Saturday, July 24, 2010

ಹಾರಿ...ದೇಹವನ್ನು ಟ್ವಿಷ್ಟ್ ಮಾಡಿ.....

ಕಳೆದ ಸಂಚಿಕೆಯ ಮುಂದುವರಿದ ಭಾಗವೆಂದುಕೊಳ್ಳಬೇಡಿ.  ಅದು ನನ್ನ ಕತೆಯಾದರೆ ಇದು ಯುವ ಡೈವಿಂಗ್ ಕ್ರೀಡಾಪಟುಗಳ ಚಾಕಚಕ್ಯತೆ.


ನಮ್ಮ ಫೋಟೊಗ್ರಫಿ ಪ್ರದರ್ಶನ ಮೇಳ ಉತ್ತರದಿಕ್ಕಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದರೆ ಅತ್ತ ದಕ್ಷಿಣದಿಕ್ಕಿನ ಜಯನಗರ ಈಜುಕೊಳದಲ್ಲಿ ರಾಷ್ಟ್ರೀಯ ಜೂನಿಯರ್ ಡೈವಿಂಗ್ ಚಾಂಪಿಯನ್‍ಷಿಪ್ ನಡೆಯುತ್ತಿತ್ತು. ನನಗೂ ಇದು ಮೊದಲ ಅನುಭವವಾದ್ದರಿಂದ ಮೊದಲು ನೋಡಿ ಆನಂದಿಸುವುದು ನಂತರ ಸಾಧ್ಯವಾದರೆ ಫೋಟೊಗ್ರಫಿ ಮಾಡೋಣವೆಂದುಕೊಂಡು ಹೋಗಿದ್ದೆ.
ಓಡಿಬಂದು ಸ್ಪ್ರಿಂಗ್ ಬೋರ್ಡ್ ಒತ್ತಿ, ಮೇಲೆ ನೆಗೆದು, ಮತ್ತೆ ಕೆಳಗೆ ಬಂದು ಮತ್ತೊಮ್ಮೆ ಸ್ಪ್ರಿಂಗ್ ಬೋರ್ಡ್ ಅದುಮಿ......



ಆತ ಸ್ಪ್ರಿಂಗ್ ಬೋರ್ಡ್ ಮೇಲೆ ಮೂರು ಹೆಜ್ಜೆ ಬಂದು ತುದಿಯಲ್ಲಿ ನಿಂತು ಒಮ್ಮೆ ಉಸಿರುಬಿಗಿಹಿಡಿದು ಕಾಲಿಗೆ ಎಲ್ಲಾ ಶಕ್ತಿಯನ್ನು ತಂದುಕೊಂಡು ನಾಲ್ಕಡಿ ಮೇಲೆ ನೆಗೆದು ಮತ್ತೆ ಅಷ್ಟೇ ವೇಗದಲ್ಲಿ ಕೆಳಗೆ ಬಂದು ಅದೇ ಸ್ಪ್ರಿಂಗ್ ಬೋರ್ಡ್ ಒತ್ತಿದನೆಂದರೆ ಮುಗೀತು ಈ ಬಾರಿ ದುಪ್ಪಟ್ಟು ವೇಗದಲ್ಲಿ ಮೇಲೆ ಹಾರಿ ಮೇಲೆ ಒಂದು ಅಥವ ಎರಡು ಸಮ್ಮರ್ ಸಾಲ್ಟ್ ಪಲ್ಟಿಹೊಡೆದು ನೀರಿಗೆ ಬಿದ್ದರೆ ಎಲ್ಲರಿಂದ ಚಪ್ಪಾಳೆ.


          ಸಿನಿಮಾಗಳಲ್ಲಿ ನೋಡಿದ್ದ ನನಗೂ ಆತನ ನೈಜ ಪ್ರದರ್ಶನ ಕಂಡು ಖುಷಿಯಾಯ್ತು. ಆವನಾದ ಮೇಲೆ ಮತ್ತೊಬ್ಬ, ಮಗದೊಬ್ಬ ಹೀಗೆ ಎಂಟು ಜನ ಒಬ್ಬರಾದ ಮೇಲೆ ಒಬ್ಬರು ಡೈವ್ ಹೊಡೆಯುತ್ತಿದ್ದರು. ಕೆಲವರಿಗೆ ಜೋರು ಚಪ್ಪಾಳೆಯಾದರೆ ಮತ್ತೆ ಕೆಲವರಿಗೆ ಚಪ್ಪಾಳೆ ಸಿಗಲಿಲ್ಲ.


ಹೀಗೇಕೆ ಅಂದುಕೊಂಡೆನಾದರೂ ಡೈವಿಂಗ್ ಬಗ್ಗೆ ನನಗೇನು ಗೊತ್ತಿರಲಿಲ್ಲವಾದ್ದರಿಂದ ಸುಮ್ಮನೆ ಹಾಗೆ ನೋಡಿ ಖುಷಿಪಡುತ್ತಿದ್ದೆ. ಕೆಲವು ಫೋಟೊಗಳನ್ನು ತೆಗೆಯೋಣವೆಂದು ಸಿದ್ದನಾದರೆ ನನ್ನ ಕ್ಯಾಮೆರಾ ಒಂದು ಫೋಟೊವನ್ನು ಕ್ಲಿಕ್ಕಿಸಲಿಲ್ಲ. ಎಷ್ಟೋ ಬಾರಿ ಪ್ರಯತ್ನಿಸಿದರೂ ಒಂದು ಫೋಟೊ ಕೂಡ ಸರಿಯಾಗಿ ಬರಲಿಲ್ಲ. ಬಹುಶಃ ಅದಕ್ಕೂ ಡೈವಿಂಗ್ ನೀತಿ ನಿಯಮಗಳು ಅರ್ಥವಾಗಲಿಲ್ಲವೇನೋ. ಹೇಗಾದರೂ ಫೋಟೊವನ್ನು ತೆಗೆಯಲೇಬೇಕೆಂದು ತೀರ್ಮಾನಿಸಿ ಅಲ್ಲಿದ್ದ ಕೋಚ್ ಒಬ್ಬರನ್ನು ಮಾತಾಡಿಸಿ ಅದರ ವಿವರಗಳನ್ನು ಪಡೆದುಕೊಂಡೆ. ನನಗೆ ವಿವರವನ್ನು ಕೊಟ್ಟವರು ಕರ್ನಾಟಕದ ಪ್ರಖ್ಯಾತ ಡೈವಿಂಗ್ ತರಬೇತುದಾರರಾದ ಬಾಲರಾಜ್. ಅವರು ೧೦೭೦ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರಂತೆ. ಆಗ ನಾನು ಹುಟ್ಟಿರಲಿಲ್ಲ. ಈಗಲೂ ಅವರ ಉತ್ಸಾಹ ನೋಡಿ ಆಶ್ಚರ್ಯವಾಯಿತು.
ಡೈವಿಂಗ್‍ನಲ್ಲಿ ಪ್ರತಿಯೊಬ್ಬರಿಗೂ ಹತ್ತು ಡೈವಿಂಗ್ ಅವಕಾಶಗಳಿರುತ್ತವೆ. ಪ್ರತಿಯೊಂದು ನೆಗೆತದಲ್ಲೂ ಅನೇಕ ವಿಧಾನವನ್ನು ಪ್ರದರ್ಶಿಸಬೇಕು. ಮೊದಲು ನೇರವಾಗಿ ಹಾರಿ ಬೀಳುವುದರಿಂದ ಪ್ರಾರಂಭವಾಗಿ ನಡುವೆ ಒಂದು ಸಮ್ಮರ ಸಾಲ್ಟ್, ಮತ್ತೆ ಎರಡು ಸಮ್ಮರ್ ಸಾಲ್ಟ್, ಕೆಲವೊಮ್ಮೆ ಉದ್ದುದ್ದವಾಗಿ ಹಾರಿ ದೇಹವನ್ನು ಟ್ವಿಷ್ಟ್ ಮಾಡಿ ತಿರುಗಿಸಿ ಬೀಳವುದು, ಹೀಗೆ ಹತ್ತು ಸುತ್ತುಗಳಲ್ಲಿ ಎಲ್ಲಾ ವರಸೆಗಳನ್ನು ಮಾಡಬೇಕು. ಇವುಗಳನ್ನೆಲ್ಲಾ ಎಲ್ಲರೂ ಮಾಡುತ್ತಾರೆ. ಆದ್ರೆ ನೂರಕ್ಕೆ ನೂರರಷ್ಟು ಸರಿಯಾಗಿ ಮಾಡುವವರಿಗೆ ಹೆಚ್ಚು ಅಂಕಗಳು ದೊರೆಯುತ್ತವೆ. ಮತ್ತೆ ಕೊನೆಯಲ್ಲಿ ಕೈಗಳು ಕೆಳಮುಖವಾಗಿ, ಕಾಲುಗಳು ಮೇಲ್ಮುಖವಾಗಿ ಮಾಡಿಕೊಂಡು ದೇಹವನ್ನು ಕೋಲಿನಂತೆ ಲಂಬಾಕಾರವಾಗಿ ತಲೆಕೆಳಗಾಗಿ ತೊಂಬತ್ತು ಡಿಗ್ರಿ ನೇರವಾಗಿ ನೀರಿಗೆ ಪ್ರವೇಶ ಮಾಡಬೇಕೆನ್ನುವುದು ನಿಯಮ. ಬಾಲರಾಜ್‍ರವರು ಹೇಳಿದ್ದು ನನಗಿಂತ ನನ್ನ ಕ್ಯಾಮೆರಾಗೆ ಚೆನ್ನಾಗಿ ಅರ್ಥವಾಯಿತೆನಿಸುತ್ತದೆ. ನಂತರ ನಾನು ವಿವರಿಸುವುದಕ್ಕಿಂತ ಹೆಚ್ಚು ಸೊಗಸಾಗಿ ಕರಾರುವಾಕ್ಕಾಗಿ ಎಲ್ಲವನ್ನು ಹೀಗೆ ಕ್ಲಿಕ್ಕಿಸತೊಡಗಿತು. ಅವುಗಳಲ್ಲಿ ಕೆಲವನ್ನು ನೋಡಿ.
ನನ್ನ ವಿವರಣೆಗಿಂತ ಫೋಟೊ ಹೇಳುವ ಕತೆಯೇ ಚಂದವಲ್ಲವೇ! ಅದಕ್ಕೆ ಒಂದೊಂದಾಗಿ ನೋಡಿ.
ಒಂದು ಮೀಟರ್ ಸ್ಪ್ರಿಂಗ್ ಬೋರ್ಡ್ ಒತ್ತಿ ಹಾರಿದ ಮೇಲೆ ಹೀಗೆ ಒಂದು ದೇಹವನ್ನು ಉದ್ದುದ್ದ ತಿರುಗಿಸಿ[ಟ್ವಿಷ್ಟ್ ಮಾಡಿ]
ಹಾಗೆ ತಿರುಗಿಸುತ್ತಲೇ ತಲೆಕೆಳಗಾಗಿ.............


 
ಗಾಳಿಯಲ್ಲೇ....ತಲೆಕೆಳಕಾದ ರೀತಿಯಲ್ಲೇ ಲಂಬಾಕಾರವಾಗಿ....


ನಂತರ ನೀರಿಗೆ ಇಳಿಯುವ ಮೊದಲು ದೇಹವನ್ನು ಹೀಗೆ A ಆಕಾರದಲ್ಲಿ ಬಗ್ಗಿಸಿ......


ಕೊನೆಯಲ್ಲಿ ಹೀಗೆ ನೇರ ೯೦ ಡಿಗ್ರಿ ನೇರವಾಗಿ ನೀರಿಗೆ ಪ್ರವೇಶ!



ಮತ್ತೊಂದು ಕೋನದಲ್ಲಿ ಫೋಟೊ ತೆಗೆದಾಗ....ಸ್ಪ್ರಿಂಗ್ ಬೋರ್ಡ್ ಒತ್ತಿದ ಮೇಲೆ ಗಾಳಿಯಲ್ಲೇ ಹೀಗೆ ಕಾಲುಗಳನ್ನು ಮಡಚಿ, ಕೈಗಳಿಂದ ನೇರವಾದ ಕಾಲುಗಳನ್ನು ಹಿಡಿದು....


ಒಂದು ಸಮ್ಮರ್ ಸಾಲ್ಟ್[ಪಲ್ಟಿ] ಮಾಡಿ, ಕೈಗಳನ್ನು ಬಿಟ್ಟು.....


ತಿರುಗುತ್ತಲೇ...ತಲೆಕೆಳಕಾಗಿ.....ಕೈ ಮತ್ತು ಕಾಲುಗಳನ್ನು ನೇರವಾಗಿ ನೀಡುತ್ತಾ....



   ನೀರಿಗೆ ಬೀಳುವ ಮೊದಲು ದೇಹವನ್ನು ಮತ್ತೆ ಅಗಲಿಸಿ


ಕೊನೆಯಲ್ಲಿ ತಲೆಕೆಳಕಾಗಿ ನೇರವಾಗಿ ನೀರಿಗೆ....

 
ಹದಿನೈದು ಮೀಟರ್ ಎತ್ತರದಿಂದ ನೇರವಾಗಿ ನೀರಿಗೆ ತಲೆಕೆಳಕಾಗಿ ಬೀಳುತ್ತಿರುವುದು.

 

ಗಾಳಿಯಲ್ಲಿ ಹೀಗೆ ಕರಾರುವಕ್ಕಾಗಿ ನಿಂತರೆ........


              ತಲೆಕೆಳಕಾಗಿ ಹೀಗೆ ನಿಂತರೆ......



ಹೀಗೆ ಆಡ್ಡಡ್ಡವಾಗಿ ತೇಲಿದರೆ.......ಹೆಚ್ಚೆಚ್ಚು ಅಂಕಗಳು ಸಿಗುತ್ತವೆ.


ಸ್ಪರ್ಧೆಯಲ್ಲಿ ಪುಣೆಯ ಅರ್ಮಿ ತಂಡದ ಹುಡುಗರ ಪ್ರದರ್ಶನ ಅದ್ಬುತವಾಗಿತ್ತು. ಅವರು ಎಲ್ಲಾ ವಿಭಾಗಗಳನ್ನು ಚಿನ್ನದ ಪದಕಗಳನ್ನು ಪಡೆದುಕೊಂಡರು. ಉಳಿದಂತೆ ಕರ್ನಾಟಕದ ದಿವ್ಯ ನಮೀ ತೇಜ ಮೂರು ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಳು. ನಾನು ಕೊನೇ ದಿನ ಮಾತ್ರ ಹೋಗಿದ್ದರಿಂದ ಹಿಂದಿನ ದಿನಗಳಲ್ಲಿ ನಡೆದ ಮೂರು ಮೀಟರ್ ಸ್ಪ್ರಿಂಗ್ ಬೋರ್ಡ್, ಐದು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಎಲ್ಲ ಮುಗಿದುಹೋಗಿತ್ತು. ಕೊನೆಯ ದಿನ ಒಂದು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಫೋಟೊಗ್ರಫಿಗೆ ಮಾತ್ರ ಸಾಧ್ಯವಾಗಿತ್ತು.


ಚಿತ್ರಗಳು ಮತ್ತು ಲೇಖನ.
ಶಿವು.ಕೆ


Sunday, July 18, 2010

ಗಾಳಿಯಲ್ಲಿ ತೇಲಿ....ಬಿಲ್ಲಿನಂತೆ ಬಾಗಿ....

     

      ಆರು ಅಡಿ ಹಿಂದೆ ಸಾಗಿ, ಧೀರ್ಘವಾಗಿ ಉಸಿರೆಳೆದುಕೊಂಡು, ವೇಗವಾಗಿ ಮತ್ತದೇ ಆರು ಹೆಜ್ಜೆ ಮುಂದೆ ಸಾಗಿ ಕಟ್ಟೆಯ ತುದಿ ತಲುಪುತ್ತಿದ್ದಂತೆ ಕಾಲ್ಬೆರಳುಗಳ ತುದಿಗಳ ಮೇಲೆ ಬ್ಯಾಲೆ ನೃತ್ಯದಂತೆ  ದೇಹದ ಭಾರವನ್ನು ಬಿಟ್ಟು ಪುಟಿದ ಬಾಲಿನಂತೆ ದೇಹವನ್ನು ಚಿಮ್ಮಿದಾಗ,ಮರುಕ್ಷಣದಲ್ಲಿ ದೇಹ ಗಾಳಿಯಲ್ಲಿ ತೇಲಿ, ಬಿಲ್ಲಿನಂತೆ ಬಾಗಿ, ತಲೆಕೆಳಕಾಗಿ ಮೊದಲು ಕೈಗಳು ನೀರನ್ನು ಸೀಳಿ,  ತಲೆಯೂ ನೀರೋಳಗೆ ವೇಗವಾಗಿ ನುಗ್ಗಿದಾಗ ಕಣ್ಣು ತೆರೆದರೂ, ಮುಚ್ಚಿದರೂ ಏನೂ ಕಾಣುವುದಿಲ್ಲ.   ಆ ಕ್ಷಣದಲ್ಲಿ ದೇಹದೊಳಗೆ ನಾನಿಲ್ಲ.  ಮನದೊಳಗೂ ನಾನಿಲ್ಲ.  ಆಷ್ಟೇ ಏಕೆ ಇಡೀ ಪ್ರಪಂಚದ ಅರಿವಿಗೂ ನಾನಿಲ್ಲ. ನನ್ನರಿವಿಗೆ ಪ್ರಪಂಚವಿಲ್ಲ.  ಯಾರು ಇಲ್ಲ ಏನು ಇಲ್ಲ ಯಾವುದೂ ಇಲ್ಲವೆನಿಸುವ ಸ್ಥಿತಿಯಲ್ಲಿರುವಾಗಲೇ........ಅರೆರೇ......ತಳ ಸಿಕ್ಕಿತಲ್ಲ ಕೈಗಳಿಗೆ,  ಕಣ್ತೆರೆದರೆ ಕಣ್ನಿಗೂ ಕಾಣಿಸುತ್ತಿದೆ.  ಜೊತೆಗೆ ಕೈಕಾಲುಗಳಿವೆಯೆಂಬ ಭಾವ. ಹದಿನೈದು ಆಡಿ ಆಳದ ತಳದಿಂದ ನಿದಾನವಾಗಿ ಕೈಕಾಲುಗಳನ್ನು ಆಡಿಸುತಾ, ಮೇಲ್ಮುಖವಾಗಿ ತೇಲುತ್ತಿದ್ದರೆ,  ಮತ್ತೆ ನನಗೊಂದು ದೇಹ, ಅದರೊಳಗೊಂದು  ಮನಸ್ಸು ಈಜಿ ಮೇಲೇರಲು ಎಚ್ಚರಿಸುತ್ತಿದೆ.  ಈಜುತ್ತಾ ಮೇಲೆ ಬಂದರೆ  ಮತ್ತದೇ ಪ್ರಪಂಚ..........ಆ ಬದಿಯ ದಡ ಮುಟ್ಟಿ ಈ ಬದಿಗೆ ಮತ್ತದೇ  ತೇಲುತ್ತಾ, ಮುಳುಗಿತ್ತಾ ಈಜು.........



ಇದೇನಿದು ಯಾವುದೋ ಸಿನಿಮಾದ ಸನ್ನಿವೇಶವನ್ನು ಪ್ರೇಮ್ ಟು ಪ್ರೇಮ್ ಸ್ಲೋಮೇಷನ್ನಿನಲ್ಲಿ ಕುತೂಹಲದಿಂದ ನೋಡಿದಂತೆ ಅನ್ನಿಸುತ್ತಿದೆಯಲ್ಲವೇ? ಆದ್ರೆ ಇದು ಯಾವ ಸಿನಿಮಾ ದೃಶ್ಯಾವಳಿಯೂ ಅಲ್ಲ. ಕಳೆದ ಮೇ ತಿಂಗಳ ಬೇಸಿಗೆಯಲ್ಲಿ ಒಂದು ತಿಂಗಳು ಸ್ವಿಮಿಂಗ್ ಪೂಲಿಗೆ ಹೋಗಿ ನಿತ್ಯ ಒಂದು ಗಂಟೆ ಈಜಾಡಿ ಬಂದ ಅನುಭವ ತುಣುಕು. ಇಷ್ಟಕ್ಕೂ ನಾನೇನು ಈಜುಗಾರನಲ್ಲ. ಕೆರೆಯಾಗಲಿ, ಬಾವಿಯಾಗಲಿ, ಕೊನೆಗೆ ಬೆಂಗಳೂರಿನ ಸ್ವಿಮಿಂಗ್ ಪೂಲ್ ಆಗಲಿ ನೀರಿಗೆ ಇಳಿಯಲು ಭಯಪಡುತ್ತಿದ್ದೆ. ಹತ್ತು ಮೀಟರ್ ದೂರ ಈಜುವಷ್ಟರಲ್ಲಿ ಸುಸ್ತಾಗಿ ಭಯಪಟ್ಟು ವಾಪಸ್ ದಡಕ್ಕೆ ಬಂದುಬಿಡುತ್ತಿದ್ದೆ. ತಲೆಯೇನಾದರೂ ನೀರೊಳಗೆ ಮುಳುಗಿ ನೀರುಕುಡಿದುಬಿಟ್ಟರೆ ಮುಗೀತು. ಐದುಸಿರು ಬಿಡುತ್ತಾ, ಕೆಮ್ಮಿ ಕ್ಯಾಕರಿಸಿಕೊಂಡು ದಿಗಲಿನೊಂದಿಗೆ ಮತ್ತಷ್ಟು ಹೆದರಿಬಿಡುತ್ತಿದ್ದೆ. ಹೈಸ್ಕೂಲು ದಿನದ ಬೇಸಿಗೆ ರಜೆಗಳಲ್ಲಿ ಬಿಸಿಲಿನ ದಗೆ ನಿವಾರಿಸಿಕೊಳ್ಳಲು ಬೆಂಗಳೂರಿನ ಬಡಾವಣೆಯ ಈಜುಕೊಳಗಳಿಗೆ ಹೋಗಿ ಬಿದ್ದು ಒದ್ದಾಡಿ ಬರುತ್ತಿದ್ದೆ. ಹೀಗಿದ್ದರೂ ನಾನು ಈಜು ಕಲಿತಿರಲಿಲ್ಲ. ಕಲಿತಿದ್ದೆನೆಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದರೂ ಸೊಂಟ ಮಟ್ಟದ ನೀರಿನಲ್ಲಿ ಹತ್ತು ಮೀಟರ್ ಅಷ್ಟೆ.



ಈ ಬಾರಿಯ ಬೇಸಿಗೆ ದಗೆ ತಡೆಯಲಾಗದಷ್ಟು ಮಟ್ಟಕ್ಕೆ ಏರಿದಾಗ ಒಂದು ದಿನ ನಾನೊಬ್ಬನೇ ಸದಾಶಿವನಗರದಲ್ಲಿರುವ ಈಜುಕೊಳದಲ್ಲಿ ಮುಳುಗೆದ್ದು ದೇಹವನ್ನು ತಂಪುಮಾಡಿಕೊಂಡು ಬಂದಿದ್ದೆ. ಅವತ್ತು ಸಂಜೆ ನಮ್ಮ ರಸ್ತೆಯಲ್ಲಿ ಬ್ಯಾಟ್‍ಮಿಂಟನ್, ಕ್ರಿಕೆಟ್ ಆಡುತ್ತಿದ್ದ ಪ್ರೈಮರಿ, ಹೈಸ್ಕೂಲ್ ಹುಡುಗರಿಗೆ ಈ ವಿಚಾರವನ್ನು ಹೇಳಿದ್ದೇ ತಡ ಮರುದಿನ ಎಲ್ಲರೂ ಉತ್ಸಾಹ ಹುರುಪಿನಿಂದ ಸಿದ್ದರಾಗಿಬಿಟ್ಟರು. ಕೆರೆ ಕಟ್ಟೆ ಭಾವಿಗಳು ಹಳ್ಳಿಗಳ ಮಕ್ಕಳಿಗೆ ಸುಲಭವಾಗಿ ಲಭ್ಯವಾಗುವುದರಿಂದ ಅವರು ಚಿಕ್ಕ ವಯಸ್ಸಿಗೆ ಈಜು ಕಲಿತುಬಿಟ್ಟಿರುತ್ತಾರೆ. ಆದ್ರೆ ನಗರದ ಮಕ್ಕಳಿಗೆ ಹೀಗೆ ಅವಕಾಶವಿರುವುದಿಲ್ಲ. ಅಷ್ಟೇ ಅಲ್ಲದೇ ಮಕ್ಕಳೆಲ್ಲಾದರೂ ಹೊರಗೆ ಅಡ್ಡಾಡಿದರೆ ನಲುಗಿಬಿಡುತ್ತಾರೆನ್ನುವ ಭಯ ಅವರ ತಂದೆತಾಯಿಗಳಿಗೆ. ಅಂತದ್ದರಲ್ಲಿ ಹೀಗೆ
ಅವರಿಗೆ ಸುಲಭವಾಗಿ ನೀರಿಗೆ ಬೀಳಲು ಬಿಡುತ್ತಾರೆಯೇ? ಅಂದುಕೊಂಡು ಸುಮ್ಮನಾದೆ. ಆದ್ರೆ ಮರುದಿನ ಐವರು ಹುಡುಗರು ಟವಲ್, ಅಂಡರ್‌ವೇರ್ ಸೋಪ್ ಇತ್ಯಾದಿಗಳೊಂದಿಗೆ ಸಿದ್ದರಾಗಿ ಬಂದುಬಿಟ್ಟಿದ್ದರು. "ನಾವೆಲ್ಲಾ ಶಿವು ಅಂಕಲ್ ಜೊತೆ ಹೋಗುತ್ತೇವೆ ಅವರಿಗೆ ಚೆನ್ನಾಗಿ ಈಜು ಬರುತ್ತೆ, ನಮಗೂ ಕಲಿಸಿಕೊಡುತ್ತಾರೆ" ಅಂತ ಅವರ ಮನೆಯವರಲ್ಲಿ ಹೇಳಿ ಒಪ್ಪಿಸಿದರಂತೆ. ಅವರ ತಂದೆತಾಯಿಯ ದೃಷ್ಟಿಯಲ್ಲಿ ನಾನೊಬ್ಬ ದೊಡ್ಡ ಈಜು ತರಬೇತುದಾರ ಅಂತೆಲ್ಲ ಹೇಳಿ ನನಗೆ ಸುಳ್ಳೇ ಕಿರೀಟವನ್ನು ತೊಡಿಸಿಬಿಟ್ಟಿದ್ದರು. ಅವರ ತಂದೆತಾಯಿಗಳು ಕೂಡ "ನೀವು ಹೋಗುತ್ತಿರುವುದಕ್ಕೆ ಕಳಿಸುತ್ತಿದ್ದೇವೇ ಜೋಪಾನ" ಅಂತ ಹೇಳಿದಾಗ ನನಗಂತೂ ದೊಡ್ಡ ಭಾರವೇ ತಲೆಮೇಲೆ ಬಿದ್ದಂತೆ ಆಗಿತ್ತು. ಕೊನೆಗೆ ಆದದ್ದಾಗಲಿ ನನಗೂ ಈಜು ಬರುವುದಿಲ್ಲ, ಪ್ರತಿದಿನ ಹೋಗಿ ದೇಹವನ್ನು ತಂಪುಮಾಡಿಕೊಂಡು ಬಂದಂತೆ ಆಗುತ್ತದೆ ಜೊತೆಗೆ ಮಕ್ಕಳ ಜೊತೆಗೆ ಹೋದರೆ ಚೆನ್ನಾಗಿರುತ್ತದೆ ಅಂತ ಒಪ್ಪಿಕೊಂಡೆ.



ಎರಡನೇ ದಿನದಿಂದ ಶುರುವಾಯಿತಲ್ಲ ನಮ್ಮ ನೀರಾಟ. ನನ್ನ ಜೊತೆಗಿದ್ದವರೆಲ್ಲರು ಸ್ವಲ್ಪ ಸ್ವಲ್ಪ ಈಜು ಬರುತ್ತದೆ ಅಂತ ಹೇಳಿದ್ದವರು ನಾಲ್ಕು ಅಡಿ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. "ಸ್ವಲ್ಪ ಇತ್ತ ಬನ್ರೋ" ಅಂತ ಕರೆದರೆ ನಮಗೆ ಭಯವಾಗುತ್ತೆ ಅಂತ ಹೇಳುತ್ತಿದ್ದರು. ಇವರಿಗೆ ನಾನು ಚೆನ್ನಾಗಿ ಈಜಾಡುತ್ತೇನೆ ಅಂತ ತೋರಿಸಿಕೊಳ್ಳಲು ಎಂಟು ಅಡಿ ಆಳದಲ್ಲಿ ದುಮುಕಿ ಹತ್ತು ಮೀಟರ್ ಈಜಾಡಿ ಮೇಲೆ ಬಂದೆನಾದರೂ ನನಗೆ ಸಮಧಾನವಾಗಿರಲಿಲ್ಲ. ನಮ್ಮ ಹುಡುಗರಿಗೆ ನಾನು ಚೆನ್ನಾಗಿ ಈಜಾಡುತ್ತೇನೆ ಅಂತ ತೋರಿಸಿಕೊಡಲು ಉದ್ದುದ್ದದ ಐವತ್ತು ಮೀಟರ್ ಹೋಗದಿದ್ದರೂ ಪರವಾಗಿಲ್ಲ, ಕೊನೇ ಪಕ್ಷ ಅಡ್ಡಡ್ದ ಇರುವ ಇಪ್ಪತೈದು ಮೀಟರ್ ದೂರವಾದರೂ ಈಜಲೇಬೇಕು ಅಂತ ತೀರ್ಮಾನಿಸಿದವನು ಧೃಡ ನಿರ್ಧಾರದಿಂದ ಧುಮಿಕಿಯೇಬಿಟ್ಟೆ. ಅರ್ಧದಾರಿ ಹೋಗುವಷ್ಟರಲ್ಲಿ ಸ್ವಲ್ಪ ನೀರು ಕುಡಿದು ಸುಸ್ತಾದರೂ ಸಾವರಿಸಿಕೊಂಡು ಮೇಲೆ ಬಂದು ಉಸಿರು ತೆಗೆದುಕೊಂಡು ನಿದಾನವಾಗಿ ಈಜತೊಡಗಿದೆ. ಇನ್ನು ಹತ್ತೇ ಮೀಟರ್ ಇದೆ ಎನ್ನುವಷ್ಟರಲ್ಲಿ ಐದುಸಿರು ಬಿಡುತ್ತಾ ಹಾಗೂ ಹೀಗೂ ಆ ಬದಿಯನ್ನು ಮುಟ್ಟಿದ್ದೆ. ಅಲ್ಲೇ ನಿಂತಿದ್ದ ನಮ್ಮ ಹುಡುಗರ ಕಣ್ಣಿಗೆ ನಾನು ಹೀರೋ ಆಗಿದ್ದೆ. ಮತ್ತೆ ಮುಂದೆ ನಾಲ್ಕು ದಿನಗಳಲ್ಲಿ ಇದು ತುಂಬಾ ಸುಲಭವೆನಿಸಿತು. ಆ ಬದಿಯಿಂದ ವಾಪಸ್ಸು ಕೂಡ ಬರುವಂತಾಗಿತ್ತು. ನನ್ನ ಹುಮ್ಮಸ್ಸು ಹುರುಪಿನಿಂದಾಗಿ ಸ್ಪೂರ್ತಿಗೊಂಡ ನಮ್ಮ ಹುಡುಗರು ಒಂದು ವಾರ ಕಳೆದ ಮೇಲೆ ನನ್ನ ಜೊತೆ ದೈರ್ಯಮಾಡಿ ಈ ಬದಿಯಿಂದ ಆ ಬದಿಗೆ ಈಜಿಯೇ ಬಿಟ್ಟರು. ನಂತರ ಪ್ರತಿದಿನ ಒಂದೊಂದು ರೌಂಡ್ ಹೆಚ್ಚಾಗಿ ಈಜತೊಡಗಿದರು.



ನಾವು ಈಜುಕೊಳಗಳಿಗೆ ಹೋಗುವಾಗ ಮೊಬೈಲು, ಕೈಗಡಿಯಾರ, ಇತ್ಯಾದಿ ದುಬಾರಿ ವಸ್ತುಗಳನು ಏನು ತೆಗೆದುಕೊಂಡು ಹೋಗುವಂತಿಲ್ಲ. ನಾನು ಎಲ್ಲವನ್ನು ಮನೆಯಲ್ಲೇ ಬಿಟ್ಟುಹೋಗುತ್ತಿದ್ದೆ. ಹಾಗೂ ಈಜುಕೊಳದ ಟಿಕೆಟ್ ಹಣ ಜೊತೆಗೆ ಚಿಲ್ಲರೆ ನಾಣ್ಯಗಳನ್ನು ಮಾತ್ರ ಜೇಬಿನಲ್ಲಿರಿಸುತ್ತಿದ್ದೆ. ನಾವೆಲ್ಲಾ ಈಜಾಡಿ ಹೊರಗೆ ಬಂದ ಮೇಲೆ ಸಹಜವಾಗಿ ಎಲ್ಲರಿಗೂ ಹಸಿವಾಗುತ್ತಿತ್ತು. ನನ್ನ ಜೊತೆಗಾರರೆಲ್ಲಾ ಓದುತ್ತಿರುವ ಹುಡುಗರಾದ್ದರಿಂದ ಅವರಿಗೆ ಟಿಕೆಟ್ ಹಣವನ್ನು ಹೊಂದಿಸಿಕೊಂಡು ಬರುವುದೇ ದೊಡ್ದ ವಿಚಾರ. ಹೊರಬಂದ ಮೇಲೆ ಯಾರ ಬಳಿಯೂ ಹಣವಿರುತ್ತಿರಲಿಲ್ಲ. ಒಬ್ಬನ ಬಳಿ ಹತ್ತು ರೂಪಾಯಿ ಇದ್ದಲ್ಲಿ ಅದರಲ್ಲೇ ಅಲ್ಲಿ ಸಿಗುವ ಕತ್ತರಿಸಿ ತುಂಡು ಮಾಡಿದ ಸೌತೆಕಾಯಿ, ಅನಾನಸ್, ಮಸಾಲೆ ಹಾಕಿದ ಮಾವಿನಕಾಯಿ ತುಂಡುಗಳನ್ನು ತಿನ್ನುತ್ತಿದ್ದೆವು. ಆಗ ಹಂಚಿಕೊಂಡು ತಿನ್ನುವ ಮಜಾ ನನಗಂತೂ ಬಾಲ್ಯದ ಸ್ಕೂಲಿನ ದಿನಗಳನ್ನು ನೆನಪಿಸಿಬಿಡುತ್ತಿದ್ದವು. ಹೀಗೆ ನಿತ್ಯವೂ ಒಬ್ಬೊಬ್ಬರು ಕೊಡಿಸುತ್ತಿದ್ದರು. ಜೇಬಿನಲ್ಲಿ ಸಾವಿರಾರು ರೂಪಾಯಿಗಳಿದ್ದರೂ ನಮ್ಮ ಕೆಲಸದ ಒತ್ತಡಗಳಲ್ಲಿ ಹೀಗೆ ನಾನು ನಿಂತು ಆರಾಮವಾಗಿ ಅನಾನಸ್, ಕಾರ ಹಾಕಿದ ಮಾವಿನ ಕಾಯಿ ತುಂಡುಗಳನ್ನು ತಿಂದಿದ್ದೇ ಇಲ್ಲ.



ಈ ಬೇಸಿಗೆಯಲ್ಲಿ ಈ ಹುಡುಗರು ನನ್ನ ಜೊತೆ ಬರದಿದ್ದಲ್ಲಿ ನಾನು ಹೀಗೆ ನನ್ನನ್ನು ಯಾರು ಗಮನಿಸುವವರು ಇಲ್ಲವೆಂದು ಸುಮ್ಮನೇ ಅಲ್ಲಿಯೇ ಬಿದ್ದು ಒದ್ದಾಡುತ್ತಿರುತ್ತಿದ್ದೆನೇನೋ. ಅವರ ಜೊತೆ ಇರುವಿಕೆಯಿಂದಾಗಿಯೇ ಈಗ ಪೂರ್ತಿ ಹತ್ತರಿಂದ ಹನ್ನೆರಡು ಸುತ್ತು ಈಜಾಡುತ್ತಿದ್ದೇನೆ. ನಮ್ಮ ಹುಡುಗರೂ ಏನು ಕಡಿಮೆಯಿಲ್ಲ ಹಟಕ್ಕೆ ಬಿದ್ದವರಂತೆ ನನ್ನ ಸಮಕ್ಕೆ ಅವರು ಎಂಟು ಹತ್ತು ಸುತ್ತು ಮುಗಿಸುತ್ತಾರೆ. ಓಡಿ ಮೀನಿನಂತೆ ಧುಮುಕುತ್ತಾರೆ. ಅವರಿಂದಾಗಿ ನಾನು ಈಜು ಕಲಿತೆನೋ ಅಥವ ನನ್ನಿಂದಾಗಿ ಅವರು ಚೆನ್ನಾಗಿ ಈಜಾಡುವುದು ಕಲಿತರೋ ಗೊತ್ತಿಲ್ಲ. ಆದ್ರೆ ಅವರಿಲ್ಲದಿದ್ದಲ್ಲಿ ನಾನು ಹತ್ತು ಮೀಟರ್ ಆಳತೆಯಲ್ಲೇ ಬಿದ್ದು ಒದ್ದಾಡುತ್ತಿದ್ದೆ. ನನ್ನ ಜೊತೆ ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳು ಸುರಕ್ಷಿತ ಮತ್ತು ಈಜು ಚೆನ್ನಾಗಿ ಕಲಿತಿದ್ದಾರೆ ಎನ್ನುವುದು ಅವರ ಮನೆಗಳಲ್ಲಿ ತಂದೆತಾಯಿಗಳ ಅನಿಸಿಕೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ

Monday, July 12, 2010

ಸರ, ಇವು EXtra ಇದೆಯಾ"

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ  ಫೋಟೊ ಟುಡೆ ಎನ್ನುವ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಚಿತ್ರಗಳು.

The Statelevel photography Exhibition organised in palace ground Bangalore Date:9, 10,11th of july 2010.

ಬಣ್ಣದ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.
Pictorial Awards..
Avard winning photos
Pictorial 1st Award: Morning ing Jim corbett: Dr.S.Harinarayan. bangalore
ಮೊದಲ ಬಹುಮಾನ ಬೆಂಗಳೂರಿನ ಡಾ. ಎಸ್. ಹರಿನಾರಾಯಣ್.  ಚಿತ್ರ:  ಜಿಮ್ ಕಾರ್ಬೆಟ್ಟಿನಲ್ಲಿ  ಮುಂಜಾನೆ
2nd Award: "Monsoonwalk" by M.Ramu.Bangalore
ಎರಡನೇ ಬಹುಮಾನ ಬೆಂಗಳೂರಿನ ಎಂ.ರಾಮ್.  ಚಿತ್ರ: ಮಳೆಗಾಲದ ನಡಿಗೆ



3rd Award: "winning look" by Shivu.k ARPS.AFIAP.Bangalore.
ಮೂರನೇ ಬಹುಮಾನ ಬೆಂಗಳೂರಿನ ಶಿವು.ಕೆ.  ಚಿತ್ರ : ಗೆಲುವಿನ ನೋಟ.



ಪ್ರಕೃತಿ ವಿಭಾಗದಲ್ಲಿ ಬಹುಮಾನ ವಿಚೇತ ಚಿತ್ರಗಳು.
Nature section Awards.
1st Award: "Loin fighting for food" V.S.Kashinath.Bangalore

ಮೊದಲ ಬಹುಮಾನ ಬೆಂಗಳೂರಿನ ವಿ.ಎಸ್. ಕಾಶಿನಾಥ್. ಚಿತ್ರ: ಆಹಾರಕ್ಕಾಗಿ ಹೆಣ್ಣು ಸಿಂಹಗಳ ಕಾದಾಟ.



2nd Award: "Bad luck for longoor" Ravi maganthi.Bangaloreಎರಡನೆ ಬಹುಮಾನ ಬೆಂಗಳೂರಿನ ರವಿ ಮಗಂತಿ. ಚಿತ್ರ: ಹುಲಿಯ ಬಾಯಲ್ಲಿ ದುರಾದೃಷ್ಟ ಲಂಗೂರ್


3rd Award: "Slothbear with cubs" by Hemachandra jain.Davanagere.ಮೂರನೇ ಬಹುಮಾನ ದಾವಣಗೆರೆಯ ಹೇಮಚಂದ್ರ ಜೈನ್. ಚಿತ್ರ:  ಕರಡಿಯ ಜೊತೆ ಮರಿಗಳು.

Digital Creative section
ಡಿಜಿಟಲ್ ಕ್ರಿಯೇಟಿವ್ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.

1st Award: " Three colours" by G.S.Ravishankar. Mysoreಮೊದಲ ಬಹುಮಾನ ಮೈಸೂರಿನ ಜಿ.ಎಸ್.ರವಿಶಂಕರ್. ಚಿತ್ರ: ಮೂರು ಬಣ್ಣಗಳು.


2nd Award: "Towards moon" by Shivu.k ARPS. AFIAP. Bangalore
ಎರಡನೇ ಬಹುಮಾನ ಬೆಂಗಳೂರಿನ ಶಿವು.ಕೆ. ಚಿತ್ರ: ಚಂದ್ರನೆಡೆಗೆ


3rd Award: "Creative falls" by G.S.Ravishankar.Mysoreಮೂರನೇ ಬಹುಮಾನ ಮೈಸೂರಿನ ಜಿ.ಎಸ್.ರವಿಶಂಕರ್. ಚಿತ್ರ: ಸೃಜನ ಶೀಲ ಜಲಪಾತ.



Wedding photography sectionಮದುವೆ ಫೋಟೋಗ್ರಫಿಯ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು

1st  Award: "Wedding celebration"  by Raghavendra, Udupi.ಮೊದಲ ಬಹುಮಾನ ಉಡುಪಿಯ ರಾಘವೇಂದ್ರ .ಚಿತ್ರ : ಮದುವೆಯ ಸಂಬ್ರಮ

2nd Award: "Dont worry" by Shivu.k.ARPS.AFIAP. Bangaloreಎರಡನೇ ಬಹುಮಾನ ಬೆಂಗಳೂರಿನ ಶಿವು.ಕೆ. ಚಿತ್ರ:  ನಾನಿದ್ದೇನೆ, ಚೆನ್ನಾಗಿ ನೋಡಿಕೊಳ್ಳುತ್ತೇನೆ



3rd Award:" Changing the garland"  by Devaraj. Bangaloreಮೂರನೆ ಬಹುಮಾನ ಬೆಂಗಳೂರಿನ ದೇವರಾಜ್. ಚಿತ್ರ:  ಹಾರ ಬದಲಾವಣೆಯ ಮಜ


ಶಿಡ್ಲಘಟ್ಟದ ಮಲ್ಲಿಕಾರ್ಜುನ್, ಉದಯ್ ಹೆಗಡೆ, ಸಿರಸಿಯ ವಿ ಡಿ ಭಟ್, ಚಿಕ್ಕಮಗಳೂರಿನ ಮೂರ್ತಿ ಮತ್ತು ನಾನು ಅಲ್ಲಿ ಪ್ರದರ್ಶನಕ್ಕಿದ್ದ ಚಿತ್ರಗಳನ್ನು ನೋಡುತ್ತಾ ಅವುಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆತ ಉತ್ತರ ಕರ್ನಾಟಕದವನಿರಬೇಕು, ನನ್ನ ಕೈಯಲ್ಲಿದ್ದ ಮೂರು ಬಹುಮಾನದ ಮೊಮೆಂಟೋಗಳನ್ನು ನೋಡಿ,


"ಇವು ಎಲ್ಲಿ ಸಿಗುತ್ತವೆ ಸರ" ಕೇಳಿದ.


ಅವನ ಮಾತನ್ನು ಕೇಳಿ ನಾವೆಲ್ಲಾ ಮುಖ ಮುಖ ನೋಡಿಕೊಂಡೆವು. ಎಲ್ಲರಿಗೂ ಜೋರಾಗಿ ನಗು ಬಂದರೂ ನಗದಂತೆ ತಡೆದುಕೊಂಡರು.


"ನೋಡಿ ಇದೇ ಸಾಲಿನ ಕೊನೆಯಲ್ಲಿ ಬಲೂನುಗಳನ್ನು ಹಾಕಿ ಡೆಕರೇಷನ್ ಮಾಡಿದ್ದಾರಲ್ಲ, ಆ ಸ್ಟಾಲ್‍ನಲ್ಲಿ ಕೇಳಿ. ಸಿಗಬಹುದು" ಅಂದೆ.


"ಹೌದಾ" ಅಂದವನು ಮತ್ತೆ ಆ ಮೊಮೆಂಟೊಗಳ ಮೇಲೆ ಹೆಸರಿದ್ದದ್ದು ನೋಡಿ, " ಇದರ ಹೆಸರು ಬರೆಸಬಹುದಾ?" ಮತ್ತೆ ಕೇಳಿದ.


"ಹೌದ್ರಿ, ನಿಮಗೆ ಬೇಕಾದ ಹೆಸರನ್ನು ಅವರೇ ಬರೆದುಕೊಡುತ್ತಾರೆ," ಅಂದೆ.
ಮತ್ತೆ ಅಲ್ಲಿದ್ದ ಚಿತ್ರಗಳನ್ನು ನೋಡುತ್ತಾ ಬಹುಮಾನ ಗಳಿಸಿದ ಚಿತ್ರದ ಕೆಳಗೆ ಹೆಸರಿತ್ತಲ್ಲ ಅದು ಅವನ ಕಣ್ಣಿಗೆ ಕಾಣಿಸಿತು. ಅದೇ ಹೆಸರು ಆ ಮೊಮೆಂಟೋನಲ್ಲಿ ಇದ್ದಿದ್ದು ನೋಡಿ " ಹೋ ಈ ಚಿತ್ರಕ್ಕೆ ನಿಮಗೆ ಬಹುಮಾನ ಬಂದಿದೆಯಾ" ಅಂತ ದೇಸಾವರಿ ನಗೆ ನಗುತ್ತಾ ಅಲ್ಲಿಂದ ಹೊರಟ. ಅವನ ಹೊರಟ ಮೇಲೆ ನಾವಂತೂ ನಕ್ಕಿದ್ದೇ ನಕ್ಕಿದ್ದು. ನಾವು ಹಾಗೆ ನೋಡುತ್ತಾ ಮುಂದೆ ಸಾಗಿದೆವು. ಮತ್ತೊಬ್ಬ ಅವನು ಕೂಡ ಉತ್ತರ ಕರ್ನಾಟಕದವನಿರಬೇಕು, ಅವನಿಗೂ ನನ್ನ ಕೈಲಿದ್ದ ಮುಮೆಂಟೋಗಳ ಕಡೆ ಕಣ್ಣು ಬಿತ್ತು. ಹತ್ತಿರ ಬಂದವನು.

"ಸರ, ಇವು Extra ಇದೆಯಾ" ಕೇಳಿದ.
ಅವನು ಕೇಳಿದ ಪ್ರಶ್ನೆಗೆ ಮತ್ತೆ ನನಗೆ ನಗು ಬಂದರೂ ತಡೆದುಕೊಂಡು
"ನನ್ನ ಬಳಿ ಮೂರೇ ಇರೋದು, ನಿಮಗೆ ಬೇಕಾದರೆ ಅಲ್ಲಿರುವ ಕಾರ್ಯಕ್ರಮಕ್ಕೆ ಹೋಗಿ ಕೇಳಿ. ಅಲ್ಲಿ ನಮ್ಮ ರಾಜ್ಯದ ರಾಜ್ಯಪಾಲರಿರುತ್ತಾರೆ. ಅವರೆ ನಮಗೆ ಕೊಟ್ಟಿರುವುದು. ನಿಮಗೂ ಕೊಡಬಹುದು". ಅಂದೆ.

ನನ್ನ ಉತ್ತರವನ್ನು ಕೇಳಿ ಅವನಿಗೆ ಏನು ಅರ್ಥವಾಗಲಿಲ್ಲವೆನಿಸುತ್ತದೆ. ನನ್ನ ಮುಖವನ್ನೊಮ್ಮೆ ನೋಡಿ ಹಾಗೆ ಹೊರಟುಹೋದ. ಬಹುಶಃ ಇಂಥ ಪ್ರದರ್ಶನ ಮೇಳಗಳಲ್ಲಿ ಉಚಿತವಾಗಿ ಬ್ಯಾಗುಗಳು, ಬ್ರೋಷರುಗಳು, ಗಿಪ್ಟ್ ಐಟಮುಗಳು, ವಿಸಿಟಿಂಗ್ ಕಾರ್ಡುಗಳನ್ನು ಪ್ರತಿಯೊಂದು ಸ್ಟಾಲಿನವರು ಕೊಡುತ್ತಿರುತ್ತಾರೆ. ಈ ಮುಮೆಂಟೋಗಳನ್ನು ಕೂಡ ಹಾಗೆ ಕೊಟ್ಟಿರಬಹುದು ಅಂತ ಅಂದುಕೊಂಡು ಆತ ಕೇಳಿರಬಹುದು ಅಂತ ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು. ಇಂಥವೇ ಅನೇಕ ಅನುಭವಗಳಾಗಿದ್ದು ನಮಗೆಲ್ಲರಿಗೂ ಆಗಿದ್ದು ದಿನಾಂಕ ೯,೧೦,೧೧ ರಂದು ಅರಮನೆ ಮೈದಾನದಲ್ಲಿ ರಾಷ್ಟ್ರಮಟ್ಟದ "ಫೋಟೊ ಟುಡೆ" ಎನ್ನುವ ಪ್ರದರ್ಶನದಲ್ಲಿ.


Hundreds of photographers and Videographers clicking and coveraging for Inaguration of phototoday Exhibition by Governer.
ಸಾವಿರಕ್ಕೂ ಹೆಚ್ಚು ಛಾಯಾಗ್ರಾಹಕರು ಒಂದೇ ವೇದಿಕೆಯಲ್ಲಿ  ಒಟ್ತಾಗಿ ಫೋಟೊ ಕ್ಲಿಕ್ಕಿಸುತ್ತಿರುವುದು.

ರಾಷ್ಟ್ರಮಟ್ಟದ ಫೋಟೊಗ್ರಫಿ ಸಲಕರಣೆಗಳ ಮಾರಾಟ, ಪ್ರದರ್ಶನ ಮೇಳದಲ್ಲಿ, "ಹುಲಿಯನ್ನು ಉಳಿಸಿ" ಎನ್ನುವ ಆಂದೋಲನದ ಹೆಸರಿನಲ್ಲಿ ಅದನ್ನು ನಮ್ಮ ರಾಜ್ಯದ ಮಾನ್ಯ ರಾಜ್ಯಪಾಲರು ಉದ್ಘಾಟಿಸುವಾಗ ಒಂದೇ ಬಾರಿಗೆ ಸಾವಿರಕ್ಕೂ ಹೆಚ್ಚು ಛಾಯಾಗ್ರ್‍ಆಹಕರು ಆ ವೇದಿಕೆಯಲ್ಲಿ ಉದ್ಘಾಟನೆಯನ್ನು ಕ್ಲಿಕ್ಕಿಸಿದರು. ಅಷ್ಟು ಛಾಯಾಗ್ರಾಹಕರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಫೋಟೊ ಕ್ಲಿಕ್ಕಿಸಿದ್ದು ರಾಷ್ಟ್ರಮಟ್ಟದ ದಾಖಲೆ. "ಕರ್ನಾಟಕ ಫೋಟೊಗ್ರಫಿ ಆಶೋಷಿಯಷನ್‍ರವರು ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನ, ಬಹುಮಾನ ವಿಜೇತ ಛಾಯಾಗ್ರಾಹಕರಿಗೆ ರಾಜ್ಯಪಾಲರಿಂದ ಬಹುಮಾನ ವಿತರಣೆ, ಇವೆಲ್ಲಾ ನಡೆದರೂ ಇದು ಯಾವ ಪತ್ರಿಕೆಯಲ್ಲೂ ದೊಡ್ಡ ಮಟ್ಟದ ಸುದ್ಧಿಯಾಗಲೇಇಲ್ಲ. ಏಕೆಂದರೆ ಅದು ಛಾಯಾಗ್ರಾಹಕರ, ಅವರ ಉಪಕರಣಗಳ, ಕ್ಯಾಮೆರಾಗಳ, ಲೆನ್ಸುಗಳ ಅವುಗಳನ್ನು ಕೊಳ್ಳುವ ಛಾಯಾಗ್ರಾಹಕರ, ಮತ್ತು ರಾಜ್ಯಮಟ್ಟದಲ್ಲಿ ಬಹುಮಾನ ವಿಜೇತ ಚಿತ್ರಗಳ ಪ್ರದರ್ಶನವಾಗಿತ್ತೇ ವಿನಃ ನಮ್ಮ ರಾಜಕೀಯ ಪಕ್ಷಗಳ ಸಮಾವೇಶವಾಗಿರಲ್ಲಿಲ್ಲವಾದ್ದರಿಂದ ಅವಕ್ಕೆ ಹೆಚ್ಚು ಪ್ರಚಾರವೂ ಸಿಗಲಿಲ್ಲ.
   ಯಡಿಯೂರಪ್ಪ ಯಾವಾಗ ಅಳುತ್ತಾರೆ, ಅಳುವಾಗ ಅದೆಷ್ಟು ಹನಿಗಳು ಬೀಳಬಹುದು, ಎಷ್ಟು ವೇಗವಾಗಿ ಬೀಳಬಹುದು, ಅದರ ತೂಕವೆಷ್ಟು.,   ಸೆಂಟಿಮೆಂಟ್ ಎಷ್ಟು, ಕೃತಕತೆ ಎಷ್ಟು  ಇಂಥ ವಿಚಾರಗಳ ಹಿಂದೆ ಬಿದ್ದಿರುವ ನಮ್ಮ ಪತ್ರಿಕೆಗಳಿಗೆ  ಇಷ್ಟು ದೊಡ್ಡಮಟ್ಟದ ರಾಷ್ಟ್ರಮಟ್ಟದ ಪ್ರದರ್ಶನದ ಬಗ್ಗೆ ಗಮನವಾದರೂ ಎಲ್ಲಿ ಬರಲು ಸಾಧ್ಯ ಹೇಳಿ?
ನಮ್ಮ ಕರ್ನಾಟಕದ ಎಲ್ಲಾ ದಿಕ್ಕುಗಳಿಂದಲೂ ವೃತ್ತಿನಿರತ ಮತ್ತು ಹವ್ಯಾಸಿ ಛಾಯಾಗ್ರಾಹಕರು ಮಾತ್ರವಲ್ಲದೇ ತಮಿಳುನಾಡು, ಆಂದ್ರಪ್ರದೇಶ, ಕೇರಳ, ಮುಂಬೈ, ಗೋವ, ಹೀಗೆ ಎಲ್ಲಾಕಡೆಗಳಿಂದಲೂ ಛಾಯಾಗ್ರ್‍ಆಹಕರು ಈ ಪ್ರದರ್ಶನಕ್ಕೆ ಬಂದಿದ್ದರು.


Sleeping photographer in function
 ಕೆಲವರಿಗೆ ಎಲ್ಲಿದ್ದರೂ ನಿದ್ರೆ ಬರುತ್ತದೆ!



Photography trainning classಮೇಳದಲ್ಲಿ ಫೋಟೊಗ್ರಫಿ ಕಲಿಕೆ ಕಾರ್ಯಕ್ರಮ


outside of exhibition
 ಪ್ರದರ್ಶನ ಮೇಳದ ಹೊರಗಿನ ದೃಶ್ಯ


ಪ್ರದರ್ಶನ ಮಳಿಗೆಗಳಲ್ಲಿ ನಿಕಾನ್, ಕ್ಯಾನನ್, ಫ್ಯೂಜಿ, ಸೋನಿ ಇತ್ಯಾದಿ ಕಂಪನಿಗಳು ಇಟ್ಟಿದ್ದ ಫೋಟೊಗ್ರಫಿ ಸಾಧನಗಳು, ಲೆನ್ಸುಗಳು, ಕ್ಯಾಮರೆಗಳಿಗಿಂತ ಆ ಕಂಪನಿಗಳ ಮಾರಾಟದ ಹುಡುಗಿಯರೇ ಚೆನ್ನಾಗಿದ್ದಿದ್ದು ನಮಗೆಲ್ಲಾ ಕುತೂಹಲದ ವಿಚಾರವಾಗಿತ್ತು.


ರಾಜ್ಯಪಾಲರಿಂದ ಬಹುಮಾನ ವಿತರಣೆ ಕಾರ್ಯಕ್ರಮವಾದ ನಂತರ ನನ್ನ ಫೋಟೊಗ್ರಫಿ ಗೆಳೆಯರಾದ ಕೊಪ್ಪಳದ ಪ್ರಕಾಶ್ ಕಂದಕೂರ, ಮುಂಡರಗಿಯ ಸಲೀಂ ಬಾಳಬಟ್ಟಿ, ಬಾಗಲಕೋಟದ ಇಂದ್ರಕುಮಾರ್, ಗುಲ್ಬರ್ಗದ ಅನಿಲ್ ಬೆಡ್ಗಿ, ಬಳ್ಳಾರಿಯ ನಾಗರಾಜ್, ಕುಷ್ಟಗಿಯ ಶಂಕರ್ ಪತ್ತರ್, ಸಿರಸಿಯ ಉದಯ್ ಹೆಗ್ಡೆ, ಸುಗಾವಿಯ ವಿ ಡಿ ಭಟ್, ಮುತ್ಮರ್ಡುವಿನ ನಾಗೇಂದ್ರ, ಚಿಕ್ಕಮಗಳೂರಿನ ಮೂರ್ತಿ, ಶಿಡ್ಲಘಟ್ಟದ ಮಲ್ಲಿಕಾರ್ಜುನ್ ಇವರೆಲ್ಲಾ ನಮ್ಮ ಮನೆಗೆ ಬಂದಿದ್ದು ನನಗಂತೂ ತುಂಬಾ ಖುಷಿಯಾಗಿತ್ತು.



ಎಡದಿಂದ ಬಲಕ್ಕೆ: ಮುಂಡರಗಿಯ ಸಲೀಂ ಬಾಳಬಟ್ಟಿ, ಬಾಗಲಕೋಟದ ಇಂದ್ರಕುಮಾರ್, ಮುತ್ಮರ್ಡುವಿನ ನಾಗೇಂದ್ರ, ಬಳ್ಳಾರಿಯ ನಾಗರಾಜ್, ಚಿಕ್ಕಮಗಳೂರಿನ ಮೂರ್ತಿ, ಸುಗಾವಿಯ ವಿ ಡಿ ಭಟ್,  ಶಿಡ್ಲಘಟ್ಟದ ಮಲ್ಲಿಕಾರ್ಜುನ್,  ಬೆಟ್ಟಕೊಪ್ಪದ ಉದಯ್ ಹೆಗಡೆ, ಗುಲ್ಬರ್ಗದ ಅನಿಲ್ ಬೆಡ್ಗಿ, ನಾನು ಮತ್ತು ನನ್ನ ಶ್ರೀಮತಿ, ಕೊಪ್ಪಳದ ಪ್ರಕಾಶ್ ಕಂದಕೂರ, ಕುಷ್ಟಗಿಯ ಶಂಕರ್ ಪತ್ತರ್.

Photography friends come to my house for Lunch. There are come from diffrent district for all over Karnataka state.
from Gadag:Saleem.B., Bagalkot:Indrakumar.,  Uttar kannad: Nagendra mutmurdu, V.D.Bhat., Bellary: Nagaraj., Chickmagalur: Murty., Kolar:D.G.Mallikarjun., Bettakoppa:uday hegde., Gulbarga:Anil bedge, Me and my wife., Koppala: Prakash kandakora., Kustagi: Shankar pattar.,


ಮದ್ಯಾಹ್ನ ಎರಡು ಗಂಟೆಯಿಂದ ಸಂಜೆ ಆರುಗಂಟೆಯವರೆಗೆ ನಮ್ಮ ಮನೆಯಲ್ಲಿ ಊಟ, ಹರಟೆ, ನಗು, ತಮ್ಮ ಊರಿನ ಅನುಭವವನ್ನು ಹಂಚಿಕೊಂಡಿದ್ದು, ಊಟ ಮಾಡುವಾಗ ಅದಕ್ಕೂ ಫೋಟೊಗ್ರಫಿ ಭಾಷೆಯನ್ನು ಬಳಸಿಕೊಂಡಿದ್ದು, ಮತ್ತು ಅವರವರ ಭಾಷಾ ಸೊಗಡಿನಲ್ಲಿ ಮಾತಾಡುತ್ತಿದ್ದುದ್ದು, ನಡು ನಡುವೆ ಚಿಕ್ಕಮಗಳೂರಿನ ಮೂರ್ತಿ ನಗೆ ಚಟಾಕಿಗಳನ್ನು ಹಾರಿಸುತ್ತಿದ್ದದ್ದು.. ಒಟ್ಟಾರೆ ಕರ್ನಾಟಕದ ಎಲ್ಲಾ ದಿಕ್ಕುಗಳ ಫೋಟೊಗ್ರಫಿ ಪ್ರತಿನಿಧಿಗಳು ನಮ್ಮನೆಯಲ್ಲಿ ಸಂತೋಷಕೂಟದ ನೆಪದಲ್ಲಿ ಸೇರಿದ್ದು ನನಗಂತೂ ಮರೆಯಲಾಗದ ಆನುಭವ. ಇವೆಲ್ಲವನ್ನು ಮುಂದೆ ಎಂದಾದರೂ ಬರೆಯುತ್ತೇನೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ
Photos and Article by
Shivu.k ARPS.AFIAP.

Friday, July 2, 2010

ನಮ್ಮ ಸಂಪಾದಕರುಗಳಿಗೆ ಇದೆಲ್ಲಾ ಗೊತ್ತಿದೆಯೇ?


ನನ್ನ ಇಬ್ಬರೂ ವೃತ್ತಿ ಭಾಂದವ ಗೆಳೆಯರಾದ ಮೂರ್ತಿ ಮತ್ತು ಕೀರ್ತಿ ಕೈಯಲ್ಲಿ ಪೆನ್ನು ಪೇಪರ್, ಕ್ಯಾಲ್ಕುಲೇಟರ್ ಹಿಡಿದುಕೊಂಡು ಗಂಭೀರವಾಗಿ ಏನೋ ಲೆಕ್ಕಚಾರ ಮಾಡುತ್ತಿದ್ದರು. ನಾನು ಹೋಗಿ ಮಾತಾಡಿಸಿದೆ. ಅವರು ನನ್ನನ್ನು ನಿರೀಕ್ಷಿಸಿದ್ದರೇನೋ, ನೀನು ಬಂದರೆ ನಮಗೆ ಬೇಗ ಲೆಕ್ಕ ಗೊತ್ತಾಗುತ್ತೆ" ಅಂತ ಹೇಳಿ ನನ್ನನ್ನು ಸೇರಿಸಿಕೊಂಡರು.
ಅಂದು ಹೊಸ ಪೇಪರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು. ಯಾವುದೇ ಹೊಸ ದಿನಪತ್ರಿಕೆ ಬಿಡುಗಡೆಯಾದರೂ ಅದನ್ನು ಗ್ರಾಹಕರಿಗೆ ತಲುಪಿಸಬೇಕಾದವರು ನಾವೇ ಅಲ್ಲವೇ...ಅದಕ್ಕಾಗಿ ಆ ಪತ್ರಿಕೆಯ ಮಾರ್ಕೆಟಿಂಗ್ ವಿಭಾಗದ ಪ್ರತಿನಿಧಿಗಳು ಮೊದಲು ನಮ್ಮನ್ನು ಬೇಟಿಯಾಗಿ ಅವರ ಪತ್ರಿಕೆಯ ವಿವರವನ್ನೆಲ್ಲಾ ನೀಡಿ, ದೊಡ್ಡ ಸಮಾರಂಭ ಮಾಡಿ ಎಲ್ಲಾ ಏಜೆಂಟರನ್ನು ಅತಿಥಿಗಳಂತೆ ಕರೆಸಿ, ನಮ್ಮನ್ನು ಹೊಗಳಿ ಆಟ್ಟಕ್ಕೇರಿಸಿ, ಜೊತೆಗೆ ತಮ್ಮ ಹೊಸ ದಿನಪತ್ರಿಕೆಯನ್ನು ಹೊಗಳಿ, ಅಕಾಶಕ್ಕೇರಿಸಿ, ಈಗ ನಿಮ್ಮೆಲ್ಲರ ಸಹಕಾರಬೇಕು ಅಂತ ನಮ್ಮ ಹಿಂದೆ ಬಿದ್ದಿದ್ದರು. ಜೊತೆಗೆ ನಾವು 10, 50, 100 ಅಂತ ಇಂತಿಷ್ಟು ಪತ್ರಿಕೆಗಳನ್ನು ಮಾರಿದರೆ ಅಥವ ಅವುಗಳಿಗೆ ಗ್ರಾಹಕರನ್ನು ಹುಡುಕಿಕೊಟ್ಟರೇ ನಮಗೆ ಇಂತಿಷ್ಟು ಹಣ ಹೆಚ್ಚುವರಿ ಕೊಡುತ್ತೇವೆ ಎಂದು ಆಸೆ ತೋರಿಸಿದ್ದರು. ಈ ವಿಚಾರದ ಬಗ್ಗೆ ಮೂರ್ತಿ ಮತ್ತು ಕೀರ್ತಿ ತುಂಬಾ ತಲೆಕೆಡಿಸಿಕೊಂಡಿದ್ದರು. ಹೊಸಪತ್ರಿಕೆಯನ್ನು ತಮ್ಮ ತಮ್ಮ ಗ್ರಾಹಕರಿಗೆ ತೋರಿಸಿ, ಅವರಿಗೆಲ್ಲಾ ಈ ಹೊಸ ಪತ್ರಿಕೆಯನ್ನೇ ಕೊಳ್ಳುವಂತೆ ಮಾಡಲು, ಏನೇನು ಪ್ಲಾನ್ ಮಾಡಬೇಕು, ಎಷ್ಟು ಕಷ್ಟಪಟ್ಟರೆ ನಮಗೆ ಹೆಚ್ಚೆಚ್ಚು ಕಮೀಶನ್ ಸಿಗಬಹುದು, ಹೀಗೆ ಅವರ ಅಲೋಚನೆಗಳಿರಬಹುದು, ಪಾಪ ಒಂದು ಹೊಸ ಪತ್ರಿಕೆಯನ್ನು ಬೆಳೆಸಲು ಎಷ್ಟು ಕಷ್ಟಪಡುತ್ತಾರಪ್ಪಾ! ಅಂತ ನೀವು ಅವರ ಬಗ್ಗೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಅವರ ಅಲೋಚನೆ ಎಂಥದ್ದು ಅನ್ನುವುದು ನಿಮಗೆ ಮುಂದೆ ಗೊತ್ತಾಗುವುದರ ಜೊತೆಗೆ ಕೆಲವು ಅತಿಸೂಕ್ಷ್ಮ ವಿಚಾರಗಳು, ಸತ್ಯಸತ್ಯತೆಗಳು, ಕಷ್ಟನಷ್ಟಗಳು ನಿಮಗೇ ಗೊತ್ತಾಗಿಬಿಡುತ್ತವೆ.

"ಶಿವು, ಡೆಕ್ಕನ್ ಹೆರಾಲ್ಡ್ ಪೇಪರಿನಲ್ಲಿ ದಿನನಿತ್ಯ ಎಷ್ಟು ಪುಟಗಳಿರುತ್ತವೆ?" ನನ್ನೆಡೆಗೆ ಪ್ರಶ್ನೆಹಾಕಿದ ಮೂರ್ತಿ.

ನಿತ್ಯ ಎಲ್ಲಾ ಪತ್ರಿಕೆಗಳನ್ನು ಒಂದು ಸುತ್ತು ಸಣ್ಣಗೆ ಓದಿಬಿಡುವ ಅಭ್ಯಾಸವಿರುವುದರಿಂದ ನನಗೆ ಒಂದೊಂದು ಪತ್ರಿಕೆಯಲ್ಲೂ ಎಷ್ಟೆಷ್ಟೂ ಪುಟಗಳಿರುತ್ತವೆ ಅನ್ನೋದು ಚೆನ್ನಾಗಿ ಗೊತ್ತು ಅನ್ನೋದು ಅವನ ಭಾವನೆ. ಅದಕ್ಕೆ ನನ್ನೆಡೆಗೆ ಈ ಪ್ರಶ್ನೆ ಎಸೆದಿದ್ದ.
ನಾನು ಸ್ವಲ್ಪ ಯೋಚಿಸಿ, "ಮೇನ್ ಪೇಪರಿನಲ್ಲಿ ಇಪ್ಪತ್ತು ಮತ್ತು ಸಪ್ಲಿಮೆಂಟರಿನಲ್ಲಿ ನಾಲ್ಕು ಪುಟಗಳು" ಹೇಳಿದೆ.
ತಕ್ಷಣ ಆತ ಅದನ್ನು ಒಂದು ಕಡೆ ಬರೆದುಕೊಂಡ. ನಂತರ ಟೈಮ್ಸ್ ಆಪ್ ಇಂಡಿಯ, ಇಂಡಿಯನ್ ಎಕ್ಸ್‍ಪ್ರೆಸ್, ದಿ ಹಿಂದೂ, ಕನ್ನಡ ದಿನಪತ್ರಿಕೆಗಳು, ಹೀಗೆ ಎಲ್ಲ ಪತ್ರಿಕೆಗಳ ಪುಟಗಳೆಷ್ಟು ಇರುತ್ತವೆಂದು ನನ್ನಿಂದ ಕೇಳಿ ಒಂದು ಪೇಪರಿನಲ್ಲಿ ಬರೆದುಕೊಂಡು ಮತ್ತೆ ಗಂಭೀರವಾಗಿ ಲೆಕ್ಕ ಹಾಕತೊಡಗಿದರು.
"ಲೋ ಅದೇನ್ ಲೆಕ್ಕ ಹಾಕುತ್ತಿದ್ದೀರಿ ಅಂತ ಸ್ವಲ್ಪ ನನಗೂ ಹೇಳ್ರೋ, ನಾನು ತಿಳಿದುಕೊಳ್ಳುತ್ತೇನೆ" ಅವರನ್ನು ಮತ್ತೆ ಕೇಳಿದೆ.

ಲೆಕ್ಕಚಾರ ಮಾಡುತ್ತಿದ್ದ ಕೀರ್ತಿ ನನ್ನ ಮಾತಿಗೆ ಕತ್ತೆತ್ತಿ ನೋಡಿ, ಮತ್ತೆ ಹೋಟಲ್ಲಿನ ಮಾಣಿಯ ಕಡೆಗೆ ತಿರುಗಿ "ಎರಡರಲ್ಲಿ ಮೂರು ಕಾಫಿ ಕೊಡಿ" ಅಂತ ಅರ್ಡರ್ ಮಾಡಿ, ಮತ್ತೆ ತನ್ನ ಲೆಕ್ಕದಲ್ಲಿ ಮುಳುಗಿಬಿಟ್ಟ. ಬಹುಶಃ ನಿನಗಿದೆಲ್ಲಾ ಗೊತ್ತಾಗೊಲ್ಲ, ನಾವು ಹೇಳೋವರೆಗೆ ಸ್ವಲ್ಪ ತಡಕೋ, ಅಲ್ಲಿಯವರೆಗೆ ಕಾಫಿ ಕುಡಿಯುತ್ತಿರು" ಅಂತ ನನಗೆ ಪರೋಕ್ಷವಾಗಿ ಹೇಳಿದಂತಾಗಿತ್ತು. ಕಾಫಿ ಬಂತು ನಾನು ಕುಡಿಯುತ್ತಿದ್ದೆ. ಸ್ವಲ್ಪ ಹೊತ್ತಿನ ನಂತರ ಅವರಿಬ್ಬರಲ್ಲಿ ಸಣ್ಣ ಮಾತುಕತೆ ಶುರುವಾಗಿತ್ತು.

"ಒಂದು ಕೆಜಿ ರದ್ದಿ ಪೇಪರಿಗೆ ಎಷ್ಟು ರೂಪಾಯಿ ಕೊಡುತ್ತಾನೆ?" ಕೀರ್ತಿ ಪ್ರಶ್ನೆ.

"ಇಂಗ್ಲೀಷ್ ಪೇಪರಿಗೆ ಏಳುವರೆ ರೂಪಾಯಿ, ಕನ್ನಡಕ್ಕೆ ಆರು ರೂಪಾಯಿ". ಮೂರ್ತಿ ಉತ್ತರ.


"ನಿನ್ನೆ ನಾನು ಒಂದು ತಿಂಗಳ 30 ಡೆಕ್ಕನ್ ಹೆರಾಲ್ಡ್ ಪೇಪರನ್ನು ರದ್ದಿಗೆ ಹಾಕಿದೆ. ಒಂದು ಕೇಜಿಗೆ ಏಳುವರೆಯಂತೆ ಎರಡು ಕಾಲು ಕೇಜಿ ಬಂದಿದ್ದಕ್ಕೆ ರದ್ದಿಯವನು 16 ರೂಪಾಯಿ ಕೊಟ್ಟ." ಸ್ವಲ್ಪ ಯೋಚಿಸಿ, "ನೋಡು..ಈಗ ಹೇಳುವುದನ್ನು ಗಮನವಿಟ್ಟು ಕೇಳಿ ಬರೆದುಕೋ. 24 ಪುಟಗಳಿರುವ 14 ದಿನದ ಡೆಕ್ಕನ್ ಹೆರಾಲ್ಡಿಗೆ ಒಂದು ಕೇಜಿ ತೂಕ ಬರುತ್ತದೆ. ಅಂದರೆ ಏಳು ವರೆ ರೂಪಾಯಿ ಸಿಗುತ್ತದೆ, ಅದೇ ರೀತಿ ಈಗ ಹೊಸ ಪತ್ರಿಕೆಯೊಂದು ಬರುತ್ತಿದೆಯಲ್ಲಾ. ಅದು ಒಂದು ದಿನಕ್ಕೆ 48 ಪುಟವಿರುತ್ತದಂತೆ. ಈ ಪತ್ರಿಕೆಯ ಕೇವಲ ಏಳು ಪೇಪರುಗಳನ್ನು ಒಟ್ಟುಮಾಡಿ ತೂಕಕ್ಕೆ ಹಾಕಿದರೆ ಒಂದು ಕೇಜಿ ಖಂಡಿತ ಬರುತ್ತದೆ. ಒಂದು ಕೇಜಿಗೆ ಏಳುವರೆರೂಪಾಯಿ ಸಿಕ್ಕಂತೆ ಆಯಿತಲ್ಲವೇ?" ಹಾಗೆ ಇಲ್ಲಿ ನೋಡು, ಒಂದು ದಿನಕ್ಕೆ ಈ ದಿನಪತ್ರಿಕೆ ನೂರು ತೆಗೆದುಕೊಂಡರೆ........ಹದಿನಾಲ್ಕು ಕೇಜಿ ಖಂಡಿತ ಸಿಗುತ್ತದೆ. ಒಟ್ಟು ಮಾಡಿ ತೂಕಕ್ಕೆ ಹಾಕಿದರೆ ಪ್ರತಿದಿನ 105 ರೂಪಾಯಿ ಖಂಡಿತ ಸಿಗುತ್ತೆ. ಒಂದು ತಿಂಗಳಿಗೆ, 3150 ರೂಪಾಯಿ ಬರುತ್ತದೆ. ಇದಲ್ಲದೆ ನಾವು ದಿನಕ್ಕೊಂದರಂತೆ ಒಂದು ತಿಂಗಳು ಗ್ರಾಹಕರಿಗೆ ಮಾರಿದರೆ ನಮಗೆ ಬೋನಸ್ ರೂಪದಲ್ಲಿ 20 ರೂಪಾಯಿಗಳನ್ನು ಕೊಡುತ್ತಾರೆ ದಿನಕ್ಕೆ ಹತ್ತು ಮಾರಿದರೆ ತಿಂಗಳಿಗೆ 200 ರೂಪಾಯಿಗಳು, ದಿನಕ್ಕೆ ನೂರು ಮಾರಿದರೆ ತಿಂಗಳಿಗೆ 2000 ರೂಪಾಯಿ ಕೊಡುತ್ತಾರೆ.


"ಈ 2000 ಮತ್ತುತೂಕದ ಹಣ 3150 ಒಟ್ಟು ಮಾಡಿದಾಗ ತಿಂಗಳಿಗೆ 5150 ರೂಪಾಯಿಗಳು ನಮಗೆ ಸಿಗುತ್ತದೆ."
ಕೀರ್ತಿ ಲೆಕ್ಕಚಾರ ಹಾಕುತ್ತಾ ಹೇಳಿದ.


"ಇದೆಲ್ಲಾ ಸರಿ, ಆ ದಿನಪತ್ರಿಕೆಯ ಮುಖಬೆಲೆ ಎಷ್ಟು?. ಅದರಲ್ಲಿ ನಮ್ಮ ಕಮಿಶನ್ ಎಷ್ಟು" ಕುತೂಹಲ ತಡೆಯಲಾಗದೆ ನಾನು ಕೇಳಿದೆ..

ಆ ದಿನ ಪತ್ರಿಕೆ ಬೆಲೆ 2-00 ರೂಪಾಯಿಗಳು. ನಮಗೆ 1-40 ಪೈಸೆಗೆ ಕೊಡುತ್ತಾರೆ. ಒಂದು ಪತ್ರಿಕೆಯನ್ನು ನಾವು ಎರಡು ರೂಪಾಯಿಗೆ ನಮ್ಮ ಗ್ರಾಹಕರ ಮನೆಗೆ ಹಾಕಿದರೆ ಅಥವ ಮಾರಿದರೆ ನಮ್ಮ ಕಮೀಶನ್ ಒಂದು ಪೇಪರಿಗೆ ಅರವತ್ತು ಪೈಸೆ ಸಿಗುತ್ತದೆ." ಕೀರ್ತಿ ನನ್ನ ಪ್ರಶ್ನೆಗೆ ಉತ್ತರಿಸಿದ.

"ಒಂದು ಪೇಪರಿಗೆ 1-40 ರಂತೆ ನೂರು ಪತ್ರಿಕೆಗೆ 140ರೂಪಾಯಿಗಳು. ಒಂದು ದಿನಕ್ಕೆ ಬೇಕಾದರೆ ಒಂದು ತಿಂಗಳಿಗೆ 4200 ರೂಪಾಯಿಗಳ ಬಂಡವಾಳ ಹೊಂದಿಸಬೇಕಲ್ವಾ?" ಮರುಪ್ರಶ್ನೆ ಹಾಕಿದೆ.

"ಖಂಡಿತ ಹೊಂದಿಸಬೇಕು. ತಿಂಗಳಾದ ಮೇಲೆ ನಿನಗೆ ಕುಳಿತ ಜಾಗದಲ್ಲೇ ಲಾಭ ಸಿಗುತ್ತದಲ್ಲ...

ಹೇಗೆ?

"ನೋಡು ನಾನು ಹೇಳುವುದನ್ನು ಪೇಪರಿನಲ್ಲಿ ಬರೆದುಕೋ, ಮೊದಲು ನಿನ್ನ ಬಂಡವಾಳ ಒಂದು ತಿಂಗಳಿಗೆ 1400
ಅಲ್ಲವೇ"


"ಹೌದು"!

"ಅವರು ಕೊಡುವ ಬೋನಸ್ 2000ರೂಪಾಯಿಗಳ ಜೊತೆಗೆ ಒಂದು ತಿಂಗಳ ಪೇಪರನ್ನು ತೂಕಕ್ಕೆ ಹಾಕಿದಾಗ ಬರುವ 3150 ರೂಪಾಯಿಗಳನ್ನು ಒಟ್ಟು ಮಾಡಿದರೆ 5150 ರೂಪಾಯಿಗಳಾಗುತ್ತದಲ್ವಾ?"


"ಹೌದು" ನಾನು ಬರೆದುಕೊಳ್ಳುತ್ತಿದ್ದೆ.

"ಈಗ 5150 ರೂಪಾಯಿಗಳಲ್ಲಿ ನಿನ್ನ ಬಂಡಾವಾಳ 4200 ರೂಪಾಯಿಗಳನ್ನು ಕಳೆದರೆ ೯೫೦ ರೂಪಾಯಿಗಳು ಲಾಭವಲ್ಲವೇ!"


"ಅರೆರೆ! ಹೌದಲ್ವಾ ಯಾವುದೇ ಗಿರಾಕಿಗೆ ಮಾರುವ ರಿಸ್ಕ್ ಇಲ್ಲ, ಗ್ರಾಹಕರ ಮನೆಗೆ ಹೋಗಿ ಇದು ಹೊಸ ಪೇಪರ್ ಚೆನ್ನಾಗಿದೆ, ಓದಿನೋಡಿ, ಅಂತ ಗೋಗರಿಯುವ ಅವಶ್ಯಕತೆಯಿಲ್ಲ. ಸುಮ್ಮನೆ ಹಣಕೊಟ್ಟು ಬಂಡಲ್ ಬಿಚ್ಚದೆ ತೂಕಕ್ಕೆ ಹಾಕಿದರೂ ಲಾಭ ಸಿಗುತ್ತದಲ್ಲಾ! ಯಾಕೆ ಮಾಡಬಾರದು ಅನ್ನಿಸಿತು ನನಗೆ. ಇದು ಆರು ತಿಂಗಳ ಸ್ಕೀಮು, ಒಬ್ಬರು ನಿತ್ಯ ನೂರು ಪೇಪರ್ ತೆಗೆದುಕೊಂಡರೂ ಸಾಕು. ನಾವು ಏನು ರಿಸ್ಕ್ ತೆಗೆದುಕೊಳ್ಳದೇ ಆರು ತಿಂಗಳಿಗೆ 5700 ರೂಪಾಯಿಗಳನ್ನು ಸಂಪಾದಿಸಬಹುದಲ್ವಾ! ಮೂರ್ತಿ ಮತ್ತು ಕೀರ್ತಿ ಇಬ್ಬರ ಮುಖಗಳು ತಾವರೆಯಂತೆ ಹರಳಿದವು.


"ಅಲ್ವೋ ಇದು ಮೋಸ ಅಲ್ವೇನೋ, ನಾವು ಈ ದಿನಪತ್ರಿಕೆಯನ್ನು ಗ್ರಾಹಕರಿಗೆ ಮಾರಿದರೆ ಕಮೀಶನ್ ಅಂತ ಅರವತ್ತು ಪೈಸೆ ಕೊಟ್ಟೇ ಕೊಡುತ್ತಾರೆ, ಜೊತೆಗೆ ನಾವು ಹೆಚ್ಚೆಚ್ಚು ಮಾರಲಿ ಅಂತ ಬೋನಸ್ ಕೂಡ ಕೊಡುತ್ತಿದ್ದಾರೆ. ಆ ಕೆಲಸ ಮಾಡೋದು ಬಿಟ್ಟು ಇದೇನೋ ಇದು ಮೋಸದ ಲೆಕ್ಕಚಾರ, ಅವರು ಪ್ರಿಂಟ್ ಮಾಡಿದ ಸಾವಿರಾರು ದಿನಪತ್ರಿಕೆಗಳು ಗ್ರಾಹಕರಿಗೆ ತಲುಪದೆ ನೇರ ತೂಕಕ್ಕೆ ಹಾಕಿವುದು ಸರಿಯಲ್ಲ. ನಮಗೂ ಒಂದು ವೃತ್ತಿಧರ್ಮ ಅಂತ ಇದೆಯಲ್ಲವೇ?" ನಾನು ಬೇಸರದಿಂದ ಪ್ರಶ್ನಿಸಿದೆ.

"ಲೋ ಶಿವು, ನೀವು ಸುಮ್ಮನಿರು, ಯಾವುದು ವೃತ್ತಿಧರ್ಮ, ಪತ್ರಿಕೆಯ ಮಾಲಿಕರಿಗೆ, ಅದರ ಸಂಪಾದಕರಿಗೆ, ವರದಿಗಾರರಿಗೆ ಇಲ್ಲದ ವೃತ್ತಿ ಧರ್ಮ ನಮಗ್ಯಾಕೆ ಬೇಕು ಹೇಳು?" ಕೀರ್ತಿ ಕೋಪದಿಂದ ಹೇಳಿದಾಗ ನನಗೆ ಅರ್ಥವಾಗಲಿಲ್ಲ

"ಅವರೆಲ್ಲಾ ತಮ್ಮ ವೃತ್ತಿಧರ್ಮವನ್ನು ಬಿಟ್ಟಿದ್ದಾರೆ ಅಂತ ಹೇಳುತ್ತೀಯಾ? ಅದಕ್ಕೆ ನಿನ್ನಲ್ಲಿ ಏನಾಧರೂ ಆಧಾರವಿದೆಯಾ?" ನಾನು ಮರುಪ್ರಶ್ನಿಸಿದೆ.

"ಅಧಾರ ಬೇಕಾ, ನೋಡು ಗಮನವಿಟ್ಟು ಕೇಳು, ಒಂದು ಕನ್ನಡ ಅಥವ ಆಂಗ್ಲ ದಿನಪತ್ರಿಕೆಯಲ್ಲಿ ಸುದ್ಧಿಗಾಗಿ, ಲೇಖನಕ್ಕಾಗಿ, ಚಿತ್ರಗಳಿಗಾಗಿ, ಹತ್ತರಿಂದ ಹದಿನೈದು ಪುಟಗಳು ಸಾಕು. ಅವರು ಬದುಕಬೇಕಾಲ್ವ ಅದಕ್ಕಾಗಿ ಸಣ್ಣ ಮಟ್ಟಿನ ಜಾಹಿರಾತಿಗಾಗಿ ಮತ್ತೆ ನಾಲ್ಕಾರು ಪುಟಗಳು ಸೇರಿ ಇಪ್ಪತ್ತು ಪುಟಗಳಷ್ಟು ಮುದ್ರಿಸಿದರೆ ಸಾಕು. ಮತ್ತೆ ನಮ್ಮ ಗ್ರಾಹಕರಿಗೂ ಇಂದಿನ ಫಾಸ್ಟ್ ಲೈಫಿನಲ್ಲಿ ಇದಕ್ಕಿಂತ ಹೆಚ್ಚು ಓದಲಿಕ್ಕೆ ಎಲ್ಲಿದೆ ಸಮಯ ಹೇಳು? ಆದ್ರೆ ಈಗ ಏನಾಗುತ್ತಿದೆ ನೋಡು, ಯಾವುದೇ ಆಂಗ್ಲ ದಿನಪತ್ರಿಕೆಯೂ ನಲವತ್ತು ಪುಟಕ್ಕೆ ಕಡಿಮೆಯಿರುವುದಿಲ್ಲ. ಕೆಲವೊಂದು ದಿನ 60-70 ಪುಟಗಳು ಇರುತ್ತದೆ. ಅಷ್ಟೂ ಪುಟಗಳಲ್ಲೂ ಓದುವಂತದ್ದೂ 10 ಪುಟಗಳಿದ್ದರೇ ಹೆಚ್ಚೆಚ್ಚು. ಉಳಿದದ್ದು ಪೂರ್ತಿ ಜಾಹಿರಾತು. ಜಾಹೀರಾತಿನಿಂದಲೇ ಪತ್ರಿಕೆ ಮಾಲೀಕರಿಗೆ ಕೋಟ್ಯಂತರ ರೂಪಾಯಿ ಲಾಭವಿರುತ್ತದೆ. ನಮ್ಮ ಪತ್ರಿಕೆ ಐದು ಲಕ್ಷ, ಆರು ಲಕ್ಷ, ಹತ್ತು ಲಕ್ಷ ನಿತ್ಯ ಮುದ್ರಣವಾಗಿ ಗ್ರಾಹಕರಿಗೆ ತಲುಪುತ್ತಿದೆಯಂದು ಹೊಗಳಿಕೊಂಡು ತಮ್ಮ ಆಹಂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬೆಂಗಳೂರೊಂದರಲ್ಲೇ ಒಂದು ದಿನಕ್ಕೆ ಎಲ್ಲಾ ಭಾಷೆಯ ಇಪ್ಪತ್ತು ಲಕ್ಷಕ್ಕೂ ಹೆಚ್ಚು ದಿನಪತ್ರಿಕೆ ಪ್ರತಿಗಳು ಮುದ್ರಣವಾಗುತ್ತವೆ. ಒಂದು ಪತ್ರಿಕೆಯಲ್ಲಿ ಕಡಿಮೆಯೆಂದರೂ 40ಪುಟಗಳಿರುತ್ತವೆ. ಪುಟಗಳಲ್ಲಿ ಲೆಕ್ಕ ಮಾಡಿದರೆ ದಿನಕ್ಕೆ ಎಂಟು ಕೋಟಿ ಪುಟಗಳು ಮುದ್ರಣವಾಗುತ್ತವೆ. ಇದರಲ್ಲಿ ಓದುವಂತದ್ದು ಇಪ್ಪತ್ತು ಭಾಗಮಾತ್ರ. ಉಳಿದದ್ದು ಜಾಹಿರಾತು. ಒಂದು ಸೆಕೆಂಡು ಕಣ್ಣಾಡಿಸಿ ಬಿಸಾಡುವ ಜಾಹಿರಾತಿಗಾಗಿ ಆರುಕೋಟಿ ಪುಟಗಳು ನಿತ್ಯ ಪ್ರಿಂಟ್ ಆಗುತ್ತಿವೆ.ನೀನೇ ಯೋಚಿಸು ಇದಕ್ಕಾಗಿ ಎಷ್ಟು ಮರಗಳ ಮಾರಣಹೋಮವಾಗಿರಬಹುದು. ಇದು ಒಂದು ದಿನದ ಕತೆಯಾದರೆ ಒಂದು ತಿಂಗಳಿಗೆ ಎಷ್ಟು, ಒಂದು ವರ್ಷಕ್ಕೆ ಎಷ್ಟು, ಮತ್ತೆ ಬೆಂಗಳೂರು ದಾಟಿ ಇತರೆ ನಗರಗಳಲ್ಲಿ ಮುದ್ರಣವಾಗುವ ಪೇಪರುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಎಷ್ಟು ಮರಗಳು ಉರುಳಬಹುದು? "


"ಮಾಲೀಕರ ವ್ಯಾಪರಿ ಬುದ್ದಿಗೆ ಇದೆಲ್ಲಾ ತಲೆಗೆ ಹತ್ತದಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿ ಕೂತ ಸಂಪಾದಕರಿಗೆ ಇದರ ಪರಿಜ್ಞಾನವಿದೆಯೇ? ತಾವು ಆಕಾಶದಿಂದಲೇ ಉದುರಿದವರಂತೆ ನಮ್ಮಂಥ ಜನಸಾಮಾನ್ಯರೆದುರು ವರ್ತಿಸುವ ವರದಿಗಾರರಿಗೆ ಇದರ ಅರಿವಿದೆಯಾ? ಮಾಡೋದು ಅನಾಚಾರ, ಮನೆಮುಂದೆ ಬೃಂದಾವನ" ಎನ್ನುವಂತೆ ಯಾವುದೇ ಭಾಷೆಯ ಪತ್ರಿಕೆಯನ್ನು ತೆರೆದುನೋಡಿದರೂ ಕಾಡನ್ನು ಉಳಿಸಬೇಕು ಬೆಳಸಬೇಕು ಅಂತ ಅಂಕಿಅಂಶದ ಸಮೇತ ನೂರಾರು ಸಾವಿರಾರು ತರಾವರಿ ಬೈಲೈನುಗಳುಳ್ಳ ಲೇಖನಗಳು."

"ಇಷ್ಟೆಲ್ಲಾ ಮುದ್ರಿಸುವ ಇವರು ಇದನ್ನು ಹಂಚುವ ನಮ್ಮ ಬಗ್ಗೆ, ನಮ್ಮ ಹುಡುಗರ ಬಗ್ಗೆ ಏನಾದರೂ ಯೋಚಿಸುತ್ತಾರಾ? ನಮ್ಮ ಹುಡುಗರೆಲ್ಲಾ ಹೆಚ್ಚೆಂದರೆ ಹೈಸ್ಕೂಲು ಕಾಲೇಜು ಓದುತ್ತಿರುವ ಬಡ ಮಕ್ಕಳು. ಅವರ ಸೈಕಲ್ಲುಗಳಲ್ಲಿನ ಕ್ಯಾರಿಯರುಗಳಲ್ಲಿ 24 ಪುಟಗಳ ನೂರು ಪೇಪರುಗಳನ್ನು ಜೋಡಿಸಿಇಟ್ಟು ಕಳಿಸಬಹುದು. ಏಕದಂ ನಲವತ್ತೆಂಟು, 60 ಪುಟಗಳ ನೂರು ಪೇಪರುಗಳನ್ನು ಇಟ್ಟು ಕಳಿಸಲು ಸಾಧ್ಯವೇ? ಕಷ್ಟಪಟ್ಟು ಇಟ್ಟು ಕಳಿಸಿದರೂ ಅದು ಬೀಳುವುದಿಲ್ಲವೆಂದು ಏನು ಗ್ಯಾರಂಟಿ, ಈಗ ಮಳೆಗಾಲ ಬೇರೆ. ಹುಡುಗರು ಜಾರಿ ಬಿದ್ದರೆ ಎಲ್ಲಾ ಪೇಪರುಗಳು ರಸ್ತೆಯ ನೀರು ಪಾಲು. ಅದನ್ನೇ ಸರಿಮಾಡಿಕೊಂಡು ಹೋಗಿ ಹಾಕಿಬಂದರೆ ನಿಮ್ಮ ಹುಡುಗ ಪೇಪರನ್ನು ನೀರಲ್ಲಿ ಎಸೆದು ಹೋಗಿದ್ದಾನೆ ಅಂತ ಗ್ರಾಹಕರಿಂದ ಫೋನು. ದಿನವೂ ಇಷ್ಟು ದಪ್ಪನಾದ ಪೇಪರುಗಳನ್ನು ಸೈಕಲ್ಲಿನ ಕ್ಯಾರಿಯರಿನಲ್ಲಿ ಕಷ್ಟಪಟ್ಟು ತುಂಬಿ ಕಳಿಸಿದರೆ ಸರಿಯಾಗಿ ಬರುವ ಹುಡುಗರು ತಪ್ಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ. "ಕೇಳಿದರೆ ಹೋಗಣ್ಣ, ಇಷ್ಟೊಂದು ಪೇಪರುಗಳನ್ನು ಕ್ಯಾರಿಯರಿನಲ್ಲಿ ಇಟ್ಟರೆ ಸೈಕಲ್ ತುಳಿಯಲು ಆಗೊಲ್ಲ, ದಿಣ್ಣೆಗಳಂತೂ ತಳ್ಳಿಕೊಂಡೇ ಹೋಗಬೇಕು. ನಿಮ್ಮ ಬೀಟ್ ಮುಗಿಸುವ ಹೊತ್ತಿಗೆ ಸುಸ್ತಾಗಿಬಿಟ್ಟಿರುತ್ತೀನಿ, ನೀವು ಕೊಡುವ ಇಷ್ಟು ಕಡಿಮೆ ಸಂಬಳಕ್ಕೆ ಇಷ್ಟೆಲ್ಲಾ ಕಷ್ಟಪಡಬೇಕಾ ಅಂತ ನಮ್ಮ ಮನೆಯಲ್ಲಿ ಬೈಯ್ಯುತ್ತಾರೆ, ಪೇಪರ್ ಕೆಲಸಕ್ಕೆ ಹೋಗೋದು ಬೇಡ ಅಂತಾರೆ,.....ಹೀಗೆ ಅನೇಕ ಕಾರಣಗಳನ್ನು ಕೊಟ್ಟು ಪೇಪರ್ ಹಾಕುವ ಕೆಲಸ ಬಿಟ್ಟುಬಿಡುತ್ತಾರೆ. ಅವರಿಲ್ಲದ ಮೇಲೆ ನಾವು ಎಷ್ಟು ಬೀಟುಗಳಿಗೆ ಅಂತ ಹೋಗಲಿಕ್ಕಾಗುತ್ತದೆ. ಇದೆಲ್ಲಾ ಆಗುವುದು ಈ ರೀತಿ ಪುಟಗಳು ಜಾಸ್ತಿ ಬರುವುದರಿಂದ ತಾನೆ! ಇದೆಲ್ಲ ವಿಚಾರ ಏಸಿ ಚೇಂಬರಿನಲ್ಲಿ ಕುಳಿತ ಮಾಲೀಕರು, ಸಂಪಾದಕರಿಗೆ ಎಲ್ಲಿ ಗೊತ್ತಾಗುತ್ತದೆ. ಈಗ ಹೇಳು ಅವರಲ್ಲಿ ಯಾರಲ್ಲಿಯಾದರೂ ವೃತ್ತಿಧರ್ಮವೆನ್ನುವುದು ಇದೆಯಾ? ಅವರು ಹೀಗೆ ಧಾರಾಳವಾಗಿ ಮುದ್ರಿಸಿಕಳಿಸುವುದನ್ನು ಮುಂಜಾನೆ ನಾಲ್ಕು ಗಂಟೆಗೆ ದುಡಿಯಲು ಬರುವ ನಾವು ಹೀಗೆ ಧಾರಾಳವಾಗಿ ಮುದ್ರಿಸಿದ್ದನ್ನು ತೂಕಕ್ಕೆ ಹಾಕಿ ಲಾಭ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ.?"

ಅವನು ಮಾತು ನಿಲ್ಲಿಸಿದರೂ ಅವನ ಕಣ್ಣುಗಳಲ್ಲಿ ಕೋಪವಿತ್ತು.



"ಇಷ್ಟೆಲ್ಲಾ ವಿಚಾರಗಳು ನಮಗೇ ಗೊತ್ತೇ ಇರಲ್ಲಿಲ್ಲವಲ್ಲೋ, ನೀನು ಹೇಳಿದ್ದು ಸರಿ. ನಾನು ನಾಳೆಯಿಂದಲೇ ಆ ಇನ್ನೂರು ದಿನಪತ್ರಿಕೆಯನ್ನು ಬುಕ್ ಮಾಡುತ್ತೇನೆ".ಅಂದ ಮೂರ್ತಿ. ಇದೇ ಲೆಕ್ಕಾಚಾರದಲ್ಲಿ ನನ್ನ ಅನೇಕ ವೃತ್ತಿಭಾಂದವರು ಈ ರೀತಿ ಸ್ಕೀಮಿನಲ್ಲಿ ನೂರು ಇನ್ನೂರು ಮುನ್ನೂರು ಪತ್ರಿಕೆಗಳನ್ನು ಪ್ರತಿದಿನ ಬುಕ್ ಮಾಡಿರುವುದು ತಿಳಿಯಿತು. ನಮ್ಮ ಪತ್ರಿಕಾ ಜಗತ್ತು ಯಾವಮಟ್ಟದಲ್ಲಿದೆ ಎಂದು ತಿಳಿದು ನನಗಂತೂ ಬೇಸರವಾಗಿತ್ತು.

ಹದಿನೈದು ವರ್ಷಗಳ ಹಿಂದೆ, 12 ಪುಟಗಳ ಕನ್ನಡ ದಿನಪತ್ರಿಕೆಗಳು, ಮತ್ತು 16 ಪುಟಗಳ ಆಂಗ್ಲ ದಿನಪತ್ರಿಕೆಗಳನ್ನು ನನ್ನ ಸೈಕಲ್ಲಿನ ಕ್ಯಾರಿಯರಿನಲ್ಲಿ ಕಟ್ಟಿಕೊಂಡು ಒಂದು ಗಂಟೆಯಲ್ಲಿ ಎಲ್ಲ ಮನೆಗಳಿಗೂ ತಲುಪಿಸಿ ಮನೆಗೆ ಓಡುತ್ತಿದ್ದ ನಮಗಾಗಲಿ, ನಮ್ಮ ಆಗಿನ ಪೇಪರ್ ಓನರ್[ಏಜೆಂಟುಗಳು]ಗಳಿಗಾಗಲಿ, ಅಥವ ಆಗಿನ ಗ್ರಾಹಕರಿಗಾಗಲಿ ಈ ರದ್ದಿ ಪೇಪರ್ ತೂಕಕ್ಕೆ ಹಾಕುವ ವಿಚಾರದ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಗ್ರಾಹಕರಂತೂ ತಮ್ಮ ಮನೆಯ ರದ್ದಿಪೇಪರುಗಳನ್ನು ಆರು ತಿಂಗಳಿಗೆ ಒಂದು ವರ್ಷಕ್ಕೋ ತೂಕಕ್ಕೆ ಹಾಕುತ್ತಿದ್ದರು. ಆಷ್ಟು ಪೇಪರುಗಳನ್ನು ಹಾಕಿದರೂ ಸಿಗುತ್ತಿದ್ದುದ್ದು ಪುಡಿಗಾಸಾಗಿದ್ದರಿಂದ ಯಾರಿಗೂ ಇದರ ಬಗ್ಗೆ ಅಲೋಚನೆಯೇ ಇರಲಿಲ್ಲ. ಆಗಿನ ದಿನಗಳಿಗೂ ಈಗಿನ ದಿನಕ್ಕೂ ಆಗಿರುವ ಬದಲಾವಣೆಯನ್ನು ಕಂಡು ಮನಸ್ಸಿಗೆ ಬೇಸರವೂ ಉಂಟಾಗಿತ್ತು.

ಈಗ ನೀವೇ ಹೇಳಿ. ಇದಕ್ಕೆಲ್ಲಾ ಕಾರಣಕರ್ತರೂ ಯಾರು? ಪ್ರಪಂಚದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳ ಮಾನ ಹರಾಜು ಹಾಕುವ ಪತ್ರಿಕೆಯವರು ಯಾವಮಟ್ಟದಲ್ಲಿದ್ದಾರೆಂದು. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ನನ್ನ "ವೆಂಡರ್ ಕಣ್ಣು" ಪುಸ್ತಕದ ಒಂದು ಲೇಖನವಾಗಬೇಕಾಗಿದ್ದ ಇದನ್ನು ನಾನೇ ಆ ಸಮಯದಲ್ಲಿ ಏಕೋ ಬೇಡವೆನಿಸಿ ಪುಸ್ತಕಕ್ಕೆ ಸೇರಿಸಿರಲಿಲ್ಲ. ಮೂರು ವರ್ಷಗಳ ಹಿಂದೆ ಈ ಪುಟಗಳ ಹಾವಳಿ ಇಷ್ಟಿರಲಿಲ್ಲ. ನಿತ್ಯ 40-50 ಪುಟಗಳನ್ನು ಜಾಹಿರಾತಿಗಾಗಿಯೇ ಮುದ್ರಿಸುವ ಟೈಮ್ಸ್ ಆಫ್ ಇಂಡಿಯ ಆಂಗ್ಲ ಪತ್ರಿಕೆ, ಇವತ್ತಿನಿಂದ ಅದರ ಜೊತೆಗೆ 40-48 ಪುಟಗಳಿರುವ ಬೆಂಗಳೂರು ಮಿರರ್ ಎನ್ನುವ ಮತ್ತೊಂದು ಪತ್ರಿಕೆಯನ್ನು ಉಚಿತವಾಗಿ ಟೈಮ್ಸ್ ಜೊತೆಗೆ ಕೊಡಲು ಶುರುಮಾಡಿದೆ. ಬರೋಬರಿ ನೂರುಪುಟಗಳ ಪೇಪರನ್ನು 3-00 ರೂಪಾಯಿಗಳಿಗೆ ಗ್ರಾಹಕರಿಗೆ ಕೊಡಲು ಪ್ರಾರಂಭಿಸಿದೆ. "ಇಷ್ಟು ಪುಟಗಳ ದಿನಪತ್ರಿಕೆಯನ್ನು ನಾವು ಹೇಗೆ ಮನೆಗಳಿಗೆ ಸಪ್ಲೆ ಮಾಡಲು ಸಾಧ್ಯ? ಎನ್ನುವ ಆಕ್ರೋಶ ಎಲ್ಲಾ ದಿನಪತ್ರಿಕೆ ವೆಂಡರುಗಳಲ್ಲಿ ತುಂಬಿಕೊಂಡಿದೆ. ಈ ಕಾರಣದಿಂದಾಗಿ ಈ ಲೇಖನವನ್ನು ನಾನು ಬ್ಲಾಗಿನಲ್ಲಿ ಹಾಕಿದ್ದೇನೆ.

ಲೇಖನ
ಶಿವು.ಕೆ