅಲ್ಲಿಗೆ ಎಲ್ಲಾ ದಾರಿ ಸರಿಯಾಯ್ತು. ರೈಲು ಪ್ರಯಾಣದ ದಾರಿ ಸಾಗಬೇಕಾಲ್ಲ ನಿದಾನವಾಗಿ ಒಬ್ಬರಿಗೊಬ್ಬರು ಊರು, ಕೇರಿ, ಪಟ್ಟಣ, ಓದು, ಕೆಲಸ ಇತ್ಯಾದಿಗಳನ್ನು ಪರಸ್ಪರ ವಿಚಾರಿಸಿಕೊಳ್ಳುತ್ತಾರೆ. ಹಾಗೆ ಮುಂದುವರಿಯುತ್ತಾ..ಹರಟೆ, ತಮಾಷೆ, ಲೋಕದ ಎಲ್ಲಾ ವಿಚಾರಗಳ ಚರ್ಚೆ, ನಗು..ಅವರಿಸಿಕೊಳ್ಳುತ್ತವೆ..ಇದು ಇವರಿಬ್ಬರ ನಡುವೆ ಮಾತ್ರವಲ್ಲ ಹೀಗೆ ಜಗಳವಾಡಿದ ಆಡದ ಎಲ್ಲ ಬೋಗಿಗಳ ಪ್ರಯಾಣಿಕರಲ್ಲೂ ಅವರಿಸಿಕೊಂಡುಬಿಡುತ್ತವೆ. ನಾವು ಯಾವುದೇ ಪೂರ್ವಗ್ರಹ ಪೀಡಿತನಾಗದೆ ಸುಮ್ಮನೇ ಕುಳಿತು ಪ್ಯಾಸಿಂಜರ್ ರೈಲಿನಲ್ಲಿ ಪ್ರಯಾಣಿಸಿದರೆ ಹತ್ತಾರು ಜನರ ಭಾಷೆ, ಮಾತು, ಶೈಲಿ, ಸಂಸ್ಕಾರ, ಮಕ್ಕಳ ಆಟ ಹುಡುಗಾಟ, ಒಂದು ಅಥವ ಎರಡು ವರ್ಷದ ತುಂಟ ಮಗುವಿದ್ದರೆ ಮುಗಿಯಿತು ಅದು ಯಾವುದೇ ಜಾತಿ, ಭಾಷೆ, ಭೇದವಿಲ್ಲದೇ ಎಲ್ಲರಿಂದರೂ ಮುದ್ದಿಸಿಕೊಳ್ಳುತ್ತದೆ, ಪ್ರೀತಿಸಿಕೊಳ್ಳುತ್ತದೆ.....

       ಹೀಗೆ ಅಲೋಚಿಸುತ್ತಿರಬೇಕಾದರೆ ಮುಂದಿನ ರೈಲು ನಿಲ್ದಾಣದಲ್ಲಿ ನಿಂತಿತು. ಒಮ್ಮೆ ಸುತ್ತ ನೋಡಿದೆ. ಎಲ್ಲರೂ ಹಾಗೆ ಕುಳಿತಲ್ಲಿಯೇ ಕುಳಿತಿದ್ದಾರೆ. ಪ್ರತಿಯೊಬ್ಬರ ಬಳಿಯೂ ನೀರಿನ ಬಾಟಲ್ಲುಗಳಿವೆ, ಪಕ್ಕದವರನ್ನು ಕೇಳಲು ಸಂಕೋಚವೆಂದು ಎಲ್ಲರೂ ನೀರಿನ ಬಾಟಲ್ಲುಗಳನ್ನು ಕೊಂಡುಕೊಂಡಿದ್ದಾರೆ. ನನ್ನಿಂದ ಮೂರನೆ ಸೀಟಿನವನ ಬಳಿ ಕನ್ನಡ ಪ್ರಭ ದಿನಪತ್ರಿಕೆಯಿತ್ತು. ಅದನ್ನು ಎರಡನೆಯವನು ಓದಲಿಕ್ಕಾಗಿ ಕೇಳಿ ಪಡೆಯಲಿಲ್ಲ. ಅದರ ಬದಲು ನಿಲ್ದಾಣದಲ್ಲಿ ಇಳಿದು ತಾನೇ ಒಂದು ಪತ್ರಿಕೆಯನ್ನು ಕೊಂಡು ತಂದನು. ಇದನ್ನೆಲ್ಲಾ ಗಮನಿಸುತ್ತಿದ್ದ ನಾನು ನನಗೆ ದಿನಪತ್ರಿಕೆಯನ್ನು ಓದಬೇಕೆನಿಸಿದರೂ ಕೂಡ ಇಬ್ಬರಲ್ಲೂ ಕೇಳಲಾಗದೇ ನಾನು ನನ್ನ ಪ್ರಸ್ಟೀಜ್ ಬ್ಯಾಲೆನ್ಸ್ ಮಾಡಿಕೊಂಡೆ.  ಅಷ್ಟರಲ್ಲಿ ಜನಶತಾಬ್ದಿ ಒಂದು ಗಂಟೆಯ ಪ್ರಯಾಣವನ್ನು ಮುಗಿಸಿತ್ತಲ್ಲ!  ಬಸ್ಸಿನಂತ ಸೀಟಿನಲ್ಲಿ ಹೀಗೆ ಕುಳಿತಲ್ಲಿಯೇ ಕೂತರೇ ನಮ್ಮ ಅಂಡುಗಳು ಎಷ್ಟು ಬಿಸಿಯಾಗಬಹುದು?  ಅಷ್ಟೇ ಅಲ್ಲ ಕಾಲು ನೀಡಲಾಗದೆ ಜೊಂಪುಹತ್ತಿದ್ದರಿಂದ ಕಾಲುಗಳು ಹಿಡಿದುಕೊಂಡಂತೆ ಆಗಿತ್ತು. ಈ ರೀತಿ ನನಗೊಬ್ಬನಿಗೆ ಮಾತ್ರ ಆಗಿದೆಯ ಅಂತ ಸುತ್ತಲೂ ನೋಡಿದೆ. ಬಹುಶಃ ಎಲ್ಲರ ಕಾಲುಗಳು ಜೊಂಪು ಹಿಡಿದಿರಬಹುದು ಅನ್ನಿಸಿತು. ಹಾಗೇ ಕುಳಿತಿದ್ದಾರಲ್ಲ...ಎದ್ದು ಒಮ್ಮೆ  ಕೈಕಾಲು ಜಾಡಿಸಿ, ಸ್ವಲ್ಪ ಅಡ್ಡಾಡಿದರೆ ಅಂಡುಗಳು ತಂಪಾಗಬಹುದಲ್ವಾ ಅನ್ನಿಸಿತು. ಆದ್ರೆ ಯಾರು ಕುಳಿತಲ್ಲಿಂದ ಎದ್ದಿಲ್ಲ. ಒಬ್ಬರು ಎದ್ದರೆ ಪಕ್ಕದಲ್ಲಿರುವ ಇಬ್ಬರೂ ಎದ್ದು ಇವರಿಗೆ ದಾರಿ ಮಾಡಿಕೊಡಬೇಕಲ್ಲ...ಆಗ ಕಾಲಿಗೆ ಕಾಲು ತಗುಲುತ್ತದೆ. ಅದಕ್ಕೆ ಇವರೇನು ಅಂದುಕೊಳ್ಳುತ್ತಾರೋ ಹೀಗೆ ಎಲ್ಲರ ಮನಸ್ಸಿನಲ್ಲೂ ಅನ್ನಿಸಿ ಹಾಗೆ ಸಹಿಸಿಕೊಂಡು ಕುಳಿತುಕೊಂಡುಬಿಟ್ಟಿದ್ದಾರೆ ಅನ್ನಿಸಿತು.


      ಇದೇ ಪರಿಸ್ಥಿತಿ ಪ್ಯಾಸೆಂಜರ್ ರೈಲಿನಲ್ಲಿದ್ದರೆ ಹೇಗಿರುತ್ತಿತ್ತು? "ಕಾಲು ಜೌ ಹಿಡಿದುಕೊಂಡಿದೆ, ಕಾಲು ನೀಡಿಕೊಳ್ಳುತ್ತೀನಿ, ಬೇಸರ ಮಾಡಿಕೊಳ್ಳಬೇಡಿ" ಅಂತೇಳಿ ಎದುರಿನ ಕುಳಿತವನ ಸೀಟಿನ ಪಕ್ಕಕ್ಕೆ ಕಾಲು ನೀಡಿಬಿಡುತ್ತಾರೆ. ಅದಕ್ಕೆ ಈತನೇನು ಬೇಸರಿಸಿಕೊಳ್ಳುವುದಿಲ್ಲ ಏಕೆಂದರೆ ಈಗಾಗಲೇ ಗೆಳೆಯರಂತೆ ಕಷ್ಟಸುಖಗಳನ್ನು ಮಾತಾಡಿಕೊಂಡಿದ್ದಾರಲ್ಲ. ಸ್ವಲ್ಪ ಹೊತ್ತಿಗೆ ಅವನ ಕಾಲು ಇವನ ಸೀಟಿನ ಮೇಲೆ. ಒಂದು ದಿನಪತ್ರಿಕೆ ಇದ್ದರೆ ಸಾಕು ಅದು ಹತ್ತಾರು ಜನರ ಕೈಬದಲಾಗುತ್ತದೆ! ಮತ್ತೆ ಪ್ಯಾಸೆಂಜರ್ ರೈಲಿನಲ್ಲಿರುವ ಯಾವ ಪ್ರಯಾಣಿಕನ ಅಂಡು ಬಿಸಿಯಾಗುವುದಿಲ್ಲ. ಏಕೆಂದರೆ ಕಾಲುಗಂಟೆ-ಅರ್ಧಗಂಟೆಗೆ ಒಮ್ಮೆ ಎದ್ದು ಓಡಾಡುತ್ತಿರುತ್ತಾರೆ....ಇದೆಲ್ಲಾ ಯೋಚನೆ ಬರುವಷ್ಟರಲ್ಲಿ ಈ ಜನಶತಾಬ್ಧಿ ರೈಲು ರಾಣೆಬೆನ್ನೂರಿಗೆ ತಲುಪಿತ್ತು.

     ಒಂದು ನಿಮಿಷ ನಿಂತು ಹೊರಡಬೇಕಾದ ರೈಲು ಐದು ನಿಮಿಷವಾದರೂ ಹೊರಡಲೇ ಇಲ್ಲವಲ್ಲ!  ಏಕೆಂದರೆ  ಕ್ರಾಸಿಂಗಿಗಾಗಿ ನಿಂತಿದೆ! ಇದು ಕ್ರಾಸಿಂಗಿನಲ್ಲಿ ನಿಂತು ಇನ್ನೊಂದು ರೈಲು ಬರುವವರೆಗೂ ಕಾಯಬೇಕಾ ಅಂದುಕೊಳ್ಳುವಷ್ಟರಲ್ಲಿ ಎದುರಿಗೆ ಚಾಲುಕ್ಯ   ಎಕ್ಸ್ ಪ್ರೆಸ್  ಬಂದು ವೇಗವಾಗಿ ಹೋಯ್ತು.  ಅಲ್ಲಿಗೆ ಉಳಿದೆಲ್ಲಾ ರೈಲುಗಳು ಇದಕ್ಕೆ ರಾಜಮರ್ಯಾದೆಯನ್ನು ಕೊಟ್ಟು ದಾರಿಬಿಟ್ಟುಕೊಡುವುದನ್ನು ನೋಡಲು ಇಷ್ಟಪಟ್ಟ ನನಗೆ ಈ ರೈಲೇ ಮತ್ತೊಂದು ರೈಲಿಗೆ ದಾರಿಮಾಡಿಕೊಟ್ಟಿದ್ದು ಕಂಡು "ಹೊರಗಿನಿಂದ ನೋಡಿದಾಗ ಎಷ್ಟೆಷ್ಟೋ ಅಂದುಕೊಂಡರೂ ಒಳಗೆ ಕುಳಿತಾಗ ಇಷ್ಟೆ" ಅಂದುಕೊಂಡು ಸುಮ್ಮನಾದೆ. ರೈಲು ಹೊರಟಿತು.

   ನಿದಾನವಾಗಿ ತಿಂಡಿ ತಿನಿಸು, ಕಾಫಿ, ಟೀ, ಬಾದಾಮಿ ಹಾಲು, ಕಟ್ಲೆಟ್, ಸಮೋಸ, ವೆಚ್ ಬಿರ್ಯಾನಿ, ಇತ್ಯಾದಿಗಳು ಬರತೊಡಗಿದವು. ಇದನ್ನು ಮಾರುವವರೆಲ್ಲರೂ ಯೂನಿಫಾರಂ ಹಾಕಿಕೊಂಡವರೇ ಆಗಿದ್ದರು. "ಕಟ್ಲೆಟ್ ಎಷ್ಟಪ್ಪ" ಅಂತ ಕೇಳಿದರು ಹಿರಿಯಜ್ಜ. "ಇಪ್ಪತೈದು ರೂಪಾಯಿ" ಒಮ್ಮೆ ಯೋಚಿಸಿ ಕೊಡಪ್ಪ ಅಂದರು ಹಿರಿಯಜ್ಜ. ಬೆಲೆ ಕೇಳಿ ಹೆಚ್ಚಾಯಿತೆಂದು ಬೇಡವೆಂದರೆ ಯಾರೇನು ಅಂದುಕೊಳ್ಳುವರೋ, ಅದರಿಂದ ನನ್ನ ಘನತೆಗೆ ಕುಂದುಂಟಾಗುತ್ತದೆ ಅಂತ ಅಷ್ಟೆ ಬೆಲೆ ಕೊಟ್ಟು ಕಟ್ಲೆಟ್ ತಿಂದರು ಅಜ್ಜ. ಅದೇ ರೀತಿ ಅನೇಕ ಪ್ರಯಾಣಿಕರು ದುಬಾರಿ ಬೆಲೆಯ ತಿಂಡಿ ತಿನಿಸುಗಳನ್ನು ವಿಧಿಯಿಲ್ಲದೆ ತಾವು ತಿಂದು ತಮ್ಮ ಮಕ್ಕಳಿಗೂ ಕೊಡಿಸಿದರು ಅಂದುಕೊಳ್ಳುತ್ತೇನೆ. ಏಕೆಂದರೆ ಹೊರಗಿನ ವಸ್ತುಗಳನ್ನು ಮಾರಾಟಮಾಡಲು ಇಲ್ಲಿ ಅನುಮತಿಯಿಲ್ಲವಲ್ಲ!

     ಆದ್ರೆ ಪ್ಯಾಸೆಂಜರ್ ರೈಲಿನಲ್ಲಿ ಏನುಂಟು ಏನಿಲ್ಲ! ಎರಡು ರೂಪಾಯಿಯ ಉರಿದ ಕಡ್ಲೇಕಾಯಿಯಿಂದ ಹಿಡಿದು ಇನ್ನೂರು ಮುನ್ನೂರು ರೂಪಾಯಿಗಳ ಸೀರೆ, ಪ್ಯಾಂಟು ಶರಟು ಇತ್ಯಾದಿಗಳೆಲ್ಲವೂ ಸಿಗುತ್ತದೆ. ಬಾಯಿ ಚಪ್ಪರಿಸುವ ಚುರುಮುರಿ, ತಟ್ಟೆ ಇಡ್ಲಿ, ವಡೆ, ಐದು ರೂಪಾಯಿಗಳಿಗೊಂದು ಮೊಳ ಮಲ್ಲಿಗೆ, ಬೇಕಾದಲ್ಲಿ ನೂರು ಇನ್ನೂರು ಗ್ರಾಂ ಮಲ್ಲಿಗೆಯನ್ನು ತೆಗೆದುಕೊಂಡು ಸಹಪ್ರಯಾಣಿಕರ ಜೊತೆ ಕಷ್ಟ ಸುಖ ಮಾತಾಡುತ್ತಾ ಮಹಿಳಾ ಪ್ರಯಾಣಿಕರು ಹೂದಂಡೆಯನ್ನು ಕಟ್ಟುತ್ತಿರುತ್ತಾರೆ. ತಿಪಟೂರಿನಲ್ಲಿ ಕೊಂಡ ಒಂದು ಕೇಜಿ ಸೊಗಡು ಅವರೆಯನ್ನು ಯಶವಂತಪುರ ತಲುಪುವ ಹೊತ್ತಿಗೆ ಕಾಳುಗಳನ್ನು ಬಿಡಿಸಿಟ್ಟುಕೊಂಡುಬಿಡುತ್ತಾರೆ! ಇಷ್ಟೇ ಅಲ್ಲದೇ ಕೈಕಾಲು, ಕಣ್ಣು ಇಲ್ಲದ ಬಿಕ್ಷುಕರ " ಈ ದೇಹದಿಂದ ದೂರನಾದೆ ಏಕೆ ಆತ್ಮನೇ" ಹಾಡುಗಳು...ಹೀಗೆ ಒಂದೇ ಎರಡೇ.......ಸಮಯಕ್ಕೆ ಸರಿಯಾಗಿ ರೈಲು ನಿಲ್ದಾಣಗಳಿಗೆ ತಲುಪುವುದಿಲ್ಲ ಗಂಟೆಗಟ್ಟಲೇ ತಡವಾಗಿ ಬರುತ್ತವೆ ಎನ್ನುವುದನ್ನು ಬಿಟ್ಟರೆ ಈ ಪ್ಯಾಸಿಂಜರ್ ರೈಲಿನಲ್ಲಿ ಏನುಂಟೂ ಏನಿಲ್ಲ! 

    ಆರಸೀಕೆರೆ ಬಂತು. ಅಲ್ಲಿ ಐದು ನಿಮಿಷ ನಿಲ್ಲುತ್ತದೆ ಈ ಜನಶತಾಬ್ದಿ. ಹೊರಗೆ ಬಂದು ಪ್ಲಾಟ್ ಫಾರಂನಲ್ಲಿ ಮಾರುವ ಟೀ ಕುಡಿದಾಗ ಸ್ವಲ್ಪ ನಿರಾಳವೆನಿಸಿತ್ತು. ಕೈಕಾಲು ಬಿಡುಬೀಸಾಗಲು ಬಾಗಿಲಲ್ಲಿ ಸ್ವಲ್ಪ ಹೊತ್ತು ನಿಂತೂ ಸೂರ್ಯಾಸ್ತವನ್ನು ನೋಡಿದ ಮೇಲೆ ಮತ್ತೆ ಮನಸ್ಸು ಉಲ್ಲಾಸಗೊಂಡಿತ್ತು. ಅಂದಹಾಗೆ ನಾನು ಜನಶತಾಬ್ದಿ ರೈಲನ್ನು ಅವಮಾನಿಸುತ್ತಿದ್ದೇನೆ ಅಂದುಕೊಳ್ಳಬೇಡಿ. ನಿಜಕ್ಕು ಇದು ವೇಗದ ರೈಲು ಮೊದಲ ಒಂದು ನಿಲ್ದಾಣದಲ್ಲಿ ಕ್ರಾಸಿಂಗ್ ಕೊಟ್ಟಿದ್ದು ಬಿಟ್ಟರೆ ಮುಗೀತು. ಮುಂದಿನದೆಲ್ಲಾ ಇದಕ್ಕೇ ರಾಜಮಾರ್ಗ.  ಹುಬ್ಬಳ್ಳಿಯಿಂದ ಕೇವಲ ಎಂಟು ನಿಲ್ದಾಣಗಳಲ್ಲಿ ಮಾತ್ರ ನಿಲ್ಲುವ ಇದು ಮೇಲೆ ಹೇಳಿದ ಕೆಲವು ವಿಚಾರಗಳನ್ನು ಬಿಟ್ಟರೆ ಚಲನೆಯ ವಿಚಾರದಲ್ಲಿ ವೇಗದೂತ. ಸಮಯಕ್ಕೆ ಸರಿಯಾಗಿ ಹೊರಡುವ ಮತ್ತು ತಲುಪುವಂತ ಪಕ್ಕಾ ಟೈಮಿಂಗ್. ಇಕ್ಕಾಟಾದ ಸೀಟಿನಲ್ಲಿ ಕೈಕಾಲು ನೀಡಲಾಗದಿದ್ದರೂ ನಮ್ಮ ಮುಂದಿನ ಸೀಟಿನ ಹಿಂಭಾಗದಲ್ಲಿ ಅದಕ್ಕೆ ಹೊಂದಿಸಿಕೊಂಡಂತೆ ಒಂದು ಗಟ್ಟಿಯಾದ ಕಬ್ಬಿಣದ ಪ್ಯಾಡ್ ಇದೆ. ಅದರ ಮೇಲೆ ಇಟ್ಟುಕೊಂಡು ತಿಂಡಿ ತಿನ್ನಬಹುದು, ಕಾಫಿ ಟೀ ಕುಡಿಯಬಹುದು, ಕತೆ ಕಾದಂಬರಿಗಳನ್ನು ಇಟ್ಟುಕೊಂಡು ಓದಬಹುದು, ಸಾಧ್ಯವಾದರೆ ಒಂದು ಲೇಖನವನ್ನು ಬರೆಯಬಹುದು. 

     ಜನಶತಾಬ್ಧಿಯ ರೈಲಿನಲ್ಲಿ ಕುಳಿತ ಮೇಲೆ ಇಷ್ಟೇಲ್ಲಾ ಅಲೋಚನೆಗಳು ಬಂದವಲ್ಲ! ಓದುವುದನ್ನು ನಿಲ್ಲಿಸಿದೆ. ಒಂದಷ್ಟು ಎ-೪ ಸೈಜಿನ ಬಿಳಿ ಹಾಳೆಗಳನ್ನು ಕ್ಯಾಮೆರ ಕಿಟ್ಟಿನಲ್ಲಿಟ್ಟುಕೊಂಡೆದ್ದೆನಲ್ಲ! ತೆಗೆದುಕೊಂಡು ನನ್ನ ಸೀಟಿನ ಮುಂದಿದ್ದ ಕಬ್ಬಿಣದ ಪ್ಯಾಡಿನ ಮೇಲಿಟ್ಟು ಈ ಲೇಖನವನ್ನು ಬರೆದು ಮುಗಿಸುವಷ್ಟರಲ್ಲಿ ನಾನು ಇಳಿಯಬೇಕಾದ ಯಶವಂತಪುರ ಬಂತು. ಅದನ್ನೇ ನೀವು ಈಗ ಓದುತ್ತಿದ್ದೀರಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಲೇಖನ : ಶಿವು.ಕೆ
ಚಿತ್ರ: ಅಂತರ್ಜಾಲ ಕೃಪೆ.

    

34 comments:

Shreeram Jamadagni said...

ನೀವು ನಮ್ಮೂರಿಗೆ ಬರುವ ವಿಚಾರ ತಿಳಿದ್ದಿದ್ದರೆ, ರೈಲ್ವೆ ಸ್ಟೇಷನ್ ಗೆ ನಮ್ಮ ಮನೆಯಿಂದಲೇ ಬಿಸಿ ಬಿಸಿ ಕಾಫಿ ತರುತ್ತಿದ್ದೆ... ನಿಮ್ಮ ಮುಂದಿನ ಪ್ರವಾಸದಲ್ಲಾದರೂ ನಮಗೆ ಸ್ವಲ್ಪ ಮಾಹಿತಿ ನೀಡಿ...

ಅಂದಹಾಗೆ, ಈ ಲೇಖನ ತುಂಬಾ ಚೆನ್ನಾಗಿದೆ..

shivu.k said...

Sreeram jamadagni sir: ನೀವು ಅರಸೀಕೆರೆ ಬಗ್ಗೆ ಬರೆಯುತ್ತಿರುತ್ತಿರಿ...ನನ್ನ ಶ್ರೀಮತಿ ತವರೂರು ಅದು.
ಅಲ್ಲಿಗೆ ಬಂದಾಗ ಸಿಗುತ್ತೇನೆ.
ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

umesh desai said...

ಹೌದು ಶಿವು ಸರ್ ನೀವು ಹೇಳಿದ್ದು ಖರೆ..
ಕಟ್ಲೇಟು ದುಬಾರಿ ಆದ್ರ ಅಲ್ಲಿ ಮತ್ತೇನೂ ಸಿಗುವುದಿಲ್ಲ ಲೂಟಿ ಮಾಡತಾರ
ಮುಂಜಾನೆ ೬ ಗಂಟೆಗೆ ಬೆಂಗಳೂರಿನಿಂದ ಹೊರಡುವ ಇದೇ ಟ್ರೇನಿನಲ್ಲೂ ಮಜಾ ಇಲ್ಲ

Yogee said...

ಶಿವು
ಲೇಖನ ತುಂಬ ಚೆನ್ನಾಗಿದೆ. ನಾನು ಒಂದೇ ಒಂದು ಬಾರಿ ಬೆಂಗಳೂರಿನಿಂದ ತುಮಕೂರಿಗೆ ಇದರಲ್ಲಿ ಪ್ರಯಾಣ ಮಾಡಿದ್ದೇನೆ ಬಹುಶ: ೫ ವರ್ಷಗಳ ಹಿಂದಿನ ಮಾತು
ಮತ್ತೆ ಈ ರೈಲಿನಲ್ಲಿ ಪ್ರಯಾಣಿಸುವ ಯೋಗ ಕೂಡಿಬಂದಿಲ್ಲ.

sunaath said...

ಶಿವು,
ಜನ್ಮಶತಾಬ್ದಿಯಷ್ಟೇ ವೇಗವಾಗಿ ಚಲಿಸುವ ನಿಮ್ಮ ಆಲೋಚನೆಗಳನ್ನು ಕ್ರಮಬದ್ಧವಾಗಿ ಹೆಣೆದು ಕೊಟ್ಟಿದ್ದೀರಿ. ಓದುವುದು ಖುಶಿಯನ್ನು ಕೊಡುತ್ತದೆ.

NilGiri said...

ಮೊದಲೇ ನನಗೆ ರೈಲಿನಲ್ಲಿ ಪ್ರಯಾಣ ಇಷ್ಟವಿಲ್ಲ. ಅದರಲ್ಲೂ ಶತಾಬ್ಧಿಯಂತೂ ಬೇಡವೇ ಬೇಡ. ಎಲ್ಲರನ್ನೂ ಒಂದು ರೂಮಿನೊಳಗೆ ಕೂಡಿ ಹಾಕಿಕೊಂಡು ಹೊರಟಂತೆ ಅನ್ನಿಸುತ್ತದೆ!

Chandru said...

ಶಿವೂ- ನಿಮ್ಮ ರೈಲು ಅನುಭವ ತುಂಬ ಅದ್ಬುತವಾಗಿ ಮೂಡಿಬಂದಿದೆ, ಇದು ನನ್ನ ಇಲ್ಲಿಯವರೆಗಿನ ರೈಲು ಪ್ರಯಾಣದ ಮೆಲಕನ್ನು ಹಾಕಿಸಿತ್ತು. ಎಷ್ಟಾದರೂ ಅದೇ ಮಾರ್ಗವಲ್ಲವೆ ಶಿವಮೊಗ್ಗಕ್ಕೆ..

ನನ್ನ ಕೆಲವು ಅನುಭವಗಳು- ಹುಬ್ಬಳ್ಳಿ ಇಂಟರ್ ಸಿಟಿ ಯಲ್ಲಿ ಒಬ್ಬ ಮದ್ಯವಯಸ್ಕನ ಜೊತೆ ಸೀಟಿಗಾಗಿ ಜಗಳ ವಾಡಿದು..ಅವನು ನಂಗೆ ಹೊಡೆಯಲು ಬಂದದ್ದು, ಅವರ ಹೆಂಡತಿ ತಡೆದದ್ದು, ನಾನು ಯಾಕಪ್ಪ ಈ ಉತ್ತರ ಕರ್ನಾಟಕದ ಜನ ಇಷ್ಟು ಒರಟು ಎಂದು ಸುಮ್ನೆ ಅವರಿಗೆ ಸೀಟ್ ದಾನ ಮಾಡಿದ್ದೂ, ರಾತ್ರಿ ವೇಳೆಯ ರೈಲಿನಲ್ಲಿ ಪಡ್ಡೆ ಹುಡ್ಗುರು/ಮದ್ಯಾವಸ್ಕರು ಮಲಗುವ ಸಮಯದಲ್ಲಿ ಜೋರಾಗಿ ಗಲಾಟೆ ಮಾಡಿದಾಗ ಸೆಕ್ಯೂರಿಟಿ ಗೆ ದೂರು ನೀಡಿ ಬಾಯಿ ಮುಚ್ಚಿಸಿದ್ದು, ಮುದ್ದು ಹಸುಗೂಸುಗಳ ಮುದ್ದಾಡಿ ಮೊಬೈಲ್ ನಲ್ಲಿ ಕ್ಲಿಕ್ಕಿಸಿದ್ದು, ಸಂಜೆ ಬೀರೂರಿನ ಬಳಿ ಸುರ್ಯಾಸ್ತಮ ಅನುಭಿವಿದ್ದು, ಅರಸೀಕೆರೆಯಲ್ಲಿ ಇಡ್ಲಿ ವಡೆ ತಿಂದಿದ್ದು, ನೀವು ಹೇಳಿದ "ಗಂಭೀರ ಪ್ರಯಾಣವನ್ನು " ಶಿಮೊಗ ಇಂಟರ್ ಸಿಟಿ ಲಿ ಮಂತ್ರಿ ಮಹೋದಯರ ಜೊತೆ ಬೆಳೆಸಿದ್ದು, ಪ್ಯಾಸೆಂಜರ ಗಾಡಿಯಲ್ಲಿ ಕಾಲಿಡಲು ಜಾಗವಿಲ್ಲದ್ದಾಗ ಶೌಚಾಲಯಕ್ಕೆ ಹೋಗಿ ಬಂದದ್ದು !. ಅಮ್ಮನ ಜೊತೆ ಇದೆ ಜನ ಶತಾಬ್ದಿ ಯಲ್ಲಿ ಹುಬ್ಬಳ್ಳಿಗೆ ಹೋಗಿ ಬಂದದ್ದು , ಇನ್ನೊಂದು ವಿಶೇಷ ಅಂದ್ರೆ ಒಂದೊಂದು ಊರು ಬಂದಾಗ ಅಲ್ಲಿನ ಭಾಷೆ, ಜನ, ಸಾಮಾಜಿಕ ಜೀವನ, ಬೌಗೋಳಿಕ ಪರಿಸರ ಎಲ್ಲವೂ ಬದಲಾಗುತ್ಹ ಹೋಗುವುದು.
ನನ್ನ ಅನುಭವಗಳನ್ನು ನೆನಪಿಸಿದ್ದ್ಕೆ ತುಂಬಾ ಧನ್ಯವಾದ ,

ಮನಸು said...

ಚೆನ್ನಾಗಿದೆ ಲೇಖನ. ರೈಲಿನಲ್ಲಿ ಓಡಾದಿದ್ದೆವು ಆದರೆ ಶತಾಬ್ದಿ ರೈಲಿನ ಅನುಭವ ನಮಗೂ ಆಗಿಲ್ಲ. ನೀವು ಹೇಮ ಜೊತೆಯಾಗಿ ವಾಕ್ ಮಾಡಲು ಹೋಗುವುದು ನಿಜಕ್ಕೂ ಖುಷಿ ಕೊಟ್ಟಿತು. ಪಾಪ ಯಾವಾಗಲೂ ನೀವು ಹೇಮಾಗಾಗಿ ಸಮಯ ಕೊಡುವುದೇ ಕಡಿಮೆ..ಸದಾ ಬ್ಯುಸಿ ಇರುತ್ತೀರಿ.

ಸೀತಾರಾಮ. ಕೆ. / SITARAM.K said...

ಹೊರಗಿನಿಂದ ಬೆರಗಾಗಿ ಕಂಡ ಜನಶತಾಬ್ದಿ ಒಳಗೆ ಕೂತು ಪಯಣಿಸಿದಾಗ ಪ್ಯಾಸಿ೦ಜರ ರೈಲಿನೊಡನೆ ಮಾಡಿದ ಹೊಲಿಕೆಯೊಂದಿಗೆ ಅದರಲ್ಲಿನ ಪಾಡುಗಳು ತುಂಬಾ ವ್ಯವಸ್ತಿತವಾಗಿ ಹೇಳಿದ್ದಿರಾ... ಬರವಣಿಗೆ ಒಂದು ಅದ್ಭುತ ಲಲಿತ ಪ್ರಭಂಧ. ಧನ್ಯವಾದಗಳು. ನಾನು ಹಲವಾರು ಸಲ ಜನಶತಾಬ್ದಿಯಲ್ಲಿ (ಕಲ್ಕತ್ತ ದಿಂದ ಬಾರ್ಬಿಲ್ ) ಪಯನಿಸಿದ್ದೇನೆ.. ನನ್ನ ಅನುಭವ ಇದಕ್ಕಿಂತಾ ಬೇರಿಲ್ಲಾ... ಆದರೆ ನಾನು ಹಲವು ಮಿತ್ರರನ್ನು ಮಾಡಿಕೊಂಡು ಹರಟಿದ್ದಿದೆ...

Guruprasad said...

ಶಿವೂ,
ನಾನು ಕೂಡ ಒಮ್ಮೆ ಹುಬ್ಬಳಿಗೆ ಹೋಗುವಾಗ ಇದರಲ್ಲಿ ಹೋಗಿದ್ದೆ.... ನನಗಂತು comfort ಇತ್ತು,, ನಿಮ್ಮ ಲೇಖನ ಓದಿ ಅದರ ನೆನಪು ಆಯಿತು...
ಗುರು

shivu.k said...

ಉಮೇಶ್ ದೇಸಾಯ್ ಸರ್,
ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

shivu.k said...

ಯೋಗೇಶ್,
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಪ್ರಯಾಣಿಸಿದ ಸಮಯದಲ್ಲಿ ಹೊಸದಲ್ಲವೇ..ಚೆನ್ನಾಗಿದೆ ಎನ್ನಿಸುತ್ತದೆ. ಈಗ ಪ್ರಯಾಣಿಸಿನೋಡಿ...
ಧನ್ಯವಾದಗಳು.

shivu.k said...

ಸುನಾಥ್ ಸರ್,
ರೈಲಿನಲ್ಲಿ ಕುಳಿತಾಗ ಪುಸ್ತಕ ಓದಲಾಗಲಿಲ್ಲ. ಅದಕ್ಕೆ ಕಾರಣಗಳನ್ನು ಅಲೋಚಿಸಿದಾಗ ಈ ಲೇಖನ ಮೂಡಿಬಂತು. ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಗಿರಿಜಕ್ಕ,
ತುಂಬಾ ಅಪರೂಪವಾಗಿಬಿಟ್ಟಿರಿ ಬ್ಲಾಗಿಗೆ...ವೇಗದ ರೈಲುಗಳಿಗಿಂತ ಪ್ಯಾಸಿಂಜರ್ ರೈಲಿನ ಮಜವೇ ಬೇರೆ..ನೀವು ರೈಲು ಪ್ರಯಾಣ ಇಷ್ಟಪಡುವುದಿಲ್ಲ..ನಾನು ಬಸ್ ಪ್ರಯಾಣ ಇಷ್ಟಪಡುವುದಿಲ್ಲ...
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.

shivu.k said...

ಚಂದ್ರು,
ನನ್ನ ಬ್ಲಾಗಿಗೆ ಸ್ವಾಗತ. ನೀವು ರೈಲಿನಲ್ಲಿ ಪ್ರಯಾಣಿಸುವಾಗ ಆದ ಅನುಭವಗಳನ್ನೆಲ್ಲಾ ವಿವರವಾಗಿ ಬರೆದಿದ್ದೀರಿ. ನಿಮ್ಮ ಮಾತಿನಂತೆ ಹತ್ತಾರು ನಿಲ್ದಾಣಗಳಲ್ಲಿ ಸಿಗುವ ತಿಂಡಿ ತಿನಿಸುಗಳು, ಬದಲಾಗುವ ಭಾಷಾ ಶೈಲಿ, ಸಂಸ್ಕಾರ ಇದನೆಲ್ಲಾ ನೋಡಲು ಪ್ಯಾಸಿಂಜರ್ ರೈಲು ಪ್ರಯಾಣವೇ ಒಳ್ಳೆಯದು ಅಲ್ಲವೇ...ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುಗುಣಕ್ಕ,
ನಾನು ಕಳೆದ ಎರಡು ತಿಂಗಳಿಂದ ಹೇಮಾಶ್ರಿ ಜೊತೆ ವಾಕಿಂಗ್ -ಶಾಪಿಂಗ್, ಸಿನಿಮಾ ಇತ್ಯಾದಿ ವಿಚಾರಗಳಿಗಾಗಿ ಸಮಯ ಹೊಂದಿಸಲಾಗಿಲ್ಲ. ಈಗ ಸ್ವಲ್ಪ ಬಿಡುವಾಗಿದೆ. ಅದಕ್ಕಾಗಿ ಮೊದಲು ವಾಕಿಂಗ್ ಶುರುಮಾಡಿದ್ದೇವೆ.
ನೀವು ಒಮ್ಮೆ ಆ ರೈಲಿನಲ್ಲಿ ಪ್ರಯಾಣಿಸಿ. ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಸೀತಾರಾಂ ಸರ್,

ಎಲ್ಲವೂ ಹೊರಗಿನಿಂದ ಮೊದಲು ಚೆನ್ನಾಗಿಯೇ ಕಾಣುತ್ತವೆ ಅಲ್ಲವೇ...ಒಳ ಹೊಕ್ಕಾಗಲೇ ಅದರ ಬಂಡವಾಳ ಬಯಲಿಗೆ ಬರುವುದು. ನನ್ನ ಅನುಭವವೇ ನಿಮಗೂ ಆಗಿರುವುದು ನಮ್ಮ ಭಾರತೀಯ ರೈಲ್ವೆಯ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಮತ್ತೆ ಲೇಖನವನ್ನು ಒಂದು ಅದ್ಬುತ ಲಲಿತ ಪ್ರಭಂದವೆಂದು ಮೆಚ್ಚಿದ್ದೀರಿ. ಇಂಥ ಮಾತುಗಳು ನನಗೆ ಮತ್ತಷ್ಟು ಹೊಸತನ್ನು ಹುಡುಕಲು ಮತ್ತು ಬರೆಯಲು ಸ್ಫೂರ್ತಿ ನೀಡುತ್ತವೆ.ಧನ್ಯವಾದಗಳು.

shivu.k said...

ಗುರು,
ನೀವು ರೈಲಿನಲ್ಲಿ ಪ್ರಯಾಣಿಸುವಾಗ ಸುಮ್ಮನೇ ಕುಳಿತಿರಬೇಕು. ಅದಕ್ಕೆ ಕಂಪರ್ಟ್ ಅಲ್ಲವೇ..ಆದ್ರೆ ನಾನು ಆ ರೀತಿ ಕೂರುವವನಲ್ಲ. ಅದರ ಪರಿಣಾಮ ಈ ಲೇಖನ ಏನಂತೀರಿ...
ಪ್ರತಿಕ್ರಿಯೆಗೆ ಧನ್ಯವಾದಗಳು.

ವನಿತಾ / Vanitha said...

:)

ಸಾಗರದಾಚೆಯ ಇಂಚರ said...

ಸರ್
೨ ವರುಷದ ಹಿಂದೆ ವಿಶ್ವದ ವೇಗದ ರೈಲುಗಳಲ್ಲಿ ಒಂದಾದ ಸ್ಪೇನ್ ನ ರೈಲಿನಲ್ಲಿ ಪ್ರಯಾಣ ಮಾಡಿದ್ದೆ. ಘಂಟೆಗೆ ೩೫೦ ಕಿ ಮಿ ವೇಗದಲ್ಲಿ ಸಂಚರಿಸುವ ರೈಲು
ಜ್ಯರಗೋಜ ದಿಂದ ಮಾಡ್ರಿಡ್ ಗೆ ಕೇವಲ ಒಂದು ಘಂಟೆ ೨೦ ನಿಮಿಷ ತೆಗೆದುಕೊಂಡಿತು. ಅದೆರದ ನಡುವಿನ ದೊರ್ರ ಸುಮಾರು ೪೦೦ ಕಿ ಮಿ ಎಂಬ ನೆನಪು.
ನಿಜಕ್ಕೂ ವೇಗದ ರೈಲಿನ ಮಜಾ ಅಲ್ಲಿ ನೋಡಿದಾಗ ಗೊತ್ತಾಯಿತು

ಆದರೆ ನೀವು ಹೇಳಿದಂತೆ ಭಾರತದ ಪ್ಯಾಸ್ಸೇನ್ಜರ್ ರೈಲಿನ ಮಜಾ, ಎಲ್ಲಿಯೂ ಸಿಗದು

balasubramanya said...

ಶಿವೂ ಸರ್ ಲೇಖನ ಚೆನ್ನಾಗಿದೆ. ಭಾರತೀಯ ರೈಲಿನ ಅನುಭವಗಳೇ ಹಾಗೆ,ನಮಗೆ ನಾವರಿಯದ ಪ್ರಪಂಚ ದರ್ಶನ ಮಾಡಿಸುತ್ತವೆ.ನಿಮ್ಮ ಅನುಭವ ಸುಂದರವಾಗಿ ಮೂಡಿಬಂದಿದೆ.ಗುಡ್ ಗುಡ್ ಗುಡ್

Badarinath Palavalli said...

ವೇಗದ ರೈಲನ್ನು ಸರಿಯಾಗಿ ಝಾಡಿಸಿದ ಬರಹ.

ನನ್ನ ಬ್ಲಾಗಿಗೂ ಸ್ವಾಗತ.

dinesh maneer said...

Tumba chennagide lahari, nimma anubhavagalannu nodidare naavu omme hogi nyja chitranavannu noDona anisuththide
Dinesh Maneer
http://dineshhegde.wordpress.com/

Ashok.V.Shetty, Kodlady said...

ಶಿವು ಸರ್,
ರೈಲು ಪ್ರಯಾಣದ ನಿಮ್ಮ ಅನುಭವ ಚೆನ್ನಾಗಿದೆ....ನಮ್ಮ ದೇಶದ ರೈಲು ಪ್ರಯಾಣ ಇದೇ ತರ ಅಲ್ಲವೇ??? ಸುಂದರ ಲೇಖನ....

ನನ್ನ ಬ್ಲಾಗ್ ಗೂ ಬನ್ನಿ...

Vani Satish said...

Ha.. Ha... Enjoyed :) Very nice .. Pls keep writing :)

Unknown said...

Super sir..

shivu.k said...

ವನಿತಾ,
ನಿಮ್ಮ ಪ್ರತಿಕ್ರಿಯೆಯ ಚಿಹ್ನೆಯನ್ನು ಏನೆಂದು ಅರ್ಥಮಾಡಿಕೊಳ್ಳಲಿ..

shivu.k said...

ಗುರುಮೂರ್ತಿ ಹೆಗಡೆ ಸರ್,
ನೀವು ಹೇಳಿದ ವಿದೇಶಿ ರೈಲಿನ ಅನುಭವದಿಂದಾಗಿ ನನಗೆ ಅಂಥ ರೈಲುಗಳಲ್ಲಿ ಪ್ರಯಾಣಿಸುವ ಆಸೆಯಿದೆ.
ಮತ್ತೆ ನೀವು ಹಾಯ್ ಬೆಂಗಳೂರಿನಲ್ಲಿ ಅಮ್ಮ ಸಿಕ್ಕಿದ್ಲು ಬಗ್ಗೆ ಬರೆದಿದ್ದು ಓದಿದೆ. ತುಂಬಾ ಚೆನ್ನಾಗಿದೆ. ಹಾಯ್ ಬೆಂಗಳೂರು ಕಛೇರಿಗೆ ಹೋದಾಗ ನಿಮ್ಮ ಲೇಖನ ಮತ್ತು ನಿಮ್ಮ ಬಗ್ಗೆ ಹೇಳಿದಾಗ "ಎಲ್ಲಾ ಕಡೆಯೂ ನಿಮ್ಮ ಗೆಳೆಯರು ಇದ್ದಾರಲ್ರಿ" ಅಂತ ಹೇಳಿ ತುಂಬಾ ಖುಷಿಪಟ್ಟರು.
ಧನ್ಯವಾದಗಳು.

shivu.k said...

ಬಾಲು ಸರ್,
ನನ್ನ ರೈಲು ಪ್ರಯಾಣದ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಬದ್ರಿನಾಥ್ ಸರ್,
ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ದಿನೇಶ್,
ನನ್ನ ಲೇಖನದ ಲಹರಿ ನಿಮಗಿಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ನೀವು ಒಮ್ಮೆ ಪ್ರಯಾಣಿಸಿ. ನಿಮ್ಮ ಅನುಭವವನ್ನು ಹಂಚಿಕೊಳ್ಳಿ..
ಧನ್ಯವಾದಗಳು.

shivu.k said...

ಆಶೋಕ್ ಕೊಡಲಾಡಿ ಸರ್,
ನನ್ನ ರೈಲಿನ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ವಾಣಿಯವರೆ,
ಲೇಖನವನ್ನು ಓದಿ ಸಂತೋಷಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ರವಿಕಾಂತ್ ಗೋರೆ ಸರ್,
ಥ್ಯಾಂಕ್ಸ್.