Friday, September 30, 2011

ಇದೆಲ್ಲಾ ಹೇಗಾಯ್ತು?


       ಜೂನ್ ಹದಿನೆಂಟನೇ ತಾರೀಖು ಯಾವ ಗಳಿಗೆಯಲ್ಲಿ ನನ್ನ ಕಿರುಚಿತ್ರದ ಚಿತ್ರೀಕರಣ ಪ್ರಾರಂಭಿಸಿದೆನೋ...ಅದರಿಂದ ಏನೇನ್ ಆಗೋಯ್ತು..ಗೊತ್ತಾ?  ಅನುಕೂಲ ಮತ್ತು ಅನಾನುಕೂಲಗಳೆರಡೂ ಆಗಿಬಿಟ್ಟಿವೆ

     ಮೊದಲಿಗೆ ಅದರಿಂದಾದ ಅನುಕೂಲಗಳನ್ನು ಹೇಳಿಬಿಡುತ್ತೇನೆ.

ಕಿರುಚಿತ್ರದ ವಿಚಾರ ಸೆಪ್ಟಂಬರ್ ನಾಲ್ಕರ ವೆಂಡರ್ಸ್ ಡೇ ದಿನ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾಯ್ತಲ್ಲ, ಕನ್ನಡಪ್ರಭದಲ್ಲಿ ಪೋನ್ ನಂಬರ್ ಹಾಕಿಬಿಟ್ಟಿದ್ದರಿಂದ ಅವತ್ತು ನೂರಾರು ಫೋನ್ ಕರೆಗಳಲ್ಲಿ. ಅಭಿನಂದನೆಗಳ ಮಹಾಪೂರವೇ ಆಗಿಹೋಯ್ತು.  ಕರ್ನಾಟಕದಾದ್ಯಂತ ಇರುವ ದಿನಪತ್ರಿಕೆ ವೆಂಡರುಗಳು ಫೋನ್ ಮಾಡಿ ಅಭಿನಂದಿಸಿದರು.  ಮತ್ತೆ ಇದೇ ರೀತಿ ಕರ್ನಾಟಕದಾದ್ಯಂತ ಅದೆಷ್ಟೋ ಛಾಯಾಸಕ್ತರು ಈ ಸಿನಿಮಾ ಬಗ್ಗೆ ಫೋನ್ ಮಾಡಿ ವಿಚಾರಿಸಿದರು. ಕೆಲವು ನಾವು ಇಂಥ ಕಿರುಚಿತ್ರ ತೆಗೆಯಬೇಕು ನಮ್ಮಲ್ಲಿ ಕತೆ ಸಿದ್ದವಾಗಿದೆ, ನೀವು ತಯಾರು ಮಾಡಿದ ರೀತಿ ವಿವರಿಸಿ ಅಂತ ಕೇಳಿದರೆ ಇನ್ನೂ ಕೆಲವರು ನಾವು ಡಾಕ್ಯುಮೆಂಟರಿ ಮಾಡಬೇಕಿದೆ, ಬಂಡವಾಳ ನಾವೇ ಹಾಕುತ್ತೇವೆ, ನೀವು ಪೂರ್ತಿ ಜವಾಬ್ದಾರಿ ತೆಗೆದುಕೊಂಡು ನಮಗೆ ಹೊಸ ಕಿರುಚಿತ್ರ, ಡಾಕ್ಯುಮೆಂಟರಿ ಮಾಡಿಕೊಡಿ ಕೇಳಿದವರು ಅನೇಕರು. ಮತ್ತೆ ಬಳಸಿದ ಕ್ಯಾಮೆರ ಇತ್ಯಾದಿಗಳ ಬಗ್ಗೆ ತಿಳಿದುಕೊಂಡರು. ಬಹುಶಃ ನನಗೆ ಬಂದ ಮಾಹಿತಿ ಪ್ರಕಾರ ಸುಮಾರು ಇಪ್ಪತ್ತಕ್ಕೂ ಹೆಚ್ಚು Canon 550D ಕ್ಯಾಮೆರಗಳು ಮಾರಾಟವಾಗಿವೆ ಎಂದು ತಿಳಿದುಬಂತು.  ಇದನ್ನು ತಿಳಿದ ಬೆಂಗಳೂರಿನಲ್ಲಿರುವ ಬ್ರಿಗೇಡ್ ರಸ್ತೆಯಲ್ಲಿರುವ ಕ್ಯಾನನ್ ಕ್ಯಾಮೆರ ಕಛೇರಿಯವರು ಈ ಸಿನಿಮಾ ನೋಡುವ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಮತ್ತಷ್ಟು ಗೆಳೆಯರು ಈ ಕ್ಯಾಮೆರ ಬಗ್ಗೆ, ಬೆಲೆಯ ಬಗ್ಗೆ, ಮಾರುಕಟ್ಟೆಯಲ್ಲಿ ದೊರೆಯುವ ಬಗ್ಗೆ ನನಗೆ ಫೋನ್ ಕರೆ ಮಾಡುತ್ತಿದ್ದಾರೆ.

ಈ ಚಿತ್ರದ ಸ್ಫೂರ್ತಿಯಿಂದ ದಾವಣೆಗೆರೆಯಲ್ಲಿ ಒಂದು ತಂಡ ಕಿರುಚಿತ್ರದ ಚಿತ್ರೀಕರಣದಲ್ಲ್ಲಿ ಮಗ್ನವಾಗಿದೆ.  ಮುಂಡರಗಿ ಗೆಳೆಯ ಸಲೀಂ ಕಡೆಯ ಗೆಳೆಯರು ಕತೆಯನ್ನು ಸಿದ್ದಮಾಡಿಕೊಂಡು ಕಿರುಚಿತ್ರ ಮಾಡಲು ಸಿದ್ದರಾಗುತ್ತಿದ್ದಾರೆ. ಹೀಗೆ ಹತ್ತಾರು ಕಿರುಚಿತ್ರದ ತಯಾರಿಗಳು ನಡೆದಿವೆ.  ನವೆಂಬರ್ ಅಥವ ಡಿಸೆಂಬರ್‍ನಲ್ಲಿ ನಮ್ಮ ಮಣಿಕಾಂತ್ ಚಿತ್ರವನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿದ್ದಾರೆ.

 ಹೊಸಪೇಟೆಯ ಆಕಾಶವಾಣಿ ರೇಡಿಯೋ ಕೇಂದ್ರವೂ ನನಗೆ ಫೋನ್ ಮಾಡಿ ಭಾನುವಾರ ಬೆಳಿಗ್ಗೆ ಬರುವ "ಉಪಹಾರ್" ಎನ್ನುವ ಕಾರ್ಯಕ್ರಮಕ್ಕಾಗಿ ಬೆಳಗಾಯ್ತು.... ಕಿರುಚಿತ್ರ ಮತ್ತು ನನ್ನ ವೃತ್ತಿಬದುಕಿನ ಬಗ್ಗೆ ೪೫ ನಿಮಿಷಗಳ ಕಾರ್ಯಕ್ರಮ ಮತ್ತು ಸಂದರ್ಶನವನ್ನು ದೂರವಾಣಿ ಮೂಲಕವೇ ನಡೆಸಿತ್ತು. ಅದು ಪ್ರಸಾರವಾದ ದಿನಾಂಕ ಸೆಪ್ಟಂಬರ್ ಹದಿನೆಂಟರ್ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆ.

ಪತ್ರಿಕೆಯಲ್ಲಿ ಈ ವಿಚಾರವನ್ನು ಓದಿದ ಆಕಾಶವಾಣಿ ರೈನ್‍ಬೌ ಎಫ್ ಎಂ ರೇಡಿಯೋ ವಾಹಿನಿಯವರು ನನ್ನನ್ನು ಕರೆದು ಪ್ರಖ್ಯಾತ "ಕಾಕಂಬಿ" ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಅದರಿಂದಾಗ ಪರಿಣಾಮ ಮಾತ್ರ ಅಪಾರವಾದದು.  ಅವತ್ತು ಬೆಳಿಗ್ಗೆ ೯ ಗಂಟೆಯಿಂದ ಅಭಿನಂದನೆ ಕರೆಗಳು ಪ್ರಾರಂಭವಾಗಿ ಪೂರ್ತಿ ದಿನ ಫೋನಿನಲ್ಲಿ ಮುಳುಗುವಂತಾಗಿತ್ತು.  ನಂತರದ ಎರಡು-ಮೂರು ದಿನಗಳು ಈ ವಿಚಾರವಾಗಿ ಕರೆಗಳು ಬರುತ್ತಲೇ ಇದ್ದವು. ಫೋನ್ ಮಾಡಿದ ಎಲ್ಲರೂ "ವೆಂಡರ್ ಕಣ್ಣು" ಪುಸ್ತಕವನ್ನು ಕೇಳುವವರೇ ಆಗಿದ್ದರು.  ಪುಸ್ತಕವನ್ನು ಕೊಡೋಣವೆಂದರೆ ನನ್ನ ಬಳಿ ಒಂದೂ ಪುಸ್ತಕವಿರಲಿಲ್ಲ. ಎಲ್ಲಾ ಖಾಲಿಯಾಗಿಬಿಟ್ಟಿತ್ತು. ನಮ್ಮ ಪ್ರಕಾಶಕರನ್ನು ಕೇಳಿದರೆ ಅವರ ಬಳಿಯೂ ಖಾಲಿ.  ಮತ್ತೆ ಯಾವ ಪುಸ್ತಕದ ಅಂಗಡಿಯಲ್ಲಿಯೂ ಇರಲಿಲ್ಲ. ಮೂರು ದಿನ ನನಗೆ ಬಂದ ಫೋನ್ ಕರೆಗಳನ್ನೆಲ್ಲಾ ಕಂಫ್ಯೂಟರಿನಲ್ಲಿ ಬರೆದು ಕೆಲ ಹಾಕಿದ್ದೆ. ಸುಮಾರು ಇನ್ನೂರು ವೆಂಡರ್ ಕಣ್ಣು ಪುಸ್ತಕಕ್ಕೆ ಬೇಡಿಕೆ ಬಂತಲ್ಲ! ಮರು ಯೋಚಿಸದೇ ನಾನೇ ಮೂರನೇ ಮರುಮುದ್ರಣಕ್ಕೆ ಸಿದ್ಧನಾಗಿಬಿಟ್ಟೆ. ಈ ಮೊದಲು ಮುದ್ರಣವಾದ ಪುಸ್ತಕಗಳಲ್ಲಿ ತುಂಬಾ ಅಕ್ಷರಗಳ ತಪ್ಪುಗಳಿದ್ದರಿಂದ ಮತ್ತೊಮ್ಮೆ ತಿದ್ದುಪಡಿಗಾಗಿ ಹಿರಿಯ ಆತ್ಮೀಯ ಗೆಳೆಯರಾದ ಸುನಾಥ್ ಸರ್ ಅವರನ್ನು ಕೇಳಿಕೊಂಡಾಗ ಅವರು ಪ್ರೀತಿಯಿಂದ ಮಾಡಿಕೊಟ್ಟರು. ಮೂರು ಹೊಸ ಲೇಖನಗಳು ಸೇರಿದಂತೆ ಈಗ ಪುಸ್ತಕದ ಗಾತ್ರ ದೊಡ್ಡದಾಯಿತು. ಇಷ್ಟೆಲ್ಲಾ ಬದಲಾವಣೆಯಾದ ಮೇಲೆ ಮುಖಪುಟವನ್ನು ಬದಲಾಯಿಸಬೇಕು ಅನ್ನಿಸಿತು. ಅದಕ್ಕಾಗಿ ಹೊಸ ಫೋಟೊ ತೆಗೆದು ಮುಖಪುಟವನ್ನು ಬದಲಾಯಿಸಿದೆ.  ಕಳೆದ ಒಂದು ವಾರದಿಂದ ಆಗುತ್ತಿರುವ ವಿದ್ಯುತ್ ಕಣ್ಣು ಮುಚ್ಚಾಲೆಯ ನಡುವೆಯೇ ಮತ್ತೊಬ್ಬ ಆತ್ಮೀಯ ಗೆಳೆಯರಾದ ಡಾ.ಸತ್ಯನಾರಾಯಣರವರು ಖುಷಿಯಿಂದ ಪುಟವಿನ್ಯಾಸವನ್ನು ಮಾಡಿಕೊಟ್ಟರು. ನಿನ್ನೆ ಮದ್ಯಾಹ್ನದ ಹೊತ್ತಿಗೆ ಪುಸ್ತಕದ ಕೆಲಸ ಮುಗಿಸಿ ಪ್ರಿಂಟಿಗೆ ಕೊಟ್ಟು,  ಸಂಜೆ ಈಟಿವಿಯವರ ರವಿ ಬೆಳಗೆರೆಯವರು  ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೊಗ್ರಫಿ ಅಸೈನ್ ಮೆಂಟಿಗೆ ಹೋಗಿದ್ದೆ.  ದಸರ ಮುಗಿಯುವ ಹೊತ್ತಿಗೆ ಹೊಸ ಮುಖಪುಟ ವಿನ್ಯಾಸದ "ವೆಂಡರ್ ಕಣ್ಣು" ಪುಸ್ತಕದ ಪ್ರತಿಗಳು ಮನೆಗೆ ತಲುಪಿರುತ್ತವೆ.
                     ವೆಂಡರ್ ಕಣ್ಣು ಮೂರನೆ ಮರುಮುದ್ರಣದ ಹೊಸ ಮುಖಪುಟ
     

ಮತ್ತೆ ಇಷ್ಟೆಲ್ಲಾ ಹೇಳಿಯೂ ನೀವು ಕಿರುಚಿತ್ರವನ್ನು ನೋಡಲು ಅದನ್ನು ಫೇಸ್‍ಬುಕ್, ಯು ಟ್ಯೂಬ್‍ನಲ್ಲಿ ನನಗೆ ಹಾಕಲಾಗಿಲ್ಲ. ಕಾರಣ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವ ನಿಯಮಗಳ ಪ್ರಕಾರ ಅದು ಪ್ರದರ್ಶನವಾಗುವವರೆಗೆ ಎಲ್ಲಿಯೂ ಹಾಕುವಂತಿಲ್ಲವಾದ್ದರಿಂದ ಕೇವಲ ಒಂದು ನಿಮಿಷದ ಪೊಮೋ ಮಾತ್ರ ಹಾಕಿದ್ದೇನೆ.  ಇದನ್ನು ಬೆಂಗಳೂರು, ನ್ಯೂಯಾರ್ಕ್, ಪ್ಯಾರಿಸ್, ಫಿಲಿಡೆಲ್ಫಿಯ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವಗಳಿಗೆ  ಬೆಳಗಾಯ್ತು ಕಿರುಚಿತ್ರವನ್ನು ಕಳಿಸಿದ್ದೇನೆ.

ಇದೆಲ್ಲದರ ನಡುವೆ ನನ್ನ ಫೋಟೊಗ್ರಫಿಯ ವೆಬ್‍ಸೈಟ್ ಸಿದ್ದವಾಗುತ್ತಿದೆ. ಅದನ್ನು ಬ್ಲಾಗ್ ಗೆಳೆಯರೊಬ್ಬರು ಪ್ರೀತಿಯಿಂದ ಮಾಡಿಕೊಡುತ್ತಿದ್ದಾರೆ. ಇದೆಲ್ಲಾ ಕಿರುಚಿತ್ರದ ಪರಿಣಾಮದಿಂದಾದ ಅನುಕೂಲಗಳು. ಆದ್ರೆ ಅನಾನುಕೂಲಗಳು ಆಗಿವೇ ಆದ್ರೆ ನೀವು ನಂಬಲೇಬೇಕು.  ಏನೇನು ಅನಾನುಕೂಲಗಳಾದವು ಅನ್ನುವುದನ್ನು ವಿವರಿಸಿಬಿಡುತ್ತೇನೆ.

 ಈ ಕಿರುಚಿತ್ರದ ತಯಾರಿಕೆಗೆ  ಸಿದ್ದನಾದೆನಲ್ಲ....ಒಂದು ಫೋಟೊ ತೆಗೆಯಬೇಕೆಂದರೆ ಅದೆಷ್ಟೋ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವಲ್ವಾ,  ಅಂತದ್ದರಲ್ಲಿ ಈ ಕಿರುಚಿತ್ರದ ದೃಶ್ಯವಳಿಗಳನ್ನು ಚಿತ್ರಿಸಲು ಚಿತ್ರಕತೆ ಬೇಕಲ್ಲ, ನನ್ನ ಮನಸ್ಸಿನ ಕಲ್ಪನೆಯ ಚಿತ್ರಕತೆಯನ್ನು ಬರೆಯಲಾರಂಭಿಸಿದೆ.  ಸುಮಾರು ಮುನ್ನೂರಕ್ಕೂ ಹೆಚ್ಚು ದೃಶ್ಯಗಳನ್ನು ಬರೆಯಬೇಕಿತ್ತು. ನೂರಕ್ಕೂ ಹೆಚ್ಚು ಪುಟಗಳಿದ್ದ ಇದನ್ನು ಬರೆದು ಮುಗಿಸಲು ಹತ್ತು ದಿನಗಳು ಬೇಕಾಯ್ತು.  ಅಲ್ಲಿಗೆ ನನ್ನ ಎಲ್ಲಾ  ಫೋಟೊಗ್ರಫಿ, ಬ್ಲಾಗ್, ಬಜ್, ಇತ್ಯಾದಿಗಳು ಬಂದ್. ಮತ್ತೆ ಅದನ್ನು ಚಿತ್ರೀಕರಿಸಿದ ಹತ್ತು ದಿನಗಳು, ಅದರ ಸಂಕಲನ, ಸಂಗೀತ, ಇತ್ಯಾದಿಗಳಿಂದಾಗಿ ಎರಡು ತಿಂಗಳೇ ಕಳೆದುಬಿಟ್ಟವು.  ಹದಿನೆಂಟು ನಿಮಿಷದ ಕಿರುಚಿತ್ರಕ್ಕೆ ಎರಡು ತಿಂಗಳುಗಳು ಬೇಕಾ ಅನ್ನಿಸಬಹುದು ನಿಮಗೆ.  ಈ ವಿಚಾರದಲ್ಲಿ ನಾನು ಪಕ್ಕಾ ವೃತ್ತಿಪರನಲ್ಲ.  ನನ್ನ ವೃತ್ತಿಯೇ ಬೇರೆ ಇದು ಪ್ರವೃತ್ತಿ ಮಾತ್ರ ತಾನೆ. ಆ ಕಾರಣಕ್ಕೆ ನನ್ನ ವೃತ್ತಿಯ ನಡುವೆ ಬಿಡುವು ಮತ್ತು ನನಗೆ ಕೆಲಸ ಮಾಡಿಕೊಡುವವರ ಬಿಡುವು ನೋಡಿಕೊಂಡು ಅವರಿಂದ ಕೆಲಸ ತೆಗೆಸಬೇಕಿತ್ತಲ್ಲ ಅದಕ್ಕಾಗಿ ಚಿತ್ರ ಇಷ್ಟು ದಿನವಾಯ್ತು. ಪೂರ್ತಿ ಸಿದ್ದವಾಗುವವರೆಗೆ ನಾನು ಈ ಚಿತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗದ್ದರಿಂದ ನಮ್ಮ ಬ್ಲಾಗ್ ಬಜ್, ಬರೆಯುವುದಿರಲಿ, ಬೇರೆಯವರ ಬ್ಲಾಗುಗಳನ್ನು ಓದುವುದಕ್ಕೂ ಆಗಿರಲಿಲ್ಲ.  ಈಗ ಅದೆಲ್ಲ ಗುಂಗಿನಿಂದ ಹೊರಬಂದಿದ್ದೇನೆ[ಹಾಗೆ ಅಂದುಕೊಂಡಿದ್ದೇನೆ]. ಮಾಡುವ ಕೆಲಸ ಬೇಕಾದಷ್ಟಿದೆ ಅನ್ನಿಸುತ್ತಿದೆ. ಮೊದಲಿಗೆ ಬ್ಲಾಗ್ ಲೋಕದೊಳಗೆ ಇಳಿಯಬೇಕು. ಗೆಳೆಯರ ಲೇಖನಗಳನ್ನು ಓದಬೇಕು. ಅದರಿಂದ ಸ್ಪೂರ್ತಿ ಪಡೆದು ಮತ್ತೆ ಬರೆಯಲು ಪ್ರಾರಂಭಿಸಬೇಕು. ಕಿರುಚಿತ್ರಕ್ಕೆ ಮೊದಲು ಐದಾರು  ವಿಚಾರಗಳಿಗಾಗಿ ಲೇಖನಗಳನ್ನು ಪ್ರಾರಂಭಿಸಿದ್ದೆ. ಎಲ್ಲವೂ ಒಂದೊಂದು ಪ್ಯಾರ ಬರೆಸಿಕೊಂಡು ನಿಂತುಬಿಟ್ಟಿವೆ.  ಅವೆಲ್ಲಾ ಈಗ ಔಟ್ ಡೇಟೆಡ್ ಆಗಿಬಿಟ್ಟಿದೆಯಾ? ಈಗಿನ ಪ್ರಸ್ತುತಕ್ಕೆ ತಕ್ಕಂತೆ ಬರೆಯಬಹುದಾ ನೋಡಬೇಕು. ಎರಡು ಸಿನಿಮಾಗಳ ಅವಲೋಕನ ಅರ್ಧದಷ್ಟಾಗಿದೆ. ಮತ್ತೊಮ್ಮೆ ಆ ಸಿನಿಮಗಳನ್ನು ನೋಡಬೇಕು. ಅದೆಲ್ಲಕ್ಕಿಂತ ನನ್ನ ಎರಡು ಫೋಟೊಗ್ರಫಿ ಪುಸ್ತಕಗಳಿಗಾಗಿ ಬರೆಯುತ್ತಿದ್ದ ಬರವಣಿಗೆ ನಿಂತು ಹೋಗಿದೆ. ಇದು ಅದೆಲ್ಲಕ್ಕಿಂತ ಮುಖ್ಯವಾದ್ದರಿಂದ ಅದನ್ನು ಶುರುಮಾಡಬೇಕು......

ಮತ್ತೆ ಈ ಮೂರು ತಿಂಗಳಿನಲ್ಲಿ ನನಗಿಷ್ಟವಾದ ಫಿಕ್ಟೋರಿಯಲ್, ಮ್ಯಾಕ್ರೋ...ಇತ್ಯಾದಿ ಫೋಟೊಗ್ರಫಿಯನ್ನು ಮಾಡಲಾಗಿಲ್ಲ. ಆದ್ರೆ ಸಾಲು ಸಾಲು ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಗಳು ಬರುತ್ತಿವೆ. ಫೋಟೊಗ್ರಫಿ ಗೆಳೆಯರೆಲ್ಲಾ ಕರೆದರೂ ಹೋಗಲಾಗಿರಲಿಲ್ಲ.

ಈ ಕಿರುಚಿತ್ರ ನನ್ನ ಇಷ್ಟೆಲ್ಲ ಬರೆವಣಿಗೆಯನ್ನು, ಫೋಟೊಗ್ರಫಿಯನ್ನು ನುಂಗಿ ನೀರು ಕುಡಿದಿದೆಯಲ್ಲಾ!  ಇದೆಲ್ಲಾ ಅನಾನುಕೂಲಗಳೇ ತಾನೇ...

ಸದ್ಯ ಆ ಗುಂಗಿನಿಂದ ಹೊರಬಂದಿದ್ದೇನೆ. ಬರವಣಿಗೆಯನ್ನು ಎಲ್ಲಿಂದ ಪ್ರಾರಂಭಿಸಲಿ,  ಬ್ಲಾಗ್ ಲೇಖನವನ್ನು ಬರೆಯಲಾ?, ಪುಸ್ತಕಗಳಿಗಾಗಿ ಫೋಟೊಗ್ರಫಿ ಲೇಖನವನ್ನು ಪ್ರಾರಂಭಿಸಲಾ? ಸ್ಪೂರ್ತಿಯನ್ನು ಎಲ್ಲಿಂದ ಪಡೆಯಲಿ? ಅಥವ  ಹೊರಗೆ ಲೈಟಿಂಗ್ ತುಂಬಾ ಚೆನ್ನಾಗಿದೆ ಅಂತ ಒತ್ತಾಯ ಮಾಡುತ್ತಿರುವ ಫೋಟೊಗ್ರಫಿ ಗೆಳೆಯರೊಂದಿಗೆ ಓಡಿಹೋಗಲಾ? 

 ಯೋಚಿಸುತ್ತಿದ್ದೇನೆ........

ಹೊಸಪೇಟೆಯ ಆಕಾಶವಾಣಿ ಕೇಂದ್ರವೂ ನನ್ನ " ಬೆಳಗಾಯ್ತು....ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ" ಕಿರುಚಿತ್ರಕ್ಕಾಗಿ ದೂರವಾಣಿಯ ಮೂಲಕ ಸಂದರ್ಶಿಸಿದ "ಉಪಹಾರ್ ಕಾರ್ಯಕ್ರಮ. ಇದು ಪ್ರಸಾರವಾಗಿದ್ದು ಸೆಪ್ಟಂಬರ್ 18ರಂದು.
ಸಂದರ್ಶನವನ್ನು ಪೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ..

http://soundcloud.com/shivuk/track


  
ಬೆಂಗಳೂರಿನ ಆಕಾಶವಾಣಿಯ FM Rainbow ರೇಡಿಯೋ ವಾಹಿನಿಯವರು ನಡೆಸಿಕೊಡುವ ಜನಪ್ರಿಯ "ಕಾಕಂಬಿ" ಕಾರ್ಯಕ್ರಮದಲ್ಲಿ ನನ್ನನ್ನು ಸಂದರ್ಶಿಸಿದರು. ಸೆಪ್ಟಂಬರ್ 14 ರ ಬುದವಾರ ಪ್ರಸಾರವಾದ ಈ ಕಾರ್ಯಕ್ರಮವನ್ನು ಫೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ...

http://soundcloud.com/omshivaprakash/shivu-k-in-fm-radio

ಚಿತ್ರಗಳು ಮತ್ತು ಲೇಖನ
ಶಿವು.ಕೆ
      




Wednesday, September 7, 2011

ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.


  
         ಮೊನ್ನೆ ಸೋಮವಾರ ಮಧ್ಯಾಹ್ನ ಸುಸ್ತಾಗಿ ವಿಶ್ರಾಂತಿಗಾಗಿ ಮಲಗಿದ್ದೆ. ನನ್ನ ಮೊಬೈಲ್ ರಿಂಗ್ ಆಗಿ ಎಚ್ಚರಿಸಿತು.

         "ನಾನು ಡಿ.ಪಿ.ಪರಮೇಶ್ವರ್ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅದ್ಯಕ್ಷರು. ನಿಮ್ಮ ಜೊತೆ ಮಾತಾಡಬಹುದಾ?

         "ಮಾತಾಡಿ" ಅಂದೆ. 

          "ನೀವು ನಮ್ಮ ಫೋಟೊ ಜರ್ನಲಿಸಂ ವಿದ್ಯಾರ್ಥಿಗಳಿಗೆ ಗೆಸ್ಟ್ ಲೆಕ್ಚರ್ ಆಗಿ ಬರಬೇಕು"

          "ಏನ್ ಮತ್ತೊಮ್ಮೆ ಹೇಳಿ, ನಾನು ನಿಮ್ಮ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾ?"

          "ಹೌದು ಸಾರ್,  ಇಲ್ಲ ಅನ್ನಬಾರದು.  ನೀವು ಒಪ್ಪಿಕೊಳ್ಳಲೇಬೇಕು."

           ಈ ಮಾತಿನಿಂದ ನನಗೆ ಸಂಪೂರ್ಣ ಎಚ್ಚರವಾಗಿತ್ತು.

           "ಸರ್ ತಪ್ಪು ತಿಳಿಯಬೇಡಿ, ನಾನು ಯಾವತ್ತು ಯಾರಿಗೂ ಪಾಠ ಮಾಡಿಲ್ಲ. ನನಗೆ ಅದು ಬರುವುದು ಇಲ್ಲ. ನನಗೆ ಅಂತ ಯೋಗ್ಯತೆಯಿಲ್ಲ"

           "ಸರ್ ನಿಮ್ಮ ಬಗ್ಗೆ ನಮಗೆಲ್ಲಾ ಗೊತ್ತಿದೆ ಸರ್, ರೇಡಿಯೋ, ಟಿವಿಯಲ್ಲಿ ಪೇಪರಿನಲ್ಲಿ ನಿಮ್ಮ ಲೇಖನಗಳನ್ನು ಓದಿದ್ದೇವೆ. ನಿಮ್ಮ ಪುಸ್ತಕ, ಫೋಟೊಗ್ರಫಿ, ಇತ್ತೀಚಿನ ಕಿರುಚಿತ್ರ ಇದೆಲ್ಲವನ್ನು ನೋಡಿದ ಮೇಲೆ ನೀವು ಸರಿಯಾದರು ಅಂತ ತೀರ್ಮಾನಿಸಿದ್ದೇವೆ."

            "ನೋಡಿ ಸರ್, ನನಗಿಂತ ಪಕ್ಕಾ ಅಕಾಡೆಮಿಕ್ ಆಗಿ ಈ ಫೋಟೊ ಜರ್ನಲಿಸಂ ಹೇಳಿಕೊಡಲು ಖ್ಯಾತ ಛಾಯಾಗ್ರಾಹಕರಾದ ಸಗ್ಗೆರೆ ರಾಮಸ್ವಾಮಿ, ಹಿಂದೂ ಪತ್ರಿಕೆಯ ಹಿರಿಯ ಛಾಯಾಗ್ರಾಹಕರಾದ ಗೋಪಿನಾಥನ್,...ಹೀಗೆ ಇನ್ನೂ ಅನೇಕರಿದ್ದಾರೆ. ಅವರಿಂದ ನಿಮ್ಮ ವಿದ್ಯಾರ್ಥಿಗಳಿಗೆ ಉಪಯೋಗವಾಗಬಹುದು, ನನ್ನಿಂದ ಏನು ಉಪಯೋಗವಿಲ್ಲ ಸರ್"

            "ಅವರೆಲ್ಲಾ ಅಕಾಡೆಮಿಕ್ ಆಗಿ ಒಂದು ಸುತ್ತು ಬಂದು ಹೋಗಿದ್ದಾರೆ. ಆದ್ರೆ ಪ್ರಾಕ್ಟಿಕಲ್ ಮತ್ತು ವಿಭಿನ್ನ ಶೈಲಿಯ ಫೋಟೊ ಜರ್ನಲಿಸಂಗೆ ನೀವೇ ಸೂಕ್ತ ನಾವು ಆಯ್ಕೆ ಮಾಡಿಕೊಂಡಿದ್ದೇವೆ"

            "ಆದ್ರೆ ಸರ್, ನಾನು ಈ ಮೊದಲು ನಿಮ್ಮನ್ನು ಬೇಟಿಯಾಗಿಲ್ಲ, ಮಾತಾಡಿಸಿಲ್ಲ, ಆದ್ರೂ ನನ್ನ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೀರಿ, ಫೋನ್ ನಂಬರ್ ಬೇರೆ ಸಿಕ್ಕಿದೆ ಇದೆಲ್ಲ ಹೇಗೆ?"

           "ನಿಮ್ಮ ಬಗ್ಗೆ ಇದೆಲ್ಲ ಹೇಳಿದ್ದು ನಾಗೇಶ್ ಹೆಗಡೆ. ಅವರೇ ನಿಮ್ಮನ್ನು ರೆಕಮಂಡ್ ಮಾಡಿದರು. ಫೋನ್ ನಂಬರ್ ಪೇಪರಿನಲ್ಲಿ ಬಂದಿತ್ತಲ್ಲ.."

           ಇನ್ನು ತಪ್ಪಿಸಿಕೊಳ್ಳುವಂತಿಲ್ಲ. ಒಪ್ಪಿಕೊಳ್ಳಲೇಬೇಕಾಯಿತು.

           "ಬುಧವಾರ ಮಧ್ಯಾಹ್ನ ಮೂರುಗಂಟೆಯಿಂದ ನಾಲ್ಕು ಗಂಟೆಯವರೆಗೆ ಮೊದಲ ಕ್ಲಾಸ್ ಇರುತ್ತೆ. ನಮ್ಮ ಹುಡುಗರಿಗೆಲ್ಲಾ ಹೇಳಿಬಿಡುತ್ತೇನೆ ಸರ್" ಅಂದರು.

          "ಆಯ್ತು ಸರ್" ಒಪ್ಪಿಕೊಂಡೆ.

            ಮರುಕ್ಷಣವೇ ನಾಗೇಶ್ ಹೆಗಡೆಯವರಿಗೆ ಫೋನ್ ಮಾಡಿ,  "ಸರ್ ನನ್ನ ಸಬ್ಜೆಕ್ಟ್ ಫೋಟೊ ಜರ್ನಲಿಸಂ ಅಲ್ಲ. ಅದ್ರೆ ನೀವು ಈ ವಿಚಾರದಲ್ಲಿ ನನಗೆ ಲೆಕ್ಚರ್ ಕೊಡಲಿಕ್ಕೆ ರೆಕಮೆಂಡ್ ಮಾಡಿಬಿಟ್ಟಿದ್ದೀರಲ್ಲ "

           "ಯಾರು ಹೇಳಿದ್ದು ನೀವು ಫೋಟೊ ಜರ್ನಲಿಸ್ಟ್ ಅಲ್ಲ ಅಂತ?  ಪತ್ರಿಕೆಗಳಲ್ಲಿ ನಿಮ್ಮ ಲೇಖನಗಳು ಮತ್ತು ಬರಹಗಳು ಪ್ರಕಟವಾಗಿರುವಷ್ಟು ಪತ್ರಿಕೋದ್ಯಮದಲ್ಲಿ ಕೆಲಸಮಾಡುವವರದೂ ಕೂಡ ಆಗಿಲ್ಲವಲ್ಲ, ಮತ್ತೆ ನಿಮ್ಮ ಅಷ್ಟೂ ಲೇಖನಗಳನ್ನು ಸುಮ್ಮ ಸುಮ್ಮನೇ ಹಾಕಲಿಕ್ಕೆ ಸಂಪಾದಕರುಗಳಿಗೆ ಬುದ್ಧಿಯಿಲ್ಲವೇ...ಅದರಲ್ಲೇನೋ ಸ್ವಾರಸ್ಯವಿರುವುದರಿಂದಲೇ ಪ್ರಕಟ ಮಾಡಿದ್ದಾರೆ.  ಹೊಸಬರಿಗೆ ಈಗ ಬೇಕಿರುವುದು ಅಂತದ್ದೆ.  ನೀವು ಏನು ಚಿಂತಿಸಬೇಡಿ. ದೈರ್ಯವಾಗಿ ಹೋಗಿಬನ್ನಿ" ಅಂತ ಕೆಲವು ಟಿಪ್ಸ್ ಕೊಟ್ಟರು. 

            ಅದನ್ನೆಲ್ಲಾ ನೋಟ್ ಮಾಡಿಕೊಂಡು, ನಮ್ಮ ಹಿರಿಯ ಛಾಯಾಗ್ರಾಹಕರಾದ ಸಿ.ಅರ್.ಸತ್ಯನಾರಯಣರವರಲ್ಲಿ ಈ ವಿಚಾರ ತಿಳಿಸಿ ಅವರಿಂದಲ್ಲೂ ನಮ್ಮ ಫೋಟೊಗ್ರಫಿ, ಮತ್ತು ಉಪನ್ಯಾಸದ ಬಗ್ಗೆ ಟಿಪ್ಸ್ ಪಡೆದುಕೊಂಡೆ. 

          ಬುಧವಾರ ಬಂದೇ ಬಿಡ್ತಲ್ಲ.  ನಾಗೇಶ್ ಹೆಗಡೆ ಮತ್ತು ಸತ್ಯನಾರಯಣರವರು ಕೊಟ್ಟ ಟಿಪ್ಸುಗಳ ಸಹಾಯದಿಂದ ಉಪನ್ಯಾಸಕ್ಕೆ ಬೇಕಾದ ಎಲ್ಲಾ ವಿಚಾರವನ್ನು ಬರೆದುಕೊಳ್ಳುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ.  ಊಟ ಮುಗಿಸಿ ಕೆ.ಅರ್ ಸರ್ಕಲ್ಲಿನ ಬಳಿ ಇರುವ ಸರ್ಕಾರಿ ಕಲಾ ಕಾಲೇಜು ಸೇರುವ ಹೊತ್ತಿಗೆ ಮೂರುಗಂಟೆ.
                        


          ನನ್ನ ಪರಿಚಯ ಮತ್ತು ವಿದ್ಯಾರ್ಥಿಗಳ ಪರಿಚಯವಾಗಿ ನನ್ನ ಲೆಕ್ಚರ್ ಪ್ರಾರಂಭವಾಗಿ ಮುಗಿಯುವ ಹೊತ್ತಿಗೆ ನಾಲ್ಕುಮುಕ್ಕಾಲು ಆಗಿಹೋಗಿತ್ತು.  ಒಂದು ಗಂಟೆಯ ಉಪನ್ಯಾಸ ಮತ್ತು ವಿಚಾರವಿನಿಮಯ ಒಂದುಮುಕ್ಕಾಲು ಗಂಟೆಯವರೆಗೆ ಆಗಿಹೋಗಿತ್ತು.  ನಾನೇನು ಹೇಳಿಕೊಟ್ಟೆನೋ, ಆದ್ರೆ ಅಷ್ಟೂ ವಿದ್ಯಾರ್ಥಿಗಳು ಪೂರ್ತಿ ಖುಷಿಯಾಗಿದ್ದರು. ಮತ್ತೆರಡು ಕ್ಲಾಸ್ ನಿಮ್ಮದು ಬೇಕೇ ಬೇಕು ಅಂತೇಳಿ ಗೌರವ ಸಂಭಾವನೆ ಅಂತ ಕೈಗೊಂದು ಕವರ್ ಕೊಟ್ಟರು.   ಆಯ್ತು ಮಾಡೋಣ ಅಂತ ಹೇಳಿ ಅಲ್ಲಿಂದ ಮನೆಗೆ ಬಂದಾಗ ಆರುಗಂಟೆ. ಜೇಬಿನಲ್ಲಿದ ಕವರ್ ತೆಗೆದು ಅದರಲ್ಲಿದ್ದ ನೋಟುಗಳನ್ನು ನೋಡಿದಾಗ ಒಂದುವರೆ ಗಂಟೆಗೆ ಇಷ್ಟೊಂದು ಸಂಭಾವನೆಯೇ ಅಂತ ಆಶ್ಚರ್ಯವಾಗಿತ್ತು.

ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.

ಶಿವು.ಕೆ