Sunday, September 21, 2014

ದಿಘ [ಪಶ್ಚಿಮ ಬಂಗಾಲ] ಬೀಚಿನಲ್ಲಿ ಕೆಂಪು ಏಡಿಗಳು

೨೦೧೪ ರ ಜುಲೈ ೨೮ ಸಂಜೆ ಐದು ಗಂಟೆ.


ಪಶ್ಚಿಮ ಬಂಗಾಲ ರಾಜ್ಯದ ದಕ್ಷಿಣಕ್ಕಿರುವ ಮಿಡ್ನಾಪುರ ಜಿಲ್ಲೆಯ "ಧಿಘ" ಬೀಚಿನೊಳಗೆ ಕಾಲಿಟ್ಟಾಗ ಎದುರಿಗೆ ವಿಶಾಲ ಬಂಗಾಲ ಕೊಲ್ಲಿ ಸಮುದ್ರ ಶಾಂತವಾಗಿತ್ತು. ಮೇಲೆ ನೀಲಾಕಾಶವೂ ಕೂಡ ತೆಳು ಮೋಡಗಳ ಚಿತ್ತಾರದಿಂದಾಗಿ ಕಣ್ಣಿಗೆ ಮತ್ತು ಕ್ಯಾಮೆರಕ್ಕೆ ಅಪ್ಯಾಯಮಾನವೆನಿಸಿತ್ತು. ಅಲೆಗಳಿಂದ ನೆನೆದ ಮರಳ ಮೇಲೆ ನಡೆಯುತ್ತ ಬಲಕ್ಕೆ ನೋಡಿದೆ. ಮೈಲು ಉದ್ದದ ಆ ಮರಳ ಬೀಚಿನಲ್ಲಿ ರಕ್ತ ಕೆಂಪಿನ ಬಣ್ಣದ ಕಣಿಗಲೆ  ಹೂವುಗಳು! ಸೂರ್ಯನ ಹಿಂಬೆಳಕಿಗೆ ಮತ್ತಷ್ಟು ಹೊಳೆಯುತ್ತಿವೆ! ಎಡಭಾಗಕ್ಕೆ ನೋಡಿದೆ ಅಲ್ಲಿಯೂ ಕೂಡ ಕಣ್ಣಿಗೆ ಕಾಣುವಷ್ಟು ದೂರ ಅದೇ ರಕ್ತ ಕೆಂಪಿನ ಕಣಿಗಲೆ ಹೂಗಳು! ಅರೆರೆ ಇದೇನಿದು ಜನರೇ ಇರದ ಈ ಮರಳ ಬೀಚಿನಲ್ಲಿ ಹೀಗೆ ಮೈಲು ಉದ್ದಕ್ಕೂ ಈ ಕೆಂಪು ಕಣಿಗಲೆ ಹೂವುಗಳನ್ನು ತಂದು ಚೆಲ್ಲಿದವರು ಯಾರು? ಅದನ್ನೇ ಯೋಚಿಸುತ್ತಾ ನಿದಾನವಾಗಿ ಕೆಳಗೆ ನೋಡಿದರೆ ಸುಮಾರು ಐವತ್ತು ಅಡಿಯಷ್ಟು ನನ್ನ ಸುತ್ತಲು ಆ ಕಣಿಗಲೆ ಹೂವುಗಳಿಲ್ಲವಲ್ಲ! ನಾನು ಬೆಂಗಳೂರಿಂದ ಇಲ್ಲಿಗೆ ಬಂದು ನಿಂತು ಅವುಗಳನ್ನು ತುಳಿದುಹಾಕುತ್ತೇನೆಂದು ಮೊದಲೇ ಯಾರಿಗಾದರೂ ಇದು ಗೊತ್ತಿತ್ತಾ? ಅದಕ್ಕೆ ಅವರು ಇಲ್ಲಿ ಕಣಿಗಲೆ ಹೂಗಳನ್ನು ಹರಡಿಲ್ಲವೋ ಹೇಗೆ? ಇಂಥ ಅನೇಕ ಪ್ರಶ್ನೆಗಳು ಆ ಕ್ಷಣದಲ್ಲಿ ನನ್ನೊಳಗೆ ಮೂಡಿದವು. ಇರಲಿ ಬಿಡು ಅದರ ಬಗ್ಗೆ ಆಮೇಲೆ ಯೋಚಿಸಿದರಾಯ್ತು ಈಗ ಸದ್ಯ ಈ ಬೀಚಿನಲ್ಲಿ ಸ್ವಲ್ಪ ದೂರ ನಡೆಯೋಣ ಎಂದುಕೊಂಡು ಹತ್ತು ಹೆಜ್ಜೆ ಬಲಗಡೆಗೆ ನಡೆದೆನಷ್ಟೆ. ನನ್ನ ಕಣ್ಣಿಗೆ ಕಂಡ ರಕ್ತ ಕೆಂಪಿನ ಕಣಿಗಲೆ ಹೂಗಳೆಲ್ಲಾ ಮರಳೊಳಗೆ ಪುಳಕ್ ಪುಳಕ್ ಎಂದು ಕ್ಷಣಮಾತ್ರದಲ್ಲಿ ಮಾಯವಾದವು! ಇದೊಳ್ಳೆ ಕತೆಯಾಯ್ತಲ್ಲ ಎಂದು ಕೊಂಡು ಮತ್ತಷ್ಟು ದೂರ ನಡೆದೆ. ಇನ್ನಷ್ಟು ಹೂಗಳು ಹಾಗೆ ಮಾಯವಾದವು. ನನ್ನ ಕುತೂಹಲ ಹೆಚ್ಚಾಗಿ ನಡೆಯುವುದನ್ನು ನಿಲ್ಲಿಸಿ ಸುಮ್ಮನೇ ನಿದಾನವಾಗಿ ನಾನು ನಿಂತ ಜಾಗದಿಂದ ನೂರು ಅಡಿ ದೂರಕ್ಕೆ ದೃಷ್ಠಿ ಹಾಯಿಸುತ್ತ ವಾಸ್ತವಕ್ಕೆ ಬಂದು ಕಣ್ಣನ್ನು ಫೋಕಸ್ ಮಾಡುತ್ತಾ ನೋಡಿದರೆ ಅವು ಕಣಿಗಲೆ  ಹೂವುಗಳಲ್ಲ! ರಕ್ತ ಕೆಂಪು ಬಣ್ಣದ "ಕೆಂಪು ಏಡಿಗಳು". ಸ್ವಲ್ಪವೂ ಅಲುಗಾಡದೆ ಕತ್ತನ್ನು ಮಾತ್ರ ತಿರುಗಿಸಿ ಕಣ್ಣನ್ನು ಮತ್ತಷ್ಟು ಫೋಕಸ್ ಮಾಡಿ ನೋಡಿದರೆ ನೂರಾರು ಏಡಿಗಳು ಆಂಟೇನಗಳಂತಿರುವ ತಮ್ಮ ಕಣ್ಣುಗಳಿಂದ ನನ್ನನ್ನೇ ನೋಡುತ್ತಿವೆ!  ದೂರದ ಬೆಟ್ಟ ನುಣ್ಣಗಿರುವುದು ನಯವಾಗಿರುವುದು ಮತ್ತು ಸುಂದರವಾಗಿರುವುದರಿಂದ ನಾವೆಲ್ಲಾ ಯಾವಾಗಲೂ ಸಾಧ್ಯವಾದಷ್ಟು ದೂರದಲ್ಲಿರುವುದನ್ನೇ, ದೊಡ್ಡದನ್ನೆ, ವಿಶಾಲವಾಗಿರುವುದನ್ನೇ ನೋಡುತ್ತಿರುತ್ತೇವೆ. ಆದ್ರೆ ನಮ್ಮ ಕಾಲ ಕೆಳಗಿನ ಈ ಕೆಂಪು ಏಡಿಯಂತ ಸಣ್ಣ ಜೀವಿಗಳು ತಮ್ಮ ಅಕ್ಕ ಪಕ್ಕದ ಸೂಕ್ಷ್ಮತೆಯಂತ ಸಣ್ಣ ಸಣ್ಣ ವಿಚಾರಗಳನ್ನು ಗಮನಿಸುತ್ತಿರುತ್ತವೆ ! ನೋಡೋಣ ಏನಾಗಬಹುದು ಎಂದುಕೊಂಡು ನಿದಾನವಾಗಿ ನಡೆಯುತ್ತಾ ಹೋದಂತೆ ಅವುಗಳು ಒಂದೊಂದೇ ಮರಳಿನೊಳಗೆ ಮಾಯವಾಗುತ್ತಿದ್ದವು.  ನಾನು ಎಷ್ಟು ದೂರ ನಡೆದರೂ ಇದೇ ಕ್ರಿಯೆ ನಡೆಯುತ್ತಿದ್ದುದರಿಂದ ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ಯೋಚಿಸಿದೆ. ಈ ಕೆಂಪು ಏಡಿಗಳು ಸಂಜೆಯ ಹೊತ್ತು ಹೊರಗೆ ಬಂದು ತಿಳಿಬಿಸಿಲು ಕಾಯುವ ಕಾರ್ಯಕ್ರಮವಿರಬಹುದು. ಅಥವ ದಿನವೆಲ್ಲಾ ಮರಳೊಳಗಿದ್ದು ಈ ಸಮಯದಲ್ಲಿ ಒಬ್ಬರನ್ನೊಬ್ಬರು ಬೇಟಿಯಾಗಿ ಉಬಯ ಕುಶಲೋಪರಿ, ಮಾತುಕತೆ, ಸಮಲೋಚನೆ, ಹರಟೆ, ಆಟ ಇತ್ಯಾದಿಗಳಿಗಾಗಿ ಹೊರಗೆ ಬಂದಿರಬಹುದು. ನಾನು ದಿಕ್ಕು ದೆಸೆಯಿಲ್ಲದೇ ಸುಮ್ಮನೇ ಹೀಗೆ ಈ ಮರಳ ಬೀಚಿನಲ್ಲಿ ಓಡಾಡುವುದರಿಂದ ಅವುಗಳ ಗೆಳೆತನಕ್ಕೆ ಏಕಾಂತಕ್ಕೆ ಭಂಗ ತರುತ್ತಿದ್ದೇನೆ ಅನ್ನಿಸಿ ನಿದಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡಿ ಮರಳ ಬೀಚಿನಿಂದ ಹೊರಬಂದು ಸ್ವಲ್ಪ ಹೊತ್ತು ದೂರದಿಂದ ನೋಡಿದೆ. ನಾನಂದುಕೊಂಡಿದ್ದ ರಕ್ತಕೆಂಪಿನ ಕಣಿಗಲೆ ಹೂವುಗಳು ಅಲ್ಲಲ್ಲ.., ರಕ್ತ ಕೆಂಪಿನ ಏಡಿಗಳು ನಿದಾನವಾಗಿ ಮರಳಿನಿಂದ ಬಂದು ಓಡಾಡತೊಡಗಿದವು.

೨೦೧೪ ರ ಜುಲೈ ೨೯ರ ಮಧ್ಯಾಹ್ನ ಮೂರು ಗಂಟೆ

  ಹಾಗೆ ದೂರದಿಂದಲೇ ನೋಡಿದೆ. ಆಗಲೇ ಸಾವಿರಾರು ಕೆಂಪು ಏಡಿಗಳು ಹೊರಗೆ ಬಂದು ತಿಳಿಬಿಸಿಲು ಕಾಯಿಸುತ್ತಿವೆ!  ಈ ಏಡಿಗಳ ಫೋಟೊ ಮತ್ತು ಸಾಧ್ಯವಾದರೆ ವಿಡಿಯೋ ಮಾಡಲೇಬೇಕು ಅಂತ ತೀರ್ಮಾನಿಸಿಯೇ ಬಂದಿದ್ದೆ. ಮುಂಜಾನೆ ಮುಕ್ಕಾಲು ಗಂಟೆ ಸಮುದ್ರ ಕಿನಾರೆಯ ಈ ಮರಳ ಬೀಚಿನಲ್ಲಿ ವಾಕಿಂಗ್ ಮಾಡುವಾಗ ನೋಡಿದರೆ ಒಂದೇ ಒಂದು ಕೆಂಪು ಏಡಿಯೂ ಕಂಡಿರಲಿಲ್ಲ. ಬಹುಶಃ ಅವುಗಳೆಲ್ಲಾ ಆ ಸಮಯದಲ್ಲಿ ತಮ್ಮ ತಮ್ಮ ಮರಳೊಳಗಿನ ಗೂಡಿನೊಳಗೆ ಹೆಂಡತಿ, ಗಂಡ ಮಕ್ಕಳ ಜೊತೆ ಸಂಸಾರ ಮಾಡುತ್ತಿರಬಹುದು, ಮತ್ತೆ ಮಧ್ಯಾಹ್ನವೂ ಕೂಡ ಹೊರಬಂದಿರಲಿಲ್ಲ.  ಮೂರು ನಾಲ್ಕು ಗಂಟೆಯ ನಂತರ ಮಾತ್ರವೇ ಇವು ಮರಳಿನಿಂದ ಹೊರಬರುವುದು ಖಚಿತವಾಗಿತ್ತು. ಎಲ್ಲಾ ಓಕೆ ಆದ್ರೆ ಇವುಗಳನ್ನು ಹೇಗೆ ಫೋಟೊಗ್ರಫಿ ಮಾಡುವುದು? ಒಂದು ಹೆಜ್ಜೆ ಇಡುತ್ತಿದ್ದಂತೆ ಐವತ್ತು ಹೆಜ್ಜೆಗಳಷ್ಟು ದೂರದಲ್ಲಿರುವಂತವೇ ಕ್ಷಣಮಾತ್ರದಲ್ಲಿ ಮರಳೊಳಗೆ ಮಾಯವಾಗಿಬಿಡುತ್ತವೆ. ಅಂತದ್ದರಲ್ಲಿ ಇನ್ನು ಐದು ಹತ್ತು ಹೆಜ್ಜೆ ದೂರದಲ್ಲಿರುವವಂತೂ ಮೊದಲೇ ಮಾಯವಾಗಿರುತ್ತವೆ. ಒಂದುವರೆ ಎರಡು ಇಂಚು ಉದ್ದ ಅಗಲ ಗಾತ್ರದ ಈ ಕೆಂಪು ಏಡಿಗಳ ಫೋಟೊಗ್ರಫಿ ಮಾಡಬೇಕಾದರೆ ಉತ್ತಮ ಗುಣಮಟ್ಟದ ಡಿ ಎಸ್‍ಎಲ್‍ಅರ್ ಕ್ಯಾಮೆರದ ಜೊತೆಗೆ ಕಡಿಮೆಯೆಂದರೆ ೫೦೦-೬೦೦ ಎಂಎಂ ನ ಉತ್ತಮ ಟೆಲಿ ಲೆನ್ಸ್ ಅಂತೂ ಬೇಕೇ ಬೇಕು. ನಾನಿಲ್ಲಿಗೆ ಬಂದ ಕಾರಣವೇ ಬೇರೆಯಾಗಿತ್ತು. ಬೆಂಗಳೂರಿನಿಂದ ಇಲ್ಲಿಗೆ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯ ಆಯ್ಕೆ ಸಮಿತಿಯಲ್ಲೊಬ್ಬನಾಗಿ ಬಂದಿದ್ದೆ. ನಾವೆಲ್ಲ ಉಳಿದುಕೊಂಡಿದ್ದ ರಿಸಾರ್ಟ್ ಸಮುದ್ರದ ಬೀಚಿಗೆ ಕೇವಲ ನೂರು ಅಡಿ ದೂರದಲ್ಲಿತ್ತು. ಮೂರು ದಿನವೂ ಅದರ ಜವಾಬ್ದಾರಿಯೇ ಇರುವಾಗ ಫೋಟೊಗ್ರಫಿ ಮಾಡುವುದಕ್ಕೆ ಅವಕಾಶವಿರುವುದಿಲ್ಲವೆಂದು ನನ್ನ ಡಿಎಸ್‍ಎಲ್‍ಅರ್ ಕ್ಯಾಮೆರ ಮತ್ತು ಲೆನ್ಸುಗಳನ್ನೆಲ್ಲಾ ಬೆಂಗಳೂರಿನಲ್ಲಿಯೇ ಬಿಟ್ಟುಬಂದಿದ್ದೆ. ಸದ್ಯಕ್ಕೆ ನನ್ನ ಬಳಿ ಇದ್ದಿದ್ದು ಜೇಬಿನಲ್ಲಿಟ್ಟುಕೊಳ್ಳಬಹುದಾದ ಕ್ಯಾನನ್ ಪವರ್‌ಷಾಟ್ ಎಸ್‍ಎಕ್ಸ್ ೨೪೦ ಕಂಪ್ಯಾಕ್ಟ್ ಕ್ಯಾಮೆರವಷ್ಟೆ. ಅದರ ಫೋಟೊಗ್ರಫಿ ಗುಣಮಟ್ಟ ಹೊರಾಂಗಣದಲ್ಲಿ ಉತ್ತಮವಿದ್ದರೂ ಅದರ ಟೆಲಿಲೆನ್ಸ್ ಯೋಗ್ಯತೆ ತುಂಬಾ ಹತ್ತಿರದ್ದು. ಇಲ್ಲಿ ಕಾಣುವ ಒಂದು ಕೆಂಪು ಏಡಿಯ ಫೋಟೊಗ್ರಫಿಯನ್ನು ಮಾಡಬೇಕಾದರೆ ಹೆಚ್ಚೆಂದರೆ ಹತ್ತು ಆಡಿ ಹತ್ತಿರಕ್ಕೆ ಹೋದರೆ ಮಾತ್ರ ಸಾಧ್ಯ. ಆದರೆ ಇಲ್ಲಿ ನನ್ನನ್ನು ಕಂಡ ಮರುಕ್ಷಣವೇ ೫೦ ಅಡಿ ದೂರದಲ್ಲಿರುವ ಕೆಂಪು ಏಡಿಗಳು ಮರಳೊಳಗೆ ಮಾಯವಾಗಿಬಿಡುತ್ತವಲ್ಲ ಏನು ಮಾಡುವುದು? ಸ್ವಲ್ಪ ಹೊತ್ತು ಹಾಗೆ ಯೋಚಿಸುತ್ತಿರುವಾಗ ಹೊಳೆಯಿತೊಂದು ಉಪಾಯ. ಅದೇನೆಂದರೆ ಈ ಕೆಂಪು ಏಡಿಗಳ ಗೆಳೆತನ ಸಂಪಾದಿಸುವುದು! ಈ ಮೊದಲು ಹಕ್ಕಿಗಳು, ಇರುವೆಗಳು, ಚಿಟ್ಟೆಗಳು, ಇನ್ನಿತರ ಕೀಟಗಳ ಗೆಳೆತನ ಸಂಪಾದಿಸಿಯೇ ಅವುಗಳ ಫೋಟೊಗ್ರಫಿಯನ್ನು ಸುಲಭವಾಗಿ ಮಾಡಿದ್ದೆ. ಒಂದೊಂದು ಜೀವಿಯ ಜೊತೆಗೂ ಬೇರೆ ಬೇರೆ ರೀತಿಯದೇ ಆದ ಗೆಳೆತನ ಮುಖ್ಯವಾಗುತ್ತದೆ. ಈ ಕೆಂಪು ಏಡಿಯಂತ ಜೀವಿಯ ಗೆಳೆತನವನ್ನು ಹೇಗೆ ಸಂಪಾದಿಸವುದು, ಅದಕ್ಕೆ ಯಾವ ವಿಧಾನವನ್ನು ಅನುಸರಿಸಲಿ ಎಂದು ಯೋಚಿಸುತ್ತಾ ಸಮಯ ನೋಡಿದೆ ಆಗಲೇ ಹದಿನೈದು ನಿಮಿಷಗಳು ಕಳೆದಿತ್ತು. ನಮ್ಮ ಫೋಟೊಗ್ರಫಿ ಜಡ್ಜಿಂಗ್ ಪ್ರಾರಂಭವಾಗುವುದು ನಾಲ್ಕುಗಂಟೆಗೆ. ಅಲ್ಲಿಯವರೆಗೆ ಯಾವುದಾದರೂ ವಿಧಾನದಲ್ಲಿ ಈ ಕೆಂಪು ಏಡಿಗಳ ಗೆಳೆತನವನ್ನು ಸಂಪಾದಿಸೋಣವೆಂದುಕೊಂಡು ನಿದಾನವಾಗಿ ಬೀಚಿನ ಕಡೆಗೆ ನಡೆದೆ. ಸಹಜವಾಗಿ ಎಂದಿನಂತೆ ಒಂದಾದ ನಂತರ ಒಂದು ಕೆಂಪು ಏಡಿಗಳು ತಮ್ಮ ಮರಳ ಗೂಡಿನೊಳಗೆ ಹೋಗತೊಡಗಿದವು. ಐದು ನಿಮಿಷ ನಡೆದಾಡಿ ನನಗೆ ಬೇಕಾದ ಒಂದು ಜಾಗವನ್ನು ಆಯ್ಕೆಮಾಡಿಕೊಂಡೆ. ಆ ಜಾಗ ಹೇಗಿತ್ತೆಂದರೆ ಸುಮಾರು ಹತ್ತು ಅಡಿಯಷ್ಟು ಸುತ್ತಳತೆಯಲ್ಲಿ ಎಲ್ಲೂ ಈ ಕೆಂಪು ಏಡಿಗಳ ಗೂಡು ಇರಲಿಲ್ಲ. ಈ ಜಾಗವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ನಾನು ಅಲ್ಲಿ ಕುಳಿತುಕೊಂಡರೆ ನನ್ನ ಸುತ್ತ ಕನಿಷ್ಟ ಎಂಟು ಹತ್ತು ಅಡಿ ದೂರದಲ್ಲಿರುವ ಅವು ಗೂಡಿನಿಂದ ಇಣುಕಿದಾಗ ಅಥವ ಹೊರಬಂದು ನನ್ನನ್ನು ನೋಡಿದಾಗ ನನ್ನಿಂದ ಅವುಗಳಿಗೆ ತೊಂದರೆ ಉಂಟಾದರೆ ಅವು ತಕ್ಷಣ ಮರಳೊಳಗೆ ನುಗ್ಗಿ ತಪ್ಪಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಲ್ವ! ಈ ರೀತಿ ಅವು ಯೋಚಿಸಿದಲ್ಲಿ ಅದಕ್ಕೆ ಅವಕಾಶವಿರಬೇಕು, ಆಗ ಮಾತ್ರ ಅವು ಒಮ್ಮೆ ಒಳಹೋಗಿ ಮತ್ತೆ ಹೊರಬಂದು ಇಣುಕುವುದು, ನನ್ನನ್ನು ನೋಡುವುದು, ಮತ್ತೆ ಒಳಹೋಗುವುದು ಇಂಥ ಕಣ್ಣಾಮುಚ್ಚಾಲೆ ಆಟ ಆಡಲು ಅವುಗಳಿಗೆ ಸಾಧ್ಯ.  ಇದು ಬಿಟ್ಟು ನಾನು ಅವುಗಳ ಗೂಡಿನ ಮೇಲೆ ಅಥವ ಅವುಗಳಿಂದ ಒಂದು ಎರಡು ಅಡಿಗಳ ಅಂತರದಲ್ಲಿ ಕುಳಿತರೆ ಅವು ದಿನ ಪೂರ್ತಿ ನನ್ನ ದೊಡ್ಡ ಗಾತ್ರದ ಭಯದಿಂದ ಖಂಡಿತವಾಗಿ ಹೊರಗೆ ಬರುವುದಿಲ್ಲ. ಹಾಗೇನಾದರೂ ಆದರೆ ಅವುಗಳ ಗೆಳೆತನವನ್ನು ಸಂಪಾದಿಸುವುದು ಹೇಗೆ ಮತ್ತು ಫೋಟೊಗ್ರಫಿ, ವಿಡಿಯೋ ಮಾಡುವುದು ಹೇಗೆ ಸಾಧ್ಯ? ಈ ಕಾರಣಕ್ಕಾಗಿ ಆ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಕುಳಿತುಕೊಳ್ಳುವ ಮೊದಲು ಕೆಲವು ಷರತ್ತುಗಳನ್ನು ನನಗೆ ನಾನೇ ವಿಧಿಸಿಕೊಂಡಿದ್ದೆ. ಅದೇನೆಂದರೆ ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಜೇಬಿನಲ್ಲಿರುವ ಪುಟ್ಟ ಕ್ಯಾಮೆರವನ್ನು ಹೊರತೆಗೆಯಬಾರದು. ಏಕೆಂದರೆ ನಮ್ಮಂಥ ಛಾಯಾಗ್ರಾಹಕರ ಕೈಯಲ್ಲಿ ಕ್ಯಾಮೆರವಿದ್ದರೆ ಅದು ಖಂಡಿತ ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತೆ. ನಾವು ಸುಮ್ಮನೆ ಕೂರುವುದೇ ಇಲ್ಲ. ಅಲ್ಲಿ ನೋಡುವುದು ಇಲ್ಲಿ ನೋಡುವುದು, ಅವುಗಳ ಫೋಟೊ ತೆಗೆಯುವುದು ಕ್ಯಾಮೆರ ಚೆಕ್ ಮಾಡುವುದು ಹೀಗೆ ನಾನಾ ರೀತಿಯಲ್ಲಿ ನಮ್ಮ ಕೈಕಾಲು, ದೇಹ, ಕುತ್ತಿಗೆ ಕಣ್ಣು ಇತ್ಯಾದಿಗಳು ಕ್ಯಾಮೆರ ಸಮೇತ ಚಲನೆಯಲ್ಲಿರುತ್ತವೆ. ಹೀಗೆ ಚಲನೆಯಲ್ಲಿದ್ದರೆ ಗೂಡಿನೊಳಗಿರುವ ಕೆಂಪು ಏಡಿಗಳು ಹೇಗೆ ಹೊರಬರಲು ಸಾಧ್ಯ? ಈ ಕಾರಣಕ್ಕಾಗಿ ಕ್ಯಾಮೆರವನ್ನು ಜೇಬಿನಿಂದ ಹೊರ ತೆಗೆಯುವಂತಿಲ್ಲ. ಎರಡನೆಯದು ಒಂದು ಕಡೆ ಕುಳಿತರೆ ಕಾಲು ಬೆರಳ ತುದಿಯಿಂದ ತಲೆ ಕೂದಲವರೆಗೆ ಕನಿಷ್ಟ ಪಕ್ಷ ಹತ್ತು ನಿಮಿಷ ಸ್ವಲ್ಪವೂ ಅಲುಗಾಡಬಾರದು. ಕುಳಿತುಕೊಳ್ಳುವ ಮೊದಲೇ ಯಾವ ದಿಕ್ಕಿನಲ್ಲಿರುವ ಗೂಡುಗಳನ್ನು ಗಮನಿಸಬೇಕು ಅದನ್ನು ಮೊದಲೇ ತೀರ್ಮಾನಿಸಿಕೊಂಡಿರಬೇಕು ಮತ್ತು ಅದೇ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು ಏಕೆಂದರೆ ಒಮ್ಮೆ ಕುಳಿತ ಮೇಲೆ ನಿಮ್ಮ ಕುತ್ತಿಗೆಯನ್ನು ಅತ್ತಿತ್ತ ತಿರುಗಿಸಬಾರದು ಅಲುಗಾಡಿಸಬಾರದು ಕೇವಲ ಕಣ್ಣುಗಳ ಚಲನೆಯಲ್ಲಿ ಮಾತ್ರ ಅವುಗಳನ್ನು ಗಮನಿಸಿಬೇಕು. ಮೂರನೆಯದು ಕಡಿಮೆಯೆಂದರೂ ಸುಮಾರು ಅರ್ಧಗಂಟೆ ಅಲುಗಾಡದೇ ಕುಳಿತುಕೊಳ್ಳಬೇಕು. ಈ ಮೂರು ಷರತ್ತುಗಳನ್ನು ನನಗೆ ನಾನೇ ವಿಧಿಸಿಕೊಂಡು ಚಕ್ಕಲಬಕ್ಕಲ ಹಾಕಿಕೊಂಡು ಕುಳಿತುಬಿಟ್ಟೆ.

   ಹದಿನೈದು ನಿಮಿಷ ಕಳೆಯಿತು ಏನೂ ಬದಲಾವಣೆಯಿಲ್ಲ. ನನ್ನ ಎದುರಿಗೆ ಸಮುದ್ರ ಮತ್ತು ಅದರ ಅಲೆಗಳು.  ಕನಿಷ್ಟ ನೂರು ಅಡಿ ಅಂತರದಲ್ಲಿ ಸುತ್ತಲೂ ಕೆಂಪು ಏಡಿಗಳ ಗೂಡುಗಳು. ಆದ್ರೆ ಗೂಡುಗಳಿಂದ ಒಂದಾದರೂ ಏಡಿ ಹೊರಗೆ ಬರಲಿಲ್ಲ. ಕನಿಷ್ಟಪಕ್ಷ ಇಣುಕಲಿಲ್ಲ. ಅದಕ್ಕಾಗಿ ಬೇಸರವಿಲ್ಲ ಏಕೆಂದರೆ ಇನ್ನೂ ಹದಿನೈದು ನಿಮಿಷ ಕಾಯುತ್ತಾ ನನ್ನ ಅದೃಷ್ಟವನ್ನು ಪರೀಕ್ಷೆ ಮಾಡಬೇಕಿದೆ.  ಮತ್ತೆ ಐದು ನಿಮಿಷ ಕಳೆಯಿತು. ಬಲಭಾಗದ ಎದುರಿನಲ್ಲಿ ಮಬ್ಬಾಗಿ ಎರಡು ಸಣ್ಣ ಕಣ್ಣುಗಳು ಕಾಣಿಸಿದವು. ಅಲುಗಾಡದೆ ಕಣ್ಣನ್ನು ಮತ್ತಷ್ಟು ಫೋಕಸ್ ಮಾಡಿದೆ. ಹೌದು ಎರಡು ಸೂಜಿಗೆ ಉದ್ದದ ಒಂದೊಂದು ಬಿಳಿಮಣಿಯನ್ನು ಪೋಣಿಸಿದಂತೆ ಕಾಣುವ ಎರಡು ಅಂಟೇನದಂತ ಪುಟ್ಟ ಕಣ್ಣುಗಳು ನನ್ನನ್ನೇ ನೋಡುತ್ತಿವೆ! ಇದು ಖಂಡಿತವಾಗಿ ಕೆಂಪು ಏಡಿಯ ಕಣ್ಣುಗಳೇ ಅಂದುಕೊಂಡು ಅಲುಗಾಡದೇ ಅದನ್ನೇ ಗಮನಿಸುತ್ತಾ ಅದರ ದೇಹವೆಲ್ಲಿದೆ ಎಂದು ನೋಡಿದರೆ ಅದರ ಪೂರ್ತಿ ದೇಹ ಮರಳ ಗೂಡಿನೊಳಗೆ ಇದೆ! ತನ್ನ ಅಂಟೇನ ಮೇಲಕ್ಕೇರಿಸಿ ಅದರಲ್ಲಿರುವ ಕಣ್ಣುಗಳಿಂದ ನನ್ನನ್ನು ಗಮನಿಸುತ್ತಿದೆ! ಒಂದು ನಿಮಿಷ ಕಳೆದಿರಬಹುದು ಆ ಕಣ್ಣುಗಳು ನನ್ನ ಕಡೆಯಿಂದ ಎಡಕ್ಕೆ ತಿರುಗಿದವು.  ನಾನು ಕೂಡ ಅಲುಗಾಡದೆ ಎಡಭಾಗಕ್ಕೆ ಕಣ್ಣೋಟವನ್ನು ತಿರುಗಿಸಿದೆ. ಅರೆರೆ! ಅದರ ಸಮಾನ ಅಂತರದಲ್ಲಿ ಅಲ್ಲೂ ಕೂಡ ಎರಡು ಕಣ್ಣುಗಳು ನನ್ನನ್ನು ನೋಡುತ್ತಿವೆ! ಮತ್ತೆ ಬಲಕ್ಕೆ ನೋಡುತ್ತಿವೆ! ಅಂದರೆ ಇವೆರಡು ಕೆಂಪು ಏಡಿಗಳು ಮರೆಯಲ್ಲಿಯೇ ನನ್ನ ನೋಡುತ್ತಾ, ಜೊತೆಗೆ ಅವೆರಡು ಒಂದಕ್ಕೊಂದು ತಮ್ಮ ಕಣ್ಣೋಟದಲ್ಲಿಯೇ ಮಾತಾಡಿಕೊಳ್ಳುತ್ತಿವೆ! ಇದೇ ಸರಿಯಾದ ಸಮಯವೆಂದುಕೊಂಡು ನಾನು ಅಲುಗಾಡದೇ ಅವುಗಳನ್ನೇ ಗಮನಿಸುತ್ತಿದ್ದೆ. ಮತ್ತೆರಡು ನಿಮಿಷ ಕಳೆಯಿತು. ಎಡಭಾಗದಲ್ಲಿ ಅಂಟೇನ ಕಣ್ಣುಗಳು ನಿದಾನವಾಗಿ ಮೇಲಕ್ಕೆ ಬಂದವು ಅವುಗಳ ಸಮೇತ ಕೆಂಪು ಏಡಿಯ ದೇಹವೂ  ಮೇಲೆ ಬಂತು. ಅದನ್ನು ಗಮನಿಸಿದ ಬಲಭಾಗದಲ್ಲಿದ್ದ ಏಡಿಯೂ ಮೇಲಕ್ಕೆ ಬಂತು. ಮತ್ತೆ ಎರಡು ನಿಮಿಷ ಕಳೆಯಿತು.  

ನನ್ನನ್ನೇ ನೋಡುತ್ತಿದ್ದ ಅವುಗಳಿಗೆ ಏನನ್ನಿಸಿತೋ ಏನೋ ಮತ್ತೆ ತಮ್ಮ ಗೂಡಿನೊಳಗೆ ಹೋಗಿಬಿಟ್ಟವು. ಮತ್ತೆ ಐದು ನಿಮಿಷ ಕಳೆಯಿತು. ಮತ್ತೆ ಅದೇ ರೀತಿ ತಮ್ಮ ಆಂಟೇನ ಕಣ್ಣುಗಳಿಂದ ನನ್ನನ್ನು ಗಮನಿಸುತ್ತಾ ನಿದಾನವಾಗಿ ಮೇಲೆ ಬಂದವು. ಈ ಭಾರಿ ದೈರ್ಯ ಮಾಡಿ ಎರಡು ಹೆಜ್ಜೆ ಮುಂದೆ ಬಂದು ನಿಂತು ನನ್ನನ್ನು ನೋಡುವುದು ಮತ್ತು ಅವುಗಳು ಒಂದಕ್ಕೊಂದು ನೋಡಿಕೊಳ್ಳುವುದು ಸ್ವಲ್ಪ ಹೊತ್ತು ನಡೆಯಿತು. ಬಹುಶ:  ಅವುಗಳ ಮುಂದೆ ಕುಳಿತ ಈ ಪ್ರಾಣಿಯಿಂದ ನಮಗೇನು ತೊಂದರೆಯಿಲ್ಲ ಎಂದುಕೊಂಡವೇನೋ, ಅಥವ ಹೀಗೆ ಅವುಗಳ ಮುಂದೆ ಅಲುಗಾಡದೆ ಕುಳಿತಿರುವುದು ಜೀವವಿರುವ ವಸ್ತುವಲ್ಲ...ಯಾವುದೋ ಜಡವಸ್ತು ಇಲ್ಲಿ ಬಂದು ಬಿದ್ದಿದೆ ಎಂದುಕೊಂಡವೋ ಏನೋ..ನಿಧಾನವಾಗಿ ತಮ್ಮ ಪಾಡಿಗೆ ಎಡ ಬಲಕ್ಕೆ ಚಲಿಸತೊಡಗಿದವು. ಅರ್ಧಗಂಟೆಯವರೆಗೆ ಅಲುಗಾಡದೆ ಕುಳಿತಿದ್ದ ನಾನು ನಿದಾನವಾಗಿ ಕಂಡರೂ ಕಾಣದ ಹಾಗೆ ಹಿಂದಕ್ಕೆ ಕತ್ತನ್ನು ತಿರುಗಿಸಿದೆ. ಅರೆರೆ...ಅಲ್ಲೂ ಕೂಡ ಹತ್ತಿರದಲ್ಲಿಯೇ ಮೂರ್ನಾಲ್ಕು ಏಡಿಗಳು ಹೊರಬಂದು ತಮ್ಮ ಪಾಡಿಗೆ ಓಡಾಡುತ್ತಿವೆ. ಅಂದರೆ ನನ್ನ ಸುತ್ತ ಇರುವ ಇವೆಲ್ಲಾ ಏಡಿಗಳು ಒಂದಕ್ಕೊಂದು ಕಣ್ಣಲ್ಲೇ ಮಾತಾಡಿಕೊಂಡು ನನ್ನಂಥ ಜಡವಸ್ತುವಿನಿಂದ ಏನು ತೊಂದರೆಯಿಲ್ಲವೆಂದುಕೊಂಡು ಹೊರಬಂದಿವೆ. ಅಲ್ಲಿಗೆ ಒಂದು ಹಂತದ ಗೆಳೆತನವನ್ನು ಸಾಧಿಸಿದಂತಾಯಿತು ಎಂದುಕೊಂಡು  ಹಾಗೆ ನಿದಾನವಾಗಿ ಕಾಲುಗಳನ್ನು ಮುಂದಕ್ಕೆ ಚಾಚಿದೆ, ಎರಡೂ ಕೈಗಳನ್ನು ನೆಲಕ್ಕೆ ಊರಿ ಅರಾಮವಾಗಿ ಕುಳಿತೆ. ನನ್ನ ಈ ಪುಟ್ಟ ಚಲನೆಯಿಂದ ಮತ್ತೆ ಅವೆಲ್ಲಾ ಒಳಗೆ ಓಡಿದವು. ಆದ್ರೆ ಜಾಸ್ತಿ ಹೊತ್ತೇನಿಲ್ಲ. ಎರಡು ನಿಮಿಷಗಳಲ್ಲೇ ಮತ್ತೆ ಹೊರಬಂದು ಆರಾಮವಾಗಿ ತಮ್ಮ ಕೆಲಸವನ್ನು ಮುಂದುವರಿಸಿದವು. ಸಮಯ ನೋಡಿದೆ. ಆಗಲೇ ನಾಲ್ಕು ಗಂಟೆ ದಾಟಿತ್ತು. ಅವುಗಳ ಜೊತೆ ಇನ್ನಷ್ಟು ಕಳೆಯುವ ಆಸೆಯಿದ್ದರೂ ಜಡ್ಜಿಂಗ್ ಕೆಲಸವಿದ್ದಿದ್ದರಿಂದ ವಿಧಿಯಿಲ್ಲದೇ ಎದ್ದು ಬಂದೆ.

   ನಾನು ಎದ್ದು ಬರುತ್ತಿದ್ದಂತೆ ಮತ್ತೆ ಅವುಗಳೆಲ್ಲಾ ಒಳಗೆ ಓಡಿದವು.  ನಿದಾನವಾಗಿ ನಡೆಯುತ್ತಾ ಸ್ವಲ್ಪ ದೂರ ಬಂದು ನಾನು ಕುಳಿತಿದ್ದ ಜಾಗವನ್ನು ಕಣ್ಣಿನಲ್ಲಿಯೇ ಅಂದಾಜು ಮಾಡಿಕೊಂಡೆ. ಏಕೆಂದರೆ ನಾಳೆ ಬೇರೆ ಜಾಗದಲ್ಲಿ ಕುಳಿತರೆ ಅಲ್ಲಿ ಹೊಸ ಏಡಿಗಳು ಜೊತೆ ಹೊಸದಾಗಿ ಮತ್ತೆ ಗೆಳೆತನ ಬೆಳೆಸುವ ಇದೇ ಸರ್ಕಸ್ ಮಾಡಬೇಕಾಗುತ್ತದೆ.  ಮತ್ತೆ ನನಗೆ ಅಷ್ಟೊಂದು ಸಮಯವೂ ಇಲ್ಲ. ಈ ಕಾರಣಕ್ಕಾಗಿ ನಾಳೆಯೂ ಅಲ್ಲಿಯೇ ಕುಳಿತರೆ ಅಲ್ಲಿರುವ ಏಡಿಗಳಿಗೆ ನನ್ನ ದೇಹದ ಗಾತ್ರ, ಗುರುತು, ಪರಿಚಯ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ನನ್ನಿಂದ ಏನು ತೊಂದರೆಯಿಲ್ಲವೆನ್ನುವ ವಿಚಾರ ಅವುಗಳಿಗೆ ಮನವರಿಕೆಯಾಗಿರಬಹುದು. ನಾಳೆ ಸಾಧ್ಯವಾದರೆ ಅವುಗಳ ಫೋಟೊಗ್ರಫಿ ಮಾಡಬಹುದು ಎನ್ನುವ ನನ್ನ ಲೆಕ್ಕಾಚಾರವಾಗಿತ್ತು. ನಾನು ಇತ್ತ ಬರುತ್ತಿದ್ದಂತೆ ನಿದಾನವಾಗಿ ಎಲ್ಲ ಕೆಂಪು ಏಡಿಗಳು ಎಂದಿನಂತೆ ಹೊರಬಂದು ತಮ್ಮ ಕಾಯಕದಲ್ಲಿ ತೊಡಗಿದವು.

ಜುಲೈ ೩೦ ಮಧ್ಯಾಹ್ನ ಎರಡುವರೆ ಗಂಟೆ

    ಊಟವಾಗಿತ್ತು. ಅದಕ್ಕೂ ಮೊದಲೇ ಮೂರು ದಿನದಿಂದ ನಡೆಯುತ್ತಿದ್ದ ಫೋಟೋಗ್ರಫಿ ಜಡ್ಜಿಂಗ್ ಕೆಲಸವೂ ಮುಗಿದಿತ್ತು. ಇನ್ನು ಉಳಿದ ಅರ್ಧ ದಿನ ಪೂರ್ತಿ ಏನು ಕೆಲಸವಿಲ್ಲವಾದ್ದರಿಂದ ಬೇಗನೇ ಬೀಚಿಗೆ ಬಂದಿದ್ದೆ.  ಈ ಭಾರಿ ನಿನ್ನೆಯಂತ ಷರತ್ತುಗಳೇ ಇದ್ದರೂ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೆ. ಅಲ್ಲಿ ಹೋಗಿ ಕುಳಿತುಕೊಳ್ಳುವ ಮೊದಲೇ  ನನ್ನ ಪುಟ್ಟ ಕ್ಯಾಮೆರದಲ್ಲಿನ ಮೊಮೊರಿ ಕಾರ್ಡು, ಫೋಟೊ ಕ್ಲಿಕ್ಕಿಸಲು ಸೆಟ್ ಮಾಡಿಕೊಳ್ಳಬೇಕಾದ ತಾಂತ್ರಿಕತೆ, ನಂತರ ವಿಡಿಯೋ ಮಾಡಲು ಅವಕಾಶ ಸಿಕ್ಕಲ್ಲಿ ಕೂಡಲೇ ಬದಲಿಸಿಕೊಳ್ಳಲು ಬೇಕಾದ ಸುಲಭ ವಿಧಾನ ಇತ್ಯಾದಿಗಳನ್ನೆಲ್ಲಾ ಮೊದಲೇ ಸ್ವಲ್ಪ ಪ್ರಯೋಗ ಮಾಡಿ ಸರಿಯಾಗಿದೆಯೆನ್ನುವುದನ್ನು ಖಚಿತಪಡಿಸಿಕೊಂಡು ನಿದಾನವಾಗಿ ಬೀಚಿನತ್ತ ನಡೆದೆ. ಆಗಲೇ ಸಾವಿರಾರು ಕೆಂಪು ಏಡಿಗಳು ಮೈಲುದ್ದದ ಬೀಚಿನಲ್ಲಿ ಹೊರಗೆ ಬಂದು ಬಿಸಿಲು ಕಾಯುತ್ತಿದ್ದವು. ಇವತ್ತು ಸಾಧ್ಯವಾದರೆ ಅವುಗಳ ವಿಡಿಯೋ ಡಾಕ್ಯುಮೆಂಟರಿ ಆಗದಿದ್ದಲ್ಲಿ ಕನಿಷ್ಟಪಕ್ಷ ಫೋಟೊಗಳನ್ನಾದರೂ ಕ್ಲಿಕ್ಕಿಸಬೇಕೆನ್ನುವ ಖಚಿತ ನಿರ್ಧಾರ ಮಾಡಿಕೊಂಡಿದ್ದರೂ ನನ್ನ ನಡೆ ನುಡಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಅವುಗಳೆಲ್ಲಾ ವಿಫಲವಾಗುವ ಸಾಧ್ಯತೆ ಹೆಚ್ಚಿತ್ತು. ಇವತ್ತು ಸ್ವಲ್ಪ ನನ್ನ ನಡೆಯಲ್ಲಿ ಸ್ವಲ್ಪ ಬದಲಾಯಿಸಿಕೊಳ್ಳುವುದು ಒಳ್ಳೆಯದು ಎಂದುಕೊಂಡು  ಮೊದಲಿಗೆ ನಿನ್ನೆ ಕುಳಿತಿದ್ದ ಜಾಗಕ್ಕೆ ಬೇಗ ಹೋಗಿ ಕುಳಿತುಕೊಳ್ಳುವುದು ಬೇಡ, ನಿದಾನವಾಗಿ ಒಂದೊಂದೇ ಹೆಜ್ಜೆಯನ್ನು ಇಡುತ್ತಾ ಹೋಗುವ ಪ್ಲಾನ್ ಮಾಡಿಕೊಂಡು ನಿದಾನವಾಗಿ ಒಂದು ಹೆಜ್ಜೆ ಇಡುವುದು ಮತ್ತೆ ಹತ್ತು ಸೆಕೆಂಡ್ ನಿಲ್ಲುವುದು ಹೀಗೆ ಮಾಡುತ್ತಿದ್ದೆ. ಹೆಜ್ಜೆಗೊಮ್ಮೆ ಒಂದಷ್ಟು ಏಡಿಗಳು ಮರಳೊಳಗೆ ಹೋಗುತ್ತಿದ್ದವು.  ಸ್ವಲ್ಪ ದೂರದಲ್ಲಿರುವಂತವೂ ನನ್ನನ್ನೇ ನೋಡುತ್ತಿದ್ದವುಗಳು ಅವುಗಳ ಹತ್ತಿರ ಹೋಗುತ್ತಿದ್ದಂತೆ ಅವು ಕೂಡ ಒಳಹೋಗುತ್ತಿದ್ದವು. ಈ ಪ್ರಕ್ರಿಯೆ ನಡೆಯುತ್ತಲೇ ಮೊದಲೇ ಗುರಿತಿಸಿದ್ದ ಜಾಗವನ್ನು ತಲುಪಿದ್ದೆ. ಅಲ್ಲೂ ಕೂಡ ಕ್ಷಣಮಾತ್ರದಲ್ಲಿ ನಿನ್ನೆ ನೋಡಿದ್ದ ಕೆಂಪು ಏಡಿಗಳೆಲ್ಲಾ ಒಳಹೋದವು. ನನಗೆ ತಿಳಿದಂತೆ ಅವುಗಳ ನೆನಪಿನ ಶಕ್ತಿ ಕಡಿಮೆಯಿದ್ದು ನನ್ನನ್ನು ಮರೆತಿದ್ದರೂ ಒಮ್ಮೆ ನಡೆದ ಕ್ರಿಯೆ ಮತ್ತೆ ನಡೆದರೆ ಅವುಗಳಿಗೆ ಹೊಂದಿಕೊಳ್ಳುವ ಗುಣವಂತೂ ಇದೆಯೆಂದು ನನಗೆ ಗೊತ್ತಿತ್ತು. ಅಂದರೆ ನಿನ್ನೆ ನಾನು ಇಲ್ಲಿ ಬಂದು ಮುಕ್ಕಾಲು ಗಂಟೆ ಕುಳಿತು ಅವುಗಳಿಗೆ ಏನೂ ತೊಂದರೆ ಕೊಡದೆ  ದ್ದು ಹೋಗಿದ್ದು ಅದೇ ಕ್ರಿಯೆ ಇವತ್ತು ನಡೆದರೆ ಅವುಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆನ್ನುವ ಒಂದು ಆತ್ಮವಿಶ್ವಾಸ ನನ್ನೊಳಗಿತ್ತು. ಅದೇ ರೀತಿ ಹೋಗಿ ನೇರವಾಗಿ ಕುಳಿತುಬಿಟ್ಟೆ.  ಹದಿನೈದು ನಿಮಿಷ ಕಳೆದರೂ ನನ್ನ ಸುತ್ತಲಿನ ಯಾವ ಕೆಂಪು ಏಡಿಯೂ ಹೊರಬರಲಿಲ್ಲ. ಇದೇ ಸಮಯವನ್ನು ಉಪಯೋಗಿಸಿಕೊಂಡು  ನಾನು ನನ್ನ ಪುಟ್ಟ ಕ್ಯಾಮೆರವನ್ನು ಹೊರತೆಗೆದು ಮರಳ ನೆಲದ ಮೇಲೆ ಇಟ್ಟು ನನ್ನಿಂದ ಎಂಟು ಅಡಿ ದೂರವಿರುವ ಒಂದು ಕೆಂಪು ಏಡಿಯ ಗೂಡಿನಿಂದ ಏಡಿ ಹೊರಬಂದು ಅದು ನಿಲ್ಲುವ ಸ್ಥಳವನ್ನು ಅಂದಾಜು ಮಾಡಿ ಆ ಜಾಗಕ್ಕೆ ಕ್ಯಾಮೆರವನ್ನು ಫೋಕಸ್ ಮಾಡಿ, ಏಡಿಯ ಸುತ್ತಲು ಎಷ್ಟು ಜಾಗವಿರಬೇಕೆಂದು ಮೊದಲೇ ಅಂದಾಜು ಮಾಡಿ ಕ್ಯಾಮೆರವನ್ನು ಕಂಪೋಸ್ ಮಾಡಿ ಸಿದ್ದಮಾಡಿಕೊಂಡು ನನ್ನ ಬಲಗೈ ತೋರುಬೆರಳನ್ನು ಕ್ಯಾಮೆರ ಕ್ಲಿಕ್ ಬಟನ್ ಮೇಲೆ ಇಟ್ಟುಕೊಂಡು ಅದೇ ಸ್ಥಿತಿಯಲ್ಲಿ ಕುಳಿತುಬಿಟ್ಟೆ. ಮತ್ತೆ ಹತ್ತು ನಿಮಿಷ ಕಳೆದಿರಬಹುದು ಎಡಭಾಗದಲ್ಲಿರುವ ಗೂಡಿನಿಂದ ಒಂದು ಕೆಂಪು ಏಡಿ ತನ್ನ ಆಂಟೇನ ಕಣ್ಣುಗಳನ್ನು ಹೊರಚಾಚಿತು. ಮತ್ತೆರಡು ನಿಮಿಷ ಕಳೆಯುವಷ್ಟರಲ್ಲಿ ಅದು ಪೂರ್ತಿ ಹೊರಬಂದು ನನ್ನನ್ನು ನೋಡುವುದು ಮತ್ತು ಎಡಬಲ ನೋಡುವುದು ಮಾಡತೊಡಗಿತು. ಎಂಥ ವಿಪರ್ಯಾಸವೆಂದರೆ ನಾನು ಕ್ಯಾಮೆರ ಕ್ಲಿಕ್ ಬಟನ್ ಮೇಲೆ ತೋರುಬೆರಳಿಟ್ಟಿದ್ದರೂ ಕ್ಲಿಕ್ ಮಾಡುವಂತಿರಲಿಲ್ಲ, ಮಾಡಿದ್ದರೂ ಅದು ವೇಸ್ಟ್ ಆಗುತ್ತಿತ್ತು. ಏಕೆಂದರೆ ನಾನು ಕ್ಯಾಮೆರವನ್ನು ಸೆಟ್ ಮಾಡಿ ಫೋಕಸ್ ಮಾಡಿಟ್ಟಿರುವುದು ಬಲಭಾಗದ ಗೂಡಿನ ಕಡೆಗೆ. ಆದ್ರೆ ಇಲ್ಲಿ ಹೊರಬಂದಿರುವುದು ಎಡಭಾಗದ ಗೂಡಿನಲ್ಲಿರುವ ಏಡಿ. ಎಷ್ಟು ಸೂಕ್ಷ್ಮವಾಗಿ ಕ್ಯಾಮೆರವನ್ನು ತಿರುಗಿಸಿದರೂ ಕೂಡ ಅದಕ್ಕೆ ನನ್ನ ಚಲನೆ ಗೊತ್ತಾಗಿ ಮತ್ತೆ ಮರಳೊಳಗೆ ಹೋಗಿಬಿಡುವುದು ಖಚಿತವಾದ್ದರಿಂದ ಮುಂದೇನು ಮಾಡುವುದು ತೋಚದೆ ಕಾಯುವುದೊಂದೆ ದಾರಿ ಎಂದು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಐದು ನಿಮಿಷ ಕಳೆದಿರಬಹುದು ಬಲಭಾಗದ ಗೂಡಿನಿಂದ ನಿದಾನವಾಗಿ ತನ್ನ ಅಂಟೇನವನ್ನು ಹೊರಸೂಸಿತು. ಮರುನಿಮಿಷದಲ್ಲಿ ಇನ್ನಷ್ಟು ಹೊರಬಂದು ನನ್ನ ಕಡೆಗೆ ನೋಡತೊಡಗಿತು. ಮತ್ತೆರಡು ನಿಮಿಷ ಕಳೆಯುವಷ್ಟರಲ್ಲಿ ಅದು ಪೂರ್ತಿ ಹೊರಬಂದು ನನ್ನನ್ನು ಮತ್ತು ಎಡಭಾಗದಲ್ಲಿರುವ ಏಡಿಯನ್ನು ನೋಡತೊಡಗಿತು. ಬಹುಷ: ಈಗ ಅವೆರಡೂ ಏಡಿಗಳು ನಿನ್ನೆಯ ಪ್ರಕ್ರಿಯೆಯನ್ನು ನೆನಪಿಸಿಕೊಳ್ಳುತ್ತಾ ಕಣ್ಣುಗಳಲ್ಲೇ ಮಾತಾಡಿಕೊಳ್ಳುತ್ತಿರಬಹುದು ಎಂದುಕೊಂಡು ಇದೇ ಸರಿಯಾದ ಸಮಯವೆಂದು ಅಲುಗಾಡದೆ ಇಟ್ಟಿದ್ದ ಕ್ಯಾಮೆರದಲ್ಲಿ ಒಂದಷ್ಟು ಪೋಟೊವನ್ನು ಕ್ಲಿಕ್ಕಿಸಿದೆ. ಸ್ವಲ್ಪ ಹೊತ್ತು ಕಳೆಯುತ್ತಿದ್ದಂತೆ ನನ್ನಿಂದ ಏನು ತೊಂದರೆ ಇಲ್ಲವೆಂದು ಅವುಗಳಿಗೆ ಅರಿವಾಯ್ತೇನೋ ಅವು ನಿದಾನವಾಗಿ ಎಡಕ್ಕೆ ಮತ್ತು ಬಲಕ್ಕೆ ನಡೆಯತೊಡಗಿದವು. ಈಗ ಇನ್ನಷ್ಟು ಚೆನ್ನಾಗಿ ಫೋಟೊಗ್ರಫಿ ಮಾಡಬಹುದೆಂದುಕೊಂಡು ನಾನು ಕುಳಿತ ಜಾಗದಿಂದ ಸ್ವಲ್ಪವೂ ಅಲುಗಾಡದೆ ಕ್ಯಾಮೆರವನ್ನು ಸ್ವಲ್ಪವೇ ತಿರುಗಿಸಿ ಇನ್ನಷ್ಟು ಚೆನ್ನಾಗಿ ಫೋಟೊಗ್ರಫಿ ಮಾಡಿದ್ದಲ್ಲದೆ ಹಾಗೆ ಕ್ಯಾಮೆರವನ್ನು ಎಡಕ್ಕೆ ತಿರುಗಿಸಿ ಆ ಕಡೆ ಬಂದಿದ್ದ ಕೆಂಪು ಏಡಿಯ ಕೆಲವು ಫೋಟೊಗಳನ್ನು ಕ್ಲಿಕ್ಕಿಸಿದ್ದೆ.


   ನನಗೆ ಬೇಕಾದ ಹಾಗೆ ಫೋಟೊಗ್ರಫಿಯನ್ನಂತೂ ಮಾಡಿದ್ದಾಯಿತು. ಈಗ ನನ್ನ ಮುಂದಿನ ಗುರಿ ಅವುಗಳ ನಡುವಳಿಕೆಯ ವಿಡಿಯೋಗ್ರಫಿ ಮಾಡುವುದು. ಅವುಗಳನ್ನೇ ಗಮನಿಸುತ್ತಾ ಕ್ಯಾಮೆರ ಮೇಲಿಟ್ಟಿದ್ದ ಬಲಗೈ ತೋರುಬೆರಳನ್ನು ತೆಗೆದು ಉಳಿದ ಬೆರಳುಗಳನ್ನು ಬಳಸಿಕೊಂಡು ವಿಡಿಯೋ ಮೋಡ್ ಸೆಟ್ ಮಾಡಿ ಸಿದ್ದನಾದೆ. ವಿಡಿಯೋ ಮಾಡಬೇಕಾದ ದೂರ ಮತ್ತು ಅದಕ್ಕೆ ತಕ್ಕಂತೆ ಫೋಕಸ್ ಸಿದ್ಧಮಾಡಿಕೊಂಡಿದ್ದರೂ  ಬಲಭಾಗದ ಗೂಡಿನಿಂದ ಹೊರಬಂದಿದ್ದ ಕೆಂಪು ಏಡಿ ಅದರ ಗೂಡಿನಿಂದ ಎರಡು ಅಡಿ ದೂರಕ್ಕೆ ಬಂದು ಏನನ್ನೋ ಮಾಡುತ್ತಿದ್ದುದ್ದು ನನ್ನ ಬರಿ ಕಣ್ಣಿಗೆ ಗೊತ್ತಾಗುತ್ತಿರಲಿಲ್ಲ. ಆದ್ರೆ ನಾನು ಆತುರ ಪಡುವಂತಿರಲಿಲ್ಲ ಏಕೆಂದರೆ ಅದು ಖಂಡಿತ ಗೂಡಿನ ಕಡೆಗೆ ಬಂದೇ ಬರುತ್ತದೆ, ಅಲ್ಲಿಯವರೆಗೆ ಕಾಯ್ದು ಅಮೇಲೆ ಅದರ ವಿಡಿಯೋ ಮಾಡೋಣವೆಂದು ಸ್ವಲ್ಪ ಹೊತ್ತು ಕಾಯ್ದೆ. ಎರಡು ನಿಮಿಷ ಕಳೆದಿರಬಹುದು ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಅಂದುಕೊಂಡ ಅದು ನಿದಾನವಾಗಿ ಗೂಡಿನ ಕಡೆಗೆ ಬಂದು ತನ್ನ ಮುಂಭಾಗದಲ್ಲಿರುವ ಎರಡು ಕೈಗಳಿಂದ ಒಂದಷ್ಟು ಮರಳನ್ನು ತೆಗೆದುಕೊಳ್ಳುವುದು ಅದನ್ನು ತನ್ನ ಬಾಯಿಯ ಬಳಿ ತಂದು ಎಂಜಲಿಂದ ಉಂಡೆ ಮಾಡಿ ಮತ್ತೆ ನೆಲಕ್ಕೆ ಹಾಕುತ್ತಿತ್ತು. ಈ ಕ್ರಿಯೆಯ ಒಂದಷ್ಟು ವಿಡಿಯೋ ಮಾಡಿ ಮುಂದೇನು ಮಾಡಬಹುದೆಂದು ಕಾಯುತ್ತಿದ್ದೆ. ಆದ್ರೆ ಅದು ಮತ್ತೇನು ಮಾಡದೆ ನಡುವೆ ಸ್ವಲ್ಪ ರೆಸ್ಟ್ ತೆಗೆದುಕೊಂಡು ಮತ್ತೆ ಎರಡು ಕೈಗಳಿಂದ ಮರಳನ್ನು ತೆಗೆದುಕೊಂಡು ಬಾಯಿಗೆ ತಂದು ಎಂಜಲು ಹಾಕಿ ಉಂಡೆ ಮಾಡಿ ನೆಲಕ್ಕೆ ಹಾಕುತ್ತಿತ್ತು. ಅದನ್ನೇ ಎಷ್ಟು ಅಂತ ವಿಡಿಯೋ ಮಾಡುವುದು! ನನಗೇ ಬೋರ್ ಅನ್ನಿಸತೊಡಗಿ ವಿಡಿಯೋ ಮಾಡುವುದು ನಿಲ್ಲಿಸಿದೆ. ಆದ್ರೆ ಅದೂ ಮಾತ್ರ ಅದನ್ನೇ ಮಾಡುತ್ತಿತ್ತು. ಬಹುಶಃ ನಮಗೂ ಈ ಸಣ್ಣ ಸಣ್ಣ ಜೀವಿಗಳಿಗೂ ಇರುವ ವ್ಯತ್ಯಾಸ ಏನೆಂದರೆ ಅವು ಮಾಡುತ್ತಿರುವುದನ್ನೇ ಸಾವಿರಸಲ ಅಥವ ದಿನವೆಲ್ಲಾ, ವಾರ, ತಿಂಗಳು ವರ್ಷಗಟ್ಟಲೇ ಮಾಡಿದರೂ ಕೂಡ ಅವುಗಳಿಗೆ ತಮ್ಮ ಕಾಯಕ ಬೇಸರವಾಗುವುದಿಲ್ಲ. ಆದ್ರೆ ನಾವು ಮಾಡುವ ಕೆಲಸ  ಒಂದರ್ಧ ಗಂಟೆ ಅಥವ ಒಂದು ಗಂಟೆ ಕಳೆಯುತ್ತಿದ್ದಂತೆ ಬೇಸರವಾಗಿ ಎದ್ದು ಹೋಗಿಬಿಡುತ್ತೇವೆ, ಅದನ್ನೇ ಮತ್ತೆ ಮತ್ತೆ ಮಾಡಬೇಕಲ್ಲ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ, ಒದ್ದಾಡುತ್ತೇವೆ, ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಏಕೆ ಹೀಗೆ? ಆ ಕ್ಷಣದಲ್ಲಿ ಹೀಗೆ ನನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರಿಸಲು ಪಕ್ಕದಲ್ಲಿ ಯಾರು ಇರಲಿಲ್ಲವಾದ್ದರಿಂದ ಅದರ ಯೋಚನೆ ಬಿಟ್ಟು ಅವುಗಳ ಪಾಡಿಗೆ ಅವು ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಲಿ, ನನಗೆ ಬೇಕಾದ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಸಿಕ್ಕಿದೆಯಲ್ಲ ಅಷ್ಟು ಸಾಕು ಎಂದುಕೊಂಡು ಕ್ಯಾಮೆರವನ್ನು ಆಫ್ ಮಾಡಿ  ನಿದಾನವಾಗಿ ಎದ್ದು ನಿಂತೆ. ನಾನು ಎದ್ದ ತಕ್ಷಣ ನನ್ನ ಮುಂದಿದ್ದ ಎರಡು ಕೆಂಪು ಏಡಿಗಳು ಮತ್ತು ಹಿಂಭಾಗದಲ್ಲಿದ್ದ ಏಡಿಗಳು ತಕ್ಷಣ ಒಮ್ಮೆ ನಿಂತು ನನ್ನನ್ನೇ ನೋಡಿದವು.  ಎರಡು ನಿಮಿಷ ಹಾಗೆ ನಿಂತೆ ಅವು ಕೂಡ ಹಾಗೆ ನನ್ನನ್ನೇ ನೋಡತೊಡಗಿದರೂ ಕೂಡ ಅವು ಎಂದಿನಂತೆ ನನ್ನನ್ನು ಕಂಡು ಹೆದರಿ ಗೂಡಿಗೆ ಹೋಗಲಿಲ್ಲವಾದ್ದರಿಂದ ಅಷ್ಟರಮಟ್ಟಿಗೆ ಅವುಗಳಿಗೆ ನಾನು ಹತ್ತಿರವಾಗಿದ್ದೇನೆ ಎಂದುಕೊಂಡು ನಿದಾನವಾಗಿ ಹಿಂದಕ್ಕೆ ನಾಲ್ಕು ಹೆಜ್ಜೆ ಇಟ್ಟು ಹಿಂದಕ್ಕೆ ತಿರುಗಿ ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲಿ ನನ್ನ ಕಾಲುಗಳ ಮುಂದೆ ಏನನ್ನೋ ನೋಡಿದಂತೆ ಅನಿಸಿ ಮತ್ತೆ ಹಾಗೆ ಎರಡು ನಿಮಿಷ ಅಲುಗಾಡದೆ ನಿಂತೆ.

ಬೋನಸ್.

ಮರಳ ಮೇಲೆ ಕೆಲವು ಕಡೆ ಹತ್ತಾರು ಕೆಲವು ಕಡೆ ನೂರಾರು, ಸಾವಿರಾರು ರಾಗಿ ಕಾಳಿನ ಗಾತ್ರದ ಮರಳ ಉಂಡೆಗಳು ಚಿತ್ರ ವಿಚಿತ್ರ ಆಕಾರದಲ್ಲಿ ರಂಗೋಲಿ ಬಿಡಿಸಿದಂತೆ ಒಂದಕ್ಕೊಂದು ಅಂಟಿಕೊಳ್ಳದೇ ಹರಡಿಕೊಂಡಿದ್ದವು. ಇವು ಈ ಮೊದಲು ನಾನು ನೋಡಿದ ಕೆಂಪು ಏಡಿಗಳಂತೂ ಎಂಜಲು ಹಾಕಿ ಉಂಡೆ ಮಾಡಿ ಹಾಕಿರುವುದಂತೂ ಅಲ್ಲ, ಏಕೆಂದರೆ ಅವು ಮಾಡಿದ ಮರಳ ಉಂಡೆಗಳು ಗಾತ್ರದಲ್ಲಿ ಇದಕ್ಕಿಂತೆ ಹತ್ತಾರು ಪಟ್ಟು ದೊಡ್ಡದಿದ್ದವು. ಹಾಗಾದರೆ ಇವುಗಳನ್ನು ಬೇರೆ ಯಾರೋ ಮಾಡಿರಬೇಕಲ್ಲವೇ...ಮತ್ತೆ ಈ ಸಣ್ಣ ಮರಳ ಉಂಡೆಗಳ ಒಂದು ಬದಿಯಲ್ಲಿ ಜೋಳದ ಗಾತ್ರದಷ್ಟೇ ದೊಡ್ಡದಾದ ಗೂಡು ಕಾಣಿಸುತ್ತಿದ್ದವು. ಸ್ವಲ್ಪ ಹೊತ್ತಿಗೆ ಗೂಡಿನಿಂದ ಏನೋ ಬಂದು ಮತ್ತೆ ಹಾಗೆ ಒಳಕ್ಕೆ ಹೋಯ್ತು. ಅದೇನೆಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಏಕೆಂದರೆ ಅದರ ಬಣ್ಣ ಮರಳಿನಂತೆಯೇ ಇದ್ದು ಗಾತ್ರದಲ್ಲಿ ಜೋಳಕ್ಕಿಂತ ಚಿಕ್ಕದಿತ್ತು. ಇನ್ನೂ ಸ್ವಲ್ಪ ಹೊತ್ತು ಕಾದರೆ ಇಲ್ಲಿಯೂ ಏನಾದರೂ ಸಿಗಬಹುದು ಎಂದುಕೊಂಡು  ಕ್ಯಾಮೆರ ಆನ್ ಮಾಡಿ ವಿಡಿಯೋ ಮೋಡ್ ಸೆಟ್ ಮಾಡಿಕೊಂಡು ಅಲುಗಾಡದೇ ನಿಂತೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನಿದಾನವಾಗಿ ಒಂದು ಪುಟ್ಟ ಜೋಳದ ಕಾಳಿನ ಗಾತ್ರ ಏಡಿ ಆ ಸಣ್ಣ ತೂತಿನಿಂದ ಹೊರಬಂತು. ಹತ್ತು ಸೆಕೆಂಡ್ ಕಳೆದಿರಬಹುದು, ಮತ್ತೊಂದು ಅದಕ್ಕಿಂತ ಪುಟ್ಟ ಗಾತ್ರದ ಇನ್ನೊಂದು ಏಡಿ ಒಳಗಿನಿಂದ ಏನನ್ನೋ ತಂದು ಈ ದೊಡ್ಡ ಏಡಿಗೆ ಕೊಟ್ಟರೆ ಈ ದೊಡ್ಡ ಏಡಿ ಅದನ್ನು ಎತ್ತಿ ಪಕ್ಕಕ್ಕೆ ಉರುಳಿಸಿತು. ಮರಳಿನ ಬಣ್ಣಕ್ಕೆ ಹತ್ತಿರವಾಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅದರ ಪುಟ್ಟ ಬೆನ್ನಿನ ಕವಚದ ಮೇಲೆ ಸಣ್ಣ ಸಣ್ಣ ಬಾದಾಮಿ ಬಣ್ಣದ ಚುಕ್ಕೆಗಳು ಕಾಡುತ್ತಿದ್ದು ನನ್ನ ಕುತೂಹಲ ಹೆಚ್ಚಾಗಿ ಕ್ಯಾಮೆರವನ್ನು ನಿದಾನವಾಗಿ ಜೂಮ್ ಮಾಡಿ ಅಲುಗಾಡದೆ ವಿಡಿಯೋ ಮಾಡತೊಡಗಿದೆ. 

ಎರಡೂ ಮೂರು ಕ್ಷಣಗಳಿಗೊಮ್ಮೆ ನೆಲದ ಮರಳ ಗೂಡಿನಿಂದ ಒಂದು ಮರಳ ಉಂಡೆಯನ್ನು ಹೊತ್ತು ತಂದ ಆ ಸಣ್ಣ ಏಡಿ ದೊಡ್ಡದಕ್ಕೆ ಕೊಡುತ್ತಿದ್ದರೆ ದೊಡ್ಡದು ಅದನ್ನು ಪಡೆದು ಪಕ್ಕಕ್ಕೆ ಉರುಳಿಸುತ್ತಿತ್ತು. ಇದನ್ನು ನೋಡುತ್ತಿದ್ದ ನನಗೆ ಆ ಕ್ಷಣದಲ್ಲಿ ಮನೆ ಕಟ್ಟಲು ಇಟ್ಟಿಗೆ, ಕಲ್ಲುಗಳನ್ನು ಒಬ್ಬರಿಂದ ಒಬ್ಬರಿಗೆ ಸಾಗಿಸುವುದು ನೆನಪಾದರೂ ನಮ್ಮ ಇಟ್ಟಿಗೆ ಅಥವ ಇನ್ನಿತರ ಮನೆ ಕಟ್ಟುವ ಸಾಮಾನುಗಳನ್ನು ಮೊದಲೇ ಎಲ್ಲೋ ತಯಾರಿಸಿರುತ್ತಾರೆ, ಅದನ್ನು ಲಾರಿ ಇನ್ನಿತರ ವಾಹನಗಳಲ್ಲಿ ತಂದು ಹಾಕಿದ ನಂತರ ಕಟ್ಟಲು ಬಳಸುತ್ತಾರೆ. ಆದ್ರೆ ಈ ಪುಟ್ಟ ಏಡಿಗಳು ತಮ್ಮ ಮನೆ ಅಂದರೆ ಗೂಡನ್ನು ಮರಳೊಳಗೆ ಕಟ್ಟಲು ಒಳಗಿನಿಂದ ಮರಳನ್ನು  ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮರಳಿನ ಕಣಗಳು ಆ ಪುಟ್ಟ ಏಡಿಗಳಿಗೆ ಸಿಗುವುದಿಲ್ಲವಾದ್ದರಿಂದ ಅವು  ಮರಳೊಳಗೆ ದೊಡ್ಡ ಕೆಂಪು ಏಡಿಯಂತೆ ಬಾಯಿಂದ ಎಂಜಲು ಹಾಕಿ ನಾವು ರಾಗಿ ಮುದ್ದೆ ಮಾಡುವಂತೆ ಉಂಡೆ ಮಾಡಿ ಮೇಲಕ್ಕೆ ತಂದು ಹಾಕುವ ತಂತ್ರವನ್ನು ಕಲಿತಿರಬೇಕು! ಏಕೆಂದರೆ ಹೊರಕ್ಕೆ ತಂದು ಹಾಕಿದ ಆ ಮರಳಿನ ಉಂಡೆಗಳು ಒಂದಕ್ಕೊಂದು ತಗುಲಿದರೂ  ಅಂಟಿಕೊಳ್ಳದಂತೆ ಒಂದರ ಪಕ್ಕ ಮತ್ತೊಂದು ಇದ್ದು ನೋಡಲು ವಿವಿಧ ಕಲಾತ್ಮಕ ವಿನ್ಯಾಸದಂತೆ, ಚಿತ್ರ ವಿಚಿತ್ರ ರಂಗೋಲಿಯಂತೆ ಕಾಣುತ್ತಿವೆ!


  ಇವುಗಳ ವಿಡಿಯೋ ಮಾಡಿ ಕ್ಯಾಮೆರ ಆಪ್ ಮಾಡಿ ಆ ಮರಳ ಬೀಚಿನಿಂದ ಹೊರಬರುವಾಗ ನೆನಪಾಗಿದ್ದು ಈ ಪುಟ್ಟ ಏಡಿಗಳ ಫೋಟೊಗ್ರಫಿಯನ್ನೇ ಮಾಡಲಿಲ್ಲವಲ್ಲ ಅಂತ. ಆದರೂ ಅದರ ವಿಡಿಯೋ ಚೆನ್ನಾಗಿ ಬಂದಿರುವುದು ಸಮಾಧಾನವಾಗಿತ್ತು. ಕೊನೆಯಲ್ಲಿ ನನ್ನ ಮೆಚ್ಚಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಒಂದು  ಪುಸ್ತಕದಲ್ಲಿ ಬರೆದಿದ್ದ ಈ ಸಾಲುಗಳು ನೆನಪಾದವು.

ಇವುಗಳ ವಿಡಿಯೋ ಡಾಕ್ಯುಮೆಂಟರಿಯನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=VQY9li76pZs

   "ನಾವು ಇವತ್ತು ಕಲಿತ ಮತ್ತು ಕಲಿಯುತ್ತಿರುವ ವಿಧ್ಯೆಗಳು, ಹುಡುಕಾಟಗಳು, ಕಲೆ ವಿಜ್ಞಾನ, ಹೊಸ ತಂತ್ರಗಾರಿಕೆಗಳು ಮತ್ತು ಅವುಗಳನ್ನು ಅನುಭವಿಸುತ್ತಿರುವುದನ್ನು ನಮಗಿಂತ ಮೊದಲೇ ಲಕ್ಷಾಂತರ ವರ್ಷಗಳ ಹಿಂದೆಯೇ ಇವು ಕಲಿತು ಜ್ಞಾನ ಸಂಪಾದಿಸಿ ಇವತ್ತಿಗೂ ಅನುಭವಿಸುತ್ತಿರಬಹುದು!

    ಜೋಳದ ಕಾಳಿನ ಗಾತ್ರದ  ಬೆನ್ನ  ಮೇಲೆ ಬಿಳಿ ಚುಕ್ಕೆಗಳಿರುವ ಈ ಮರಳಿನ ಬಣ್ಣದ ಏಡಿಗಳ ಹೆಸರೇನೆಂದು ಅಂತರಜಾಲದಲ್ಲಿ ಹುಡುಕಿದಾಗ ಸಿಕ್ಕ ಹೆಸರು "ಸ್ಯಾಂಡ್ ಬಬ್ಲರ್ ಕ್ರಾಬ್"

ಕೊನೆಯ ಮಾತು:

    ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಜ್ಯೋತಿಷ್ಯ ಶಾಸ್ತ್ರದ ಅನುಭವವುಳ್ಳ ಗೆಳೆಯರೊಬ್ಬರು ಬಂದವರು  ಈ ಏಡಿಗಳ ಫೋಟೊಗಳು ಮತ್ತು ವಿಡಿಯೋವನ್ನು ನೋಡಿ ಹೇಳಿದರು, " ಶಿವು ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ. ಫೋಟೊ ಮತ್ತು ವಿಡಿಯೋ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದರ ನಡುವೆ ನಿಮಗೊಂದು ವಿಷಯವನ್ನು ತಿಳಿಸಬೇಕು. ನೀವು ಹಸುವಿನ ಸಗಣಿಯನ್ನು ನೋಡಿದ್ದರೆ ನಿಮಗೆ ಗೊತ್ತಿರುತ್ತದೆ. ಅದರೊಳಗೊಂದು ಕಂದು ಬಣ್ಣದ ಹುಳುವಿರುತ್ತದೆ. ಅದು ಥೇಟ್ ನಮ್ಮ ಕಾಫಿ ಬೀಜದ ಸೈಜಿನಲ್ಲಿ ಅದೆ ಬಣ್ಣದಲ್ಲಿರುತ್ತದೆ. ಅದನ್ನು ಮರಳಿನ ಮೇಲೆ ಬಿಟ್ಟರೆ ಶ್ರೀಚಕ್ರವನ್ನು ಬರೆಯುತ್ತದೆ ಗೊತ್ತಾ, ಅದು ಶ್ರೀಚಕ್ರ ಬರೆಯುವಾಗ ಅದರ ವಿಡಿಯೋ ಮಾಡಿ ಚೆನ್ನಾಗಿರುತ್ತದೆ". ಅದು ನೀರು ಕುಡಿದಷ್ಟು ಸುಲಭ ಎನ್ನುವಂತೆ ಹೇಳಿ ನನ್ನ ತಲೆಗೊಂದು ಕಾಫಿ ಬೀಜದ ಹುಳುವೊಂದನ್ನು ಬಿಟ್ಟು ಹೋಗಿಬಿಟ್ಟರು.

ಚಿತ್ರಗಳು ಮತ್ತು ಲೇಖನ:
ಶಿವು.ಕೆ
ಬೆಂಗಳೂರು.


Sunday, November 24, 2013

ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿಯಲು ಸಾಧ್ಯವೇ?

ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿಯಲು ಸಾಧ್ಯವೇ? ಈ ಮಾತು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಮೊದಲಿಗೆ ಆಕಾಶದಲ್ಲಿ ಮೊಲಗಳು ಹಾರಾಡಲು ಸಾಧ್ಯವೇ ಇಲ್ಲವೆನ್ನುವುದು ನಿಮ್ಮ ಮತ್ತು ಎಲ್ಲರ ಭಾವನೆಯೂ ಕೂಡ. ಏಕೆಂದರೆ ಅವುಗಳಿಗೆ ರೆಕ್ಕೆಗಳಿಲ್ಲವಲ್ಲ. ಬಹುಶಃ ಅವುಗಳಿಗೆ ರೆಕ್ಕೆ ಬಂದುಬಿಟ್ಟರೆ! ರೆಕ್ಕೆಗಳಿಲ್ಲದಿದ್ದರೂ ನೆಲದ ಮೇಲೆ ಚಂಗನೆ ಜಿಗಿದು ನಮ್ಮ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವ, ಕ್ಷಣಮಾತ್ರದಲ್ಲಿ ಮಾಯವಾಗುವ ಇವುಗಳನ್ನು ನೆಲದ ಮೇಲೆ ನಿಂತು ಹಿಡಿಯುವುದು ಹರಸಾಹಸವೇ ಸರಿ. ಅಂತದ್ದರಲ್ಲಿ ಅವುಗಳಿಗೆ ರೆಕ್ಕೆ ಬಂದು ಆಕಾಶದಲ್ಲಿ ಹಾರಾಡುತ್ತ ನಮ್ಮನ್ನು ಅಣಕಿಸಿದರೆ!….ಇಂಥ ಅಣಕಿಯಾಟದಲ್ಲಿ ನಾನು ಅವುಗಳನ್ನು ಹಿಡಿಯುವ ಪ್ರತಿಸ್ಪರ್ಧಿಯಾಗಿದ್ದೆ ಕಳೆದವಾರ. ನಾನು ಹಾರಾಡುವ ಮೊಲಗಳನ್ನು ಹಿಡಿದೆನಾ? ಅಥವ ವಿಫಲನಾದೆನಾ ಎನ್ನುವ ವಿಚಾರವನ್ನು ಮುಂದೆ ನಿಮಗೆ ಹೇಳುತ್ತೇನೆ.

ಮೊದಲಿಗೆ ನಾನು ದೀಪಾವಳಿ ಹಬ್ಬದಲ್ಲಿ ಹೊಡೆಯುವ ಅಥವ ಊದುಬತ್ತಿಯಿಂದ ಅಂಟಿಸುವ, ಢಂ ಢಂ ಎಂದು ಕಿವಿಗಡಚಿಕ್ಕುವ ಪಟಾಕಿಗಳ ವಿಚಾರಕ್ಕೆ ಖಂಡಿತ ಬರುವುದಿಲ್ಲ. ಏಕೆಂದರೆ ಅವುಗಳನ್ನು ನಾನು ಅಥವ ನೀವು ಹುಟ್ಟಿದಾಗಿನಿಂದ ಇವತ್ತಿನವರೆಗೆ ಪ್ರತಿವರ್ಷದ ದೀಪಾವಳಿಯಲ್ಲಿ, ರಾಜಕೀಯ ವ್ಯಕ್ತಿಗಳು ಗೆದ್ದಾಗ, ಕೆಲವೊಮ್ಮೆ ಇನ್ಯಾರೋ ಸತ್ತಾಗ [ಸತ್ತ ಮೇಲೆ ಶವವನ್ನು ಸ್ಮಶಾನಕ್ಕೆ ಹೊತ್ತೊಯ್ಯುವಾಗಲೂ ದೊಡ್ಡ ದೊಡ್ಡ ಪಟಾಕಿಗಳನ್ನು ಸಿಡಿಸುತ್ತಾರೆ ಶ್ರೀರಾಮಪುರಂನ ತಮಿಳಿನವರು], ಅಣ್ಣಮ್ಮ, ಜಲದಿಗೇರಮ್ಮ, ಕನ್ನಡ ರಾಜ್ಯೋತ್ಸವ, ಗಣೇಶ ಹಬ್ಬ ಹೀಗೆ ಅನೇಕ ಸಂದರ್ಭಗಳಲ್ಲಿ ದೇವರುಗಳನ್ನು ತರುವಾಗ ಮತ್ತು ವಾಪಸ್ಸು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವಾಗ ಇಂಥ ದೊಡ್ಡ ದೊಡ್ಡ ಕಿವಿಗಡಚಿಕ್ಕುವ ಪಟಾಕಿಗಳ ಸದ್ದು ಖಚಿತ ಮತ್ತು ಉಚಿತವಾದ್ದರಿಂದ ಅವುಗಳಲ್ಲಿ ವಿಶೇಷವೇನೋ ಇದೆಯೆಂದು ನನಗನ್ನಿಸುವುದಿಲ್ಲ. ಬದಲಾಗಿ ತುಂಬಾ ಮುಖ್ಯವಾದ ವಿಚಾರವಾಗಿ ಎಲ್ಲಿಗೋ ಹೋಗುತ್ತಿರುವಾಗ ಅನಿರೀಕ್ಷಿತವಾಗಿ ನಮ್ಮ ಪಕ್ಕದಲ್ಲಿಯೇ ಇಂಥ ದೊಡ್ಡ ಪಟಾಕಿಗಳು ಸಿಡಿಯುವುದರಿಂದ ಖುಷಿಯ ಬದಲಿಗೆ ಸಿಟ್ಟು ಮತ್ತು ಬೇಸರ ಉಂಟಾಗುವುದೇ ಹೆಚ್ಚು. ಇದೆಲ್ಲಕ್ಕಿಂತ ಹೆಚ್ಚಾಗಿ ಇವುಗಳೆಲ್ಲವೂ ನೆಲದ ಮೇಲೆ ಘಟಿಸಿ ನಮ್ಮನ್ನು ಬೆಚ್ಚಿಬೀಳಿಸುವುದರಿಂದ ಕುತೂಹಲವೆನ್ನುವುದು ಖಂಡಿತ ಉಂಟಾಗುವುದಿಲ್ಲ. ಹಾಗಾದರೆ ನಿಜವಾದ ಕುತೂಹಲವೆಲ್ಲಿದೆ! 
ಆಕಾಶದಲ್ಲಿ!
ಹೌದು ನನಗೆ ತಿಳುವಳಿಕೆ ಬಂದಂತೆ ಪಟಾಕಿ ಎನ್ನುವ ಈ ಪಟಾಕಿ ನನಗೆ ಕುತೂಹಲ ಅರಳಿಸಿದ್ದು ನೆಲಕ್ಕಿಂತ ಆಕಾಶದಲ್ಲಿ. ನಾನು ಪಟಾಕಿಗೆ ಊದುಬತ್ತಿಯನ್ನು ತಗುಲಿಸಿ ಸುಮಾರು ಇಪ್ಪತ್ತೈದು ವರ್ಷಗಳೇ ಅಯ್ತು. ಆಗಿನಿಂದ ಇವತ್ತಿನವರೆಗೂ ನಾನು ಒಂದೇ ಒಂದು ಪಟಾಕಿಗೂ ಬೆಂಕಿಯಿರುವ ಊದುಬತ್ತಿಯನ್ನು ತಗುಲಿಸಿಲ್ಲ. ಏಕಿರಬಹುದೆಂದು ನೀವು ಕಾರಣವನ್ನು ಕೇಳಿದರೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಪರಿಸರ ಸಂರಕ್ಷಣೆ….ಹೀಗೆ ಎಲ್ಲರೂ ಹೇಳುವ ಕಾರಣಗಳನ್ನು ನಾನು ಹೇಳಬಹುದು. ಅಥವ ಆಗ ಚಿಕ್ಕಂದಿನಲ್ಲಿ ನನ್ನ ಅಪ್ಪ ಹಣವಿಲ್ಲದೇ ಪಟಾಕಿಗಳನ್ನು ಕೊಡಿಸಲಿಲ್ಲವಾದ್ದರಿಂದ ಅಕ್ಕ ಪಕ್ಕದ ಮನೆಯವರು ಸಿಡಿಸುವ ಪಟಾಕಿಗಳನ್ನು ನೋಡಿ ನನಗೂ ಹೀಗೆ ಪಟಾಕಿಗಳನ್ನು ಸಿಡಿಸಿ ಆನಂದಿಸುವ ಅವಕಾಶವಿಲ್ಲವಾಗಿದ್ದರಿಂದ ಆ ಪಟಾಕಿಗಳಿಂದ ಹಣ ಪೋಲು, ಪಟಾಕಿ ಹಬ್ಬದ ಸಮಯದಲ್ಲಿ ನಾನು ಕ್ರಿಕೆಟ್ ಆಡುವ ಮೈದಾನವನ್ನೆಲ್ಲಾ ಅಗೆದು ಅಂಗಡಿಗಳನ್ನಿಟ್ಟು ನಮಗೆ ಕ್ರಿಕೆಟ್ ಆಡದಂತೆ ಮಾಡುಬಿಡುತ್ತಾರೆ, ಪಟಾಕಿ ಹೊಡೆಯುವ ಸಮಯದಲ್ಲಿ ನನ್ನ ಗೆಳೆಯನ ಕೈ ಚರ್ಮ ಸುಟ್ಟು ಹೋಯ್ತು..ಹೀಗೆ ಹತ್ತಾರು ಕಾರಣಗಳನ್ನಿಟ್ಟುಕೊಂಡು ಕೈಗೆ ಸಿಗದ ದ್ರಾಕ್ಷಿ ಹುಳಿಯೆಂದುಕೊಂಡು ಹೊರಟ ನರಿಯಂತೆ ನಾನು ಕೂಡ ದೀಪಾವಳಿ ದಿನ ನನ್ನ ಕೈಗೆ ದಕ್ಕದ ಪಟಾಕಿಗಳನ್ನು ಹುಳಿ ಪಟಾಕಿಗಳೆಂದುಕೊಂಡು ಅದರೆಡೆಗಿನ ಬೇಸರದ ಜೊತೆಗೆ ತಿರಸ್ಕರಿಸಿದ್ದು ಸತ್ಯ.
ನನಗೆ ಬುದ್ದಿ ಬಂದಮೇಲೆ[ಹಾಗೆ ಅಂದುಕೊಂಡಿದ್ದೇನೆ]ಇವುಗಳನ್ನು ಸಿಡಿಸುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಪ್ರಾಣಿಪಕ್ಷಿಗಳಿಗೆ ತೊಂದರೆಗಳಾಗುತ್ತವೆಯೆಂದು ನಾನು ಹೇಳಿದರೂ,ನನಗಿಂತ ಚೆನ್ನಾಗಿ ನೀವು ಹೇಳಿದರೂ, ಪರಿಸರವಾದಿಗಳು ವೈಜ್ಞಾನಿಕ ಲೆಕ್ಕಾಚಾರವನ್ನು ಕೊಟ್ಟು ಆಗುವ ತೊಂದರೆಗಳನ್ನು ವಿವರಿಸಿದರೂ ಆ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಟಾಕಿ ಸಿಡಿಸಬೇಡಿ ಎಂದು ತಿಳಿಹೇಳಿದರೂ, ಪತ್ರಿಕೆಗಳಲ್ಲಿ ಬರೆದರೂ, ಟಿವಿ, ಫೇಸ್‍ಬುಕ್, ಬ್ಲಾಗ್ ಇನ್ನಿತರ ಎಲ್ಲಾ ಮಾಧ್ಯಮಗಳಲ್ಲಿ ಚಿತ್ರಸಹಿತ ಆಗಿರುವ ತೊಂದರೆಗಳನ್ನು ಹೇಳಿದರೂ ಕೂಡ ಅವತ್ತಿನಿಂದ ಇವತ್ತಿನವರೆಗೂ ಪಟಾಕಿ ಹೊಡೆಯುವರು ಹೊಡೆಯುತ್ತಲೇ ಇದ್ದಾರೆ. ಅದನ್ನು ಯಾರಿಂದಲೂ ತಪ್ಪಿಸಲಾಗಿಲ್ಲ.
ಹಾಗಾದರೆ ಮುಂದೇನು ಮಾಡಬಹುದು?
ನಿಮಗೆ ಬೇಸರವಾಗಿ ದೂರದ ರಿಸಾರ್ಟ್‍ಗೆ ಹೋಗಿ ರಿಲ್ಯಾಕ್ಸ್ ಮಾಡಬಹುದು, ಯುವಕ ಯುವತಿಯರು ಕೊಡಚಾದ್ರಿ, ಕುಮಾರ ಪರ್ವತ, ಪಶ್ಚಿಮ ಘಟ್ಟಗಳು, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುಬ್ರಮಣ್ಯ ರೈಲ್ವೇ ಲೈನು… ಹೀಗೆ ಅನೇಕ ಕಡೆ ಟ್ರಕ್ಕಿಂಗ್ ಹೋಗಿರಬಹುದು, ಇನ್ನೂ ಕೆಲವರು ಯಾವುದು ಬೇಡವೆಂದು ಪಟಾಕಿ ಶಬ್ದ ಕೇಳಿಸದಂತೆ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿ ಟಿವಿ ನೋಡುತ್ತಾ ಸಿಹಿತಿಂಡಿಮಾಡಿಕೊಂಡು ತಿಂದುಂಡು ಸುಖವಾಗಿ ಮಲಗಬಹುದು. ಕಳೆದ ಇಪ್ಪತ್ತೈದು ವರ್ಷಗಳಿಂದ ನನಗೂ ಇವರಂತೆ ಪಟಾಕಿ ಶಬ್ದ ಇಷ್ಟವಿಲ್ಲದಿದ್ದರೂ ಇವು ಯಾವುದು ಸಾಧ್ಯವಾಗಲಿಲ್ಲ. ಇಂಥ ಪರಿಸರ ಮಾಲಿನ್ಯದಿಂದ ದೂರವಾಗಿ ದೂರದ ಊರಿಗೆ ಅಥವ ರಿಸಾರ್ಟುಗಳಿಗೆ ಅಥವ ಟ್ರಕ್ಕಿಂಗ್ ಇತ್ಯಾದಿಗಳಿಗೆ ಹೋಗಿ ಅಲ್ಲಿ ಏಕಾಂಗಿಯಾಗಿ ಟೆಂಟ್ ನೊಳಗೆ ಮಲಗುವುದು ಅಥವ ರಾತ್ರಿಯಿಡೀ ಯಾವುದೇ ಶಬ್ದವಿಲ್ಲದ ನಿರ್ಮಲ ಆಕಾಶವನ್ನು ನೋಡುತ್ತಾ ರಾತ್ರಿಗಳನ್ನು ಕಳೆಯುವುದು ನನ್ನದೇ ಕೆಲಸ ಮತ್ತು ಇನ್ನಿತರ ಕಾರಣಗಳಿಂದ ಸಾಧ್ಯವಾಗಿಲ್ಲ. ಹಾಗಾದರೆ ನನ್ನಂಥ ಬಡಪಾಯಿ ಏನು ಮಾಡಲಿಕ್ಕಾಗುತ್ತದೆ?
ಏನು ಮಾಡಲಿಕ್ಕಾಗದಿದ್ದರೂ ದೀಪಾವಳಿಯ ಮೂರು ದಿನಗಳೂ ಕೂಡ ರಾತ್ರಿ ಆಕಾಶವನ್ನು ನೋಡುತ್ತ ಮೈಮರೆಯುತ್ತೇನೆ. ಆಕಾಶ ಯಾರ ಸ್ವತ್ತು ಕೂಡ ಅಲ್ಲ. ನಮ್ಮ ಕಣ್ಣಿಗೆ ನಿಲುಕುವಷ್ಟೇ ಮನಸ್ಸಿಗೂ ದಕ್ಕುತ್ತದೆ. ಅದರಲ್ಲೂ ದೀಪಾವಳಿಯ ರಾತ್ರಿಗಳಂದೂ ನನಗೆ ಕಾಣುವ ಆಕಾಶವೇ ಬೇರೆ. ನೀವು ಎತ್ತ ತಲೆ ಎತ್ತಿ ನೋಡಿದರೂ ಕೂಡ ಸಿನಿಮಾ ಸ್ಕೋಪ್, ೭೦ ಎಂಎಂಗಳಿಗಿಂತ ಹತ್ತಾರು, ನೂರಾರು ಪಟ್ಟು ದೊಡ್ಡದಿರುವ ಆಕಾಶದೊಳಗಿನ ದೊಡ್ಡ ಸಿನಿಮಾ ಪರದೆಯಲ್ಲಿ ಬಣ್ಣ ಬಣ್ಣದ ರಾಕೆಟ್ಟುಗಳು ಅರ್ಧಾತ್ ಕನ್ನಡದ ಆಕಾಶ ಬಾಣಗಳು ಸೃಷ್ಠಿಸುವ, ಕನಸಿನಲ್ಲೂ ಕಾಣಲಾಗದ ರಂಗು ರಂಗಿನ ಕಲ್ಪಿಸಿಕೊಳ್ಳಲಾಗದ ಬೆಳಕಿನ ಚಿತ್ತಾರಗಳನ್ನು ನೋಡುತ್ತ ನಿಂತುಬಿಡುತ್ತೇನೆ. ಆ ಸಮಯದಲ್ಲಿ ನೆಲದಿಂದ ಹಾರಿಸುವ ಇಂಥ ತರಾವರಿ ರಾಕೆಟ್ಟುಗಳಿಂದ ವಾಯುಮಾಲಿನ್ಯವಾಗುವುದಿಲ್ಲವೇ ಎಂದು ನೀವು ನನ್ನನ್ನು ಕೇಳಿದರೇ ಅದಕ್ಕೆ ನನ್ನಲ್ಲಿ ಉತ್ತರವಿಲ್ಲ. ಏಕೆಂದರೆ ವಾಯುಮಾಲಿನ್ಯವಾಗುತ್ತದೆಯೆಂದು ನನಗೆ ಮತ್ತು ನಿಮಗೆ ಗೊತ್ತಿದ್ದರೂ ಅದನ್ನು ನಿಲ್ಲಿಸಲು ನಿಮಗಾಗಲಿ ಅಥವ ನನಗಾಗಲಿ ಸಾಧ್ಯವಾಗಿಲ್ಲ. ಅದರ ಬದಲು ಇಂಥ ಕೈಗೆ ಸಿಗದ ಹುಳಿದ್ರಾಕ್ಷಿಯಂತ ನೆಲದ ಮೇಲೆ ಅಬ್ಬರಿಸುವ ಪಟಾಕಿಗಳನ್ನು ಮರೆತು ಸುಲಭವಾಗಿ ಕೈಗೆಟುಕುವ, ಸ್ವಲ್ಪ ಸಿಹಿ, ಸ್ವಲ್ಪ ಒಗರು, ಸ್ವಲ್ಪ ಸಪ್ಪೆ….ಇದ್ದರೂ ನೋಡಿದ ತಕ್ಷಣ ಇಷ್ಟವಾಗುವ ಗೋಲಿಗಿಂತ ಸಣ್ಣ ಆಕಾರದ ಗಸಗಸೆ ಹಣ್ಣುಗಳಂತೆ ಅನ್ನಿಸುತ್ತವೆ ಆಕಾಶದಲ್ಲಿ ಹಾರಿ ಮರೆಯಾಗುವ ಆಕಾಶಬಾಣಗಳು.
ಪ್ರತಿ ವರ್ಷ ಹೀಗೆ ಆಕಾಶದಲ್ಲಿ ಹಾರಾಡುವ ಬೆಳಕಿನ ಚಿತ್ತಾರದ ತರಾವರಿ ಆಕಾಶ ಬಾಣಗಳನ್ನು ದೀಪಾವಳಿ ದಿನಗಳಂದೂ ನೋಡಿ ಕಣ್ತುಂಬಿಕೊಳ್ಳುತ್ತಿದ್ದೆನಾದರೂ ಅದಕ್ಕಿಂತ ಹೆಚ್ಚೇನು ನನಗೆ ಮಾಡಲಾಗುತ್ತಿರಲಿಲ್ಲ. ಏಕೆಂದರೆ ಕಳೆದ ಹದಿನೈದು ವರ್ಷಗಳಲ್ಲಿ ಬದಲಾಯಿಸಿದ ಮನೆಗಳಲ್ಲಿ ಮೊದಲ ಮನೆಯ ಎರಡನೇ ಮಹಡಿಯಲ್ಲಿ ಟೆರೆಸ್ ಇದ್ದರೂ ಅದರ ಸುತ್ತ ಒಂದು ಕಡೆ ಮರ, ಮೂರು ಕಡೆ ನಮ್ಮ ಮನೆಗಿಂತ ದೊಡ್ಡ ಮನೆಗಳಿದ್ದು ಅಲ್ಲಿ ನನಗೆ ಕಾಣುತ್ತಿದ್ದ ಆಕಾಶ ಬಾವಿಯೊಳಗಿರುವ ಕಪ್ಪೆಗೆ ಕಂಡ ಆಕಾಶವಷ್ಟೆ. ನಾಲ್ಕು ವರ್ಷಗಳ ನಂತರ ಮತ್ತೊಂದು ಮನೆಗೆ ಬಂದರೂ ಅದು ಇದಕ್ಕಿಂತ ಕಳಪೆ. ಮೊದಲ ಮಹಡಿಯಲ್ಲಿ ನಮ್ಮ ಮನೆ. ಆಕಾಶ ನೋಡಬೇಕಾದಲ್ಲಿ ಮತ್ತೆರಡು ಮಹಡಿಯನ್ನು ಹತ್ತಬೇಕು. ಹಾಗೆ ಮೇಲೆ ಹೋದರೂ ನನ್ನ ಕಣ್ಣಿಗೆ ಪೂರ್ತಿ ಆಕಾಶ ದಕ್ಕುವುದು ಕಷ್ಜವೇ ಸರಿ.
ಹೇಳಿಕೊಳ್ಳಲು ನಮ್ಮ ಮನೆಯ ಪಕ್ಕದಲ್ಲಿ ರಾಧಿಕ ಪಂಡಿತ್ ಎನ್ನುವ ಪ್ರಖ್ಯಾತ ಕನ್ನಡ ಸಿನಿಮ ನಟಿಯ ಮನೆಯಿದೆ ಎನ್ನುವುದು ಸುಮ್ಮನೆ ಹೆಗ್ಗಳಿಕೆಯಷ್ಟೆ. ಹಾಗೆ ಸುಮ್ಮಸುಮ್ಮನೇ ಆಕಾಶವನ್ನು ನೋಡುತ್ತ ನಿಂತುಕೊಂಡಾಗ ನಮ್ಮ ಅಕ್ಕ ಪಕ್ಕದ ಮನೆಯವರು ನನ್ನನ್ನು ನೋಡಿ ಇವನಿಗೆ ತಲೆ ಕೆಟ್ಟಿರಬೇಕು ಎಂದುಕೊಳ್ಳುತ್ತಾರೆಂದೇ ನನಗೆ ಇಷ್ಟವಿದ್ದರೂ ಅನೇಕ ದೀಪಾವಳಿ ರಾತ್ರಿಗಳಲ್ಲಿ ಆಕಾಶ ನೋಡದೇ ತಪ್ಪಿಸಿಕೊಂಡಿದ್ದೇನೆ.
ಆದ್ರೆ ಈಗ ನಾಲ್ಕು ತಿಂಗಳ ಹಿಂದೆ ಮತ್ತೆ ಮನೆ ಬದಲಾಯಿಸಿ ಹೊಸ ಮನೆಗೆ ಬಂದಿದ್ದೆನಲ್ಲ ಈ ಮನೆ ಉಳಿದೆಲ್ಲಾ ನಮ್ಮ ಹಳೆಯ ಮನೆಗಳಿಗಿಂತ ಸ್ವಲ್ಪ ವಿಭಿನ್ನವೆನಿಸಿದೆ. ನಾವಿರುವ ಮೂರನೇ ಮಹಡಿಯಿಂದ ಮೇಲೆ ಹೋದಲ್ಲಿ ನಾಲ್ಕನೇ ಮಹಡಿ ಟೆರಸ್. ವಿಶಾಲವಾದ ಅದರಲ್ಲಿ ನಿಂತುಬಿಟ್ಟರೆ ಅರ್ಧ ಬೆಂಗಳೂರು ಕಾಣುತ್ತದೆ. ಮತ್ತೆ ಈಗ ಮೆಟ್ರೋ ರೈಲುಗಳಿಗಾಗಿ ಸಿದ್ದವಾಗಿ ದೊಡ್ಡ ಪಿಲ್ಲರುಗಳಿರುವ ರೈಲು ದಾರಿಯೂ ಸಿದ್ದವಾಗುತ್ತಿರುವ ಸಮಯದಲ್ಲಿ ದಿನಕ್ಕೆರಡು ಮೂರು ಭಾರಿ ಕೆಲವೊಮ್ಮೆ ಇನ್ನೂ ಹೆಚ್ಚು ಸಲ ಪ್ರಯೋಗಿಕವಾಗಿ ಚಲಿಸುತ್ತಿರುವ ಹಸಿರು ಬಣ್ಣದ ಮೂರು ಬೋಗಿಗಳ ಮೆಟ್ರೋ ರೈಲುಗಳನ್ನು ನೋಡುವುದೇ ಒಂದು ಚಂದ. ನಮ್ಮ ಅಕ್ಕಪಕ್ಕದ ಮನೆಗಳ ಪುಟ್ಟ ಮಕ್ಕಳಿಗೆಲ್ಲಾ ಮೆಟ್ರೋ ರೈಲು ಈಗ ಚೆನ್ನಾಗಿ ಪರಿಚಯ. ನಮ್ಮ ಪಕ್ಕದ ಮನೆಯ ಒಂದುವರೆ ವರ್ಷದ ಲಿಕಿತ್ ಎನ್ನುವ ಮಗುವಿಗೂ ಕೂಡ ಮೆಟ್ರೋ ರೈಲು ಬರುವಾಗ ಹಾರ್ನ್ ಮಾಡಿದರೇ ಸಾಕು ಅವನು “ಮೆಟ್ರೋ ರೈಲು ಬಂತು’ ಎಂದು ತೊದಲು ನುಡಿಯಲ್ಲಿ ಹೇಳುವಷ್ಟು ನಮ್ಮ ಟೆರಸ್ ಫೇಮಸ್ ಆಗಿದೆ. ಇಂಥ ಟೆರಸ್‌ನಲ್ಲಿ ದೀಪಾವಳಿಯ ರಾತ್ರಿ ನಿಂತರೆ ಹೇಗೆ ಕಾಣುಬಹುದು ಎನ್ನುವ ಅದಮ್ಯ ಕುತೂಹಲದಿಂದಿದ್ದ ನನಗೆ “ಆ ದಿನಗಳು” ಬಂದೇ ಬಿಟ್ಟಿತ್ತು.
ನರಕ ಚತುರ್ದಶಿಯ ರಾತ್ರಿ ಏಳುಗಂಟೆಗೆ ಬಂದವನು ಸುಮ್ಮನೇ ಆಕಾಶ ನೋಡುತ್ತಾ ನಿಂತೆನಷ್ಟೆ. “ರೀ….ಊಟಕ್ಕೆ ಬನ್ನಿ ಆಗಲೇ ಒಂಬತ್ತು ಗಂಟೆ ದಾಟಿದೆ” ಎಂದಾಗಲೇ ನನಗೆ ಗೊತ್ತಾಗಿದ್ದು. ಸುಮಾರು ಎರಡು ಗಂಟೆಗಳ ಕಾಲ ಮೈಮರೆತು ಮೊದಲ ದಿನದ ದೀಪಾವಳಿಯ ರಾತ್ರಿ ಏಕಾಂಗಿಯಾಗಿ ಸುತ್ತ ಕಾಣುವ ಆಕಾಶದಲ್ಲಿ ತಲೆ ಮೇಲೆ ಹಾರಿ ಮರೆಯಾಗುವ ರಾಕೆಟ್ಟುಗಳನ್ನು ನೋಡುತ್ತಾ ಮೈಮರೆತಿದ್ದೆ. ಊಟ ಮಾಡುವ ಸಮಯದಲ್ಲೂ ಆಕಾಶದಲ್ಲಿ ಕಂಡ ಬೆಳಕಿನ ರಾಕೆಟ್ಟುಗಳದೇ ನೆನಪು. ನಾಳೆ ಹೇಗಾದರೂ ಮಾಡಿ ಅವುಗಳನ್ನು ಕ್ಯಾಮೆರ ಕಣ್ಣಿನ ಮೂಲಕ ನೋಡಬೇಕು ಸಾಧ್ಯವಾದರೆ ಫೋಟೊಗ್ರಫಿ ಮಾಡಬೇಕು ಎಂದುಕೊಂಡು ತೀರ್ಮಾನಿಸಿ ಮಲಗಿದ್ದೆ. 
ಮರುದಿನ ಬ್ಲಾಗಿಗರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ಬಂದವನು ರಾತ್ರಿ ಕ್ಯಾಮೆರ ಮತ್ತು ಲೆನ್ಸುಗಳೊಂದಿಗೆ ಏಳುಗಂಟೆಗೆ ಸಿದ್ದನಾಗಿದ್ದೆ. ಇವತ್ತು ರಾತ್ರಿ ಹೊಸ ಅದ್ಬುತವನ್ನು ಫೋಟೋಗ್ರಫಿಯಲ್ಲಿ ಸಾಧಿಸಿಬಿಡುತ್ತೇನೆ ಎಂದುಕೊಂಡು ರಾಕೆಟ್ಟುಗಳೊಂದಿಗೆ ಹಾರುತ್ತಿದ್ದ ಮನಸ್ಸು ಸ್ವಲ್ಪ ಹೊತ್ತಿಗೆ ಟುಸ್ ಪಟಾಕಿಯಾಗಿಬಿಟ್ಟಿತ್ತು. ಸುಮಾರು ಅರ್ಧಗಂಟೆಯಾದರೂ ಒಂದೇ ಒಂದು ರಾಕೆಟ್ ಪಟಾಕಿ ಬಿಡಿಸುವ ಚೆಲುವಿನ ಬೆಳಕಿನ ಚಿತ್ತಾರವನ್ನು ಕ್ಲಿಕ್ಕಿಸಲು ಸಾಧ್ಯವಾಗಲಿಲ್ಲ. ನನ್ನ ಸುತ್ತ ಇರುವ ಎಂಟು ದಿಕ್ಕುಗಳಲ್ಲಿಯೂ ಮೇಲೆ ಹಾರುತ್ತಿದ್ದ ಬೆಳಕಿನ ಚಿತ್ತಾರಗಳನ್ನು ಕ್ಲಿಕ್ಕಿಸಲು ಎಷ್ಟು ಪ್ರಯತ್ನಿಸಿದರೂ ವಿಫಲಯತ್ನವಾದಾಗ ಅನಿಸಿದ್ದು ಇವು ಖಂಡಿತವಾಗಿಯೂ ಆಕಾಶದಲ್ಲಿ ಹಾರಾಡುವ ಮೊಲಗಳು. ಅವುಗಳನ್ನು ಹಿಡಿಯಲು ಸಾಧ್ಯವೇ? ಅಂತ ಆ ಕ್ಷಣದಲ್ಲಿ ಅವು ಆಕಾಶದಲ್ಲಿ ಹಾರಾಡುವ ಮೊಲಗಳೇ ಅನ್ನಿಸಿದವು.
ಎದುರಿಗೆ ಹಾರಿದ ರಾಕೆಟ್ಟಿನ ಬೆಳಕನ್ನು ಕ್ಲಿಕ್ ಮಾಡಲು ಕ್ಯಾಮೆರವನ್ನು ಅತ್ತ ತಿರುಗಿಸುವಷ್ಟರಲ್ಲಿ ಮಿಂಚಿ ಮರೆಯಾಗುತ್ತಿದ್ದ ಅದನ್ನು ಶಪಿಸಿ ಬಲಭಾಗದಲ್ಲಿ ಹಾರಿದ ಇನ್ನೊಂದರ ಕಡೆ ಗಮನಿಸಿ ಕ್ಷಣಮಾತ್ರದಲ್ಲಿ ಅತ್ತ ಕ್ಯಾಮೆರ ತಿರುಗಿಸುವಷ್ಟರಲ್ಲಿ, ನನ್ನ ತಲೆಯ ಮೇಲೆ ದೊಡ್ಡದಾದ ಕೊಡೆಯಂತೆ ಚದುರಿದ ನಕ್ಷತ್ರಗಳನ್ನು ಕಂಡು ಮೇಲೆ ನೋಡಿದರೆ ಅದು ದಕ್ಕಿದ್ದು ಕಣ್ಣಿಗೆ ಮಾತ್ರ. ಕ್ಯಾಮೆರಕ್ಕೆ ಅದರ ಒಂದು ಕಿಡಿಯೂ ನಿಲುಕಲಿಲ್ಲ. ಹೋಗಲಿ ಇನ್ನಾದರೂ ಹುಷಾರಾಗಿ ಕ್ಯಾಮೆರವನ್ನು ಸ್ಟಡಿಯಾಗಿ ಇಟ್ಟುಕೊಂಡು ನೋಡೋಣವೆಂದುಕೊಂಡು ಸಿದ್ದನಾದೆ. ಅದೋ ದೂರದಲ್ಲಿ ಒಂದು ರಾಕೆಟ್ ಮೇಲೇರಿ ಚದುರಿತ್ತು. ಅದರ ಹಿಂದೆ ಮತ್ತೆರಡು ರಾಕೆಟ್ಟುಗಳು ಮಿಂಚಿ ಮರೆಯಾದವು. ಓಹ್! ಇಲ್ಲಿ ಒಂದರ ಹಿಂದೆ ಒಂದು ರಾಕೆಟ್ಟುಗಳು ಮೇಲೆ ಮೇಲೆ ಬರುತ್ತಿವೆ. ಇನ್ನಷ್ಟು ಬರಬಹುದು. ನಾನು ಮೊದಲೇ ಅಲ್ಲಿನ ಒಂದು ಜಾಗಕ್ಕೆ ಫೋಕಸ್ ಮಾಡಿ ಸಿದ್ದನಾಗಿರಬೇಕು. ಮತ್ತು ಸ್ವಲ್ಪ ತಾಂತ್ರಿಕವಾಗಿಯೂ ಉತ್ತಮವಾಗಿ ಕ್ಯಾಮೆರವನ್ನು ಸೆಟ್ ಮಾಡಿಕೊಳ್ಳಬೇಕು ಎಂದು ತಯಾರಾಗಿ ಅದನ್ನೇ ಕಾಯುತ್ತಾ ತದೇಕ ಚಿತ್ತದಿಂದ ಅಲುಗಾಡದೇ ತಪಸ್ವಿಯಂತೆ ಅದೊಂದೇ ದೃಶ್ಯದತ್ತ ಧ್ಯಾನಾಸಕ್ತನಂತೆ ಕಾಯುತ್ತಾ, ಕ್ಯಾಮೆರ ಕಣ್ಣಿನೊಳಗೆ ನೋಡುತ್ತಾ ನಿಂತೆ. ಆ ಕ್ಷಣದಲ್ಲಿ ಮತ್ತೊಂದು ತೀರ್ಮಾನವನ್ನು ಮಾಡಿದ್ದೆ. ಅಕ್ಕ ಪಕ್ಕ ಎಷ್ಟೆ ರಾಕೆಟ್ಟುಗಳು ಹಾರಿದರೂ ಅದನ್ನು ಗಮನಿಸಬಾರದು ಕೇವಲ ಇದೊಂದನ್ನೇ ಗಮನಿಸಿ ಸಾಧ್ಯವಾದಷ್ಟು ಉತ್ತಮವಾದ ಫೋಟೊವನ್ನು ಕ್ಲಿಕ್ಕಿಸಲೇಬೇಕು ಎನ್ನುವ ಖಚಿತ ತೀರ್ಮಾನದೊಂದಿಗೆ ಸಿದ್ಧನಾಗಿ ನಿಂತಿದ್ದೆ. ಒಂದು ನಿಮಿಷ ಎರಡು ನಿಮಿಷ, ಐದು ನಿಮಿಷ, ಕೊನೆಗೆ ಹತ್ತು ನಿಮಿಷವಾದರೂ ಒಂದೇ ಒಂದು ರಾಕೆಟ್ಟು ಕೂಡ ಅತ್ತ ಕಡೆ ಹಾರಲಿಲ್ಲ. ಬದಲಾಗಿ ನನ್ನ ಎಡಬಲದಲ್ಲಿ ನಿಮಿಷಕ್ಕೆ ಹತ್ತು ಹದಿನೈದು ರಾಕೆಟ್ಟುಗಳು ಬೆಳಕಿನ ಚಿತ್ತಾರವನ್ನು ಮೂಡಿಸಿ ನನ್ನನ್ನು ಅಣಕಿಸಿದಂತೆ ಆಗಿತ್ತು.
ತತ್…ಎದುರಿಗಿರುವವರು ಮತ್ತು ಅವರು ಬಿಡುತ್ತಿರುವ ರಾಕೆಟ್ಟುಗಳು ನನ್ನನ್ನು ಯಾಮಾರಿಸುತ್ತಿವೆ…ಅವರ ಸಹವಾಸವೇ ಬೇಡ ಇತ್ತ ಎಡಬದಿಯಲ್ಲಿ ಒಂದರ ಮೇಲೊಂದರಂತೆ ಮೇಲೇರುತ್ತಿರುವ ರಾಕೆಟ್ಟುಗಳನ್ನು ಸುಲಭವಾಗಿ ಫೋಟೊ ಕ್ಲಿಕ್ಕಿಸಬಹುದು ಅಂತ ಅತ್ತ ಕ್ಯಾಮೆರ ತಿರುಗಿಸಿದೆ. ಅವು ನನ್ನ ಕಣ್ಣಿಗೆ ಚೆನ್ನಾಗಿ ಕಂಡು ಅತ್ತ ಕ್ಯಾಮೆರ ತಿರುಗಿಸಿ ಸತತವಾಗಿ ಫೋಟೊಗಳನ್ನು ಕ್ಲಿಕ್ಕಿಸಿದೆನಾದರೂ ನಂತರ ನೋಡಿದಾಗ ಒಂದೂ ಕೂಡ ಫೋಕಸ್ ಆಗಿರಲಿಲ್ಲ. ಎಲ್ಲವೂ ಬ್ಲರ್ ಆಗಿತ್ತು. ಮತ್ತೆ ಫೋಕಸ್ ಎಲ್ಲ ಸರಿಮಾಡಿಕೊಂಡು ಅತ್ತ ಕ್ಯಾಮೆರ ತಿರುಗಿಸಿ ಸಿದ್ದನಾದೆ. ಹದಿನೈದು ನಿಮಿಷವಾದರೂ ಒಂದೇ ರಾಕೆಟ್ ಆ ದಿಕ್ಕಿನಲ್ಲಿ ಮತ್ತೆ ಮೇಲೆ ಹಾರಲಿಲ್ಲ. ಬಹುಷ: ಆ ದಿಕ್ಕಿನಲ್ಲಿರುವವರ ಬಳಿ ರಾಕೆಟ್ಟುಗಳು ಖಾಲಿಯಾಯ್ತ? ಇನ್ನೊಂದೆರಡಾದರೂ ನನ್ನ ಫೋಟೊಗ್ರಫಿಗಾಗಿ ಹಾರಿಸಬಾರದಾ? ಎಂದುಕೊಂಡರೂ ನಾನು ಇಲ್ಲಿ ಫೋಟೊ ತೆಗೆಯುತ್ತಿದ್ದೇನೆಂದು ಅವರಿಗಾದರೂ ಹೇಗೆ ಗೊತ್ತಾಗಬೇಕು? ಹೋದರೆ ಹೋಗಲಿ ಪರ್ವಾಗಿಲ್ಲ ಇತ್ತ ನನ್ನ ಹಿಂಬದಿಯಲ್ಲಿ ಒಂದರ ಮೇಲೆ ಒಂದು ರಾಕೆಟ್ಟುಗಳು ಬರುತ್ತಿವೆ ಎಂದು ಅತ್ತ ಕ್ಯಾಮೆರವನ್ನು ತಿರುಗಿಸಿದೆ. ಈ ಭಾರಿ ಸರಿಯಾಗಿ ಎಲ್ಲವನ್ನು ಸಿದ್ದ ಮಾಡಿಕೊಂಡು ಅವುಗಳನ್ನು ನೋಡುತ್ತಾ ಸತತವಾಗಿ ಫೋಟೊಗಳನ್ನು ಕ್ಲಿಕ್ಕಿಸಿದ್ದೆ. ಈ ಭಾರಿಯಾದರೂ ಕೆಲವು ಉತ್ತಮವಾದ ಚಿತ್ರಗಳು ನನ್ನ ಕ್ಯಾಮೆರದೊಳಗೆ ಸೆರೆಯಾಗಿರಬಹುದು ಎಂದುಕೊಂಡು ನೋಡಿದರೆ ಮತ್ತೊಂದು ಹೊಸ ನಿರಾಶೆ.
ಈ ಭಾರಿ ತೊಂದರೆ ಕೊಟ್ಟಿದ್ದು ನನ್ನ ಕ್ಯಾಮೆರವಲ್ಲ ಅಥವ ಅಲ್ಲಿ ಹಾರಿದ ಆಕಾಶಬಾಣಗಳಲ್ಲ. ಬದಲಾಗಿ ಸಹಸ್ರಾರು ಬೆಳಕಿನ ಕಿಡಿಗಳ ಎದುರು ಬೆದರು ಬೊಂಬೆಗಳಂತೆ ಅಡ್ಡಬಂದಿದ್ದು ಏರ್‌ಟೆಲ್, ವಡಾಫೋನ್, ಎಂಟಿಎಸ್, ಐಡಿಯ ಇನ್ನಿತರ ಮೊಬೈಲ್ ಫೋನ್ ಟವರುಗಳು….ಛೇ ಎಂಥ ಕೆಲಸವಾಯ್ತು. ಈ ಟವರುಗಳು ಎಲ್ಲಾ ಸಮಯದಲ್ಲೂ ಹೀಗೆ ಅಡ್ಡ ಬರುವುದೇ ಆಯ್ತು…ಈ ದೀಪಾವಳಿ ಸಮಯದಲ್ಲಾದರೂ ಕೂಡ ಸ್ವಲ್ಪ ಹೊತ್ತು ಮಲಗಿರಬಾರದೇ…..ಅನ್ಯಾಯವಾಗಿ ಒಳ್ಳೊಳ್ಳೆಯ ಫೋಟೊಗಳು ಹಾಳಾಗಿ ಹೋದವು” ಎಂದು ಅವುಗಳನ್ನು ಶಪಿಸುತ್ತಾ, ಫೋಟೊಗ್ರಫಿ ಮಾಡಲೇ ಸಾಧ್ಯವಾಗುತ್ತಿಲ್ಲವಲ್ಲ? ಇವು ನಿಜಕ್ಕೂ ಆಕಾಶದಲ್ಲಿ ಹಾರಾಡುವ ಮೊಲಗಳೇ ಅನ್ನಿಸಿತ್ತು. ಅಷ್ಟರಲ್ಲಿ ದೀಪಾವಳಿಯ ಎರಡನೇ ರಾತ್ರಿಯೂ ಮುಗಿದಿತ್ತು.
ಮೂರನೆ ದಿನ ಬಲಿಪಾಡ್ಯಮಿ. ಬಲಿಚಕ್ರವರ್ತಿಯನ್ನು ಬಲಿ ತೆಗೆದುಕೊಂಡಂತೆ ಇವತ್ತು ನನ್ನ ಕ್ಯಾಮೆರದೊಳಗೆ ಆಕಾಶಬಾಣಗಳನ್ನು ಬಲಿ ಹಾಕಬೇಕು ಎನ್ನುವ ದೃಡ ನಿರ್ಧಾರದಿಂದ ಸಿದ್ದನಾಗಿ ರಾತ್ರಿ ಸ್ವಲ್ಪ ತಡವಾಗಿ ಎಂಟುಗಂಟೆಯ ಹೊತ್ತಿಗೆ ಕ್ಯಾಮೆರ ಸಹಿತ ಟೆರಸ್ ಸೇರಿಕೊಂಡಿದ್ದೆ. ಫೋಟೊ ತೆಗೆಯುವ ಮೊದಲು ನಮ್ಮ ಸುತ್ತ ಎತ್ತ ಕಡೆ ಹೆಚ್ಚಾಗಿ ಫೋಟೊಗ್ರಫಿ ಮಾಡಲು ಸುಲಭವಾಗುವಂತೆ ಆಕಾಶ ಬಾಣಗಳನ್ನು ಹಾರಿಸುತ್ತಿದ್ದಾರೆಂದು ಸ್ವಲ್ಪ ಹೊತ್ತು ಗಮನಿಸಿ ಅತ ಕಡೆ ಕ್ಯಾಮೆರವನ್ನು ಸಿದ್ದಮಾಡಿಕೊಂಡು ನಿಂತಿದ್ದೆ. ಬಲಬದಿಯಲ್ಲಿ ಉತ್ತರದ ಕಡೆ ಹೆಚ್ಚು ಆಕಾಶ ಬಾಣಗಳು ಬರುತ್ತಿವೆ…ಅವನ್ನು ಸೆರೆಹಿಡಿಯಲೇಬೇಕು ಎಂದುಕೊಂಡು ತದೇಕ ದೃಷ್ಠಿಯಿಂದ ಸತತವಾಗಿ ಫೋಟೊ ಕ್ಲಿಕ್ಕಿಸತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಫೋಟೊಗಳು ಸೆರೆಯಾದವಾದರೂ ನನಗೆ ಬೇಕಾದ ಹಾಗೆ ನಿಖವಾಗಿ ಫೋಕಸ್, ಎಕ್ಸ್‍ಪೋಸರ್ ಇತ್ಯಾದಿಗಳು ಚೆನ್ನಾಗಿಲ್ಲದೇ ತೆಗೆದ ಫೋಟೊಗಳು ಸಪ್ಪೆ ಸಪ್ಪೆ ಎನಿಸಿತ್ತು. ಕಳೆದ ಮೂರುದಿನಗಳಿಂದ ಹೀಗೆ ಫೋಟೊಗ್ರಫಿಯಲ್ಲಿ ವಿಫಲನಾಗುತ್ತಿದ್ದೇನಲ್ಲ, ನನಗೆ ಇವುಗಳನ್ನು ಕ್ಯಾಮೆರ ಮೂಲಕ ಖಚಿತವಾಗಿ ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲವಲ್ಲ? ಏನು ಮಾಡುವುದು? ಸ್ವಲ್ಪ ಹೊತ್ತು ಕ್ಯಾಮೆರವನ್ನು ಬಗಲಿಗಿರಿಸಿ ಆಕಾಶವನ್ನೇ ನೋಡುತ್ತಾ ನಿದಾನವಾಗಿ ಯೋಚಿಸಿದೆ. ಮೇಲೆ ಸತತವಾಗಿ ಆಕಾಶಬಾಣಗಳು ಎಲ್ಲಾ ದಿಕ್ಕುಗಳಿಂದಲೂ ಆಕಾಶವನ್ನು ಸೀಳುತ್ತಾ…ಕೊನೆಯಲ್ಲಿ ಚಿತ್ತಾರದ ಬಣ್ಣಗಳ ನಕ್ಷತಗಳನ್ನು ಚೆಲ್ಲಿ ಮರೆಯಾಗುತ್ತಿದ್ದವು.
ಹೊಳೆಯಿತೊಂದು ಹೊಸ ಐಡಿಯ! 
“ಇಷ್ಟಪಟ್ಟಿದ್ದು ದಕ್ಕದಿರುವಾಗ,
ದಕ್ಕಿದ್ದನ್ನೇ ಇಷ್ಟಪಡಬೇಕು!”
ಈ ವಿಚಾರ ತಲೆಯಲ್ಲಿ ಬರುತ್ತಿದ್ದಂತೆ ನನ್ನ ನಿರೀಕ್ಷೆಗಳು ಕಲ್ಪನೆಗಳನ್ನೆಲ್ಲಾ ಮರೆತು, ಆಕಾಶದಲ್ಲಿ ಹಾರಾಡುವ ಎಲ್ಲಾ ರೀತಿಯ ಆಕಾಶಬಾಣಗಳನ್ನು ಸುಮ್ಮನೇ ನೋಡುತ್ತಾ ನಿಂತೆ. ಸ್ವಲ್ಪ ಹೊತ್ತಿಗೆ ಅವು ಪುಟ್ಟ ಪುಟ್ಟ ಮಕ್ಕಳಂತೆ ಕಾಣತೊಡಗಿದವು. ಒಂದಕ್ಕಿಂತ ಒಂದು ಚೆಂದವೆನಿಸತೊಡಗಿದವು. ಪುಟ್ಟ ಮಕ್ಕಳು ಅತ್ತರೆ, ನಕ್ಕರೆ, ಅಂಬೆಗಾಲಿಟ್ಟರೆ, ತೊದಲು ನುಡಿದರೆ, ಕೀಟಲೆ ಮಾಡಿದರೆ, ಕಳ್ಳಾಟ ಗುಮ್ಮನಾಟವಾಡಿದರೆ, ನಮ್ಮನ್ನೇ ಅಣಕಿಸಿದರೆ, ಕೈಗೆ ಸಿಗದಂತೆ ತಪ್ಪಿಸ್ಕೊಂಡು ಓಡಿದರೆ, ಮಾಡಿದ ತಪ್ಪನ್ನು ಅರಿತು ದೇವರೇ ಪ್ರತ್ಯಕ್ಷವಾಗಿ ನಮ್ಮೆದುರಿಗೆ ಸಾರಿ ಕೇಳಿದಂತೆ ಸಾರಿ ಕೇಳಿದರೆ, ಸುಖವಾಗಿ ಮಲಗಿದರೆ, ನಿದ್ರೆಯಲ್ಲಿ ಮುಗುಳ್ನಕ್ಕರೆ,…ಇನ್ನೂ ಏನೇನೋ ಮಾಡಿದರೂ ಕೂಡ ನಮಗೆ ಇಷ್ಟವೇ. ಅದೇ ರೀತಿ ಒಂದು ಆಕಾಶ ಬಾಣ ಸದ್ದು ಮಾಡದೇ ಮೇಲೆ ಮೇಲೆ ಸದ್ದಿಲ್ಲದೇ ಹೋಗಿ ಅಲ್ಲಿ ದೊಡ್ಡದಾಗಿ ಸಿಡಿದು ತನ್ನ ನೂರಾರು ಕೈಗಳಿಂದ ಸುತ್ತಲೂ ಮಿಣಮಿಣಕುವ ನಕ್ಷತ್ರಗಳನ್ನು ಚೆಲ್ಲಿದಂತೆ ಕಾಣಿಸಿತ್ತು. ಅದೋ ಮತ್ತೊಂದು ಮೇಲೆ ಮೇಲೆ ಹೋಗುತ್ತಿದೆ!
 ಇನ್ನೇನು ಸಿಡಿದು ಹಿಂದಿನದರಂತೆ ಮಾಡುತ್ತದೆ ಎಂದುಕೊಂಡರೆ ಹೂಂ…ಇದು ಬೇರೆಯದನ್ನೇ ಮಾಡಿತು. ಸಿಡಿದ ತಕ್ಷಣ ತನ್ನೊಳಗಿಂದ ತೆಂಗಿನ ಮರದ ಗರಿಗಳಂತೆ ಚದುರಿ ಉದ್ದುದ್ದದ ಚಿನ್ನದ ಬೆಳಕಿನ ಪುಟ್ಟ ಪುಟ್ಟ ಕೋಲುಗಳನ್ನು ಚೆಲ್ಲುತ್ತಾ ಮಾಯವಾಯ್ತು…

ಮಗದೊಂದು ಇವೆರಡಕ್ಕಿಂತ ಬೇರೆಯ ರೀತಿಯಲ್ಲಿ ನೇರಳೆ ಬಣ್ಣದ ಬೆಳಕಿನೊಳಗೆ ನೂರಾರು ನಕ್ಷತ್ರಗಳನ್ನು ಸುತ್ತಲು ಲಯಬದ್ಧವಾಗಿ ಎಸೆದ ಮೇಲೆ ಅವು ಲಯಬದ್ಧವಾಗಿ ಪ್ಯಾರಚ್ಯೂಟುಗಳಂತೆ ಕೆಳಗಿಳಿಯುವಾಗ ನನ್ನ ಕಣ್ಣಿಗೆ ಕಂಡಷ್ಟು ಆಕಾಶಕ್ಕೆ ರಂಗೋಲಿ ಇಟ್ಟು ಮಾಯವಾಯ್ತೇನೋ ಅನ್ನಿಸಿತ್ತು. ಇವುಗಳನ್ನು ಫೋಟೊಗ್ರಫಿ ಮಾಡಬೇಕಾದರೆ ಈಗ ಫೋಕಸ್, ಸರಿಯಾದ ತಾಂತ್ರಿಕತೆ, ಇತ್ಯಾದಿಗಳನ್ನು ಗಮನಿಸದೆ ಅವು ಹೇಗಿದೆಯೋ ಹಾಗೆ ಫೋಟೊಗಳನ್ನು ಕ್ಲಿಕ್ಕಿಸಿಬಿಡೋಣವೆಂದುಕೊಂಡು ಸುಮ್ಮನೇ ಕ್ಲಿಕ್ಕಿಸತೊಡಗಿದೆ. …ಕೆಲ ಸಮಯದ ಹೊತ್ತಿಗೆ ಫೋಕಸ್ ಆಗಿರದ ಆಕಾಶ ಬಾಣಗಳೆಲ್ಲಾ, ಚಿನ್ನದ ಕೋಲುಗಳಂತೆ, ಇಳಿಬಿಸಿಲಿನ ನಡುವೆ ಬಿದ್ದ ತುಂತುರು ಮಳೆಯಲ್ಲಿ ಕಾಣುವ ಬೆಳಕಿನ ಕೋಲುಗಳಂತೆ, ಕೆಲವು ಮಿಣಕು ಹುಳುಗಳಂತೆ, ಕೆಲವೊಂದು ಆಗಾದ ಬೆಳಕಿನ ಸಾಗರದಂತೆ…ಹೀಗೆ ಎಲ್ಲವನ್ನು ಕ್ಲಿಕ್ಕಿಸತೊಡಗಿದ್ದೆ.
ಇದೇ ರೀತಿ ತಲ್ಲೀನನಾಗಿ ಮೈಮರೆತು ಫೋಟೊಗ್ರಫಿ ಮಾಡುತ್ತಿದ್ದವನಿಗೆ ಅರಿವಿಲ್ಲದಂತೆ ಕೆಲವೊಂದು ಆಕಾಶಬಾಣಗಳ ಚಿತ್ರಗಳು ನನಗೆ ಗೊತ್ತಿಲ್ಲದಂತೆ ಫೋಕಸ್ ಆಗಿ ಒಂದರ ಹಿಂದೆ ಒಂದರಂತೆ ಮೋಟರ್ ಡ್ರೈವ್ ಮೋಡ್‍ನಲ್ಲಿ ಕ್ಲಿಕ್ಕಿಸುತ್ತಿರುವಾಗ ದೊಡ್ಡ ನಕ್ಷತ್ರವೊಂದು ಸಿಡಿದು ಅದರ ಎಲ್ಲಾ ದಿಕ್ಕುಗಳಿಗೂ ಚದುರಿದ ಬಣ್ಣ ಬಣ್ಣದ ನಕ್ಷತ್ರಗಳು, ಮತ್ತೊಂದರಲ್ಲಿ ಹಸಿರಾಗಿ ಸಿಡಿದು ಚದುರಿದ ಆಕಾರಗಳಲ್ಲಿ ಲವ್ ಸಿಂಬಲು.

 ತೇಲುವ ಬೆಲೂನು. ಕೆಲವಂತೂ ಹುಣ್ಣಿಮೆಯಲ್ಲಿ ಸಾಗರದಲ್ಲಿ ತೇಲುವ ದೋಣಿಗಳಂತೆ ಕಂಡು ತೇಲಿಕೊಂಡು ಕಂಡು ಮಾಯವಾದವು.

 ಮಗದೊಂದರಲ್ಲಿ ಚಿಮ್ಮಿದ ಕಿತ್ತಳೆ ಬಣ್ಣದ ಚಿತ್ತಾರದೊಳಗಿಂದ ಬಿಲ್ಲಿನ ಆಕಾರದಲ್ಲಿ ಚಿಮ್ಮಿದ ಕೋಲುಗಳು ಆಗ ತಾನೆ ತಾನೆ ಹರಳಿದ ದಾಸವಾಳ ಹೂವಿನ ಪಕಳೆಗಳ ನಡುವೆ ಅದರೊಳಗೆ ನಿಂತ ಕೆಂಪು ಕೆಂಪು ಕೋಲುಗಳ ತಲೆಯ ಮೇಲೆ ಬೆಳಕಿನ ಕಿರೀಟವನ್ನು ತೊಟ್ಟ ಕೋಲುಗಳಂತೆ ಕಂಡು ಮಾಯವಾದವು. ಕೆಲವಂತೂ ಥೇಟ್ ನಾಚಿಕೆ ಮುಳ್ಳಿನಲ್ಲಿ ಹರಳಿದ ಕೆಂಪು ಮಿಶ್ರಿತ ನೇರಳ ಬಣ್ಣದ ಹೂವುಗಳ ಪತಿಬಿಂಬವನ್ನು ತೋರಿಸುತ್ತ ಮರೆಯಾದವು.
 ಒಂದಂತೂ ತನ್ನ ಎಂಟು ಬಾಹುಗಳಲ್ಲಿ ಬೆಂಕಿಯನ್ನು ತುಂಬಿಕೊಂಡು ಮಿಂಚುತ್ತಾ ಸಾಗುವ ಸಾಗರದಾಳದ ಆಕ್ಟೋಪಸ್ ನಂತೆ ಕಂಡು ಮರುಕ್ಷಣದಲ್ಲಿ ತನ್ನೆಲ್ಲಾ ಬೆಂಕಿಯ ಬಾಹುಗಳಲ್ಲಿನ ಕೊಂಡಿ ಕಳಚಿಕೊಂಡು ದಿಗಂತದಲ್ಲಿ ಮರೆಯಾಯ್ತು. ಮಗದೊಂದು ಹಾರಿ ಕೆಳಗೆ ಬೀಳುವಾಗ ಅವಮಾಸ್ಯೆಯ ನಾಲ್ಕು ದಿನಗಳ ಹಿಂದಿನ ಚಂದ್ರಾಕೃತಿಗಳ ಹತ್ತಾರು ನೂರಾರು ತದ್ರೂಪುಗಳನ್ನು ಸೃಷ್ಠಿಸಿದರೆ, ಅದರೊಳಗೆ ಕೆಲವೊಂದು ಬೆಳಕನ್ನು ಚಿನ್ನದ ಬಣ್ಣವನ್ನು ಮೈಗೆ ಸವರಿಕೊಂಡ ಅರ್ಧ ಕೋಡುಬಳೆಗಳಂತೆ, ನಮ್ಮ ವಾಹನಗಳ ಷಾಕ್ ಅಬ್ಸರ್ವರುಗಳ ಸ್ಪ್ರಿಂಗುಗಳಂತೆ ಕಂಡು ಕಣ್ಮರೆಯಾದವು.

 ಅಗೋ ಅಲ್ಲೊಂದು ನನ್ನ ಕಣ್ಣ ಮುಂದೆಯೇ ಲೈಪ್ ಅಫ್ ಪೈ ಸಿನಿಮಾದಲ್ಲಿ ಕಂಡಂತೆ ರಾತ್ರಿ ಸಮಯದಲ್ಲಿ ಸಾಗರದಲ್ಲಿ ತೇಲುತ್ತಾ ನನ್ನ ಮುಂಭಾಗದಲ್ಲೇ ಹಾರಿ ನಿದಾನವಾಗಿ ಸಾಗರ ತಳದಲ್ಲಿ ತನ್ನ ಬಣ್ಣ ಬಣ್ಣದ ರೆಕ್ಕೆಗಳನ್ನು ಹರಡಿಕೊಂಡು ಚಲಿಸುವ ಸುಂದರ ನೂರಾರು ಮೀನುಗಳಂತೆ ಕಂಡು ನಿದಾನವಾಗಿ ಮರೆಯಾಯ್ತು.


“ರೀ….ಎಲ್ಲಿದ್ದೀರಿ.. ಒಹ್! ಇಲ್ಲಿದ್ದೀರಾ!…ಈಗ ಟೈಮ್ ಎಷ್ಟು ಗೊತ್ತಾ? ರಾತ್ರಿ ಹತ್ತುಗಂಟೆ. ಮಾಡಿದ ಅಡುಗೆಯೆಲ್ಲಾ ತಣ್ಣಗಾಯ್ತು. ಇನ್ನೂ ಊಟಕ್ಕೆ ಬರುತ್ತೀರೋ ಅಥವ ಇಲ್ವೋ? ಎಂದು ನನ್ನ ಶ್ರೀಮತಿ ಕರೆದಾಗಲೇ ನಾನು ಈ ಬೆಳಕಿನ ನಕ್ಷತ್ರ ಲೋಕದಿಂದ ಹೊರಬಂದಿದ್ದು. ಊಟ ಮಾಡಿ ಮಲಗಿದ್ದಷ್ಟೆ. ಸ್ವಲ್ಪ ಹೊತ್ತಿಗೆ ಎಚ್ಚರವಾಗಿತ್ತು. ಹೇಮ ಮಲಗಿದ್ದಳು ನಾನು ನಿದಾನವಾಗಿ ಹೊರಗೆ ಬಂದು ಟೆರೆಸ್ ಮೇಲೆ ನಿಂತೆ. ಸ್ವಲ್ಪ ಹೊತ್ತಿಗೆ ಒಂದು ದೊಡ್ಡ ಆಕಾಶ ಬಾಣ ಸಿಡಿದು ಅದರೊಳಗೆ ನೂರಾರು ಬೆಳಕಿನ ಬಣ್ಣ ಬಣ್ಣದ ಕೊಡೆಗಳು ಪ್ಯಾರಚ್ಯೂಟುಗಳಂತೆ ಕೆಳಗಿಳಿಯತೊಡಗಿದವು. ನನ್ನ ಪಕ್ಕದಲ್ಲಿಯೇ ಬರುತ್ತಿದ್ದ ಕೊಡೆಯನ್ನು ಹಾರಿ ಹಿಡಿದುಕೊಳ್ಳುವಷ್ಟರಲ್ಲಿ ಅದು ನಿದಾನವಾಗಿ ಮತ್ತೆ ಮೇಲೆ ತೇಲತೊಡಗಿತು. ಆ ತೇಲುವಿಕೆಯಲ್ಲಿ ಎಂಥ ಮಜವಿತ್ತು ಗೊತ್ತಾ!

  
ಸ್ವಲ್ಪ ಹೊತ್ತಿಗೆ ಕೆಳಗೆ ನೋಡಿದರೆ ಭೂಮಿಯೆಂಬ ಭೂಮಿಯೆಲ್ಲ ಮಿಣುಕುಹುಳ ಬೆಳಕಿನಲ್ಲಿ ಮಿಣುಕುತ್ತಿದೆ! ಕೊಡೆ ನನ್ನನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯುತ್ತಿದೆ….ಇವುಗಳನ್ನು ನೋಡುತ್ತಾ ಅದೆಷ್ಟು ಹೊತ್ತು ಮೈಮರೆತಿದ್ದೆನೋ ಗೊತ್ತಿಲ್ಲ ಹಾಗೆ ನಿದ್ರೆ ಬಂದಿತ್ತು. ಎಚ್ಚರವಾದಾಗ ನೋಡುತ್ತೇನೆ ಇಡೀ ಪ್ರಪಂಚವೇ ಕತ್ತಲು. ನಾನೆಲ್ಲಿದ್ದೇನೆ ಎಂದುಕೊಂಡು ಸುತ್ತಲು ನೋಡಿದರೆ ಬರೀ ಕತ್ತಲು. ನನಗೆ ಗೊತ್ತಿಲ್ಲದಂತೆ ಹಿಡಿದಿದ್ದ ಕೊಡೆಯ ಕೈಬಿಟ್ಟೆನಲ್ಲ, ದಪ್ ಎಂದು ಕೆಳಗೆ ಬಿದ್ದಿದಷ್ಟೇ ಗೊತ್ತು.. “ರೀ..ರೀ….ಆವಾಗಿನಿಂದ ಮೊಬೈಲ್ ಆಲರಂ ಹೊಡೆದುಕೊಳ್ಳುತ್ತಿರುವುದು ನಿಮಗೆ ಕೇಳಿಸುತ್ತಿಲ್ಲವಾ….ಟೈಮ್ ನಾಲ್ಕುವರೆ..ಪೇಪರ್ ಕೆಲಸಕ್ಕೆ ಹೋಗೋಲ್ವಾ..” ಎಂದು ನನ್ನನ್ನು ಅಲುಗಾಡಿಸಿ ಎಬ್ಬಿಸಿದಾಗ ಕನಸಿನಿಂದ ಎಚ್ಚರವಾಗಿದ್ದೆ. ಪೇಪರ್ ಏಜೆನ್ಸಿ ಕೆಲಸವನ್ನು ಮುಗಿಸಿ ಮನೆಗೆ ಬಂದು ರಾತ್ರಿ ತೆಗೆದ ಫೋಟೊಗಳನ್ನು ನೋಡಿದಾಗ ಅನ್ನಿಸಿದ್ದು.
“ಕೊನೆಗೂ ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿದೆ”
(ಚಿತ್ರಗಳು ಮತ್ತು ಲೇಖನ)
ಕೆ ಶಿವು

Wednesday, November 13, 2013

ಒಪ್ಪಿಕೊಳ್ಳಬೇಕಷ್ಟೆ


     
   
vÀ¥ÀÅöà ºÀtªÀ£ÀÄß PÉÆlÖ JnJA AiÀÄAvÀæªÀ£ÀÄß

KPÉAzÀÄ ¥Àæ²ß¸À¯ÁUÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆÃ®è

M¦àPÉÆ¼Àî¨ÉÃPÀµÉÖ....



¨ÉÃqÀzÀ PÉA¥ÀÅ ºÀ¼À¢ ªÀÄ¼É ¸ÀÄj¹zÀ ªÉÆÃqÀUÀ½UÉ

CzÀ£ÀÄß ªÁ¥À¸ï PÀ½¸À¯ÁUÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆÃ®è

M¦àPÉÆ¼Àî¨ÉÃPÀµÉÖ....



ªÀÄÄAeÁ£É £Ámï jÃZÀ§¯ï DzÀ ¥ÉÃ¥Àgï ©Ãmï ºÀÄqÀÄUÀgÀ£ÀÄß

ºÀÄqÀÄQzÀgÉ ¹UÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆÃ®è

M¦àPÉÆ¼Àî¨ÉÃPÀµÉÖ...



vÀ¥ÀÅöà vÀ¥ÀÅöà CPÀëgÀUÀ¼À EAPÀ£ÀÄß ¨Á¯ï ¥É¤ßUÉ

PÁUÀzÀ¢AzÀ ªÁ¥À¸ï PÀ½¸À¯ÁUÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆÃ®è

M¦àPÉÆ¼Àî¨ÉÃPÀµÉÖ...



¨Á¬ÄAzÀ ºÉÆgÀ©zÀÝ PÉlÖ ªÀiÁvÀÄUÀ¼À CzÉà G¹gÀ£ÀÄß

ªÁ¥À¸ï ¨Á¬ÄUÉ vÉUÉzÀÄPÉÆ¼Àî¯ÁUÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆÃ®è

M¦àPÉÆ¼Àî¨ÉÃPÀµÉÖ...



eÉÆÃgÀĪÀļÉAiÀÄ°è ªÉÄʰUÀlÖ¯É mÁæ¦üPÀ°è D¥sï DzÀ ¸ÀÆÌlgï

D£ï DUÀzÉà MA¢AZÀÄ PÀzÀ®¯ÁUÀÄwÛ®è

D PÀëtzÀ°è K£ÀÆ ªÀiÁqÉÆÃPÉ DUÉÆÃ®è

M¦àPÉÆ¼Àî¨ÉÃPÀµÉÖ...



PÉÆ®ÌvÀÛzÀ°è  w£ÀÄߪÀ C£ÀßzÀ §tÚ ºÀ¼À¢

¨ÉAUÀ¼ÀÆj£À°è w£ÀÄߪÀ C£ÀßzÀ §tÚ ©½

C°è UÀAUÁ E°è PÁªÉÃj

D PÀëtzÀ°è K£ÀÆ ªÀiÁqÉÆÃPÉ DUÉÆÃ®è

M¦àPÉÆ¼Àî¨ÉÃPÀµÉÖ...


ಚಿತ್ರ ಮತ್ತು ಕವನ

²ªÀÅ.PÉ

Sunday, October 6, 2013

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಕೊನೆಯ ಭಾಗ)

 [ಮೊದಲ ಎರಡು ಭಾಗವನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸ]

 http://chaayakannadi.blogspot.in/2013/09/blog-post.html

http://chaayakannadi.blogspot.in/2013/09/2.html

                 ಅಂತರ ರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಗಳ ತೀರ್ಪುಗಾರಿಕೆ ಪ್ರಾರಂಭವಾಗುವ ಮೊದಲು

                    ನಮ್ಮ ಕುಂದಾಪುರದಷ್ಟೇ ಚಿಕ್ಕದಾಗಿರುವ "ದಿಘಾ" ಪಟ್ಟಣ ರಾತ್ರಿಯಲ್ಲಿ

                            ರಾತ್ರಿ ಸಮಯದಲ್ಲಿ "ದಿಘಾ" ರಸ್ತೆ

                       
   ಮೂರನೇ ದಿನ ಸಂಜೆ ಮತ್ತೆ ದುರಂತೋ ರೈಲಿನಲ್ಲಿ ಹೊರಟು ಹೌರಾ ತಲುಪುವ ಹೊತ್ತಿಗೆ ಸಂಜೆ ಏಳುಗಂಟೆ.  ಹೂಗ್ಲಿ ನದಿಯ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಅಲ್ಲಿ ದೊಡ್ದ ದೊಡ್ದ ಬೋಟುಗಳ ವ್ಯವಸ್ಥೆಯಿದೆ.  ನಾವು ಆ ಬೋಟಿನೊಳಗೆ ಸೇರಿಕೊಂಡೆವು. ಬೋಟ್ ನಿದಾನವಾಗಿ ಚಲಿಸುತ್ತಾ ದೊಡ್ದದಾದ ಹೌರ ಬ್ರಿಡ್ಜ್ ಕೆಳಗೆ ಸಾಗುತ್ತಾ...ಅದನ್ನು ದಾಟಿ ಮುಂದೆ ರವಿಂದ್ರ ನಾಥ್ ಠಾಕೂರ್ ಸಮಾಧಿ, ಧಾಟಿಕೊಂಡು ಮುಂದೆ ಸಾಗಿದಾಗ ನಾವೆಲ್ಲ ಬಲಗಡೆಗೆ ಇಳಿದುಕೊಂಡೆವು. ಅಲ್ಲಿಗೆ ನಮ್ಮ ಜೊತೆಯಲ್ಲಿ ಬಂದಿದ್ದ ಪಶ್ವಿಮ ಬಂಗಾಲದ ನಾನಾಕಡೆಯಿಂದ ಬಂದಿದ್ದ ಫೋಟೋಗ್ರಫಿ ಜ್ಯೂರಿಗಳು, ಛಾಯಾಗ್ರಾಹಕರು ಮತ್ತು ಕೆಲವು ಆಯೋಜಕರು ಅವರವರ ಊರುಗಳಿಗೆ ತೆರಳುವ ಸಮಯವಾಗಿತ್ತು. ನಮಗೆಲ್ಲಾ ವಿಶ್ ಮಾಡಿ ಅವರೆಲ್ಲ ಅತ್ತ ಹೊರಟರು. ನಾವು ಪಕ್ಕದಲ್ಲಿಯೇ ಇದ್ದ ಲೋಕಲ್ ರೈಲು ನಿಲ್ದಾಣದ ಕಡೆಗೆ ಹೊರಟೆವು. ಮುಂದೆ ನಮ್ಮ ಪ್ರಯಾಣ ನೇರವಾಗಿ ಗೆಳೆಯ ಅಭಿಜಿತ್ ಮನೆಗೆ.  ಅವತ್ತು ರಂಜಾನ್ ರಜಾದಿನ ಮತ್ತು ಮತ್ತು ರಾತ್ರಿ ಏಳುವರೆಯಾಗಿದ್ದರಿಂದ ಪ್ರಯಾಣಿಕರು ಕಡಿಮೆ ಇದ್ದರು. ಮುಕ್ಕಾಲು ಗಂಟೆಯಲ್ಲಿ ಗೆಳೆಯ ಅಭಿಜಿತ್ ಡೇಯ ಬರಕ್ ಪುರ್‍ಅ ಮನೆ ತಲುಪಿದೆವು. 

                              "ದಿಘಾ" ಸಮುದ್ರ ಕಿನಾರೆ

                         ಆಭಿಜಿತ್ ಡೆ ಮನೆಯಲ್ಲಿ ಅವರ ಕುಟುಂಬದ ಜೊತೆ

          ನನ್ನ ಗಮನವನ್ನು ಸೆಳೆದ ಅಭಿಜಿತ್ ಡೇ ಮನೆಯಲ್ಲಿರುವ ಕಲಾತ್ಮಕ ಚಿತ್ರವಿರುವ ಟೀ ಕಪ್


    ರಾತ್ರಿ ಊಟಕ್ಕೆ ನನಗಾಗಿ ಮನೆಯಲ್ಲಿ ವಿಶೇಷ ಅಡುಗೆಯ ತಯಾರಿಯಲ್ಲಿದ್ದ ಅಭಿಜಿತ್ ಡೇ ಮನೆಗೆ ಫೋನ್ ಮಾಡಿ ನನಗೆ ಸ್ವಲ್ಪ ಇಲ್ಲಿಯ ಊಟ ಸೆಟ್ ಆಗಿಲ್ಲ., ಮಧ್ಯಾಹ್ನ ಎರಡು ಭಾರಿ ವಾಂತಿಯಾಗಿದೆ. ಅದಕ್ಕೆ ಕಾರಣ ಇಲ್ಲಿ ಬಳಸುವ ಸಾಸುವೆ ಎಣ್ಣೆ ಇರಬಹುದು. ಈಗ ರಾತ್ರಿಗೆ ನನಗೆ ಹೆಚ್ಚೇನು ಬೇಡ ಸ್ಪಲ್ಪ ಮೊಸರನ್ನ ಮಾತ್ರ ಸಾಕು ಎಂದು ಹೇಳಿದ್ದೆ. ಹಾಗೆ ಅಭಿಜಿತ್ ಮನೆಗೆ ಫೋನ್ ಮಾಡಿ ಹೇಳಿದರು. ಕೊನೆಯ ದಿನದ ರಾತ್ರಿ ರುಚಿರುಚಿಯಾದ ಅಡುಗೆಯನ್ನು ಮಾಡಬೇಕೆನ್ನುವ ತಯಾರಿಯಲ್ಲಿದ್ದ ಅವರಿಗೆ ಈ ಮಾತನ್ನು ಸ್ವಲ್ಪ ನಿರಾಶೆಯಾಗಿತ್ತು. ಇಲ್ಲಿನ ಊಟದ ವಿಚಾರವನ್ನು ಸ್ವಲ್ಪ ಹೇಳಲೇಬೇಕು. ಇಲ್ಲಿ ಎಲ್ಲ ಆಡುಗೆಗೂ ಸಾಸುವೆ ಎಣ್ಣೆಯನ್ನು ಬಳಸುತ್ತಾರೆ. ವೆಚ್ ಅಥವ ನಾನ್‍ವೆಜ್, ಮೀನು ಹೀಗೆ ಯಾವುದೇ ತರಹದ ಖಾದ್ಯಕ್ಕೂ ಸಾಸುವೆ  ಎಣ್ಣೇ ಅವರಿಗೆ ಬೇಕೇ ಬೇಕು. ಮೊದಲೆರಡು ದಿನ ನಾನು ಅದರ ಬಗ್ಗೆ ಗಮನಿಸಿದೆ ಹೊಂದಿಕೊಂಡಿದ್ದೆ.  ನನ್ನ ಮನಸ್ಸು ಫೋಟೊಗ್ರಫಿ ಮತ್ತು ಊರು ಸುತ್ತುವ ಮತ್ತು ನೋಡುವ ನೆಪದಲ್ಲಿ ಹೊಂದಿಕೊಂಡರೂ ದೇಹ ಹೊಂದಿಕೊಳ್ಳಬೇಕಲ್ಲವೇ...ಅದಕ್ಕೆ ಸಾಧ್ಯವಾಗಲಿಲ್ಲ. ಮೂರನೇ ದಿನಕ್ಕೆ ಸಾಸುವೆ ಎಣ್ಣೆ ನನ್ನ ದೇಹಕ್ಕೆ ಬೇಡ ಎಂದು ರೆಜೆಕ್ಟ್ ಮಾಡಿತ್ತು. ಆ ಕಾರಣದಿಂದಾಗಿ ಮೂರನೇ ದಿನ ದಿಘದಲ್ಲಿ ವಾಂತಿಯಾಗಿತ್ತು. ಅವತ್ತು ರಾತ್ರಿ ನನಗೊಬ್ಬನಿಗೆ ಮೊಸರನ್ನ ಕಾದಿತ್ತು.  ಆ ಮೊಸರನ್ನವಾದರೂ ಹೇಗಿತ್ತು ಗೊತ್ತಾ......ಅನ್ನ ಪಶ್ಚಿಮದ ಕಡೆ, ಮೊಸರು ಪೂರ್ವದ ಕಡೆ, ಬಿಸಿಬಿಸಿಯಾದ ಹಾಲು ನನ್ನ ಕಡೆ. ಹೀಗೆ ತ್ರಿಕೋನ ಆಕಾರದಲ್ಲಿ ಮೂರು ಬಟ್ಟಲುಗಳಲ್ಲಿ ಮಿಕ್ಸ್ ಆಗದ ಮೊಸರನ್ನ ಸಿದ್ದವಾಗಿತ್ತು. ಪಾಪ ಅವರಿಗೇನು ಗೊತ್ತು ಮೊಸರನ್ನ ಹೇಗಿರುತ್ತದೆಂದು.  ಊಟಕ್ಕೆ ಕುಳಿತಾಗ ಮೊಸರನ್ನಕ್ಕೆ ಹಾಲು ಆಗತ್ಯವಿಲ್ಲ, ಅನ್ನ ಮೊಸರು ಎರಡೇ ಬೇಕು, ಸ್ವಲ್ಪ ಸಾಲ್ಟ್ ಸಾಕು ಎಂದು ಅವರಿಗೆ ವಿವರಿಸಿ ಮೂರನ್ನು ಹದವಾಗಿ ಮಿಕ್ಸ್ ಮಾಡಿ ತಿನ್ನುತ್ತಿದ್ದರೇ ಅವರಿಗೆಲ್ಲಾ ನನ್ನ ರಾತ್ರಿ ಊಟ ಆಶ್ಚರ್ಯವಾಗಿತ್ತು.  ಅಕ್ಕಿ ಮತ್ತು ಅನ್ನದ ವಿಚಾರಕ್ಕೆ ಬಂದರೆ ಅಲ್ಲಿ ಬೆಳೆಯುವ ಭತ್ತದಿಂದ ಬರುವ ಅಕ್ಕಿ ದಪ್ಪದಾದ ಹಳದಿ ಬಣ್ಣದ್ದು.  ಅದರ ರುಚಿಯೂ ಅಷ್ಟಕಷ್ಟೆ. ನಮ್ಮ ದಕ್ಷಿಣ ಭಾರತದಲ್ಲಿ ಬೆಳೆಯುವ ಶ್ವೇತಬಣ್ಣದ ಅಕ್ಕಿ ಮತ್ತು ಅದರಿಂದಾಗುವ ಅನ್ನ, ಅದರ ರುಚಿ!..ಆಹಾ! ನಾವು ನಿಜಕ್ಕೂ ಅದೃಷ್ಟವಂತರೆ ಸರಿ.  ನಿಮ್ಮಲ್ಲಿ ಬೆಳೆಯುವ ಭತ್ತದೊಳಗಿನ ಅಕ್ಕಿಯ ಹಳದಿ ಬಣ್ಣಕ್ಕೆ ಕಾರಣವೇನೆಂದು ಕೇಳಿದರೆ ಅವರು ಗಂಗಾ ನದಿಯತ್ತ ಕೈ ತೋರಿಸುತ್ತಾರೆ. ನಮ್ಮ ಗಂಗಾ ನದಿ ನೀರು ಇಂಥ ಬೆಳೆಯನ್ನು ಕೊಡುತ್ತದೆ ನಾವೇನು ಮಾಡೋಣ ಹೇಳಿ" ಎಂದು ಅವರು ನಗುತ್ತಾ ಹೇಳುವಾಗ ಅವರಿಗಿಂತ ಉತ್ತಮವಾದ ಮತ್ತು ರುಚಿಯಾದ ಅನ್ನವನ್ನು ತಿನ್ನುವ ನಮಗೆ ಅವರ ಬಗ್ಗೆ ವಿಷಾಧ ವ್ಯಕ್ತವಾಗುತ್ತದೆ. ನಾವು ಇಲ್ಲಿ ಕಾವೇರಿ, ಕೃಷ್ಣಾ, ಮಹಾದಾಯಿ, ಇನ್ನೂ ಅನೇಕ ನದಿಗಳ ನೀರಿಗೆ ಕಿತ್ತಾಡಿದರೂ, ಪ್ರವಾಹವಲ್ಲದಿದ್ದರೂ ಹರಿದಷ್ಟೇ ನೆಲದಲ್ಲಿ ಚಿನ್ನದಂತ ಅನ್ನವನ್ನು ಉಣ್ಣುವ ನಾವು, ದೂರದಿಂದ ಮತ್ತು ಹೊರಗಿನಿಂದ ನೋಡಿದಾಗ ಇವುಗಳ ಮಹತ್ವವೇನೆಂಬುದು ಅರಿವಾಗಿತ್ತು. ಬೆಳೆಯುವ ತರಕಾರಿಗಳಲ್ಲಿ ಆಲುಗಡ್ಡೆಗೆ ಆಗ್ರಸ್ಥಾನ, ಹಾಗೆ ನಿತ್ಯ ಬಳಕೆಯಲ್ಲೂ ಕೂಡ. ಕೊಲ್ಕತ್ತ, ಬರಕ್‍ಪುರ, ದಿಘಾ, ಹೌರಾ, ಹೀಗೆ ಎಲ್ಲಿಗೇ ಹೋಗಿ ಬೆಳಿಗ್ಗೆ ನಿಮಗೆ ಪೂರಿ ಮತ್ತು ಅಲುಗಡ್ಡೆಯಿಂದ ಮಾಡಿದ ಪಲ್ಯ ಎಲ್ಲಾ ಪುಟ್ಟ ಹೋಟಲುಗಳು ಮತ್ತು ಮನೆಗಳಲ್ಲಿ ಸಿದ್ಧವಾಗಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೂ ಆಲುಗಡ್ಡೆ ಸಾಗು ಅಥವ ಪಲ್ಯ ಸಿದ್ದವಿರುತ್ತದೆ. ಬೆಂಗಾಲಿಗಳು ರಾತ್ರಿ ಹೊತ್ತು ಅನ್ನವನ್ನು ತಿನ್ನುವುದಿಲ್ಲ. ಆದ್ರೆ ರೋಟಿ, ಚಪಾತಿ ಜೊತೆಗೆ ಆಲುಗಡ್ಡೆ ಪಲ್ಯ ಅಥವ ಸಾಗು ಇದ್ದೇ ಇರಬೇಕು. ಇತರೆಲ್ಲ ತರಕಾರಿಗಳಿಗಿಂತ ಮೂರು ರೂಪಾಯಿಗೆ ಒಂದು ಕಿಲೋ ಆಲುಗಡ್ಡೆ ಅಲ್ಲಿ ದೊರೆಯುತ್ತದೆ. ರಾತ್ರಿ ಊಟ ಮುಗಿಯುತ್ತಿದ್ದಂತೆ ಪ್ರಯಾಣದ ಆಯಾಸದಿಂದಾಗಿ ನನಗೆ ಬೇಗನೇ ನಿದ್ರೆ ಆವರಿಸಿತ್ತು.

             ಕೊಲ್ಕತ್ತದ ಉಪನಗರ ಭಾರಕ್‍ಪುರದ ಒಂದು ಪುಟ್ಟ ರಸ್ತೆ


   ಮರುದಿನ ಬೆಳಿಗ್ಗೆ ಬೇಗ ಆರುಗಂಟೆಗೆ ಎದ್ದು ಒಂದು ವಾಕ್ ಹೋಗಬೇಕೆನ್ನುವ ಆಸೆಯಿಂದ ಅಭಿಜಿತ್‍ಗೆ ಹೇಳಿದರೆ...ಅರೆರೆ...ಶಿವುಜೀ, ಅಮಾರ ಶಹರ್ ತುಮ್‍ಕೋ ಮಾಲುಮ್ ನಹೀ, ತುಮ್ ಬಹರ್  ಐಸೇ ಮಿಸ್ ಹೋಗಯಾ ತೋ, ತುಮಾರ ಪ್ಲೈಟ್ ಬಿ ಮಿಸ್ ಹೋತಾಹೇ" ಎಂದು ತಮಾಷೆ ಮಾಡಿದರು.  ಇಲ್ಲ ಇಲ್ಲ ನನಗೆ ಗೊತ್ತು ಎರಡು ಮೂರು ಕಿಲೋಮೀಟರ್ ಮಾತ್ರ ಗೊತ್ತಿರುವ ರಸ್ತೆಯಲ್ಲಿಯೇ ಹೋಗಿಬರುತ್ತೇನೆ ಎಂದು ಹೇಳಿ ಹೊರಟೆ. ಮತ್ತೆ ಬೆಳಗಿನ ಭರಕ್ ಪುರ ಎಂದಿನಂತೆ ಚುರುಕಾಗಿತ್ತು. ಅಷ್ಟುಹೊತ್ತಿಗಾಗಲೇ ನೂರಾರು ಸೈಕಲ್ ರಿಕ್ಷಾಗಳಲ್ಲಿ ರೈಲು ನಿಲ್ದಾಣಕ್ಕೆ ಸಾಗುವ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು, ಕಾಲೇಜು ಹುಡುಗ ಹುಡುಗಿಯರು,.....ಸಾಗುತ್ತಿದ್ದರು. ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ನಡೆಯುತ್ತಾ ಅಲ್ಲಿ ಸಾಗುವ ಈ ಸೈಕಲ್ ರಿಕ್ಷಾಗಳು, ಜನರು, ಸ್ಕೂಲಿಗೆ ಹೋಗುವ ಮಕ್ಕಳು...ಎಲ್ಲರನ್ನು ನೋಡುತ್ತಾ ಮತ್ತೆ ವಾಪಸ್ ಬರುವ ವೇಳೆಗೆ ಎಂಟುಗಂಟೆ.   ಅವತ್ತು ಮೂರು ಗಂಟೆಯ ವಿಮಾನಕ್ಕೆ ಬೆಂಗಳೂರಿಗೆ ನನ್ನ ಟಿಕೆಟ್ ನಿಗದಿಯಾಗಿತ್ತು.  ಅವತ್ತು ಕೊನೆಯ ದಿನವಾದ್ದರಿಂದ ಅಭಿಜಿತ ಮಗಳಾದ ಆದ್ರಿತಾ ಡೆ ಅರ್ಥಾತ್ ಅವರು ಪ್ರೀತಿಯಿಂದ "ರೂಪು" ಜೊತೆ ತುಂಬಾ ಹೊತ್ತು ಕಳೆದೆ. ಅವಳ ಆಸಕ್ತಿಕರ ವಿಚಾರ ಡ್ರಾಯಿಂಗ್ ಮತ್ತು ಪೈಂಟಿಂಗ್, ನನ್ನ ವೆಂಡರ್ ಕಣ್ಣು ಪುಸ್ತಕದಲ್ಲಿ ನಾನು ಬರೆದ ಕೆಲವು ಚಿತ್ರಗಳನ್ನು ಅವಳು ನೋಡಿ ತುಂಬಾ ಇಷ್ಟಪಟ್ಟಳು. ಅವಳು ಬರೆದ ಹತ್ತಾರು ಚಿತ್ರಗಳನ್ನು ನನಗೆ ತೋರಿಸಿದಳು. ಕೊನೆಯಲ್ಲಿ ಅವರ ಮನೆಯಲ್ಲಿ ಎಲ್ಲರ ಜೊತೆ ಫೋಟೊ ತೆಗೆಸಿಕೊಂಡು ಮಧ್ಯಾಹ್ನ ಹನ್ನೆರಡುವರೆಗೆ ಎಲ್ಲರಿಗೂ ಬೈ ಹೇಳಿ ಅವರಿಂದ ಬೀಳ್ಕೊಡುವಾಗ ಮತ್ತೆ ಮತ್ತೆ ಬರುತ್ತಿರಿ ಎಂದರು ಅವರ ಶ್ರೀಮತಿ. ಅವರ ಪ್ರೀತಿಪೂರ್ವಕ ಅತಿಥ್ಯವನ್ನು ಅನುಭವಿಸಿದ ನನಗೆ ಅಲ್ಲಿಂದ ಹೊರಡುವಾಗ ಮನಸ್ಸು ವಿಶಾಧಕ್ಕೊಳಗಾಗಿತ್ತು.

                     

ಕೊಲ್ಕತ್ತದ ವಿಮಾನ ನಿಲ್ದಾಣ. ಇದನ್ನು ಲೋಕಲ್ ರೈಲಿನಲ್ಲಿ ಕುಳಿತು ಕ್ಲಿಕ್ಕಿಸಿದ್ದು. ವಿಮಾನ ನಿಲ್ಡಾಣದ  ಕಾಂಪೌಂಡಿನವರೆಗೆ ಲೋಕಲ್ ರೈಲು ಸೌಕರ್ಯವಿದೆ.



    ಭರಕ್ ಪುರ ರೈಲು ನಿಲ್ದಾಣದಲ್ಲಿ ನನಗಾಗಿ ರೈಲು ಟಿಕೆಟ್ ತೆಗೆದುಕೊಂಡ ಅಭಿಜಿತ್ ಅದನ್ನು ತೋರಿಸಿದರು. ಅದರೊಳಗಿನ ಟಿಕೆಟ್ ಮೊತ್ತವನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು. ಮಧ್ಯಾಹ್ನವಾದ್ದರಿಂದ ಲೋಕಲ್ ರೈಲು ಕಾಲಿಯಿತ್ತು. ಅರ್ಧಗಂಟೆಯಲ್ಲಿ ಡಂಡಂ ನಿಲ್ದಾಣ ತಲುಪಿದೆವು. ಮತ್ತು ಅಲ್ಲಿಂದ ಮತ್ತೊಂದು ರೈಲು ನೇರವಾಗಿ ಕೊಲ್ಕತ್ತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ. ಅದರ ಟಿಕೆಟ್‍ನ ಮೊತ್ತವನ್ನು ನೋಡಿದಾಗಲೂ ಅದೇ ಆಶ್ಚರ್ಯವಾಗಿತ್ತು. ಮುಂದೇ ಹದಿನೈದೇ ನಿಮಿಷದಲ್ಲಿ ನಾವು ಪ್ರಯಾಣಿಸುತ್ತಿರುವ ಲೋಕಲ್ ರೈಲು ವಿಮಾನ ನಿಲ್ದಾಣದ ಕೌಂಪೌಂಡಿನ ಪಕ್ಕದಲ್ಲಿಯೇ ನಮ್ಮನ್ನು ಇಳಿಸಿತ್ತು. ಕೇವಲು ಮುಕ್ಕಾಲು ಗಂಟೆಯ ಅವಧಿಯಲ್ಲಿ ಭರಕ್‍ಪುರದಿಂದ ಐದು ರೂಪಾಯಿ ಟಿಕೆಟಿನಲ್ಲಿ ಇಪ್ಪತ್ತೆರಡು ಕಿಲೋಮೀಟರ್ ದೂರದ ಒಂದು ನಿಲ್ದಾಣ, ಅಲ್ಲಿಂದ್ ಮುಂದಕ್ಕೆ ನಾಲ್ಕು ರುಪಾಯಿ ಟಿಕೆಟ್‍ನಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿರುವ ಡಂಡಂ ವಿಮಾನ ನಿಲ್ದಾಣವನ್ನು ತಲುಪಿದ್ದೆವು.  ಬೆಂಗಳೂರಿನಲ್ಲಿ ನಮ್ಮ ಮನೆಯಿಂದ ಬೆಂಗಳೂರು ವಿಮಾನ ನಿಲ್ದಾಣ ಇಷ್ಟೇ ದೂರದಲ್ಲಿದೆ. ಮಲ್ಲೇಶ್ವರಂ ಅಥವ ಮೆಜೆಸ್ಟಿಕ್‍ನಿಂದ ಮುವತ್ತೆರಡು ಕಿಲೋಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ನಮ್ಮ ಬಿಎಂಟಿಸಿಯ ವಾಯುವಜ್ರದಲ್ಲಿ ಇನ್ನೂರು ರೂಪಾಯಿಗಳನ್ನು ಮನಸ್ಸಿಲ್ಲದ ಮನಸ್ಸಿನಿಂದ ಕೊಡಬೇಕು. ಆದ್ರೆ ಕೊಲ್ಕತ್ತದಲ್ಲಿ ಇಷ್ಟೇ ಮುವತ್ತೆರಡು ಕಿಲೋ ಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ಕೇವಲ ಒಂಬತ್ತು ರೂಪಾಯಿ ಸಾಕು! ಬೆಂಗಳೂರಿನಲ್ಲಿ ಇನ್ನೂರು ರೂಪಾಯಿಗಳನ್ನು ಕೊಟ್ಟರೂ ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕಿಕೊಳ್ಳುವ ಭಯದಿಂದಾಗಿ ಮೂರು ತಾಸು ಮೊದಲೇ ಮನೆ ಬಿಡಬೇಕು. ಇಲ್ಲಿ ಮುವತ್ತು ಕಿಲೋಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ಒಂದುವರೆ ತಾಸು ಮೊದಲು ಮನೆಯನ್ನು ಬಿಟ್ಟರೆ ಸಾಕಾಗುತ್ತದೆ. ಅಲ್ಲಿ ನಲವತ್ತು ಕಿಲೋಮೀಟರ್ ದೂರದ ಪ್ರತಿನಿತ್ಯದ ಓಡಾಟಕ್ಕೆ ತಿಂಗಳಿಗೆ ನೂರೈವತ್ತರಿಂದ ಇನ್ನೂರು ರೂಪಾಯಿ ಪಾಸ್ ತೆಗೆದುಕೊಂಡರೆ ಸಾಕು ದಿನದಲ್ಲಿ ಎಷ್ಟು ಸಲ ಬೇಕಾದರೂ ಎಲ್ಲಿಗೆ ಬೇಕಾದರೂ ಲೋಕಲ್ ರೈಲಿನಲ್ಲಿ ಪ್ರಯಾಣಿಸಬಹುದು.  ನಮ್ಮ ಬೆಂಗಳೂರಿನಲ್ಲಿ ಲೋಕಲ್ ರೈಲು ಸೌಕರ್ಯವಿಲ್ಲ. ಇರುವ ಬಿಎಂಟಿಸಿಯಲ್ಲಿ ಒಂದು ದಿನಕ್ಕೆ ಓಡಾಡಲು ನಲವತ್ತೈದು ರೂಪಾಯಿಗಳ ಟಿಕೆಟ್ ಪಡೆಯಬೇಕು. ಇನ್ನೂ ಪುಸ್ಪಕ್, ಓಲ್ವೋ, ಇನ್ನಿತರ ಬಸ್ಸುಗಳಲ್ಲಿ ಓಡಾಡಬೇಕಾದರೆ ತಿಂಗಳಿಗೆ ಸಾವಿರಾರು ರೂಪಾಯಿಗಳಾದರೂ ಬೇಕು. ನೋಡಿದ್ರಾ ನಮ್ಮ ಬೆಂಗಳೂರು ಈ ವಿಚಾರದಲ್ಲಿ ಇಷ್ಟೊಂದು ಮುಂದುವರಿದಿದೆ ಎನ್ನಲು ನನಗೆ ನಾಚಿಕೆಯಾಗುತ್ತದೆ.

                   ಕೊಲ್ಕತ್ತದ ವಿಮಾನ ನಿಲ್ದಾಣದಲ್ಲಿ  ವಿಮಾನ ಇಳಿಯುವ ಮೊದಲು ಸಿಕ್ಕ ಚಿತ್ರವಿದು


   ಒಟ್ಟಾರೆಯಾಗಿ ಕೊಲ್ಕತ್ತದಲ್ಲಿ ನನಗಿಷ್ಟವಾದ ಸಂಗತಿಗಳೆಂದರೆ, ಅಲ್ಲಿನ ಜನರ ಕಷ್ಟ ಸಹಿಷ್ಣುತೆ, ಸೈಕಲ್ ರಿಕ್ಷಾ, ಲೋಕಲ್ ರೈಲು, ಹಣವೇ  ಮುಖ್ಯವಲ್ಲವೆಂದು ಬದುಕುವ ಜನರು, ಕಲಾತ್ಮಕ ಫೋಟೊಗ್ರಫಿಯಲ್ಲಿ ಅವರು ಸಾಧಿಸಿರುವ ಸಾಧನೆ, ರಸಗುಲ್ಲ, ಜಾಮೂನು, ಕೊನೆಯಲ್ಲಿ ನಮ್ಮ ಕನ್ನಡ ನಾಡಿನವರಾಗಿ ಪಶ್ಚಿಮ ಬಂಗಾಲದ ಜಲಪೈಗುರಿಯಲ್ಲಿ ಕೆಲಸ ಮಾಡುತ್ತಿರುವ ಸೋದರ ಡಾ.ಎಂ.ನಟರಾಜ್ ಮತ್ತು ಕೊಲ್ಕತ್ತದ ಐಐಎಂ ನಲ್ಲಿ ಓದುತ್ತಿರುವ  ದಿನಪತ್ರಿಕೆ ಹಾಕುತ್ತಲೇ ಆ ಮಟ್ಟಕ್ಕೆ ಮೇಲೆ ಬಂದ ನಮ್ಮ ಹುಡುಗ ಶಿವಪ್ರಕಾಶ್‍, ಇಬ್ಬರನ್ನು ಬೇಟಿಯಾಗಬೇಕೆನ್ನುವ ಆಸೆಯಿತ್ತು. ಆದರೆ ನನಗಿರುವ ಟೈಟ್ ಶೆಡ್ಯೂಲ್‍ನಿಂದಾಗಿ ಆಗದಿದ್ದರೂ ಅಲ್ಲಿ ಅವರೊಂದಿಗೆ ಫೋನಿನಲ್ಲಿ ಮಾತಾಡಿದ್ದು ಕೂಡ ಸಂತೋಷವಾಗಿತ್ತು.  ಇಷ್ಟೆಲ್ಲಾ ಇಷ್ಟಗಳ ನಡುವೆ ನನ್ನ ದೇಹಸ್ಥಿತಿ ರಿಜೆಕ್ಟ್ ಮಾಡಿದ ಸಾಸುವೆ ಎಣ್ಣೆ ಮಾತ್ರ ನನಗೆ ಕಷ್ಟದ ಸಂಗತಿಯಾಗಿತ್ತು.

    ರೈಲು ಇಳಿದು ನಿದಾನವಾಗಿ ವಿಮಾನ ನಿಲ್ದಾಣದ ಕಡೆಗೆ ನಾನು ಮತ್ತು ಅಭಿಜಿತ್ ಹೆಜ್ಜೆ ಹಾಕುತ್ತಿದ್ದರೆ ನಮ್ಮ ಹೆಜ್ಜೆಗಳು ಭಾರವಾಗುತ್ತಿವೆಯೇನೋ ಅನ್ನಿಸತೊಡಗಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ನಾವು ಒಬ್ಬರೊನ್ನಬ್ಬರು ಬಿಟ್ಟು ತಮ್ಮ ಸ್ಥಳಗಳಿಗೆ ಹೋಗಿಬಿಡುತ್ತೇವೆ, ಮೊದಲ ದಿನ  ಇದೇ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿ ಕರೆದುಕೊಂಡು ಹೋದ ಇದೇ ಅಭಿಜಿತ್ ಡೇ ಎನ್ನುವ ಒಬ್ಬ ಛಾಯಾಗ್ರಾಹಕ ಎರಡು ದಿನ ಮನೆಯಲ್ಲಿ ನನ್ನ ಮಟ್ಟಿಗೆ ಅದ್ಬುತವೆನಿಸುವ ಅತಿಥಿ ಸತ್ಕಾರದ ಜೊತೆಗೆ ಅಣ್ಣನಂತೆ ಪ್ರೀತಿ ವಾತ್ಸಲ್ಯ ಹಿರಿಯ ಛಾಯಾಗ್ರಾಹಕ ಗೆಳೆಯನಂತೆ ಫೋಟೊ ವಿಚಾರವಾಗಿ ನನಗೆ ನೀಡಿದ ಸಲಹೆ ಮತ್ತು ಟಿಫ್ಸ್‍ಗಳು......ಈಗ ಮತ್ತೆ ನನ್ನನ್ನು ಬೀಳ್ಕೊಡಲು ವಿಮಾನ ನಿಲ್ದಾಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಾಲ್ಕು ದಿನದಲ್ಲಿ ಬದುಕು, ಬವಣೆ, ಕೆಲಸ, ಮನೆ, ಹೆಂಡತಿ, ಉದ್ಯೋಗ, ಫೋಟೊಗ್ರಫಿ ಇತ್ಯಾದಿ ವಿಚಾರವಾಗಿ ಬಿಡುವಿಲ್ಲದಂತೆ ಮಾತಾಡಿದ್ದೆವು....ಈಗ ಕೊನೆಯ ಕ್ಷಣಗಳಲ್ಲಿ ಇಬ್ಬರ ನಡುವೆ ನಮಗೆ ಅರಿಯದಂತ ವಿವರಿಸಲಾಗದಂತಹ ಭಾವುಕತೆ ತುಂಬಿಕೊಂಡು ಮಾತುಗಳಿಗೆ ಜಾಗವಿಲ್ಲವಾಗಿತ್ತು.

    "ಶಿವುಜೀ ನೀವು ಅನುಮತಿಯನ್ನು ಕೊಟ್ಟರೆ ನಾನು ಹೊರಡುತ್ತೇನೆ" ಎಂದು ನನ್ನನ್ನೇ ನೋಡುತ್ತಾ ಅಭಿಜಿತ್ ಹೇಳಿದಾಗ ಅವರ ಕಣ್ಣುಗಳಲ್ಲಿ ಕಂಡರೂ ಕಾಣದ ಹಾಗೆ ಹನಿಗೂಡುತ್ತಿತ್ತು.  ಅದನ್ನೂ ನೋಡುತ್ತಿದ್ದ ನನಗೂ ಕೂಡ ಕಣ್ಣುಗಳು ತುಂಬಿಕೊಂಡಂತಾಗಿ ಇಬ್ಬರೂ ಗಟ್ಟಿಯಾಗಿ ಅಪ್ಫಿಕೊಂಡೆವು. ಕೆಲವು ದಿನಗಳ ಹಿಂದೆ ಯಾವುದೇ ರೀತಿಯಲ್ಲಿ ಸಂಭಂದವಿಲ್ಲದ, ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿ ಇರುವ ವ್ಯಕ್ತಿಯೊಬ್ಬ ನಾಲ್ಕೇ ದಿನಕ್ಕೆ ನನಗೆ ಗೆಳೆಯನಾಗಿ, ಅಣ್ಣನಾಗಿ, ಆತ್ಮೀಯನಾಗಿ ಹಿತೈಸಿಯಾಗಿ, ಹೀಗೆ ಬೀಳ್ಕೊಡುವುದಿದೆಯಲ್ಲ....

       ಹಾಗೇ ನಿದಾನವಾಗಿ ಸ್ವಲ್ಪ ಸ್ವಲ್ಪ ವೇಗವಾಗಿ ಹೋಗುತ್ತಿರುವ ಅಭಿಜಿತ್‍ರನ್ನು ನೋಡುತ್ತಿದ್ದೆ. ಆತ ಮತ್ತೆ ತಿರುಗಿ ನೋಡದೇ ಹಾಗೆ ಮರೆಯಾಗುತ್ತಿದ್ದಾಗ ನನ್ನ ಕಣ್ಣಂಚಿಗೆ ಬಂದ ಹನಿಯನ್ನು ತಡೆಯಲಾಗಲಿಲ್ಲ. 

       ವಿಮಾನ ನಿಲ್ದಾಣದ ವಿಧಿ ವಿಧಾನಗಳನ್ನು ಅರ್ಧಗಂಟೆಯೊಳಗೆ  ಬೆಂಗಳೂರಿಗೆ ಹೊರಡುವ ವಿಮಾನವನ್ನು ಕಾಯುತ್ತ ಕುಳಿತಿದ್ದಾಗ ಫೋನ್ ರಿಂಗಣಿಸಿತ್ತು. "ಶಿವುಜೀ, ಈಗ ನಿಮ್ಮಿಂದ ಬೇಗ ಹೊರಟು ಬಂದೆನೆಂದು ಬೇಸರಿಸಬೇಡಿ,, ನಾನು ಸ್ವಲ್ಪ ಹೆಚ್ಚೇ ಭಾವುಕ. ಇನ್ನು ಸ್ವಲ್ಪ ಹೆಚ್ಚೇ ಇದ್ದಿದ್ದರೆ ನನ್ನೊಳಗಿನ ಭಾವುಕತೆ ತಡೆದುಕೊಳ್ಳಲಾಗದೆ ಕಣ್ತುಂಬಿಬಿಡುತ್ತಿತ್ತು.  ಅದನ್ನು ತಪ್ಪಿಸಿಕೊಳ್ಳಲಿಕ್ಕಾಗಿ ನಿಮ್ಮಿಂದ ಹೊರಟು ಹಿಂದೆ ತಿರುಗಿ ನೋಡದೇ ಹೊರಟು ಬಂದೆನಾದರೂ ಮನಸ್ಸಿಗೆ ಸಮಧಾನವಾಗಲಿಲ್ಲ.  ವಿಮಾನ ನಿಲ್ದಾಣದಲ್ಲಿ ನಿಮ್ಮೆ ಎಲ್ಲಾ ಕ್ಲಿಯರೆನ್ಸ್ ಸರಿಯಾಗಿ ಆಯ್ತಲ್ಲ...ಬೆಂಗಳೂರು ತಲುಪಿದ ತಕ್ಷಣ ಫೋನ್ ಮಾಡುವುದು ಮರೆಯಬೇಡಿ...ಬೈ...ಬೈ..."ಅಭಿಜಿತ್ ಮತ್ತೆ ಫೋನ್ ಮಾಡಿದಾಗ ನನಗೆ ಏನೆಂದು ಉತ್ತರಿಸಬೇಕೆಂದು ಗೊತ್ತಾಗಲಿಲ್ಲ. ರನ್‍ವೇನಲ್ಲಿ ಬೆಂಗಳೂರಿಗೆ ಹೊರಡುವ ವಿಮಾನ ಸಿದ್ಧವಾಗಿತ್ತು.

 ವಿಮಾನ ಮೇಲೇರಿದ ಕೆಲವೆ ಕ್ಷಣಗಳಲ್ಲಿ ಕೊಲ್ಕತ್ತದ ಪಕ್ಷಿನೋಟ ಕಂಡಿದ್ದ   ಹೀಗೆ

 

                    ಕೊಲ್ಕತ್ತದ ಲೋಕಲ್ ರೈಲು [ವೃತ್ತಕಾರದ ಒಳಗೆ] ವಿಮಾನದಿಂದ ನನ್ನ ಕ್ಯಾಮೆರಕ್ಕೆ ಸೆರೆ ಸಿಕ್ಕಿದ್ದು ಹೀಗೆ..

                              

ವಿಮಾನ ಮೇಲೇರಿದ ಮೇಲೆ ಕಂಡ ಕೊಲ್ಕತ್ತದ ಮತ್ತೊಂದು ಪಕ್ಷಿನೋಟ

                ಬಂಗಾಲ ಕೊಲ್ಲಿ ಸಮುದ್ರ ಮೇಲೆ ಹತ್ತಿಯಂತ ಮೋಡಗಳು..ವಿಮಾನದಿಂದ ಒಂದು ಪಕ್ಷಿನೋಟ

                         ಮತ್ತೊಂದು ಪಕ್ಷಿನೋಟ

                       ಬೆಂಗಳೂರಿನಲ್ಲಿ ವಿಮಾನ ಇಳಿಯುವ ಹತ್ತು ನಿಮಿಷದ ಮೊದಲು

ಬೆಂಗಳೂರಿನಲ್ಲಿ ವಿಮಾನ ಇಳಿಯುವ ಐದು ನಿಮಿಷದ ಮೊದಲು                              

ಚಿತ್ರಗಳು ಮತ್ತು ಲೇಖನ:

ಶಿವು.ಕೆ.

ಬೆಂಗಳೂರು

Sunday, September 29, 2013

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಭಾಗ 2)

[ಮೊದಲ ಭಾಗಕ್ಕಾಗಿ ಈ ಲಿಂಕ್ ಕ್ಲಿಕ್ಕಿಸಿ.]
.http://chaayakannadi.blogspot.in/2013/09/blog-post.html

    ಮೊದಲ ಭಾರಿಗೆ ಅಲ್ಲಿನ ಲೋಕಲ್ ರೈಲು ನಿಲ್ದಾಣದೊಳಗೆ ಕಾಲಿಟ್ಟಿದ್ದೆ. ಎಷ್ಟೊಂದು ಜನ ಅಂತೀರಿ! ನೂರಾರು ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಸಿದ್ದರಾಗಿ ಬರುವ ರೈಲುಗಾಡಿಗಳಿಗೆ ಕಾಯುತ್ತಿದ್ದರು. ಆ ಕ್ಷಣದಲ್ಲಿ ಮಲ್ಲೇಶ್ವರಂ ರೈಲು ನಿಲ್ದಾಣ ನೆನಪಾಯ್ತು. ಸದಾ ಶಾಂತವಾಗಿರುವ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣವೆಲ್ಲಿ! ಗಿಜಿಗುಟ್ಟುವ ಈ ನಿಲ್ದಾಣವೆಲ್ಲಿ! ಖಂಡಿತ ಹೋಲಿಸಕೊಳ್ಳಬಾರದು ಸುಮ್ಮನೆ ಇಲ್ಲಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಆಸ್ವಾದಿಸಬೇಕೆಂದುಕೊಂಡು ಅಭಿಜಿತ್ ಡೆ ಮತ್ತು ಇತರರೊಂದಿಗೆ ನಾನು ರೈಲು ನಿಲ್ದಾಣದ ಪ್ಲಾಟ್ ಫಾರಂ ಕಡೆಗೆ ನಡೆದೆ. ಆಗಲೇ ಒಂದು ರೈಲು ಬಂದು ನಿಂತಿತ್ತು. ನಾನು ಈ ರೈಲು ಹತ್ತೋಣವೇ ಎಂದು ಕೇಳಿದರೆ ಅಭಿಜಿತ್ ಬೇಡ ತುಂಬಾ ರಷ್ ಇದೆ. ಎಂದರು. ನಾನು ಒಳಗೆ ಇಣುಕಿ ನೋಡಿದೆ. ಆಶ್ಚರ್ಯವಾಯ್ತು. ಒಂದೊಂದು ಬೋಗಿಯಲ್ಲೂ ಕಡಿಮೆಯೆಂದರೆ ಮುನ್ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ನಿಲ್ಲಲು ಜಾಗವಿಲ್ಲದಷ್ಟು ತುಂಬಿಹೋಗಿತ್ತು. "ಶಿವು, ಚಿಂತಿಸಬೇಡಿ, ಇದು ಹೊರಟ ನಂತರ ಹತ್ತು ನಿಮಿಷಕ್ಕೆ ಮತ್ತೊಂದು ರೈಲು ಬರುತ್ತದೆ ಅದರಲ್ಲಿ ಹೋಗೋಣ ಎಂದರು. ಆ ರೈಲು ತುಂಬಿದ ಬಸುರಿಯಂತೆ ಸಾವಿರಾರು ಪ್ರಯಾಣಿಕರನ್ನು ಹೊತ್ತು ಹೊರಟಿತು. ನನ್ನಪಕ್ಕದಲ್ಲಿಯೇ ಒಬ್ಬ ಶೂ ಪಾಲೀಶ್ ಮಾಡುವವ ಒಬ್ಬ ಅಧಿಕಾರಿಗೆ ಪಾಲೀಶ್ ಮಾಡುತ್ತಿದ್ದ, ಪಕ್ಕದಲ್ಲಿ ಒಬ್ಬ ಹಣ್ಣು ಮಾರುತ್ತಿದ್ದ, ದೂರದಲ್ಲಿ ಕಾಲೇಜು ಹುಡುಗಿ ತನ್ನ ಮೊಬೈಲ್ ಫೋನಿನಲ್ಲಿ ಮಗ್ನನಾಗಿದ್ದಳು. ಪಕ್ಕದಲ್ಲಿಯೇ ವಯಸ್ಸಾದವರೊಬ್ಬರು ಕನ್ನಡ ಸರಿಮಾಡಿಕೊಳ್ಳುತ್ತಿದ್ದರು. ಹೀಗೆ ತರಾವರಿ ದೃಶ್ಯಗಳನ್ನು ನೋಡುತ್ತಾ ಅವುಗಳೆಲ್ಲದರ ಫೋಟೊ ತೆಗೆಯುತ್ತಿದ್ದಂತೆ ದೂರದಲ್ಲಿ ಮತ್ತೊಂದು ರೈಲು ಹಾರ್ನ್ ಮಾಡುತ್ತ ಬರುತ್ತಿತ್ತು. ’ಶಿವು, ನಿಮ್ಮ ಕ್ಯಾಮೆರ ಆಫ್ ಮಾಡಿ ನಿಮ್ಮ ಲಗ್ಗೇಜು ನನ್ನ ಕೈಲಿ ಕೊಡಿ, ಆ ರೈಲು ನಿಲ್ಲುತ್ತಿದ್ದಂತೆ ಮೊದಲು ಒಳಗೆ ಹೋಗಿ ಸೀಟ್ ಹಿಡಿದು ಕುಳಿತುಕೊಳ್ಳಿ, ಒಂದು ಕ್ಷಣ ತಡವಾದರೂ ನಿಂತುಕೊಂಡೇ ಹೋಗಬೇಕು ಎಂದರು. ಅವರ ಮಾತಿನಂತೆ ನಾನು ಸಿದ್ದನಾದೆ. ಆ ರೈಲು ನಿಲ್ಲುತ್ತಿದ್ದಂತೆ ಒಂದೇ ಸಮನೆ ಜನ ನುಗ್ಗಿದರು. ನಾನು ಕೂಡ ಅವರೊಂದಿಗೆ ನುಗ್ಗಿ ಸೀಟ್ ಗಿಟ್ಟಿಸಿದ್ದೆ. ಆಷ್ಟರಲ್ಲಿ ನಮ್ಮ ಗೆಳೆಯರಲ್ಲೆರೂ ಬಂದು ಸೀಟು ಹಿಡಿದರು. ಸೀಟು ಸಿಕ್ಕಿತ್ತಲ್ಲ ಎಂದು ಖುಷಿ ಸ್ವಲ್ಪ ಹೊತ್ತಿಗೆ ಮರೆಯಾಯ್ತು. ಆ ಬೋಗಿಯೊಳಗೆ ಜನರು ಇನ್ನೂ ಬರುತ್ತಲೇ ಇದ್ದಾರೆ! ಕೊನೆಗೆ ಎರಡು ಸೀಟುಗಳ ನಡುವೆಯೂ ಹತ್ತಾರು ಜನರು ನಿಂತು ನಮಗೆ ಒಂದು ಕ್ಷಣವೂ ಅಲುಗಾಡಲು ಸಾಧ್ಯವಾಗದಂತೆ ಆಗಿಹೋಗಿತ್ತು. ಬಹುಶಃ ಈ ರೈಲುಗಾಡಿ ಹತ್ತಾರು ಬೋಗಿಗಳಲ್ಲಿ ಅದೆಷ್ಟು ಸಾವಿರಜನರಿರಬಹುದು ಎಂದುಕೊಂಡೆ. ಮೊದಲ ಭಾರಿಗೆ ಕೊಲ್ಕತ್ತದ ಲೋಕಲ್ ರೈಲಿನ ಅನುಭವವಾಗಿತ್ತು. ಕೊಲ್ಕತ್ತದಲ್ಲಿ ಪ್ರತಿಯೊಂದು ಸ್ಥಳಕ್ಕೂ ಲೋಕಲ್ ರೈಲು ಇದೆ. ಬೆಳಗಿನ ಮತ್ತು ಸಂಜೆ ಹೊತ್ತಿನಲ್ಲಿ ಐದು ಮತ್ತು ಹತ್ತು ನಿಮಿಷಕ್ಕೊಂದು ರೈಲು ಬರುತ್ತದೆ. ಅಷ್ಟು ರೈಲುಗಳಿದ್ದರೂ ಎಲ್ಲವೂ ತುಂಬಿಹೋಗುತ್ತವೆ. ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ಕಡಿಮೆ ಇರುತ್ತದೆ. ಈ ರೈಲು ಪ್ರಯಾಣದ ದರವೂ ತುಂಬಾ ಕಡಿಮೆ ಇಪ್ಪತ್ತು-ಮುವತ್ತು ಕಿಲೋಮೀಟರ್ ದೂರಕ್ಕೆ ಕೇವಲ ಐದು-ಆರು ರೂಪಾಯಿಗಳು ಮಾತ್ರ. ಇಲ್ಲಿನ ಲಕ್ಷಾಂತರ ಜನರು ತಮ್ಮ ಉದ್ಯೋಗದ ಸ್ಥಳಗಳಿಗೆ ತಲುಪಲು ಈ ರೈಲುಗಳನ್ನೇ ಅವಲಂಬಿಸಿದ್ದಾರೆ. ನಮ್ಮ ರೈಲು ಹೊರಟಿತಲ್ಲ, ಕಿಟಕಿಬಳಿ ಸೀಟುಹಿಡಿದಿದ್ದ ನಾನು ಅಲ್ಲಿನ ದೃಶ್ಯಗಳನ್ನು ವಿಡಿಯೋ ಮತ್ತು ಫೋಟೊಗಳ ಮೂಲಕ ಸೆರೆಹಿಡಿಯುತ್ತಿದ್ದೆ. ಅಲ್ಲಿ ರೈಲು ಕಂಬಿಗಳ ನಡುವೆಯೇ ಬಟ್ಟೆಗಳನ್ನು ಒಣಗಿಸಲು ಹಾಕಿರುತ್ತಾರೆ ಅಕ್ಕಪಕ್ಕದ ಮನೆಯವರು. ಅವೆಲ್ಲವನ್ನು ಫೋಟೊ ಸೆರೆಹಿಡಿಯುತ್ತಾ, ಒಂದಾದ ಮೇಲೆ ಮೇಲೆ ಒಂದು ನಿಲ್ದಾಣಗಳು ಕೊನೆಗೆ ನಾವು ಇಳಿಯುವ ಸೆಲ್ಡಾ ರೈಲು ನಿಲ್ದಾಣ ಬಂತು. ಅಲ್ಲಿಂದ ಹೊರಬರುತ್ತಿದ್ದಂತೆ ಹೊರಗೆ ಮಳೆ ಸುರುವಾಗಿತ್ತು. ಪಕ್ಕದಲ್ಲಿಯೇ ಬಸ್ ನಿಲ್ದಾಣ ಅಲ್ಲಿಂದ ನಮ್ಮ ಪ್ರಯಾಣ ಹೌರ ರೈಲು ನಿಲ್ದಾಣದ ಕಡೆಗೆ ಅಲ್ಲಿನ ಲೋಕಲ್ ಬಸ್ ಹತ್ತಿದೆವು. ಮಳೆ ಜೋರಾಯ್ತು. ಕಿಟಕಿಯಲ್ಲಿ ಕಂಡ ಜೋರು ಮಳೆ ಅದರ ನಡುವೆ ಓಡಾಡುವ ಜನಗಳು, ಅಲ್ಲಲ್ಲಿ ಕುಳಿತು ಬಿಸಿ ಟೀ ಕುಡಿಯುವ ಜನ, ಮಳೆ ಜೋರಾಗಿ ರಸ್ತೆಗಳಲ್ಲಿ ನೀರು ಹರಿಯತೊಡಗಿತ್ತು. ನಾನು ಅವುಗಳ ಚಿತ್ರಗಳನ್ನು ಸೆರೆಯಿಡಿಯುತ್ತಿದ್ದಾಗಲೇ "ಶಿವು, ಮುಂದೆ ಹೌರ ಬ್ರಿಡ್ಜ್ ಬರುತ್ತದೆ. ಅದನ್ನು ವಿಡಿಯೋ ಮಾಡಿ" ಎಂದರು ಅಭಿಜಿತ್. ಮೊದಲ ಬಾರಿಗೆ ಎಂಬತ್ತು ವರ್ಷಗಳಷ್ಟು ಹಳೆಯದಾದ ಹೌರಾ ಬ್ರಿಡ್ಜ್‍ನೊಳಗೆ ಪ್ರಯಾಣಿಸಿದಾಗ ತುಂಬಾ ಖುಷಿಯಾಗಿತ್ತು. ಮುಂದೆ ಭಾರತದಲ್ಲಿ ಬಹುದೊಡ್ಡದೆನ್ನಬಹುದಾಗ ಹೌರ ರೈಲು ನಿಲ್ದಾಣ ತಲುಪಿದೆವು.
                             
   ಅಲ್ಲಿ ನಮಗಾಗಿ ಭಾರತದಲ್ಲಿಯೇ ದೊಡ್ಡ ಹೆಸರು ಮಾಡಿರುವ ಮಾಸ್ಟರ್ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಬಿ.ಕೆ ಸಿನ್ಹ ಸರ್, ಸುಶಾಂತ ಬ್ಯಾನರ್ಜಿ, ಎಕ್ಸಲೆನ್ಸಿ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಅಮಿತಾಬ್ ಸಿಲ್ ಸರ್, ಇನ್ನೂ ಅನೇಕ ದೊಡ್ಡ ಫೋಟೊಗ್ರಫಿ ಸಾಧಕರನ್ನು ಬೇಟಿಯಾಗಿದ್ದು ನನ್ನ ಬದುಕಿನ ಬಹುದೊಡ್ಡ ಮತ್ತು ಮರೆಯಲಾಗದ ಅನುಭವ. ಅವರೆಲ್ಲರ ಜೊತೆಯಲ್ಲಿ ನಾನು ಕೂಡ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಜ್ಯೂರಿಯಾಗಿದ್ದೇನೆನ್ನುವ ವಿಚಾರ ಆ ಕ್ಷಣದಲ್ಲಿ ಸ್ವಲ್ಪ ಸಂಕೋಚ ಮತ್ತು ಮುಜುಗರವುಂಟುಮಾಡಿತ್ತು.  ಆದ್ರೆ ಸ್ವಲ್ಪ ಹೊತ್ತಿಗೆ ಅವರೆಲ್ಲರೂ ನನಗೆ ತುಂಬಾ ಆತ್ಮೀಯರಾಗಿಬಿಟ್ಟಿದ್ದರಿಂದ ಮುಜುಗರ ಮಾಯವಾಯ್ತು.  ನಮಗಾಗಿ ದುರಂತೋ ಎಕ್ಸ್‍ಪ್ರೆಸ್ ರೈಲು ದಿಘಾ ಗೆ ಹೊರಡಲು ಕಾಯುತ್ತಿತ್ತು. ನಮಗಾಗಿ ಕಾಯ್ದಿರಿಸಿದ್ದ ಸೀಟುಗಳಲ್ಲಿ ಆಸೀನರಾದೆವು. ಲೋಕಲ್ ರೈಲಿನಲ್ಲಿ ಬಂದ ನನಗೆ ಈ ರೈಲು ಸಂಫೂರ್ಣ ವಿಭಿನ್ನವೆನಿಸಿತ್ತು. ನೂರತೊಂಬತ್ತು ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಎಲ್ಲಿಯೂ ನಿಲ್ಲದೇ ಹೋಗುವ ಈ ರೈಲಿನಲ್ಲಿ ನಾವು ಕುಳಿತ ಜಾಗಕ್ಕೆ ಊಟ ತಿಂಡಿ ನೀರು ಇತ್ಯಾದಿ ಎಲ್ಲ ಸೇವೆಗಳನ್ನು ನೀಡುತ್ತಾರೆ ಈ ರೈಲಿನ ಪರಿಚಾರಕರು. ನನ್ನ ಪಕ್ಕದಲ್ಲಿ ದೇಬಸಿಸ್ ಬುನಿಯ ಕುಳಿತಿದ್ದರು. ಅವರೊಂದಿಗೆ ನಾನು ಬೆಂಗಳೂರು ಮತ್ತು ಕರ್ನಾಟಕದ ಪರಿಚಯ ಬೆಳವಣಿಗೆ, ರಾಜಕೀಯ ಹೀಗೆ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡೆ.  ಅವರು ಬಂಗಾಲ ಮತ್ತು ಕೊಲ್ಕತ್ತ ನಗರದ ಇಂದಿನ ಪರಿಸ್ಥಿತಿ ಮತ್ತು ರಾಜಕೀಯ ವ್ಯವಸ್ಥೆ ಇತ್ಯಾದಿಗಳನ್ನು ಹಂಚಿಕೊಂಡರು. ಅಷ್ಟರಲ್ಲಿ ನಮ್ಮ ರೈಲಿಗೆ ಮೂವರು ಬಂದೂಕುಧಾರಿ ಗಾರ್ಡುಗಳು ಹತ್ತಿದರು. ನಾವು ಪಯಣಿಸುವ ಪೂರ್ವ ಮಿಡ್ನಪುರ ಜಿಲ್ಲೆಯಲ್ಲಿ ನಕ್ಸಲಿಯರ ಕಾಟವಿದೆ. ಅದಕ್ಕಾಗಿ ಈ ಸೆಕ್ಯುರಿಟಿ ಎಂದರು. ಮಧ್ಯಾಹ್ನ ಎರಡುವರೆಗೆ ಗಂಟೆಗೆ ನಾವು ಸಮುದ್ರ ಕಿನಾರೆಯ ದಿಘಾ ಪಟ್ಟಣವನ್ನು ತಲುಪಿದೆವು. 

   ದಿಘಾ ಒಂದು ಸಮುದ್ರ ಕಿನಾರೆಗೆ ಅಂಟಿಕೊಂಡಿರುವ ಪಶ್ಚಿಮ ಬಂಗಾಲದ ಪೂರ್ವ ಮಿಡ್ನಪುರ್‍ ಜಿಲ್ಲೆಯ ಒಂದು ಪುಟ್ಟ ಪಟ್ಟಣ. ಮಂಗಳೂರು ಉಡುಪಿಯಂತೆ ಸಮುದ್ರ ಮತ್ತು ಬೀಚುಗಳಿದ್ದರೂ ಅವುಗಳಷ್ಟು ದೊಡ್ಡ ನಗರವಲ್ಲ...ಬಹುಷಃ ನಮ್ಮ ಕುಂದಾಪುರದಷ್ಟಿರಬಹುದು. ಮೂರು ದಿನ ದಿಘದಲ್ಲಿ ನಡೆಯುವ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯ ಪ್ರಮುಖ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಜನ ನಮಗಾಗಿ ಅಲ್ಲಿ ಕಾಯುತ್ತಿದ್ದರು. ನಮಗಾಗಿ ವ್ಯವಸ್ಥೆಯಾಗಿದ್ದ ಹೋಟಲ್ ರೂಮುಗಳಲ್ಲಿ ಸೇರ್‍ಇಕೊಂಡು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಫೋಟೊಗ್ರಫಿ ಸ್ಪರ್ಧೆಯ ಜಡ್ಜಿಂಗ್ ಪ್ರಾರಂಭವಾಗಿ ರಾತ್ರಿ ಹತ್ತು ಗಂಟೆ ಮುಗಿಯಿತು. ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ ಎರಡು ಗಂಟೆಗೆ, ನಂತರ ಲಂಚ್ ಬ್ರೇಕ್ ಹಾಗೂ ಸ್ವಲ್ಪ ವಿಶ್ರಾಂತಿ, ಮತ್ತೆ ನಾಲ್ಕು ಗಂಟೆ ಪ್ರಾರಂಭವಾಗಿ ರಾತ್ರಿ ಒಂಬತ್ತು ಗಂಟೆಗೆ...ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಒಂದು ಗಂಟೆಯವರೆಗೆ ಹೀಗೆ ಮೂರು ದಿನ ಸತತವಾಗಿ ಮೂರು ವಿಭಾಗಗಳ ಒಂಬತ್ತು ಸಾವಿರ ಫೋಟೊಗಳನ್ನು ನೋಡಿ ಅತ್ಯುತ್ತುಮವಾದವುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಂತೂ ಅದ್ಬುತವಾದ ಅನುಭವವನ್ನು ನೀಡಿತ್ತು. 

ಪೂರ್ವ ಮಿಡ್ನಪುರದಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿರುವ ಸಂತೋಷ್ ಕುಮಾರ್ ಜನ ನನ್ನಂತೆ ಮದುವೆ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಮಾಡುವಂತವರು. ತಕ್ಷಣಕ್ಕೆ ನೋಡಿದರೆ ಒಬ್ಬ ಪಕ್ಕಾ ಹಳ್ಳಿ ಹೈದನಂತೆ ಕಾಣುತ್ತಾರೆ. ಮತ್ತು ಹಾಗೆ ಸರಳವಾಗಿ ಸಹಜವಾಗಿ ಇರುವಂತವರು. ಹೀಗಿದ್ದು ಇವರು ಮಾಡಿರುವ ಫೋಟೊಗ್ರಫಿ ಸಾಧನೆ ನಿಜಕ್ಕೂ ದೊಡ್ಡದು. ದೇಶವಿದೇಶಗಳಲ್ಲಿ ಇವರ ಚಿತ್ರಗಳು ಪ್ರದರ್ಶನವಾಗಿವೆ. ಕಳೆದ ಹದಿನೈದು ವರ್ಷಗಳಿಂದ ನೂರಾರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು, ಚಿನ್ನದ ಪದಕಗಳನ್ನು ಗಳಿಸಿರುವ ಇವರು ಪೂರ್ವ ಮಿಡ್ನಪುರದಲ್ಲಿ ಒಂದು ಫೋಟೊಗ್ರಫಿ  ಕ್ಲಬ್ ಸದಸ್ಯರು. ಈ ಕ್ಲಬ್ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ರಾಷ್ಟ್ರಮಟ್ಟದ್ ಸ್ಪರ್ಧೆ ನಡೆಸುವುದು ತುಂಬಾ ಕಷ್ಟಕರವಾಗಿರುವಾಗ, ಇನ್ನೂ ಅಂತರರಾಷ್ಟ್ರೀಯ ಮಟ್ಟದ ಫೋಟೊಗ್ರಫಿ ಸ್ಪರ್ಧೆ ಅದರಲ್ಲೂ ಫೋಟೊಗ್ರಫಿ ಸರ್ಕ್ಯುಟುಗಳನ್ನು ನಡೆಸುತ್ತಾ ವಿಶ್ವದಾದ್ಯಂತ ಇರುವ ಛಾಯಾಕಲಾವಿದರ ಜೊತೆ ತಾಂತ್ರಿಕವಾಗಿ ಸಂಪರ್ಕವಿಟ್ಟುಕೊಳ್ಳುತ್ತಾ ಮುಂದುವರಿಯುವ ಇಂಥ ಸ್ಪರ್ಧೆಗಳನ್ನು ಆಯೋಜಿಸಲು ನಡೆಸಬೇಕಾದರೆ ನಿಜಕ್ಕೂ ದೊಡ್ಡ ಆತ್ಮಸ್ಥೈರ್ಯವೇ ಬೇಕು. ಅಂತ ಒಂದು ಸವಾಲಿನ ಕೆಲಸವನ್ನು ಅದ್ಬುತವಾಗಿ ನಿರ್ವಹಿಸುವ ಮೂಲಕ ಯಶಸ್ವಿಯಾಗುತ್ತಿದ್ದಾರೆ. ಇವರನ್ನೆಲ್ಲಾ ನೋಡಿದಾಗ ನಾವು ಕಲಿಯುವುದು ಇನ್ನೂ ತುಂಬಾ ಎನ್ನಿಸಿದ್ದು ಸತ್ಯ.

   ಸ್ಪರ್ಧೆಗಳ ನಡುವೆ ಕಾರ್ಯಕ್ರಮದ ಆಯೋಜಕರು ತೀರ್ಪುಗಾರರಿಗೆ ಒಂದು ಗಂಟೆ ಎರಡು ಗಂಟೆಗಳ ಕಾಲ ಬಿಡುವು ಕೊಡುತ್ತಿದ್ದರು. ಆ ಸಮಯದಲ್ಲಿ ಉಳಿದ ತೀರ್ಪುಗಾರರು ತಮ್ಮ ಏಸಿ ರೂಮಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹೋಗುತ್ತಿದ್ದರೆ ನಾನು ಮಾತ್ರ ನನ್ನ ಪುಟ್ಟ ಕ್ಯಾಮೆರವನ್ನಿಡಿದುಕೊಂಡು ಒಂದರ್ಧ ಗಂಟೆ "ದಿಘಾ" ಸುತ್ತಾಡಿಬರಲು ಹೊರಡುತ್ತಿದ್ದೆ.  ಕೊಲ್ಕತ್ತಗೆ ಮತ್ತು ಅಲ್ಲಿ ಇತರ ನಗರಗಳಿಗೆ ಹೋಲಿಸಿಕೊಂಡರೆ ಅವುಗಳಷ್ಟು ವೇಗವನ್ನು ಪಡೆದುಕೊಂಡಿಲ್ಲ ದಿಘಾ. ಒಂದು ರೀತಿಯಲ್ಲಿ ಶಾಂತವಾಗಿದೆ. ಜನಗಳೂ ಕೆಲಸ ಮತ್ತು ಇನ್ನಿತರ ಒತ್ತಡದಲ್ಲಿ ಸಿಲುಕಿ ಗಡಿಬಿಡಿಯಿಂದ ಓಡಾಡುವುದಿಲ್ಲ. ಬುದ್ದಿವಂತರಾದರೂ ಆರಾಮವಾಗಿದ್ದಾರೆ ಮತ್ತು ಇನ್ನು ಹಳ್ಳಿಯವರಾಗಿಯೇ ಇದ್ದಾರೆ. ಸಮುದ್ರದಲ್ಲಿನ ಮೀನುಗಾರಿಕೆಯಲ್ಲಿ ದಿಘಾ ಪಟ್ಟಣ ಪೂರ್ತಿ ಪಶ್ಚಿಮ ಬಂಗಾಲಕ್ಕೆ ದೊಡ್ಡದೆನಿಸುತ್ತದೆ. ಒಂದು ಕಿಲೋಮೀಟರ್ ನಡಿಗೆಯಷ್ಟು ದೊಡ್ಡದಾದ ದಿಘಾ ಮೀನು ಮಾರುಕಟ್ಟೆಯನ್ನು ನೋಡಲು ಎರಡನೇ ದಿನ ಮುಂಜಾನೆ ನಾನು ಗೆಳೆಯರೊಂದಿಗೆ ಹೋಗಿದ್ದೆ. ನೂರಾರು ತರಾವರಿ ಮೀನುಗಳು, ಏಡಿಗಳು, ಹಾವುಮೀನುಗಳು..ಹೀಗೆ ಒಂದೇ ಎರಡೇ ಎಲ್ಲವನ್ನು ಆಗತಾನೆ ಹಿಡಿದು ಪ್ರೆಶ್ ಆಗಿ ಮಾರಾಟ ಮಾಡುತ್ತಿದ್ದರು. ದೊಡ್ದ ದೊಡ್ಡ ಗಾತ್ರದ ಬಣ್ಣ ಬಣ್ಣದ ಸಮುದ್ರ ಸೀಗಡಿಗಳನ್ನು ನಮ್ಮ ಬೆಂಗಳೂರಿನ ಮಾಲ್‍ಗಳು ಮತ್ತು ಮೆಟ್ರೋಗಳಲ್ಲಿ ಮಾತ್ರ ನೋಡಿ, ಒಂದು ಕೇಜಿಗೆ ಆರುನೂರು, ಎಂಟುನೂರು, ಒಂದುವರೆಸಾವಿರ ರೂಪಾಯಿಗಳ ಬೆಲೆ ಕೇಳಿ ಬೆಚ್ಚಿ ಬೆರಗಾಗಿದ್ದ ನಾನು  , ನಮ್ಮ ಯಶವಂತಪುರ ಮೀನು ಮಾರುಕಟ್ಟೆಯಂತೆ ರಸ್ತೆಬದಿಯಲ್ಲಿ ಇವುಗಳನ್ನೆಲ್ಲ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ನೋಡುವ ಅವಕಾಶ ನಮ್ಮ ಕಾರ್ಯಕ್ರಮದ ಆಯೋಜಕರಿಂದಾಗಿ ಸಿಕ್ಕಿತ್ತು.  ಪಶ್ಚಿಮ ಬಂಗಾಲದಲ್ಲಿಯೇ ಪ್ರಸಿದ್ಧವೆನಿಸುವ ಮತ್ತು ದುಬಾರಿ ಬೆಲೆಯ "ಇಲಿಶಾ" ಮೀನಿನ್ನು ರುಚಿ ನೋಡುವ ಅವಕಾಶ ಸಿಕ್ಕಿತ್ತು.  ನಮ್ಮ ಪಾಂಪ್ಲೆಟ್ ಮೀನಿನಂತೆ ಬಾಯಲ್ಲಿಟ್ಟರೇ ಹಾಗೆ ಕರಗುವ "ಇಲಿಷಾ" ಪಶ್ಚಿಮ ಬಂಗಾಲದ ಒಂದು ಅದ್ಬುತವಾದ ಡಿಷ್.
        

ದಿಘಾದಲ್ಲಿ ಕೊಲ್ಕತ್ತ ಮತ್ತು ಇತರ ನಗರಗಳಂತೆ ಅಲ್ಲಿ ಸೈಕಲ್ ರಿಕ್ಷಾಗಳಿಲ್ಲ. ಅದರ ಬದಲಾಗಿ ಅದಕ್ಕಿಂತ ಸ್ವಲ್ಪ ದೊಡ್ಡದಾದ ಪುಟ್ಟ ಇಂಜಿನ್ ಮೋಟರ್ ಅಳವಡಿಸಿದ ನಮ್ಮ ಮೋಟರ್ ಬೈಕಿನ ಟೈರುಗಳನ್ನು ಆಳವಡಿಸಿದ ಮೂರು ಚಕ್ರದ ವಾಹನಗಳೂ ಚಲಿಸುತ್ತಿರುತ್ತವೆ. ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು, ಲಗ್ಗೇಜು ಸಾಗಿಸಲು ಎರಡಕ್ಕೂ ಇದೊಂದೇ ವಾಹನ. ಇದರಲ್ಲಿ ಕುಳಿತ ಪ್ರಯಾಣಿಕರನ್ನು ನೋಡಿದಾಗ ನಮ್ಮಲ್ಲಿ ಹಳ್ಳಿ ಮತ್ತು ಇತರ ಪಟ್ಟಣಗಳಲ್ಲಿ ಓಡಾಡುವ ಟಂಟಂನ ಸೊಂಟದ ಮೇಲ್ಬಾಗವನ್ನು ತೆಗೆದುಬಿಟ್ಟರೆ ಹೇಗೆ ಕಾಣುತ್ತದೋ ಹಾಗೆ ಇದು ಕಾಣುತ್ತದೆ.

ಮುಂದುವರಿಯುತ್ತದೆ....

ಚಿತ್ರಗಳು ಮತ್ತು ಲೇಖನ:
ಶಿವು.ಕೆ