Sunday, September 28, 2008

ಮನೆಯಲ್ಲಿ ಹುಟ್ಟಿದ ಚಿಟ್ಟೆ ಕಥೆ.

ಎಂದಿನಂತೆ ಹೆಸರುಘಟ್ಟದ ಕಡೆಗೆ ಚಿಟ್ಟೆ ಪೋಟೊ ತೆಗೆಯಲು ಹೋದಾಗ ಯಾವ ಚಿಟ್ಟೆಯು ಸಿಗಲಿಲ್ಲ. ಚಳಿಗಾಲ ಮುಗಿಯುತ್ತಾ ಬಂದಿತ್ತಾದ್ದರಿಂದ ಚಿಟ್ಟೆಗಳ ಸಂಖ್ಯೆ ಕಡಿಮೆಯಾಗಿತ್ತು. ಇಲ್ಲಿಗೆ ಬಂದಿದ್ದಕ್ಕೆ ಏನಾದರೂ ಪೋಟೊ ತೆಗೆಯೋಣ ಎಂದು ಹುಡುಕತೊಡಗಿದೆ. ಅಲ್ಲೊಂದು ಕೆಂಪು ಕಣಗಲು ಗಿಡ. ಎಲೆಗಳ ಮಧ್ಯೆ ಒಂದಿಂಚು ಉದ್ದದ ತಿಳಿ ಕಂದುಬಣ್ಣದ ಬೆನ್ನ ಮೇಲೆ ಕಪ್ಪು ಪಟ್ಟಿ ಇರುವ ಹುಳುವೊಂದು ಎಲೆಯನ್ನು ತಿನ್ನುತ್ತಿದ್ದ ದೃಶ್ಯ ಕಾಣಿಸಿತು. ಪಕ್ಕದ ಎಲೆಯ ಮೇಲೆ ಕಂಡರೂ ಕಾಣದ ಹಾಗೆ ಒಂದು ಸಣ್ಣ ಹಳದಿ ಮಿಶ್ರಿತ ಬಿಳಿ ಬಣ್ಣದ ರಾಗಿಕಾಳಿನ ಗಾತ್ರದ ವಸ್ತು ಕಾಣಿಸಿತು.
ನನ್ನ ಮ್ಯಾಕ್ರೋ ಲೆನ್ಸ್ ನಿಂದ ನೋಡಿದಾಗ ಮತ್ತೊಂದು ಹುಳುವಾಗಲು ಸಿದ್ಧವಾಗಿರುವ ಮೊಟ್ಟೆ ಎಂದು ತಿಳಿಯಿತು. ತಕ್ಷಣ ಅದರ ಪೋಟೊ ತೆಗೆದೆ. ಜೊತೆಗೆ ಒಯ್ದಿದ್ದ ಕೃಷ್ಣಮೇಘ ಕುಂಟೆರವರ "ಬಟರ್ ಫ್ಲೈಸ್ ಆಫ್ ಪೆನೆನ್ಸುಲಾರ್ ಇಂಡಿಯ" ಪುಸ್ತಕ ತೆಗೆದು ನೋಡಿದೆ. ಅದು "ಇಂಡಿಯನ್ ಕಾಮನ್ ಕ್ರೋ" ಚಿಟ್ಟೆಯ ಲಾರ್ವ ಎಂದು ತಿಳಿಯಿತು. ಆ ಪುಸ್ತಕದಲ್ಲಿ ಲಾರ್ವಾದಿಂದ ಚಿಟ್ಟೆಯಾಗುವವರೆಗೆ ಪೂರ್ತಿ ಫೋಟೊ, ವಿವರಣೆ ಇತ್ತು. ತಕ್ಷಣ ನನಗೊಂದು ಆಲೋಚನೆ ಬಂತು. ನಾನೂ ಏಕೆ ಈ ರೀತಿ ಪೋಟೊ ಹಂತ ಹಂತವಾಗಿ ತೆಗೆಯಬಾರದು? ಎನಿಸಿತು. ತಕ್ಷಣ ನನ್ನ ಕ್ಯಾಮೆರ ಕಿಟ್ ನಲ್ಲಿದ್ದ ಕತ್ತರಿ ತೆಗೆದು ಆ ಹುಳುವಿದ್ದ ಎಲೆಗಳ ಕಾಂಡವನ್ನು ಕತ್ತರಿಸಿ ಹುಳು ಸಮೇತ ಮನೆಗೆ ತಂದು ಸಣ್ಣ ಹೂ ಕುಂಡದಲ್ಲಿ ನೀರು ತುಂಬಿಸಿ ಆ ಕಾಂಡವನ್ನು ಅದರಲ್ಲಿಟ್ಟೆ. ಅಲ್ಲಿಂದ ಶುರುವಾಯಿತು ಲಾಲನೆ ಪಾಲನೆ.

ಮರುದಿನ ಬೆಳಿಗ್ಗೆ ಕಣಗಲು ಗಿಡದ ಎಲೆಗಳನ್ನು ತರಲು ಹೊರಟೆ. ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತದೆ? ಈ ಕಾಂಕ್ರೀಟು ಕಾಡಿನಲ್ಲಿ ಬೆಳೆದ ಕೆಲವು ಗಿಡಗಳನ್ನು ನೋಡಿದರೆ ಎಲ್ಲವೂ ಅಲಂಕಾರಿಕ ಸಸ್ಯಗಳೆ. ಕ್ರೋಟನ್, ಇನ್ನಿತರ ಎಲೆಗಳಿರುವ ಸಸ್ಯಗಳೇ ತುಂಬಿದ್ದವು. ಕೊನೆಗೂ ಹುಡುಕಿ ತಂದು ಸಣ್ಣ ಹೂ ಕುಂಡದಲ್ಲಿ ನೀರು ತುಂಬಿಸಿ ಅದನ್ನಿಟ್ಟು ಆ ಹುಳುವನ್ನು ಒಂದು ಎಲೆಯ ಮೇಲೆ ಬಿಟ್ಟೆ. ಸ್ವಲ್ಪ ಸಮಯದ ನಂತರ ಅದು ಎಲೆಯನ್ನು ತಿನ್ನಲಾರಂಭಿಸಿತು. ಕೇವಲ ಅರ್ಧಗಂಟೆಯ ಹೊತ್ತಿಗೆ ಮೂರು ಇಂಚು ಉದ್ದದ ಎಲೆಯನ್ನು ಆ ಹುಳು ತಿಂದು ಮುಗಿಸಿತ್ತು. ಆನಂತರ ಸ್ವಲ್ಪ ಸಮಯ ವಿರಾಮ. ನನ ಶ್ರೀಮತಿಯಂತೂ ಆ ಹುಳುವಿನ ಚಟುವಟಿಕೆಯನ್ನು ಆಶ್ಚರ್ಯದಿಂದ ಗಮನಿಸತೊಡಗಿದಳು.


ನನ್ನ ಮೈಕ್ರೋ ಲೆನ್ಸ್ ಮುಖಾಂತರ ಅದರ ಬಾಯಿ, ತಿನ್ನುವ ಪರಿ ನೋಡಿ " ಎಷ್ಟು ಚೆನ್ನಾಗಿ ಗರಗಸದಲ್ಲಿ ಕತ್ತರಿಸಿದಂತೆ ಕತ್ತರಿಸಿ ತಿನ್ನುತ್ತದೆ ಪಾಪ" ಎಂದು ಪ್ರೀತಿಯಿಂದ ನೋಡುತ್ತಿದ್ದಳು. ಅಕ್ಕನ ಮಕ್ಕಳಾದ ಚೇತನ ವರ್ಷಿಣಿ ಇಬ್ಬರಿಗೂ ಹೊಸ ಗೆಳೆಯ ಸಿಕ್ಕ ಆನಂದ.

ಮರುದಿನ ಮತ್ತೆ ನಾನು ಹೋಗಿ ಹೊಸ ಎಲೆಗಳನ್ನು ತಂದು ಇಟ್ಟೆ. ಆ ಹುಳುವಿಗಂತೂ ತಿನ್ನುವುದೇ ಕೆಲಸ. ಮೊದಲ ದಿನ ಒಂದು ಅಂಗುಲವಿದ್ದ ಹುಳು ಎರಡನೇ ದಿನಕ್ಕೆ ಕಾಲು ಇಂಚು ಬೆಳೆದಿತ್ತು. ಮೂರನೆ ದಿನಕ್ಕೆ ಮುಕ್ಕಾಲು ಇಂಚಿನವರೆಗೆ ಬೆಳೆಯಿತು. ಆ ಚಿಟ್ಟೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಅತಿಯಲು " ದಕ್ಷಿಣ ಭಾರತದ ಚಿಟ್ಟೆಗಳು" ಪುಸ್ತಕ ನೋಡಿದಾಗ ಅದರಲ್ಲಿ ಲಾರ್ವಾ ಹಂತದಿಂದ ಪ್ಯೂಪ, ಪ್ಯೂಪದಿಂದ ಚಿಟ್ಟೆಯಾಗುವಿಕೆ, ಅದರ ಸಮಯ ಇನ್ನಿತರ ವಿಷಯ ತಿಳಿಯಿತು. ಮೂರು ದಿನ ಕಳೆಯಿತು.


ಅಂದು ಸಂಜೆ ಇದ್ದಕ್ಕಿದ್ದಂತೆ ಅದರ ನಡುವಳಿಕೆಯಲ್ಲಿ ಕೊಂಚ ಬದಲಾವಣೆ ಕಂಡಿತು. ಹಿಂದಿನ ದಿನ ತಿನ್ನುವುದು, ನಿದ್ರೆಮಾಡುವುದು, ತನ್ನ ಗುದದ್ವಾರದಿಂದ ಹಿಕ್ಕೆ ಹಾಕುವುದು ಇವು ನಿದಾನಗತಿಯಲ್ಲಿ ನಡೆದಿತ್ತು. ಆದರೆ ಇಂದು ಸಂಜೆ ಅದರ ಚಟುವಟಿಕೆಯಲ್ಲಿ ಕೊಂಚ ಹೆಚ್ಚಿನ ವೇಗವಿತ್ತು.

ಆದೇನೆಂದರೆ ಅದು ಮೊದಲು ಒಂದೊಂದೆ ಎಲೆಗಳ ಮೇಲೆ ತೆವಳಿ ಮತ್ತೆ ಹಿಂತಿರುವುದು, ಕಾಂಡದ ಮೇಲೆ ತೆವಳಿ ಮತ್ತೆ ಹಿಂತಿರುವುದು, ಕಾಂಡದ ಕೆಳಗೆ ಸರಿದಾಡುವುದು ನಡೆದೇ ಇತ್ತು. ಅನಂತರ ಯಾವುದೋ ಒಂದು ಎಲೆಯನ್ನು ಆಯ್ಕೆ ಮಾಡಿಕೊಂಡು ಅದರ ಕೆಳಗೆ ತೆವಳಿ ಹೋಗಿ ನಿಂತಿತು. ಸ್ವಲ್ಪ ಸಮಯದ ನಂತರ ಆ ಎಲೆಯ ಮುಂಭಾಗವನ್ನು ತಿಂದು ಮುಗಿಸಿ ಎಲೆಯ ಕೆಳಭಾಗದ ಮಧ್ಯಕ್ಕೆ ಬಂದು ತನ್ನ ಹಿಂಭಾಗ ಎಂಥದೋ ಆಂಟುದ್ರವ ಸುರಿಸಿ ತಲೆಕೆಳಕಾಗಿ ಆ ಎಲೆಗೆ ಅಂಟಿಕೊಂಡು ನೇತಾಡತೊಡಗಿತು.

ಈ ಮಧ್ಯೆ ನಮಗೆ ಕಾಣದ ಹಾಗೆ ಇನ್ನೊಂದು ಬದಲಾವಣೆಯಗಿತ್ತು. ಅದೇನೆಂದರೆ ತನ್ನ ಹೊರ ಮೈ ಕವಚವನ್ನು ಕಾಲು ಸಮೇತ ಕಳಚಿಹಾಕಿತ್ತು. ಅದು ನನಗೆ ತಿಳಿದ ಬಗೆ ಹೇಗೆಂದರೆ ಆ ಹುಳುವಿನ ಆಕಾರ ಚಿಕ್ಕದ್ದಾಗಿತ್ತು. ಹಾಗೆ ಅದರ ಬಣ್ಣ ಹಳದಿ ಮಿಶ್ರಿತ ತಿಳಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಕೆಳಗೆ ಹಿಕ್ಕೆಗಳ ಜೊತೆ ಅದರ ಕಳಚಿದ ಪೊರೆ ಇದ್ದದ್ದು ಕಂಡುಬಂತು.

ನನ್ನ ಅಕ್ಕ ಭಾವ ಆ ಹುಳು ಆ ರೀತಿ ನೇತಾಡುತ್ತಿರುವುದನ್ನು ನೋಡಿ, ಅದು ಕೆಳಗೆ ಬಿದ್ದು ಸತ್ತುಹೋಗುವುದೇನೋ ಎಂದು ಆತಂಕ ವ್ಯಕ್ತಪಡಿಸಿದರು. ಇಲ್ಲ ಹಾಗೇನು ಆಗುವುದಿಲ್ಲ. ಬಹುಶಃ ಅದು ಪ್ಯೂಪ ಆಗುವುದಕ್ಕೆ ಮೊದಲಿನ ಸ್ಥಿತಿ ಹೀಗಿರಬಹುದು ಎಂದು ತಿಳಿಸಿದೆ. ಸರಿ, ನಾಳೆ ನೋಡೋಣವೆಂದು ಅವರು ಹೊರಟುಹೋದರು.

ನನ್ನ ಕುತೂಹಲ ಏನೆಂದರೆ ಇದು ಹೇಗೆ ಪ್ಯೂಪ ಆಗುತ್ತದೆ ನೋಡಬೇಕೆಂಬ ಕುತೂಹಲ ನನಗೆ. ರಾತ್ರಿ ೧೨ ಗಂಟೆಯವರೆಗೆ ಎದ್ದಿದ್ದು ಗಮನಿಸುತ್ತಿದ್ದೆ. ಆ ಕತ್ತಲಲ್ಲೂ ಅದರದೊಂದು ಫೋಟೊ ತೆಗೆದೆ. ನನ್ನ ಫ್ಲಾಷ್ ಬೆಳಕು ಅ ಹುಳದ ಮೇಲೆ ಬಿದ್ದಾಗ ಒಮ್ಮೆ ಹುಳು ಬೆಚ್ಚಿದಂತೆ ಆಗಿ ಸುಮ್ಮನಾಯಿತು. ತಕ್ಷಣ ನನಗೆ ನನ್ನ ಬಗ್ಗೆ ಅಪರಾಧಿ ಮನೋಭಾವನೆ ಉಂಟಾಯಿತು. ನಾನು ಅದರ ಜೀವನ ಚಟುವಟಿಕೆಗಳಿಗೆ ತೊಂದರೆ ಕೊಡುತ್ತಿದ್ದೇನೇನೋ ಎನ್ನಿಸಿತು. ಆ ಮಂದ ಬೆಳಕಿನಲ್ಲಿ ಅದನ್ನು ಗಮನಿಸುವಷ್ಟೂ ಕಾಲ ಏನೂ ಬದಲಾವಣೆ ಕಾಣಲಿಲ್ಲ. ನಂತರ ಆ ಮಂದ ಬೆಳಕನ್ನು ಆರಿಸಿ ಮಲಗಿಬೆಟ್ಟೆ.

ಬೆಳಿಗ್ಗೆ ಎದ್ದು ನೋಡಿದರೆ ಎಲ್ಲಿದೆ ಹುಳ? ಆ ಜಾಗದಲ್ಲಿ ಒಂದು ಸಣ್ಣ ಕಡಲೇಕಾಯಿ ಗಾತ್ರದ ಪ್ಯೂಪ ಎಲೆಗೆ ಅಂಟಿಕೊಂಡಿತ್ತು. ಬಹುಶಃ ಕತ್ತಲಲ್ಲಿ ಮಾತ್ರ ಜೀವಸೃಷ್ಟಿಯಾಗಲಿ, ಬದಲಾವಣೆಯಾಗಲೀ ನಡೆಯುತ್ತದೆ ಎನ್ನುವ ಸತ್ಯ ನನ್ನ ಅರಿವಿಗೆ ಬಂತು. ಮನೆಗೆ ಬಂದ ಅಕ್ಕ, ಭಾವ, ಅವರ ಮಕ್ಕಳು, ನನ್ನ ಶ್ರೀಮತಿ ಎಲ್ಲರಿಗೂ ಇದು ಆಶ್ಚರ್ಯವಾಗಿತ್ತು. ಎಲ್ಲರೂ ನನ್ನನ್ನೂ ಪ್ರಶ್ನೆ ಕೇಳಲಾರಂಬಿಸಿದರು, ಹುಳು ಎಲ್ಲಿ ಹೋಯಿತು. ಈ ಕಡಲೇಕಾಯಿ ಬೇಜದೊಳಗೆ ಅಷ್ಟು ದೊಡ್ಡ ಹುಳ ಹೇಗೆ ಹೋಯಿತು? ಈಗ ಅದರೊಳಗೆ ಏನು ಮಾಡುತ್ತಿದೆ? ಮೊದಲಾದ ಪ್ರಶ್ನೆಗಳ ಸುರಿಮಳೆ.
ನನಗೆ ಗೊತ್ತಿದ್ದಷ್ಟನ್ನು ಮಾತ್ರ ಅವರಿಗೆ ಹೇಳಿದೆ. ಉಳಿದಂತೆ ನನಗೂ ಇದು ಮೊದಲನೇ ಬಾರಿ ಈ ರೀತಿ ನೋಡುತ್ತಿರುವ ಅನುಭವ ಕುತೂಹಲ. ಮೂರುವರೇ ವರ್ಷದ ವಷೀಣಿಯಂತೂ " ಮಾಮ ಆ ಕಡಲೇಕಾಯಿ ಬೀಜದ ಒಳಗೆ ಕುಳಿತು ಅದು ಏನು ಮಾಡುತ್ತಿದೆ? ಅದು ಆಟ ಆಡುವುದಿಲ್ಲವೇನು? ಊಟ ಮಾಡುವುದಿಲ್ಲವಾ? ಟಾಯ್ಲೆಟ್ಟಿಗೆ ಹೋಗುವುದಿಲ್ಲವಾ? ಅದು ಯಾವಾಗ ಹೊರಗೆ ಬರುತ್ತೆ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಳು.

ನಾನು " ಅದು ಒಂದು ವಾರದ ನಂತರ ಹೊರಬರುತ್ತದೆ. ಆಗ ಪೂರ್ತಿಯಾಗಿ ಬೆಳೆದ ಜೋಡಿ ರೆಕ್ಕೆಗಳು, ಕಾಲುಗಳು, ಮೀಸೆ ಎಲ್ಲಾ ಇರುತ್ತದೆ. ಆಮೇಲೆ ಹಾರಿಹೋಗುತ್ತದೆ" ಎಂದಾಗ ಅವಳ ಮುಖದಲ್ಲಿ ಸಂಭ್ರಮ ಆಶ್ಚರ್ಯ.

ಇದಾದ ಮೂರು ನಾಲ್ಕು ದಿನ ಏನೂ ಬದಲಾವಣೆ ಕಾಣಲಿಲ್ಲ. ಮನೆಯಲ್ಲಿ ಮಾತ್ರ ಅದನ್ನು ಗಮನಿಸುವುದು ಪ್ರಶ್ನೆ-ಉತ್ತರಗಳ ಮಾತುಕತೆ ನಡೆದೇ ಇತ್ತು. ಮೂರನೇ ದಿನಕ್ಕೆ ಪ್ಯೂಪ ಚಿನ್ನದ ಬಣ್ಣಕ್ಕೆ ತಿರುಗಿತ್ತು. ಐದನೇ ದಿನಕ್ಕೆ ನಿದಾನವಾಗಿ ಅದರ ಬಣ್ಣ ಮತ್ತೆ ಬದಲಾಗತೊಡಗಿತ್ತು. ಚಿನ್ನದ ಬಣ್ಣವೆಲ್ಲಾ ಕರಗಿ ಒಳಗಿನ ಕೋಶಗಳಲ್ಲಿ ಕಾಣುವಂತೆ ಪಾರದರ್ಶಿಯಾಗಿ ಬದಲಾಗತೊಡಗಿತು.
ಸರಿಯಾಗಿ ಎಂಟನೇ ದಿನ ಬೆಳಿಗ್ಗೆ ೫ ಗಂಟೆಗೆ ನೋಡಿದರೆ ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ! ಒಳಗೆ ಪೂರ್ತಿ ಬೆಳದ ಚಿಟ್ಟೆ ಅಸ್ಪಷ್ಟವಾಗಿ ಕಾಣಿಸುತ್ತಿದೆ. ಆ ತಕ್ಷಣ ನಾನು ಪುಸ್ತಕವನ್ನು ನೋಡಿದೆ.ಅದರಲ್ಲಿ ಕಪ್ಪು ಬಣ್ಣ ಬಂದ ನಂತರ ಚಿಟ್ಟೆ ಬರುತ್ತದೆ ಎಂದು ಬರೆದಿತ್ತು. ಕೂಡಲೇ ಎದ್ದು ಅವಸರದಲ್ಲಿ ನನ್ನ ಕ್ಯಾಮೆರ, ಸ್ಟ್ಯಾಂಡ್, ರೋಲ್ ಎಲ್ಲವನ್ನು ಸಿದ್ದಪಡಿಸಿಕೊಂಡು ತಯಾರಾದೆ. ಅಷ್ತರಲ್ಲಿ ನನ್ನ ಶ್ರೀಮತಿ ಬಂದಳು. ಅವಳಿಗೂ ಕುತೂಹಲ. ಒಂದು ವಾರದಿಂದ ಈ ಕಡಲೆಕಾಯಿ ಗಾತ್ರದ ಬೀಜದ ಒಳಗೆ ಬೆಳೆದು ಹೊರಬರುವ ಚಿಟ್ಟೆಯನ್ನು ನೋಡುವ ಕುತೂಹಲ.

ಸುಮಾರು ೭ ಗಂಟೆಯ ಸಮಯಕ್ಕೆ ನಿದಾನವಾಗಿ ಬಾಗಿಲು ತೆಗೆದು ಹೊರಬರುವಂತೆ ಚಿಟ್ಟೆ ಹೊರಕ್ಕೆ ಬರತೊಡಗಿತು. ಮೊದಲು ತಲೆ ಭಾಗ ಬಂತು. ನಂತರ ನಿಧಾನವಾಗಿ ಮೀಸೆ, ಹೊಟ್ಟೆ ಭಾಗ, ಕೆಳಭಾಗ ಎಲ್ಲವೂ ನೋಡು ನೋಡುತ್ತಿದ್ದಂತೆ ಆ ವ್ಯೂಹದಿಂದ ಹೊರಬಂದು, ಅನಂತರ ಆ ಪ್ಯೂಪವನ್ನೇ ತನ್ನ ಕಾಲುಗಳಿಂದ ಹಿಡಿದುಕೊಂಡು ನೇತಾಡತೊಡಗಿತು. ನಾನಂತೂ ಪೋಟೋ ತೆಗೆಯುವುದನ್ನು ಬಿಟ್ಟು ಪ್ರಾಕೃತಿಕ ಸೃಷ್ಟಿಯನ್ನು ತದೇಕಚಿತ್ತದಿಂದ ನೋಡುತ್ತಿದ್ದೆ. ನನ್ನ ಶ್ರೀಮತಿ ಫೋಟೋ ತೆಗೀರಿ ಎಂದಾಗಲೇ ನಾನು ತಕ್ಷಣ ಕೆಲವು ಫೋಟೊ ತೆಗೆದಿದ್ದು, ಆ ಸಮಯದಲ್ಲಿ ಅದರ ರೆಕ್ಕೆಗಳು ಒದ್ದೆ ಬಟ್ಟೆಯಂತೆ ಮಡಿಕೆ ಹಾಕಿಕೊಂಡಿದ್ದವು. ನಿದಾನವಾಗಿ ಸೂರ್ಯನ ಶಾಖ ಅದರ ರೆಕ್ಕೆಯ ಮೇಲೆ ಬೀಳತೊಡಗಿದಾಗ ಬೆಳಕಿಗೆ ಅಭಿಮುಖವಾಗಿ ಚಿಟ್ಟೆ ನೇತಾಡತೊಡಗಿತ್ತು. ಸುಮಾರು ಒಂದು ಗಂಟೆಯ ಕಾಲಹಾಗೆ ತನ್ನ ರೆಕ್ಕೆಗಳನ್ನು ಒಣಗಿಸಿಕೊಳ್ಳುವುದು, ನಡುವೆ ತನ್ನ ಉದ್ದ ನಾಲಗೆಯನ್ನು ಹೊರತೆಗೆದು ಸುರುಳಿಯಂತೆ ಸುತ್ತುವುದು ನಡೇದೇ ಇತ್ತು.
ಅಕ್ಕನ ಮಕ್ಕಳು " ಮಾಮ ಈ ಚಿಟ್ಟೆ ಹುಡುಗನೋ, ಹುಡುಗಿಯೋ ಎಂದು ಕೇಳಿದ ಪ್ರಶ್ನೆಗೆ ನಾನು ದಂಗಾಗಿದ್ದೆ. ಕೊನೆಗೆ ನಾನು ಆ ಪ್ರಶ್ನೆಗೆ ಉತ್ತರ ಹೇಳಲಾಗದೆ ಹಾರಿಕೆ ಉತ್ತರ ನೀಡಿ ಸುಮ್ಮನಾದೆ. ಸುಮಾರು ಹೊತ್ತಿನವರೆಗೆ ಆ ಮಕ್ಕಳ ನನ್ನ ಪ್ರಶ್ನೋತ್ತರ ಹಾಗೂ ಫೋಟೊ ತೆಗೆಯುವುದು ನಡೆದಿತ್ತು. ಎಂಟು ಗಂಟೆಯ ಹೊತ್ತಿಗೆ ಒಂದೆರಡು ಬಾರಿ ಚಿಟ್ಟೆ ರೆಕ್ಕೆ ಬಡಿಯಿತು.
ಮತ್ತೆ ಎರಡು ನಿಮಿಷದ ನಂತರ ಅದು ರೆಕ್ಕೆ ಬಡಿದು ಹಾರಿ ಮತ್ತೊಂದು ಜಾಗದಲ್ಲಿ ಕೂತಿತು. ನಾನು "ಈಗ ಎಲ್ಲರೂ ಟಾಟಾ ಮಾಡಿ ಬೈ ಬೈ ಹೇಳಿ! ಅದು ಹಾರಿ ಹೋಗುತ್ತದೆ" ಎಂದೆ. ಎಲ್ಲರೂ ಟಾಟಾ ಬೈ ಬೈ ಹೇಳಿದರು. ನಂತರ ಆ ಚಿಟ್ಟೆ ರೆಕ್ಕೆ ಬಡಿಯುತ್ತಾ ಹಾರಿ ಹೋಗಿ ಪ್ರಕೃತಿಯೊಳಗೆ ಒಂದಾಯಿತು.

ಸುಮಾರು ಹದಿನೈದು ದಿನಗಳಿಂದ ನಮ್ಮ ಮನೆಯ ಅತಿಥಿಯಾಗಿ ಎಲ್ಲರ ಆಶ್ಚರ್ಯ ಕುತೂಹಲ ಕೆರಳಿಸಿ ಚರ್ಚೆಗಳಿಗೆ ಈಡು ಮಾಡಿ ಎಲ್ಲರಿಗೂ ಹೊಸ ವಿಭಿನ್ನ ಅನುಭವ ನೀಡಿದ್ದ ಆ "ಪಾತರಗಿತ್ತಿ ಸುಂದರಿ" ಆ ಸುಂದರ ಮುಂಜಾವಿನಲ್ಲಿ ಹಾರಿಹೋಗಿತ್ತು.

ಶಿವು ಕೆ
[ಜೂನ್ ೧ ನೇ ೨೦೦೬ ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಫೋಟೊ ಸಹಿತ ಪ್ರಕಟವಾದ ಲೇಖನ]

Saturday, September 20, 2008

ಪಕ್ಷಿಲೋಕದ ಸಂದೇಶ

ನೀಲಿ ಬಾಲದ ಕಳ್ಳಿಪೀರ ಪಕ್ಷಿಗಳ ಸಚಿತ್ರ ಜೀವನ ಚರಿತ್ರೆ. ಅವನ್ನು ನೋಡಿ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ಪ್ರತಿ ಚಳಿಗಾಲಕ್ಕೂ ಛಾಯಗ್ರಹಣ ನೆಪದ ಮೇಲೆ ರಂಗನತಿಟ್ಟಿನಲ್ಲಿ ಸರ್ಕೀಟು ಹೋಡೆಯುತ್ತಾ ಪಕ್ಷಿಗಳನ್ನು ಕಂಡು ಪುಳಕಿತನಾಗುವುದು ನನ್ನ ಇಷ್ಟದ ಹವ್ಯಾಸ. ಬೇಸಿಗೆಯಲ್ಲೂ ಕಣ್ಣಿಗೆ ತಂಪಾಗುವ ತಾಣ ಯಾವುದಾದರೂ ಇವೆಯೇ ಎಂದು ಹುಡುಕಿದಾಗ ನಮಗೆ ಕಣ್ಡಿದ್ದು ಶ್ರೀರಂಗಪಟ್ಟಣದಿಂದ ಎಂಟು ಕಿ.ಮೀ. ದೂರದಲ್ಲಿರುವ ನಗುವನಹಳ್ಳಿ ಗ್ರಾಮದ ಕಾವೇರಿ ದಂಡೆ. ಇದಕ್ಕೆ ಸಮೀಪದಲ್ಲೇ ವಿಶಾಲ ಹುಲ್ಲುಗಾವಲಿನಂತಿರುವ ಮೈದಾನವಿದೆ. ಅದನ್ನು ಸೀಳುವ ಒಂದು ಕಾಲುವೆ ನದಿಯನ್ನು ಸೇರುತ್ತದೆ.

ಈ ಕಾಲುವೆಯಲ್ಲಿ ಸುತ್ತ ಮುತ್ತ ನೀಲಿಬಾಲದ ಹಕ್ಕಿಗಳ ಇಂಚರ ಹುಡುಗಾಟ-ಬೇಟೆ-ಬೇಟ. ಕಾಲುವೆ ಗೋಡೆಯಲ್ಲಿ ೨ ರಿಂದ ೫ ಆಡಿ ಎತ್ತರದಲ್ಲಿ ಹಳ್ಳಗಳು ಈ ನೀಲಿಬಾಲದ ಪಕ್ಷಿಗಳ ಗೂಡು ಕಟ್ಟುವ ತಾಣ.

ಇಲ್ಲಿ ಈ ಪಕ್ಷಿಗಳು ಒಟ್ಟಾಗಿ ಹಾರಾಡುವುದು, ಒಟ್ಟಾಗಿ ವಿದ್ಯುತ್ ತಂತಿ ಮೇಲೆ ಕುಳಿತುಕೊಳ್ಳುವುದು, ಆಕಾಶದಲ್ಲಿ ಚಿಟ್ಟೆ, ಡ್ರ್ಯಾಗನ್ ಫ್ಲೈ, ಜೇನುಹುಳು,ದುಂಬಿ ಸೇರಿದಂತೆ ಎಷ್ಟೋ ಕೀಟಗಳನ್ನು ಗುರಿ ತಪ್ಪದ ಹಾಗೆ ಹಾರುತ್ತಲೇ ತನ್ನ ಕೊಕ್ಕಿನಲ್ಲಿ ಬೇಟೆಯಾಡುವ ಪರಿ ಚಂದಕ್ಕಿಂತ ಚಂದ. ಮೇಲ್ಮುಖ-ಕೆಳಮುಖ-ಲಂಬಕಾರ ಹೀಗೆ ಹೇಗೆಂದರೆ ಹಾಗೆ ಹಾರಾಡಬಲ್ಲ-ಹಾರುತ್ತಲೇ ಹಠಾತ್ತನೆ ದಿಕ್ಕು ಬದಲಿಸಬಲ್ಲ ಇವು ಯುದ್ಧ ವಿಮಾನಗಳನ್ನು ನೆನಪಿಸುತ್ತವೆ. ಬೇಟೆಯ ಹಿಂದೆ ಬಿದ್ದು ತನ್ನ ಕೊಕ್ಕಿನಿಂದ ಹಿಡಿದಾಗ "ಪಟ್" ಶಬ್ದ ಕೇಳಿಸಿತೆಂದರೆ ಬಡಪಾಯಿ ಕೀಟಕ್ಕೆ ಮೋಕ್ಷ ಸಿಕ್ಕಿದೆ ಎಂದೆ ಅರ್ಥ. ಇದನ್ನು ಕಾಣಲು ಕಣ್ಣಿನ ಸಾಮಾರ್ಥ್ಯ ಸಾಕಾಗುವುದಿಲ್ಲ. ಅದಕ್ಕೆ ಬೈನಾಕ್ಯುಲರಿನ ನೆರವು ಬೇಕೇಬೇಕು. ಮೇ ತಿಂಗಳು ಉರಿಬಿಸಿಲು. ಈ ಪಕ್ಷಿಗಳು ಬೇಸಿಗೆಯಲ್ಲಿ ಗೂಡು ಕೊರೆದು ಮೊಟ್ಟೆಯಿಟ್ಟು, ಕಾವು ಕೊಟ್ಟು ಹೊರಬಂದ ಮರಿಗಳಿಗೆ ಆಹಾರ ಕೊಡುತ್ತವೆ. ಏಕೆಂದರೆ ಆ ಸಮಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಕಾಲುವೆ ಬದಿಗಳು ಗೂಡು ಕೊರೆಯಲು ಸಹಾಯಕವಾಗಿರುತ್ತವೆ. ಇಂಥ ೩-೪ ಅಡಿ ಎತ್ತರದ ಕಾಲುವೆ ಬದಿಗಳಲ್ಲಿ ೫-೬ ಗೂಡುಗಳು, ಕೆಲವೊಂದು ಕಡೆ ೧೦-೧೨ಕ್ಕೂ ಹೆಚ್ಚು ಗೂಡುಗಳು ಕಂಡುಬರುತ್ತವೆ. ಇನ್ನು ಕೆಲವು ಕಡೆ ಇಪ್ಪತ್ತಕ್ಕೂ ಹೆಚ್ಚು ಪಕ್ಷಿಗೂಡುಗಳಿದ್ದು ಒಳಗಿರುವ ಮರಿಗಳಿಗೆ ಸೂಚನೆ ನೀಡಿ ಆಹಾರ ಕೊಡುವಾಗ ಸಂಭ್ರಮಿಸುವ ರೀತಿ ಆಶ್ಚರ್ಯವನ್ನುಂಟು ಮಾಡುತ್ತವೆ. ಕ್ಯಾಮರ, ಲೆನ್ಸುಗಳನ್ನು ಸ್ಟ್ಯಾಂಡಿಗೆ ಸೆಟ್ ಮಾಡಿ ಕೇಬಲುಗಳನ್ನು ಕ್ಯಾಮರಗಳಿಗೆ ತಗುಲಿಸಿ ಸುಮಾರು ೭೦ ಅಡಿಗಳಷ್ಟು ದೂರದಲ್ಲಿ ರಿಮೋಟ್ ಸ್ವಿಚ್ ಹಿಡಿದು ಕುಳಿತಾಗ ಬೆವರು ಇಳಿಯುತ್ತಿದ್ದರೂ ಕ್ಯಾಮೆರಾ ಫೋಕಸ್ ಮಾಡಿದ ಗಿಡದ ಕಡ್ಡಿಯ ಮೇಲೆ ನೀಲಿ ಬಾಲದ ಕಳ್ಳಿ ಪೀರ ಹಕ್ಕಿಗಳು ಯಾವಾಗ ಬಂದು ಕುಳಿತುಕೊಳ್ಳುತ್ತವೋ ಎಂದು ಎದೆ ಹೊಡೆದುಕೊಳ್ಳುತ್ತಿತ್ತು. ಎರಡು ಗಂಟೆ ಕಳೆದ ನಂತರ ಒಂದು ಹಕ್ಕಿ ಬಂದು ಕುಳಿತುಕೊಂಡಿತು.

ಹತ್ತು ಸೆಕೆಂಡಿನ ನಂತರ ತನ್ನ ಗೂಡಿಗೆ ಹೋಗಿ ತಾನು ಹಿಡಿದು ತಂಡಿದ್ದ ಆಹಾರವನ್ನು ಮರಿಗಳಿಗೆ ಕೊಟ್ಟು ವಾಪಾಸ್ ಹೊರಗೆ ಹಾರಿಹೋಯಿತು. ಸ್ವಲ್ಪ ಹೊತ್ತಿನ ನಂತರ ಇನ್ನೊಂದು, ಮಗದೊಂದು ಬಂದು ಆ ಕಡ್ಡಿಯ ಮೇಲೆ ಕೂರಲಾರಂಭಿಸಿದೆವು. ಪ್ರತಿಯೊಂದು ಹಕ್ಕಿ ತನ್ನದೇ ಆದ ಪ್ರತಿಭೆಯಿಂದ ಕೊಕ್ಕಿನಲ್ಲಿ ಹಿಡಿದುತಂದ ಆಹಾರದಲ್ಲಿ ವಿಭಿನ್ನತೆಗಳೆಷ್ಟು? ಪ್ರತಿಯೊಬ್ಬರಲ್ಲೂ ಒಂದೊಂದು ವಿಭಿನ್ನ ಪ್ರತಿಭೆ ಇರುವಂತೆ, ಒಂದು ಹಕ್ಕಿ ಕಡುನೀಲಿ ಬಣ್ಣದ ದುಂಬಿ ಹಿಡಿದು ತಂದರೆ,
ಮತ್ತೊಂದರ ಬಾಯಲ್ಲಿ ಜೀಬ್ರಾ ಬಣ್ಣದ ಪಟ್ಟಿಯಿರುವ ಡ್ರ್ಯಾಗನ್ ಫ್ಲೇ. ಇನ್ನೊಂದು ಹಕ್ಕಿ ಕೆಂಪು ಬಣ್ಣದ ಮಿರುಗುವ ಡ್ರ್ಯಾಗನ್ ಫ್ಲೇ ತಂದರೆ ಮಗದೊಂದು ಹಕ್ಕಿ ಹಳದಿ ಬಣ್ಣದಲ್ಲಿ ಕಪ್ಪು ಚುಕ್ಕಿಗಳಿರುವ "ಲೈಮ್ ಬಟರ್ ಫ್ಲೇ" ಎಂಬ ಹೆಸರಿನ ಸುಂದರ್ ಚಿಟ್ಟೆಯನ್ನೇ ಬಾಯಲ್ಲಿರಿಸಿಕೊಂಡಿದೆ.

ಜೇನು ಹುಳು, ಮಿಡತೆಗಳು ಇನ್ನು ಆನೇಕ ಜಾತಿಯ ಕೀಟಗಳು ಇವುಗಳ ಕಣ್ಣಿಗೆ ಮಾತ್ರ ಬೀಳುತ್ತವೆಯೇನೋ! ಬೈನಾಕ್ಯುಲರಿನಲ್ಲಿ ಎಲ್ಲವನ್ನು ನೋಡುತ್ತಿದ್ದರೆ ಇವೆಲ್ಲವನ್ನು ಸೃಷ್ಟಿಸಿದ, ನೋಡುವ ಭಾಗ್ಯ ಕರುಣಿಸಿದ ಪ್ರಕೃತಿ ದೇವನಿಗೆ ನಮೋ ನಮಃ ಎಂದು ಮನಸ್ಸಿನಲ್ಲಿಯೇ ಹೇಳುವಂತಾಯಿತು.

ಹೊಳೆಯಲ್ಲಿ ಬಟ್ಟೆ ತೊಳೆಯಲು ಬರುವ ಹಳ್ಳಿಯ ಜನರು ಹಕ್ಕಿಗಳ ಗೂಡುಗಳಿವೆ ಎಂದು ತಿಳಿಯದೆ, ಪಕ್ಷಿಗೂಡುಗಳು ಮುಚ್ಚಿಹೋಗುವಂತೆ ಬಟ್ಟೆ ಒಣಹಾಕುತ್ತಿದ್ದರು. ಈ ಬಟ್ಟೆಗಳಿಂದ ಹೆದರಿದ ಹಕ್ಕಿಗಳು ಬಾಯಲ್ಲಿ ಆಹಾರ ತಂದರೂ ಗೂಡಿಗೆ ಹೋಗಲು ಹಿಂಜರಿಯುತ್ತಿದ್ದವು. ಅಲ್ಲಿಯೇ ಇದ್ದ ನಾನು ಆ ಹಳ್ಳಿ ಜನರಿಗೆ ಅವರೇ ಹಾಕಿರುವ ಬಟ್ಟೆಗಳ ಹತ್ತಿರದಲ್ಲಿರುವ ಗೂಡುಗಳನ್ನು ತೋರಿಸಿ, ಒಳಗೆ ಮರಿಗಳು ಇವೆ. ವಿದ್ಯುತ್ ತಂತಿ ಮೇಲೆ ಆಹಾರ ಕೊಡಲು ಕಾಯುತ್ತಿರುವ ಹಕ್ಕಿಗಳು ನೀವು ಹಾಕಿರುವ ಬಟ್ಟೆಗಳಿಂದಾಗಿ ಹೆದರಿಕೊಂಡು ಗೂಡಿಗೆ ಬರಲು ಹಿಜರಿಯುತ್ತಿವೆಯೆಂದು, ಇದರಿಂದಾಗಿ ಮರಿಗಳು ಉಪವಾಸದಿಂದ ಸತ್ತುಹೋಗುತ್ತವೆ ಎಂದು ಅವರಿಗೆ ವಿವರಿಸಿದಾಗ ಅವರಿಗೆ ತಮ್ಮ ತಪ್ಪಿನ ಅರಿವಾಗಿ, ತಮ್ಮ ಬಟ್ಟೆಗಳನ್ನು ಅಲ್ಲಿಂದ ತೆಗೆದುಹಾಕಿದರು.
ಇದೆಲ್ಲದರ ನಡುವೆ ಈ ಪಕ್ಷಿಗಳ ಛಾಯಾಚಿತ್ರ ಸೆರೆಹಿಡಿಯುವ ನಮ್ಮ ಕಾಯಕವು ಮುಂದುವರಿದಿತ್ತು. ಎಲ್ಲಾ ಮುಗಿಸಿ ಸಂಜೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ರೈಲ್ವೇ ನಿಲ್ದಾಣದಲ್ಲಿ ಬೆಂಗಳೂರಿನ ರೈಲು ಹತ್ತಿದಾಗ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸುತ್ತಿದ್ದ. ನನ್ನ ಮನಸ್ಸಿನಲ್ಲಿ ನೀಲಿ ಬಾಲದ ಕಳ್ಳಿ ಪೀರ ಪಕ್ಷಿಗಳು, ಅವುಗಳ ಚಿತ್ರಗಳೇ ಅಚ್ಚೊತ್ತಿದ್ದವು. ಅವು ನೀಡಿದ ಭಾತೃತ್ವದ ಸಂದೇಶ ಹಸಿರಾಗಿತ್ತು.
ಶಿವು ಕೆ.
[ದಿನಾಂಕ ೨೩ ಆಗಸ್ಟ್ ೨೦೦೭ರ ಸುಧಾ ವಾರಪತ್ರಿಕೆಯಲ್ಲಿ ಫೋಟೊ ಸಹಿತ ಪ್ರಕಟಗೊಂಡ ಲೇಖನ].