Friday, June 12, 2009

ಯಾರ್ರೀ...ಟೀ...ಟೀ....ಟೀ.......

ದೇವಯ್ಯ ಪಾರ್ಕ್ ಟ್ರಾಫಿಕ್ ದಾಟಿ ಬಲಕ್ಕೆ ಗಾಡಿ ತಿರುಗಿದೆ ಆತ ಕಾಣಿಸಿದ. ಗಾಡಿ ನಿಲ್ಲಿಸಿ ನನ್ನ ಬಲಗೈ ತೋರುಬೆರಳು ಅವನೆಡೆಗೆ ತೋರಿಸಿದೆ. ಆತ ನಿಂತ ನಿಲುವಿನಲ್ಲೇ ಬಲಗೈಯಲ್ಲಿದ್ದ ಮೂರು ಕೇಜಿ ಬಾರದ ಪ್ಲಾಸ್ಕಿನಿಂದ ಎಡಗೈಯಲ್ಲಿದ್ದ ಪ್ಲಾಸ್ಟಿಕ್ ಲೋಟಕ್ಕೆ ಟೀ ಬಗ್ಗಿಸಿ ಕೊಟ್ಟು ಮೂರು ರುಪಾಯಿ ಪಡೆದು ಹೊರಟು ಹೋದ.


ಇಷ್ಟಕ್ಕೂ ಮೆಟ್ರೋ ರೈಲಿಗಾಗಿ ಮರ, ಮನೆಗಳನ್ನು ಕಡಿಯುತ್ತಾ ದೂಳುಮಯವನ್ನಾಗಿ ಮಾಡಿರುವ ಆ ರಸ್ತೆಯಲ್ಲಿ ನನಗೆ ಹೀಗೆ ಟೀ ಕುಡಿಯಲೇ ಬೇಕೆನಿಸಿದ್ದಕ್ಕೆ ಕಾರಣವಿದೆ. ಎರಡು ದಿನದ ಹಿಂದೆ ನಮ್ಮ ಮನೆಯ ಆಡಿಗೆ ಅನಿಲ [ಸಿಲಿಂಡರ್‌ನಲ್ಲಿ] ಕಾಲಿಯಾಗಿತ್ತು ಅದಕ್ಕಿಂತ ಮೂರು ದಿನದ ಹಿಂದೆ ಮೊದಲನೆ ಸಿಲಿಂಡರ್ ಕಾಲಿಯಾಗಿಬಿಟ್ಟಿತ್ತು. [ಅದು ಹೇಗೆ ಎರಡು ಸಿಲಿಂಡರುಗಳು ನಾಲ್ಕು ದಿನದ ಅಂತರದಲ್ಲಿ ಕಾಲಿಯಾಯಿತು ಅನ್ನುವುದನ್ನು ಬರೆದರೆ ಅದು ಮತ್ತೊಂದು ಲೇಖನವಾಗುತ್ತದೆ...ಅದನ್ನು ಮುಂದೆಂದಾದರೂ ಬರೆಯುತ್ತೇನೆ. ಆದ್ರೆ ನಾನಿಲ್ಲಿ ಹೇಳುತ್ತಿರುವ ವಿಚಾರವೇ ಬೇರೆ.]

ಹೊರಗೆಲ್ಲೂ ಕಾಫಿ,ಟೀ ಕುಡಿಯದೇ ಮನೆಯಲ್ಲೇ ಕುಡಿದು ಅಭ್ಯಾಸವಿರುವ ನನಗೆ ಖಾಲಿಯಾದ ಸಿಲಿಂಡರ್‌ಗಳಿಂದಾಗಿ ಯಾರೇನು ಅಂದುಕೊಂಡರೂ ಪರ್ವಾಗಿಲ್ಲ ಅಂತ ಆ ಧೂಳುಮಯ ರಸ್ತೆಯಲ್ಲೂ ಅವರನ್ನು ನಿಲ್ಲಿಸಿ ಟೀ ಕುಡಿಯುತ್ತಿದ್ದೆ. ಆಗ ಬಂತಲ್ಲ ನನ್ನ ತಲೆಗೆ ಹೊಸ ವಿಚಾರ. ನಾನ್ಯಾಕೆ ಈ ಟೀ ಮಾರುವವರ ಹಿಂದೆ ಬೀಳಬಾರದು ಅನ್ನಿಸಿತು. ಹಿಂದೆ ತಿರುಗಿದೆ ಅವನು ಮಾಯಾವಾಗಿದ್ದ. ಇರಲಿ ನಾಳೆಯಿಂದ ಅವರದೇನು ಕತೆ ಅನ್ನುವುದನ್ನು ನೋಡೋಣ ಅಂದುಕೊಂಡು ಸುಮ್ಮನಾದೆ.
ಮರುದಿನದಿಂದ ಅವರು ಸಿಕ್ಕಲ್ಲೆಲ್ಲಾ ನಿಲ್ಲಿಸಿ ಟೀ [ನನಗೆ ಭೇಕೋ ಬೇಡವೋ]ಕುಡಿದಿದ್ದೇನೆ. ಕುಡಿಯುತ್ತಾ ಅವರನ್ನು ಮಾತಾಡಿಸಿ, ತಿಳಿದುಕೊಂಡ ವಿಚಾರಗಳು ನನಗೆ ಅಚ್ಚರಿ ಹುಟ್ಟಿಸಿದವು. ಅವುಗಳಲ್ಲಿ ಕೆಲವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ನಸುಕಿನ ಐದುಗಂಟೆಗೆ ನಮ್ಮ ದಿನಪತ್ರಿಕೆ ಹುಡುಗರಿಗೆ ಟೀ ಕೊಡಬೇಕಾದರೆ ಇವರು ನಮಗಿಂತ ಒಂದು ಗಂಟೆ ಬೇಗ ಎದ್ದು ನಮಗೆ ಬೇಕಾದ ಹಾಗೆ ಮಸಾಲೆ ಟೀ, ಜಿಂಜರ್ ಟಿ, ಎಲಕ್ಕಿ ಟೀ..ಇತ್ಯಾದಿಗಳನ್ನು ಆ ನಸುಕಿನಲ್ಲೇ ಹದವಾಗಿ ಮಾಡಿಕೊಂಡು ತರುತ್ತಾರೆ. ಅಲ್ಲಿಂದ ಶುರುವಾಗಿ ರಾತ್ರಿ ಹತ್ತರವರೆಗೆ ಇವರು ಹೋಗದಿರುವ ಜಾಗ ಉಂಟೇ. ಮಳೆ, ಗಾಳಿ, ಬಿಸಿಲು, ಚಳಿಯೆನ್ನದೇ ನಿರಂತರವಾಗಿ ಬಸ್ ನಿಲ್ದಾಣಗಳು, ಕಚೇರಿಗಳು, ಅಂಗಡಿಗಳು, ಮಾರುಕಟ್ಟೆಗಳು ಹೀಗೆ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಚಲಿಸುತ್ತಿರುತ್ತಾರೆ.

ನೀವು ಇಂದಿರನಗರದ ಸಿ ಎಮ್ ಎಚ್ ರಸ್ತೆಯ ಬದಿಯಲ್ಲೇ ಆಗಲಿ, ಹೆಬ್ಬಾಳ ದಾಟಿದ ಮೇಲೆ ಸಿಗುವ ಬ್ಯಾಟರಾಯನಪುರದ ಪುಟ್‌ಪಾತ್‌ನಲ್ಲಾಗಲಿ, ಮಲ್ಲೇಶ್ವರದ ೮ನೇ ಆಡ್ಡರಸ್ತೆಯಲ್ಲಾಗಲಿ, ರಾಜಾಜಾಜಿನಗರದ ಭಾಷ್ಯಂ ವೃತ್ತದಲ್ಲಾಗಲಿ, ಅಥವ ಬೆಂಗಳೂರಿನ ಯಾವ ಮೂಲೆಯಲ್ಲೇ ಇವರನ್ನು ನಿಲ್ಲಿಸಿ ಮೂರು ರೂಪಾಯಿ ಕೊಟ್ಟು ಅರ್ಧ ಟೀ ಕುಡಿದು ನೋಡಿ! ರುಚಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ಇದು ನನ್ನ ಅನುಭವಕ್ಕೆ ಬಂದ ವಿಚಾರ.

ನನ್ನ ಸಂಶಯ ನಿವಾರಣೆಗಾಗಿ ಒಬ್ಬನನ್ನು ಕೇಳಿಯೇ ಬಿಟ್ಟೆ. ಹೇಗೆ ಎಲ್ಲಾ ಕಡೆಯೂ
"ನೀವು ಮಾರುವ ಟೀ ರುಚಿಯಲ್ಲಿ ಒಂದೇ ತೆರನಾಗಿರುತ್ತದಲ್ಲ" ಅಂತ. ಅದಕ್ಕೆ ಅವರು ಹೇಳಿದ್ದು.
"ಸಿಹಿ ಕೆಲವರಿಗೆ ಸ್ವಲ್ಪ ಹೆಚ್ಚು, ಕೆಲವರಿಗೆ ಕಡಿಮೆ ಬೇಕಾಗಿರುವುದರಿಂದ ಸಕ್ಕರೆ ಪ್ರಮಾಣ ವ್ಯತ್ಯಾಸವಾಗುವುದು ಬಿಟ್ಟರೇ ಒಂದೇ ವಿಧವಾದ ಟೀ ಪುಡಿ, ನೀರು ಎಲ್ಲಾ ಪಕ್ಕಾ ಲೆಕ್ಕಾಚಾರದಲ್ಲಿ ಮಾಡುತ್ತೇವೆ. "
ಎಲ್ಲೋ ಒಂದುಕಡೆ ಚಳುವಳಿ, ಗಲಾಟೆ, ರಸ್ತೆತಡೆ, ದೊಂಬಿ ನಡೆಯುತ್ತಿರಲಿ ಅಲ್ಲಿಯೂ ಇವರು ಹಾಜರ್. ಮತ್ತೆ ಯಾವುದೋ ವೃತ್ತದಲ್ಲಿ ಉಪವಾಸ ಸತ್ಯಗ್ರಹ ನಡೆಯುತ್ತಿರಲಿ ಅವರಿಗೂ ಇವರು ಟೀ ಮಾರುತ್ತಾರೆ. ಇದೆಲ್ಲಾ ನಾನು ಅವರನ್ನು ಹೊರಗಿನಿಂದ ಕಂಡ ನಿತ್ಯ ನೋಟವಾಗಿತ್ತು. ನನಗೆ ಇಷ್ಟಕ್ಕೆ ಸಮಾಧಾನವಾಗದೆ ಅವರ ಒಳನೋಟ ಅಂದರೆ ಅವರ ಮನಸ್ಸಿನ ಭಾವನೆಗಳು, ಅಭಿಪ್ರಾಯಗಳು, ತಿಳಿವಳಿಕೆಗಳು, ಅನುಭವಗಳು, ಇನ್ನೂ ಏನೇನೋ ತಿಳಿದುಕೊಳ್ಳುವ ಕುತೂಹಲ ಕಾತುರ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತ್ತು.

ನಿತ್ಯ ರಸ್ತೆಯಲ್ಲಿ ಹೀಗೆ ಟೀ ಕುಡಿಯುವಾಗ ಅವರನ್ನು ಮಾತನಾಡಿಸಲೆತ್ನಿಸಿದ್ದೆ. ಸಾಧ್ಯವಾಗಲಿಲ್ಲ. ಅವರಿಗೆ ಪ್ರತಿಯೊಂದು ನಿಮಿಷವೂ ಮುಖ್ಯವೆನ್ನುವಂತೆ ಚಲಿಸುತ್ತಿರುತ್ತಾರೆ. ಹೀಗೆ ಮಾತನಾಡದೆ "ನನಗೆ ಬಿಡುವಿಲ್ಲ ಸರ್" ಅಂತ ತಪ್ಪಿಸಿಕೊಂಡವರು ಯಾರೆಂದು ಗಮನಿಸಿದಾಗ ಅವರೆಲ್ಲಾ ಹೈಸ್ಕೂಲು ಮತ್ತು ಪ್ರಥಮ-ದ್ವಿತೀಯ ಪಿ ಯೂ ಸಿ ಹುಡುಗರು.

ಇವರ ಬಗ್ಗೆ ಸ್ವಲ್ಪ ಹೇಳಬೇಕೆನಿಸುತ್ತದೆ. ಇವರು ತಮ್ಮ ಮನೆಯ ಬಡತನದಿಂದಾಗಿ ಓದುವುದರ ಜೊತೆಗೆ ಸಿಕ್ಕ ಅಲ್ಪ ಸಮಯದಲ್ಲಿ ಟೀ ಮಾರುತ್ತಾ ಹಣ ಗಳಿಸುತ್ತಾರೆ. ಮತ್ತು ಹೆಚ್ಚಾಗಿ ಕೆಲವು ನರ್ಸಿಂಗ್ ಹೋಂಗಳು, ಆಸ್ಪತ್ರೆಗಳು, ಮಾರುಕಟ್ಟೆಗಳು, ಜನನಿಬಿಡ ಸ್ಥಳಗಳು ಇತ್ಯಾದಿಗಳಲ್ಲಿ ಸಮಯಕ್ಕೆ ಸರಿಯಾಗಿ ಸ್ವಚ್ಚವಾಗಿ ಸೊಗಸಾದ ಟೀ ಸಿದ್ದಮಾಡಿಕೊಂಡು ಹೋಗಿ ಮಾರುತ್ತಾರೆ. ಆ ದುಡಿಮೆಯ ಹಣದಲ್ಲಿ ತಮ್ಮ ಸ್ಕೂಲು ಕಾಲೇಜು ಫೀಜು, ಖರ್ಚು, ಸಾಧ್ಯವಾದರೆ ಸ್ವಲ್ಪ ಉಳಿಕೆ ಇತ್ಯಾದಿಗಳನ್ನು ಮಾಡುತ್ತಾ ಎಲೆಮರಿಕಾಯಿಯಂತೆ ಇರುತ್ತಾರೆ.

ಅದರೆ ಇದೇ ಹುಡುಗರು ಪಿ.ಯು.ಸಿ ಪಾಸ್ ಆಗಿ ಡಿಗ್ರಿ ಮಟ್ಟಕ್ಕೆ ಬಂದುಬಿಟ್ಟರೆ ಮುಗೀತು. ಅಲ್ಲಿ ಇವರಿಗೆ ಶುರುವಾಗುತ್ತದೆ ಪ್ರತಿಷ್ಟೆಯ ಪ್ರಶ್ನೆ. ಅದು ಯಾಕೆ ಕಾಡುತ್ತದೆಂದರೆ ಆವರು ಕಂಬೈನ್ [ಹುಡುಗ-ಹುಡುಗಿ ಇಬ್ಬರು ಒಟ್ಟಿಗೆ ಇರುವ]ಕಾಲೇಜಿನಲ್ಲಿ ಓದುತ್ತಿದ್ದರಂತೂ ಮುಗಿಯಿತು. ನಿದಾನವಾಗಿ ಅವರಲ್ಲಿ ತಮ್ಮ ವಯಸ್ಸಿನ ಹುಡುಗಿಯರನ್ನು ಸೆಳೆಯುವ, ಮೆಚ್ಚಿಸುವ, ಅವರಿಗೆ ತಾವು ಆಕರ್ಷಕವಾಗಿ ಕಾಣುವ, ಹೀಗೆ ಅವರೆಡೆಗೆ ಒಂದು ಕ್ರಷ್ ಬಂದುಬಿಟ್ಟಿರುತ್ತದೆ. ಸಹಜವಾಗಿ ಹುಡುಗಿಯರ ಕಣ್ಣಿಗೆ ತಾನು ಹೀರೋ ಆಗದಿದ್ದರೂ ಕೊನೇ ಪಕ್ಷ ಈ ರೀತಿ ಕೀಳಾಗಿ ಕಾಣಬಾರದೆಂಬ ಭಾವನೆ ಅವರಲ್ಲಿ ಗಾಢವಾಗಿ ಬೇರೂರಿ, ಆಗ ಟೀ ಮಾರುವ ಕೆಲಸವನ್ನು ಬಿಟ್ಟುಬಿಡುತ್ತಾರೆ. ಇದಿಷ್ಟನ್ನು ಅವರಿಂದ ತಿಳಿದುಕೊಳ್ಳಲು ಬಿಡುವಿನಲ್ಲಿ ಆರಾಮವಾಗಿ ಕುಳಿತಿದ್ದಾಗ ಮಾತಿಗೆಳೆದು ಅವರ ಟೀ ಚೆನ್ನಾಗಿದೆ ಅಂತ ಹೊಗಳಿ ಎರಡೆರಡು ಬಾರಿ ಟೀ ಕುಡಿಯಬೇಕಾಯಿತು.

ಇನ್ನೂ ನಲವತ್ತು ದಾಟಿದವರು ಸ್ವಲ್ಪ ದಾರಾಳವಾಗಿ ಮಾತಿಗೆ ಸಿಗುತ್ತಾರಾದರೂ ಅವರದು ಮಾತು ಕಡಿಮೆ. ಹೆಚ್ಚು ಗುಟ್ಟು ಬಿಟ್ಟುಕೊಡುವುದಿಲ್ಲ. ಹೀಗೆ ಒಂದು ದಿನ ಒಬ್ಬ ಸಿಕ್ಕಿದ ಆತನ ವಯಸ್ಸು ಸುಮಾರು ೫೦ ದಾಟಿರಬಹುದು. ಆತ ಇದೇ ವೃತ್ತಿಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಇದ್ದಾನಂತೆ. ಅವನು ನಿತ್ಯ ಯಾವ ಯಾವ ರಸ್ತೆಯ ಕಚೇರಿಗಳು, ಅಂಗಡಿಗಳಿಗೆ ಹೋಗುತ್ತಾನೆಂದು ತಿಳಿದುಕೊಂಡು ಪ್ರತೀದಿನ ಅವನಿಗೆ ಟೀ ಕುಡಿಯುವ ನೆಪದಲ್ಲಿ ಎಡತಾಕುತ್ತಿದ್ದೆ. ಪ್ರತೀದಿನ ಸಿಗುವ ನೆಪದಲ್ಲಿ ಗೆಳೆಯನಾದೆ. ಒಂದಷ್ಟು ಆತ್ಮೀಯತೆ, ನಂಬಿಕೆ ನನ್ನ ಮೇಲು ಆತನಿಗೆ ಬಂದಿದ್ದರಿಂದ ಒಮ್ಮೊಮ್ಮೆ ಕೆಲವು ವಿಚಾರಗಳನ್ನು ದಾರಾಳವಾಗಿ ಮಾತನಾಡುತ್ತಿದ್ದ. ಎಲ್ಲರನ್ನೂ ಬಿಟ್ಟು ಅವನ ಹಿಂದೆ ಬೀಳಲು ಒಂದು ಕಾರಣವು ಇದೆ. ಒಮ್ಮೆ ಆತ ಹೀಗೆ ಮಾತಾಡುವಾಗ ಒಂದೆರಡು ಬಸವಣ್ಣನ ವಚನವನಗಳು ಪುಂಕಾನುಪುಂಕವಾಗಿ ಅವನ ಮಾತಿನ ಮದ್ಯೆ ಹರಿದುಬರತೊಡಗಿದವು.

ಆಗಾಗ ಕೆಲವೊಂದು ಸಂಸ್ಕೃತ ಸ್ಲೋಕಗಳು, ಮಂತ್ರಗಳು ನಮ್ಮ ಮಾತಿಗನುಸಾರವಾಗಿ ಅವನ ಬಾಯಿಂದ ಹೊರಹೊಮ್ಮುತ್ತಿದ್ದವು. ಅದರಿಂದಾಗಿ ನನಗಂತೂ ಅವನ ಬಗ್ಗೆ ಮತ್ತಷ್ಟು ಆಶ್ಚರ್ಯ, ಕುತೂಹಲ, ಹೆಚ್ಚಾಯಿತು. ಹಾಗೆ ನಿದಾನವಾಗಿ ನಿತ್ಯ ಅವನ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಇನ್ನಷ್ಟು ಹತ್ತಿರದವನಾಗಿದ್ದೆ. ನಿದಾನವಾಗಿ ನಾನು ಕೇಳುವ ಪ್ರಶ್ನೆಗೆ ಉತ್ತರಿಸಲು ಪ್ರಾರಂಭಿಸಿದ. ನಮ್ಮಿಬ್ಬರ ಮಾತುಗಳು ಹೀಗೆ ಸಾಗುತ್ತಿದ್ದವು.

"ನೀವು ಟೀ ಎಲ್ಲೆಲ್ಲಿ ಮಾರಲು ಹೋಗುತ್ತೀರಿ..."

"ನನಗೆ ಕೆಲವು ನಿಗದಿನ ಸ್ಥಳಗಳಿವೆ ಅಲ್ಲಿಗೆ ಹೋಗುತ್ತೇನೆ..."

"ಅಲ್ಲಿ ನಿಮಗೆ ಚೆನ್ನಾಗಿ ವ್ಯಾಪಾರ ಆಗುತ್ತದೆಯೇ..."

" ಆಗಲೇ ಬೇಕು." ..ಖಚಿತವಾಗಿ ಹೇಳಿದ.

"ಹೇಗೆ ಹೇಳ್ತೀರಿ."

"ನೋಡಿ ಈಗಿನ ಟ್ರಾಫಿಕ್‌ನಲ್ಲಿ ಜನಕ್ಕೆ ತಮ್ಮ ಟೂವ್ಹೀಲರುಗಳನ್ನು ಎಲ್ಲೋ ಪಾರ್ಕಿಂಗ್ ಮಾಡಿ ಹೋಟಲ್ ಒಳಗೆ ಹೋಗಿ -೭-೮-೧೦ ರೂಪಾಯಿಗಳನ್ನು ಕೊಟ್ಟು ಸಮಾಧಾನವಾಗಿ ಕುಳಿತು ಕಾಫಿ, ಟೀ, ಕುಡಿಯುವಷ್ಟು ಸಮಯವಿಲ್ಲ. ಮತ್ತೇ ಯಾವ ಹೋಟಲ್ಲಿನಲ್ಲೂ ಕೂಡ ಅರ್ಧ ಕಾಫಿ, ಟೀ ಕೊಡುವುದಿಲ್ಲ. ಮತ್ತೆ ಜನಕ್ಕೆ ಗಂಟೆಗೊಮ್ಮೆ ಇದನ್ನು ಕುಡಿಯಬೇಕೆನ್ನುವ ಚಟವಂತೂ ಇದ್ದೇ ಇದೆ. ಆದರೆ ಪೂರ್ತಿ ಲೋಟ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವುದು ಚೆನ್ನಾಗಿ ತಿಳಿದಿದೆ."
ಸ್ವಲ್ಪ ತಡೆದು,

"ಆಗ ಏನು ಮಾಡುತ್ತಾರೆ? ನಮ್ಮಂಥವರು ಇರುತ್ತೇವಲ್ಲ.... ಅವರಿಗೆ ಕೇಳಿದ ಬೆಲೆಗೆ ಕೊಡುತ್ತೇವೆ. ಅವರ ಪಾರ್ಕಿಂಗ್ ಸಮಯ ಉಳಿಸುತ್ತೇವೆ. ಅವರು ಒಂದು ರುಪಾಯಿಗೆ ಕೇಳಲಿ ಅದಕ್ಕೆ ತಕ್ಕಂತೆ ಕೊಡುತ್ತೇವೆ. ಎರಡು, ಮೂರು ರುಪಾಯಿಗೂ ಕೊಡುತ್ತೇವೆ. ಇದರಿಂದ ಅವರಿಗೆ ನಾವು ಕೊಟ್ಟ ಅರ್ಧ ಟೀ ಕುಡಿದ ಹಾಗೂ ಆಯಿತು. ಸಮಯವೂ ಉಳಿಯಿತು ಅಲ್ಲವೇ...

ಕೆಲವೊಂದು ಕಛೇರಿ, ಅಂಗಡಿಗಳಲ್ಲಿ ಆಗ ತಾನೆ ಗ್ರಾಹಕರು ಬಂದಿರುತ್ತಾರೆ. ಆಗ ನಾವು ಅಲ್ಲಿಗೆ ಹೋಗಿ ಅವರಿಗೆ ಟೀ, ಬೇಕಾ ಎಂದು ಕೇಳುತ್ತೇವೆ. ಅವರಿಗಂತೂ ತಮ್ಮ ಗ್ರಾಹಕರ ಮುಂದೆ ಬೇಡವೆಂದು ಹೇಳಲಾಗುವುದಿಲ್ಲ. ಅದು ಅವರ ಮರ್ಯಾದೆ ಪ್ರಶ್ನೆ. ಅವರು ಗ್ರಾಹಕರ ಸಮೇತ ಎಲ್ಲರಿಗೂ ಟೀ ಕೊಡಿಸುತ್ತಾರೆ. ಮತ್ತು ನಾವು ಕೊಡುವ ಎರಡು ಮೂರು ರೂಪಾಯಿ ಬೆಲೆಯ ಟೀ ಮಾಲೀಕನಿಗೆ ಹೊರೆಯೆನಿಸುವುದಿಲ್ಲ ಮತ್ತು ಗ್ರಾಹಕನೂ ಟೀ ಕುಡಿದ ದಾಕ್ಷಿಣ್ಯಕ್ಕಾಗಿ ವ್ಯಾಪಾರ ಮಾಡಲೇಬೇಕು. ಇನ್ನೂ ಮಾರುಕಟ್ಟೆ ಇನ್ನಿತರ ಸ್ಥಳಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ವ್ಯಾಪಾರದ ಒತ್ತಡದಲ್ಲಿ ಗಂಟೆಗೊಮ್ಮೆ ಟೀ ಕುಡಿಯುವ ಚಟವಿರುವುದರಿಂದ ನಾವು ಕೊಡುವ ಟೀ ಕಡಿಮೆ-ಹೆಚ್ಚು ಅನ್ನುವ ಪ್ರಶ್ನೆಗಿಂತ ಆ ಕ್ಷಣದಲ್ಲಿ ಅವರಿಗೆ ಒಂದು ಬಿಸಿ ಗುಟುಕು ಕುಡಿದ ಸಮಾಧಾನವಾಗುತ್ತದಲ್ಲ ಅದೇ ಮುಖ್ಯ ಅವರಿಗೆ. ಅದಕ್ಕಾಗಿ ಅವರಿಗೆ ಬೇಕೇ ಬೇಕು."

ಅವನ ಮಾರ್ಕೆಟಿಂಗ್ ತಂತ್ರ, ಅದರೊಳಗೆ ಆಡಗಿರುವ ಸೂಕ್ಷ್ಮವಿಚಾರಗಳು, ನನಗಂತೂ ವಿಶೇಷವೆನಿಸಿದ್ದವು. "
ಅಲ್ಲಾ ಸರ್, ನೀವು ಇಷ್ಟೆಲ್ಲಾ ಗೊತ್ತಿದೆಯೆಂದ ಮೇಲೆ ನೀವು ಚೆನ್ನಾಗಿ ಓದಿಕೊಂಡಿದ್ದೀರ ಅಂತ ನನಗನ್ನಿಸುತ್ತೆ. ನೀವ್ಯಾಕೆ ಒಂದು ಒಳ್ಳೆಯ ಮಾರ್ಕೆಟಿಂಗ್ ಕಂಪನಿಗೆ ಸೇರಿಕೊಳ್ಳಬಾರದು" ಅಂತ ನಾನು ಕೇಳಿದೆ. ಆದಕ್ಕೆ ಆತ
"ನೋಡಿ ಸ್ವಾಮಿ,

ಆಯುಃಕರ್ಮೆಚ ವಿತ್ತಂಚ,

ವಿದ್ಯಾ, ನಿಧನಮೇವಚ,

ಪಂಚೈತಾನಪಿ ಸೃಜ್ಯಂತೇ,

ಗರ್ಭಸ್ತೈಸೈವದೇಹಿನಃ "

ಒಂದು ಸಂಸ್ಕೃತ ಶ್ಲೋಕ ಹೇಳಿದ. ಅದನ್ನು ಕೇಳಿ ನನಗಂತೂ ಅಚ್ಚರಿಯಾಯಿತು. ದಯವಿಟ್ಟು ಅದರ ಅರ್ಥವನ್ನು ಹೇಳಿ ಅಂದೆ.

"ಆಯೂಸ್ಸು, ವಿದ್ಯೆ, ಮರಣ ಕೆಲಸ, ಐಶ್ವರ್ಯ ಈ ಐದು ಮನುಷ್ಯನಿಗೆ ತಾಯಿಯ ಗರ್ಭದಲ್ಲೇ ನಿಶ್ಚಯಿಸಲ್ಪಟ್ಟಿತ್ತವೆ. ಆದ್ದರಿಂದ ನಾನೇನು ಆಗಬೇಕೆನ್ನುವುದು ಮೊದಲೇ ತೀರ್ಮಾನವಾಗಿಬಿಟ್ಟಿರುವುದರಿಂದ ನನ್ನ ಭವಿಷ್ಯವನ್ನು ನಿರ್ಧರಿಸಲು ನಾನ್ಯಾರು ?"

ಆತನ ಮಾತಿಗೆ ನಾನು ಮರು ಉತ್ತರ ಹೇಳಲಾಗದೇ ಅವನಿಗೆ ಟೀ ಹಣವನ್ನು ಕೊಟ್ಟು ಮತ್ತೆ ಸಿಗುತ್ತೇನೆ ಅಂತ ಹೇಳಿ ಅಲ್ಲಿಂದ ಹೊರಟಾಗ ನನ್ನ ಮನಸ್ಸು ಆಲೋಚನೆಗೆ ಬಿದ್ದಿತ್ತು.

ಅವನು ಹೇಳಿದ ಸಂಸ್ಕೃತ ಶ್ಲೋಕದ ಜೊತೆಗೆ ಆತ ಹೇಳಿದ ವಿದ್ಯೆ, ಆಯುಸ್ಸು, ಕೆಲಸ, ಐಶ್ವರ್ಯ, ಇವುಗಳನ್ನು ಪಡೆಯಲು ಇರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಬದುಕಿನಲ್ಲಿ ಅದೆಷ್ಟು ಒದ್ದಾಡುತ್ತೇವಲ್ಲ. ಹಾಗೂ ಸಾವಿನ ವಿಚಾರದಲ್ಲಿ ಅದೆಷ್ಟು ದಿಗಿಲು, ಆತಂಕ ಪಡುತ್ತೇವಲ್ಲ. ತಾನು ಮಾಡುವ ಕೆಲಸದಲ್ಲೇ ನೆಮ್ಮದಿಯನ್ನು ಕಂಡುಕೊಳ್ಳುತ್ತಾ ಸದಾ ಆನಂದದಿಂದಿರುವ ಆತ ನಮಗಿಂತ ಮಾನಸಿಕವಾಗಿ ಅದೆಷ್ಟು ಉನ್ನತ ಮಟ್ಟದಲ್ಲಿದ್ದಾನೆ ಅಂತ ಮನಸ್ಸಿನಲ್ಲೇ ಅವನಿಗೆ ದೀರ್ಘದಂಡ ನಮಸ್ಕಾರ ಹಾಕಿ ಮನೆಕಡೆಗೆ ನಡೆದಾಗ ಆತ ಹೇಳಿದ ಸಂಸ್ಕೃತ ಶ್ಲೋಕ ಮತ್ತೆ ಮತ್ತೆ ನೆನಪಾಗುತ್ತಿತ್ತು.

[ಆತನಿಗೆ ಇಷ್ಟವಿಲ್ಲದ್ದರಿಂದ ಆತನ ಹೆಸರು ಮತ್ತು ಫೋಟೋವನ್ನು ಬ್ಲಾಗಿನಲ್ಲಿ ಹಾಕಲಾಗಿಲ್ಲ. ]

ಚಿತ್ರ ಲೇಖನ.
ಶಿವು.ಕೆ ARPS.

65 comments:

ಶಿವಪ್ರಕಾಶ್ said...

ಒಬ್ಬ ಮನುಷ್ಯನ ಮುಖ ನೋಡಿ ಅಳೆಯುವ ಹಾಗಿಲ್ಲ.
ನನಗೂ ಈ ಥರ ಅನುಭವಗಳು ಬಹಳ ಆಗಿವೆ.
ಒಬ್ಬ ದೇವಸ್ತಾನದ ಮುಂದೆ ಚಪ್ಪಲಿ ಕಾಯುವ ವ್ಯಕ್ತಿ ಇಂಗ್ಲೀಷಿನಲ್ಲಿ ಸಾರಾಗವಾಗಿ ಮಾತನಾಡುತ್ತಿದ್ದುದನ್ನು ನೋಡಿ ನಾನು ಗಾಬರಿಯಗಿದ್ದೆ.
ಒಳ್ಳೆಯ ಲೇಖನ..

shivu.k said...

ಶಿವಪ್ರಕಾಶ್,

ಕಳೆದೆರಡು ದಿನದಿಂದ ಇಂಟರ್‌ನೆಟ್ ತೊಂದರೆ ಇದ್ದುದರಿಂದ ಬ್ಲಾಗಿನಿಂದ ದೂರವಾಗಿದ್ದೆ...

ಲೇಖನ ಬ್ಲಾಗಿಗೆ ಹಾಕುತ್ತಿದ್ದಂತೆ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು.

ಸುಮ್ಮನೇ ಕುತೂಹಲದಿಂದ ಹಿಂದೆ ಬಿದ್ದಿದ್ದಕ್ಕೆ ನನಗಾದ ಅನುಭವ....ನಾವು ಯಾರನ್ನು under estimate ಮಾಡಬಾರದು...

ಆತನ ಬಗ್ಗೆ ನನಗೆ ತುಂಬಾ ಗೌರವವಿದೆ...

ಹೀಗೆ ಬರುತ್ತಿರಿ....ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

Shankar Prasad ಶಂಕರ ಪ್ರಸಾದ said...

ಈ ರೀತಿಯ ಟೀಯನ್ನು ನಾನು ಮುಂಚೆ ಕೆಲಸ ಮಾಡುತ್ತಿದ್ದ ಕಂಪೆನಿಯ ಎರಡನೇ ಪಾಳಿಯಲ್ಲಿ ಕುಡಿಯುತ್ತಿದ್ದೆ.
ಜೊತೆಗೆ ಸುಮಾರು ಕಡೆ ಹೀಗೆ ಮೂರು ರುಪಾಯಿ ಕೊಟ್ಟು ಟೀ ಕುಡಿದಿರುವೆ. ಒಂದೇ ರೀತಿಯ ರುಚಿ ಗಮನಕ್ಕೆ ಬಂದಿತ್ತು, ಆದ್ರೆ ಅದರ ಬಗ್ಗೆ ಜಾಸ್ತಿ ಗಮನ ಕೊಡಲಿಲ್ಲ. ಮೋಸ್ಟ್ಲಿ ಒಂದೇ ರೀತಿಯ ಟೀ ಪುಡಿ ಕೊಳ್ಳುತ್ತಾರೆ ಎಂದು ನನಗೆ ನಾನೇ ಉತ್ತರಿಸಿಕೊಂಡು ಸುಮ್ಮನಾಗಿದ್ದೆ. ಆದ್ರೆ ನೀವು ಹೇಳಿದ ಮೇಲೆ ಈ ಮೂರು ರುಪಾಯಿಯ ಟೀ ಹಿಂದೆ ಕೂಡ ಇಷ್ಟೊಂದು ಮರ್ಮ ಅಡಗಿದೆ ಎಂದು ನಿಮ್ಮ ಲೇಖನ ಓದಿ ಗೊತ್ತಾಗಿದ್ದು. ಇನ್ಫಾರ್ಮಶನ್ ಗೆ ಧನ್ಯವಾದಗಳು.
ಜೊತೆಗೆ, ನೀವು ಹೇಳಿದ ಆ ೫೦ ವರ್ಷದವರು ಬರೀ ವಯೋವೃದ್ಧರಲ್ಲ, ಜ್ಞಾನವೃದ್ಧರೂ ಕೂಡ.
ಈ ರೀತಿಯ ಜನರನ್ನು ನಾನು ಕೂಡ ಬಹಳ ನೋಡಿದೀನಿ.. ನಮ್ಮ ಮೈಸೂರಿನ ಕಡೆ ಸ್ವಲ್ಪ ಜಾಸ್ತಿ ಸಿಗ್ತಾರೆ.
ನಮ್ಮ ಮನೆ ಇರೋದು ಮೈಸೂರಿನ ಕುವೆಂಪುನಗರದಲ್ಲಿ. ನಮ್ಮ ಮನೆಯ ಬಳಿ ಒಂದು ಟೀ ಅಂಗಡಿ ಇದೆ. ಅದು ಸುಮಾರು ಹುಡುಗರ ಸಂಜೆಯ ಕಟ್ಟೆ (ನನ್ನದಲ್ಲ, ಏಕೆಂದರೆ ನಮ್ಮ ಏರಿಯಾದಲ್ಲಿ ನಾನು ಆ ರೀತಿ ಎಲ್ಲೂ ಕೂರೋದಿಲ್ಲ). ಒಮ್ಮೆ ಅಲ್ಲಿ ನನ್ನ ಫ್ರೆಂಡ್ ಒಬ್ಬನನ್ನು ನೋಡಲು ಹೋಗಿದ್ದೆ. ಆ ಕಟ್ಟೆಗೆ ಸುಮಾರು ೬೫ - ೭೦ ವರ್ಷದ ಒಬ್ಬರು ಬರ್ತಾ ಇದ್ರು. ಮಾಸಲು ಬಟ್ಟೆ, ಕೆದರಿದ ತಲೆಗೂದಲು, ಕಾಲಿಗೆ ಹವಾಯಿ ಚಪ್ಪಲಿ...ಸ್ವಲ್ಪ ಅರಳು ಮರಳು ಅನ್ನೋ ರೀತಿ ಮಾತಾಡ್ತಾ ಇದ್ವಿ.
ಒಮ್ಮೆ ಬಿಎಸ್ಸಿ ಓದುತ್ತಿದ್ದ ೩ ಹುಡುಗರು ಅಲ್ಲಿ ಕೂತು Mathematics ನ Calculus ದು ಕ್ಲಿಷ್ಟಕರವಾದ ಪ್ರಾಬ್ಲಂ ಸಾಲ್ವ್ ಮಾಡ್ತಾ ಇದ್ರು.. ಈ ತಾತ ಬಂದ್ರು.. ಬಂದಿದ್ದವರು ಸುಮ್ನೆ ಏನದು ಅಂತ ಕೇಳಿದ್ರು. ಇವರು ತೋರಿಸಿದರು.. ಬುಕ್ಕು ಪೆನ್ನು ಇಸ್ಕೊಂಡು ೩೦ ಸೆಕೆಂಡಿನಲ್ಲಿ ಅದನ್ನ ಬಿಡಿಸಿ ಕೊಟ್ರು.. ಎಲ್ರೂ ದಂಗು...ಯಪ್ಪಾ...

ಕಟ್ಟೆ ಶಂಕ್ರ

NiTiN Muttige said...

ನನ್ನ ಮನಸ್ಸಿನಲ್ಲಿ ಇಷ್ಟು ದಿನ ಇದೇ ವಿಷಯ ಕೊರೆಯುತಿತ್ತು... ಉತ್ತಮ ಮಾಹಿತಿಗೆ ಧನ್ಯವಾದ

ಬಿಸಿಲ ಹನಿ said...

ಶಿವು,
ಸಮಾಜದ ಕೆಳಮಟ್ಟದಲ್ಲಿ ಬದುಕುತ್ತಿರುವವರ ನೆಮ್ಮದಿ, ಬದುಕಿನೆಡೆಗೆ ಅವರಿಗಿರುವ ಪ್ರೀತಿ, ಗೌರವ ನಮಗೆ ಖಂಡಿತ ಇರುವದಿಲ್ಲ. ಅವರು ಕೀಳು ಕೆಲಸ ಮಾಡಿದರೂ ಅವರ ಸ್ವಾಭಿಮಾನ ನಮಗೆ ಬಾರದು. ಹಾಗೇಯೇ ಕೀಳು ಕೆಲಸ ಮಾಡುವವರು ಕೀಳರಲ್ಲ.
ಉತ್ತಮ ಲೇಖನಕ್ಕೆ ಅಭಿನಂದನೆಗಳು.

sunaath said...

ಶಿವು,
ಕತೆಯ ಬೆನ್ನು ಹತ್ತಿ ಹೊರಡುವ ಈ ನಿಮ್ಮ ಸಾಹಸಕ್ಕೆ hats off! ನಿಮ್ಮ ಈ ಲೇಖನಗಳು ಕೇವಲ ಮಾಹಿತಿ ಕೊಡುವದಿಲ್ಲ; ಒಂದು human angle ಕೊಡುತ್ತವೆ.
Very good work.

ವನಿತಾ / Vanitha said...

ಈ ಟೀ ಬಗ್ಗೆ ಗೊತ್ತಿರ್ಲಿಲ್ಲ....ಒಳ್ಳೆಯ ಲೇಖನ..

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಎಲ್ಲರೂ ಟೀ ಕುಡಿಯುತ್ತೇವೆ, ಕುಡಿದಿದ್ದೇವೆ. ಆದರೆ ನೀವು ಅಷ್ಟಕ್ಕೇ ನಿಲ್ಲದೆ ಅವರ ಬಗ್ಗೆ, ಅವರ ಜೀವನದ ಬಗ್ಗೆ ವಿವರಗಳನ್ನೆಲ್ಲಾ ಕಲೆಹಾಕಿದ್ದೀರ. ಟೀ ಮಾರುವವರು ಹೇಗೆಲ್ಲಾ ಇರುವರಲ್ಲಾ ಎಂಬುದು ತಿಳಿದುಬಂತು ನಿಮ್ಮ ಬರಹದಿಂದ. ಎಲ್ಲಾ ಟೀ ಸಾಮಾನ್ಯ ಒಂದೇ ರುಚಿ ಹೇಗಿರುತ್ತೆ? ಅವರು ತಯಾರಿಸುವ ಒಂದೇ ವಿಧಾನವಾ? ನನಗೊಂದು ಅನುಮಾನ... ಅವರು ಟೀ ಮಾತ್ರ ಯಾಕೆ ಮಾರುತ್ತಾರೆ? ಕಾಫಿ ಏಕೆ ಮಾರುವುದಿಲ್ಲ?

Ittigecement said...

ಶಿವು ಸರ್....

ಟಿ ಹುಡುಗರು ನಾವು ಕಟ್ಟುವ ಮನೆಗಳ ಹತ್ತಿರ ಟೀ ತೆಗೆದು ಕೊಂಡು ಬರ್ತಾರೆ....
ನಾನು ಬಹಳ ಸಾರಿ ಅವರ ಬಳಿ ಕುಡಿದ್ದೀನಿ..
ಅವರನ್ನೂ ಮಾತಾಡಿಸಿದ್ದೀನಿ...

ಒಂದು ಹಾಸ್ಯ ಪ್ರಸಂಗ ನೆನಪಾಗ್ತಾ ಇದೆ....

ಅವರ ಬಳಿ ಮಾತಾಡಿ..
ಅವರ ಅಂತರಂಗ ಹೊಕ್ಕು..
ಅವಲ್ಲಿ ಬೆರೆಯುವ ನಿಮ್ಮ ಸ್ವಭಾವಕ್ಕೆ...
ಚಂದದ ಫೋಟೊ ಲೆಖನಕ್ಕೆ...

ನನಗೆ ಹಾಸ್ಯ ಪ್ರಸಂಗ ನೆನಪಿಸಿದ್ದಕ್ಕೆ...

ಅಭಿನಂದನೆಗಳು...

ಹಾಗು ಧನ್ಯವಾದಗಳು...

umesh desai said...

ಸರ್ ಸಾಮಾನ್ಯರ ಬಗ್ಗೆ ನಿಮಗಿರುವ ಕಳಕಳಿ ಮೆಚ್ಚಿದೆ ಆದರೆ ಇವರು ಚಹಾ ಪುಡಿಯಲ್ಲಿ ಕಟ್ಟಿಗೆ
ಪುಡಿ ಮಿಕ್ಸ್ ಮಾಡ್ತಾರೆ ..ಎಲ್ಲರು ಅಲ್ಲ ಅದ್ರು ಇದು ಸತ್ಯ..

PARAANJAPE K.N. said...

ಶಿವೂ
ನಿಮ್ಮ ನಿರ೦ತರ ಹುಡುಕಾಟದ ಪ್ರಕ್ರಿಯೆ, ಹೊಸತನ್ನು ತಿಳಿಸುವ ಆದಮ್ಯ ಉತ್ಸಾಹ, ಸಮಾಜದ ಕೆಳಸ್ತರದ ಜನರ ಬವಣೆಗಳ ಬಗ್ಗೆ ನಿಮಗಿರುವ ತುಡಿತ ಎಲ್ಲ ಈ ಲೇಖನದಲ್ಲಿ ವ್ಯಕ್ತವಾಗಿದೆ. ಜೀವನದ ನಿತ್ಯಸ೦ತೆಯಲ್ಲಿ ವ್ಯಸ್ತರಾಗಿರುವ ನಮಗೆ ತಿಳಿಯದ ಎಷ್ಟೋ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ,

ಕನಸು said...

ಹಾಯ್ ಶಿವಣ್ಣ
ನಿಮ್ಮ ಟಿ ಚಿತ್ರಗಳಿಗೆ
ಯಾವದು ಇಲ್ಲ
ಸರಿಸಾಟಿ

ಅಹರ್ನಿಶಿ said...

ಟೀಯಲ್ಲೂ ಉಂಟು ವೆರೈಟಿ
ಕೇಟಿ, ಲೆಮನ್ ಟಿ, ಮಸಾಲಾಟಿ
ಎಲ್ಲಕ್ಕಿಂತ ರುಚಿ
ನಲ್ಲೆಯ ಕೆಂದು-ಟಿ!

ಇದು ದು೦ಡಿರಾಜರ ಚುಟುಕು
ಮಲ್ಲಿಕಾರ್ಜುನ್ ತಮ್ಮ ಬರಹಕ್ಕೆ ಅ೦ಟಿಸಿಕೊಡಿದ್ದಾರೆ.
ನಿಮ್ಮ ಬರಹಕ್ಕೆ ನ೦ದೊ೦ದು ಚುಟುಕು
ಅ೦ಟಿಸಿಕೊಳ್ಲುವಿರಾ!

ಟೀ ಯಲ್ಲೂ ಉ೦ಟು ವೆರೈಟಿ
ಟೀ-ತು೦ಟಿ
ಬೈಕಿನಲ್ಲಿ ಬೆನ್ನಿಗ೦ಟಿ
ಕುಳಿತಿರುವಾಗ
ಇರಬಾರದೇ ರಸ್ತೆಯ
ತು೦ಬಾ
ಬರಿ ಉಬ್ಬು(ಹ೦ಪ್ಸ್)ಗಳ ಜ೦ಟಿ.

ಶಿವು,ಕ್ರಿಕೆಟ್ಟಿಗು ಅ೦ಟಿದೆ ಟಿ ಟ್ವೆ೦ಟಿ ಒನ್ ಬೈ ಟು ಹ೦ಚಿಕೊ೦ಡರೇ ಟೀ ಯ ನಿಜವಾದ ಸ್ವಾದ.ಬರಹ ,ಟೀ ಮಾರುವವರ ಬವಣೆ ಎಲ್ಲಾ ಚೆನ್ನಾಗಿದೆ.

Prabhuraj Moogi said...

ನಿಜ ನಿಮ್ಮ ಛಾಯಾಕನ್ನಡಿಯಲ್ಲಿ ಮತ್ತೊಂದು ಛಾಯೆಗೆ ಕನ್ನಡಿ ಹಿಡಿದಿದ್ದೀರಿ, ಬದುಕು ಎಲ್ಲರಿಂದ ಏನೇನು ಮಾಡಿಸುತ್ತಲ್ಲ, ಒಂದು ಎರಡು ರೂಪಾಯಿ ಚಹದ ಹಿಂದೂ ಏನೇನು ಇದೆ... ಹೀಗೆ ವರ್ಷದ ಹಿಂದೆ ಅಟೊ ಓದಿಸುವವನ ಜತೆ ಮಾತುಕಥೆಯಲ್ಲಿ ತೊಡಗಿದ್ದಾಗ ಗೊತ್ತಗಿದ್ದು ಆತ ಎಂ.ಏ. ಪದವೀಧರ ಅಂತ, ನೌಕರಿಗೆ ಸೇರಲು ಲಂಚ್ ಕೊಡಲು ಹಣ ಹೊಂದಿಸಲಾಗದೇ ಮನೆಯಲ್ಲಿ ತಮ್ಮನ ಓದು, ತಂಗಿಯ ಮದುವೆಗಾಗಿ ಅಟೊ ಓಡಿಸಲು ಶುರು ಮಾಡಿದ್ದನಂತೆ, ಈಗಲೂ ಯುನಿವೆರ್ಸಿಟಿಗೆ ಹೋಗಿ ತನ್ನ ಪ್ರೊಫೆಸರಗಳಾದ ಗೆಳೆಯರನ್ನು ಭೇಟೀ ಮಾಡಿ ಬರುತ್ತೇನೆ ಅಂತ ಅವನು ಹೇಳುತ್ತಿರುವಾಗ ನನ್ಗೆ ಏಕೊ ಬಹಳ ಬೇಜಾರಾಗಿತ್ತು. ಒಂದೆ ಖುಷಿಯ ವಿಚಾರವೆಂದರೆ ಅವನಿಗೆ ತಾನೀಗ ಮಾಡುತ್ತಿರುವ ವೃತ್ತಿಯಮೇಲೇ ಎನೂ ಬೇಜಾರಿರಲಿಲ್ಲ

ಚಂದ್ರಕಾಂತ ಎಸ್ said...

ಶಿವು

ಸೊಗಸಾದ ಬರಹ ಮತ್ತು ಚಿತ್ರಗಳು. ನಿಮ್ಮ ಅನ್ವೇಷಣಾ ಪ್ರವೃತ್ತಿ ಬಹಳ ಇಷ್ಟವಾಗುತ್ತದೆ.

ಅನೇಕ ಬ್ಲಾಗಿಗರು ಟೀ ಮಾರುವುದನ್ನು ಕೀಳು ವೃತ್ತಿ ಎಂದಿದ್ದಾರೆ. ಎಲ್ಲಿಯವರೆಗೆ ನಾವು ಕೆಲಸವನ್ನು ಮೇಲು ಕೀಳು ಎಂದು ನೋಡುತ್ತೇವೋ ಅಲ್ಲಿಯವರೆಗೂ ನಮಗೆ Dignity of Labour concept ಅರ್ಥವಾಗುವುದಿಲ್ಲ.

ವಿದೇಶಗಳಲ್ಲಿ ಬಹುಮಟ್ಟಿಗೆ ಎಲ್ಲಾ ವಿದ್ಯಾರ್ಥಗಳು ಇಂತಹ -ಅಂದರೆ ಪೇಪರ್ ಹಾಕುವುದು, ಪಾರ್ಕಿಂಗ್ ಲಾತ್ ನಲ್ಲಿ ವಯಸ್ಸಾದವರ ಕಾರುಗಳನ್ನು ಪಾರ್ಕ್ ಮಾಡುವುದು, ಹೋಟೆಲ್ ಗಳಲ್ಲಿ ಸಪ್ಲೈಯರ್ ಕೆಲಸ ಮಾಡುವುದು, ಮನೆಗಳಲ್ಲಿ ಮನೆಗೆಲಸದವರ ಕೆಲಸ ಮಾಡುವುದು- ಕೆಲಸಗಳನ್ನು ಮಾಡಿ ತಮ್ಮ ವಿದ್ಯಾಭ್ಯಾಸಕ್ಕೆ ಅಥವಾ ಪಾಕೆಟ್ ಮನಿಗೆ ಹಣ ಸಂಪಾದಿಸುತ್ತಾರೆ. ಆ ಕೆಲಸಗಳಲ್ಲಿ ಅವರಿಗೆ ಒಳ್ಳೆಯ ಸಂಪಾದನೆಯೂ ಇದೆ. ಇಲ್ಲಿಯಂತೆ ಇದು ಕೀಳು ಕೆಲಸ ಎಂದು ಹೇಳಿ ಕಡಿಮೆ ಹಣ ಕೊಡುವುದಿಲ್ಲ.ಹಾ ಮತ್ತೆ ಫ್ರೆಂಡ್ಸ್ ನೋಡುತ್ತಾರೆಂದು ಅವರು ಮುಜುಗರ ಪಟ್ಟುಕೊಳ್ಳುವುದಿಲ್ಲ.

ಈ ಕೆಲಸ ಮಾಡುವವರ ಬೆನ್ನುಹತ್ತಿ ಚಿತ್ರಗಳೊಂದಿಗೆ ಲೇಖನ ಬರೆದ ನಿಮಗೆ ಧನ್ಯವಾದಗಳು.

ಚಂದ್ರಕಾಂತ ಎಸ್ said...

ದಯವಿಟ್ಟು ಪಾರ್ಕಿಂಗ್ ಲಾಟ್ ಎಂದು ಓದಿಕೊಳ್ಳಿ

ಧರಿತ್ರಿ said...

ಶಿವಣ್ಣ..ಒಳ್ಳೆ ಬರಹ..ಪರಿಕಲ್ಪನೆ ಇಷ್ಟವಾಯಿತು. ನಿಜ ಹೇಳಬೇಕಂದ್ರೆ..ಇಂಥ ಕೆಲಸಗಳನ್ನು ಮಾಡಿದವರೇ ನಿಜವಾದ ಬದುಕನ್ನು ಕಂಡುಕೊಳ್ಳೋರು ಎಂದು ನಂಗನಿಸುತ್ತೆ. ಕಷ್ಟದ ಬದುಕೇ ಸುಖದ ದಾರಿಗೆ ಮುನ್ನುಡಿ ಅಲ್ವಾ? ಅಂಥ ಸ್ವಾಭಿಮಾನ ರೂಢಿಸಿಕೊಂಡವರಿಗೆ ಬದುಕಿನ ಬಾಗಿಲು ತೆರೆಯುತ್ತದೆ...ಇದು ಖಂಡಿತಾ ಕೆಳಮಟ್ಟದ ಬದುಕಲ್ಲ, ಸ್ವಾಭಿಮಾನದ ಬದುಕು! ಎಂಬುವುದು ನನ್ನ ಅನಿಸಿಕೆ.ನಿಮ್ಮ ಕೆಲಸಗಳ ನಡುವೆಯೂ ಟೀ ಹುಡುಗರ ಬದುಕನ್ನು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ
-ಧರಿತ್ರಿ

ಬಾಲು said...

ಶಿವೂ ಅವರೇ,

ತುಂಬಾ ಒಳ್ಳೆಯ ಲೇಖನ ಹಾಗು ಪ್ರಯತ್ನ. ಟೀ ಮಾರುವವರ ಜೀವನದ ಮೇಲೊಂದು ನಿಮ್ಮ ಕ್ಯಾಮೆರಾ ಹಾಗು ಮನದ ಕಣ್ಣು.

Pradeep said...

ತುಂಬಾ ಒಳ್ಳೆಯ ಲೇಖನ ಸಾರ್. ಇದನ್ನು ಓದಿ ನಮ್ಮೂರಿನ ಸಮೋಸ ಮಾರುವ ತಾತನ ನೆನಪಾಯಿತು. ಈ ಲೇಖನಕ್ಕೆ ಸಂಬಂಧವಿಲ್ಲದಿದ್ದರೂ, ನೆನಪಾದುದು ಯಾಕೋ ಗೊತ್ತಿಲ್ಲ.. ಆದರೆ, ನೀವು ಅವರ ಜೊತೆ ಮಾತನಾಡಿ ತಿಳಿದುಕೊಂಡಂತೆ, ಒಂದು ಸಾರಿ ನಾವೂ ತುಂಬಾ ಮಾತನಾಡಿದ್ದೆವು. ಮತ್ತೆ, ನಮ್ಮ ಮಹಾಕವಿ ಕುವೆಂಪು ರಸ್ತೆಯ ಪರಿಚಯವೇ ಸಿಗದಂತಾಗಿದೆ ಈಗ!

shivu.k said...

ಶಂಕರ್ ಪ್ರಸಾದ್ ಸರ್,

ಟೀ ಮಾರುವವರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ನೀವು ಹೇಳಿದ ಜ್ಞಾನವೃದ್ಧರು ತುಂಬಾ ಜನ ಇದ್ದಾರೆ. ಅವರನ್ನು ನಾವು ಗುರುತಿಸಿ ಗೌರವಿಸಬೇಕಷ್ಟೆ.

ಮತ್ತೆ ಗಣಿತದ ಬಿಡಿಸಿದ ನಿಮ್ಮೂರಿನ ಹಿರಿಯರ ಬಗ್ಗೆ ಮತ್ತು ಹುಡುಗರ ಸಂಜೆಯ ಕಟ್ಟೆ ಬಗ್ಗೆ ಹೇಳಿದಾಗ ನನಗೆ ಮತ್ತೊಂದು ಘಟನೆ ನೆನಪಾಯಿತು. ನನ್ನ ವಿಡಿಯೋಗ್ರಾಫರ್ ಅದನ್ನು ತೋರಿಸಿದ್ದ. ನಾನಲ್ಲಿ ಕಂಡ "ಹುಡುಗಿಯರ ಸಂಜೆ ಕಟ್ಟೇ" ಬಗ್ಗೆ ಬರೆಯಬೇಕೆನಿಸಿದೆ.

ಕಳೆದ ತಿಂಗಳು ಮೈಸೂರಿನ ರಾಘವೇಂದ್ರ ಮಟ[ಆಶೋಕನಗರದ ಹತ್ತಿರ ಬರುತ್ತದೆ]ಪಕ್ಕದ ಕಲ್ಯಾಣ ಮಂಠಪಕ್ಕೆ ಮದುವೆ ಫೋಟೋ ತೆಗೆಯಲು ಹೋಗಿದ್ದೆ. ಅದರ ಎದುರಿಗೆ ಒಂದು ಸಣ್ಣ ರಸ್ತೆಯಿದೆ. ಅಲ್ಲೊಂದು "female food" ಅಂಗಡಿ ಇದೆ.[ಇತ್ತೀಚೆಗೆ ಪಾನಿಪುರಿ,ಬೇಲಿಪುರಿ,ಚಾಟ್‌ ತಿನಿಸುಗಳನ್ನು ಹುಡುಗಿಯರೇ ತಿನ್ನುವುದು ಹೆಚ್ಚಾಗಿರುವುದರಿಂದ ಮೈಸೂರಿನ ನನ್ನ ಗೆಳೆಯ ವಿಡಿಯೋಗ್ರಾಫರ್ ಅದನ್ನು ಈ ರೀತಿ female food ಅಂತ ಹೆಸರಿಟ್ಟಿದ್ದಾನೆ] ದೂರದಿಂದ ನೋಡಿದರೆ ಅಲ್ಲಿ ರಸ್ತೆಯಿರುವುದು ಗೊತ್ತಾಗುವುದೇ ಇಲ್ಲ. ಅದೇ ಅನುಕೂಲವನ್ನು ಬಳಸಿಕೊಂಡು ಸಂಜೆಯಾಯಿತೆಂದರೆ ಅನೇಕ ಕಾಲೇಜು ಹುಡುಗಿಯರು, ಗೆಳತಿಯರು ಸೇರಿಕೊಂಡು ತಮ್ಮ ತಮ್ಮ ಗುಟ್ಟುಗಳನ್ನು ಹಂಚಿಕೊಳ್ಳುತ್ತಾ female food ಮೆಲ್ಲುತ್ತಿರುತ್ತಾರೆ.

ಸಾಧ್ಯವಾದರೆ ಗಮನಿಸಿ...

ಧನ್ಯವಾದಗಳು..

shivu.k said...

ನಿತಿನ್,

ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಸಾಧ್ಯವಾದಷ್ಟು ಬೇಗ ಅಕ್ಷರ ರೂಪಕ್ಕೆ ತಂದುಬಿಡಬೇಕು ಇಲ್ಲದಿದ್ದಲ್ಲಿ ಮರೆತುಹೋಗುವ ಅದರೆಡೆಗೆ ಉತ್ಸಾಹವಿಲ್ಲದಂತಾಗುವ ಸಾಧ್ಯತೆಗಳು ಹೆಚ್ಚು. ಇನ್ನೂ ಏನಾದರೂ ಮನಸ್ಸಿನಲ್ಲಿದ್ದರೇ ಈಗಿನಿಂದಲೇ ಕಾರ್ಯಗತರಾಗಿ...

ಧನ್ಯವಾದಗಳು.

shivu.k said...

ಉದಯ್ ಸರ್,

ಸಮಾಜದಲ್ಲಿ ಕೆಳಮಟ್ಟ-ಮೇಲುಮಟ್ಟವೆಂಬುದಿಲ್ಲ. ನಾವು ಮಾಡುವ ಕೆಲಸವನ್ನು ದುಡ್ಡಿನ ಮೂಲಕ ಆಳೆದು ಮೇಲು ಕೀಳು ಅಂತ ವಿಂಗಡಿಸುತ್ತೇವೆ. ಅದಕ್ಕೆ ಅಂತಸ್ತು, ಗೌರವ ಅನ್ನುವ ಲೇಬಲ್ ಅಂಟಿಸಿಬಿಡುತ್ತೇವೆ. ಇದೆಲ್ಲಾ ನಾವು ಮಾಡಿಕೊಂಡಿರುವುದಷ್ಟೇ. ಎಲ್ಲರಲ್ಲೂ ಎಲ್ಲ ಬಗೆಯ ಭಾವನೆಗಳು ಇದ್ದೇ ಇರುತ್ತವೆ. ಅದನ್ನು ನಾವು ಗುರುತಿಸಬೇಕಷ್ಟೆ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

shivu.k said...

ಸುನಾಥ್ ಸರ್,

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಇದು ಮತ್ತಷ್ಟು ಇಂತವುಗಳಲ್ಲಿ ತೊಡಗಿಕೊಳ್ಳಲು ಸ್ಫೂರ್ತಿ ನೀಡುತ್ತದೆ...ಧನ್ಯವಾದಗಳು.

shivu.k said...

ವನಿತಾ,

ನಾನು ನಿಮ್ಮದೇ ರೆಸಿಪಿ ಪ್ರಪಂಚದ "ನೀರು+ಹಾಲು+ಸಕ್ಕರೆ+ಟೀ ಪುಡಿ ಹಾಕಿ ಕುದಿಸಿದ "ಟೀ ಬಗ್ಗೆ ಬರೆದಿದ್ದೇನೆ...ನೀವು ಯಾವ "ಟೀ" ಅಂದುಕೊಂಡಿರೋ ತಿಳಿಯಲಿಲ್ಲ..
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಇಂಥ ತೆವಲುಗಳ ಹಿಂದೆ ಬಿದ್ದರೇ ಬಲು ಮಜಾ ಅನ್ನಿಸುತ್ತೆ. ಅದನ್ನು ಇಷ್ಟಪಡುತ್ತೇನೆ ಕೂಡ. ಪ್ರತಿ ಸಲವೂ ಏನೋ ಮಾಡಲು ಹೋಗಿ ಏನೋ ಆಗಿಬಿಡುತ್ತೆ. ಏನೋನೊ ತಿಳಿದುಕೊಳ್ಳುತ್ತೇನೆ..ಆಗ ಅನ್ನಿಸುತ್ತೆ ಇದನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕು ಅಂತ...ಅದರ ಪ್ರತಿಫಲವೇ ಈ ಲೇಖನ...

ಮತ್ತೆ ಕಾಫಿ ಏಕಿಲ್ಲವೆಂದು ಕೇಳಿದಿರಿ...ಖಂಡಿತ ಕಾಫಿಯನ್ನು ಮಾರುತ್ತಾರೆ. ಆದರೆ ಕೇಳಿದರೇ ಮಾತ್ರ ಮತ್ತೊಂದು ಪ್ಲಾಸ್ಕಿನಲ್ಲಿರುವ ಹಾಲನ್ನು ಗ್ಲಾಸಿಗೆ ಹಾಕಿ ಜೊತೆಗೆ ನೆಸ್‌ಕೆಫೆ, ಅಥವ ಬ್ರೂ ಪುಡಿ ಬೆರೆಸಿ ಕೊಡುತ್ತಾರೆ. ಕೆಲವು ಹುಡುಗರು ಬಾದಾಮಿ ಹಾಲನ್ನು ಕೇಳಿದರೆ ಇದೇ ವಿಧಾನದಲ್ಲಿ ಮಾಡಿ ಕೊಡುತ್ತಾರೆ...

ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಟೀ ಲೇಖನದಿಂದ ನೀವು ಕಟ್ಟುವ ಮನೆಗಳ ಹತ್ತಿರ ಟೀ ತೆಗೆದು ಕೊಂಡು ಬರುವ ಹುಡುಗರನ್ನು ನೆನಪಿಸಿಕೊಂಡಿದ್ದೀರಿ. ಅವರ ಜೊತೆಗಿನ ಅನುಭವವನ್ನು ಹಂಚಿಕೊಳ್ಳಿ.. ಮತ್ತೆ ಹಾಸ್ಯ ನೆನಪನ್ನು ಬರೆಯಿರಿ...

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..

shivu.k said...

ಉಮೇಶ್ ದೇಸಾಯಿ ಸರ್,

ಚಹ ಪುಡಿಯಲ್ಲಿ ಕಟ್ಟಿಗೆ ಪುಡಿ ಮಿಕ್ಸ್ ಮಾಡುವ ವಿಚಾರ ನಾನು ಅನೇಕ ಹುಡುಗರಲ್ಲಿ ಕೇಳಿದ್ದೇನೆ...ಇಲ್ಲ ಸರ್ ಅಂದಿದ್ದಾರೆ...ನನಗೂ ಅವರು ಹಾಗೆಲ್ಲಾ ಮಾಡೋಲ್ಲವೆಂದು ನಂಬಿಕೆಯಿದೆ...

ನನ್ನ ಬರಹ ಮತ್ತು ಅಭಿರುಚಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಪರಂಜಪೆ ಸರ್,

ನಿಮ್ಮ ಪ್ರೋತ್ಸಾಹದ ಮಾತುಗಳು ನನಗೆ ಟಾನಿಕ್ ನೀಡಿದಂತೆ. ಮತ್ತಷ್ಟು ಹೊಸತನ್ನು ಹುಡುಕುವ ತೆವಲಿಗೆ ಸಿಕ್ಕಿಹಾಕಿಕೊಳ್ಳಲು ನಾನು ಸದಾ ಸಿದ್ದನಿದ್ದೇನೆ...

ಧನ್ಯವಾದಗಳು..

shivu.k said...

ಕನಸು,

ಧನ್ಯವಾದಗಳು.

Keshav.Kulkarni said...

ಶಿವು,
ನಾನು ಬೆಂಗಳೂರಿನವನಲ್ಲ, ಹಾಗಾಗಿ ಈ ಟೀ ಮರುವವರನ್ನು ಒಮ್ಮೆಯೂ ನೋಡಿಲ್ಲ. ಆದರೆ ನೀವು ತೋರಿಸಿಬಿಟ್ಟಿರಿ.
- ಕೇಶವ

ವನಿತಾ / Vanitha said...

ನಾನು ಹೇಳಿದುದು ಈ ತರ ಟೀ ಮಾರುವವರ ಬಗ್ಗೆ ಗೊತ್ತಿರಲಿಲ್ಲ ಎಂದು...ಯಾಕೆಂದರೆ ನನಗೆ ಬೆಂಗಳೂರ ಪರಿಚಯ ಜಾಸ್ತಿ ಇಲ್ಲ ಹಾಗಾಗಿ..ಬರೀ ರೈಲು ನಿಲ್ದಾಣಗಳಲ್ಲಿ ಟೀ ಮಾರುವವರ ಬಗ್ಗೆ ತಿಳಿದಿತ್ತು...ಹಾಗು ಟೀ ಮಾರುವವರನ್ನು ನಾನು ಮಂಗಳೂರು..ಮೈಸೂರಿನಲ್ಲಿ (2-3 ವರ್ಷಗಳ ಹಿಂದೆ ) ನೋಡಿರಲಿಲ್ಲ..Hope You got it..

ಕೃಷಿಕನ ಕಣ್ಣು said...

ಇವರು ಬರೀ ಟೀ ಮಾರುವವರು ಮಾತ್ರವಲ್ಲ, ವಿಧ್ಯಾರ್ಥಿಗಳಾಗಿದ್ದಾಗಲೇ ಮಾರ್ಕೆಟಿಂಗ್ ತಂತ್ರವನ್ನು ಆಲೋಚಿಸಿ ಆಳವಡಿಸಿಕೊಂಡವರು. ಅದರ ಜೊತೆಗೆ ಟೀ ಕುಡಿದು ಹಾಗೆ ಹೊರಟು ಹೋಗುವವರ ನಡುವೆ ಆ ಟೀ ಮಾರುವವರ ಕತೆಯನ್ನು ಸೂಕ್ಷ್ಮ ಕಣ್ಣಿನಿಂದ ಗುರುತಿಸಿ ಇಲ್ಲಿ ನಮ್ಮ ಸಾದ ಕಣ್ಣಿಗೆ ತೋರಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಜೊತೆಗೆ ಹೊಸತನ್ನು ಹುಡುಕುತ್ತಲೇ ಇರುವ ನಿಮ್ಮ ಸೂಕ್ಷ್ಮ ಕಣ್ಣಿಗೆ hats off !

ನಾಗೇಂದ್ರ ಮುತ್ಮುರ್ಡು.

ಸುಧೇಶ್ ಶೆಟ್ಟಿ said...

ತು೦ಬಾ ಇಷ್ಟವಾಯಿತು ಶಿವಣ್ಣ ಲೇಖನ.... ಪ್ರತಿಯೊಬ್ಬರಲ್ಲೂ ಭಿನ್ನತೆ ಇರುತ್ತದೆ ಅ೦ತ ಹೇಳುವುದು ಎಷ್ಟು ನಿಜ.... ಟೀ ಮಾರುವವರ ಹಿ೦ದೆಯೂ ಇಷ್ಟೊ೦ದು ಹಿನ್ನೆಲೆ ಎ೦ದು ಕಲ್ಪಿಸಿಯೂ ಇರಲಿಲ್ಲ....

ಕ್ಷಣ... ಚಿಂತನೆ... said...

ಸರ್‍, ಟೀ ಮಾರುವವರ ಜೀವನ, ಸಂಘರ್ಷ ಇವೆಲ್ಲವನ್ನೂ ಸೂಕ್ಷ್ಮವಾಗಿ ಚಿತ್ರಿಸಿದ್ದೀರಿ (ಲೇಖನದೊಂದಿಗೆ). ನಾನು ಒಂದೆರಡು ಬಾರಿ ಆಸ್ಪತ್ರೆಗಳಲ್ಲಿ (ಪದ್ಮನಾಭನಗರದಿಂದ ಸೀತಾ ಸರ್ಕಲ್‌ ತನಕ ಟೂವ್ಹೀಲರಿನಲ್ಲಿ) ಟೀ ತಂದು ಕೊಡುವವರನ್ನು ನೋಡಿದ್ದೆ. ಲೇಖನ ಮತ್ತು ಮಾಹಿತಿಗಾಗಿ ಧನ್ಯವಾದಗಳು.

shivu.k said...

ಆಹರ್ನಿಶಿ ಶ್ರೀಧರ್ ಸರ್,

ನಿಮ್ಮ ಚುಟುಕು ಕವನ ಚೆನ್ನಾಗಿದೆ.

ಟೀ ಬಗ್ಗೆ ನಾನು ಮತ್ತು ಮಲ್ಲಿಕಾರ್ಜುನ್ ಒಮ್ಮೆ ಮಾತಾಡಿಕೊಂಡಾಗ ಇಬ್ಬರೂ ಇದೇ ವಸ್ತುವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಿ, ಅದಕ್ಕೊಂದಿಷ್ಟು ಕೃಷಿಮಾಡಿ ಅನೇಕರಿಗೆ ಎಡತಾಕಿ ಸಿದ್ದಪಡಿಸಿದ್ದೇವೆ. ಮತ್ತೆ ಇಬ್ಬರು ಒಂದೇ ದಿನ ಬ್ಲಾಗಿಗೆ ಹಾಕಿದ್ದೇವೆ. ಪ್ರತಿಯೊಂದು ಲೇಖನವನ್ನು ಇಬ್ಬರೂ ಚರ್ಚಿಸಿದರೂ ಒಬ್ಬರ ಹ್ಯಾಂಗೋವರ್ ಇನ್ನೊಬ್ಬರ ಮೇಲೆ ಬೀಳದಂತೆ ಜಾಗ್ರತೆ ವಹಿಸುತ್ತೇವೆ..
ಇದರ ಪರಿಣಾಮವೇ ಒಂದೇ ವಿಚಾರದಲ್ಲಿ ಎರಡು ರೀತಿಯ ಲೇಖನಗಳು ಬಂದಿವೆ.

ಧನ್ಯವಾದಗಳು.

shivu.k said...

ಪ್ರಭು,

ನಿಮ್ಮ ಪ್ರತಿಕ್ರಿಯೆ ನನಗೆ ಖುಷಿ ತಂದಿದೆ. ನಿಮ್ಮ ಆಟೋದವನ ಆನುಭವವನ್ನು ಹಂಚಿಕೊಂಡಿದ್ದೀರಿ..ನಿಜಕ್ಕೂ ಅವರು ಮಾಡುವ ಕೆಲಸವನ್ನು enjoy ಮಾಡುತ್ತಾರೆ. ಅವರ ಬಗ್ಗೆ ಇಲ್ಲದ ಕಲ್ಪನೆಯನ್ನು ಇಟ್ಟುಕೊಳ್ಳುವುದು ನಾವೇ ಅಲ್ಲವೇ.

ಒಂದೆರಡು ರೂಪಾಯಿ ಟೀ ನಿಜಕ್ಕೂ ಬಲು ಮಜಕೊಡುತ್ತೆ..
ಧನ್ಯವಾದಗಳು.

shivu.k said...

ಚಂದ್ರಕಾಂತ ಮೇಡಮ್,

ಟೀ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಮಾಡುವ ಕೆಲಸದಲ್ಲಿ ವ್ಯತ್ಯಾಸವಿರಬಹುದೇ ವಿನಃ ಅಲ್ಲಿ ಮೇಲು ಕೀಳೆಂಬ ಅಭಿಪ್ರಾಯವಿಲ್ಲವೆನ್ನುವ ನಿಮ್ಮ ಮಾತನ್ನು ಆಕ್ಷರಶಃ ಒಪ್ಪುತ್ತೇನೆ.

ವಿದೇಶಿ ವಿದ್ಯಾರ್ಥಿಗಳ ಕಾಯಕದ ಬಗ್ಗೆ ನೀವು ತಿಳಿಸಿರುವ ವಿಚಾರ ಈ ಲೇಖನಕ್ಕೆ ತುಂಬಾ ಪೂರಕವಾಗಿದೆ.
ಅವರಲ್ಲಿ ಇರುವ ಒಳ್ಳೇ ಮತ್ತು ಗೌರವದ ಭಾವನೆ ನಮ್ಮಲ್ಲಿ ಯಾಕೆ ಬರುವುದಿಲ್ಲವೋ ನನಗೆ ಗೊತ್ತಾಗುತ್ತಿಲ್ಲ...

ಧನ್ಯವಾದಗಳು.

shivu.k said...

ಧರಿತ್ರಿ,

ಇಂಥ ಕೆಲಸವನ್ನು ಮಾಡುವವರೇ ಜೀವನದಲ್ಲಿ ಬದುಕನ್ನು ಕಂಡುಕೊಳ್ಳುವದೆನ್ನುವ ನಿನ್ನ ಅಭಿಪ್ರಾಯ ನನಗೆ ತುಂಬಾ ಇಷ್ಟವಾಯಿತು. ಬದುಕಿನ ಕಷ್ಟ ಏನೆಲ್ಲಾ ಕಲಿಸಿಕೊಡುತ್ತೇ ಅಲ್ವಾ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

shivu.k said...

ಬಾಲು ಸರ್,

ನನ್ನ ಕ್ಯಾಮೆರಾ ಕಣ್ಣು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....

shivu.k said...

ಪ್ರದೀಪ್,

ಸಮೋಸ ಮಾರುವವನ ನೆನಪು ಮರುಕಳಿಸಿದ ವಿಚಾರ ಹೇಳಿದ್ದೀರಿ..ನನ್ನ ಲೇಖನವನ್ನು ಮೆಚ್ಚಿದ್ದೀರಿ. ಮತ್ತೆ ನೀವು ಹೇಳಿದ ಹಾಗೆ ಮಹಾಕವಿ ಕುವೆಂಪು ರಸ್ತೆ ಪರಿಸ್ಥಿತಿಯಂತೂ ತೀರ ಹದಗೆಟ್ಟಿರುವುದಂತೂ ನಿಜ...ಹೀಗೆ ಬರುತ್ತಿರಿ.

ಧನ್ಯವಾದಗಳು.

shivu.k said...

ಕುಲಕರ್ಣಿ ಸರ್,

ಹೊರನಾಡಿನ ಗೆಳೆಯರಿಗೆ ನಮ್ಮೂರಿನ ಪ್ರತಿಯೊಂದು ವಿಚಾರವನ್ನು ಬೇರೆ ದೃಷ್ಟಿಕೋನದಲ್ಲಿ ನೋಡಬೇಕೆನ್ನುವುದು ನನ್ನ ಆಸೆ. ಅದರಲ್ಲಿ ಎಷ್ಟು ಸಫಲನಾಗುತ್ತೀನೋ ಗೊತ್ತಿಲ್ಲ. ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

shivu.k said...

ವನಿತಾ,

ನಾನು ಸುಮ್ಮನೇ ತಮಾಷೆಯ ಉತ್ತರ ನೀಡಿದ್ದೆ. ಬೇಸರಿಸಬೇಡಿ. ರೈಲು ನಿಲ್ದಾಣಗಳಲ್ಲಿ ಟೀ ಮಾರುವ ಹುಡುಗರ ಪರಿಸ್ಥಿತಿಯೇ ಬೇರೆ, ಇವರ ಪರಿಸ್ಥಿತಿಯೇ ಬೇರೆ.
ಮತ್ತೊಮ್ಮೆ ಬ್ಲಾಗಿಗೆ ಬಂದು ನಿಮ್ಮ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

shivu.k said...

ನಾಗೇಂದ್ರ ಮುತ್ಮರ್ಡು,

ನೀವು ನಮ್ಮ ಮನೆಗೆ ಬಂದು ಈ ಲೇಖನ ಓದಿ ಪ್ರತಿಕ್ರಿಯೆ ನೀಡಿದ್ದೀರಿ..ಧನ್ಯವಾದಗಳು. ಫೋಟೋಗ್ರಫಿ ವಿಚಾರದಲ್ಲಿ ನಿಮ್ಮಲ್ಲೂ ಒಳಗಣ್ಣು ಹೆಚ್ಚು ಕ್ರಿಯಾಶೀಲವಾಗುತ್ತದೆ. ಅದನ್ನು ನಿಮ್ಮ ಫೋಟೋಗಳು ನಿದರ್ಶನ.

shivu.k said...

ಸುಧೇಶ್,

ಲೇಖನದಲ್ಲಿ ಟೀ ಮಾರುವವರ ವಿಭಿನ್ನತೆ, ಹಿನ್ನಲೆ ಗುರುತಿಸಿದ್ದೀರಿ..ಹೀಗೆ ಬರುತ್ತಿರಿ..

ಧನ್ಯವಾದಗಳು.

shivu.k said...

ಕ್ಷಣಚಿಂತನೇ ಸರ್,

ಲೇಖನದ ಪಾತ್ರಧಾರಿಗಳ ಒಳಹೊರಬದುಕನ್ನು ನೀವು ಗುರುತಿಸಿದ್ದು ನನಗೆ ಖುಷಿಯಾಯಿತು. ನಿಮ್ಮ ಆನುಭವವನ್ನು ಹಂಚಿಕೊಂಡಿದ್ದೀರಿ ಹೀಗೆ ಬರುತ್ತಿರಿ..

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಶಿವೂ ಸರ್,
ಯಾವ ಕೆಲಸವೂ ಕೀಳಲ್ಲ ಮಾಡುವ ಮನಸ್ಸಿರಬೇಕು ಅಷ್ಟೇ.
ನಾವು ಮನೆಯ ಗೋಡೆ ಗೆ ಮೊಳೆ ಹೊಡೆಯಲೂ ಇನ್ನೊಬ್ಬರನ್ನು ಕರೆಯುತ್ತೇವೆ. ಪಾಶ್ಚಾತ್ಯ ದೇಶಗಳಲ್ಲಿ ಅವರವರ ಕೆಲಸ ಅವರವರೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಸ್ವಾವಲಂಬಿ ಜೀವನ ಅವರಿಗೆ ಹುಟ್ಟಿನಿಂದಲೇ ಬಂದಿದೆ. ನಮ್ಮಲ್ಲಿ ಒಣ ಪ್ರತಿಷ್ಠೆ ಮುಖ್ಯ. ಇದರ ಮಾಡುವೆ ಇಂಥಹ ಟಿ ಮಾರುವವರು, ತರಕಾರಿ ಮಾರುವವರು, ಚಪ್ಪಲಿ ಮಾರುವವರು , ಕಸ ಗುಡಿಸುವವರು ಸಿಗುತ್ತಾರೆ. ನಿಜವಾದ ನಮ್ಮತನ ಇರುವುದು ಅವರಲ್ಲಿಯೇ. ಅವರಿಗೆ ಅವರ ಕೆಲಸದಲ್ಲಿ ತ್ರಪ್ತಿಯಿದೆ. ಸಂಬಳ ಜಾಸ್ತಿ ಸಿಗುತ್ತದೆ ಎಂದು ಕಂಪನಿ ಬದಲಿಸುವ ಊಸರವಳ್ಳಿ ಸ್ವಭಾವ ಅಲ್ಲ. ದುಡಿದಷ್ಟರಲ್ಲಿ ಸುಖ ಕಾಣುವ ಮನೋಭಾವ ಅವರದ್ದು. ಅವರೆಂದೂ ಹಣವಿಲ್ಲ ಎಂದೂ ಮರುಗುವುದಿಲ್ಲ. ನಾವೋ ಸದಾ ಅತ್ರಪ್ತಿಯ ಗೂಡು ಆಗಿರುತ್ತೇವೆ.
''ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ'' ಅಂತಿರಾ?
ಒಳ್ಳೆಯ ಲೇಖನ. ಇಂತಹವರ ಬಾಳು ನಮಗಿಂತ ತುಂಬಾ ಉನ್ನತವಾಗಿದೆ ಅನಿಸುತ್ತೆ.

Unknown said...

ಸರಿಯಾಗಿ ಹೇಳಿದ್ರಿ.. ಉತ್ತಮ ಲೇಖನ....

ಮನಸು said...

nimma lekhana bahala chennagide...

ಚಿತ್ರಾ said...

ಶಿವೂ,

ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ಓದುತ್ತಿದ್ದೇನೆ. ಟೀ ಮಾರುವವರ ಕಥೆಯನ್ನು ಚೆನ್ನಾಗಿ ಚಿತ್ರಿಸಿದ್ದೀರಿ. ಶಬ್ದಗಳಲ್ಲಿ ಹಾಗೂ ಫೋಟೋಗಳಲ್ಲಿ. ಇಷ್ಟವಾಯ್ತು. ನಿಮ್ಮ ಹಳೆಯ ಲೇಖನಗಳನ್ನೆಲ್ಲ ಇನ್ನೂ ಓದಬೇಕಿದೆ.

PaLa said...

ಶಿವು,
ಚಹಾ ಮಾರುವವರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಮಾಡುವ ಕೆಲಸದ ಬಗ್ಗೆ ಕೀಳು ಅಭಿಪ್ರಾಯ ಬೆಳೆಸಿಕೊಳ್ಳಬಾರದು ಎಂದು ಪ್ರತಿಕ್ರಿಯಿಸಿದವರು, ನೀವು ಈಗಾಗಲೇ ತಿಳಿಸಿದ್ದೀರಿ. ಈ ರೀತಿ ಚಹಾ ಮಾರಾಟದಿಂದಾಗಿ ಆಗುವ ಒಂದು ಕೆಟ್ಟ ಪರಿಣಾಮದ ಬಗ್ಗೆ ಗಮನ ಸೆಳೆಯುವ ಉದ್ದೇಶವಿದೆ. ನಾನು ನೋಡಿದಂತೆ ಇವರು ಚಹಾ ಹಾಕಲು ಚಿಕ್ಕ ಪುಟ್ಟ ಪ್ಲಾಸ್ಟಿಕ್ ಕಪ್ಪುಗಳನ್ನು ಬಳಸುವರು. ಇದನ್ನು ಮರುಬಳಸುವಂತಿಲ್ಲ, ಅಲ್ಲದೇ ನೀವು ತಿಳಿಸಿದಂತೆ ರಸ್ತೆ, ಸಾರ್ವಜನಿಕ ಸ್ಥಳ ಎಲ್ಲಾ ಕಡೆಯೂ (ಲಾಲ್ ಬಾಗನ್ನೂ ಒಳಗೊಂಡಂತೆ) ಪ್ಲಾಸ್ಟಿಕ್ ಕಪ್ಪು ಹಿಡಿದುಕೊಂಡು ತಿರುಗುವ ಇವರನ್ನು ನೋಡುವುದು ಸುಲಭ. ಜನರು ಕುಡಿದ ಕಪ್ಪನ್ನು ಎಲ್ಲೆಂದರಲ್ಲಿ ಬಿಸಾಡುವುದು ಅತ್ಯಂತ ಬೇಸರದ ಸಂಗತಿ. ಈ ರೀತಿ ಪರಿಸರ ಮಾಲಿನ್ಯ ಮಾಡುವುದಕ್ಕಿಂತ ಇಂತಹ ಚಹಾ ಕುಡಿಯದೆಯೋ/ಮನೇಲಿ ಮಾಡಿಕೊಂಡೋ ಹೋಟೆಲಿನಲ್ಲೋ ಕುಡಿವುದು ಉತ್ತಮ ಎಂದು ನನ್ನನಿಸಿಕೆ.

Naveen ಹಳ್ಳಿ ಹುಡುಗ said...

ಶಿವಣ್ಣ... ಟೈ ಕಟ್ಟಿಕೊಂಡ marketing executives ಗಿಂತ ನಮ್ಮ ಟೀ ಮಾರುವ ಹಿರಿಯರ strategy ಅದ್ಬುತವಾಗಿದೆ.. ಒಂದು ಹೊಸ ಪ್ರಪಂಚದ ಬಗ್ಗೆ ಹಾಗು ಟೀ ಮಾರುವ ಹುಡುಗರ ಬಗ್ಗೆ ನಿಮ್ಮ ಕಾಳಜಿ ನನಗೆ ತುಂಬಾ ಇಷ್ಟವಾಯಿತು.. ಲೇಖನ ಅರ್ಥಪೂರ್ಣವಾಗಿದೆ...

Umesh Balikai said...

ಶಿವು ಸರ್,

ಇಂತಹ ಜನಸಾಮಾನ್ಯರಿಂದಲೇ ನಾವು ಎಷ್ಟೋ ಜೀವನ ಪಾಠಗಳನ್ನು ಕಲಿಯಬಹುದು. ನಾನು ಹನ್ನೆರಡನೆಯ ತರಗತಿ ಓದುತ್ತಿದ್ದಾಗ ನಮ್ಮ ಹಾಸ್ಟೆಲಿಗೆ ಇಡ್ಲಿ ಮಾರುವವನೊಬ್ಬ ಬರುತ್ತಿದ್ದ.. ಎರಡೂವರೆ ರೂಪಾಯಿಗೆ ಎರಡು ರುಚಿಯಾದ ಇಡ್ಲಿ ಕೊಟ್ಟು ಹೋಗುತ್ತಿದ್ದ.. ನಿಮ್ಮ ಬರಹ ಓದಿದಾಗ ಸದಾ ಹಸನ್ಮುಖಿಯಾದ ಆಟ ನೆನಪಾದ.

ಎಂದಿನ ಚಂದದ ಬರಹಕ್ಕೆ ಅಭಿನಂದನೆಗಳು

shivu.k said...

ಗುರುಮೂರ್ತಿ ಹೆಗಡೆ ಸರ್,

ನಾವು ಏನನ್ನು ಅನುಸರಿಸದಿದ್ದರೂ ವಿದೇಶಿಗರ ಕೆಲಸ ಮಾಡುವ ರೀತಿಯನ್ನು ಖಂಡಿತ ಕಲಿಯಲೇಬೇಕು. ಅವರಲ್ಲಿ ಮೇಲು ಕೀಳು ಎನ್ನುವ ಭಾವನೆಗಳಿಲ್ಲದೇ ಎಲ್ಲಾ ಕೆಲಸವನ್ನು ಮಾಡುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕಲ್ವೇ...

ಲೇಖನವನ್ನು ಓದಿ ಮೆಚ್ಚಿದ್ದೀರಿ ಜೊತೆಗೆ ವಿಧೇಶಿ ಆನುಭವವನ್ನು ಹೇಳೀದ್ದೀರಿ...ಧನ್ಯವಾದಗಳು..

shivu.k said...

ರವಿಕಾಂತ್ ಗೋರೆ ಸರ್,

ಧನ್ಯವಾದಗಳು.

shivu.k said...

ಸುಗುಣ ಮೇಡಮ್,

ಧನ್ಯವಾದಗಳು...ಹೀಗೆ ಬರುತ್ತಿರಿ...

Guruprasad said...

ಶಿವೂ,
ಒಳ್ಳೆ ಲೇಖನ,,,, ಟೀ ಮಾಡುವವರ ಬಗ್ಗೆ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡ ಬರೆದಿದ್ದೀರ.....ಇದರ ಬಗ್ಗೆ ನಾನು ಕೆಲವು ಸಲ ಯೋಚನೆ ಮಾಡಿದ್ದೆ.....ನಮ್ಮ ಮನೆ ಹತ್ರ ಹೊಸ ಮನೆ ಕಟ್ಟುತ ಇದ್ದರು,, ಅವರ ಬಳಿಗೆ,, ಬೆಳಿಗ್ಗೆ ಹಾಗೆ ಸಂಜೆ, ಟೀ ಮಾಡುವ ಹುಡುಗ ಬರುತ್ತಿದ್ದ. ೧ ಅಥವಾ ೨ ರೂ ಗಳಿಗೆಲ್ಲ ಕೊಟ್ಟು ಹಾಗೆ ಮುಂದೆ ಅಂಗಡಿಗಳಿಗೆ ಕೊಡುತ್ತಿದ್ದ. ಇವರನ್ನು ನೋಡುತ್ತಾ ನಾನು ಸ್ವಲ್ಪ ಯೋಚನೆಗೆ ಬಿದ್ದಿದ್ದೆ.. ಇವರ ಎಲ್ಲಿಂದ ಮಾಡಿಕೊಂಡು ಬರುತ್ತಾರೆ....ಹೇಗೆ ಇವರ ಜೀವನ ಎಂದೆಲ್ಲ.. ನಿಮ್ಮ ಬ್ಲಾಗಿನ ಲೇಖನ ನೋಡಿದ ಮೇಲೆ ಇವರ ದಿನಚರಿ ಎಲ್ಲ ತಿಳಿಯುವಂತಾಯಿತು,,, ವೆರಿ ನೈಸ್...
ನಾನು ಕೆಲವು ಸಲ ನಮ್ಮ ಆಫೀಸಿನ (ಮಣಿಪಾಲ ಆಸ್ಪತ್ರೆ ಹತ್ರ ) ಇ ಟೀ ಮಾಡುವವರ ಹತ್ರ ಟೀ ನ ಕುಡಿದ್ದಿದೇನೆ,,, ginger ಟೀ ತುಂಬ ಚೆನ್ನಾಗಿ ಇರುತ್ತೆ,, ಮತ್ತೆ ಒಂದೇ ಟೀಸ್ಟ್ ಇರುತ್ತೆ, ಆದರೆ ಬೇರೆ ಕಾದೆನು ಇದೆ ಟೇಸ್ಟ್ ಇರುತ್ತೆ ಅನ್ನೊಂದು ಗೊತ್ತಿಲ್ಲ....
ಕಷ್ಟ ಜೀವಿಯ ಅರ್ಥ ಪೂರ್ಣ ಲೇಖನಕ್ಕೆ ಧನ್ಯವಾದಗಳು.....
ಗುರು

shivu.k said...

ಚಿತ್ರಾ ಮೇಡಮ್,

ಮತ್ತೆ ನನ್ನ ಬ್ಲಾಗಿಗೆ ಸ್ವಾಗತ. ಟೀ., ಮಾರುವವರ ಲೇಖನವನ್ನು ಓದಿ ಇಷ್ಟಪಟ್ಟಿದ್ದೀರಿ. ಬಿಡುವು ಮಾಡಿಕೊಂಡು ಉಳಿದ ಲೇಖನವನ್ನು ಓದುತ್ತೇನೆ ಎಂದಿದ್ದೀರಿ...ಧನ್ಯವಾದಗಳು.

shivu.k said...

ಪಾಲಚಂದ್ರ,

ನಿಮ್ಮ ಅಭಿಪ್ರಾಯ ಸ್ವಲ್ಪ ವಿಭಿನ್ನವೆನಿಸಿದರೂ ಇಷ್ಟವಾಯಿತು. ಬೇರೆ ರೀತಿಯಲ್ಲಿ ಈ ರೀತಿ ಯೋಚಿಸುವವರನ್ನು ಕಂಡರೇ ನನಗೆ ಇಷ್ಟವಾಗುತ್ತದೆ. ಪ್ಲಾಸ್ಟಿಕ್ ಲೋಟಗಳಿಂದಾಗುವ ಪರಿಸರ ತೊಂದರೆಯ ಬಗ್ಗೆ ಚೆನ್ನಾಗಿ ಗಮನ ಸೆಳೆದಿದ್ದೀರಿ...ನಿಮ್ಮ ಆಸೆಯೇ ನನ್ನ ಆಸೆ. ಅದರೇ ಆ ರೀತಿ ನಡೆದುಕೊಳ್ಳಲು ಜನರಿಗೆ ಮನಸ್ಸಿಲ್ಲವೆಂಬುದನ್ನು ಲೇಖನದಲ್ಲಿ ನಾನು ಬರೆದಿದ್ದೇನೆ. ಹಾಗೆ ಇರುವುದರಿಂದಲೇ ಇಂಥವರು ಹುಟ್ಟಿಕೊಳ್ಳುವುದು. ಮಾರುಕಟ್ಟೆ ಎಲ್ಲಿರುತ್ತದೋ ಅಲ್ಲೇ ವಸ್ತುಗಳು ಹುಟ್ಟಿಕೊಳ್ಳುತ್ತವೆ. ಜನ ಬದಲಾದರೇ ನಿಮ್ಮ ಆಸೆ ಈಡೇರಬಹುದು...ಆದ್ರೂ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ನವೀನ್,

ಟೀ ಮಾರುವ ಹುಡುಗರ ಬುದ್ಧಿವಂತಿಕೆಯ ಜೊತೆಗೆ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ....

shivu.k said...

ಉಮೇಶ್ ಸರ್,

ನಿಮ್ಮ ಮಾತು ನಿಜ. ಇಂಥವರಿಂದಲೇ ನಾವು ನಮ್ಮ ನಡುವಳಿಕೆಯನ್ನು ತಿದ್ದಿಕೊಳ್ಳಬಹುದು. ಇಡ್ಲಿ ಮಾರುವವನ ಅನುಭವವನ್ನು ಹಂಚಿಕೊಂಡಿದ್ದೀರಿ...ಧನ್ಯವಾದಗಳು..

shivu.k said...

ಗುರು,

ಈ ಹುಡುಗರು ಹೆಚ್ಚಾಗಿ ಮನೆಕಟ್ಟುವ, ರಸ್ತೆ ಕೆಲಸ, ಇತ್ಯಾದಿಗಳಲ್ಲಿ ಜಾಗಗಳಲ್ಲಿ ಓಡಾಡುವುದೇಕೆಂದರೇ ಅವರಿಗೆ ಕೂಲಿ ಕೆಲಸ ಮಾಡುವವರೇ ಮುಖ್ಯ ಗ್ರಾಹಕರು. ಅವರಲ್ಲಿ ಕೆಲವರು ವೈರೈಟಿಯಾದ ರುಚಿಯಲ್ಲಿ ಟೀ ಮಾಡುತ್ತಾರೆ. ಪ್ರತಿನಿತ್ಯದ ಟೀ ಮಾತ್ರ ರುಚಿ ಬದಲಾಗದಿರುವುದು ನನಗೆ ಆಶ್ಚರ್ಯ ಸಂಗತಿಯಾಗಿದೆ. ಬೇಕಾದರೇ ನೀವು ಪ್ರಯತ್ನಿಸಿ ನೋಡಿ....
ಚಿತ್ರ-ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ವಿನುತ said...

ಅರ್ಥವತ್ತಾದ ಲೇಖನ. ಮಾಡುವ ಮನಸಿದ್ದರೆ ಯಾವ ಕೆಲಸವೂ ಆಗಬಹುದು ಎ೦ಬುದನ್ನು ಚೆನ್ನಾಗಿ ಹೇಳಿದ್ದೀರಿ. ಆದರೆ ಪ್ಲಾಸ್ಟಿಕ್ ಲೋಟಗಳ ಬದಲು, bio-degradable ಲೋಟಗಳನ್ನು ಬಳಸುವ೦ತೆ ಇವರಿಗೆ ತಿಳುವಳಿಕೆ ಹೇಳಬಹುದೇನೋ ಅನ್ನಿಸಿತು. ಅಷ್ಟೆಲ್ಲಾ ತಿಳಿದುಕೊ೦ಡಿರುವವರಿಗೆ, ಇದೊ೦ದು ವಿಷಯವನ್ನು ತಿಳಿದುಕೊಳ್ಳುವುದು ಕಷ್ಟವಾಗಲಾರದು.

shivu.k said...

ವಿನುತಾ,

ಟೀ ಮಾರುವವರ ಬಗೆಗಿನ ಲೇಖನಕ್ಕೆ ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...ಮತ್ತು ನೀವು ಹೇಳಿದ ಸಲಹೆಯನ್ನು ನಾನು ಟೀ ಮಾರುವವರಿಗೆ ತಿಳಿವಳಿಕೆ ನೀಡಿ ಬದಲಾಯಿಸಲು ಪ್ರಯತ್ನಿಸುತ್ತೇನೆ. ಇಂಥ ಉತ್ತಮ ಸಲಹೆ ಕೊಟ್ಟ ನಿಮಗೆ ಧನ್ಯವಾದಗಳು...

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಜೀವನ ಪ್ರೀತಿ ಅಂದರೆ ಇದೇನಾ... ಬಹುಶಃ ಇದೇ ಅನ್ನಿಸುತ್ತೆ.
ಇಡೀ ಲೇಖನ ಮತ್ತು ಅದರಲ್ಲಿರುವ ಸಮಾಜ ಮುಖಿ ಆಲೋಚನೆ ಇಷ್ಟವಾಯಿತು, ನಾವಾಯಿತು ನಮ್ಮ ಕೆಲಸವಾಯಿತು ಎಂಬಂತೆ ಕಳೆದು ಹೋಗುತ್ತಿರುವ ಈ ಹೊತ್ತಲ್ಲಿ, ಇನ್ನೊಂದು ವರ್ಗದ ಜನರ ಬಗೆಯು ನಿಮಗಿರುವ ಆಸಕ್ತಿ ಮತ್ತು ಕಾಳಜಿ ಪ್ರೀತಿಯುತವಾಗಿದೆ. ಬರಹದ ನಡುವಲ್ಲಿ ಕಾಣಿಸುವ ಫೋಟೋಗಳು ಕೂಡ ಒಂದೊಂದು ಕಥೆ ಹೇಳುತ್ತಿರುವಂತಿದೆ.

shivu.k said...

ರಾಜೇಶ್,

ಜೀವನದ ಬಗ್ಗೆ ನೀವು ಕೇಳಿದ ಪ್ರಶ್ನೆ ಮತ್ತು ಉತ್ತರ ಎರಡಕ್ಕೂ ನನ್ನದೂ ಅದೇ ಉತ್ತರ...ಹೌದಲ್ವ...ಜೀವನದ ಮತ್ತೊಂದು ಮುಖಗಳನ್ನು ನೋಡುವುದರಲ್ಲಿ ಏನೋ ಒಂದು ರೀತಿಯ ಆನಂದವಿದೆ...ಇತ್ತೀಚಿಗೆ ಏಕೆ ಈ ತೆವಲು ಬಂದಿದಿಯೋ ನಾ ಕಾಣೆ.. ಲೇಖನದ ಜೊತೆ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..