ಅವನ ಅಂಗಡಿಗೆ ಕಳೆದ ನಾಲ್ಕು ವರ್ಷಗಳಿಂದ ಹೋಗುತ್ತಿದ್ದೇನೆ. ಯಾವಾಗ ಹೋದರೂ ಅಂಥ ಸುಂದರ ಕನ್ನಡಿಯ ಮುಂದೆ ಒಂದು ನಿಮಿಷ ನನ್ನ ಮುಖಾರವಿಂದವನ್ನು ಚೆನ್ನಾಗಿ ಗಮನಿಸಿ ಸೀಟಿಗೊರಗಿಬಿಡುತ್ತಿದ್ದೆ.
ಆತ ತಲೆಕೂದಲಿಗೆ ಸ್ವಲ್ಪ ನೀರು ಚಿಮುಕಿಸಿ, ಕೈಯಲ್ಲೊಮ್ಮೆ ನೀಟಾಗಿ ನೀವಿ, ತಲೆಯ ಮೇಲೆ ಕಚ್ ಕಚ್ ಕಚ್ ಕಚ್ ಕಚಕ್....ಅಂತ ಒಂದೆರಡು ಬಾರಿ ಅನ್ನುವಷ್ಟರಲ್ಲಿ ಅದ್ಯಾವ ಮಾಯೆಯಲ್ಲಿ ನಿದ್ರೆ ಆವರಿಸುತ್ತೋ ನಾ ಕಾಣೇ. ಒಂದು ಹತ್ತು ನಿಮಿಷ ಕೋಳಿನಿದ್ರೆ. ಅದರ ಆನಂದವೇ ಬೇರೆ. ಎಲ್ಲೋ ದೂರದ ಆಕಾಶದಲ್ಲಿ ತೇಲಿದಂತೆ. ಯಾವಾಗಲೂ ಅದೇ ಪುಟ್ಟಕನಸು ಬೀಳುತ್ತದೆ. ಮತ್ತೆ ಮದ್ಯದಲ್ಲೆಲ್ಲೊ ಅವನು ನನ್ನ ಕತ್ತನ್ನು ಹಿತವಾಗಿ ತಿರುಗಿಸಿ ಮತ್ತೊಂದು ಕಡೆ ಕಚ ಕಚ ಕಚ ಕಚ ಕಚಕ್...ಅನ್ನುತ್ತಿದ್ದರೂ ನನಗೆ ಗೊತ್ತಾಗುವುದಿಲ್ಲ....ಆ ಮಟ್ಟಿನ ಸುಖನಿದ್ರೆ. ಇಷ್ಜಕ್ಕೂ ಕಳೆದ ನಾಲ್ಕು ವರ್ಷಗಳಿಂದ ನನಗೆ ಯಾವರೀತಿ ಇರಬೇಕು ತಲೆ[ಕಟಿಂಗ್] ಅನ್ನುವುದು ಅವನಿಗೆ ಚೆನ್ನಾಗಿ ಗೊತ್ತಿದೆಯಾದ್ದರಿಂದ ಅಲ್ಲಿ ನಮ್ಮ ನಡುವೆ ಮಾತಿನ ಅವಶ್ಯಕತೆಯಿರುತ್ತಿರಲಿಲ್ಲ.
ಕಟಿಂಗ್ ಮುಗಿಸಿದ ಮೇಲೆ ಆಣ್ಣಾ ಆಯ್ತು ನೋಡಿ ಅಂತ ನನ್ನನ್ನು ಅಲುಗಿಸುತ್ತಿದ್ದ. ನಾನು ತಕ್ಷಣ ಆ ಕೋಳಿನಿದ್ರೆಯಿಂದ ಎಚ್ಚರವಾಗುತ್ತಿದ್ದೆ. ಅವನು ಶೇವಿಂಗ್‌ಗಾಗಿ ಕ್ರೀಮು ಬ್ಲೇಡು ಸಿದ್ದಮಾಡಿಕೊಳ್ಳುತ್ತಿದ್ದ.
ಅವತ್ತು ನಿದ್ದೇ ಹೋಗಬೇಕೆಂದರೂ ಮಾಡಲಾಗಲಿಲ್ಲ...ಕಾರಣ ಕಟಿಂಗ್ ಮಾಡುವವನ ಬಾಲ್ಡಿ ತಲೆ. ಇಷ್ಟು ದಿನ ಅದು ನನ್ನ ತಿಳುವಳಿಕೆಗೆ ಬರದಿದ್ದುದೇ ಆಶ್ಚರ್ಯ. ಬಹುಶಃ ಈಗ ನಾನು ಸದಾ ಭೂಪಟಗಳ ಹುಡುಕಾಟದಲ್ಲಿರುವುದಕ್ಕೆ ಆತನ ಬಾಲ್ಡಿ ತಲೆ ಗಮನಕ್ಕೆ ಬಂದಿರಬೇಕು. ವಯಸ್ಸು ಐವತ್ತು ದಾಟಿದರೂ ಎಲ್ಲರನ್ನೂ ಬಾರಣ್ಣ ಹೋಗಣ್ಣ ಅಂತಲೇ ಮಾತಾಡಿಸುವಷ್ಟು ಸೌಜನ್ಯ ಆತನಲ್ಲಿತ್ತು. ಅಂದು ಸ್ವಲ್ಪ ಟೆನ್ಷನ್‌ನಲ್ಲಿದ್ದನೆನಿಸುತ್ತೆ. ಮತ್ತೊಬ್ಬ ಕೆಲಸಗಾರ ಹುಡುಗ ಬಂದಿರಲಿಲ್ಲವಾದ್ದರಿಂದ ಗೊಣಗುತ್ತಿದ್ದ.
"ಯಾಕಣ್ಣ ಇವತ್ತು ಇಷ್ಟೊಂದು ಟೆನ್ಷನಲ್ಲಿದ್ದೀಯಾ"
"ಹೂ ಕಣಣ್ಣ..ಏನ್ ಮಾಡೋದು ಬಡ್ಡಿಮಕ್ಕಳು ಸರಿಯಾಗಿ ಕೆಲಸಕ್ಕೆ ಬರೋಲ್ಲ. ಅದಕ್ಕೆ ತಲೆಯೆಲ್ಲಾ ಕೆಟ್ಟುಹೋಗುತ್ತೆ...."
"ಹೋಗ್ಲಿಬಿಡಣ್ಣ ಅದಕ್ಯಾಕೆ ಟೆನ್ಷನ್ ಮಾಡಿಕೊಳ್ಳುತ್ತೀಯಾ...ಸಮಾಧಾನ ಮಾಡ್ಕೋ...ಯಾಕಂದ್ರೆ ನೀನು ಕಟಿಂಗ್ ಮಾಡುವಾಗ ನಿನ್ನ ಮೇಲಿನ ನಂಬಿಕೆಯಿಂದ ನಾನು ನಿದ್ರೆ ಹೋಗಿಬಿಡ್ತೀನಿ...ಆ ಸಮಯದಲ್ಲಿ ಈ ಟೆನ್ಷನ್ ಎಫೆಕ್ಟ್ ಆಗಬಾರದಲ್ವ.?"
"ಛೇ..ಛೇ..ಎಲ್ಲಾದ್ರೂ ಉಂಟೇ.....ಅಂಗೇನು ಆಗಕ್ಕಿಲ್ಲ ಬುಡಿ. ಅಂದವನ್ನು ಸ್ವಲ್ಪ ತಡೆದು ನೋಡಣ್ಣ ಈ ಮನೇಲಿ ಸಂಸಾರ, ಮಕ್ಕಳು ಮನೆ, ಅಂಗಡಿ ಬಾಡಿಗೆ ಸಾಲ, ಇತ್ಯಾದಿ ಅಂತ ಒಂದು ಕಡೆ ಟೆನ್ಷನ್ ಮತ್ತೊಂದುಕಡೆ ಈ ಕೆಲಸದ ಹುಡುಗರ ಬರಲಿಲ್ಲವಲ್ಲ ಅನ್ನೋ ಟೆನ್ಷನಾಗೆ ನನ್ನ ತಲೆಕೂದಲೆಲ್ಲಾ ಉದುರಿಹೋಯ್ತು..."
ಕೂದಲು ಉದುರಿಹೋಯ್ತು ಅಂದಾಕ್ಷಣ ನನ್ನ ನಿದ್ರೆಯೂ ಹಾರಿಹೋಗಿತ್ತು.
"ಅಲ್ಲಣ್ಣ ಟೆನ್ಷನ್ ಮಾಡಿಕೊಂಡ್ರೆ ಕೂದಲು ಉದುರುತ್ತಾ..." ಕೇಳಿದೆ.
"ಇಲ್ವಾ ಮತ್ತೆ ಎಲ್ಲಾ ತಾಪತ್ರಯಗಳು ಒಟ್ಟಿಗೆ ನಮ್ಮನ್ನು ಅಮರಿಕೊಂಡುಬಿಟ್ಟರೆ...ಟೆನ್ಷನ್ ಜಾಸ್ತಿಯಾಗಿಬಿಡುತ್ತೆ ಕಣಣ್ಣ..."
"ಆದ್ರೆ ನನಗೂ ನಿನ್ನಂಗೆ ಟೆನ್ಷನ್ ಆಗುತ್ತೆ ಆದ್ರೂ ನನ್ನ ಕೂದಲು ಉದುರಿಲ್ಲವಲ್ಲಣ್ಣ"
"ನಿನಗ್ಯಾಕೆ ಉದುರಿಲ್ಲ ಅಂತ ಹೇಳ್ತೀನಿ ಕೇಳು, ನೀನು ಮನಸ್ಸಿನಲ್ಲಿ ಗುಣಾಕಾರ ಮಾಡೋಲ್ಲ ಅದಕ್ಕೆ ನಿನ್ನ ಕೂದಲು ಉದುರಿಲ್ಲ."
"ಗುಣಾಕಾರ" ಅನ್ನುವ ಲೆಕ್ಕಾಚಾರದ ಪದವೇ ನನಗೆ ಕುತೂಹಲ ಕೆರಳಿಸಿತ್ತು.
"ಅದು ಹೇಗೆ ಅಂತ ಸ್ವಲ್ಪ ಬಿಡಿಸಿ ಹೇಳಣ್ಣ"
"ನಿನಗಿನ್ನೂ ವಯಸ್ಸು ಚಿಕ್ಕದು ಯಾವುದೇ ಟೆನ್ಷನ್ ಇಲ್ಲ. ನಮ್ಮದೂ ಆಗಲ್ಲವಲ್ಲಣ್ಣ..ಯಾವಾಗಲೂ ಮನಸ್ಸಿನಲ್ಲೇ ಗುಣಾಕಾರ ಮಾಡುತ್ತಿರುತ್ತೇವೆ...ಮನೆಬಾಡಿಗೆ, ಮಕ್ಕಳ ಸ್ಕೂಲ್ ಫೀಜು, ಬಟ್ಟೆ ಬರೆ, ಎಲ್ಲಾ ನಮ್ಮ ದುಡಿಮೆಗಿಂತ ಹೆಚ್ಚಾಗಿ ಖರ್ಚು ಬರೋದ್ರಿಂದ ಪ್ರತಿದಿನ ಎಷ್ಟು ದುಡಿಬೇಕು ಅಂತ ಗುಣಾಕಾರ ಮಾಡುತ್ತಿರುತ್ತೇವೆ. ಆ ಸಮಯದಲ್ಲಿ ಈ ಹುಡುಗರು ಕೈಕೊಟ್ಟಾಗ ನಮ್ಮ ಲೆಕ್ಕಾಚಾರ ತಪ್ಪಾಗಿ ಟೆನ್ಷನ್ ಆಗಿ ತಲೆಕೂದಲೆಲ್ಲಾ ಉದುರಿಹೋಗುತ್ತೆ." ಒಂದು ವಾದ ಮಂಡಿಸಿದ.
ಕೇವಲ ಗುಣಾಕಾರದಲ್ಲೇ ಇಷ್ಟೆಲ್ಲಾ ಇದೆಯೆಂದಮೇಲೆ ಇನ್ನೂ ಬೇರೆ ಆಕಾರಗಳಗೆ ಅವನ ಮನಸ್ಸಿನಲ್ಲಿ ಏನಿರಬಹುದು ಅಂತ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು.
ನಡುವೆ ಕತ್ತರಿಯ ಕಚ್ ಕಚ್ ಕಚ್ ಕಚಕ್....ಕಚ್............ಸರಾಗವಾಗಿ ನಡೆಯುತ್ತಿತ್ತು.
"ಅಲ್ಲಣ್ಣ ಕೇವಲ ಗುಣಾಕಾರಕ್ಕೆ ಈ ರೀತಿ ಕೂದಲು ಉದುರಿದ್ರೆ ಇನ್ನೂ ಭಾಗಾಕಾರ, ಕೂಡೋದು, ಕಳೆಯೋದು ಮಾಡಿದ್ರೆ ಯಾವ ಯಾವ ತರ ಕೂದಲು ಉದುರಬಹುದು ಅಂತೀನಿ...."
"ನೋಡಣ್ಣ ನಾನು ಈ ಲೈನಿಗೆ ಬಂದು ನಲವತ್ತು ವರ್ಷವಾಯ್ತು. ನನಗೆ ೨೦-೩೦-೪೦ ವರ್ಷಗಳ ಗಿರಾಕಿಗಳು ಇದ್ದಾರೆ. ಅವರ ಕಷ್ಟ ಸುಖಗಳು ನಮಗೂ ಗೊತ್ತಾಗುತ್ತೆ....ಅದರ ಅನುಭವದ ಪ್ರಕಾರ ಹೇಳುವುದಾದರೆ......" ಸ್ವಲ್ಪ ತಡೆದು...
"ದುಡಿದ ಹಣವನ್ನೆಲ್ಲಾ ಜೀವನ ಫೂರ್ತಿ ಕೂಡಿಡುವ ಜಿಪುಣ, ನಿಪುಣ, ಬುದ್ಧಿವಂತ ಜನರ ಮೆದುಳಿನ ಮುಂಭಾಗದ ನರಗಳಿಗೆ ಇವರ ಟೆನ್ಷನ್‌ನಿಂದಾಗಿ ಓವರ್ ಟೈಮ್ ಕೆಲಸ ಬಂದುಬಿಡುತ್ತೆ. ಆವು ಎಷ್ಟು ಅಂತ ಕೆಲಸ ಮಾಡ್ತವೆ. ಅವಕ್ಕೂ ಸುಸ್ತಾಗಿ ಮಲಕ್ಕೊಂಡಾಗೆಲ್ಲಾ ಹಣೆಯ ಕಡೆಯಿಂದ ಕೂದಲು ಉದುರಿ ಬಾಲ್ಡಿಯಾಗುತ್ತವೆ. "
ಆದೇ ಕ್ಷಣಕ್ಕೆ ನನಗೆ ಶ್ರೀಲಂಕಾ, ಬಾರ್ಬಡೋಸ್, ದಕ್ಷಿಣಾ ಅಮೇರಿಕಾ ನಕಾಶೆಗಳು ನೆನಪಾದವು.
"ಮತ್ತೆ ಅವತ್ತು ದುಡಿದಿದ್ದು ಸಾಲದೇ ಪ್ರತಿದಿನ ಸಾಲಮಾಡಿ ತೀರಸೋಕೆ ಮತ್ತೊಂದು ಸಾಲ, ಅದನ್ನು ತೀರಿಸೋಕ್ಕೆ ಮಗದೊಂದು ಸಾಲ ಹೀಗೆ ಸಾಲದಲ್ಲಿ ಸಿಕ್ಕಿಹಾಕಿಕೊಂಡ ಟೆನ್ಷನ್ನಿಗೆ ಮೆದುಳಿನ ನೆತ್ತಿಯ ಕಡೆ ಅಡ್ಡಡ್ಡ ಮಲಗಿರೊ ಸೋಮಾರಿ ನರಗಳಿಗೆ ಜಾಮರಿವಷ್ಟು ಕೆಲಸ ಬಿದ್ದುಬಿಡುತ್ತೆ. ಆಗ ನೋಡು ತಲೆಯ ನೆತ್ತಿಯ ಭಾಗದಿಂದ ಕೂದಲು ಉದುರಲು ಶುರುವಾಗಿ ನೆತ್ತಿ ದೊಡ್ಡ ಕೆರೆಯಂತೆ ಗುಂಡಗಾಗಿಬಿಡುತ್ತದೆ. ನೋಡು ನನ್ನ ತಲೆ ತರ"... ತೋರಿಸಿದ. ಆ ಕ್ಷಣದಲ್ಲಿ ನನಗೆ ನೆನಪಾದದ್ದು ಭೂತಾನ್, ಆಷ್ಟ್ರೇಲಿಯಾ, ಸೌತ್ ಕೊರಿಯಾ, ಇತಿಯೋಫಿಯಾ.
"ಓಹ್ !.....ಬಾಲ್ಡಿಯಾಗೊದ್ರಲ್ಲಿ ಇಷ್ಟೆಲ್ಲಾ ವೈರೈಟಿಗಳಿರುತ್ತಾ.."
"ಮತ್ತೆ ಸುಮ್ಮನೇ ಅಂದುಕೊಂಡೆಯೇನಣ್ಣ.....ಇಷ್ಟು ವರ್ಷದ ಅನುಭವದಲ್ಲಿ ಅವರನ್ನು ಗಮನಿಸಿ ಆದ ಅನುಭವದಲ್ಲಿ ಇದೆಲ್ಲಾ ಹೇಳ್ತೀದ್ದೀನಿ..."
ಆಷ್ಟರಲ್ಲಿ ನನ್ನ ಕಟಿಂಗ್, ಶೇವಿಂಗ್ ಮುಗಿದಿತ್ತು.
" ಮತ್ತೆ ಜೀವನ ಪೂರ್ತಿ ಬಾಲ್ಡಿಯಾಗದೇ ಇರುವವರು ಯಾವ ಲೆಕ್ಕಾಚಾರಕ್ಕೆ ಸೇರುತ್ತಾರೆ". ಅವನಿಗೆ ದುಡ್ಡು ಕೊಡುತ್ತಾ ಕೇಳಿದೆ.
"ಹೇ ಹೋಗಣ್ಣ ಅಂಗೆಲ್ಲಾದ್ರು ಉಂಟಾ...! ಪ್ರತಿಯೊಬ್ಬರ ಜೀವನದಲ್ಲೂ ಟೆನ್ಷನ್ ಬರಲೇ ಬೇಕು. ಬಾಲ್ಡಿಯಾಗಲೇಬೇಕು. ಟೆನ್ಷನ್ ಮನಷ್ಯನಿಗೆ ಬರೆದೇ ಮರಕ್ಕೆ, ಪ್ರಾಣಿಗೆ ಪಕ್ಷಿಗಳಿಗೆ ಬರುತ್ತಾ....ಹಾಗೇ ಬಾಲ್ಡಿ ತಲೆ ಮನುಷ್ಯನಿಗಾಗದೇ ಪ್ರಾಣಿ, ಪಕ್ಷಿ, ಮರಗಳಿಗೆ ಆಗುತ್ತಾ"....!
ನಿತ್ಯ ಅನುಭವಗಳ ಜೊತೆ ವಿಜ್ಞಾನವನ್ನು ಲಿಂಕಿಸಿಕೊಂಡು ಮಂಡಿಸುತ್ತಿದ್ದ ಅವನ ಮಾತುಗಳು ನನಗೆ ಗೊಂದಲವನ್ನುಂಟುಮಾಡಿದರೂ ಅವನ ಕೊನೆಯ ಮಾತಿಗೆ ಉತ್ತರಿಸಲಾಗದೆ.....ನಕ್ಕು ಹೊರಬಂದಿದ್ದೆ.
ಈ ಲೇಖನದ ಜೊತೆಗೆ ಒಂದಷ್ಟು ಭೂಪಟಗಳನ್ನು ನಿಮಗೆ ತೋರಿಸಲಿಚ್ಛಿಸುತ್ತೇನೆ...
ಯುನೈಟೆಡ್ ಸ್ಟೇಟ್ಸ್ ಆಪ್ ಅಮೇರಿಕಾ...

ಅಮೇರಿಕಾ ಬಗ್ಗೆ ಒಂದಷ್ಟು ವಿವರವನ್ನು ಕೊಡೋಣವೆಂದುಕೊಂಡರೇ....ಬೇಡವೆನಿಸಿತು...ಇಪ್ಪತ್ತು ವರ್ಷಗಳ ಹಿಂದೆ ಆಗಿದ್ದರೇ ಅದು ಭೂಲೋಕ ಸ್ವರ್ಗ...ಅಲ್ಲಿಗೆ ಹೋಗುವುದೇ ಜೀವನದ ಸಾರ್ಥಕತೆ ಎನ್ನುವಷ್ಟರ ಭೂಲೋಕ ಸ್ವರ್ಗವೆನಿಸಿತ್ತು. ಈಗ ಅದೇ ಈ ಲೋಕದ ನರಕವೆನಿಸಿರುವುದರಿಂದ ಅದರ ಬಗ್ಗೆ ಬರೆಯುವುದೇ ಬೇಡವೆನಿಸಿತ್ತು...
--------- ----------- ------------
ಪೋರ್ಟೋರಿಕೋ....

ವೆಸ್ಟ್ ಇಂಡೀಸ್ ದ್ವೀಪ ಸಮೂಹ ರಾಷ್ಟ್ರಗಳಲ್ಲಿ ಸ್ವತಂತ್ರ ರಾಷ್ಟ್ರ ಪೋರ್ಟೋರಿಕೋ
ಏರಿಯಾ ವಿಸ್ತೀರ್ಣ: 13,791 ಚ. ಕಿಲೋಮೀಟರ್. ಜನಸಂಖ್ಯೆ: 38,58,000.
ರಾಜಧಾನಿ : ಸ್ಯಾನ್ ಜುವಾನ್.
ಕಾಮನ್ ವೆಲ್ತ್ ಸದಸ್ಯ ರಾಷ್ಟ್ರ. ಸಾಕ್ಷರತೆ ಪ್ರಮಾಣ: ೯೦%. ಮಾತಾಡುವ ಭಾಷೆಗಳು: ಸ್ಪ್ಯಾನಿಷ್, ಇಂಗ್ಲೀಷ್.
ಕರೆನ್ಸಿ: ಯುಎಸ್ ಡಾಲರ್. ಕೈಗಾರಿಕೋದ್ಯಮ ಮುಖ್ಯ ಉದ್ಯಮ. ಸುಂದರವಾದ ಬೀಚ್‌ಗಳು, ಕಣ್ತಣಿಸುವ ಬೆಟ್ಟಗುಡ್ಡಗಳಿಂದ ಕೂಡಿದ್ದು ಪ್ರವಾಸೋದ್ಯಮವೂ ಮುಖ್ಯ ಉದ್ಯೋಗವಾಗಿದೆ.
--------- -------- ---------
ಕರ್ನಾಟಕ ರಾಜ್ಯ. ಭೂಪಟದ ಮೇಲು ಬಳ್ಳಾರಿ ಗಣಿದಣಿಗಳ ಎಫೆಕ್ಟ್ ಆಗಿದೆಯೇ? ಬಾಲ್ಡಿ ತಲೆಯಲ್ಲಿ ಗಾಯದ ಕಲೆಗಳು ಅದನ್ನೇ ಸೂಚಿಸುವಂತಿದೆಯಲ್ಲಾ....!

ನಮ್ಮದೇ ರಾಜ್ಯದ ಬಗ್ಗೆ ಏನು ಬರೆಯುವುದು....ಸದ್ಯ ಬಳ್ಳಾರಿಯ ಗಣಿದಣಿಗಳ ಎಫೆಕ್ಟ್ ಭೂಪಟಕ್ಕಾದಂತೆ, ರಾಜ್ಯದ ಮೇಲು ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆಯಿಲ್ಲ..ಬೆಳೆಯಿಲ್ಲ..ಬೆಲೆ ಏರಿಕೆ. ನಾನಂತೂ ದಿನಪತ್ರಿಕೆ, ಫೋಟೋಗ್ರಫಿ, ಬ್ಲಾಗ್ ಕುಟ್ಟುತ್ತಿದ್ದೇನೆ. ನೀವು ನಿಮ್ಮ ಕೆಲಸ ಬಿಟ್ಟರೇ ಬೇರೇನು ಮಾಡುತ್ತಿಲ್ಲ...ಎಲ್ಲಾ ಹೇಗಿದೆಯೋ ಹಾಗೆ ಇದೆ. ಯಾವ ಪಕ್ಷ ಬಂದರೂ ಹೊಸದೇನನ್ನು ನಿರೀಕ್ಷಿಸುವಂತಿಲ್ಲ...ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ..ಬಡವರು ಇನ್ನೂ ಬಡವರಾಗುತ್ತಿದ್ದಾರೆ. ಬರೆದರೆ ಇನ್ನೂ ಭಾಷೆ, ಹೊರರಾಜ್ಯದ ಜನರ ವಲಸೆ, ಇತ್ಯಾದಿ ಬರೆಯಬಹುದಾದರೂ ಬೇಡವೆಂದು ನಿಲ್ಲಿಸಿದ್ದೇನೆ...
ಚಿತ್ರ ಮತ್ತು ಲೇಖನ
ಶಿವು.ಕೆ. ARPS.