Friday, March 23, 2012

ತರಂಗ ಉಗಾದಿ ವಿಶೇಷಾಂಕದಲ್ಲಿ ನನ್ನ ಹೊಸ ಫೋಟೊಗಳು.


                ಈ ಚಿತ್ರದಲ್ಲಿರುವವರು ನನ್ನ ಅಕ್ಕನ ಮಕ್ಕಳಾದ ಚೇತನ ಮತ್ತು ವರ್ಷಿಣಿ. ಕಳೆದ ವರ್ಷ  ಇದೇ ಸರಣಿಯ ಚಿತ್ರಗಳನ್ನು ಕ್ಲಿಕ್ಕಿಸುವ ಸಮಯದಲ್ಲಿ ಕೈಕಾಲುಗಳಿಗೆ ಒಂದಿಂಚು ಉದ್ದವಿರುವ ಹತ್ತಾರು ಈಚಲ ಮರದ ಚುಚ್ಚಿಸಿಕೊಂಡಿದ್ದೆ.  ಒಂದು ಮುಳ್ಳಂತೂ ಹದಿನೈದು ದಿನ ನನ್ನ ಕಾಲಿನಲ್ಲೇ ಇದ್ದು ಸಕ್ಕತ್ ನೋವು ಕೊಟ್ಟಿತ್ತು.  ಅದೆಲ್ಲದರ ಪ್ರತಿಫಲ ಇವತ್ತು ಸಿಕ್ಕಿದೆ. ಇವತ್ತು ಮಾರುಕಟ್ಟೆಗೆ ಬಂದ  ಈ ಕೆಳಗಿನ ಚಿತ್ರವೂ ತರಂಗ ಉಗಾದಿ ವಿಶೇಷಾಂಕದಲ್ಲಿ ಸಂಧ್ಯಾ ಪೈರವರ ಸಂಪಾದಕೀಯ ಬರಹದ ಜೊತೆಗೆ ಪ್ರಕಟವಾಗಿದೆ.[ಪುಟ 20]

   
      ಇಲ್ಲಿರುವ ಎರಡು ಚಿತ್ರಗಳು ಕೂಡ ತರಂಗ ಉಗಾದಿ ವಿಶೇಷಾಂಕದೊಳಗೆ ವೀಣಾ ಬನ್ನಂಜೆಯವರ "ಏನು ಹೊಸತೆಂದರೆ..." ಕವನದ ಜೊತೆ  ಪ್ರಕಟವಾಗಿವೆ. [ಪುಟ 25 ಮತ್ತು 26]
   
            ಇದಲ್ಲದೇ ನನ್ನದೇ ಒಂದು ಪುಟ್ಟ ಕತೆ "ಕಣ್ಣಿಲ್ಲದವರು" ಕೂಡ ಪ್ರಕಟವಾಗಿದೆ. ಅದನ್ನು ನೀವು ಓದಿ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.
    
         ಹುಟ್ಟು ಕುರುಡನಾದ ವಾಜಿದ್ ಕೈಯನ್ನು ಹಿಡಿದು ಪೋಲಿಯೋ ಪೀಡಿತಳಾದ ಫಾತಿಮ ರೈಲು ನಿಲ್ದಾಣದಲ್ಲಿ  ನೂರಾರು ಜನರ ನಡುವೆ ನಿಂತಿದ್ದರು.  ರೈಲು ಬಂದು ನಿಲ್ಲುತ್ತಿದ್ದಂತೆ ನೂರಾರು ಜನರು ಹತ್ತಿದರು. ಅಷ್ಟೇ ಜನ ಪ್ರಯಾಣಿಕರು ಇಳಿದರು. ಅವರೆಲ್ಲರ ನಡುವೆಯೇ ಫಾತಿಮಾಲ ಸಹಾಯದಿಂದ ವಾಜಿದ್ ಕೂಡ ರೈಲು ಹತ್ತಿಕೊಂಡ. ರೈಲು ಹೊಅಟಿತು. ಪ್ರಯಾಣಿಕರು ತಮ್ಮದೇ ಕೈಂಕರ್ಯದಲ್ಲಿ ತೊಡಗಿಕೊಂಡರು. ಒಬ್ಬ ಪುಸ್ತಕವನ್ನು ತೆಗೆದುಕೊಂಡರೆ, ಎದುರಿಗಿದ್ದವ ತನ್ನ ಜೇಬಿನಲ್ಲಿ  ಮೊಬೈಲ್ ಫೋನಿನ ಇಯರ್ ಫೋನನ್ನು ಕಿವಿಗೆ ಹನಿಸಿ ತನಗಿಷ್ಟವಾದ ಸಿನಿಮಾ ಹಾಡುಗಳನ್ನು ಕೇಳತೊಡಗಿದ್ದ. ಅವನ ಹಿಂದಿನ ಸೀಟಿನ ಹುಡುಗಿಯರಿಗೆ ತಮ್ಮ ಕಾಲೇಜಿನ ಹುಡುಗರ ಪೆಕರಾಟಗಳೇ ಅವರ ಚರ್ಚೆಯ ವಸ್ತು. ಕಿಟಕಿಯ ಬಳಿ ಸ್ಕೂಲ್ ಮಾಸ್ತರ್ ಚಲಿಸುವ ಹೊರಜಗತ್ತನ್ನು ಸುಮ್ಮನೇ ನೋಡುತ್ತಿದ್ದರು.


       "ಈ ದೇಹದಿಂದ ದೂರನಾದೆ ಏಕೆ ಆತ್ಮನೇ.... ಸುಶ್ರಾವ್ಯವಾದ ಹಾಡು ತೇಲಿ ಬಂದು ತಕ್ಷಣ ರೈಲು ಬೋಗಿಯಲ್ಲಿದ್ದವರೆಲ್ಲರ ಗಮನ ಅತ್ತ ಕಡೆಗೆ ಹರಿಯಿತು. ತನ್ನ ಕೈಗಳಲ್ಲಿ ಎರಡು ಮರದ ಚಪ್ಪಟೆ ತುಂಡುಗಳಿಂದ ತಾಳವನ್ನು ಹಾಕುತ್ತಾ ಈ ಹಾಡು ಹೇಳುತ್ತಿದ್ದವನು ಕಣ್ಣಿಲ್ಲದ ವಾಜಿದ್.


       ಎರಡು ನಿಮಿಷ ಎಲ್ಲರೂ ತನ್ಮಯರಾಗಿ ಹಾಡು ಕೇಳಿದರು. ಹಾಡು ಮುಗಿಯುತ್ತಿದ್ದಂತೆ ಅವನೊಂದಿಗಿದ್ದ ಫಾತಿಮಾ ತನ್ನ ಕಾಲೆಳೆದುಕೊಂಡು, "ಅಮ್ಮ ತಾಯಿ ಕಣ್ಣಿಲ್ಲ. ಕಾಲಿಲ್ಲ ದಾನ ಧರ್ಮ ಮಾಡಿ" ಅಂತ ಕೈಯೊಡ್ಡಿದಳು. ಹಾಡು ಕೇಳಿ ಕೆಲವು ಮಕ್ಕಳು ಮತ್ತು ಮಕ್ಕಳ ಮನಸ್ಸಿನವರು ಪ್ರೀತಿಯಿಂದ,, ಇನ್ನೂ ಕೆಲ ದೊಡ್ಡಮನಸ್ಸಿನವರು ಕರುಣೆಯಿಂದ, ತಮ್ಮ ಗಂಭೀರ ಚರ್ಚೆಗೆ ತೊಂದರೆಯಾಯಿತೆಂದು ಬೇಸರದಿಂದ ಕೆಲವರು ಪುಡಿಗಾಸು ಹಾಕಿದರೆ, ಇನ್ನೂ ಕೆಲವರು ಹಾಕಬೇಕೆಂದು ಕೈಯನ್ನು ಜೇಬಿಗಿಳಿಸಿ ಮುಂದಿನ ನಿಲ್ದಾಣದಲ್ಲಿ ಸಿಗರೇಟಿಗೆ ಬೇಕಾಗುತ್ತದೆ ಅಂತ ಸುಮ್ಮನಾದರು....ಬರಿಗೈ ಹೊರತೆಗೆದರೆ ಕೈಗೆ ನಾಜಿಕೆಯಾಗುತ್ತದೆಯೆಂದು ಕೈಯನ್ನು ಜೇಬಿನಲ್ಲೇ ಬಿಟ್ಟರು.

      ನಿಮಗೆಲ್ಲರಿಗೂ ನಂದನ ನಾಮ ಸಂವತ್ಸರ ಸುಖ ಸಮೃದ್ಧಿ ಕರುಣಿಸಲಿ ಎಂದು ಹಾರೈಸುತ್ತ ಬ್ಲಾಗ್ ಗೆಳೆಯರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು.
           
ಚಿತ್ರಗಳು ಮತ್ತು ಲೇಖನ:
ಶಿವು.ಕೆ

      
   

Sunday, March 18, 2012

"ನನ್ನ ಮನೆ ಅದು, ಅಲ್ಲಿ ನನಗೆ ಭಯವಿಲ್ಲ"


       ಮನುಷ್ಯರಲ್ಲಿ ಭಾವನಾತ್ಮಕ ಸಂಭಂದಗಳು ಹುಟ್ಟಿಕೊಂಡ ಮರುದಿನವೇ ಈ ಕಾನೂನು ಅನ್ನುವುದು ಹುಟ್ಟಿಕೊಂಡಿರಬೇಕು.  ಏಕೆಂದರೆ ಅನಾದಿ ಕಾಲದಿಂದಲೂ ಮಾನವನ ಭಾವನೆಗಳು, ಅದರಿಂದ ಸೃಷ್ಟಿಯಾದ ಸಂಭಂದಗಳಿಂದಾಗಿ ಆತ ಬದುಕಿನಲ್ಲಿ ಸುಖ ನೆಮ್ಮದಿಯನ್ನು ಅನುಭವಿಸುತ್ತಿರುವಾಗಲೇ ಮತ್ತೊಂದು ದಿಕ್ಕಿನಲ್ಲಿ ದ್ವೇಷ ಅಸೂಯೆ ಇತ್ಯಾದಿ ಕೆಟ್ಟಗುಣಗಳೂ ಕೂಡ ಹುಟ್ಟಿಕೊಂಡವು.  ಮುಂದೆ ಈ ಕೆಟ್ಟ ಗುಣಗಳು ಹೆಚ್ಚಾದಾಗ ಅದನ್ನು ನಿಯಂತ್ರಿಸಲು ಕಾನೂನು ಅಂತ ಮಾನವ ಸೃಷ್ಟಿಸಿಕೊಂಡ.  ಇದು ಒಂಥರ ಮನುಷ್ಯನ ಏಳಿಗೆಗಾಗಿ ಮಾಡಿಕೊಂಡ ಒಂದು ಹೊಸ ವ್ಯವಸ್ಥೆ. ಇದು ಅನಾದಿ ಕಾಲದಿಂದಲೂ ಅದರದೇ ಆದ ರೂಪದಲ್ಲಿ ಚೌಕಟ್ಟಿನಲ್ಲಿ ಆಗಿನಿಂದ ಈಗಿನವರೆಗೆ ನಮಗೆ ಚಾಲ್ತಿಯಲ್ಲಿದೆ. ಆದರೆ ಮನುಷ್ಯನ ಸಂಭಂಧಗಳಲ್ಲಿ ಭಾವನೆಗಳು ಮಾತ್ರ ಸಾವಿರಾರು ವರ್ಷಗಳು ಕಳೆದರೂ ಮೂಲ ಅರ್ಥವನ್ನು ಮತ್ತು ಅದರ ಸಂತೋಷವನ್ನು ಕಳೆದುಕೊಳ್ಳದೇ ಇಂದಿನವರೆಗೂ ಮನಸ್ಸುಗಳಲ್ಲಿ ಹರಿದಾಡುತ್ತಿವೆ.
         
       ನಾವು ಬದುಕಲು ಮಾಡಿಕೊಂಡಿರುವ ಕಾನೂನಿಗೂ ಮನುಷ್ಯನ ಭಾವನಾತ್ಮಕ ಸಂಭಂದಗಳಿಗೂ ಆಗಾಗ ಯುದ್ಧ ನಡೆಯುತ್ತಿರುತ್ತದೆ.  ಸಾವಿರಾರು ವರ್ಷಗಳ ಹಿಂದಿನ ಕಾಡು, ಗುಡ್ಡಗಾಡಿನ ಜನಾಂಗ ನಂತರ ರಾಜರ ಆಡಳಿತ, ಆನಂತರ ಬಂದ ಪ್ರಜಾಪ್ರಭುತ್ವದ ಈ ದೀರ್ಘ ಅವಧಿಯಲ್ಲಿ ಕಾನೂನು ನೂರಾರು ರೂಪಗಳನ್ನು ಪಡೆದುಕೊಂಡಿದೆ.  ಭಾವನಾತ್ಮಕ ವಿಚಾರಗಳು ಅದೆಷ್ಟೇ ಗಾಢವಾದ ಪರಿಣಾಮವನ್ನು ಬೀರುತ್ತಿದ್ದರೂ ಅಂತ್ಯದಲ್ಲಿ ಕಾನೂನೇ ಗೆಲ್ಲುವುದು ತಾನೆ.  ಇದನ್ನು ನಾವು ಆಗಿನ ಕಾಲದಿಂದಲೂ ನೋಡುತ್ತಾ ಬಂದಿದ್ದೇವೆ.  ಗಂಡ ಹೆಂಡತಿ ನಡುವೆ, ಅಪ್ಪ-ಮಕ್ಕಳು, ಪ್ರಜೆಗಳು-ರಾಜ, ಸರ್ಕಾರ-ಪ್ರಜೆಗಳು ಹೀಗೆ ಅವಲೋಕಿಸಿದಾಗ ಎಲ್ಲಾ ಸಮಯದಲ್ಲೂ ಕಾನೂನು ಗೆಲ್ಲುವುದು ಮತ್ತು ಗೆಲ್ಲಬೇಕೆಂದು ನಾವು ನೀವು ಆಶಿಸುತ್ತೇವೆ ಅಲ್ವಾ...ಆದರೂ ಇದನ್ನು ಮೀರಿ ಕೆಲವು ವಿಭಿನ್ನ ಸಂಧರ್ಭದಲ್ಲಿ ಕಾನೂನನ್ನು ಮೀರಿ ಭಾವನಾತ್ಮಕ ಸಂಭಂಧಗಳು ಹೇಗೆ ಗೆಲುವು ಸಾಧಿಸುತ್ತವೆ ಎನ್ನುವುದನ್ನು ಒಂದು ಸಿನಿಮಾದಲ್ಲಿ ಸೊಗಸಾಗಿ ತೋರಿಸಿದ್ದಾರೆ.  ಅದು "The Terminal"  ಎನ್ನುವ ಆಂಗ್ಲ ಸಿನಿಮ.
      
      ಈ ಸಿನಿಮವನ್ನು ನೋಡಿದ ಮೇಲೆ ಇಂಥ ಅದ್ಬುತವಾದ ಸಿನಿಮವನ್ನು ನಿರ್ಧೇಶಿಸಿದವರಾರು ಅಂತ ನೋಡಿದರೆ ಅದು ಮತ್ಯಾರು ಅಲ್ಲ. ನನ್ನ ಮೆಚ್ಚಿನ ಸ್ಫಿಫನ್ ಸ್ಫಿಲ್‍ಬರ್ಗ್.  ಆತನ ಕಪ್ಪುಬಿಳುಪಿನ "ಸಿಂಡ್ಲರ್ ಲಿಸ್ಟ್" ಸಿನಿಮವನ್ನು ನೋಡಿದಾಗಲೇ ಅತನ ಅಭಿಮಾನಿಯಾಗಿಬಿಟ್ಟಿದ್ದೆ. ನಡುವೆ ಜುರೇಸಿಕ್ ಪಾರ್ಕ್ ಕಮರ್ಸಿಯಲ್ ಸಿನಿಮ ಸರಣಿಯನ್ನು ನೋಡಿದಾಗ ಈತ ಎಲ್ಲ ವಿಧದ ಸಿನಿಮಾಗಳನ್ನು ತನ್ನ ನಿರ್ಧೇಶನದ ಸೂಕ್ಷ್ಮತೆಯನ್ನು ತೋರಿಸುವ ಕುಶಲತೆಯನ್ನು ಹೊಂದಿದ್ದಾನೆ ಅಂತ ಅವನ ಸಿನಿಮಾಗಳಿಗಾಗಿ ಕಾಯುತ್ತಿರುತ್ತೇನೆ. ಈಗ ಆತ ನಿರ್ಧೇಶಿಸಿದ ಟರ್ಮಿನಲ್ ಸಿನಿಮವನ್ನು ಒಮ್ಮೆ ಅವಲೋಕಿಸೋಣ.

     ಈ ಚಿತ್ರದ ನಾಯಕ ವಿಕ್ಟರ್ ನವ್ರೋಸ್ಕಿ ತನ್ನ ಪುಟ್ಟ ದೇಶವಾದ ಕ್ರಕೋಜಿಯ ದಿಂದ ನ್ಯೂಯಾರ್ಕಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ JFKನಲ್ಲಿ ಇಳಿಯುತ್ತಾನೆ. ಅವನಿಗೆ ಆಂಗ್ಲ ಭಾಷೆ ಬರುವುದಿಲ್ಲ. ಆದ್ರೆ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಾನೆ. ಅವನ ಪಾಸ್ ಫೋರ್ಟ್, ಇಮಿಗ್ರೇಷನ್ ಚೆಕ್ ಮಾಡುವ ಹೊತ್ತಿಗೆ ಅವನ ದೇಶದಲ್ಲಿ ಕ್ರಾಂತಿಯುಂಟಾಗಿ ಅಲ್ಲಿ ಸರ್ಕಾರವೇ ಇಲ್ಲದಂತಾಗಿರುವುದು ವಿಮಾನ ನಿಲ್ದಾಣದ ಟರ್ಮಿನಲ್‍ಗಳಲ್ಲಿ ಇರುವ ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿಬರುತ್ತಿರುತ್ತದೆ. ಈ ಅಂತರರಾಷ್ಟ್ರೀಯ ನಿಲ್ದಾಣದ ಟರ್ಮಿನಲ್ ಅಧಿಕಾರಿಯಾದ ಡಿಕ್ಸನ್ ದಕ್ಷ ಕಾನೂನು ಪಾಲಕ. ಆತನ ಕೈಗೆ ಸಿಕ್ಕಮೇಲೆ ಇವನ ಕತೆ ಮುಗೀತು. "You are the citizen of nowhere" ಅಂತ ಅವನ ಪಾಸ್ ಪೋರ್ಟ್ ಕಿತ್ತುಕೊಂಡು ಅತ್ತ ಅವನ ದೇಶವಾದ ಕ್ರಕೋಜಿಯಾಗೂ ಕಳಿಸದೆ, ಇತ್ತ ಅಮೇರಿಕಾಕ್ಕೂ ಬಿಡದೇ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ಇರುವಂತೆ ಹೇಳಿ ಅವನಿಗೆ ಊಟದ ಕೂಪನ್ ಮತ್ತು ಅವನು ಇರುವ ಸ್ಥಳವಾದ ಗೇಟ್ ನಂಬರ್ ೬೭ ತಿಳಿಸಿ ಅವನನ್ನು ಸಿಸಿ ಕ್ಯಾಮೆರ ಮೂಲಕ ಗಮನಿಸಲಾರಂಭಿಸುತ್ತಾರೆ. ಅಲ್ಲಿಂದ ಮುಂದಕ್ಕೆ ನಡೆಯುವ ಕತೆಯೇ ನಿಮ್ಮ ಕುತೂಹಲ ಕೆರಳಿಸುತ್ತದೆ, ನೀವು ಅದೇ ಟರ್ಮಿನಲ್‍ನೊಳಗೆ ಒಬ್ಬರಾಗಿ ಈ ಕಥಾನಾಯಕನ ಚಲನವಲನವನ್ನು ಮೈಮರೆತು ವೀಕ್ಷಿಸುತ್ತೀರಿ. ಎಷ್ಟರಮಟ್ಟಿಗೆ ಎಂದರೆ ಚಿತ್ರ ಮುಗಿಯುವವರೆಗೂ.


 ವಿಕ್ಟರ್ ನವ್ರೋಸ್ಕಿ ಪಡೆದುಕೊಂಡ ಊಟದ ಕೂಪನ್ನುಗಳನ್ನು ಅಲ್ಲಿ ಕುಳಿತುಕೊಳ್ಳುವ ಕುರ್ಚಿಯ ಮೇಲಿಟ್ಟು ಪಕ್ಕದಲ್ಲಿರುವ ಹುಡುಗಿಗೆ ಸಹಾಯ ಮಾಡುವಾಗಿನ ಸಮಯದಲ್ಲಿ ಮಾಡಿಕೊಳ್ಳುವ ಎಡವಟ್ಟಿನಿಂದ ಆತನ ಒಳ್ಳೆಯತನ ಮತ್ತು ಮುಗ್ದತೆ ನಿಮ್ಮೊಳಗೆ ಆವರಿಸಿಕೊಳ್ಳುತ್ತದೆ. ಊಟದ್ ಕೂಪನ್ನುಗಳು ಹಾರಿಹೋಗಿ ಕಸದ ಕಣ್ಣೆದುರಿಗೆ ಕಸದ ಬುಟ್ಟಿಗೆ ಸೇರಿ ಅದನ್ನು ವಾಪಸ್ಸು ಪಡೆದುಕೊಳ್ಳಲು ಕೇಳಿದರೆ ಅಲ್ಲಿ ಕಸಗುಡಿಸುವ "ನಿಮ್ಮಲ್ಲಿ ಅಪಾಯಿಂಟ್‍ಮೆಂಟ್ ಇದೆಯೇ" ಎನ್ನುತ್ತಾನೆ ಭಾಷೆಯ ತೊಂದರೆಯಿಂದಾಗಿ ಊಟದ ಕೂಪನ್ನುಗಳನ್ನು ಕಳೆದುಕೊಳ್ಳುವ ನವ್ರೋಸ್ಕಿ ಹಾಗೆ ಉಪವಾಸ ಬೀಳುತ್ತಾನೆ. ರಾತ್ರಿ ಅಲ್ಲಿ ಮಲಗಲು ಅಲ್ಲಿರುವ ಚೇರುಗಳನ್ನು ಎಳೆದುಕೊಳ್ಳುವಾಗ್ ಅವು ಸರಿಯಿಲ್ಲದಿರುವುದು ಗೊತ್ತಾಗಿ ಅವುಗಳ ರಿಪೇರಿ ಮಾಡುತ್ತಾನೆ. ಎಲ್ಲೆಲ್ಲೋ ಇರುವ ಚೇರುಗಳನ್ನು ಒಟ್ಟುಮಾಡಿ ಅದರಿಂದ ಬರುವ ಚಿಲ್ಲರೆ ಹಣದಿಂದ ಪುಟ್ಟ ಬರ್ಗರ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಇದು ಮುಖ್ಯ ಅಧಿಕಾರಿಯ ಕಣ್ಣಿಗೆ ಬಿದ್ದು ಆ ಕೆಲಸಕ್ಕೆ ಮತ್ತೊಬ್ಬನನ್ನು ನೇಮಿಸಿ ಇವನನ್ನು ಮತ್ತಷ್ಟು ಪರೀಕ್ಷೆಗೆ ಒಡ್ಡಿ ಅವನ ಹೊಟ್ಟೆಗೆ ಕಲ್ಲು ಹಾಕುತ್ತಾರೆ. ಮನುಷ್ಯನಿಗೆ ಬುದ್ದಿಗಿಂತ ಹೃದಯವಂತಿಕೆ  ಮತ್ತು ಡೌನ್ ಟು ಅರ್ಥ್ ನಂತ ಸರಳತೆ ಇದ್ದರೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೆ ಬದುಕಬಹುದು ಎನ್ನುವುದಕ್ಕೆ ಪಕ್ಕಾ ಉದಾಹರಣೆಯಾಗಿರುವ ನಾಯಕ ಅಂತ ಕಷ್ಟಕರ ಪರಿಸ್ಥಿತಿಯಲ್ಲೂ ತನ್ನ ಮುಗ್ದತೆಯಿಂದ ಅಲ್ಲಿಯೇ ಖುಷಿಯಿಂದ ಇರುತ್ತಾನೆ. ಮುಂದಿನ ರಾತ್ರಿ ಅವನು ಮಲಗುವಾಗ ಅಲ್ಲಿನ ಗೋಡೆ ಸರಿಯಿಲ್ಲದಿರುವುದನ್ನು ನೋಡಿ ಅದನ್ನು ರಾತ್ರೋ ರಾತ್ರಿ ಸರಿ ಮಾಡುತ್ತಾನೆ.  ಆಗ ಗೊತ್ತಾಗುತ್ತದೆ ಅವನೊಬ್ಬ ಕಂಟ್ರಾಕ್ಟರ್. ಆದ್ರೆ ಆತ ಕಾರ್ಪೆಂಟರಿ ಕೆಲಸ ಮಾಡಬಲ್ಲ, ಪೇಯಿಂಟಿಂಗ್ ಮಾಡಬಲ್ಲ, ವಿಭಿನ್ನವಾದ ಅಲೋಚನೆಯಲ್ಲಿ ಗೋಡೆಗೆ ಸುಂದರವಾದ ವಿನ್ಯಾಸವನ್ನು ಕೊಡಬಲ್ಲ ಸಕಲ ವಿಧ್ಯಾ ಪಾರಂಗತನಾಗಿರುತ್ತಾನೆ. ಅದರಿಂದಾಗಿ ಹಾಳಾದ ಒಂದು ರೂಮಿನ ಗೋಡೆಯನ್ನು ರಾತ್ರೋ ರಾತ್ರಿ ಕಾರ್ಪೆಂಟರಿ ಕೆಲಸ ಮಾಡಿ ಸುಂದರವಾದ ಪೇಂಟ್ ಮಾಡಿ ಇಟ್ಟಿರುತ್ತಾನೆ.  ಕೈಯಲ್ಲಿ ಕೆಲಸವಿದ್ದಲ್ಲಿ ದೇವರು ಹುಲ್ಲು ಮೇಯಿಸುತಾನ" ಎನ್ನುವಂತೆ ಅವನನ್ನು ಅದೇ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ.

     ಅಲ್ಲಿಂದ ಮುಂದಕ್ಕೆ ಚಿತ್ರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇಮಿಗ್ರೇಷನ್ ಅಧಿಕಾರಿಣಿಗೂ ಮತ್ತು ಆಡುಗೆ ಕೆಲಸ ಮಾಡುವ ಹುಡುಗನಿಗೂ ಪ್ರೇಮದ ಸೇತುವೆಯಾಗಿ ಅವರಿಬ್ಬರ ಮದುವೆಯಾಗುತ್ತದೆ. ಸದಾ ಇವನನ್ನು ಸಂಶಯಿಸುವ ಗುಪ್ತಾ ಎನ್ನುವ ಭಾರತೀಯ ಮುದುಕ ಇವನಿಗೆ ತುಂಬಾ ಅತ್ಮೀಯನಾಗುತ್ತಾನೆ. ವಿಮಾನ ಸೇವಕಿಯೊಬ್ಬಳ ಅನಿರೀಕ್ಷಿತ ಪರಿಚಯದಿಂದಾಗಿ ಅವಳೊಂದಿಗೆ ಪರಿಶುದ್ಧ ಪ್ರೇಮ, ಹೀಗೆ ಸಿನಿಮಾ ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವವರೆಲ್ಲರೂ ಇವನನ್ನು ಅತ್ಯುತ್ತಮ ಗೆಳೆಯರನ್ನಾಗಿ ಮಾಡಿಕೊಳ್ಳುತ್ತಾರೆ, ಅವರೆಲ್ಲರಿಗೂ ಈತ ಮರೆಯಲಾಗದ ಆತ್ಮಿಯ ಬಂಧುವಾಗಿಬಿಡುತ್ತಾನೆ.  ಅನೇಕ ಬಾರಿ ಇವನನ್ನು ದಾರಿ ತಪ್ಪಿ ತಪ್ಪು ಮಾಡುವಂತೆ ಮಾಡಿ ತಪ್ಪಿತಸ್ಥನಾಗಿ ಅಪರಾಧಿಯನ್ನಾಗಿಸಲು ಪ್ರಯತ್ನಿಸುವ ಮುಖ್ಯ ಅಧಿಕಾರಿಯ ಪ್ರಯತ್ನಗಳೆಲ್ಲ ಇವನ ಒಳ್ಳೆಯತನ ಮತ್ತು ಮುಗ್ದತೆಯಿಂದ ವಿಫಲವಾಗುವುದನ್ನು ನೀವು ಸಿನಿಮಾ ನೋಡಿ ಆನಂದಿಸುವಾಗಲೇ ನಿಮ್ಮ ಕಣ್ಣಂಚಲ್ಲಿ ನಿಮಗೆ ಗೊತ್ತಿಲದೇ ಹನಿ ಇಣುಕಿರುತ್ತದೆ. ಪೂರ್ತಿ ಸಿನಿಮಾ ಕತೆಯನ್ನು ಹೇಳಿದರೆ ನಿಮಗೆ ಸಿನಿಮಾ ನೋಡುವ ಥ್ರಿಲ್ ಮತ್ತು ಅದಕ್ಕಿಂತ ನೋಡುತ್ತಾ ಸಿಗುವ ಒಂದು ಅಪ್ಯಾಯತೆ ನಿಮ್ಮೊಳಗೆ ಉಂಟಾಗುವಂತದ್ದನ್ನು ನೀವೇ ಅನುಭವಿಸಬೇಕು!

        

  ಕೊನೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಕತೆ ನಿಮ್ಮನ್ನು ಅವರಿಸಿಕೊಳ್ಳುತ್ತದೆ.  ತನ್ನ ಆತ್ಮೀಯ ಪ್ರೇಮದ ಗೆಳತಿಯಲ್ಲಿ ಇಲ್ಲಿಗೆ ಬರಬೇಕಾದ ಸನ್ನಿವೇಶವನ್ನು ವಿವರಿಸುತ್ತಾನೆ. ಆತನ ತಂದೆ ಜಾಜ್ ಸಂಗೀತದ ಅಭಿಮಾನಿ. ೧೯೫೮ರಲ್ಲಿ ಪತ್ರಿಕೆಯಲ್ಲಿ ಬಂದ ಐವತ್ತೇಳು ಜನರ ಒಂದು ಫೋಟೋ ನೋಡಿ ಅವರೆಲ್ಲರಿಗೂ ಪತ್ರ ಬರೆದು ಅವರ ಆಟೋಗ್ರಾಫ್ ಸಹಿತ ಪಡೆದ ಪತ್ರವನ್ನು ಪೋಸ್ಟ್ ಪಡೆದುಕೊಂಡಿರುತ್ತಾರೆ ಒಬ್ಬರನ್ನು ಬಿಟ್ಟು. ಸಾಕ್ಸಫೋನ್ ದಂತಕತೆಯಾಗಿರುವ ಬೆನ್ನಿ ಗೋಲ್ಸನ್ ಎನ್ನುವ ಕಲಾವಿದನ ಆಟೋಗ್ರಾಪ್ ಪಡೆಯುವ ವೇಳೆಗೆ ಆತನ ತಂದೆ ಸತ್ತುಹೋಗುತ್ತಾನೆ. ಸಾಯುವ ಸಮಯದಲ್ಲಿ ಆತನ ತಂದೆ ಈ ವಿಚಾರವನ್ನು ನೀನು ಸಾಧ್ಯವಾದರೆ ಆವರ ಆಟೋಗ್ರಾಫ್ ಪಡೆದುಕೊ ಅಂತ ಹೇಳಿದಾಗ ನಮ್ಮ ನಾಯಕ ನವ್ರೋಸ್ಕಿ ಖಂಡಿತ ಪಡೆದುಕೊಳ್ಳುತ್ತೇನೆ ಅಂತ ಅಪ್ಪನಿಗೆ ಮಾತುಕೊಟ್ಟಿರುತ್ತಾನೆ. ಬೆನ್ನಿ ಗೋಲ್ಸನ್ ನ್ಯೂಯಾರ್ಕ ನಗರದಲ್ಲಿರುವುದು ತಿಳಿದು ಆತ ತನ್ನ ಕ್ರಕೋಜಿಯ ದೇಶದಿಂದ ಅಮೇರಿಕಾದ ನ್ಯೂಯಾರ್ಕ ವಿಮಾನ ನಿಲ್ದಾಣದಲ್ಲಿ ಇಳಿದ ಮೇಲೆ ಇದೆಲ್ಲ ಆಗಿಬಿಟ್ಟಿರುತ್ತದೆ. ಆತನ ಕತೆಯನ್ನು ಕೇಳಿದ ಇವನ ಗೆಳತಿ ಅವನಿಗಾಗಿ ಒಂದುದಿನದ ನ್ಯೂಯಾರ್ಕ್ ಪ್ರವಾಸವನ್ನು ವ್ಯವಸ್ಥೆಗೊಳಿಸುತ್ತಾಳೆ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿ ಸುಖಾಂತ್ಯವಾಯಿತು ಎನ್ನುವಷ್ಟರಲ್ಲಿ ಮತ್ತೆ ಕಾನೂನು ತೊಡಕು.  ಅಷ್ಟರಲ್ಲಿ ಅವನ ದೇಶ ಕ್ರಾಂತಿಯಿಂದ ಮುಕ್ತವಾಗಿರುತ್ತದೆ. ವಾಪಸ್ಸು ಇನ್ನೇನು ತನ್ನ ದೇಶಕ್ಕೆ ಹೋಗಬೇಕೆನ್ನುವಷ್ಟರಲ್ಲಿ  ಗುಪ್ತ ಎನ್ನುವ ಭಾರತೀಯ ಇವನು ಹೋಗುವ ವಿಮಾನವನ್ನೇ ತಡೆಯಿಡಿಯುತ್ತಾನೆ. ಇದರಿಂದ ವಿಮಾನ ಅನಿರೀಕ್ಷಿತ ಸಮಯದವರೆಗೆ ವಿಳಂಬವಾಗುತ್ತದೆ. ಇಲ್ಲಿಂದ ಮುಂದಕ್ಕೆ ನಿಜಕ್ಕೂ ಸಂಗರ್ಷವಾಗುವುದು ಕಾನೂನು ಮತ್ತು ಮಾನವೀಯ ಭಾವನೆಗಳೊಂದಿಗೆ.  ಇಡೀ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ಕೆಲಸ ಮಾಡುವ ಎಲ್ಲರೂ ಇವನು ಒಂದು ದಿನ ನ್ಯೂಯಾರ್ಕ್ ನಗರಕ್ಕೆ ಹೋಗಿ ಅವನ ತಂದೆ ಆಸೆ ಪೂರೈಸಲಿ ಅಂತ ಕಾನೂನನ್ನು ದಿಕ್ಕರಿಸಿ ಅವನನ್ನು ನ್ಯೂಯಾರ್ಕ್ ಸಿಟಿಗೆ ಕಳಿಸಿಕೊಡುತ್ತಾರೆ. ತನ್ನ ತಂದೆಯ ಆಸೆ ಪೂರೈಸಿದ ತೃಪ್ತಿಯಿಂದ ಅಲ್ಲಿಂದ ಹೊರಬಂದ ನಾಯಕ ಖುಷಿಯಿಂದ ಹೇಳುವ ಕೊನೆಯ ಮಾತು "ನಾನು ನನ್ನ ದೇಶಕ್ಕೆ ಹೋಗುತ್ತೇನೆ" ಅದು ಆತನ ದೇಶಪ್ರೇಮವನ್ನು ಸಾರುತ್ತದೆ.

"ಅವನ್ಯಾಕೆ ಇಲ್ಲಿಂದ ತಪ್ಪಿಸಿಕೊಂಡು ಹೋಗುತ್ತಿಲ್ಲ, ಬಹುಶಃ ಅವನು ತಲೆಕೆಟ್ಟವನಿರಬೇಕು"

   ನಿನ್ನ ದೇಶದಲ್ಲಿ ಯುದ್ದವಾಗುತಿದೆ, ಈ ಸಮಯದಲ್ಲಿ ನೀನು ವಾಪಸ್ ನಿನ್ನ ದೇಶಕ್ಕೆ ಹೋಗುತ್ತೀಯಾ? ಅಂತ ಕೇಳಿದಾಗ ಆತ ಹೌದು ಹೋಗುತ್ತೇನೆ ಎನ್ನುತ್ತಾನೆ. ಇಲ್ಲ ಎಂದಿದ್ದಲ್ಲಿ ಆತನಿಗೆ ನ್ಯೂಯಾರ್ಕ್ ಸಿಟಿಯಲ್ಲಿ ರಾತ್ರಿ ಸುತ್ತಾಡಬಹುದು ಎನ್ನುವ ಅವಕಾಶವನ್ನು ಕೊಡುತ್ತಾರೆ. ಆರೆ ಆತ ತನ್ನ ದೇಶಾಭಿಮಾನದಿಂದಾಗಿ "ನನಗೆ ಕ್ರಕೋಜಿಯ ಭಯವಿಲ್ಲ,  ಅದಕ್ಕಿಂದ ನಿಮ್ಮ ರೂಮ್ ಸ್ವಲ್ಪ ಭಯವನ್ನು ತರುತ್ತಿದೆ" ಎಂದು ಹೇಳಿ ನ್ಯೂಯಾರ್ಕ್ ಸುತ್ತುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಾನೆ.
 
  ಹೀಗೆ ಹತ್ತಾರು ಸನ್ನಿವೇಶಗಳು ನಿಮ್ಮನ್ನು ವಿಧವಾಗಿ ಕಾಡಿಸುತ್ತವೆ.


         

   ಒಂದೇ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ನಡೆಯುವಂತ ಇಂಥ ಅದ್ಬುತವಾದ ಕತೆಯನ್ನು ಎಣೆದ ನಿರ್ದೇಶಕ ಸ್ಟೀಫನ್ ಸ್ಪಿಲ್‍ಬರ್ಗ್ ಗೆ ನಿಜಕ್ಕೂ ಅಭಿನಂದನೆ ಸಲ್ಲಿಸಬೇಕು  ಇದೆಲ್ಲಕ್ಕಿಂತ ಮಿಗಿಲಾಗಿ ಇಡೀ ಚಿತ್ರದಲ್ಲಿ ನಾಯಕ ಟಾಮ್ ಹಾಂಕ್ ನಿಮ್ಮನ್ನು ಆವರಿಸಿಕೊಳ್ಳುತ್ತಾನೆ. ಕ್ಯಾಸ್ಟ್ ಅವೇ ಸಿನಿಮಾವನ್ನು ಮೊದಲು ನೋಡಿದಾಗ ನಾನು ಅವನ ಫ್ಯಾನ್ ಆಗಿಬಿಟ್ಟಿದೆ. ನಂತರ, ಫಾರೆಸ್ಟ್ ಗಂಫ್, ಸೇವಿಂಗ್ ಪ್ರವೈಟ್ ರಿಯಾನ್, ಗ್ರೀನ್ ಮೈಲ್, ಹೀಗೆ ಪ್ರತಿಯೊಂದು ಸಿನಿಮಾ ಕೂಡ ಅದ್ಬುತ ಕಲಾಕೃತಿಗಳೇ. ಈ ಸಿನಿಮದಲ್ಲಿ ಮೊದಲಿಗೆ ಕ್ರಕೋಜಿಯ ಪ್ರಜೆಯಾಗಿ ಅಧುನಿಕ ವಿಮಾನದಲ್ಲಿ ಕಳೆದುಹೋಗುವ ಮುಗ್ಧನಾಗಿ, ಯಾವುದೇ ಕ್ಷಣಕ್ಕೂ ಎಲ್ಲವನ್ನು ಸುಲಭವಾಗಿ ದೇವರು ಕೊಟ್ಟ ವರ ಎಂದುಕೊಂಡು ಭಾವೋದ್ವೇಗಕ್ಕೆ ಒಳಗಾಗದೇ ಸಿನಿಮಾ ನೋಡುವ ನಮ್ಮೊಳಗೆ ಭಾವೋದ್ವೇಗವನ್ನು ಉಕ್ಕಿಸುವ ಆತನ ನಟನೆಯನ್ನು ನಟನೆಯೆನ್ನಲು ಸಾಧ್ಯವಿಲ್ಲ. ಆತ ಅಲ್ಲಿ ಪಾತ್ರವಾಗಿ ಜೀವಿಸಿದ್ದಾನೆ. ಉಳಿದವರು ಪಾತ್ರಗಳು ಏನು ಕಡಿಮೆಯಿಲ್ಲ. ಯಾವುದೇ ಅದ್ಬುತ ತಾಂತ್ರಿಕತೆಯಿಲ್ಲದೇ ಕೇವಲ ಒಂದು ವಿಮಾನ ನಿಲ್ದಾಣದ ಟರ್ಮಿನಲ್ ಸೆಟ್‍ನಲ್ಲಿ ಯಾವುದೇ ಗಿಮಿಕ್ ಇಲ್ಲದೇ ಒಂದು ಚಿತ್ರವನ್ನು ತಯಾರಿಸಬೇಕಾದರೆ ಪಾತ್ರಧಾರಿಗಳ ನಟನೆಯೇ ಜೀವಾಳವಾಗಬೇಕಾಗುತ್ತದೆ.  ಅದೆಲ್ಲವೂ ಈ ಚಿತ್ರದಲ್ಲಿದೆ. ಇಂಥ ಚಿತ್ರವನ್ನು ಮಿಸ್ ಮಾಡಿಕೊಳ್ಳಬೇಡಿ.
 
 

ಚಿತ್ರಗಳು: ಅಂತರಜಾಲ
ಲೇಖನ : ಶಿವು.ಕೆ

Tuesday, February 21, 2012

ಜನಶತಾಬ್ದಿ ರೈಲಿನೊಳಗೆ




        ಹತ್ತಾರು ಬಾರಿ ಅರಸೀಕೆರೆಯಲ್ಲಿ ಈ ರೈಲಿಗೆ ಟಿಕೆಟ್ ಕೇಳಿದ್ದೇನೆ. ಕಣ್ಣ ಮುಂದೆ ನಿಂತು ಹೊರಡಲು ಸಿದ್ದವಾಗಿದ್ದರೂ ಒಮ್ಮೆಯೂ ಟಿಕೆಟ್ ಸಿಗದಿರುವುದು! ವಾರಕ್ಕೆ ಮೊದಲೇ ಟಿಕೆಟ್ಟುಗಳು ಬುಕ್ ಆಗಿಬಿಡುವ, ಅತ್ಯಂತ ವೇಗವಾಗಿ ಚಲಿಸುವ ಈ ರೈಲಿನ ಬಗ್ಗೆ ನನಗೆ ವಿಚಿತ್ರವಾದ ಕಲ್ಪನೆಯಿತ್ತು. ಈ ರೈಲು ಪ್ರಾರಂಭವಾಗಿ ಎರಡು ವರ್ಷಗಳಾದರೂ ಒಮ್ಮೆಯೂ ಪ್ರಯಾಣಿಸುವ ಅವಕಾಶ ಸಿಗಲಿಲ್ಲವಲ್ಲ ಎನ್ನುವ ನಿರಾಶೆ ಆಗಾಗ ಕಾಡುತ್ತಿತ್ತು. ಅದು ಮತ್ಯಾವುದು ಅಲ್ಲ ಬೆಂಗಳೂರು-ಹುಬ್ಬಳ್ಳಿ ನಡುವೆ ಚಲಿಸುವ ಜನಶತಾಬ್ದಿ ರೈಲು.

       ಈ ರೈಲಿನ ಬಗ್ಗೆ ನನಗೆ ಕುತೂಹಲ ಹೆಚ್ಚಾಗಲು ಅನೇಕ ಕಾರಣಗಳಿವೆ. ರಾತ್ರಿ ಊಟ ಮುಗಿದ ಮೇಲೆ ಮುಕ್ಕಾಲು ಗಂಟೆ ನಮ್ಮ ಮಲ್ಲೇಶ್ವರಂ ರೈಲು ನಿಲ್ಡಾಣದ ಪ್ಲಾಟ್ ಫಾರ್‍ಂನಲ್ಲಿ  ನನ್ನ ಶ್ರೀಮತಿ ಜೊತೆ ವಾಕಿಂಗ್ ಮಾಡುವಾಗ ಸರಿಯಾಗಿ ಒಂಬತ್ತು ವರೆಯ ಹೊತ್ತಿಗೆ ದೂರದಿಂದಲೇ ಕೂಗೆಬ್ಬಿಸಿಕೊಂಡು ನಿಲ್ಡಾಣದಲ್ಲಿ ನಿಂತು ಕುಳಿತವರೆಲ್ಲರ ಗಮನವನ್ನು ಸೆಳೆಯುತ್ತಾ, ಆಗಿನ ಕಾಲದಲ್ಲಿ ಪಾಳೆಯಗಾರನೊಬ್ಬ ಊರ ನಡುವಿನ ರಸ್ತೆಯಲ್ಲಿ ಧೂಳೆಬ್ಬಿಸಿಕೊಂಡು ವೇಗವಾಗಿ ಕುದುರೆ ಮೇಲೆ ಸಾಗುವಾಗ ಆ ರಬಸಕ್ಕೆ ತಲ್ಲಣಗೊಂಡು ದಿಗಿಲಿನಿಂದ ಒಬ್ಬರಿಗೊಬ್ಬರು ಗುಸುಗುಸು ಮಾತಾಡಿಕೊಳ್ಳುವಂತೆ ಇಲ್ಲಿಯೂ ಈ ಜನಶತಾಬ್ಧಿ ರೈಲು ಅದೇ ವೇಗದಲ್ಲಿ ಬಂದುಬಿಡುತ್ತದೆ.  ನನ್ನ ಶ್ರೀಮತಿ " ರೀ ಸ್ವಲ್ಪ ಇರ್ರೀ....ಆ ಧನ ಶತಾಬ್ಧಿ ಹೋಗಿಬಿಡಲಿ" ಎಂದು ನನ್ನ ತೋಳನ್ನು ತನ್ನ ಕೈಗಳಲ್ಲಿ ಗಟ್ಟಿಯಾಗಿ ಹಿಡಿದು ನಿಂತುಬಿಡುವಳು. ಹಾಗೆ ನೋಡಿದರೆ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣದಲ್ಲಿ ಸಾಗುವಾಗ ಇತರೆಲ್ಲಾ ರೈಲಿಗಿಂತ ಇದು ವೇಗವಾಗಿಯೇ ಚಲಿಸುತ್ತದೆ. ಎಷ್ಟು ವೇಗವೆಂದರೆ ಪ್ಲಾಟ್ ಫಾರಂನಲ್ಲಿರುವ ದೂಳೆಲ್ಲಾ ಹಾರಿಹೋಗಿ ಸಂಪೂರ್ಣವಾಗಿ ಪ್ಲಾಟ್‍ಫಾರಂ ಸ್ವಚ್ಛವಾಗುವಷ್ಟು. ಮತ್ತೆ  ಅದೇ ದೂಳಿನ ಕಣಗಳು ನನ್ನ ಬರಿಕಣ್ಣಿಗೆ ಮತ್ತು ಹೇಮಶ್ರೀ ಕನ್ನಡಕದೊಳಗಿನ ಕಣ್ಣಿಗೆ ಇಳಿಯುವಷ್ಟು.  ರಾತ್ರಿ ಊಟವಾದ ನಂತರ ಮುಕ್ಕಾಲು ಗಂಟೆ ರೈಲು ನಿಲ್ದಾಣದ ಪ್ಲಾಟ್ ಫಾರಂನಲ್ಲಿ ವಾಕ್ ಮಾಡುವುದನ್ನು ನಾವು ಕಳೆದ ಒಂದುವರ್ಷದಿಂದ ಚಾಲ್ತಿಯಲ್ಲಿಟ್ಟುಕೊಂಡಿದ್ದೇವೆ.  ಊಟವಾದ ತಕ್ಷಣ ಮಲಗುವ ಬದಲು ಸ್ವಲ್ಪ ಹೊತ್ತು ಹೀಗೆ ವಾಕ್ ಮಾಡಿದರೆ ತಿಂದ ಊಟ ಜೀರ್ಣವಾಗಿ ಅರಾಮವಾಗಿ ನಿದ್ರೆ ಬರುತ್ತದೆ ಎನ್ನುವುದು ಒಂದು ಕಾರಣವಾದರೆ ಅವತ್ತಿನ ದಿನಪೂರ್ತಿ ಓಡಾಟ, ಕೆಲಸ, ನಡೆದ ಘಟನೆಗಳು...ಇತ್ಯಾದಿಗಳನ್ನು ಅವಳೊಂದಿಗೆ ಹಂಚಿಕೊಳ್ಳುವ ಅವಕಾಶ ನನಗಾದರೆ, ಮನೆಯೊಳಗಿನ-ಹೊರಗಿನ  ನೆರೆಹೊರೆಯವರ ಜೊತೆಗಿನ ಒಡನಾಟ-ಕಾಟ ಇತ್ಯಾದಿಗಳನ್ನು ನನ್ನೊಂದಿಗೆ ಹಂಚಿಕೊಳ್ಳುವ ಅವಕಾಶ ಅವಳಿಗೆ. ಆ ಪ್ಲಾಟ್ ಫಾರಂನಲ್ಲಿ ಪ್ರತಿರಾತ್ರಿ ಹೀಗೆ ನಡೆದಾಡುತ್ತಾ ಅವತ್ತಿನ ವಿಚಾರಗಳನ್ನು ಹಂಚಿಕೊಳ್ಳುವಾಗ ನಡುವೆ ಸಿಗುವ ಖುಷಿ, ನಗು, ತಮಾಷೆ,ದುಗುಣ, ತಲ್ಲಣ, ವಿಷಾಧ, ಇತ್ಯಾದಿಗಳನ್ನೆಲ್ಲಾ ಒಂದರ್ಧ ನಿಮಿಷ ನಿಲ್ಲಿಸಿ, ನಮ್ಮನ್ನು ಬೆದರಿಸುವುದಲ್ಲದೇ ನಮ್ಮ ಹೃದಯದ ಮಿಡಿತದ ವೇಗವನ್ನೇ ಬದಲಾಯಿಸಿಬಿಡುವ ಈ ರೈಲನ್ನು ಕಂಡರೆ ಒಂಥರ ಕೋಪ ಅವಳಿಗೆ. "ಜನಶತಾಬ್ಧಿ" ಎನ್ನುವ ಬದಲು ಅವಳು "ದನಶತಾಬ್ಧಿ" ಅಂತ ಕರೆಯಲು ಮತ್ತೂ ಒಂದು ಕಾರಣವಿದೆ. ಅವಳು ಚಿಕ್ಕವಳಿದ್ದಾಗ ರಸ್ತೆಬದಿಯಲ್ಲಿ ಆಟವಾಡಿಕೊಳ್ಳುವಾಗ ಆ ಊರಿನಲ್ಲಿ ಮೂಗುದಾರವಿಲ್ಲದ ಉಂಡಾಡಿ ದನವೊಂದು ತಲೆಕೆಟ್ಟಂತೆ ರಸ್ತೆಯಲ್ಲಿ ಓಡಾಡಿ ಎಲ್ಲರನ್ನು ಭಯಪಡಿಸುತ್ತಿತ್ತಂತೆ.  ಈ ರೈಲಿನಿಂದಾಗಿ ತನ್ನ ಬಾಲ್ಯದ ನೆನಪು ಮರುಕಳಿಸಿ ಇದಕ್ಕೆ ಧನಶತಾಬ್ಧಿ ಅಂತ ಹೆಸರಿಟ್ಟಿದ್ದಾಳೆ.

      ಹೀಗೆ ಮನಸೋ ಇಚ್ಚೆ ಆಕೆ ಬೈದುಕೊಂಡರೂ ನನಗೆ ಈ ರೈಲಿನ ಮೇಲೆ ಬೇಸರವಿರಲಿಲ್ಲ. ಬದಲಾಗಿ ಇದರ ವೇಗ, ಯಾವಾಗಲೂ ಟಿಕೆಟ್ ಸಿಗದ ಪರಿಸ್ಥಿತಿ, ಹೊರಗಿನಿಂದ ನೋಡಿದರೆ ಇಷ್ಟೆಲ್ಲಾ ಬಹುಪರಾಕುಗಳನ್ನು ಹೊಂದಿರುವ ಈ ರೈಲಿನಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂದು ಆಸೆಪಟ್ಟಿದ್ದೆ. ಈ ಆಸೆ ಗಟ್ಟಿಯಾಗಲು ಮತ್ತೊಂದು ಕಾರಣವಿದೆ. ನಾನು ಬೇರೆ ಬೇರೆ ರೈಲಿನಲ್ಲಿ ಬರುವಾಗ ಎದುರಿಗೆ ಅಥವ ಹಿಂದಿನಿಂದಲೇ ಈ ರೈಲು ಬರುತ್ತಿದೆಯೆಂದು ತಿಳಿದರೆ ಮುಗಿಯಿತು. ಅಲ್ಲಿಗೆ ನಾನಿರುವ ರೈಲು ಇದಕ್ಕೆ ದಾರಿ ಬಿಟ್ಟುಕೊಡುವ ಸಲುವಾಗಿ ರಾಜಮಾರ್ಗವನ್ನು ಬಿಟ್ಟುಕೊಟ್ಟು  ಕ್ರಾಸಿಂಗ್ ನೆಪದಲ್ಲಿ ಅರ್ಧ-ಮುಕ್ಕಾಲುಗಂಟೆ ಕೈಕಾಲು ಬಿದ್ದುಹೋದ ಹೆಳವನಂತಾಗಿಬಿಡುತ್ತಿತ್ತಲ್ಲ...ಇಂಥ ರಾಜಮರ್ಯಾದೆಯುಳ್ಳ, ವೇಗದಲ್ಲಿ ಸಾಟಿಯೇ ಇಲ್ಲದ ಇದರಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕು, ಪ್ರತಿನಿಲ್ದಾಣದಲ್ಲಿಯೂ ಇದು ಬರುವುದಕ್ಕೆ ಮೊದಲೇ ಬೇರೆ ಬೇರೆ ರೈಲುಗಳು ಸಾಮಂತ ರಾಜರಂತೆ ಕಪ್ಪಕಾಣಿಕೆಯಿತ್ತು, ಸಲಾಂ ಹಾಕಿ ದಾರಿ ಬಿಟ್ಟುಕೊಡುವುದನ್ನು ನಾನು ಅದರೊಳಗೆ ಕುಳಿತು ಕಣ್ಣಾರೆ ನೋಡಿ ಆನಂದಿಸಬೇಕು! 

ಒಮ್ಮೆ ಹೀಗೆ ಪ್ಲಾನ್ ಮಾಡಿಕೊಂಡು ಬೆಂಗಳೂರಿನಿಂದ ಅರಸೀಕೆರೆಗೆ ಹೊರಡಲು ಸಿದ್ದನಾಗಿ ಟಿಕೆಟ್ ರೆಸರ್ವ ಮಾಡಿಸಲು ಹಿಂದಿನ ರಾತ್ರಿ ಹೋದರೆ ಎಲ್ಲಾ ಟಿಕೆಟ್ಟುಗಳು ಬುಕ್ ಆಗಿಬಿಟ್ಟಿದೆ ಅಂದುಬಿಟ್ಟರಲ್ಲ!  ತತ್ ಇದೆಂಥ ರೈಲು ಒಮ್ಮೆಯಾದರೂ ಹೋಗೋಣವೆಂದರೆ ಟಿಕೆಟ್ ಸಿಗುವುದಿಲ್ಲವಲ್ಲ ಅಂತ ಬೇಸರಿಸಿಕೊಂಡರೂ....ಈ ರೈಲಿನಲ್ಲಿ ಹೋಗಬೇಕಾದರೆ ಬೆಳಿಗ್ಗೆ ಆರುಗಂಟೆಯೊಳಗೆ ಸಿಟಿ ರೈಲು ನಿಲ್ದಾಣದಲ್ಲಿರಬೇಕು, ಅಷ್ಟರಲ್ಲಿ ನನ್ನ ದಿನಪತ್ರಿಕೆ ವಿತರಣೆ ಕೆಲಸವನ್ನು ಬಿಟ್ಟು ಯಾವನು ಹೋಗುತ್ತಾನೆ?  ಈ ರೈಲಿನ ಸಹವಾಸವೇ ಬೇಡ......ಎಂದು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಾ ಕೈಗೆಟುಕದ ಹುಳಿದ್ರಾಕ್ಷಿಯನ್ನು ಬಿಟ್ಟು ಬಂದ ನರಿಯ ಹಾಗೆ ಅನೇಕ ಸಾರಿ ಸಮಾಧಾನ ಮಾಡಿಕೊಳ್ಳುತ್ತ ವಾಪಸ್ಸು ಬಂದಿದ್ದೇನೆ.

   ಕಾಲ ಚಕ್ರ ತಿರುಗಿದಂತೆ ಹುಳಿ ದ್ರಾಕ್ಷಿ ಸಿಹಿಯಾಗಿ ಸುಲಭವಾಗಿ ಕೈಗೆ ಸಿಗುವಂತ ಪ್ರಸಂಗ ಒದಗಿಬಂತು. ಮೂರುದಿನಗಳ ಫೋಟೊಗ್ರಫಿ ಪ್ರವಾಸ ಎರಡೇ ದಿನಕ್ಕೆ ಮುಗಿದು ಮೊನ್ನೆ ಭಾನುವಾರ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದೆವಲ್ಲ,    ಹುಬ್ಬಳ್ಳಿಯಿಂದ ಬೆಂಗಳೂರಿಗೆ ಎರಡು ಗಂಟೆಗೆ ಹೊರಡುವ ಜನಶತಾಬ್ಧಿ ರೈಲಿಗೆ ಟಿಕೆಟ್ ಕಾಯ್ದಿರಿಸೋಣವೆಂದು ಪ್ರಯತ್ನಿಸಿದರೆ ಸಿಕ್ಕೇ ಬಿಟ್ಟಿತಲ್ಲ! ಅರೆರೆ....ಇದೇನಿದು ರೈಲು ಹೊರಡಲು ಇನ್ನು ಕೇವಲ ಎರಡು ಗಂಟೆ ಮಾತ್ರವಿದ್ದರೂ ಇನ್ನೂ  ನನ್ನ ಟಿಕೆಟ್ ಹಿಂದೆ ಇನ್ನೂ ನಲವತ್ತೆರಡು ಸೀಟುಗಳು ಕಾಲಿ ಇವೆಯಲ್ಲಾ....ಇಷ್ಟು ಸುಲಭವಾಗಿ ನಾನು ತುಂಬಾ ದಿನದಿಂದ ಬಯಸಿದ್ದ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಒದಗಿಬಂತಲ್ಲ ಅಂತ ತುಂಬಾ ಖುಷಿಯಾಯ್ತು.  ಗೆಳೆಯರಿಬ್ಬರೂ ಅವರ ಊರುಗಳಿಗೆ ಬೇರೆ ಬೇರೆ ರೈಲುಗಳಲ್ಲಿ ಹೊರಟ ಮೇಲೆ ಹತ್ತು ನಿಮಿಷ ಮೊದಲೇ ಈ ರೈಲಿನೊಳಗೆ ಕಾಲಿಟ್ಟೆ.  ಇದೇನಿದು...ಎರಡೂ ಕಡೆ ಒಂದರ ಹಿಂದೆ ಒಂದರಂತೆ ಮೂರು ಮೂರು ಸೀಟುಗಳಿರುವ ಇದು ಥೇಟ್ ನಮ್ಮ ಬಸ್ಸಿನ ಸೀಟುಗಳಂತಿವೆಯಲ್ಲ, ಇದರಲ್ಲಿ ಒಮ್ಮೆ ಕುಳಿತುಕೊಂಡರೆ ಮುಗಿಯಿತು. ಎದ್ದು ಹೊರಬರಬೇಕೆಂದರೆ ಪಕ್ಕ ಕುಳಿತವರು ಎದ್ದು ಇವರಿಗೆ ದಾರಿ ಬಿಡಬೇಕು! ಆದರೂ ನನಗೆ ಕಿಟಕಿಯ ಬಳಿ ೬೬ ನಂಬರಿನ ಸೀಟು ಸಿಕ್ಕಿದೆಯಲ್ಲ ಅಂತ ಸಮಾಧಾನ ಮಾಡಿಕೊಂಡೆ ಕುಳಿತುಕೊಂಡೆ.


    ಎರಡು ಗಂಟೆಗೆ ಸರಿಯಾಗಿ ಹುಬ್ಬಳ್ಳಿಯಿಂದ ಹೊರಟಿತಲ್ಲ! ಅದರ ಸಮಯ ಪಾಲನೆ ಮೆಚ್ಚುಗೆಯಾಯಿತು ಮನಸ್ಸಿಗೆ. ಅದೇ ಖುಷಿಯಲ್ಲಿ ಕಿಟಕಿಯ ಹೊರಗಿನ ದೃಶ್ಯಗಳನ್ನು ನೋಡುತ್ತಿರುವಾಗಲೇ ಪಕ್ಕದಲ್ಲಿ ಯಾರೋ ಡೀಸೆಂಟ್ ಆಗಿ ವಾದಿಸುತ್ತಿರುವ ದ್ವನಿ ಕೇಳಿ ಅತ್ತ ತಿರುಗಿದೆ. "ಸರ್, ನೀವು ನನ್ನ ಸೀಟ್ ನಂಬರಿನ ಮೇಲಿನ ಲಗ್ಗೇಜ್ ಇಡುವ ಜಾಗದಲ್ಲಿ ನಿಮ್ಮ ಲಗ್ಗೇಜ್ ಇಟ್ಟಿದ್ದೀರಿ...ಸ್ವಲ್ಪ ತೆಗೆದುಕೊಳ್ಳುತ್ತೀರಾ..ನನ್ನ ಲಗ್ಗೇಜ್ ಇಡಬೇಕು....ಅದಕ್ಕೆ ಈ ಬದಿಯಲ್ಲಿ ಕುಳಿತವನು...ಹೌದಾ...ಸಾರಿ ಬೇಕಾದರೆ ನಾವು ಕುಳಿತಿರುವ ಸೀಟಿನ ಮೇಲಿನ ಲಗ್ಗೇಜ್ ಸ್ಥಳದಲ್ಲಿ ನಿಮ್ಮ ಲಗ್ಗೇಜು ಇಡಬಹುದು, ಈಗ ನಾನು ಬದಲಿಸಬೇಕಾದರೆ ನಮ್ಮ ಮಲಗಿರುವ ಮಗುವನ್ನು ಎದ್ದೇಳಿಸಬೇಕಾಗುತ್ತದೆ" ತನ್ನ ಹೆಂಡತಿ ಮತ್ತು ಮಗುವನ್ನು ತೋರಿಸುತ್ತಾ ಹೇಳಿದ ಈತ. "ಈಗ ಓಕೆ ಸರ್, ಆದ್ರೆ ಇಳಿಯುವ ಸಮಯದಲ್ಲಿ ನಿಮ್ಮ ಜಾಗಕ್ಕೆ ನಾನು ನನ್ನ ಲಗ್ಗೇಜ್ ತೆಗೆದುಕೊಳ್ಳುವುದು, ನೀವು ನನ್ನ ಜಾಗದಲ್ಲಿ ನಿಮ್ಮ ಲಗ್ಗೇಜ್ ತೆಗೆದುಕೊಳ್ಳುವುದು, ಇಳಿಯುವ ಗಡಿಬಿಡಿಯಲ್ಲಿ ಎಳೆದು ತಲೆಮೇಲೆ ಬೀಳಿಸುವುದು ಇದೆಲ್ಲಾ ಬೇಕಾ.....ಪ್ಲೀಸ್ ನಿಮ್ಮ ಜಾಗದಲ್ಲಿ ನಿಮ್ಮ ಲಗ್ಗೇಜ್ ಇಟ್ಟುಕೊಳ್ಳಿ.." ಆವನ ಮಾತಿಗೆ ಮರು ಮಾತಿಲ್ಲದೇ ತಮ್ಮ ಲಗ್ಗೇಜು ಜಾಗವನ್ನು ಬದಲಾಯಿಸಿಕೊಂಡರು.  ಹೀಗೆ ಇವರಿಬ್ಬರೂ ಡೀಸೆಂಟ್ ವಾದಗಳನ್ನು ಮಾಡುತ್ತಿದ್ದರೂ ಇಡೀ ಬೋಗಿಯಲ್ಲಿ ಕುಳಿತಿದ್ದ ಪ್ರತಿಯೊಬ್ಬರೂ ಇದಕ್ಕೂ ತಮಗೂ ಏನೂ ಸಂಭಂದವಿಲ್ಲವೇನೋ ಎನ್ನುವಂತೆ ಕುಳಿತಿದ್ದರು.  ಬಹುಷಃ ಇಂಥ ಕಾಯ್ದಿರಿಸಿದ ರೈಲುಗಳಲ್ಲಿ ಎಲ್ಲರೂ ತಮ್ಮ ತಮ್ಮ ಘನತೆ ಗಂಭೀರದಿಂದ ಇರಬೇಕು  ಅಂತ ಈ ರೈಲಿನಲ್ಲಿ ಕುಳಿತ ತಕ್ಷಣವೇ ತೀರ್ಮಾನಿಸಿರಬೇಕು!  ಪುಸ್ತಕವನ್ನು ತೆಗೆದುಕೊಳ್ಳುವ ನೆಪದಲ್ಲಿ ಒಮ್ಮೆ ನಿಂತು ಸುತ್ತಲೂ ನೋಡಿದೆ. ಹೌದು! ಎಲ್ಲರೂ ತುಂಬಾ ಡೀಸೆಂಟ್ ಆಗಿ ತಮ್ಮ ಸೀಟುಗಳಲ್ಲಿ ಕುಳಿತುಬಿಟ್ಟಿದ್ದಾರೆ! ಪಕ್ಕದಲ್ಲಿ ಕುಳಿತವರನ್ನು ಮಾತಾಡಿಸಲು ಕೂಡ ಒಂಥರ ಸಂಕೋಚವೆನ್ನುವಂತೆ ತಮ್ಮ ತಮ್ಮ ಸೀಟುಗಳಲ್ಲಿ ಸೈಲೆಂಟ್ ಆಗಿ ಕುಳಿತುಬಿಟ್ಟಿದ್ದಾರೆ!  ಹಾಗೆ ನಾನು ಸೇರಿದಂತೆ ಇಲ್ಲಿರುವವರು ಯಾರು ಕೂಡ ಈ ಮಟ್ಟಿಗಿನ ಗಂಭೀರತೆಯನ್ನು ಹೊಂದಿದವರಲ್ಲ...ಮಾನವ ಸಹಜ ಗುಣವುಳ್ಳವರು ಅನ್ನಿಸಿದರೂ ಅಲ್ಲಿನ ವಾತಾವರಣವನ್ನು ನೋಡಿ ಅವರಂತೆ ನಾನು ಕೂಡ ಘನಗಂಭೀರನಂತೆ ಪುಸ್ತಕದ ಪುಟಗಳನ್ನು ತಿರುವುತ್ತಾ ನಾನು ಇದೇ ಸಮಯದಲ್ಲಿ ಪ್ಯಾಸಿಂಜರ್ ಅಥವ ಪಾಸ್ಟ್ ಪ್ಯಾಸಿಂಜರ್ ರೈಲಿನಲ್ಲಿ ಹೊರಟಿದ್ದರೆ ಹೇಗಿರಬಹುದು ಅಂದುಕೊಂಡೆ...

    ಪ್ಯಾಸಿಂಜರ್ ರೈಲು ಬಂದು ನಿಲ್ಲುತ್ತಿದ್ದಂತೆ ಈ ಬದಿಯಿಂದ ಒಬ್ಬ ಸೀಟಿಗಾಗಿ ಕಿಟಕಿಯಿಂದಲೇ ಕರವಸ್ತ್ರವನ್ನು ಹಾಕಿದರೆ ಆ ಬದಿಯಿಂದ ಮತ್ತೊಬ್ಬ ಅದೇ ಸೀಟಿನ ಮೇಲೆ ತನ್ನ ಬ್ಯಾಗನ್ನೇ ಹಾಕಿಬಿಡುತ್ತಾನೆ.  ನಾ ಮುಂದು ತಾ ಮುಂದು ಅನ್ನುವ ನೂಕಾಟ, ಗಲಾಟೆ..... ಅಲ್ಲಿಗೆ ಎಲ್ಲಾ ಘನತೆ ಗಂಭೀರತೆಗಳು ಬಾಗಿಲ ಬಳಿಯೇ ಮಣ್ಣುಪಾಲು!  ಮತ್ತೆ ಕರವಸ್ತ್ರ ಮತ್ತು ಬ್ಯಾಗ್ ಹಾಕಿದವನ ನಡುವೆ ಸೀಟಿಗಾಗಿ ಜಗಳ...ಮಾತಿಗೆ ಮಾತು..ಹಳ್ಳಿಯವರಾದರೆ ಹಳ್ಳಿ ಮಾತು...ಪಟ್ಟಣದವರಾದರೆ ಪಟ್ಟಣದ ಮಾತು ಇದು ಇದೊಂದೇ ಸೀಟಿನಲ್ಲಿ ಮಾತ್ರವಲ್ಲ ಪೂರ್ತಿ ರೈಲಿನ ಹತ್ತಾರು ಬೋಗಿಗಳ ನೂರಾರು ಸೀಟುಗಳ ನಡುವೆ ಏಕಕಾಲದಲ್ಲಿ ನಡೆಯುತ್ತದೆ.  ಈ ಗಲಾಟೆಗಳೆಲ್ಲಾ ಮುಗಿದ ಸ್ವಲ್ಪ ಹೊತ್ತಿಗೆ ಸೀಟಿಗಾಗಿ ಮಾತಿಗೆ ಮಾತು ಬೆಳೆಸಿದವರೆಲ್ಲಾ ಈಗ ಎದುರು-ಎದುರು ಕುಳಿತು ಆತ್ಮೀಯ ಗೆಳೆಯರಂತೆ ಮಾತಾಡುತ್ತಿರುತ್ತಾರೆ. ಏಕೆಂದರೆ ಪ್ಯಾಸೆಂಜರ್ ಸೀಟಿನಲ್ಲಿರುವ ವಿಶೇಷತೆಯೇ ಅದು. ಎದುರು-ಬದುರಾಗಿ ಇದ್ದು ನಮಗೆ ಅವರು ಅವರಿಗೆ ನಾವು ಕಾಣಿಸುತ್ತಿರುತ್ತೇವೆ. ಒಂಥರ ಮನೆಯಲ್ಲಿ ಕುಳಿತುಕೊಂಡ ಹಾಗೆ. ಜಗಳವಾಡಿದವರು ಎಷ್ಟು ಹೊತ್ತು ಹಾಗೆ ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಕುಳಿತುಕೊಳ್ಳುವುದು?  ಒಂದರ್ಧಗಂಟೆಯಲ್ಲಿ ಎಲ್ಲವನ್ನು ಮರೆತುಬಿಡುತ್ತಾರೆ. ಕರವಸ್ತ್ರವನ್ನು ಹಾಕಿದವನು ಬ್ಯಾಗ್ ಹಾಕಿದವನ ಬಳಿಯಲ್ಲಿರುವ ದಿನಪತ್ರಿಕೆಯನ್ನು ನೋಡಿ "ಸ್ವಲ್ಪ ಪೇಪರ್ ಕೊಡಿ" ಅನ್ನುತ್ತಾನೆ. ಈತನೂ ಕೂಡ ಆಗಲೇ ಸೀಟಿನ ವಿಚಾರವನ್ನು ಮರೆತಿದ್ದರಿಂದ ದಿನಪತ್ರಿಕೆ ಕೊಡುತ್ತಾನೆ. ಅದಕ್ಕೆ ಪ್ರತಿಯಾಗಿ ಈತನ ಬಳಿ ಇರುವ ನೀರನ್ನು ಆತ ಕೇಳುತ್ತಾನೆ. ಇವನು ಕೊಡುತ್ತಾನೆ.  ಅಲ್ಲಿಗೆ ಎಲ್ಲಾ ದಾರಿ ಸರಿಯಾಯ್ತು. ರೈಲು ಪ್ರಯಾಣದ ದಾರಿ ಸಾಗಬೇಕಾಲ್ಲ ನಿದಾನವಾಗಿ ಒಬ್ಬರಿಗೊಬ್ಬರು ಊರು, ಕೇರಿ, ಪಟ್ಟಣ, ಓದು, ಕೆಲಸ ಇತ್ಯಾದಿಗಳನ್ನು ಪರಸ್ಪರ ವಿಚಾರಿಸಿಕೊಳ್ಳುತ್ತಾರೆ. ಹಾಗೆ ಮುಂದುವರಿಯುತ್ತಾ..ಹರಟೆ, ತಮಾಷೆ, ಲೋಕದ ಎಲ್ಲಾ ವಿಚಾರಗಳ ಚರ್ಚೆ, ನಗು..ಅವರಿಸಿಕೊಳ್ಳುತ್ತವೆ..ಇದು ಇವರಿಬ್ಬರ ನಡುವೆ ಮಾತ್ರವಲ್ಲ ಹೀಗೆ ಜಗಳವಾಡಿದ ಆಡದ ಎಲ್ಲ ಬೋಗಿಗಳ ಪ್ರಯಾಣಿಕರಲ್ಲೂ ಅವರಿಸಿಕೊಂಡುಬಿಡುತ್ತವೆ. ನಾವು ಯಾವುದೇ ಪೂರ್ವಗ್ರಹ ಪೀಡಿತನಾಗದೆ ಸುಮ್ಮನೇ ಕುಳಿತು ಪ್ಯಾಸಿಂಜರ್ ರೈಲಿನಲ್ಲಿ ಪ್ರಯಾಣಿಸಿದರೆ ಹತ್ತಾರು ಜನರ ಭಾಷೆ, ಮಾತು, ಶೈಲಿ, ಸಂಸ್ಕಾರ, ಮಕ್ಕಳ ಆಟ ಹುಡುಗಾಟ, ಒಂದು ಅಥವ ಎರಡು ವರ್ಷದ ತುಂಟ ಮಗುವಿದ್ದರೆ ಮುಗಿಯಿತು ಅದು ಯಾವುದೇ ಜಾತಿ, ಭಾಷೆ, ಭೇದವಿಲ್ಲದೇ ಎಲ್ಲರಿಂದರೂ ಮುದ್ದಿಸಿಕೊಳ್ಳುತ್ತದೆ, ಪ್ರೀತಿಸಿಕೊಳ್ಳುತ್ತದೆ.....

       ಹೀಗೆ ಅಲೋಚಿಸುತ್ತಿರಬೇಕಾದರೆ ಮುಂದಿನ ರೈಲು ನಿಲ್ದಾಣದಲ್ಲಿ ನಿಂತಿತು. ಒಮ್ಮೆ ಸುತ್ತ ನೋಡಿದೆ. ಎಲ್ಲರೂ ಹಾಗೆ ಕುಳಿತಲ್ಲಿಯೇ ಕುಳಿತಿದ್ದಾರೆ. ಪ್ರತಿಯೊಬ್ಬರ ಬಳಿಯೂ ನೀರಿನ ಬಾಟಲ್ಲುಗಳಿವೆ, ಪಕ್ಕದವರನ್ನು ಕೇಳಲು ಸಂಕೋಚವೆಂದು ಎಲ್ಲರೂ ನೀರಿನ ಬಾಟಲ್ಲುಗಳನ್ನು ಕೊಂಡುಕೊಂಡಿದ್ದಾರೆ. ನನ್ನಿಂದ ಮೂರನೆ ಸೀಟಿನವನ ಬಳಿ ಕನ್ನಡ ಪ್ರಭ ದಿನಪತ್ರಿಕೆಯಿತ್ತು. ಅದನ್ನು ಎರಡನೆಯವನು ಓದಲಿಕ್ಕಾಗಿ ಕೇಳಿ ಪಡೆಯಲಿಲ್ಲ. ಅದರ ಬದಲು ನಿಲ್ದಾಣದಲ್ಲಿ ಇಳಿದು ತಾನೇ ಒಂದು ಪತ್ರಿಕೆಯನ್ನು ಕೊಂಡು ತಂದನು. ಇದನ್ನೆಲ್ಲಾ ಗಮನಿಸುತ್ತಿದ್ದ ನಾನು ನನಗೆ ದಿನಪತ್ರಿಕೆಯನ್ನು ಓದಬೇಕೆನಿಸಿದರೂ ಕೂಡ ಇಬ್ಬರಲ್ಲೂ ಕೇಳಲಾಗದೇ ನಾನು ನನ್ನ ಪ್ರಸ್ಟೀಜ್ ಬ್ಯಾಲೆನ್ಸ್ ಮಾಡಿಕೊಂಡೆ.  ಅಷ್ಟರಲ್ಲಿ ಜನಶತಾಬ್ದಿ ಒಂದು ಗಂಟೆಯ ಪ್ರಯಾಣವನ್ನು ಮುಗಿಸಿತ್ತಲ್ಲ!  ಬಸ್ಸಿನಂತ ಸೀಟಿನಲ್ಲಿ ಹೀಗೆ ಕುಳಿತಲ್ಲಿಯೇ ಕೂತರೇ ನಮ್ಮ ಅಂಡುಗಳು ಎಷ್ಟು ಬಿಸಿಯಾಗಬಹುದು?  ಅಷ್ಟೇ ಅಲ್ಲ ಕಾಲು ನೀಡಲಾಗದೆ ಜೊಂಪುಹತ್ತಿದ್ದರಿಂದ ಕಾಲುಗಳು ಹಿಡಿದುಕೊಂಡಂತೆ ಆಗಿತ್ತು. ಈ ರೀತಿ ನನಗೊಬ್ಬನಿಗೆ ಮಾತ್ರ ಆಗಿದೆಯ ಅಂತ ಸುತ್ತಲೂ ನೋಡಿದೆ. ಬಹುಶಃ ಎಲ್ಲರ ಕಾಲುಗಳು ಜೊಂಪು ಹಿಡಿದಿರಬಹುದು ಅನ್ನಿಸಿತು. ಹಾಗೇ ಕುಳಿತಿದ್ದಾರಲ್ಲ...ಎದ್ದು ಒಮ್ಮೆ  ಕೈಕಾಲು ಜಾಡಿಸಿ, ಸ್ವಲ್ಪ ಅಡ್ಡಾಡಿದರೆ ಅಂಡುಗಳು ತಂಪಾಗಬಹುದಲ್ವಾ ಅನ್ನಿಸಿತು. ಆದ್ರೆ ಯಾರು ಕುಳಿತಲ್ಲಿಂದ ಎದ್ದಿಲ್ಲ. ಒಬ್ಬರು ಎದ್ದರೆ ಪಕ್ಕದಲ್ಲಿರುವ ಇಬ್ಬರೂ ಎದ್ದು ಇವರಿಗೆ ದಾರಿ ಮಾಡಿಕೊಡಬೇಕಲ್ಲ...ಆಗ ಕಾಲಿಗೆ ಕಾಲು ತಗುಲುತ್ತದೆ. ಅದಕ್ಕೆ ಇವರೇನು ಅಂದುಕೊಳ್ಳುತ್ತಾರೋ ಹೀಗೆ ಎಲ್ಲರ ಮನಸ್ಸಿನಲ್ಲೂ ಅನ್ನಿಸಿ ಹಾಗೆ ಸಹಿಸಿಕೊಂಡು ಕುಳಿತುಕೊಂಡುಬಿಟ್ಟಿದ್ದಾರೆ ಅನ್ನಿಸಿತು.


      ಇದೇ ಪರಿಸ್ಥಿತಿ ಪ್ಯಾಸೆಂಜರ್ ರೈಲಿನಲ್ಲಿದ್ದರೆ ಹೇಗಿರುತ್ತಿತ್ತು? "ಕಾಲು ಜೌ ಹಿಡಿದುಕೊಂಡಿದೆ, ಕಾಲು ನೀಡಿಕೊಳ್ಳುತ್ತೀನಿ, ಬೇಸರ ಮಾಡಿಕೊಳ್ಳಬೇಡಿ" ಅಂತೇಳಿ ಎದುರಿನ ಕುಳಿತವನ ಸೀಟಿನ ಪಕ್ಕಕ್ಕೆ ಕಾಲು ನೀಡಿಬಿಡುತ್ತಾರೆ. ಅದಕ್ಕೆ ಈತನೇನು ಬೇಸರಿಸಿಕೊಳ್ಳುವುದಿಲ್ಲ ಏಕೆಂದರೆ ಈಗಾಗಲೇ ಗೆಳೆಯರಂತೆ ಕಷ್ಟಸುಖಗಳನ್ನು ಮಾತಾಡಿಕೊಂಡಿದ್ದಾರಲ್ಲ. ಸ್ವಲ್ಪ ಹೊತ್ತಿಗೆ ಅವನ ಕಾಲು ಇವನ ಸೀಟಿನ ಮೇಲೆ. ಒಂದು ದಿನಪತ್ರಿಕೆ ಇದ್ದರೆ ಸಾಕು ಅದು ಹತ್ತಾರು ಜನರ ಕೈಬದಲಾಗುತ್ತದೆ! ಮತ್ತೆ ಪ್ಯಾಸೆಂಜರ್ ರೈಲಿನಲ್ಲಿರುವ ಯಾವ ಪ್ರಯಾಣಿಕನ ಅಂಡು ಬಿಸಿಯಾಗುವುದಿಲ್ಲ. ಏಕೆಂದರೆ ಕಾಲುಗಂಟೆ-ಅರ್ಧಗಂಟೆಗೆ ಒಮ್ಮೆ ಎದ್ದು ಓಡಾಡುತ್ತಿರುತ್ತಾರೆ....ಇದೆಲ್ಲಾ ಯೋಚನೆ ಬರುವಷ್ಟರಲ್ಲಿ ಈ ಜನಶತಾಬ್ಧಿ ರೈಲು ರಾಣೆಬೆನ್ನೂರಿಗೆ ತಲುಪಿತ್ತು.

     ಒಂದು ನಿಮಿಷ ನಿಂತು ಹೊರಡಬೇಕಾದ ರೈಲು ಐದು ನಿಮಿಷವಾದರೂ ಹೊರಡಲೇ ಇಲ್ಲವಲ್ಲ!  ಏಕೆಂದರೆ  ಕ್ರಾಸಿಂಗಿಗಾಗಿ ನಿಂತಿದೆ! ಇದು ಕ್ರಾಸಿಂಗಿನಲ್ಲಿ ನಿಂತು ಇನ್ನೊಂದು ರೈಲು ಬರುವವರೆಗೂ ಕಾಯಬೇಕಾ ಅಂದುಕೊಳ್ಳುವಷ್ಟರಲ್ಲಿ ಎದುರಿಗೆ ಚಾಲುಕ್ಯ   ಎಕ್ಸ್ ಪ್ರೆಸ್  ಬಂದು ವೇಗವಾಗಿ ಹೋಯ್ತು.  ಅಲ್ಲಿಗೆ ಉಳಿದೆಲ್ಲಾ ರೈಲುಗಳು ಇದಕ್ಕೆ ರಾಜಮರ್ಯಾದೆಯನ್ನು ಕೊಟ್ಟು ದಾರಿಬಿಟ್ಟುಕೊಡುವುದನ್ನು ನೋಡಲು ಇಷ್ಟಪಟ್ಟ ನನಗೆ ಈ ರೈಲೇ ಮತ್ತೊಂದು ರೈಲಿಗೆ ದಾರಿಮಾಡಿಕೊಟ್ಟಿದ್ದು ಕಂಡು "ಹೊರಗಿನಿಂದ ನೋಡಿದಾಗ ಎಷ್ಟೆಷ್ಟೋ ಅಂದುಕೊಂಡರೂ ಒಳಗೆ ಕುಳಿತಾಗ ಇಷ್ಟೆ" ಅಂದುಕೊಂಡು ಸುಮ್ಮನಾದೆ. ರೈಲು ಹೊರಟಿತು.

   ನಿದಾನವಾಗಿ ತಿಂಡಿ ತಿನಿಸು, ಕಾಫಿ, ಟೀ, ಬಾದಾಮಿ ಹಾಲು, ಕಟ್ಲೆಟ್, ಸಮೋಸ, ವೆಚ್ ಬಿರ್ಯಾನಿ, ಇತ್ಯಾದಿಗಳು ಬರತೊಡಗಿದವು. ಇದನ್ನು ಮಾರುವವರೆಲ್ಲರೂ ಯೂನಿಫಾರಂ ಹಾಕಿಕೊಂಡವರೇ ಆಗಿದ್ದರು. "ಕಟ್ಲೆಟ್ ಎಷ್ಟಪ್ಪ" ಅಂತ ಕೇಳಿದರು ಹಿರಿಯಜ್ಜ. "ಇಪ್ಪತೈದು ರೂಪಾಯಿ" ಒಮ್ಮೆ ಯೋಚಿಸಿ ಕೊಡಪ್ಪ ಅಂದರು ಹಿರಿಯಜ್ಜ. ಬೆಲೆ ಕೇಳಿ ಹೆಚ್ಚಾಯಿತೆಂದು ಬೇಡವೆಂದರೆ ಯಾರೇನು ಅಂದುಕೊಳ್ಳುವರೋ, ಅದರಿಂದ ನನ್ನ ಘನತೆಗೆ ಕುಂದುಂಟಾಗುತ್ತದೆ ಅಂತ ಅಷ್ಟೆ ಬೆಲೆ ಕೊಟ್ಟು ಕಟ್ಲೆಟ್ ತಿಂದರು ಅಜ್ಜ. ಅದೇ ರೀತಿ ಅನೇಕ ಪ್ರಯಾಣಿಕರು ದುಬಾರಿ ಬೆಲೆಯ ತಿಂಡಿ ತಿನಿಸುಗಳನ್ನು ವಿಧಿಯಿಲ್ಲದೆ ತಾವು ತಿಂದು ತಮ್ಮ ಮಕ್ಕಳಿಗೂ ಕೊಡಿಸಿದರು ಅಂದುಕೊಳ್ಳುತ್ತೇನೆ. ಏಕೆಂದರೆ ಹೊರಗಿನ ವಸ್ತುಗಳನ್ನು ಮಾರಾಟಮಾಡಲು ಇಲ್ಲಿ ಅನುಮತಿಯಿಲ್ಲವಲ್ಲ!

     ಆದ್ರೆ ಪ್ಯಾಸೆಂಜರ್ ರೈಲಿನಲ್ಲಿ ಏನುಂಟು ಏನಿಲ್ಲ! ಎರಡು ರೂಪಾಯಿಯ ಉರಿದ ಕಡ್ಲೇಕಾಯಿಯಿಂದ ಹಿಡಿದು ಇನ್ನೂರು ಮುನ್ನೂರು ರೂಪಾಯಿಗಳ ಸೀರೆ, ಪ್ಯಾಂಟು ಶರಟು ಇತ್ಯಾದಿಗಳೆಲ್ಲವೂ ಸಿಗುತ್ತದೆ. ಬಾಯಿ ಚಪ್ಪರಿಸುವ ಚುರುಮುರಿ, ತಟ್ಟೆ ಇಡ್ಲಿ, ವಡೆ, ಐದು ರೂಪಾಯಿಗಳಿಗೊಂದು ಮೊಳ ಮಲ್ಲಿಗೆ, ಬೇಕಾದಲ್ಲಿ ನೂರು ಇನ್ನೂರು ಗ್ರಾಂ ಮಲ್ಲಿಗೆಯನ್ನು ತೆಗೆದುಕೊಂಡು ಸಹಪ್ರಯಾಣಿಕರ ಜೊತೆ ಕಷ್ಟ ಸುಖ ಮಾತಾಡುತ್ತಾ ಮಹಿಳಾ ಪ್ರಯಾಣಿಕರು ಹೂದಂಡೆಯನ್ನು ಕಟ್ಟುತ್ತಿರುತ್ತಾರೆ. ತಿಪಟೂರಿನಲ್ಲಿ ಕೊಂಡ ಒಂದು ಕೇಜಿ ಸೊಗಡು ಅವರೆಯನ್ನು ಯಶವಂತಪುರ ತಲುಪುವ ಹೊತ್ತಿಗೆ ಕಾಳುಗಳನ್ನು ಬಿಡಿಸಿಟ್ಟುಕೊಂಡುಬಿಡುತ್ತಾರೆ! ಇಷ್ಟೇ ಅಲ್ಲದೇ ಕೈಕಾಲು, ಕಣ್ಣು ಇಲ್ಲದ ಬಿಕ್ಷುಕರ " ಈ ದೇಹದಿಂದ ದೂರನಾದೆ ಏಕೆ ಆತ್ಮನೇ" ಹಾಡುಗಳು...ಹೀಗೆ ಒಂದೇ ಎರಡೇ.......ಸಮಯಕ್ಕೆ ಸರಿಯಾಗಿ ರೈಲು ನಿಲ್ದಾಣಗಳಿಗೆ ತಲುಪುವುದಿಲ್ಲ ಗಂಟೆಗಟ್ಟಲೇ ತಡವಾಗಿ ಬರುತ್ತವೆ ಎನ್ನುವುದನ್ನು ಬಿಟ್ಟರೆ ಈ ಪ್ಯಾಸಿಂಜರ್ ರೈಲಿನಲ್ಲಿ ಏನುಂಟೂ ಏನಿಲ್ಲ! 

    ಆರಸೀಕೆರೆ ಬಂತು. ಅಲ್ಲಿ ಐದು ನಿಮಿಷ ನಿಲ್ಲುತ್ತದೆ ಈ ಜನಶತಾಬ್ದಿ. ಹೊರಗೆ ಬಂದು ಪ್ಲಾಟ್ ಫಾರಂನಲ್ಲಿ ಮಾರುವ ಟೀ ಕುಡಿದಾಗ ಸ್ವಲ್ಪ ನಿರಾಳವೆನಿಸಿತ್ತು. ಕೈಕಾಲು ಬಿಡುಬೀಸಾಗಲು ಬಾಗಿಲಲ್ಲಿ ಸ್ವಲ್ಪ ಹೊತ್ತು ನಿಂತೂ ಸೂರ್ಯಾಸ್ತವನ್ನು ನೋಡಿದ ಮೇಲೆ ಮತ್ತೆ ಮನಸ್ಸು ಉಲ್ಲಾಸಗೊಂಡಿತ್ತು. ಅಂದಹಾಗೆ ನಾನು ಜನಶತಾಬ್ದಿ ರೈಲನ್ನು ಅವಮಾನಿಸುತ್ತಿದ್ದೇನೆ ಅಂದುಕೊಳ್ಳಬೇಡಿ. ನಿಜಕ್ಕು ಇದು ವೇಗದ ರೈಲು ಮೊದಲ ಒಂದು ನಿಲ್ದಾಣದಲ್ಲಿ ಕ್ರಾಸಿಂಗ್ ಕೊಟ್ಟಿದ್ದು ಬಿಟ್ಟರೆ ಮುಗೀತು. ಮುಂದಿನದೆಲ್ಲಾ ಇದಕ್ಕೇ ರಾಜಮಾರ್ಗ.  ಹುಬ್ಬಳ್ಳಿಯಿಂದ ಕೇವಲ ಎಂಟು ನಿಲ್ದಾಣಗಳಲ್ಲಿ ಮಾತ್ರ ನಿಲ್ಲುವ ಇದು ಮೇಲೆ ಹೇಳಿದ ಕೆಲವು ವಿಚಾರಗಳನ್ನು ಬಿಟ್ಟರೆ ಚಲನೆಯ ವಿಚಾರದಲ್ಲಿ ವೇಗದೂತ. ಸಮಯಕ್ಕೆ ಸರಿಯಾಗಿ ಹೊರಡುವ ಮತ್ತು ತಲುಪುವಂತ ಪಕ್ಕಾ ಟೈಮಿಂಗ್. ಇಕ್ಕಾಟಾದ ಸೀಟಿನಲ್ಲಿ ಕೈಕಾಲು ನೀಡಲಾಗದಿದ್ದರೂ ನಮ್ಮ ಮುಂದಿನ ಸೀಟಿನ ಹಿಂಭಾಗದಲ್ಲಿ ಅದಕ್ಕೆ ಹೊಂದಿಸಿಕೊಂಡಂತೆ ಒಂದು ಗಟ್ಟಿಯಾದ ಕಬ್ಬಿಣದ ಪ್ಯಾಡ್ ಇದೆ. ಅದರ ಮೇಲೆ ಇಟ್ಟುಕೊಂಡು ತಿಂಡಿ ತಿನ್ನಬಹುದು, ಕಾಫಿ ಟೀ ಕುಡಿಯಬಹುದು, ಕತೆ ಕಾದಂಬರಿಗಳನ್ನು ಇಟ್ಟುಕೊಂಡು ಓದಬಹುದು, ಸಾಧ್ಯವಾದರೆ ಒಂದು ಲೇಖನವನ್ನು ಬರೆಯಬಹುದು. 

     ಜನಶತಾಬ್ಧಿಯ ರೈಲಿನಲ್ಲಿ ಕುಳಿತ ಮೇಲೆ ಇಷ್ಟೇಲ್ಲಾ ಅಲೋಚನೆಗಳು ಬಂದವಲ್ಲ! ಓದುವುದನ್ನು ನಿಲ್ಲಿಸಿದೆ. ಒಂದಷ್ಟು ಎ-೪ ಸೈಜಿನ ಬಿಳಿ ಹಾಳೆಗಳನ್ನು ಕ್ಯಾಮೆರ ಕಿಟ್ಟಿನಲ್ಲಿಟ್ಟುಕೊಂಡೆದ್ದೆನಲ್ಲ! ತೆಗೆದುಕೊಂಡು ನನ್ನ ಸೀಟಿನ ಮುಂದಿದ್ದ ಕಬ್ಬಿಣದ ಪ್ಯಾಡಿನ ಮೇಲಿಟ್ಟು ಈ ಲೇಖನವನ್ನು ಬರೆದು ಮುಗಿಸುವಷ್ಟರಲ್ಲಿ ನಾನು ಇಳಿಯಬೇಕಾದ ಯಶವಂತಪುರ ಬಂತು. ಅದನ್ನೇ ನೀವು ಈಗ ಓದುತ್ತಿದ್ದೀರಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.




ಲೇಖನ : ಶಿವು.ಕೆ
ಚಿತ್ರ: ಅಂತರ್ಜಾಲ ಕೃಪೆ.

    

Sunday, February 12, 2012

ಮರೆಯಲಾಗದ ಪ್ರವಾಸ


            ಜನವರಿ ೨೬ರ ರಾತ್ರಿ ಬೆಂಗಳೂರಿನ ಜಯಮಹಲ್ ಪ್ಯಾಲೆಸ್‍ನಿಂದ ಹೊರಬರುವಷ್ಟರಲ್ಲಿ ಆಗಲೇ ಸಮಯ ೯-೪೦.  ಅದೊಂದು ತೆರೆದ ಉದ್ಯಾನವನದಲ್ಲಿ ನಡೆದ ಅದ್ದೂರಿ ಮದುವೆಯ ಅರತಕ್ಷತೆ.  ಕಡಿಮೆಯೆಂದರೂ ಐದು ಸಾವಿರಕ್ಕೂ ಹೆಚ್ಚು ಜನರಿದ್ದ ಅಂತ ಮದುವೆಯಲ್ಲಿ ಊಟಮಾಡದೆ ಹೊರಬಂದಿದ್ದೆ, ಅದಕ್ಕೆ ಕಾರಣ ಅವತ್ತೇ ರಾತ್ರಿ ನಾನು ಪುತ್ತೂರಿಗೆ ಹೋಗುವ ವೋಲ್ವೋ ಬಸ್ ಸಮಯ ರಾತ್ರಿ ಹತ್ತು ಮುವತ್ತು. ಕೊನೆಯ ಕ್ಷಣದಲ್ಲಿ ನಿಗದಿಯಾದ ಈ ಕ್ಯಾಂಡಿಡ್ ಫೋಟೊಗ್ರಫಿಯನ್ನು ಪುತ್ತೂರಿಗೆ ಹೋಗುವ ಕಾರಣದಿಂದಾಗಿ ಕೇವಲ 6-30 ರಿಂದ 8-30ರ ವರೆಗೆ ಮಾತ್ರ ಮಾಡಿಕೊಡುತ್ತೇನೆ ಅಂತ ಒಪ್ಪಿಕೊಂಡಿದ್ದೆ.  ಆದ್ರೆ ಈ ಕ್ಯಾಂಡಿಡ್ ಫೋಟೊಗ್ರಫಿ ಎನ್ನುವುದಿದೆಯಲ್ಲ. ಇದು ಒಂಥರ ಮೈಮರೆಯುವಂಥದ್ದೇ ಸರಿ!  ಹತ್ತು ಅತ್ಯುತ್ತಮ ಫೋಟೊಗಳು ಬೇಕೆಂದರೆ ಕಡಿಮೆಯೆಂದರೂ 100-150 ಫೋಟೊಗಳನ್ನಾದರೂ ಕ್ಲಿಕ್ಕಿಸಬೇಕು! ಮತ್ತೆ ಅಷ್ಟು ತೆಗೆದರೂ ಸಮಾಧಾನವಾಗುವುದಿಲ್ಲ!  ಇನ್ನೂ ಏನಾದರೂ ಹೊಸತು ಕಾಣಬಹುದು, ಸಿಗಬಹುದು ಅನ್ನುವ ಕುತೂಹಲದಲ್ಲಿ ಊಟ ತಿಂಡಿ ಸಮಯ ಮರೆತೇ ಹೋಗಿರುತ್ತದೆ! ಮೊದಲ ಬಾರಿಗೆ ಈ ರೀತಿ ತೆರೆದ ಉದ್ಯಾನವನದಲ್ಲಿ ಕೇವಲ ಸೀರಿಯಲ್ ಸೆಟ್ ಮತ್ತು ಕೆಲವೊಂದು ಲೈಟುಗಳು ಅಧಾರದಲ್ಲಿ  ಕ್ಯಾಂಡಿಡ್ ಫೋಟೊಗ್ರಫಿ ಮಾಡುವುದು ನಿಜಕ್ಕೂ ಸವಾಲು! ಆದ್ರೆ ನನ್ನ ಬಳಿ ೫ಡಿ ಮಾರ್ಕ್ ೨ ಕ್ಯಾಮೆರ ಇತ್ತಲ್ಲ! ಫೋಟೊ ತೆಗೆಯುತ್ತಾ ಸಮಯ ರಾತ್ರಿ 9-40 ಆಗಿದ್ದು ಗೊತ್ತೇ ಆಗಲಿಲ್ಲ.

   ಮನೆ ತಲುಪಿದಾಗ ಹತ್ತು ಗಂಟೆ. ಹತ್ತೇ ನಿಮಿಷಕ್ಕೆ ಊಟ ಮಾಡುವ ಶಾಸ್ತ್ರ ಮಾಡಿ  ಅದೇ ಕ್ಯಾಮೆರ ಕಿಟ್ ಮತ್ತು ಬಟ್ಟೆಯ ಲಗೇಜ್ ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಹೊರಟೆನಲ್ಲ! ಹತ್ತೇ ನಿಮಿಷಕ್ಕೆ ನವರಂಗ್ ಬಸ್ ಸ್ಟಾಪ್. ಸಮಯಕ್ಕೆ ಸರಿಯಾಗಿ ಬಸ್ ಬಂತು. ಬಸ್‍ನೊಳಗೆ ಮಲಗಿದಷ್ಟೇ ಗೊತ್ತು. ಪುತ್ತೂರು ತಲುಪಿದಾಗ ಬೆಳಿಗ್ಗೆ ಏಳು ಗಂಟೆ.  ಪುತ್ತೂರಿನ ವಿವೇಕಾನಂದ ಕಾಲೇಜಿನವರು ಕಾಯ್ದಿರಿಸಿದ್ದ ರಾಮ ಹೋಟಲಿನಲ್ಲಿ ತಲುಪಿ ಸ್ನಾನ ಮಾಡುವ ಹೊತ್ತಿಗೆ ಬಾಗಲಕೋಟೆಯ ಇಂದ್ರ ಕುಮಾರ್ ಫೋನು. ಇಂದ್ರಕುಮಾರ್ ಮತ್ತು ಮುಂಡರಗಿಯ ಸಲೀಂ ಇಬ್ಬರೂ ಪುತ್ತೂರು ತಲುಪಿದ್ದರು. ಕಾಲ್ನಡಿಯಲ್ಲೇ ಬನ್ನಿ ಕೇವಲ ಎರಡು ಐದು ನಿಮಿಷದಲ್ಲಿ ಹೋಟಲ್ ಸಿಗುತ್ತದೆ ಎಂದಿದ್ದೆ ಹಾಗೆ ಬಂದರು ಅವರ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಫೋಟೊಗ್ರಫಿ ಪ್ರದರ್ಶನದ ಉದ್ಘಾಟನೆ ಮತ್ತು ನನ್ನ ಫೋಟೊಗ್ರಫಿ ಸಂವಾದ ವಿಚಾರವನ್ನು ತಿಳಿದು ನನಗಿಂತ ದೂರದಲ್ಲಿರುವ ಬಾಗಲಕೋಟೆಯಿಂದ ಇಂದ್ರಕುಮಾರ್ ಮತ್ತು ಗದಗ್ ಜಿಲ್ಲೆ ಮುಂಡರಗಿ ತಾಲ್ಲೂಕಿನ ಸಲೀಂ ಬಾಳಬಟ್ಟಿ ಪುತ್ತೂರಿಗೆ ಆಗಮಿಸಿದ್ದರು. ನಮ್ಮ ಕರ್ನಾಟಕದ ಪೂರ್ತಿ ಹಿಂದುಳಿದ ಪ್ರದೇಶಗಳಿಂದ ಬಂದು ಫೋಟೊಗ್ರಫಿಯಲ್ಲಿನ ಶ್ರದ್ಧೆ, ಶ್ರಮ, ಭಕ್ತಿಯಿಂದ ಇವರು ಮಾಡುತ್ತಿರುವ ಸಾಧನೆಯಿಂದಾಗಿ ಮುಂದಿನ ವರ್‍ಷಗಳಲ್ಲಿ ಇವರು ಅಂತರರಾಷ್ಟ್ರೀಯ ಮಟ್ಟದ ಮನ್ನಣೆ ಪಡೆಯಲು ಸಿದ್ದರಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಅವರು ನನ್ನಂತೆ ಜನವರಿ ಇಪ್ಪತ್ತಾರ ಸಂಜೆ ಸಾಗರ ಫೋಟೊಗ್ರಫಿಯಲ್ಲಿನ ಬಹುಮಾನ ವಿತರಣೆ ಸಮಾರಂಭದಲ್ಲಿ ಬಹುಮಾನಗಳನ್ನು ಪಡೆದು ಅಲ್ಲಿಂದಲೇ ನೇರವಾಗಿ ರಾತ್ರಿ ಹೊರಟು ಪುತ್ತೂರಿಗೆ ಬಂದಿದ್ದರು. ಅವರು ಸಿದ್ದರಾದ ಮೇಲೆ ನಾವು ಬೆಳಗಿನ ತಿಂಡಿ ಮುಗಿಸುವ ಹೊತ್ತಿಗೆ ಹತ್ತು ಗಂಟೆಯಾಗಿತ್ತು.  ಫೋಟೊಗ್ರಫಿ ಪ್ರದರ್ಶನ ಮತ್ತು ಸಂವಾದ ವಿಚಾರವನ್ನು ತಿಳಿದ ಮಂಗಳೂರಿನ ಕನ್ನಡ ಪ್ರಭ ಪತ್ರಕರ್ತರಾದ ಹರೀಶ್ ಮಾಂಬಾಡಿಯವರು ನನ್ನನ್ನು ಬೇಟಿಯಾಗಲು ನಾವು ಉಳಿದಕೊಂಡಿದ್ದ ರೂಮಿಗೆ ಬಂದಿದ್ದು ನನ್ನ ಸೌಭಾಗ್ಯವೇ ಅನಿಸಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಆತ್ಮೀಯ ಗೆಳೆಯರಾದ ಪುತ್ತೂರಿನ ವಿನಾಯಕ್ ನಾಯಕ್ ಕೂಡ ಬಂದರು. ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರೇ ಮುಖ್ಯ ಕಾರಣ. ಬೆಂಗಳೂರಿಗೆ ಬಂದಾಗಲೆಲ್ಲಾ ನನ್ನ ಮನೆಗೆ ಬೇಟಿಕೊಡುವ ಅವರು ಪುತ್ತೂರಿನ ಕಲಾತ್ಮಕ ಫೋಟೊಗ್ರಫಿಗೆ ಅವರ ಕೊಡುಗೆ ದೊಡ್ಡದು ಎನ್ನುವುದು ನನ್ನ ಭಾವನೆ.

     ನಾನು, ಇಂದ್ರಕುಮಾರ್, ಸಲೀಂ, ಹರೀಶ್ ಮಾಂಬಾಡಿ, ವಿನಾಯಕ್ ನಾಯಕ್ ಎಲ್ಲರೂ ಮಾತಾಡಲು ಪ್ರಾರಂಭಿಸಿದೆವಲ್ಲ, ಬ್ಲಾಗ್, ಫೋಟೊಗ್ರಫಿ, ಪತ್ರಿಕಾರಂಗ, ಬರವಣಿಗೆ ಇನ್ನೂ ಅನೇಕ ವಿಚಾರಗಳಿಂದಾಗಿ ಹನ್ನೆರಡು ಗಂಟೆಯಾಗಿದ್ದೆ ಗೊತ್ತಾಗಲಿಲ್ಲ. ನಾವೆಲ್ಲಾ ಬಹು ಕಾಲದ ಹಳೆಯ ಗೆಳೆಯರೇನೋ ಅನ್ನುವಂತೆ ಅನೇಕ ಆರೋಗ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದೆವು. ಇನ್ನೂ ಮಾತಾಡಲು ಮುಗಿಯದ ಅನೇಕ ವಿಚಾರಗಳಿದ್ದರೂ ಸಮಯದ ಒತ್ತಡದಿಂದಾಗಿ ನಮ್ಮ ಮಾತುಗಳನ್ನು ನಿಲ್ಲಿಸಬೇಕಾಯ್ತು.  ನಂತರ ಹೋಟಲ್ಲಿಗೆ ಹೋಗಿ ಊಟ ಮಾಡುವ ಶಾಸ್ತ್ರ ಮುಗಿಸಿ ಹೊರಬರುವಾಗ ಒಂದುಗಂಟೆ.  ಒಂದು ಕಾಲಿಗೆ ಸರಿಯಾಗಿ ಕಾಲೇಜಿ ಕನ್ನಡ ಉಪನ್ಯಾಸಕರಾದ ಮಾನ್ಯ ಶ್ರೀಧರ್ ಸರ್ ನಮ್ಮನ್ನು ಕರೆದುಕೊಂಡು ಹೋಗಲು ಬಂದರು.  ಪುತ್ತೂರಿನ ವಿವೇಕನಂದ ಕಾಲೇಜು ದೊಡ್ಡದು. ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ. ಅಲ್ಲಿ ವಿದ್ಯಾರ್ಥಿಗಳು ಮತ್ತು ಕೆಲವು ಅದ್ಯಾಪಕರ ಫೋಟೊಗಳೂ ಸೇರಿದಂತೆ ಒಟ್ಟು ನೂರೈವತ್ತನಾಲ್ಕು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು.  ಅವರಿಗೆ ಗೊತ್ತಿಲ್ಲದಂತೆ ಪಿಕ್ಟೋರಿಯಲ್, ಫೋಟೊಜರ್ನಲಿಸಂ, ಫೋಟೊಟ್ರಾವಲ್, ಕ್ಯಾಂಡಿಡ್, ವೈಲ್ಡ್ ಲೈಫ್, ಮ್ಯಾಕ್ರೋ, ಲ್ಯಾಂಡ್ಸ್ಕೇಪ್.....ಇತ್ಯಾದಿ ಛಾಯಾಚಿತ್ರಗಳಿದ್ದವು. ಪುತ್ತೂರಿನ ವಿವೇಕಾನಂದ ಕಾಲೇಜಿನ ವಿಧ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿವರ್ಷ ತಾವು ಕ್ಲಿಕ್ಕಿಸಿದ ಫೋಟೊಗ್ರಫಿಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ.  ಒಂದು ಪುಟ್ಟ ಪುತ್ತೂರಿನಂತ ಪುತ್ತೂರಿನ ತಾಲ್ಲೂಕಿನಲ್ಲಿ ಇಂಥ ಫೋಟೊಗ್ರಫಿ ಪ್ರದರ್ಶನ ಅದರೆಡೆಗಿನ ಆಸಕ್ತಿ ಮತ್ತು ಫೋಟೊಗ್ರಫಿಯ ಬೆಳವಣಿಗೆ ನಿಜಕ್ಕೂ ಅನುಕರಣೀಯ ಎಂದು ನನ್ನ ಅನಿಸಿಕೆ. ಯಾವ ವಿಚಾರದ ಬಗ್ಗೆ ಮಾತಾಡಬೇಕೆಂದುಕೊಂಡವನಿಗೆ ಅಲ್ಲಿನ ಚಿತ್ರಗಳನ್ನು ನೋಡಿದ ತಕ್ಷಣ ಸಂವಾದಕ್ಕೆ ವಿಚಾರ ಸಿಕ್ಕಂತಾಗಿ ನನಗೆ ಖುಷಿಯಾಯ್ತು.
                      ಪುತ್ತೂರ್ ವಿವೇಕನಂದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಛಾಯಾಚಿತ್ರ ಪ್ರದರ್ಶನ
     ಪಿಕ್ಟೋರಿಯಲ್ ಫೋಟೊಗ್ರಫಿ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ವಿವರಣೆ

      ನಂತರ ಸಂವಾದ

    ಬೆಂಗಳೂರಿನ ಫೋಟೊ ಜರ್ನಲಿಸಂ ವಿಧ್ಯಾರ್ಥಿಗಳಿಗೆ ಫೋಟೊಗ್ರಫಿ ಕಲಿಸಿದ್ದರೂ ಹೀಗೆ ನೇರವಾದ ಸಂವಾದದ ಅವಕಾಶ ಮೊದಲನೆಯದು. ಎರಡುಗಂಟೆಗಳ ಸಂವಾದದಲ್ಲಿ ಮೊದಲಿಗೆ ಒಂದು ಗಂಟೆ ನನ್ನ ಪಿಕ್ಟೋರಿಯಲ್ ಫೋಟೊಗ್ರಫಿ ಪ್ರದರ್ಶನ ಮತ್ತು ವಿವರಣೆ ನಂತರದ ಒಂದು ಗಂಟೆ ಸಂವಾದ ನನ್ನ ಮಟ್ಟಿಗೆ ಮರೆಯಲಾಗದ ಅನುಭವ. ವಿಧ್ಯಾರ್ಥಿಗಳಲ್ಲಿದ್ದ ಕುತೂಹಲ ಅದಕ್ಕೆ ಪೂರಕವಾಗಿ ಮೂಡುತ್ತಿದ್ದ ಪ್ರಶ್ನೆಗಳು, ಅದಕ್ಕೆ ನನಗೆ ತಿಳಿದ ಅನುಭವದ ಉತ್ತರ....ಹೀಗೆ ನಾಲ್ಕು ಗಂಟೆಯಾಗಿದ್ದು ಗೊತ್ತೇ ಆಗಲಿಲ್ಲ.  ನಂತರ ಹದಿನೈದು ನಿಮಿಷ ವಿರಾಮ ಅದರ ನಂತರ ಫೋಟೊಗ್ರಫಿ ಉದ್ಘಾಟನ ಕಾರ್ಯಕ್ರಮ. ಎಂದಿನಂತೆ ದೀಪ ಹೊತ್ತಿಸುವುದೋ ಅಥವ ಟೇಪ್ ಕಟ್ ಮಾಡುವ ಬದಲಾಗಿ ಕ್ಯಾಮೆರ ಕ್ಲಿಕ್ ಮಾಡಿ ಫೋಟೊ ತೆಗೆಯುವ ಮೂಲಕ ಉದ್ಘಾಟನೆಯಾಗಿದ್ದು ವಿಭಿನ್ನವೆನಿಸಿತ್ತು.  ಪುಟ್ಟ ಕಾರ್ಯದಲ್ಲಿ ಸಂವಾದ ವಿಚಾರಗಳು, ಫೋಟೊಗ್ರಫಿ ಇನ್ನಿತರ ವಿಚಾರಗಳು..ಹೀಗೆ ಒಂದು ವ್ಯವಸ್ಥಿತವಾದ ಸೊಗಸಾದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಐದುವರೆಯಾಗಿತ್ತು.
                      ಉದ್ಘಾಟಣೆ ಕಾರ್ಯಕ್ರಮ

ಅವರಿಂದ ಬೀಳ್ಕೊಟ್ಟು ರೂಮಿಗೆ ತಲುಪುವ ಹೊತ್ತಿಗೆ ಆರುಗಂಟೆ. ಅವತ್ತು ರಾತ್ರಿ ಅಲ್ಲಿದ್ದು ಮರುದಿನ ಬೆಳಿಗ್ಗೆ ಉಡುಪಿಗೆ ಹೋಗುವ ಯೋಜನೆ ಹಾಕಿಕೊಂಡು ರೂಮಿನಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳೋಣವೆಂದುಕೊಂಡಿದ್ದೆನಲ್ಲ, ಇಂದ್ರಕುಮಾರ್ ಮಾಡಿದ ಹೊಸ ಉಪಾಯದಿಂದಾಗಿ ಅದು ವಿಫಲವಾಯ್ತು. ಆದ್ರೂ ಅದು ಒಂಥರ ಒಳ್ಳೆಯದೇ ಆಯ್ತು. ಆತ ಹೊಸ ಅಲೋಚನೆ ಏನೆಂದರೆ ಇವತ್ತು ರಾತ್ರಿ ಪುತ್ತೂರಿನಲ್ಲಿ ಕಳೆಯುವ ಬದಲು ಈಗಲೇ ಉಡುಪಿಗೆ ಹೊರಟುಬಿಟ್ಟರೆ ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತೇವೆ ಅಲ್ಲಿ ರೂಮ್ ಮಾಡಿ ಮಲಗಿದ್ದು ಮರುದಿನ ಬೇಗನೆ ಎದ್ದು ಸಿದ್ದರಾಗಿ ಬೆಳಗಿನ ಸೂರ್ಯನ ಹಿತವಾದ ಬೆಳಕಿನಲ್ಲಿ ಏನಾದರೂ ಫೋಟೊಗ್ರಫಿ ಮಾಡೋಣ ಎನ್ನುವುದು ಇಂದ್ರಕುಮಾರ್ ಆಲೋಚನೆ. ಆತನ ಅಲೋಚನೆ ಸರಿಯೆನಿಸಿ ಮಂಗಳೂರು ಬಸ್ ಹತ್ತಿಯೇ ಬಿಟ್ಟೆವು. ಮತ್ತೆ ಮಂಗಳೂರಿನಿಂದ ಉಡುಪಿಗೆ ಪ್ರಯಾಣ. ನಾಳೆ ಬೆಳಿಗ್ಗೆ ಎಲ್ಲಿಗೆ ಹೋಗುವುದು, ಏನು ಫೋಟೊಗ್ರಫಿ ಮಾಡುವುದು ಹೀಗೆ ಅನೇಕ ವಿಚಾರಗಳಲ್ಲಿ ನಾನು ತಲ್ಲೀನನಾಗಿದ್ದರೆ ಇಂಥ ಅಲೋಚನೆಯನ್ನು ನಮ್ಮ ತಲೆಯೊಳಗೆ ಬಿಟ್ಟು ಪೂರ್ತಿ ಮೂರು ಗಂಟೆ ನೆಮ್ಮದಿಯಾಗಿ ಬಸ್ಸಿನಲ್ಲೇ ನಿದ್ರೆ ಮಾಡಿದ್ದ ಇಂದ್ರಕುಮಾರ್.

    ಮರುದಿನ ಸ್ವಲ್ಪ ತಡವಾಗಿಯೇ ಎದ್ದಾಗ ಸಮಯ ಏಳುಗಂಟೆ.  ಅರ್ಧಗಂಟೆಯಲ್ಲಿ ಸಿದ್ದರಾಗಿ ಉಡುಪಿ ಬಸ್ ಸ್ಟಾಂಡಿನಲ್ಲಿ ತಿಂಡಿ ಮುಗಿಸಿ ಉದ್ಯಾವರದ ಕಡೆಗೆ ಬಸ್ ಹತ್ತಿದ್ದೆವಲ್ಲ! ಅಷ್ಟರಲ್ಲಿ ಕಟ್ ಪಾಡಿಯಲ್ಲಿರುವ ಛಾಯಾಗ್ರಾಹಕ ಗೆಳೆಯ ವಿವೇಕ್‍ನಿಂದ ಫೋನ್ "ಎಲ್ಲಿದ್ದೀರಿ ಮಾರಾಯ್ರೆ! ಅಂತ ವಿಚಾರಿಸಿಕೊಂಡರು. ನಿನ್ನೆ ರಾತ್ರಿ ಉಡುಪಿಗೆ ಬಂದ ಕತೆಯನ್ನು ಹೇಳಿದಾಗ "ಅರೆರೆ ನೀವು ಎಂಥದ್ದು ಮಾಡಿದ್ದು ಸುಮ್ಮನೆ ಉಡುಪಿಗೆ ಹೋಗುವ ಬದಲು ನಮ್ಮ ಮನೆಗೆ ಬರಬಹುದಿತ್ತಲ್ವ!  ನಾವು ಮುಂಬೈನಲ್ಲಿ ನೆಲೆಸಿರುವುದರಿಂದ ನನ್ನ ಕಟ್ ಪಾಡಿ ಮನೆ ಕಾಲಿಯುಂಟು ನಾಲ್ಕು ದಿನದಿಂದ ಪಡುಬಿದ್ರಿಯಲ್ಲಿ ಫೋಟೊಗ್ರಫಿ ಕಾರ್ಯಕ್ರಮವಿರುವುದರಿಂದ  ಇಲ್ಲಿಯೇ ಇದ್ದೇನೆ. ನಿನ್ನೆಯೂ ಕಾರ್ಯಕ್ರಮವಿತ್ತು. ನಾನು ರಾತ್ರಿ ಬಂದಾಗ ಹನ್ನೊಂದು ಗಂಟೆ. ನೀವು ಮೊದಲೇ ಫೋನ್ ಮಾಡಿದ್ದರೆ ಮನೆಯ ಕೀಯನ್ನು ಕೆಳಗೆ ಕೊಟ್ಟು ಹೋಗಿತ್ತಿದ್ದೆನಲ್ಲ! ಹೋಗಲಿ ಬಿಡಿ ನೀವು ಬರುವ ಹೊತ್ತಿಗೆ ಉದ್ಯಾವರದ ಬಳಿಗೆ ನಾನು ಬರುತ್ತೇನೆ ಅಂದರು. ಅಲ್ಲಿಗೆ ನಮ್ಮ ಬೆಳಗಿನ ಫೋಟೊಗ್ರಫಿಗೆ ವಿವೇಕ್ ಕೂಡ ಸೇರಿಕೊಂಡರು.


      ನನ್ನ ಆಸೆಯಿದ್ದದ್ದೂ ಏಳು ವರ್ಷದ ಹಿಂದೆ ಮೀನಿನ ಬಲೆಯ ಫೋಟೊ ತೆಗೆದ ಸಮಯದಲ್ಲಿ ಮೀನಿನ ಬಲೆ ಎಸೆದ ರವಿ, ಅವರ ಭಾವಮೈದ ಯೋಗೇಶನನ್ನು ಬೇಟಿಮಾಡಬೇಕೆನ್ನುವ ಆಸೆಯಿತ್ತು. ಏಳುವರ್ಷದ ಹಿಂದಿದ್ದ ಉದ್ಯಾವರ ಸ್ವಲ್ಪ ಬದಲಾಗಿದ್ದರಿಂದ ಅವರ ಮನೆ ಹುಡುಕುವುದು ಕಷ್ಟವಾಗಿತ್ತು. ಎರಡು ಕಡೆ ಹಿನ್ನೀರು. ಹಾಗೆ ಸಾಗಿದರೆ ಕೊನೆಗೆ ಹಿನ್ನೀರು ಸೇರುವ ಕೊನೆಯಲ್ಲಿ ಅವರ ಮನೆ. ಒಂದೊಂದೇ ಮನೆಯ ಬಳಿ ವಿಳಾಸವನ್ನು ಕೇಳಿಕೊಂಡು ತಲುಪುವ ಹೊತ್ತಿಗೆ ಒಂದುವರೆ ಕಿಲೋಮೀಟರ್ ದಾರಿ ಸಾಗಿಸಿದ್ದೆವು. ಅವರ ಅಕ್ಕ ಮಾತ್ರ ಇದ್ದರು. ನಾನು ಮೊದಲಿಗೆ ಮಾತಾಡಿಸಿದಾಗ ಅವರಿಗೆ ನೆನಪು ಹತ್ತಲಿಲ್ಲ. ಏಳುವರ್‍ಷದ ಹಿಂದೆ ನಾನು ಅಲ್ಲಿಗೆ ಬಂದಿದ್ದು, ಟೀ ಕುಡಿದಿದ್ದು ನಂತರ ಅವರ ಮಗ ಯೋಗೇಶನ ಜೊತೆ ಬೋಟಿನಲ್ಲಿ ಕುಳಿತು ಒಂದುಗಂಟೆ ಹಿನ್ನೀರಿನಲ್ಲಿ ಸುತ್ತಾಡಿದ್ದು, ಎಲ್ಲವನ್ನು ನೆನಪಿಸಿದಾಗ  ಅವರಿಗೆ ಅದೆಲ್ಲಾ ನೆನಪಾಗಿ ಅವರ ಮುಖದಲ್ಲಿ ಅಚ್ಚರಿ ಮತ್ತು ಸಂತೋಷ ಒಟ್ಟಿಗೆ ಮೂಡಿತ್ತು.  ಅಷ್ಟೆಲ್ಲವನ್ನು ನೆನಪಿಟ್ಟುಕೊಂಡಿದ್ದೀರಲ್ಲ! ಇರಿ ಕುಡಿಯಲು ಏನಾದರೂ ತರುತ್ತೇನೆ  ಅಂತ ಹೋಗಿ ಪ್ರಿಡ್ಜಿನಿಂದ  ತಣ್ಣಗಿನ ನೀರು ಕೊಟ್ಟರು.  ಹತ್ತು ನಿಮಿಷ ಅವರೊಂದಿಗೆ ಮಾತಾಡಿ ನನ್ನ ಫೋನ್ ನಂಬರ್ ಕೊಟ್ಟು, ನಿಮ್ಮ ಮಗ ಯೋಗೇಶ್ ಬಂದರೆ ಫೋನ್ ಮಾಡಿಸಿ, ನಿಮ್ಮ ಮನೆಗೆ ಆ ಮೀನಿನ ಬಲೆಯ ಫೋಟೊವನ್ನು ಕಳಿಸಿಕೊಡುತ್ತೇನೆ. ಎಂದು ಹೇಳಿ ನಾವು ಮೂವರು ಅಲ್ಲಿಂದ ಹೊರಟೆವು. ಏಳು ವರ್ಷದ ಹಿಂದಿನ ಹಳೆಯ ನೆನಪುಗಳು ಆ ಮೀನಿನ ಬಲೆಯ ಫೋಟೊ, ನಂತರ ಅದು ಪಡೆದುಕೊಂಡ ಅಂತರರಾಷ್ಟ್ರಿಯ ಮಟ್ಟದ ಹತ್ತಾರು ಪ್ರಶಸ್ಥಿಗಳು ಇದಕ್ಕೆಲ್ಲಾ ಕಾರಣಕರ್ತರಾದ ಇವರು ಮತ್ತೆ ಈ ಮನೆ ಎಲ್ಲವೂ ಮತ್ತೆ ಮತ್ತೆ ಮರುಕಳಿಸಿದ್ದವು.


       ಉದ್ಯಾವರದಲ್ಲಿ ಆಗಲೇ ವಿವೇಕ್ ಆಗಲೇ ತಮ್ಮ ಆಲ್ಟೋ ಕಾರಿನಲ್ಲಿ ನಮಗಾಗಿ ಕಾಯುತ್ತಿದ್ದರು. ಆಗಲೇ ಸಮಯ ಒಂಬತ್ತು ದಾಟಿತ್ತು. ಹಿನ್ನೀರು, ನಡುವೆ ಚಲಿಸುತ್ತಿದ್ದ ದೋಣಿಗಳು ಇತ್ಯಾದಿಗಳ ಫೋಟೊವನ್ನು ತೆಗೆದೆವು. ಅಲ್ಲಿಂದ ನೇರವಾಗಿ ವಿವೇಕ್ ಮನೆಗೆ. ಅವರ ಮನೆಯಲ್ಲಿದ್ದಷ್ಟು ಹೊತ್ತು ನಮ್ಮ ಫೋಟೊಗ್ರಫಿ ಜೀವನಗಳು, ಮುಂಬೈನಲ್ಲಿ ಅವರ ಫೋಟೊಗ್ರಫಿ ವ್ಯವಹಾರ, ಅಲ್ಲಿಗೂ ಇಲ್ಲಿಗೂ ಹೋಲಿಕೆ ಇತ್ಯಾದಿ ವಿಚಾರಗಳನ್ನೆಲ್ಲಾ ಮಾತಾಡುತ್ತಾ ಸಮಯವಾಗಿದ್ದೇ ಗೊತ್ತಾಗಲಿಲ್ಲ. ಊಟ ಮುಗಿಸಿ ವಿಶ್ರಾಂತಿ ತೆಗೆದುಕೊಂಡು ಕಂಬಳ ನಡೆಯುವ ಸ್ಥಳಕ್ಕೆ ತಲುಪುವ ಹೊತ್ತಿಗೆ ಆಗಲೇ ಸಮಯ ನಾಲ್ಕುಗಂಟೆ.


      ಸರ್ ಕಂಬಳಕ್ಕೆ ಇನ್ನೂ ಬೇಗ ಬರಬೇಕಿತ್ತು ಅಂತ ಇಂದ್ರಕುಮಾರ್‌ ಯೋಚಿಸುತ್ತಿದ್ದರಲ್ಲ, ನೋಡಿ ನೀವು ಮದ್ಯಾಹ್ನ ಹನ್ನೆರಡು ಗಂಟೆಗೆ ಬಂದುಬಿಟ್ಟರೆ ಆಗಿನಿಂದಲೇ ಕಂಬಳ ಓಟದ ಫೋಟೊಗ್ರಫಿ ಮಾಡಲು ಶುರುಮಾಡಿಬಿಡುತ್ತೀರಿ. ಪ್ರತಿ ಓಟದ ಸ್ಪರ್ಧೆಯನ್ನು ಉತ್ಸಾಹ ಮತ್ತು ಹುರುಪಿನಿಂದ ಕ್ಲಿಕ್ಕಿಸುತ್ತಿರುತ್ತೀರಿ. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ನಿಮ್ಮ ಮೊಮೊರಿ ಕಾರ್ಡು ಮುಗಿಯುತ್ತಾ ಬಂದಿರುವುದು ನಿಮಗೆ ಗೊತ್ತಾಗುವುದಿಲ್ಲ.  ಹಾಗೆ ನೋಡಿದರೆ ಸರಿಯಾದ ಫೋಟೊ ತೆಗೆಯಲು ನಿಮಗೆ ಸಾಧ್ಯವಾಗುವುದು ನಾಲ್ಕು-ಐದುಗಂಟೆಯ ನಂತರವೇ. ಹಿತವಾದ ತಿಳಿಬಿಸಿಲಿನ ಆ ಸಮಯದಲ್ಲಿ ಸರಿಯಾಗಿ ಹತ್ತು ಫೋಟೊ ತೆಗೆದರೆ ಸಾಕು, ಆದ್ರೆ ಬೆಳಗ್ಗಿನಿಂದ ಸತತವಾಗಿ ಕ್ಲಿಕ್ಕಿಸಿ ಮೊಮೊರಿಕಾರ್ಡು ಪುಲ್ ಆಗಿಬಿಟ್ಟಿರುತ್ತದೆ. ಮತ್ತೆ  ಅತ್ಯುತ್ತಮ ಸಮಯದ ಫೋಟೊಗ್ರಫಿ ಸಮಯದಲ್ಲಿ ಪೇಚಾಡುವಂತಾಗುತ್ತದೆ.  ಅದರ ಬದಲು ಈ ನಾಲ್ಕು ಗಂಟೆಯಿಂದ ಸಂಜೆ ಸೂರ್ಯ ಮುಳುಗುವ ಆರುವರೆಯವರೆಗೂ ಚೆನ್ನಾಗಿ ಫೋಟೊಗ್ರಫಿ ಮಾಡಬಹುದಲ್ವಾ...ನೀವೇ ನೋಡುವಿರಂತೆ ಇಂಥ ತೆಳು ಬಿಸಿಲಿನಲ್ಲಿ ಈ ಕೋಣದ ಓಟದ ಸ್ಪರ್ಧೆ ಹೇಗೆ ಕಾಣುತ್ತದೆ ಅಂತ ಹೇಳಿದಾಗ ಅವರಿಗೆ ಸಮಾಧಾನವಾಯಿತು.

      ಇಲ್ಲಿಂದ ನಮ್ಮ  ಕಂಬಳ ಫೋಟೊಗ್ರಫಿ ಶುರುವಾಗಿತ್ತು. ಸಲೀಂ ಸೈಡಿನಲ್ಲಿ ನಿಂತು ಪ್ಯಾನಿಂಗ್ ಫೋಟೊಗ್ರಫಿ ಮಾಡುತ್ತಿದ್ದರೆ ಇಂದ್ರಕುಮಾರ್ ಎದುರಿಗೆ ಬರುವ  ಕಂಬಳ ಓಟದ ಫೋಟೊ ತೆಗೆಯುತ್ತಿದ್ದರು. ಕಳೆದ ಐದು ವರ್ಷಗಳ ನಂತರ ಮೊದಲ ಬಾರಿಗೆ ಕಂಬಳ ಫೋಟೊಗ್ರಫಿಗೆ ಹೋಗಿದ್ದೆನಲ್ಲ. ತುಂಬಾ ಖುಷಿಯಾಗಿತ್ತು. ಸಂಜೆ ಆರುವರೆಯಾಯಿತಲ್ಲ! ಸೂರ್ಯ ಮುಳುಗಿ ಪೂರ್ತಿ ಕತ್ತಲಾಯಿತು. ಸುತ್ತಲೂ ಪ್ಲೆಡ್ ಲೈಟುಗಳು ಹತ್ತಿಕೊಂಡವು. ಇಂದ್ರಕುಮಾರ್ ಮತ್ತು ಸಲೀಮ್ ಕ್ಯಾಮೆರ ಪ್ಯಾಕ್ ಮಾಡಿ ಹೋಗೋಣವೆಂದುಕೊಂಡರು. ಆದ್ರೆ ನನಗೆ  ರಾತ್ರಿ ಬೆಳಕಿನಲ್ಲಿ  ಕಂಬಳ ಫೋಟೊಗ್ರಫಿ ಅದರಲ್ಲೂ ಚಲನೆಯುಕ್ತ ಫೋಟೊಗ್ರಫಿ ಮಾಡಬೇಕು ಎನ್ನುವ ಆಸೆಯಿತ್ತಲ್ಲ ಇನ್ನರ್ಧ ಗಂಟೆ ಅಂತ ನನ್ನ ಫೋಟೊಗ್ರಫಿ ಮುಂದುವರಿಸಿದ್ದೆ.  ಸಂಜೆ ಹೊತ್ತಿನಲ್ಲಿ ಫೋಟೊಗ್ರಫಿ ಮಾಡುವುದು ಒಂಥರ ಅನುಭವವಾದರೆ ರಾತ್ರಿ ಬೆಳಕಿನಲ್ಲಿ ಕಂಬಳ ಫೋಟೊಗ್ರಫಿ ಮಾಡುವುದು ನಿಜಕ್ಕೂ ಸವಾಲು ಆದ್ರೆ ನನ್ನ ೫ಡಿ ಮಾರ್ಕ್ ಕ್ಯಾಮೆರ ಇಂಥ ಪ್ರಯೋಗಗಳಿಗೆ ಸಿದ್ಧವಾಗಿತ್ತು. ಮೊದಲ ಬಾರಿಗೆ ಇಂಥಪ್ರಯೋಗದಲ್ಲಿ ಯಶಸ್ವಿಯಾಗಿದ್ದೇನೆ ಫೋಟೊಗಳೆಲ್ಲಾ ತುಂಬಾ ಚೆನ್ನಾಗಿ ಬಂದಿವೆ. ಕಂಬಳ ಫೋಟೊವನ್ನು ನಾನು ಯಾಕೆ ಹಾಕಿಲ್ಲವೆಂದರೆ ಅವೆಲ್ಲವನ್ನು ಆಯ್ಕೆಮಾಡಿ ಕರೆಕ್ಷನ್ ಮಾಡಬೇಕಿದೆ. ಮತ್ತೆ ಸ್ಪರ್ಧೆಗೆ ಕಳುಹಿಸುವ ಸಲುವಾಗಿ ಇರುವುದರಿಂದ ಇಲ್ಲಿ ಹಾಕಲಾಗಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ.


        ಇಂದ್ರ ಪ್ರತಿ ಭಾರಿಯೂ ಕ್ಲಿಕ್ಕಿಸಿದ ಫೋಟೊವನ್ನು ತೋರಿಸಿ ಹೇಗಿದೆ ಅಂತ ಕೇಳಿ ಕಂಪೋಜಿಷನ್, ತಾಂತ್ರಿಕ ವಿವರಣೆಯನ್ನು ಚೆಕ್ ಮಾಡಿಕೊಳ್ಳುತ್ತಿದ್ದರಲ್ಲ, ಒಮ್ಮೆ ನಾನು ಅವರಿಂದ ಸ್ವಲ್ಪ ದೂರ ಪ್ಯಾನಿಂಗ್ ಫೋಟೊಗ್ರಫಿಗೆ ಸೈಡಿಗೆ ಹೋದಾಗ ತಾವು ಆಗ ತಾನೆ ಕ್ಲಿಕ್ಕಿಸಿದ ಫೋಟೊವನ್ನು ತಮ್ಮ ಪಕ್ಕದಲ್ಲಿದ್ದ ಹಿರಿಯರಿಗೆ ತೋರಿಸಿದ್ದಾರೆ. ಅವರು ಚೆನ್ನಾಗಿದೆಯೆಂದು ಹೇಳಿ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದಾರೆ. ಅಷ್ಟರಲ್ಲಿ ನಾನು ಪಕ್ಕ ಬಂದೆನಲ್ಲ, ನೋಡಿ ಸರ್ ಅಂತ ಅವರ ನನಗೆ ಕಾರ್ಡು ತೋರಿಸಿದರು. ಹೌದಾ, ಓಕೆ ಅಂತ ಮತ್ತೆ ನಾನು ಫೋಟೊಗ್ರಫಿಯಲ್ಲಿ ಮಗ್ನನಾಗಿಬಿಟ್ಟೆ.  ಆದ್ರೆ ಮರುಕ್ಷಣದಲ್ಲಿಯೇ ಅ ಕಾರ್ಡಿನಲ್ಲಿ "ಟಿ. ಶ್ರೀನಿವಾಸ ರೆಡ್ಡಿ" ಅಂತ ಇದ್ದಿದ್ದು ನೆನಪಾಗಿ ಮತ್ತೊಮ್ಮೆ ಆ ಕಾರ್ಡನ್ನು  ಕೊಡಿ ಇಲ್ಲಿ ಅಂತ ಪಡೆದು ನೋಡಿದೆ. "ಡೌಟೇ ಇಲ್ಲ ಇವರು ಅವರೇ...ಖುಷಿಯಿಂದ ಕುಣಿದಾಡುವಂತಾಗಿತ್ತು. ಆಂದ್ರಪ್ರದೇಶದ ವಿಜಯವಾಡದಲ್ಲಿರುವ ಇವರು ದಕ್ಷಿಣ ಭಾರತದ ಅತ್ಯುತ್ತಮ ಪಿಕ್ಟೋರಿಯಲ್ ಛಾಯಾಗ್ರಾಹಕರಲ್ಲಿ ಒಬ್ಬರು. ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಫೋಟೊಗ್ರಫಿಯಲ್ಲಿ ಅದ್ಬುತವೆನಿಸುವ ಸಾಧನೆ ಮಾಡಿದ್ದಾರೆ. ಒಂಥರ ಆಂದ್ರಪ್ರದೇಶದ ಪಿಕ್ಟೋರಿಯಲ್ ಐಕಾನ್ ಎಂದೆ ಹೇಳಬಹುದು.  ಹತ್ತಿರ ಹೋಗಿ ನನ್ನ ಪರಿಚಯ ಮಾಡಿಕೊಂಡೆನಷ್ಟೆ. "ಒಹ್! ಶಿವು.ಕೆ ಬೆಂಗಳೂರು, ಐ ಅಮ್ ಸರ್ಪ್ರೈಸ್, ಯು ಅರ್ ಮ್ಯ ಫೇವರೇಟ್ ಫೋಟೊಗ್ರಫರ್ ಅನ್ನುತ್ತ ನನ್ನನ್ನು ಅಪ್ಪಿಕೊಂಡುಬಿಟ್ಟರು.  ಅವರ ಗೆಳೆಯರನ್ನು ಕರೆದು ನನಗೆ ಪರಿಚಯಿಸಿದರಲ್ಲ...ಆಗ ಗೊತ್ತಾಯಿತು. ಮತ್ತೊಬ್ಬ ಗ್ರೇಟ್ ಪಿಕ್ಟೋರಿಯಲ್ ಫೋಟೊಗ್ರಫರ್ ಮುಸನಿ  ವಿಜಯಭಾಸ್ಕರ್ ಅಂತ. ನಾವೆಲ್ಲ ಒಟ್ಟಿಗೆ ಫೋಟೊ ತೆಗೆಸಿಕೊಂಡೆವು. "ಇಂಡಿಯನ್ ಫೆಡರೇಷನ್ ಅಪ್ ಫೋಟೊಗ್ರಫಿ ನಡೆಸುವ ಕನ್‍ವೆನ್ಶನ್ ಗೆ ನನ್ನನ್ನು ಅಹ್ವಾನಿಸಿದರು. ಅವರನ್ನು ಬೇಟಿಯಾಗಿದ್ದು ನನಗಂತೂ ವರ್ಣಿಸಲಾಗದ ಅನುಭವ. ನಾವು ಛಾಯಾಗ್ರಾಹಕರು ಫೋಟೊ ತೆಗೆಯಲು ನಾ ಮುಂದು ತಾ ಮುಂದು ಅಂತ ಒಬ್ಬರಿಗೊಬ್ಬರು ಮುನ್ನುಗ್ಗುವುದು, ಅವನು ತನ್ಮಯನಾಗಿ ಫೋಟೊ ಕ್ಲಿಕ್ಕಿಸುವಾಗ ಇವನು ಅಡ್ಡಬರುವುದು ಅಮೇಲೆ ಸಾರಿ ಕೇಳುವುದು, ಈತ ಓಕೆ ಅಂತ ಹೇಳಿದರೂ ಮನಸ್ಸಿನಲ್ಲಿಯೇ ಬೈದುಕೊಳ್ಳುವುದು ನಡೆಯುತ್ತಿತ್ತಲ್ಲ, ಆಗ ನಾನು ಇವರನ್ನು ಎಷ್ಟು ಸಲ ಬೈದುಕೊಂಡಿದ್ದೆನೋ, ಅವರು ನಮ್ಮನ್ನು ಎಷ್ಟು ಸಲ ಬೈದುಕೊಂಡಿದ್ದರೋ....ಆದ್ರೆ ಕೊನೆಯಲ್ಲಿ ಹೀಗೆ ಅನಿರೀಕ್ಷಿತವಾಗಿ ಬೇಟಿಯಾಗಿದ್ದು ಮಾತ್ರ "ಯಾರೇ ನೀನು ಚಲುವೆ"  ಸಿನಿಮಾ ಸನ್ನಿವೇಶದಂತೆ ನಾಯಕ ನಾಯಕಿಯ ಜೊತೆಗಿದ್ದರೂ ಆವಳನ್ನು ಗುರುತಿಸಲಾಗದಂತೆ, ಹಾಗೆ ನಾಯಕಿಯೂ ಕೂಡ ತನ್ನ ಪ್ರೇಮಿ ಜೊತೆಯಲ್ಲಿದ್ದರೂ ಗುರುತಿಸಲಾಗದಂತೆ ಓಡಾಡುತ್ತಿರುತ್ತಾರಲ್ಲ ಹಾಗೆ ಇಲ್ಲಿಯೂ ಆಗಿದ್ದು ಮಾತ್ರ ಕಾಕತಾಳಿಯ.

ಆಂದ್ರಪ್ರದೇಶದ ಫೋಟೊಗ್ರಫಿ ಐಕಾನ್‍ಗಳ ಜೊತೆ ನಾನು ಎಡದಿಂದ ನೀಲಿ ಅಂಗಿಯವರು ಶರೀಫ್, ಮುಸನಿ ವಿಜಯಭಾಸ್ಕರ್, ನಾನು, ಟಿ.ಶ್ರೀನಿವಾಸ ರೆಡ್ಡಿ ಮತ್ತು ಸಲೀಂ
          ನಮ್ಮ ಇಂದ್ರಕುಮಾರ್ ಮತ್ತೆ ಜೊತೆಯಾದಾಗ

      ಅವತ್ತು ರಾತ್ರಿ ಉಡುಪಿಯಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ಬೆಳಿಗ್ಗಿನ ಏಳುಗಂಟೆ. ಹಿಂದಿನ ದಿನ ಪೂರ್ತಿ ಸುತ್ತಾಡಿದ್ದರಿಂದ ಬಸ್ಸಿನ ಸ್ಲೀಪರ್ ಕೋಚಿನಲ್ಲಿ ಚೆನ್ನಾಗಿ ನಿದ್ರೆ ಬಂದಿತ್ತು. ಮನೆಗೆ ಬಂದವನೆ ಒಂದೇ ಗಂಟೆಯಲ್ಲಿ ಚಿತ್ರಸಂತೆಗೆ ಹೋಗಲು ಸಿದ್ದನಾಗಿದ್ದೆ.


ಲೇಖನ :ಶಿವು.ಕೆ
ಚಿತ್ರಗಳು: ಸಲೀಂ ಮತ್ತು ಇಂದ್ರಕುಮಾರ್

Friday, January 6, 2012

ಮಂಗಳೂರಿನಲ್ಲಿ ನನ್ನ ಕಿರುಚಿತ್ರ "ಬೆಳಗಾಯ್ತು" ಪ್ರದರ್ಶನ

ದಿನಾಂಕ:15-1-2012 ರಂದು ಮಂಗಳೂರಿನಲ್ಲಿ ನಡೆಯುವ "ಆಂಬಿಟ್ ಕಿರುಚಿತ್ರ ಉತ್ಸವದಲ್ಲಿ 19 ಚಿತ್ರಗಳ ಜೊತೆಗೆ ಮೊದಲ ಪ್ರಯತ್ನವಾದ ನನ್ನಕಿರುಚಿತ್ರ: "ಬೆಳಗಾಯ್ತು...,ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ" ಪ್ರದರ್ಶನ ಮತ್ತು ಸ್ಪರ್ಧೆ ಆಯ್ಕೆಯಾಗಿದೆ. 
ನಿಮಗೆಲ್ಲರಿಗೂ ಸ್ವಾಗತ.

Monday, January 2, 2012

ಹೊಸ ವರ್ಷದ ಮೊದಲ ದಿನವೇ ನನ್ನ ಹೊಸ ಕ್ಯಾಮೆರ ಮತ್ತು ಲೆನ್ಸುಗಳು ಮತ್ತು EFIAP ಫೋಟೊಗ್ರಫಿ Distinction


ಅತ್ಮೀಯ ಬ್ಲಾಗ್ ಗೆಳೆಯರೆ,

ಮೊದಲಿಗೆ ನಿಮಗೆಲ್ಲ ಹೊಸ ವರ್ಷದ ಶುಭಾಶಯಗಳು.  2011 ಎನ್ನುವ ಒಂದು ವರ್ಷ ನನ್ನ ಮಟ್ಟಿಗೆ ಹೀಗೆ ಬಂದು ಹಾಗೆ ಹೋಯ್ತು ಅನ್ನುವ ಆಗಿತ್ತು.  ಕಳೆದ ವರ್ಷದ ಲೆಕ್ಕದಲ್ಲಿ ನೋಡಿದರೆ ಮೊದಲಿಗೆ ನನ್ನ ಶ್ರೀಮತಿಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ ಅಂದುಕೊಂಡಿದ್ದೇನೆ. ಏಕೆಂದರೆ ಅವಳು ಖುಷಿಯಾಗಿದ್ದಾಳೆ. ಅದು ಬಿಟ್ಟರೆ ನನ್ನ ವಿಚಾರಕ್ಕೆ ಬಂದರೆ ನನ್ನ ಮನೆ, ಪೇಪರ್ ಏಜೆನ್ಸಿ ಕೆಲಸ, ಇವೆಲ್ಲ ಎಂದಿನಂತೆ ಸಣ್ಣ ಪುಟ್ಟ ತೊಂದರೆಗಳೊಂದಿಗೆ ಸರಳ ಮತ್ತು ಸರಾಗ. ಮೂರು ಹೊತ್ತು ಊಟಕ್ಕೆ ಮತ್ತು ವರ್ಷಕ್ಕೆರಡು ಜೊತೆ ಬಟ್ಟೆಗೆ ನಮ್ಮ ಕುಟುಂಬಕ್ಕೆ ತೊಂದರೆಯಿಲ್ಲದ ವರ್ಷ. ಪೂರ್ತಿ ವರ್ಷದಲ್ಲಿ ಒಂದು "ಬೆಳಗಾಯ್ತು" ಕಿರುಚಿತ್ರ ಮತ್ತು ನನ್ನ ವೆಬ್ ಸೈಟು ಇವೆರಡು ಖುಷಿಯ ವಿಚಾರಗಳು. ಅದನ್ನು ಸಾಧನೆ ಎಂದು ನಾನು ಹೇಳಲು ಇಷ್ಟಪಡುವುದಿಲ್ಲ.  ಏಕೆಂದರೆ ಅವೆರಡರ ಪಲಿತಾಂಶ ಬಂದ ಮೇಲೆಯೇ ಅವು ಸಾಧನೆಯೋ ಅಥವ ಸುಮ್ಮನೇ ಮಣ್ಣು ಹೊತ್ತಿದ್ದೋ ಅಂತ ಗೊತ್ತಾಗುತ್ತದೆ. ಅದೆಲ್ಲದರ ಪಲಿತಾಂಶ 2012ರಲ್ಲಿ ಗೊತ್ತಾಗುತ್ತದೆ. ಇನ್ನುಳಿದಂತೆ ಬರವಣಿಗೆ ವಿಚಾರಕ್ಕೆ ಬಂದರೆ ಆ ವರ್ಷದಲ್ಲಿ ನಾನು ವಾರ ವಾರ ವೀಕು. ಏಕೆಂದರೆ ಕಳೆದ ಮೂರು ತಿಂಗಳಿಂದ ಕಂಪ್ಯೂಟರಿನ ಬರಹವನ್ನು ಕುಟ್ಟುವುದು ಮರೆತೆ ಹೋಗಿದೆ. ಇದರ ನಡುವೆ ಖುಷಿಯ ವಿಚಾರವೆಂದರೆ ಅಜಾದ್ ಸಹಕಾರದಿಂದಾಗಿ ದೊಡ್ಡಮನಿ ಮಂಜು, ರೂಪ ಎಲ್ ರಾವ್,  ಸುಧೇಶ್ ಶೆಟ್ಟಿ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದು ಒಂಥರ ಖುಷಿ ತಂದಿದೆ.

     ಇದೆಲ್ಲವನ್ನು ಬಿಟ್ಟರೆ ಒಂದಷ್ಟು ಫೋಟೊಗ್ರಫಿ ಮತ್ತು ಅದರ ಲೇಖನಕ್ಕೆ ಸಂಭಂದಿಸಿದ ಕಿರಿಕಿರಿಗಳು, ಬೇಸರಗಳು ಇದರಿಂದಾಗಿ ನಾನು ಬರವಣಿಗೆಯನ್ನು ನಿಲ್ಲಿಸಿದ್ದು ನಿಮಗೆ ಗೊತ್ತೇ ಇದೆ. ಇದು ಒಂಥರ ಒಳ್ಳೆಯದೇ ಆಯಿತೇನೋ ಅನ್ನಿಸಿತ್ತು. ಏಕೆಂದರೆ ಅದರ ನಂತರ ನಾನು ಫೂರ್ತಿ ಫೋಟೊಗ್ರಫಿಯಲ್ಲಿ ಮುಳುಗಿಹೋದೆ. ಸಾವಿರಾರು ಫೋಟೊಗಳನ್ನು ಕ್ಲಿಕ್ಕಿಸಿದೆ. ಅವೆಲ್ಲಕ್ಕೂ ಅಕ್ಷರ ರೂಪ ಕೊಟ್ಟು ಬ್ಲಾಗು, ಬಜ್ ಮತ್ತು ಫೇಸ್ ಬುಕ್ ಗೆ ಪೋಸ್ಟ್ ಮಾಡಬೇಕೆನ್ನಿಸಿದರೂ ಅದ್ಯಾಕೋ ಎಲ್ಲವನ್ನು ತಡೆಹಿಡಿದುಬಿಟ್ಟೆ.  ಕಾರಣ ಏಕೆಂದು ಗೊತ್ತಿಲ್ಲ. ಕೆಲವು ಗೆಳೆಯರ ಸಲಹೆಯನ್ನು ಕೇಳಿದಾಗ ಎಲ್ಲವನ್ನು ಫೋಸ್ಟ್ ಮಾಡಬೇಡಿ. ಪುಸ್ತಕ ರೂಪಕ್ಕೆ ಕಾಯ್ದಿರಿಸಿ ಎಂದರು. ಹಾಗೆ ಮಾಡಿದ್ದೇನೆ ಅಂದುಕೊಂಡಿದ್ದೇನೆ.

      ಕಳೆದ ಮೂರು ತಿಂಗಳಿಂದ ಬರವಣಿಗೆಯನ್ನೇ ನಿಲ್ಲಿಸಿರುವವನು ಇದ್ದಕ್ಕಿದ್ದ ಹಾಗೆ ಏಕೆ ಈ ಲೇಖನವನ್ನು ಬರೆಯಲು ಪ್ರಾರಂಭಿಸಿದೆ ಅಂತ ನಿಮಗೆ ಅನ್ನಿಸಿರಬಹುದು. ನನಗೂ ಕೆಲಸ ಒತ್ತಡ, ಫೋಟೋಗ್ರಫಿ ಹೀಗೆ ಹತ್ತಾರು ಕಾರಣಗಳಿಂದಾಗಿ ಬರವಣಿಗೆಯೇ ನಿಂತುಹೋಗಿರುವ ಈ ಸಮಯದಲ್ಲಿ ಈ ವರ್ಷದ ಮೊದಲ ದಿನ ಘಟಿಸಿದ ಕೆಲವು ಸಂಗತಿಗಳು ಮತ್ತೆ  ಬರೆಯುವಂತೆ ಮಾಡಿವೆ.

ನಿನ್ನೆ ಬೆಳಿಗ್ಗೆ ಎದ್ದೆನಲ್ಲ. ಮೊದಲಿಗೆ ಮುಂಜಾನೆ ಐದುಗಂಟೆಗೆ ನನ್ನ ಪೇಪರ್ ಹುಡುಗರೊಂದಿಗೆ ಹೊಸವರ್ಷವನ್ನು ಕೇಕ್ ಕಟ್  ಮಾಡಿ ತಿಂದು ಎಲ್ಲರೂ ಸಂಭ್ರಮಿಸಿದೆವು. ಅದರ ನಂತರ ನಮ್ಮ ಸಿದ್ಧ ಸಮಾಧಿ ಯೋಗದ  ವೈವಿಧ್ಯಮಯ ಆಟದಲ್ಲಿ ಭಾಗವಹಿಸಿದ್ದು.  ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನದವರೆಗೆ ನಡೆದ ಅನೇಕ ಆಟಗಳು ನಿಜಕ್ಕೂ ಮರೆಯಲಾಗದ್ದು. ನಾನು ಸೇರಿದಂತೆ ಅಕ್ಷರಶ: ಎಲ್ಲರೂ ಪುಟ್ಟ,ಮಕ್ಕಳಂತೆ ಭಾಗವಹಿಸಿ ಖುಷಿಪಟ್ಟೆವು. ನಾವು ಮಕ್ಕಳಾಗುವ ಅವಕಾಶ ನೀಡಿದ್ದಕ್ಕೆ ನಮ್ಮ ಸಿದ್ಧ ಸಮಾದಿ ಯೋಗ ಸಂಸ್ಥೆಗೆ ಧನ್ಯವಾದಗಳು.

       ಅದನ್ನು ಮುಗಿಸಿ ಮನೆಗೆ ಬರುತ್ತಿದ್ದಂತೆ ನನ್ನ ಗೆಳೆಯನಿಂದ ಫೋನ್. "ನಿನ್ನ Canon 5D mark 2 Camera, 24-70 2.8 lens, Flash  ಎಲ್ಲವೂ ಅಮೇರಿಕದಿಂದ ಬಂದಿದೆ ತೆಗೆದುಕೊಂಡು ಹೋಗು"  ಅಲ್ಲಿಗೆ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.

       ನನ್ನ ಬಹುದೊಡ್ಡ ಕನಸು ಇದು.  Canon 5D mark 2 Camera, ಮತ್ತು ಅದಕ್ಕೆ ಸಂಭಂದಿಸಿದ ಉಪಕರಣಗಳು ಹೊಸವರ್ಷದ ದಿನ ನನ್ನವಾಗಿದ್ದು ನಾನು ಅವುಗಳ ಒಡೆಯನೆಂದುಕೊಳ್ಳುವುದಕ್ಕೆ ಒಮ್ಮೊಮ್ಮೆ ಖುಷಿಯಾಗುತ್ತಿದೆ, ಮತ್ತೊಮ್ಮೆ  ಅಂತ ಅದ್ಬುತ ಕ್ಯಾಮೆರವನ್ನು ನಾನು ಚೆನ್ನಾಗಿ ನಿಭಾಯಿಸಬಲ್ಲೆನಾ ಮತ್ತು ಚೆನ್ನಾಗಿ ದುಡಿಸಿಕೊಳ್ಳಬಲ್ಲೆನಾ ಅಂತ ಅಳುಕು ಮನದೊಳಗೆ ಕಾಡುತ್ತಿದೆ. ಇದು ಒಂಥರ ಅಂತರರಾಷ್ಟ್ರೀಯ ಮಟ್ಟದ ಮಹಾನ್ ಕಲಾವಿದನನ್ನು ಸಾಮಾನ್ಯ ನಿರ್ಧೇಶಕನೊಬ್ಬ ಸಂಪೂರ್ಣವಾಗಿ ದುಡಿಸಿಕೊಳ್ಳಲು ಸಾಧ್ಯವೇ ಎನ್ನುವ ಜಿಜ್ಞಾಸೆಯಲ್ಲಿದ್ದೇನೆ. ಇವೆರಡು ಭಾವನೆಗಳು2012 ವರ್ಷದ ಕೊಡುಗೆ ಅಂತ ಅಂದುಕೊಂಡಿದ್ದೇನೆ.  ಹಾಗೆ ಹೊಸ ವರ್ಷದ ಎರಡನೆ ದಿನವಾದ ಇವತ್ತು ನಾನು ತುಂಬಾ ಇಷ್ಟಪಡುವ Caon 70-200 f 2.8 L USM  IS  lens ಮನೆಗೆ ಬಂದಿದೆ

       ಇದೆಲ್ಲವನ್ನು ಮೀರಿ ನನಗೆ ಆಕಾಶದಲ್ಲಿ ತೇಲಾಡುವಂತ ವಿಚಾರವೊಂದು ನನಗೆ ನಿನ್ನೆ ಫೋನ್ ಮೂಲಕ ಬಂದಿದ್ದು.  ಮದ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ನಾನು ಸಂಪೂರ್ಣ ನಮ್ಮ ಸಿದ್ದ ಸಮಾಧಿ ಯೋಗದ ಆಟಗಳಲ್ಲಿ ಮೈಮರೆತಿದ್ದಾಗ ಒಂದು ಫೋನ್ ಬಂತು.  ಆ ಸಮಯದಲ್ಲಿ ಫೋನ್ ತೆಗೆಯಬಾರದೆಂದು ನಮ್ಮ ಆಟದ ನಿಯಮವಿದ್ದರೂ  ಅದ್ಯಾಕೋ ಅಬ್ಯಾಸಬಲದಿಂದಾಗಿ ಮರೆಯಲ್ಲಿ ಹೋಗಿ ನೋಡಿದರೆ ನಮ್ಮ  Fedaration of Indian photography ಅದ್ಯಕ್ಷರ ಫೋನ್ ನಂಬರ್.  "Hi Shivu, Happy new year, good news for you, you got  EFIAP Distinction from Paris" ಅಂತ ಹೇಳಿದರಲ್ಲ, ಆ ಕ್ಷಣದ ಖುಷಿಯಿಂದಾಗಿ ಆ ಮೈದಾನದಲ್ಲಿ ಅಂಗಾತ ಮಲಗಿಬಿಟ್ಟೆ. ಮೇಲೆ ತಿಳಿ ಆಕಾಶ. ಅದರಲ್ಲಿ ತೇಲುತ್ತಿದ್ದೇನೆ ಅನ್ನಿಸಿತ್ತು. ನನ್ನ ಮಹತ್ವಾಕಾಂಕ್ಷೆಯ ಫೋಟೊಗ್ರಫಿ ಡಿಸ್ಟಿಂಕ್ಷನ್ ಆ ಸಮಯದಲ್ಲಿ ಹಾಗೆ ಬರುತ್ತಿದೆ ಅಂತ ನಾನು ಕನಸು ಮನಸ್ಸಿನಲ್ಲಿಯೂ ನೆನಸಿರಲಿಲ್ಲ.  ಹತ್ತು ನಿಮಿಷ ಹಾಗೆ ಆಕಾಶ ನೋಡುತ್ತ ಅಂಗಾತ ಮಲಗಿದ್ದೆ. ಕಣ್ತೆರೆದು ಆಕಾಶದೊಳಗೆ ಒಂದಾಗುವಾಗಿನ ನನ್ನ ಭಾವನೆಗಳನ್ನು ವರ್ಣಿಸಲು ಇಲ್ಲಿ ಪದಗಳಿಲ್ಲ. ಇದೆಲ್ಲ ಆಗುವಷ್ಟರಲ್ಲಿ ನನ್ನ ಕ್ರೀಡಾ ಪಾರ್ಟನರ್ ನಾನೆಲ್ಲಿ ಹೋದೆ ಅಂತ ಹುಡುಕಿಕೊಂಡು ಬಂದು "ಶಿವು ಏನಾಯ್ತು ಹೀಗೆ ಅಂಗಾತ ಮಲಗಿದ್ದೀರಿ, ಎದ್ದೇಳಿ ನಾವಿಬ್ಬರೂ ಮೂರು ಕಾಲಿನ ಓಟದ ಸ್ಪರ್ಧೆಗೆ ಭಾಗವಹಿಸಬೇಕಿದೆ" ಅಂದಾಗಲೇ ನಾನು ವಾಸ್ತವ ಪ್ರಪಂಚಕ್ಕೆ ಬಂದಿದ್ದು.  ಈ ಮೊದಲು ಜೋಡಿ ಆಟದ ಒಂದು ಸ್ಪರ್ಧೆಯಲ್ಲಿ ಗೆದ್ದಿದ್ದ ನಾವಿಬ್ಬರೂ,  EFIAP Distinction ಬಂದ ಖುಷಿಯಲ್ಲಿ ನಾನು ಸರಿಯಾಗಿ ಭಾಗವಹಿಸದೇ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ಮೈಮರೆತು ಇಬ್ಬರು ಸೋತಿದ್ದೆವು.

 1]ದಿವಂಗತ ಡಾ.ಜಿ. ಥಾಮಸ್
2]ದಿವಂಗತ ಸಿ. ರಾಜಗೋಪಾಲ್,
3]ದಿವಂಗತ ಎಂ ವೈ ಗೋರ್ಪಡೆ,
4]ದಿವಂಗತ ಒ.ಸಿ ಎಡ್ವರ್ಡ್,
5]ದಿವಂಗತ ಎಸ್.ನಾಗಭೂಷಣ್,6]ಶ್ರೀಯುತ ಟಿ.ಎನ್.ಎ ಪೆರುಮಾಳ್,
7]ಶ್ರೀಯುತ ಬಿ. ಶ್ರೀನಿವಾಸ,
8]ಶ್ರೀಯುತ ಎಚ್.ಸತೀಶ್
9]ಶ್ರೀಯುತ ಎಚ್.ವಿ ಪ್ರವೀಣ್ ಕುಮಾರ್
10]ಶ್ರೀಯುತ ಎಮ್.ಎನ್ ಜಯಕುಮಾರ್,
11]ಶ್ರೀಯುತ ಎಸ್. ತಿಪ್ಪೆಸ್ವಾಮಿ,
12]ಶ್ರೀಯುತ ದಿವಂಗತ ಬಿ.ಎಸ್. ಸುಂದರಂ,
13]ಶ್ರೀಯುತ ದಿವಂಗತ ಡಾ.ಡಿ.ವಿ. ರಾವ್,
14]ಶ್ರೀಯುತ ಜಿ.ಎಸ್.ರವಿ,
15]ಶ್ರೀಯುತ ಸಿ.ಅರ್ ಸತ್ಯನಾರಾಯಣ,
16]ಶ್ರೀಯುತ ಡಾ.ಪ್ರಮೋದ್ ಜಿ. ಶ್ಯಾನುಬಾಗ್,
17]ಶ್ರೀಯುತ ಜಿ.ಎಸ್ ಕೃಷ್ಣಮೂರ್ತಿ,
18]ಶ್ರೀಯುತ ಎ.ಜಿ.ಲಕ್ಷ್ಮಿ ನಾರಾಯಣ

..ಹೀಗೆ ಕರ್ನಾಟಕದ ಮಟ್ಟಿಗೆ ಇದುವರೆಗೆ 18 ಫೋಟೊಗ್ರಫಿ ಕಲಾವಿದರು ಈ EFIAP  ಮನ್ನಣೆಯನ್ನು ಪಡೆದಿದ್ದಾರೆ.  ಹೂವಿನೊಂದಿಗೆ ನಾರು ಎನ್ನುವಂತೆ ನಾನು ಹತ್ತೊಂಬತ್ತನೆಯವನಾಗಿ ಇವರೊಟ್ಟಿಗೆ ಸೇರಿದ್ದಕ್ಕೆ ಸಂತೋಷವಾಗುವುದರ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. .

         

     
       ಹೊಸ ವರ್ಷದ ಮೊದಲದಿನವಾದ ಇವತ್ತಿನ ನಮ್ಮ SSY ವಿನೋದದ ಆಟದಲ್ಲಿ ಸಂಫೂರ್ಣ ಮಗುವಿನಂತಾಗಿದ್ದು, ನನ್ನ ಕನಸಿನಕ್ಯಾಮೆರ ಮತ್ತು ಇತರ ಉಪಕರಣಗಳ ಜೊತೆಗೆ Canon 70-200 f2.8 lens ನನ್ನವಾಗಿದ್ದು,  ಮಹತ್ವಾಕಾಂಕ್ಷೆ  EFIAP ಅಂತರರಾಷ್ಟ್ರಿಯ ಮನ್ನಣೆ ಇವತ್ತೆ ದಕ್ಕಿದ್ದು, ಮತ್ತೆ ಇವತ್ತಿನ ಉದಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಸಂಪದ ಪುಟದಲ್ಲಿ ಇಳಿಸಂಜೆ ಹೊತ್ತಿನ ಗೋದೂಳಿ ಸಮಯದಲ್ಲಿ ನಾನು ಕ್ಲಿಕ್ಕಿಸಿದ್ದ ಎತ್ತಿನ ಗಾಡಿಯ ಚಿತ್ರವು ಅರ್ಧಪುಟ ಪೂರ ಪ್ರಕಟವಾಗಿದ್ದು.... ಇದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲಾರೆ ಎನಿಸಿತ್ತು.  ಬಹುಶಃ 2012ರಲ್ಲಿ ಇವೆಲ್ಲಕ್ಕಿಂತ ದೊಡ್ಡ ಕೊಡುಗೆ ಮತ್ತೊಂದು ಇರಲಾರದು ಅನ್ನಿಸಿ ಖುಷಿಯಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮತ್ತೊಮ್ಮೆ ನಿಮಗೆಲ್ಲರಿಗೂ ಹೊಸ ವರ್ಶದ ಶುಭಾಶಯಗಳು.

ಚಿತ್ರ ಮತ್ತು ಲೇಖನ
ಶಿವು.ಕೆ

      

Friday, November 25, 2011

ನನ್ನ ಬಹುದಿನದ ಕನಸು



     ನನ್ನದೇ ಆದ ಫೋಟೊಗ್ರಫಿ ವೆಬ್‍ಸೈಟ್ ಮಾಡಿಕೊಳ್ಳುವ ನನ್ನ ಕನಸು ಇಂದು ನನಸಾಗಿದೆ. ಇವತ್ತಿನಿಂದ ತೆರೆದುಕೊಳ್ಳುವ ಮೂಲಕ ಹೊರಪ್ರಪಂಚಕ್ಕೆ ಲೋಕಾರ್ಪಣೆಯಾಗುತ್ತಿದೆ. ಇದರಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಸೆರೆಹಿಡಿದ ನನ್ನ ಮೆಚ್ಚಿನ ಪಿಕ್ಟೋರಿಯಲ್ ಫೋಟೊಗಳು, ಪಕ್ಷಿಗಳು, ಮ್ಯಾಕ್ರೋ ವಿಭಾಗದಲ್ಲಿ ಚಿಟ್ಟೆಗಳು ಮತ್ತು ಕೀಟಗಳು, ವನ್ಯಜೀವಿ ಪ್ರಪಂಚ, ಕ್ರೀಡಾ ಪಿಕ್ಟೋರಿಯಲ್ ಫೋಟೊ ವಿಭಾಗಗಳು, ಕ್ರಿಯೇಟೀವ್ ಫೋಟೊಗ್ರಫಿ, ಹೀಗೆ ನೂರಾರು ಚಿತ್ರಗಳನ್ನು ನನ್ನ ವೆಬ್‍ಸೈಟಿನ ..........ವಿಭಾಗವನ್ನು ಕ್ಲಿಕ್ಕಿಸಿದರೆ ನೀವೆಲ್ಲ ನೋಡಬಹುದು.

ಮತ್ತೊಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ. ಅದು ಮದುವೆ ಇನ್ನಿತರ ಕಾರ್ಯಕ್ರಮಗಳ ಫೋಟೊಗ್ರಫಿಗೆ ಸಂಭಂದಿಸಿದ್ದು. ಇತ್ತೀಚೆಗೆ ಚಾಲ್ತಿಯಲ್ಲಿರುವ[ನಾನು ಈ ಫೋಟೊಗ್ರಫಿಗೆ ಕಳೆದ ಆರುತಿಂಗಳಿಂದ ತೊಡಗಿಕೊಂಡಿದ್ದೇನೆ.  ಈ ಟ್ರೆಂಡು ಕಳೆದ ಮೂರು ವರ್ಷದಿಂದ ಪ್ರಾರಂಭವಾಗಿದೆ]ಕ್ಯಾಂಡಿಡ್ ವೆಡ್ಡಿಂಗ್ ಫೋಟೊಗ್ರಫಿ. ನಮ್ಮ ಅನೇಕ ಗ್ರಾಹಕರು ಇಂಥ ಫೋಟೊಗ್ರಫಿ ಬೇಕೆಂದು ಕೇಳುತ್ತಿದ್ದಾರೆ. ಅದಕ್ಕಾಗಿ ನಾನೂ ಕೂಡ ಅದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದೇನೆ.  ಮುಖ್ಯವಾಗಿ ಇಂಥ ಫೋಟೊಗ್ರಫಿಗಾಗಿ ನನ್ನದೇ ಆದ ವೆಬ್ ಸೈಟು ಇರಬೇಕು ಅಂತ ಆಸೆಯಿತ್ತು.  ಅದು ಇವತ್ತು ತೆರೆದುಕೊಂಡಿದೆ.
ನನ್ನ ವೆಬ್ ಸೈಟಿನ ವಿನ್ಯಾಸದ ಕೆಲವು ಚಿತ್ರಗಳು ಇವು.


         

 ವೆಬ್ ಸೈಟಿನ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ: 

http://www.shivuphotography.com

ನೀವೆಲ್ಲ ನೋಡಬೇಕೆನ್ನುವುದು ನನ್ನ ಆಸೆ.  ಖುಷಿಯಾದರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಪ್ರೋತ್ಸಾಹ ನೀಡಿ.

ಶಿವು.ಕೆ