ಬ್ಲಾಗ್ ಗೆಳೆಯರಿಗೆಲ್ಲಾ ಹೊಸ ವರ್ಷದ ಶುಭಾಶಯಗಳು. ನಮ್ಮ ಫೋಟೊಗ್ರಫಿ ಪ್ರವಾಸಗಳು ಹೇಗಿರುತ್ತವೆ ಅನ್ನುವ ಕುತೂಹಲ ನಿಮಗಿರುತ್ತದೆ ಅಲ್ಲವೇ. ಅದಕ್ಕಾಗಿ ಮೊದಲಿಗೆ ನಮ್ಮ ಮುನ್ನಾರು ಫೋಟೊಗ್ರಫಿ ಪ್ರವಾಸ ಹೇಗಿತ್ತು ಅನ್ನುವುದನ್ನು ಬರೆದಿದ್ದೇನೆ. ಲೇಖನ ದೊಡ್ಡದಾಗಿದ್ದರಿಂದ ಮೊದಲ ಭಾಗವನ್ನು ಇಲ್ಲಿ ಹಾಕಿದ್ದೇನೆ..
_________ ______________ __________
ನಾನು ಮೆಜೆಸ್ಟಿಕ್ಕಿನ ಅಜಂತ ಕಲರ್ ಲ್ಯಾಬಿನಲ್ಲಿ ಕುಳಿತು ನನ್ನ ಫೋಟೊ ಪ್ರಿಂಟ್ ಆಗಿಬರುವುದನ್ನೇ ಕಾಯುತ್ತಿದ್ದೆ. ನನ್ನಷ್ಟೆ ಗಾತ್ರ, ಎತ್ತರದ ವ್ಯಕ್ತಿ ಕೂಡ ನನ್ನ ಪಕ್ಕದಲ್ಲಿ ಬ್ಯಾಗಿನಿಂದ ತೆಗೆದ ಪೇಪರಿನೊಳಗೆ ನೆಗಟೀವುಗಳನ್ನು ಜೋಡಿಸಿಕೊಳ್ಳುತ್ತಾ, ಕೆಳಗೆ ಬಿದ್ದಿದ್ದನ್ನು ಎತ್ತಿಕೊಳ್ಳುತ್ತಾ ನೋಡಿಕೊಳ್ಳುತ್ತಿದ್ದರು. ಅವರ ಕೈಯಲ್ಲಿ ಅವತ್ತಿನ ಪೇಪರಿನಲ್ಲಿ ಬಂದ ಫೋಟೊ ನನ್ನ ಕಣ್ಸೆಳೆಯಿತು. ಏಕೆಂದರೆ ಅದು ನಾನೇ ಕ್ಲಿಕ್ಕಿಸಿದ ಫೋಟೊ. ಪತ್ರಿಕೆಯಲ್ಲಿ ಬಂದಿರುವುದು ನನಗೆ ಗೊತ್ತೇ ಇರಲಿಲ್ಲ. ಅದಕ್ಕಾಗಿ ಆತನಿಂದ ಒಂದು ನಿಮಿಷ ಕೊಡಿ ಎಂದು ಪಡೆದು ನೋಡುತ್ತಿದ್ದೆ. ಅಷ್ಟರಲ್ಲಿ ನಿಮ್ಮ ಪ್ರಿಂಟ್ ರೆಡಿ ಅಂತ ಲ್ಯಾಬ್ನವನು ಕೈಗೆ ಕೊಟ್ಟ. ಅದನ್ನು ಕೈಯಲ್ಲಿಡಿದು ಪತ್ರಿಕೆಯಲ್ಲಿ ಬಂದ ಫೋಟೋ ಇದರಷ್ಟೇ ಚೆನ್ನಾಗಿ ಹಾಕಿದ್ದಾರಾ ಅಂತ ನೋಡುತ್ತಿದ್ದೆ.
ಅದುವರೆಗೂ ಸುಮ್ಮನಿದ್ದ ಪಕ್ಕದಲ್ಲಿದ್ದವರು ನನ್ನ ಕೈಯಲ್ಲಿದ್ದ ಫೋಟೊ ಮತ್ತು ಪತ್ರಿಕೆಯಲ್ಲಿ ಬಂದ ಫೋಟೊ ಎರಡು ಒಂದೇ ಇದ್ದುದ್ದು ನೋಡಿ
"ನೀವು ಶಿವು.ಕೆ ಬೆಂಗಳೂರು ಅಲ್ವಾ" ಅಂದರು.
"ಹೌದು ನೀವ್ಯಾರು" ಅಂದೆ.
"ನಾನು ಮಲ್ಲಿಕಾರ್ಜುನ್ ಶಿಡ್ಲಘಟ್ಟ, ಪತ್ರಿಕೆಯಲ್ಲಿ ಬಂದಿರುವ ನಿಮ್ಮ ಫೋಟೊ ಪಕ್ಕ ಇರುವ ಬೀಟಲ್ ಫೋಟೊ ನಾನು ತೆಗೆದಿದ್ದು, ಅದಕ್ಕೆ ಆಸ್ಕರಿ ಪ್ರಶಸ್ಥಿ ಬಂದಿದೆ. ಅದನ್ನು ಇವತ್ತು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಸಂಜೆ ಕಾರ್ಯಕ್ರಮದಲ್ಲಿ ಕೊಡುತ್ತಾರೆ ಅದನ್ನು ತೆಗೆದುಕೊಳ್ಳಲು ಬಂದೆ. ನಿಮಗೂ ಬಂದಿರಬೇಕಾಲ್ವ" ಅಂದರು.
"ಹೌದು ನನಗೂ ಪಿಕ್ಟೋರಿಯಲ್ ವಿಭಾಗದಲ್ಲಿ ಬಂದಿದೆ. ನಾನು ಇವತ್ತು ಸಂಜೆ ಪ್ರಶಸ್ಥಿ ಪಡೆಯಲು ಅಲ್ಲಿಗೆ ಹೋಗಬೇಕಿದೆ" ಅಂದೆ.
ಹೀಗೆ ಇಬ್ಬರು ಬಹುಮಾನ ವಿಜೇತರು ಆ ದಿನ ಫೋಟೊ ಲ್ಯಾಬಿನಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿದ್ದು ಒಂದು ಅನಿರೀಕ್ಷಿತವೇ ಸರಿ. ಹಾಗೆ ನನ್ನ ಪಕ್ಕ ಕುಳಿತು ಪರಿಚಯ ಮಾಡಿಕೊಂಡವರು ಮತ್ಯಾರು ಅಲ್ಲ ಮಲ್ಲಿಕಾರ್ಜುನ್ ಡಿ.ಜಿ.
ಅವತ್ತು ಸಂಜೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನನಗಿಂತ ಮೊದಲೇ ಬಂದು ಹೊರಗೆ ಕುಳಿತಿದ್ದ ಮಲ್ಲಿಕಾರ್ಜುನ್ ಕೈಯಲ್ಲಿದ್ದ ಕೆಲವು ಸಿನಿಮಾ ಡಿವಿಡಿಗಳು ನನ್ನ ಗಮನ ಸೆಳೆದವು. ಅವುಗಳಲ್ಲಿ ನನಗಿಷ್ಟವಾದ ರೋಮನ್ ಹಾಲಿಡೆ ಸಿನಿಮಾ ಕೂಡ ಒಂದು. ಇಂಥ ಸಿನಿಮಾಗಳನ್ನು ನೋಡುವ ಈತನ ಅಭಿರುಚಿಯು ನನಗೆ ಚೆನ್ನಾಗಿ ಮ್ಯಾಚ್ ಆಗಬಹುದು ಅಂದುಕೊಂಡು ಮತ್ತೆ ಮಾತಾಡಿಸಿದೆ. ಅವರು ನಕ್ಕು ನೀವು ಹೋಗಿರಿ ನಾನು ಇವನ್ನೆಲ್ಲಾ ಜೋಡಿಸಿಟ್ಟುಕೊಂಡು ಬರುತ್ತೇನೆ ಅಂದರು.
ಒಳಗೆ ಸಭಾಂಗಣ ತುಂಬಿತ್ತು. ಬಹುಮಾನ ವಿಜೇತ ಚಿತ್ರಗಳ ಜೊತೆಗೆ ಇನ್ನಿತರ ಆಯ್ಕೆಯಾದ ಚಿತ್ರಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ಅವುಗಳನ್ನು ನೋಡಲು ಮೊದಲೇ ತುಂಬಾ ಜನ ಸೇರಿದ್ದರು. ನಾನು ಮತ್ತೊಬ್ಬ ಗೆಳೆಯ ಮಂಜುನಾಥ್ನನ್ನು ಹುಡುಕುತ್ತಿದ್ದೆ. ಆತ ನನ್ನ ಗೆಳೆಯನಷ್ಟೇ ಅಲ್ಲದೇ ನನ್ನ ಜೊತೆ ಪೋಟೋಗ್ರಫಿ ಪ್ರವಾಸಕ್ಕೆ ಸದಾ ಜೊತೆಯಲ್ಲಿರುವವನು. ಅವನದು ಸ್ವಲ್ಪ ವಿಭಿನ್ನ ಮಾತುಗಾರಿಕೆ. ಕೇಳಲು ಬಲು ಸೊಗಸು.
"ಏನ್ ಗುರು ಸಕತ್ ಮಿಂಚುತ್ತಿದ್ದೀಯಾ, ನಿನ್ನ ಪೋಟೊಗಳ ಬಗ್ಗೆನೇ ಎಲ್ಲರು ಮಾತಾಡುತ್ತಿದ್ದಾರೆ" ಅಂದ. ಅವನ ಮಾತಿಗೆ ನಕ್ಕು
" ನೋಡು ಇವತ್ತು ಮತ್ತೊಬ್ಬರನ್ನು ನಿನಗೆ ಪರಿಚಯಿಸುತ್ತೇನೆ" ಅಂದೆ.
"ಓಹ್ ನೀನ್ ಬಿಡು ಗುರು, ನೀನು ಪರಿಚಯ ಮಾಡಿಸ್ತೀಯಾ ಅಂದ್ರೆ ಅವರು ಪೂರ್ತಿ ಬೆಂದ ಕಾಳೇ ಇರಬೇಕು. ನೀನು ಹಾಗೆಲ್ಲಾ ಅರೆಬೆಂದಕಾಳುಗಳನ್ನೆಲ್ಲಾ ಪ್ರೆಂಡ್ ಮಾಡಿಕೊಳ್ಳಲ್ಲ ನನಗೆ ಗೊತ್ತು" ಅಂದ.
"ಅದೇನು ನನಗೆ ಗೊತ್ತಿಲ್ಲಪ್ಪ. ಇವತ್ತು ಬೆಳಿಗ್ಗೆ ಲ್ಯಾಬಿನಲ್ಲಿ ಸಿಕ್ಕಿದ್ರು. ಅವರಿಗೆ ನೇಚರ್ ವಿಭಾಗದಲ್ಲಿ ಮೊದಲ ಬಹುಮಾನ ಬಂದಿದೆ. ಪರಿಚಯವಾದಾಗ ಒಂಥರ ವ್ಯಕ್ತಿ ಓಕೆ ಅನ್ನಿಸಿತು ಅಷ್ಟೆ. ಆತ ಹೇಗಿರುತ್ತಾನೆ ಅನ್ನೋದು ನನಗೆ ಹೇಗೆ ಗೊತ್ತಾಗಬೇಕು? ನಿನ್ನಷ್ಟೆ ನನಗೂ ಗೊತ್ತು" ಅನ್ನುವಷ್ಟರಲ್ಲಿ ಮಲ್ಲಿಕಾರ್ಜುನ್ ಬಂದರು. ಅವರನ್ನು ಮಂಜುಗೆ ಪರಿಚಯಿಸಿದೆ. ಅವರಲ್ಲಿ ಸಹಜವಾದ ಮಾತುಕತೆ ನಡೆಯುತ್ತಿದ್ದಂತೆ ನಾನು ಬೇರೆಯವರನ್ನು ಮಾತಾಡಿಸಲು ಹೊರಟೆ.
ಕಾರ್ಯಕ್ರಮ ಮುಗಿಯಿತು. ಮಲ್ಲಿಕಾರ್ಜುನ್ ನನ್ನನ್ನು ವಿಶ್ ಮಾಡಿ ಊರಿಗೆ ಹೋಗಲು ಸಿದ್ದರಾಗುತ್ತಿದ್ದರು. ಅದೇನು ಅನ್ನಿಸಿತೋ ನನಗೆ
"ಮಲ್ಲಿಕಾರ್ಜುನ್ ನಾವು ಮುನ್ನಾರಿಗೆ ಫೋಟೊಗ್ರಫಿ ಪ್ರವಾಸ ಹೋಗುತ್ತಿದ್ದೇವೆ, ನೀವು ಬರುತ್ತೀರಾ" ಕೇಳಿದೆ. ಅವರಿಗೆ ಆಶ್ಚರ್ಯವಾಗಿತ್ತು. ಒಮ್ಮೆ ನನ್ನನ್ನು ನೋಡಿದರು.
"ಒಹ್! ನನಗೂ ಇಂಥ ಫೋಟೊಗ್ರಫಿ ಪ್ರವಾಸಗಳೆಂದರೆ ಇಷ್ಟ, ಖರ್ಚು ಎಷ್ಟಾಗಬಹುದು" ಕೇಳಿದರು. ನಾನು
"ಒಂದುವರೆ ಸಾವಿರದ ಒಳಗೆ ಆಗುತ್ತದೆ" ಅಂದೆ.
"ಅರೆರೆ ಅಷ್ಟು ಕಡಿಮೆನಾ, ಇದು ಹೇಗೆ ಸಾಧ್ಯ ಎಲ್ಲರೂ ಹೇಳುತ್ತಾರೆ ಅಲ್ಲಿ ಎಲ್ಲಾ ದುಬಾರಿ, ಒಂದು ದಿನದ ರೂಮಿನ ಬಾಡಿಗೆಯೇ ಎರಡು ಮೂರು ಸಾವಿರವಿದೆ ಅಂತಾರೆ, ನೀವು ನೋಡಿದ್ರೆ ಒಟ್ಟಾರೆ ಖರ್ಚು ಕೇವಲ ಒಂದುವರೆಸಾವಿರ ಅನ್ನುತ್ತೀರಲ್ಲ, ತಮಾಷೆಯಲ್ಲ ತಾನೆ? ನನ್ನನ್ನೇ ಮರು ಪ್ರಶ್ನಿಸಿದರು.
ಅಷ್ಟರಲ್ಲಿ ಮಂಜು "ನೀವು ಬನ್ನಿ ಎಲ್ಲಾ ನಿಮಗೇ ಗೊತ್ತಾಗುತ್ತೆ" ಅಂದಾಗ ಮಲ್ಲಿಕಾರ್ಜುನ್ ಒಪ್ಪಿಕೊಂಡರು. ನವೆಂಬರ್ನಲ್ಲಿ ಬೇಟಿಯಾದ ಮೇಲೆ ಡಿಸೆಂಬರ್ ಕೊನೆಯಲ್ಲಿ ಮಲ್ಲಿಕಾರ್ಜುನ್, ಮಂಜುನಾಥ ಮತ್ತು ನಾನು ಮೂವರು ಮುನ್ನಾರಿಗೆ ಹೊರಡಲು ಸಿದ್ಧರಾದೆವು. ನಡುವೆ ಮಾಮೂಲಿಯಾಗಿ ನಮ್ಮ ಫೋಟೊಗ್ರಫಿ ಪ್ರವಾಸ ಹೇಗಿರುತ್ತದೆ. ಅಲ್ಲಿ ಏನೇನು ತರಬೇಕು, ಏನೇನು ತರಬಾರದು, ಅಲ್ಲಿರುವಷ್ಟು ಹೊತ್ತು ನಮ್ಮ ಫೋಟೋಗ್ರಫಿ ಯಾವಾಗ, ಬಿಡುವು ಯಾವಾಗ ಇತ್ಯಾದಿ ಮಾತುಕತೆಗಳು ಫೋನಿನಲ್ಲಿ ನಡೆದಿದ್ದವು.
ನನಗಿಂತ ಮೊದಲೇ ಮಲ್ಲಿಕಾರ್ಜುನ್ ಮತ್ತು ಮಂಜು ಎಂಟುಗಂಟೆಯ ಹೊತ್ತಿಗೆ ಸಿಟಿ ರೈಲು ನಿಲ್ದಾಣದ ತಲುಪಿದ್ದರು. ನಾನು ಎಂಟುವರೆಗೆ ಅವರನ್ನು ಸೇರಿಕೊಂಡೆ. ಬೆಂಗಳೂರು_ಟ್ಯುಟಿಕೋರಿನ್ ರೈಲು ರಾತ್ರಿ ೯-೧೫ ಹೊರಡಲು ಸಿದ್ದವಾಗಿತ್ತು. ನಾನೊಂದು ಚಾರ್ಟ್ ಸಿದ್ದಪಡಿಸಿದ್ದೆ. ಬೆಂಗಳೂರಿನಿಂದ ಹೊರಟು ಮತ್ತೆ ಬೆಂಗಳೂರಿಗೆ ವಾಪಸ್ ಬರುವಷ್ಟರ ನಡುವೆ ಎಲ್ಲೆಲ್ಲಿ ರೈಲು-ಬಸ್, ಆಟೋ ಹಿಡಿಯಬೇಕು, ಎಷ್ಟೆಷ್ಟು ಗಂಟೆಗೆ ಅನ್ನುವ ಪಕ್ಕಾ ಚಾರ್ಟ್ ಅನ್ನು ಸಿದ್ಧಪಡಿಸಿದ್ದೆ. ಬೆಂಗಳೂರಿನಿಂದ ಮಧುರೈಗೆ ರೈಲು ಬೆಳಿಗ್ಗೆ ಎಂಟುಗಂಟೆಗೆ ತಲುಪುತ್ತದೆ. ನಂತರ ಅಲ್ಲಿಂದ ಥೇಣಿಗೆ ಒಂದು ಗಂಟೆ ಬಸ್ ಪ್ರಯಾಣ. ಅಲ್ಲಿಯೇ ಬೆಳಗಿನ ಉಪಹಾರ. ನಂತರ ಹತ್ತು ಗಂಟೆಗೆ ಸರಿಯಾಗಿ ಥೇಣಿಯಿಂದ ಮುನ್ನಾರಿಗೆ ಬಸ್ ಇರುತ್ತೆ. ಈ ಸಮಯವನ್ನು ಯಾರು ವ್ಯತ್ಯಾಸ ಮಾಡುವ ಆಗಿಲ್ಲವೆಂದು ಹೇಳಿಬಿಟ್ಟಿದ್ದರಿಂದ ಎಲ್ಲವೂ ಅಂದುಕೊಂಡಂತೆ ಆಯಿತು.
ಥೇಣಿ ಬಸ್ ನಿಲ್ದಾಣ ಚಿಕ್ಕದಾದರೂ ಬಸ್ಸುಗಳು ಮತ್ತು ಜನರಿಂದ ಗಿಜಿಗುಡುತ್ತಿತ್ತು. ಟಿಕೆಟ್ ಕೌಂಟರ್ ಬಳಿ ಹೋಗಿ "ಥ್ರೀ ಟಿಕೆಟ್ಸ್ ಫಾರ್ ಮುನ್ನಾರ್" ಅಂದೆ. ಒಳಗೆ ಕುಳಿತು ದಿನಪತ್ರಿಕೆ ಓದುತ್ತಿದ್ದವನು ನನ್ನನ್ನು ದುರುಗುಟ್ಟಿ ನೋಡಿ ಮತ್ತೆ ತಮಿಳು ಪೇಪರ್ ಓದತೊಡಗಿದ. ತಮಿಳುನಾಡು ಮತ್ತು ಕೇರಳದಲ್ಲಿ ವ್ಯವಹರಿಸಲು ನಾನೇ ಸರಿ ಅಂತ ಇಬ್ಬರು ನನ್ನನ್ನೇ ಮುಂದೆ ಮಾಡಿದ್ದರು. ಮಲ್ಲಿ ಮತ್ತು ಮಂಜು ಇಬ್ಬರಿಗೂ ಕನ್ನಡ ಇಂಗ್ಲೀಷ್, ಹಿಂದಿ ಬರುತ್ತದೆ, ಮಲ್ಲಿಗೆ ಹೆಚ್ಚುವರಿಯಾಗಿ ತೆಲುಗು ಬರುತ್ತದೆ. ಆದ್ರೆ ಅವ್ಯಾವುದು ಇಲ್ಲಿ ನಡೆಯುವುದಿಲ್ಲವಾದ್ದರಿಂದ ನನ್ನನ್ನೆ ಮುಂದಿಟ್ಟಿದ್ದರು. ನನಗೂ ಅವೆಲ್ಲಾ ಬಂದರೂ ತಮಿಳಿನ ತೊದಲು ಮಾತುಗಳು ಮಾತ್ರ ಬರುವುದು. ಅಷ್ಟರಲ್ಲಿ ನನ್ನ ಕಡೆ ನೋಡಿದ ಮಂಜು ತಮಿಳು ಮಾತಾಡು ಅಂತ ಸನ್ನೆ ಮಾಡಿದ. ಓಹ್ ಹೌದಲ್ವ ಅಂದುಕೊಂಡು "ಮುನ್ನಾರಿಕ್ಕೆ ಮೂಣು ಟಿಕೆಟ್ ಕುಡುಂಗ್" ಅಂದೆ. ಅದು ಕೆಲಸ ಮಾಡಿತು. ತಕ್ಷಣ ಆತ "ನೂತ್ತಿ ಹಂಬತ್ ಕುಡು" ಅಂದ. ನಾನು ಕೊಟ್ಟೆ. ಟಿಕೆಟ್ಟು ಕೊಟ್ಟು "ಬಸ್ ಅಂಗೆ ಇರುಕುದು ಪಾರು" ಅಂದಾಗ ಎಲಾ ಇವನ ದುರಭಿಮಾನವೇ" ಅಂದುಕೊಂಡರೂ ಕೊನೆಗೆ ಟಿಕೆಟ್ ಕೊಟ್ಟು ಬಸ್ ತೋರಿಸಿದನಲ್ಲ ಅಂತ ಬಸ್ ಹತ್ತಿ ಕುಳಿತೆವು.
ಹತ್ತು ಗಂಟೆ ಹದಿನೈದು ನಿಮಿಷಕ್ಕೆ ಹೊರಟ ಬಸ್ಸು ಸುಮಾರು ಮುವತ್ತು ಕಿಲೋಮೀಟರ್ ದೂರದ ಬೋಡಿನಾಯಕನೂರು ತಲುಪಿದ್ದು ನಮಗೆ ಗೊತ್ತೇ ಆಗಲಿಲ್ಲ. ಇದೊಂದು ಚಿಕ್ಕ ತಾಲ್ಲೂಕು. ನಾವು ಪಕ್ಕ ಪ್ಲಾನ್ ಮಾಡಿದರೆ ಇಲ್ಲಿಯವರೆಗೆ ರೈಲಿನಲ್ಲೇ ಬರಬಹುದು. ಆದ್ರೆ ನಮಗೆ ಸಮಯ ಹೊಂದಾಣಿಕೆಯಾಗುವುದಿಲ್ಲ. ಇದು ಮುನ್ನಾರಿಗೆ ಸಾಗುವ ಬೆಟ್ಟಗಳ ಹಾದಿಯಲ್ಲಿ ಸಿಗುವ ತಳಮಟ್ಟದ ಊರು. ಅಲ್ಲಿಂದ ನಿದಾನವಾಗಿ ಹಾವಿನಂತೆ ಸಾಗಿತ್ತದೆ ರಸ್ತೆ. ಅಲ್ಲಿಂದ ಹೊರಟ ಒಂದುಗಂಟೆಯ ಪ್ರಯಾಣದ ನಂತರ ಸಿಗುತ್ತದೆ ಒಂದು ಪುಟ್ಟ ಊರು. ಅದರ ಹೆಸರು ನೆನಪಿಗೆ ಬರುತ್ತಿಲ್ಲ. ಅದು ತಮಿಳುನಾಡಿನ ಕೊನೆಯ ಗಡಿ. ಅಲ್ಲಿ ಬಸ್ ನಿಲ್ಲಿಸಿದ ಚಾಲಕನೂ ಮತ್ತು ನಿರ್ವಾಹಕನೂ ತಕ್ಷಣ ಇಳಿದು ಅಲ್ಲಿರುವ ಹೋಟಲ್ಲಿಗೆ ಹೋಗಿ ಕುಳಿತುಬಿಟ್ಟರು. "ಪದಿನಂಜಿ ನಿಮಿಷ ಟೈಮ್ ಇರುಕ್ಕು ಸಾಪಡ್ ಪಣ್ಣಂಗು" ಅಂದಿದ್ದು ನಮಗೆ ಕೇಳಿಸಲೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಅವ್ರು ಆ ಹೋಟಲ್ ಒಳಗೆ ಕುಳಿತಿದ್ದರು. ನಾವು ಕೆಳಗೆ ಇಳಿದೆವು. ಅಲ್ಲಿರುವುದು ಒಂದೇ ಹೋಟಲ್. ಹೋಟಲ್ಲಿನ ಮುಂದೆ ದೊಡ್ಡ ಹೊಟ್ಟೆಯನ್ನು ಬಿಟ್ಟುಕೊಂಡ ಕಪ್ಪು ಬಣ್ಣದ ಮಾಲೀಕ. "ವಾಂಗೋ ಸಾರ್, ವಾಂಗೋ ಸಾರ್" ಅನ್ನುತ್ತಾ ಬಸ್ಸಿನಲ್ಲಿದ್ದವರನ್ನೆಲ್ಲಾ ಕರೆಯುತ್ತಿದ್ದ. ಅಲ್ಲಿ ಊಟ ಮಾಡಿದರೆ ನಮ್ಮ ಮುಂದಿನ ಮೂರು ದಿನದ ಮುನ್ನಾರು ಪ್ರವಾಸ ಪೂರ್ತಿ ವಾಂತಿಯ ಧಾರವಾಹಿಯೇ ಆಗಬಹುದು ಅನ್ನಿಸಿ ಮೂವರು ರಿಸ್ಕ್ ತೆಗೆದುಕೊಳ್ಳಲ್ಲಿಲ್ಲ. ಮುಂದೆ ನಿಜಕ್ಕೂ ಏರ್ ಪಿನ್ ತಿರುವುಗಳಿರುವುದರಿಂದ ನಮ್ಮ ದೇಹ ವ್ಯವಸ್ಥೆಯಲ್ಲಿನ ನೀರಿನಂಶ ತೊಂದರೆಕೊಡಬಹುದು, ಎಲ್ಲರೂ ಮೂರ್ತ ವಿಶರ್ಜನೆಯನ್ನು ಖಡಾ ಖಂಡಿತವಾಗಿ ಮುಗಿಸಿಕೊಳ್ಳಬೇಕು ಅಂತ ನಾನು ಹೇಳಿದಾಗ ಮಲ್ಲಿ ಮತ್ತು ಮಂಜು ನಕ್ಕು ಇಳಿಜಾರಿನ ಕಡೆ ಹೋದರು. ಹೋಟಲ್ಲಿನ ಶೋಕೇಸಿನೊಳಗೆ ಅಂಗೈಯಲ್ಲಿ ಹಿಡಿಯುವಷ್ಟು ಗಾತ್ರದ ದೊಡ್ಡ ಬೋಂಡಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದಿಟ್ಟಿದ್ದರು ಅದರ ಹಿಂದೆ ದೊಡ್ಡ ಹೊಟ್ಟೆಯ ಮಾಲೀಕ ಅದೇ ವಾಂಗ್ ಸಾರ್". ಒಳಗೇನಿದೆ ನೋಡೋಣವೆಂದು ಇಣುಕಿದರೆ ನಮ್ಮ ಬಸ್ ಚಾಲಕ ಮತ್ತು ನಿರ್ವಾಹಕರಿಬ್ಬರೂ ಅನ್ನವನ್ನೇ ಕಾಣದವರಂತೆ ಬಾಳೆ ಎಲೆ ತುಂಬ ರಾಶಿ ಹಾಕಿದ್ದ ಅನ್ನವನ್ನು ಕಬಳಿಸುತ್ತಿದ್ದರು. ಈ ಜಾಗದಲ್ಲಿ ಯಾರಿಗಲ್ಲದಿದ್ದರೂ ಇವರಿಬ್ಬರಿಗೂ ಹೊಟ್ಟೆತುಂಬ ಇಷ್ಟವಾಗುವಷ್ಟು ಅನ್ನ ಸಿಗುತ್ತದಲ್ಲ ಅಷ್ಟೇ ಸಾಕು ಅಂದುಕೊಂಡೆ.
ಅಲ್ಲಿಂದ ಮುಂದೆ ಸಾಗಿತಲ್ಲ ನಮ್ಮ ಬಸ್ಸು. ನಿದಾನವಾಗಿ ಸಾಗುತ್ತಿರುವಾಗಲೇ ನನಗೊಂದು ಆಸೆ ಮೊಳಕೆಯೊಡೆದಿತ್ತು. ಬೋಡಿನಾಯಕನೂರಿನಿಂದ ಮುನ್ನಾರಿಗೆ ರೈಲು ವ್ಯವಸ್ಥೆಯಾದರೆ ಎಷ್ಟು ಚೆನ್ನಾಗಿರುತ್ತಲ್ವಾ....ಅಂತ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಅಲ್ಲಿನ ತಿರುವುಗಳಲ್ಲಿ ಒಂದೇ ಬಸ್ ಹೋಗುವಷ್ಟು ಜಾಗದಲ್ಲಿ ಎದುರಿಗೆ ಮತ್ತೊಂದು ಬಸ್ ಬಂದಾಗ ಇಬ್ಬರು ಚಾಲಕರ ಫಜೀತಿಗಳನ್ನು ನೋಡಿದಾಗ, ಮತ್ತು ಅಂತ ಸಮಯದಲ್ಲಿ ನಾವು ಕಿಟಕಿಯಿಂದ ಇಣುಕಿದರೆ ಪಾತಾಳವೇ ಕಾಣಿಸುತ್ತಿರುವಾಗ ಇಂಥ ಜಾಗದಲ್ಲಿ ಬಸ್ಸೇ ಹೋಗುವುದು ಕಷ್ಟ ಇನ್ನು ರೈಲಿನ ಆಸೆಪಡುವ ನನ್ನಂತ ದಡ್ಡನಿಲ್ಲ ಎಂದುಕೊಂಡಿದ್ದು ಉಂಟು. ಮುನ್ನಾರ್ ತಲುಪಿ ಬಸ್ ಇಳಿಯುತ್ತಿದ್ದಂತೆ ರೂಮ್ ಬೇಕಾ, ರಿಸಾರ್ಟ್ ಬೇಕಾ, ಅಂತ ನಮ್ಮನ್ನು ಹತ್ತಾರು ಜನರು ಮುತ್ತಿಕೊಳ್ಳುತ್ತಾರೆ, ನಮ್ಮ ರೂಮ್ ಬುಕ್ ಆಗಿದೆ ಅಂತ ಹೇಳಿಬಿಡುವುದು, ಎಲ್ಲಿ ಅಂದರೆ ಲಾಸ್ ಪಾಮಾಸ್, ಮುನ್ನಾರ್ ಇನ್, ಇತ್ಯಾದಿ ಕೆಲವು ಹೆಸರುಗಳನ್ನು ಹೇಳಬೇಕೆಂದು ನಮ್ಮಲ್ಲೇ ತೀರ್ಮಾನಿಸಿಕೊಂಡೆವು. ಕೊನೆಗೂ ಮುನ್ನಾರ್ ತಲುಪಿದಾಗ ಸಮಯ ಮಧ್ಯಾಹ್ನ ಒಂದು ಗಂಟೆ ಮುವತ್ತು ನಿಮಿಷ.
ಬಸ್ ಇಳಿಯುವಷ್ಟರಲ್ಲಿ ನಾವು ಅಂದುಕೊಂಡಂತೆ ಆಯಿತು. ರೂಮ್, ರಿಸಾರ್ಟ್ ಬೇಕಾ ಅಂತ ನಮ್ಮ ಸುತ್ತ ಎಲ್ಲಾ ಭಾಷೆಯಲ್ಲಿ ಕೇಳತೊಡಗಿದ ಅವರಿಂದ ತಪ್ಪಿಸಿಕೊಂಡು ನೇರವಾಗಿ ಮೊದಲೇ ಗೊತ್ತಿದ್ದ ಹೋಟಲ್ ಶರವಣಭವನ್ಗೆ ಊಟಕ್ಕೆ ಹೋದೆವು. ಇಡೀ ಮುನ್ನಾರಿನಲ್ಲೇ ಉತ್ತಮವಾದ ಶುದ್ಧ ಸಸ್ಯಹಾರಿ ಊಟದ ವ್ಯವಸ್ಥೆಯಿರುವ ಮುನ್ನಾರಿನ ಹೃದಯಭಾಗದಲ್ಲೇ ಇರುವ ಹೋಟಲ್ ಅದು. ಕೇವಲ ಇಪ್ಪತ್ತು ರೂಪಾಯಿಗೆ ಹೊಟ್ಟೆ ತುಂಬಾ ಉತ್ತಮವಾದ ಅನ್ನಸಾರು, ಹುಳಿ, ಪಲ್ಯ ಹಪ್ಪಳ ಇತ್ಯಾದಿಗಳನ್ನು ಹಾಕಿ ತೃಪ್ತಿಪಡಿಸುವ ಮತ್ತೊಂದು ಅಂತ ಹೋಟಲ್ ಮುನ್ನಾರಲ್ಲಿ ಇಲ್ಲ. ಪಕ್ಕದಲ್ಲೇ ಇದ್ದ ಒಂದು ಗಿಪ್ಟ್ ಸೆಂಟರಿಗೆ ಹೋಗಿ, ಅಲ್ಲಿ ಕೊಳ್ಳುವುದೇನು ಇಲ್ಲದಿದ್ದರೂ ಸುಮ್ಮನೇ ಮುನ್ನಾರಿನ ಚಾಕ್ಲೇಟ್, ಟೀಪುಡಿ, ಗೋಡಂಬಿ ಪ್ಯಾಕ್ ಮಾಡಲು ಹೇಳಿ ನಿದಾನವಾಗಿ ನಮ್ಮ ಪರಿಚಯವನ್ನು ತಿಳಿಸಿ ನಾವು ಬಂದ ಜಾಗ, ಉದ್ದೇಶ, ನಮ್ಮ ಬಜೆಟ್ಟಿಗೆ ಬೇಕಾದ ಹೋಟಲ್ಲಿನ ವಿವರವನ್ನು ಕೇಳಿದೆವು. ಅವನು ನಮ್ಮ ವಯಸ್ಸಿನವನೇ ಆಗಿದ್ದರಿಂದ ಜೊತೆಗೆ ನಾವು ಮೊದಲೇ ಸ್ವಲ್ಪ ವ್ಯಾಪಾರವನ್ನು ಮಾಡಿದ್ದ ದಾಕ್ಷಿಣ್ಯಕ್ಕೋ ಏನೋ ನಮ್ಮ ಬಜೆಟ್ಟಿನ ಅನುಗುಣವಾಗಿ ನೂರರಿಂದ ಮುನ್ನೂರು ರೂಪಾಯಿಗಳವರೆಗಿನ ಹೋಟಲ್ಲಿನ ವಿವರಗಳನ್ನು ನೀಡಿದ. ಅವನಿಗೆ ಧನ್ಯವಾದಗಳನ್ನು ಹೇಳಿ ಮೂರು ನಾಲ್ಕು ಹೋಟಲ್ ಹುಡುಕಿದಾಗ ಕೊನೆಗೆ ೨೪ ಗಂಟೆಗೆ ಕೇವಲ ಇನ್ನೂರು ರೂಪಾಯಿಯ ಕೃಷ್ಣ ಹೋಟಲ್ ಓಕೆ ಆಯಿತು. ಹಣ ಅಷ್ಟು ಕಡಿಮೆಯಾದರೂ ಮೂವರಿಗೂ ಸಾಕಾಗುವಂತೆ ಇದ್ದು, ಬಿಸಿನೀರು, ಗಾಳಿಬೆಳಕು ವ್ಯವಸ್ಥೆ ಚೆನ್ನಾಗಿದೆಯೆನಿಸಿ ನಮಗೆ ಸಾಕೆನಿಸಿತ್ತು. ಮರು ದಿನ ನೋಡಿದರೆ ಇಸ್ರೇಲ್ ಪ್ರವಾಸಿಯೂ ನಮ್ಮ ಪಕ್ಕದಲ್ಲೇ ಉಳಿದುಕೊಂಡಿದ್ದು ತಿಳಿದು ಅಂತ ವಿದೇಶಿಯನೇ ಇಲ್ಲಿ ಉಳಿದುಕೊಂಡಿರುವಾಗ ನಾವು ಅವನಿಗಿಂತ ಏನು ಕಡಿಮೆಯಿಲ್ಲವೆಂದು ನಮ್ಮಷ್ಟಕ್ಕೆ ನಾವೇ ಸಮಾಧಾನ ಪಟ್ಟುಕೊಂಡೆವು. ಇಷ್ಟಕ್ಕೂ ನಮಗೆ ರೂಮು ಬೇಕಿರುವುದು ರಾತ್ರಿ ಹತ್ತುಗಂಟೆಯಿಂದ ನಸುಕಿನ ಐದುಗಂಟೆಯವರೆಗೆ ಮಲಗಲು ಮಾತ್ರ ಅಂತ ತೀರ್ಮಾನಿಸಿದ್ದರಿಂದ ಇದು ಸಾಕೆನಿಸಿತ್ತು.
ಪ್ರತಿನಿತ್ಯ ಮುಂಜಾನೆ ಐದುಗಂಟೆಗೆ ಮೂವರು ಎಚ್ಚರವಾಗಲೇ ಬೇಕು. ಒಂದು ಗಂಟೆಯೊಳಗಾಗಿ ನಮ್ಮ ನಿತ್ಯಕರ್ಮಗಳನ್ನು ಮುಗಿಸಿ ಅಲ್ಲಿ ಯಾರು ನೋಡದಿದ್ದರೂ ಸುಂದರವಾಗಿ ಮೇಕಪ್ ಮಾಡಿಕೊಂಡು[ಮಂಜು ಚೆನ್ನಾಗಿ ಮೇಕಪ್ ಮಾಡಿಕೊಳ್ಳುತ್ತಿದ್ದ] ಆರುಗಂಟೆಯೊಳಗಾಗಿ ರೂಮಿನಿಂದ ಹೊರಗೆ ಬರಲೇಬೇಕಿತ್ತು. ಅಲ್ಲಿಂದ ಎದುರುಗಡೆ ಇರುವ ಟೀ ಅಂಗಡಿಯಲ್ಲಿ ಬಿಸಿ ಟೀ ಮತ್ತು ಹೊಟ್ಟೆಗೆ ಬೇಕಾದ ಬ್ರೆಡ್ ಅಥವ ಬಿಸ್ಕೆಟ್ಟುಗಳನ್ನು ತಿಂದು ಮುಗಿಸುವ ಹೊತ್ತಿಗೆ ಆರುವರೆ. ಅದೇ ಸಮಯಕ್ಕೆ ನಾವು ಮೊದಲೇ ಬುಕ್ ಮಾಡಿದ್ದ ಆಟೋ ಅಥವ ಕಾರಿನವನು ನಮಗಾಗಿ ಕಾಯುತ್ತಿರಬೇಕು. ಆಗ ಮುನ್ನಾರಿನ ಉಷ್ಣಾಂಶ ಮೂರು ಡಿಗ್ರಿ ಮಾತ್ರ. ನಾವ್ಯಾರು ಸ್ವೆಟ್ಟರು ಮಂಕಿ ಕ್ಯಾಪ್ ಇಲ್ಲದೇ ಹೊರಗೆ ಬರುವಂತಿರಲಿಲ್ಲ. ಎದುರಿಗಿರುವವರು ಕಾಣದಷ್ಟು ಮಂಜು ಕವಿದಂತ ವಾತಾವರಣ. ಕ್ಯಾಮೆರಾದ ಕ್ಲಿಕ್ಕ್ ಒತ್ತಲು ಸಾದ್ಯವಾಗದಷ್ಟು ನಡುಕವಿರುವ ಈ ವಾತಾವರಣದಲ್ಲಿ ನಮಗಿಂತ ಮೊದಲೇ ನಮ್ಮ ಆಟೋಚಾಲಕ ಇರಬೇಕು. ಆಗ ಹೊರಟು ಹತ್ತು ಗಂಟೆಗೆ ವಾಪಸಾಗಬೇಕು. ನಂತರ ನಿದಾನವಾಗಿ ಸ್ನಾನ ವಿಶ್ರಾಂತಿ, ಮಾತುಕತೆ ಅವತ್ತು ಸಂಜೆ ಯಾವಕಡೆ ಹೋಗಬೇಕು ಇತ್ಯಾದಿಗಳ ಚರ್ಚೆ, ನಂತರ ಒಂದಷ್ಟು ಹೊತ್ತು ನಿದ್ರೆ ಅಥವ ಊರು ಸುತ್ತಾಟ, ಮದ್ಯಾಹ್ನ ಶರವಣಭವನ್ ಊಟ, ಸ್ವಲ್ಪ ವಿಶ್ರಾಂತಿ, ಮೂರು ಗಂಟೆಗೆಲ್ಲಾ ಮತ್ತೆ ಆಟೋದವನು ಸಿದ್ಧನಾಗಿರಬೇಕು. ಸಂಜೆ ಆರುಗಂಟೆಯವರೆಗೆ ಅವನು ನಮ್ಮನ್ನು ನಮಗೆ ಬೇಕಾದ ಕಡೆ ಕರೆದುಕೊಂಡು ಹೋಗಬೇಕು, ಅದಕ್ಕಾಗಿ ನಮಗೆ ನಮ್ಮದೇ ವಯಸ್ಸಿನ ಅಥವ ನಮಗಿಂತ ಚಿಕ್ಕ ವಯಸ್ಸಿನ ಹುಡುಗನಾದ್ರು ಪರ್ವಾಗಿಲ್ಲ, ಅಂತ ಉತ್ತಮ ಆಟೋ ಡ್ರೈವರು ಇದ್ದಾರ ನೋಡಿ ಅಂತ ಗಿಫ್ಟ್ ಸೆಂಟರಿನವನನ್ನು ಕೇಳಿದಾಗ, ಆತ ಮೂವರನ್ನು ಗಾಬರಿ, ಆಶ್ಚರ್ಯ, ದಿಗಿಲುಗಳಿಂದ ನೋಡಿದ. ಇವರ್ಯಾರೋ ತಲೆಕೆಟ್ಟವರೇ ಇರಬೇಕು ಅನ್ನಿಸಿತೇನೋ. ಸಹಜವಾಗಿ ಮುನ್ನಾರಿಗೆ ಬಂದ ಪ್ರವಾಸಿಗರಲ್ಲಿ ಅದರಲ್ಲೂ ಇಂಥ ಡಿಸೆಂಬರ ಚಳಿಯಲ್ಲಿ ಅರಾಮವಾಗಿ ರಿಸಾರ್ಟುಗಳಲ್ಲಿ ಕಂಬಳಿಹೊದ್ದು ಬೆಚ್ಚಗೆ ಮಲಗಿರುತ್ತಾರೆ. ಅವರು ಎದ್ದು ಸಿದ್ಧವಾಗುವುದೇ ಬೆಳಿಗ್ಗೆ ಒಂಬತ್ತು ಗಂಟೆಯ ನಂತರ. ಆಗ ಅವರನ್ನು ಟ್ಯಾಕ್ಸಿ ಅಥವ ಆಟೋಗಳಲ್ಲಿ ಸಂಜೆಯವರೆಗೆ ಸುತ್ತಾಡಿಸಿ ಕರೆದುಕೊಂಡು ಬರುವುದು ಈಗ ಇರುವ ಲೆಕ್ಕಚಾರ. ಇವರು ನೋಡಿದರೆ ಬೆಳಿಗ್ಗೆ ಆರುವರೆಗೆ ಇಷ್ಟು ಕೊರೆಯುವ ಚಳಿಯಲ್ಲಿ ಆಟೋ ಬೇಕಂತಿದ್ದಾರಲ್ಲ, ಮತ್ತೆ ಹತ್ತು ಗಂಟೆಗೆ ವಾಪಸ್ ಅಂತೆ, ಅನಂತರ ಮಧ್ಯಾಹ್ನವೆಲ್ಲಾ ರೆಸ್ಟ್ ತೆಗೆದುಕೊಂಡು ಮೂರು ಗಂಟೆಗೆ ಹೊರಟರೆ ಸಂಜೆ ಏಳುಗಂಟೆಯವರೆಗೆ ಸುತ್ತಾಡಿಸಬೇಕು. ಇದೆಲ್ಲಾ ಕೇಳಿ ಅವನಿಗೂ ಸ್ವಲ್ಪ ತಲೆಬಿಸಿಯಾಯಿತೇನೋ, ಆಟೋದವನ ಬಾಡಿಗೆಯನ್ನು ಇಡೀ ದಿನಕ್ಕೆ ಪೂರ್ತಿಯಾಗಿ ಕೊಡುತ್ತೇವೆಂದಾಗ ಅವನಿಗೆ ಸ್ವಲ್ಪ ಸಮಾಧಾನವಾಯಿತು. ತನ್ನಲ್ಲಿರುವ ನಂಬರುಗಳನ್ನು ಹುಡುಕಿ ಒಂದು ನಂಬರಿಗೆ ಪೋನ್ ಹಚ್ಚಿದ. ಮಲೆಯಾಳಿಯಲ್ಲಿ ಏನೇನೋ ಹೇಳಿ ಕರೆದಾಗ ಕೆಲವೇ ನಿಮಿಷಗಳಲ್ಲಿ ನಮಗಿಂತ ಚಿಕ್ಕವನಾದ, ನೋಡಲು ಚುರುಕಾಗಿರುವ ಕಪ್ಪಗಿದ್ದ ಹುಡುಗನೊಬ್ಬ ಆಟೋ ಓಡಿಸಿಕೊಂಡು ಬಂದ. ಅವನಿಗೆ ನಮ್ಮ ವಿವರಗಳನ್ನೆಲ್ಲಾ ಹೇಳಿ ಉಳಿದಿದ್ದು ನೀನು ಮಾತಾಡಿಕೋ ಅಂತ ಆವನನ್ನು ನಮಗೆ ಪರಿಚಯಿಸಿ ಅಂಗಡಿಯವ ಕೈತೊಳೆದುಕೊಂಡುಬಿಟ್ಟ.
ಮುಂದುವರಿಯುವುದು..........
ಚಿತ್ರ ಮತ್ತು ಲೇಖನ.
ಶಿವು.ಕೆ
78 comments:
ಶಿವು ಸರ್
ನಿಮ್ಮ ಮುನ್ನಾರ್ ಪ್ರವಾಸ ಚೆನ್ನಾಗಿದೆ.
ನಾವೇ ಪ್ರವಾಸ ಮಾಡಿದ ಅನುಭವ ಕೊಡುತ್ತಿದೆ.ಧನ್ಯವಾದಗಳು.
ಛೇ..... ಫಸ್ಟ್ ಕಮೆ೦ಟು ಸ್ವಲ್ಪದರಲ್ಲಿ ತಪ್ಪಿ ಹೋಯಿತು :(
ಮೇಲ್ ಬಾಕ್ಸಿನಲ್ಲಿ ಮುನ್ನಾರು ಪ್ರವಾಸ ಎ೦ಬ ನಿಮ್ಮ ಮೇಲ್ ನೋಡಿದ ಕೂಡಲೇ ತು೦ಬಾ ಉತ್ಸಾಹದಿ೦ದ ಬಗ್ಗೆ ಬ್ಲಾಗಿಗೆ.. ನನ್ನ ಉತ್ಸಾಹ ಗರಿಗೆದರುವ೦ತೆ ಮಾಡಿದೆ ನಿಮ್ಮ ಬರಹ.... ಮುನ್ನಾರಿಗೆ ಹೋಗಬೇಕೆ೦ಬ ಆಸೆ ತು೦ಬಾ ಆಸೆಯಿದೆ.... ನಿಮ್ಮ ಮುನ್ನಾರಿನ ಬರಹ ಸರಣಿ ಮುಗಿದ ಮೇಲೆ ಆ ಆಸೆ ಇನ್ನೂ ಹೆಚ್ಚಾಗುತ್ತದೇನೋ... ತು೦ಬಾ ತು೦ಬಾ ಚೆನ್ನಾಗಿ ಬ೦ದಿವೆ ಚಿತ್ರಗಳು ಮತ್ತು ಬರಹ.... ಮು೦ದಿನ ಭಾಗಕ್ಕೆ ಕಾಯುತ್ತೇನೆ....
ಅದ್ಭುತ ಚಿತ್ರಗಳು. ತುಂಬಾ ಚೆನ್ನಾಗಿ ಬಂದಿವೆ. ಅವುಗಳನ್ನು ನೋಡಿದ ಮೇಲೆ ಮುನ್ನಾರಿಗೆ ಹೋಗಲೇಬೇಕೆಂದೆನಿಸಿದೆ.
Nice details of Munnara with Photographs looking like paintings. We also came to know how you two professionals have become friends (you & malli ). Nice story.
Hope your friendship movewell & remembered like that of one with Vishnu & Ambi.
ಶಿವು ...ಪ್ರವಾಸವೆಂದರೇ ಪ್ರಯಾಸ ಎನ್ನುವ ನಮಗೆ, ನಿಮ್ಮ ಹಲವಾರು ಕಡೆ ಭಾಷೆಯ ತೊಡಕುಇದ್ದರೂ ನಿವಾರಿಸಿಕೊಂಡು ಚಿತ್ರತೆಗೆಯುವುದೇ ಧ್ಯೇಯವೆಂದು ಬಹಳ ಆಸಕ್ತಿಯಿಂದ ಹೋಗಿ ಬಂದಿದ್ದೀರಿ, ಅದನ್ನು ಅಷ್ಟೇ ಸಚಿತ್ರ ವರ್ಣನೆ ಮಾಡಿದ್ದೀರಿ....ನಿಮ್ಮ ಪರಿಚಯವಾದಮೇಲಂತೂ ಈ ವಾಮನ-ಶ್ಯಾಮ ಎಂತಹ ಶ್ರೇಣಿಯ ಚಿತ್ರಗ್ರಾಹಕ ಎನ್ನುವುದರ ಜೊತೆಗೆ ಎಷ್ಟು ಚನ್ನಾಗಿ ಬರೆಯುತ್ತಾನೆ..??!! ಎನ್ನುವ ಸೋಜಿಗ ಆಯಿತು. ಹೊಸ ವರ್ಷದ ಶುಭಾಷಯಗಳು.
ಮುನ್ನಾರ್ ಪ್ರವಾಸಕ್ಕೆ ಕಳೆದ ವರ್ಷ ನಾವೂ ಡಿಸೆಂಬರ್ ನಲ್ಲೇ ಹೋಗಿದ್ದೆವು. ನಿಮ್ಮ ಪೋ಼ಟೋಗಳು ಆಕರ್ಷಕವಾಗಿವೆ. ಅಲ್ಲಿ ಟೀ ಪ್ಲಾಂಟೇಶನ್ಸ್ ಬಿಟ್ಟ್ರೆ (ಮತ್ತು ಅನೈಮುಡಿ) ನಮ್ಮ ಪಶ್ಚಿಮಘಟ್ಟ ಪ್ರದೇಶಗಳೇ ಸಾವಿರಪಾಲು ಮೇಲು ಎನ್ನಿಸಿತು. ಚಳಿ ಕೂಡ ನಮ್ಮ ಆಗುಂಬೆಯಷ್ಟೂ ಇರೋದಿಲ್ಲ. ಮುನ್ನಾರ್ ನಿಜವಾಗಿಯೂ ಸುಂದರವಾಗಿ ಕಾಣುತ್ತಿರುವುದು ನಿಮ್ಮ ಕ್ಯಾಮೆರಾ ಮ್ಯಾಜಿಕ್ ಕಲೆಯಿಂದಲೇ ...
ಲೇಖನ ಹಾಗು ಚಿತ್ರಗಳು ತುಂಬ ಚೆನ್ನಾಗಿದೆ.
ವಿನೋದ್
ಚೆನ್ನಾಗಿದೆ ಸರ್ .. ಒಮ್ಮೆ ನೋಡಿ ಬಂದಷ್ಟೇ ಖುಷಿಯಾಯ್ತು
ಮುನ್ನಾರ್ ಪ್ರವಾಸ ಚೆನ್ನಾಗಿದೆ ಸರ್ ಇಷ್ಟವಾಯಿತು, ಹಾಗೆ ನೀವು ಮಲ್ಲಿಕಾರ್ಜುನ್ ಸರ್ ಪರಿಚಯದ ಪರಿ ಸೂಪರ್ ಆಗಿದೆ ತುಂಬಾ ಖುಷಿಯಾಗುತ್ತೆ. ಫೋಟೋಗಳು ಚೆನ್ನಾಗಿವೆ
ಶಿವು,
ಮುನ್ನಾರಿನ ಕೆಲವು ಅದ್ಭುತ ಚಿತ್ರಗಳನ್ನು ಕೊಟ್ಟಿದ್ದೀರಿ. ಅದರಂತೆ ವರ್ಣನೆಯೂ ಸೊಗಸಾಗಿದೆ.
ನೀವು ಮಲ್ಲಿಕಾರ್ಜುನ್ ಭೇಟಿ ಆದ ರೀತಿ,ಹಾಗು
ಪ್ರತಿ ಫೋಟೋದ ಹಿಂದಿನ ನಿಜ ಘಟನೆಗಳು ಚೆನ್ನಾಗಿವೆ..
ಮುನ್ನಾರ್ ಪ್ರವಾಸ ಮತ್ತು ಫೋಟೋ ಎರಡೂ ಸೂಪರ್...
ನಿಮ್ಮ ಲೇಖನದಿಂದ ಮುನ್ನಾರ್ ನೋಡಿದಂತೆಯೇ ಆಯಿತು.
ಚಿತ್ರಗಳು ವಿಭಿನ್ನವಾಗಿದೆ. ಅದು ಪೋಸ್ಟ್ ಕಾರ್ಡ್ ಎಂಬ ಭಾವ ಉಂಟಾಗುತ್ತದೆ.
ನಾನು ಮುನ್ನಾರ್ ನೋಡಿಲ್ಲ. ನಿಮ್ಮ ಲೇಖನ ನೋಡಿ, ಅಲ್ಲಿಗೆ ಹೋಗಬೇಕೆಂದು ಆಸೆ ಆಗುತ್ತಿದೆ.
ಮುನ್ನಾರ್ ನ ಚಿತ್ರಸಹಿತ ಪ್ರವಾಸ ಕಥನ ಓದಿದ ನ೦ತರ ಮುನ್ನಾರ್ ನೋಡಬೇಕೆನಿಸುತ್ತಿದೆ. ಫೋಟೊಗಳೂ ಚೆನ್ನಾಗಿವೆ. ಪ್ರಶಸ್ತಿ ಪಡೆದಿದ್ದಕ್ಕೆ ಅಭಿನ೦ದನೆಗಳು.
ಚುಕ್ಕಿ ಚಿತ್ತಾರ,
ಮುನ್ನಾರ್ ಪ್ರವಾಸ ಇಷ್ಟವಾಯಿತಾ..ಹೋಗಿಬನ್ನಿ. ಚಿತ್ರ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಸುಧೇಶ್,
ಮೊದಲನೆ ಕಾಮೆಂಟು ಈ ಬಾರಿ ತಪ್ಪಿದರೇನಂತೆ...ಮುನ್ನಾರಿನ ಮುಂದಿನಭಾಗವನ್ನು ಹಾಕಿದಾಗ ತಕ್ಷಣ ಹಾಕಿ.
ಮುನ್ನಾರಿಗೆ ಹೋಗುವುದು ತುಸು ಪ್ರಯಾಸದ ಪ್ರಯಾಣ. ಅಲ್ಲಿಗೆ ಹೋದಮೇಲೆ ಮುನ್ನಾರ್ ಎಷ್ಟು ಸುಂದರವೆನಿಸುತ್ತದೆ ಗೊತ್ತಾ....ಮುಂದೆ ನಮಗೆ ಪರಿಚಯವಾದ ಹುಡುಗ ವಿಮಲ್ ಕತೆ ಚೆನ್ನಾಗಿದೆ. ಅವನ ಪ್ರವಾಸದ ಐಡಿಯಾಗಳಿಗೆ ನಮ್ಮ ವಿಷನ್ಗಳು ಹೊಂದಿಕೆಯಾಗದೆ...ನಮ್ಮ ಬಗ್ಗೆ ಅವನ ಅಭಿಪ್ರಾಯ...ಇತ್ಯಾದಿ ಮುಂದಿನ ಭಾಗದಲ್ಲಿ ಬರೆಯುತ್ತೇನೆ...
ಧನ್ಯವಾದಗಳು.
ತೇಜಸ್ವಿನಿ ಮೇಡಮ್,
ಮುನ್ನಾರು ಚಿತ್ರ ಲೇಖನ ನೋಡಿದಮೇಲೆ ನಿಮಗೂ ಮುನ್ನಾರು ನೋಡುವ ಆಸೆಯಾಯ್ತ....ಖಂಡಿತ ಹೋಗಿಬನ್ನಿ.
ಸೀತಾರಾಂ ಸರ್,
ಮುನ್ನಾರು ಪ್ರವಾಸಕ್ಕೆ ಮೊದಲು ಅನೇಕ ವರ್ಷಗಳ ಹಿಂದೆ ಅಲ್ಲಿಗೆ ಹೋಗಲು ಮಾಡಿದ ಪ್ಲಾನುಗಳೆಲ್ಲಾ ವಿಫಲವಾಗುತ್ತಿದ್ದವು. ಅವುಗಳ ಬಗ್ಗೆ ಬರೆದರೆ ಮತ್ತೊಂದು ದೊಡ್ಡ ಕತೆಯಾಗುತ್ತದೆ. ಮಲ್ಲಿಕಾರ್ಜುನ್ ಬೇಟಿ ನಿಜಕ್ಕೂ ಅನಿರೀಕ್ಷಿತ ಮತ್ತು ಆಶ್ಚರ್ಯ ಅಲ್ಲವೇ....
ನಮ್ಮಿಬ್ಬರ ಗೆಳೆತನಕ್ಕೆ ನಿಮ್ಮ ಹಾರೈಕೆ ನಮಗೆ ತುಂಬಾ ಇಷ್ಟವಾಯಿತು...ಚಿತ್ರಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ಆಜಾದ್ ಸರ್,
ನಿಮ್ಮ ಅಭಿಪ್ರಾಯದಂತೆ ಸರಿಯಾಗಿ ಪ್ಲಾನ್ ಮಾಡದಿದ್ದರೆ ಪ್ರಯಾಣ ಖಂಡಿತ ಪ್ರಯಾಸವೇ ಸರಿ. ನಮ್ಮ ಪ್ರಯಾಣಗಳಲ್ಲಿ ಭಾಷೆ ಮುಖ್ಯವಾಗುವುದಿಲ್ಲ. ಅದಕ್ಕೆ ಮೊದಲು ನಾನಂತೂ ತುಂಬಾ ಹೋವರ್ಕ್ ಮಾಡಿರುತ್ತೇನೆ. ಮುನ್ನಾರಿಗೆ ನಾಲ್ಕು ಬಾರಿ, ಊಟಿಗೆ ಎರಡು ಬಾರಿ, ಕೊಡೈಕಿನಲ್ಗೆ ಒಂದುಬಾರಿ, ಗೋವಾಗೆ ಎರಡುಬಾರಿ, ಏರ್ಕಾಡಿಗೆ ಒಮ್ಮೆ, ಮಡಿಕೇರಿ ಮತ್ತು ಕುಶಾಲನಗರಕ್ಕೆ ನಾಲ್ಕು ಬಾರಿ.....ಹೀಗೆ ಹೊರಟ ಪ್ರವಾಸಗಳಿಗೆ ಮೊದಲು ಹಣ ಮತ್ತು ಸಮಯ, ವ್ಯವಸ್ಥೆ,....ಇತ್ಯಾದಿಗಳ ಬಗ್ಗೆ ಎಲ್ಲವನ್ನು ಅರಿತು ಮೊದಲೇ ಬುಕ್ ಮಾಡುವುದರಿಂದ ಅಲ್ಲಿಗೆ ಹೋದಮೇಲೆ ಕೇವಲ ನಮ್ಮ ಫೋಟೊಗ್ರಫಿ ಖುಷಿಯಿಂದ ನಡೆಯುತ್ತದೆ.
ನಮ್ಮ ಪ್ರವಾಸದ ಫೋಟೊಗ್ರಫಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್.
ಸುಬ್ರಮಣ್ಯ ಬಟ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ಖುಷಿ ವಿಚಾರ.
ಮತ್ತೆ ಮುನ್ನಾರಿಗೆ ನೀವು ಹೋಗಿಬಂದಿದ್ದೀರಿ. ನಮ್ಮ ಪಶ್ಚಿಮಘಟ್ಟಗಳ ಸೌಂಧರ್ಯವೇ ಬೇರೆ ಮುನ್ನಾರ್ ಸೊಬಗೇ ಬೇರೆ. ಎರಡನ್ನು ಹೋಲಿಸಿದರೆ ವ್ಯತ್ಸಾಸವಾಗುತ್ತದೆ. ನಾವು ಎಲ್ಲಿಹೋಗುತ್ತೇವೋ ಅದನ್ನು ಯಾವುದೇ ಪೂರ್ವಗ್ರಹಪೀಡಿತರಾಗದೆ ನೋಡಿದಾಗ ಹೊಸದಾಗಿ ಕಾಣುತ್ತದೆ. ನಮ್ಮ ಫೋಟೊಗ್ರಫಿಗೆ ನಾವು ಹಾಗೆ ಹೋಗುವುದರಿಂದ ನಮಗೆಲ್ಲಾ ಚೆನ್ನಾಗಿ ಕಾಣುತ್ತವೆ.
ಮತ್ತೆ ಮುನ್ನಾರಿನಲ್ಲಿ ಈ ಡಿಸೆಂಬರ್ ವೇಳೆಯಲ್ಲಿ ಬೆಳಿಗ್ಗೆ ಹೊತ್ತು ಮಂಜು ಮುಸುಕಿದ ಸಮಯ ಆರುಗಂಟೆಯ ವೇಳೆಗೆ ಒಂದು ಟ್ಯಾಕ್ಸಿ ಹಿಡಿದು ಹೊರಟುಬಿಟ್ಟರೆ ಎರಡು-ಮೂರು ಕಿ.ಮೀ ದಾಟುತ್ತಿದ್ದಂತೆ ಸಿಗುವ ಪ್ರಕೃತಿಯ ಸೌಂದರ್ಯವನ್ನು ಅಸ್ವಾದಿಸಲು ಎರಡು ಕಣ್ಣು ಸಾಲದು. ಸಂಜೆ ನಾಲ್ಕು ಗಂಟೆಯಿಂದ ಆರುಗಂಟೆಯವರೆಗೂ ಕೂಡ ಸೂರ್ಯನ ನೆರಳು ಬೆಳಕಿನಾಟ[ಅದನ್ನು ಮುಂದೆ ಬರೆಯುತ್ತೇನೆ]ನೋಡಿ ಸಂತೋಷಪಡಬಹುದು.
ಆದ್ರೆ ಎಲ್ಲರೂ ಸಿದ್ದರಾಗುವುದು ಹತ್ತು ಗಂಟೆಗೆ ವಾಪಸು ಮೂರುಗಂಟೆಗೆ ಅವರು ಉಳಿದುಕೊಂಡಿರುವ ದುಬಾರಿ ರೆಸಾರ್ಟುಗಳಿಗೆ ಬಂದುಬಿಡುತ್ತಾರೆ. ಅಲ್ಲಿ ಚೆನ್ನಾಗಿ ಜೇಬುಗಳನ್ನು ತೂತು ಮಾಡಿಕೊಂಡು ಮುನ್ನಾರು ದುಬಾರಿ, ಚೆನ್ನಾಗಿಲ್ಲ ಅಂತ ಹೇಳುತ್ತಾರೆ...
ಕೆಲವು ವಿಚಾರಗಳನ್ನು ಮುಂದಿನಭಾಗದಲ್ಲಿ ಬರೆಯುತ್ತೇನೆ..ತಪ್ಪದೇ ಓದಿ...
ಧನ್ಯವಾದಗಳು.
ವಿನೋದ್ ಕುಮಾರ್,
ನನ್ನ ಬ್ಲಾಗಿಗೆ ಸ್ವಾಗತ. ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ರಂಜಿತ,
ಮೊದಲ ಭಾಗ ನೋಡಿ ಖುಷಿಯಾಯ್ತ...ಎರಡನೇ ಭಾಗ ಮತ್ತಷ್ಟು ವಿಭಿನ್ನವಾಗಿರುತ್ತದೆ...ತಪ್ಪದೇ ಓದಿ..
ಮನಸು ಮೇಡಮ್,
ಮುನ್ನಾರ್ ಪ್ರವಾಸ ಇಷ್ಟವಾಯಿತಾ...ಮುಂದಿನಭಾಗವೂ ನಿಮಗೆ ಇಷ್ಟವಾಗಬಹುದು ತಪ್ಪದೇ ಓದಿ. ಮತ್ತೆ ಮಲ್ಲಿಕಾರ್ಜುನ್ ಮತ್ತು ನನ್ನಬೇಟಿ ನಿಜಕ್ಕೂ ಅನಿರೀಕ್ಷಿತ.
ಆಜಾದ್ ಸರ್ ಬೆಂಗಳೂರಿಗೆ ಬಂದಾಗ ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಅವರ ಕಡೆ ನಿಮಗಾಗಿ ಕಳುಹಿಸಿದ್ದೆ. ನೀವು ಪುಸ್ತಕವನ್ನು ಓದಿದ್ರಾ....ಓದಿದ್ದರೆ ಹೇಗಿತ್ತೂ...ನಿಮ್ಮ ಅಭಿಪ್ರಾಯವನ್ನು ತಿಳಿಸಿ...
ಧನ್ಯವಾದಗಳು.
ಸುನಾಥ್ ಸರ್,
ಮುನ್ನಾರ್ ಚಿತ್ರ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಮತ್ತೆ ನಮ್ಮ ಪ್ರವಾಸದ ಪ್ರತಿಯೊಂದು ಹಂತವನ್ನು ನಡೆದಿದ್ದನ್ನೂ ಹಾಗೆ ವಿವರಿಸುತ್ತಿದ್ದೇನೆ. ಅದು ನಿಮಗೆ ವರ್ಣಮಯವಾಗಿ ಕಾಣಿಸಿದ್ದಕ್ಕೆ ಥ್ಯಾಂಕ್ಸ್...
ವನಿತಾ,
ಮಲ್ಲಿ ಮತ್ತು ನನ್ನ ಬೇಟಿ ಒಂಥರ ವಿಭಿನ್ನವೇ ಸರಿ..ಮುನ್ನಾರ್ ಬಗ್ಗೆ ಮತ್ತಷ್ಟು ಮುಂದಿನ ಲೇಖನದಲ್ಲಿ ಕೊಡುವುದರ ಜೊತೆಗೆ ಅಲ್ಲಿ ನಾವಿದ್ದಷ್ಟು ಹೊತ್ತು ಆಟೋದವನ ತಲೆಕೆಡಿಸಿದ್ದು, ಅವನ ಅಭಿಪ್ರಾಯ ಅದಕ್ಕೆ ನಮ್ಮ ಪ್ರತಿಕ್ರಿಯೆ ಇತ್ಯಾದಿ ತರಲೇ ಆಟಗಳೆಲ್ಲಾ ಮುಂದಿನ ಲೇಖನದಲ್ಲಿ ಹಾಕುತ್ತೇನೆ. ತಪ್ಪದೇ ಓದಿ...
ಧನ್ಯವಾದಗಳು.
ಶಿವೂ ಸರ್,
ನಿಮ್ಮ ಪ್ರವಾಸ ಕಥನ ತುಂಬಾ ಚೆನ್ನಾಗಿದೆ............ ಇದೂ ಸಹ ನಿಮ್ಮ ಮುಂದಿನ ಪುಸ್ತಕದ ಒಂದು ಭಾಗ ಎಂದು ಭಾವಿಸಿದ್ದೇನೆ ಹೌದಾ....? ನಿಮ್ಮ ಚಿತ್ರಗಳಂತೂ ಬಿಡಿಸಿದ್ದಾ ಅಥವಾ ಫೋಟೋ ತೆಗೆದಿದ್ದಾ ಎನ್ನುವ ಹಾಗಿದೆ........... ಪ್ರತಿ ಫೋಟೋ ಹಿಂದಿನ ಕಥೆಗಳನ್ನು ಹೀಗೆ ಹೇಳಿ ನಮಗೆ ಪುಸ್ತಕ ಬೇಗ ಕೊಡಿ.... ಕಾಯುತ್ತಿದ್ದೇನೆ ಮುಂದಿನ ಭಾಗಕ್ಕೆ......
ರಾಜೀವ್ ಸರ್,
ನನ್ನ ಲೇಖನದಿಂದ ನೀವು ಮುನ್ನಾರಿಗೆ ಹೋಗುವ ಆಸೆ ಬಂದಿದ್ದರೆ ಖಂಡಿತ ಹೋಗಿಬನ್ನಿ. ಈಗ ಸರಿಯಾದ ಸಮಯ. ನಾನು ಬ್ಲಾಗಿನಲ್ಲಿ ಹಾಕಿದ ಚಿತ್ರಗಳೆಲ್ಲಾ ಅಲ್ಲಿನ ಪ್ರಸಿದ್ಧ ತಾಣಗಳಲ್ಲ...ಇದೆಲ್ಲಾ ನಾವೇ ಹುಡುಕಿ ಕ್ಲಿಕ್ಕಿಸಿದ್ದು. ನಾವು ಸುಂದರ ತಾಣಗಳಿಗೆ ಭೇಟಿ ನೀಡಲೇ ಇಲ್ಲ. ಆಡ್ನಾಡಿಗಳಿಗೆ ಆಡ್ಡದಾರಿಯೆನ್ನುವಂತೆ ನಾವು ಅಲ್ಲಿ ಆಡ್ಡದಾರಿಯಲ್ಲಿ ಹೋಗಿದ್ದೇ ಹೆಚ್ಚು ಅವುಗಳ ಮುಂದಿನ ಭಾಗದಲ್ಲಿ ಫೋಟೊ ಸಹಿತ ವಿವರಿಸುತ್ತೇನೆ...ಆಗ ಮತ್ತೆ ಓದಲು ಬನ್ನಿ....
ಧನ್ಯವಾದಗಳು.
ಮನಮುಕ್ತ,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗ್ ವಸ್ತುಗಳನ್ನು ನೋಡಿದೆ. ಆಸಕ್ತಿಕರವೆನಿಸಿತು. ಬಿಡುವು ಮಾಡಿಕೊಂಡು ನೋಡುತ್ತೇನೆ. ಮುನ್ನಾರ್ ಲೇಖನದಿಂದ ಮುನ್ನಾರ್ ನೋಡಬೇಕೆನ್ನಿಸಿದ್ದರೆ...ಖಂಡಿತ ಹೋಗಿಬನ್ನಿ.
ಮತ್ತೆ ನಮಗೆ ಈ ಆಸ್ಕರಿ ಪ್ರಶಸ್ಥಿ ಬಂದಿದ್ದು ಸುಮಾರು ಆರು ವರ್ಷಗಳ ಹಿಂದೆ.
ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ದಿನಕರ್ ಸರ್,
ಇದು ನಾವು ಆರು ವರ್ಷಗಳ ಹಿಂದೆ ಹೋಗಿದ್ದ ಮುನ್ನಾರ್ ಪ್ರವಾಸ ಕಥನ. ಮಲ್ಲಿಕಾರ್ಜುನ್ ನನಗೆ ಹೇಗೆ ಮೊದಲ ಬೇಟಿಯಾದರು ಅನ್ನುವುದನ್ನು ಇಲ್ಲಿ ಸೇರಿಸಿದ್ದೇನೆ. ಆದ್ರೆ ಇದು ಖಂಡಿತ ನಮ್ಮ ಮುಂದಿನ "ಫೋಟೊ ಹಿಂದಿನ ಕತೆಗಳು" ಪುಸ್ತಕದ ಲೇಖನವಲ್ಲ. ಅದಕ್ಕಾಗಿ ಕೆಲವು ಫೋಟೊಗಳನ್ನು ಎತ್ತಿಟ್ಟಿದ್ದೇವೆ. ಒಂದೊಂದು ಫೋಟೊಗಳ ಹಿಂದೆಯೂ ವರ್ಷಗಳ ಶ್ರಮವಿದೆ. ಅದನ್ನು ಬೇರೆಯೇ ಬರೆಯುತ್ತಿದ್ದೇನೆ.
ಮತ್ತೆ ಚಿತ್ರಗಳ ವಿಚಾರ ಬಂದಾಗ ನಮಗೆ ಎಂಥ ಚಿತ್ರಗಳು ಬೇಕು ಎನ್ನುವುದಕ್ಕೆ ನಮಗೂ ಆಟೋದವನಿಗೂ ನಡೆವ ಮಾತುಕತೆ, ತಮಾಷೆಗಳನ್ನು ಮುಂದಿನ ಭಾಗದಲ್ಲಿ ಹಾಕುತ್ತೇನೆ. ಅದಂತೂ ಬಲು ಸ್ವಾರಸ್ಯ. ಸೂರ್ಯನ ಕಣ್ಣು ಮುಚ್ಚಾಲೆಯಲ್ಲಿ ಆಟೋದವನಿಗೆ ನಾವು ಓಡಾಡಿಸಿದ್ದು, ಇತ್ಯಾದಿಗಳ ಬಗ್ಗೆ ಮುಂದೆ ಬ್ಲಾಗಿನಲ್ಲಿ ಹಾಕಬೇಕಿದೆ. ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ಶಿವು ಸರ್,
ಚಿತ್ರಗಳು ವಿಭಿನ್ನವಾಗಿ ಸೊಗಸಾಗಿವೆ.....
ನಿಮ್ಮ ಲೇಖನ ನಮ್ಮನ್ನೆಲ್ಲಾ ಮುನ್ನಾರ್ ಗೆ ಕರೆದು ಹೋಯಿತು.....
ಲೇಖನ ಹಾಗೂ ಚಿತಗಳನ್ನು ನೋಡಿ ಅಲ್ಲಿಗೆ ಹೋಗಬೇಕೆಂದು ಅನಿಸುತ್ತಿದೆ...
ಗೆಳೆಯ ಶಿವು ರವರೆ..
ಪೂರ್ವಾಗ್ರಹವಾಗಲೀ ಹೋಲಿಕೆಯಾಗಲೀ ಮುನ್ನಾರ್ ನ ಸೌಂದರ್ಯವನ್ನು ಕಡಿಮೆ ಮಾಡುವದಿಲ್ಲ. ನೀವು ಹೇಳಿದ್ದು ಶತ ಸತ್ಯ. ನಾನು ಹೇಳಿದ್ದು ನಾವು ನೋಡಿದ್ದಕ್ಕಿಂತಲೂ ನಿಮ್ಮ ಕ್ಯಾಮೆರಾ ಚಿತ್ರಗಳು ಅದರ ಸೌಂದರ್ಯವನ್ನು ಹೆಚ್ಚಿಸಿದೆ ಎಂದು. ವಂದನೆಗಳು
ಮುನ್ನಾರಿನ ಪ್ರವಾಸ ಕಥನವನ್ನು ರೋಚಕವಾಗಿಸಿದ್ದೀರಿ. ಫೋಟೋಗಳು ಕೂಡ ಚೆನ್ನಾಗಿವೆ. ನಾನು ಹೋಗಿಲ್ಲ, ಒಮ್ಮೆ ಹೋಗಲೇಬೇಕೆನಿಸುವ೦ತೆ ಪ್ರೇರೇಪಿಸಿದೆ ನಿಮ್ಮ ಚಿತ್ರ-ಲೇಖನ.
ಶಿವೂ ಅವರೇ,
ನಿಮ್ಮ ಪ್ರವಾಸ ಕಥಾ ಲೇಖನ ಸುಂದರವಾಗಿ ಮೂಡಿ ಬಂದಿದೆ. ಸುಂದರ ಚಿತ್ರಗಳು. ಇಂಚಿಂಚನ್ನೂ ಸ್ವಷ್ಟವಾಗಿ ವಿವರಿಸಿದ್ದೀರಿ. ನಾನು ನಿಮ್ಮೊಂದಿಗೆ ಇದ್ದೆನೋ ಅನ್ನುವ ಹಾಗಿತ್ತು.
ನಿಮ್ಮ ಅಭಿಪ್ರಾಯ ನಿಜ, ಮುನ್ನಾರಿನ ಎಳೆ ಬಿಸಿಲಿನ ಮುಂಜಾವು ಕಣ್ಣಿಗೆ ಹಬ್ಬ. ಕಡಿಮೆ ಖರ್ಚಿನಲ್ಲಿ ಪ್ರವಾಸ ಹೋಗಿ ಅಲ್ಲಿನ ಸೌಂದರ್ಯ ಕಣ್ತುಂಬಿಕೊಳ್ಳುವುದು ಜಾಣತನ.
ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ಮುಂದಿನ ಭಾಗಕ್ಕೆ ಕಾಯುತ್ತಿರುವೆ,
-ಪ್ರಶಾಂತ್
ಶಿವೂ,
ನಿಮ್ಮ ಮುನ್ನಾರಿನ ಪ್ರವಾಸ ಲೇಖನ ತುಂಬ ಚೆನ್ನಾಗಿ ಇದೆ,,, ಹಾಗೆ ಫೋಟೋಗಳು ಕೂಡ, ನನಗು ನಾವು ಮುನ್ನಾರಿಗೆ ಹೋಗಿದ್ದ ನೆನಪು ಬಂತು ನಿಮ್ಮ ಫೋಟೋಗಳನ್ನು ನೋಡಿ ...ಹಾಗೆ ಶರವನಭವನ್ ಗೆ ನಾವು ಹೋಗಿ ಊಟ ಮಾಡಿದ್ದೆಲ್ಲ ನೆನಪಿಗೆ ಬಂತು,, ಆಶ್ಚರ್ಯ ಅಂದರೆ ನಿಮ್ಮ ಕ್ಲೋಸ್ ಫ್ರೆಂಡ್ ಮಲ್ಲಿಕಾರ್ಜುನ್ ಪರಿಚಯವಾದ ರೀತಿ....ಗುಡ್.
ಮುಂದಿನ ಲೇಖನಕ್ಕಾಗಿ ಎದುರು ನೋಡುತ್ತಿದ್ದೇನೆ .....
ಹೊಸ ವರುಷದ ಶುಭಾಶಯಗಳು. ಹೊಸ ವರುಷಕ್ಕೆ ಹೊಸ ಲೇಖನ ಮಾಲೆ, ತುಂಬ ಚೆನ್ನಾಗಿದೆ.
Oh...Very nice artcile even though photos..I plan to go this place after reading your Blog..
Thanks...
ಮುನ್ನಾರ್ ಗೆ ಹೋಗೋ ಆಶಾ ಹುಟ್ಟಿಸಿರಿ ಮುಂದಿನ ಭಾಗಕ್ಕೆ ಕಾಯುವೆ
hi shivu,
nivu helida mele munnar ge ondu sala hogi barabeku annustha ide,hage nimma pravasi barahavu allinantheye sundara vagide.mundina kanthihge eduru nodutta iddene..
ಪ್ರವಾಸ ಕಥನ ತುಂಬಾ ಚೆನ್ನಾಗಿದೆ :)
ಮುಂದುವರೆಸಿ...
ಶಿವು ಸರ್,
ಮುನ್ನಾರ್ ಪ್ರವಾಸ ಲೇಖನ ಶುರುವಿಡುತ್ತಾ ಮಲ್ಲಿಕಾರ್ಜುನರ ಸ್ನೇಹವಾಗಿದ್ದನ್ನೂ ತಿಳಿಸಿದ್ದೀರಿ. ಜೊತೆಜೊತೆಯಲ್ಲಿಯೇ ಪ್ರಶಸ್ತಿಭಾಜನರಾಗಿದ್ದ ವಿಚಾರವನ್ನೂ ತಿಳಿಸಿದ್ದೀರಿ. ನಿಮ್ಮ ಸ್ನೇಹಕ್ಕೆ ಹ್ಯಾಟ್ಸಾಫ್... ಹೀಗೆಯೇ ಇರಲಿ ನಿಮ್ಮ ಸ್ನೇಹ.
ಮುನ್ನಾರ್ ಪ್ರವಾಸಾನುಭವ ಓದುತ್ತಿರುವಾಗ ನಾವೂ ಹೋಗಿಬಂದಷ್ಟೆ ಸಂತೋಷವಾಯಿತು. ಮುಂದಿನ ಭಾಗಕ್ಕಾಗಿ ಕಾತರದಿಂದ ಕಾಯುತ್ತಿರುವೆ.
ಧನ್ಯವಾದಗಳು.
ಸ್ನೇಹದಿಂದ,
ಬೇಗ ಬರಲಿ next part...
ಶಿವೂ ಸರ್
ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ
ಹೊಸ ವರ್ಷದ ಶುಭಾಶಯಗಳು
ನಿಮ್ಮ ಮುನ್ನರ ಫೋಟೋಗಳನ್ನು ಇನ್ನೂ ಹಾಕಿ
ವಿವರಣೆ ಓದುತ್ತಿದ್ದರೆ ನಾವೇ ಅಲ್ಲಿ ಇದ್ದಂತೆ ಭಾಸವಾಯಿತು
ಸವಿಗನಸು ಮಹೇಶ್ ಸರ್,
ಮುನ್ನಾರಿನ ಚಿತ್ರಗಳನ್ನು ಮತ್ತು ಲೇಖನಗಳನ್ನು ಮೆಚ್ಚಿ ಮುನ್ನಾರಿಗೆ ಹೋಗುವ ಆಸೆ ವ್ಯಕ್ತಪಡಿಸಿದ್ದೀರಿ. ಹೋಗಿಬನ್ನಿ.
all the best.
ಸುಬ್ರಮಣ್ಯ ಬಟ್ ಸರ್,
ನೀವು ಹೇಳುವುದು ಸರಿಯಾಗಿದೆ. ನಾನು ಹೇಳಿದ್ದು ನಿಮ್ಮ ಅಭಿಪ್ರಾಯ ತಪ್ಪೆಂದು ಅಲ್ಲ. ಅದನ್ನು ತಪ್ಪಾಗಿ ಅರ್ಥೈಸದಿರಿ. ನನ್ನ ಕ್ಯಾಮೆರಾ ಮ್ಯಾಜಿಕ್ನಿಂದ ಚೆನ್ನಾಗಿ ಬಂದಿದೆ ಅಂದಿದ್ದೀರಿ ಅದಕ್ಕೆ ಥ್ಯಾಂಕ್ಸ್.
ಹೀಗೆ ಬರುತ್ತಿರಿ...
ಪರಂಜಪೆ ಸರ್,
ಮುನ್ನಾರ್ ಪ್ರವಾಸ ಖಂಡಿತ ರೋಚಕವೇ ಸರಿ. ಮೊದಲ ಬಾರಿ ಹೋಗುವವರಿಗೆ ಅಲ್ಲಿ ವಿಭಿನ್ನ ಅನುಭವವಾಗುತ್ತದೆ. ಖಂಡಿತ ನೀವು ಹೋಗಿಬನ್ನಿ ಚೆನ್ನಾಗಿರುತ್ತದೆ.
ಪ್ರಶಾಂತ್ ಭಟ್,
ಮುನ್ನಾರಿಗೆ ಹೋಗುವವರಿಗೆ ಖಂಡಿತ ಉಪಯೋಗವಾಗಲಿ ಅನ್ನುವ ಉದ್ದೇಶದಿಂದಲೇ ಎಲ್ಲವನ್ನು ವಿವರವಾಗಿ ಕೊಡಲೆತ್ನಿಸಿದ್ದೇನೆ. ನನ್ನ ಬರಹದಿಂದ ನೀವು ನಮ್ಮೊಂದಿಗೆ ಇದ್ದಂತೆ ಅನಿಸಿದರೆ ಅದಕ್ಕೆ ಥ್ಯಾಂಕ್ಸ್...
ಬೆಟ್ಟ ಪ್ರದೇಶಗಳಲ್ಲಿ ಬೆಳಗಿನ ಮತ್ತು ಸಂಜೆಯ ಸಮಯದ ವಾತಾವರಣ ತುಂಬಾ ಚೆನ್ನಾಗಿರುತ್ತದೆ. ಮುಂದಿನ ಭಾಗವನ್ನು ಶೀಘ್ರದಲ್ಲಿ ಬ್ಲಾಗಿಗೆ ಹಾಕುತ್ತೇನೆ. ಅದು ಮತ್ತು ಕುತೂಹಲವಾಗಿದೆ ಅನ್ನುವುದು ನನ್ನ ಅನಿಸಿಕೆ...ಮತ್ತೆ ಬನ್ನಿ.
ಗುರು,
ಮುನ್ನಾರಿನಲ್ಲಿ ನೀವು ಶರವಣ ಭವನ್ ಊಟದ ರುಚಿ ನೋಡಿದ್ದೀರಲ್ಲ. ಹಾಗೆ ಹೊರಗೆ ರಸ್ತೆಬದಿಯಲ್ಲಿನ ಊಟದ ರುಚಿಯನ್ನು ಮುಂದಿನ ಬಾರಿ ಹೋದಾಗ ನೋಡಿ. ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಕುಲಕರ್ಣಿ ಸರ್,
ಹೊಸ ವರ್ಷದ ಶುಭಾಶಯಗಳು. ಮೊದಲ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ರಾಕೇಶ್,
ಮುನ್ನಾರಿನ ಚಿತ್ರ ಮತ್ತು ಲೇಖನವನ್ನು ನೋಡಿ ನಿಮಗೂ ಅಲ್ಲಿಗೆ ಹೋಗಬೇಕೆನಿಸಿದ್ದರೆ ಖಂಡಿತ ಹೋಗಿ. ನೀವು ವಾರಕ್ಕೊಂದು ಸ್ಥಳಕ್ಕೆ ಪ್ರವಾಸ ಹೊರಡುವ ವಿಚಾರವನ್ನು ನಿಮ್ಮ ಬ್ಲಾಗಿನಲ್ಲಿ ನೋಡುತ್ತಿರುತ್ತೇನೆ. ಮುಂದಿನ ಭಾಗಕ್ಕೆ ಖಂಡಿತ ಬನ್ನಿ.
ದೇಸಾಯಿ ಸರ್,
ಮುನ್ನಾರಿ ಹೋಗುವ ಆಸೆ ಬಂದಿದೆಯಲ್ಲಾ...ಬೇಗ ಹೋಗಿಬನ್ನಿ. all the best.
ಪ್ರಶಾಂತ್ ,
ನನ್ನಮುನ್ನಾರ್ ಚಿತ್ರಗಳು ಮತ್ತು ಲೇಖನ ಓದಿ ನಿಮಗೆ ಮುನ್ನಾರಿಗೆ ಹೋಗುವ ಆಸೆ ಬಂದಿದ್ದಕ್ಕೆ ಥ್ಯಾಂಕ್ಸ್..
ಅಲ್ಲಿ ಖಂಡಿತ ನಿಮ್ಮ ಅಧಿತಿ enjoy ಮಾಡುತ್ತಾಳೆ...
ಮುಂದಿನ ಭಾಗವನ್ನು ಖಂಡಿತ ಬೇಗ ಹಾಕುತ್ತೇನೆ..
ಧನ್ಯವಾದಗಳು.
ಶಿವಪ್ರಕಾಶ್,
ಪ್ರವಾಸ ಕಥನ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್..
ಚಂದ್ರು ಸರ್,
ಮುನ್ನಾರ್ ಪ್ರವಾಸ ಮೊದಲು ಪ್ರಾರಂಭವಾಗಿದ್ದೆ ಮಲ್ಲಿಕಾರ್ಜುನ್ ಬೇಟಿಯ ಮೂಲಕ. ತುಂಬಾ ದಿನದಿಂದ ಬರೆಯಬೇಕೆಂದುಕೊಂಡಿದ್ದು ಆಗಿರಲಿಲ್ಲ. ಅದರ ಎಲ್ಲಾ ರೀತಿಯ ವಿವರಗಳನ್ನು ನನ್ನ ಅನುಭವದ ಮೂಲಕ ಕೊಡಲು ಪ್ರಯತ್ನಿಸಿದ್ದೇನೆ.
ಬೇಗ ಮುಂದಿನ ಭಾಗವನ್ನು ಬ್ಲಾಗಿನಲ್ಲಿ ಹಾಕುತ್ತೇನೆ.
chithricka,
ಖಂಡಿತ ಮುಂದಿನ ಭಾಗವನ್ನು ಬೇಗ ಹಾಕುತ್ತೇನೆ.
ಗುರುಮೂರ್ತಿ ಹೆಗಡೆ ಸರ್,
ನಿಮಗೂ ಹೊಸ ವರ್ಷದ ಶುಭಾಶಯಗಳು. ಮುನ್ನಾರಿನ ಚಿತ್ರ ಲೇಖನವನ್ನು ಮೆಚ್ಚಿದ್ದೀರಿ. ಅದಕ್ಕೆ ಧನ್ಯವಾದಗಳು.
ಚೆನ್ನಾಗಿದೆ ನಿಮ್ಮ ಅನುಭವ ಚಿತ್ರಲೇಖನ. ವಿವರವಾಗಿ ಎಲ್ಲವನ್ನೂ ತಿಳಿಸಿದ್ದೀರ.
ಹೊಸವರ್ಷದ ಶುಭಾಶಯಗಳು.
ಶಿವು ಸರ್, ನೀವು ಮತ್ತು ಮಲ್ಲಿ ಹೇಗೆ ಸ್ನೇಹಿತರಾದಿರಿ ಎಂದು ಚೆನ್ನಾಗಿ ವಿವರಿಸಿದ್ದೀರಿ. ಮುನ್ನಾರ್ ಪ್ರವಾಸಕಥನ ಕುತೂಹಲಕಾರಿಯಾಗಿದೆ. ನನಗೂ ಹೀಗೆ ಫೋಟೋಗ್ರಾಫಿಗಾಗಿ ಪ್ರವಾಸ ಹೋಗಬೇಕೆನಿಸಿದೆ, ಆದರೆ ಯಾರೂ ಸಮಾನ ಆಸಕ್ತಿಯವರು ಜೊತೆ ಸಿಕ್ಕಿಲ್ಲ ಇನ್ನೂ.
Nice article...Photo super..
ಚಿತ್ರಗಳು ಸಕತ್ತಾಗಿ ಮೂಡಿ ಬಂದಿವೆ.. ಹಿಂದೊಮ್ಮೆ ಅಲ್ಲಿಗೆ ಹೋಗೋ ಬಗ್ಗೆ ನಿರ್ಧಾರ ಮಾಡಿ, ಏನೋ ಕಾರಣಕ್ಕೆ ರದ್ದು ಮಾಡಬೇಕಾಯಿತು.. ಚಿತ್ರಗಳನ್ನು ನೋಡಿ ಮುನ್ನಾರ್ ಪುನಹ ನೆನಪಾಯ್ತು...
ಪ್ರೀತಿಯ ಶಿವು ಅವರೆ,
ಬ್ಲಾಗಿನಲ್ಲಿ ಎಲ್ಲರೂ ವಿಚಾರಗಳನ್ನು ಬರೆಯುತ್ತಿದ್ದೇವೆ...ಕನ್ನಡ ಹೀಗೇ ಬೆಳೆಯಲಿ. ಅದಕ್ಕಿಂತಲೂ ಮುಖ್ಯ ಎಂದರೆ..ಇಲ್ಲಿ ಎಷ್ಟೊಂದು ಸ್ನೇಹ ಬೆಳೆಯುತ್ತಿದೆ...ಎಷ್ಟೊಂದು ಜನ ಸ್ನೇಹಿತರಾಗುತ್ತಿದ್ದೇವೆ ..! ಈ ಕ್ಷಣಿಕ ಬದುಕಿನಲ್ಲಿ ಇಂಥ ಪ್ರೀತಿಗಿಂತಲೂ ಬೇರೇನು ಬೇಕಾಗಬಹುದು ಹೇಳಿ....ನಿಮ್ಮ ಮುನ್ನಾರ್ ಪ್ರವಾಸ ಕಥನದ ಮೂಲಕ ಎಲ್ಲರಲ್ಲೂ ಇನ್ನಷ್ಟು ಸ್ನೇಹ ಬೆಳೆಯುವಂತಾಗಲಿ....all the best and waiting for muunnar future episodes. Thank u
ಪ್ರತಿ ದಿನ ಹೊಸತೇನಾದರೂ ಬರೆದಿದ್ದೀರಾ ಎಂದು ನೋಡುತ್ತಿದ್ದೇನೆ. ಬಹುಶಃ ವಾರಾಂತ್ಯದಲ್ಲಿ ಬರೆಯುತ್ತೀರೇನೋ. ನಾವು ಕೊಡೈಕನಾಲ್ ನೋಡಿ ಬಂದು ಎರಡು ವರ್ಷ ಆಗಬಂತು. ನಿಮ್ಮ ಮುನ್ನಾರ್ ಪ್ರವಾಸ ಓದಿದ ಮೇಲೆ ನಮ್ಮ ಅನುಭವಗಳನ್ನು ಬರೆದಿಡಲ್ಲಿಲ್ಲವಲ್ಲಾ ಎಂದು ಕೊರಗುತ್ತಿದ್ದೇನೆ.
ಶಿವು ಸಾರ್
ಚಿತ್ರಗಳು ಮತ್ತು ಬರಹ ಎರಡೂ ಸೊಗಸಾಗಿವೆ... ಬೇಗ ಮುಂದುವರೆಸಿ...
ಶ್ಯಾಮಲ
ಪೂರ್ತಿ ಲೇಖನ ಓದುವ ವ್ಯವಧಾನವಿಲ್ಲದೆ ಬರೇ ಫೋಟೋಗಳನ್ನು ನೋಡಿದೆ. ನಾನು ಮುನ್ನಾರನ್ನು ಎದುರೆದುರು ನೋಡಿದ್ದರೂ, ಈ ಫೋಟೋಗಳು ಬೇರೆಯೇ ಅನುಭವವನ್ನುಂಟುಮಾಡಿದವು. ಇನ್ನೂ ಹೆಚ್ಚಿಗೆ ಫೋಟೋಗಳನ್ನು ಹಾಕಿ.
ನಿಮ್ಮ ಪ್ರವಾಸಾನುಭವ ತುಂಬಾ ಚೆನ್ನಾಗಿ ಮೂಡಿಬಂದಿದೆ.ಫೋಟೋ ಗಳಂತೂ ಒಂದಕ್ಕಿಂತ ಒಂದು ಅದ್ಭುತ.ಎರಡನೆಯ ಕಂತಿಗಾಗಿ ಕಾಯುತ್ತಿದ್ದೇನೆ.
ವಂದನೆಗಳು ,
ಬೇಲೂರು ದ.ಶಂ.ಪ್ರಕಾಶ್ @ http://dsprakash.blogspot.com/
ವಿನುತಾ,
ಮುನ್ನಾರ್ ಪ್ರವಾಸ ಲೇಖನದ ಮತ್ತಷ್ಟು ಸೂಕ್ಷ್ಮ ವಿವರಗಳನ್ನು ಮುಂದಿನ ಲೇಖನದಲ್ಲಿ ಕೊಡುತ್ತೇನೆ. ಆಗ ನೋಡಿ ಮತ್ತಷ್ಟು ಸಂತೋಷಪಡಬಹುದು.
ಧನ್ಯವಾದಗಳು.
ಶಿವು ಸರ್,
ನಿಮ್ಮ ಮತ್ತು ಮಲ್ಲಿಕಾರ್ಜುನ ಭೇಟಿ ಮತ್ತು ಮುನ್ನಾರ್
ಪ್ರವಾಸ ಕಥನ ತುಂಬಾ ಚನ್ನಾಗಿ ವಿವರಿಸಿದ್ದಿರಿ.
ಮುಂದಿನ ಭಾಗದ ನಿರಿಕ್ಷೆಯಲ್ಲಿ....
ದೀಪಸ್ಮಿತ ಸರ್,
ನೀವು ಹೀಗೆ ಫೋಟೊಗ್ರಫಿ ಪ್ರವಾಸ ಹೋಗಬೇಕೆನ್ನಿಸಿದರೆ ನಮ್ಮ ಯೂತ್ ಫೋಟೊಗ್ರಫಿ ಸೊಸೈಟಿಯ ಸದಸ್ಯರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ. ಅಲ್ಲಿ ವರ್ಷಕ್ಕೊಮ್ಮೆ ರಂಗನತಿಟ್ಟು, ಕೊಕ್ಕರೆಬೆಳ್ಳೂರು, ಬಂಡಿಪುರ, ನಾಗರಹೊಳೆ, ಚಿತ್ರದುರ್ಗ, ಹಂಪಿ, ಬಾದಾಮಿ ಪಟ್ಟದಕಲ್ಲು, ಹೀಗೆ ಅನೇಕ ನಮ್ಮ ಛಾಯಾಗ್ರಾಹಕರಿಗೆ ಪ್ರವಾಸ ಏರ್ಪಡಿಸುತ್ತಾರೆ. ನೀವು ಹೋಗಬಹುದು. ನಾವು ಆ ರೀತಿ ಹೋಗಿ ಬಂದಮೇಲೆ ನಾವೇ ವೈಯಕ್ತಿಕವಾಗಿ ಹೋಗಲು ಪ್ರಾರಂಭಿಸಿದ್ದು.
ಮೊದಲು ಅದರ ಅನುಭವ ಪಡೆದುಕೊಳ್ಳಿ. ನಂತರ ಎಲ್ಲಾ ಸುಲಭವಾಗುತ್ತದೆ...
ಧನ್ಯವಾದಗಳು.
ರವಿಕಾಂತ್ ಗೋರೆ ಸರ್,
ಚಿತ್ರಲೇಖನವನ್ನು ಮೆಚ್ಚಿದ್ದೀರಿ ಧನ್ಯವಾದಗಳು.
ಮುಂದಿನ ಭಾಗಕ್ಕೆ ಬನ್ನಿ.
ಪ್ರದೀಪ್,
ಮುನ್ನಾರಿಗೆ ಹೋಗುವ ಅವಕಾಶ ಸಿಕ್ಕಾಗ ಖಂಡಿತ ತಪ್ಪಿಸಿಕೊಳ್ಳಬೇಡಿ. ನನ್ನ ಚಿತ್ರಲೇಖನವನ್ನು ನೋಡಿ ಖುಷಿಪಟ್ಟಿದ್ದೀರಿ. ಮುಂದಿನಭಾಗಕ್ಕೆ ಬನ್ನಿ.
ಸುಬ್ರಮಣ್ಯಭಟ್ ಸರ್,
ನೀವು ಹೇಳಿದಂತೆ ಬ್ಲಾಗ್ ಲೋಕ ಅನೇಕರನ್ನು ನನಗೆ ಗೆಳೆಯರನ್ನಾಗಿಸಿದೆ. ನಮ್ಮಲ್ಲಿರುವ ವಿಚಾರಗಳನ್ನು ಹಂಚಿಕೊಳ್ಳಲು ಮನದೊಳಗಿನ ದುಗಡಗಳನ್ನು ಹೊರಹಾಕಿ ಸಮಾಧಾನ ಪಡೆಯಲು ಬ್ಲಾಗ್ ಒಂದು ಉತ್ತಮ ಮಾದ್ಯಮವಾಗಿದೆ ಎಂದರೆ ತಪ್ಪಾಗಲಾರದು.
ಇದನ್ನು ಮುಂದೆಯೂ ಮತ್ತಷ್ಟು ಒಳ್ಳೆಯ ಬೆಳವಣಿಗೆಗೆ ನಾವೆಲ್ಲಾ ಉಪಯೋಗಿಸೋಣ.
ಮತ್ತೆ ಬಂದು ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಚೈತ್ರಿಕ ಮೇಡಮ್,
ಮುನ್ನಾರ್ ಪ್ರವಾಸ ಮುಂದಿನ ಭಾಗವನ್ನು ಇವತ್ತು [ಶುಕ್ರವಾರ]ಹಾಕುತ್ತೇನೆ. ನನ್ನ ಈ ಲೇಖನದಿಂದಾಗಿ ನಿಮಗೂ ನಿಮ್ಮ ಪ್ರವಾಸ ಅನುಭವವನ್ನು ಬರೆಯುವ ಆಸೆಯಾಗಿದ್ದಕ್ಕೆ ಥ್ಯಾಂಕ್ಸ್..ಬೇಗ ಬರೆಯಿರಿ. ನಾವು ಓದುತ್ತೇವೆ.
ಮತ್ತೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್..
ಶ್ಯಾಮಲ ಮೇಡಮ್,
ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದೀರಿ ಧನ್ಯವಾದಗಳು. ಮತ್ತೆ ಬನ್ನಿ.
ಮುತ್ತುಮಣಿ ಮೇಡಮ್,
ಮುನ್ನಾರ್ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದೀರಿ. ಸಾಧ್ಯವಾದರೆ ಲೇಖನವನ್ನು ಓದಿ ಅದು ಬೇರೆಯದೆ ರೀತಿಯ ಅನುಭವವನ್ನು ಕೊಡಬಹುದು. ಇಡೀ ಮುನ್ನಾರ್ ಪ್ರವಾಸದ ಲೇಖನದಲ್ಲಿ ಮತ್ತು ಚಿತ್ರಗಳಲ್ಲಿ ಬೇರೆಯದೇ ರೀತಿಯ ದೃಷ್ಟಿಕೋನದಲ್ಲಿ ಬರೆದಿರುವುದರಿಂದ ಮುಂದೆ ಅಲ್ಲಿಗೆ ಹೋಗುವವರಿಗೆ ಸುಲಭವಾಗಲಿ ಅನ್ನುವ ಉದ್ದೇಶದಿಂದ ನನ್ನ ಪ್ರಯತ್ನ ಮಾಡಿದ್ದೇನೆ.
ಮುಂದಿನ ಭಾಗಕ್ಕೂ ಬನ್ನಿ.
ಸಲೀಂ,
ಮಲ್ಲಿ ಮತ್ತು ನನ್ನ ಬೇಟಿ ನಿಮಗನ್ನಿಸಿದಂತೆ ನನಗೂ ಅನಿರೀಕ್ಷಿತವೇ...ನಿಮ್ಮ ನಿರೀಕ್ಷೆಯಂತೆ ಮುಂದಿನ ಭಾಗವನ್ನು ಇವತ್ತು ಬ್ಲಾಗಿನಲ್ಲಿ ಹಾಕುತ್ತೇನೆ.
ಧನ್ಯವಾದಗಳು.
pravaasa kathana tumbaa chennagide shivu,Saravana bhavan oota munnarige hoodavarella saviyuttaaroo eenO,nimma haagu mallikarjun avara modala bheeti parichaya,snehada bagge cennagi barediddIri.saamaanyavagi photographer gala parichaya vvaagOdu lab nalle
thanks
ashok uchangi
ಬೇಲೂರು ದ.ಶಂ.ಪ್ರಕಾಶ್
ಮುನ್ನಾರ್ ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಮುಂದಿನ ಭಾಗವನ್ನು ಖಂಡಿತ ಹಾಕುತ್ತೇನೆ ಬನ್ನಿ.
ಆಶೋಕ್ ಉಚ್ಚಂಗಿ,
ನೀವು ಹೇಳಿದಂತೆ ಖಂಡಿತ ಫೋಟೊಗ್ರಾಫರುಗಳ ಪರಿಚಯ ಕಲರ್ ಲ್ಯಾಬಿನಲ್ಲೇ ಆಗುತ್ತದೆ. ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಸುಬ್ರಮಣ್ಯ ಬಟ್ ಸರ್, ನೀವು ಹೇಳುವುದು ಸರಿಯಾಗಿದೆ. ನಾನು ಹೇಳಿದ್ದು ನಿಮ್ಮ ಅಭಿಪ್ರಾಯ ತಪ್ಪೆಂದು ಅಲ್ಲ. ಅದನ್ನು ತಪ್ಪಾಗಿ ಅರ್ಥೈಸದಿರಿ. ನನ್ನ ಕ್ಯಾಮೆರಾ ಮ್ಯಾಜಿಕ್ನಿಂದ ಚೆನ್ನಾಗಿ ಬಂದಿದೆ ಅಂದಿದ್ದೀರಿ ಅದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ...
Post a Comment