Tuesday, June 9, 2009

ಗ್ರಾಮೀಣ ಪ್ರತಿಭೆ ನಾಗೇಂದ್ರರವರಿಗೆ ಅಭಿನಂದನೆಗಳು.

ನಾಗೇಂದ್ರ ಮುತ್ಮುರ್ಡು.



ಇದೊಂದು ಸಂತೋಷದ ವಿಚಾರ. ಆತ್ಮೀಯ ಗೆಳೆಯ ನಾಗೇಂದ್ರ ಮುತ್ಮರ್ಡು ಬೆಹರೇನಿಗೆ ಹೋಗುತ್ತಿದ್ದಾರೆ. ಆ ದೇಶದ ರಾಜಧಾನಿ ಮನಾಮ ನಗರದಲ್ಲಿರುವ "ಸಾರ್ಥ ಪೌಂಡೇಶನ್" ಅವರು ಐದು ಜನಕ್ಕೆ ದಿನಾಂಕ ೧೨-೬-೨೦೦೯ ರಂದು ವಿವಿಧ ರಂಗದಲ್ಲಿ ಸಾಧನೆ ಮಾಡಿರುವ ಐದು ಜನ ಪ್ರತೀಭಾವಂತರಿಗೆ ಸನ್ಮಾನಿಸುತ್ತಿದ್ದಾರೆ. ಅದರಲ್ಲಿ ನಾಗೇಂಧ್ರ ಮುತ್ಮರ್ಡು ಕೂಡ ಒಬ್ಬರು.

ಇದ್ದ ಜಾಗದಲ್ಲೇ ಗಟ್ಟಿಯಾಗಿ ಬೇರೂರಿ ಏನಾದರೂ ಸಾಧಿಸಬೇಕೆಂದು ನಿರ್ಧರಿಸಿ ತನ್ನ ಊರಿನ ಆಡಿಕೆ ತೋಟ, ಹತ್ತಿರದ ಸಣ್ಣ ಹೊಳೆಯನ್ನೇ ತನ್ನ ಸ್ವಾಭಾವಿಕ ಸ್ಟುಡಿಯೋ ಮಾಡಿಕೊಂಡು, ತನ್ನೂರಿನ ಒಂಬತ್ತು ಮನೆಯ ಮಕ್ಕಳ ಆಟ ಪಾಟವನ್ನೇ ತನ್ನ ಫೋಟೋಗ್ರಫಿಯ ವಸ್ತುವನ್ನಾಗಿ ಬಳಸಿಕೊಂಡಿರುವ ಈತ ಅತ್ಯುತ್ತಮ ಪಿಕ್ಟೋರಿಯಲ್ ಫೋಟೋಗ್ರಾಫರ್. ನೆರಳು-ಬೆಳಕಿನ ಹೊಂದಾಣಿಕೆಯಲ್ಲಿ ಒಳ್ಳೆಯ ಹಿಡಿತ ಸಾಧಿಸಿರುವ ನಾಗೇಂದ್ರ ಒಳ್ಳೆಯ ಬರಹಗಾರರೂ ಹೌದು. ಆವರ ಹಳ್ಳಿಯಲ್ಲಿ ಅಂತರಜಾಲ ಸೌಕರ್ಯವಿದ್ದಿದ್ದರೇ ಇಷ್ಟು ಹೊತ್ತಿಗೆ ಆವರ ಸಹಜ ಶೈಲಿಯ ಬರವಣಿಗೆಯ ಜೊತೆಗೆ ಅತ್ಯುತ್ತಮ ಫೋಟೋಗಳನ್ನು ಆವರ ಬ್ಲಾಗಿನಲ್ಲಿ ನಾವೆಲ್ಲಾ ನೋಡಿ ಸಂತೋಷ ಪಡುತ್ತಿದ್ದವೇನೋ. ಇವರ ಅನೇಕ ಚಿತ್ರ-ಲೇಖನಗಳು ಪ್ರಜಾವಾಣಿ, ಸುಧಾ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈಗಲೂ ಆಗುತ್ತಿವೆ.

ಕಾನ್ಸೂರಿನ ಹತ್ತಿರದ ಮುತ್ಮರ್ಡು ಇವರ ಹಳ್ಳಿ. ಪದವೀದರನಾದರೂ ನಗರದ ಆಸೆಯನ್ನು ಬಿಟ್ಟು ಇದ್ದ ಜಾಗದಲ್ಲೇ ಬದುಕನ್ನು ಕಂಡುಕೊಳ್ಳುವುದರ ಜೊತೆಗೆ ಫೋಟೋಗ್ರಫಿ ಸಾಧನೆಯನ್ನು ಅಲ್ಲಿಯೇ ಮಾಡಿರುವುದು ಇವರ ಹೆಗ್ಗಳಿಕೆ. ಕಳೆದ ಹದಿನೈದು ವರ್ಷಗಳಿಂದ ಹವ್ಯಾಸಿ ಛಾಯಾಗ್ರಾಹಕರಾಗಿ ಮುಂಬೈ, ಕಲ್ಕತ್ತ, ಇಂದೋರ್, ಬೆಂಗಳೂರು, ಲಕ್ನೋ ಮುಂತಾದ ಸ್ಥಳಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ಥಿಗಳು, ಆಷ್ಟ್ರೀಯಾ, ಹಾಂಗ್‌ಕಾಂಗ್‌ನಲ್ಲಿ ಅಂತರರಾಷ್ಟ್ರೀಯ ಬಹುಮಾನಗಳನ್ನು ಗಳಿಸಿದ್ದಾರೆ. ಬೆಂಗಳೂರಿನಿಂದ ಸುಮಾರು ೫೦೦ ಕಿಲೊಮೀಟರ್ ದೂರದ ಸಿರಸಿ ತಾಲ್ಲುಕಿನಲ್ಲಿದ್ದರೂ ನಾವು ನಿತ್ಯ ಅಕ್ಕಪಕ್ಕದ ಮನೆಯವರಂತೆ ಫೋಟೋಗ್ರಫಿ ವಿಚಾರವಾಗಿ ಗಂಟೆಗಟ್ಟಲೇ ಮಾತಾಡಿಕೊಳ್ಳುತ್ತಿರುತ್ತೇವೆ. ಕಳೆದ ಮೂರು ವರ್ಷಗಳಿಂದ ನಾವು ಮೂವರು ಅನೇಕ ಬಾರಿ ಒಟ್ಟೊಟ್ಟಿಗೆ ಫೋಟೋಗ್ರಫಿ ಮಾಡಿದ್ದೇವೆ...ಅದರ ಸಂಭ್ರಮವನ್ನು ಅನುಭವಿಸಿದ್ದೇವೆ.

ಈ ವರ್ಷ ನನಗೆ ಮತ್ತು ಮಲ್ಲಿಕಾರ್ಜುನ್‍ಗೆ ARPS ಅಂತರರಾಷ್ಟ್ರೀಯ ಮನ್ನಣೆ ಸಿಕ್ಕಿದಾಗ ಆವರು ತನಗೆ ಸಿಕ್ಕಷ್ಟು ಸಂಭ್ರಮ ಪಟ್ಟಿದ್ದರು.. ಇದೇ ವರ್ಷವೇ ಆತನಿಗೆ ಇಂಥ ಸನ್ಮಾನ ವಿದೇಶದಲ್ಲಿ ನಡೆಯುತ್ತಿರುವುದರಿಂದ ಸಂಭ್ರಮಿಸುವ ಸರದಿ ನಮ್ಮದು. ಇವರು ಆದಿಕೈಲಾಸ ಮತ್ತು ಕೈಲಾಸ ಮಾನಸ ಸರೋವರಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಕ್ಲಿಕ್ಕಿಸಿದ ಅವರ ಚಿತ್ರಗಳೊಂದಿಗೆ ಅವರಿಗೆ ನಮ್ಮೆಲ್ಲರ ಅಭಿನಂದನೆಗಳು.



ಲೇಖನ
ಶಿವು.ಕೆ ARPS.

25 comments:

Ittigecement said...

ಶಿವು ಸರ್....

ತುಂಬಾ ಖುಷಿಯಾಗ್ತಾ ಇದೆ....

ನಾಗೇಂದ್ರ ಮುತ್ಮುರ್ಡು ಅವರನ್ನು ನಾನು ತುಂಬ ಹತ್ತಿರದಿಂದ ಬಲ್ಲೆ....
ಅವರ ಬಗೆಗೆ ನಾನೂ ಕೂಡ ಒಮ್ಮೆ ನನ್ನ ಬ್ಲಾಗಿನಲ್ಲಿ
ಲೇಖನ ಬರೆದಿದ್ದೆ....

"ಹೀಗೊಂದು ಕಾಗೆ ಪುರಾಣ" ದಲ್ಲಿ..

ವರೊಂದು ಅದ್ಭುತ ಪ್ರತಿಭೆ...
ಕಷ್ಟ ಜೀವಿ....
ದಿನ ನಿತ್ಯ ಹೊಲದಲ್ಲಿ, ತೋಟದಲ್ಲಿ ದುಡಿಯುತ್ತಾರೆ...
ಅವರು ಪ್ರಗತಿಪರ ರೈತರೂ ಕೂಡ...

ಅವರ ವೆನಿಲಾ ಬೆಳೆಗೆ ಪ್ರಶಸ್ತಿ ಕೂಡಾ ಬಂದಿತ್ತು

ಅವರು ಅತ್ಯುತ್ತಮ ಫೋಟೊಗ್ರಫರ್ ಅಲ್ಲದೇ...
ಉತ್ತಮ ಬರಹಗಾರರು....

ಸಂಗಡ ಈ ಥರಹದ ಇತರೆ ಹವ್ಯಾಸಗಳು...

ಅವರ ಪ್ರತಿಭೆ ಗ್ರಾಮೀಣ ಮಟ್ಟದಲ್ಲಿ ಸೋರಗಿ ಹೋಗುತ್ತಿದೆಯಲ್ಲ ಎನ್ನುವ ಬೇಸರವಿತ್ತು...

ನಿಜಕ್ಕೂ ಸಂತೋಷದ ವಿಚಾರ...

ನಾಗೇಂದ್ರರಿಗೆ ಶುಭ ಹಾರೈಕೆಗಳು....
ಅವರ ಪ್ರತಿಭೆಗೆ ಇನ್ನಷ್ಟು ಪುರಸ್ಕಾರಗಳು ಬರಲಿ...

ಅವರನ್ನು ಪರಿಚಯಿಸಿ..
ನಮಗೆಲ್ಲ ಅಭಿನಂದನೆಗೆ ಅವಕಾಶ ಮಾಡಿಕೊಟ್ಟ ನಿಮಗೆ
ಧನ್ಯವಾದಗಳು....

sunaath said...

ನಾಗೇಂದ್ರರಿಗೆ ನನ್ನ ಅಭಿನಂದನೆಗಳು.
ಅವರನ್ನು ನಮಗೆ ಪರಿಚಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

Srinidhi said...

ನಾಗೇಂದ್ರರಿಗೆ ಅಭಿನಂದನೆ

ಚಿತ್ರಗಳು ಅದ್ಭುತವಾಗಿವೆ!

ವನಿತಾ / Vanitha said...

Convey our congrats and good wishes to Nagendra...&
Shivu, thanks a lot for ur nice write-up..

ರೂpaश्री said...

ನಾಗೇಂದ್ರ ಅವರಿಗೆ ಅಭಿನಂದನೆಗಳು!! ನಾಗೇಂದ್ರ ಅವರನ್ನು ಪರಿಚಯಿಸಿ, ಅವರ ಫೋಟೋಗಳ ಸ್ಯಾಂಪಲ್ ತೋರಿಸಿದಕ್ಕಾಗಿ ನಿಮಗೆ ಧನ್ಯವಾದಗಳು....
ಹಾಗೆಯೇ ತಡವಾಗಿಯೇ ಆದರೂ ನಿಮಗೂ ಪ್ರತಿಷ್ಟಿತ ARPS ಮನ್ನಣೆ ದೊರೆಕಿದಕ್ಕೆ ಹೃತ್ಪೂರ್ವಕ ಅಭಿನಂದನೆಗಳು:))

Unknown said...

ಗ್ರಾಮೀಣ ಪ್ರತಿಭೆ ನಾಗೇಂದ್ರರವರಿಗೆ ಅಭಿನಂದನೆಗಳು. ನಾಗೇಂದ್ರರನ್ನು ಅಭಿನಂದಿಸುವ ಅವಕಾಶ ಕಲ್ಪಿಸಿದ ನಿಮಗೂ ಅಭಿನಂದನೆಗಳು. ಫೋಟೋಗಳಂತೂ ಅದ್ಭುತವಾಗಿವೆ. ಶುಭವಾಗಲಿ

PARAANJAPE K.N. said...

ಶಿವೂ
ಗ್ರಾಮೀಣ ಪ್ರತಿಭೆ ನಾಗೇ೦ದ್ರರ ಪರಿಚಯ ಚೆನ್ನಾಗಿ ಮಾಡಿದ್ದಿರಿ. ಅವರಿಗೆ ನನ್ನ ಹಾರ್ದಿಕ ಅಭಿನ೦ದನೆಗಳು

ಬಾಲು said...

ನಾಗೇಂದ್ರ ಮುತ್ಮುರ್ಡು ಅವರ ಪರಿಚಯ ಮಾಡಿದ್ದಿರಿ. ಅವರಿಗೆ ನನ್ನ ಕಡೆ ಯಿಂದ ಶುಭಾಶಯಗಳು.

Prabhuraj Moogi said...

ಹಿಂದೆ ಕೂಡ ಇವರ ಫೋಟೋಗಳನ್ನು ನೋಡಿದ್ದೇ , ನಿಮ್ಮ ಬ್ಲಾಗನಲ್ಲೇ ಕಾಗೆ ಬಗ್ಗೆ ಒಂದು ಲೇಖನ ಬಂದಿತ್ತಲ್ಲಾ... ನಾಗೇಂದ್ರ ಅವರಿಗೆ ನಮ್ಮ ಶುಭ ಹಾರೈಕೆಗಳು

Pradeep said...

ನಾಗೇಂದ್ರರಿಗೆ ಅಭಿನಂದನೆಗಳು.. :) ಶಿವೂ ಅವರೇ, ನಿಮಗೆ ಕೂಡ! (ನಿಮಗೆ ARPS ಅಂತರರಾಷ್ಟ್ರೀಯ ಮನ್ನಣೆ ಸಿಕ್ಕ ವಿಷಯ ನೀವು ಮೊದಲೇ ತಿಳಿಸಿದ್ದೀರೆಂದನಿಸುತ್ತದೆ. ನಿಮಗೆ ಮೊದಲೇ ಅಭಿನಂದಿಸಲು ಮರೆತಿರಬೇಕೆಂದೆಸುತ್ತಿದೆ..)
ಒಳ್ಳೆಯ ಛಾಯಾಚಿತ್ರಗಳೆಂದರೆ ಪಂಚಪ್ರಾಣ! ಯಾವಾಗಲೂ ಕ್ಲಿಕ್ಕಿಸುತ್ತಿರಿ ಸಾರ್! :) :)

ಕ್ಷಣ... ಚಿಂತನೆ... said...

ಶಿವು ಸರ್‍, ಶ್ರೀ ನಾಗೇಂದ್ರ ಮುತುರ್ಡು ಅವರ ಕಿರುಪರಿಚಯಕ್ಕೆ ಧನ್ಯವಾದಗಳು. ಫೋಟೋಗಳು ಮನಮೋಹಕ. ಅವರಿಗೆ ನಮ್ಮ ಕಡೆಯಿಂದ ಅಭಿನಂದನೆಗಳು. ಶ್ರೀ ನಾಗೇಂದ್ರ ಅವರಿಗೆ ಮತ್ತಷ್ಟು ಪ್ರಶಸ್ತಿ, ಪುರಸ್ಕಾರಗಳು ದೊರಕುತ್ತಾ ಅವರ ಪ್ರತಿಭೆ ಮತ್ತಷ್ಟು ಬೆಳಗಲಿ. ನೀವು ಮೂವರೂ ಗೆಳೆಯರಿಗೆ ಅಭಿನಂದನೆಗಳು.

Umesh Balikai said...

ಶಿವು ಸರ್,

ನಾಗೇಂದ್ರ ಅವರೂ ಸಹ ನೀವು ಮತ್ತು ಮಲ್ಲಿಕಾರ್ಜುನ್ ಥರಾನೇ ಫೋಟೋಗ್ರಫಿಯಲ್ಲಿ ದೈತ್ಯ ಪ್ರತಿಭೆ ಅಂತ ಅವರು ಕ್ಲಿಕ್ಕಿಸಿದ ಎರಡು ಫೋಟೋ ನೋಡಿದ್ರೇನೆ ಗೊತ್ತಾಗುತ್ತೆ. ಇಂಥ ಇನ್ನೂ ಅನೇಕ ಸಾಧನೆಗಳು ಅವರಿಂದಾಗಲಿ, ಅವರಿಗೆ ಇನ್ನೂ ಹೆಚ್ಚಿನ ಮನ್ನಣೆ ಸಿಗಲಿ ಅಂತ ಹಾರೈಸುತ್ತೇನೆ. ನಾಗೇಂದ್ರರವರಿಗೆ ನನ್ನ ಕಡೆಯಿಂದ ಹಾರ್ಧಿಕ ಅಭಿನಂದನೆಗಳು.

ಶಿವಪ್ರಕಾಶ್ said...

ನಾಗೇಂದ್ರರಿಗೆ ಅಭಿನಂದನೆಗಳು...
ಇನ್ನು ಹೆಚ್ಚು ಹೆಚ್ಚು ಸಾಧನೆ ಮಾಡಲೆಂದು ಹಾರೈಸುತ್ತೇನೆ...

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಶಿವೂ, ತುಂಬ ಖುಷಿಯ ವಿಚಾರ. ಅವರ ಫೋಟೊಗ್ರಫಿಯ ಬಗ್ಗೆಯಂತೂ ಹೇಳಿದಷ್ಟೂ - ಹೊಗಳಿದಷ್ಟೂ ಕಡಿಮೆಯೇ. ಇನ್ನೊಮ್ಮೆ ಅವರನ್ನು ಭೇಟಿಯಾದಾಗ ಒಂದಷ್ಟು ಫೋಟೋಗಳನ್ನು ‘ಕದ್ದು ತರುವ’ ಇರಾದೆ ಇದೆ... :-)

PaLa said...

ನಾಗೇಂದ್ರರ ಪರಿಚಯ ಅವರ ಸೊಗಸಾದ ಚಿತ್ರಗಳಿಂದಲೇ ಮಾಡಿಸಿದ್ದೀರ, ವಂದನೆಗಳು. ಅಂತೆಯೇ ನಾಗೇಂದ್ರರಿಗೆ ಶುಭ ಹಾರೈಕೆಗಳು

ವಿನುತ said...

ಉತ್ತಮ ವ್ಯಕ್ತಿ ಪರಿಚಯಕ್ಕೆ ಧನ್ಯವಾದಗಳು ಹಾಗೂ ನಾಗೇ೦ದ್ರರಿಗೂ ಆವರ ಸಾಧನೆ, ಪರಿಶ್ರಮಕ್ಕೆ ಅಭಿನ೦ದನೆಗಳು.
ಮು೦ದಿನ ಅವರ ಎಲ್ಲ ಕಾರ್ಯಗಳಿಗೂ ಶುಭಹಾರೈಕೆಗಳು.

b.saleem said...

ಶಿವು ಸರ್,
ನಾಗೆಂದ್ರ ಮುತ್ಮುರ್ಡು ಅವರು ಅದ್ಭುತ ಛಾಯಗ್ರಾಹಕರು.
ಅಂಥವರನ್ನು ಸತ್ಕರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ನಾಗೇಂದ್ರರಿಗೆ ಅಭಿನಂದನೆಗಳು.
ನಾಗೇಂದ್ರರನ್ನು ಬ್ಲಾಗ ಗೆಳೆಯರಿಗೆ ಪರಿಚಯಿಸಿದ್ದಕ್ಕೆ
ನಿಮಗೂ ಅಭಿನಂದನೆಗಳು.

umesh desai said...

ಒಳ್ಳೆಯ ಚಿತ್ರಗಳು ಫೋಟೋತೆಗೆದವರಿಗೂ ಅವರನ್ನು ಪರಿಚಯಿಸಿದ ನಿಮಗೂ ಅಭಿನಂದನೆಗಳು...!

Guruprasad said...

ನಾಗೇಂದ್ರ ಮುತ್ಮುರ್ಡು , ಅವರಿಗೆ ಅಭಿನಂದನೆಗಳು....ನೋಡಿದ ಕೆಲವೇ ಕೆಲವು ಫೋಟೋಗಳು ಅದ್ಬುತವಾಗಿ ಇದೆ....
ಫೋಟೋಗ್ರಫಿ ನಲ್ಲಿ ನಮ್ಮ ಕರ್ನಾಟಕದ ಕೀರ್ತಿಯನ್ನು ಹಬ್ಬಿಸುತ್ತಿರುವ ಶಿವೂ ಮಲ್ಲಿಕಾರ್ಜುನ್, ಹಾಗು ನಾಗೇಂದ್ರ ರಂಥವರಿಗೆ ನಮ್ಮ ಪೂರ್ಣ ಅಭಿನಂದನೆಗಳು....
ಗುರು

ಧರಿತ್ರಿ said...

ನಾಗೇಂದ್ರ ಅವರಿಗೆ ನನ್ನ ಕಡೆಯಿಂದಲೂ ಅಭಿನಂದನೆಗಳನ್ನು ತಿಳಿಸಿ ಶಿವಣ್ಣ..
-ಧರಿತ್ರಿ

RAMU said...

ನಾಗೇಂದ್ರ ಮುತ್ಮುರ್ಡು ಅವರಿಗೆ ಅಭಿನಂದನೆಗಳು ಇನ್ನು ಹೆಚ್ಚು ಫೋಟೋಗ್ರಫಿ ಮತ್ತು ವ್ಯವಸಾಯದಲ್ಲಿ ಅಭಿವೃದ್ದಿ ಸಾಧಿಸಲಿ ಮತ್ತು ರಾಷ್ಟೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಮತ್ತು ನಾಡಿಗೆ ಗೌರವ ತಂದುಕೊಡಲಿ.
ಪರಿಚಯಿಸಿದ್ದಕ್ಕೆ ವಿಶೇಷವಾಗಿ ಶಿವು ಅವರಿಗೆ ಅಭಿನಂದನೆಗಳು .

ಸಾಗರದಾಚೆಯ ಇಂಚರ said...

ಶಿವೂ ಸರ್,
ಮೊದಲಿಗೆ ನಾಗೇಂದ್ರ ಮುತ್ಮುರ್ಡು ಅವರಿಗೆ ಅಭಿನಂದನೆಗಳು. ಇಂಥಹ ಒಳ್ಳೆಯ ಸಮಾಚಾರವನ್ನು ತಿಳಿಸಿದ್ದಿರ, ಹೀಗೆ ತಿಳಿಸುತ್ತಿರಿ.

shivu.k said...

ಪ್ರಕಾಶ್ ಸರ್,

ಇಲ್ಲಿ ನಾನು ಇದನ್ನು ಬರೆಯಲು ಕಾರಣ ಫೋಟೋಗ್ರಫಿ ಅನ್ನುವುದು ಒಂದು ನೆಪವಷ್ಟೇ. ಮುಖ್ಯ ಉದ್ದೇಶ ಕಷ್ಟಜೀವಿಯಾಗಿ ಇಂಥ ಸಾಧನೆ ಮಾಡಿದ ಆತನ ಬಗೆಗೆ ಒಂದು ತುಂಬು ಅಭಿಮಾನವಿದೆ. ಇಂಥವನ್ನು ಮಾಡಿದಾಗ ಮನಸ್ಸಿಗೆ ಖುಷಿ, ಉಲ್ಲಾಸ ಉಂಟಾಗುತ್ತದೆ.

ಧನ್ಯವಾದಗಳು.

@ ಸುನಾಥ್ ಸರ್, ಟಿ.ಜಿ.ಶ್ರೀನಿಧಿ, ವನಿತಾ.. ಧನ್ಯವಾದಗಳು...


@ರೂಪಶ್ರೀ..ಸತ್ಯನಾರಾಯಣ ಸರ್, ಪರಂಜಪೆ ಸರ್, ಬಾಲು ಸರ್, ಪ್ರಭು,

ನಾಗೇಂದ್ರ ಅವರ ಫೋಟೋಗಳು ತುಂಬಾ ಇವೆ. ಒಂದಕ್ಕಿಂತ ಒಂದು ಸೊಗಸು...ಅಭಿನಂದಿಸಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು.


@ಪ್ರದೀಪ್, ಕ್ಷಣಚಿಂತನೆ ಸರ್, ಶಿವಪ್ರಕಾಶ್,
ನಾಗೇಂದ್ರ, ಮಲ್ಲಿಕಾರ್ಜುನ್, ನಾನು ಮೂವರು ಫೋಟೋಗ್ರಫಿಯಲ್ಲಿ ಒಂದಾದರೂ ಅದಕ್ಕಿಂತ ಹೆಚ್ಚಾಗಿ ಆತ್ಮೀಯ ಗೆಳೆಯರಾಗಿದ್ದೇವೆ...ನಮಗಿಬ್ಬರಿಗೂ ARPS ಮನ್ನಣೆ ಸಿಕ್ಕಿದ ಇದೇ ವರ್ಷವೇ ಅವರಿಗೂ ವಿದೇಶದಲ್ಲಿ ಸನ್ಮಾನ ನಮಗೆಲ್ಲಾ ಖುಷಿ ತಂದಿದೆ. ಅಭಿನಂದಿಸಿದ್ದಕ್ಕೆ ಧನ್ಯವಾದಗಳು.

@ಉಮೇಶ್ ಸರ್,

ನಾಗೇಂದ್ರ ಅವರಿಗೆ ಒಂದು ಬ್ಲಾಗ್ ಇದ್ದಿದ್ದರೇ ಅವರ ಫೋಟೋಗಳನ್ನು ನೋಡಬಹುದಿತ್ತು. ಅವರಿಗೆ ಅಂತರಜಾಲದ ತೊಂದರೆಯಿಂದಾಗಿ ಅವರ ದೈತ್ಯ ಪ್ರತಿಭೆಯ ಫೋಟೋಗಳನ್ನು ನೋಡಲಾಗುತ್ತಿಲ್ಲ..
ಅವರನ್ನು ಅಭಿನಂದಿಸಿದ್ದಕ್ಕೆ ಧನ್ಯವಾದಗಳು.


@ಪೂರ್ಣಿಮಾ ಮೇಡಮ್,

ನಾಗೇಂದ್ರಅವರ ಮನೆಗೆ ಹೋಗಿ ಫೋಟೋ ಕದಿಯುವ ಇರಾದೆ ಬೇಡ. ಕೇಳಿದರೇ ಅವರೇ ಕೊಟ್ಟುಬಿಡುತ್ತಾರೆ[ತಮಾಷೆಗೆ]


@ಪಾಲ, ವಿನುತಾ, ಬಿ.ಸಲೀಂ,..

ನಾಗೇಂದ್ರರನ್ನು ಅಭಿನಂದಿಸಿದ್ದಕ್ಕೆ ಧನ್ಯವಾದಗಳು.


@ ಉಮೇಶ್ ದೇಶಾಯಿ ಸರ್, ಗುರು, ಧರಿತ್ರಿ, ರಾಮು, ಗುರುಮೂರ್ತಿ ಹೆಗಡೆ ಸರ್...

ನಾಗೇಂದ್ರರನ್ನು ಅಭಿನಂದಿಸಿದ್ದಕ್ಕೆ ಧನ್ಯವಾದಗಳು.

Unknown said...

ಶಿವೂ ಅವರೇ, ಬಹರೈನಿಗೆ ಹೋಗಿ ಬಂದ ಮೇಲೆ ನಾಗೇಂದ್ರ ಹೆಗಡೆಯವರನ್ನು ಭೇಟಿ ಮಾಡಿದ್ದೆ. ಅವರ ಅನುಭವಗಳನ್ನು ಅವರ ಬಾಯಿಯಲ್ಲೇ ಕೇಳುವುದಕ್ಕೆ ಮಸ್ತಾಗಿತ್ತು! ನಿಮಗೂ ಸಿಕ್ಕಿದ್ದರು ಅಲ್ಲಾ? ಅವರ ಜೊತೆಗೆ ಯಕ್ಷಗಾನದ ಹಾಸ್ಯ ಕಲಾವಿದ ರಮೇಶ್ ಭಂಡಾರಿ ಕೂಡ ಇದ್ದರಂತೆ. ಭಂಡಾರಿ ಲಿಫ್ಟ್ ಹತ್ತಿದ ಕತೆ ಕೇಳಿ, ಬಹಳ ತಮಾಷೆಯಾಗಿದೆ.

ಬಹರೈನಿನಲ್ಲಿ ೫೧ ಡಿಗ್ರಿ ಸೆಕೆ ಇತ್ತಂತೆ. ಹಾಗಾಗಿ ಹೊರಗೆ ಕಾಲಿಡಲೂ ಆಗದೆ ಬರೀ ಸಮಾರಂಭದ ಫೋಟೋ ಹೊತ್ತು ಹೆಗಡೆಯವರು ಬೇಸರದಲ್ಲಿ ವಾಪಸಾಗಿದ್ದಾರೆ. ಅದು ನಮಗೂ ನಿರಾಶೆಯ ಸಂಗತಿಯೇ. ಬೀಚ್ ಹಾಗೂ ಸಿಟಿಯಲ್ಲಿ ಅವರ ಕ್ಯಾಮೆರಾಕ್ಕೆ ಸ್ವಲ್ಪ ಕೆಲಸ ಸಿಕ್ಕಿದ್ದರೆ ಕನಿಷ್ಠ ಮೂರ್ನಾಲ್ಕು ಒಳ್ಳೆಯ ಫೋಟೋಗಳು ನೋಡಲು ಸಿಗುತ್ತಿದ್ದವು.

- ಸೀತಾಳಭಾವಿ

ಕೃಷಿಕನ ಕಣ್ಣು said...

progurಬ್ಲಾಗ್ ಗೆಳೆಯರೆ,

ಈ ದಿನ ಶಿವು ಅವರ ಮನೆಯಲ್ಲಿ ಅವರ ಬ್ಲಾಗಿನಲ್ಲಿ ನನ್ನ ಬೆಹರೈನ್ ಪ್ರವಾಸ ಕುರಿತಾಗಿ ಬರೆದ ಹಾಗೂ ಆ ಬಗ್ಗೆ ತಮ್ಮೆಲ್ಲರ ಪ್ರತಿಕ್ರಿಯೆಗಳನ್ನು ನೋಡಿ ಮನತುಂಬಿ ಬಂತು. ಬಹುಶಃ ಶಿವು ಅವರು ನನ್ನ ಮೇಲಿನ ಅಭಿಮಾನ ಹಾಗೂ ವಿಶ್ವಾಸದಿಂದಾಗಿ ನನ್ನ ಕುರಿತು ಸ್ವಲ್ಪ ಹೆಚ್ಚಿಗೇನೇ ಹೇಳಿಬಿಟ್ಟಿದ್ದಾರೆ. ಹೇಗಾದ್ರು ಇರಲಿ, ತಮ್ಮೆಲ್ಲರ ಅಭಿಮಾನ ಮತ್ತು ಆತ್ಮೀಯ ಶುಭ ಹಾರೈಕೆಗಳಿಗೆ ನನ್ನ ಮನಃಪೂರ್ವಕ ಕೃತಜ್ಞತೆಗಳು.

ನನ್ನ ಊರಿನಲ್ಲಿ ಅಂತರ್‌ಜಾಲ ಸಂಪರ್ಕ ಸಿಗುವ ನಿರೀಕ್ಷೆ ಇದೆ. ಆಗ ನಾನು ಖಂಡಿತ ನನ್ನದೇ ಒಂದು ಬ್ಲಾಗ್ ಮೂಲಕ ನಿಮ್ಮೆಲ್ಲರ ಜೊತೆ ಇದೇ ಅಂಗಳದಲ್ಲಿ ಆಡುವ ಆಸೆಯಿದೆ...

ಧನ್ಯವಾದಗಳೊಂದಿಗೆ ನಿಮ್ಮವ,

ನಾಗೇಂದ್ರ ಮುತ್ಮರ್ಡು.