Friday, January 29, 2010

ಮತ್ತಷ್ಟು ವೈವಿಧ್ಯಮಯ ಬಹುಮಾನಿತ ಚಿತ್ರಗಳು

೩೧ನೇ ರಾಷ್ಟ್ರಮಟ್ಟದ ಛಾಯಾಚಿತ್ರಗಳ ಪ್ರದರ್ಶನ ಮುಂದಿನ ತಿಂಗಳು ಫೆಬ್ರವರಿ ದಿನಾಂಕ 4ರ ಗುರುವಾರದಿಂದ 7ನೇಭಾನುವಾರದ ಸಂಜೆ ಎಂಟು ಗಂಟೆಯವರೆಗು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವುದರಿಂದ ಅದರ ಸಲುವಾಗಿ ಮತ್ತಷ್ಟು ವಿಭಾಗಗಳ ಬಹುಮಾನ ವಿಜೇತ ಚಿತ್ರಗಳನ್ನು ನೋಡೋಣ ಬನ್ನಿ.

ಪ್ರಕೃತಿ ಪ್ರಿಂಟ್ ವಿಭಾಗದಲ್ಲಿ ಬಹುಮಾನ ಪಡೆದ ಚಿತ್ರಗಳು.

ಮೊದಲ ಬಹುಮಾನ ಪಡೆದ ಚಿತ್ರ:"ಕ್ರೂಗರ್ ಹೊಳೆಯ ದಂಡೆಯಲ್ಲಿ ಚಿರತೆ"
ಛಾಯಾಗ್ರಾಹಕ ಎಸ್. ವಲ್ಲಾಳ್ ಮಲ್ಲಿಕಾರ್ಜುನ. ಬೆಂಗಳೂರು

ಎರಡನೇ ಬಹುಮಾನ ಪಡೆದ ಚಿತ್ರ:"ಬೇಟೆಯನ್ನು ಹೊತ್ತೆಯ್ಯುತ್ತಿರುವ ಚಿರತೆ"
ಛಾಯಾಗ್ರಾಹಕ ಎಸ್. ವಲ್ಲಾಳ್ ಮಲ್ಲಿಕಾರ್ಜುನ. ಬೆಂಗಳೂರು.


ಮೂರನೇ ಬಹುಮಾನ ಪಡೆದ ಚಿತ್ರ "ಬೇಟೆಯನ್ನು ಹೊತ್ತ ಸಿಂಹ"
ಛಾಯಾಗ್ರಾಹಕ: ಬಿ.ಕೆ.ಸಿನ್ಹ. ಪಾಟ್ನ.


ಅತ್ಯುತ್ತಮ ಹಕ್ಕಿ ಪ್ರಶಸ್ಥಿ ಪಡೆದ ಚಿತ್ರ: "ಪೈಡ್ ಕಿಂಗ್‍ಫಿಶರ್ ಹಾರಾಟದಲ್ಲಿ"
ಛಾಯಾಗ್ರಾಹಕ: "ಜಿ.ಎಸ್.ರವಿಶಂಕರ್. ಮೈಸೂರು.

ಅರ್ಹತಾ ಪತ್ರ ಪಡೆದ ಚಿತ್ರ: "ಸಾರಂಗ ಬೇಟೆ ಹಿಡಿದ ಹುಲಿ"
ಛಾಯಾಗ್ರಾಹಕ: "ಎಮ್.ವಿ.ಸಿದ್ಧಾರ್ಥ್ ಮಲ್ಲಿಕ್. ಬೆಂಗಳೂರು.


ಎರಡನೇ ಅರ್ಹತ ಪತ್ರ ಪಡೆದ ಚಿತ್ರ:"ರಿವರ್ ಟರ್ನ್ ಮರಿಯ ಜೊತೆ"
ಛಾಯಾಗ್ರಾಹಕ: "ಹೆಚ್.ಬಿ.ರಾಜೇಂದ್ರ" ಬೆಂಗಳೂರು.


ವರ್ಣ ಚಿತ್ರಗಳ ವಿಭಾಗದ ಬಹುಮಾನ ವಿಜೇತ ಚಿತ್ರಗಳು.

ಮೊದಲ ಬಹುಮಾನ ವಿಜೇತ ಚಿತ್ರ" ಮರಗಳ ಕಡೆಗೆ"
ಛಾಯಾಗ್ರಾಹಕ: ಸುಬ್ರತಾ ದಾಸ್. ಕೋಚ್ ಬಿಹಾರ


ದ್ವಿತೀಯ ಬಹುಮಾನ ವಿಜೇತ ಚಿತ್ರ: ಭುವಿಯ ಸ್ವರ್ಗ"
ಛಾಯಾಗ್ರಾಹಕ: ಎಸ್. ಲೋಕೇಶ್. ಬೆಂಗಳೂರು.

ಮೂರನೇ ಬಹುಮಾನ ವಿಜೇತ ಚಿತ್ರ: " ಶ್ಲೋಕ"
ಛಾಯಾಗ್ರಾಹಕ : ಸುಭಾಸ್ ಜೀರಂಗೆ. ಮುಂಬೈ

ಮೊದಲ ಆರ್ಹತ ಪತ್ರ ಪಡೆದ ಚಿತ್ರ "ಸೆಂಟಿಮೆಂಟಲಿಷ್ಟ್"
ಛಾಯಾಗ್ರಾಹಕ: ಬಿಜನ್ ಕುಮಾರ್ ಮಂಡಲ್. ಕೊಲ್ಕತ್ತ.

ಎರಡನೇ ಅರ್ಹತಾ ಪತ್ರ ಪಡೆದ ಚಿತ್ರ: "ಚಿನ್ನದ ಕೂದಲಿನ ಮಗು"
ಛಾಯಾಗ್ರಾಹಕ: ಕೆ.ಜಿ.ಪದ್ಮನಾಭ. ಬೆಂಗಳೂರು.

ಕಪ್ಪು-ಬಿಳುಪು ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.
ಅರ್ಹತಾ ಪತ್ರ ಪಡೆದ ಚಿತ್ರ: "ಸುಂದರ ಆಡುಗೆ"
ಛಾಯಾಗ್ರಾಹಕ: ಟಿ.ಶ್ರೀನಿವಾಸ ರೆಡ್ಡಿ. ವಿಜಯವಾಡ.

ಎರಡನೇ ಅರ್ಹತಾ ಪತ್ರ ಪಡೆದ ಚಿತ್ರ: "ಮೋನಿಷ"
ಛಾಯಾಗ್ರಾಹಕ: ಕೆ.ಎಸ್.ಶ್ರೀನಿವಾಸ್. ಬೆಂಗಳೂರು.

ಮೂರನೇ ಅರ್ಹತ ಪತ್ರ ಪಡೆದ ಚಿತ್ರ: "ರಾತ್ರಿ ದೃಶ್ಯ".
ಛಾಯಾಗ್ರಾಹಕ: ಸುಬ್ರತಾ ದಾಸ್. ಕೋಚ್ ಬಿಹಾರ್.


ಅತ್ಯುತ್ತಮ ಪೋರ್ಟ್ರೈಟ್ ಬಹುಮಾನ ಪಡೆದ ಚಿತ್ರ: "ಕನಸನ್ನು ಬೆಂಬತ್ತಿ"
ಛಾಯಾಗ್ರಾಹಕ:"ಪಾಲ್ ಅನೂಪ್" ಕೊಲ್ಕತ್ತ.


ದ್ವಿತೀಯ ಬಹುಮಾನ ವಿಜೇತ ಚಿತ್ರ: "ಶನಿವಾರ ರಾತ್ರಿ"
ಛಾಯಾಗ್ರಾಹಕ: :"ಪಾಲ್ ಅನೂಪ್" ಕೊಲ್ಕತ್ತ.


ಮೊದಲ ಬಹುಮಾನ ವಿಜೇತ: "ಕನಸಿನ ಮನೆ"
ಛಾಯಾಗ್ರಾಹಕ: ಶಿವು.ಕೆ. ಬೆಂಗಳೂರು.
ಫೆಬ್ರವರಿ ನಾಲ್ಕರಿಂದ ಏಳರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ಫೋಟೊಗಳ ಉತ್ಸವದಲ್ಲಿ ಬೇಟಿಯಾಗೋಣ. ಬರುತ್ತಿರಲ್ಲಾ!

\-------------------------\
\---------------------------------------------\
ಚಿತ್ರಸಂತೆಯ ಬಗ್ಗೆ ಒಂದು ವಿಚಾರ

ಈ ಕೆಳಗಿನ ಚಿತ್ರವನ್ನು ನೋಡಿ. ಸಂಜೆ ಸೂರ್ಯಮುಳುಗುವ ಹೊತ್ತಿಗೆ ಎತ್ತಿನ ಗಾಡಿ ಮನೆಕಡೆಗೆ ಬರುತ್ತಿರುವ ದೃಶ್ಯದ ಸುಂದರವಾದ ಕಲಾಕೃತಿ ಗೋಡೆಯನ್ನು ಆಲಂಕರಿಸಿದೆಯಲ್ಲವೇ. ಈ ಸುಂದರ ಪೇಂಟಿಂಗ್ ಮಾಡಿದ್ದು ನನ್ನ ಶ್ರೀಮತಿಯ ದೊಡ್ಡಪ್ಪನ ಮಗನಾದ ವಸಂತ್. ಅವರು ಇರುವುದು ಹಾಸನದಲ್ಲಿ . ಅಲ್ಲಿನ ಒಂದು ಶಾಲೆಯಲ್ಲಿ ಚಿತ್ರಕಲಾ ಉಪದ್ಯಾಯರಾಗಿರುವ ಅವರು ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಗೆ ಇಂಥ ಹತ್ತಾರು ಚಿತ್ರಗಳನ್ನು ತರುತ್ತಾರೆ. ನಾನು ಕ್ಲಿಕ್ಕಿಸಿದ ಚಿತ್ರಗಳನ್ನೆಲ್ಲಾ ಪಡೆದುಕೊಂಡು ಅವರು ಮತ್ತು ಅವರ ಶಿಷ್ಯಂದಿರು ಇಂಥ ಸುಂದರ ಪೇಂಟಿಂಗ್ ಮಾಡಿಕೊಂಡು ಚಿತ್ರ ಸಂತೆಗೆ ತರುತ್ತಾರೆ.
ಬಿಡದಿಯಲ್ಲಿರುವ ಈ ಮನೆಗೆ ಕಳೆದ ತಿಂಗಳು ಫೋಟೊ ಕ್ಲಿಕ್ಕಿಸಲು ಹೋದಾಗ ಈ ಚಿತ್ರಕಲಾಕೃತಿಯನ್ನು ನೋಡಿ ಅದನ್ನು ಪೇಂಟ್ ಮಾಡಿರುವುದು ನನ್ನ ಶ್ರೀಮತಿಯ ಅಣ್ಣನೆಂದು, ಹೇಳಿ ಅದರ ಮೂಲ ಚಿತ್ರವನ್ನು ಕೊಟ್ಟಾಗ ಅದನ್ನು ಮತ್ತೊಂದು ಕೋಣೆಯಲ್ಲಿ ಹಾಕಿದ್ದಾರೆ. ಅಲ್ಲಿಗೆ ನಾನೇ ಕ್ಲಿಕ್ಕಿಸಿದ ಫೋಟೊ ಮತ್ತು ಅದನ್ನು ನೋಡಿಕೊಂಡು ಬಿಡಿಸಿದ ಕಲಾಕೃತಿ ಎರಡು ಒಂದೇ ಮನೆಯಲ್ಲಿ ಸೇರಿರುವುದು ಎಂಥ ಕಾಕತಾಳಿಯವಲ್ಲವೇ...
ಆ ಮನೆಯವರು ಈಗಾಗಲೇ ದಿನಾಂಕ ಜನವರಿ ೩೧ರ ಭಾನುವಾರ ನಡೆಯುವ ಚಿತ್ರಸಂತೆಗೆ ಬಂದು ಮತ್ತಷ್ಟು ಛಾಯಾಚಿತ್ರ ಮತ್ತು ಪೇಂಟಿಂಗ್ ಕೊಳ್ಳುವುದಾಗಿ ಹೇಳಿದ್ದಾರೆ.
ಆಂದಹಾಗೆ ನಾಳೆ ಭಾನುವಾರ[ಜನವರಿ೩೧] ಹೇಮಾಶ್ರಿ ಅಣ್ಣ ವಸಂತ್ ಮತ್ತು ಆವರು ಶಿಷ್ಯಂದಿರು ರಚಿಸಿರುವ ಎಲ್ಲಾ ಕಲಾಕೃತಿಗಳನ್ನು ನೋಡಲು ಮತ್ತು ಕೊಂಡುಕೊಳ್ಳಲು ಚಿತ್ರ ಸಂತೆಗೆ ಬನ್ನಿ. ಕಳೆದ ನಾಲ್ಕುವರ್ಷದಿಂದ ಅವರಿಗೆ ಖಾದಿಭಂಡಾರದ ಮುಂದೆಯೇ ಸ್ಥಳ ಸಿಗುತ್ತಿರುವುದರಿಂದ ಖಚಿತವಾಗಿ ಈ ಬಾರಿಯೂ ಅಲ್ಲಿಯೇ ಸ್ಟಾಲ್ ಇಡುತ್ತಾರೆ. ಅಂಥ ದೊಡ್ಡ ಕಲಾಕೃತಿಗಳ ಪಕ್ಕದಲ್ಲಿ ನಾನಿರುತ್ತೇನೆ. ಹಾಗಾದರೆ ನಾಳೆ ಚಿತ್ರ ಸಂತೆಯಲ್ಲಿ ಬ್ಲಾಗ್ ಗೆಳೆಯರೆಲ್ಲಾ ಬೇಟಿಯಾಗುವ!

ಶಿವು.ಕೆ.

Tuesday, January 26, 2010

31 ನೇ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ.

ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರಿನ ಪ್ರತಿಷ್ಠಿತ "ಯೂತ್ ಫೋಟೊಗ್ರಫಿಕ್ ಸೊಸೈಟಿ" 31ನೇ ರಾಷ್ಟ್ರಮಟ್ಟದ ಬಹುದೊಡ್ಡ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಕಪ್ಪುಬಿಳುಪು, ವರ್ಣಮಯ, ಪ್ರಾಕೃತಿಕ, ಪ್ರವಾಸ ವಿಭಾಗಗಳ ಜೊತೆಗೆ ಡಿಜಿಟಲ್ ಪ್ರೊಜೆಕ್ಟ್ ವಿಭಾಗದಲ್ಲಿ ಪ್ರಕೃತಿಕ, ಮತ್ತು ಸೃಜನಶೀಲ ಫೋಟೊಗ್ರಫಿ ವಿಭಾಗವನ್ನು ಸೇರಿಸಿದ್ದು ಈ ಬಾರಿಯ ವಿಶೇಷ. ಈ ಭಾರಿ ದೇಶದಾದ್ಯಂತ ೨೮೫ ಛಾಯಾಗ್ರಾಹಕರು ಭಾಗವಹಿಸಿದ್ದು ಒಟ್ಟಾರೆ ಎರಡು ಸಾವಿರದ ಐದುನೂರಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗೆ ಬಂದಿದ್ದು ದಾಖಲೆ. ಅವುಗಳಲ್ಲಿ ಈಗ ಬಹುಮಾನ ವಿಜೇತ ಚಿತ್ರಗಳ ಸೇರಿದಂತೆ ಒಟ್ಟು ೪೭೨ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಖ್ಯಾತ ಹಿರಿಯ ಛಾಯಾಗ್ರಾಹಕರಾದ ಬೆಂಗಳೂರಿನ ಟಿ.ಎನ್.ಪೆರುಮಾಳ್, ಎಚ್.ವಿ.ಪ್ರವೀಣ್ ಕುಮಾರ್, ಜಿ.ಹರಿನಾರಾಯಣ, ಸಿ.ಅರ್.ಸತ್ಯನಾರಾಯಣ, ಹೈದರಬಾದಿನ ರಾಜನ್‍ಬಾಬು ತೀರ್ಪುಗಾರರಾಗಿ ಕಾರ್ಯನಿರ್ವಾಹಿಸಿದ್ದಾರೆ.
ಛಾಯಾಚಿತ್ರಗಳ ಪ್ರದರ್ಶನವೂ ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ "ವೆಂಕಟಪ್ಪ ಆರ್ಟ್ ಗ್ಯಾಲರಿ"ಯಲ್ಲಿ ಮುಂದಿನ ತಿಂಗಳು ಪೆಬ್ರವರಿ ೪ರಿಂದ ೭ರವರೆಗೆ ನಡೆಯುತ್ತದೆ. ಸಮಯ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಏಳುಗಂಟೆಯವರೆಗೆ.
ಬಹುಮಾನ ವಿತರಣೆ ಕಾರ್ಯಕ್ರಮ ದಿನಾಂಕ ಫೆಬ್ರವರಿ ಏಳನೇ ತಾರೀಖು ಭಾನುವಾರ ಸಂಜೆ ಐದುಗಂಟೆಗೆ.
ಕಾರ್ಯಕ್ರಮದ ಉದ್ಘಾಟನೆ: ಸಂಜೆ 5-30ಕ್ಕೆ. ದಿನಾಂಕ: 4-2-2010.
ಬಹುಮಾನ ವಿತರಣೆ ಕಾರ್ಯಕ್ರಮ: ಸಂಜೆ 4-30ರಿಂದ ದಿನಾಂಕ:7-2-2010.

ಬಹುಮಾನ ವಿಜೇತ ಕೆಲವು ಚಿತ್ರಗಳನ್ನು ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ ಖುಷಿಪಡಿ.


೧. ಪ್ರವಾಸ ಫೋಟೊಗಳ ವಿಭಾಗ

ಮೊದಲ ಬಹುಮಾನ ವಿಜೇತ ಚಿತ್ರ: " ಮರಳುಗಾಡಿನ ದೃಶ್ಯ".
ಛಾಯಾಗ್ರಾಹಕ: ಮುಂಬೈನ "ಉಮಾಕಾಂತ್ ವಿಜಯ್ ಮದನ್"


ಎರಡನೇ ಬಹುಮಾನ ವಿಜೇತ ಚಿತ್ರ: " ಮರಳುಗಾಡಲ್ಲಿ ಉತ್ಸವ"
ಛಾಯಾಗ್ರಾಹಕ: ಕೊಲ್ಕತ್ತದ ದೇಬಸಿಸ್ ತರಫ್ದಾರ್"

ಮೂರನೇ ಬಹುಮಾನ ಪಡೆದ ಚಿತ್ರ: "ಕೈಲಾಸ"

ಛಾಯಾಗ್ರಾಹಕ: ಜೋದ್‍ಪುರದ ವ್ಯಾಸ್ ರಾಮಜಿ"



ಅತ್ಯುತ್ತಮ ಪ್ರವಾಸ ಚಿತ್ರ: " ರೊಲಾಂಗ್ ಮನಾಷ್ಟ್ರಿ"

ಛಾಯಾಗ್ರಾಹಕ: ಕೊಲ್ಕತ್ತದ "ರಾಜೇಶ್ ಧರ್"



ಅರ್ಹತ ಪತ್ರ ಪಡೆದ ಚಿತ್ರ: " ಅದ್ಭುತ ಪರಂಪರೆ"
ಛಾಯಾಗ್ರಾಹಕ: ಬೆಂಗಳೂರಿನ ಆರ್.ಎಸ್. ರಮಕಾಂತ್

ಎರಡನೇ ಅರ್ಹತ ಪತ್ರ ಪಡೆದ ಚಿತ್ರ: "ಆಭಿಶೇಕಮ್"
ಛಾಯಾಗ್ರಾಹಕ: ಆಂದ್ರಪ್ರದೇಶದ "ಜಯಶಿವರಾಮರಾವ್"


ಮೂರನೇ ಅರ್ಹತ ಪತ್ರ ಪಡೆದ ಚಿತ್ರ: " ಚಿತ್ರದುರ್ಗ ಕೋಟೆ"
ಛಾಯಾಗ್ರಾಹಕ: ಬೆಂಗಳೂರಿನ ಕೆ.ಎಸ್.ಶ್ರೀನಿವಾಸ್"



೨. ಡಿಜಿಟಲ್ ನೇಚರ್ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.

ಮೊದಲ ಬಹುಮಾನ : "ಕಾಪರ್ ಸ್ಮಿತ್ ಹಕ್ಕಿ ಮರಿಯ ಜೊತೆ"
ಛಾಯಾಗ್ರಾಹಕ : "ಎಸ್.ಲೋಕೇಶ್. ಬೆಂಗಳೂರು.
ದ್ವಿತೀಯ ಬಹುಮಾನ: "ಆಶಿರೆನ್ ವಾರ್ಬಲರ್ ಹಕ್ಕಿ ಆಹಾರದ ಜೊತೆ"
ಛಾಯಾಗ್ರಾಹಕ: "ಕೆ.ಪಿ. ಮಾರ್ಟಿನ್". ಬೆಂಗಳೂರು.

ಮೂರನೇ ಬಹುಮಾನ: "ಗೋಲ್ಡನ್ ಓರಿಯಲ್ ಆಹಾರದ ಜೊತೆಯಲ್ಲಿ"
ಛಾಯಾಗ್ರಾಹಕ: "ವಿ.ಡಿ.ಭಟ್ ಸುಗಾವಿ. ಸಿರಸಿ.

ಅರ್ಹತ ಪತ್ರ ಪಡೆದ ಚಿತ್ರ: "ಮೂಳೆಯಿಲ್ಲದ ಹದ್ದು ಬೇಟೆಯ ಜೊತೆ
ಛಾಯಾಗ್ರಾಹಕ: "ವಿಧ್ಯಾದರ ಶಿಲ್ಕೆ" ಬೆಳಗಾಂ ಕರ್ನಾಟಕ.
ಅತ್ಯುತ್ತಮ ಚಲನೆಯ ಚಿತ್ರ: "ಮೊಸಳೆಯ ಬಾಯಲ್ಲಿ ಬೇಟೆ"
ಛಾಯಾಗ್ರಾಹಕ: ಎಚ್.ಬಿ.ರಾಜೇಂದ್ರ" ಬೆಂಗಳೂರು.

ಅರ್ಹತ ಪತ್ರ ಪಡೆದ ಚಿತ್ರ: ಕಾಗೆ ಕೋಗಿಲೆ ಮರಿಗೆ ಊಟ ಕೊಡುತ್ತಿರುವುದು"
ಛಾಯಾಗ್ರಾಹಕ: ಎನ್.ಕೆ.ಅರುಣ್‍ಕುಮಾರ್. ಬೆಂಗಳೂರು.


೩. ಡಿಜಿಟಲ್ ಸೃಜನಶೀಲತೆ ವಿಭಾಗದ ಬಹುಮಾನ ವಿಜೇತ ಛಾಯಾಚಿತ್ರಗಳು

ಮೊದಲ ಬಹುಮಾನದ ಚಿತ್ರ "Body language.
ಛಾಯಾಗ್ರಾಹಕ ಕೊಲ್ಕತ್ತದ "ಅನೂಪ್ ಪಾಲ್"


ದ್ವಿತೀಯ ಬಹುಮಾನದ ಚಿತ್ರ :"ಪಾಸ್ಚರಿಂಗ್"
ಛಾಯಾಗ್ರಾಹಕ: "ಅನ್ಶುಮನ್ ರಾಯ್ ಕೊಲ್ಕತ್ತ

ಮೂರನೇ ಬಹುಮಾನ. "ಕ್ಯಾಂಪಿಂಗ್"
ಛಾಯಾಗ್ರಾಹಕ: ಮುಂಬೈನ ನಫೆ ರಾಮ್ ಯಾದವ್"

ಅತ್ಯುತ್ತಮ ಸೃಜನಶೀಲತೆಯ ಚಿತ್ರ: "ಕನಸಿನ ಪರಂಪರೆ"
ಛಾಯಾಗ್ರಾಹಕ: ಕೊಲ್ಕತ್ತದ "ಎಸ್.ಪಿ.ಮುಖರ್ಜಿ"


ಮತ್ತೆ ನಾಲ್ಕು ದಿನಗಳ ನಂತರ ವರ್ಣ ಚಿತ್ರ, ಕಪ್ಪುಬಿಳುಪು ಮತ್ತು ಪ್ರಕೃತಿಕ ಪ್ರಿಂಟ್ ವಿಭಾಗದ ಚಿತ್ರಗಳನ್ನು ಬ್ಲಾಗಿನಲ್ಲಿ ಹಾಕುತ್ತೇನೆ.
ವಿಶೇಷ ಸೂಚನೆ: ಇಲ್ಲಿರುವ ಬಹುಮಾನ ವಿಜೇತ ಚಿತ್ರಗಳ ಹಕ್ಕು ಅದನ್ನು ಕ್ಲಿಕ್ಕಿಸಿದವರದ್ದೇ ಆಗಿರುತ್ತದೆ. ಮತ್ತು ಈ ಚಿತ್ರಗಳು ಪತ್ರಿಕೆ ಪ್ರಚಾರಕ್ಕೆ, ಪ್ರದರ್ಶನಕ್ಕೆ ಮತ್ತು ಪ್ರದರ್ಶನ ನಂತರ ಪ್ರದರ್ಶನ ಪುಸ್ತಕ[ಸವನೇರ್]ದಲ್ಲಿ ಬಳಸಲಿಕ್ಕೆ ಮಾತ್ರ ಅನುಮತಿಯಿರುವುದರಿಂದ, ಯಾರು ಇದನ್ನು ತಮ್ಮ ವೈಯಕ್ತಿಕ ವಿಚಾರಗಳಿಗೆ ಬಳಸಬಾರದಾಗಿ ವಿನಂತಿಸುತ್ತೇನೆ. ಬಳಸಬೇಕೆಂದರೆ ಛಾಯಾಗ್ರಾಹಕರ ಅನುಮತಿ ಪಡೆದುಕೊಳ್ಳಬಹುದು.
ಧನ್ಯವಾದಗಳು
ಶಿವು.ಕೆ

Saturday, January 16, 2010

ಮುನ್ನಾರಲ್ಲಿ ಸೂರ್ಯನ ಸ್ಪಾಟ್ ಲೈಟು

ವಿಮಲ್ ಸರಿಯಾಗಿ ಮೂರುಗಂಟೆಗೆ ಬರುತ್ತಿದ್ದಂತೆ ನಾವು ಮುನ್ನಾರ್ ಮತ್ತು ಕೊಯಮತ್ತೂರ್ ರಸ್ತೆಯಲ್ಲಿನ ಟಾಪ್ ಸ್ಟೇಷನ್ ಕಡೆಗೆ ಹೊರಟೆವು ಅದು ಮುವತ್ತು ಕಿಲೋಮೀಟರ್ ಪ್ರಯಾಣದ ಲೆಕ್ಕಾಚಾರ ಅವನದು, ನಾವು ಆಷ್ಟು ದೂರ ಹೋಗದೇ ವಾಪಸ್ಸು ಬಂದಿದ್ದು ನಮ್ಮ ಲೆಕ್ಕಚಾರ, ಆದ್ರೆ ಅವನ ಪೂರ್ಣ ಹಣವನ್ನು ಕೊಟ್ಟಿದ್ದು ಬೇರೆ ಲೆಕ್ಕಚಾರ. ಮುನ್ನಾರಿಗೆ ತಲುಪುವ ಮೂರು ದಾರಿಯಲ್ಲಿ ಇದು ಒಂದು. ಇದೊಂದರ ವಿಭಿನ್ನವಾದ ಅಪಾಯಕಾರಿ ದಾರಿಯೇ ಸರಿ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನಗಳು ಓಡಾಡುವುದಿಲ್ಲ, ಏಕೆಂದರೆ ಇಲ್ಲಿ ಕಾಡುಪ್ರಾಣಿಗಳು ಅದರಲ್ಲೂ ಆನೆಗಳು ರಾತ್ರಿ ಸಮಯದಲ್ಲಿ ರಸ್ತೆಯ ಮದ್ಯೆ ನಿಂತುಬಿಟ್ಟರೆ ಅಲ್ಲಿಗೆ ಬಸ್ಸು ಕಾರು ಇತರ ವಾಹನಗಳಿಗೆ ಬೇದಿಯಾಗುವುದು ಖಚಿತ. ಅದೇ ಕಾರಣಕ್ಕೆ ಅಲ್ಲಿ ರಾತ್ರಿ ವಾಹನಗಳ ಸಂಚಾರವಿರುವುದಿಲ್ಲ. ನಾವು ಹೊರಟ ಕೆಲವೇ ನಿಮಿಷಗಳಲ್ಲಿ ಅಪಾಯದ ಸುಳಿವು ಸಿಕ್ಕಿತ್ತು. ಐದು ಕಿಲೋಮೀಟರ್ ಸಾಗಿರಬಹುದು ಸಡನ್ನಾಗಿ ವಿಮಲ್ ಆಟೋ ಬ್ರೇಕ್ ಹಾಕಿದ. ನಾವೆಲ್ಲಾ ಒಂದುಕ್ಷಣ ಮುಗ್ಗರಿಸಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಆಟೋ ನಿಲ್ಲಿಸಿಬಿಟ್ಟಿದ್ದ. ನಮಗೆಲ್ಲಾ ಸಿಟ್ಟುಬಂದು ಅವನನ್ನು ಬೈಯ್ಯಬೇಕೆನ್ನುವಷ್ಟರಲ್ಲಿ "ಸಾರ್ ಅಂಗೆ ಪಾರುಂಗ್ ಸಾರ್ ಪಾಂಬು" ಅಂದ. ವಿಮಲ್ ಆಟೋ ಬ್ರೇಕ್ ಹಾಕದಿದ್ದಲ್ಲಿ ಬಹುಶಃ ಮುಂದಿನ ಚಕ್ರ ಆ ದೊಡ್ಡ ಹಾವಿನ ಮೇಲೆ ಹೋಗಿಬಿಡುತ್ತಿತ್ತೇನೋ, ನಮಗೆ ಏನೇ ಹೊಸತು ಹೇಳಲಿ ಭಯಪಡುವುದಕ್ಕಿಂತ ಮೊದಲು ಕ್ಯಾಮೆರಾ ಕೈಗೆತ್ತಿಕೊಳ್ಳುವ ಅಭ್ಯಾಸವಾಗಿಬಿಟ್ಟಿದ್ದರಿಂದ, ಮತ್ತೆ ಬಲಭಾಗದಲ್ಲಿ ನಾನು ಕುಳಿತಿದ್ದು ನನ್ನ ಕ್ಯಾಮೆರಾ ಸಿದ್ಧವಾಗಿದ್ದರಿಂದ ಸಡನ್ನಾಗಿ ರಸ್ತೆ ದಾಟುತ್ತಿದ್ದ ನಾಗರಹಾವಿನ ಫೋಟೊ ತೆಗೆದೆ. ಚೆನ್ನಾಗಿ ಬರಲಿಲ್ಲವಾದರೂ ಫೋಟೊ ತೆಗೆದೆನೆಂಬ ಖುಷಿಯಿತ್ತು. "ಇಂದ ರೋಡಲ್ಲಿ ಪಾಂಬು ಮಾತ್ರವ್ ಇಲ್ಲ ಸಾರ್ ನೈಟ್ ಎಲ್ಲಾ ಕಾಡ್ ಪ್ರಾಣಿಗಳು ವರುದು, ಅದಕ್ಕೆ ಇಂದ ರೋಡಲೇ ಯಾರು ನೈಟ್ ವರಾರು" ಅಂದ. ಅವನ ಮಾತಿಗೆ ನಾವು ಉತ್ತರಿಸಲಿಲ್ಲ.



ಈ ರಸ್ತೆಯಲ್ಲಿ ನಮಗೆ ಫೋಟೊಗ್ರಫಿ ಏನು ಆಗಲಿಲ್ಲ. ಸುಮಾರು ಮುವತ್ತು ಕಿಲೋಮೀಟರ್ ಸಾಗಿ ಮಂಜುವಿನ ಆಸೆಯಂತೆ ಅರಣ್ಯ ಇಲಾಖೆಯವರ ದೊಡ್ಡ ಗೋಪರ ಹತ್ತಿ ಮೇಲೆ ನಿಂತು ಸುಮಾರು ಹತ್ತು ಕಿಲೋಮೀಟರ್ ದೂರದವರೆಗೆ ಕಾಣುವ ಕಾಡಿನ ದೃಶ್ಯವನ್ನು ನೋಡಿದ್ದಾಯಿತು. ನಮ್ಮ ಜೊತೆಗೆ ಬಂದಿದ್ದ ಗಾರ್ಡು ರಾತ್ರಿ ಇಲ್ಲೆಲ್ಲಾ ಆನೆಗಳು ಕಾಣುಪ್ರಾಣಿಗಳು ಬಂದು ಮಲಗುತ್ತವೆ ಅಂತ ಹೇಳಿದಾಗ ಅಲ್ಲಿಯೇ ತಂಗಬೇಕೆಂದುಕೊಂಡಿದ್ದ ಮಂಜುವಿನ ಆಸೆಗೆ ತಣ್ಣೀರು ಎರಚಿದಂತಾಗಿತ್ತು.



ಸಂಜೆಯ ಟ್ರಿಪ್ ಏನು ಉಪಯೋಗವಿಲ್ಲವೆಂದು ವಾಪಸ್ ಬರುತ್ತಿದ್ದೆವು. ಅಷ್ಟರಲ್ಲಿ ಇಡೀ ಮುನ್ನಾರಿಗೆ ಮುನ್ನಾರೇ ಹಸಿರು ಬಟ್ಟೆ ತೊಟ್ಟಂತೆ ಟೀ ಎಷ್ಟೇಟು ಹಸಿರಾಗಿ ಕಂಗೊಳಿಸುತ್ತಿದ್ದರೇ ಅಲ್ಲೊಂದು ಮರ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನುತ್ತಾ ಮೈತುಂಬ ಕೆಂಪುಬಣ್ಣದ ಬಟ್ಟೆ ತೊಟ್ಟು ಹೀರೋಯಿನ್ ಪೋಸ್ ಕೊಡುತ್ತಾ ನಿಂತಿತ್ತು. ಅಲ್ಲಿ ನಿಲ್ಲಿಸಿ ಅದರ ಫೋಟೊ ತೆಗೆದುಕೊಂಡೆವು. ನಡುವೆ ರಸ್ತೆಬದಿಯ ಟೀ ಅಂಗಡಿಯಲ್ಲಿ ಟೀ ಕುಡಿದು ಹೊರಡುವಷ್ಟರಲ್ಲಿ ಸಮಯವಾಗಲೇ ಸಂಜೆ ಐದುಗಂಟೆ. ಚಳಿಗಾಲದಲ್ಲಿ ಮುನ್ನಾರಿನಲ್ಲಿ ಬೇಗನೇ ಕತ್ತಲಾಗುತ್ತದೆ. ಇನ್ನೂ ನಮ್ಮ ಫೋಟೊಗ್ರಫಿ ಸಾಧ್ಯವಿಲ್ಲವೆಂದು ವಿಮಲ್‍ನನ್ನು ಪುಸಲಾಯಿಸುತ್ತಾ ಅವನ ವೈಯಕ್ತಿಕ ಬದುಕಿನ ಬಗ್ಗೆ, ಅವನ ಲವ್, ಇತ್ಯಾದಿ ವಿಚಾರಗಳನ್ನು ಉಮ್ಮಸ್ಸಿನಿಂದ ಅವನು ಹೇಳುತ್ತಿರುವಾಗಲೇ ಆಟೋ ಆಪ್ ಆಗಿಬಿಟ್ಟಿತು. ಅದುವರೆಗೂ ಅವನ ಸಂಭ್ರಮ ವಿಚಾರಗಳನ್ನು ಕೇಳುತ್ತಿದ್ದ ನಮಗೆ ಆಟೋ ಆಫ್ ಆಗಿದ್ದು ಒಂಥರ ದಿಗಿಲಾಯಿತು. "ಏನಾಯ್ತು ವಿಮಲ್" ಮಲ್ಲಿ ಕೇಳಿದರು.



"ಒಣ್ಣು ಇಲ್ಲೇ ಸಾರ್" ಅಂತ ಸ್ಟಾರ್ಟ್ ಮಾಡಿದ. ಅನೇಕ ಬಾರಿ ಪ್ರಯತ್ನಿಸಿದರೂ ಸ್ಟಾರ್ಟ್ ಆಗಲಿಲ್ಲ. ಕೊನೆಗೆ ಇಳಿದು ನೋಡಿದರೆ ಪೇಟ್ರೋಲ್ ಕಾಲಿಯಾಗಿತ್ತು. ನಾವು ಫೋಟೊಗ್ರಫಿಯ ವಿಚಾರ ಬಂದಾಗ ಹುಂಬರಂತೆ ಮುನ್ನುಗ್ಗುವುದು ಅವನಿಗೆ ಗೊತ್ತಾಗಿ ನಮ್ಮ ಸಹವಾಸದಿಂದ ಅವನು ಹುಂಬನಾಗಿ ಪೆಟ್ರೋಲ್ ಹಾಕಿಸಿಕೊಳ್ಳದೇ ಬಂದುಬಿಟ್ಟನೇ ಅನ್ನಿಸಿತು. ನಾವು ಅಂದುಕೊಂಡ ಹಾಗೇ ಅವನು ಪೆಟ್ರೋಲ್ ಹಾಕಿಸಿಕೊಂಡಿರಲಿಲ್ಲ. ಮೊದಲೇ ಕಾಡುರಸ್ತೆ. ಸಂಜೆಸಮಯ. ಕತ್ತಲಾಗುತ್ತಿತ್ತು. ಮುನ್ನಾರು ತಲುಪಲು ಇನ್ನೂ ಅರುಕಿಲೋಮೀಟರ್ ಸಾಗಬೇಕಿತ್ತು. ನಡುವೆ ಎಲ್ಲೂ ಪೆಟ್ರೋಲ್ ಬಂಕ್ ಇರಲಿಲ್ಲ. ಏನು ಮಾಡುವುದು. ಸಂಜೆಯಾಗುತ್ತಿದ್ದಂತೆ ಆನೆಗಳು ಬರುತ್ತವೆ ಅಂತ ಬೇರೆ ಹೇಳಿಬಿಟ್ಟಿದ್ದರಿಂದ ನಮಗೆ ದಿಗಿಲು ಶುರುವಾಗಿತ್ತು.


"ನಿಂಗ್ ಕವಲ್ ಪಡಾದೆ ಸರ್, ನಾನು ಮೇನೇಜ್ ಪಣ್ಣುವೆ" ಅಂದವನೇ ನಮ್ಮನ್ನೆಲ್ಲಾ ಕೆಳಗಿಳಿಸಿ ಒಂದುಬದಿಯ ಚಕ್ರವನ್ನು ನಾವೆಲ್ಲಾ ಮೇಲೆತ್ತುವಂತೆ ಹೇಳಿ ಸ್ವಲ್ಪ ಅಲುಗಾಡಿಸಿ ಇಳಿಸಿ, ತಕ್ಷಣ ಆಟೋ ಸ್ಟಾರ್ಟ್ ಮಾಡಿದ. ಸ್ಟಾರ್ಟ್ ಆಗಿಬಿಡ್ತು. ಅವನ ಚಾಕಚಕ್ಯತೆಗೆ ನಮಗೆಲ್ಲಾ ಬೆರಗು. "ವಕ್ಕಾರಂಗ್ ಸರ್" ಅಂದ ಆಟೋ ಸುಮಾರು ಅರ್ಧ ಕಿಲೋಮೀಟರ್ ಓಡಿತು. ಮತ್ತೊಂದು ವಿಚಾರವೇನೆಂದರೆ ಟಾಪ್ ಸ್ಟೇಷನ್ ರೂಟ್ ಎತ್ತರದ ಪ್ರದೇಶ. ಅಲ್ಲಿಂದ ವಾಪಸ್ಸು ಬರುವಾಗ ಹೆಚ್ಚಾಗಿ ಇಳಿಜಾರು. ಅದರಿಂದ ಇಳಿಜಾರಿನಲ್ಲಿ ಇಂಜಿನ್ ಆಫ್ ಮಾಡಿಕೊಳ್ಳುವುದು ಸಮರಸ್ತೆ ಬಂದಾಗ ಮತ್ತೆ ಆನ್ ಮಾಡಿಕೊಳ್ಳುವುದು ನಡೆಯಿತು. ಆದ್ರೆ ಇದು ಒಂದು ಕಿಲೋಮೀಟರ್‍ ವರೆಗೆ ಮಾತ್ರ ನಮ್ಮ ಸಾಹಸ. ಇನ್ನೂ ಐದು ಕಿಲೋಮೀಟರ್ ಇರುವಂತೆಯೇ ಕತ್ತಲಲ್ಲಿ ಇನ್ನು ನನ್ನ ಕೈಯಲ್ಲಿ ಆಗಲ್ಲ ಅಂತ ಆಟೋ ನಿಂತುಬಿಟ್ಟಿತು. ಸಂಜೆ ಆರುಗಂಟೆಯ ನಂತರ ಕಾಡುಪ್ರಾಣಿಗಳ ಭಯದಿಂದಾಗಿ ಒಂದು ವಾಹನವೂ ಓಡಾಡುವುದಿಲ್ಲ. ಮೊದಲೇ ಅಂಕುಡೊಂಕು ರಸ್ತೆ. ಆರುಗಂಟೆಗೆ ಕತ್ತಲಾಗಿಬಿಟ್ಟಿದೆ. ಏನು ಮಾಡುವುದು? ವಿಮಲ್ ಪೆಟ್ರೋಲ್ ಹಾಕಿಸದೇ ಇರುವುದು ನಮಗೆಲ್ಲಾ ಕೋಪ ಬಂದಿತ್ತು. ಆದ್ರೆ ಆ ಸಮಯದಲ್ಲಿ ಕೋಪ ಮಾಡಿಕೊಂಡರೇ ಏನು ಪ್ರಯೋಜನ.? ಮುನ್ನಾರು ತಲುಪುವುದು ಹೇಗೆ? ಅಷ್ಟರಲ್ಲಿ ವಿಮಲ್ ಒಂದು ಐಡಿಯಾ ಮಾಡಿದ. ತನ್ನ ಬಳಿಯಿದ್ದ ಒಂದು ಬ್ಯಾಟರಿಯನ್ನು ತನ್ನ ಅಟೋದ ಬಲಭಾಗಕ್ಕೆ ಕಟ್ಟಿ ಆನ್ ಮಾಡಿದ. ಅದರ ಬೆಳಕಿನಲ್ಲಿ ರಸ್ತೆಯನ್ನು ನೋಡಿಕೊಂಡು ಇಳೀಜಾರಿನಲ್ಲಿ ನಾವೆಲ್ಲಾ ಸಾಗುವುದು, ಇಳಿಜಾರು ಬಂದ ನಂತರ ಉಬ್ಬಿನ ರಸ್ತೆ ಬರಲೇಬೇಕಲ್ಲವೇ. ಸಾಧ್ಯವಾದಷ್ಟು ಬ್ರೇಕ್ ಹಿಡಿಯದೆ ಉಬ್ಬುರಸ್ತೆಯ ಕ್ರಮಿಸಿ ಆಟೋ ಐದುಸಿರು ಬಿಡುವಾಗ ಮತ್ತೆ ನಾವೆಲ್ಲಾ ಇಳಿದು ಕತ್ತಲ್ಲಲ್ಲಿ ಗೊತ್ತುಗುರಿಯಿಲ್ಲದೇ ತಳ್ಳುವುದು ಹೀಗೆ ಒಂದು ಕಿಲೋಮೀಟರ್ ಸಾಗಿತು. ಅಷ್ಟರಲ್ಲಿ ಬ್ಯಾಟರಿಯೂ ಕಣ್ಣುಕಾಣದ ಮುದುಕಿಯಂತೆ ನಿದಾನವಾಗಿ ಕಣ್ಣುಮುಚ್ಚಿತು. ಇನ್ನು ನಮಗೆ ದೇವರೇ ದಿಕ್ಕು. ಏನು ಮಾಡುವುದು, "ಸಾರ್ ಇನ್ನು ಒರೇ ಕಿಲೋಮೀಟರ್ ಸರ್, ಅಂಗೆ ಪ್ರೆಂಡ್ ಇರುಕ್ಕಾ, ಅಂದ ವೀಡಲ್ಲಿ ಪೆಟ್ರೋಲ್ ಇರುಕ್ಕು" ಅಂದ. ಅವನು ನಮ್ಮ ಸಮಾಧಾನಕ್ಕೆ ಹೇಳುತ್ತಿರಬಹುದು ಅಂದುಕೊಂಡು ರಾತ್ರಿ ಮುನ್ನಾರು ತಲುಪದಿದ್ದರೇ ನಾವು ಕಾಡಿನಲ್ಲಿ ಎಲ್ಲಾದರೂ ಮಲಗಬೇಕು ಅದಕ್ಕೆ ಏನು ಮಾಡಬೇಕು ಅನ್ನುವ ಅಲೋಚನೆಯಲ್ಲಿ ಮೂವರು ಮುಳುಗಿದ್ದೆವು. ನಮ್ಮನ್ನು ಉತ್ತೇಜಿಸಲು ವಿಮಲ್ ಅನೇಕ ಕಾಮಿಡಿಗಳನ್ನು ಮಾಡತೊಡಗಿದಾಗ ನಾವು ವಿಧಿಯಿಲ್ಲದೇ ಅವನ ಕಾಲೆಳೆಯುತ್ತಾ ಆಗು-ಹೀಗೂ ಮತ್ತೊಂದು ಕಿಲೋಮೀಟರ್ ಕತ್ತಲಲ್ಲಿ ತಳ್ಳು-ನೂಕು, ಹತ್ತು ನಡೆದೇ ಇತ್ತು. ಕೆಲವು ಮನೆಗಳು ದೀಪದಬೆಳಕಿನಲ್ಲಿ ಕಾಣಿಸಿದಾಗ ನಮಗೂ ಜೀವ ಬಂದಂತೆ ಆಗಿತ್ತು. "ಸರ್ ಪ್ರೆಂಡ್ ವೀಡ್ ಇಂಗೆ ಇರುಕ್ಕು" ಆಟೋ ಪಕ್ಕ ನಿಲ್ಲಿಸಿ ಅಲ್ಲೊಂದು ಮನೆಗೆ ಓಡಿದ. ಸಮಯವಾಗಲೇ ೭ ಗಂಟೆ ಮುವತ್ತು ನಿಮಿಷ. ಕಣ್ಣೆಷ್ಟೇ ಅಗಲಿಸಿದರೂ ಎದುರಿಗಿರುವವರು ಕಾಣದಿರುವಷ್ಟು ಕತ್ತಲು. ಒಂದು ಬಾಟಲಿಯಲ್ಲಿ ಪೆಟ್ರೋಲ್ ತಂದು ಹಾಕಿ ಮತ್ತೆ ಆಟೋ ಸ್ಟಾರ್ಟ್ ಮಾಡಿದನಲ್ಲ. ನಮಗೆಲ್ಲಾ ನಿಜಕ್ಕೂ ಮರುಜೀವ ಬಂದಂತೆ ಆಗಿತ್ತು. ಅಲ್ಲಿಂದ ಹತ್ತೇ ನಿಮಿಷದಲ್ಲಿ ಮುನ್ನಾರು ತಲುಪಿ ನಮ್ಮ ರೂಮು ತಲುಪಿದಾಗ ಆಗ ಹಸಿವಾಗುತ್ತಿದೆಯೆನ್ನಿಸಿತ್ತು. "ಸಾರಿ ಸರ್, ಮುಂದೆ ಇಂಗೆ ಆವಾದ್" ಅಂತ ವಿಮಲ್ ಸಂಕೋಚದಿಂದ ಕ್ಷಮೆ ಕೇಳಿದಾಗ, ನಮಗೆ ಅವನ ಮೇಲೆ ನಿಜಕ್ಕೂ ಕೋಪವಿರಲಿಲ್ಲ. ಅದಕ್ಕೆ ಬದಲಾಗಿ ಆರುಕಿಲೋಮೀಟರ್ ದೂರ ಆ ಕತ್ತಲಲ್ಲಿ ನಮಗೆಲ್ಲಾ ದೈರ್ಯ ತುಂಬಿ, ತಮಾಷೆ ಮಾತುಗಳನ್ನಾಡುತ್ತಾ ಸುರಕ್ಷಿತವಾಗಿ ತಲುಪಿಸಿದನಲ್ಲ ಅಂತ ಅವನ ಬಗ್ಗೆ ಖುಷಿಯೇ ಆಗಿತ್ತು. "ನಿನ್ನ ಸಾಹಸವನ್ನು ನಾವು ಮೆಚ್ಚಿದ್ದೇವೆ ನೀನು ಇವತ್ತು ನಮ್ಮ ಜೊತೇನೇ ಊಟ ಮಾಡು" ಅಂದೆವು. "ಇಲ್ಲೇ ಸರ್‍ ವೀಟಲ್ಲ್ ಎಲ್ಲಾ ಕಾತಿರಾಂಗ್" ಅಂದ. ನಾಳೆ ಮಾರ್ನಿಂಗ್ ಆರುವರೆಗೆ ವಾ" ಅಂತ ಹೇಳಿ ಕಳಿಸಿದೆವು.


ಮೊದಲೇ ಆಟೋ ತಳ್ಳಿ ನೂಕಿ ಸುಸ್ತಾಗಿದ್ದರಿಂದಾಲೋ ಅದೇ ರಸ್ತೆ ಬದಿಯಲ್ಲಿ ಆ ತಣ್ಣನೆ ಮೂರು ಡಿಗ್ರಿ ಚಳಿಯಲ್ಲಿ ಬಿಸಿಬಿಸಿ ದೋಸೆ ಇಡ್ಲಿ, ಸ್ಯಾವಿಗೆ ಪರಮಾನಂದವೆನಿಸಿತ್ತು. ಹೋಟಲ್ ರೂಮಿಗೆ ಬಂದು ಹಾಸಿಗೆ ಮೇಲೆ ಮೈಜಾಚುತ್ತಿದ್ದಂತೆ ಅದ್ಯಾವ ಮಾಯದಲ್ಲಿ ನಿದ್ರೆ ಆವರಿಸಿತೋ ಗೊತ್ತಿಲ್ಲ ಬೆಳಿಗ್ಗೆ ಐದುಗಂಟೆಗೆ ಮೊಬೈಲ್ ಅಲಾರಂ ಹೊಡೆದಾಗಲೇ ಎಚ್ಚರ.

ದೇವಿಕುಲಂ ರಸ್ತೆಯ ಬದಿಯಲ್ಲಿ ನಿಂತು ನೋಡಿದಾಗ ಕ್ಲಬ್ ಮಹೀಂದ್ರ ರೆಸಾರ್ಟ್ ನಮ್ಮ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.
ಮರುದಿನ ನಮ್ಮ ಪ್ರಯಾಣ ದೇವಿಕುಲಮ್ ರಸ್ತೆಯ ಕಡೆಗೆ. ಅದು ಮದುರೈ ಮತ್ತು ಮುನ್ನಾರಿನ ಮುಖ್ಯ ರಸ್ತೆ. ಪೆಟ್ರೋಲ್ ಪೂರ್ತಿ ಹಾಕಿಸಿಕೊಂಡು ಬಂದಿದ್ದ ವಿಮಲ್. ಅವನನ್ನು ಸುಮ್ಮನೇ ರೇಗಿಸುತ್ತಾ ಸಾಗುತ್ತಿರುವಾಗಲೇ ಅನೇಕ ಒಂಟಿಮನೆಗಳು, ಮರಗಳು ನಮ್ಮ ಕಣ್ಣಿಗೆ ಸೂರ್ಯನ ಹಿಂಬೆಳಕಲ್ಲಿ ಸಿಕ್ಕಿ ನಮ್ಮ ಕ್ಯಾಮೆರಾದಲ್ಲಿ ಸೆರೆಯಾದವು. ದೇವಿಕುಲಮ್‍ಗೆ ಮೂರು ಕಿಲೋ ಮೀಟರ್ ಮೊದಲೇ ನಮ್ಮ ಸುತ್ತೆಲ್ಲಾ ಹಸಿರು ಟೀ ತೋಟಗಳು ಕ್ಯಾಮೆರಾದಲ್ಲಿ ಮತ್ತು ನಮ್ಮ ಕಣ್ಣುಗಳಲ್ಲಿ ಸೆರೆಯಾದವು. ಹಾಗೆ ಸಾಗುತ್ತಿದ್ದಂತೆ ಅಲ್ಲೊಂದು ವಿಭಿನ್ನ ಘಟನೆ ನಮಗೂ ಮತ್ತು ಸೂರ್ಯನ ನಡುವೆ ನಡೆಯಿತು. ಅವತ್ತು ಬೆಳಿಗ್ಗೆಯಿಂದಲೇ ಅಲ್ಲಲ್ಲಿ ಮೋಡ ಚಲಿಸುತ್ತಿದ್ದವು. ನಡುವೆ ಸೂರ್ಯ ಇಣುಕಿ ಮಾಯವಾಗುತ್ತಿದ್ದ. ಹೀಗೆ ಸಾಗುತ್ತಿದ್ದಂತೆ. ನಮ್ಮ ಎಡಬದಿಯಲ್ಲಿ ಹಸಿರು ಟೀ ಎಸ್ಟೇಟಿನ ನಡುವೆ ಒಂದು ಸಣ್ಣ ದೇವಸ್ಥಾನ ಕಾಣಿಸಿತು. ಎಲ್ಲರೂ ಆಟೋ ಇಳಿದು ಅದರ ಫೋಟೊ ತೆಗೆದುಕೊಂಡೆವು. ಆದ್ರೆ ಅದು ನಮಗೆ ವಿಶೇಷವೆನ್ನಿಸಲಿಲ್ಲ. ಹಾಗಾದರೆ ವಿಶೇಷವೇನು? ಸುತ್ತೆಲ್ಲಾ ನೆರಳಿದ್ದು ಸೂರ್ಯನ ತಿಳಿಬೆಳಕು ಅದರ ಮೇಲೆ ಸ್ಪಾಟ್ ಲೈಟಿನಂತೆ ಬಿದ್ದಾಗ ಕಾಯ್ದು ಪೋಟೋ ಕ್ಲಿಕ್ಕಿಸುವುದೇ ನಮ್ಮ ಗುರಿ. ಅದಕ್ಕಾಗಿ ಕಾದೆವು. ಕೆಲವೊಮ್ಮೆ ಸೂರ್ಯನಿಗೆಷ್ಟು ಸೊಕ್ಕು ಅಂದರೆ ನಮ್ಮಂತ ಛಾಯಾಗ್ರಾಹಕರಿಗೆ ಬೇಕಂತಲೇ ಆಟವಾಡಿಸಿಬಿಡುತ್ತಾನೆ. ಸುಮಾರು ಅರ್ಧ ಗಂಟೆ ಕಾದರೂ ಸೂರ್ಯ ಬರಲಿಲ್ಲ. ಕೊನೆಗೆ ಸೂರ್ಯನನ್ನು ಚೆನ್ನಾಗಿ ಹೀಯಾಳಿಸಿ ಬೈದುಕೊಳ್ಳುತ್ತಾ, ಅಲ್ಲಿಂದ ಮುಂದೆ ದೇವಿಕುಲಮ್ ಕಡೆಗೆ ಹೊರಟೆವು. ವಿಮಲ್ ಆಸೆಯಂತೆ ಒಂದಾದರೂ ಪ್ರಯಾಣದ ಅಂತ್ಯವನ್ನು ಮುಟ್ಟಿದೆವಲ್ಲ ಅಂತ ಅವನಿಗೆ ಖುಷಿಯಾಯ್ತು. ಅಲ್ಲೇ ಟಿಫನ್ ಮಾಡಿ ವಾಪಸ್ ಹೊರಟೆವು. ದಾರಿಯುದ್ದಕ್ಕೂ ಮೋಡಗಳ ನಡುವೆ ಸೂರ್ಯ ಇಣುಕುವುದು ನಡೆದೇ ಇತ್ತು. ಮೊದಲೇ ನೋಡಿದ್ದ ದೇವಸ್ಥಾನಕ್ಕೆ ಒಂದು ಕಿಲೋಮೀಟರ್ ಇರುವಂತೆಯೇ ಆಕಾಶ ನೋಡಿದೆ. ಮೋಡಗಳು ದೇವಿಕುಲಮ್ ಕಡೆಯಿಂದ ಮುನ್ನಾರ್ ಕಡೆಗೆ ದಟ್ಟವಾಗಿ ಸಾಗುತ್ತಿದ್ದವು. ಆ ಮೋಡಗಳಾದರೂ ಕೂಡ ಒಂದು ಗುಂಪು ಸಾಗುವಷ್ಟರಲ್ಲಿ ಮತ್ತೊಂದು ಗುಂಪು ಅದೆಲ್ಲಿತ್ತೋ ತೇಲಿಬರುತ್ತಿತ್ತು. ಒಹೋ! ಈಗ ನಮಗಿರುವ ಅವಕಾಶವೆಂದರೆ ಒಂದು ಗುಂಪಿನ ಮೋಡಗಳು ತೇಲಿಹೋಗಿ ಮತ್ತೊಂದು ಮೋಡಗಳ ಗುಂಪು ಬರುವ ಸಮಯದ ನಡುವೆ ಇಣುಕುವ ಸೂರ್ಯನ ಬೆಳಕು ಖಂಡಿತ ಆ ದೇವಸ್ಥಾನದ ಮೇಲೆ ಸ್ಪಾಟ್ ಲೈಟಿನಂತೆ ಬೀಳುವುದು ಖಚಿತ. ಆ ಸಮಯದಲ್ಲಿ ಅಲ್ಲಿದ್ದರೇ ನಮಗೆ ಅದರ ಸುಂದರ ಫೋಟೋ ಸಿಗಬಹುದು ಅನ್ನಿಸಿತ್ತು. ವಿಮಲ್‍ಗೆ ನನ್ನ ಪ್ಲಾನ್ ವಿವರಿಸಿದೆ. ಅಷ್ಟರಲ್ಲಾಗಲೇ ಅವನಿಗೆ ನಮ್ಮ ನಾಡಿಮಿಡಿತ ಅರ್ಥವಾಗಿದ್ದರಿಂದ ಒಮ್ಮೆ ಆಕಾಶ ನೋಡಿದ. ನಮ್ಮ ಸುತ್ತ ಮುತ್ತ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ಬಿದ್ದಿತ್ತು ಮುಂದೆಯೂ ಮೋಡ, ಹಿಂದೆಯೂ ಮೋಡ. ನಮ್ಮ ಮೇಲೆ ಬಿದ್ದ ಸ್ಪಾಟ್ ಲೈಟ್ ಹೀಗೆ ಸಾಗಿ ಖಂಡಿತ ಆ ದೇವಾಸ್ಥಾನದ ಮೇಲೆ ಬೀಳುತ್ತದೆ. ಅದರ ಪೋಟೊ ತೆಗೆಯುವುದೇ ನಮ್ಮ ಗುರಿ ಎಂದೆ. ಅವನಿಗೆ ಅರ್ಥವಾಗಿ ಸುಮಾರು ಒಂದು ಕಿಲೋಮೀಟರ್ ವೇಗವಾಗಿ ಆಟೋ ಓಡಿಸಿದ. ಅವನ ವೇಗ ಹೇಗಿತ್ತೆಂದರೇ ಮೋಡಗಳ ಜೊತೆಗೆ ಸಮಾನ ವೇಗವಾಗಿ ಚಲಿಸಿದ್ದರಿಂದ ಸುಮಾರು ಒಂದು ಕಿಲೋ ಮೀಟರ್ ನಮ್ಮ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ನಮ್ಮ ದಾರಿಯುದ್ದಕ್ಕೂ ಬೀಳುವಂತೆ ವಿಮಲ್ ಆಟೋ ಓಡಿಸಿದ್ದ. ಸರಿಯಾದ ಸಮಯಕ್ಕೆ ದೇವಸ್ಥಾನದ ಸಮೀಪ ತಲುಪಿದ್ದೆವು. ನಮಗಿಂತ ಒಂದು ಪರ್ಲಾಂಗು ದೂರವಿದ್ದ ದೇವಸ್ಥಾನದ ಮೇಲೆ ನಮ್ಮ ಮೇಲೆ ಬಿದ್ದ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ಬೀಳುತ್ತದೆ, ಅದನ್ನು ಕ್ಲಿಕ್ಕಿಸಲು ಕ್ಯಾಮೆರಾ ಸಹಿತ ಸಿದ್ದರಾದೆವು. ಸೂರ್ಯನ ಬೆಳಕು ನಿದಾನವಾಗಿ ನಮ್ಮನ್ನು ದಾಟಿ, ಟೀ ಎಸ್ಟೇಟಿನ ಮೇಲೆ ಚಲಿಸಿತ್ತು. ನಮ್ಮ ಕ್ಯಾಮೆರಾಗಳು ತಾಂತ್ರಿಕವಾಗಿ ಎಲ್ಲಾ ಸರಿಮಾಡಿಕೊಂಡಿದ್ದೇವಾ ಅಂತ ನೋಡಿಕೊಂಡೆವು. ಕೆಲವೇ ಸೆಕೆಂಡುಗಳಲ್ಲಿ ನಿದಾನವಾಗಿ ಸ್ಪಾಟ್ ಲೈಟಿನಂತೆ ದೇವಸ್ಥಾನದ ಮೇಲೆ ಬಿದ್ದ ಸೂರ್ಯನ ಬೆಳಕಿನಲ್ಲಿ ಆ ದೇವಸ್ಥಾನದ ಫೋಟೊಗಳನ್ನು ಮೈಮರೆತು ಕ್ಲಿಕ್ಕಿಸುತ್ತಿರುವಾಗ ನಮ್ಮ ಅಕ್ಕ ಪಕ್ಕ ಏನಾಗುತ್ತಿದೆ ಎನ್ನುವುದನ್ನು ಮೈಮರೆತುಬಿಟ್ಟಿದ್ದೆವು.
ಇಪ್ಪತ್ತು ಸೆಕೆಂಡುಗಳಷ್ಟೇ. ಅದ್ಯಾವ ಕ್ಷಣದಲ್ಲಿ ಬೆಳಕು ಚಲಿಸಿ ದೇವಸ್ಥಾನ ದಾಟಿಹೋಗಿತ್ತೋ ಗೊತ್ತಾಗಲಿಲ್ಲ. ಪೋಟೊ ತೆಗೆಯುವುದು ನಿಲ್ಲಿಸಿ ಒಮ್ಮೆ ಸುತ್ತಲೂ ನೋಡಿದಾಗಲೇ ನಮಗೆ ಗೊತ್ತಾಗಿದ್ದು, ನಾವು ಪೋಟೊ ತೆಗೆಯುವ ತನ್ಮಯತೆಯಲ್ಲಿ ನಡು ರಸ್ತೆಯಲ್ಲಿ ನಿಂತಿರುವುದು ನಮಗೇ ಗೊತ್ತಿರಲಿಲ್ಲ. ಎರಡು ಕಡೆಯಿಂದ ಲಾರಿಗಳು, ಬಸ್ಸುಗಳು, ಕಾರುಗಳು ಸಾಲಾಗಿ ನಿಂತು ಹಾರ್ನ್ ಮಾಡುತ್ತಿರುವುದು ನಮಗೇ ಗೊತ್ತೇ ಆಗಿರಲಿಲ್ಲ. ಎರಡು ಕಡೆ ರಸ್ತೆಯಲ್ಲಿ ಸಣ್ಣ ಮಟ್ಟಿನ ಟ್ರಾಫಿಕನ್ನು ಪರೋಕ್ಷವಾಗಿ ಸೃಷ್ಟಿಸಿಬಿಟ್ಟಿದ್ದೆವು. ಎಚ್ಚೆತ್ತುಕೊಂಡು ಅವರಿಗೆಲ್ಲಾ ಸಾರಿ ಹೇಳಿ ದಾರಿಮಾಡಿಕೊಟ್ಟಾಗಲೇ ನಮಗೇ ವಾಸ್ತವ ಜಗತ್ತು ಅರಿವಾಗಿತ್ತು. ಇದರ ನಡುವೆ ಯಾವಾನಾದ್ರೂ ತಲೆಕೆಟ್ಟ ಬಸ್ಸೋ, ಕಾರೋ ವೇಗವಾಗಿ ನುಗ್ಗಿಬಂದಿದ್ದರೇ ನಮ್ಮ ಕತೆ ಅಲ್ಲಿಗೇ ಮುಗಿದು ಈ ಲೇಖನ ಬರೆಯಲು ಸಾಧ್ಯವಾಗುತ್ತಿರಲಿಲ್ಲವೇನೋ. ವಿಮಲ್‍ಗೂ ನಮ್ಮ ಪೋಟೊಗ್ರಫಿ ಭಾಷೆ, ಅದರ ಆನಂದ ಅರ್ಥವಾಗಿದ್ದರಿಂದ ಮೈಮರೆತು ಆ ದೃಶ್ಯವನ್ನು ತನ್ಮಯನಾಗಿ ನೋಡುತ್ತಾ ನಿಂತುಬಿಟ್ಟಿದ್ದ.

ಅಂಥ ಅದ್ಬುತ ಕ್ಷಣವನ್ನು ಕ್ಲಿಕ್ಕಿಸಿದ ನಮಗೆ ಇನ್ಯಾವುದೇ ಫೋಟೊ ಕ್ಲಿಕ್ಕಿಸುವ ಮನಸ್ಸಿರಲಿಲ್ಲ. ಅಷ್ಟರ ಮಟ್ಟಿಗೆ ತೃಪ್ತಿ ನಮ್ಮ ಮುಖದಲ್ಲಿ ತುಂಬಿ ತುಳುಕುತ್ತಿತ್ತು. ವಿಮಲ್ ಕೂಡ ಖುಷಿಯಿಂದ ಆಟೊ ಓಡಿಸುತ್ತಿದ್ದ. ವಿಮಲನನ್ನು ಕೆಣಕಬೇಕೆನ್ನಿಸಿ "ವಿಮಲ್ ನೆಕ್ಸ್ಟ್ ನಾವ್ ಮುನ್ನಾರಿಕ್ಕೂ ಖಂಡಿತ ವರುವೆವು. ಅದಕ್ಕೂ ಪಿನಾಲೆ ನೀ ಒರು ಪಣ್ಣುವೆಯಾ? ಪ್ರಶ್ನಿಸಿದೆ. "ಖಂಡಿತ ಪಣ್ಣುವೆ ಸೊಲ್ಲುಂಗ್ ಸಾರ್" ಅಂದ. "ಅದು ಒಣ್ಣು ಇಲ್ಲೇ, ನೀ ಅಂದ ದೇವಸ್ಥಾನಕ್ಕೂ ಕೊಂಚ ಮಂಜ[ಆರೆಂಜ್]ಕಲರ್ ಪೇಂಟ್ ಪಣ್ಣು. ಅಪ್ರಮಾ ಅದು ಫೋಟೊಗ್ರಫಿಕ್ಕೂ ರೊಂಬ ನಲ್ಲ ಇರುಕುದು, ತೆರಿಮಾ" ಅಂದೆ. ನನ್ನ ಮಾತನ್ನು ಕೇಳಿ ಮಲ್ಲಿ, ಮಂಜು ವಿಮಲ್ ಎಲ್ಲರೂ ಜೋರಾಗಿ ನಕ್ಕರು. ಆಟೋ ನಿದಾನವಾಗಿ ಮುನ್ನಾರು ತಲುಪುತ್ತಿತ್ತು.


ಪ್ರವಾಸ ಕಥನ ತುಂಬಾ ದೊಡ್ಡದಾಯಿತೆಂದೂ ಇಲ್ಲಿಗೇ ನಿಲ್ಲಿಸಿದ್ದೇನೆ. ಇನ್ನೂ ಮುನ್ನಾರಿನ ನೀಲಗಿರಿ ಥಾರ್, ಕುರುಂಜಿ ಹೂ, ಮುನ್ನಾರು ನಗರ ಸುತ್ತಾಟ ಮುನ್ನಾರು ಚಾಕಲೆಟ್, ಕ್ಯಾರೆಟ್ಟು, ಸರೋವರದಲ್ಲಿ ಸಿಕ್ಕ ಸುಂದರ ಸಾಲು ಹುಡುಗಿಯರು, ಅಲ್ಲಿಂದ ಬೆಂಗಳೂರಿಗೆ ವಾಪಸ್ ಬಂದಿದ್ದು ಇತ್ಯಾದಿಗಳ ಬಗ್ಗೆ ಬರೆಯುವುದಿದೆ. ನಿಮಗೆಲ್ಲಾ ಬೇಸರವಾಗಬಹುದೆಂದು ಇಲ್ಲಿಗೆ ನಿಲ್ಲಿಸಿದ್ದೇನೆ. ನೀವು ಇಷ್ಟ ಪಟ್ಟರೆ ಮುಂದೆ ಅದನ್ನು ಬರೆಯುತ್ತೇನೆ. ಅದಕ್ಕಾಗಿ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಧನ್ಯವಾದಗಳು.

ಚಿತ್ರ ಮತ್ತು ಲೇಖನ.

ಶಿವು.ಕೆ.

Saturday, January 2, 2010

ನಮ್ಮ ಮುನ್ನಾರ್ ಪ್ರವಾಸ

ಬ್ಲಾಗ್ ಗೆಳೆಯರಿಗೆಲ್ಲಾ ಹೊಸ ವರ್ಷದ ಶುಭಾಶಯಗಳು. ನಮ್ಮ ಫೋಟೊಗ್ರಫಿ ಪ್ರವಾಸಗಳು ಹೇಗಿರುತ್ತವೆ ಅನ್ನುವ ಕುತೂಹಲ ನಿಮಗಿರುತ್ತದೆ ಅಲ್ಲವೇ. ಅದಕ್ಕಾಗಿ ಮೊದಲಿಗೆ ನಮ್ಮ ಮುನ್ನಾರು ಫೋಟೊಗ್ರಫಿ ಪ್ರವಾಸ ಹೇಗಿತ್ತು ಅನ್ನುವುದನ್ನು ಬರೆದಿದ್ದೇನೆ. ಲೇಖನ ದೊಡ್ಡದಾಗಿದ್ದರಿಂದ ಮೊದಲ ಭಾಗವನ್ನು ಇಲ್ಲಿ ಹಾಕಿದ್ದೇನೆ..
_________ ______________ __________

ನಾನು ಮೆಜೆಸ್ಟಿಕ್ಕಿನ ಅಜಂತ ಕಲರ್ ಲ್ಯಾಬಿನಲ್ಲಿ ಕುಳಿತು ನನ್ನ ಫೋಟೊ ಪ್ರಿಂಟ್ ಆಗಿಬರುವುದನ್ನೇ ಕಾಯುತ್ತಿದ್ದೆ. ನನ್ನಷ್ಟೆ ಗಾತ್ರ, ಎತ್ತರದ ವ್ಯಕ್ತಿ ಕೂಡ ನನ್ನ ಪಕ್ಕದಲ್ಲಿ ಬ್ಯಾಗಿನಿಂದ ತೆಗೆದ ಪೇಪರಿನೊಳಗೆ ನೆಗಟೀವುಗಳನ್ನು ಜೋಡಿಸಿಕೊಳ್ಳುತ್ತಾ, ಕೆಳಗೆ ಬಿದ್ದಿದ್ದನ್ನು ಎತ್ತಿಕೊಳ್ಳುತ್ತಾ ನೋಡಿಕೊಳ್ಳುತ್ತಿದ್ದರು. ಅವರ ಕೈಯಲ್ಲಿ ಅವತ್ತಿನ ಪೇಪರಿನಲ್ಲಿ ಬಂದ ಫೋಟೊ ನನ್ನ ಕಣ್ಸೆಳೆಯಿತು. ಏಕೆಂದರೆ ಅದು ನಾನೇ ಕ್ಲಿಕ್ಕಿಸಿದ ಫೋಟೊ. ಪತ್ರಿಕೆಯಲ್ಲಿ ಬಂದಿರುವುದು ನನಗೆ ಗೊತ್ತೇ ಇರಲಿಲ್ಲ. ಅದಕ್ಕಾಗಿ ಆತನಿಂದ ಒಂದು ನಿಮಿಷ ಕೊಡಿ ಎಂದು ಪಡೆದು ನೋಡುತ್ತಿದ್ದೆ. ಅಷ್ಟರಲ್ಲಿ ನಿಮ್ಮ ಪ್ರಿಂಟ್ ರೆಡಿ ಅಂತ ಲ್ಯಾಬ್‍ನವನು ಕೈಗೆ ಕೊಟ್ಟ. ಅದನ್ನು ಕೈಯಲ್ಲಿಡಿದು ಪತ್ರಿಕೆಯಲ್ಲಿ ಬಂದ ಫೋಟೋ ಇದರಷ್ಟೇ ಚೆನ್ನಾಗಿ ಹಾಕಿದ್ದಾರಾ ಅಂತ ನೋಡುತ್ತಿದ್ದೆ.

ಅದುವರೆಗೂ ಸುಮ್ಮನಿದ್ದ ಪಕ್ಕದಲ್ಲಿದ್ದವರು ನನ್ನ ಕೈಯಲ್ಲಿದ್ದ ಫೋಟೊ ಮತ್ತು ಪತ್ರಿಕೆಯಲ್ಲಿ ಬಂದ ಫೋಟೊ ಎರಡು ಒಂದೇ ಇದ್ದುದ್ದು ನೋಡಿ "ನೀವು ಶಿವು.ಕೆ ಬೆಂಗಳೂರು ಅಲ್ವಾ" ಅಂದರು. "ಹೌದು ನೀವ್ಯಾರು" ಅಂದೆ. "ನಾನು ಮಲ್ಲಿಕಾರ್ಜುನ್ ಶಿಡ್ಲಘಟ್ಟ, ಪತ್ರಿಕೆಯಲ್ಲಿ ಬಂದಿರುವ ನಿಮ್ಮ ಫೋಟೊ ಪಕ್ಕ ಇರುವ ಬೀಟಲ್ ಫೋಟೊ ನಾನು ತೆಗೆದಿದ್ದು, ಅದಕ್ಕೆ ಆಸ್ಕರಿ ಪ್ರಶಸ್ಥಿ ಬಂದಿದೆ. ಅದನ್ನು ಇವತ್ತು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಸಂಜೆ ಕಾರ್ಯಕ್ರಮದಲ್ಲಿ ಕೊಡುತ್ತಾರೆ ಅದನ್ನು ತೆಗೆದುಕೊಳ್ಳಲು ಬಂದೆ. ನಿಮಗೂ ಬಂದಿರಬೇಕಾಲ್ವ" ಅಂದರು. "ಹೌದು ನನಗೂ ಪಿಕ್ಟೋರಿಯಲ್ ವಿಭಾಗದಲ್ಲಿ ಬಂದಿದೆ. ನಾನು ಇವತ್ತು ಸಂಜೆ ಪ್ರಶಸ್ಥಿ ಪಡೆಯಲು ಅಲ್ಲಿಗೆ ಹೋಗಬೇಕಿದೆ" ಅಂದೆ.

ಹೀಗೆ ಇಬ್ಬರು ಬಹುಮಾನ ವಿಜೇತರು ಆ ದಿನ ಫೋಟೊ ಲ್ಯಾಬಿನಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿದ್ದು ಒಂದು ಅನಿರೀಕ್ಷಿತವೇ ಸರಿ. ಹಾಗೆ ನನ್ನ ಪಕ್ಕ ಕುಳಿತು ಪರಿಚಯ ಮಾಡಿಕೊಂಡವರು ಮತ್ಯಾರು ಅಲ್ಲ ಮಲ್ಲಿಕಾರ್ಜುನ್ ಡಿ.ಜಿ.


ಅವತ್ತು ಸಂಜೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನನಗಿಂತ ಮೊದಲೇ ಬಂದು ಹೊರಗೆ ಕುಳಿತಿದ್ದ ಮಲ್ಲಿಕಾರ್ಜುನ್ ಕೈಯಲ್ಲಿದ್ದ ಕೆಲವು ಸಿನಿಮಾ ಡಿವಿಡಿಗಳು ನನ್ನ ಗಮನ ಸೆಳೆದವು. ಅವುಗಳಲ್ಲಿ ನನಗಿಷ್ಟವಾದ ರೋಮನ್ ಹಾಲಿಡೆ ಸಿನಿಮಾ ಕೂಡ ಒಂದು. ಇಂಥ ಸಿನಿಮಾಗಳನ್ನು ನೋಡುವ ಈತನ ಅಭಿರುಚಿಯು ನನಗೆ ಚೆನ್ನಾಗಿ ಮ್ಯಾಚ್ ಆಗಬಹುದು ಅಂದುಕೊಂಡು ಮತ್ತೆ ಮಾತಾಡಿಸಿದೆ. ಅವರು ನಕ್ಕು ನೀವು ಹೋಗಿರಿ ನಾನು ಇವನ್ನೆಲ್ಲಾ ಜೋಡಿಸಿಟ್ಟುಕೊಂಡು ಬರುತ್ತೇನೆ ಅಂದರು.

ಒಳಗೆ ಸಭಾಂಗಣ ತುಂಬಿತ್ತು. ಬಹುಮಾನ ವಿಜೇತ ಚಿತ್ರಗಳ ಜೊತೆಗೆ ಇನ್ನಿತರ ಆಯ್ಕೆಯಾದ ಚಿತ್ರಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ಅವುಗಳನ್ನು ನೋಡಲು ಮೊದಲೇ ತುಂಬಾ ಜನ ಸೇರಿದ್ದರು. ನಾನು ಮತ್ತೊಬ್ಬ ಗೆಳೆಯ ಮಂಜುನಾಥ್‍ನನ್ನು ಹುಡುಕುತ್ತಿದ್ದೆ. ಆತ ನನ್ನ ಗೆಳೆಯನಷ್ಟೇ ಅಲ್ಲದೇ ನನ್ನ ಜೊತೆ ಪೋಟೋಗ್ರಫಿ ಪ್ರವಾಸಕ್ಕೆ ಸದಾ ಜೊತೆಯಲ್ಲಿರುವವನು. ಅವನದು ಸ್ವಲ್ಪ ವಿಭಿನ್ನ ಮಾತುಗಾರಿಕೆ. ಕೇಳಲು ಬಲು ಸೊಗಸು. "ಏನ್ ಗುರು ಸಕತ್ ಮಿಂಚುತ್ತಿದ್ದೀಯಾ, ನಿನ್ನ ಪೋಟೊಗಳ ಬಗ್ಗೆನೇ ಎಲ್ಲರು ಮಾತಾಡುತ್ತಿದ್ದಾರೆ" ಅಂದ. ಅವನ ಮಾತಿಗೆ ನಕ್ಕು " ನೋಡು ಇವತ್ತು ಮತ್ತೊಬ್ಬರನ್ನು ನಿನಗೆ ಪರಿಚಯಿಸುತ್ತೇನೆ" ಅಂದೆ. "ಓಹ್ ನೀನ್ ಬಿಡು ಗುರು, ನೀನು ಪರಿಚಯ ಮಾಡಿಸ್ತೀಯಾ ಅಂದ್ರೆ ಅವರು ಪೂರ್ತಿ ಬೆಂದ ಕಾಳೇ ಇರಬೇಕು. ನೀನು ಹಾಗೆಲ್ಲಾ ಅರೆಬೆಂದಕಾಳುಗಳನ್ನೆಲ್ಲಾ ಪ್ರೆಂಡ್ ಮಾಡಿಕೊಳ್ಳಲ್ಲ ನನಗೆ ಗೊತ್ತು" ಅಂದ. "ಅದೇನು ನನಗೆ ಗೊತ್ತಿಲ್ಲಪ್ಪ. ಇವತ್ತು ಬೆಳಿಗ್ಗೆ ಲ್ಯಾಬಿನಲ್ಲಿ ಸಿಕ್ಕಿದ್ರು. ಅವರಿಗೆ ನೇಚರ್ ವಿಭಾಗದಲ್ಲಿ ಮೊದಲ ಬಹುಮಾನ ಬಂದಿದೆ. ಪರಿಚಯವಾದಾಗ ಒಂಥರ ವ್ಯಕ್ತಿ ಓಕೆ ಅನ್ನಿಸಿತು ಅಷ್ಟೆ. ಆತ ಹೇಗಿರುತ್ತಾನೆ ಅನ್ನೋದು ನನಗೆ ಹೇಗೆ ಗೊತ್ತಾಗಬೇಕು? ನಿನ್ನಷ್ಟೆ ನನಗೂ ಗೊತ್ತು" ಅನ್ನುವಷ್ಟರಲ್ಲಿ ಮಲ್ಲಿಕಾರ್ಜುನ್ ಬಂದರು. ಅವರನ್ನು ಮಂಜುಗೆ ಪರಿಚಯಿಸಿದೆ. ಅವರಲ್ಲಿ ಸಹಜವಾದ ಮಾತುಕತೆ ನಡೆಯುತ್ತಿದ್ದಂತೆ ನಾನು ಬೇರೆಯವರನ್ನು ಮಾತಾಡಿಸಲು ಹೊರಟೆ.

ಕಾರ್ಯಕ್ರಮ ಮುಗಿಯಿತು. ಮಲ್ಲಿಕಾರ್ಜುನ್ ನನ್ನನ್ನು ವಿಶ್ ಮಾಡಿ ಊರಿಗೆ ಹೋಗಲು ಸಿದ್ದರಾಗುತ್ತಿದ್ದರು. ಅದೇನು ಅನ್ನಿಸಿತೋ ನನಗೆ "ಮಲ್ಲಿಕಾರ್ಜುನ್ ನಾವು ಮುನ್ನಾರಿಗೆ ಫೋಟೊಗ್ರಫಿ ಪ್ರವಾಸ ಹೋಗುತ್ತಿದ್ದೇವೆ, ನೀವು ಬರುತ್ತೀರಾ" ಕೇಳಿದೆ. ಅವರಿಗೆ ಆಶ್ಚರ್ಯವಾಗಿತ್ತು. ಒಮ್ಮೆ ನನ್ನನ್ನು ನೋಡಿದರು. "ಒಹ್! ನನಗೂ ಇಂಥ ಫೋಟೊಗ್ರಫಿ ಪ್ರವಾಸಗಳೆಂದರೆ ಇಷ್ಟ, ಖರ್ಚು ಎಷ್ಟಾಗಬಹುದು" ಕೇಳಿದರು. ನಾನು "ಒಂದುವರೆ ಸಾವಿರದ ಒಳಗೆ ಆಗುತ್ತದೆ" ಅಂದೆ. "ಅರೆರೆ ಅಷ್ಟು ಕಡಿಮೆನಾ, ಇದು ಹೇಗೆ ಸಾಧ್ಯ ಎಲ್ಲರೂ ಹೇಳುತ್ತಾರೆ ಅಲ್ಲಿ ಎಲ್ಲಾ ದುಬಾರಿ, ಒಂದು ದಿನದ ರೂಮಿನ ಬಾಡಿಗೆಯೇ ಎರಡು ಮೂರು ಸಾವಿರವಿದೆ ಅಂತಾರೆ, ನೀವು ನೋಡಿದ್ರೆ ಒಟ್ಟಾರೆ ಖರ್ಚು ಕೇವಲ ಒಂದುವರೆಸಾವಿರ ಅನ್ನುತ್ತೀರಲ್ಲ, ತಮಾಷೆಯಲ್ಲ ತಾನೆ? ನನ್ನನ್ನೇ ಮರು ಪ್ರಶ್ನಿಸಿದರು.


ಅಷ್ಟರಲ್ಲಿ ಮಂಜು "ನೀವು ಬನ್ನಿ ಎಲ್ಲಾ ನಿಮಗೇ ಗೊತ್ತಾಗುತ್ತೆ" ಅಂದಾಗ ಮಲ್ಲಿಕಾರ್ಜುನ್ ಒಪ್ಪಿಕೊಂಡರು. ನವೆಂಬರ್‌ನಲ್ಲಿ ಬೇಟಿಯಾದ ಮೇಲೆ ಡಿಸೆಂಬರ್ ಕೊನೆಯಲ್ಲಿ ಮಲ್ಲಿಕಾರ್ಜುನ್, ಮಂಜುನಾಥ ಮತ್ತು ನಾನು ಮೂವರು ಮುನ್ನಾರಿಗೆ ಹೊರಡಲು ಸಿದ್ಧರಾದೆವು. ನಡುವೆ ಮಾಮೂಲಿಯಾಗಿ ನಮ್ಮ ಫೋಟೊಗ್ರಫಿ ಪ್ರವಾಸ ಹೇಗಿರುತ್ತದೆ. ಅಲ್ಲಿ ಏನೇನು ತರಬೇಕು, ಏನೇನು ತರಬಾರದು, ಅಲ್ಲಿರುವಷ್ಟು ಹೊತ್ತು ನಮ್ಮ ಫೋಟೋಗ್ರಫಿ ಯಾವಾಗ, ಬಿಡುವು ಯಾವಾಗ ಇತ್ಯಾದಿ ಮಾತುಕತೆಗಳು ಫೋನಿನಲ್ಲಿ ನಡೆದಿದ್ದವು.

ನನಗಿಂತ ಮೊದಲೇ ಮಲ್ಲಿಕಾರ್ಜುನ್ ಮತ್ತು ಮಂಜು ಎಂಟುಗಂಟೆಯ ಹೊತ್ತಿಗೆ ಸಿಟಿ ರೈಲು ನಿಲ್ದಾಣದ ತಲುಪಿದ್ದರು. ನಾನು ಎಂಟುವರೆಗೆ ಅವರನ್ನು ಸೇರಿಕೊಂಡೆ. ಬೆಂಗಳೂರು_ಟ್ಯುಟಿಕೋರಿನ್ ರೈಲು ರಾತ್ರಿ ೯-೧೫ ಹೊರಡಲು ಸಿದ್ದವಾಗಿತ್ತು. ನಾನೊಂದು ಚಾರ್ಟ್ ಸಿದ್ದಪಡಿಸಿದ್ದೆ. ಬೆಂಗಳೂರಿನಿಂದ ಹೊರಟು ಮತ್ತೆ ಬೆಂಗಳೂರಿಗೆ ವಾಪಸ್ ಬರುವಷ್ಟರ ನಡುವೆ ಎಲ್ಲೆಲ್ಲಿ ರೈಲು-ಬಸ್, ಆಟೋ ಹಿಡಿಯಬೇಕು, ಎಷ್ಟೆಷ್ಟು ಗಂಟೆಗೆ ಅನ್ನುವ ಪಕ್ಕಾ ಚಾರ್ಟ್ ಅನ್ನು ಸಿದ್ಧಪಡಿಸಿದ್ದೆ. ಬೆಂಗಳೂರಿನಿಂದ ಮಧುರೈಗೆ ರೈಲು ಬೆಳಿಗ್ಗೆ ಎಂಟುಗಂಟೆಗೆ ತಲುಪುತ್ತದೆ. ನಂತರ ಅಲ್ಲಿಂದ ಥೇಣಿಗೆ ಒಂದು ಗಂಟೆ ಬಸ್ ಪ್ರಯಾಣ. ಅಲ್ಲಿಯೇ ಬೆಳಗಿನ ಉಪಹಾರ. ನಂತರ ಹತ್ತು ಗಂಟೆಗೆ ಸರಿಯಾಗಿ ಥೇಣಿಯಿಂದ ಮುನ್ನಾರಿಗೆ ಬಸ್ ಇರುತ್ತೆ. ಈ ಸಮಯವನ್ನು ಯಾರು ವ್ಯತ್ಯಾಸ ಮಾಡುವ ಆಗಿಲ್ಲವೆಂದು ಹೇಳಿಬಿಟ್ಟಿದ್ದರಿಂದ ಎಲ್ಲವೂ ಅಂದುಕೊಂಡಂತೆ ಆಯಿತು.


ಥೇಣಿ ಬಸ್ ನಿಲ್ದಾಣ ಚಿಕ್ಕದಾದರೂ ಬಸ್ಸುಗಳು ಮತ್ತು ಜನರಿಂದ ಗಿಜಿಗುಡುತ್ತಿತ್ತು. ಟಿಕೆಟ್ ಕೌಂಟರ್ ಬಳಿ ಹೋಗಿ "ಥ್ರೀ ಟಿಕೆಟ್ಸ್ ಫಾರ್ ಮುನ್ನಾರ್" ಅಂದೆ. ಒಳಗೆ ಕುಳಿತು ದಿನಪತ್ರಿಕೆ ಓದುತ್ತಿದ್ದವನು ನನ್ನನ್ನು ದುರುಗುಟ್ಟಿ ನೋಡಿ ಮತ್ತೆ ತಮಿಳು ಪೇಪರ್ ಓದತೊಡಗಿದ. ತಮಿಳುನಾಡು ಮತ್ತು ಕೇರಳದಲ್ಲಿ ವ್ಯವಹರಿಸಲು ನಾನೇ ಸರಿ ಅಂತ ಇಬ್ಬರು ನನ್ನನ್ನೇ ಮುಂದೆ ಮಾಡಿದ್ದರು. ಮಲ್ಲಿ ಮತ್ತು ಮಂಜು ಇಬ್ಬರಿಗೂ ಕನ್ನಡ ಇಂಗ್ಲೀಷ್, ಹಿಂದಿ ಬರುತ್ತದೆ, ಮಲ್ಲಿಗೆ ಹೆಚ್ಚುವರಿಯಾಗಿ ತೆಲುಗು ಬರುತ್ತದೆ. ಆದ್ರೆ ಅವ್ಯಾವುದು ಇಲ್ಲಿ ನಡೆಯುವುದಿಲ್ಲವಾದ್ದರಿಂದ ನನ್ನನ್ನೆ ಮುಂದಿಟ್ಟಿದ್ದರು. ನನಗೂ ಅವೆಲ್ಲಾ ಬಂದರೂ ತಮಿಳಿನ ತೊದಲು ಮಾತುಗಳು ಮಾತ್ರ ಬರುವುದು. ಅಷ್ಟರಲ್ಲಿ ನನ್ನ ಕಡೆ ನೋಡಿದ ಮಂಜು ತಮಿಳು ಮಾತಾಡು ಅಂತ ಸನ್ನೆ ಮಾಡಿದ. ಓಹ್ ಹೌದಲ್ವ ಅಂದುಕೊಂಡು "ಮುನ್ನಾರಿಕ್ಕೆ ಮೂಣು ಟಿಕೆಟ್ ಕುಡುಂಗ್" ಅಂದೆ. ಅದು ಕೆಲಸ ಮಾಡಿತು. ತಕ್ಷಣ ಆತ "ನೂತ್ತಿ ಹಂಬತ್ ಕುಡು" ಅಂದ. ನಾನು ಕೊಟ್ಟೆ. ಟಿಕೆಟ್ಟು ಕೊಟ್ಟು "ಬಸ್ ಅಂಗೆ ಇರುಕುದು ಪಾರು" ಅಂದಾಗ ಎಲಾ ಇವನ ದುರಭಿಮಾನವೇ" ಅಂದುಕೊಂಡರೂ ಕೊನೆಗೆ ಟಿಕೆಟ್ ಕೊಟ್ಟು ಬಸ್ ತೋರಿಸಿದನಲ್ಲ ಅಂತ ಬಸ್ ಹತ್ತಿ ಕುಳಿತೆವು.

ಹತ್ತು ಗಂಟೆ ಹದಿನೈದು ನಿಮಿಷಕ್ಕೆ ಹೊರಟ ಬಸ್ಸು ಸುಮಾರು ಮುವತ್ತು ಕಿಲೋಮೀಟರ್ ದೂರದ ಬೋಡಿನಾಯಕನೂರು ತಲುಪಿದ್ದು ನಮಗೆ ಗೊತ್ತೇ ಆಗಲಿಲ್ಲ. ಇದೊಂದು ಚಿಕ್ಕ ತಾಲ್ಲೂಕು. ನಾವು ಪಕ್ಕ ಪ್ಲಾನ್ ಮಾಡಿದರೆ ಇಲ್ಲಿಯವರೆಗೆ ರೈಲಿನಲ್ಲೇ ಬರಬಹುದು. ಆದ್ರೆ ನಮಗೆ ಸಮಯ ಹೊಂದಾಣಿಕೆಯಾಗುವುದಿಲ್ಲ. ಇದು ಮುನ್ನಾರಿಗೆ ಸಾಗುವ ಬೆಟ್ಟಗಳ ಹಾದಿಯಲ್ಲಿ ಸಿಗುವ ತಳಮಟ್ಟದ ಊರು. ಅಲ್ಲಿಂದ ನಿದಾನವಾಗಿ ಹಾವಿನಂತೆ ಸಾಗಿತ್ತದೆ ರಸ್ತೆ. ಅಲ್ಲಿಂದ ಹೊರಟ ಒಂದುಗಂಟೆಯ ಪ್ರಯಾಣದ ನಂತರ ಸಿಗುತ್ತದೆ ಒಂದು ಪುಟ್ಟ ಊರು. ಅದರ ಹೆಸರು ನೆನಪಿಗೆ ಬರುತ್ತಿಲ್ಲ. ಅದು ತಮಿಳುನಾಡಿನ ಕೊನೆಯ ಗಡಿ. ಅಲ್ಲಿ ಬಸ್ ನಿಲ್ಲಿಸಿದ ಚಾಲಕನೂ ಮತ್ತು ನಿರ್ವಾಹಕನೂ ತಕ್ಷಣ ಇಳಿದು ಅಲ್ಲಿರುವ ಹೋಟಲ್ಲಿಗೆ ಹೋಗಿ ಕುಳಿತುಬಿಟ್ಟರು. "ಪದಿನಂಜಿ ನಿಮಿಷ ಟೈಮ್ ಇರುಕ್ಕು ಸಾಪಡ್ ಪಣ್ಣಂಗು" ಅಂದಿದ್ದು ನಮಗೆ ಕೇಳಿಸಲೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಅವ್ರು ಆ ಹೋಟಲ್ ಒಳಗೆ ಕುಳಿತಿದ್ದರು. ನಾವು ಕೆಳಗೆ ಇಳಿದೆವು. ಅಲ್ಲಿರುವುದು ಒಂದೇ ಹೋಟಲ್. ಹೋಟಲ್ಲಿನ ಮುಂದೆ ದೊಡ್ಡ ಹೊಟ್ಟೆಯನ್ನು ಬಿಟ್ಟುಕೊಂಡ ಕಪ್ಪು ಬಣ್ಣದ ಮಾಲೀಕ. "ವಾಂಗೋ ಸಾರ್, ವಾಂಗೋ ಸಾರ್" ಅನ್ನುತ್ತಾ ಬಸ್ಸಿನಲ್ಲಿದ್ದವರನ್ನೆಲ್ಲಾ ಕರೆಯುತ್ತಿದ್ದ. ಅಲ್ಲಿ ಊಟ ಮಾಡಿದರೆ ನಮ್ಮ ಮುಂದಿನ ಮೂರು ದಿನದ ಮುನ್ನಾರು ಪ್ರವಾಸ ಪೂರ್ತಿ ವಾಂತಿಯ ಧಾರವಾಹಿಯೇ ಆಗಬಹುದು ಅನ್ನಿಸಿ ಮೂವರು ರಿಸ್ಕ್ ತೆಗೆದುಕೊಳ್ಳಲ್ಲಿಲ್ಲ. ಮುಂದೆ ನಿಜಕ್ಕೂ ಏರ್ ಪಿನ್ ತಿರುವುಗಳಿರುವುದರಿಂದ ನಮ್ಮ ದೇಹ ವ್ಯವಸ್ಥೆಯಲ್ಲಿನ ನೀರಿನಂಶ ತೊಂದರೆಕೊಡಬಹುದು, ಎಲ್ಲರೂ ಮೂರ್ತ ವಿಶರ್ಜನೆಯನ್ನು ಖಡಾ ಖಂಡಿತವಾಗಿ ಮುಗಿಸಿಕೊಳ್ಳಬೇಕು ಅಂತ ನಾನು ಹೇಳಿದಾಗ ಮಲ್ಲಿ ಮತ್ತು ಮಂಜು ನಕ್ಕು ಇಳಿಜಾರಿನ ಕಡೆ ಹೋದರು. ಹೋಟಲ್ಲಿನ ಶೋಕೇಸಿನೊಳಗೆ ಅಂಗೈಯಲ್ಲಿ ಹಿಡಿಯುವಷ್ಟು ಗಾತ್ರದ ದೊಡ್ಡ ಬೋಂಡಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದಿಟ್ಟಿದ್ದರು ಅದರ ಹಿಂದೆ ದೊಡ್ಡ ಹೊಟ್ಟೆಯ ಮಾಲೀಕ ಅದೇ ವಾಂಗ್ ಸಾರ್". ಒಳಗೇನಿದೆ ನೋಡೋಣವೆಂದು ಇಣುಕಿದರೆ ನಮ್ಮ ಬಸ್ ಚಾಲಕ ಮತ್ತು ನಿರ್ವಾಹಕರಿಬ್ಬರೂ ಅನ್ನವನ್ನೇ ಕಾಣದವರಂತೆ ಬಾಳೆ ಎಲೆ ತುಂಬ ರಾಶಿ ಹಾಕಿದ್ದ ಅನ್ನವನ್ನು ಕಬಳಿಸುತ್ತಿದ್ದರು. ಈ ಜಾಗದಲ್ಲಿ ಯಾರಿಗಲ್ಲದಿದ್ದರೂ ಇವರಿಬ್ಬರಿಗೂ ಹೊಟ್ಟೆತುಂಬ ಇಷ್ಟವಾಗುವಷ್ಟು ಅನ್ನ ಸಿಗುತ್ತದಲ್ಲ ಅಷ್ಟೇ ಸಾಕು ಅಂದುಕೊಂಡೆ.


ಅಲ್ಲಿಂದ ಮುಂದೆ ಸಾಗಿತಲ್ಲ ನಮ್ಮ ಬಸ್ಸು. ನಿದಾನವಾಗಿ ಸಾಗುತ್ತಿರುವಾಗಲೇ ನನಗೊಂದು ಆಸೆ ಮೊಳಕೆಯೊಡೆದಿತ್ತು. ಬೋಡಿನಾಯಕನೂರಿನಿಂದ ಮುನ್ನಾರಿಗೆ ರೈಲು ವ್ಯವಸ್ಥೆಯಾದರೆ ಎಷ್ಟು ಚೆನ್ನಾಗಿರುತ್ತಲ್ವಾ....ಅಂತ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಅಲ್ಲಿನ ತಿರುವುಗಳಲ್ಲಿ ಒಂದೇ ಬಸ್ ಹೋಗುವಷ್ಟು ಜಾಗದಲ್ಲಿ ಎದುರಿಗೆ ಮತ್ತೊಂದು ಬಸ್ ಬಂದಾಗ ಇಬ್ಬರು ಚಾಲಕರ ಫಜೀತಿಗಳನ್ನು ನೋಡಿದಾಗ, ಮತ್ತು ಅಂತ ಸಮಯದಲ್ಲಿ ನಾವು ಕಿಟಕಿಯಿಂದ ಇಣುಕಿದರೆ ಪಾತಾಳವೇ ಕಾಣಿಸುತ್ತಿರುವಾಗ ಇಂಥ ಜಾಗದಲ್ಲಿ ಬಸ್ಸೇ ಹೋಗುವುದು ಕಷ್ಟ ಇನ್ನು ರೈಲಿನ ಆಸೆಪಡುವ ನನ್ನಂತ ದಡ್ಡನಿಲ್ಲ ಎಂದುಕೊಂಡಿದ್ದು ಉಂಟು. ಮುನ್ನಾರ್ ತಲುಪಿ ಬಸ್ ಇಳಿಯುತ್ತಿದ್ದಂತೆ ರೂಮ್ ಬೇಕಾ, ರಿಸಾರ್ಟ್ ಬೇಕಾ, ಅಂತ ನಮ್ಮನ್ನು ಹತ್ತಾರು ಜನರು ಮುತ್ತಿಕೊಳ್ಳುತ್ತಾರೆ, ನಮ್ಮ ರೂಮ್ ಬುಕ್ ಆಗಿದೆ ಅಂತ ಹೇಳಿಬಿಡುವುದು, ಎಲ್ಲಿ ಅಂದರೆ ಲಾಸ್ ಪಾಮಾಸ್, ಮುನ್ನಾರ್ ಇನ್, ಇತ್ಯಾದಿ ಕೆಲವು ಹೆಸರುಗಳನ್ನು ಹೇಳಬೇಕೆಂದು ನಮ್ಮಲ್ಲೇ ತೀರ್ಮಾನಿಸಿಕೊಂಡೆವು. ಕೊನೆಗೂ ಮುನ್ನಾರ್ ತಲುಪಿದಾಗ ಸಮಯ ಮಧ್ಯಾಹ್ನ ಒಂದು ಗಂಟೆ ಮುವತ್ತು ನಿಮಿಷ.

ಬಸ್ ಇಳಿಯುವಷ್ಟರಲ್ಲಿ ನಾವು ಅಂದುಕೊಂಡಂತೆ ಆಯಿತು. ರೂಮ್, ರಿಸಾರ್ಟ್ ಬೇಕಾ ಅಂತ ನಮ್ಮ ಸುತ್ತ ಎಲ್ಲಾ ಭಾಷೆಯಲ್ಲಿ ಕೇಳತೊಡಗಿದ ಅವರಿಂದ ತಪ್ಪಿಸಿಕೊಂಡು ನೇರವಾಗಿ ಮೊದಲೇ ಗೊತ್ತಿದ್ದ ಹೋಟಲ್ ಶರವಣಭವನ್‍ಗೆ ಊಟಕ್ಕೆ ಹೋದೆವು. ಇಡೀ ಮುನ್ನಾರಿನಲ್ಲೇ ಉತ್ತಮವಾದ ಶುದ್ಧ ಸಸ್ಯಹಾರಿ ಊಟದ ವ್ಯವಸ್ಥೆಯಿರುವ ಮುನ್ನಾರಿನ ಹೃದಯಭಾಗದಲ್ಲೇ ಇರುವ ಹೋಟಲ್ ಅದು. ಕೇವಲ ಇಪ್ಪತ್ತು ರೂಪಾಯಿಗೆ ಹೊಟ್ಟೆ ತುಂಬಾ ಉತ್ತಮವಾದ ಅನ್ನಸಾರು, ಹುಳಿ, ಪಲ್ಯ ಹಪ್ಪಳ ಇತ್ಯಾದಿಗಳನ್ನು ಹಾಕಿ ತೃಪ್ತಿಪಡಿಸುವ ಮತ್ತೊಂದು ಅಂತ ಹೋಟಲ್ ಮುನ್ನಾರಲ್ಲಿ ಇಲ್ಲ. ಪಕ್ಕದಲ್ಲೇ ಇದ್ದ ಒಂದು ಗಿಪ್ಟ್ ಸೆಂಟರಿಗೆ ಹೋಗಿ, ಅಲ್ಲಿ ಕೊಳ್ಳುವುದೇನು ಇಲ್ಲದಿದ್ದರೂ ಸುಮ್ಮನೇ ಮುನ್ನಾರಿನ ಚಾಕ್ಲೇಟ್, ಟೀಪುಡಿ, ಗೋಡಂಬಿ ಪ್ಯಾಕ್ ಮಾಡಲು ಹೇಳಿ ನಿದಾನವಾಗಿ ನಮ್ಮ ಪರಿಚಯವನ್ನು ತಿಳಿಸಿ ನಾವು ಬಂದ ಜಾಗ, ಉದ್ದೇಶ, ನಮ್ಮ ಬಜೆಟ್ಟಿಗೆ ಬೇಕಾದ ಹೋಟಲ್ಲಿನ ವಿವರವನ್ನು ಕೇಳಿದೆವು. ಅವನು ನಮ್ಮ ವಯಸ್ಸಿನವನೇ ಆಗಿದ್ದರಿಂದ ಜೊತೆಗೆ ನಾವು ಮೊದಲೇ ಸ್ವಲ್ಪ ವ್ಯಾಪಾರವನ್ನು ಮಾಡಿದ್ದ ದಾಕ್ಷಿಣ್ಯಕ್ಕೋ ಏನೋ ನಮ್ಮ ಬಜೆಟ್ಟಿನ ಅನುಗುಣವಾಗಿ ನೂರರಿಂದ ಮುನ್ನೂರು ರೂಪಾಯಿಗಳವರೆಗಿನ ಹೋಟಲ್ಲಿನ ವಿವರಗಳನ್ನು ನೀಡಿದ. ಅವನಿಗೆ ಧನ್ಯವಾದಗಳನ್ನು ಹೇಳಿ ಮೂರು ನಾಲ್ಕು ಹೋಟಲ್ ಹುಡುಕಿದಾಗ ಕೊನೆಗೆ ೨೪ ಗಂಟೆಗೆ ಕೇವಲ ಇನ್ನೂರು ರೂಪಾಯಿಯ ಕೃಷ್ಣ ಹೋಟಲ್ ಓಕೆ ಆಯಿತು. ಹಣ ಅಷ್ಟು ಕಡಿಮೆಯಾದರೂ ಮೂವರಿಗೂ ಸಾಕಾಗುವಂತೆ ಇದ್ದು, ಬಿಸಿನೀರು, ಗಾಳಿಬೆಳಕು ವ್ಯವಸ್ಥೆ ಚೆನ್ನಾಗಿದೆಯೆನಿಸಿ ನಮಗೆ ಸಾಕೆನಿಸಿತ್ತು. ಮರು ದಿನ ನೋಡಿದರೆ ಇಸ್ರೇಲ್ ಪ್ರವಾಸಿಯೂ ನಮ್ಮ ಪಕ್ಕದಲ್ಲೇ ಉಳಿದುಕೊಂಡಿದ್ದು ತಿಳಿದು ಅಂತ ವಿದೇಶಿಯನೇ ಇಲ್ಲಿ ಉಳಿದುಕೊಂಡಿರುವಾಗ ನಾವು ಅವನಿಗಿಂತ ಏನು ಕಡಿಮೆಯಿಲ್ಲವೆಂದು ನಮ್ಮಷ್ಟಕ್ಕೆ ನಾವೇ ಸಮಾಧಾನ ಪಟ್ಟುಕೊಂಡೆವು. ಇಷ್ಟಕ್ಕೂ ನಮಗೆ ರೂಮು ಬೇಕಿರುವುದು ರಾತ್ರಿ ಹತ್ತುಗಂಟೆಯಿಂದ ನಸುಕಿನ ಐದುಗಂಟೆಯವರೆಗೆ ಮಲಗಲು ಮಾತ್ರ ಅಂತ ತೀರ್ಮಾನಿಸಿದ್ದರಿಂದ ಇದು ಸಾಕೆನಿಸಿತ್ತು.


ಪ್ರತಿನಿತ್ಯ ಮುಂಜಾನೆ ಐದುಗಂಟೆಗೆ ಮೂವರು ಎಚ್ಚರವಾಗಲೇ ಬೇಕು. ಒಂದು ಗಂಟೆಯೊಳಗಾಗಿ ನಮ್ಮ ನಿತ್ಯಕರ್ಮಗಳನ್ನು ಮುಗಿಸಿ ಅಲ್ಲಿ ಯಾರು ನೋಡದಿದ್ದರೂ ಸುಂದರವಾಗಿ ಮೇಕಪ್ ಮಾಡಿಕೊಂಡು[ಮಂಜು ಚೆನ್ನಾಗಿ ಮೇಕಪ್ ಮಾಡಿಕೊಳ್ಳುತ್ತಿದ್ದ] ಆರುಗಂಟೆಯೊಳಗಾಗಿ ರೂಮಿನಿಂದ ಹೊರಗೆ ಬರಲೇಬೇಕಿತ್ತು. ಅಲ್ಲಿಂದ ಎದುರುಗಡೆ ಇರುವ ಟೀ ಅಂಗಡಿಯಲ್ಲಿ ಬಿಸಿ ಟೀ ಮತ್ತು ಹೊಟ್ಟೆಗೆ ಬೇಕಾದ ಬ್ರೆಡ್ ಅಥವ ಬಿಸ್ಕೆಟ್ಟುಗಳನ್ನು ತಿಂದು ಮುಗಿಸುವ ಹೊತ್ತಿಗೆ ಆರುವರೆ. ಅದೇ ಸಮಯಕ್ಕೆ ನಾವು ಮೊದಲೇ ಬುಕ್ ಮಾಡಿದ್ದ ಆಟೋ ಅಥವ ಕಾರಿನವನು ನಮಗಾಗಿ ಕಾಯುತ್ತಿರಬೇಕು. ಆಗ ಮುನ್ನಾರಿನ ಉಷ್ಣಾಂಶ ಮೂರು ಡಿಗ್ರಿ ಮಾತ್ರ. ನಾವ್ಯಾರು ಸ್ವೆಟ್ಟರು ಮಂಕಿ ಕ್ಯಾಪ್ ಇಲ್ಲದೇ ಹೊರಗೆ ಬರುವಂತಿರಲಿಲ್ಲ. ಎದುರಿಗಿರುವವರು ಕಾಣದಷ್ಟು ಮಂಜು ಕವಿದಂತ ವಾತಾವರಣ. ಕ್ಯಾಮೆರಾದ ಕ್ಲಿಕ್ಕ್ ಒತ್ತಲು ಸಾದ್ಯವಾಗದಷ್ಟು ನಡುಕವಿರುವ ಈ ವಾತಾವರಣದಲ್ಲಿ ನಮಗಿಂತ ಮೊದಲೇ ನಮ್ಮ ಆಟೋಚಾಲಕ ಇರಬೇಕು. ಆಗ ಹೊರಟು ಹತ್ತು ಗಂಟೆಗೆ ವಾಪಸಾಗಬೇಕು. ನಂತರ ನಿದಾನವಾಗಿ ಸ್ನಾನ ವಿಶ್ರಾಂತಿ, ಮಾತುಕತೆ ಅವತ್ತು ಸಂಜೆ ಯಾವಕಡೆ ಹೋಗಬೇಕು ಇತ್ಯಾದಿಗಳ ಚರ್ಚೆ, ನಂತರ ಒಂದಷ್ಟು ಹೊತ್ತು ನಿದ್ರೆ ಅಥವ ಊರು ಸುತ್ತಾಟ, ಮದ್ಯಾಹ್ನ ಶರವಣಭವನ್ ಊಟ, ಸ್ವಲ್ಪ ವಿಶ್ರಾಂತಿ, ಮೂರು ಗಂಟೆಗೆಲ್ಲಾ ಮತ್ತೆ ಆಟೋದವನು ಸಿದ್ಧನಾಗಿರಬೇಕು. ಸಂಜೆ ಆರುಗಂಟೆಯವರೆಗೆ ಅವನು ನಮ್ಮನ್ನು ನಮಗೆ ಬೇಕಾದ ಕಡೆ ಕರೆದುಕೊಂಡು ಹೋಗಬೇಕು, ಅದಕ್ಕಾಗಿ ನಮಗೆ ನಮ್ಮದೇ ವಯಸ್ಸಿನ ಅಥವ ನಮಗಿಂತ ಚಿಕ್ಕ ವಯಸ್ಸಿನ ಹುಡುಗನಾದ್ರು ಪರ್ವಾಗಿಲ್ಲ, ಅಂತ ಉತ್ತಮ ಆಟೋ ಡ್ರೈವರು ಇದ್ದಾರ ನೋಡಿ ಅಂತ ಗಿಫ್ಟ್ ಸೆಂಟರಿನವನನ್ನು ಕೇಳಿದಾಗ, ಆತ ಮೂವರನ್ನು ಗಾಬರಿ, ಆಶ್ಚರ್ಯ, ದಿಗಿಲುಗಳಿಂದ ನೋಡಿದ. ಇವರ್ಯಾರೋ ತಲೆಕೆಟ್ಟವರೇ ಇರಬೇಕು ಅನ್ನಿಸಿತೇನೋ. ಸಹಜವಾಗಿ ಮುನ್ನಾರಿಗೆ ಬಂದ ಪ್ರವಾಸಿಗರಲ್ಲಿ ಅದರಲ್ಲೂ ಇಂಥ ಡಿಸೆಂಬರ ಚಳಿಯಲ್ಲಿ ಅರಾಮವಾಗಿ ರಿಸಾರ್ಟುಗಳಲ್ಲಿ ಕಂಬಳಿಹೊದ್ದು ಬೆಚ್ಚಗೆ ಮಲಗಿರುತ್ತಾರೆ. ಅವರು ಎದ್ದು ಸಿದ್ಧವಾಗುವುದೇ ಬೆಳಿಗ್ಗೆ ಒಂಬತ್ತು ಗಂಟೆಯ ನಂತರ. ಆಗ ಅವರನ್ನು ಟ್ಯಾಕ್ಸಿ ಅಥವ ಆಟೋಗಳಲ್ಲಿ ಸಂಜೆಯವರೆಗೆ ಸುತ್ತಾಡಿಸಿ ಕರೆದುಕೊಂಡು ಬರುವುದು ಈಗ ಇರುವ ಲೆಕ್ಕಚಾರ. ಇವರು ನೋಡಿದರೆ ಬೆಳಿಗ್ಗೆ ಆರುವರೆಗೆ ಇಷ್ಟು ಕೊರೆಯುವ ಚಳಿಯಲ್ಲಿ ಆಟೋ ಬೇಕಂತಿದ್ದಾರಲ್ಲ, ಮತ್ತೆ ಹತ್ತು ಗಂಟೆಗೆ ವಾಪಸ್ ಅಂತೆ, ಅನಂತರ ಮಧ್ಯಾಹ್ನವೆಲ್ಲಾ ರೆಸ್ಟ್ ತೆಗೆದುಕೊಂಡು ಮೂರು ಗಂಟೆಗೆ ಹೊರಟರೆ ಸಂಜೆ ಏಳುಗಂಟೆಯವರೆಗೆ ಸುತ್ತಾಡಿಸಬೇಕು. ಇದೆಲ್ಲಾ ಕೇಳಿ ಅವನಿಗೂ ಸ್ವಲ್ಪ ತಲೆಬಿಸಿಯಾಯಿತೇನೋ, ಆಟೋದವನ ಬಾಡಿಗೆಯನ್ನು ಇಡೀ ದಿನಕ್ಕೆ ಪೂರ್ತಿಯಾಗಿ ಕೊಡುತ್ತೇವೆಂದಾಗ ಅವನಿಗೆ ಸ್ವಲ್ಪ ಸಮಾಧಾನವಾಯಿತು. ತನ್ನಲ್ಲಿರುವ ನಂಬರುಗಳನ್ನು ಹುಡುಕಿ ಒಂದು ನಂಬರಿಗೆ ಪೋನ್ ಹಚ್ಚಿದ. ಮಲೆಯಾಳಿಯಲ್ಲಿ ಏನೇನೋ ಹೇಳಿ ಕರೆದಾಗ ಕೆಲವೇ ನಿಮಿಷಗಳಲ್ಲಿ ನಮಗಿಂತ ಚಿಕ್ಕವನಾದ, ನೋಡಲು ಚುರುಕಾಗಿರುವ ಕಪ್ಪಗಿದ್ದ ಹುಡುಗನೊಬ್ಬ ಆಟೋ ಓಡಿಸಿಕೊಂಡು ಬಂದ. ಅವನಿಗೆ ನಮ್ಮ ವಿವರಗಳನ್ನೆಲ್ಲಾ ಹೇಳಿ ಉಳಿದಿದ್ದು ನೀನು ಮಾತಾಡಿಕೋ ಅಂತ ಆವನನ್ನು ನಮಗೆ ಪರಿಚಯಿಸಿ ಅಂಗಡಿಯವ ಕೈತೊಳೆದುಕೊಂಡುಬಿಟ್ಟ.

ಮುಂದುವರಿಯುವುದು..........

ಚಿತ್ರ ಮತ್ತು ಲೇಖನ.
ಶಿವು.ಕೆ