Thursday, May 24, 2018

ಯಾಕೋ ಇದೆಲ್ಲವನ್ನು ಬರೆಯಬೇಕೆನಿಸಿತು!



ಕಳೆದ ಕೆಲವು ತಿಂಗಳುಗಳಿಂದ ಆಗಾಗ ದೂರದ ಗೆಳೆಯರ ಮನೆಗೆ ಹೋಗಿಬರುತ್ತಿದ್ದೇನೆ. ದೂರದ ಗೆಳೆಯರೆಂದರೆ ನೂರಾರು ಮೈಲುಗಳ ದೂರದಲ್ಲಿರುವವರಲ್ಲ. ಅವರೆಲ್ಲರೂ ಈ ಮೊದಲು ಬೆಂಗಳೂರಿನ ಹೃದಯಭಾಗದಲ್ಲಿದ್ದವರು. ಈಗ ಸ್ವಲ್ಪ ದೂರ ಬೆಂಗಳೂರಿನ ಮುವತ್ತು-ನಲವತ್ತು-ಐವತ್ತು ಕಿಲೋಮೀಟರ್ ದೂರದ ಹೆಚ್ಚು ಕಡಿಮೆ ಬೆಂಗಳೂರಿನ ಹೊರವಲಯದಲ್ಲಿ ಪುಟ್ಟ ಮನೆಯನ್ನು ಕಟ್ಟಿಕೊಂಡು ಜೀವಿಸುತ್ತಿದ್ದಾರೆನ್ನಬಹುದು. ಲಕ್ಷಾಂತರ ಜನ ಅವರಂತೆ ಹೋಗಿ ಮನೆಗಳನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರಲ್ಲ ಇವರದೇನು ವಿಶೇಷ ಅಂತ ನಿಮಗೆ ಅನ್ನಿಸಬಹುದು. ಆದರೆ ನನಗೆ ವಿಶೇಷವೆನಿಸಿದೆ. ನಮ್ಮೆಲ್ಲರ ಸ್ಪೂರ್ತಿ ಕಿ.ಪಿ.ಪೂರ್ಣಚಂದ್ರ ತೇಜಸ್ವಿಯವರಂತೆ ಬದುಕು ಸಾಗಿಸಬೇಕೆಂದು ಇವರು ಕನಸು ಕಟ್ಟಿಕೊಂಡವರು, ಅದೇ ರೀತಿ ಈಗ ಹಸುರು ವಾತಾವರಣದಲ್ಲಿ ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ ಮನೆಯ ಕಾಂಪೌಂಡಿನೊಳಗೆ ಪುಟ್ಟ ಗಿಡ, ಬಳ್ಳಿಗಳನ್ನು ಬೆಳೆಸಿಕೊಂಡಿದ್ದಾರೆ. ರಸ್ತೆಯಲ್ಲಿನ ದೊಡ್ಡ ದೊಡ್ಡ ಮರಗಳು, ಇವರ ಮನೆಯೊಳಗಿನ ಪುಟ್ಟ ಮರಗಳಿಂದಾಗಿ ನಿತ್ಯವು ಆಶೀ ಪ್ರಿನಿಯ, ಟೈಲರ್ ಬರ್ಡ್, ಸೂರಕ್ಕಿ, ಬುಲ್ ಬುಲ್, ಮೈನಾ, ಗುಬ್ಬಚ್ಚಿಗಳು ಇಂಡಿಯನ್ ರಾಬಿನ್, ಬುಶ್ ಚಾಟ್...ಹೀಗೆ ಹತ್ತಾರು ಹಕ್ಕಿಗಳು ಮತ್ತು ಕೀಟಗಳೊಂದಿಗೆ ಜೀವಿಸುತ್ತಾರೆ. ನಾವು ಬೇಟಿ ಕೊಟ್ಟಾಗಲೆಲ್ಲಾ ಒಂದಲ್ಲ ಒಂದು ಹಕ್ಕಿ ಅವರ ಮನೆಯ ಕಾಪೌಂಡಿನ ಗಿಡ ಬಳ್ಳಿಗಳಲ್ಲಿ ಗೂಡು ಮಾಡಿರುವುದು ಕಂಡುಬರುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದಲ್ಲ ಒಂದು ಪಕ್ಷಿಗಳ ಕಲರವ ಕೇಳಿಸುತ್ತಲೇ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇವರೆಲ್ಲ ಹವ್ಯಾಸಿ ಛಾಯಾಗ್ರಾಹಕರು, ಪ್ರಾಣಿ ಮತ್ತು ಪಕ್ಷಿಗಳ ಪ್ರಿಯರು. ಅವರ ಮನೆಯಲ್ಲಿ ಕಳೆದ ಹೊತ್ತಿನಲ್ಲಿ ಒಮ್ಮೆಯೂ ನಾವು ರಾಜಕೀಯ ಮಾತಾಡುವುದಿಲ್ಲ, ಮೂರನೇ ವ್ಯಕ್ತಿಯ ಬಗ್ಗೆ ಮಾತಾಡುವುದಿಲ್ಲ, ಅಪರೂಪಕ್ಕೆ ಮಾತಾಡಿದರೂ ಯಾರನ್ನು ದ್ವೇಷಿಸುವ ಮಟ್ಟಕ್ಕೆ ಮಾತಾಡುವುದಿಲ್ಲ. ಬದಲಾಗಿ ನಮ್ಮದೇ ಬದುಕಿನ ಖುಷಿ, ಹೊಸ ವಿಚಾರಗಳು, ಕಲಿಕೆ, ಹೊಸ ತಂತ್ರಜ್ಞಾನದ ಕಲಿಕೆ ಮತ್ತು ಬಳಕೆ, ಪ್ರಾಣಿ ಪಕ್ಷಿಗಳ ಜೊತೆಗೆ ನಿತ್ಯ ಅನುಭವದ ಒಡನಾಟ, ಅವುಗಳ ಫೋಟೊಗ್ರಫಿ ಮಾಡಿರುವುದು, ಹೊಸ ಪುಸ್ತಕ, ಹೊಸ ಹೊಸ ಸಿನಿಮಾಗಳು ವಿಶ್ವಮಟ್ಟದ ಕಲಾತ್ಮಕ ಚಿತ್ರಗಳು, ಹೀಗೆ ಇಡೀ ದಿನ ಕಳೆದುಹೋಗುವುದು ನಮಗೆ ಗೊತ್ತಾಗುವುದಿಲ್ಲ ಹಾಗೆ ನಾನು ಅಲ್ಲಿನ ವಾತಾವರಣದಲ್ಲಿ ಮೈಮರೆಯುತ್ತೇನೆ.  ನನ್ನ ಕನಸು ಅದೇ ದಿಕ್ಕಿನಲ್ಲಿದೆ. ಅಲ್ಲಿಂದ ವಾಪಸ್ ಮತ್ತೆ ಬೆಂಗಳೂರಿನ ಹೃದಯ ಭಾಗಕ್ಕೆ ಬರುತ್ತಿದ್ದಂತೆ ನನಗರಿವಿಲ್ಲದಂತೆ ಒತ್ತಡ ಶುರುವಾಗುತ್ತದೆ. ಅದೇ ಮದುವೆ ಫೋಟೊಗ್ರಫಿ, ಆಲ್ಬಂ, ವಿಡಿಯೋ ಸಂಕಲನ, ದಿನಪತ್ರಿಕೆ ಹಂಚಿಕೆ ಕೆಲಸ, ಹೀಗೆ ಮುಳುಗುವುದು ಸಹಜವಾಗಿಬಿಡುತ್ತದೆ. ಅದರಿಂದ ಹೊರಬರಲು  ಮೊಬೈಲಿನ ವಾಟ್ಸಪ್ ಫೇಸ್ ಬುಕ್, ಇನ್ನಿತರ ಎಲ್ಲಾ ಸಮಾಜಿಕ ಜಾಲತಾಣವನ್ನು ನೋಡಿದರೆ ಅಲ್ಲೂ ಕೂಡ ರಾಜಕೀಯ, ಪಕ್ಷಗಳ ಕೆಸರೆರಚಾಟ, ಜಾತಿ, ಮತಭೇದ, ಒಬ್ಬರ ಮೇಲೆ ಮತ್ತೊಬ್ಬರ ಗೂಬೆ ಕೂರಿಸುವುದು, ಕೀಳುಮಟ್ಟದಲ್ಲಿ ಕಾಲೆಳೆಯುವುದು, ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವುದು, ಇವೆಲ್ಲವನ್ನು ನೋಡುವಾಗ ನಾನು ಎಷ್ಟೇ ತಟಸ್ಥ ಸ್ತಿತಿಯಲ್ಲಿರುತ್ತೇನೆಂದುಕೊಂಡರೂ ನನಗರಿವಿಲ್ಲದಂತೆ ನನ್ನ ಮನಸ್ಸು ಯಾರದೋ ಕಡೆ ವಾಲಿರುತ್ತದೆ. ನನ್ನನ್ನು ನಿಯಂತ್ರಿಸಿಕೊಳ್ಳದ ಸ್ಥಿತಿಗೆ ಹೋಗುವ ಮುನ್ನವೇ ಅದರಿಂದ ಹೊರಬಂದುಬಿಡುತ್ತೇನೆ. ಹಾಗೆ ನೋಡಿದರೆ ಆ ಸರಕಾರ ಸರಿಯಿಲ್ಲ, ಈ ಸರಕಾರ ಸರಿಯಿಲ್ಲ, ಆತ ಸರಿಯಿಲ್ಲ ಈತ ಸರಿಯಿಲ್ಲ ಎನ್ನುವ ವಿಚಾರವನ್ನು ಗಮನಿಸಿದಾಗ ನಾವೆಷ್ಟು ಸರಿಯಿದ್ದೇವೆಂದು ಗಮನಿಸಬೇಕಾಗುತ್ತದೆ. ನಾವು ಮುಂಜಾನೆ ದಿನಪತ್ರಿಕೆ ಹಂಚಿಕೆ ಕೆಲಸಕ್ಕೆ ಐದುಗಂಟೆಗೆ ಹೋಗುತ್ತೇವಲ್ಲ, ಆ ಕೆಲಸದ ನಡುವೆ ಪುಟ್ಟ ಪುಟ್ಟ ಕೈಗಾಡಿಗಳಲ್ಲಿ ಪುಟ್ಟ ಅಂಗಡಿಗಳಲ್ಲಿ ಮಾರುವ ಕಾಫಿ ಟೀ ಕುಡಿದವರು ಪೇಪರ್ ಕಪ್ಪುಗಳನ್ನು ಪಕ್ಕನೇ ರಸ್ತೆ ಬಿಸಾಡುತ್ತೇವೆ. ಮರುಕ್ಷಣವೇ ಮೋದಿಯವರ ಸ್ವಚ್ಛಭಾರತದ ಬಗ್ಗೆ, ರಸ್ತೆಯ ಗುಂಡಿ, ಇತ್ಯಾದಿಗಳ ಬಗ್ಗೆ ಮೈಮರೆತು ಚರ್ಚಿಸುತ್ತೇವೆ. ಪಕ್ಕದಲ್ಲಿ ಆ ಕೈಗಾಡಿಯವರು ಕಸದ ಡಬ್ಬಗಳನ್ನು ಇಟ್ಟಿದ್ದರೂ ರಸ್ತೆಗೆ ಬೀಸಾಡುವುದು ಖಚಿತ. ನಾವು ದಿನಪತ್ರಿಕೆಗಳನ್ನು ಜೋಡಿಸಿಕೊಳ್ಳುವ ಸಮಯದಲ್ಲಿ ಸುತ್ತಮುತ್ತಲ ಶೇಷಾದ್ರಿಪುರಂ ಕುಮಾರಪಾರ್ಕ್ ನಂತ ಬಡಾವಣೆಗಳ ಡೀಸೆಂಟ್ ಜನರು ವಾಕಿಂಗ್ ಮಾಡುವಾಗ ಕೈಯಲ್ಲಿ ತಮ್ಮ ಮನೆಯಲ್ಲಿ ಹಿಂದಿನ ದಿನ ಶೇಖರವಾಗಿದ್ದ ಕಸವನ್ನು ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಕೊಂಡು ಬರುತ್ತಾರೆ. ನಾವು ನೋಡುತ್ತಿದ್ದಂತೆ ವಾಕಿಂಗ್ ಮಾಡುತ್ತಲೇ ರಸ್ತೆಬದಿಯಲ್ಲಿ ಕೈಯಿಂದ ಜಾರಿಸಿ ಹೋಗಿಬಿಡುತ್ತಾರೆ. ಅವರು ಕೂಡ ದೇಶದ ಎಲ್ಲಾ ವಿಚಾರ ಮತ್ತು ಸಮಸ್ಯೆಗಳ ಬಗ್ಗೆ ತಿಳಿಯಲು ನಮ್ಮ ಪೇಪರ್ ನಿರೀಕ್ಷಿಸುವವರೆ ಮತ್ತು ಓದುವಾಗ ಸರ್ಕಾರ ಮತ್ತು ಅದರ ಪ್ರತಿನಿಧಿಗಳನ್ನು ಬೈದುಕೊಳ್ಳುವವರೇ ಆಗಿರುತ್ತಾರೆ. ಮದುವೆ ನಡೆಯುವ ಕಲ್ಯಾಣಮಂಟಪದಲ್ಲಿ ಬರುವ ಅತಿಥಿಗಳು ಊಟದ ಎಲೆಯ ಮೇಲೆ ಎಲ್ಲಾ ವಿಧದ ತಿನಿಸುಗಳನ್ನು ಬಡಿಸುವಾಗ ಕೈಯಲ್ಲಿರುವ ಮೊಬೈಲಿನಲ್ಲಿ ಚಾಟಿಂಗ್ ಅಥವ fb, whatsapp ನೋಡುತ್ತಿರುತ್ತಾರೆ ಇದು ಇತ್ತೀಚಿನ ಪ್ರಸ್ತುತ ಸ್ಥಿತಿ, ಮೊದಲೆಲ್ಲ ಬಡಿಸುವಾಗ ಪಕ್ಕದವರ ಜೊತೆ ಮಾತುಗಾರಿಕೆ ನಡೆಯುತ್ತಿತ್ತು.  ಎಲ್ಲಾ ಬಡಿಸಿದ ಮೇಲೆ ಅದರಲ್ಲಿ ಅವರು ತಿನ್ನುವುದು ಅರ್ಧ ಅದಕ್ಕಿಂತ ಕಡಿಮೆ ಉಳಿದದ್ದು ಎಲೆಯಲ್ಲಿಯೇ ಬಿಟ್ಟುಬಿಡುತ್ತಾರೆ.  ತಮಾಷೆಯೆಂದರೆ ಇತ್ತೀಚಿಗೆ ನಾನು ಫೋಟೊಗ್ರಫಿಗೆ ಹೋಗಿದ್ದ ಮದುವೆಗಳಲ್ಲಿ ಊಟಮಾಡುವಾಗ ಈ ಅತಿಥಿಗಳು, ತಾವು ಎಲೆಗಳಲ್ಲಿ ಬಿಟ್ಟ ಊಟ ಕಸದ ಬುಟ್ಟಿಗೆ ಹೋಗುತ್ತದೆಯೆನ್ನುವ ಪರಿಜ್ಞಾನವಿಲ್ಲದೆ ಹೆಚ್ಚಾಗಿ ಚರ್ಚಿಸಿದ್ದು ಚುನಾವಣೆಗೆ ನಿಂತವರು ತಮ್ಮ ತಮ್ಮ ಊರುಗಳಲ್ಲಿ ಕೊಟ್ಟ ಬಿರಿಯಾನಿ, ದುಡ್ಡು, ಇನ್ನಿತರ ಎಲ್ಲವನ್ನು ಮಾತಾಡಿ ಎಲ್ಲಾ ಪಕ್ಷದವರನ್ನು ಬೈದಿದ್ದೇ ಹೆಚ್ಚು. ಇವರಲ್ಲಿ ಅತಿ ಹೆಚ್ಚಿನವರು ಚೆಂದದ ಯುವ ವಯಸ್ಸಿನ ಯುವಕ ಮತ್ತು ಯುವತಿಯರು, ಸೊಗಸಾಗಿ ಮೇಕಪ್ ಮಾಡಿಕೊಂಡ ಹೆಂಗಸರು, ತುಂಬಾ ಡಿಸೆಂಟ್ ರೀತಿಯಲ್ಲಿ ನಡೆದುಕೊಳ್ಳುವ ತಮ್ಮನ್ನು ತಾವೇ ಅಫಿಸಿಯಲ್ ಅಂತ ನಡುವಳಿಕೆಯಲ್ಲಿ ಬಿಂಬಿಸಿಕೊಳ್ಳುವ ಗಂಡಸರು. ನಾನಂತೂ ನನಗೇ ಬೇಕಿರುವುದನ್ನೆ ಹಾಕಿಸಿಕೊಳ್ಳುತ್ತೇನೆ ಮತ್ತು ಉಪ್ಪಿನ ಕಾಯಿ ಸಮೇತ ಎಲೆಯಲ್ಲಿ ಏನು ಉಳಿಸದೇ ತಿಂದುಮುಗಿಸುತ್ತೇನೆ. ಜೊತೆಗೆ ನನ್ನ ಫೋಟೊಗ್ರಫಿ ತಂಡಕ್ಕೂ ಇದನ್ನೇ ಕಲಿಸಿರುವುದರಿಂದ ಅವರೆಲ್ಲರೂ ಊಟದ ಎಲೆಯಲ್ಲಿ ಏನನ್ನು ಬಿಟ್ಟು ವೇಸ್ಟ್ ಮಾಡುವುದಿಲ್ಲ. ಇದೆಲ್ಲ ಅನುಭವಗಳನ್ನು ನೋಡಿದಾಗ ಬದಲಾವಣೆಯೆನ್ನುವುದು ಯಾವುದೇ ಸರ್ಕಾರ, ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು, ಸರ್ಕಾರಿ ಅಧಿಕಾರಿಗಳು ಇವರೆಲ್ಲಾ ಎಷ್ಟೇ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟರೂ ಆಗುವುದಿಲ್ಲ. ಅದಕ್ಕೆ ಪಕ್ಕಾ ಉದಾಹರಣೆಯೆಂದರೆ ಹತ್ತು ರೂಪಾಯಿ ನಾಣ್ಯ. ಸರ್ಕಾರ, ರಿಸರ್ವ ಬ್ಯಾಂಕ್ ಅಫ್ ಇಂಡಿಯ ಕೂಡ ಹತ್ತು ರೂಪಾಯಿಯ ನಾಣ್ಯ ಚಲಾವಣೆಯಿದೆ. ಅದನ್ನು ಸ್ವೀಕರಿಸಿ ಮತ್ತು ಬಳಸಿ ಅಂತ ಹೇಳಿದರೂ ಅದ್ಯಾವ ತಲೆಕೆಟ್ಟವನ್ನು ಇದು ನಡೆಯುವುದಿಲ್ಲ ಅಂತ ಹಬ್ಬಿಸಿದನೇ ಇವತ್ತಿಗೂ ಅದನ್ನು ಪುಟ್ಟ ತರಕಾರಿ ವ್ಯಾಪಾರಿಗಳು, ಅಂಗಡಿಗಳವರು, ಹಾಲಿನವರು ತೆಗೆದುಕೊಳ್ಳುವುದಿಲ್ಲ. ಈ ಕ್ಷಣದವರೆಗೂ ಸರ್ಕಾರದ ದೃಷ್ಟಿಯಲ್ಲಿ ಅದು ಚಲಾವಣೆ ನಾಣ್ಯ, ಆದ್ರೆ ಸಾರ್ವಜನಿಕರ ದೃಷ್ಟಿಯಲ್ಲಿ ಚಲಾವಣೆಯಾಗದ ನಾಣ್ಯ. ನಾನು ಕೊಟ್ಟ ನಾಣ್ಯವನ್ನು ತಿರಸ್ಕರಿಸಿದ ಹಾಲಿನವನು ಸರ್ಕಾರವನ್ನು ಬೈಯುವುದನ್ನು ನಿತ್ಯ ನೋಡುತ್ತೇನೆ. ಕೆಲವೊಂದು ತುಂಬಾ ಸುಲಭವಾಗಿದ್ದರೂ ನಮ್ಮ ಜನರೇಕೆ ಆ ದಿಕ್ಕಿನಲ್ಲಿ ಒಂದರೆ ಗಳಿಗೆ ಯೋಚಿಸಿ ಕಾರ್ಯಗತ ಮಾಡಿಕೊಂಡಿರೆ ಎಷ್ಟೋ ಬದಲಾವಣೆಗಳಾಗುತ್ತವೆ. ಅದಕ್ಕಾಗಿ ಇವತ್ತು ನನಗಾದ ಅನುಭವದ ಮೂಲಕ ವಿವರಿಸಲು ಪ್ರಯತ್ನಿಸುತ್ತೇನೆ. ಇವತ್ತು ನನ್ನ ಸ್ಕೂಟರನ್ನು ಸರ್ವಿಸಿಗೆ ಬಿಟ್ಟಿದ್ದರಿಂದ ಅನೇಕ ಕಡೆ ಬಸ್ಸಿನಲ್ಲಿ ಪ್ರಯಾಣಿಸಬೇಕಾಯಿತು. ಶ್ರೀರಾಮಪುರ ಮೆಟ್ರೋ ಸ್ಟೇಷನ್ ಬಳಿಯಲ್ಲಿ ಬಸ್ ಹತ್ತಿ ಶಿವಾನಂದ ಸರ್ಕಲ್ ಹೋಗಬೇಕಿತ್ತು. ನಿರ್ವಾಹಕರ ಬಳಿ ಶಿವಾನಂದ ಸರ್ಕಲ್ ಎಂದೆ, “ಹನ್ನೆರಡು ರೂಪಾಯಿ ಕೊಡಿ” ಅಂದ್ರು, ನಾನು ಜೇಬಿನಿಂದ ಒಂದು ಹಿಡಿಯಷ್ಟು ಚಿಲ್ಲರೆಯನ್ನು ತೆಗೆದು “ಇದರಲ್ಲಿ ತೆಗೆದುಕೊಳ್ಳಿ” ಎಂದೆ. ಅವರು ಎಣಿಸಿ ತೆಗೆದುಕೊಂಡು  “ಏನ್ ಸರ್ ಪೂರ್ತಿ ಚಿಲ್ಲರೆ ಇಟ್ಟಿದ್ದೀರಿ” ಅಂತ ಖುಷಿಯಿಂದ ತೆಗೆದುಕೊಂಡು ಕೇಳಿದ್ರು, ನಾನು “ನಿಮಗೋಸ್ಕರ ಸರ್” ಅಂದೆ. ಆತ ಒಂದು ಕಿರು ನಗೆ ನನ್ನತ್ತ ಬೀರಿ ಮುಂದೆ ಸಾಗಿದರು. ತುಂಬಿದ ಬಸ್ ನಡುವೆ ಆತನೊಳಗೊಂದು ಮನಃಪೂರ್ವಕ ನಗು ಹೊರಹೊಮ್ಮಿದ್ದು ನನಗಿಷ್ಟವಾಯಿತು.  ನನಗೆ ತಿಳಿದಂತೆ ಅವರಿಗೂ ನಿತ್ಯವೂ ಚಿಲ್ಲರೆಯನ್ನು ಕೊಟ್ಟು ಕೊಟ್ಟು ಸಾಕಾಗಿರುತ್ತದೆ ಮತ್ತು ಬೇಸರವಾಗಿರುತ್ತದೆ. ಕೆಲವರಂತು ಈ ಚಿಲ್ಲರೆ ವಿಚಾರಕ್ಕಾಗಿ ಜಗಳವಾಗಿ ನಿತ್ಯವೂ ನೆಮ್ಮದಿಯನ್ನು ಹಾಳುಮಾಡಿಕೊಂಡಿರುತ್ತಾರೆ. ನನ್ನ ಮುಷ್ಟಿಯಲ್ಲಿದ್ದ ಚಿಲ್ಲರೆ ನಾಣ್ಯ ನಿರ್ವಾಹಕನ ಮುಖದಲ್ಲಿ ಖುಷಿ ತರುತ್ತದೆಯೆಂದರೆ ನನಗೆಲ್ಲಿಂದ ಬಂತು ಈ ಚಿಲ್ಲರೇ ನಾಣ್ಯಗಳು ಅಂತ ನಿಮಗನ್ನಿಸಿರಬಹುದು. ಅದರ ಹಿಂದೆ ಪುಟ್ಟ ಸ್ವಾರಸ್ಯಕರ ಕತೆಯಿದೆ. ತಮಾಷೆಯಾಗಿ ಹೇಳಬೇಕೆಂದರೆ ನಮ್ಮ  ದೇಶದ ದೇವರನ್ನು ನಂಬುವ ಮತ್ತು ಭಕ್ತಿಯಿಂದ ಪೂಜಿಸುವ ಪ್ರತಿಯೊಬ್ಬ ಆಸ್ಥಿಕರ ಬಳಿಯೂ ಪೂಜೆಯ ನಂತರ ಮಂಗಳಾರತಿ ತಟ್ಟೆಗೆ ಹಾಕಲು ಒಂದು ರುಪಾಯಿ, ಎರಡು ರುಪಾಯಿ, ಐದು ರುಪಾಯಿ ನಾಣ್ಯಗಳಿರುತ್ತವೆ. [ಹತ್ತು ರುಪಾಯಿ ನಾಣ್ಯಗಳು ಚಲಾವಣೆಯಾಗುವುದಿಲ್ಲವೆಂದು ನಮ್ಮ ಸಾರ್ವಜನಿಕರೇ ನಿರ್ಧರಿಸಿರುವುದರಿಂದ ಅ ನಾಣ್ಯಗಳು ಅವರ ಬಳಿ ಸಧ್ಯ ಖಾಯ್ದಿರಿಸಿಲ್ಲ] ಇದಲ್ಲದೇ ಹತ್ತು ರುಪಾಯಿ, ಇಪ್ಪತ್ತು ರುಪಾಯಿ ನೋಟುಗಳು, ಸ್ವಲ್ಪ ಅನುಕೂಲಸ್ಥರಿಗೆ ಐವತ್ತು, ನೂರು ನೋಟುಗಳಿರುತ್ತವೆ. ಇವೆಲ್ಲವೂ ಅವರಿಗೆ ಆ ದೇವರ ಸನ್ನಿದಿಯಲ್ಲಿ  ಆ ಕ್ಷಣದಲ್ಲಿ ಸಲ್ಲಿಸಲು ಹೇಗೆ ಬಂತು ಅಂತ ನಾನು ಕೇಳಬಾರದು ನೀವು ಕೇಳಬಾರದು ಒಟ್ಟಾರೆ ನಮ್ಮ ದೇಶದಲ್ಲಿ ಯಾರು ಯಾರನ್ನು ಈ ವಿಚಾರವಾಗಿ ಕೇಳಬಾರದು. ಇದೇ ಸಾರ್ವಜನಿಕರಿಗೆ ಎಂದಿನಂತೆ ನಿತ್ಯ ಚಿಲ್ಲರೆ ತರಕಾರಿ, ಹಣ್ಣು, ಹಾಲು, ಹೋಟಲುಗಳು,  ಕೈಗಾಡಿಯವರು, ಬಸ್ಸು ಇತ್ಯಾದಿಗಳಲ್ಲಿ ಕೊಡಲು ಅವರ ಬಳಿ ಚಿಲ್ಲರೆ ನಾಣ್ಯಗಳಿರುವುದಿಲ್ಲ. ಮತ್ತೆ ಅವರ ಬಳಿ ಏಕೆ ಚಿಲ್ಲರೆ ನಾಣ್ಯಗಳಿಲ್ಲ ಅಂತ ಯಾರು ಕೇಳುವಂತಿಲ್ಲ.  ಅವರೆಲ್ಲ ದೊಡ್ಡ ನೋಟುಗಳನ್ನೇ ಕೊಡುತ್ತಾರೆ. ಚಿಲ್ಲರೆ ವ್ಯಾಪಾರಿಗಳು ತನ್ನ ನಿತ್ಯ ಗ್ರಾಹಕರನ್ನು ಕಳೆದುಕೊಳ್ಳಬಾರಬಹುದೆಂದು ದೈನ್ಯತೆಯಿಂದ ತಾವೇ ಚಿಲ್ಲರೆ ಕೊಡುವುದು, ನಾಳೆ ತೆಗೆದುಕೊಳ್ಳಿ ಅನ್ನುವುದು ನಾಳೇ ನೀವೇ ಚಿಲ್ಲರೇ ಕೊಡಿ ಅಂತ ಗ್ರಾಹಕರಿಗೇ ಬಿಟ್ಟುಕೊಡುವುದು, ಬಸ್ ನಿರ್ವಾಹಕನು ದೊಡ್ಡ ನೋಟುಗಳನ್ನು ನೋಡಿ ಮುಖ ಸಿಂಡರಿಸಿಕೊಳ್ಳುವುದು, ಆ ನೋಟು ಕೊಟ್ಟ ಪ್ರಾಯಾಣಿಕನನ್ನು ಒಂಥರ ತಿರಸ್ಕಾರದಿಂದ ನೋಡುವುದು, ಇವೆಲ್ಲವೂ ನಿತ್ಯ ನಡೆಯುವುದು ಸಹಜ ಸತ್ಯಗಳು. ಇವೆಲ್ಲ ವಿಚಾರಗಳ ನಡುವೆ ನನ್ನಲ್ಲಿ ಹಿಡಿತುಂಬ ಚಿಲ್ಲರೆ ನಾಣ್ಯಗಳು ಹೇಗೆ ಬಂತು ಅನ್ನುವ ಕತೆಯನ್ನು ನಿಮಗೆ ಹೇಳಲೇಬೇಕು. ನಮ್ಮ ದೇಶ, ರಾಜ್ಯ, ಬೇಡ ಬೆಂಗಳೂರಿನಂತ ಮಹಾನಗರಿಯಲ್ಲೂ ತಿಂಗಳಿಗೊಂದು ಹಬ್ಬ, ತಿಂಗಳಿಗೊಂದು ಸಂಕಷ್ಟಿಹರ ಗಣಪತಿ ಪೂಜೆ, ಹುಣ್ಣಿಮೆ, ಅಮವಾಸ್ಯೆ ಇತ್ಯಾದಿ ಕಾರಣಗಳಿಗಾಗಿ ನಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಏರ್ಪಡುತ್ತವೆ. ಅಂತ ದಿನಗಳಲ್ಲಿ ಮಂಗಳಾರತಿ ತಟ್ಟೆಯ ತುಂಬ ಚೆಲ್ಲರೆ ನಾಣ್ಯಗಳು ಬೀಳುವುದು ಖಚಿತ. ಈ ವಿಚಾರವನ್ನು ಹೇಳಿ ಪೂಜಾರಿಗಳ ತಟ್ಟೆಯ ಹಣದ ಬಗ್ಗೆ ವಿವರಿಸುತ್ತಿದ್ದೇನೆಂದು ಅಂದುಕೊಳ್ಳಬೇಡಿ. ಅವರಿಗೆ ಕೊಡುವ ಅತಿ ಕಡಿಮೆ ಸಂಬಳದಲ್ಲಿ ಅವರ ಜೀವನ ನಡೆಸಲು ಎಷ್ಟು ಕಷ್ಟವಿದೆ ಮತ್ತು ಮಂಗಳಾರತಿ ತಟ್ಟೆಗೆ ಬೀಳುವ ಹಣವು ಅವರಿಗೇ ಸಲ್ಲಬೇಕು ಎಂದು ವಾದಿಸುವವರಲ್ಲಿ ನಾನು ಒಬ್ಬ. ಏಕೆಂದರೆ ಮೊದಲೆಲ್ಲಾ ದೇವಸ್ಥಾನದ ಹುಂಡಿಗಳಲ್ಲಿ ಹಾಕುತ್ತಿದ್ದ ಹಣವನ್ನು ಮುಜರಾಹಿ ಇಲಾಖೆಯವರ ಏ.ಸಿ ರೂಮು, ಕ್ಯಾಬಿನ್ನು, ಅವರ ಸಂಬಳ, ಅವರು ಓಡಾಡುವ ಗೂಟದ ಕಾರು ಇತರ ಸವಲತ್ತುಗಳಿಗೆ ಅರ್ಧಕ್ಕಿಂತ ಹೆಚ್ಚು ಖರ್ಚಾಗುತ್ತೆಯೆಂದು ತಿಳಿದ ಮೇಲೆ ನಾನು ಮತ್ತು ನನ್ನ ಶ್ರೀಮತಿ ಹುಂಡಿಗೆ ಹಣವನ್ನು ಹಾಕುವುದು ಬಿಟ್ಟಿದ್ದೇವೆ.  ವಿಷಯಾಂತರವಾಗುವುದು ಬೇಡ, ಮಂಗಳಾರತಿ ತಟ್ಟೆ ಬಿದ್ದ ಚಿಲ್ಲರೆ ನಾಣ್ಯಗಳನ್ನು ಮರುದಿನ ಆ ಪೂಜಾರಿಗಳು ಎಣಿಸಿಡುತ್ತಾರೆ. ಅವರು ಅದನ್ನು ಎಷ್ಟು ಅಂತ ಬಳಸಲು ಸಾಧ್ಯ? ಒಂದು ಎರಡು ದಿನಗಳ ನಂತರ ನೀವು ಐನೂರು, ಎರಡು ಸಾವಿರ ನೋಟುಗಳನ್ನು ಕೊಟ್ಟು ನಿಮಗೆ ಬೇಕಾದ ಚಿಲ್ಲರೆ ನಾಣ್ಯಗಳನ್ನು ಕೇಳಿದರೆ ಅವರು ಖುಷಿಯಿಂದ ಕೊಡುತ್ತಾರೆ. ನೀವು ಹಾಗೆ ಒಮ್ಮೆ  ಒಂದು ಸಾವಿರ ರೂಪಾಯಿಗಳಷ್ಟು ನಾಣ್ಯಗಳನ್ನು ಅವರಿಂದ ತಂದಿಟ್ಟುಕೊಂಡರೆ ನಿಮ್ಮ ನಿತ್ಯದ ಹಾಲು, ತರಕಾರಿ, ದಿನಸಿ, ಬಸ್ಸು, ಆಟೋ, ಹೀಗೆ ಎಲ್ಲದಕ್ಕೂ ದಾರಾಳವಾಗಿ ಬಳಸಿದರೂ ಎರಡು ತಿಂಗಳಿಗಿಂತ ಹೆಚ್ಚು ಬರುತ್ತದೆ. ಅದು ಮುಗಿಯುವ ಹೊತ್ತಿಗೆ ಮತ್ತೊಂದು ಸಂಕಷ್ಟಿ ಅಥವ ಹಬ್ಬದ ಮರುದಿನ ಹೋಗಿ ಕೇಳಿ ತಂದು ಇಟ್ಟುಕೊಂಡರಾಯ್ತು.  ಹೀಗೆ ನಾನು ಕಳೆದ ಹತ್ತು ವರ್ಷಗಳಿಂದ ಮಾಡುತ್ತಿರುವುದರಿಂದ ನನಗೆ ಅವತ್ತಿನಿಂದ ಇವತ್ತಿನವರೆಗೆ ಚಿಲ್ಲರೆ ಸಮಸ್ಯೆ ಬಂದಿಲ್ಲ. ಇದೇ ಚಿಲ್ಲರೆ ನಾಣ್ಯಗಳನ್ನು ನಾನು ದಿನಪತ್ರಿಕೆ ವಸೂಲಿಗೆ ಹೋದಾಗಲೂ ನನ್ನ ಗ್ರಾಹಕರಿಗೆ ಧಾರಾಳವಾಗಿ ಕೊಡುವುದರಿಂದ ಅವರ ಮುಖದಲ್ಲಿ ಒಂದು ಮುಗುಳ್ನಗೆ ನನಗೆ ಬೋನಸ್ ಆಗಿ ಸಿಗುತ್ತದೆ. ಮತ್ತೆ ಇದಲ್ಲದೆ ನನ್ನ ದಿನಪತ್ರಿಕೆ ವಿತರಣೆಯಲ್ಲಿ ಚಿಲ್ಲರೆ ನೋಟುಗಳ ಅವಶ್ಯಕತೆಯಿರುವುದರಿಂದ ಹತ್ತು, ಇಪ್ಪತ್ತು, ಐವತ್ತರ ನೋಟುಗಳನ್ನು ಬ್ಯಾಂಕಿನಿಂದ ತಂದಿಟ್ಟುಕೊಂಡಿರುತ್ತೇನೆ. ಅದೇ ನೋಟುಗಳು ನಿತ್ಯಬಳಕೆಯಲ್ಲಿ ಚಲಾವಣೆಯಾಗುವುದರಿಂದ ನನಗೆ ಚಿಲ್ಲರೆ ನೋಟು ಮತ್ತು ಚಿಲ್ಲರೆ ನಾಣ್ಯಗಳ ಸಮಸ್ಯೆ ಕಳೆದ ಹತ್ತು ವರ್ಷಗಳಿಂದ ಎದುರಾಗಿಲ್ಲ. ನಾನು ಕೊಟ್ಟ ಚಿಲ್ಲರೆ ನಾಣ್ಯಗಳಿಂದಾಗಿ ಇವತ್ತು ಬಸ್ ಹತ್ತಿದ್ದ ನಿರ್ವಾಹಕ ಖುಷಿಯಿಂದ ನಕ್ಕ ಕಾರಣಾ ನಿಮಗೀಗ ಗೊತ್ತಾಗಿರಬೇಕು. ಇಷ್ಟನ್ನು ಮಾಡುವುದಕ್ಕೆ ನಾನೇನು ಮಾಸ್ಟರ್ ಪ್ಲಾನ್ ಏನು ಮಾಡಿರಲಿಲ್ಲ. ಕೇವಲ ಒಂದಷ್ಟು ಮುಂದಾಲೋಚನೆ ಮತ್ತು ಅದನ್ನು ಕಾರ್ಯಗತ ಮಾಡುವ ಇಚ್ಛಾಶಕ್ತಿಯನ್ನು ನನ್ನೊಳಗೆ ರೂಪಿಸಿಕೊಂಡಿದ್ದು.  ಇದು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಇದರಿಂದಾಗಿ ನಮ್ಮ ನಗರದ ರಾಜ್ಯದ ಸಾರ್ವಜನಿಕರು ನಿತ್ಯ ಬದುಕಿನ ಚಿಲ್ಲರೇ ಸಮಸ್ಯೆಯಿಂದಲೇ ಪಾರಾಗಬಹುದು. ಹಾಲಿನವನು ನಗುತ್ತಾನೆ, ತರಕಾರಿ ದಿನಸಿ ಅಂಗಡಿಯವರು ಪ್ರೀತಿಯಿಂದಲೇ ನಿಮ್ಮೊಂದಿಗೆ ವ್ಯವಹರಿಸುತ್ತಾರೆ. ಏಕೆಂದರೆ ಅವರು ಚಿಲ್ಲರೆ ಹುಡುಕುವ ಕೆಲಸವನ್ನು ನೀವು ಕಡಿಮೆ ಮಾಡಿದ್ದೀರಲ್ಲ ನೀವು ಅದಕ್ಕೆ. ಆ ಕ್ಷಣಗಳ ಮಟ್ಟಿಗೆ ಬದುಕು ಸುಂದರವಾಗುತ್ತದೆ. ಇದನ್ನು ತನ್ನಿಚ್ಚೆಯಿಂದ ಮಾಡಬೇಕಷ್ಟೆ. ಇದೆಲ್ಲವೂ ಸಾಧ್ಯವಾ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡುವುದು ಖಚಿತ. ನಾನೊಬ್ಬ ಸಾಮಾನ್ಯ ಛಾಯಾಗ್ರಾಹಕ ಮತ್ತು ದಿನಪತ್ರಿಕೆ ವಿತರಕ ನನಗೆ ಇವೆಲ್ಲವೂ ಸಾಧ್ಯವಾಗಿದೆ ಮತ್ತು ಈ ವಿಚಾರಗಳಲ್ಲಿ ನನ್ನ ಜೀವನದ ಖುಷಿಯನ್ನು ಹೆಚ್ಚಿಸಿಕೊಂಡಿದ್ದೇನೆ ಅಂದ ಮೇಲೆ ನಿಮಗೂ ಇದು ಸುಲಭ ಸಾಧ್ಯ. ಸರ್ಕಾರದ ಪ್ರಕಾರ ಚಲಾವಣೆಯಲ್ಲಿರುವ ಹತ್ತು ರೂಪಾಯಿ ನಾಣ್ಯವನ್ನೇ ಚಲಾವಣೆಯಾಗದಂತೆ ಮಾಡಿದ್ದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಸ್ವ ಇಚ್ಛಾಶಕ್ತಿಯಿಂದಲೇ. ಇದು ಹೀಗೆ ಸುಲಭವಾಗಿ ಆಗಿರುವಾಗ, ಚಿಲ್ಲರೆ ಸಮಸ್ಯೆ, ಕಾಫಿ ಟೀ ಲೋಟವನ್ನು ಸರಿಯಾಗಿ ಕಸದ ಬುಟ್ಟಿಗೆ ಹಾಕುವುದು, ಮನೆಯ ಕಸವನ್ನು ರಸ್ತೆಯಲ್ಲಿ ಬಿಸಾಡುವುದಿಲ್ಲವೆಂದು ನಿರ್ಧರಿಸುವುದು, ಮದುವೆ ಕಾರ್ಯಕ್ರಮಗಳಲ್ಲಿ ಊಟವನ್ನು ಎಲೆಯಲ್ಲಿ ಬಿಟ್ಟು ವೇಸ್ಟ್ ಮಾಡದಂತೆ ನೋಡಿಕೊಳ್ಳುವುದು ಈ ಮೂಲಕ ಬದುಕನ್ನು ಮತ್ತಷ್ಟು ಸುಂದರಗೊಳಿಸಿಕೊಳ್ಳುವುದು ಸುಲಭವಿದೆ.
ಯಾಕೋ ಇವೆಲ್ಲವನ್ನು ಹೇಳಬೇಕೆನಿಸಿತು. ಹೇಳಿದ್ದೇನೆ.
ಶಿವು.ಕೆ

12 comments:

ಜಲನಯನ said...

ಛಾಯಾಕನ್ನಡಿಯ ಮಾಯಾಲೋಕದ ಲೇಖನ ವಿಭಿನ್ನ ಎನ್ನುವುದು ಹಿಂದೆಯೂ ಇತ್ತು..ಈಗಲೂ .. ಬ್ಲಾಗ್ ಬಡವಾಗುತ್ತಿದೆ ಎನ್ನುವುದು ನಿಜ ಆದ್ರೆ ಲೇಖನಗಳ ಛಾಯೆ ಅವುಗಳ ಮೌಲ್ಯ ಕಡಿಮೆಯಾಗದು... ಚನ್ನಾಗಿದೆ ಶಿವು.

Srikanth Manjunath said...

ಸರಳವಾದ ಲೇಖನ.. ಪ್ರಸ್ತುತ ಪಡಿಸಿದ ರೀತಿ ಸೊಗಸಾಗಿದೆ.. ಮಾಡಬಲ್ ಕೆಲ್ಸಗಳು ಅಥವಾ ಮಾಡಬಲ್ ಯೋಚನೆಗಳ ಬಗ್ಗೆ ಹರಿದಿರುವ ವಿಚಾರ ಲಹರಿ ಪಾಲಿಸಬಹುದಾಗಿದೆ ..
ಸುಂದರವಾದ ಲೇಖನ ಶಿವೂ ಸರ್

Unknown said...

Simple and beautiful .... Liked lot

shivu.k said...

ಆಜಾದ್: ಪೇಸ್ ಬುಕ್ ಬಂದು ನಮ್ಮ ಬರವಣಿಗೆಯನ್ನು ಕತ್ತರಿಸಿ ಹಾಕಿರುವುದು ನಿಜ. ಆದರೂ ಇತ್ತೀಚಿನ ಅನುಭವವನ್ನು ಹಂಚಿಕೊಳ್ಳಬೇಕೆನ್ನುವ ಆಸೆಯಿಂದ ಬರೆದಿದ್ದು. ಛಾಯಾಕನ್ನಡಿ ಬ್ಲಾಗ್ ಮತ್ತು ಅದರ ಲೇಖನಗಳ ಬಗೆಗಿನ ನಿಮ್ಮ ಪ್ರೀತಿಗೆ ಶರಣು. ಲೇಖನಗಳ ಮೌಲ್ಯ ಕಡಿಮೆಯಾಗದೆನ್ನುವ ನಿಮ್ಮ ಮಾತನ್ನು ಒಪ್ಪುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು

shivu.k said...

Srikanth Manjunath sir: ಮೂರು ವರ್ಷಗಳ ನಂತರ ಬರೆದ ಈ ಲೇಖನ ಮತ್ತು ಆದರ ಪ್ರಸ್ತುತತೆಗಳ ಮುಂದಿನ ಬದಲಾವಣೆ ಸಾಧ್ಯವಾಗಬಹುದೆನ್ನುವ ಚಿಕ್ಕ ಆಸೆಯಿಂದ ಬರೆದಿದ್ದು. ಪ್ರೀತಿಯಿಂದ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

shivu.k said...

Sweeton Pinto sir: Thanks for reading

Unknown said...

Good one with lot of meaningful thoughts

ಸುಮ said...

ಖುಷಿಯಾಯ್ತು ವರ್ಷಗಳ ನಂತರ ನಿಮ್ಮ ಬ್ಲಾಗ್ ಓದಿ, ಬ್ಲಾಗ್ ಬರಹಗಾರರೆಲ್ಲರೂ ಈಗ ಫೇಸ್ ಬುಕ್ ಬರಹಗಾರರಾಗಿ ಬ್ಲಾಗ್ ಖಾಲಿ ಹೊಡೆಯುತ್ತಿವೆ! ಅಪ್ಡೇಟ್ ಆಗುತ್ತಿರುವ ಕೆಲವೇ ಕೆಲವು ಬ್ಲಾಗ್ ಗಳನ್ನು ಓದುವವರೂ ಕಡಿಮೆ, ಕಮೆಂಟಿಸುವವರಂತೂ ಇಲ್ಲವೇ ಇಲ್ಲ ಎಂಬಂತಾಗಿದೆ(ನನ್ನ ಬ್ಲಾಗ್ ವಾರ ವಾರ ಅಪ್ಡೇಟ್ ಆಗುತ್ತಿದ್ದರೂ ಸುನಾಥಕಾಕ, ಶ್ರೀಕಾಂತ್ ಅವರನ್ನು ಬಿಟ್ಟರೆ ಇನ್ಯಾರೂ ಪ್ರೋತ್ಸಾಹಿಸುವವರಿಲ್ಲ)

ನಿಮ್ಮ ಲೇಖನವೂ ತುಂಬಾ ಪ್ರಸ್ತುತವಾಗಿದೆ. ನಾವೂ ವಾಕಿಂಗ್ ಹೋಗುವಾಗ ರಸ್ತೆಬದಿಯಲ್ಲಿ ಕಸ ಹಾಕುವವರಿಗೆ ಬುದ್ಧಿ ಹೇಳಲು ಹೋಗಿ ಎಷ್ಟೋ ಬಾರಿ ಬಯ್ಯಿಸಿಕೊಂಡಿದ್ದೇವೆ, ಪ್ರತಿಯೊಬ್ಬರಲ್ಲೂ ನಾಗರೀಕ ಪ್ರಜ್ಞೆ ಹುಟ್ಟದಿದ್ದರೆ ಎಷ್ಟೇ ಕಾನೂನು ಬಂದರೂ ಉದ್ಧಾರವಾಗದು.

sunaath said...

ಶಿವು, ನನಗೆ ದುಪ್ಪಟ್ಟು ಖುಶಿಯನ್ನು ಕೊಡುತ್ತಿದ್ದೀರಿ. ಮೊದಲನೆಯದು, blogನಲ್ಲಿ ನಿಮ್ಮ ಲೇಖನವನ್ನು ದೀರ್ಘ ಕಾಲದ ನಂತರ ಮತ್ತೊಮ್ಮೆ ನೋಡುತ್ತಿರುವುದು. ಎರಡನೆಯದಾಗಿ, ಒಂದು ವಿಚಾರಪ್ರಚೋದಕ ವಿಷಯವನ್ನು ನಿಮ್ಮ ಅನನ್ಯ ಶೈಲಿಯಲ್ಲಿ ಪ್ರಸ್ತಾಪಿಸಿರುವುದು.
ದಯವಿಟ್ಟು blogನಲ್ಲಿ ಬರೆಯುತ್ತಲಿರಿ.

jeevandhara said...

ಪ್ರೀತಿಯ ಶಿವು
ನಿಮ್ಮ ಬ್ಲಾಗ್ ನೋಡಿದ್ದು ಇದೇ ಮೊದಲು.ಬಹಳ ಪ್ರಸ್ತುತ ಬರಹ. ಬಹುತೇಕ ಜನರ ಮನಸ್ಥಿತಿ, ಧೋರಣೆಗಳನ್ನು ಸೊಗಸಾಗಿ ಬಿಂಬಿಸಿದ್ದೀರಿ.

Unknown said...

ಲೇಖನದ ವಿಷಯ ಚಿಲ್ಲರೆ ವಿಷಯವಾಗಿದ್ದರು ಸಮಯೊಚಿತವಾಗಿದೆ. ಟೆನ್ ಶನ್ ಶುರುವಾಗುವುದೆ ಚಿಲ್ಲರೆಯಿಂದ. ಟೆನ್ ಶನ್ ಮುಕ್ತ ಜಿವನಕ್ಕೆ ಉತ್ತಮ ಸಲಹೆ.

ನಾನು ಹಳ್ಳಿಗಳ ದೆವಾಲಯಕ್ಕೆ ಹೊದಾಗ ಮಂಗಳಾರತಿ thattege ಸ್ವಲ್ಪ ಧಾರಾಳವಾಗಿ ಹಣ ಹಾಕುತ್ತೆನೆ.ಆದಾಯ ಕಡಿಮೆಆಯಿತುಎಂದುಅವರು ಬೆಂಗಳೂರಿಗೆ ಹೊಗಿಬಿಟರೆ devalyd bagilu tegeyuvru yaru.

Unknown said...

ನೀವೊಬ್ಬ ಉತ್ತಮ ಛಾಯಾಚಿತ್ರಗಾರರಷ್ಟೆ ಅಲ್ಲದೆ ಒಬ್ಬ ಉತ್ತಮ ಲೇಖಕರೂ ಹೌದು. ..... ಹರಟೆ ಹೊಡೆಯಲು ಸ್ನೇಹಿತರೆ ಸಿಗದ ಈಗಿನ ಸಂದರ್ಭದಲ್ಲಿ,ಈ ಲೇಖನ, ನಿಮ್ಮೊಂದಿನ ಒಂದು ದೀರ್ಘ ಹರಟೆಯ ಹಾಗಿತ್ತು...
ಸರಳ ಬರಹ ಶೈಲಿ ನನ್ನನು ಓದಿಸಿಕೊಂಡು ಹೋಯಿತು... ಈ ರೀತಿ ಬರೆಯೋದು ಒಂದು ಅದ್ಭುತ ಕಲೆ..
ಬರಹದ ವಿಷಯ ವಿಷಯ ವಸ್ತು ಆಶಯ ತುಂಬಾ ಚೆನ್ನಾಗಿದೆ. ...
ಪ್ಯಾರಾ ಗ್ರಾಫ್ ಅನ್ನು ಅಳವಡಿಕೊಳ್ಳಿ... ಧನ್ಯವಾದಗಳು ಮತ್ತು ಶುಭೋದಯಗಳು...