Tuesday, June 26, 2012

ದೇವರು ನನ್ನ ಕಡೆಗಿದ್ದ. ಆಗುವ ಅನಾಹುತ ತಪ್ಪಿತು.


     ಇವತ್ತು ಬೆಳಿಗ್ಗೆಯಿಂದ ಹನ್ನೆರಡುವರೆ ಗಂಟೆಯವರೆಗೆ ಫೋಟೊಗ್ರಫಿ ಕೆಲಸ ಮಾಡುತ್ತಿದ್ದವನು ಫೋನ್ ಕರಯಿಂದಾಗಿ ಹೊರಗೆ ಹೋಗುವ ಪ್ರಸಂಗ ಬಂತು.  ಮುಕ್ಕಾಲು ಗಂಟೆಯ ನಂತರ ಮನೆಗೆ ಬಂದು ಬಾಗಿಲು ತೆಗೆದರೆ....ಭಯ, ಗಾಬರಿ, ದಿಗಿಲು ಒಮ್ಮೇಲೆ ಆಯ್ತು. ನನ್ನ ಮನೆ ತುಂಬಾ ನೀರು ತುಂಬಿಕೊಂಡಿದೆ!  ಒಳಗೆ ಕಾಲಿಟ್ಟೆ. ಒಂದಿಂಚು ನೀರು ಹಾಲ್‍ನಲ್ಲಿ ತುಂಬಿಕೊಂಡಿದೆ. ದಿನಪತ್ರಿಕೆ ಬ್ಯಾಗ್, ಉಳಿದ ಪೇಪರುಗಳು, ಕಾಲು ಒರೆಸುವ ಕಾರ್ಪೆಟ್ಟುಗಳು ಸೇರಿದಂತೆ ಎಲ್ಲವೂ ಒದ್ದೆಯಾಗಿ ತೊಪ್ಪೆಯಾಗಿಬಿಟ್ಟಿವೆ, ಜೋರಾಗಿ ನೀರು ಸುರಿಯುವ ಶಬ್ದ.  ಹಾಗೆ ಅಡುಗೆ ಮನೆಗೆ ಹೋದರೆ ಅಲ್ಲಿರುವ ಮದ್ಯದ ನಲ್ಲಿಯಲ್ಲಿ ನೀರು ಧಾರಕಾರವಾಗಿ ಸುರಿದು ಹೊರಗೆ ಚೆಲ್ಲಿ ಆಡುಗೆ ಮನೆ, ಹಾಲ್, ಮಲಗುವ ಕೋಣೆ ಎಲ್ಲಾ ಕಡೆ ನೀರು ಒಂದಿಂಚು ನಿಂತುಬಿಟ್ಟಿದೆ. ತಕ್ಷಣ ನಲ್ಲಿ ನಿಲ್ಲಿಸಿದೆ. ಇಷ್ಟಕ್ಕೂ ನಡೆದ ವಿಚಾರವೇನೆಂದರೆ ನಮ್ಮ ಬಡಾವಣೆಯಲ್ಲಿ ಮಳೆ ಬರದಿರುವ ಕಾರಣ ಬೋರ್‍ವೆಲ್ ನಲ್ಲಿ ಹೆಚ್ಚು ನೀರಿಲ್ಲ. ಕಾವೇರಿ ನೀರನ್ನು ಸಂಪುಗೆ ಅದನ್ನು ಓವರ್ ಟ್ಯಾಂಕ್‍ಗೆ ತುಂಬಿಸಿ ನಮಗೆ ಉಪಯೋಗಿಸಲು ಅವಕಾಶ ಮಾಡಿಕೊಡುತ್ತಾರೆ. ನಲ್ಲಿಗಳ ವಿಚಾರದಲ್ಲಿ ನನ್ನ ಗಮನ ಅಷ್ಟಕಷ್ಟೆ. ನೀರು ಸುರಿವ ನಲ್ಲಿಗಳು ನನಗೆ ಹೇಗೆ ಯಾಮಾರಿಸುತ್ತವೆ ಎನ್ನುವ ವಿಚಾರವನ್ನು ನನ್ನ "ಗುಬ್ಬಿ ಎಂಜಲು" ಪುಸ್ತಕದಲ್ಲಿ ಬರೆದಿದ್ದೇನೆ. ಇವತ್ತು ಹಾಗೆ ಆಯ್ತು. ನನಗೆ ಗೊತ್ತಿಲ್ಲದಂತೆ ಆಡುಗೆ ಮನೆಯ ನಲ್ಲಿಯನ್ನು ಬೆಳಿಗ್ಗೆ ತಿರುಗಿಸಿಬಿಟ್ಟಿದ್ದೇನೆ. ನಾನು ಹೊರಗೆ ಹೋದೆನಲ್ಲ...ಆ ಸಮಯದಲ್ಲಿ ನಮ್ಮ ಮನೆಯ ಮಾಲೀಕರು ಓವರ್ ಟ್ಯಾಂಕ್ ತುಂಬಿಸಿದ್ದಾರೆ. ಟ್ಯಾಂಕ್ ತುಂಬಿದ ತಕ್ಷಣ ನಮ್ಮ ಆಡುಗೆ ಮನೆಯಲ್ಲಿನ ಮದ್ಯದ ನಲ್ಲಿಯಲ್ಲಿ ಜೋರಾಗಿ ನೀರು ಸುರಿಯತೊಡಗಿದೆ. ಹೇಮ ತಾಯಿ ಮನೆಗೆ ಹೋಗಿದ್ದರಿಂದ ನಾನೊಬ್ಬನೆ ಮನೆಯಲ್ಲಿ ಇದ್ದೆನಲ್ಲ ಫೋನ್ ಕರಯ ಸಲುವಗಿ ಮನೆಗೆ ಬೀಗ ಹಾಕಿಕೊಂಡು ಹೋಗಿ  ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಇಷ್ಟೆಲ್ಲ ಆಗಿಬಿಟ್ಟಿದೆ! ಕಂಪ್ಯೂಟರ್ ರೂಮಿನ ಕಡೆಗೆ ಹೋದರೆ ನಿದಾನವಾಗಿ ನೀರು ಸ್ವಿಚ್ ಬೋರ್ಡ್ ಮತ್ತು ups ಕಡಗೆ ಸಾಗುತ್ತಿದೆ. ಇನ್ನು 10-15 ನಿಮಿಷ ತಡವಾಗಿದ್ದರೂ  ನೀರು extension card switchಗಳ ಕಡಗೆ ಸಾಗಿ ಅದರಲ್ಲಿ ನೀರು ತುಂಬಿ,ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ನೀರಿನ ಮಟ್ಟ ಏರಿ ನಾನು ಬಾಗಿಲು ತೆಗೆದು ಒಳಗೆ ಕಾಲಿಟ್ಟ ತಕ್ಷಣ ಈ ಷಾರ್ಟ್ ಸರ್ಕಿಟ್ ನಿಂದಾಗಿ ನನ್ನ ಗತಿ ಏನಾಗುತ್ತಿತ್ತೋ....ಸದ್ಯ ಬೇಗ ಬಂದಿದ್ದರಿಂದ ಏನು ಆಗಲಿಲ್ಲ. ಎದುರುಗಡೆಯ ಮನೆಯವರಿಗೂ ಇದನ್ನು ನೋಡಿ ಆಶ್ಚರ್ಯ.  ಹೇಗೇಕಾಯ್ತು..ನೀವು ಕೊಳಾಯಿಗಳನ್ನು ಸರಿಯಾಗಿ ನಿಲ್ಲಿಸುವುದಿಲ್ಲವಾ? ಅಂತ ಕೇಳಿದರು. ಅವರ ಮನೆಗೆ ಮತ್ತು ಪಕ್ಕದ ಮನೆಯ ಕಾಲೇಜು ಓದುತ್ತಿರುವ ಹುಡುಗಿಯರಿಬ್ಬರೂ ನನ್ನನ್ನೂ ನೋಡಿ " ಏನ್ ಅಂಕಲ್ ಹೀಗಾಗಿಬಿಟ್ಟಿದೆ...ನಿಮಗೆ ಮನೆ ಕಡೆ ಜವಾಬ್ದಾರಿಯಿಲ್ಲ ಬರಿ ಕೆಲಸ, ಕಂಫ್ಯೂಟರ್ ಅಂತಿರುತ್ತೀರಿ." ಅವರ ಮಾತಿಗೆ ನಾನು ಉತ್ತರಿಸುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಇಡೀ ಮನೆಯಲ್ಲಿನ ನೀರನ್ನು ಎತ್ತಿಹಾಕುವ ಕೆಲಸ ಬಿದ್ದಿತ್ತು. ಕಸದ ಪೊರಕೆಯಿಂದ ನಿದಾನವಾಗಿ ನೀರನ್ನು ತಳ್ಳಲು ಪ್ರಯತ್ನಿಸಿದೆ. ಆದ್ರೆ ನೀರು ಆಡುಗೆ ಮನೆಯಿಂದ ಹಾಲ್‍ಗೆ ಹಾಲ್‍ನಿಂದ ಬೆಡ್ ರೂಮ್ ಗೆ ಸಾಗುತ್ತಿತ್ತು. ಕೊನೆಗೆ ನನ್ನ ಹಳೆಯ ಬನಿಯನ್ ತೆಗೆದುಕೊಂಡು ಪುಟ್ಟ ಬಕೆಟ್ ತೆಗೆದುಕೊಂಡು ನೀರಿನಲ್ಲಿ ಹದ್ದಿ ಹದ್ದಿ ಬಕೆಟ್ಟಿಗೆ ಹಿಂಡತೊಡಗಿದೆ.  ಇಳಿ ಮಧ್ಯಾಹ್ನ ಮೂರುವರೆ ಗಂಟೆಯವರೆಗೆ ಇದನ್ನೆಲ್ಲಾ ಮಾಡಿ ಮುಗಿಸುವಷ್ಟರಲ್ಲಿ ನನ್ನ ಸೊಂಟ ಹಾಗೆ ಪದವನ್ನು ಹೇಳತೊಡಗಿತ್ತು. ಇಂಥ ಮಳೆ ಬರುವ ಕಾಲದಲ್ಲೂ ಅಪರೂಪಕ್ಕೆ ಧಾರಕಾರವಾಗಿ ಬೆವರು ಸುರಿಯುತ್ತಿತ್ತು. ಎದುರು ಮನೆಯ ಆಂಟಿ " ಹೇಮ ಇಲ್ಲದ್ದರಿಂದ ಮೂರು ದಿನ ಮನೆಯ ಕಸ ಗುಡಿಸಿ ತೊಳೆದು, ಸ್ವಚ್ಚ ಮಾಡಿರಲಿಲ್ಲ...ಇದು ಒಳ್ಳೆಯದೇ ಆಯ್ತು...ಅಂತ ಹೇಳಿದರೂ ನಾನು ಕೇಳಿಸಿದರೂ ಕೇಳಿಸದವನಂತೆ ಸುಮ್ಮನಿದ್ದುಬಿಟ್ಟೆ.  ಎರಡುವರೆ ಗಂಟೆಯ ಅವಧಿಯಲ್ಲಿ ಬೆಡ್ ರೂಮ್, ಹಾಲ್, ಆಡುಗೆ ಮನೆ, ಎಲ್ಲಾ ಕಡೆ ನಿಂತಿದ್ದ ಒಂದಿಂಚು ನೀರನ್ನು ಹೊರಗೆ ಸಾಗಹಾಕುವಷ್ಟರಲ್ಲಿ  ಸಾಕುಬೇಕಾಗಿತ್ತು.  ಒಮ್ಮೆ ಎಲ್ಲವನ್ನು ನಿದಾನವಾಗಿ ಒರಸಿ ಸುಸ್ತಾಗಿದ್ದ ಮುಖಕ್ಕೆ ಎರಡೂ ಕೈಗಳ ತುಂಬ ನೀರನ್ನು ತೆಗೆದು ಮುಖ  ತೊಳೆದುಕೊಂಡ ಸ್ವಲ್ಪ ಹೊತ್ತಿನ ನಂತರ ಕುವೈಟನಲ್ಲಿರುವ ಆಜಾದ್‍ಗೆ ಬೇಕಾದ ಪುನೀತ್ ರಾಜ್ ಕುಮಾರ್ ಬರೆದ ಡಾ.ರಾಜ್‍ಕುಮಾರ್ ರವರ  ಪುಸ್ತಕವನ್ನು ಸ್ಪೀಡ್ ಪೋಸ್ಟ್ ಮಾಡಲು ಜಿ ಪಿ ಓ ಫೋಸ್ಟ್ ಆಫೀಸ್ ಕಡೆಗೆ ಸಾಗಿದೆ.

8 comments:

Badarinath Palavalli said...

ಅಂತೂ ಸದ್ಯ ಅನಾಹುತ ತಪ್ಪಿತಲ್ಲಾ ಸಾರ್, ದೇವರ ದಯೆ ಅಷ್ಟು ಸಾಕು. ನೀರಿನ ಅವಾಂತರವೇ ಹಾಗೆ ಬರ ಬಿದ್ದರೂ ಕೆಡುಕೆ ನೆರೆ ಬಂದರೂ ಕೆಡುಕೆ. ಒಳ್ಳೆಯ ಪಜೀತಿ ಪ್ರಸಂಗ.

ದಯಮಾಡಿ ನನ್ನ ಬ್ಲಾಗಿಗೂ ಒಮ್ಮೆ ಬನ್ನಿರಿ.

ಚುಕ್ಕಿಚಿತ್ತಾರ said...

devaru doddonu...!

Dr.D.T.Krishna Murthy. said...

ಶಿವು;ಇನ್ನು ಮೇಲೆ ನಲ್ಲಿಗಳನ್ನು ಸರಿಯಾಗಿ ಬಂದೋಬಸ್ತ್ ಮಾಡಿ.ಸಧ್ಯ.ಅನಾಹುತ ತಪ್ಪಿತಲ್ಲ.ಅಷ್ಟೇ ಸಾಕು.

sunaath said...

ಶಿವು,
Thank God! ಈ ಆವಾಂತರ ತಿಳಿದ ಮೇಲೆ, ಹೇಮಾ ನಿಮ್ಮ ಮೇಲೆ ಮನೆ ಬಿಟ್ಟು ಹೋಗೋದಿಲ್ಲ!

shivu.k said...

Badarinath Palavalli sir:

ತಪ್ಪಿಸಿಕೊಂಡೆ...ಸದ್ಯ ಏನು ಆಗಿಲ್ಲ. ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು. ಖಂಡಿತ್ ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿಗೆ ಬರುತ್ತೇನೆ.

shivu.k said...

ಚುಕ್ಕಿಚಿತ್ತಾರ: ಹೌದು...

shivu.k said...

ಡಾ.ಕೃಷ್ಣಮೂರ್ತಿ ಸರ್:
ಈಗ ಮನೆಯಿಂದ ಹೊರಗೆ ಹೊರಡುವಾಗ ಎರಡೆರಡು ಸಲ ನಲ್ಲಿ ಚೆಕ್ ಹೋಗುತ್ತಿದ್ದೇನೆ..ಧನ್ಯವಾದಗಳು.

shivu.k said...

ಸುನಾಥ್ ಸರ್:

ಹೇಮಾಳಿಗೆ ಇದಿನ್ನು ಗೊತ್ತಿಲ್ಲ...ಹೇಳುವುದು ಬೇಡವೆಂದುಕೊಂಡಿದ್ದೇನೆ. ಧನ್ಯವಾದಗಳು.