Sunday, September 28, 2008

ಮನೆಯಲ್ಲಿ ಹುಟ್ಟಿದ ಚಿಟ್ಟೆ ಕಥೆ.

ಎಂದಿನಂತೆ ಹೆಸರುಘಟ್ಟದ ಕಡೆಗೆ ಚಿಟ್ಟೆ ಪೋಟೊ ತೆಗೆಯಲು ಹೋದಾಗ ಯಾವ ಚಿಟ್ಟೆಯು ಸಿಗಲಿಲ್ಲ. ಚಳಿಗಾಲ ಮುಗಿಯುತ್ತಾ ಬಂದಿತ್ತಾದ್ದರಿಂದ ಚಿಟ್ಟೆಗಳ ಸಂಖ್ಯೆ ಕಡಿಮೆಯಾಗಿತ್ತು. ಇಲ್ಲಿಗೆ ಬಂದಿದ್ದಕ್ಕೆ ಏನಾದರೂ ಪೋಟೊ ತೆಗೆಯೋಣ ಎಂದು ಹುಡುಕತೊಡಗಿದೆ. ಅಲ್ಲೊಂದು ಕೆಂಪು ಕಣಗಲು ಗಿಡ. ಎಲೆಗಳ ಮಧ್ಯೆ ಒಂದಿಂಚು ಉದ್ದದ ತಿಳಿ ಕಂದುಬಣ್ಣದ ಬೆನ್ನ ಮೇಲೆ ಕಪ್ಪು ಪಟ್ಟಿ ಇರುವ ಹುಳುವೊಂದು ಎಲೆಯನ್ನು ತಿನ್ನುತ್ತಿದ್ದ ದೃಶ್ಯ ಕಾಣಿಸಿತು. ಪಕ್ಕದ ಎಲೆಯ ಮೇಲೆ ಕಂಡರೂ ಕಾಣದ ಹಾಗೆ ಒಂದು ಸಣ್ಣ ಹಳದಿ ಮಿಶ್ರಿತ ಬಿಳಿ ಬಣ್ಣದ ರಾಗಿಕಾಳಿನ ಗಾತ್ರದ ವಸ್ತು ಕಾಣಿಸಿತು.
ನನ್ನ ಮ್ಯಾಕ್ರೋ ಲೆನ್ಸ್ ನಿಂದ ನೋಡಿದಾಗ ಮತ್ತೊಂದು ಹುಳುವಾಗಲು ಸಿದ್ಧವಾಗಿರುವ ಮೊಟ್ಟೆ ಎಂದು ತಿಳಿಯಿತು. ತಕ್ಷಣ ಅದರ ಪೋಟೊ ತೆಗೆದೆ. ಜೊತೆಗೆ ಒಯ್ದಿದ್ದ ಕೃಷ್ಣಮೇಘ ಕುಂಟೆರವರ "ಬಟರ್ ಫ್ಲೈಸ್ ಆಫ್ ಪೆನೆನ್ಸುಲಾರ್ ಇಂಡಿಯ" ಪುಸ್ತಕ ತೆಗೆದು ನೋಡಿದೆ. ಅದು "ಇಂಡಿಯನ್ ಕಾಮನ್ ಕ್ರೋ" ಚಿಟ್ಟೆಯ ಲಾರ್ವ ಎಂದು ತಿಳಿಯಿತು. ಆ ಪುಸ್ತಕದಲ್ಲಿ ಲಾರ್ವಾದಿಂದ ಚಿಟ್ಟೆಯಾಗುವವರೆಗೆ ಪೂರ್ತಿ ಫೋಟೊ, ವಿವರಣೆ ಇತ್ತು. ತಕ್ಷಣ ನನಗೊಂದು ಆಲೋಚನೆ ಬಂತು. ನಾನೂ ಏಕೆ ಈ ರೀತಿ ಪೋಟೊ ಹಂತ ಹಂತವಾಗಿ ತೆಗೆಯಬಾರದು? ಎನಿಸಿತು. ತಕ್ಷಣ ನನ್ನ ಕ್ಯಾಮೆರ ಕಿಟ್ ನಲ್ಲಿದ್ದ ಕತ್ತರಿ ತೆಗೆದು ಆ ಹುಳುವಿದ್ದ ಎಲೆಗಳ ಕಾಂಡವನ್ನು ಕತ್ತರಿಸಿ ಹುಳು ಸಮೇತ ಮನೆಗೆ ತಂದು ಸಣ್ಣ ಹೂ ಕುಂಡದಲ್ಲಿ ನೀರು ತುಂಬಿಸಿ ಆ ಕಾಂಡವನ್ನು ಅದರಲ್ಲಿಟ್ಟೆ. ಅಲ್ಲಿಂದ ಶುರುವಾಯಿತು ಲಾಲನೆ ಪಾಲನೆ.

ಮರುದಿನ ಬೆಳಿಗ್ಗೆ ಕಣಗಲು ಗಿಡದ ಎಲೆಗಳನ್ನು ತರಲು ಹೊರಟೆ. ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತದೆ? ಈ ಕಾಂಕ್ರೀಟು ಕಾಡಿನಲ್ಲಿ ಬೆಳೆದ ಕೆಲವು ಗಿಡಗಳನ್ನು ನೋಡಿದರೆ ಎಲ್ಲವೂ ಅಲಂಕಾರಿಕ ಸಸ್ಯಗಳೆ. ಕ್ರೋಟನ್, ಇನ್ನಿತರ ಎಲೆಗಳಿರುವ ಸಸ್ಯಗಳೇ ತುಂಬಿದ್ದವು. ಕೊನೆಗೂ ಹುಡುಕಿ ತಂದು ಸಣ್ಣ ಹೂ ಕುಂಡದಲ್ಲಿ ನೀರು ತುಂಬಿಸಿ ಅದನ್ನಿಟ್ಟು ಆ ಹುಳುವನ್ನು ಒಂದು ಎಲೆಯ ಮೇಲೆ ಬಿಟ್ಟೆ. ಸ್ವಲ್ಪ ಸಮಯದ ನಂತರ ಅದು ಎಲೆಯನ್ನು ತಿನ್ನಲಾರಂಭಿಸಿತು. ಕೇವಲ ಅರ್ಧಗಂಟೆಯ ಹೊತ್ತಿಗೆ ಮೂರು ಇಂಚು ಉದ್ದದ ಎಲೆಯನ್ನು ಆ ಹುಳು ತಿಂದು ಮುಗಿಸಿತ್ತು. ಆನಂತರ ಸ್ವಲ್ಪ ಸಮಯ ವಿರಾಮ. ನನ ಶ್ರೀಮತಿಯಂತೂ ಆ ಹುಳುವಿನ ಚಟುವಟಿಕೆಯನ್ನು ಆಶ್ಚರ್ಯದಿಂದ ಗಮನಿಸತೊಡಗಿದಳು.


ನನ್ನ ಮೈಕ್ರೋ ಲೆನ್ಸ್ ಮುಖಾಂತರ ಅದರ ಬಾಯಿ, ತಿನ್ನುವ ಪರಿ ನೋಡಿ " ಎಷ್ಟು ಚೆನ್ನಾಗಿ ಗರಗಸದಲ್ಲಿ ಕತ್ತರಿಸಿದಂತೆ ಕತ್ತರಿಸಿ ತಿನ್ನುತ್ತದೆ ಪಾಪ" ಎಂದು ಪ್ರೀತಿಯಿಂದ ನೋಡುತ್ತಿದ್ದಳು. ಅಕ್ಕನ ಮಕ್ಕಳಾದ ಚೇತನ ವರ್ಷಿಣಿ ಇಬ್ಬರಿಗೂ ಹೊಸ ಗೆಳೆಯ ಸಿಕ್ಕ ಆನಂದ.

ಮರುದಿನ ಮತ್ತೆ ನಾನು ಹೋಗಿ ಹೊಸ ಎಲೆಗಳನ್ನು ತಂದು ಇಟ್ಟೆ. ಆ ಹುಳುವಿಗಂತೂ ತಿನ್ನುವುದೇ ಕೆಲಸ. ಮೊದಲ ದಿನ ಒಂದು ಅಂಗುಲವಿದ್ದ ಹುಳು ಎರಡನೇ ದಿನಕ್ಕೆ ಕಾಲು ಇಂಚು ಬೆಳೆದಿತ್ತು. ಮೂರನೆ ದಿನಕ್ಕೆ ಮುಕ್ಕಾಲು ಇಂಚಿನವರೆಗೆ ಬೆಳೆಯಿತು. ಆ ಚಿಟ್ಟೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಅತಿಯಲು " ದಕ್ಷಿಣ ಭಾರತದ ಚಿಟ್ಟೆಗಳು" ಪುಸ್ತಕ ನೋಡಿದಾಗ ಅದರಲ್ಲಿ ಲಾರ್ವಾ ಹಂತದಿಂದ ಪ್ಯೂಪ, ಪ್ಯೂಪದಿಂದ ಚಿಟ್ಟೆಯಾಗುವಿಕೆ, ಅದರ ಸಮಯ ಇನ್ನಿತರ ವಿಷಯ ತಿಳಿಯಿತು. ಮೂರು ದಿನ ಕಳೆಯಿತು.


ಅಂದು ಸಂಜೆ ಇದ್ದಕ್ಕಿದ್ದಂತೆ ಅದರ ನಡುವಳಿಕೆಯಲ್ಲಿ ಕೊಂಚ ಬದಲಾವಣೆ ಕಂಡಿತು. ಹಿಂದಿನ ದಿನ ತಿನ್ನುವುದು, ನಿದ್ರೆಮಾಡುವುದು, ತನ್ನ ಗುದದ್ವಾರದಿಂದ ಹಿಕ್ಕೆ ಹಾಕುವುದು ಇವು ನಿದಾನಗತಿಯಲ್ಲಿ ನಡೆದಿತ್ತು. ಆದರೆ ಇಂದು ಸಂಜೆ ಅದರ ಚಟುವಟಿಕೆಯಲ್ಲಿ ಕೊಂಚ ಹೆಚ್ಚಿನ ವೇಗವಿತ್ತು.

ಆದೇನೆಂದರೆ ಅದು ಮೊದಲು ಒಂದೊಂದೆ ಎಲೆಗಳ ಮೇಲೆ ತೆವಳಿ ಮತ್ತೆ ಹಿಂತಿರುವುದು, ಕಾಂಡದ ಮೇಲೆ ತೆವಳಿ ಮತ್ತೆ ಹಿಂತಿರುವುದು, ಕಾಂಡದ ಕೆಳಗೆ ಸರಿದಾಡುವುದು ನಡೆದೇ ಇತ್ತು. ಅನಂತರ ಯಾವುದೋ ಒಂದು ಎಲೆಯನ್ನು ಆಯ್ಕೆ ಮಾಡಿಕೊಂಡು ಅದರ ಕೆಳಗೆ ತೆವಳಿ ಹೋಗಿ ನಿಂತಿತು. ಸ್ವಲ್ಪ ಸಮಯದ ನಂತರ ಆ ಎಲೆಯ ಮುಂಭಾಗವನ್ನು ತಿಂದು ಮುಗಿಸಿ ಎಲೆಯ ಕೆಳಭಾಗದ ಮಧ್ಯಕ್ಕೆ ಬಂದು ತನ್ನ ಹಿಂಭಾಗ ಎಂಥದೋ ಆಂಟುದ್ರವ ಸುರಿಸಿ ತಲೆಕೆಳಕಾಗಿ ಆ ಎಲೆಗೆ ಅಂಟಿಕೊಂಡು ನೇತಾಡತೊಡಗಿತು.

ಈ ಮಧ್ಯೆ ನಮಗೆ ಕಾಣದ ಹಾಗೆ ಇನ್ನೊಂದು ಬದಲಾವಣೆಯಗಿತ್ತು. ಅದೇನೆಂದರೆ ತನ್ನ ಹೊರ ಮೈ ಕವಚವನ್ನು ಕಾಲು ಸಮೇತ ಕಳಚಿಹಾಕಿತ್ತು. ಅದು ನನಗೆ ತಿಳಿದ ಬಗೆ ಹೇಗೆಂದರೆ ಆ ಹುಳುವಿನ ಆಕಾರ ಚಿಕ್ಕದ್ದಾಗಿತ್ತು. ಹಾಗೆ ಅದರ ಬಣ್ಣ ಹಳದಿ ಮಿಶ್ರಿತ ತಿಳಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಕೆಳಗೆ ಹಿಕ್ಕೆಗಳ ಜೊತೆ ಅದರ ಕಳಚಿದ ಪೊರೆ ಇದ್ದದ್ದು ಕಂಡುಬಂತು.

ನನ್ನ ಅಕ್ಕ ಭಾವ ಆ ಹುಳು ಆ ರೀತಿ ನೇತಾಡುತ್ತಿರುವುದನ್ನು ನೋಡಿ, ಅದು ಕೆಳಗೆ ಬಿದ್ದು ಸತ್ತುಹೋಗುವುದೇನೋ ಎಂದು ಆತಂಕ ವ್ಯಕ್ತಪಡಿಸಿದರು. ಇಲ್ಲ ಹಾಗೇನು ಆಗುವುದಿಲ್ಲ. ಬಹುಶಃ ಅದು ಪ್ಯೂಪ ಆಗುವುದಕ್ಕೆ ಮೊದಲಿನ ಸ್ಥಿತಿ ಹೀಗಿರಬಹುದು ಎಂದು ತಿಳಿಸಿದೆ. ಸರಿ, ನಾಳೆ ನೋಡೋಣವೆಂದು ಅವರು ಹೊರಟುಹೋದರು.

ನನ್ನ ಕುತೂಹಲ ಏನೆಂದರೆ ಇದು ಹೇಗೆ ಪ್ಯೂಪ ಆಗುತ್ತದೆ ನೋಡಬೇಕೆಂಬ ಕುತೂಹಲ ನನಗೆ. ರಾತ್ರಿ ೧೨ ಗಂಟೆಯವರೆಗೆ ಎದ್ದಿದ್ದು ಗಮನಿಸುತ್ತಿದ್ದೆ. ಆ ಕತ್ತಲಲ್ಲೂ ಅದರದೊಂದು ಫೋಟೊ ತೆಗೆದೆ. ನನ್ನ ಫ್ಲಾಷ್ ಬೆಳಕು ಅ ಹುಳದ ಮೇಲೆ ಬಿದ್ದಾಗ ಒಮ್ಮೆ ಹುಳು ಬೆಚ್ಚಿದಂತೆ ಆಗಿ ಸುಮ್ಮನಾಯಿತು. ತಕ್ಷಣ ನನಗೆ ನನ್ನ ಬಗ್ಗೆ ಅಪರಾಧಿ ಮನೋಭಾವನೆ ಉಂಟಾಯಿತು. ನಾನು ಅದರ ಜೀವನ ಚಟುವಟಿಕೆಗಳಿಗೆ ತೊಂದರೆ ಕೊಡುತ್ತಿದ್ದೇನೇನೋ ಎನ್ನಿಸಿತು. ಆ ಮಂದ ಬೆಳಕಿನಲ್ಲಿ ಅದನ್ನು ಗಮನಿಸುವಷ್ಟೂ ಕಾಲ ಏನೂ ಬದಲಾವಣೆ ಕಾಣಲಿಲ್ಲ. ನಂತರ ಆ ಮಂದ ಬೆಳಕನ್ನು ಆರಿಸಿ ಮಲಗಿಬೆಟ್ಟೆ.

ಬೆಳಿಗ್ಗೆ ಎದ್ದು ನೋಡಿದರೆ ಎಲ್ಲಿದೆ ಹುಳ? ಆ ಜಾಗದಲ್ಲಿ ಒಂದು ಸಣ್ಣ ಕಡಲೇಕಾಯಿ ಗಾತ್ರದ ಪ್ಯೂಪ ಎಲೆಗೆ ಅಂಟಿಕೊಂಡಿತ್ತು. ಬಹುಶಃ ಕತ್ತಲಲ್ಲಿ ಮಾತ್ರ ಜೀವಸೃಷ್ಟಿಯಾಗಲಿ, ಬದಲಾವಣೆಯಾಗಲೀ ನಡೆಯುತ್ತದೆ ಎನ್ನುವ ಸತ್ಯ ನನ್ನ ಅರಿವಿಗೆ ಬಂತು. ಮನೆಗೆ ಬಂದ ಅಕ್ಕ, ಭಾವ, ಅವರ ಮಕ್ಕಳು, ನನ್ನ ಶ್ರೀಮತಿ ಎಲ್ಲರಿಗೂ ಇದು ಆಶ್ಚರ್ಯವಾಗಿತ್ತು. ಎಲ್ಲರೂ ನನ್ನನ್ನೂ ಪ್ರಶ್ನೆ ಕೇಳಲಾರಂಬಿಸಿದರು, ಹುಳು ಎಲ್ಲಿ ಹೋಯಿತು. ಈ ಕಡಲೇಕಾಯಿ ಬೇಜದೊಳಗೆ ಅಷ್ಟು ದೊಡ್ಡ ಹುಳ ಹೇಗೆ ಹೋಯಿತು? ಈಗ ಅದರೊಳಗೆ ಏನು ಮಾಡುತ್ತಿದೆ? ಮೊದಲಾದ ಪ್ರಶ್ನೆಗಳ ಸುರಿಮಳೆ.
ನನಗೆ ಗೊತ್ತಿದ್ದಷ್ಟನ್ನು ಮಾತ್ರ ಅವರಿಗೆ ಹೇಳಿದೆ. ಉಳಿದಂತೆ ನನಗೂ ಇದು ಮೊದಲನೇ ಬಾರಿ ಈ ರೀತಿ ನೋಡುತ್ತಿರುವ ಅನುಭವ ಕುತೂಹಲ. ಮೂರುವರೇ ವರ್ಷದ ವಷೀಣಿಯಂತೂ " ಮಾಮ ಆ ಕಡಲೇಕಾಯಿ ಬೀಜದ ಒಳಗೆ ಕುಳಿತು ಅದು ಏನು ಮಾಡುತ್ತಿದೆ? ಅದು ಆಟ ಆಡುವುದಿಲ್ಲವೇನು? ಊಟ ಮಾಡುವುದಿಲ್ಲವಾ? ಟಾಯ್ಲೆಟ್ಟಿಗೆ ಹೋಗುವುದಿಲ್ಲವಾ? ಅದು ಯಾವಾಗ ಹೊರಗೆ ಬರುತ್ತೆ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಳು.

ನಾನು " ಅದು ಒಂದು ವಾರದ ನಂತರ ಹೊರಬರುತ್ತದೆ. ಆಗ ಪೂರ್ತಿಯಾಗಿ ಬೆಳೆದ ಜೋಡಿ ರೆಕ್ಕೆಗಳು, ಕಾಲುಗಳು, ಮೀಸೆ ಎಲ್ಲಾ ಇರುತ್ತದೆ. ಆಮೇಲೆ ಹಾರಿಹೋಗುತ್ತದೆ" ಎಂದಾಗ ಅವಳ ಮುಖದಲ್ಲಿ ಸಂಭ್ರಮ ಆಶ್ಚರ್ಯ.

ಇದಾದ ಮೂರು ನಾಲ್ಕು ದಿನ ಏನೂ ಬದಲಾವಣೆ ಕಾಣಲಿಲ್ಲ. ಮನೆಯಲ್ಲಿ ಮಾತ್ರ ಅದನ್ನು ಗಮನಿಸುವುದು ಪ್ರಶ್ನೆ-ಉತ್ತರಗಳ ಮಾತುಕತೆ ನಡೆದೇ ಇತ್ತು. ಮೂರನೇ ದಿನಕ್ಕೆ ಪ್ಯೂಪ ಚಿನ್ನದ ಬಣ್ಣಕ್ಕೆ ತಿರುಗಿತ್ತು. ಐದನೇ ದಿನಕ್ಕೆ ನಿದಾನವಾಗಿ ಅದರ ಬಣ್ಣ ಮತ್ತೆ ಬದಲಾಗತೊಡಗಿತ್ತು. ಚಿನ್ನದ ಬಣ್ಣವೆಲ್ಲಾ ಕರಗಿ ಒಳಗಿನ ಕೋಶಗಳಲ್ಲಿ ಕಾಣುವಂತೆ ಪಾರದರ್ಶಿಯಾಗಿ ಬದಲಾಗತೊಡಗಿತು.
ಸರಿಯಾಗಿ ಎಂಟನೇ ದಿನ ಬೆಳಿಗ್ಗೆ ೫ ಗಂಟೆಗೆ ನೋಡಿದರೆ ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ! ಒಳಗೆ ಪೂರ್ತಿ ಬೆಳದ ಚಿಟ್ಟೆ ಅಸ್ಪಷ್ಟವಾಗಿ ಕಾಣಿಸುತ್ತಿದೆ. ಆ ತಕ್ಷಣ ನಾನು ಪುಸ್ತಕವನ್ನು ನೋಡಿದೆ.ಅದರಲ್ಲಿ ಕಪ್ಪು ಬಣ್ಣ ಬಂದ ನಂತರ ಚಿಟ್ಟೆ ಬರುತ್ತದೆ ಎಂದು ಬರೆದಿತ್ತು. ಕೂಡಲೇ ಎದ್ದು ಅವಸರದಲ್ಲಿ ನನ್ನ ಕ್ಯಾಮೆರ, ಸ್ಟ್ಯಾಂಡ್, ರೋಲ್ ಎಲ್ಲವನ್ನು ಸಿದ್ದಪಡಿಸಿಕೊಂಡು ತಯಾರಾದೆ. ಅಷ್ತರಲ್ಲಿ ನನ್ನ ಶ್ರೀಮತಿ ಬಂದಳು. ಅವಳಿಗೂ ಕುತೂಹಲ. ಒಂದು ವಾರದಿಂದ ಈ ಕಡಲೆಕಾಯಿ ಗಾತ್ರದ ಬೀಜದ ಒಳಗೆ ಬೆಳೆದು ಹೊರಬರುವ ಚಿಟ್ಟೆಯನ್ನು ನೋಡುವ ಕುತೂಹಲ.

ಸುಮಾರು ೭ ಗಂಟೆಯ ಸಮಯಕ್ಕೆ ನಿದಾನವಾಗಿ ಬಾಗಿಲು ತೆಗೆದು ಹೊರಬರುವಂತೆ ಚಿಟ್ಟೆ ಹೊರಕ್ಕೆ ಬರತೊಡಗಿತು. ಮೊದಲು ತಲೆ ಭಾಗ ಬಂತು. ನಂತರ ನಿಧಾನವಾಗಿ ಮೀಸೆ, ಹೊಟ್ಟೆ ಭಾಗ, ಕೆಳಭಾಗ ಎಲ್ಲವೂ ನೋಡು ನೋಡುತ್ತಿದ್ದಂತೆ ಆ ವ್ಯೂಹದಿಂದ ಹೊರಬಂದು, ಅನಂತರ ಆ ಪ್ಯೂಪವನ್ನೇ ತನ್ನ ಕಾಲುಗಳಿಂದ ಹಿಡಿದುಕೊಂಡು ನೇತಾಡತೊಡಗಿತು. ನಾನಂತೂ ಪೋಟೋ ತೆಗೆಯುವುದನ್ನು ಬಿಟ್ಟು ಪ್ರಾಕೃತಿಕ ಸೃಷ್ಟಿಯನ್ನು ತದೇಕಚಿತ್ತದಿಂದ ನೋಡುತ್ತಿದ್ದೆ. ನನ್ನ ಶ್ರೀಮತಿ ಫೋಟೋ ತೆಗೀರಿ ಎಂದಾಗಲೇ ನಾನು ತಕ್ಷಣ ಕೆಲವು ಫೋಟೊ ತೆಗೆದಿದ್ದು, ಆ ಸಮಯದಲ್ಲಿ ಅದರ ರೆಕ್ಕೆಗಳು ಒದ್ದೆ ಬಟ್ಟೆಯಂತೆ ಮಡಿಕೆ ಹಾಕಿಕೊಂಡಿದ್ದವು. ನಿದಾನವಾಗಿ ಸೂರ್ಯನ ಶಾಖ ಅದರ ರೆಕ್ಕೆಯ ಮೇಲೆ ಬೀಳತೊಡಗಿದಾಗ ಬೆಳಕಿಗೆ ಅಭಿಮುಖವಾಗಿ ಚಿಟ್ಟೆ ನೇತಾಡತೊಡಗಿತ್ತು. ಸುಮಾರು ಒಂದು ಗಂಟೆಯ ಕಾಲಹಾಗೆ ತನ್ನ ರೆಕ್ಕೆಗಳನ್ನು ಒಣಗಿಸಿಕೊಳ್ಳುವುದು, ನಡುವೆ ತನ್ನ ಉದ್ದ ನಾಲಗೆಯನ್ನು ಹೊರತೆಗೆದು ಸುರುಳಿಯಂತೆ ಸುತ್ತುವುದು ನಡೇದೇ ಇತ್ತು.
ಅಕ್ಕನ ಮಕ್ಕಳು " ಮಾಮ ಈ ಚಿಟ್ಟೆ ಹುಡುಗನೋ, ಹುಡುಗಿಯೋ ಎಂದು ಕೇಳಿದ ಪ್ರಶ್ನೆಗೆ ನಾನು ದಂಗಾಗಿದ್ದೆ. ಕೊನೆಗೆ ನಾನು ಆ ಪ್ರಶ್ನೆಗೆ ಉತ್ತರ ಹೇಳಲಾಗದೆ ಹಾರಿಕೆ ಉತ್ತರ ನೀಡಿ ಸುಮ್ಮನಾದೆ. ಸುಮಾರು ಹೊತ್ತಿನವರೆಗೆ ಆ ಮಕ್ಕಳ ನನ್ನ ಪ್ರಶ್ನೋತ್ತರ ಹಾಗೂ ಫೋಟೊ ತೆಗೆಯುವುದು ನಡೆದಿತ್ತು. ಎಂಟು ಗಂಟೆಯ ಹೊತ್ತಿಗೆ ಒಂದೆರಡು ಬಾರಿ ಚಿಟ್ಟೆ ರೆಕ್ಕೆ ಬಡಿಯಿತು.
ಮತ್ತೆ ಎರಡು ನಿಮಿಷದ ನಂತರ ಅದು ರೆಕ್ಕೆ ಬಡಿದು ಹಾರಿ ಮತ್ತೊಂದು ಜಾಗದಲ್ಲಿ ಕೂತಿತು. ನಾನು "ಈಗ ಎಲ್ಲರೂ ಟಾಟಾ ಮಾಡಿ ಬೈ ಬೈ ಹೇಳಿ! ಅದು ಹಾರಿ ಹೋಗುತ್ತದೆ" ಎಂದೆ. ಎಲ್ಲರೂ ಟಾಟಾ ಬೈ ಬೈ ಹೇಳಿದರು. ನಂತರ ಆ ಚಿಟ್ಟೆ ರೆಕ್ಕೆ ಬಡಿಯುತ್ತಾ ಹಾರಿ ಹೋಗಿ ಪ್ರಕೃತಿಯೊಳಗೆ ಒಂದಾಯಿತು.

ಸುಮಾರು ಹದಿನೈದು ದಿನಗಳಿಂದ ನಮ್ಮ ಮನೆಯ ಅತಿಥಿಯಾಗಿ ಎಲ್ಲರ ಆಶ್ಚರ್ಯ ಕುತೂಹಲ ಕೆರಳಿಸಿ ಚರ್ಚೆಗಳಿಗೆ ಈಡು ಮಾಡಿ ಎಲ್ಲರಿಗೂ ಹೊಸ ವಿಭಿನ್ನ ಅನುಭವ ನೀಡಿದ್ದ ಆ "ಪಾತರಗಿತ್ತಿ ಸುಂದರಿ" ಆ ಸುಂದರ ಮುಂಜಾವಿನಲ್ಲಿ ಹಾರಿಹೋಗಿತ್ತು.

ಶಿವು ಕೆ
[ಜೂನ್ ೧ ನೇ ೨೦೦೬ ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಫೋಟೊ ಸಹಿತ ಪ್ರಕಟವಾದ ಲೇಖನ]

13 comments:

ಆಲಾಪಿನಿ said...

super!

Archu said...

wow!!
wonderful pics!!
cheers,
archana

sunaath said...

ಶಿವು,
ಒಂದು ಅದ್ಭುತವಾದ ಸೃಷ್ಟಿಕಾರ್ಯವನ್ನು ನಮಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು. ಚಿತ್ರಗಳು ಎಷ್ಟು ಮನೋಹರವಾಗಿವೆಯೊ, ವಿವರಣೆಯೂ ಅಷ್ಟೇ ಉತ್ತಮವಾಗಿದೆ.
ನಮ್ಮೆದುರಿನಲ್ಲಿಯೇ ಕಂಡಂತಾಯಿತು:
"ಪಾತರಗಿತ್ತಿ ಪಕ್ಕಾ
ನೊಡೀದೇನ ಅಕ್ಕಾ"!

shivu.k said...

ಸುನೀತ್ ಸರ್ ಮತ್ತು ಅರ್ಚು ರವರಿಗೆ ಧನ್ಯವಾದಗಳು ಮತ್ತೊಂದು ಇಂಥದೇ ಒಂದು ಚಿಟ್ಟೆಯ ಸೃಷ್ಟಿಯನ್ನು ಸೆರೆಹಿಡಿಯಲು ಬೆಂಗಳೂರಿಂದ ಚಿತ್ರದುರ್ಗಕ್ಕೆ ಅಲ್ಲಿಂದ ಗೋವಾಗೆ ಹೋಗಿದ್ದ, ಹಾಗೂ ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಪ್ರವಾಸ ಪೂರ್ತಿ ನಮ್ಮ ಜೊತೆ ಇದ್ದ ಮತ್ತೊಂದು ಚಿಟ್ಟೆಯ ಜೀವನಕತೆಯನ್ನು ಮುಂದಿನ ವಾರ ಪೋಷ್ಟ್ ಮಾಡುತ್ತೇನೆ. ಅದು ಮತ್ತೊಂದು ಮಜದ ಅನುಭವ!

ಶಿವು.ಕೆ.

ಮಹೇಶ್ ಪುಚ್ಚಪ್ಪಾಡಿ said...

ಹಾಯ್,

ಏನ್ ಚೆನ್ನಾಗಿದೆ ಚಿತ್ರಗಳು.ಖುಷಿ ಕೊಟ್ಟಿದೆ.ಮತ್ತೆ ಮತ್ತೆ ನೋಡಬೇಕು ಎನಿಸಿದೆ. ಹೊಸ ಗೆಳೆತನಕ್ಕೆ ಧನ್ಯವಾದ.

ಮಹೇಶ್.

shivu.k said...

ಧನ್ಯವಾದಗಳು ಮಹೇಶ್ ನೀವು ನನ್ನ ಬ್ಲಾಗ್ ನೋಡಿದ್ದಕ್ಕೆ ! ನೀವು ಇನ್ನು ಉಳಿದ ಲೇಖನಗಳನ್ನು ಓದಿ. ಅದರಲ್ಲೂ ಮಲ್ಲೇಶ್ವರ ರೈಲ್ವೆ ನಿಲ್ದಾಣ ಲೇಖನವು ಸೇರಿದಂತೆ ಉಳಿದ ಲೇಖನಗಳನ್ನು ನೋಡಿ ನಿಮಗೆ ವಿಭಿನ್ನ ಅನುಭವವೆನಿಸಬಹುದು.

ನನ್ನ ವಿಭಿನ್ನ ಬರವಣಿಗೆಯ ಅನುಭವಕ್ಕಾಗಿ:

http://camerahindhe.blogspot.com/

bhadra said...

ಸಚಿತ್ರ ಲೇಖನ ಬಹಳ ಚೆನ್ನಾಗಿದೆ - ಇಷ್ಟು ದಿನಗಳು, ಈ ತಾಣ ನನ್ನ ಕಣ್ಣಿಗ್ಯಾಕೆ ಬೀಳಲಿಲ್ವೋ?!
ಚಿತ್ರ ತೆಗೆಯಲು ಬಹಳ ಕಷ್ಟ ಆಗಿರಬೇಕಲ್ವೇ? ಯಾಕೆ ಕೇಳ್ತಿದ್ದೀನಿ ಅಂದ್ರೆ, ಸಾಮಾನ್ಯವಾಗಿ ಯಾರೂ ಇಷ್ಟು ಸೂಕ್ಷ್ಮ ವಿಷಯಗಳನ್ನು ಚಿತ್ರದಲ್ಲಿ ಆನೂಚಾನವಾಗಿ ವಿವರಿಸಿರಲಿಲ್ಲ

ಸತ್ಕಾರ್ಯ ಅನವರತ ಸಾಗಲಿ - ಪ್ರತಿನಿತ್ಯ ಬರುವೆ - ಮನ ಮುದಗೊಳಿಸಿದುದಕ್ಕೆ ವಂದನೆಗಳು

ಗುರುದೇವ ದಯಾ ಕರೊ ದೀನ ಜನೆ

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ಅದ್ಭುತ ಚಿತ್ರಗಾರಿಗೆ. ಅಷ್ಟೇ ಸುಂದರ ಹಾಗೂ ಸರಳ ವಿವರಣೆ. ಇಷ್ಟವಾಯಿತು ನಿಮ್ಮ ವರ್ಣರಂಜಿತ ಬ್ಲಾಗ್. ಬರುತ್ತಿರುವೆ.

jomon varghese said...

ಲೇಖನ ಸುಧಾದಲ್ಲೂ ಓದಿದ್ದೆ. ಚೆಂದದ ಚಿತ್ರಗಳು.

ಅಂತರ್ವಾಣಿ said...

ಶಿವು ಅವರೆ,
ತುಂಬಾ ಸೊಗಸಾಗಿ ತೆಗೆದ ಚಿತ್ರಗಳು ಹಾಗು ವಿವರಣೆ.

Unknown said...

Good camera work,ನಿಮ್ಮ ಸಹನೆಗೆ ಮೆಚ್ಚಬೇಕಾದದ್ಡೇ

Keep it up

Unknown said...

Good Documentation...!!!

Sally said...

In this article I will describe the methodology I use. On ZeekRewardNews, the event cost was reported to be $25. The Bell on the Big Tree StarYou will start out by taking the Cataquack, but the difference is, you will stay at the level with the big tree.