Showing posts with label Learning. Show all posts
Showing posts with label Learning. Show all posts

Sunday, July 18, 2010

ಗಾಳಿಯಲ್ಲಿ ತೇಲಿ....ಬಿಲ್ಲಿನಂತೆ ಬಾಗಿ....

     

      ಆರು ಅಡಿ ಹಿಂದೆ ಸಾಗಿ, ಧೀರ್ಘವಾಗಿ ಉಸಿರೆಳೆದುಕೊಂಡು, ವೇಗವಾಗಿ ಮತ್ತದೇ ಆರು ಹೆಜ್ಜೆ ಮುಂದೆ ಸಾಗಿ ಕಟ್ಟೆಯ ತುದಿ ತಲುಪುತ್ತಿದ್ದಂತೆ ಕಾಲ್ಬೆರಳುಗಳ ತುದಿಗಳ ಮೇಲೆ ಬ್ಯಾಲೆ ನೃತ್ಯದಂತೆ  ದೇಹದ ಭಾರವನ್ನು ಬಿಟ್ಟು ಪುಟಿದ ಬಾಲಿನಂತೆ ದೇಹವನ್ನು ಚಿಮ್ಮಿದಾಗ,ಮರುಕ್ಷಣದಲ್ಲಿ ದೇಹ ಗಾಳಿಯಲ್ಲಿ ತೇಲಿ, ಬಿಲ್ಲಿನಂತೆ ಬಾಗಿ, ತಲೆಕೆಳಕಾಗಿ ಮೊದಲು ಕೈಗಳು ನೀರನ್ನು ಸೀಳಿ,  ತಲೆಯೂ ನೀರೋಳಗೆ ವೇಗವಾಗಿ ನುಗ್ಗಿದಾಗ ಕಣ್ಣು ತೆರೆದರೂ, ಮುಚ್ಚಿದರೂ ಏನೂ ಕಾಣುವುದಿಲ್ಲ.   ಆ ಕ್ಷಣದಲ್ಲಿ ದೇಹದೊಳಗೆ ನಾನಿಲ್ಲ.  ಮನದೊಳಗೂ ನಾನಿಲ್ಲ.  ಆಷ್ಟೇ ಏಕೆ ಇಡೀ ಪ್ರಪಂಚದ ಅರಿವಿಗೂ ನಾನಿಲ್ಲ. ನನ್ನರಿವಿಗೆ ಪ್ರಪಂಚವಿಲ್ಲ.  ಯಾರು ಇಲ್ಲ ಏನು ಇಲ್ಲ ಯಾವುದೂ ಇಲ್ಲವೆನಿಸುವ ಸ್ಥಿತಿಯಲ್ಲಿರುವಾಗಲೇ........ಅರೆರೇ......ತಳ ಸಿಕ್ಕಿತಲ್ಲ ಕೈಗಳಿಗೆ,  ಕಣ್ತೆರೆದರೆ ಕಣ್ನಿಗೂ ಕಾಣಿಸುತ್ತಿದೆ.  ಜೊತೆಗೆ ಕೈಕಾಲುಗಳಿವೆಯೆಂಬ ಭಾವ. ಹದಿನೈದು ಆಡಿ ಆಳದ ತಳದಿಂದ ನಿದಾನವಾಗಿ ಕೈಕಾಲುಗಳನ್ನು ಆಡಿಸುತಾ, ಮೇಲ್ಮುಖವಾಗಿ ತೇಲುತ್ತಿದ್ದರೆ,  ಮತ್ತೆ ನನಗೊಂದು ದೇಹ, ಅದರೊಳಗೊಂದು  ಮನಸ್ಸು ಈಜಿ ಮೇಲೇರಲು ಎಚ್ಚರಿಸುತ್ತಿದೆ.  ಈಜುತ್ತಾ ಮೇಲೆ ಬಂದರೆ  ಮತ್ತದೇ ಪ್ರಪಂಚ..........ಆ ಬದಿಯ ದಡ ಮುಟ್ಟಿ ಈ ಬದಿಗೆ ಮತ್ತದೇ  ತೇಲುತ್ತಾ, ಮುಳುಗಿತ್ತಾ ಈಜು.........



ಇದೇನಿದು ಯಾವುದೋ ಸಿನಿಮಾದ ಸನ್ನಿವೇಶವನ್ನು ಪ್ರೇಮ್ ಟು ಪ್ರೇಮ್ ಸ್ಲೋಮೇಷನ್ನಿನಲ್ಲಿ ಕುತೂಹಲದಿಂದ ನೋಡಿದಂತೆ ಅನ್ನಿಸುತ್ತಿದೆಯಲ್ಲವೇ? ಆದ್ರೆ ಇದು ಯಾವ ಸಿನಿಮಾ ದೃಶ್ಯಾವಳಿಯೂ ಅಲ್ಲ. ಕಳೆದ ಮೇ ತಿಂಗಳ ಬೇಸಿಗೆಯಲ್ಲಿ ಒಂದು ತಿಂಗಳು ಸ್ವಿಮಿಂಗ್ ಪೂಲಿಗೆ ಹೋಗಿ ನಿತ್ಯ ಒಂದು ಗಂಟೆ ಈಜಾಡಿ ಬಂದ ಅನುಭವ ತುಣುಕು. ಇಷ್ಟಕ್ಕೂ ನಾನೇನು ಈಜುಗಾರನಲ್ಲ. ಕೆರೆಯಾಗಲಿ, ಬಾವಿಯಾಗಲಿ, ಕೊನೆಗೆ ಬೆಂಗಳೂರಿನ ಸ್ವಿಮಿಂಗ್ ಪೂಲ್ ಆಗಲಿ ನೀರಿಗೆ ಇಳಿಯಲು ಭಯಪಡುತ್ತಿದ್ದೆ. ಹತ್ತು ಮೀಟರ್ ದೂರ ಈಜುವಷ್ಟರಲ್ಲಿ ಸುಸ್ತಾಗಿ ಭಯಪಟ್ಟು ವಾಪಸ್ ದಡಕ್ಕೆ ಬಂದುಬಿಡುತ್ತಿದ್ದೆ. ತಲೆಯೇನಾದರೂ ನೀರೊಳಗೆ ಮುಳುಗಿ ನೀರುಕುಡಿದುಬಿಟ್ಟರೆ ಮುಗೀತು. ಐದುಸಿರು ಬಿಡುತ್ತಾ, ಕೆಮ್ಮಿ ಕ್ಯಾಕರಿಸಿಕೊಂಡು ದಿಗಲಿನೊಂದಿಗೆ ಮತ್ತಷ್ಟು ಹೆದರಿಬಿಡುತ್ತಿದ್ದೆ. ಹೈಸ್ಕೂಲು ದಿನದ ಬೇಸಿಗೆ ರಜೆಗಳಲ್ಲಿ ಬಿಸಿಲಿನ ದಗೆ ನಿವಾರಿಸಿಕೊಳ್ಳಲು ಬೆಂಗಳೂರಿನ ಬಡಾವಣೆಯ ಈಜುಕೊಳಗಳಿಗೆ ಹೋಗಿ ಬಿದ್ದು ಒದ್ದಾಡಿ ಬರುತ್ತಿದ್ದೆ. ಹೀಗಿದ್ದರೂ ನಾನು ಈಜು ಕಲಿತಿರಲಿಲ್ಲ. ಕಲಿತಿದ್ದೆನೆಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದರೂ ಸೊಂಟ ಮಟ್ಟದ ನೀರಿನಲ್ಲಿ ಹತ್ತು ಮೀಟರ್ ಅಷ್ಟೆ.



ಈ ಬಾರಿಯ ಬೇಸಿಗೆ ದಗೆ ತಡೆಯಲಾಗದಷ್ಟು ಮಟ್ಟಕ್ಕೆ ಏರಿದಾಗ ಒಂದು ದಿನ ನಾನೊಬ್ಬನೇ ಸದಾಶಿವನಗರದಲ್ಲಿರುವ ಈಜುಕೊಳದಲ್ಲಿ ಮುಳುಗೆದ್ದು ದೇಹವನ್ನು ತಂಪುಮಾಡಿಕೊಂಡು ಬಂದಿದ್ದೆ. ಅವತ್ತು ಸಂಜೆ ನಮ್ಮ ರಸ್ತೆಯಲ್ಲಿ ಬ್ಯಾಟ್‍ಮಿಂಟನ್, ಕ್ರಿಕೆಟ್ ಆಡುತ್ತಿದ್ದ ಪ್ರೈಮರಿ, ಹೈಸ್ಕೂಲ್ ಹುಡುಗರಿಗೆ ಈ ವಿಚಾರವನ್ನು ಹೇಳಿದ್ದೇ ತಡ ಮರುದಿನ ಎಲ್ಲರೂ ಉತ್ಸಾಹ ಹುರುಪಿನಿಂದ ಸಿದ್ದರಾಗಿಬಿಟ್ಟರು. ಕೆರೆ ಕಟ್ಟೆ ಭಾವಿಗಳು ಹಳ್ಳಿಗಳ ಮಕ್ಕಳಿಗೆ ಸುಲಭವಾಗಿ ಲಭ್ಯವಾಗುವುದರಿಂದ ಅವರು ಚಿಕ್ಕ ವಯಸ್ಸಿಗೆ ಈಜು ಕಲಿತುಬಿಟ್ಟಿರುತ್ತಾರೆ. ಆದ್ರೆ ನಗರದ ಮಕ್ಕಳಿಗೆ ಹೀಗೆ ಅವಕಾಶವಿರುವುದಿಲ್ಲ. ಅಷ್ಟೇ ಅಲ್ಲದೇ ಮಕ್ಕಳೆಲ್ಲಾದರೂ ಹೊರಗೆ ಅಡ್ಡಾಡಿದರೆ ನಲುಗಿಬಿಡುತ್ತಾರೆನ್ನುವ ಭಯ ಅವರ ತಂದೆತಾಯಿಗಳಿಗೆ. ಅಂತದ್ದರಲ್ಲಿ ಹೀಗೆ
ಅವರಿಗೆ ಸುಲಭವಾಗಿ ನೀರಿಗೆ ಬೀಳಲು ಬಿಡುತ್ತಾರೆಯೇ? ಅಂದುಕೊಂಡು ಸುಮ್ಮನಾದೆ. ಆದ್ರೆ ಮರುದಿನ ಐವರು ಹುಡುಗರು ಟವಲ್, ಅಂಡರ್‌ವೇರ್ ಸೋಪ್ ಇತ್ಯಾದಿಗಳೊಂದಿಗೆ ಸಿದ್ದರಾಗಿ ಬಂದುಬಿಟ್ಟಿದ್ದರು. "ನಾವೆಲ್ಲಾ ಶಿವು ಅಂಕಲ್ ಜೊತೆ ಹೋಗುತ್ತೇವೆ ಅವರಿಗೆ ಚೆನ್ನಾಗಿ ಈಜು ಬರುತ್ತೆ, ನಮಗೂ ಕಲಿಸಿಕೊಡುತ್ತಾರೆ" ಅಂತ ಅವರ ಮನೆಯವರಲ್ಲಿ ಹೇಳಿ ಒಪ್ಪಿಸಿದರಂತೆ. ಅವರ ತಂದೆತಾಯಿಯ ದೃಷ್ಟಿಯಲ್ಲಿ ನಾನೊಬ್ಬ ದೊಡ್ಡ ಈಜು ತರಬೇತುದಾರ ಅಂತೆಲ್ಲ ಹೇಳಿ ನನಗೆ ಸುಳ್ಳೇ ಕಿರೀಟವನ್ನು ತೊಡಿಸಿಬಿಟ್ಟಿದ್ದರು. ಅವರ ತಂದೆತಾಯಿಗಳು ಕೂಡ "ನೀವು ಹೋಗುತ್ತಿರುವುದಕ್ಕೆ ಕಳಿಸುತ್ತಿದ್ದೇವೇ ಜೋಪಾನ" ಅಂತ ಹೇಳಿದಾಗ ನನಗಂತೂ ದೊಡ್ಡ ಭಾರವೇ ತಲೆಮೇಲೆ ಬಿದ್ದಂತೆ ಆಗಿತ್ತು. ಕೊನೆಗೆ ಆದದ್ದಾಗಲಿ ನನಗೂ ಈಜು ಬರುವುದಿಲ್ಲ, ಪ್ರತಿದಿನ ಹೋಗಿ ದೇಹವನ್ನು ತಂಪುಮಾಡಿಕೊಂಡು ಬಂದಂತೆ ಆಗುತ್ತದೆ ಜೊತೆಗೆ ಮಕ್ಕಳ ಜೊತೆಗೆ ಹೋದರೆ ಚೆನ್ನಾಗಿರುತ್ತದೆ ಅಂತ ಒಪ್ಪಿಕೊಂಡೆ.



ಎರಡನೇ ದಿನದಿಂದ ಶುರುವಾಯಿತಲ್ಲ ನಮ್ಮ ನೀರಾಟ. ನನ್ನ ಜೊತೆಗಿದ್ದವರೆಲ್ಲರು ಸ್ವಲ್ಪ ಸ್ವಲ್ಪ ಈಜು ಬರುತ್ತದೆ ಅಂತ ಹೇಳಿದ್ದವರು ನಾಲ್ಕು ಅಡಿ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. "ಸ್ವಲ್ಪ ಇತ್ತ ಬನ್ರೋ" ಅಂತ ಕರೆದರೆ ನಮಗೆ ಭಯವಾಗುತ್ತೆ ಅಂತ ಹೇಳುತ್ತಿದ್ದರು. ಇವರಿಗೆ ನಾನು ಚೆನ್ನಾಗಿ ಈಜಾಡುತ್ತೇನೆ ಅಂತ ತೋರಿಸಿಕೊಳ್ಳಲು ಎಂಟು ಅಡಿ ಆಳದಲ್ಲಿ ದುಮುಕಿ ಹತ್ತು ಮೀಟರ್ ಈಜಾಡಿ ಮೇಲೆ ಬಂದೆನಾದರೂ ನನಗೆ ಸಮಧಾನವಾಗಿರಲಿಲ್ಲ. ನಮ್ಮ ಹುಡುಗರಿಗೆ ನಾನು ಚೆನ್ನಾಗಿ ಈಜಾಡುತ್ತೇನೆ ಅಂತ ತೋರಿಸಿಕೊಡಲು ಉದ್ದುದ್ದದ ಐವತ್ತು ಮೀಟರ್ ಹೋಗದಿದ್ದರೂ ಪರವಾಗಿಲ್ಲ, ಕೊನೇ ಪಕ್ಷ ಅಡ್ಡಡ್ದ ಇರುವ ಇಪ್ಪತೈದು ಮೀಟರ್ ದೂರವಾದರೂ ಈಜಲೇಬೇಕು ಅಂತ ತೀರ್ಮಾನಿಸಿದವನು ಧೃಡ ನಿರ್ಧಾರದಿಂದ ಧುಮಿಕಿಯೇಬಿಟ್ಟೆ. ಅರ್ಧದಾರಿ ಹೋಗುವಷ್ಟರಲ್ಲಿ ಸ್ವಲ್ಪ ನೀರು ಕುಡಿದು ಸುಸ್ತಾದರೂ ಸಾವರಿಸಿಕೊಂಡು ಮೇಲೆ ಬಂದು ಉಸಿರು ತೆಗೆದುಕೊಂಡು ನಿದಾನವಾಗಿ ಈಜತೊಡಗಿದೆ. ಇನ್ನು ಹತ್ತೇ ಮೀಟರ್ ಇದೆ ಎನ್ನುವಷ್ಟರಲ್ಲಿ ಐದುಸಿರು ಬಿಡುತ್ತಾ ಹಾಗೂ ಹೀಗೂ ಆ ಬದಿಯನ್ನು ಮುಟ್ಟಿದ್ದೆ. ಅಲ್ಲೇ ನಿಂತಿದ್ದ ನಮ್ಮ ಹುಡುಗರ ಕಣ್ಣಿಗೆ ನಾನು ಹೀರೋ ಆಗಿದ್ದೆ. ಮತ್ತೆ ಮುಂದೆ ನಾಲ್ಕು ದಿನಗಳಲ್ಲಿ ಇದು ತುಂಬಾ ಸುಲಭವೆನಿಸಿತು. ಆ ಬದಿಯಿಂದ ವಾಪಸ್ಸು ಕೂಡ ಬರುವಂತಾಗಿತ್ತು. ನನ್ನ ಹುಮ್ಮಸ್ಸು ಹುರುಪಿನಿಂದಾಗಿ ಸ್ಪೂರ್ತಿಗೊಂಡ ನಮ್ಮ ಹುಡುಗರು ಒಂದು ವಾರ ಕಳೆದ ಮೇಲೆ ನನ್ನ ಜೊತೆ ದೈರ್ಯಮಾಡಿ ಈ ಬದಿಯಿಂದ ಆ ಬದಿಗೆ ಈಜಿಯೇ ಬಿಟ್ಟರು. ನಂತರ ಪ್ರತಿದಿನ ಒಂದೊಂದು ರೌಂಡ್ ಹೆಚ್ಚಾಗಿ ಈಜತೊಡಗಿದರು.



ನಾವು ಈಜುಕೊಳಗಳಿಗೆ ಹೋಗುವಾಗ ಮೊಬೈಲು, ಕೈಗಡಿಯಾರ, ಇತ್ಯಾದಿ ದುಬಾರಿ ವಸ್ತುಗಳನು ಏನು ತೆಗೆದುಕೊಂಡು ಹೋಗುವಂತಿಲ್ಲ. ನಾನು ಎಲ್ಲವನ್ನು ಮನೆಯಲ್ಲೇ ಬಿಟ್ಟುಹೋಗುತ್ತಿದ್ದೆ. ಹಾಗೂ ಈಜುಕೊಳದ ಟಿಕೆಟ್ ಹಣ ಜೊತೆಗೆ ಚಿಲ್ಲರೆ ನಾಣ್ಯಗಳನ್ನು ಮಾತ್ರ ಜೇಬಿನಲ್ಲಿರಿಸುತ್ತಿದ್ದೆ. ನಾವೆಲ್ಲಾ ಈಜಾಡಿ ಹೊರಗೆ ಬಂದ ಮೇಲೆ ಸಹಜವಾಗಿ ಎಲ್ಲರಿಗೂ ಹಸಿವಾಗುತ್ತಿತ್ತು. ನನ್ನ ಜೊತೆಗಾರರೆಲ್ಲಾ ಓದುತ್ತಿರುವ ಹುಡುಗರಾದ್ದರಿಂದ ಅವರಿಗೆ ಟಿಕೆಟ್ ಹಣವನ್ನು ಹೊಂದಿಸಿಕೊಂಡು ಬರುವುದೇ ದೊಡ್ದ ವಿಚಾರ. ಹೊರಬಂದ ಮೇಲೆ ಯಾರ ಬಳಿಯೂ ಹಣವಿರುತ್ತಿರಲಿಲ್ಲ. ಒಬ್ಬನ ಬಳಿ ಹತ್ತು ರೂಪಾಯಿ ಇದ್ದಲ್ಲಿ ಅದರಲ್ಲೇ ಅಲ್ಲಿ ಸಿಗುವ ಕತ್ತರಿಸಿ ತುಂಡು ಮಾಡಿದ ಸೌತೆಕಾಯಿ, ಅನಾನಸ್, ಮಸಾಲೆ ಹಾಕಿದ ಮಾವಿನಕಾಯಿ ತುಂಡುಗಳನ್ನು ತಿನ್ನುತ್ತಿದ್ದೆವು. ಆಗ ಹಂಚಿಕೊಂಡು ತಿನ್ನುವ ಮಜಾ ನನಗಂತೂ ಬಾಲ್ಯದ ಸ್ಕೂಲಿನ ದಿನಗಳನ್ನು ನೆನಪಿಸಿಬಿಡುತ್ತಿದ್ದವು. ಹೀಗೆ ನಿತ್ಯವೂ ಒಬ್ಬೊಬ್ಬರು ಕೊಡಿಸುತ್ತಿದ್ದರು. ಜೇಬಿನಲ್ಲಿ ಸಾವಿರಾರು ರೂಪಾಯಿಗಳಿದ್ದರೂ ನಮ್ಮ ಕೆಲಸದ ಒತ್ತಡಗಳಲ್ಲಿ ಹೀಗೆ ನಾನು ನಿಂತು ಆರಾಮವಾಗಿ ಅನಾನಸ್, ಕಾರ ಹಾಕಿದ ಮಾವಿನ ಕಾಯಿ ತುಂಡುಗಳನ್ನು ತಿಂದಿದ್ದೇ ಇಲ್ಲ.



ಈ ಬೇಸಿಗೆಯಲ್ಲಿ ಈ ಹುಡುಗರು ನನ್ನ ಜೊತೆ ಬರದಿದ್ದಲ್ಲಿ ನಾನು ಹೀಗೆ ನನ್ನನ್ನು ಯಾರು ಗಮನಿಸುವವರು ಇಲ್ಲವೆಂದು ಸುಮ್ಮನೇ ಅಲ್ಲಿಯೇ ಬಿದ್ದು ಒದ್ದಾಡುತ್ತಿರುತ್ತಿದ್ದೆನೇನೋ. ಅವರ ಜೊತೆ ಇರುವಿಕೆಯಿಂದಾಗಿಯೇ ಈಗ ಪೂರ್ತಿ ಹತ್ತರಿಂದ ಹನ್ನೆರಡು ಸುತ್ತು ಈಜಾಡುತ್ತಿದ್ದೇನೆ. ನಮ್ಮ ಹುಡುಗರೂ ಏನು ಕಡಿಮೆಯಿಲ್ಲ ಹಟಕ್ಕೆ ಬಿದ್ದವರಂತೆ ನನ್ನ ಸಮಕ್ಕೆ ಅವರು ಎಂಟು ಹತ್ತು ಸುತ್ತು ಮುಗಿಸುತ್ತಾರೆ. ಓಡಿ ಮೀನಿನಂತೆ ಧುಮುಕುತ್ತಾರೆ. ಅವರಿಂದಾಗಿ ನಾನು ಈಜು ಕಲಿತೆನೋ ಅಥವ ನನ್ನಿಂದಾಗಿ ಅವರು ಚೆನ್ನಾಗಿ ಈಜಾಡುವುದು ಕಲಿತರೋ ಗೊತ್ತಿಲ್ಲ. ಆದ್ರೆ ಅವರಿಲ್ಲದಿದ್ದಲ್ಲಿ ನಾನು ಹತ್ತು ಮೀಟರ್ ಆಳತೆಯಲ್ಲೇ ಬಿದ್ದು ಒದ್ದಾಡುತ್ತಿದ್ದೆ. ನನ್ನ ಜೊತೆ ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳು ಸುರಕ್ಷಿತ ಮತ್ತು ಈಜು ಚೆನ್ನಾಗಿ ಕಲಿತಿದ್ದಾರೆ ಎನ್ನುವುದು ಅವರ ಮನೆಗಳಲ್ಲಿ ತಂದೆತಾಯಿಗಳ ಅನಿಸಿಕೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ