Sunday, September 29, 2013

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಭಾಗ 2)

[ಮೊದಲ ಭಾಗಕ್ಕಾಗಿ ಈ ಲಿಂಕ್ ಕ್ಲಿಕ್ಕಿಸಿ.]
.http://chaayakannadi.blogspot.in/2013/09/blog-post.html

    ಮೊದಲ ಭಾರಿಗೆ ಅಲ್ಲಿನ ಲೋಕಲ್ ರೈಲು ನಿಲ್ದಾಣದೊಳಗೆ ಕಾಲಿಟ್ಟಿದ್ದೆ. ಎಷ್ಟೊಂದು ಜನ ಅಂತೀರಿ! ನೂರಾರು ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಸಿದ್ದರಾಗಿ ಬರುವ ರೈಲುಗಾಡಿಗಳಿಗೆ ಕಾಯುತ್ತಿದ್ದರು. ಆ ಕ್ಷಣದಲ್ಲಿ ಮಲ್ಲೇಶ್ವರಂ ರೈಲು ನಿಲ್ದಾಣ ನೆನಪಾಯ್ತು. ಸದಾ ಶಾಂತವಾಗಿರುವ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣವೆಲ್ಲಿ! ಗಿಜಿಗುಟ್ಟುವ ಈ ನಿಲ್ದಾಣವೆಲ್ಲಿ! ಖಂಡಿತ ಹೋಲಿಸಕೊಳ್ಳಬಾರದು ಸುಮ್ಮನೆ ಇಲ್ಲಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಆಸ್ವಾದಿಸಬೇಕೆಂದುಕೊಂಡು ಅಭಿಜಿತ್ ಡೆ ಮತ್ತು ಇತರರೊಂದಿಗೆ ನಾನು ರೈಲು ನಿಲ್ದಾಣದ ಪ್ಲಾಟ್ ಫಾರಂ ಕಡೆಗೆ ನಡೆದೆ. ಆಗಲೇ ಒಂದು ರೈಲು ಬಂದು ನಿಂತಿತ್ತು. ನಾನು ಈ ರೈಲು ಹತ್ತೋಣವೇ ಎಂದು ಕೇಳಿದರೆ ಅಭಿಜಿತ್ ಬೇಡ ತುಂಬಾ ರಷ್ ಇದೆ. ಎಂದರು. ನಾನು ಒಳಗೆ ಇಣುಕಿ ನೋಡಿದೆ. ಆಶ್ಚರ್ಯವಾಯ್ತು. ಒಂದೊಂದು ಬೋಗಿಯಲ್ಲೂ ಕಡಿಮೆಯೆಂದರೆ ಮುನ್ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ನಿಲ್ಲಲು ಜಾಗವಿಲ್ಲದಷ್ಟು ತುಂಬಿಹೋಗಿತ್ತು. "ಶಿವು, ಚಿಂತಿಸಬೇಡಿ, ಇದು ಹೊರಟ ನಂತರ ಹತ್ತು ನಿಮಿಷಕ್ಕೆ ಮತ್ತೊಂದು ರೈಲು ಬರುತ್ತದೆ ಅದರಲ್ಲಿ ಹೋಗೋಣ ಎಂದರು. ಆ ರೈಲು ತುಂಬಿದ ಬಸುರಿಯಂತೆ ಸಾವಿರಾರು ಪ್ರಯಾಣಿಕರನ್ನು ಹೊತ್ತು ಹೊರಟಿತು. ನನ್ನಪಕ್ಕದಲ್ಲಿಯೇ ಒಬ್ಬ ಶೂ ಪಾಲೀಶ್ ಮಾಡುವವ ಒಬ್ಬ ಅಧಿಕಾರಿಗೆ ಪಾಲೀಶ್ ಮಾಡುತ್ತಿದ್ದ, ಪಕ್ಕದಲ್ಲಿ ಒಬ್ಬ ಹಣ್ಣು ಮಾರುತ್ತಿದ್ದ, ದೂರದಲ್ಲಿ ಕಾಲೇಜು ಹುಡುಗಿ ತನ್ನ ಮೊಬೈಲ್ ಫೋನಿನಲ್ಲಿ ಮಗ್ನನಾಗಿದ್ದಳು. ಪಕ್ಕದಲ್ಲಿಯೇ ವಯಸ್ಸಾದವರೊಬ್ಬರು ಕನ್ನಡ ಸರಿಮಾಡಿಕೊಳ್ಳುತ್ತಿದ್ದರು. ಹೀಗೆ ತರಾವರಿ ದೃಶ್ಯಗಳನ್ನು ನೋಡುತ್ತಾ ಅವುಗಳೆಲ್ಲದರ ಫೋಟೊ ತೆಗೆಯುತ್ತಿದ್ದಂತೆ ದೂರದಲ್ಲಿ ಮತ್ತೊಂದು ರೈಲು ಹಾರ್ನ್ ಮಾಡುತ್ತ ಬರುತ್ತಿತ್ತು. ’ಶಿವು, ನಿಮ್ಮ ಕ್ಯಾಮೆರ ಆಫ್ ಮಾಡಿ ನಿಮ್ಮ ಲಗ್ಗೇಜು ನನ್ನ ಕೈಲಿ ಕೊಡಿ, ಆ ರೈಲು ನಿಲ್ಲುತ್ತಿದ್ದಂತೆ ಮೊದಲು ಒಳಗೆ ಹೋಗಿ ಸೀಟ್ ಹಿಡಿದು ಕುಳಿತುಕೊಳ್ಳಿ, ಒಂದು ಕ್ಷಣ ತಡವಾದರೂ ನಿಂತುಕೊಂಡೇ ಹೋಗಬೇಕು ಎಂದರು. ಅವರ ಮಾತಿನಂತೆ ನಾನು ಸಿದ್ದನಾದೆ. ಆ ರೈಲು ನಿಲ್ಲುತ್ತಿದ್ದಂತೆ ಒಂದೇ ಸಮನೆ ಜನ ನುಗ್ಗಿದರು. ನಾನು ಕೂಡ ಅವರೊಂದಿಗೆ ನುಗ್ಗಿ ಸೀಟ್ ಗಿಟ್ಟಿಸಿದ್ದೆ. ಆಷ್ಟರಲ್ಲಿ ನಮ್ಮ ಗೆಳೆಯರಲ್ಲೆರೂ ಬಂದು ಸೀಟು ಹಿಡಿದರು. ಸೀಟು ಸಿಕ್ಕಿತ್ತಲ್ಲ ಎಂದು ಖುಷಿ ಸ್ವಲ್ಪ ಹೊತ್ತಿಗೆ ಮರೆಯಾಯ್ತು. ಆ ಬೋಗಿಯೊಳಗೆ ಜನರು ಇನ್ನೂ ಬರುತ್ತಲೇ ಇದ್ದಾರೆ! ಕೊನೆಗೆ ಎರಡು ಸೀಟುಗಳ ನಡುವೆಯೂ ಹತ್ತಾರು ಜನರು ನಿಂತು ನಮಗೆ ಒಂದು ಕ್ಷಣವೂ ಅಲುಗಾಡಲು ಸಾಧ್ಯವಾಗದಂತೆ ಆಗಿಹೋಗಿತ್ತು. ಬಹುಶಃ ಈ ರೈಲುಗಾಡಿ ಹತ್ತಾರು ಬೋಗಿಗಳಲ್ಲಿ ಅದೆಷ್ಟು ಸಾವಿರಜನರಿರಬಹುದು ಎಂದುಕೊಂಡೆ. ಮೊದಲ ಭಾರಿಗೆ ಕೊಲ್ಕತ್ತದ ಲೋಕಲ್ ರೈಲಿನ ಅನುಭವವಾಗಿತ್ತು. ಕೊಲ್ಕತ್ತದಲ್ಲಿ ಪ್ರತಿಯೊಂದು ಸ್ಥಳಕ್ಕೂ ಲೋಕಲ್ ರೈಲು ಇದೆ. ಬೆಳಗಿನ ಮತ್ತು ಸಂಜೆ ಹೊತ್ತಿನಲ್ಲಿ ಐದು ಮತ್ತು ಹತ್ತು ನಿಮಿಷಕ್ಕೊಂದು ರೈಲು ಬರುತ್ತದೆ. ಅಷ್ಟು ರೈಲುಗಳಿದ್ದರೂ ಎಲ್ಲವೂ ತುಂಬಿಹೋಗುತ್ತವೆ. ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ಕಡಿಮೆ ಇರುತ್ತದೆ. ಈ ರೈಲು ಪ್ರಯಾಣದ ದರವೂ ತುಂಬಾ ಕಡಿಮೆ ಇಪ್ಪತ್ತು-ಮುವತ್ತು ಕಿಲೋಮೀಟರ್ ದೂರಕ್ಕೆ ಕೇವಲ ಐದು-ಆರು ರೂಪಾಯಿಗಳು ಮಾತ್ರ. ಇಲ್ಲಿನ ಲಕ್ಷಾಂತರ ಜನರು ತಮ್ಮ ಉದ್ಯೋಗದ ಸ್ಥಳಗಳಿಗೆ ತಲುಪಲು ಈ ರೈಲುಗಳನ್ನೇ ಅವಲಂಬಿಸಿದ್ದಾರೆ. ನಮ್ಮ ರೈಲು ಹೊರಟಿತಲ್ಲ, ಕಿಟಕಿಬಳಿ ಸೀಟುಹಿಡಿದಿದ್ದ ನಾನು ಅಲ್ಲಿನ ದೃಶ್ಯಗಳನ್ನು ವಿಡಿಯೋ ಮತ್ತು ಫೋಟೊಗಳ ಮೂಲಕ ಸೆರೆಹಿಡಿಯುತ್ತಿದ್ದೆ. ಅಲ್ಲಿ ರೈಲು ಕಂಬಿಗಳ ನಡುವೆಯೇ ಬಟ್ಟೆಗಳನ್ನು ಒಣಗಿಸಲು ಹಾಕಿರುತ್ತಾರೆ ಅಕ್ಕಪಕ್ಕದ ಮನೆಯವರು. ಅವೆಲ್ಲವನ್ನು ಫೋಟೊ ಸೆರೆಹಿಡಿಯುತ್ತಾ, ಒಂದಾದ ಮೇಲೆ ಮೇಲೆ ಒಂದು ನಿಲ್ದಾಣಗಳು ಕೊನೆಗೆ ನಾವು ಇಳಿಯುವ ಸೆಲ್ಡಾ ರೈಲು ನಿಲ್ದಾಣ ಬಂತು. ಅಲ್ಲಿಂದ ಹೊರಬರುತ್ತಿದ್ದಂತೆ ಹೊರಗೆ ಮಳೆ ಸುರುವಾಗಿತ್ತು. ಪಕ್ಕದಲ್ಲಿಯೇ ಬಸ್ ನಿಲ್ದಾಣ ಅಲ್ಲಿಂದ ನಮ್ಮ ಪ್ರಯಾಣ ಹೌರ ರೈಲು ನಿಲ್ದಾಣದ ಕಡೆಗೆ ಅಲ್ಲಿನ ಲೋಕಲ್ ಬಸ್ ಹತ್ತಿದೆವು. ಮಳೆ ಜೋರಾಯ್ತು. ಕಿಟಕಿಯಲ್ಲಿ ಕಂಡ ಜೋರು ಮಳೆ ಅದರ ನಡುವೆ ಓಡಾಡುವ ಜನಗಳು, ಅಲ್ಲಲ್ಲಿ ಕುಳಿತು ಬಿಸಿ ಟೀ ಕುಡಿಯುವ ಜನ, ಮಳೆ ಜೋರಾಗಿ ರಸ್ತೆಗಳಲ್ಲಿ ನೀರು ಹರಿಯತೊಡಗಿತ್ತು. ನಾನು ಅವುಗಳ ಚಿತ್ರಗಳನ್ನು ಸೆರೆಯಿಡಿಯುತ್ತಿದ್ದಾಗಲೇ "ಶಿವು, ಮುಂದೆ ಹೌರ ಬ್ರಿಡ್ಜ್ ಬರುತ್ತದೆ. ಅದನ್ನು ವಿಡಿಯೋ ಮಾಡಿ" ಎಂದರು ಅಭಿಜಿತ್. ಮೊದಲ ಬಾರಿಗೆ ಎಂಬತ್ತು ವರ್ಷಗಳಷ್ಟು ಹಳೆಯದಾದ ಹೌರಾ ಬ್ರಿಡ್ಜ್‍ನೊಳಗೆ ಪ್ರಯಾಣಿಸಿದಾಗ ತುಂಬಾ ಖುಷಿಯಾಗಿತ್ತು. ಮುಂದೆ ಭಾರತದಲ್ಲಿ ಬಹುದೊಡ್ಡದೆನ್ನಬಹುದಾಗ ಹೌರ ರೈಲು ನಿಲ್ದಾಣ ತಲುಪಿದೆವು.
                             
   ಅಲ್ಲಿ ನಮಗಾಗಿ ಭಾರತದಲ್ಲಿಯೇ ದೊಡ್ಡ ಹೆಸರು ಮಾಡಿರುವ ಮಾಸ್ಟರ್ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಬಿ.ಕೆ ಸಿನ್ಹ ಸರ್, ಸುಶಾಂತ ಬ್ಯಾನರ್ಜಿ, ಎಕ್ಸಲೆನ್ಸಿ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಅಮಿತಾಬ್ ಸಿಲ್ ಸರ್, ಇನ್ನೂ ಅನೇಕ ದೊಡ್ಡ ಫೋಟೊಗ್ರಫಿ ಸಾಧಕರನ್ನು ಬೇಟಿಯಾಗಿದ್ದು ನನ್ನ ಬದುಕಿನ ಬಹುದೊಡ್ಡ ಮತ್ತು ಮರೆಯಲಾಗದ ಅನುಭವ. ಅವರೆಲ್ಲರ ಜೊತೆಯಲ್ಲಿ ನಾನು ಕೂಡ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಜ್ಯೂರಿಯಾಗಿದ್ದೇನೆನ್ನುವ ವಿಚಾರ ಆ ಕ್ಷಣದಲ್ಲಿ ಸ್ವಲ್ಪ ಸಂಕೋಚ ಮತ್ತು ಮುಜುಗರವುಂಟುಮಾಡಿತ್ತು.  ಆದ್ರೆ ಸ್ವಲ್ಪ ಹೊತ್ತಿಗೆ ಅವರೆಲ್ಲರೂ ನನಗೆ ತುಂಬಾ ಆತ್ಮೀಯರಾಗಿಬಿಟ್ಟಿದ್ದರಿಂದ ಮುಜುಗರ ಮಾಯವಾಯ್ತು.  ನಮಗಾಗಿ ದುರಂತೋ ಎಕ್ಸ್‍ಪ್ರೆಸ್ ರೈಲು ದಿಘಾ ಗೆ ಹೊರಡಲು ಕಾಯುತ್ತಿತ್ತು. ನಮಗಾಗಿ ಕಾಯ್ದಿರಿಸಿದ್ದ ಸೀಟುಗಳಲ್ಲಿ ಆಸೀನರಾದೆವು. ಲೋಕಲ್ ರೈಲಿನಲ್ಲಿ ಬಂದ ನನಗೆ ಈ ರೈಲು ಸಂಫೂರ್ಣ ವಿಭಿನ್ನವೆನಿಸಿತ್ತು. ನೂರತೊಂಬತ್ತು ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಎಲ್ಲಿಯೂ ನಿಲ್ಲದೇ ಹೋಗುವ ಈ ರೈಲಿನಲ್ಲಿ ನಾವು ಕುಳಿತ ಜಾಗಕ್ಕೆ ಊಟ ತಿಂಡಿ ನೀರು ಇತ್ಯಾದಿ ಎಲ್ಲ ಸೇವೆಗಳನ್ನು ನೀಡುತ್ತಾರೆ ಈ ರೈಲಿನ ಪರಿಚಾರಕರು. ನನ್ನ ಪಕ್ಕದಲ್ಲಿ ದೇಬಸಿಸ್ ಬುನಿಯ ಕುಳಿತಿದ್ದರು. ಅವರೊಂದಿಗೆ ನಾನು ಬೆಂಗಳೂರು ಮತ್ತು ಕರ್ನಾಟಕದ ಪರಿಚಯ ಬೆಳವಣಿಗೆ, ರಾಜಕೀಯ ಹೀಗೆ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡೆ.  ಅವರು ಬಂಗಾಲ ಮತ್ತು ಕೊಲ್ಕತ್ತ ನಗರದ ಇಂದಿನ ಪರಿಸ್ಥಿತಿ ಮತ್ತು ರಾಜಕೀಯ ವ್ಯವಸ್ಥೆ ಇತ್ಯಾದಿಗಳನ್ನು ಹಂಚಿಕೊಂಡರು. ಅಷ್ಟರಲ್ಲಿ ನಮ್ಮ ರೈಲಿಗೆ ಮೂವರು ಬಂದೂಕುಧಾರಿ ಗಾರ್ಡುಗಳು ಹತ್ತಿದರು. ನಾವು ಪಯಣಿಸುವ ಪೂರ್ವ ಮಿಡ್ನಪುರ ಜಿಲ್ಲೆಯಲ್ಲಿ ನಕ್ಸಲಿಯರ ಕಾಟವಿದೆ. ಅದಕ್ಕಾಗಿ ಈ ಸೆಕ್ಯುರಿಟಿ ಎಂದರು. ಮಧ್ಯಾಹ್ನ ಎರಡುವರೆಗೆ ಗಂಟೆಗೆ ನಾವು ಸಮುದ್ರ ಕಿನಾರೆಯ ದಿಘಾ ಪಟ್ಟಣವನ್ನು ತಲುಪಿದೆವು. 

   ದಿಘಾ ಒಂದು ಸಮುದ್ರ ಕಿನಾರೆಗೆ ಅಂಟಿಕೊಂಡಿರುವ ಪಶ್ಚಿಮ ಬಂಗಾಲದ ಪೂರ್ವ ಮಿಡ್ನಪುರ್‍ ಜಿಲ್ಲೆಯ ಒಂದು ಪುಟ್ಟ ಪಟ್ಟಣ. ಮಂಗಳೂರು ಉಡುಪಿಯಂತೆ ಸಮುದ್ರ ಮತ್ತು ಬೀಚುಗಳಿದ್ದರೂ ಅವುಗಳಷ್ಟು ದೊಡ್ಡ ನಗರವಲ್ಲ...ಬಹುಷಃ ನಮ್ಮ ಕುಂದಾಪುರದಷ್ಟಿರಬಹುದು. ಮೂರು ದಿನ ದಿಘದಲ್ಲಿ ನಡೆಯುವ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯ ಪ್ರಮುಖ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಜನ ನಮಗಾಗಿ ಅಲ್ಲಿ ಕಾಯುತ್ತಿದ್ದರು. ನಮಗಾಗಿ ವ್ಯವಸ್ಥೆಯಾಗಿದ್ದ ಹೋಟಲ್ ರೂಮುಗಳಲ್ಲಿ ಸೇರ್‍ಇಕೊಂಡು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಫೋಟೊಗ್ರಫಿ ಸ್ಪರ್ಧೆಯ ಜಡ್ಜಿಂಗ್ ಪ್ರಾರಂಭವಾಗಿ ರಾತ್ರಿ ಹತ್ತು ಗಂಟೆ ಮುಗಿಯಿತು. ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ ಎರಡು ಗಂಟೆಗೆ, ನಂತರ ಲಂಚ್ ಬ್ರೇಕ್ ಹಾಗೂ ಸ್ವಲ್ಪ ವಿಶ್ರಾಂತಿ, ಮತ್ತೆ ನಾಲ್ಕು ಗಂಟೆ ಪ್ರಾರಂಭವಾಗಿ ರಾತ್ರಿ ಒಂಬತ್ತು ಗಂಟೆಗೆ...ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಒಂದು ಗಂಟೆಯವರೆಗೆ ಹೀಗೆ ಮೂರು ದಿನ ಸತತವಾಗಿ ಮೂರು ವಿಭಾಗಗಳ ಒಂಬತ್ತು ಸಾವಿರ ಫೋಟೊಗಳನ್ನು ನೋಡಿ ಅತ್ಯುತ್ತುಮವಾದವುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಂತೂ ಅದ್ಬುತವಾದ ಅನುಭವವನ್ನು ನೀಡಿತ್ತು. 

ಪೂರ್ವ ಮಿಡ್ನಪುರದಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿರುವ ಸಂತೋಷ್ ಕುಮಾರ್ ಜನ ನನ್ನಂತೆ ಮದುವೆ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಮಾಡುವಂತವರು. ತಕ್ಷಣಕ್ಕೆ ನೋಡಿದರೆ ಒಬ್ಬ ಪಕ್ಕಾ ಹಳ್ಳಿ ಹೈದನಂತೆ ಕಾಣುತ್ತಾರೆ. ಮತ್ತು ಹಾಗೆ ಸರಳವಾಗಿ ಸಹಜವಾಗಿ ಇರುವಂತವರು. ಹೀಗಿದ್ದು ಇವರು ಮಾಡಿರುವ ಫೋಟೊಗ್ರಫಿ ಸಾಧನೆ ನಿಜಕ್ಕೂ ದೊಡ್ಡದು. ದೇಶವಿದೇಶಗಳಲ್ಲಿ ಇವರ ಚಿತ್ರಗಳು ಪ್ರದರ್ಶನವಾಗಿವೆ. ಕಳೆದ ಹದಿನೈದು ವರ್ಷಗಳಿಂದ ನೂರಾರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು, ಚಿನ್ನದ ಪದಕಗಳನ್ನು ಗಳಿಸಿರುವ ಇವರು ಪೂರ್ವ ಮಿಡ್ನಪುರದಲ್ಲಿ ಒಂದು ಫೋಟೊಗ್ರಫಿ  ಕ್ಲಬ್ ಸದಸ್ಯರು. ಈ ಕ್ಲಬ್ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ರಾಷ್ಟ್ರಮಟ್ಟದ್ ಸ್ಪರ್ಧೆ ನಡೆಸುವುದು ತುಂಬಾ ಕಷ್ಟಕರವಾಗಿರುವಾಗ, ಇನ್ನೂ ಅಂತರರಾಷ್ಟ್ರೀಯ ಮಟ್ಟದ ಫೋಟೊಗ್ರಫಿ ಸ್ಪರ್ಧೆ ಅದರಲ್ಲೂ ಫೋಟೊಗ್ರಫಿ ಸರ್ಕ್ಯುಟುಗಳನ್ನು ನಡೆಸುತ್ತಾ ವಿಶ್ವದಾದ್ಯಂತ ಇರುವ ಛಾಯಾಕಲಾವಿದರ ಜೊತೆ ತಾಂತ್ರಿಕವಾಗಿ ಸಂಪರ್ಕವಿಟ್ಟುಕೊಳ್ಳುತ್ತಾ ಮುಂದುವರಿಯುವ ಇಂಥ ಸ್ಪರ್ಧೆಗಳನ್ನು ಆಯೋಜಿಸಲು ನಡೆಸಬೇಕಾದರೆ ನಿಜಕ್ಕೂ ದೊಡ್ಡ ಆತ್ಮಸ್ಥೈರ್ಯವೇ ಬೇಕು. ಅಂತ ಒಂದು ಸವಾಲಿನ ಕೆಲಸವನ್ನು ಅದ್ಬುತವಾಗಿ ನಿರ್ವಹಿಸುವ ಮೂಲಕ ಯಶಸ್ವಿಯಾಗುತ್ತಿದ್ದಾರೆ. ಇವರನ್ನೆಲ್ಲಾ ನೋಡಿದಾಗ ನಾವು ಕಲಿಯುವುದು ಇನ್ನೂ ತುಂಬಾ ಎನ್ನಿಸಿದ್ದು ಸತ್ಯ.

   ಸ್ಪರ್ಧೆಗಳ ನಡುವೆ ಕಾರ್ಯಕ್ರಮದ ಆಯೋಜಕರು ತೀರ್ಪುಗಾರರಿಗೆ ಒಂದು ಗಂಟೆ ಎರಡು ಗಂಟೆಗಳ ಕಾಲ ಬಿಡುವು ಕೊಡುತ್ತಿದ್ದರು. ಆ ಸಮಯದಲ್ಲಿ ಉಳಿದ ತೀರ್ಪುಗಾರರು ತಮ್ಮ ಏಸಿ ರೂಮಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹೋಗುತ್ತಿದ್ದರೆ ನಾನು ಮಾತ್ರ ನನ್ನ ಪುಟ್ಟ ಕ್ಯಾಮೆರವನ್ನಿಡಿದುಕೊಂಡು ಒಂದರ್ಧ ಗಂಟೆ "ದಿಘಾ" ಸುತ್ತಾಡಿಬರಲು ಹೊರಡುತ್ತಿದ್ದೆ.  ಕೊಲ್ಕತ್ತಗೆ ಮತ್ತು ಅಲ್ಲಿ ಇತರ ನಗರಗಳಿಗೆ ಹೋಲಿಸಿಕೊಂಡರೆ ಅವುಗಳಷ್ಟು ವೇಗವನ್ನು ಪಡೆದುಕೊಂಡಿಲ್ಲ ದಿಘಾ. ಒಂದು ರೀತಿಯಲ್ಲಿ ಶಾಂತವಾಗಿದೆ. ಜನಗಳೂ ಕೆಲಸ ಮತ್ತು ಇನ್ನಿತರ ಒತ್ತಡದಲ್ಲಿ ಸಿಲುಕಿ ಗಡಿಬಿಡಿಯಿಂದ ಓಡಾಡುವುದಿಲ್ಲ. ಬುದ್ದಿವಂತರಾದರೂ ಆರಾಮವಾಗಿದ್ದಾರೆ ಮತ್ತು ಇನ್ನು ಹಳ್ಳಿಯವರಾಗಿಯೇ ಇದ್ದಾರೆ. ಸಮುದ್ರದಲ್ಲಿನ ಮೀನುಗಾರಿಕೆಯಲ್ಲಿ ದಿಘಾ ಪಟ್ಟಣ ಪೂರ್ತಿ ಪಶ್ಚಿಮ ಬಂಗಾಲಕ್ಕೆ ದೊಡ್ಡದೆನಿಸುತ್ತದೆ. ಒಂದು ಕಿಲೋಮೀಟರ್ ನಡಿಗೆಯಷ್ಟು ದೊಡ್ಡದಾದ ದಿಘಾ ಮೀನು ಮಾರುಕಟ್ಟೆಯನ್ನು ನೋಡಲು ಎರಡನೇ ದಿನ ಮುಂಜಾನೆ ನಾನು ಗೆಳೆಯರೊಂದಿಗೆ ಹೋಗಿದ್ದೆ. ನೂರಾರು ತರಾವರಿ ಮೀನುಗಳು, ಏಡಿಗಳು, ಹಾವುಮೀನುಗಳು..ಹೀಗೆ ಒಂದೇ ಎರಡೇ ಎಲ್ಲವನ್ನು ಆಗತಾನೆ ಹಿಡಿದು ಪ್ರೆಶ್ ಆಗಿ ಮಾರಾಟ ಮಾಡುತ್ತಿದ್ದರು. ದೊಡ್ದ ದೊಡ್ಡ ಗಾತ್ರದ ಬಣ್ಣ ಬಣ್ಣದ ಸಮುದ್ರ ಸೀಗಡಿಗಳನ್ನು ನಮ್ಮ ಬೆಂಗಳೂರಿನ ಮಾಲ್‍ಗಳು ಮತ್ತು ಮೆಟ್ರೋಗಳಲ್ಲಿ ಮಾತ್ರ ನೋಡಿ, ಒಂದು ಕೇಜಿಗೆ ಆರುನೂರು, ಎಂಟುನೂರು, ಒಂದುವರೆಸಾವಿರ ರೂಪಾಯಿಗಳ ಬೆಲೆ ಕೇಳಿ ಬೆಚ್ಚಿ ಬೆರಗಾಗಿದ್ದ ನಾನು  , ನಮ್ಮ ಯಶವಂತಪುರ ಮೀನು ಮಾರುಕಟ್ಟೆಯಂತೆ ರಸ್ತೆಬದಿಯಲ್ಲಿ ಇವುಗಳನ್ನೆಲ್ಲ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ನೋಡುವ ಅವಕಾಶ ನಮ್ಮ ಕಾರ್ಯಕ್ರಮದ ಆಯೋಜಕರಿಂದಾಗಿ ಸಿಕ್ಕಿತ್ತು.  ಪಶ್ಚಿಮ ಬಂಗಾಲದಲ್ಲಿಯೇ ಪ್ರಸಿದ್ಧವೆನಿಸುವ ಮತ್ತು ದುಬಾರಿ ಬೆಲೆಯ "ಇಲಿಶಾ" ಮೀನಿನ್ನು ರುಚಿ ನೋಡುವ ಅವಕಾಶ ಸಿಕ್ಕಿತ್ತು.  ನಮ್ಮ ಪಾಂಪ್ಲೆಟ್ ಮೀನಿನಂತೆ ಬಾಯಲ್ಲಿಟ್ಟರೇ ಹಾಗೆ ಕರಗುವ "ಇಲಿಷಾ" ಪಶ್ಚಿಮ ಬಂಗಾಲದ ಒಂದು ಅದ್ಬುತವಾದ ಡಿಷ್.
        

ದಿಘಾದಲ್ಲಿ ಕೊಲ್ಕತ್ತ ಮತ್ತು ಇತರ ನಗರಗಳಂತೆ ಅಲ್ಲಿ ಸೈಕಲ್ ರಿಕ್ಷಾಗಳಿಲ್ಲ. ಅದರ ಬದಲಾಗಿ ಅದಕ್ಕಿಂತ ಸ್ವಲ್ಪ ದೊಡ್ಡದಾದ ಪುಟ್ಟ ಇಂಜಿನ್ ಮೋಟರ್ ಅಳವಡಿಸಿದ ನಮ್ಮ ಮೋಟರ್ ಬೈಕಿನ ಟೈರುಗಳನ್ನು ಆಳವಡಿಸಿದ ಮೂರು ಚಕ್ರದ ವಾಹನಗಳೂ ಚಲಿಸುತ್ತಿರುತ್ತವೆ. ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು, ಲಗ್ಗೇಜು ಸಾಗಿಸಲು ಎರಡಕ್ಕೂ ಇದೊಂದೇ ವಾಹನ. ಇದರಲ್ಲಿ ಕುಳಿತ ಪ್ರಯಾಣಿಕರನ್ನು ನೋಡಿದಾಗ ನಮ್ಮಲ್ಲಿ ಹಳ್ಳಿ ಮತ್ತು ಇತರ ಪಟ್ಟಣಗಳಲ್ಲಿ ಓಡಾಡುವ ಟಂಟಂನ ಸೊಂಟದ ಮೇಲ್ಬಾಗವನ್ನು ತೆಗೆದುಬಿಟ್ಟರೆ ಹೇಗೆ ಕಾಣುತ್ತದೋ ಹಾಗೆ ಇದು ಕಾಣುತ್ತದೆ.

ಮುಂದುವರಿಯುತ್ತದೆ....

ಚಿತ್ರಗಳು ಮತ್ತು ಲೇಖನ:
ಶಿವು.ಕೆ

7 comments:

ಮನಸು said...

ಶಿವು ತುಂಬಾ ಧನ್ಯವಾದಗಳು ಒಂದು ಮೆಟೋ ಸಿಟಿಯ ಚಿತ್ರಣ ಕಣ್ಣ ಮುಂದೆ ತಂದಿರಿ. ನಾನು ಕೋಲ್ಕತ್ತ ನೋಡಿಲ್ಲ ಅಲ್ಲಿನ ಸ್ನೇಹಿತರು ಹೇಳ್ತಾ ಇರ್ತಾರೆ ಇದು ಬಾಂಬೆ ಇದ್ದ ಹಾಗೆ ಜನ ಗಿಜಿಗುಡುತ್ತೆ ರೈಲ್ವೆ ನಿಲ್ದಾಣಗಳಲ್ಲಿ ಎಂದು.

shivu.k said...

ಸುಗುಣಕ್ಕ,
ಕೊಲ್ಕತ್ತ, ಲೋಕಲ್ ರೈಲು, ಬಸ್ ನಿಲ್ಡಾಣ, ಬೋಟ್...ಇತ್ಯಾದಿ ಸ್ಥಳಗಳೆಲ್ಲಾ ಜನರಿಂದ ಯಾವಾಗಲೂ ಗಿಜಿಗುಡುತ್ತವೆ...ಅಲ್ಲಿದ್ದ ಐದು ದಿನದಲ್ಲಿ ಮೂರು ದಿನ ದಿಘದಲ್ಲಿನ ಫೋಟೊಗ್ರಫಿ ಸ್ಪರ್ಧೆಗಳ ತೀರ್ಪುವಿನ ಕೆಲಸ ಉಳಿದ ಎರಡು ದಿನದಲ್ಲಿ ನನಗಾದ ಇಷ್ಟು ಅನುಭವವನ್ನು ಬರೆದಿದ್ದೇನೆ..ಪ್ರತಿಕ್ರಿಯೆಗೆ ಧನ್ಯವಾದಗಳು.

balasubramanya said...

ಕೊಲ್ಕೊತ್ತ ನಗರ ಒಂತರ ವಿಚಿತ್ರ , ಅಲ್ಲಿನ ಹಳೆಯ ಬಸ್ಸು/ ಕಾರುಗಳು, ಹೂಗ್ಲಿ ನದಿ, ಹೌರಾ ಸೇತುವೆ, ಕಾಳಿ ಮಂದಿರ್ , ಎಸಪ್ಲಾಂದೆ , ಅಲ್ಲಿನ ರಾತ್ರಿ ಬೀದಿ ಜೀವನ, ಜನ ಸಾಂದ್ರತೆ ವಃ ಬೇರೆ ಲೋಕದ ದರ್ಶನ ಂಆಆಡೀಷೂಟ್ಟಾಡೇ. ನಿಮ್ಮ ಲೇಖನ ಚೆನ್ನಾಗಿ ಬರುತ್ತಿದೆ . ಶುಭವಾಗಲಿ . ವಿಮಾನ ದಿಂದ ಒಂದಷ್ಟು ಚಿತ್ರ ತೆಗೆಯಲಿಲ್ಲವ, ತೆಗೆದಿದ್ರೆ ಅವುಗಳನ್ನು ಹಾಕಿ, ನೋಡಿ ಗೆಳೆಯರು ಖುಷಿ ಪಡಲಿ

sunaath said...

ಶಿವು,
ನಿಮ್ಮ ಲೇಖನ ಓದುತ್ತಿದ್ದಂತೆ, ಅದ್ಭುತವಾದ ಅನುಭವವಾಗುತ್ತದೆ. ಮುಂದಿನ ಭಾಗಗಳನ್ನು ಓದಲು ಹಾಗು ಛಾಯಾಚಿತ್ರಗಳನ್ನು ನೋಡಲು ಕಾತುರನಾಗಿದ್ದೇನೆ.

shivu.k said...

ಬಾಲು ಸರ್,
ಅಲ್ಲಿದ್ದ ಐದು ದಿನದಲ್ಲಿ ಎರಡುವರೆ ದಿನಫೋಟೊಗ್ರಫಿ ಸ್ಪರ್ಧೆಯ ತೀರ್ಪುಗಾರಿಕೆಯ ಜವಾಬ್ದಾರಿ. ಇನ್ನುಳಿದ ಎರಡು ದಿನದಲ್ಲಿ ಮೊದಲ ಮತ್ತು ಕೊನೆಯ ದಿನದ ನಾಲ್ಕುಗಂಟೆಗಳು[ಅದರಲ್ಲಿ ವಿಮಾನ ನಿಲ್ದಾಣ ತಲುಪುವ ಸಮಯವು ಸೇರಿದೆ]ಇನ್ನುಳಿದ ಎರಡು ದಿನದಲ್ಲಿ ಮಾತ್ರ ಕೊಲ್ಕತ್ತ ಮತ್ತು ಉಪನಗರ ಭರಕ್‍ಪುರದಲ್ಲಿ ಓಡಾಡಲಿಕ್ಕೆ ಸಾಧ್ಯವಾಯ್ತು. ನೀವು ಹೇಳಿದ ಅನೇಕವನ್ನು ನೋಡಲು ಸಮಯವಿರಲಿಲ್ಲ. ಮುಂದಿನ ವರ್ಷ ಮತ್ತೆ ಇದೇ ರೀತಿ ಅವಕಾಶ ಬೇರೆ ಸಂಸ್ಥೆಯವರು ಕೊಡುವ ಸಾಧ್ಯತೆಯಿದೆ. ಆಗ ಒಂದೆರಡು ದಿನ ಹೆಚ್ಚು ಇದ್ದು ಎಲ್ಲವನ್ನು ನೋಡಿ ಬರುತ್ತೇನೆ...ನೀವು ಕೇಳಿದಂತೆ ವಿಮಾನದೊಳಗೆ ತೆಗೆದ ಚಿತ್ರಗಳು ತುಂಬಾ ಇವೆ...ಮುಂದೆ ಹಾಕುತ್ತೇನೆ...ಮತ್ತೆ ಅಲ್ಲಿನ ನನ್ನ ಪ್ರಯಾಣವನ್ನೆಲ್ಲ "My Kolkata journey, Video Documentary" ಮಾಡಿದ್ದೇನೆ. ಅದನ್ನು ಸಧ್ಯದಲ್ಲಿಯೇ FB ನಲ್ಲಿ ಹಾಕುತ್ತೇನೆ...ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುನಾಥ್ ಸರ್,
ನೀವು ಇಷ್ಟಪಟ್ಟು ಲೇಖನಗಳನ್ನು ಓದುತ್ತೀರಿ...ಅದಕ್ಕಾಗಿ ನನ್ನ ಧನ್ಯವಾದಗಳು

Srikanth Manjunath said...

ಜೀವ ಶಾಸ್ತ್ರ ಪ್ರಯೋಗಾಲಯದಲ್ಲಿ ಮೈಕ್ರೋಸ್ಕೋಪ್ ಮೂಲಕ ಸಣ್ಣ ವಸ್ತುವು ದೊಡ್ಡದಾಗಿ ಮತ್ತು ಪ್ರತಿ ಕಣ ಕಣವು ಸೊಗಸಾಗಿ ಕಾಣುವಂತೆ.. ನಿಮ್ಮ ಲೇಖನ ಮಾಲಿಕೆಯಲ್ಲಿ ಕಲ್ಕತ್ತಾ ಮತ್ತು ಸುತ್ತ ಮುತ್ತಲಿನ ಪ್ರಾದೇಶಿಕ ಸೊಗಡು, ಜನ ಜೀವನ ಅದರ ಪ್ರಾಮುಖ್ಯತೆ ಎಲ್ಲವೂ ಸೊಗಸಾಗಿ ಓದುಗರ ಅನುಭಕ್ಕೆ ತಾಕುವಂತೆ ಬರೆದಿದ್ದೀರ. ಓದೋಕೆ ಸಂತೋಷವಾಗುತ್ತದೆ. ನಿಮ್ಮ ಕ್ಯಾಮೆರಾಗೆ ಮಾತ್ರ ಮೈಕ್ರೋ ಮಾಕ್ರೋ ಲೆನ್ಸ್ ಗಳು ಇಲ್ಲ ದೇವರು ನಿಮ್ಮ ಕಣ್ಣಿಗೆ ಹಾಗು ಮನಸ್ಸಿಗೆ ಅಂತಹುದೇ ಲೆನ್ಸ್ ಕೊಟ್ಟಿದ್ದಾನೆ.. ಸೂಪರ್ ಶಿವೂ ಸರ್ ಇಷ್ಟವಾಯಿತು