Sunday, September 12, 2010

ಕೊರಿಯನ್ ನಾಟಕ "ಟೇಲ್ ಅಪ್ ಹಾರುಕ್"

         ಅವತ್ತು ದಿನಾಂಕ ೨೭-೭-೨೦೧೦.  ಸಂಜೆ ೬-೩೦ಕ್ಕೆ ನನ್ನ ಮನೆಯಿಂದ ಹೊರಟು  ೭-೧೫ಕ್ಕೆ ಮೊದಲು ನಾನು ರಂಗಶಂಕರ ತಲುಪಬೇಕಿತ್ತು. ಹೊರಟ ಸ್ವಲ್ಪ ಹೊತ್ತಿಗೆ ಸಣ್ಣಗೆ ಮಳೆ ಶುರುವಾಗಿತ್ತು. ಎಲ್ಲಾದರೂ ನಿಂತರೆ ಸಮಯಕ್ಕೆ ಸರಿಯಾಗಿ ತಲುಪಲಾಗುವುದಿಲ್ಲವಲ್ಲ ಅಂದು ಕೊಂಡು ಹಾಗೆ ನಿದಾನವಾಗಿ ಹೋಗುತ್ತಿದ್ದೆ.  ಮಳೆಯಿಂದ ರಕ್ಷಣೆಗಾಗಿ ಜರ್ಕಿನ್ ಹಾಕಿಕೊಂಡಿದ್ದೆನಾದರೂ  ನನ್ನ ಜೊತೆಯಿದ್ದ ಕ್ಯಾಮೆರಾ ಬ್ಯಾಗ್ ಬಗ್ಗೆ ಭಯವಿತ್ತು. ಯಾಕೆಂದರೆ ಅದರಲ್ಲಿ ದೊಡ್ಡಲೆನ್ಸ್ ಕೂಡ ಇತ್ತು. ಅದೆಲ್ಲಾದರೂ ಮಳೆಯಲ್ಲಿ ನೆನದುಬಿಟ್ಟರೆ ಎನ್ನುವ ಭಯ. ಅದಕ್ಕೆ ಒಂದು ಕಡೆ ನಿಲ್ಲಿಸಿ ಇಡೀ ಕ್ಯಾಮೆರಾ ಬ್ಯಾಗಿಗೆ ಒಂದು ದೊಡ್ದದಾದ ಪ್ಲಾಸ್ಟಿಕ್ ಕವರ್ ಸುತ್ತಿದ ಮೇಲೆ ನಿದಾನವಾಗಿ ಮಳೆಯಲ್ಲೇ ರಂಗಶಂಕರದ ಕಡೆಗೆ ನನ್ನ ಸ್ಕೂಟಿಯಲ್ಲಿ ಹೊರಟೆ.  ಸಂಜೆಯ ಟ್ರಾಫಿಕ್ ಜಾಮ್, ಕೊಚ್ಚೆ ನೀರು, ಅಗೆದ ರಸ್ತೆಗಳಂತ ಅಡೆತಡೆಗಳನ್ನು ದಾಟಿ ಆಗುಹೀಗೂ ರಂಗಶಂಕರವನ್ನು ತಲುಪಿದಾಗ ೭-೨೦ ಆಗಿಬಿಟ್ಟಿತ್ತು.  ಅಲ್ಲಂತೂ ಜನವೋ ಜನ. ಟಿಕೆಟ್ ಕೌಂಟರ್ ಬಳಿ ಹೋಗಿ ಟಿಕೆಟ್ ಕೇಳಿದರೆ ಮೊದಲೇ ಆನ್‍ಲೈನ್ ಬುಕ್ ಮಾಡಿದ್ದೀರಾ? ಅನ್ನುವ ಪ್ರಶ್ನೆಬಂತು ಕೌಂಟರಿನೊಳಗಿಂದ. ಇಲ್ಲ ಅಂದೆ. ಸರಿ ಎಷ್ಟು ಬೇಕು ಅಂದರು. ಒಂದು ಟಿಕೆಟ್ ಅಂದೆ. ಎಲ್ಲ ಖಾಲಿಯಾಗಿ ನಾಲ್ಕು ಮಾತ್ರ ಉಳಿದಿವೆ. ನಿಮ್ಮ ಅದೃಷ್ಟ ಚೆನ್ನಾಗಿದೆ ತಗೊಳ್ಳಿ ಇನ್ನೂರು ರೂಪಾಯಿ ಕೊಡಿ" ಅಂದರು. ನಾನು ಹಣಕೊಟ್ಟು ಟಿಕೆಟ್ ಪಡೆದುಕೊಂಡು ಒಳಗೆ ಹೋಗಲು ಕ್ಯೂ ನಿಂತೆ.  ಅಲ್ಲಂತೂ ದೊಡ್ಡವರ ಜೊತೆಗೆ ಮಕ್ಕಳೂ ಅಷ್ಟೇ ಪ್ರಮಾಣದಲ್ಲಿದ್ದರು. ಅನೇಕ ಸಿನಿಮಾ ನಿರ್ಧೇಶಕರು, ನಟರು, ಸೆಲಬ್ರಟಿಗಳು ಕಾಣಿಸಿದರು. ಅವರ ಕಡೆಗೆ ನನ್ನ ಗಮನ ಹೋಗಲಿಲ್ಲ. ಏಕೆಂದರೆ ಅದು ರಂಗಶಂಕರದಲ್ಲಿ ವಿಶೇಷವೇನು ಅಲ್ಲವಲ್ಲ. ನನ್ನ ಗಮನವಿದ್ದಿದ್ದು ಮಕ್ಕಳ ಕಡೆಗೆ. ಏಕೆಂದರೆ ಒಂದು ನಾಟಕ ನೋಡಲು ಇಷ್ಟೊಂದು ಮಕ್ಕಳು ಬಂದಿರುವುದು ನೋಡಿ ನನಗೆ ಆಶ್ಚರ್ಯವಾಗಿತ್ತು.  ತಡಮಾಡದೆ ಒಳಗೆ ನನಗೆ ಬೇಕಾದ ಜಾಗ ಹಿಡಿಯಬೇಕು ಅಂತ ಹೇಗೋ ಒಳಗೋಗಿ ಕುಳಿತರೆ ರಂಗಶಂಕರ ತುಂಬಿಹೋಗಿತ್ತು. 


 ನನ್ನಲ್ಲಿದ್ದ ದೊಡ್ಡ ಕ್ಯಾಮೆರಾ ಬ್ಯಾಗು ಮತ್ತು ಅದರಲ್ಲಿದ್ದ ಲೆನ್ಸುಗಳನ್ನು ನೋಡಿ "ನೀವು ಪ್ರೆಸ್ಸಿನಿಂದ ಬಂದಿರುವವರಾ" ಅಂತ ಒಬ್ಬ ವ್ಯವಸ್ಥಾಪಕಿ ಕೇಳಿದರು.  ಇಲ್ಲವೆಂದೆ.  ಹಾಗಾದರೆ ಈ ಕ್ಯಾಮೆರಾ ಇದೆಲ್ಲಾ ಏನು ಅಂತ ಕೇಳಿದರು.  ನನಗೆ ಈ ನಾಟಕವನ್ನು ಫೋಟೊಗ್ರಫಿ ಮಾಡಬೇಕು ಅಂತ ಆಸೆ ಅದಕ್ಕೆ ಕ್ಯಾಮೆರ ತಂದಿದ್ದೇನೆ. ಅಂದೆ. "ಓಹ್! ಇಲ್ಲಿ ಕ್ಯಾಮೆರಾ ಅನುಮತಿಯಿಲ್ಲ. ಏಕೆಂದರೆ ನೀವು ಫೋಟೊ ತೆಗೆಯುವಾಗ ಬರುವ ಬೆಳಕಿನಿಂದಾಗಿ ಎಲ್ಲರಿಗೂ ಡಿಸ್ಟರ್ಬ್ ಆಗುತ್ತದೆ.  ಸಾರಿ" ಅಂದಳು ಆಕೆ.

 "ನೀವಂದುಕೊಂಡಂತೆ ನಾನು ಪ್ಲಾಶ್ ಉಪಯೋಗಿಸುವುದಿಲ್ಲವಾದ್ದರಿಂದ ಯಾರಿಗೂ ತೊಂದರೆಯಾಗುವುದಿಲ್ಲವಲ್ಲ" ಅಂದೆ.

 ಆಕೆಗೆ ಅದನ್ನೆಲ್ಲಾ ಯೋಚಿಸುವ ವ್ಯವಧಾನವಿರಲಿಲ್ಲ. 

 "ಅದೆಲ್ಲ ನನಗೆ ಗೊತ್ತಿಲ್ಲ ಸರ್. ನೀವು ಫೋಟೊ ತೆಗೆಯಬಾರದು  ಕ್ಯಾಮೆರಾ ಹೊರಗಿಟ್ಟು ಬಿಡಿ" ಅಂದಳು.

 "ಹೊರಗೆ ಅಂದರೆ ಎಲ್ಲಿಡಲಿ. ಒಂದುವರೆ ಲಕ್ಷದ ಕ್ಯಾಮೆರ ಮತ್ತು ಲೆನ್ಸನ್ನು ನಾನು ಹೊರಗೆ ಎಲ್ಲಿಡಲಿ, ಬೇಕಾದರೆ ನೀವು ಇಟ್ಟುಕೊಳ್ಳಿ  ನಾಟಕ ಮುಗಿದ ನಂತರ ನಿಮ್ಮ ಬಳಿಯಿಂದ ನಾನು ವಾಪಸ್ ಪಡೆಯುತ್ತೇನೆ"  ಎಂದೆ.

 ತಕ್ಷಣ ನನ್ನ ಮಾತಿಗೆ ಆಕೆಗೆ ದಿಗಿಲಾಗಿ " ಬೇಡ ಸರ್, ನೀವೇ ಇಟ್ಟುಕೊಳ್ಳಿ. ಆದ್ರೆ ಫೋಟೊ ತೆಗೆಯುವಂತಿಲ್ಲ.  ಅಂತ ಹೇಳಿ  ಆಕೆ ಬೇರೆಯವರನ್ನು ನೋಡಲು ಹೋಗಿಬಿಟ್ಟಳು. ಕೇಳಿದವರಿಗೆ ದೊಡ್ಡ ಜವಾಬ್ದಾರಿಯನ್ನು ಹೊರಿಸಿಬಿಟ್ಟಿರೆ ಅದರಿಂದ ಹೀಗೆ ತಪ್ಪಿಸಿಕೊಂಡು ನಮ್ಮ ಸಹವಾಸಕ್ಕೆ ಬರುವುದಿಲ್ಲವೆಂದುಕೊಂಡು ನಾನು ಮಾಡಿದ ತಂತ್ರ ಕೆಲಸಕ್ಕೆ ಬಂದಿತ್ತು.

 ನಾನು ಇಷ್ಟೆಲ್ಲಾ ಕಷ್ಟಪಟ್ಟು ಆ ನಾಟಕವನ್ನು ನೋಡಲೇಬೇಕು. ಸಾಧ್ಯವಾದರೆ ಫೋಟೊಗ್ರಫಿ ಮಾಡಲೇಬೇಕು ಅಂತ ಇಷ್ಟೆಲ್ಲಾ ಸಾಹಸ ಮಾಡಿದ ನಾಟಕದ ಹೆಸರು. "ಟೇಲ್ ಆಪ್ ಹಾರುಕ್" ’ ಎನ್ನುವ ಕೊರಿಯನ್ ಭಾಷೆಯ ನಾಟಕ.

"ಹಾರುಕನ ಕಥೆ" ನಾನು ನೋಡಿದ ಅತ್ಯುತ್ತಮ ನಾಟಕಗಳಲ್ಲಿ ಒಂದು.  ಭಾರತದಲ್ಲಿಯೇ ಮೊದಲ ಬಾರಿಗೆ ಕೊರಿಯ ದೇಶದ "ಟ್ಯುಡಾ" ನಾಟಕ ತಂಡ ಈ ನಾಟಕವನ್ನು ಪ್ರದರ್ಶಿಸಿತು.

 ಭಾರತದಲ್ಲಿಯೇ ಮೊದಲ ಬಾರಿಗೆ ಇದರ ಪ್ರಯೋಗವಾಗುತ್ತಿದೆಯೆಂದು ನಮ್ಮ ಅವಧಿ ಬ್ಲಾಗಿನಲ್ಲಿ ಪ್ರಕಟವಾದಾಗ ಹೋಗಲೇಬೇಕೆಂದು ದಿನಾಂಕವನ್ನು ಗೊತ್ತುಪಡಿಸಿಕೊಂಡಿದ್ದೆ.

 ಈ ನಾಟಕದ ಕೆಲವು ವಿಶೇಷಗಳು ಇವು.
 
 ಉತ್ತಮ ನಾಟಕ, ಉತ್ತಮ ರಂಗಭೂಮಿಕತೆ, ಕಲೆಗಾಗಿ ೨೦೦೨ರಲ್ಲಿ ಸಿಯೋಲ್‍ನಲ್ಲಿ ಬಹುಮಾನವನ್ನು ಪಡೆದಿತ್ತು. ಅತ್ಯುತ್ತಮ ರಂಗಸಜ್ಜಿಕೆ, ಸ್ಪೂರ್ತಿಯುತ ಬೆಳಕಿನ ವಿನ್ಯಾಸ, ಹೊಸಪ್ರಯೋಗ ವಿಚಾರವಾಗಿ ವಿಮರ್ಶಕರಿಂದ ಪ್ರಶಂಸೆ ಪಡೆದಿದೆ.

 ನಾಟಕ ಬರೆದು ನಿರ್ದೇಶಿಸಿದವರು ಬಾ ಯೆ ಸೂಪ್. ಪ್ರದರ್ಶನ ನೀಡಿದ್ದು ಕೊರಿಯದೇಶದ ಟ್ಯುಡಾ ತಂಡ. ಕೊರಿಯನ್ ಸಾಂಪ್ರದಾಯಿಕ ಶೈಲಿಯಲ್ಲಿ ಕಾಗದದಿಂದ ಮಾಡಿದ ಪಾಪೆಟ್‍ಗಳು[ಗೊಂಬೆಗಳು], ವಿಭಿನ್ನವೆನಿಸುವ ಮುಖವಾಡಗಳು, ಬಳಸಿ ಬಿಸಾಡುವ ಬಾಟಲಿಗಳು, ಕೋಲುಗಳು, ಸೆಲ್ಲೋ ಟೇಪುಗಳು, ಒಡೆದ ಮಡಿಕೆಗಳು, ಕಸದಬುಟ್ಟಿಯಲ್ಲಿನ ಷ್ಟ್ರಾಗಳು, ಪೇಪರುಗಳು...  ಇಂಥ ಪರಿಸರ ಪ್ರೇಮಿವಸ್ತುಗಳನ್ನು ಬಳಸಿಕೊಂಡೇ ತಮ್ಮ ನಾಟಕಕ್ಕೆ ಅತ್ಯುತ್ತಮ ಹಿನ್ನೆಲೆ ಸಂಗೀತವನ್ನು ನೀಡಿದ ಹೆಗ್ಗಳಿಕೆ ಈ ತಂಡದ್ದು. ನಾಟಕವನ್ನು ನೋಡುತ್ತಿದ್ದರೆ ಎಲ್ಲೂ ಅವರು ಇಂಥ ವಸ್ತುಗಳನ್ನು ಬಳಸಿ ಸಂಗೀತ ನೀಡುತ್ತಿದ್ದಾರೆ ಎನ್ನುವ ಭಾವನೇ ಬರದಂತ ಮಟ್ಟಕ್ಕೆ ನಿಮ್ಮನ್ನು ತನ್ಮಯಗೊಳಿಸುವ ಹಿನ್ನೆಲೆ ಸಂಗೀತ ನೀಡುತ್ತಾ ನಾವು ನಾಟಕ ನೋಡುತ್ತಾ ಮೈಮರೆಯುವಂತೆ ಮಾಡುತ್ತಾರೆ.

 ೨೦೦೨ರಲ್ಲಿ ಪ್ರಾರಂಭವಾದ ಈ ನಾಟಕ ಸಿಯೋಲ್ ಮಕ್ಕಳ ರಂಗಮಂದಿರದಲ್ಲಿ ಪ್ರದರ್ಶಿಸಿ ಅತ್ಯುತ್ತಮ ರಂಗಭೂಮಿಪ್ರಯೋಗ ಬಹುಮಾನ ಸೇರಿದಂತೆ ನಾಲ್ಕು ಅವಾರ್ಡುಗಳನ್ನು ತನ್ನ ಮುಡಿಗೇರಿಸಿಕೊಂಡಿತು.  ಮುಂದೆ ಇದೇ ನಾಟಕವನ್ನು ಟ್ಯುಡಾ ತಂಡವು ಜಪಾನ್, ಚೈನ, ಸಿಂಗಪೂರ್, ಟರ್ಕಿ, ಆಷ್ಟ್ರೇಲಿಯ, ರಷ್ಯಾ, ಹಂಗರಿ, ಆಷ್ಟ್ರೀಯ ಮುಂತಾದ ದೇಶಗಳ ಅಹ್ವಾನದ ಮೇರೆಗೆ ಅಲ್ಲೆಲ್ಲಾ ಹೋಗಿ ಪ್ರದರ್ಶಿಸಿತು. ೨೦೦೯ರಲ್ಲಿ ರಷ್ಯಾದ ಕಿಂಗ್ ಪೆಷ್ಟಿವಲ್ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ ರಚನೆ ಮತ್ತು ಯುವ ವಿಮರ್ಶ ಬಹುಮಾನವನ್ನು ಒಟ್ಟಿಗೆ ಪಡೆದಿದ್ದು ಈ ತಂಡದ ಹೆಗ್ಗಳಿಕೆಯೇ ಸರಿ.

 
 ಕೊರಿಯಾದ ಈ ಒಂದೇ ಕಥೆ, ನೂರೆಂಟು ಕಥೆಗಳನ್ನು ಹೇಳುತ್ತದೆ..
 ಅದು ಹೀಗಿದೆ-ಒಂದೂರಿನಲ್ಲಿ ಒಬ್ಬ ಮುದುಕ-ಮುದುಕಿ ಬೆಟ್ಟದಲ್ಲಿ ವಾಸಮಾಡುತ್ತಿದ್ದರು.ಅವರಿಗೆ ಮಕ್ಕಳು ಇರಲಿಲ್ಲ.  ಒಂದು ದಿನ ಮಾಂತ್ರಿಕ ಮರವೊಂದು ಅವರಿಗೆ "ಹಾರುಕ್" ಎನ್ನುವ ಪುಟ್ಟ ಮಗುವನ್ನು ನೀಡಿತು. "ಆ ಮಗುವಿಗೆ ಇಬ್ಬನಿಯನ್ನು ಬಿಟ್ಟು ಮಾತ್ರ ಕೊಡಿ. ಬೇರೇನೂ ಕೊಡಬೇಡಿ" ಎಂದು ಆ ಮರ ಎಚ್ಚರಿಕೆಯನ್ನು ಕೊಟ್ಟಿತ್ತು.  ಅಜ್ಜ ಅಜ್ಜಿಗೆ ತುಂಬ ಖುಷಿ.  ಪುಟ್ಟ ಹಾರುಕೆ ಜತೆಗೆ ಸಂತೋಷದಿಂದ ಕಾಲ ಕಳೆದರು. ಹಾರುಕ್ ಬೆಳೆದು ದೊಡ್ಡವನಾದ. ಅದೊಂದು ದಿನ ತನಗೆ ತಿನ್ನಲು ಅನ್ನ ಕೊಡಿ ಎಂದ. ಖೂಷಿಯಿಂದ ಅನ್ನವನ್ನು ಕೊಟ್ಟರು. ಹಾರುಕ್ ತಿನ್ನುತ್ತಾ ಬೆಳೆಯತೊಡಗಿದ. ದೊಡ್ಡದಾಗಿ ಬೆಳೆಯುತ್ತಿದ್ದಂತೆಲ್ಲ, ಕೊನೆಗೆ ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನತೊಡಗಿದ.

 ಅಜ್ಜ ಅಜ್ಜಿ ಕೆಲ ದಿನಗಳ ಮಟ್ಟಿಗೆ ಎಲ್ಲೋ ಹೋಗಿದ್ದರು. ಹಾರುಕ್ ಎದುರಿಗೆ ಸಿಕ್ಕಿದ ಮನುಷ್ಯರನ್ನೂ ತಿನ್ನತೊಡಗಿದ. ಏನು ಸಿಗುತ್ತದೋ ಅದನ್ನು ತಿನ್ನುವುದು ಅವನ ಅಭ್ಯಾಸವಾಯಿತು.  ಅಜ್ಜ-ಅಜ್ಜಿ ಬಂದು ನೋಡುತ್ತಾರೆ-ಹಾರುಕ್ ತಿಂದು ತಿಂದು ಬೆಟ್ಟದಂತೆ ಬೆಳೆದಿದ್ದಾನೆ. ಹಸಿವೆ ತಾಳಲಾಗುತ್ತಿಲ್ಲ. ತಿನ್ನಲು ಏನಾದರೂ ಕೊಡಿ ಎಂದು ಕೇಳುತ್ತಿದ್ದಾನೆ! ಕೊನೆಗೆ ಆ ವೃದ್ಧ ದಂಪತಿ ಪ್ರೀತಿಯ ಮಗನಿಗೆ ತಮ್ಮನ್ನೇ ತಾವು ಆಹಾರವಾಗಿಸುತ್ತಾರೆ. 

ಈ ಕೊರಿಯನ್ ಭಾಷೆಯ ನಾಟಕ ನಡೆಯುವಾಗ ಎರಡು ಬದಿಯಲ್ಲಿ ನಾಟಕದ ಮಾತುಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ಒಂದು ರೀತಿಯ ಸಬ್‍ಟೈಟಲ್ ರೀತಿ ಪುಟ್ಟ ಕಪ್ಪು ಪರದೆಯ ಮೇಲೆ ಕೊಡುತ್ತಿರುತ್ತಾರೆ. ಅದನ್ನು ನೋಡಿಕೊಂಡು ನಾಟಕವನ್ನು ಅರ್ಥಮಾಡಿಕೊಳ್ಳಬೇಕು.
                      
 ಅತ್ಯುತ್ತಮ ಬೆಳಕಿನ ಸಂಯೋಜನೆ ಈ ನಾಟಕವನ್ನು ಫೋಟೊಗ್ರಫಿ ಮಾಡುವುದು ನಿಶಿದ್ಧ ಅಂತ ವ್ಯವಸ್ಥಾಪಕಿ ಹೇಳಿದ್ದರೂ  ಆ ಕತ್ತಲಲ್ಲಿ ನನ್ನ ಕ್ಯಾಮೆರದಲ್ಲಿ ಕೆಲವು ಸೆಟ್ಟಿಂಗುಗಳನ್ನು ಮಾಡಿಕೊಂಡು ನಿದಾನವಾಗಿ ಇಡೀ ನಾಟಕದ ಚಿತ್ರಗಳನ್ನು ಕ್ಲಿಕ್ಕಿಸಿದ್ದೆ. ನಾಟಕದ ವ್ಯವಸ್ಥಾಪಕರಿರಲಿ,  ನನ್ನ ಅಕ್ಕಪಕ್ಕ ಕುಳಿತವರಿಗೂ ನಾನು ಫೋಟೊ ತೆಗೆಯುತ್ತಿರುವುದು ಗೊತ್ತಾಗಿರಲಿಲ್ಲ. ನಾನು ಬರೆದ ಈ ಚಿತ್ರಸಹಿತ ಲೇಖನ ಮೂರು ವಾರಗಳ ಹಿಂದೆ ಸುಧಾ ವಾರಪತ್ರಿಕೆಯಲ್ಲಿ[ದಿನಾಂಕ:೨೬-೮-೨೦೧೦]ಪ್ರಕಟವಾಗಿತ್ತು. ಅದನ್ನು ಮತ್ತಷ್ಟು ಚಿತ್ರಗಳೊಂದಿಗೆ ಇಲ್ಲಿ ಕೊಡುತ್ತಿದ್ದೇನೆ. ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. 
      
  ಕೊರಿಯನ್ ಸಾಂಪ್ರದಾಯಿಕ ಶೈಲಿಯಲ್ಲಿ ನಾಟಕ ಪ್ರಾರಂಭ

ಪ್ರಾರಂಭದಲ್ಲಿ  ಬಿಸಾಡುವ ವಸ್ತುಗಳನ್ನು ಉಪಯೋಗಿಸಿ ಹಿನ್ನೆಲೆ ಸಂಗೀತ ಕೊಡುತ್ತೇವೆ ಅನ್ನುವದರ ಪ್ರದರ್ಶನ
                              
                                
     ಒಡೆದ ಅರ್ಧ ಮಡಿಕೆಯಲ್ಲಿ ಹಿನ್ನೆಲೆ ಸಂಗೀತ.
                           
  ಮುಖ್ಯ ಹಿನ್ನೆಲೆ ಸಂಗೀತಕ್ಕೆ  ಖಾಲಿ ಬಾಟಲಿಗಳು, ಸೆಲ್ಲೋ ಟೇಪುಗಳು, ಹರಿದ ಪೇಪರುಗಳು,  ಹಣ್ಣಿನ ಸಿಪ್ಪೆಗಳು,  ಖಾಲಿ ಡಬ್ಬಗಳು, ಇನ್ನೂ ಏನೇನೋ...ಅವುಗಳಿಂದ ಹಿನ್ನೆಲೆ  ಸಂಗೀತ ಕೊಡುತ್ತಿರುವ ಪಾತ್ರಧಾರಿ.
                                              
                               ಒಂದೂರಿನಲ್ಲಿ ಒಂದು ಅಜ್ಜಿ.
           
                            ಆಕೆಯ ಜತೆಗೊಬ್ಬ ಅಜ್ಜ
                       

                        ಇಬ್ಬರೂ..........
                     


              ಹೀಗೆ  ಸಂತೋಷದಿಂದ ಇದ್ದರು.
                                 

     ಅವರಿಗೆ ಮಾಂತ್ರಿಕ ಮರದಿಂದ "ಹಾರುಕ್" ಸಿಕ್ಕಿದ್ದು ಹೀಗೆ.
                             
       ಅದರ ಸಂತೋಷಕ್ಕಾಗಿ ಹೀಗೆ ಮಕ್ಕಳಂತೆ ನಲಿದರು.
                                               
     ಅದರ  ಜೊತೆಗೂಡಿ ಆಡಿದರು.
                                                      
       ಹಾರುಕ್" ಹೀಗೆ ಮಲಗಿರುವಾಗ.......
                                             
     ಅನಿರೀಕ್ಷತವಾಗಿ ದೇಶಾಂತರ ಹೋಗುತ್ತಿರುವ ವಯಸ್ಸಾದ ಅಜ್ಜ ಮತ್ತು ಅಜ್ಜಿ.
                                        

ಹಾರುಕ್ ಬೆಳೆಯುವ ಪರಿಯನ್ನು ನೋಡಿ ಅಚ್ಚರಿಪಡುತ್ತಿರುವ ಸುತ್ತಮುತ್ತಲ ಪರಿಸರಗಳು.
                           
 ಅದು ಬೆಳೆದು ಹೀಗೆ ಹಸಿವಿನಿಂದ ಎಲ್ಲವನ್ನು ತಿಂದು ಹಾಕಿ ಕೊನೆಗೆ ಕಣ್ಣಿಗೆ ಕಂಡ ಮನುಷ್ಯರನ್ನು ಬೇಟೆಯಾಡುತ್ತಿದ್ದುದ್ದು ಹೀಗೆ.
                               
      
ಪರ್ವತ ಗಾತ್ರದಲ್ಲಿ ಬೆಳೆದಿದ್ದ ಹಾರುಕ್‍ಗೆ ಕಣ್ಣಿಗೆ ದೇಶಾಂತರ ಹೋಗಿಬಂದ ಅಜ್ಜ-ಅಜ್ಜಿ ಕಂಡುಬಂದಿದ್ದು ಹೀಗೆ.
                     

   ಕೊನೆಯಲ್ಲ ಹಸಿವನ್ನು ತಡೆಯಲಾಗದೆ ತನ್ನನ್ನು ಬೆಳೆಸಿದ ಅಜ್ಜ-ಅಜ್ಜಿಯನ್ನು ತಿನ್ನಲು ಬಾಯಿ ಹಾಕುತ್ತಿರುವುದು.
                                      

ಕೊನೆಗೆ ಪರ್ವತಗಳಲ್ಲಿ ಒಂದಾಗುತ್ತಿರುವ "ಹಾರುಕ್"
                           

 ಚಿತ್ರಗಳು ಮತ್ತು ಲೇಖನ.
 ಶಿವು.ಕೆ

45 comments:

Prasad Shetty said...

ಶಿವು, ಚಿತ್ರ ಮತ್ತು ಬರಹ ಎರಡು ಚೆನ್ನಾಗಿದೆ. ಈ ರೀತಿಯ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ತಿಳಿಸುತ್ತಿರಿ :)

shivu.k said...

ಪ್ರಸಾದ್,

ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು. ಖಂಡಿತ ನಿಮ್ಮ ಅನಿಸಿಕೆಯಂತೆ ಪ್ರಯತ್ನಿಸುತ್ತೇನೆ. ಮತ್ತೆ ಮುಂದಿನ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಫೋಟೊಗ್ರಫಿ ವಿಶ್ವಕಪ್ ಬಗ್ಗೆ ಚಿತ್ರ ಲೇಖನವನ್ನು ಹಾಕುತ್ತೇನೆ. ನೋಡಲು ಮರೆಯದಿರಿ.

PARAANJAPE K.N. said...

ಶಿವೂ, ಚೆನ್ನಾಗಿದೆ, ಸುಧಾ ದಲ್ಲಿ ನಾನು ಓದಿರಲಿಲ್ಲ. ನಾನು ಒಮ್ಮೆಯೂ ರ೦ಗಶ೦ಕರದ ಕಡೆ ಹೋಗಿಲ್ಲ, ನಿಮ್ಮ ಬರಹ ಓದಿದ ಮೇಲೆ ಹೋಗಬೇಕೆನಿಸಿದೆ, ಇನ್ನೊಮ್ಮೆ ನೀವು ಹೋಗುವಾಗ ಸಾಧ್ಯವಾದರೆ ನನಗೂ ತಿಳಿಸಿ

Guruprasad said...

ತುಂಬಾ ಚೆನ್ನಾಗಿ ಇದೆ,, ನಿಮ್ಮ ಇ ಲೇಖನ... ಕೊರಿಯನ್ ನಾಟಕವನ್ನು ಇಲ್ಲೇ ನೋಡಿದ ಅನುಭವ ಆಯಿತು......

shivu.k said...

ಪರಂಜಪೆ ಸರ್,
ಇದನ್ನು ಮೊದಲು ಅವಧಿಯಲ್ಲಿ ಹಾಕಿದ್ದಾಗ ನಾನು ದಿನಾಂಕವನ್ನು ಗೊತ್ತುಪಡಿಸಿಕೊಂಡಿದ್ದೆ. ಇದು ಮೊದಲಿಗೆ ಇಲ್ಲಿ ಒಂದು ದಿನ ನಡೆದು ಎರಡು ದಿನಗಳ ನಂತರ ಚೆನ್ನೆಯಲ್ಲಿ ಒಂದು ಷೋ ಆಯಿತು. ಆಷ್ಟೆ. ನಂತರ ಇನ್ನೆಲ್ಲೂ ಭಾರತದಲ್ಲಿ ಆಗಲಿಲ್ಲ. ಮತ್ತೆ ಅವರು ಬರುವವರೆಗೂ ನಾವು ಕಾಯಬೇಕಷ್ಟೆ. ಮುಂದಿನ ಭಾರಿ ಖಂಡಿತ ತಿಳಿಸುತ್ತೇನೆ.
ಧನ್ಯವಾದಗಳು.

sunaath said...

ಶಿವು,
ಈ ಸಲದ ನಿಮ್ಮ ಲೇಖನ ಅತ್ಯದ್ಭುತವಾಗಿದೆ. ನಾಟಕದ ಕತೆಯನ್ನು ಸಂಗ್ರಹಿಸಿ ಚೆನ್ನಾಗಿ ತಿಳಿಸಿದ್ದೀರಿ. ಅಲ್ಲದೆ ಅತ್ಯುತ್ತಮ ಫೋಟೋ ಕೊಟ್ಟಿದ್ದೀರಿ. ಎಷ್ಟೆಲ್ಲ ತೊಂದರೆ ತೆಗೆದುಕೊಂಡು ಇವನ್ನು ಸಂಗ್ರಹಿಸಿದ್ದೀರಿ. ಇದೆಲ್ಲಕ್ಕಾಗಿ ನಿಮಗೆ ತುಂಬ ತುಂಬ ಧನ್ಯವಾದಗಳು.
(ಟಿಪ್ಪಣಿ: ಈ ತರಹದ ಕತೆಗಳು ಭಾರತೀಯ ಜಾನಪದದಲ್ಲಿಯೂ ಇವೆ. ಚಂದ್ರಶೇಖರ ಪಾಟೀಲರ ‘ಟಿಂಗರ ಬುಡ್ಡಣ್ಣ’ ಎನ್ನುವ ನಾಟಕ ಸುಮಾರಾಗಿ ಹೀಗೇ ಇದೆ. ಅದನ್ನು ಕಾರಂತರು ಪ್ರದರ್ಶಿಸಿದ್ದರು. ನಾನು ನೋಡಿಲ್ಲ.)

shivu.k said...

ಗುರು,

ನಾನು ಕೊಟ್ಟ ವಿವರ ಕೇವಲ ಒಂದು ಪರಸೆಂಟ್ ಅಷ್ಟೆ. ಪೂರ್ತಿ ನಾಟಕದ ಅನುಭವವೇ ಬೇರೆ. ಆದರೂ ನೀವು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

balasubramanya said...

ನಿಮ್ಮ ಲೇಖನಕ್ಕೆ ಮೊದಲು ನಿಮಗೆ ಥ್ಯಾಂಕ್ಸ್, ಉತ್ತಮ ಸನ್ನಿವೇಶಗಳ ಚಿತ್ರ ತೆಗೆದು ನಾಟಕದ ಸನ್ನಿವೇಶಗಳನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರ , ತುಂಬಾ ಖುಷಿಯಾಯಿತು . ನಾಟಕದಲ್ಲಿ ಬಳಸಿದ ವಸ್ತುಗಳ ಬಗ್ಗೆ ಹೇಳಿ ನಾಟಕದ ಹಿರಿಮೆಯನ್ನು ಸಾರಿದ್ದೀರಿ. ಬಹುಷಃ ರಂಗ ಶಂಕರದವರು ನಿಮ್ಮ ಈ ಲೇಖನ ಓದಿದರೆ ಮುಂಬರುವ ನಾಟಕಗಳ ಬಗ್ಗೆ ಇಂಥಹ ಲೇಖನ ಬರೆಯಲು ಕೋರಬಹುದು ಅನ್ನಿಸುತ್ತೆ. ಉತ್ತಮ ಲೇಖನಕ್ಕಾಗಿ ನಿಮಗೆ ಥ್ಯಾಂಕ್ಸ್.

ಮನಮುಕ್ತಾ said...

ಶಿವು ಅವರೆ,
ಉತ್ತಮ ಬರಹದ ಜೊತೆ ಒಳ್ಳೆಯ ಅಪರೂಪದ ಚಿತ್ರಗಳು..
ಧನ್ಯವಾದಗಳು.
ನಿಮ್ಮ ಲೇಖನಗಳು ಚೆನ್ನಾಗಿದ್ದು, ಅನೇಕ ಉತ್ತಮ ವಿಚಾರಗಳನ್ನು ತಿಳಿಸಿಕೊಡುತ್ತವೆ.ಮತ್ತೂ ಬರಹಗಳು ಬರುತ್ತಿರಲಿ.

umesh desai said...

ಶಿವು ನಾಟಕದ ಚಿತ್ರರೂಪ ತೋರಿಸಿದ್ದಕ್ಕೆ ವಂದನೆಗಳು.
ರಂಗಶಂಕರ ಬಹಳ ವಿಶಿಷ್ಟವಾದ ರಂಗಸ್ಥಳ ಅಲ್ಲಿ ಬೆಳಕಿನ ಸಂಯೋಜನೆ ಅದನ್ನು ಚಾಕಚಕ್ಯತೆಯಿಂದ ಸೆರೆಹಿಡಿದ
ನೀವು ಚೆನ್ನಾಗಿದೆ.

ದಿನಕರ ಮೊಗೇರ said...

shivu sir,
illi nimma chitragaLe lekhanavaagide..... chitragaLe maatanaaDI namage tiLisidavu... tumbaa dhanyavaada sir...

Badarinath Palavalli said...

ಸಾರ್, ಮತ್ತೆ ನನ್ನನ್ನು ಮರೆತಿರಿ. ಫೋಟೋ ಸೂಪರ್ ಆಗಿವೆ. ಒಂದು ಮಿಸ್ ಕಾಲ್ ಕೊಟ್ಟರೆ ಇಂತಹ ಕಾರ್ಯಕ್ರಮಗಳಿಗೆ ನಾನು ಹಾಜರ್

ಸಾಗರದಾಚೆಯ ಇಂಚರ said...

ಸರ್

ತುಂಬಾ ಸೊಗಸಾದ ಫೋಟೋಗಳು,

ಸುಂದರ ವಿವರಣೆ

ನಮಗೆ ಅಲ್ಲಿಗೆ ಹೋದಂತೆ ಅನಿಸಿತು

NilGiri said...

ಶಿವು, ನಾನು ಈ ಲೇಖನವನ್ನು ಸುಧಾದಲ್ಲಿ (ಆನ್ ಲೈನ್) ಓದಿದ್ದೆ. ಲೇಖನದಲ್ಲಿ ಇಷ್ಟೆಲ್ಲಾ ಚಿತ್ರಗಳಿರಲಿಲ್ಲ. ಫ್ಲಾಶ್ ಬಳಸದೇ ಚಿತ್ರ ತೆಗೆಯುತ್ತೇನೆಂದು ನೀವು ಭರವಸೆ ಕೊಟ್ಟ ಮೇಲೆ ಫೋಟೋ ತೆಗೆಯಲು ಅನುಮತಿ ಕೊಟ್ಟರು ಎಂದು ಓದಿದ ನೆನಪು. ಇಲ್ಲೂ ಒಂದು ಜಪಾನಿನವರ ನಾಟಕ ನೋಡಿದ್ದೆ. ಉದ್ದೂದ್ದ ಹಾಡುಗಳು. ನಂಗಂತೂ ಸಾಕಾಯ್ತಪ್ಪ! ಇದರಲ್ಲೂ ಹಾಡುಗಳು ಇದ್ದವಾ ಹೇಗೆ?! ಲೇಖನ ಮತ್ತು ಚಿತ್ರಗಳಿಗೆ A++++

ವನಿತಾ / Vanitha said...

ಶಿವು, ಕೊರಿಯನ್ ನಾಟಕ ಹಾಗು ಅವರ ರಂಗ ಪರಿಕರದ ಬಗ್ಗೆ ಚಿತ್ರದೊಂದಿಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. thanks to your effort:-)

shivu.k said...

ಸುನಾಥ್ ಸರ್,

ನಾಟಕ ನೋಡುವಾಗ ಕೊರಿಯನ್ ಭಾಷೆ ಅರ್ಥವಾಗುವುದಿಲ್ಲ. ಅದಕ್ಕಾಗಿ ಎರಡು ಬದಿಯಲ್ಲಿ ಇಂಗ್ಲೀಷ್ ಸಬ್‍ಟೈಟಲ್ ಕೊಡುತ್ತಿರುತ್ತಾರೆ. ನಾನು ಅದನ್ನು ಅರ್ಥಮಾಡಿಕೊಂಡು ಫೋಟೊಗ್ರಫಿ ಮಾಡುವ ಪ್ರಯತ್ನ ಮಾಡಿದ್ದೇನೆ. ನನಗೆ ವಿದೇಶಿ ನಾಟಕ, ಆಟ, ಇನ್ನಿತರ ಚಟುವಟಿಕೆಗಳಲ್ಲಿ ಏಕೆ ಹೆಚ್ಚು ಆಸಕ್ತಿಯೆಂದರೆ ಅವರದು ನಮ್ಮಂತೇ ಇದ್ದರೂ ಏನಾದರೂ ಹೊಸತು ಕೊಡಲು ಪ್ರಯತ್ನಿಸುತ್ತಾರೆ. ಉದಾ: ಕಸದಂತ ವಸ್ತುಗಳನ್ನು ಉಪಯೋಗಿಸಿ ಹಿನ್ನೆಲೆ ಸಂಗೀತ ನೀಡಿರುವುದು. ನಮ್ಮಲ್ಲಿ ನಾಟಕಗಳಲ್ಲಿ ಹೊಸತನವಿದ್ದರೂ ಈ ರೀತಿಯ ವಿಷಯಗಳಲ್ಲಿ ಹೊಸದಾಗಿ ಅಲೋಚಿಸುವುದಿಲ್ಲ. ಮತ್ತೆ ಟಿಂಗರ ಬುಡ್ಡಣ್ಣ"ವನ್ನು ಓದಿಲ್ಲ ನೋಡಿಯೂ ಇಲ್ಲ. ಅದರ ಪ್ರಯೋಗವಾದರೆ ನೋಡಲು ಪ್ರಯತ್ನಿಸುತ್ತೇನೆ.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ಮೊದಲಿಗೆ ನಾನು ನಾಟಕದ ಚಿತ್ರಗಳನ್ನು ಫೋಟೊ ತೆಗೆಯುವ ಉದ್ದೇಶದಿಂದಲೇ ಹೋಗಿದ್ದೆ. ನಾಟಕ ನೋಡುವಾಗ ಎಲ್ಲವನ್ನು ಒಟ್ಟುಮಾಡಿಕೊಡಬೇಕೆನ್ನುವ ಅಲೋಚನೆ ಬಂತು.

ಮತ್ತೆ ರಂಗಶಂಕರದ ವಿಚಾರಕ್ಕೆ ಬಂದರೆ...ಅಲ್ಲಿ ಅಧಿಕೃತ ಛಾಯಾಗ್ರಾಹಕರು, ವಿಡಿಯೋಗ್ರಾಹಕರಿಗೆ ಮಾತ್ರ ಅವಕಾಶ. ಹೊರಗಿನವರಿಗೆ ಅವಕಾಶವಿಲ್ಲ. ಮತ್ತೆ ಎಂದಿನಂತೆ ಅವರಿಗೆ ಹೊಸದಾಗಿ ನನ್ನಂತ ಛಾಯಾಗ್ರಾಹಕರು ಹೋದರೆ ಫೋಟೊ ತೆಗೆದು ಇಡೀ ನಾಟಕಕ್ಕೆ ತೊಂದರೆ ಕೊಡುತ್ತಾರೆ, ಅಥವ ಫೋಟೊಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವ ಕಲ್ಪನೆಯೇ ಹೆಚ್ಚು. ಹೊಸಬರನ್ನು underestimate ಮಾಡುವುದೇ ಹೆಚ್ಚು. ಇದು ಎಲ್ಲ ಜಾಗದಲ್ಲೂ ಇದೆ. ಅಧಿಕೃತವಾಗಿ ನೇಮಿಸಿದವರು ಹೀಗೆ ಲೇಖನವನ್ನು ಬರೆದು ಚಿತ್ರಸಹಿತ ಪತ್ರಿಕೆಗಳಲ್ಲಿ, ಬ್ಲಾಗಿನಲ್ಲಿ ಹಾಕುವ ಪ್ರಯತ್ನವನ್ನು ಮಾಡುವುದಿಲ್ಲ. ಫೋಟೊಗ್ರಫಿಗೆ ಅವಕಾಶ ಕೊಟ್ಟರೆ ಹೀಗೆ ನಮ್ಮದೇ ತಾಂತ್ರಿಕತೆಯಿಂದ ಯಾರಿಗೂ ತೊಂದರೆಯಾಗದಂತೆ ಉತ್ತಮ ಚಿತ್ರಗಳನ್ನು ತೆಗೆಯಬಹುದು. ಮತ್ತೆ ಅದರಿಂದ ಹೀಗೆ ಪ್ರಚಾರವಾಗುತ್ತದೆ ಎನ್ನುವ ವಿಚಾರವನ್ನು ನಿಮ್ಮಂತವರು ಯಾರಾದರೂ ರಂಗಶಂಕರ ಮಾತ್ರವಲ್ಲ ಎಲ್ಲಾ ರಂಗಮಂದಿರದಲ್ಲೂ ತಿಳಿಸಿದರೆ ನಮಗೆ ಮತ್ತಷ್ಟು ಚಿತ್ರಗಳನ್ನು ಕೊಡಬಹುದು.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಮನಮುಕ್ತಾ,

ನಾಟಕದ ಬರಹ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಹೊಸದನ್ನು ಕೊಡಬೇಕೆನ್ನುವ, ಹುಡುಕಬೇಕೆನ್ನುವ ಪ್ರಯತ್ನ ಸರಿಯಾದ ದಾರಿಯಲ್ಲಿಯೇ ಇದೆಯೆನ್ನುವುದು ನೀವೆಲ್ಲರೂ ಹೀಗೆ ಮೆಚ್ಚಿ ಪ್ರೋತ್ಸಾಹಿಸಿದಾಗ ಮಾತ್ರ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ರಂಗಶಂಕರದ ಬೆಳಕಿನ ವಿನ್ಯಾಸ ಅತ್ಯುತ್ತಮವಾಗಿದೆ. ಅದನ್ನು ಸೆರೆಯಿಡಿಯಲು ಅವಕಾಶವಿಲ್ಲ. ಅತ್ಯುತ್ತಮ ನಾಟಕಗಳನ್ನು, ಪ್ರಯೋಗಗಳನ್ನು ಸೆರೆಯಿಡಿಯುದಾದಲ್ಲಿ ಒಂದು ಉತ್ತಮ ದಾಖಲೆಯಾಗುತ್ತದೆ. ನೀವು ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ದಿನಕರ್ ಸರ್,

ನಾಟಕದಲ್ಲಿನ ಸರಿಯಾದ ದೃಶ್ಯಗಳನ್ನು ಕ್ಲಿಕ್ಕಿಸಿದಲ್ಲಿ ಅವೇ ಮಾತಾಡುತ್ತವೆ. ಆ ನಿಟ್ಟಿನಲ್ಲಿ ನೀವು ಹೇಳಿರುವ ಮಾತು ನನ್ನ ಪ್ರಯತ್ನಕ್ಕೆ ಸಾರ್ಥಕತೆಯನ್ನು ತಂದುಕೊಟ್ಟು ಮತ್ತಷ್ಟು ಹೊಸತನ್ನು ಪ್ರಯತ್ನಿಸಲು ಪ್ರೋತ್ಸಾಹಿಸಿದಂತಾಗುತ್ತದೆ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.

shivu.k said...

Badrinath palavalli,

ಸರ್, ಖಂಡಿತ ನಿಮ್ಮನ್ನು ಮರೆತಿಲ್ಲ. ಈ ನಾಟಕ ನಡೆಯುವ ಸಮಯದಲ್ಲಿ ನೀವು ಪರಿಚಯವಾಗಿರಲಿಲ್ಲ.[ದಿನಾಂಕ ೨೭-೭-೨೦೧೦] ಮತ್ತೆ ಈ ನಾಟಕವನ್ನು ನೋಡಬೇಕೆಂದು ಹತ್ತು ದಿನಗಳಿಗೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದೆ. ಅಲ್ಲದೇ ಕೆಲವೊಮ್ಮೆ ಸಡನ್ನಾಗಿ ಹೋಗಬೇಕಾದ ಅವಕಾಶ ಸಿಕ್ಕಿಬಿಡುತ್ತದೆ. ಆದ್ದರಿಂದ ಅಂತ ಸಮಯದಲ್ಲಿ ನಿಮಗೆ ಛಾನಲ್ಲಿನಲ್ಲಿ ಕ್ಯಾಮೆರಾ ಕೆಲಸ ಬಿಟ್ಟು ಬರಲು ಸಾಧ್ಯವೇ? ಓಕೆ. ಮುಂದಿನ ಭಾರಿ ಇಂಥವಕ್ಕೆ ಮೊದಲೇ ತಿಳಿಸುತ್ತೇನೆ.
ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

shivu.k said...

ನೀಲಗಿರಿ[ಗಿರಿಜಕ್ಕ],

ಇಷ್ಟು ದಿನ ಎಲ್ಲಿ ಹೋಗಿದ್ರಿ, ನೀವು ಬ್ಲಾಗಿಂಗ್ ಮಾಡುತ್ತಿಲ್ಲವೆಂದು ಭಾವಿಸಿದ್ದೆ. ಮತ್ತೆ ನೀವು ಸುಧಾದಲ್ಲಿ online ನಲ್ಲಿ ಓದಿದ್ದು ಖುಷಿಯಾಯ್ತು. ಪತ್ರಿಕೆಗಳಲ್ಲಿ ಇಡೀ ಲೇಖನದ ರೆಕ್ಕೆಪುಕ್ಕ ಕತ್ತರಿಸಿಯೇ ಹಾಕುತ್ತಾರಾದ್ದರಿಂದ ನಿಮಗೆ ನನ್ನ ಬ್ಲಾಗಿನ ಪೂರ್ತಿ ಲೇಖನದ ಸ್ವಾರಸ್ಯ ಸಿಗುವುದಿಲ್ಲ. ಅದಕ್ಕೆ ಅವರದೇ ಆದ ಅನೇಕ ಕಾರಣಗಳನ್ನು ಕೊಡುತ್ತಾರೆ. ಮತ್ತೆ ನೀವು ನೋಡಿದ ಜಪಾನ್ ನಾಟಕದಂತೆ ಇದರಲ್ಲಿ ಹಾಡುಗಳಿರಲಿಲ್ಲ. ಪ್ಲಾಶ್ ಉಪಯೋಗಿಸದೇ ಫೋಟೋ ತೆಗೆಯಬೇಕಾದರೆ ಅದಕ್ಕೆ ತಕ್ಕಂತೆ ಉತ್ತಮ ತಾಂತ್ರಿಕತೆಯ ಕ್ಯಾಮೆರಾ ಬೇಕೇ ಬೇಕು. ಅದನ್ನು ಸರಿಯಾಗಿ ಉಪಯೋಗಿಸುವ ತಿಳುವಳಿಕೆ ಇದ್ದಲ್ಲಿ ಇಂಥವು ಸುಲಭ.
ಮತ್ತೆ ನನ್ನ ಬ್ಲಾಗಿಗೆ ಬಂದು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ ಫೋಟೊಗ್ರಫಿ ಬಗ್ಗೆ ಚಿತ್ರ ಸಹಿತ ಬರೆಯುತ್ತೇನೆ, ಆಗಲೂ ಮರೆಯದೇ ಬ್ಲಾಗಿಗೆ ಬಂದು ನೋಡಿ ಅನಂದಿಸಿ.

shivu.k said...

ವನಿತಾ,

ಥ್ಯಾಂಕ್ಸ್. ನಿನ್ನೆ ಅಜಾದ್ ಬಂದಿದ್ದರು. ನೀವು ಮತ್ತು ರಂಜಿತ ಡಿಸೆಂಬರ್‍ನಲ್ಲಿ ಬೆಂಗಳೂರಿಗೆ ಬರುತ್ತೀರಿ ಅಂತ ಹೇಳಿದರು. ನೀವು ಬಂದಾಗ ನಮ್ಮ ಖಂಡಿತ ಬೇಟಿಯಾಗೋಣ.

ಧನ್ಯವಾದಗಳು.

ಮನಸು said...

oLLe lEkhana kottiddeeri natakada bagge tiLisiddakke dhanyavaadaLu

Subrahmanya said...

ತುಂಬ ಚೆನ್ನಾಗಿ ಸಚಿತ್ರ ವಿವರಣೆ ನೀಡಿದ್ದೀರಿ. ಧನ್ಯವಾದಗಳು ನಿಮಗೆ

Ranjita said...

ಚಿತ್ರ ಲೇಖನಹಾಗು ವಿವರಣೆ ತುಂಬಾ ಚೆನ್ನಾಗಿದೆ ಶಿವೂ ಸರ್ ... ಕೊರಿಯನ್ ನಾಟಕವನ್ನ ಸ್ವತಹ ನಾವೇ ನೋಡಿದ ಅನಿಭವ ನೀಡಿದ್ದಿರಿ ಧನ್ಯವಾದಗಳು :)

shivu.k said...

ರಂಜಿತ,

ನಾಟಕದ ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ದೀಪಸ್ಮಿತಾ said...

ಫ್ಲ್ಯಾಶ್ ಬಳಸದೆ ಕಡಿಮೆ ಬೆಳಕಲ್ಲಿ ತೆಗೆಯುವುದು ಕಷ್ಟ. ನೀವು ಬರೆದಂತೆ ಉತ್ತಮ ತಾಂತ್ರಿಕತೆ ಇರುವ ಕ್ಯಾಮರಾ ಇದ್ದರೆ ಸಾಧ್ಯ. ಸುಧಾದಲ್ಲಿ ನಿಮ್ಮ ಲೇಖನ ಓದಿದೆ. ಫೋಟೋಗಳು, ವಿವರಣೆ ಚೆನ್ನಾಗಿವೆ

V.R.BHAT said...

ಚೆನ್ನಾಗಿದೆ ಸಚಿತ್ರಲೇಖನ, ಚಿತ್ರಗಳ ಲೋಕ ಬಹಳ ಮುದ ನೀಡಿತು,ಧನ್ಯವಾದ

Ashok.V.Shetty, Kodlady said...

ಶಿವು ಸರ್,

ಅದ್ಭುತ ಲೇಖನ. ಚಿತ್ರಗಳು ಹಾಗೂ ಅವುಗಳಿಗೆ ಪೂರಕವಾದ ವಿವರಣೆ ತುಂಬಾ ಚೆನ್ನಾಗಿತ್ತು. ನಿಮ್ಮ ಲೇಖನದ ಮೂಲಕ ಒಂದು ಹೊಸ ಪ್ರಪಂಚಕ್ಕೆ ನಮ್ಮನ್ನು ಕೊಂಡೊಯ್ದಿರಿ. ಧನ್ಯವಾದಗಳು..

ಜಲನಯನ said...

ಶಿವು ನಾಟಕಗಳೆಂದರೆ ನನಗೂ ಬಹಳ ಇಷ್ಟ ಏಕೆಂದರೆ ಇವುಗಳಲ್ಲಿ ಅಭಿನಯಿಸುವಾಗ ಸಿಗುವ ತೃಪ್ತಿ ಬೇರೆಯೇ ಆಗಿರುತ್ತೆ...ನನಗೆ ಸಮಯ ಇರಲಿಲ್ಲ ..ನಾನು ಬಹುಶಃ ಸಮಯ ಇದ್ದಿದ್ದರೆ ನಿಮ್ಮೊಂದಿಗೆ ಬರುತ್ತಿದ್ದೆ...ಚಿತ್ರಗಳೂ ಸೂಪರ್ ಆಗಿವೆ,,,

ಮನಸಿನಮನೆಯವನು said...

ವಿಶೇಷವಾಗಿದೆ..

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿದ್ದಿರಬೇಕು... ಚಿತ್ರಗಳನ್ನು ನೋಡಿದರೆ ತಿಳಿಯುತ್ತದೆ... ರ೦ಗಶ೦ಕರದ ಆ ಕತ್ತಲಿನಲ್ಲೂ ಎಷ್ಟು ಚೆನ್ನಾಗಿ ಫೋಟೋ ತೆಗೆದಿದ್ದೀರಿ...! ರ೦ಗದ ವರ್ಣ ಸ೦ಯೋಜನೆ ಮನಮೋಹಕವಾಗಿದೆ ಶಿವಣ್ಣ....

shivu.k said...

ಮನಸು ಮೇಡಮ್,

ಕುವೈಟ್ ತಲುಪಿದ ಮೇಲೆ ನಿಮ್ಮ ಮೊದಲ ಕಾಮೆಂಟು...ನಾಟಕದ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಸುಬ್ರಮಣ್ಯ ಸರ್,

ಥ್ಯಾಂಕ್ಸ್..

shivu.k said...

ಕುಲದೀಪ್ ಸರ್,

ಕಡಿಮೆ ಬೆಳಕಿನ ನಾಟಕಗಳನ್ನು ಕ್ಲಿಕ್ಕಿಸಲು ಫ್ರೊಫೆಷನಲ್ ಕ್ಯಾಮೆರಾಗಳೇ ಬೇಕು. ಮತ್ತು ಸ್ವಲ್ಪ ತಾಂತ್ರಿಕ ಲೆಕ್ಕಾವಿರಲೇಬೇಕು. ಚಿತ್ರಗಳು ಬರಹ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ವಿ.ಅರ್.ಭಟ್ ಸರ್,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.ಹೀಗೆ ಬರುತ್ತಿರಿ.

shivu.k said...

ಆಶೋಕ್ ಉಡಲಾಡಿ ಸರ್,

ನನ್ನ ಉದ್ದೇಶ ಈ ನಾಟಕದ ಅನುಭವವನ್ನು ಎಲ್ಲರಿಗೂ ಪರಿಚಯಿಸುವುದೇ ಆಗಿದೆ. ಅದು ತಲುಪಿದಲ್ಲಿ ನನ್ನ ಶ್ರಮ ಸಾರ್ಥಕ. ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಅಜಾದ್,

ನಾಟಕಗಳ ಆಗಿನ ಅನುಭವಗಳನ್ನು ನಮ್ಮ ಮನೆಗೆ ಬಂದಾಗ ಹೇಳಿದ್ರಿ. ಅದರ ಬಗ್ಗೆ ಬರೆಯಿರಿ ನಾವು ಓದುತ್ತೇವೆ. ನಿಜಕ್ಕೂ ಅದೆಲ್ಲವೂ ಬಲೇ ಖುಷಿ ಕೊಡುತ್ತಿದ್ದವಲ್ವಾ...ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಕತ್ತಲೆ ಮನೆ,

ಥ್ಯಾಂಕ್ಸ್.

shivu.k said...

ಸುಧೇಶ್,

ನಾಟಕ ತುಂಬಾ ಚೆನ್ನಾಗಿತ್ತು. ರಂಗಶಂಕರ ಒಂದು ಅತ್ಯುತ್ತಮ ಬೆಳಕಿನ ಸಂಯೋಜನೆಯ ರಂಗಮಂದಿರ. ಮೊದಲೇ ಅದರಲ್ಲಿ ಕೆಲವು ನಾಟಕಗಳನ್ನು ನೋಡಿದ್ದರಿಂದ ನನಗೆ ಕತ್ತಲೆಯಲ್ಲೂ ಫೋಟೊತೆಗೆಯುವುದು ಸುಲಭವಾಯಿತು. ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

Jayalaxmi said...

ನಿಮ್ಮ ಛಾಯಾಚಿತ್ರಗಳೇ ನಾಟಕದ ಕಥೆಯನ್ನು ಸೊಗಸಾಗಿ ಹೇಳುತ್ತಿವೆ ಶಿವು!!! ಗ್ರೇಟ್. ಇಷ್ಟು ದಿನ ನಿಮ್ಮೀಎ ಬ್ಲಾಗಿಗೆ ಭೇಟಿ ಕೊಡದಿದ್ದಕ್ಕೆ ಬೇಜಾರಾಗುತ್ತಿದೆ....

ಸೀತಾರಾಮ. ಕೆ. / SITARAM.K said...

ಛಾಯಾಚಿತ್ರಗಳು ವಿವರಣೆ ಮನ ತಟ್ಟಿತು.

Anonymous said...

http://kannadasongslyricz.blogspot.com/2013/06/manase-oh-manase-lyrics-chandramukhi.html#comment-form