"ಅಯ್ಯೋ ಇವನ್ನು ಮೊದಲು ತೆಗೆದುಕೊಂಡು ಹೋಗು ಶಿವು...ಸುಮ್ಮನೆ ನಂದಿಬಟ್ಟಲು ಗಿಡದ ಎಲೆಗಳನ್ನು ತಿಂದು ಇಡೀ ಮರವನ್ನೇ ಬೋಳು ಮಾಡಿಬಿಡ್ತವೆ" ಅಂತ ಗೆಳತಿ ಸುನಿತಾ ಮತ್ತೊಮ್ಮೆ ಹೇಳಿದಾಗ ನನಗೆ ನಗು ಬಂತು.
ಪಾಪ ! ಅವಳಿಗೇನು ಗೊತ್ತು ? ಈ ಹುಳುಗಳಿಗೆ ನಂದಿಬಟ್ಟಲು ಗಿಡದ ಎಲೆಗಳೇ ಆಹಾರವೆಂದು..
"ಶಿವು ಅನ್ನೋ ಛಾಯಾಗ್ರಾಹಕನೇ ಎಲ್ಲಿದ್ದಿಯೋ...ನೀನು ಇವತ್ತೇ ನಮ್ಮನೆಗೆ ಬರಬೇಕು. ಇಲ್ಲಿ ನನಗೆ ನಂದಿಬಟ್ಟಲು ಗಿಡದ ಎಲೆಗಳನ್ನೆಲ್ಲಾ ಬಕಾಸುರರಂತೆ ತಿಂದು ಮುಗಿಸುವ ಹುಳುಗಳು, ಅವುಗಳನ್ನು ಬೇಟೆಯಾಡಲು ನಮ್ಮೆ ಮನೆಯ ಟೆರಸ್ ಮೇಲೆ ಗುಂಪು ಗೂಡಿರುವ ಕಾಗೆಗಳ ಕಾಟ ನಮಗಂತು ಸಹಿಸಲಾಗುತ್ತಿಲ್ಲ. ಬೇಗ ಬಂದು ಇವುಗಳಿಗೆ ಒಂದು ಗತಿ ಕಾಣಿಸು. ನೀನು ಇವತ್ತು ಬರದಿದ್ದಲ್ಲಿ ನಾನೇ ನಿನಗೊಂದು ಗತಿ ಕಾಣಿಸುತ್ತೀನಿ" ಅಂತ ಸುನೀತಾ ಒಂದೇ ಸಮನೆ ಫೋನಿನಲ್ಲಿ ಬಡಬಡಿಸಿದಾಗ ಇರುವ ಕೆಲಸವನ್ನೇಲ್ಲಾ ಬಿಟ್ಟು ಅವಳ ಮನೆಗೆ ಹೋಗಿದ್ದೆ.
ನಂದಿಬಟ್ಟಲು ಗಿಡದ ಕಾಂಡ ಮತ್ತು ಎಲೆಗಳು
ಇಷ್ಟಕ್ಕೂ ಈ ಮೊದಲು ಅವಳ ಮನೆಗೆ ಹೋಗಿದ್ದಾಗ ಅವಳ ಮನೆಯ ಕಾಂಪೌಂಡಿನೊಳಗಿದ್ದ ನಂದಿಬಟ್ಟಲು ಗಿಡ, ಅದರ ಎಲೆಗಳು, ಒಲಿಯಾಂಡರ್ ಹಾಕ್ ಮಾತ್ ಎನ್ನುವ ಪತಂಗ ರಾತ್ರಿ ಸಮಯದಲ್ಲಿ ಆ ಗಿಡದ ಎಲೆಗಳ ಮೇಲೆ ಕೂತು ಮೊಟ್ಟೆ ಇಡುವುದು, ಜೋಳದ ಕಾಳಿನ ಗಾತ್ರದ ಮೊಟ್ಟೆಯಿಂದ ಹುಳು ಹೊರಬಂದು ಅದೇ ಎಲೆಯನ್ನು ತಿನ್ನುವುದು, ನಂತರ ಅದು ತೋರುಬೆರಳು ಗಾತ್ರದ ಹುಳುವಾಗಿ ಬೆಳೆಯುವ ವಿಚಾರವನ್ನೆಲ್ಲಾ ಅವಳಿಗೆ ಉಪನ್ಯಾಸ ಕೊಟ್ಟು ಬಂದಿದ್ದೆ. ಆಗ ನಾನು ಹೇಳಿದ್ದನ್ನೆಲ್ಲಾ ನಂಬಿದ್ದಳು. ಈಗ ಅವುಗಳ ಕಾಟ ತಡೆಯಲಾಗದೆ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದಳು.
ಮರುದಿನ ಪ್ರಾರಂಭವಾಯಿತು ನನ್ನ ಮನೆಯಲ್ಲಿ ಅದರ ಲಾಲನೆ ಪಾಲನೆ. ಒಂದು ಹೂ ಕುಂಡದಲ್ಲಿ ಏಳೆಂಟು ಎಲೆಗಳಿರುವ ನಂದಿಬಟ್ಟಲು ಗಿಡದ ಕಾಂಡವನ್ನು ಇಟ್ಟು ಅದರ ಎಲೆಗಳ ಮೇಲೆ ಈ ಹುಳುವನ್ನು ಬಿಟ್ಟೆ. ಸ್ವಲ್ಪ ಸಮಯದ ನಂತರ ಹುಳು ಎಲೆಯನ್ನು ತಿನ್ನತೊಡಗಿತು. ಒಂದು ತಾಸಿಗೆ ಒಂದು ಎಲೆಯನ್ನು ಹಾಕಿತು. ಜೊತೆಗೆ ಹಿಕ್ಕೆ ಹಾಕುವುದು, ಹೀಗೆ ಮೊದಲನೇ ದಿನವೇ ಐದಾರು ಎಲೆಗಳನ್ನು ತಿಂದು ಮುಗಿಸಿತ್ತು. ಓಹ್ ಇದು ಬೇರೆ ಚಿಟ್ಟೆಗಳಂತಲ್ಲ ಇದಂತೂ ಬಕಾಸುರ ವಂಶಕ್ಕೆ ಸೇರಿದಂತೆ ಕಾಣುತ್ತೆ...ಇದನ್ನು ಸಂಭಾಳಿಸುವುದು ಚಿಟ್ಟೆಗಳಷ್ಟು ಸುಲಭವಲ್ಲ ಅಂದುಕೊಂಡು ಪ್ರತೀದಿನ ಆರು ಕಿಲೋ ಮೀಟರ್ ದೂರದಲ್ಲಿರುವ ಗೆಳತಿ ಸುನಿತಾ ಮನೆಗೆ ಹೋಗಿ ನಂದಿಬಟ್ಟಲು ಗಿಡದ ಹತ್ತಾರು ಎಲೆಗಳು ತುಂಬಿದ ಕಾಂಡವನ್ನು ತರುವ ಕಾಯಕ ನನ್ನದಾಯಿತು.
ಒಲಿಯಾಂಡರ್ ಹಾಕ್ ಪತಂಗದ ಹುಳು [ oleander hawk moth caterpillar] ಇದರ ತಲೆ ಮತ್ತು ಬುಡ ಎಲ್ಲಿ ಅಂತ ಗೊತ್ತಾಗುತ್ತಿಲ್ಲ ಅಲ್ಲವೇ..!
ಹೀಗೆ ಒಂದು ವಾರದ ನಂತರ ಅದರ ಆಕಾರ ಮತ್ತು ವರ್ತನೆಯಲ್ಲಿ ಬದಲಾವಣೆಯುಂಟಾಯಿತು. ತೋರುಬೆರಳ ಗಾತ್ರದ ಹುಳು ಎಲೆ ತಿನ್ನುವುದನ್ನು ನಿಲ್ಲಿಸಿತ್ತು. ಅದಕ್ಕೂ ಮೊದಲು ತನ್ನ ದೇಹದ ಹೊರಪದರವನ್ನು ಹಾವಿನಂತೆ ಕಳಚಿ ಸಣ್ಣದಾಗಿತ್ತು. ನಾನು ಅದನ್ನೇ ಗಮನಿಸತೊಡಗಿದೆ. ಎಲೆ, ಕಾಂಡ, ಹೂಕುಂಡ ಎಲ್ಲಾ ಕಡೆ ಹರಿದಾಡತೊಡಗಿತು. ಬಹುಶಃ ತನ್ನ ಆಕಾರ ಬದಲಿಸಿ ಪ್ಯೂಪ ಆಗಲು, ಅದಕ್ಕಾಗಿ ಸುರಕ್ಷಿತ ಸ್ಥಳದ ಪರಿಶೀಲನೆಗಾಗಿ ಈ ಪರಿಯ ಗಡಿಬಿಡಿಯಿರಬಹುದೆಂದುಕೊಂಡೆ.
ಎಂದಿನಂತೆ ಮುಂಜಾನೆ ನಾನು ಬೆಳಿಗ್ಗೆ ದಿನಪತ್ರಿಕೆಯ ಕೆಲಸದಲ್ಲಿರುವಾಗ ನನ್ನಾಕೆ ಫೋನ್ ಮಾಡಿ "ಬೇಗ ಮನೆಗೆ ಬನ್ನಿ" ಎಂದಳು
"ಏನ್ ಸಮಾಚಾರ" ಕೇಳಿದೆ.
"ಬನ್ನಿ ಹೇಳ್ತೀನಿ"...ಅಂದಳು. ನಾನು ಎಂಟು ಗಂಟೆಯ ಹೊತ್ತಿಗೆಲ್ಲಾ ಮನೆಗೆ ಹೋದೆ.
"ಮೊದಲು ಈ ಹುಳುವನ್ನು ಎತ್ತಿ ಬಿಸಾಕಿ.....ನನಗಂತೂ ಅದರ ಕಾಟ ತಡೆಯೋಕಾಗೊಲ್ಲ...ಬೆಳಿಗ್ಗೆ ಆರು ಗಂಟೆಗೆ ಎದ್ದಾಗ ನಾನು ಹೊದ್ದಿದ್ದ ಕಂಬಳಿ ಮೇಲೆ ಮಲಗಿತ್ತು. ನಾನು ಕಣ್ಣು ಬಿಟ್ಟು ನೋಡಿದ ತಕ್ಷಣ ಭಯದಿಂದ ದಿಗಿಲಾಗಿ ಜೋರಾಗಿ ಕಂಬಳಿ ಕೊಡವಿ ಮಲಗಿಬಿಟ್ಟೆ. ಮತ್ತೆ ಈಗ ಎದ್ದು ಮನೆ ಕಸ ಗುಡಿಸಲು ಬಾಗಿಲ ಕಾರ್ಪೆಟ್ ತೆಗೆಯುತ್ತೇನೆ ಸುರುಳಿ ಸುತ್ತಿಕೊಂಡು ಮಲಗಿದೆ. ಕಾರ್ಪೆಟ್ ತೆಗೆದೆ. ಪಣ್ಣನೇ ನೆಗೆದು ಮತ್ತೆ ಸುರುಳಿ ಸುತ್ತಿಕೊಂಡಾಗ ನನಗಂತೂ ಸಿಕ್ಕಾಪಟ್ಟೆ ದಿಗಿಲಾಗಿಬಿಟ್ಟಿತು" ಅಂದಳು.
ನಾನು ಅವಳಿಗೆ ಸಮಾಧಾನ ಹೇಳಿ ಅದನ್ನು ಸಣ್ಣ ಕಡ್ಡಿಯಿಂದ ಮುಟ್ಟಿದೆ. ಪಣ್ ಎಂದು ನೆಗೆದು ಮತ್ತೆ ಸುರುಳಿ ಸುತ್ತಿಕೊಂಡಿತ್ತು. ತಿಳಿಹಸಿರು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿತ್ತು. ಹಾಗೆ ಅದರ ಸ್ಥಳವೂ ಬದಲಾಗಿತ್ತು.
ಓಹ್ ! ಇದು ರಾತ್ರೋ ರಾತ್ರಿ ಟಿ.ವಿ. ಸ್ಟ್ಯಾಂಡ್ ಮೇಲಿಟ್ಟಿದ್ದ ಹೂಕುಂಡದಿಂದ ಕೆಳಮುಖವಾಗಿ ಟಿ.ವಿ, ಡಿವಿಡಿ ಪ್ಲೆಯರ್, ಟೇಪರೆಕಾರ್ಡರ್, ಮೇಲೆಲ್ಲಾ ನಿದಾನವಾಗಿ ತೆವಳಿಕೊಂಡು ನೆಲದ ಮೇಲೆ ಸಾಗಿ ನಮ್ಮ ಬೆಡ್ ರೂಂ ಸೇರಿಕೊಂಡುಬಿಟ್ಟಿದೆ. ನನ್ನಾಕೆ ಹೆದರಿ ಬ್ಲಾಂಕೆಟ್ ಕೊಡವಿದಾಗ ಹಾಗೆ ನೆಲದ ಮೇಲೆ ತೆವಳಿಕೊಂಡು ಮುಂಬಾಗಿಲ ಕಾರ್ಪೇಟ್ ಕೆಳಗೆ ಸೇರಿಕೊಂಡುಬಿಟ್ಟಿದೆ.
ಮುಂದಿನ ಸ್ಥಿತಿಗತಿ ತಿಳಿಯಲು ಪುಸ್ತಕದ ಮೊರೆ ಹೋದೆ. ಈ ಹುಳು ಪ್ಯೂಪ ಆಗಲು ಭೂಮಿಯ ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ ಎನ್ನುವ ವಿಷಯ ತಿಳಿಯಿತು. ಕೊನೆಗೆ ಹೊರಗಿನಿಂದ ಮರಳು ಮಿಶ್ರಿತ ಮಣ್ಣನ್ನು ತಂದು ಒಂದು ಪಾದರಕ್ಷೆ ಬಾಕ್ಸ್‌ನಲ್ಲಿ ಅರ್ಧ ತುಂಬಿ ಅದರೊಳಗೆ ಈ ಹುಳುವನ್ನು ಬಿಟ್ಟೆ. ಈ ಹಂತದಲ್ಲಿ ಒಂದು ಸಣ್ಣ ಕಡ್ಡಿಯನ್ನು ಮುಟ್ಟಿದರೂ ಪಣ್ ಅಂತ ನೆಗೆಯುತ್ತಿದ್ದ ಹುಳು ಮಣ್ಣು ತುಂಬಿದ ಬಾಕ್ಸಿನೊಳಗೆ ಬಿಟ್ಟಾಗ ಸುಮ್ಮನಾಯಿತು.
ಹತ್ತನೇ ದಿನ ಹುಳು ಆಗಲೇ ಬಾದಮಿ ಬಣ್ಣದ ಪ್ಯೂಪ ರಚಿಸಿಕೊಂಡಿದೆ. ಮತ್ತೆ ಮೇಲ್ಪದರದಲ್ಲಿ ಜೇಡರಬಲೆಯಂತೆ ಜಾಲರಿಯನ್ನು ರಕ್ಷಣ ಕೋಟೆಯಂತೆ ರಚಿಸಿಕೊಂಡಿದೆ. ಅಲ್ಲಿಗೆ ಇನ್ನು ಮುಂದೆ ಪತಂಗವಾಗಿ ಹೊರಬಂದಾಗ ಫೋಟೋ ತೆಗೆಯುವುದಷ್ಟೇ ನನ್ನ ಕೆಲಸ ಅಂದುಕೊಂಡು ಸುಮ್ಮನಾದೆ.
ಇದುವರೆಗೂ ಅದರ ಕಾಟ ತಡೆಯಲಾರದೇ ಗೊಣಗುತ್ತಿದ್ದ ನನ್ನಾಕೆ ಅದು ಪ್ಯೂಪ ಆದ ನಂತರ [ನನ್ನನ್ನೂ ಮತ್ತು ಹುಳುವನ್ನು ಚೆನ್ನಾಗಿ ಬೈದುಕೊಂಡು]ನಿಟ್ಟುಸಿರುಬಿಟ್ಟಳು.
ಈ ಮದ್ಯೆ ಗೆಳೆಯ ಮಲ್ಲಿಕಾರ್ಜುನ್ "ಎಲ್ಲಾದರೂ ಪ್ರವಾಸ ಹೋಗೋಣವೇ" ಕೇಳಿದರು. ಒಂದು ವಾರದ ನಂತರ ಇಬ್ಬರೂ ಚಿತ್ರದುರ್ಗಕ್ಕೆ ಹೊರಟೆವು.
ಹೊರಡುವ ಹಿಂದಿನ ದಿನ ಬಾದಾಮಿ ಬಣ್ಣಕ್ಕೆ ತಿರುಗಿದ್ದ ಈ ಪ್ಯೂಪ ನೆನಪಾಯಿತು. ಅದನ್ನು ಹೇಗೆ ಬಿಟ್ಟು ಹೋಗುವುದು ? ಬಿಟ್ಟು ಹೋದ ಮೇಲೆ ಅದು ಪತಂಗವಾಗಿ ಹೊರಬಂದುಬಿಟ್ಟರೆ ಅದರ ಫೋಟೋ ತೆಗೆಯುವ ಅವಕಾಶ ತಪ್ಪಿಹೋಗುತ್ತದಲ್ಲ.! ಕೊನೆಗೆ ನಮ್ಮ ಲಗ್ಗೇಜುಗಳ ಜೊತೆಗೆ ಪ್ಯೂಪ ಇರುವ ಪಾದರಕ್ಷೆ ಬಾಕ್ಸನ್ನು ತೆಗೆದುಕೊಂಡು ಹೊರಟೆವು.
ಪತಂಗ ಹೊರಬರುವ ಮೊದಲು ಮಣ್ಣಿನ ಬಣ್ಣದ ಪ್ಯೂಪ ಕಿರುಬೆರಳಷ್ಟು ದಪ್ಪವಿತ್ತು.
ಚಿತ್ರದುರ್ಗದ ಕೋಟೆಯ ಫೋಟೊಗ್ರಫಿಗಾಗಿ ಎರಡು ದಿನವಿದ್ದೆವು. ಅಲ್ಲಿದ್ದ ಪ್ರತಿ ಗಂಟೆಗೊಮ್ಮೆ ಬಾಕ್ಸ್ ತೆಗೆದು ಪತಂಗ ಡೆಲಿವರಿ ಆಗಿದೆಯಾ ಅಂತ ನೋಡುವುದು ಮತ್ತು ಮುಚ್ಚುವುದು ನಡೆದಿತ್ತು. ಆದ್ರೆ ಕೋಟೆಯ ಮೇಲೆ ಡೆಲಿವರಿ ಅದಕ್ಕೇ ಇಷ್ಟವಿರಲಿಲ್ಲವೆನಿಸುತ್ತೆ. ಹೇಗೆ ತೆಗೆದುಕೊಂಡು ಹೋಗಿದ್ದೆವೋ ಹಾಗೆ ವಾಪಸ್ಸು ಬಾಕ್ಸ್ ತೆಗೆದುಕೊಂಡು ಬಂದೆವು. ನಮ್ಮ ಜೊತೆ ಪ್ಯೂಪ ಕೂಡ ೪೫೦ ಕಿ.ಮಿ. ದೂರ ಪ್ರಯಾಣ ನಡೆಸಿದಂತಾಗಿತ್ತು.
ಈ ಘಟನೆಗಳು ನಡೆದ ಮತ್ತೊಂದು ವಾರಕ್ಕೆ ನಾನು ಮತ್ತು ನನ್ನ ಶ್ರೀಮತಿ ಈ ಮೊದಲೇ ಮುಂಗಡ ಕಾದಿರಿಸಿದ್ದ ಗೋವಾಗೆ ಹೊರಡುವ ಸಮಯ ಬಂತು. ಈ ಒಂದು ವಾರದಲ್ಲಿ ಪ್ಯೂಪದಿಂದ ಪತಂಗ ಹೊರಬರಲೇ ಇಲ್ಲ. ಆದರೆ ನಿದಾನವಾಗಿ ಅದರ ಬಣ್ಣ ಮಣ್ಣಿನ ಬಣ್ಣಕ್ಕೆ ತಿರುಗಿತ್ತು. ಪ್ಯೂಪದೊಳಗೆ ಹುಳು ಬದುಕಿದೆಯೋ ಅಥವ ಸತ್ತುಹೋಗಿದೆಯೋ, ಇಲ್ಲಾ ಪತಂಗವಾಗಿ ಅದರ ದೇಹ ಬೆಳೆಯುತ್ತಿದೆಯೋ ಅನ್ನುವ ಅನುಮಾನ ಶುರುವಾಗಿ ನನ್ನ ಕಿರುಬೆರಳಿನಿಂದ ಲಗುವಾಗಿ ಮುಟ್ಟಿದೆ. ತಟ್ಟನೇ ಒಂದು ಕ್ಷಣ ಅಲುಗಾಡಿತು. ಆ ಕ್ಷಣ ನನಗೂ ಬೆಚ್ಚಿದಂತಾಗಿತ್ತು. ಬಹುಶಃ ಹೊರಗಿನ ಆಕ್ರಮಣವನ್ನು ತಪ್ಪಿಸಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿರಬಹುದು ಅನ್ನಿಸಿತು.
ಅಂದು ಹುಳು ಪ್ಯೂಪವಾಗಿ ಹದಿನೆಂಟನೇ ದಿನ. ನಾವು ಗೋವಾಗೆ ಹೋಗುವ ದಿನವೂ ಅದೇ ಆಗಿತ್ತು. ಕೊನೇ ಪ್ರಯತ್ನ ನಡೆದೇ ತೀರಲಿ ಎಂದು ಸಂಜೆ ಗೋವಾಗೆ ಹೊರಡುವ ರೈಲಿನಲ್ಲಿ ಈ ಪ್ಯೂಪ ಬಾಕ್ಸನ್ನು ಜೊತೆಯಲ್ಲಿರಿಸಿಕೊಂಡೆವು.
ಪ್ಯೂಪದಿಂದ ಹೊರಬಂದ ಪರಿಪೂರ್ಣ ಬೆಳವಣಿಗೆ ಹೊಂದಿದ ಒಲಿಯಾಂಡರ್ ಹಾಕ್ ಮಾತ್[oliender hawk moth]
ಬೆಳಿಗ್ಗೆ ಐದು ಗಂಟೆಗೆ ಮಡ್‍ಗಾಂ ನಿಲ್ದಾಣದಲ್ಲಿ ರೈಲು ನಿಂತಾಗ ಬಾಕ್ಸ್ ತೆಗೆದು ನೋಡಿದೆ...... ಆಶ್ಚರ್ಯ !! ಹಸಿರು ಬಣ್ಣದ ಒಂದೆರಡು ದಪ್ಪ ಪಟ್ಟೆಗಳನ್ನು ಹೊಂದಿರುವ ಹೋಲಿಯೆಂಡರ್ ಹಾಕ್ ಮಾತ್ ಎನ್ನುವ ಪತಂಗ ಪ್ಯೂಪದಿಂದ ಹೊರಬಂದಿದೆ. ಬಿಟ್ಟ ಕಣ್ಣುಗಳಿಂದ ನನ್ನನೇ ನೋಡುತ್ತಿದೆ.॒! ತಕ್ಷಣವೇ ಬಾಕ್ಸ್ ಮುಚ್ಚಿಬಿಟ್ಟೆ, ಅದು ಹಾರಿಹೋಗಿಬಿಡಬಹುದು ಅಂತ. ಅಮೇಲೆ ಅನ್ನಿಸಿತು ಅದಕ್ಕೆ ಕಣ್ಣು ಕಾಣಿಸುವುದಿಲ್ಲವಾದ್ದರಿಂದ ಹಗಲು ಹೊತ್ತಿನಲ್ಲಿ ಹಾರಾಡುವುದಿಲ್ಲವೆಂದು ಪುಸ್ತಕದಲ್ಲಿ ಓದಿದ್ದ ನೆನಪಾಯಿತು.
ಪತಂಗ ಹೊರಬಂದ ನಂತರ ಪ್ಯೂಪದ ಪರಿಸ್ಥಿತಿ...!
ನಮ್ಮ ಲಗ್ಗೇಜುಗಳ ಜೊತೆ ಪತಂಗದ ಬಾಕ್ಸನ್ನು ಹೊತ್ತು ನಾವು ತಲುಪಬೇಕಿದ್ದ ಕಲಂಗುಟ್ ಪಟ್ಟಣದ ಬಾಗ ಬೀಚ್ ಬಳಿಯಿದ್ದ ಸನ್ ವಿಲೇಜ್ ರೆಸಾರ್ಟ್ ತಲುಪುವ ಹೊತ್ತಿಗೆ ಬೆಳಗಿನ ಹತ್ತುಗಂಟೆ. ದಾರಿ ಮದ್ಯೆ ಸಿಗುವ ಹೊಲದ ಬಯಲಿನ ಫೊದೆಯೊಂದರಲ್ಲಿ ಬಿಡಬೇಕೆಂದು ತೀರ್ಮಾನಿಸಿದ್ದೆವು. ಇದಕ್ಕೆ ಕಣ್ಣು ಕಾಣುವುದಿಲ್ಲವಾದ್ದರಿಂದ ಹೊರಗೆ ಬಯಲಿನಲ್ಲಿ ಬಿಟ್ಟರೆ ಕಾಗೆ ಇನ್ನಿತರ ಪಕ್ಷಿಗಳಿಗೆ ಆಹಾರವಾಗುವುದು ಖಚಿತವೆಂದು ಪೊದೆಯೊಳಗೆ ಬಿಟ್ಟೆವು.
ನೋಡಲು ಕಣ್ಣು ತೆರೆದಂತೆ ಕಾಣುವ ರೀತಿ ರಚನೆಯಾಗಿರುವುದು ಇತರ ಅಕ್ರಮಣಕಾರಿ ವೈರಿಗಳಿಗೆ ಏಮಾರಿಸಲು ಆ ರೀತಿ ರಚನೆಯಾಗಿತ್ತದೆ. ಮತ್ತು ಅದೇ ಕಾರಣಕ್ಕೆ ಹಗಲು ಹೊತ್ತಿನಲ್ಲಿ ಕೂತಲ್ಲೇ ಕುಳಿತಿರುತ್ತದೆ. ಪತಂಗಕ್ಕೂ ಚಿಟ್ಟೆಗೂ ಏನು ವ್ಯತ್ಯಾಸವೆಂದರೆ ಚಿಟ್ಟೆಯ ರೆಕ್ಕೆಗಳು ದೊಡ್ಡದಾಗಿರುತ್ತವೆ ದೇಹ ಚಿಕ್ಕದಾಗಿರುತ್ತದೆ..ಆದ್ರೆ ಪತಂಗಕ್ಕೆ ದೇಹ ದೊಡ್ಡದಾಗಿದ್ದು ರೆಕ್ಕೆಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಚಿಟ್ಟೆಗಳು ಹಗಲಿನಲ್ಲಿ ಹಾರಾಟ ನಡೆಸಿದರೆ, ಪತಂಗಗಳು ರಾತ್ರಿ ಸಮಯದಲ್ಲಿ ಹಾರಾಡುತ್ತವೆ. ಚಿಟ್ಟೆಗಳಷ್ಟು ಆಕರ್ಷಕ ಬಣ್ಣಗಳನ್ನು ಪತಂಗಗಳು ಹೊಂದಿರುವುದಿಲ್ಲವಾದ್ದರಿಂದ ಚಿಟ್ಟೆಯಷ್ಟು ಸುಂದರವಾಗಿರುವುದಿಲ್ಲ.
ನಂತರ ನನಗೆ ಬೇಕಾದ ಹಾಗೆ ಅದರ ಫೋಟೋಗಳನ್ನು ಕ್ಲಿಕ್ಕಿಸಿ ರೆಸಾರ್ಟ್ ಕಡೆಗೆ ಹೆಜ್ಜೆ ಹಾಕುವಾಗ ನಮ್ಮ ಮನಸ್ಸು ಏನೋ ಕಳೆದುಕೊಂಡಂತೆ ಅನಿಸಿತ್ತು. ಆದರೇನು ಮಾಡುವುದು ಅದಕ್ಕೂ ಸ್ವತಂತ್ರವಾಗಿ ಬದುಕುವ ಹಕ್ಕಿದೆಯಲ್ಲವೇ? ಸರಿ ಸುಮಾರು ಹತ್ತು ದಿನ ಹುಳುವಾಗಿ, ಪ್ಯೂಪವಾಗಿ ಹದಿನೆಂಟು ದಿನ ನಮ್ಮ ಜೊತೆ ಇದ್ದು ಗೋವದಲ್ಲಿ ತನ್ನ ಬದುಕನ್ನು ಹರಸ ಹೊರಟ ಪತಂಗಕ್ಕೆ ಹಾಗೂ ಇಂಥ ಅಧ್ಬುತ ಸೃಷ್ಠಿ ವೈವಿಧ್ಯವನ್ನು ನೋಡುವ ಆನಂದಿಸುವ ಅವಕಾಶ ಕಲ್ಪಿಸಿದ ಪ್ರಕೃತಿ ಮಾತೆಗೆ ನಮಸ್ಕರಿಸಿ ಮುನ್ನಡೆದಾಗ ರೆಸಾರ್ಟ್ ತಲುಪಿಯಾಗಿತ್ತು.
[ಪ್ಯೂಪವಾಗುವ ಮೊದಲು ಕಂದುಬಣ್ಣವಾಗಿದ್ದ ಚಿತ್ರ, ಪ್ಯೂಪವಾದ ನಂತರ ಬಾದಾಮಿ ಬಣ್ಣ ಪಡೆದುಕೊಂಡಿದ್ದು, ಮರಳಿಗೆ ಬಿಟ್ಟ ಮೇಲೆ ತನ್ನ ದೇಹದ ಮೇಲೆ ಸೂರಿನಂತೆ ಒಂದು ರಕ್ಷಣ ಜಾಲರಿಯನ್ನು ಕಟ್ಟಿಕೊಂಡಿದ್ದ ಚಿತ್ರಗಳು ನನ್ನಿಂದ ತಪ್ಪಿಸಿಕೊಂಡಿರುವುದರಿಂದ ವಿಷಾದಿಸುತ್ತೇನೆ...]
----------------------- ೦ -------------------
ಮತ್ತೊಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ..ನನ್ನ "ಛಾಯಾಕನ್ನಡಿ" ಬ್ಲಾಗ್ ಪ್ರಾರಂಬಿಸಿದ್ದು ದಿನಾಂಕ 24-8-2008 ರಂದು. ವಿಶ್ವದಾದ್ಯಂತ ನಮ್ಮ ಬ್ಲಾಗ್ ಗೆಳೆಯರು ನನ್ನ ಛಾಯಾಕನ್ನಡಿ ಬ್ಲಾಗಿನ ಬಾಗಿಲನ್ನು ದಿನಕ್ಕೆ ಎಷ್ಟು ಬಾರಿ ತೆರೆಯಬಹುದು ಅನ್ನುವ ಕುತೂಹಲಕ್ಕಾಗಿ ಆರು ತಿಂಗಳ ನಂತರ ಪ್ರೇಮಿಗಳ ದಿನವಾದ ದಿನಾಂಕ 14-2-2009 ರಂದು ಗೆಳೆಯ ರಾಜೇಶ್ ಸಹಾಯದಿಂದ ನನ್ನ ಬ್ಲಾಗಿನಲ್ಲಿ ಕ್ಲಿಕ್ಕಿಂಗ್ಸ್ ಸೆಟ್ ಮಾಡಿಕೊಂಡೆ. ಮತ್ತೆ ಈಗ ದಿನಾಂಕ 25-6-2009 ಹೊತ್ತಿಗೆ ಸರಿಯಾಗಿ 132 ದಿನಗಳಲ್ಲಿ 10,000 ಕ್ಲಿಕ್ಕಿಂಗ್ಸ್ ದಾಟಿದೆ. ಪ್ರತಿದಿನ ವಿಶ್ವದಾದ್ಯಂತ ನಮ್ಮ ಕನ್ನಡ ಬ್ಲಾಗ್ ಗೆಳೆಯರು ಛಾಯಾಕನ್ನಡಿ ಬ್ಲಾಗನ್ನು ಸರಾಸರಿ "76" ಬಾರಿ ತೆರೆದು ನೋಡಿ ಪ್ರೋತ್ಸಾಹಿಸುತ್ತಿರುವುದು ನನಗಂತೂ ಖುಷಿಯಾಗುತ್ತಿದೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.
ಚಿತ್ರ ಮತ್ತು ಲೇಖನ.
ಶಿವು.ಕೆ
70 comments:
"ನಂದಿಬಟ್ಟಲು" ಅಂದ್ರೆ ದಾಸವಾಳವೇ? ನಿಜಕ್ಕೂ ಈ ಪತಂಗದ ಮೊಟ್ಟೆ ಜೋಳದ ಗಾತ್ರದಲ್ಲಿದೆಯೇ?
ಸಕ್ಕತ್ ಬರಹ, ಆಪ್ತವಾಗಿಯೂ ಮಾಹಿತಿ ಪೂರ್ಣವಾಗಿಯೂ ಇದೆ.
ಚೆನ್ನಾಗಿದೆ ನಿಮ್ಮ ಪತಂಗದ ಕತೆ.
ಹಾಕಿರುವ ಚಿತ್ರ (ಮೊದಲನೆಯದು) ದಾಸವಾಳದ ಗಿಡವಲ್ಲವೆ?
ನಂದಿ ಬಟ್ಟಲು ಅಂದರೆ Crepe Jasmine(Tabernaemontana)ಅಲ್ಲವೇ?
ರವಿ
ನಿಮ್ಮ ಪ್ರಯೋಗಶೀಲತೆ, ಕುತೂಹಲ ಪ್ರವೃತ್ತಿ ಮೆಚ್ಚಬೇಕಾದ್ದೆ. ಬೆ೦ಗಳೂರಿನ ಬೆ೦ಗಾಡಲ್ಲಿ ಬದುಕು ಕ೦ಡುಕೊಳ್ಳಬೇಕಿದ್ದ ಆ ಜೀವಿಯನ್ನು ಕಡಲತೀರದ ಗೋವೆಗೆ ಕೊ೦ಡುಹೋಗಿ ಅಲ್ಲಿ ಜೀವನ ನಡೆಸುವ೦ತೆ ಮಾಡಿದಿರಲ್ಲ. ಚೆನ್ನಾಗಿದೆ, ಚಿತ್ರ-ಬರಹ.
ಪಾಲಚಂದ್ರ,
ದಾಸವಾಳ ಗಿಡವೇ ಬೇರೆ, ನಂದಿಬಟ್ಟಲು ಗಿಡವೇ ಬೇರೆ...ಮತ್ತೆ ಈ ಹುಳು ಕಣಗಲೇ ಗಿಡದ ಎಲೆಯನ್ನು ತಿಂದು ಬೆಳೆಯುತ್ತದೆ...
ಮತ್ತೆ ನೀವು ಕೇಳಿದಂತೆ.. ಈ ಪತಂಗದ ಮೊಟ್ಟೆ ರಾಗಿ ಕಾಳಿಗಿಂತ ಸ್ವಲ್ಪ ದೊಡ್ಡದು ಮತ್ತು ಜೋಳಕ್ಕಿಂತ ಸ್ವಲ್ಪ ಚಿಕ್ಕದಾಗಿರುತ್ತದೆ...ಈ ಹುಳು ದೊಡ್ಡದಾದಾಗ ನಮ್ಮ ತೋರುಬೆರಳಿನಷ್ಟೇ ಉದ್ದ, ದಪ್ಪವಾಗಿಬಿಡುತ್ತದೆ....
ಧನ್ಯವಾದಗಳು...
ಲೇಖನ ಮತ್ತು ಚಿತ್ರಗಳು ತುಂಬಾ ಚನ್ನಾಗಿವೆ ಶಿವು.
ನಿಮ್ಮ ಬ್ಲಾಗ್ ಹೆಚ್ಚು ಜನಪ್ರಿಯವಾಗುತ್ತಿರುವುದಕ್ಕೆ ಶುಭಾಶಯಗಳು.
ಶಿವೂ ಅವರೇ,
ಮೊದಲು ನಿಮ್ಮ ಬ್ಲಾಗ್ ತೆರೆದು ಒಳಗೆ ಬಂದು ಒಮ್ಮೆ ಹಾಗೆ ಕಣ್ಣು ಹಾಯಿಸಿದಾಗ, ಸ್ವಲ್ಪ ದೊಡ್ಡ ಲೇಖನವೇ, ಈಗ ಕೆಲಸ ಇದೆ, ಮುಗಿಸಿಬಂದು ಆಮೇಲೆ ಓದೋಣ ಎಂದುಕೊಂಡೆ, ನಂತರ ಫೋಟೋಗಳನ್ನು ನೋಡಿ ಹೋಗೋಣ ಎಂದುಕೊಂಡೆ! ಮತ್ತೆ ಕುತೂಹಲ ತಾಳಲಾರದೆ ಲೇಖನವನ್ನು ಓದಲು ಪ್ರಾರಂಭಿಸಿದೆ.
ಬಹಳ ವಿಸ್ಮಯಕಾರಿಯಾಗಿ 'oleander' ತನ್ನ ಜೀವನಗಾಥೆಯನ್ನು ನಿಮ್ಮಿಂದ ಹೇಳಿಸುತ್ತಾ ಹೋಯಿತು!
ಅಧ್ಬುತ ಲೇಖನ ಮತ್ತು ಫೋಟೋ ಸಮೇತ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು!
ನಂದಿಬಟ್ಟಲು ಮತ್ತು ದಾಸವಾಳ ಬೇರೆ ಅಂತ ಗೊತ್ತಿತ್ತು. ಆದರೆ ರವಿ ಹೆಗಡೆಯವರು ಹೇಳಿದಂತೆ ಮೊದಲ ಚಿತ್ರ ದಾಸವಾಳದ್ದಲ್ಲವೇ? ನಿಮ್ಮ ಕಡೆ ಹೆಸರು ಬೇರೆಯಿದ್ದಿರಬಹುದೇನೋ ಎಂದು ಕೇಳಿದೆ.
ಬರಹ ತುಂಬಾ ಚೆನ್ನಾಗಿದೆ ಫೋಟೋಗಳು ಸಹ . ಹೀಗೆ ನಿಮ್ಮ ಹೊಸ ಪ್ರಯೋಗಗಳು ನಡೀಲಿ
ಧನ್ಯವಾದಗಳು
ನೀವು ಹಾಕಿರುವ ಮೊದಲನೆ ಚಿತ್ರ ದಾಸವಾಳದ ಗಿಡ ಅಲ್ವಾ?
ರವಿ ಅವರು ಹೇಳಿದಂತೆ ನಂದಿ ಬಟ್ಟಲು ಅಂದರೆ Crepe Jasmine ತಾನೆ..
http://www.astro.com.my/vizhuthugal/capsules.asp?an=249&bid=2990
ಇದು ನಮ್ಮ ಮನೆಯ ಕಣಗಿಲೆಗೆ ಮತ್ತು ಕರಬೇವು ಗಿಡದಲ್ಲೂ ಕಾಣಿಸುತ್ತಿತ್ತು.
ಬೆ೦ಗಳೂರಿನಲ್ಲಿ ಹುಟ್ಟಿದ ಇದು ನಿಮ್ಮ ಸಹವಾಸದಿಂದಾಗಿ ಚಿತ್ರದುರ್ಗಾ ಸುತ್ತುಹಾಕಿ, ರೈಲು ಹತ್ತಿ ಇಳಿದು, ಕೊನೆಗೆ ಗೋವಾ ಸೇರಿತು!!
ಚೆನ್ನಾಗಿದೆ, ಚಿತ್ರ-ಬರಹ.
ಶಿವು ಸರ್....
ಅದ್ಭುತ.... !
ನಿಮ್ಮ ಪ್ರಯೋಗಶೀಲತೆಗೊಂದು ನನ್ನ ನಮನ...!
ನಿಮ್ಮ ತಾಳ್ಮೆ, ಶ್ರದ್ಧೆ, ಮತ್ತು ಹೊಸತನ್ನು ಹುಡುಕುವ ಮನೋಭಾವ
ಕಂಡು ಮೂಕನಾಗಿದ್ದೇನೆ....
ಅದು ದಾಸವಾಳವೋ ಅಥವಾ ನಂದಿ ಬಟ್ಟಲೊ ....
ಅದು ಮುಖ್ಯವೆಂದು ನನಗೆ ಅನಿಸಲಿಲ್ಲ....
ಫೋಟೊ ಹಾಕುವ ಭರದಲ್ಲಿ ಸ್ವಲ್ಪ ಗೊಂದಲ ಆಗಿರ ಬಹುದು..
ನೀವು ಇದನ್ನು ತೆಗೆಯಲು ಪಟ್ಟ ಶ್ರಮ ನನಗೆ ಕಾಣುತ್ತಿದೆ..
ಎಷ್ಟು ಸಂಯಮದಿಂದ ಕಾದು ತೆಗೆದಿರ ಬಹುದು...?
ಅದೂ ಎಷ್ಟು ದಿನಗಳು...
ಅಬ್ಭಾ...!
ನಿಮ್ಮ ಬರವಣಿಗೆ ದಿನದಿಂದ ದಿನಕ್ಕೆ ಪಕ್ವತೆ ಪಡೆಯುತ್ತಿದೆ...
ನಮ್ಮ ದಿನದ ಜಂಜಡಗಳನ್ನು ಮರೆಯಲು..
ನಿಮ್ಮ ಬ್ಲಾಗ್ ಒಂದು "ಕಾಫೀ ಕ್ಲಬ್" ಥರಹ....
ನಿಮ್ಮ ಪ್ರಯೋಗ ಶೀಲತೆಗೆ...
ಮತ್ತೊಮ್ಮೆ ...
ನನ್ನ ಸಲಾಮ್....
ಶಿವು ಅವರೆ....
ಎಷ್ಟು ತಾಳ್ಮೆಯಿಂದ ಫೋಟೊ ತೆಗೆದು..
ಚಂದವಾದ ಲೇಖನ ಬರೆದಿದ್ದೀರಿ...!!
ಖುಷಿಯಾಗುತ್ತದೆ...
ಸಂಗಡ ಉತ್ತಮ ಮಾಹಿತಿ ಕೂಡ ಕೊಟ್ಟಿದ್ದೀರಿ...
REALY... GREAT....!!
ರವಿ ಹೆಗಡೆ ಸರ್, ಪಾಲಚಂದ್ರ, ರೂಪಶ್ರೀ..
ಫೋಟೊ ತೆಗೆಯುವಾಗ ಅಲ್ಲಿದ್ದ ದಾಸವಾಳ, ಕಣಗಲೆ, ನಂದಿಬಟ್ಟಲು ಗಿಡದ ಎಲೆಗಳು... ಎಲ್ಲವನ್ನು ಕ್ಲಿಕ್ಕಿಸಿದ್ದೆ. ಬ್ಲಾಗಿಗೆ ಹಾಕುವ ಗಡಿಬಿಡಿಯಲ್ಲಿ ದಾಸವಾಳದ ಎಲೆಗಳ ಚಿತ್ರ ಹಾಕಿಬಿಟ್ಟಿದ್ದೆ.[ನಡುವೆ ನಾಲ್ಕುಬಾರಿ ವಿದ್ಯುತ್ ಹೋಗಿ ಬಂದಿತ್ತು] ನೀವು ಹೇಳಿದ ಮೇಲೆ ಗೊತ್ತಾಯ್ತು....ಅದಕ್ಕಾಗಿ ಕ್ಷಮೆಯಿರಲಿ...ಮತ್ತೆ ಅದನ್ನು ಮೊದಲೇ ಗುರುತಿಸಿದ್ದಕ್ಕೆ ಧನ್ಯವಾದಗಳು...ಈಗ ಸರಿಯಾದ ಫೋಟೋವನ್ನೇ ಹಾಕಿದ್ದೇನೆ...
ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.
ಪರಂಜಪೆ ಸರ್,
ಪತಂಗದ ವಿಚಾರದಲ್ಲಿ ಏನೋ ಮಾಡಲು ಹೋಗಿ ಮತ್ತೇನೋ ಆಗಿತ್ತು. ಆದರೂ ಏನಾಗಬಹುದು ಎನ್ನುವ ಕುತೂಹಲದಿಂದ ಅದರ ಹಿಂದೆ ಬಿದ್ದಾಗ ಗೋವದಲ್ಲಿ ಅದಕ್ಕೆ ಮುಕ್ತಿ ದೊರೆಯಿತು...
ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶಿವಪ್ರಕಾಶ್,
ಪತಂಗದ ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..
SSK ಸರ್,
ಮೊದಲು ಈ ಲೇಖನವನ್ನು ಚಿಕ್ಕದು ಬರೆಯಲೆತ್ನಿಸಿದ್ದೆ. ಆಗಲಿಲ್ಲ...ಆ ಪತಂಗದ ಆಟ ಹೆಚ್ಚಾದಂತೆ ಲೇಖನವೂ ಉದ್ದವಾಗಿಬಿಟ್ಟಿತ್ತು. ನನ್ನಾಕೆಯಂತೂ ಈಗಲೂ ಯಾವುದಾದರೂ ಹುಳುವನ್ನು ಮನೆಗೆ ತಂದರೇ ಅಸಮಧಾನವನ್ನು ತೋರ್ಪಡಿಸುತ್ತಾಳೆ..
ನಾವು ಅಷ್ಟೆಲ್ಲಾ ಕಷ್ಟಪಟ್ಟು ಫೋಟೋ ತೆಗೆದೆವು ಅನ್ನುತ್ತೇವೆ...ಆದ್ರೆ ಅವು ತಮ್ಮ ಬದುಕಿನ ಉಳಿವಿಗಾಗಿ ಏನೆಲ್ಲಾ ಅನುಭವಿಸುತ್ತವೆ ಅನ್ನುವುದು ಗೊತ್ತಾದಾಗ ಅವುಗಳ ಮುಂದೆ ನಮ್ಮ ಬದುಕು ಗ್ರೇಟ್ ಅಲ್ಲವೆಂದು ಆ ಕ್ಷಣ ಅನ್ನಿಸಿದ್ದು ನಿಜ...ಪತಂಗ ಜೀವನಪಯಣವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಸಂತೋಷ್ ಚಿದಂಬರ್,
ಬ್ಲಾಗಿಗೆ ಬಂದು ಚಿತ್ರಲೇಖನವನ್ನು ಓದಿದ್ದಕ್ಕೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ರೂಪ,
ನೀವು ಹೇಳಿದಂತೆ ಮೊದಲು ಆಗಿರುವ ಗೊಂದಲವನ್ನು ತಿಳಿಸಿದ್ದೇನೆ...ಮತ್ತು ಈಗ ಸರಿಯಾದ ಚಿತ್ರವನ್ನು ಹಾಕಿದ್ದೇನೆ...
ನಮ್ಮ ತಿರುಗಾಟದಿಂದಾಗಿ ಅದು ಗೋವದಲ್ಲಿ ತನ್ನ ಜೀವನವನ್ನು ಬದುಕು ಹರಸ ಹೊರಟಿತು.
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಪ್ರಕಾಶ್ ಸರ್,
ಮೊದಲಿಗೆ ಚಿತ್ರ ಲೇಖನದ ಕಷ್ಟ-ಸುಖಗಳನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು...ಈ ವಿಚಾರದಲ್ಲಿ ಆಗಿರುವ ಭಯಂಕರ ಅನುಭವವನ್ನು ತಿಳಿಯಬೇಕಾದರೇ ನೀವು ಹೇಮಾಶ್ರೀಯನ್ನು ಕೇಳಿದರೇ ಈ ಹುಳುವಿನ ವಿಚಾರವಾಗಿ ಬೆಚ್ಚಿ ಬೀಳುವುದಂತೂ ಖಚಿತ. ಬೆಳಿಗ್ಗೆ ಎದ್ದು ಕಣ್ಣು ಬಿಟ್ಟ ತಕ್ಷಣ ಬಾದಾಮಿ ಬಣ್ಣದ ಬ್ಲಾಂಕೆಟ್ ಮೇಲೆ ಕಂದುಬಣ್ಣದ ಅಲ್ಲಲ್ಲಿ ಬಿಳಿ ಚುಕ್ಕೆಗಳನ್ನು ಹೊಂದಿದ...ತೋರು ಬೆರಳುಗಾತ್ರದ ಹುಳು ಕಾಣಿಸಿದರೇ ಹೇಗಾಗಿರಬೇಡ...
ನಾನು ಮನೆಗೆ ಬಂದಾಗ ನನಗೇ ಈ ವಿಚಾರವಾಗಿ ನಾನು ಬೈಸಿಕೊಂಡಿದ್ದು ಉಂಟು..
ಅದು ಪ್ಯೂಪ ಆದ ಮೇಲೆ ಅವಳು ಸಮಾಧಾನವನ್ನು ಹೊಂದಿದ್ದು...
ಇದು ಸುಮಾರು ಒಂದು ತಿಂಗಳ ಪ್ರಯೋಗ....ಕೊನೆಗೂ ಯಶಸ್ಸು ಸಿಕ್ಕಿತ್ತು....
ಧನ್ಯವಾದಗಳು.
ಆಶಾ ಮೇಡಮ್,
ನನ್ನ ಬ್ಲಾಗಿನ ಪತಂಗ ಲೋಕಕ್ಕೆ ಸ್ವಾಗತ....
ನನ್ನ ತಾಳ್ಮೆಯ ಜೊತೆಗೆ ಲೇಖನವನ್ನು ಮೆಚ್ಚಿದ್ದೀರಿ....ಧನ್ಯವಾದಗಳು..ಹೀಗೆ ಬರುತ್ತಿರಿ...
ತುಂಬಾ ಚೆನ್ನಾಗಿದೆ ಈ ಬರಹ.
"ನಂದಿಬಟ್ಟಲು" ಗಿಡ ನಮ್ಮ ಹಳೆ ಮನೆಯಲ್ಲಿ ಬೆಳೆಸಿದ್ವಿ.
-ಅನಿಲ್
ಶಿವು,
ಚೆನ್ನಾಗಿದೆ.
very nice.
ಶಿವು,
ನನಗಿನ್ನೂ ನಾವು ಚಿತ್ರದುರ್ಗಕ್ಕೆ ಆ ಪ್ಯೂಪಾ ಹುಷಾರಾಗಿ ಕೊಂಡೊಯ್ದಿದ್ದು ನೆನಪಿದೆ. ಇದು ಚಿತ್ರ ತೆಗೆಯುವುದಕ್ಕಿಂತ ಮುಖ್ಯವಾದುದ್ದು ಆ ಜೀವಿಯ ರೂಪಾಂತರ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡಿ ಆನಂದಿಸುವುದು. ಹುಳುಗಳನ್ನು ಮನೆಗೆ ತಂದು ಪಡುವ ಪಾಡು, ತೊಂದರೆಗಳ ನಡುವೆ ಅದರ ಬಗ್ಗೆ ತಿಳಿಯುತ್ತಾ ಹೋಗಿ ಕೊನೆಗೆ ಅದು ಹಾರಿ ಹೋದಾಗ ಏನೋ ಕಳಕೊಂಡಂತೆ ಆಗುವುದಕ್ಕೆ ಏನು ಹೇಳುವುದು?
ಅತಿ ಕಡಿಮೆ ಅವಧಿಯಲ್ಲಿ 10,000 ಕ್ಲಿಕ್ಕಿಂಗ್ಸ್ ಆಗಿರುವುದಕ್ಕೆ Congrats.
ಫೋಟೋಗಳು ಅಧ್ಭುತವಾಗಿ ಬಂದಿವೆ. ನಿಮ್ಮ 'ಛಾಯಲೋಕ' ಖುಷಿಯಾಯ್ತು.
ಅನಿಲ್,
ನಿಮ್ಮ ಹೊಸ ಮನೆಯಲ್ಲೂ ಇದೇ ಗಿಡವನ್ನು ಬೆಳಸಲು ಪ್ರಯತ್ನಿಸಿ....ನೀವು ಈ ಪತಂಗವನ್ನು ನೋಡುವ ಅವಕಾಶವಿದೆ...ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಕುಲಕರ್ಣಿ ಸರ್,
ಧನ್ಯವಾದಗಳು...
ಶಿವು ಅವರೇ,
ಬಲು ಸರಳವಾಗಿ ಸೊಗಸಾಗಿ ಬರೆದಿದ್ದೀರಿ. ಧನ್ಯವಾದಗಳು.
ನಿಮ್ಮ ತಾಳ್ಮೆಗೆ ಸೋತು, ಈ "ಮಾತ್" ನಿಮಗೆ "pose" ಕೊಟ್ಟಹಾಗಿದೆ ನಿಮ್ಮ ಚಿತ್ರಗಳು.
ಪತ೦ಗದ ಕಥೆ ಚೆನ್ನಾಗಿದೆ, ಮಾಹಿತಿಭರಿತವಾಗಿದೆ. ಕುತೂಹಲದಿ೦ದ ಓದಿಸಿಕೊ೦ಡು ಹೋಯಿತು.
ನಿಮ್ಮ ತಾಳ್ಮೆ ಹಾಗೂ ಆಸಕ್ತಿಗೆ ಅಭಿನ೦ದನೆಗಳು.
ಅಗ್ನಿಹೋತ್ರಿ ಸರ್,
ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಮಲ್ಲಿಕಾರ್ಜುನ್,
ಈ ಪತಂಗದ ಕತೆ ನಿಮಗೇ ಚೆನ್ನಾಗಿ ಗೊತ್ತಿದೆ. ಚಿತ್ರದುರ್ಗದಲ್ಲಿ ಈ ಪ್ಯೂಪದಿಂದಾಗಿ ನಮ್ಮ ಪಿಕ್ಟೋರಿಯಲ್ ಫೋಟೋಗ್ರಫಿಯ ಕಡೆಗೆ ಗಮನ ಕಡಿಮೆಯಾಗಿದ್ದಂತೂ ನಿಜ. ನೀವು ಹೇಳಿದಂತೆ ಫೋಟೋಗ್ರಫಿಯ ಅಂತಿಮ ಪಲಿತಾಂಶಕ್ಕಿಂತ ಅದರ full process ಅನ್ನು ನೋಡುವಾಗಿನ ಆನಂದವೇ ಚೆನ್ನ.
ಕ್ಲಿಕ್ಕಿಂಗ್ಸ್ ಗುರುತಿಸಿದ್ದಕ್ಕೆ ಧನ್ಯವಾದಗಳು....
ಸುಮನಾ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ. ಫೋಟೋಗಳನ್ನು ಮೆಚ್ಚಿದ್ದೀರಿ...ಜೊತೆಗೆ "ಛಾಯಾಲೋಕ" ಅಂತ ಹೆಸರಿಟ್ಟಿದ್ದೀರಿ...ಹೀಗೆ ಬರುತ್ತಿರಿ...ಧನ್ಯವಾದಗಳು.
ರಾಜೀವ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ಚಿತ್ರಗಳು ಮತ್ತು ಲೇಖನಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..
ಮತ್ತೆ ಪತಂಗ ನನಗೆ ಫೋಸ್ ಕೊಟ್ಟಿಲ್ಲ ಸರ್..ಅದರ ನಡುವಳಿಕೆ ತಿಳಿದುಕೊಂಡರೇ ಈ ರೀತಿ ಫೋಸ್ ಕೊಟ್ಟಂತೆ ಎಲ್ಲಾ ಚಿಟ್ಟೆಗಳು, ಪತಂಗಗಳ ಫೋಟೋ ತೆಗೆಯಬಹುದು...ಹೀಗೆ ಬರುತ್ತಿರಿ...
ಧನ್ಯವಾದಗಳು.
ವಿನುತಾ,
ಪತಂಗದ ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...ನಿಮ್ಮ ಬ್ಲಾಗಿನ ತಿಂಗಳ ಮಾಮ ಲೇಖನವನ್ನು ಓದಿದೆ ಇಷ್ಟವಾಯಿತು...ಹೀಗೆ ಬರುತ್ತಿರಿ...
ಧನ್ಯವಾದಗಳು.
ತುಂಬ ಚೆನಂಗಿದೆ ಶಿವೂ ಅವರೇ,
ಆದರೆ ನನಗೆ ತುಂಬ ಇಷ್ಟ ವಾದದ್ದು, ನಿಮ್ಮ ಪ್ರಯೋಗ ಶೀಲತೆ, ಹಾಗು ನಿಮ್ಮ ನೂರಾರು ಕಿಲೋ ಮೀಟರ್ ಪ್ರವಾಸ ದೊಂದಿಗೆ ಪ್ಯುಪ ಬಾಕ್ಸ್ ಕೊಂಡೊಯ್ದಿದ್ದು.
ಎಂದಿನಂತೆ ಫೋಟೋ ಗಳು ಚೆನ್ನಾಗಿದೆ.
ಬ್ಲಾಗ್ ಜನಪ್ರೀಯ ವಾಗುತ್ತ ಇರುವುದಕ್ಕೆ ನನ್ನ ಶುಭಾಶಯಗಳು.
ತಪ್ಪು ಹುಡುಕುವ ಕೆಲಸವಲ್ಲ.
ಸ್ಥಳೀಯವಾಗಿ ಒಂದೊಂದು ಗಿಡಕ್ಕೆ ಒಂದೊಂದು ಹೆಸರಿರುವದರಿಂದ ಕೇಳಿದೆ ಅಷ್ಟೆ.
ನಮ್ಮ ಕಡೆ ನಂದಿ ಬಟ್ಟಲಿಗೆ ನಂಜಾಟ್ಲು ಅಂತನೂ ಕರೆಯುತ್ತಾರೆ. ಬಹುಶಃ ಇದು short ಹೆಸರಿರಬಹುದು.
very attractive pictures!
ಸರ್, ಚಿತ್ರಲೇಖನ ಮಾಹಿತಿದಾಯಕವಾಗಿದೆ. ನಾನೂ ಸಹ ಇದರ ಫೋಟೋತೆಗಿದಿದ್ದೆ. ಹಸಿರು-ಬಿಳಿ ಬಣ್ಣದಿಂದ ಕೂಡಿರುವ ಇದನ್ನು ಕಂಡಾಗ ಸೈನಿಕರ ಉಡುಪು ನೆನಪಾಗುತ್ತದೆ. ಅದರ ಹೆಸರನ್ನೂ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ಬಾಲು ಸರ್,
ನನ್ನ ಪ್ರಯೋಗಶೀಲತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಾವು ಆ ಸಮಯದಲ್ಲಿ ಅನೇಕ ಪ್ರವಾಸಗಳನ್ನು ಹೋಗಬೇಕಾಗಿ ಬಂದಿದ್ದರಿಂದ ಇದೆಲ್ಲಾ ಪ್ರಕರಣರಣಗಳು ನಡೆಯಿತು...
ಚಿತ್ರ ಲೇಖನದ ಜೊತೆಗೆ ನನ್ನ ಬ್ಲಾಗಿನ ಜನಪ್ರಿಯತೆಯನ್ನು ಗುರುತಿಸಿದ್ದೀರಿ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ಧನ್ಯವಾದಗಳು.
ರವಿ ಹೆಗಡೆ ಸರ್,
ನನ್ನ ಬ್ಲಾಗಿಗೆ ಮತ್ತೆ ಬಂದಿದ್ದಕ್ಕೆ ಧನ್ಯವಾದಗಳು.
ಟಿ.ಜಿ. ಶ್ರೀನಿಧಿ,
ಧನ್ಯವಾದಗಳು.
ಕ್ಷಣ ಚಿಂತನೆ ಸರ್,
ಈ ಪತಂಗದ ವೈವಿಧ್ಯಮಯ ಬಣ್ಣ ನನಗೂ ಇಷ್ಟವಾಯಿತು...ಇದನ್ನು ನೋಡಿದ ತಕ್ಷಣ ಬೇರೇನು ಯೋಚಿಸದೇ ಅದನ್ನು ಕ್ಲಿಕ್ಕಿಸಿಬಿಡುತ್ತೇವಲ್ಲ...ಅದೇ ಮಜಾ...ನೀವು ಕ್ಲಿಕ್ಕಿಸುವಾಗ enjoy ಮಾಡಿದ್ದೀರೆಂದುಕೊಳ್ಳುತೇನೆ...
ಧನ್ಯವಾದಗಳು.
ವಾವ್.. ತುಂಬಾ ಸೊಗಸಾಗಿತ್ತು ಬರಹ...
ಪತಂಗ ಮತ್ತು ಚಿಟ್ಟೆಗಿರುವ ವ್ಯತ್ಯಾಸ ಚೆನ್ನಾಗಿ ತಿಳಿಸಿದಿರಿ...
ನಿಸರ್ಗದೆಡೆಗಿನ ನಿಮ್ಮ ಕೌತುಕ ಹಾಗೂ ನಿಮ್ಮ ಶ್ರದ್ಧೆ ನನ್ನನ್ನು ನಿಬ್ಬೆರಗಾಗಿಸಿದೆ...
ನಿಮ್ಮ ಪ್ರಯೊಗಶಾಲಿ ವ್ಯಕ್ತಿತ್ವಕ್ಕೆ ಒಂದು.. HATS UP...
ಹಾಮ್.. ನಿಮ್ಮ ಬ್ಲಾಗ್ ನ ಚೊಚ್ಚಲ ಹುಟ್ಟು ಹಬ್ಬಕ್ಕೆ - Happy B'day!
ಗರಿಗೆದರಿ ವಿಶ್ವದೆಲ್ಲಡೆ ಕನ್ನಡವ ಪಸರಿಸಲಿ...
ಪ್ರೀತಿಯಿಂದ,
ಗಿರಿ
ಶಿವು,
ಕೀಟಶಾಸ್ತ್ರದ ಪಾಠವನ್ನು ಚಿತ್ರಸಹಿತ ಎಷ್ಟು ಚೆನ್ನಾಗಿ ಹೇಳಿಕೊಟ್ಟಿದ್ದೀರಿ! ಇದೇ ರೀತಿಯ ಬೋಧನೆಯನ್ನು ನಮ್ಮ ವಿದ್ಯಾಲಯಗಳಲ್ಲಿ ಮಾಡಿದರೆ, ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ
ಉತ್ತಮ ತಿಳಿವಳಿಕೆ ಬರುವದರಲ್ಲಿ ಸಂದೇಹವಿಲ್ಲ.
ನಿಮ್ಮ ನಿರೂಪಣೆ ಓದಿಸಿಕೊಂಡು ಹೋಗುತ್ತೆ. ಹಾಗಾಗಿಯೇ ಅಲ್ಲವೇ ದಿನಕ್ಕೊಮ್ಮೆ ನಿಮ್ಮ ಬ್ಲಾಗ್ ಭೇಟಿ ಮಾಡೋದು?
ಹೀಗೆ ಬರೆಯುತ್ತಿರಿ
ಆಫೀಸಿನಲ್ಲಿ ಬ್ಲಾಗ್ ಬ್ಲಾಕ್ ಮಾಡ್ತಾರೆ, ಮನೆಗೆ ಬಂದು ಓದಲು ಲೇಟು, ಹಾಗಾಗಿ ಲೇಖನ ಓದಲು ವೀಕೆಂಡವರೆಗೆ ಕಾಯಬೇಕಾಯಿತು... ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ, ಬ್ಲಾಗ್ ಪೊಸ್ಟ ಮಾಡಲು ಏನೆಲ್ಲ ಸಾಹಸ ಮಾಡುತ್ತೀರಿ ಅಂತೀನಿ, ಕೀಟ ಸಾಕಿ, ಅದರ ಬೆಳವಣಿಗೆ ಫೋಟೊ ಎಲ್ಲ ತೆಗೆದು, ಅದನ್ನು ಊರೂರಿಗೆ ಹೊತ್ತು ತಿರುಗಿ... ನಿಜಕ್ಕೂ ಗ್ರೇಟ್... ಹೀಗೆ ಬರೆಯುತ್ತಿದ್ದರೆ ನಿಮ್ಮ ಬ್ಲಾಗ್ ಜನಪ್ರಿಯವಾಗುತ್ತಿರುವುದರಲ್ಲಿ ಎನೂ ಅತಿಶಯವಿಲ್ಲ... ಇನ್ನೂ ಹೆಚ್ಚು ಲೇಖನಗಳ ನಿರೀಕ್ಷೆಯಲ್ಲಿ...
ಗಿರಿ,
ಧನ್ಯವಾದಗಳು....
ನನ್ನ ಬ್ಲಾಗಿಗೆ ಇನ್ನೂ ಒಂದು ವರ್ಷವಾಗಿಲ್ಲ....ಅದು ಆಗುವುದು...24-8-2009 ರಂದು....ನೀವು ಆತುರವಾಗಿ ಓದಿಬಿಟ್ಟಿದ್ದೀರೆನೆಸುತ್ತದೆ....
ನನ್ನ ಬ್ಲಾಗಿನ ಕ್ಲಿಕ್ಕಿಂಗ್ಸ್[ಪ್ರತಿದಿನ ತೆರೆದುಕೊಳ್ಳುವುದು]10,000 ದಾಟಿದೆ ಅಂತ ಹೇಳಿದ್ದೆ....ಅದಕ್ಕಾಗಿ ಬ್ಲಾಗಿನ ಬಲ ಮೇಲ್ಬಾಗ ನೋಡಿ....
ಸುನಾಥ್ ಸರ್,
ನಾನು ಮಾಡುವ ಇಂಥ ಕೆಲಸಗಳನ್ನು ನೀವು ಕೀಟಶಾಸ್ತ್ರವೆಂದಿದ್ದೀರಿ....ಧನ್ಯವಾದಗಳು...ನೀವು ಹೇಳಿದಷ್ಟು ಮಟ್ಟದಲ್ಲಿ[ವಿಶ್ವವಿದ್ಯಾಲಯದ ಪಾಠವಾಗುವಷ್ಟು]ನನ್ನ ಚಿತ್ರ ಲೇಖನಗಳು ಇವೆಯಾ...
ನಿಮ್ಮ ಪ್ರತಿಕ್ರಿಯೆಯು ನನಗೆ ಮತ್ತಷ್ಟು ಸ್ಪೂರ್ತಿ ನೀಡುವಂತಿದೆ....ಮುಂದಿನ ಬಾರಿ ಕೀಟಲೋಕದ ವಿಸ್ಮಯವೆಂದೇ ಹೇಳಬಹುದಾದ "ಕೊಂಡಿ ಇಲ್ಲದ ಜೇನು" ಎಂಬ ವಿಶೇಷ ಜೇನುಹುಳುವಿನ ಬಗ್ಗೆ [ಅದು ಹೀಗೆ ನನ್ನ ತರಲೇ ಪ್ರಯೋಗದಿಂದ ಬಂದ ಪಲಿತಾಂಶ]ಬರೆಯಬೇಕೆನ್ನಿಸಿದೆ....
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....ಧನ್ಯವಾದಗಳು.
ಹರೀಶ್,
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ಪ್ರಭು,
ತಡವಾಗಿಯಾದರೂ ನೀವು ಪ್ರತಿಕ್ರಿಯಿಸುತ್ತಿರೆಂದು ನನಗೆ ಗೊತ್ತು...ಎಲ್ಲಾ ಸಾಪ್ಟ್‌ವೇರಿಗಳ ಕಥೆಯೂ ಹೀಗೆ ಇದೆ. ನೀವಾದ್ರು ಪರ್ವಾಗಿಲ್ಲ...ಕೆಲವರಿಗೆ ಫೋನ್ ಕೂಡ ತೆಗೆಯುವುದಿಲ್ಲ...ಅಂಥ ಪರಿಸ್ಥಿತಿ....
ಪ್ರಭು ಇದೆಲ್ಲಾವನ್ನು ಐದಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ..ಹಾಗೂ ಖಂಡಿತ ಬ್ಲಾಗ್ ಪೋಸ್ಟಿಂಗ್ ಗಾಗಿ ಮಾಡುತ್ತಿಲ್ಲ..ನನ್ನ ಬ್ಲಾಗ್ ಅಂತ ಬಂದಿದ್ದು ಇತ್ತೀಚೆಗೆ ಇನ್ನೂ ವರ್ಷ ಕೂಡ ಆಗಿಲ್ಲ....ಇವೆಲ್ಲಾ ಮಾಡುವುದರ ಹಿಂದೆ ಅನೇಕ ಉದ್ದೇಶ, ಗುರಿ ಇರುತ್ತವೆ...ಎಲ್ಲಕ್ಕಿಂತ ಇಂಥವನ್ನು ಮಾಡುವುದರಿಂದ ಒಂದರ ಮಜ ಮತ್ತು ವಿವರಿಸಲಾಗದಷ್ಟು ಖುಷಿ ಸಿಗುತ್ತದೆ..
ನನ್ನ ಬ್ಲಾಗ್ ಜನಪ್ರಿಯವಾಗುವುದರಲ್ಲಿ ನಿಮ್ಮ ಸಹಕಾರವೂ ಖಂಡಿತ ಇದ್ದೇ ಇರುತ್ತದೆ...ಧನ್ಯವಾದಗಳು..
ಶಿವಣ್ಣ,
ಹತ್ತು ಸಾವಿರ ಗಡಿ ದಾಟಿದ್ದಕ್ಕೆ ಅಭಿನಂದನೆಗಳು :)
ಇನ್ನೂ ಹೆಚ್ಚು ಯಶಸ್ಸು ನಿಮಗೆ ಸಿಗಲಿ.
ಜಯಶಂಕರ್,
ಧನ್ಯವಾದಗಳು. ಹೀಗೆ ಬರುತ್ತಿರಿ...
ಹೌದು ಸರ್, ನಾನು ಬರೀ ಬ್ಲಾಗ್ ಪೋಸ್ಟಗಾಗಿ ಅಂತ ಹೇಳಲಿಲ್ಲ ನೀವು ತೆಗೆದುಕೊಳ್ಳುವ ಶ್ರಮದ ಬಗ್ಗೆ ಹೇಳಬೇಕೆಂದು ಹಾಗೆ ಹೇಳಿದೆ, ನೀವಂದಂತೆ ಬ್ಲಾಗಿಂಗ ಒಂಥರಾ ಖುಷಿ ಕೊಡತ್ತೆ, ಯಾರಾರೋ ಓದ್ತಾರೆ, ಯಾರಿಗೊ ಏನೊ ಹೆಲ್ಪ ಆಗತ್ತೆ, ಯಾರಿಗೊ ಎನೊ ಸಮಾಧಾನ ಸಿಗುತ್ತೆ.... ಏನೊ ಮಾಡಿದ ಕೆಲ್ಸಕ್ಕೆ ನಮಗೂ ತೃಪ್ತಿ ಸಿಗತ್ತೆ. ನಿಮ್ಮ ಈ ಹವ್ಯಾಸ ಹೀಗೇ ಮುಂದುವರೆಯಲಿ
ಶಿವು,
ಹುಡುಕಾಟಕ್ಕೆ ಮತ್ತು ಪ್ರಯೋಗಶೀಲತೆಗೆ ಮತ್ತೊಂದು ಹೆಸರು ನೀವು. ಆ ಮೂಲಕ ಸೃಜನಶೀಲತೆಯನ್ನು ಕಂಡುಕೊಂಡವರು. ಹ್ಯಾಟ್ಸಾಫ್ ನಿಮಗೆ. ಚೆಂದದ ಲೇಖನ ನಿಮ್ಮ ತಾಳ್ಮೆಗೆ ಮತ್ತು ಹುಡುಕಾಟಕ್ಕೆ ಸಾಕ್ಸಿಯಾಗಿ ನಿಲ್ಲುವದು ಈ ಲೇಖನ.
ಪ್ರಭು,
ನೀವು ಹೇಳುವುದು ನನಗೆ ಅರ್ಥವಾಯಿತು. ನನ್ನ ಫೋಟೋಗ್ರಫಿಯ ಮೂಲ ಉದ್ದೇಶ ಸ್ಪರ್ಧಾತ್ಮಕ ಚಿತ್ರಗಳನ್ನು ಕ್ಲಿಕ್ಕಿಸುವುದು....ಅದರಲ್ಲಿ ತುಂಬಾ ವಿಭಿನ್ನವಾಗಿ, ಹೊಸತನ್ನು ಕೊಡಬೇಕೆಂದಾಗ ಇಂಥವುಗಳ ಹಿಂದೆ ಬೀಳಬೇಕು. ಅದು ಯಶಸ್ವಿಯಾದಾಗ ಸಿಗುವ ಕೊನೆಯ ಖುಷಿ ಒಂದು ರೀತಿಯಾದರೇ....ಅದರ ಮದ್ಯ ನಡೆಯುವ processes ನಿಂದ ಸಿಗುವ ಆನಂದವನ್ನು ಇಲ್ಲಿ ಬಣ್ಣಿಸಲು ಆಗದು. ಮತ್ತು ಯಾರೂ ಹೇಳಿಕೊಡಲಾಗದ ಅದ್ಭುತವಾದ ಆನುಭವ ಮತ್ತು knowledge ಸಿಗುವುದಂತೂ ಖಂಡಿತ. ಇವೆಲ್ಲವುಗಳಿಗಾಗಿ ಹೀಗೆ ಹೊಸ ವಿಚಾರಗಳ ಹಿಂದೆ ಬೀಳುತ್ತೇನೆ...ನಿಮ್ಮಗಳ ಪ್ರೋತ್ಸಾಹದಿಂದ...ಇನ್ನಷ್ಟು ಹೊಸತನ್ನು ಮೈಮೇಲೆ ಹೇರಿಕೊಳ್ಳಲು ದೈರ್ಯ ಬರುತ್ತಿದೆ....ಧನ್ಯವಾದಗಳು.
ಉದಯ ಸರ್,
ಪತಂಗದ ಚಿತ್ರ ಲೇಖನವನ್ನು ಮೆಚ್ಚಿದ್ದೀರಿ....ನಿಮ್ಮ ಮಾತುಗಳಿಂದ ನಾನು ಇನ್ನಷ್ಟು ಹೊಸ ವಿಚಾರಗಳಲ್ಲಿ ತೊಡಗಿಕೊಳ್ಳಲು ಮನಸ್ಸಾಗುತ್ತಿದೆ.
ಧನ್ಯವಾದಗಳು.
ಶಿವು,
ಒಳ್ಳೆಯ ಬರಹ.
ನಿಜಕ್ಕೂ ನಿಮ್ಮ ಆಸಕ್ತಿ, involvement, ಹೋದಲ್ಲೆಲ್ಲ ಬಾಕ್ಸ್ ಹಿಡ್ಕೊಂಡು,ಅದನ್ನು ಜೋಪಾನ ಮಾಡೋ ರೀತಿ ಮೆಚ್ಚತಕ್ಕದ್ದು.. ..really hats off to ur work..
ವನಿತಾ,
ಚಿತ್ರ ಲೇಖನವನ್ನು ಮೆಚ್ಚಿದ್ದೀರಿ..ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....ಧನ್ಯವಾದಗಳು.
ಓಹೋ! ಈ ಹಸಿರು ಹುಳವನ್ನೊಮ್ಮೆ ಮನೆಯಲ್ಲಿ ನೋಡಿದ್ದೆ.. ನಮ್ಮ ಬೆಕ್ಕುಗಳ ಚಲನಚಿತ್ರದಲ್ಲಿ ಇದೆ! http://pradeepzone.bravehost.com/catsmovie/ ಇಲ್ಲಿಗೆ ಒಮ್ಮೆ ಹೋಗಿ ನೋಡಿ.. :) ಒಳ್ಳೆಯ ಮಾಹಿತಿ ನೀಡಿದ್ದೀರ ಸಾರ್...
ಪ್ರದೀಪ್,
ಬ್ಲಾಗಿನ ಪತಂಗದ ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದ ಸೈಟಿಗೆ ಹೋಗಿ ನೋಡುತ್ತೇನೆ...
ಹೀಗೆ ಬರುತ್ತಿರಿ...
ಫೋಟೋಗಳ ಕುರಿತು ನಿಮ್ಮನ್ನು ಹೊಗಳಲ್ಲಣ್ಣ...ಫೋಟೋಗಳು ಒಂದೇ ನೋಟಕ್ಕೆ ಸೆಳೆದುಬಿಡುತ್ತವೆ. ಈ ನಂದಿಬಟ್ಟಲು ಹೂವು ನೋಡಿದ್ದೇನೆ, ಚೆನ್ನಾಗಿ ಗೊತ್ತು. ಆದರೆ ಇಷ್ಟೊಂದು ಮಾಹಿತಿ ನನಗೆ ತಿಳಿದೇ ಇರಲಿಲ್ಲ. ದಿನಸರಿದಂತೆ ನಿಮ್ಮ ಬ್ಲಾಗ್ ವೈವಿಧ್ಯಮಯ ಮಾಹಿತಿಗಳೊಂದಿಗೆ ಮಿರುಗುತ್ತಿರುವುದು ಖುಷಿಯ ವಿಚಾರ. ಮುಂದುವರೆಯಲಿ..ಧನ್ಯವಾದಗಳು ಶಿವಣ್ಣ
-ಧರಿತ್ರಿ
ಒಳ್ಳೆಯ ಸಂಶೋಧನಾತ್ಮಕ ಬರಹ, ಮಾಹಿತಿಯೂ ತುಂಬಾ ದೊರೆಯಿತು. ಹೀಗೆಯೇ ಬರೆಯುತ್ತಿರಿ,
೧೦೦೦೦ ಸಂಖ್ಯೆ ದಾಟಿದ್ದಕ್ಕೆ ಅಭಿನಂದನೆಗಳು. ಇನ್ನು ಹೆಚ್ಚು ಹೆಚ್ಚು ಜನ ನಿಮ್ಮ ಬ್ಲಾಗ್ ಗೆ ಭೇಟಿ ಕೊಡಲಿ.
ಗುರು
ಶಿವೂ,,,
ಸ್ವಲ್ಪ ಲೇಟ್ ಆಗಿ ಬಂದೆ.....ಕ್ಷಮಿಸಿ,,, ಹಾಂ ಇನ್ನು ನಿಮ್ಮ ಬರಹ ಹಾಗು ತಾಳ್ಮೆಯ ವಿಚಾರವನ್ನು ಮೊದಲೇ ಹೇಳಿ ಬಿಟ್ ಇದ್ದೇನೆ,, ಇನ್ನು ಹೆಚ್ಚಿಗೆ ಹೇಳಿದರೆ ಚೆನ್ನಾಗಿರೋಲ್ಲ..... :-)
ಬರಹದ ಬಗ್ಗೆ ಏನು ಹೇಳೋಕೆ ಉಳಿದಿಲ್ಲ ಬಿಡಿ.....ಇದನ್ನು ಓದುತ್ತ ಚಿತ್ರವನ್ನು ನೋಡುತ್ತಾ ಯಾವುದೊ ಡಾಕ್ಯುಮೆಂಟರಿ ನೋಡ್ತಾ ಇರೋ ಅನುಭವ ಆಯಿತು,,,
ಒಳ್ಳೆಯ ಅಭಿರುಚಿಯ ಬರಹಕ್ಕೆ ಧನ್ಯವಾದಗಳು
ಧರಿತ್ರಿ,
ಕೆಲಸದಲ್ಲಿ ಸ್ವಲ್ಪ ಬ್ಯುಸಿಯಾಗಿದ್ದೇನೆ...ಮತ್ತೆ ಈ ಲೇಖನಕ್ಕೆ ಫೋಟೋಗಳ ಕೊರತೆ ಇತ್ತು. ಆದ್ರೆ ಆಗಿದ್ದ ಅನುಭವ ಮತ್ತು ಸಿಕ್ಕ ಮಾಹಿತಿಗಳಿಂದಾಗಿ ಲೇಖನ ಇನ್ನೂ ದೊಡ್ಡದಾಗಿತ್ತು. ಬ್ಲಾಗಿಗಾಗಿ ಈ ಮಟ್ಟಕ್ಕೆ ಇಳಿಸಿದ್ದೇನೆ..ಧನ್ಯವಾದಗಳು.
ಗುರುಮೂರ್ತಿ ಸರ್,
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...
ಬ್ಲಾಗ್ ಕದ ಹತ್ತು ಸಾವಿರ ಸಾರಿ ಆಗಿದ್ದನ್ನು ನೀವು ಗುರುತಿಸಿದಿರಿ...ಧನ್ಯವಾದಗಳು.
ಗುರು,
ನನ್ನ ಚಿತ್ರ ಲೇಖನಗಳು ನಿಮಗೆ ಡಾಕ್ಯುಮೆಂಟರಿ ಅನುಭವ ತರಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...ನಿಮ್ಮ ಪ್ರೋತ್ಸಾಹದಿಂದಾಗಿ ಮತ್ತೊಂದು ಇಂಥದ್ದೆ ಅನುಭವ ತರುವ[stingless honeybee]ಲೇಖನವನ್ನು ಬರೆಯುತ್ತಿದ್ದೇನೆ...ಆದು ಕೂಡ ಹೀಗೆ ಪ್ರಯೋಗಾತ್ಮಕವಾಗಿ ಬಂದ ಪಲಿತಾಂಶವೆನ್ನಬಹುದು...ಆಗಲೂ ಹೀಗೆ ಪ್ರೋತ್ಸಾಹಿಸಿ...ಧನ್ಯವಾದಗಳು.
ಚಿತ್ರ ಲೇಖನ ಚೆನ್ನಾಗಿದೆ.... ಡಿಸ್ಕವರಿ ಚಾನೆಲ್ ನೋಡಿದಂತೆ ಅನಿಸಿತು... ಹೀಗೆ ಮುಂದುವರೆಯಲಿ...
ರವಿಕಾಂತ್ ಸರ್,
ಲೇಖನವನ್ನು ಆ ಗುಣ ಮಟ್ಟಕ್ಕೆ ಹೋಲಿಸಿದಿರಿ...ಧನ್ಯವಾದಗಳು...ನನಗೆ ಇಂಥವು ಇನ್ನಷ್ಟು ಮಾಡಲು ಉತ್ಸಾಹ ಬರುತ್ತಿದೆ...
ಧನ್ಯವಾದಗಳು.
ಸ್ವಲ್ಪ ಲೇಟಾಯ್ತೇನೊ ಆದರೆ ಲೇಖನ ಓದಿದ ಮೇಲೆ ಕಮೆಂಟಿಸದಿರುವುದಕ್ಕೆ ಸಾಧ್ಯವಾಗಲಿಲ್ಲ. ಒಳ್ಳೆಯ ಮಾಹಿತಿ ಪೂರ್ಣ ಬರಹ ಸರ‍್. ನಿಮ್ಮ ತಾಳ್ಮೆಗೊಂದು ನಮಸ್ಕಾರ.ಪ್ರಕೃತಿ ನಿಜಕ್ಕು ವಿಸ್ಮಯಗಳ ಆಗರ.
ತುಂಬಾ ಪಾಂಡಿತ್ಯಪೂರ್ಣ ಬರಹ. ಫೋಟೊ ತೆಗೆಯಲು ನೀವು ಪಟ್ಟಿರುವ ಕಷ್ಟ ನಿಮ್ಮ ಬದ್ಧತೆಯನ್ನು ತೋರಿಸುತ್ತೆ. ಅಭಿನಂದನೆಗಳು. ಕೆ ಪಿ ಸತ್ಯನಾರಾಯಣ
Post a Comment