Sunday, June 17, 2018

ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!

       

       ನಮ್ಮಪ್ಪನ್ನ  ಕರ್ಕೊಂಡು ಬರ್ತೀನಿ ತಾಳು.!

       "ನಮ್ಮಪ್ಪನ್ನ  ಕರ್ಕೊಂಡು ಬರ್ತೀನಿ ತಾಳು, ನಿನಗೆ ಮಾಡಿಸ್ತೀನಿ"   ಮಣೆಯಂತ ಉದ್ದ ಹಲಗೆಯ ಮೇಲೆ ನನಗಿಂತ ದಪ್ಪನಾಗಿ ನನ್ನ  ಪಕ್ಕ ಕುಳಿತಿದ್ದ ಹರೀಶ ನನ್ನ  ಸೀಮೆಸುಣ್ಣವನ್ನು ಕಿತ್ತುಕೊಂಡಾಗ ನಾನು  ಹೀಗೆ  ಅಂದಿದ್ದೆ. ನನಗೆ ನೆನಪಿರುವಂತೆ ಆಗ  ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದೆ.  ನಮಗಾಗ ಕ್ಲಾಸ್ ಅನ್ನುವುದು ಬರದೇ ಒಂದು ಗ್ಲಾಸ್, ಎರಡು ಗ್ಲಾಸ್ ಅನ್ನುತ್ತಿದ್ದೆವು.  ಪ್ರತಿಯೊಂದಕ್ಕೂ  ಆಗ ಅಪ್ಪ ಬೇಕಾಗಿತ್ತು. 

        ಪಕ್ಕದ ಮನೆಯ  ಆನಂದನಿಗೆ ಅವನಪ್ಪ  ಮಿಣಮಿಣ ಮಿನುಗಿ, ಸೊಯ್ ಸೊಯ್.....ಅಂತ  ಓಡುವ  ಆಟದ ಕಾರನ್ನು ತಂದಾಗ ನಾನು ನನ್ನಪ್ಪನಿಗೆ  ಅಂತದ್ದೇ  ನನಗೆ ತಂದುಕೊಡು ಅಂತ  ಯಾಕೆ  ಹಟ ಹಿಡಿಯಲಿಲ್ಲವೋ ಗೊತ್ತಿಲ್ಲ.  ಆದರೆ  ಮುರಿದು ಆಟ್ಟದ ಮೇಲೆ ಬಿಸಾಡಿದ್ದ ಕೊಡೆಯ  ಒಂದು ಕಂಬಿಯನ್ನು ತೆಗೆದುಕೊಂಡು,  ಅದರಲ್ಲಿ  ಒಂದು ಕಡೆ  "ವಿ" ಆಕಾರದಲ್ಲಿ   ಬಗ್ಗಿಸಿಕೊಡಲು ಹಟ ಮಾಡುತ್ತಿದ್ದೆ.  ಆಷ್ಟು ಮಾಡಿಕೊಟ್ಟರೆ,  ಎಲ್ಲೋ ಹೊಂಚಿಕೊಂಡಿದ್ದ ಕುಕ್ಕರಿನ ಗ್ಯಾಸ್ಕೆಟ್ ರಬ್ಬರನ್ನು  ವಿ ಅಕಾರದ ನಡುವೆ ಚಕ್ರ ಮಾಡಿಕೊಂಡು ರಸ್ತೆಯಲ್ಲಿ ಓಡಿಸಿಕೊಂಡು ನಾನು ಓಡುತ್ತಿದ್ದೆ. 


        ಯಾಕೋ ಆಗ ನಾನು ಅಪ್ಪನಿಗೆ  ಕತೆ ಹೇಳು ಅಂತ ಗಂಟು ಬೀಳಲಿಲ್ಲ.  ಆಗ ಮನೆಯಲ್ಲಿ  ವಟ ವಟ ಅನ್ನುತ್ತಿದ್ದ  ಅಜ್ಜಿಗೆ ದುಂಬಾಲು ಬೀಳುತ್ತಿದ್ದೆ.  ಬೆಳೆದು ದೊಡ್ಡವನಾದ ಮೇಲೆ ಅದೇ ಅಜ್ಜಿಯನ್ನು  ಕಾಡಿಸಿದ್ದು ಬೇರೆ ವಿಷಯ.  ಐದು-ಆರನೇ ತರಗತಿಗೆ ಬರುತ್ತಿದ್ದಂತೆ  ಯಾಕೋ ಅಪ್ಪನ ಮಡಿಲು ಬೇಕೆನಿಸುತ್ತಿರಲಿಲ್ಲ.  ಆತನ ಬಿಡುವಿಲ್ಲದ ದುಡಿತ ಮುಖದಲ್ಲಿ ಕಾಣತೊಡಗಿದಾಗ  ಆತನ ಮಡಿಲಿಗಿಂತ ಬೇರೇನೋ ಕಾಣತೊಡಗಿತ್ತು.  ನಂತರ ನನಗೆ ಹತ್ತಿರವಾದವರು ಅಜ್ಜಿ, ಅಮ್ಮ, ಅಕ್ಕ ಕೊನೆಯಲ್ಲಿ ತಂಗಿ. 

        ಒಮ್ಮೆ  ಸ್ಕೂಲಿನಲ್ಲಿ  ನಾನು ಸರಿಯಾಗಿ ಓದುತ್ತಿಲ್ಲವೆಂದು ಅಪ್ಪನನ್ನು ಬರಹೇಳಿದ್ದರು.  ಜೊತೆಯಲ್ಲಿ ನಾನು ಹೋದೆ.  ಆಟ ಜಾಸ್ತಿಯಾಗಿ  ಸರಿಯಾಗಿ ಓದುದೇ ಅಂಕ ಕಡಿಮೆ ತೆಗೆದಿದ್ದಾನೆಂದು ಮೇಷ್ಟ್ರು ಹೇಳಿದಾಗ ನನಗೆ ಬೇರೇನು ಹೇಳದೆ ಮನೆಗೆ ಕರೆದುಕೊಂಡು ಬಂದಿದ್ದರು. 

       ಬೆಂಕಿಪೊಟ್ಟಣ, ಸಿಗರೇಟು ಪ್ಯಾಕಿಗೆ ರಬ್ಬರ್ ಚಕ್ರಗಳನ್ನು ಹಾಕಿ ಲಾರಿ, ಬಸ್ಸು ಮಾಡುವುದು,  ರೈಲುಗಳನ್ನು ಮಾಡುವುದು ನಂತರ ಅದಕ್ಕೊಂದು ದಾರಕಟ್ಟಿ ಮನೆತುಂಬಾ ಎಳೆದಾಡುವುದು ನನಗಾಗ ತುಂಬಾ ಇಷ್ಟದ ವಿಚಾರವಾಗಿತ್ತು.  ಅದಕ್ಕಾಗಿ ಗ್ಯಾಸ್ಕೆಟ್ ರಬ್ಬರ್ ಚಕ್ರ ಓಡಿಸುತ್ತಾ  ರಸ್ತೆಗಳಲ್ಲಿ  ಸಿಗರೇಟು ಪ್ಯಾಕ್, ಮತ್ತು ಬೆಂಕಿಪಟ್ಟಣ, ಕ್ಲಿನಿಕ್‌ಗಳಲ್ಲಿ ಇಂಜೆಕ್ಷನ್ ಕೊಟ್ಟ ನಂತರ ಬಿಸಾಡಿದ ಸಣ್ಣಬಾಟಲಿಗೆ ಹಾಕಿರುತ್ತಿದ್ದ ರಬ್ಬರ್ ಮುಚ್ಚಳವನ್ನು[ಅದರಿಂದ ಚಕ್ರಗಳನ್ನು ಮಾಡುತ್ತಿದ್ದೆ] ಆರಿಸುತ್ತಿದ್ದೆ. ಒಮ್ಮೆ  ನನ್ನಪ್ಪ  ಒಮ್ಮೆ ನೋಡಿಬಿಟ್ಟರು.  ನಾನು ಮನೆಗೆ ಬರುತ್ತಿದ್ದಂತೆ  ನಾನು ಮನೆಯಲ್ಲಿ ಮಾಡಿಟ್ಟಿದ್ದ  ಲಾರಿ, ಬಸ್ಸು, ರೈಲು ಇತ್ಯಾದಿಗಳನ್ನು  ಹರಿದೆಸೆದು, ಆವರೇ ಮಾಡಿಕೊಟ್ಟಿದ್ದ  ಕೊಡೆಕಂಬಿಯನ್ನು  ಕಿತ್ತುಕೊಂಡು  ಗ್ಯಾಸ್ಕೆಟ್ ರಬ್ಬರನ್ನು ತುಂಡು ತುಂಡು ಮಾಡಿದ್ದರು. ನನಗೆ ಅಂಕ ಕಡಿಮೆ ಬಂದಿದ್ದ ಕಾರಣವೂ ಸೇರಿ  ಚೆನ್ನಾಗಿ ಬಡಿದ್ದಿದ್ದರು.

        ನನಗೆ ಏಟು ಬಿದ್ದಿದ್ದಕ್ಕಿಂತ ನಾನು ಮಾಡಿದ್ದೆಲ್ಲಾ ಹೋಯ್ತಲ್ಲ ಅಂತ ಕೆಲವು ದಿನ ಮಂಕಾಗಿಬಿಟ್ಟಿದ್ದೆ.  ಕೊನೆಗೊಂದು ದಿನ  ಅಪ್ಪನೇ ಹೋಗಿ ನನಗಿಷ್ಟವಾದ  ಸಿಗರೇಟುಪ್ಯಾಕ್‌ಗಳು, ಬೆಂಕಿಪೊಟ್ಟಣಗಳು, ಇಂಜೆಕ್ಷನ್ ರಬ್ಬರುಗಳು, ಇವುಗಳನ್ನೆಲ್ಲಾ ಕತ್ತರಿಸಿ ಅಂಟಿಸಲು ಬೇಕಾಗುವ ಕತ್ತರಿ, ಬ್ಲೇಡು,  ಗಮ್ ಇತ್ಯಾದಿಗಳನ್ನು ತಂದುಕೊಟ್ಟಿದರು.  ಮತ್ತೆ ಬೋನಸ್ ಆಗಿ  ನನಗೆ ಮತ್ತೊಂದು ಇಷ್ಟದ ವಸ್ತು ಥರ್ಮಕೋಲ್[ಅದರಿಂದ ಇನ್ನಷ್ಟು ಕೆಲವು ಕುಸುರಿ ಕೆಲಸಗಳನ್ನು ಮಾಡುತ್ತಿದ್ದೆ.]ಕೂಡ ತಂದುಕೊಟ್ಟಾಗ  ಅಂದು ನನಗೆ ಆಕಾಶವೇ ಕೈಗೆಟುಕಿದಂತಾಗಿತ್ತು.

 ಆ  ನಂತರ ಒಮ್ಮೆ  ಕದ್ದು ಮುಚ್ಚಿ ಸೈಕಲ್ ಕಲಿಯುವಾಗ  ಸಿಕ್ಕಿಬಿದ್ದು  ಏಟು ತಿಂದಿದ್ದೇ ಕೊನೆ.  ನಂತರ  ಅವರು ನನಗೆ ಹೊಡೆದಿದ್ದು ನೆನಪಿಲ್ಲ.

        ಅಪ್ಪ ನಿವೃತ್ತಿಯಾದ ಮೇಲೆ ಗೆಳೆಯನಂತೆ  ನನಗೆ  ಎಲ್ಲಾ ವಿಚಾರಗಳನ್ನು  ಮುಕ್ತವಾಗಿ ಚರ್ಚಿಸಲು ಇಷ್ಟಪಡುತ್ತಿದ್ದರು..  ಆದರೆ  ನನಗೆ ಆಗ  ಯುವ ವಯಸ್ಸಿನ ಅಮಲು ಹೆಚ್ಚಿದ್ದರಿಂದ  ಅವರ ಮಾತು ನನ್ನ ಕಿವಿಗೆ ಕೇಳುತ್ತಿರಲಿಲ್ಲ.  ನಾನು ಸ್ವಲ್ಪ  ದುಡಿಯುವಂತಾಗಿದ್ದು ಮತ್ತು ಅವರಿಗೆ  ವಯಸ್ಸಾಗಿದ್ದು  ಎರಡು ಸೇರಿ ಅವರನ್ನು ನಿರ್ಲಕ್ಷ ಮಾಡುವಂತ  ಆಹಂ ಬಂದುಬಿಟ್ಟಿತ್ತು.  ಆವರ ವಯಸ್ಸು ೬೫ ದಾಟುತ್ತಿದ್ದಂತೆ  ಕಾಯಿಲೆಗಳು ಅವರಿಸಿಕೊಂಡುಬಿಟ್ಟಿದ್ದವು.  ಆ ಸಮಯದಲ್ಲಿ  ತಮ್ಮ ಮಾತುಗಳನ್ನು  ಕೇಳಿಸಿಕೊಳ್ಳಲು ಒಬ್ಬ ಗೆಳೆಯ ಬೇಕಿತ್ತೋನೋ...ಮಗುವಿನಂತೆ ಮಾತಾಡುತ್ತಿದ್ದರು.  ಊರಿನ ವಿಚಾರವಾಗಿ,  ಹೊಲ ಗದ್ದೆ, ಮನೆಯ ವಿಚಾರವಾಗಿ  ಅಲ್ಲಿ ತಾವು ಮಾಡಿಸಿದ ಕೆಲಸವನ್ನು  ಹೇಳಿಕೊಂಡು  ನಾನು ಮೆಚ್ಚಿದರೇ  ಅವರಿಗೆ  ಸಂತೋಷವಾಗುತ್ತಿತ್ತು.  ಅವರಿಗೆ ಪ್ಯಾರಲೈಸ್ ಸ್ಟ್ರೋಕ್ ತಗುಲಿದಾಗ  ಮಾತನಾಡಲಾಗದೇ  ನನ್ನ ಕೈಯಿಡಿದು   ಅತ್ತುಬಿಟ್ಟಿದ್ದರು.  ಅಂತ ಅಪ್ಪ ಈಗ ಇಲ್ಲ. 

        ಇಂದು ಅಪ್ಪಂದಿರ ದಿನ[ Father’s day] ನನ್ನ ಅಪ್ಪನ ಜೊತೆಗೆ ಎಲ್ಲಾ  ಅಪ್ಪಂದಿರನ್ನು ನೆನಸಿಕೊಳ್ಳುತ್ತಾ.....ರಸ್ತೆಯಲ್ಲಿ ಜಾತ್ರೆಯಲ್ಲಿ, ಉತ್ಸವಗಳಲ್ಲಿ ಕೆಲವು ಅಪ್ಪ-ಮಕ್ಕಳ  ನಿಶ್ಕಲ್ಮಶ ಪ್ರೀತಿಯ  ಮಧುರ ಕ್ಷಣಗಳನ್ನು  ಕ್ಲಿಕ್ಕಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...

         ನೀವು ನೋಡಿ.  ನೋಡದಿದ್ದಲ್ಲಿ  "ನಮ್ಮಪ್ಪನ್ನ  ಕರ್ಕೊಂಡು ಬರ್ತೀನಿ...."ಚಿತ್ರ-ಲೇಖನ.
ಶಿವು.ಕೆ.

Thursday, May 24, 2018

ಯಾಕೋ ಇದೆಲ್ಲವನ್ನು ಬರೆಯಬೇಕೆನಿಸಿತು!ಕಳೆದ ಕೆಲವು ತಿಂಗಳುಗಳಿಂದ ಆಗಾಗ ದೂರದ ಗೆಳೆಯರ ಮನೆಗೆ ಹೋಗಿಬರುತ್ತಿದ್ದೇನೆ. ದೂರದ ಗೆಳೆಯರೆಂದರೆ ನೂರಾರು ಮೈಲುಗಳ ದೂರದಲ್ಲಿರುವವರಲ್ಲ. ಅವರೆಲ್ಲರೂ ಈ ಮೊದಲು ಬೆಂಗಳೂರಿನ ಹೃದಯಭಾಗದಲ್ಲಿದ್ದವರು. ಈಗ ಸ್ವಲ್ಪ ದೂರ ಬೆಂಗಳೂರಿನ ಮುವತ್ತು-ನಲವತ್ತು-ಐವತ್ತು ಕಿಲೋಮೀಟರ್ ದೂರದ ಹೆಚ್ಚು ಕಡಿಮೆ ಬೆಂಗಳೂರಿನ ಹೊರವಲಯದಲ್ಲಿ ಪುಟ್ಟ ಮನೆಯನ್ನು ಕಟ್ಟಿಕೊಂಡು ಜೀವಿಸುತ್ತಿದ್ದಾರೆನ್ನಬಹುದು. ಲಕ್ಷಾಂತರ ಜನ ಅವರಂತೆ ಹೋಗಿ ಮನೆಗಳನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರಲ್ಲ ಇವರದೇನು ವಿಶೇಷ ಅಂತ ನಿಮಗೆ ಅನ್ನಿಸಬಹುದು. ಆದರೆ ನನಗೆ ವಿಶೇಷವೆನಿಸಿದೆ. ನಮ್ಮೆಲ್ಲರ ಸ್ಪೂರ್ತಿ ಕಿ.ಪಿ.ಪೂರ್ಣಚಂದ್ರ ತೇಜಸ್ವಿಯವರಂತೆ ಬದುಕು ಸಾಗಿಸಬೇಕೆಂದು ಇವರು ಕನಸು ಕಟ್ಟಿಕೊಂಡವರು, ಅದೇ ರೀತಿ ಈಗ ಹಸುರು ವಾತಾವರಣದಲ್ಲಿ ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ ಮನೆಯ ಕಾಂಪೌಂಡಿನೊಳಗೆ ಪುಟ್ಟ ಗಿಡ, ಬಳ್ಳಿಗಳನ್ನು ಬೆಳೆಸಿಕೊಂಡಿದ್ದಾರೆ. ರಸ್ತೆಯಲ್ಲಿನ ದೊಡ್ಡ ದೊಡ್ಡ ಮರಗಳು, ಇವರ ಮನೆಯೊಳಗಿನ ಪುಟ್ಟ ಮರಗಳಿಂದಾಗಿ ನಿತ್ಯವು ಆಶೀ ಪ್ರಿನಿಯ, ಟೈಲರ್ ಬರ್ಡ್, ಸೂರಕ್ಕಿ, ಬುಲ್ ಬುಲ್, ಮೈನಾ, ಗುಬ್ಬಚ್ಚಿಗಳು ಇಂಡಿಯನ್ ರಾಬಿನ್, ಬುಶ್ ಚಾಟ್...ಹೀಗೆ ಹತ್ತಾರು ಹಕ್ಕಿಗಳು ಮತ್ತು ಕೀಟಗಳೊಂದಿಗೆ ಜೀವಿಸುತ್ತಾರೆ. ನಾವು ಬೇಟಿ ಕೊಟ್ಟಾಗಲೆಲ್ಲಾ ಒಂದಲ್ಲ ಒಂದು ಹಕ್ಕಿ ಅವರ ಮನೆಯ ಕಾಪೌಂಡಿನ ಗಿಡ ಬಳ್ಳಿಗಳಲ್ಲಿ ಗೂಡು ಮಾಡಿರುವುದು ಕಂಡುಬರುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದಲ್ಲ ಒಂದು ಪಕ್ಷಿಗಳ ಕಲರವ ಕೇಳಿಸುತ್ತಲೇ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇವರೆಲ್ಲ ಹವ್ಯಾಸಿ ಛಾಯಾಗ್ರಾಹಕರು, ಪ್ರಾಣಿ ಮತ್ತು ಪಕ್ಷಿಗಳ ಪ್ರಿಯರು. ಅವರ ಮನೆಯಲ್ಲಿ ಕಳೆದ ಹೊತ್ತಿನಲ್ಲಿ ಒಮ್ಮೆಯೂ ನಾವು ರಾಜಕೀಯ ಮಾತಾಡುವುದಿಲ್ಲ, ಮೂರನೇ ವ್ಯಕ್ತಿಯ ಬಗ್ಗೆ ಮಾತಾಡುವುದಿಲ್ಲ, ಅಪರೂಪಕ್ಕೆ ಮಾತಾಡಿದರೂ ಯಾರನ್ನು ದ್ವೇಷಿಸುವ ಮಟ್ಟಕ್ಕೆ ಮಾತಾಡುವುದಿಲ್ಲ. ಬದಲಾಗಿ ನಮ್ಮದೇ ಬದುಕಿನ ಖುಷಿ, ಹೊಸ ವಿಚಾರಗಳು, ಕಲಿಕೆ, ಹೊಸ ತಂತ್ರಜ್ಞಾನದ ಕಲಿಕೆ ಮತ್ತು ಬಳಕೆ, ಪ್ರಾಣಿ ಪಕ್ಷಿಗಳ ಜೊತೆಗೆ ನಿತ್ಯ ಅನುಭವದ ಒಡನಾಟ, ಅವುಗಳ ಫೋಟೊಗ್ರಫಿ ಮಾಡಿರುವುದು, ಹೊಸ ಪುಸ್ತಕ, ಹೊಸ ಹೊಸ ಸಿನಿಮಾಗಳು ವಿಶ್ವಮಟ್ಟದ ಕಲಾತ್ಮಕ ಚಿತ್ರಗಳು, ಹೀಗೆ ಇಡೀ ದಿನ ಕಳೆದುಹೋಗುವುದು ನಮಗೆ ಗೊತ್ತಾಗುವುದಿಲ್ಲ ಹಾಗೆ ನಾನು ಅಲ್ಲಿನ ವಾತಾವರಣದಲ್ಲಿ ಮೈಮರೆಯುತ್ತೇನೆ.  ನನ್ನ ಕನಸು ಅದೇ ದಿಕ್ಕಿನಲ್ಲಿದೆ. ಅಲ್ಲಿಂದ ವಾಪಸ್ ಮತ್ತೆ ಬೆಂಗಳೂರಿನ ಹೃದಯ ಭಾಗಕ್ಕೆ ಬರುತ್ತಿದ್ದಂತೆ ನನಗರಿವಿಲ್ಲದಂತೆ ಒತ್ತಡ ಶುರುವಾಗುತ್ತದೆ. ಅದೇ ಮದುವೆ ಫೋಟೊಗ್ರಫಿ, ಆಲ್ಬಂ, ವಿಡಿಯೋ ಸಂಕಲನ, ದಿನಪತ್ರಿಕೆ ಹಂಚಿಕೆ ಕೆಲಸ, ಹೀಗೆ ಮುಳುಗುವುದು ಸಹಜವಾಗಿಬಿಡುತ್ತದೆ. ಅದರಿಂದ ಹೊರಬರಲು  ಮೊಬೈಲಿನ ವಾಟ್ಸಪ್ ಫೇಸ್ ಬುಕ್, ಇನ್ನಿತರ ಎಲ್ಲಾ ಸಮಾಜಿಕ ಜಾಲತಾಣವನ್ನು ನೋಡಿದರೆ ಅಲ್ಲೂ ಕೂಡ ರಾಜಕೀಯ, ಪಕ್ಷಗಳ ಕೆಸರೆರಚಾಟ, ಜಾತಿ, ಮತಭೇದ, ಒಬ್ಬರ ಮೇಲೆ ಮತ್ತೊಬ್ಬರ ಗೂಬೆ ಕೂರಿಸುವುದು, ಕೀಳುಮಟ್ಟದಲ್ಲಿ ಕಾಲೆಳೆಯುವುದು, ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವುದು, ಇವೆಲ್ಲವನ್ನು ನೋಡುವಾಗ ನಾನು ಎಷ್ಟೇ ತಟಸ್ಥ ಸ್ತಿತಿಯಲ್ಲಿರುತ್ತೇನೆಂದುಕೊಂಡರೂ ನನಗರಿವಿಲ್ಲದಂತೆ ನನ್ನ ಮನಸ್ಸು ಯಾರದೋ ಕಡೆ ವಾಲಿರುತ್ತದೆ. ನನ್ನನ್ನು ನಿಯಂತ್ರಿಸಿಕೊಳ್ಳದ ಸ್ಥಿತಿಗೆ ಹೋಗುವ ಮುನ್ನವೇ ಅದರಿಂದ ಹೊರಬಂದುಬಿಡುತ್ತೇನೆ. ಹಾಗೆ ನೋಡಿದರೆ ಆ ಸರಕಾರ ಸರಿಯಿಲ್ಲ, ಈ ಸರಕಾರ ಸರಿಯಿಲ್ಲ, ಆತ ಸರಿಯಿಲ್ಲ ಈತ ಸರಿಯಿಲ್ಲ ಎನ್ನುವ ವಿಚಾರವನ್ನು ಗಮನಿಸಿದಾಗ ನಾವೆಷ್ಟು ಸರಿಯಿದ್ದೇವೆಂದು ಗಮನಿಸಬೇಕಾಗುತ್ತದೆ. ನಾವು ಮುಂಜಾನೆ ದಿನಪತ್ರಿಕೆ ಹಂಚಿಕೆ ಕೆಲಸಕ್ಕೆ ಐದುಗಂಟೆಗೆ ಹೋಗುತ್ತೇವಲ್ಲ, ಆ ಕೆಲಸದ ನಡುವೆ ಪುಟ್ಟ ಪುಟ್ಟ ಕೈಗಾಡಿಗಳಲ್ಲಿ ಪುಟ್ಟ ಅಂಗಡಿಗಳಲ್ಲಿ ಮಾರುವ ಕಾಫಿ ಟೀ ಕುಡಿದವರು ಪೇಪರ್ ಕಪ್ಪುಗಳನ್ನು ಪಕ್ಕನೇ ರಸ್ತೆ ಬಿಸಾಡುತ್ತೇವೆ. ಮರುಕ್ಷಣವೇ ಮೋದಿಯವರ ಸ್ವಚ್ಛಭಾರತದ ಬಗ್ಗೆ, ರಸ್ತೆಯ ಗುಂಡಿ, ಇತ್ಯಾದಿಗಳ ಬಗ್ಗೆ ಮೈಮರೆತು ಚರ್ಚಿಸುತ್ತೇವೆ. ಪಕ್ಕದಲ್ಲಿ ಆ ಕೈಗಾಡಿಯವರು ಕಸದ ಡಬ್ಬಗಳನ್ನು ಇಟ್ಟಿದ್ದರೂ ರಸ್ತೆಗೆ ಬೀಸಾಡುವುದು ಖಚಿತ. ನಾವು ದಿನಪತ್ರಿಕೆಗಳನ್ನು ಜೋಡಿಸಿಕೊಳ್ಳುವ ಸಮಯದಲ್ಲಿ ಸುತ್ತಮುತ್ತಲ ಶೇಷಾದ್ರಿಪುರಂ ಕುಮಾರಪಾರ್ಕ್ ನಂತ ಬಡಾವಣೆಗಳ ಡೀಸೆಂಟ್ ಜನರು ವಾಕಿಂಗ್ ಮಾಡುವಾಗ ಕೈಯಲ್ಲಿ ತಮ್ಮ ಮನೆಯಲ್ಲಿ ಹಿಂದಿನ ದಿನ ಶೇಖರವಾಗಿದ್ದ ಕಸವನ್ನು ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಕೊಂಡು ಬರುತ್ತಾರೆ. ನಾವು ನೋಡುತ್ತಿದ್ದಂತೆ ವಾಕಿಂಗ್ ಮಾಡುತ್ತಲೇ ರಸ್ತೆಬದಿಯಲ್ಲಿ ಕೈಯಿಂದ ಜಾರಿಸಿ ಹೋಗಿಬಿಡುತ್ತಾರೆ. ಅವರು ಕೂಡ ದೇಶದ ಎಲ್ಲಾ ವಿಚಾರ ಮತ್ತು ಸಮಸ್ಯೆಗಳ ಬಗ್ಗೆ ತಿಳಿಯಲು ನಮ್ಮ ಪೇಪರ್ ನಿರೀಕ್ಷಿಸುವವರೆ ಮತ್ತು ಓದುವಾಗ ಸರ್ಕಾರ ಮತ್ತು ಅದರ ಪ್ರತಿನಿಧಿಗಳನ್ನು ಬೈದುಕೊಳ್ಳುವವರೇ ಆಗಿರುತ್ತಾರೆ. ಮದುವೆ ನಡೆಯುವ ಕಲ್ಯಾಣಮಂಟಪದಲ್ಲಿ ಬರುವ ಅತಿಥಿಗಳು ಊಟದ ಎಲೆಯ ಮೇಲೆ ಎಲ್ಲಾ ವಿಧದ ತಿನಿಸುಗಳನ್ನು ಬಡಿಸುವಾಗ ಕೈಯಲ್ಲಿರುವ ಮೊಬೈಲಿನಲ್ಲಿ ಚಾಟಿಂಗ್ ಅಥವ fb, whatsapp ನೋಡುತ್ತಿರುತ್ತಾರೆ ಇದು ಇತ್ತೀಚಿನ ಪ್ರಸ್ತುತ ಸ್ಥಿತಿ, ಮೊದಲೆಲ್ಲ ಬಡಿಸುವಾಗ ಪಕ್ಕದವರ ಜೊತೆ ಮಾತುಗಾರಿಕೆ ನಡೆಯುತ್ತಿತ್ತು.  ಎಲ್ಲಾ ಬಡಿಸಿದ ಮೇಲೆ ಅದರಲ್ಲಿ ಅವರು ತಿನ್ನುವುದು ಅರ್ಧ ಅದಕ್ಕಿಂತ ಕಡಿಮೆ ಉಳಿದದ್ದು ಎಲೆಯಲ್ಲಿಯೇ ಬಿಟ್ಟುಬಿಡುತ್ತಾರೆ.  ತಮಾಷೆಯೆಂದರೆ ಇತ್ತೀಚಿಗೆ ನಾನು ಫೋಟೊಗ್ರಫಿಗೆ ಹೋಗಿದ್ದ ಮದುವೆಗಳಲ್ಲಿ ಊಟಮಾಡುವಾಗ ಈ ಅತಿಥಿಗಳು, ತಾವು ಎಲೆಗಳಲ್ಲಿ ಬಿಟ್ಟ ಊಟ ಕಸದ ಬುಟ್ಟಿಗೆ ಹೋಗುತ್ತದೆಯೆನ್ನುವ ಪರಿಜ್ಞಾನವಿಲ್ಲದೆ ಹೆಚ್ಚಾಗಿ ಚರ್ಚಿಸಿದ್ದು ಚುನಾವಣೆಗೆ ನಿಂತವರು ತಮ್ಮ ತಮ್ಮ ಊರುಗಳಲ್ಲಿ ಕೊಟ್ಟ ಬಿರಿಯಾನಿ, ದುಡ್ಡು, ಇನ್ನಿತರ ಎಲ್ಲವನ್ನು ಮಾತಾಡಿ ಎಲ್ಲಾ ಪಕ್ಷದವರನ್ನು ಬೈದಿದ್ದೇ ಹೆಚ್ಚು. ಇವರಲ್ಲಿ ಅತಿ ಹೆಚ್ಚಿನವರು ಚೆಂದದ ಯುವ ವಯಸ್ಸಿನ ಯುವಕ ಮತ್ತು ಯುವತಿಯರು, ಸೊಗಸಾಗಿ ಮೇಕಪ್ ಮಾಡಿಕೊಂಡ ಹೆಂಗಸರು, ತುಂಬಾ ಡಿಸೆಂಟ್ ರೀತಿಯಲ್ಲಿ ನಡೆದುಕೊಳ್ಳುವ ತಮ್ಮನ್ನು ತಾವೇ ಅಫಿಸಿಯಲ್ ಅಂತ ನಡುವಳಿಕೆಯಲ್ಲಿ ಬಿಂಬಿಸಿಕೊಳ್ಳುವ ಗಂಡಸರು. ನಾನಂತೂ ನನಗೇ ಬೇಕಿರುವುದನ್ನೆ ಹಾಕಿಸಿಕೊಳ್ಳುತ್ತೇನೆ ಮತ್ತು ಉಪ್ಪಿನ ಕಾಯಿ ಸಮೇತ ಎಲೆಯಲ್ಲಿ ಏನು ಉಳಿಸದೇ ತಿಂದುಮುಗಿಸುತ್ತೇನೆ. ಜೊತೆಗೆ ನನ್ನ ಫೋಟೊಗ್ರಫಿ ತಂಡಕ್ಕೂ ಇದನ್ನೇ ಕಲಿಸಿರುವುದರಿಂದ ಅವರೆಲ್ಲರೂ ಊಟದ ಎಲೆಯಲ್ಲಿ ಏನನ್ನು ಬಿಟ್ಟು ವೇಸ್ಟ್ ಮಾಡುವುದಿಲ್ಲ. ಇದೆಲ್ಲ ಅನುಭವಗಳನ್ನು ನೋಡಿದಾಗ ಬದಲಾವಣೆಯೆನ್ನುವುದು ಯಾವುದೇ ಸರ್ಕಾರ, ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು, ಸರ್ಕಾರಿ ಅಧಿಕಾರಿಗಳು ಇವರೆಲ್ಲಾ ಎಷ್ಟೇ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟರೂ ಆಗುವುದಿಲ್ಲ. ಅದಕ್ಕೆ ಪಕ್ಕಾ ಉದಾಹರಣೆಯೆಂದರೆ ಹತ್ತು ರೂಪಾಯಿ ನಾಣ್ಯ. ಸರ್ಕಾರ, ರಿಸರ್ವ ಬ್ಯಾಂಕ್ ಅಫ್ ಇಂಡಿಯ ಕೂಡ ಹತ್ತು ರೂಪಾಯಿಯ ನಾಣ್ಯ ಚಲಾವಣೆಯಿದೆ. ಅದನ್ನು ಸ್ವೀಕರಿಸಿ ಮತ್ತು ಬಳಸಿ ಅಂತ ಹೇಳಿದರೂ ಅದ್ಯಾವ ತಲೆಕೆಟ್ಟವನ್ನು ಇದು ನಡೆಯುವುದಿಲ್ಲ ಅಂತ ಹಬ್ಬಿಸಿದನೇ ಇವತ್ತಿಗೂ ಅದನ್ನು ಪುಟ್ಟ ತರಕಾರಿ ವ್ಯಾಪಾರಿಗಳು, ಅಂಗಡಿಗಳವರು, ಹಾಲಿನವರು ತೆಗೆದುಕೊಳ್ಳುವುದಿಲ್ಲ. ಈ ಕ್ಷಣದವರೆಗೂ ಸರ್ಕಾರದ ದೃಷ್ಟಿಯಲ್ಲಿ ಅದು ಚಲಾವಣೆ ನಾಣ್ಯ, ಆದ್ರೆ ಸಾರ್ವಜನಿಕರ ದೃಷ್ಟಿಯಲ್ಲಿ ಚಲಾವಣೆಯಾಗದ ನಾಣ್ಯ. ನಾನು ಕೊಟ್ಟ ನಾಣ್ಯವನ್ನು ತಿರಸ್ಕರಿಸಿದ ಹಾಲಿನವನು ಸರ್ಕಾರವನ್ನು ಬೈಯುವುದನ್ನು ನಿತ್ಯ ನೋಡುತ್ತೇನೆ. ಕೆಲವೊಂದು ತುಂಬಾ ಸುಲಭವಾಗಿದ್ದರೂ ನಮ್ಮ ಜನರೇಕೆ ಆ ದಿಕ್ಕಿನಲ್ಲಿ ಒಂದರೆ ಗಳಿಗೆ ಯೋಚಿಸಿ ಕಾರ್ಯಗತ ಮಾಡಿಕೊಂಡಿರೆ ಎಷ್ಟೋ ಬದಲಾವಣೆಗಳಾಗುತ್ತವೆ. ಅದಕ್ಕಾಗಿ ಇವತ್ತು ನನಗಾದ ಅನುಭವದ ಮೂಲಕ ವಿವರಿಸಲು ಪ್ರಯತ್ನಿಸುತ್ತೇನೆ. ಇವತ್ತು ನನ್ನ ಸ್ಕೂಟರನ್ನು ಸರ್ವಿಸಿಗೆ ಬಿಟ್ಟಿದ್ದರಿಂದ ಅನೇಕ ಕಡೆ ಬಸ್ಸಿನಲ್ಲಿ ಪ್ರಯಾಣಿಸಬೇಕಾಯಿತು. ಶ್ರೀರಾಮಪುರ ಮೆಟ್ರೋ ಸ್ಟೇಷನ್ ಬಳಿಯಲ್ಲಿ ಬಸ್ ಹತ್ತಿ ಶಿವಾನಂದ ಸರ್ಕಲ್ ಹೋಗಬೇಕಿತ್ತು. ನಿರ್ವಾಹಕರ ಬಳಿ ಶಿವಾನಂದ ಸರ್ಕಲ್ ಎಂದೆ, “ಹನ್ನೆರಡು ರೂಪಾಯಿ ಕೊಡಿ” ಅಂದ್ರು, ನಾನು ಜೇಬಿನಿಂದ ಒಂದು ಹಿಡಿಯಷ್ಟು ಚಿಲ್ಲರೆಯನ್ನು ತೆಗೆದು “ಇದರಲ್ಲಿ ತೆಗೆದುಕೊಳ್ಳಿ” ಎಂದೆ. ಅವರು ಎಣಿಸಿ ತೆಗೆದುಕೊಂಡು  “ಏನ್ ಸರ್ ಪೂರ್ತಿ ಚಿಲ್ಲರೆ ಇಟ್ಟಿದ್ದೀರಿ” ಅಂತ ಖುಷಿಯಿಂದ ತೆಗೆದುಕೊಂಡು ಕೇಳಿದ್ರು, ನಾನು “ನಿಮಗೋಸ್ಕರ ಸರ್” ಅಂದೆ. ಆತ ಒಂದು ಕಿರು ನಗೆ ನನ್ನತ್ತ ಬೀರಿ ಮುಂದೆ ಸಾಗಿದರು. ತುಂಬಿದ ಬಸ್ ನಡುವೆ ಆತನೊಳಗೊಂದು ಮನಃಪೂರ್ವಕ ನಗು ಹೊರಹೊಮ್ಮಿದ್ದು ನನಗಿಷ್ಟವಾಯಿತು.  ನನಗೆ ತಿಳಿದಂತೆ ಅವರಿಗೂ ನಿತ್ಯವೂ ಚಿಲ್ಲರೆಯನ್ನು ಕೊಟ್ಟು ಕೊಟ್ಟು ಸಾಕಾಗಿರುತ್ತದೆ ಮತ್ತು ಬೇಸರವಾಗಿರುತ್ತದೆ. ಕೆಲವರಂತು ಈ ಚಿಲ್ಲರೆ ವಿಚಾರಕ್ಕಾಗಿ ಜಗಳವಾಗಿ ನಿತ್ಯವೂ ನೆಮ್ಮದಿಯನ್ನು ಹಾಳುಮಾಡಿಕೊಂಡಿರುತ್ತಾರೆ. ನನ್ನ ಮುಷ್ಟಿಯಲ್ಲಿದ್ದ ಚಿಲ್ಲರೆ ನಾಣ್ಯ ನಿರ್ವಾಹಕನ ಮುಖದಲ್ಲಿ ಖುಷಿ ತರುತ್ತದೆಯೆಂದರೆ ನನಗೆಲ್ಲಿಂದ ಬಂತು ಈ ಚಿಲ್ಲರೇ ನಾಣ್ಯಗಳು ಅಂತ ನಿಮಗನ್ನಿಸಿರಬಹುದು. ಅದರ ಹಿಂದೆ ಪುಟ್ಟ ಸ್ವಾರಸ್ಯಕರ ಕತೆಯಿದೆ. ತಮಾಷೆಯಾಗಿ ಹೇಳಬೇಕೆಂದರೆ ನಮ್ಮ  ದೇಶದ ದೇವರನ್ನು ನಂಬುವ ಮತ್ತು ಭಕ್ತಿಯಿಂದ ಪೂಜಿಸುವ ಪ್ರತಿಯೊಬ್ಬ ಆಸ್ಥಿಕರ ಬಳಿಯೂ ಪೂಜೆಯ ನಂತರ ಮಂಗಳಾರತಿ ತಟ್ಟೆಗೆ ಹಾಕಲು ಒಂದು ರುಪಾಯಿ, ಎರಡು ರುಪಾಯಿ, ಐದು ರುಪಾಯಿ ನಾಣ್ಯಗಳಿರುತ್ತವೆ. [ಹತ್ತು ರುಪಾಯಿ ನಾಣ್ಯಗಳು ಚಲಾವಣೆಯಾಗುವುದಿಲ್ಲವೆಂದು ನಮ್ಮ ಸಾರ್ವಜನಿಕರೇ ನಿರ್ಧರಿಸಿರುವುದರಿಂದ ಅ ನಾಣ್ಯಗಳು ಅವರ ಬಳಿ ಸಧ್ಯ ಖಾಯ್ದಿರಿಸಿಲ್ಲ] ಇದಲ್ಲದೇ ಹತ್ತು ರುಪಾಯಿ, ಇಪ್ಪತ್ತು ರುಪಾಯಿ ನೋಟುಗಳು, ಸ್ವಲ್ಪ ಅನುಕೂಲಸ್ಥರಿಗೆ ಐವತ್ತು, ನೂರು ನೋಟುಗಳಿರುತ್ತವೆ. ಇವೆಲ್ಲವೂ ಅವರಿಗೆ ಆ ದೇವರ ಸನ್ನಿದಿಯಲ್ಲಿ  ಆ ಕ್ಷಣದಲ್ಲಿ ಸಲ್ಲಿಸಲು ಹೇಗೆ ಬಂತು ಅಂತ ನಾನು ಕೇಳಬಾರದು ನೀವು ಕೇಳಬಾರದು ಒಟ್ಟಾರೆ ನಮ್ಮ ದೇಶದಲ್ಲಿ ಯಾರು ಯಾರನ್ನು ಈ ವಿಚಾರವಾಗಿ ಕೇಳಬಾರದು. ಇದೇ ಸಾರ್ವಜನಿಕರಿಗೆ ಎಂದಿನಂತೆ ನಿತ್ಯ ಚಿಲ್ಲರೆ ತರಕಾರಿ, ಹಣ್ಣು, ಹಾಲು, ಹೋಟಲುಗಳು,  ಕೈಗಾಡಿಯವರು, ಬಸ್ಸು ಇತ್ಯಾದಿಗಳಲ್ಲಿ ಕೊಡಲು ಅವರ ಬಳಿ ಚಿಲ್ಲರೆ ನಾಣ್ಯಗಳಿರುವುದಿಲ್ಲ. ಮತ್ತೆ ಅವರ ಬಳಿ ಏಕೆ ಚಿಲ್ಲರೆ ನಾಣ್ಯಗಳಿಲ್ಲ ಅಂತ ಯಾರು ಕೇಳುವಂತಿಲ್ಲ.  ಅವರೆಲ್ಲ ದೊಡ್ಡ ನೋಟುಗಳನ್ನೇ ಕೊಡುತ್ತಾರೆ. ಚಿಲ್ಲರೆ ವ್ಯಾಪಾರಿಗಳು ತನ್ನ ನಿತ್ಯ ಗ್ರಾಹಕರನ್ನು ಕಳೆದುಕೊಳ್ಳಬಾರಬಹುದೆಂದು ದೈನ್ಯತೆಯಿಂದ ತಾವೇ ಚಿಲ್ಲರೆ ಕೊಡುವುದು, ನಾಳೆ ತೆಗೆದುಕೊಳ್ಳಿ ಅನ್ನುವುದು ನಾಳೇ ನೀವೇ ಚಿಲ್ಲರೇ ಕೊಡಿ ಅಂತ ಗ್ರಾಹಕರಿಗೇ ಬಿಟ್ಟುಕೊಡುವುದು, ಬಸ್ ನಿರ್ವಾಹಕನು ದೊಡ್ಡ ನೋಟುಗಳನ್ನು ನೋಡಿ ಮುಖ ಸಿಂಡರಿಸಿಕೊಳ್ಳುವುದು, ಆ ನೋಟು ಕೊಟ್ಟ ಪ್ರಾಯಾಣಿಕನನ್ನು ಒಂಥರ ತಿರಸ್ಕಾರದಿಂದ ನೋಡುವುದು, ಇವೆಲ್ಲವೂ ನಿತ್ಯ ನಡೆಯುವುದು ಸಹಜ ಸತ್ಯಗಳು. ಇವೆಲ್ಲ ವಿಚಾರಗಳ ನಡುವೆ ನನ್ನಲ್ಲಿ ಹಿಡಿತುಂಬ ಚಿಲ್ಲರೆ ನಾಣ್ಯಗಳು ಹೇಗೆ ಬಂತು ಅನ್ನುವ ಕತೆಯನ್ನು ನಿಮಗೆ ಹೇಳಲೇಬೇಕು. ನಮ್ಮ ದೇಶ, ರಾಜ್ಯ, ಬೇಡ ಬೆಂಗಳೂರಿನಂತ ಮಹಾನಗರಿಯಲ್ಲೂ ತಿಂಗಳಿಗೊಂದು ಹಬ್ಬ, ತಿಂಗಳಿಗೊಂದು ಸಂಕಷ್ಟಿಹರ ಗಣಪತಿ ಪೂಜೆ, ಹುಣ್ಣಿಮೆ, ಅಮವಾಸ್ಯೆ ಇತ್ಯಾದಿ ಕಾರಣಗಳಿಗಾಗಿ ನಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಏರ್ಪಡುತ್ತವೆ. ಅಂತ ದಿನಗಳಲ್ಲಿ ಮಂಗಳಾರತಿ ತಟ್ಟೆಯ ತುಂಬ ಚೆಲ್ಲರೆ ನಾಣ್ಯಗಳು ಬೀಳುವುದು ಖಚಿತ. ಈ ವಿಚಾರವನ್ನು ಹೇಳಿ ಪೂಜಾರಿಗಳ ತಟ್ಟೆಯ ಹಣದ ಬಗ್ಗೆ ವಿವರಿಸುತ್ತಿದ್ದೇನೆಂದು ಅಂದುಕೊಳ್ಳಬೇಡಿ. ಅವರಿಗೆ ಕೊಡುವ ಅತಿ ಕಡಿಮೆ ಸಂಬಳದಲ್ಲಿ ಅವರ ಜೀವನ ನಡೆಸಲು ಎಷ್ಟು ಕಷ್ಟವಿದೆ ಮತ್ತು ಮಂಗಳಾರತಿ ತಟ್ಟೆಗೆ ಬೀಳುವ ಹಣವು ಅವರಿಗೇ ಸಲ್ಲಬೇಕು ಎಂದು ವಾದಿಸುವವರಲ್ಲಿ ನಾನು ಒಬ್ಬ. ಏಕೆಂದರೆ ಮೊದಲೆಲ್ಲಾ ದೇವಸ್ಥಾನದ ಹುಂಡಿಗಳಲ್ಲಿ ಹಾಕುತ್ತಿದ್ದ ಹಣವನ್ನು ಮುಜರಾಹಿ ಇಲಾಖೆಯವರ ಏ.ಸಿ ರೂಮು, ಕ್ಯಾಬಿನ್ನು, ಅವರ ಸಂಬಳ, ಅವರು ಓಡಾಡುವ ಗೂಟದ ಕಾರು ಇತರ ಸವಲತ್ತುಗಳಿಗೆ ಅರ್ಧಕ್ಕಿಂತ ಹೆಚ್ಚು ಖರ್ಚಾಗುತ್ತೆಯೆಂದು ತಿಳಿದ ಮೇಲೆ ನಾನು ಮತ್ತು ನನ್ನ ಶ್ರೀಮತಿ ಹುಂಡಿಗೆ ಹಣವನ್ನು ಹಾಕುವುದು ಬಿಟ್ಟಿದ್ದೇವೆ.  ವಿಷಯಾಂತರವಾಗುವುದು ಬೇಡ, ಮಂಗಳಾರತಿ ತಟ್ಟೆ ಬಿದ್ದ ಚಿಲ್ಲರೆ ನಾಣ್ಯಗಳನ್ನು ಮರುದಿನ ಆ ಪೂಜಾರಿಗಳು ಎಣಿಸಿಡುತ್ತಾರೆ. ಅವರು ಅದನ್ನು ಎಷ್ಟು ಅಂತ ಬಳಸಲು ಸಾಧ್ಯ? ಒಂದು ಎರಡು ದಿನಗಳ ನಂತರ ನೀವು ಐನೂರು, ಎರಡು ಸಾವಿರ ನೋಟುಗಳನ್ನು ಕೊಟ್ಟು ನಿಮಗೆ ಬೇಕಾದ ಚಿಲ್ಲರೆ ನಾಣ್ಯಗಳನ್ನು ಕೇಳಿದರೆ ಅವರು ಖುಷಿಯಿಂದ ಕೊಡುತ್ತಾರೆ. ನೀವು ಹಾಗೆ ಒಮ್ಮೆ  ಒಂದು ಸಾವಿರ ರೂಪಾಯಿಗಳಷ್ಟು ನಾಣ್ಯಗಳನ್ನು ಅವರಿಂದ ತಂದಿಟ್ಟುಕೊಂಡರೆ ನಿಮ್ಮ ನಿತ್ಯದ ಹಾಲು, ತರಕಾರಿ, ದಿನಸಿ, ಬಸ್ಸು, ಆಟೋ, ಹೀಗೆ ಎಲ್ಲದಕ್ಕೂ ದಾರಾಳವಾಗಿ ಬಳಸಿದರೂ ಎರಡು ತಿಂಗಳಿಗಿಂತ ಹೆಚ್ಚು ಬರುತ್ತದೆ. ಅದು ಮುಗಿಯುವ ಹೊತ್ತಿಗೆ ಮತ್ತೊಂದು ಸಂಕಷ್ಟಿ ಅಥವ ಹಬ್ಬದ ಮರುದಿನ ಹೋಗಿ ಕೇಳಿ ತಂದು ಇಟ್ಟುಕೊಂಡರಾಯ್ತು.  ಹೀಗೆ ನಾನು ಕಳೆದ ಹತ್ತು ವರ್ಷಗಳಿಂದ ಮಾಡುತ್ತಿರುವುದರಿಂದ ನನಗೆ ಅವತ್ತಿನಿಂದ ಇವತ್ತಿನವರೆಗೆ ಚಿಲ್ಲರೆ ಸಮಸ್ಯೆ ಬಂದಿಲ್ಲ. ಇದೇ ಚಿಲ್ಲರೆ ನಾಣ್ಯಗಳನ್ನು ನಾನು ದಿನಪತ್ರಿಕೆ ವಸೂಲಿಗೆ ಹೋದಾಗಲೂ ನನ್ನ ಗ್ರಾಹಕರಿಗೆ ಧಾರಾಳವಾಗಿ ಕೊಡುವುದರಿಂದ ಅವರ ಮುಖದಲ್ಲಿ ಒಂದು ಮುಗುಳ್ನಗೆ ನನಗೆ ಬೋನಸ್ ಆಗಿ ಸಿಗುತ್ತದೆ. ಮತ್ತೆ ಇದಲ್ಲದೆ ನನ್ನ ದಿನಪತ್ರಿಕೆ ವಿತರಣೆಯಲ್ಲಿ ಚಿಲ್ಲರೆ ನೋಟುಗಳ ಅವಶ್ಯಕತೆಯಿರುವುದರಿಂದ ಹತ್ತು, ಇಪ್ಪತ್ತು, ಐವತ್ತರ ನೋಟುಗಳನ್ನು ಬ್ಯಾಂಕಿನಿಂದ ತಂದಿಟ್ಟುಕೊಂಡಿರುತ್ತೇನೆ. ಅದೇ ನೋಟುಗಳು ನಿತ್ಯಬಳಕೆಯಲ್ಲಿ ಚಲಾವಣೆಯಾಗುವುದರಿಂದ ನನಗೆ ಚಿಲ್ಲರೆ ನೋಟು ಮತ್ತು ಚಿಲ್ಲರೆ ನಾಣ್ಯಗಳ ಸಮಸ್ಯೆ ಕಳೆದ ಹತ್ತು ವರ್ಷಗಳಿಂದ ಎದುರಾಗಿಲ್ಲ. ನಾನು ಕೊಟ್ಟ ಚಿಲ್ಲರೆ ನಾಣ್ಯಗಳಿಂದಾಗಿ ಇವತ್ತು ಬಸ್ ಹತ್ತಿದ್ದ ನಿರ್ವಾಹಕ ಖುಷಿಯಿಂದ ನಕ್ಕ ಕಾರಣಾ ನಿಮಗೀಗ ಗೊತ್ತಾಗಿರಬೇಕು. ಇಷ್ಟನ್ನು ಮಾಡುವುದಕ್ಕೆ ನಾನೇನು ಮಾಸ್ಟರ್ ಪ್ಲಾನ್ ಏನು ಮಾಡಿರಲಿಲ್ಲ. ಕೇವಲ ಒಂದಷ್ಟು ಮುಂದಾಲೋಚನೆ ಮತ್ತು ಅದನ್ನು ಕಾರ್ಯಗತ ಮಾಡುವ ಇಚ್ಛಾಶಕ್ತಿಯನ್ನು ನನ್ನೊಳಗೆ ರೂಪಿಸಿಕೊಂಡಿದ್ದು.  ಇದು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಇದರಿಂದಾಗಿ ನಮ್ಮ ನಗರದ ರಾಜ್ಯದ ಸಾರ್ವಜನಿಕರು ನಿತ್ಯ ಬದುಕಿನ ಚಿಲ್ಲರೇ ಸಮಸ್ಯೆಯಿಂದಲೇ ಪಾರಾಗಬಹುದು. ಹಾಲಿನವನು ನಗುತ್ತಾನೆ, ತರಕಾರಿ ದಿನಸಿ ಅಂಗಡಿಯವರು ಪ್ರೀತಿಯಿಂದಲೇ ನಿಮ್ಮೊಂದಿಗೆ ವ್ಯವಹರಿಸುತ್ತಾರೆ. ಏಕೆಂದರೆ ಅವರು ಚಿಲ್ಲರೆ ಹುಡುಕುವ ಕೆಲಸವನ್ನು ನೀವು ಕಡಿಮೆ ಮಾಡಿದ್ದೀರಲ್ಲ ನೀವು ಅದಕ್ಕೆ. ಆ ಕ್ಷಣಗಳ ಮಟ್ಟಿಗೆ ಬದುಕು ಸುಂದರವಾಗುತ್ತದೆ. ಇದನ್ನು ತನ್ನಿಚ್ಚೆಯಿಂದ ಮಾಡಬೇಕಷ್ಟೆ. ಇದೆಲ್ಲವೂ ಸಾಧ್ಯವಾ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡುವುದು ಖಚಿತ. ನಾನೊಬ್ಬ ಸಾಮಾನ್ಯ ಛಾಯಾಗ್ರಾಹಕ ಮತ್ತು ದಿನಪತ್ರಿಕೆ ವಿತರಕ ನನಗೆ ಇವೆಲ್ಲವೂ ಸಾಧ್ಯವಾಗಿದೆ ಮತ್ತು ಈ ವಿಚಾರಗಳಲ್ಲಿ ನನ್ನ ಜೀವನದ ಖುಷಿಯನ್ನು ಹೆಚ್ಚಿಸಿಕೊಂಡಿದ್ದೇನೆ ಅಂದ ಮೇಲೆ ನಿಮಗೂ ಇದು ಸುಲಭ ಸಾಧ್ಯ. ಸರ್ಕಾರದ ಪ್ರಕಾರ ಚಲಾವಣೆಯಲ್ಲಿರುವ ಹತ್ತು ರೂಪಾಯಿ ನಾಣ್ಯವನ್ನೇ ಚಲಾವಣೆಯಾಗದಂತೆ ಮಾಡಿದ್ದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಸ್ವ ಇಚ್ಛಾಶಕ್ತಿಯಿಂದಲೇ. ಇದು ಹೀಗೆ ಸುಲಭವಾಗಿ ಆಗಿರುವಾಗ, ಚಿಲ್ಲರೆ ಸಮಸ್ಯೆ, ಕಾಫಿ ಟೀ ಲೋಟವನ್ನು ಸರಿಯಾಗಿ ಕಸದ ಬುಟ್ಟಿಗೆ ಹಾಕುವುದು, ಮನೆಯ ಕಸವನ್ನು ರಸ್ತೆಯಲ್ಲಿ ಬಿಸಾಡುವುದಿಲ್ಲವೆಂದು ನಿರ್ಧರಿಸುವುದು, ಮದುವೆ ಕಾರ್ಯಕ್ರಮಗಳಲ್ಲಿ ಊಟವನ್ನು ಎಲೆಯಲ್ಲಿ ಬಿಟ್ಟು ವೇಸ್ಟ್ ಮಾಡದಂತೆ ನೋಡಿಕೊಳ್ಳುವುದು ಈ ಮೂಲಕ ಬದುಕನ್ನು ಮತ್ತಷ್ಟು ಸುಂದರಗೊಳಿಸಿಕೊಳ್ಳುವುದು ಸುಲಭವಿದೆ.
ಯಾಕೋ ಇವೆಲ್ಲವನ್ನು ಹೇಳಬೇಕೆನಿಸಿತು. ಹೇಳಿದ್ದೇನೆ.
ಶಿವು.ಕೆ

Thursday, April 9, 2015

ನಮ್ಮಯ ಚಿಟ್ಟೆ ಬಿಟ್ಟೇ ಬಿಟ್ಟೆ!

 ಈ ಸಲದ ಕನ್ನಡಪ್ರಭ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಫೋಟೊಗ್ರಫಿ ಲೇಖನ.


ಈ ಸಲ ಶಿವರಾತ್ರಿ ಮುಗಿದ ಕೂಡಲೇ ಚಳಿಚಳಿ ಮಾಯವಾಗಿ ಬಿಸಿಲಿನ ಝಳ ಹೆಚ್ಚಾಗಿತ್ತು. ಈ ಬಿಸಿಯನ್ನೇ ತಡೆಯಲಾಗದೇ ರಾತ್ರಿ ನಿದ್ರೆ ಬರುತ್ತಿಲ್ಲ ಇನ್ನೂ ಮಾರ್ಚಿ ಏಪ್ರಿಲ್ ಮೇ ತಿಂಗಳ ಬೇಸಿಗೆ ಬಿಸಿ ಹೇಗಿರಬಹುದೆಂದು ಊಹಿಸಿ ದಿಗಿಲುಪಟ್ಟುಕೊಳ್ಳುತ್ತಿರುವಾಗಲೇ ಅನಿರೀಕ್ಷಿತವಾಗಿ ಬೆಂಗಳೂರು ಸುತ್ತಮುತ್ತ ಎರಡು ದಿನ ಜೋರು ಮಳೆಯಾಗಿ ವಾತಾವರಣ ತಂಪಾಗಿತ್ತು. ಅಪರೂಪಕ್ಕೆ ಇಂಥ ಮಳೆಯಾದ ಮರುದಿನ ನಮ್ಮ ಕ್ಯಾಮೆರ, ಟ್ರೈಪಾಡ್,ಮ್ಯಾಕ್ರೋಲೆನ್ಸುಗಳು ಹೊರಬರುತ್ತವೆ. ಏಕೆಂದರೆ ವಾತಾವರಣದ ಬಿಸಿಯೆಲ್ಲಾ ತಣ್ಣಗಾಗಿ ನೆಲದ ಮಣ್ಣೆಲ್ಲಾ ಒದ್ದೆಯಾಗಿ ಅದರೊಳಗಿರುವ ಲಾರ್ವಗಳು, ಮೊಟ್ಟೆಗಳು, ಪ್ಯೂಪಗಳು, ಮಿಡತೆಗಳು, ಡ್ರ್ಯಾಗನ್ ಪ್ಲೈಗಳು, ನಾನಾ ವಿಧದ ಹುಳುಗಳು, ಕೀಟಗಳು, ಎಲ್ಲೆಲ್ಲೋ ಮರೆಯಾಗಿದ್ದ ದುಂಬಿಗಳು, ಪತಂಗಗಳು, ಚಿಟ್ಟೆಗಳು ಒಂದೆರಡು ದಿನದ ಇಂಥ ಜೋರು ಮಳೆಯ ನಂತರ ಅವುಗಳಿಗೆ ಸಿರಿ ಬಂದಂತೆ ಲವಲವಿಕೆಯಿಂದ ಹಾರಾಡುತ್ತಾ ಸಂಭ್ರಮಿಸುತ್ತವೆಯೆನ್ನುವುದು ನಮ್ಮ ಲೆಕ್ಕಾಚಾರ. ಹೀಗೆ ಅಂದುಕೊಂಡು ಕ್ಯಾಮೆರ ಬ್ಯಾಗ್ ಹೊತ್ತುಕೊಂಡು ಎಂದಿನಂತೆ ನಮ್ಮ ಹಳೆಯ ಸ್ಥಳ ಹೆಸರಘಟ್ಟ ಕೆರೆಯ ಕಡೆ ಹೊರಟೆವು.


    ದಾರಿಯುದ್ದಕ್ಕೂ ಒಂದಕ್ಕಿಂತ ಒಂದು ವೈವಿಧ್ಯಮಯವೆನಿಸುವಂತ ಮನೆಗಳು, ಅಪಾರ್ಟ್‍ಮೆಂಟುಗಳು, ಅವುಗಳ ಅಕ್ಕಪಕ್ಕದಲ್ಲಿಯೇ ಸಿಮೆಂಟು ಮತ್ತು ಟಾರ್ ರಸ್ತೆಗಳೇ ಕಾಣುತ್ತಿದ್ದವು. ಅಯ್ಯೋ ಇದ್ಯಾಕೆ ಹೀಗೆ ಆಯ್ತು, ಹತ್ತು ವರ್ಷದ ಹಿಂದೆ ನಾವು ಚಿಟ್ಟೆ ಮತ್ತು ಹುಳುಗಳ ಫೋಟೊಗ್ರಫಿ ಮಾಡಲು ಇಲ್ಲಿಗೆ ಬರುತ್ತಿದ್ದಾಗ ದಾರಿಯುದ್ದಕ್ಕೂ ಒಂದು ಮನೆಯೂ ಕಾಣುತ್ತಿರಲಿಲ್ಲ. ಯಾವ ರೀತಿಯ ರಸ್ತೆಗಳು ಕಾಣುತ್ತಿರಲಿಲ್ಲ. ಕೇವಲ ಒಂದು ಪುಟ್ಟ ಮಣ್ಣಿನ ರಸ್ತೆ, ಅದರ ಸುತ್ತ ಮುತ್ತ ಹೊಲ ಗದ್ದೆಗಳು, ನಡುವೆ ದೊಡ್ಡ ದೊಡ್ಡ ಮರಗಳು, ತೋಟಗಳು, ಅವುಗಳ ಸುತ್ತ ಬೇಲಿ...ಹೀಗೆ ಎತ್ತ ನೋಡಿದರೂ ಕೂಡ ಹಸಿರು ವಾತಾವರಣವೇ ಕಾಣುತ್ತಿತ್ತು. ಪೀಣ್ಯದಿಂದ ಬಲಕ್ಕೆ ಹೆಸರುಘಟ್ಟ ರಸ್ತೆಗೆ ತಿರುಗಿ ಮೂರು ಕಿಲೋಮೀಟರ್ ದಾಟುತ್ತಿದ್ದಂತೆ ರೈಲ್ವೇ ಗೇಟ್ ಬರುತ್ತಿತ್ತು. ಅದರ ಸುತ್ತ ಮುತ್ತ ಒಂದು ಕಿಲೋಮೀಟರ‍ಿಗೂ ಹೆಚ್ಚು ಜಾಗದಲ್ಲಿ ಕೆರೆ ಕಟ್ಟೆಯಂತ ಜೌಗುಪ್ರದೇಶವಿದ್ದು ಅಲ್ಲೆಲ್ಲಾ ನಾವು ಪ್ರತಿದಿನವೂ ಹೋಗಿ ಚಿಟ್ಟೆಗಳು ಮತ್ತು ಇನ್ನಿತರ ಕೀಟಗಳ ಫೋಟೊಗ್ರಫಿಯನ್ನು ಮಾಡುತ್ತಿದ್ದೆವು.

ನಾನು ಅಲ್ಲಿಯೇ ಕೇವಲ ಆರುತಿಂಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಧದ ಚಿಟ್ಟೆಗಳು, ದುಂಬಿಗಳು, ಪತಂಗಗಳ ಫೋಟೊಗ್ರಫಿಯನ್ನು ಮಾಡಿದ್ದೆ.  ಇನ್ನೂ ಸ್ವಲ್ಪ ಹಿಂದಕ್ಕೆ ಇಪ್ಪತ್ತೈದು ವರ್ಷಗಳ ಹಿಂದೆ ನಾನು ಹುಟ್ಟಿ ಬೆಳೆದ ಏರಿಯದಲ್ಲಿ ಇದ್ದಿದ್ದು ಒಂದೇ ಟಾರ್ ರಸ್ತೆ. ಅದರ ಸುತ್ತ ಮುತ್ತ ಹುಲ್ಲು ಪೊದೆ, ಗಿಡ ಗಂಟಿಗಳಿದ್ದು ಮುಳ್ಳು ಚುಚ್ಚುತ್ತವೆಂದು ನಮ್ಮನ್ನು ಅಲ್ಲಿಗೆ ಹೋಗಲು ಬಿಡುತ್ತಿರಲಿಲ್ಲ. ಮೂರು ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗಲೇ ನಾವೆಲ್ಲಾ ಗೋಲಿ, ಸೋಡ ಡಬ್ಬಿ, ಬುಗರಿ ಆಟವನ್ನೆಲ್ಲಾ ಇದೇ ಮಣ್ಣಿನ ನೆಲದಲ್ಲಿ ಆಡಿದ್ದೆವು. ಮತ್ತೊಂದು ಬುಗುರಿಗೆ ಗುನ್ನ ಹೊಡೆಯಲು ಬೀಸಿದ್ದ ಬುಗರಿಯ ಚೂಪು ಮೊಳೆಗಳು ಮಾಡಿದ ತೂತುಗಳಲ್ಲಿಯೇ ಅದೆಷ್ಟು ಇರುವೆಗಳು ಗೂಡು ಕಟ್ಟಿಕೊಂಡಿದ್ದವೋ..ಗುರಿಯಿಟ್ಟು ಗೋಲಿ ಹೊಡೆಯುವಾಗ ಇದೇ ಮಣ್ಣಿನ ಸಂದಿಯಿಂದ ಹೊರಬಂದ ಕೆಂಪಿರುವೆಗಳು ನಮ್ಮ ಕಾಲುಗಳನ್ನು ಕಚ್ಚಿ ಗುರಿಯನ್ನು ತಪ್ಪಿಸಿರಲಿಲ್ಲವೇ!. ಒಂದು  ಇರುವೆ ಕಾಲು ಕಚ್ಚಿದ್ದಕ್ಕೆ ಸಿಟ್ಟಿನಿಂದ ಸಾಲಿನಲ್ಲಿ ಸಾಗುವ ಎಲ್ಲಾ ಇರುವೆಗಳನ್ನು ಹೊಸಕಿ ಸಾಯಿಸಿದ್ದೆವಲ್ಲಾ! ಆಗ ನಮಗೆಲ್ಲಾ ಈಗಿನಂತೆ ಫೋಟೊಗ್ರಫಿ ತಿಳುವಳಿಕೆ ಇದ್ದಿದ್ದರೇ ಹಾಗೆಲ್ಲ ಕೆಂಪಿರುವೆ, ಕಪ್ಪಿರುವೆ, ಕಡುನೀಲಿ ಬಣ್ಣದ ಗೊದ್ದಗಳು, ಕಡು ಹಸಿರಿನ ದುಂಬಿಗಳನ್ನೆಲ್ಲಾ ಸಾಯಿಸದೇ ಅವುಗಳನ್ನು ಫೋಟೊಗ್ರಫಿ ಮಾಡುತ್ತಾ ಅವುಗಳನ್ನು ಉಳಿಸಿಕೊಂಡು ಮತ್ತಷ್ಟು ಬೆಳಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಿದೆವೇನೋ. ಹಾಗೆ ನೋಡಿದರೆ ಮೊದಲಿಗೆ ಇಂಥ ಸೂಕ್ಷ್ಮ ಜೀವಿಗಳನ್ನು ಫೋಟೊಗ್ರಫಿ ಮಾಡುವುದು ನಿಜಕ್ಕೂ ಒಬ್ಬ ಛಾಯಾಗ್ರಾಹಕನಿಗೆ ಸವಾಲೇ ಸರಿ. ಬಲು ಕಷ್ಟದ ಇಂಥ ಪುಟ್ಟ ಪುಟ್ಟ ಸೂಕ್ಷ್ಮ ಜೀವಿಗಳ ಚಿತ್ರ ವಿಚಿತ್ರ ಆಕಾರಗಳು, ನಡುವಳಿಕೆಗಳು, ಇತ್ಯಾದಿಗಳ ಬದುಕನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವುಗಳನ್ನು ಫೋಟೊಗ್ರಫಿ ಮಾಡುವಾಗ ಮನಸ್ಸಿಗೆ ಸಿಗುವ ಆನಂದವನ್ನು ಇಲ್ಲಿ ವರ್ಣಿಸಲಾಗದು. ಹಾಗೆ ಇಂಥ ಚಿಟ್ಟೆಗಳು, ದುಂಬಿಗಳು, ಮಿಡತೆಗಳು, ಇನ್ನಿತರ ಸಾವಿರಾರು ಕೀಟಗಳು ನಮ್ಮ ಕಾಲ ಕೆಳಗಿನ ಒದ್ದೆ ನೆಲದೊಳಗೆ, ಗಿಡಗಳ ಎಲೆಗಳ ಕೆಳಗೆ, ಎಲೆಗಳನ್ನು ಸುರಳಿ ಸುತ್ತಿ ಹೊಲೆದು ಅದರೊಳಗೆ ಗೂಡುಕಟ್ಟಿ, ಮರದ ಬಳ್ಳಿ, ಕಾಂಡದೊಳಗೆ ಅದೇ ಬಣ್ಣದಲ್ಲಿ ಗೂಡುಕಟ್ಟಿ, ಭತ್ತದ ಹುಲ್ಲಿನ ಮೇಲೆ ಮೊಟ್ಟೆಯಿಟ್ಟು, ಕೆರೆ ಕಟ್ಟೆಗಳಲ್ಲಿನ ನೀರಿನ ಮೇಲೆ ಸಮ್ಮಿಲನವಾಗಿ ಅದರ ಮೇಲೆ ಮೊಟ್ಟೆಗಳನ್ನು ಇಟ್ಟು, ಕೆಲವು ನೀರೊಳಗೆ ಮೊಟ್ಟೆಗಳನ್ನಿಟ್ಟು, ಹೀಗೆ ಸಾವಿರಾರು ರೀತಿಯಲ್ಲಿ ಹೊರ ಪ್ರಪಂಚಕ್ಕೆ ಹುಟ್ಟಿಬರುತ್ತವೆ.

ಇಂತಹ ವೈವಿಧ್ಯಮಯವಾದ ಪ್ರಕ್ರಿಯೆಯನ್ನು ಬರಿ ಕಣ್ಣಿನಿಂದ ನೋಡಲು ಸಾಧ್ಯವಾಗದಿದ್ದರೂ ಓದಿ ತಿಳಿದುಕೊಳ್ಳುವ ಮೂಲಕ, ಅಥವ್ ಅವುಗಳನ್ನು ಫೋಟೊಗ್ರಫಿ ಮಾಡುವ ಮೂಲಕ ಅಂಥ ಅಧ್ಬುತಗಳನ್ನು ನೋಡಿ ಆನಂದಿಸಬಹುದು ಮತ್ತು ತನ್ಮಯತೆಯಿಂದ ಮೈಮರೆಯಬಹುದು. ಚಿಟ್ಟೆಗಳು ಮತ್ತು ದುಂಬಿಗಳು ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಹೀರುವುದರಿಂದ ಅವುಗಳಲ್ಲಿ ಪರಾಗಸ್ಪರ್ಶವಾಗಿ ಕೋಟ್ಯಾಂತರ ಹೂವುಗಳು ಅರಳಿ ಪ್ರಕೃತಿಗೆ ಹೊಸ ಬಣ್ಣವನ್ನು ಕಟ್ಟಿಕೊಡುತ್ತವೆ. ನಮಗೆಲ್ಲಾ ಬಣ್ಣ ಬಣ್ಣದ ಹೂಗಳು ಸಿಗುತ್ತವೆ. ಕೆಲವು ಹುಳುಗಳು ಮಣ್ಣನ್ನೇ ಕೊರೆದು ಕೊರೆದು ಮೆದು ಮಾಡುವುದರಿಂದ ನಮ್ಮ ರೈತನಿಗೆ ಉಪಯೋಗವಾಗುತ್ತದೆ. ಇಂಥ ಕೀಟಗಳ ಸಂಖ್ಯೆ ಹೆಚ್ಚಾಗುವುದರಿಂದ ಅವುಗಳನ್ನು ತಿನ್ನಲು ನೂರಾರು ಹಕ್ಕಿಗಳು ಬರುತ್ತವೆ. ಹೀಗೆ ಬರುವ ತರಹೇವಾರಿ ಹಕ್ಕಿಗಳಿಗೆ ಹೊಟ್ಟೆ ತುಂಬಾ ಊಟ ಸಿಗುವುದರಿಂದ ಮತ್ತು ವಾತಾವರಣ ಹಸಿರಾಗುವುದರಿಂದ  ಗಂಡು ಹೆಣ್ಣು ಹಕ್ಕಿಗಳಿಗೆ ಆ ಸ್ಥಳಗಳೇ ಊಟಿ ಕೊಡೈಕನಲ್, ಮುನ್ನಾರ್, ಸಿಮ್ಲಾಗಳಾಗಿ ರೊಮ್ಯಾನ್ಸ್ ಮಾಡುತ್ತಾ, ಕಾಲ ಕಳೆಯುತ್ತವೆ. ಕೆಲವೇ ದಿನಗಳಲ್ಲಿ ಅಲ್ಲಿಯೇ ಗೂಡು ಕಟ್ಟುತ್ತವೆ, ಸಂಸಾರ ಮಾಡುತ್ತವೆ, ಮೊಟ್ಟೆಯಿಡುತ್ತವೆ, ಮರಿಗಳಾಗುತ್ತವೆ, ಅವುಗಳನ್ನು ಬೆಳೆಸಲು ಮತ್ತದೇ ಊಟ ತಿಂಡಿಗೆ ಇವೇ ಹುಳುಗಳು, ಚಿಟ್ಟೆಗಳು, ದುಂಬಿಗಳು, ಮಿಡತೆಗಳು.... ಹೀಗೆ ಪಕ್ಷಿಗಳ ಸಂತತಿ ಹೆಚ್ಚಾಗುತ್ತಿದ್ದಂತೆ ಮಣ್ಣಿನ ಫಲವತ್ತತೆ ಹೆಚ್ಚಾಗಿ ಗಿಡಮರದ ಎಲೆಗಳು, ಹುಲ್ಲುಗಳು ಪೊಗದಸ್ತಾಗಿ ಬೆಳೆಯುತ್ತವೆ. ಇದು ಎಲ್ಲಾ ನಗರಗಳಾಚೆಗಿನ ಕತೆಗಳಾದರೆ, ಹೀಗೆ ಮಳೆ ಬಂದಾಗ ಕಾಡುಗಳಾದ ಬಂಡಿಪುರ, ನಾಗರಹೊಳೆ, ದಾಂಡೇಲಿ, ಭದ್ರಾ,...ಎಲ್ಲಾ ಕಡೆ ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಕೀಟಗಳು ಹುಳುಗಳು, ಉತ್ಪತಿಯಾಗಿ ಅವುಗಳನ್ನು ತಿನ್ನಲು ಹಕ್ಕಿಗಳು, ಚೆನ್ನಾಗಿ ಬೆಳೆದ  ಹಸಿರು ಹುಲ್ಲು ಮತ್ತು ಎಲೆಗಳನ್ನು ತಿನ್ನಲು ಸಾರಂಗಗಳು, ಕಡವೆ, ಕಾಡೆಮ್ಮೆಗಳು, ನರಿಗಳು, ಲಂಗೂರ್ ಜಾತಿಯ ಕೋತಿಗಳು, ಅಳಿಲುಗಳು,ಜಿಂಕೆಗಳು, ಪಕ್ಷಿಗಳನ್ನು ತಿನ್ನಲು ಮುಂಗುಸಿ, ಹಾವು, ಹೀಗೆ ಅನೇಕ ಕಾಡುಪ್ರಾಣಿಗಳು ಹುಡುಕಿಕೊಂಡು ಬರುತ್ತವೆ. ಅವುಗಳ ಸಂತತಿಯೂ ಕೂಡ ಚೆನ್ನಾಗಿ ಬೆಳೆಯುತ್ತದೆ. ಅವುಗಳ ಸಂತತಿ ಹೆಚ್ಚಾದಾಗ ಸಹಜವಾಗಿಯೇ ಅವುಗಳನ್ನು ಅರಸುತ್ತಾ,ಹುಲಿ ಸಿಂಹ, ಚಿರತೆ, ನರಿ, ತೋಳಗಳು ಬರುತ್ತವೆ. ಅವು ಚೆನ್ನಾಗಿ ತಿಂದುಂಡು ಬೆಳೆಯುತ್ತವೆ. ಇದೇ ರೀತಿಯಲ್ಲಿ ವಾತಾವರಣದಲ್ಲಿ ಹಸಿರು ಹೆಚ್ಚಾದರೆ ಹಾಳಾಗಿರುವ ಓಜೋನ್ ಪದರ ನಿದಾನವಾಗಿ ಮುಚ್ಚಿಕೊಳ್ಳತೊಡಗುತ್ತದೆ. ಅದರಿಂದ ನಮಗೆ ಇನ್ನಷ್ಟು ಮತ್ತು ಮತ್ತಷ್ಟು ಪರಿಶುದ್ಧವಾದ ಆಮ್ಲಜನಕ ಸಿಗುತ್ತದೆ. ಅದರಿಂದ ನಮ್ಮ ಆರೋಗ್ಯವೂ ಸುಧಾರಿಸುತ್ತದೆ.


   ಎಲ್ಲಿಂದ ಎಲ್ಲಿಯ ಕೊಂಡಿ!. ಚಿಟ್ಟೆಗಳು ಮತ್ತು ಇನ್ನಿತರ ಪುಟ್ಟ ಪುಟ್ಟ ಕೀಟಗಳು ಚೆನ್ನಾಗಿ ಉತ್ಪತಿಯಾಗುವುದರಿಂದ ಹುಲಿ, ಸಿಂಹ, ಇನ್ನಿತರ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆಯೆನ್ನುವುದು ಯಾವ ವಿಜ್ಞಾನ ಸೂತ್ರವೂ ಅಲ್ಲ. ಅದು ಪ್ರಕೃತಿಯ ಸಹಜ ಪ್ರಕ್ರಿಯೆ. ಅಂದ ಮೇಲೆ ನಾವೆಲ್ಲಾ ನಮ್ಮ ಪುಟ್ಟ ಬದುಕಿನ ಸ್ವಾರ್ಥಕ್ಕಾಗಿ ಅವುಗಳನ್ನು ಸಾಯಿಸುವುದು ಮತ್ತು ಇಲ್ಲದಂತೆ ಮಾಡಿ ಕ್ಷುಲ್ಲುಕ ಸಂತೋಷ ಪಡುವುದು ಯಾವ ಪುರುಷಾರ್ಥಕ್ಕಾಗಿ?  ಮನೆಯಲ್ಲಿ, ಹೊರಗೆ ಸರಿದಾಡುವ ಇರುವೆಗಳು, ಹುಳುಗಳು, ಕೀಟಗಳು, ಚಿಟ್ಟೆಗಳು, ದುಂಬಿಗಳು, ಮಿಡತೆಗಳು,..ಹೀಗೆ ಎಲ್ಲಾ ವಿಧದ ಸೂಕ್ಷ್ಮ ಜೀವಿಗಳನ್ನು ಕಂಡ ಕೂಡಲೇ ಸಾಯಿಸುವ ಬದಲು ಅವುಗಳ ಪಾಡಿಗೆ ಬಿಟ್ಟುಬಿಡೋದು ಒಳ್ಳೆಯದು ಅಲ್ವಾ..ಸಾಧ್ಯವಾದರೆ ನೋಡಿ ಆನಂದಿಸಬಹುದು. ಸಮಯವಿದ್ದರೆ ಮತ್ತು ನಿಮ್ಮಲ್ಲಿ ಒಳ್ಳೆಯ ಕ್ಯಾಮೆರ ಮತ್ತು ಲೆನ್ಸುಗಳಿದ್ದರೆ ಅವುಗಳ ಫೋಟೊಗಳನ್ನು ತೆಗೆಯುತ್ತಾ ಖುಷಿಪಡಬಹುದು.

 ಈಗ ನಿಮಗೆ ಅನ್ನಿಸುತ್ತಿರಬಹುದು, ನಾವು ನಮ್ಮ ಸುತ್ತ ಮುತ್ತಲಿನ ಚಿಟ್ಟೆಗಳು, ಹುಳುಗಳು, ಇರುವೆಗಳು, ದುಂಬಿಗಳು, ಮಿಡತೆಗಳು ಮತ್ತು ಕೀಟಗಳನ್ನು ಸಾಯಿಸದೇ ಅವುಗಳ ಸಂತತಿಯನ್ನು ಹೆಚ್ಚಿಸುವುದರಿಂದ ನಮಗೆ ಬೆಲೆ ಕಟ್ಟಲಾಗದಷ್ಟು ಉಪಯೋಗವಿದೆಯಲ್ಲವೆ, ಈ ಮೂಲಕ ಪರಿಸರದ ಫೋಟೊಗ್ರಫಿಯನ್ನು ಸಾಧ್ಯವಾದರೆ  ಮಾಡುತ್ತಾ, ಇಲ್ಲವಾದಲ್ಲಿ ಈ ರೀತಿ ಎಲ್ಲವನ್ನು ಉಳಿಸಿ ಬೆಳೆಸುವುದರ ಮೂಲಕ ನಾವು ಪರಿಸರ ಕಾಳಜಿಯನ್ನು ತೋರಬಹುದಲ್ಲವೇ..

ನಾಳೆಯಿಂದಲೇ ಚಿಟ್ಟೆ ಇನ್ನಿತರ ಹುಳುಗಳನ್ನು ಕೊಲ್ಲಬೇಡಿ. ನಮ್ಮಂತೆ ಅವುಗಳನ್ನು ಬದುಕಲು ಬಿಡಿ.

ಚಿತ್ರಗಳು ಮತ್ತು ಲೇಖನ:

ಶಿವು. ಕೆ.
೧೧೮, ೭ನೇ ಮುಖ್ಯರಸ್ತೆ, ೫ನೇ ಅಡ್ಡ ರಸ್ತೆ,
ಲಕ್ಷ್ಮಿನಾರಾಯಣಪುರಂ, ಬೆಂಗಳೂರು ೫೬೦೦೨೧.
ಪೋನ್:೯೮೪೫೧೪೭೬೯೫.Sunday, September 21, 2014

ದಿಘ [ಪಶ್ಚಿಮ ಬಂಗಾಲ] ಬೀಚಿನಲ್ಲಿ ಕೆಂಪು ಏಡಿಗಳು

೨೦೧೪ ಜುಲೈ ೨೮ ಸಂಜೆ ಐದು ಗಂಟೆ.


ಪಶ್ಚಿಮ ಬಂಗಾಲ ರಾಜ್ಯದ ದಕ್ಷಿಣಕ್ಕಿರುವ ಮಿಡ್ನಾಪುರ ಜಿಲ್ಲೆಯ "ಧಿಘ" ಬೀಚಿನೊಳಗೆ ಕಾಲಿಟ್ಟಾಗ ಎದುರಿಗೆ ವಿಶಾಲ ಬಂಗಾಲ ಕೊಲ್ಲಿ ಸಮುದ್ರ ಶಾಂತವಾಗಿತ್ತು. ಮೇಲೆ ನೀಲಾಕಾಶವೂ ಕೂಡ ತೆಳು ಮೋಡಗಳ ಚಿತ್ತಾರದಿಂದಾಗಿ ಕಣ್ಣಿಗೆ ಮತ್ತು ಕ್ಯಾಮೆರಕ್ಕೆ ಅಪ್ಯಾಯಮಾನವೆನಿಸಿತ್ತು. ಅಲೆಗಳಿಂದ ನೆನೆದ ಮರಳ ಮೇಲೆ ನಡೆಯುತ್ತ ಬಲಕ್ಕೆ ನೋಡಿದೆ. ಮೈಲು ಉದ್ದದ ಮರಳ ಬೀಚಿನಲ್ಲಿ ರಕ್ತ ಕೆಂಪಿನ ಬಣ್ಣದ ಕಣಿಗಲೆ  ಹೂವುಗಳು! ಸೂರ್ಯನ ಹಿಂಬೆಳಕಿಗೆ ಮತ್ತಷ್ಟು ಹೊಳೆಯುತ್ತಿವೆ! ಎಡಭಾಗಕ್ಕೆ ನೋಡಿದೆ ಅಲ್ಲಿಯೂ ಕೂಡ ಕಣ್ಣಿಗೆ ಕಾಣುವಷ್ಟು ದೂರ ಅದೇ ರಕ್ತ ಕೆಂಪಿನ ಕಣಿಗಲೆ ಹೂಗಳು! ಅರೆರೆ ಇದೇನಿದು ಜನರೇ ಇರದ ಮರಳ ಬೀಚಿನಲ್ಲಿ ಹೀಗೆ ಮೈಲು ಉದ್ದಕ್ಕೂ ಕೆಂಪು ಕಣಿಗಲೆ ಹೂವುಗಳನ್ನು ತಂದು ಚೆಲ್ಲಿದವರು ಯಾರು? ಅದನ್ನೇ ಯೋಚಿಸುತ್ತಾ ನಿದಾನವಾಗಿ ಕೆಳಗೆ ನೋಡಿದರೆ ಸುಮಾರು ಐವತ್ತು ಅಡಿಯಷ್ಟು ನನ್ನ ಸುತ್ತಲು ಕಣಿಗಲೆ ಹೂವುಗಳಿಲ್ಲವಲ್ಲ! ನಾನು ಬೆಂಗಳೂರಿಂದ ಇಲ್ಲಿಗೆ ಬಂದು ನಿಂತು ಅವುಗಳನ್ನು ತುಳಿದುಹಾಕುತ್ತೇನೆಂದು ಮೊದಲೇ ಯಾರಿಗಾದರೂ ಇದು ಗೊತ್ತಿತ್ತಾ? ಅದಕ್ಕೆ ಅವರು ಇಲ್ಲಿ ಕಣಿಗಲೆ ಹೂಗಳನ್ನು ಹರಡಿಲ್ಲವೋ ಹೇಗೆ? ಇಂಥ ಅನೇಕ ಪ್ರಶ್ನೆಗಳು ಕ್ಷಣದಲ್ಲಿ ನನ್ನೊಳಗೆ ಮೂಡಿದವು. ಇರಲಿ ಬಿಡು ಅದರ ಬಗ್ಗೆ ಆಮೇಲೆ ಯೋಚಿಸಿದರಾಯ್ತು ಈಗ ಸದ್ಯ ಬೀಚಿನಲ್ಲಿ ಸ್ವಲ್ಪ ದೂರ ನಡೆಯೋಣ ಎಂದುಕೊಂಡು ಹತ್ತು ಹೆಜ್ಜೆ ಬಲಗಡೆಗೆ ನಡೆದೆನಷ್ಟೆ. ನನ್ನ ಕಣ್ಣಿಗೆ ಕಂಡ ರಕ್ತ ಕೆಂಪಿನ ಕಣಿಗಲೆ ಹೂಗಳೆಲ್ಲಾ ಮರಳೊಳಗೆ ಪುಳಕ್ ಪುಳಕ್ ಎಂದು ಕ್ಷಣಮಾತ್ರದಲ್ಲಿ ಮಾಯವಾದವು! ಇದೊಳ್ಳೆ ಕತೆಯಾಯ್ತಲ್ಲ ಎಂದು ಕೊಂಡು ಮತ್ತಷ್ಟು ದೂರ ನಡೆದೆ. ಇನ್ನಷ್ಟು ಹೂಗಳು ಹಾಗೆ ಮಾಯವಾದವು. ನನ್ನ ಕುತೂಹಲ ಹೆಚ್ಚಾಗಿ ನಡೆಯುವುದನ್ನು ನಿಲ್ಲಿಸಿ ಸುಮ್ಮನೇ ನಿದಾನವಾಗಿ ನಾನು ನಿಂತ ಜಾಗದಿಂದ ನೂರು ಅಡಿ ದೂರಕ್ಕೆ ದೃಷ್ಠಿ ಹಾಯಿಸುತ್ತ ವಾಸ್ತವಕ್ಕೆ ಬಂದು ಕಣ್ಣನ್ನು ಫೋಕಸ್ ಮಾಡುತ್ತಾ ನೋಡಿದರೆ ಅವು ಕಣಿಗಲೆ  ಹೂವುಗಳಲ್ಲ! ರಕ್ತ ಕೆಂಪು ಬಣ್ಣದ "ಕೆಂಪು ಏಡಿಗಳು". ಸ್ವಲ್ಪವೂ ಅಲುಗಾಡದೆ ಕತ್ತನ್ನು ಮಾತ್ರ ತಿರುಗಿಸಿ ಕಣ್ಣನ್ನು ಮತ್ತಷ್ಟು ಫೋಕಸ್ ಮಾಡಿ ನೋಡಿದರೆ ನೂರಾರು ಏಡಿಗಳು ಆಂಟೇನಗಳಂತಿರುವ ತಮ್ಮ ಕಣ್ಣುಗಳಿಂದ ನನ್ನನ್ನೇ ನೋಡುತ್ತಿವೆದೂರದ ಬೆಟ್ಟ ನುಣ್ಣಗಿರುವುದು ನಯವಾಗಿರುವುದು ಮತ್ತು ಸುಂದರವಾಗಿರುವುದರಿಂದ ನಾವೆಲ್ಲಾ ಯಾವಾಗಲೂ ಸಾಧ್ಯವಾದಷ್ಟು ದೂರದಲ್ಲಿರುವುದನ್ನೇ, ದೊಡ್ಡದನ್ನೆ, ವಿಶಾಲವಾಗಿರುವುದನ್ನೇ ನೋಡುತ್ತಿರುತ್ತೇವೆ. ಆದ್ರೆ ನಮ್ಮ ಕಾಲ ಕೆಳಗಿನ ಕೆಂಪು ಏಡಿಯಂತ ಸಣ್ಣ ಜೀವಿಗಳು ತಮ್ಮ ಅಕ್ಕ ಪಕ್ಕದ ಸೂಕ್ಷ್ಮತೆಯಂತ ಸಣ್ಣ ಸಣ್ಣ ವಿಚಾರಗಳನ್ನು ಗಮನಿಸುತ್ತಿರುತ್ತವೆ ! ನೋಡೋಣ ಏನಾಗಬಹುದು ಎಂದುಕೊಂಡು ನಿದಾನವಾಗಿ ನಡೆಯುತ್ತಾ ಹೋದಂತೆ ಅವುಗಳು ಒಂದೊಂದೇ ಮರಳಿನೊಳಗೆ ಮಾಯವಾಗುತ್ತಿದ್ದವುನಾನು ಎಷ್ಟು ದೂರ ನಡೆದರೂ ಇದೇ ಕ್ರಿಯೆ ನಡೆಯುತ್ತಿದ್ದುದರಿಂದ ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ಯೋಚಿಸಿದೆ. ಕೆಂಪು ಏಡಿಗಳು ಸಂಜೆಯ ಹೊತ್ತು ಹೊರಗೆ ಬಂದು ತಿಳಿಬಿಸಿಲು ಕಾಯುವ ಕಾರ್ಯಕ್ರಮವಿರಬಹುದು. ಅಥವ ದಿನವೆಲ್ಲಾ ಮರಳೊಳಗಿದ್ದು ಸಮಯದಲ್ಲಿ ಒಬ್ಬರನ್ನೊಬ್ಬರು ಬೇಟಿಯಾಗಿ ಉಬಯ ಕುಶಲೋಪರಿ, ಮಾತುಕತೆ, ಸಮಲೋಚನೆ, ಹರಟೆ, ಆಟ ಇತ್ಯಾದಿಗಳಿಗಾಗಿ ಹೊರಗೆ ಬಂದಿರಬಹುದು. ನಾನು ದಿಕ್ಕು ದೆಸೆಯಿಲ್ಲದೇ ಸುಮ್ಮನೇ ಹೀಗೆ ಮರಳ ಬೀಚಿನಲ್ಲಿ ಓಡಾಡುವುದರಿಂದ ಅವುಗಳ ಗೆಳೆತನಕ್ಕೆ ಏಕಾಂತಕ್ಕೆ ಭಂಗ ತರುತ್ತಿದ್ದೇನೆ ಅನ್ನಿಸಿ ನಿದಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡಿ ಮರಳ ಬೀಚಿನಿಂದ ಹೊರಬಂದು ಸ್ವಲ್ಪ ಹೊತ್ತು ದೂರದಿಂದ ನೋಡಿದೆ. ನಾನಂದುಕೊಂಡಿದ್ದ ರಕ್ತಕೆಂಪಿನ ಕಣಿಗಲೆ ಹೂವುಗಳು ಅಲ್ಲಲ್ಲ.., ರಕ್ತ ಕೆಂಪಿನ ಏಡಿಗಳು ನಿದಾನವಾಗಿ ಮರಳಿನಿಂದ ಬಂದು ಓಡಾಡತೊಡಗಿದವು.

೨೦೧೪ ಜುಲೈ ೨೯ರ ಮಧ್ಯಾಹ್ನ ಮೂರು ಗಂಟೆ

  ಹಾಗೆ ದೂರದಿಂದಲೇ ನೋಡಿದೆ. ಆಗಲೇ ಸಾವಿರಾರು ಕೆಂಪು ಏಡಿಗಳು ಹೊರಗೆ ಬಂದು ತಿಳಿಬಿಸಿಲು ಕಾಯಿಸುತ್ತಿವೆ ಏಡಿಗಳ ಫೋಟೊ ಮತ್ತು ಸಾಧ್ಯವಾದರೆ ವಿಡಿಯೋ ಮಾಡಲೇಬೇಕು ಅಂತ ತೀರ್ಮಾನಿಸಿಯೇ ಬಂದಿದ್ದೆ. ಮುಂಜಾನೆ ಮುಕ್ಕಾಲು ಗಂಟೆ ಸಮುದ್ರ ಕಿನಾರೆಯ ಮರಳ ಬೀಚಿನಲ್ಲಿ ವಾಕಿಂಗ್ ಮಾಡುವಾಗ ನೋಡಿದರೆ ಒಂದೇ ಒಂದು ಕೆಂಪು ಏಡಿಯೂ ಕಂಡಿರಲಿಲ್ಲ. ಬಹುಶಃ ಅವುಗಳೆಲ್ಲಾ ಸಮಯದಲ್ಲಿ ತಮ್ಮ ತಮ್ಮ ಮರಳೊಳಗಿನ ಗೂಡಿನೊಳಗೆ ಹೆಂಡತಿ, ಗಂಡ ಮಕ್ಕಳ ಜೊತೆ ಸಂಸಾರ ಮಾಡುತ್ತಿರಬಹುದು, ಮತ್ತೆ ಮಧ್ಯಾಹ್ನವೂ ಕೂಡ ಹೊರಬಂದಿರಲಿಲ್ಲಮೂರು ನಾಲ್ಕು ಗಂಟೆಯ ನಂತರ ಮಾತ್ರವೇ ಇವು ಮರಳಿನಿಂದ ಹೊರಬರುವುದು ಖಚಿತವಾಗಿತ್ತು. ಎಲ್ಲಾ ಓಕೆ ಆದ್ರೆ ಇವುಗಳನ್ನು ಹೇಗೆ ಫೋಟೊಗ್ರಫಿ ಮಾಡುವುದು? ಒಂದು ಹೆಜ್ಜೆ ಇಡುತ್ತಿದ್ದಂತೆ ಐವತ್ತು ಹೆಜ್ಜೆಗಳಷ್ಟು ದೂರದಲ್ಲಿರುವಂತವೇ ಕ್ಷಣಮಾತ್ರದಲ್ಲಿ ಮರಳೊಳಗೆ ಮಾಯವಾಗಿಬಿಡುತ್ತವೆ. ಅಂತದ್ದರಲ್ಲಿ ಇನ್ನು ಐದು ಹತ್ತು ಹೆಜ್ಜೆ ದೂರದಲ್ಲಿರುವವಂತೂ ಮೊದಲೇ ಮಾಯವಾಗಿರುತ್ತವೆ. ಒಂದುವರೆ ಎರಡು ಇಂಚು ಉದ್ದ ಅಗಲ ಗಾತ್ರದ ಕೆಂಪು ಏಡಿಗಳ ಫೋಟೊಗ್ರಫಿ ಮಾಡಬೇಕಾದರೆ ಉತ್ತಮ ಗುಣಮಟ್ಟದ ಡಿ ಎಸ್ಎಲ್ಅರ್ ಕ್ಯಾಮೆರದ ಜೊತೆಗೆ ಕಡಿಮೆಯೆಂದರೆ ೫೦೦-೬೦೦ ಎಂಎಂ ಉತ್ತಮ ಟೆಲಿ ಲೆನ್ಸ್ ಅಂತೂ ಬೇಕೇ ಬೇಕು. ನಾನಿಲ್ಲಿಗೆ ಬಂದ ಕಾರಣವೇ ಬೇರೆಯಾಗಿತ್ತು. ಬೆಂಗಳೂರಿನಿಂದ ಇಲ್ಲಿಗೆ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯ ಆಯ್ಕೆ ಸಮಿತಿಯಲ್ಲೊಬ್ಬನಾಗಿ ಬಂದಿದ್ದೆ. ನಾವೆಲ್ಲ ಉಳಿದುಕೊಂಡಿದ್ದ ರಿಸಾರ್ಟ್ ಸಮುದ್ರದ ಬೀಚಿಗೆ ಕೇವಲ ನೂರು ಅಡಿ ದೂರದಲ್ಲಿತ್ತು. ಮೂರು ದಿನವೂ ಅದರ ಜವಾಬ್ದಾರಿಯೇ ಇರುವಾಗ ಫೋಟೊಗ್ರಫಿ ಮಾಡುವುದಕ್ಕೆ ಅವಕಾಶವಿರುವುದಿಲ್ಲವೆಂದು ನನ್ನ ಡಿಎಸ್ಎಲ್ಅರ್ ಕ್ಯಾಮೆರ ಮತ್ತು ಲೆನ್ಸುಗಳನ್ನೆಲ್ಲಾ ಬೆಂಗಳೂರಿನಲ್ಲಿಯೇ ಬಿಟ್ಟುಬಂದಿದ್ದೆ. ಸದ್ಯಕ್ಕೆ ನನ್ನ ಬಳಿ ಇದ್ದಿದ್ದು ಜೇಬಿನಲ್ಲಿಟ್ಟುಕೊಳ್ಳಬಹುದಾದ ಕ್ಯಾನನ್ ಪವರ್ಷಾಟ್ ಎಸ್ಎಕ್ಸ್ ೨೪೦ ಕಂಪ್ಯಾಕ್ಟ್ ಕ್ಯಾಮೆರವಷ್ಟೆ. ಅದರ ಫೋಟೊಗ್ರಫಿ ಗುಣಮಟ್ಟ ಹೊರಾಂಗಣದಲ್ಲಿ ಉತ್ತಮವಿದ್ದರೂ ಅದರ ಟೆಲಿಲೆನ್ಸ್ ಯೋಗ್ಯತೆ ತುಂಬಾ ಹತ್ತಿರದ್ದು. ಇಲ್ಲಿ ಕಾಣುವ ಒಂದು ಕೆಂಪು ಏಡಿಯ ಫೋಟೊಗ್ರಫಿಯನ್ನು ಮಾಡಬೇಕಾದರೆ ಹೆಚ್ಚೆಂದರೆ ಹತ್ತು ಆಡಿ ಹತ್ತಿರಕ್ಕೆ ಹೋದರೆ ಮಾತ್ರ ಸಾಧ್ಯ. ಆದರೆ ಇಲ್ಲಿ ನನ್ನನ್ನು ಕಂಡ ಮರುಕ್ಷಣವೇ ೫೦ ಅಡಿ ದೂರದಲ್ಲಿರುವ ಕೆಂಪು ಏಡಿಗಳು ಮರಳೊಳಗೆ ಮಾಯವಾಗಿಬಿಡುತ್ತವಲ್ಲ ಏನು ಮಾಡುವುದು? ಸ್ವಲ್ಪ ಹೊತ್ತು ಹಾಗೆ ಯೋಚಿಸುತ್ತಿರುವಾಗ ಹೊಳೆಯಿತೊಂದು ಉಪಾಯ. ಅದೇನೆಂದರೆ ಕೆಂಪು ಏಡಿಗಳ ಗೆಳೆತನ ಸಂಪಾದಿಸುವುದು! ಮೊದಲು ಹಕ್ಕಿಗಳು, ಇರುವೆಗಳು, ಚಿಟ್ಟೆಗಳು, ಇನ್ನಿತರ ಕೀಟಗಳ ಗೆಳೆತನ ಸಂಪಾದಿಸಿಯೇ ಅವುಗಳ ಫೋಟೊಗ್ರಫಿಯನ್ನು ಸುಲಭವಾಗಿ ಮಾಡಿದ್ದೆ. ಒಂದೊಂದು ಜೀವಿಯ ಜೊತೆಗೂ ಬೇರೆ ಬೇರೆ ರೀತಿಯದೇ ಆದ ಗೆಳೆತನ ಮುಖ್ಯವಾಗುತ್ತದೆ. ಕೆಂಪು ಏಡಿಯಂತ ಜೀವಿಯ ಗೆಳೆತನವನ್ನು ಹೇಗೆ ಸಂಪಾದಿಸವುದು, ಅದಕ್ಕೆ ಯಾವ ವಿಧಾನವನ್ನು ಅನುಸರಿಸಲಿ ಎಂದು ಯೋಚಿಸುತ್ತಾ ಸಮಯ ನೋಡಿದೆ ಆಗಲೇ ಹದಿನೈದು ನಿಮಿಷಗಳು ಕಳೆದಿತ್ತು. ನಮ್ಮ ಫೋಟೊಗ್ರಫಿ ಜಡ್ಜಿಂಗ್ ಪ್ರಾರಂಭವಾಗುವುದು ನಾಲ್ಕುಗಂಟೆಗೆ. ಅಲ್ಲಿಯವರೆಗೆ ಯಾವುದಾದರೂ ವಿಧಾನದಲ್ಲಿ ಕೆಂಪು ಏಡಿಗಳ ಗೆಳೆತನವನ್ನು ಸಂಪಾದಿಸೋಣವೆಂದುಕೊಂಡು ನಿದಾನವಾಗಿ ಬೀಚಿನ ಕಡೆಗೆ ನಡೆದೆ. ಸಹಜವಾಗಿ ಎಂದಿನಂತೆ ಒಂದಾದ ನಂತರ ಒಂದು ಕೆಂಪು ಏಡಿಗಳು ತಮ್ಮ ಮರಳ ಗೂಡಿನೊಳಗೆ ಹೋಗತೊಡಗಿದವು. ಐದು ನಿಮಿಷ ನಡೆದಾಡಿ ನನಗೆ ಬೇಕಾದ ಒಂದು ಜಾಗವನ್ನು ಆಯ್ಕೆಮಾಡಿಕೊಂಡೆ. ಜಾಗ ಹೇಗಿತ್ತೆಂದರೆ ಸುಮಾರು ಹತ್ತು ಅಡಿಯಷ್ಟು ಸುತ್ತಳತೆಯಲ್ಲಿ ಎಲ್ಲೂ ಕೆಂಪು ಏಡಿಗಳ ಗೂಡು ಇರಲಿಲ್ಲ. ಜಾಗವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ನಾನು ಅಲ್ಲಿ ಕುಳಿತುಕೊಂಡರೆ ನನ್ನ ಸುತ್ತ ಕನಿಷ್ಟ ಎಂಟು ಹತ್ತು ಅಡಿ ದೂರದಲ್ಲಿರುವ ಅವು ಗೂಡಿನಿಂದ ಇಣುಕಿದಾಗ ಅಥವ ಹೊರಬಂದು ನನ್ನನ್ನು ನೋಡಿದಾಗ ನನ್ನಿಂದ ಅವುಗಳಿಗೆ ತೊಂದರೆ ಉಂಟಾದರೆ ಅವು ತಕ್ಷಣ ಮರಳೊಳಗೆ ನುಗ್ಗಿ ತಪ್ಪಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಲ್ವ! ರೀತಿ ಅವು ಯೋಚಿಸಿದಲ್ಲಿ ಅದಕ್ಕೆ ಅವಕಾಶವಿರಬೇಕು, ಆಗ ಮಾತ್ರ ಅವು ಒಮ್ಮೆ ಒಳಹೋಗಿ ಮತ್ತೆ ಹೊರಬಂದು ಇಣುಕುವುದು, ನನ್ನನ್ನು ನೋಡುವುದು, ಮತ್ತೆ ಒಳಹೋಗುವುದು ಇಂಥ ಕಣ್ಣಾಮುಚ್ಚಾಲೆ ಆಟ ಆಡಲು ಅವುಗಳಿಗೆ ಸಾಧ್ಯಇದು ಬಿಟ್ಟು ನಾನು ಅವುಗಳ ಗೂಡಿನ ಮೇಲೆ ಅಥವ ಅವುಗಳಿಂದ ಒಂದು ಎರಡು ಅಡಿಗಳ ಅಂತರದಲ್ಲಿ ಕುಳಿತರೆ ಅವು ದಿನ ಪೂರ್ತಿ ನನ್ನ ದೊಡ್ಡ ಗಾತ್ರದ ಭಯದಿಂದ ಖಂಡಿತವಾಗಿ ಹೊರಗೆ ಬರುವುದಿಲ್ಲ. ಹಾಗೇನಾದರೂ ಆದರೆ ಅವುಗಳ ಗೆಳೆತನವನ್ನು ಸಂಪಾದಿಸುವುದು ಹೇಗೆ ಮತ್ತು ಫೋಟೊಗ್ರಫಿ, ವಿಡಿಯೋ ಮಾಡುವುದು ಹೇಗೆ ಸಾಧ್ಯ? ಕಾರಣಕ್ಕಾಗಿ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಕುಳಿತುಕೊಳ್ಳುವ ಮೊದಲು ಕೆಲವು ಷರತ್ತುಗಳನ್ನು ನನಗೆ ನಾನೇ ವಿಧಿಸಿಕೊಂಡಿದ್ದೆ. ಅದೇನೆಂದರೆ ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಜೇಬಿನಲ್ಲಿರುವ ಪುಟ್ಟ ಕ್ಯಾಮೆರವನ್ನು ಹೊರತೆಗೆಯಬಾರದು. ಏಕೆಂದರೆ ನಮ್ಮಂಥ ಛಾಯಾಗ್ರಾಹಕರ ಕೈಯಲ್ಲಿ ಕ್ಯಾಮೆರವಿದ್ದರೆ ಅದು ಖಂಡಿತ ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತೆ. ನಾವು ಸುಮ್ಮನೆ ಕೂರುವುದೇ ಇಲ್ಲ. ಅಲ್ಲಿ ನೋಡುವುದು ಇಲ್ಲಿ ನೋಡುವುದು, ಅವುಗಳ ಫೋಟೊ ತೆಗೆಯುವುದು ಕ್ಯಾಮೆರ ಚೆಕ್ ಮಾಡುವುದು ಹೀಗೆ ನಾನಾ ರೀತಿಯಲ್ಲಿ ನಮ್ಮ ಕೈಕಾಲು, ದೇಹ, ಕುತ್ತಿಗೆ ಕಣ್ಣು ಇತ್ಯಾದಿಗಳು ಕ್ಯಾಮೆರ ಸಮೇತ ಚಲನೆಯಲ್ಲಿರುತ್ತವೆ. ಹೀಗೆ ಚಲನೆಯಲ್ಲಿದ್ದರೆ ಗೂಡಿನೊಳಗಿರುವ ಕೆಂಪು ಏಡಿಗಳು ಹೇಗೆ ಹೊರಬರಲು ಸಾಧ್ಯ? ಕಾರಣಕ್ಕಾಗಿ ಕ್ಯಾಮೆರವನ್ನು ಜೇಬಿನಿಂದ ಹೊರ ತೆಗೆಯುವಂತಿಲ್ಲ. ಎರಡನೆಯದು ಒಂದು ಕಡೆ ಕುಳಿತರೆ ಕಾಲು ಬೆರಳ ತುದಿಯಿಂದ ತಲೆ ಕೂದಲವರೆಗೆ ಕನಿಷ್ಟ ಪಕ್ಷ ಹತ್ತು ನಿಮಿಷ ಸ್ವಲ್ಪವೂ ಅಲುಗಾಡಬಾರದು. ಕುಳಿತುಕೊಳ್ಳುವ ಮೊದಲೇ ಯಾವ ದಿಕ್ಕಿನಲ್ಲಿರುವ ಗೂಡುಗಳನ್ನು ಗಮನಿಸಬೇಕು ಅದನ್ನು ಮೊದಲೇ ತೀರ್ಮಾನಿಸಿಕೊಂಡಿರಬೇಕು ಮತ್ತು ಅದೇ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು ಏಕೆಂದರೆ ಒಮ್ಮೆ ಕುಳಿತ ಮೇಲೆ ನಿಮ್ಮ ಕುತ್ತಿಗೆಯನ್ನು ಅತ್ತಿತ್ತ ತಿರುಗಿಸಬಾರದು ಅಲುಗಾಡಿಸಬಾರದು ಕೇವಲ ಕಣ್ಣುಗಳ ಚಲನೆಯಲ್ಲಿ ಮಾತ್ರ ಅವುಗಳನ್ನು ಗಮನಿಸಿಬೇಕು. ಮೂರನೆಯದು ಕಡಿಮೆಯೆಂದರೂ ಸುಮಾರು ಅರ್ಧಗಂಟೆ ಅಲುಗಾಡದೇ ಕುಳಿತುಕೊಳ್ಳಬೇಕು. ಮೂರು ಷರತ್ತುಗಳನ್ನು ನನಗೆ ನಾನೇ ವಿಧಿಸಿಕೊಂಡು ಚಕ್ಕಲಬಕ್ಕಲ ಹಾಕಿಕೊಂಡು ಕುಳಿತುಬಿಟ್ಟೆ.

   ಹದಿನೈದು ನಿಮಿಷ ಕಳೆಯಿತು ಏನೂ ಬದಲಾವಣೆಯಿಲ್ಲ. ನನ್ನ ಎದುರಿಗೆ ಸಮುದ್ರ ಮತ್ತು ಅದರ ಅಲೆಗಳುಕನಿಷ್ಟ ನೂರು ಅಡಿ ಅಂತರದಲ್ಲಿ ಸುತ್ತಲೂ ಕೆಂಪು ಏಡಿಗಳ ಗೂಡುಗಳು. ಆದ್ರೆ ಗೂಡುಗಳಿಂದ ಒಂದಾದರೂ ಏಡಿ ಹೊರಗೆ ಬರಲಿಲ್ಲ. ಕನಿಷ್ಟಪಕ್ಷ ಇಣುಕಲಿಲ್ಲ. ಅದಕ್ಕಾಗಿ ಬೇಸರವಿಲ್ಲ ಏಕೆಂದರೆ ಇನ್ನೂ ಹದಿನೈದು ನಿಮಿಷ ಕಾಯುತ್ತಾ ನನ್ನ ಅದೃಷ್ಟವನ್ನು ಪರೀಕ್ಷೆ ಮಾಡಬೇಕಿದೆಮತ್ತೆ ಐದು ನಿಮಿಷ ಕಳೆಯಿತು. ಬಲಭಾಗದ ಎದುರಿನಲ್ಲಿ ಮಬ್ಬಾಗಿ ಎರಡು ಸಣ್ಣ ಕಣ್ಣುಗಳು ಕಾಣಿಸಿದವು. ಅಲುಗಾಡದೆ ಕಣ್ಣನ್ನು ಮತ್ತಷ್ಟು ಫೋಕಸ್ ಮಾಡಿದೆ. ಹೌದು ಎರಡು ಸೂಜಿಗೆ ಉದ್ದದ ಒಂದೊಂದು ಬಿಳಿಮಣಿಯನ್ನು ಪೋಣಿಸಿದಂತೆ ಕಾಣುವ ಎರಡು ಅಂಟೇನದಂತ ಪುಟ್ಟ ಕಣ್ಣುಗಳು ನನ್ನನ್ನೇ ನೋಡುತ್ತಿವೆ! ಇದು ಖಂಡಿತವಾಗಿ ಕೆಂಪು ಏಡಿಯ ಕಣ್ಣುಗಳೇ ಅಂದುಕೊಂಡು ಅಲುಗಾಡದೇ ಅದನ್ನೇ ಗಮನಿಸುತ್ತಾ ಅದರ ದೇಹವೆಲ್ಲಿದೆ ಎಂದು ನೋಡಿದರೆ ಅದರ ಪೂರ್ತಿ ದೇಹ ಮರಳ ಗೂಡಿನೊಳಗೆ ಇದೆ! ತನ್ನ ಅಂಟೇನ ಮೇಲಕ್ಕೇರಿಸಿ ಅದರಲ್ಲಿರುವ ಕಣ್ಣುಗಳಿಂದ ನನ್ನನ್ನು ಗಮನಿಸುತ್ತಿದೆ! ಒಂದು ನಿಮಿಷ ಕಳೆದಿರಬಹುದು ಕಣ್ಣುಗಳು ನನ್ನ ಕಡೆಯಿಂದ ಎಡಕ್ಕೆ ತಿರುಗಿದವುನಾನು ಕೂಡ ಅಲುಗಾಡದೆ ಎಡಭಾಗಕ್ಕೆ ಕಣ್ಣೋಟವನ್ನು ತಿರುಗಿಸಿದೆ. ಅರೆರೆ! ಅದರ ಸಮಾನ ಅಂತರದಲ್ಲಿ ಅಲ್ಲೂ ಕೂಡ ಎರಡು ಕಣ್ಣುಗಳು ನನ್ನನ್ನು ನೋಡುತ್ತಿವೆ! ಮತ್ತೆ ಬಲಕ್ಕೆ ನೋಡುತ್ತಿವೆ! ಅಂದರೆ ಇವೆರಡು ಕೆಂಪು ಏಡಿಗಳು ಮರೆಯಲ್ಲಿಯೇ ನನ್ನ ನೋಡುತ್ತಾ, ಜೊತೆಗೆ ಅವೆರಡು ಒಂದಕ್ಕೊಂದು ತಮ್ಮ ಕಣ್ಣೋಟದಲ್ಲಿಯೇ ಮಾತಾಡಿಕೊಳ್ಳುತ್ತಿವೆ! ಇದೇ ಸರಿಯಾದ ಸಮಯವೆಂದುಕೊಂಡು ನಾನು ಅಲುಗಾಡದೇ ಅವುಗಳನ್ನೇ ಗಮನಿಸುತ್ತಿದ್ದೆ. ಮತ್ತೆರಡು ನಿಮಿಷ ಕಳೆಯಿತು. ಎಡಭಾಗದಲ್ಲಿ ಅಂಟೇನ ಕಣ್ಣುಗಳು ನಿದಾನವಾಗಿ ಮೇಲಕ್ಕೆ ಬಂದವು ಅವುಗಳ ಸಮೇತ ಕೆಂಪು ಏಡಿಯ ದೇಹವೂ  ಮೇಲೆ ಬಂತು. ಅದನ್ನು ಗಮನಿಸಿದ ಬಲಭಾಗದಲ್ಲಿದ್ದ ಏಡಿಯೂ ಮೇಲಕ್ಕೆ ಬಂತು. ಮತ್ತೆ ಎರಡು ನಿಮಿಷ ಕಳೆಯಿತು.  

ನನ್ನನ್ನೇ ನೋಡುತ್ತಿದ್ದ ಅವುಗಳಿಗೆ ಏನನ್ನಿಸಿತೋ ಏನೋ ಮತ್ತೆ ತಮ್ಮ ಗೂಡಿನೊಳಗೆ ಹೋಗಿಬಿಟ್ಟವು. ಮತ್ತೆ ಐದು ನಿಮಿಷ ಕಳೆಯಿತು. ಮತ್ತೆ ಅದೇ ರೀತಿ ತಮ್ಮ ಆಂಟೇನ ಕಣ್ಣುಗಳಿಂದ ನನ್ನನ್ನು ಗಮನಿಸುತ್ತಾ ನಿದಾನವಾಗಿ ಮೇಲೆ ಬಂದವು. ಭಾರಿ ದೈರ್ಯ ಮಾಡಿ ಎರಡು ಹೆಜ್ಜೆ ಮುಂದೆ ಬಂದು ನಿಂತು ನನ್ನನ್ನು ನೋಡುವುದು ಮತ್ತು ಅವುಗಳು ಒಂದಕ್ಕೊಂದು ನೋಡಿಕೊಳ್ಳುವುದು ಸ್ವಲ್ಪ ಹೊತ್ತು ನಡೆಯಿತು. ಬಹುಶಅವುಗಳ ಮುಂದೆ ಕುಳಿತ ಪ್ರಾಣಿಯಿಂದ ನಮಗೇನು ತೊಂದರೆಯಿಲ್ಲ ಎಂದುಕೊಂಡವೇನೋ, ಅಥವ ಹೀಗೆ ಅವುಗಳ ಮುಂದೆ ಅಲುಗಾಡದೆ ಕುಳಿತಿರುವುದು ಜೀವವಿರುವ ವಸ್ತುವಲ್ಲ...ಯಾವುದೋ ಜಡವಸ್ತು ಇಲ್ಲಿ ಬಂದು ಬಿದ್ದಿದೆ ಎಂದುಕೊಂಡವೋ ಏನೋ..ನಿಧಾನವಾಗಿ ತಮ್ಮ ಪಾಡಿಗೆ ಎಡ ಬಲಕ್ಕೆ ಚಲಿಸತೊಡಗಿದವು. ಅರ್ಧಗಂಟೆಯವರೆಗೆ ಅಲುಗಾಡದೆ ಕುಳಿತಿದ್ದ ನಾನು ನಿದಾನವಾಗಿ ಕಂಡರೂ ಕಾಣದ ಹಾಗೆ ಹಿಂದಕ್ಕೆ ಕತ್ತನ್ನು ತಿರುಗಿಸಿದೆ. ಅರೆರೆ...ಅಲ್ಲೂ ಕೂಡ ಹತ್ತಿರದಲ್ಲಿಯೇ ಮೂರ್ನಾಲ್ಕು ಏಡಿಗಳು ಹೊರಬಂದು ತಮ್ಮ ಪಾಡಿಗೆ ಓಡಾಡುತ್ತಿವೆ. ಅಂದರೆ ನನ್ನ ಸುತ್ತ ಇರುವ ಇವೆಲ್ಲಾ ಏಡಿಗಳು ಒಂದಕ್ಕೊಂದು ಕಣ್ಣಲ್ಲೇ ಮಾತಾಡಿಕೊಂಡು ನನ್ನಂಥ ಜಡವಸ್ತುವಿನಿಂದ ಏನು ತೊಂದರೆಯಿಲ್ಲವೆಂದುಕೊಂಡು ಹೊರಬಂದಿವೆ. ಅಲ್ಲಿಗೆ ಒಂದು ಹಂತದ ಗೆಳೆತನವನ್ನು ಸಾಧಿಸಿದಂತಾಯಿತು ಎಂದುಕೊಂಡು  ಹಾಗೆ ನಿದಾನವಾಗಿ ಕಾಲುಗಳನ್ನು ಮುಂದಕ್ಕೆ ಚಾಚಿದೆ, ಎರಡೂ ಕೈಗಳನ್ನು ನೆಲಕ್ಕೆ ಊರಿ ಅರಾಮವಾಗಿ ಕುಳಿತೆ. ನನ್ನ ಪುಟ್ಟ ಚಲನೆಯಿಂದ ಮತ್ತೆ ಅವೆಲ್ಲಾ ಒಳಗೆ ಓಡಿದವು. ಆದ್ರೆ ಜಾಸ್ತಿ ಹೊತ್ತೇನಿಲ್ಲ. ಎರಡು ನಿಮಿಷಗಳಲ್ಲೇ ಮತ್ತೆ ಹೊರಬಂದು ಆರಾಮವಾಗಿ ತಮ್ಮ ಕೆಲಸವನ್ನು ಮುಂದುವರಿಸಿದವು. ಸಮಯ ನೋಡಿದೆ. ಆಗಲೇ ನಾಲ್ಕು ಗಂಟೆ ದಾಟಿತ್ತು. ಅವುಗಳ ಜೊತೆ ಇನ್ನಷ್ಟು ಕಳೆಯುವ ಆಸೆಯಿದ್ದರೂ ಜಡ್ಜಿಂಗ್ ಕೆಲಸವಿದ್ದಿದ್ದರಿಂದ ವಿಧಿಯಿಲ್ಲದೇ ಎದ್ದು ಬಂದೆ.

   ನಾನು ಎದ್ದು ಬರುತ್ತಿದ್ದಂತೆ ಮತ್ತೆ ಅವುಗಳೆಲ್ಲಾ ಒಳಗೆ ಓಡಿದವುನಿದಾನವಾಗಿ ನಡೆಯುತ್ತಾ ಸ್ವಲ್ಪ ದೂರ ಬಂದು ನಾನು ಕುಳಿತಿದ್ದ ಜಾಗವನ್ನು ಕಣ್ಣಿನಲ್ಲಿಯೇ ಅಂದಾಜು ಮಾಡಿಕೊಂಡೆ. ಏಕೆಂದರೆ ನಾಳೆ ಬೇರೆ ಜಾಗದಲ್ಲಿ ಕುಳಿತರೆ ಅಲ್ಲಿ ಹೊಸ ಏಡಿಗಳು ಜೊತೆ ಹೊಸದಾಗಿ ಮತ್ತೆ ಗೆಳೆತನ ಬೆಳೆಸುವ ಇದೇ ಸರ್ಕಸ್ ಮಾಡಬೇಕಾಗುತ್ತದೆಮತ್ತೆ ನನಗೆ ಅಷ್ಟೊಂದು ಸಮಯವೂ ಇಲ್ಲ. ಕಾರಣಕ್ಕಾಗಿ ನಾಳೆಯೂ ಅಲ್ಲಿಯೇ ಕುಳಿತರೆ ಅಲ್ಲಿರುವ ಏಡಿಗಳಿಗೆ ನನ್ನ ದೇಹದ ಗಾತ್ರ, ಗುರುತು, ಪರಿಚಯ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ನನ್ನಿಂದ ಏನು ತೊಂದರೆಯಿಲ್ಲವೆನ್ನುವ ವಿಚಾರ ಅವುಗಳಿಗೆ ಮನವರಿಕೆಯಾಗಿರಬಹುದು. ನಾಳೆ ಸಾಧ್ಯವಾದರೆ ಅವುಗಳ ಫೋಟೊಗ್ರಫಿ ಮಾಡಬಹುದು ಎನ್ನುವ ನನ್ನ ಲೆಕ್ಕಾಚಾರವಾಗಿತ್ತು. ನಾನು ಇತ್ತ ಬರುತ್ತಿದ್ದಂತೆ ನಿದಾನವಾಗಿ ಎಲ್ಲ ಕೆಂಪು ಏಡಿಗಳು ಎಂದಿನಂತೆ ಹೊರಬಂದು ತಮ್ಮ ಕಾಯಕದಲ್ಲಿ ತೊಡಗಿದವು.

ಜುಲೈ ೩೦ ಮಧ್ಯಾಹ್ನ ಎರಡುವರೆ ಗಂಟೆ

    ಊಟವಾಗಿತ್ತು. ಅದಕ್ಕೂ ಮೊದಲೇ ಮೂರು ದಿನದಿಂದ ನಡೆಯುತ್ತಿದ್ದ ಫೋಟೋಗ್ರಫಿ ಜಡ್ಜಿಂಗ್ ಕೆಲಸವೂ ಮುಗಿದಿತ್ತು. ಇನ್ನು ಉಳಿದ ಅರ್ಧ ದಿನ ಪೂರ್ತಿ ಏನು ಕೆಲಸವಿಲ್ಲವಾದ್ದರಿಂದ ಬೇಗನೇ ಬೀಚಿಗೆ ಬಂದಿದ್ದೆ ಭಾರಿ ನಿನ್ನೆಯಂತ ಷರತ್ತುಗಳೇ ಇದ್ದರೂ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೆ. ಅಲ್ಲಿ ಹೋಗಿ ಕುಳಿತುಕೊಳ್ಳುವ ಮೊದಲೇ  ನನ್ನ ಪುಟ್ಟ ಕ್ಯಾಮೆರದಲ್ಲಿನ ಮೊಮೊರಿ ಕಾರ್ಡು, ಫೋಟೊ ಕ್ಲಿಕ್ಕಿಸಲು ಸೆಟ್ ಮಾಡಿಕೊಳ್ಳಬೇಕಾದ ತಾಂತ್ರಿಕತೆ, ನಂತರ ವಿಡಿಯೋ ಮಾಡಲು ಅವಕಾಶ ಸಿಕ್ಕಲ್ಲಿ ಕೂಡಲೇ ಬದಲಿಸಿಕೊಳ್ಳಲು ಬೇಕಾದ ಸುಲಭ ವಿಧಾನ ಇತ್ಯಾದಿಗಳನ್ನೆಲ್ಲಾ ಮೊದಲೇ ಸ್ವಲ್ಪ ಪ್ರಯೋಗ ಮಾಡಿ ಸರಿಯಾಗಿದೆಯೆನ್ನುವುದನ್ನು ಖಚಿತಪಡಿಸಿಕೊಂಡು ನಿದಾನವಾಗಿ ಬೀಚಿನತ್ತ ನಡೆದೆ. ಆಗಲೇ ಸಾವಿರಾರು ಕೆಂಪು ಏಡಿಗಳು ಮೈಲುದ್ದದ ಬೀಚಿನಲ್ಲಿ ಹೊರಗೆ ಬಂದು ಬಿಸಿಲು ಕಾಯುತ್ತಿದ್ದವು. ಇವತ್ತು ಸಾಧ್ಯವಾದರೆ ಅವುಗಳ ವಿಡಿಯೋ ಡಾಕ್ಯುಮೆಂಟರಿ ಆಗದಿದ್ದಲ್ಲಿ ಕನಿಷ್ಟಪಕ್ಷ ಫೋಟೊಗಳನ್ನಾದರೂ ಕ್ಲಿಕ್ಕಿಸಬೇಕೆನ್ನುವ ಖಚಿತ ನಿರ್ಧಾರ ಮಾಡಿಕೊಂಡಿದ್ದರೂ ನನ್ನ ನಡೆ ನುಡಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಅವುಗಳೆಲ್ಲಾ ವಿಫಲವಾಗುವ ಸಾಧ್ಯತೆ ಹೆಚ್ಚಿತ್ತು. ಇವತ್ತು ಸ್ವಲ್ಪ ನನ್ನ ನಡೆಯಲ್ಲಿ ಸ್ವಲ್ಪ ಬದಲಾಯಿಸಿಕೊಳ್ಳುವುದು ಒಳ್ಳೆಯದು ಎಂದುಕೊಂಡು  ಮೊದಲಿಗೆ ನಿನ್ನೆ ಕುಳಿತಿದ್ದ ಜಾಗಕ್ಕೆ ಬೇಗ ಹೋಗಿ ಕುಳಿತುಕೊಳ್ಳುವುದು ಬೇಡ, ನಿದಾನವಾಗಿ ಒಂದೊಂದೇ ಹೆಜ್ಜೆಯನ್ನು ಇಡುತ್ತಾ ಹೋಗುವ ಪ್ಲಾನ್ ಮಾಡಿಕೊಂಡು ನಿದಾನವಾಗಿ ಒಂದು ಹೆಜ್ಜೆ ಇಡುವುದು ಮತ್ತೆ ಹತ್ತು ಸೆಕೆಂಡ್ ನಿಲ್ಲುವುದು ಹೀಗೆ ಮಾಡುತ್ತಿದ್ದೆ. ಹೆಜ್ಜೆಗೊಮ್ಮೆ ಒಂದಷ್ಟು ಏಡಿಗಳು ಮರಳೊಳಗೆ ಹೋಗುತ್ತಿದ್ದವುಸ್ವಲ್ಪ ದೂರದಲ್ಲಿರುವಂತವೂ ನನ್ನನ್ನೇ ನೋಡುತ್ತಿದ್ದವುಗಳು ಅವುಗಳ ಹತ್ತಿರ ಹೋಗುತ್ತಿದ್ದಂತೆ ಅವು ಕೂಡ ಒಳಹೋಗುತ್ತಿದ್ದವು. ಪ್ರಕ್ರಿಯೆ ನಡೆಯುತ್ತಲೇ ಮೊದಲೇ ಗುರಿತಿಸಿದ್ದ ಜಾಗವನ್ನು ತಲುಪಿದ್ದೆ. ಅಲ್ಲೂ ಕೂಡ ಕ್ಷಣಮಾತ್ರದಲ್ಲಿ ನಿನ್ನೆ ನೋಡಿದ್ದ ಕೆಂಪು ಏಡಿಗಳೆಲ್ಲಾ ಒಳಹೋದವು. ನನಗೆ ತಿಳಿದಂತೆ ಅವುಗಳ ನೆನಪಿನ ಶಕ್ತಿ ಕಡಿಮೆಯಿದ್ದು ನನ್ನನ್ನು ಮರೆತಿದ್ದರೂ ಒಮ್ಮೆ ನಡೆದ ಕ್ರಿಯೆ ಮತ್ತೆ ನಡೆದರೆ ಅವುಗಳಿಗೆ ಹೊಂದಿಕೊಳ್ಳುವ ಗುಣವಂತೂ ಇದೆಯೆಂದು ನನಗೆ ಗೊತ್ತಿತ್ತು. ಅಂದರೆ ನಿನ್ನೆ ನಾನು ಇಲ್ಲಿ ಬಂದು ಮುಕ್ಕಾಲು ಗಂಟೆ ಕುಳಿತು ಅವುಗಳಿಗೆ ಏನೂ ತೊಂದರೆ ಕೊಡದೆ  ದ್ದು ಹೋಗಿದ್ದು ಅದೇ ಕ್ರಿಯೆ ಇವತ್ತು ನಡೆದರೆ ಅವುಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆನ್ನುವ ಒಂದು ಆತ್ಮವಿಶ್ವಾಸ ನನ್ನೊಳಗಿತ್ತು. ಅದೇ ರೀತಿ ಹೋಗಿ ನೇರವಾಗಿ ಕುಳಿತುಬಿಟ್ಟೆಹದಿನೈದು ನಿಮಿಷ ಕಳೆದರೂ ನನ್ನ ಸುತ್ತಲಿನ ಯಾವ ಕೆಂಪು ಏಡಿಯೂ ಹೊರಬರಲಿಲ್ಲ. ಇದೇ ಸಮಯವನ್ನು ಉಪಯೋಗಿಸಿಕೊಂಡು  ನಾನು ನನ್ನ ಪುಟ್ಟ ಕ್ಯಾಮೆರವನ್ನು ಹೊರತೆಗೆದು ಮರಳ ನೆಲದ ಮೇಲೆ ಇಟ್ಟು ನನ್ನಿಂದ ಎಂಟು ಅಡಿ ದೂರವಿರುವ ಒಂದು ಕೆಂಪು ಏಡಿಯ ಗೂಡಿನಿಂದ ಏಡಿ ಹೊರಬಂದು ಅದು ನಿಲ್ಲುವ ಸ್ಥಳವನ್ನು ಅಂದಾಜು ಮಾಡಿ ಜಾಗಕ್ಕೆ ಕ್ಯಾಮೆರವನ್ನು ಫೋಕಸ್ ಮಾಡಿ, ಏಡಿಯ ಸುತ್ತಲು ಎಷ್ಟು ಜಾಗವಿರಬೇಕೆಂದು ಮೊದಲೇ ಅಂದಾಜು ಮಾಡಿ ಕ್ಯಾಮೆರವನ್ನು ಕಂಪೋಸ್ ಮಾಡಿ ಸಿದ್ದಮಾಡಿಕೊಂಡು ನನ್ನ ಬಲಗೈ ತೋರುಬೆರಳನ್ನು ಕ್ಯಾಮೆರ ಕ್ಲಿಕ್ ಬಟನ್ ಮೇಲೆ ಇಟ್ಟುಕೊಂಡು ಅದೇ ಸ್ಥಿತಿಯಲ್ಲಿ ಕುಳಿತುಬಿಟ್ಟೆ. ಮತ್ತೆ ಹತ್ತು ನಿಮಿಷ ಕಳೆದಿರಬಹುದು ಎಡಭಾಗದಲ್ಲಿರುವ ಗೂಡಿನಿಂದ ಒಂದು ಕೆಂಪು ಏಡಿ ತನ್ನ ಆಂಟೇನ ಕಣ್ಣುಗಳನ್ನು ಹೊರಚಾಚಿತು. ಮತ್ತೆರಡು ನಿಮಿಷ ಕಳೆಯುವಷ್ಟರಲ್ಲಿ ಅದು ಪೂರ್ತಿ ಹೊರಬಂದು ನನ್ನನ್ನು ನೋಡುವುದು ಮತ್ತು ಎಡಬಲ ನೋಡುವುದು ಮಾಡತೊಡಗಿತು. ಎಂಥ ವಿಪರ್ಯಾಸವೆಂದರೆ ನಾನು ಕ್ಯಾಮೆರ ಕ್ಲಿಕ್ ಬಟನ್ ಮೇಲೆ ತೋರುಬೆರಳಿಟ್ಟಿದ್ದರೂ ಕ್ಲಿಕ್ ಮಾಡುವಂತಿರಲಿಲ್ಲ, ಮಾಡಿದ್ದರೂ ಅದು ವೇಸ್ಟ್ ಆಗುತ್ತಿತ್ತು. ಏಕೆಂದರೆ ನಾನು ಕ್ಯಾಮೆರವನ್ನು ಸೆಟ್ ಮಾಡಿ ಫೋಕಸ್ ಮಾಡಿಟ್ಟಿರುವುದು ಬಲಭಾಗದ ಗೂಡಿನ ಕಡೆಗೆ. ಆದ್ರೆ ಇಲ್ಲಿ ಹೊರಬಂದಿರುವುದು ಎಡಭಾಗದ ಗೂಡಿನಲ್ಲಿರುವ ಏಡಿ. ಎಷ್ಟು ಸೂಕ್ಷ್ಮವಾಗಿ ಕ್ಯಾಮೆರವನ್ನು ತಿರುಗಿಸಿದರೂ ಕೂಡ ಅದಕ್ಕೆ ನನ್ನ ಚಲನೆ ಗೊತ್ತಾಗಿ ಮತ್ತೆ ಮರಳೊಳಗೆ ಹೋಗಿಬಿಡುವುದು ಖಚಿತವಾದ್ದರಿಂದ ಮುಂದೇನು ಮಾಡುವುದು ತೋಚದೆ ಕಾಯುವುದೊಂದೆ ದಾರಿ ಎಂದು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಐದು ನಿಮಿಷ ಕಳೆದಿರಬಹುದು ಬಲಭಾಗದ ಗೂಡಿನಿಂದ ನಿದಾನವಾಗಿ ತನ್ನ ಅಂಟೇನವನ್ನು ಹೊರಸೂಸಿತು. ಮರುನಿಮಿಷದಲ್ಲಿ ಇನ್ನಷ್ಟು ಹೊರಬಂದು ನನ್ನ ಕಡೆಗೆ ನೋಡತೊಡಗಿತು. ಮತ್ತೆರಡು ನಿಮಿಷ ಕಳೆಯುವಷ್ಟರಲ್ಲಿ ಅದು ಪೂರ್ತಿ ಹೊರಬಂದು ನನ್ನನ್ನು ಮತ್ತು ಎಡಭಾಗದಲ್ಲಿರುವ ಏಡಿಯನ್ನು ನೋಡತೊಡಗಿತು. ಬಹುಷ: ಈಗ ಅವೆರಡೂ ಏಡಿಗಳು ನಿನ್ನೆಯ ಪ್ರಕ್ರಿಯೆಯನ್ನು ನೆನಪಿಸಿಕೊಳ್ಳುತ್ತಾ ಕಣ್ಣುಗಳಲ್ಲೇ ಮಾತಾಡಿಕೊಳ್ಳುತ್ತಿರಬಹುದು ಎಂದುಕೊಂಡು ಇದೇ ಸರಿಯಾದ ಸಮಯವೆಂದು ಅಲುಗಾಡದೆ ಇಟ್ಟಿದ್ದ ಕ್ಯಾಮೆರದಲ್ಲಿ ಒಂದಷ್ಟು ಪೋಟೊವನ್ನು ಕ್ಲಿಕ್ಕಿಸಿದೆ. ಸ್ವಲ್ಪ ಹೊತ್ತು ಕಳೆಯುತ್ತಿದ್ದಂತೆ ನನ್ನಿಂದ ಏನು ತೊಂದರೆ ಇಲ್ಲವೆಂದು ಅವುಗಳಿಗೆ ಅರಿವಾಯ್ತೇನೋ ಅವು ನಿದಾನವಾಗಿ ಎಡಕ್ಕೆ ಮತ್ತು ಬಲಕ್ಕೆ ನಡೆಯತೊಡಗಿದವು. ಈಗ ಇನ್ನಷ್ಟು ಚೆನ್ನಾಗಿ ಫೋಟೊಗ್ರಫಿ ಮಾಡಬಹುದೆಂದುಕೊಂಡು ನಾನು ಕುಳಿತ ಜಾಗದಿಂದ ಸ್ವಲ್ಪವೂ ಅಲುಗಾಡದೆ ಕ್ಯಾಮೆರವನ್ನು ಸ್ವಲ್ಪವೇ ತಿರುಗಿಸಿ ಇನ್ನಷ್ಟು ಚೆನ್ನಾಗಿ ಫೋಟೊಗ್ರಫಿ ಮಾಡಿದ್ದಲ್ಲದೆ ಹಾಗೆ ಕ್ಯಾಮೆರವನ್ನು ಎಡಕ್ಕೆ ತಿರುಗಿಸಿ ಕಡೆ ಬಂದಿದ್ದ ಕೆಂಪು ಏಡಿಯ ಕೆಲವು ಫೋಟೊಗಳನ್ನು ಕ್ಲಿಕ್ಕಿಸಿದ್ದೆ.


   ನನಗೆ ಬೇಕಾದ ಹಾಗೆ ಫೋಟೊಗ್ರಫಿಯನ್ನಂತೂ ಮಾಡಿದ್ದಾಯಿತು. ಈಗ ನನ್ನ ಮುಂದಿನ ಗುರಿ ಅವುಗಳ ನಡುವಳಿಕೆಯ ವಿಡಿಯೋಗ್ರಫಿ ಮಾಡುವುದು. ಅವುಗಳನ್ನೇ ಗಮನಿಸುತ್ತಾ ಕ್ಯಾಮೆರ ಮೇಲಿಟ್ಟಿದ್ದ ಬಲಗೈ ತೋರುಬೆರಳನ್ನು ತೆಗೆದು ಉಳಿದ ಬೆರಳುಗಳನ್ನು ಬಳಸಿಕೊಂಡು ವಿಡಿಯೋ ಮೋಡ್ ಸೆಟ್ ಮಾಡಿ ಸಿದ್ದನಾದೆ. ವಿಡಿಯೋ ಮಾಡಬೇಕಾದ ದೂರ ಮತ್ತು ಅದಕ್ಕೆ ತಕ್ಕಂತೆ ಫೋಕಸ್ ಸಿದ್ಧಮಾಡಿಕೊಂಡಿದ್ದರೂ  ಬಲಭಾಗದ ಗೂಡಿನಿಂದ ಹೊರಬಂದಿದ್ದ ಕೆಂಪು ಏಡಿ ಅದರ ಗೂಡಿನಿಂದ ಎರಡು ಅಡಿ ದೂರಕ್ಕೆ ಬಂದು ಏನನ್ನೋ ಮಾಡುತ್ತಿದ್ದುದ್ದು ನನ್ನ ಬರಿ ಕಣ್ಣಿಗೆ ಗೊತ್ತಾಗುತ್ತಿರಲಿಲ್ಲ. ಆದ್ರೆ ನಾನು ಆತುರ ಪಡುವಂತಿರಲಿಲ್ಲ ಏಕೆಂದರೆ ಅದು ಖಂಡಿತ ಗೂಡಿನ ಕಡೆಗೆ ಬಂದೇ ಬರುತ್ತದೆ, ಅಲ್ಲಿಯವರೆಗೆ ಕಾಯ್ದು ಅಮೇಲೆ ಅದರ ವಿಡಿಯೋ ಮಾಡೋಣವೆಂದು ಸ್ವಲ್ಪ ಹೊತ್ತು ಕಾಯ್ದೆ. ಎರಡು ನಿಮಿಷ ಕಳೆದಿರಬಹುದು ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಅಂದುಕೊಂಡ ಅದು ನಿದಾನವಾಗಿ ಗೂಡಿನ ಕಡೆಗೆ ಬಂದು ತನ್ನ ಮುಂಭಾಗದಲ್ಲಿರುವ ಎರಡು ಕೈಗಳಿಂದ ಒಂದಷ್ಟು ಮರಳನ್ನು ತೆಗೆದುಕೊಳ್ಳುವುದು ಅದನ್ನು ತನ್ನ ಬಾಯಿಯ ಬಳಿ ತಂದು ಎಂಜಲಿಂದ ಉಂಡೆ ಮಾಡಿ ಮತ್ತೆ ನೆಲಕ್ಕೆ ಹಾಕುತ್ತಿತ್ತು. ಕ್ರಿಯೆಯ ಒಂದಷ್ಟು ವಿಡಿಯೋ ಮಾಡಿ ಮುಂದೇನು ಮಾಡಬಹುದೆಂದು ಕಾಯುತ್ತಿದ್ದೆ. ಆದ್ರೆ ಅದು ಮತ್ತೇನು ಮಾಡದೆ ನಡುವೆ ಸ್ವಲ್ಪ ರೆಸ್ಟ್ ತೆಗೆದುಕೊಂಡು ಮತ್ತೆ ಎರಡು ಕೈಗಳಿಂದ ಮರಳನ್ನು ತೆಗೆದುಕೊಂಡು ಬಾಯಿಗೆ ತಂದು ಎಂಜಲು ಹಾಕಿ ಉಂಡೆ ಮಾಡಿ ನೆಲಕ್ಕೆ ಹಾಕುತ್ತಿತ್ತು. ಅದನ್ನೇ ಎಷ್ಟು ಅಂತ ವಿಡಿಯೋ ಮಾಡುವುದು! ನನಗೇ ಬೋರ್ ಅನ್ನಿಸತೊಡಗಿ ವಿಡಿಯೋ ಮಾಡುವುದು ನಿಲ್ಲಿಸಿದೆ. ಆದ್ರೆ ಅದೂ ಮಾತ್ರ ಅದನ್ನೇ ಮಾಡುತ್ತಿತ್ತು. ಬಹುಶಃ ನಮಗೂ ಸಣ್ಣ ಸಣ್ಣ ಜೀವಿಗಳಿಗೂ ಇರುವ ವ್ಯತ್ಯಾಸ ಏನೆಂದರೆ ಅವು ಮಾಡುತ್ತಿರುವುದನ್ನೇ ಸಾವಿರಸಲ ಅಥವ ದಿನವೆಲ್ಲಾ, ವಾರ, ತಿಂಗಳು ವರ್ಷಗಟ್ಟಲೇ ಮಾಡಿದರೂ ಕೂಡ ಅವುಗಳಿಗೆ ತಮ್ಮ ಕಾಯಕ ಬೇಸರವಾಗುವುದಿಲ್ಲ. ಆದ್ರೆ ನಾವು ಮಾಡುವ ಕೆಲಸ  ಒಂದರ್ಧ ಗಂಟೆ ಅಥವ ಒಂದು ಗಂಟೆ ಕಳೆಯುತ್ತಿದ್ದಂತೆ ಬೇಸರವಾಗಿ ಎದ್ದು ಹೋಗಿಬಿಡುತ್ತೇವೆ, ಅದನ್ನೇ ಮತ್ತೆ ಮತ್ತೆ ಮಾಡಬೇಕಲ್ಲ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ, ಒದ್ದಾಡುತ್ತೇವೆ, ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಏಕೆ ಹೀಗೆ? ಕ್ಷಣದಲ್ಲಿ ಹೀಗೆ ನನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರಿಸಲು ಪಕ್ಕದಲ್ಲಿ ಯಾರು ಇರಲಿಲ್ಲವಾದ್ದರಿಂದ ಅದರ ಯೋಚನೆ ಬಿಟ್ಟು ಅವುಗಳ ಪಾಡಿಗೆ ಅವು ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಲಿ, ನನಗೆ ಬೇಕಾದ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಸಿಕ್ಕಿದೆಯಲ್ಲ ಅಷ್ಟು ಸಾಕು ಎಂದುಕೊಂಡು ಕ್ಯಾಮೆರವನ್ನು ಆಫ್ ಮಾಡಿ  ನಿದಾನವಾಗಿ ಎದ್ದು ನಿಂತೆ. ನಾನು ಎದ್ದ ತಕ್ಷಣ ನನ್ನ ಮುಂದಿದ್ದ ಎರಡು ಕೆಂಪು ಏಡಿಗಳು ಮತ್ತು ಹಿಂಭಾಗದಲ್ಲಿದ್ದ ಏಡಿಗಳು ತಕ್ಷಣ ಒಮ್ಮೆ ನಿಂತು ನನ್ನನ್ನೇ ನೋಡಿದವುಎರಡು ನಿಮಿಷ ಹಾಗೆ ನಿಂತೆ ಅವು ಕೂಡ ಹಾಗೆ ನನ್ನನ್ನೇ ನೋಡತೊಡಗಿದರೂ ಕೂಡ ಅವು ಎಂದಿನಂತೆ ನನ್ನನ್ನು ಕಂಡು ಹೆದರಿ ಗೂಡಿಗೆ ಹೋಗಲಿಲ್ಲವಾದ್ದರಿಂದ ಅಷ್ಟರಮಟ್ಟಿಗೆ ಅವುಗಳಿಗೆ ನಾನು ಹತ್ತಿರವಾಗಿದ್ದೇನೆ ಎಂದುಕೊಂಡು ನಿದಾನವಾಗಿ ಹಿಂದಕ್ಕೆ ನಾಲ್ಕು ಹೆಜ್ಜೆ ಇಟ್ಟು ಹಿಂದಕ್ಕೆ ತಿರುಗಿ ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲಿ ನನ್ನ ಕಾಲುಗಳ ಮುಂದೆ ಏನನ್ನೋ ನೋಡಿದಂತೆ ಅನಿಸಿ ಮತ್ತೆ ಹಾಗೆ ಎರಡು ನಿಮಿಷ ಅಲುಗಾಡದೆ ನಿಂತೆ.

ಬೋನಸ್.

ಮರಳ ಮೇಲೆ ಕೆಲವು ಕಡೆ ಹತ್ತಾರು ಕೆಲವು ಕಡೆ ನೂರಾರು, ಸಾವಿರಾರು ರಾಗಿ ಕಾಳಿನ ಗಾತ್ರದ ಮರಳ ಉಂಡೆಗಳು ಚಿತ್ರ ವಿಚಿತ್ರ ಆಕಾರದಲ್ಲಿ ರಂಗೋಲಿ ಬಿಡಿಸಿದಂತೆ ಒಂದಕ್ಕೊಂದು ಅಂಟಿಕೊಳ್ಳದೇ ಹರಡಿಕೊಂಡಿದ್ದವು. ಇವು ಮೊದಲು ನಾನು ನೋಡಿದ ಕೆಂಪು ಏಡಿಗಳಂತೂ ಎಂಜಲು ಹಾಕಿ ಉಂಡೆ ಮಾಡಿ ಹಾಕಿರುವುದಂತೂ ಅಲ್ಲ, ಏಕೆಂದರೆ ಅವು ಮಾಡಿದ ಮರಳ ಉಂಡೆಗಳು ಗಾತ್ರದಲ್ಲಿ ಇದಕ್ಕಿಂತೆ ಹತ್ತಾರು ಪಟ್ಟು ದೊಡ್ಡದಿದ್ದವು. ಹಾಗಾದರೆ ಇವುಗಳನ್ನು ಬೇರೆ ಯಾರೋ ಮಾಡಿರಬೇಕಲ್ಲವೇ...ಮತ್ತೆ ಸಣ್ಣ ಮರಳ ಉಂಡೆಗಳ ಒಂದು ಬದಿಯಲ್ಲಿ ಜೋಳದ ಗಾತ್ರದಷ್ಟೇ ದೊಡ್ಡದಾದ ಗೂಡು ಕಾಣಿಸುತ್ತಿದ್ದವು. ಸ್ವಲ್ಪ ಹೊತ್ತಿಗೆ ಗೂಡಿನಿಂದ ಏನೋ ಬಂದು ಮತ್ತೆ ಹಾಗೆ ಒಳಕ್ಕೆ ಹೋಯ್ತು. ಅದೇನೆಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಏಕೆಂದರೆ ಅದರ ಬಣ್ಣ ಮರಳಿನಂತೆಯೇ ಇದ್ದು ಗಾತ್ರದಲ್ಲಿ ಜೋಳಕ್ಕಿಂತ ಚಿಕ್ಕದಿತ್ತು. ಇನ್ನೂ ಸ್ವಲ್ಪ ಹೊತ್ತು ಕಾದರೆ ಇಲ್ಲಿಯೂ ಏನಾದರೂ ಸಿಗಬಹುದು ಎಂದುಕೊಂಡು  ಕ್ಯಾಮೆರ ಆನ್ ಮಾಡಿ ವಿಡಿಯೋ ಮೋಡ್ ಸೆಟ್ ಮಾಡಿಕೊಂಡು ಅಲುಗಾಡದೇ ನಿಂತೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನಿದಾನವಾಗಿ ಒಂದು ಪುಟ್ಟ ಜೋಳದ ಕಾಳಿನ ಗಾತ್ರ ಏಡಿ ಸಣ್ಣ ತೂತಿನಿಂದ ಹೊರಬಂತು. ಹತ್ತು ಸೆಕೆಂಡ್ ಕಳೆದಿರಬಹುದು, ಮತ್ತೊಂದು ಅದಕ್ಕಿಂತ ಪುಟ್ಟ ಗಾತ್ರದ ಇನ್ನೊಂದು ಏಡಿ ಒಳಗಿನಿಂದ ಏನನ್ನೋ ತಂದು ದೊಡ್ಡ ಏಡಿಗೆ ಕೊಟ್ಟರೆ ದೊಡ್ಡ ಏಡಿ ಅದನ್ನು ಎತ್ತಿ ಪಕ್ಕಕ್ಕೆ ಉರುಳಿಸಿತು. ಮರಳಿನ ಬಣ್ಣಕ್ಕೆ ಹತ್ತಿರವಾಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅದರ ಪುಟ್ಟ ಬೆನ್ನಿನ ಕವಚದ ಮೇಲೆ ಸಣ್ಣ ಸಣ್ಣ ಬಾದಾಮಿ ಬಣ್ಣದ ಚುಕ್ಕೆಗಳು ಕಾಡುತ್ತಿದ್ದು ನನ್ನ ಕುತೂಹಲ ಹೆಚ್ಚಾಗಿ ಕ್ಯಾಮೆರವನ್ನು ನಿದಾನವಾಗಿ ಜೂಮ್ ಮಾಡಿ ಅಲುಗಾಡದೆ ವಿಡಿಯೋ ಮಾಡತೊಡಗಿದೆ

ಎರಡೂ ಮೂರು ಕ್ಷಣಗಳಿಗೊಮ್ಮೆ ನೆಲದ ಮರಳ ಗೂಡಿನಿಂದ ಒಂದು ಮರಳ ಉಂಡೆಯನ್ನು ಹೊತ್ತು ತಂದ ಸಣ್ಣ ಏಡಿ ದೊಡ್ಡದಕ್ಕೆ ಕೊಡುತ್ತಿದ್ದರೆ ದೊಡ್ಡದು ಅದನ್ನು ಪಡೆದು ಪಕ್ಕಕ್ಕೆ ಉರುಳಿಸುತ್ತಿತ್ತು. ಇದನ್ನು ನೋಡುತ್ತಿದ್ದ ನನಗೆ ಕ್ಷಣದಲ್ಲಿ ಮನೆ ಕಟ್ಟಲು ಇಟ್ಟಿಗೆ, ಕಲ್ಲುಗಳನ್ನು ಒಬ್ಬರಿಂದ ಒಬ್ಬರಿಗೆ ಸಾಗಿಸುವುದು ನೆನಪಾದರೂ ನಮ್ಮ ಇಟ್ಟಿಗೆ ಅಥವ ಇನ್ನಿತರ ಮನೆ ಕಟ್ಟುವ ಸಾಮಾನುಗಳನ್ನು ಮೊದಲೇ ಎಲ್ಲೋ ತಯಾರಿಸಿರುತ್ತಾರೆ, ಅದನ್ನು ಲಾರಿ ಇನ್ನಿತರ ವಾಹನಗಳಲ್ಲಿ ತಂದು ಹಾಕಿದ ನಂತರ ಕಟ್ಟಲು ಬಳಸುತ್ತಾರೆ. ಆದ್ರೆ ಪುಟ್ಟ ಏಡಿಗಳು ತಮ್ಮ ಮನೆ ಅಂದರೆ ಗೂಡನ್ನು ಮರಳೊಳಗೆ ಕಟ್ಟಲು ಒಳಗಿನಿಂದ ಮರಳನ್ನು  ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮರಳಿನ ಕಣಗಳು ಪುಟ್ಟ ಏಡಿಗಳಿಗೆ ಸಿಗುವುದಿಲ್ಲವಾದ್ದರಿಂದ ಅವು  ಮರಳೊಳಗೆ ದೊಡ್ಡ ಕೆಂಪು ಏಡಿಯಂತೆ ಬಾಯಿಂದ ಎಂಜಲು ಹಾಕಿ ನಾವು ರಾಗಿ ಮುದ್ದೆ ಮಾಡುವಂತೆ ಉಂಡೆ ಮಾಡಿ ಮೇಲಕ್ಕೆ ತಂದು ಹಾಕುವ ತಂತ್ರವನ್ನು ಕಲಿತಿರಬೇಕು! ಏಕೆಂದರೆ ಹೊರಕ್ಕೆ ತಂದು ಹಾಕಿದ ಮರಳಿನ ಉಂಡೆಗಳು ಒಂದಕ್ಕೊಂದು ತಗುಲಿದರೂ  ಅಂಟಿಕೊಳ್ಳದಂತೆ ಒಂದರ ಪಕ್ಕ ಮತ್ತೊಂದು ಇದ್ದು ನೋಡಲು ವಿವಿಧ ಕಲಾತ್ಮಕ ವಿನ್ಯಾಸದಂತೆ, ಚಿತ್ರ ವಿಚಿತ್ರ ರಂಗೋಲಿಯಂತೆ ಕಾಣುತ್ತಿವೆ!


  ಇವುಗಳ ವಿಡಿಯೋ ಮಾಡಿ ಕ್ಯಾಮೆರ ಆಪ್ ಮಾಡಿ ಮರಳ ಬೀಚಿನಿಂದ ಹೊರಬರುವಾಗ ನೆನಪಾಗಿದ್ದು ಪುಟ್ಟ ಏಡಿಗಳ ಫೋಟೊಗ್ರಫಿಯನ್ನೇ ಮಾಡಲಿಲ್ಲವಲ್ಲ ಅಂತ. ಆದರೂ ಅದರ ವಿಡಿಯೋ ಚೆನ್ನಾಗಿ ಬಂದಿರುವುದು ಸಮಾಧಾನವಾಗಿತ್ತು. ಕೊನೆಯಲ್ಲಿ ನನ್ನ ಮೆಚ್ಚಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಒಂದು  ಪುಸ್ತಕದಲ್ಲಿ ಬರೆದಿದ್ದ ಸಾಲುಗಳು ನೆನಪಾದವು.

ಇವುಗಳ ವಿಡಿಯೋ ಡಾಕ್ಯುಮೆಂಟರಿಯನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=VQY9li76pZs

   "ನಾವು ಇವತ್ತು ಕಲಿತ ಮತ್ತು ಕಲಿಯುತ್ತಿರುವ ವಿಧ್ಯೆಗಳು, ಹುಡುಕಾಟಗಳು, ಕಲೆ ವಿಜ್ಞಾನ, ಹೊಸ ತಂತ್ರಗಾರಿಕೆಗಳು ಮತ್ತು ಅವುಗಳನ್ನು ಅನುಭವಿಸುತ್ತಿರುವುದನ್ನು ನಮಗಿಂತ ಮೊದಲೇ ಲಕ್ಷಾಂತರ ವರ್ಷಗಳ ಹಿಂದೆಯೇ ಇವು ಕಲಿತು ಜ್ಞಾನ ಸಂಪಾದಿಸಿ ಇವತ್ತಿಗೂ ಅನುಭವಿಸುತ್ತಿರಬಹುದು!

    ಜೋಳದ ಕಾಳಿನ ಗಾತ್ರದ  ಬೆನ್ನ  ಮೇಲೆ ಬಿಳಿ ಚುಕ್ಕೆಗಳಿರುವ ಮರಳಿನ ಬಣ್ಣದ ಏಡಿಗಳ ಹೆಸರೇನೆಂದು ಅಂತರಜಾಲದಲ್ಲಿ ಹುಡುಕಿದಾಗ ಸಿಕ್ಕ ಹೆಸರು "ಸ್ಯಾಂಡ್ ಬಬ್ಲರ್ ಕ್ರಾಬ್"

ಕೊನೆಯ ಮಾತು:

    ಲೇಖನ ಬರೆದು ಮುಗಿಸುವ ಹೊತ್ತಿಗೆ ಜ್ಯೋತಿಷ್ಯ ಶಾಸ್ತ್ರದ ಅನುಭವವುಳ್ಳ ಗೆಳೆಯರೊಬ್ಬರು ಬಂದವರು  ಏಡಿಗಳ ಫೋಟೊಗಳು ಮತ್ತು ವಿಡಿಯೋವನ್ನು ನೋಡಿ ಹೇಳಿದರು, " ಶಿವು ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ. ಫೋಟೊ ಮತ್ತು ವಿಡಿಯೋ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದರ ನಡುವೆ ನಿಮಗೊಂದು ವಿಷಯವನ್ನು ತಿಳಿಸಬೇಕು. ನೀವು ಹಸುವಿನ ಸಗಣಿಯನ್ನು ನೋಡಿದ್ದರೆ ನಿಮಗೆ ಗೊತ್ತಿರುತ್ತದೆ. ಅದರೊಳಗೊಂದು ಕಂದು ಬಣ್ಣದ ಹುಳುವಿರುತ್ತದೆ. ಅದು ಥೇಟ್ ನಮ್ಮ ಕಾಫಿ ಬೀಜದ ಸೈಜಿನಲ್ಲಿ ಅದೆ ಬಣ್ಣದಲ್ಲಿರುತ್ತದೆ. ಅದನ್ನು ಮರಳಿನ ಮೇಲೆ ಬಿಟ್ಟರೆ ಶ್ರೀಚಕ್ರವನ್ನು ಬರೆಯುತ್ತದೆ ಗೊತ್ತಾ, ಅದು ಶ್ರೀಚಕ್ರ ಬರೆಯುವಾಗ ಅದರ ವಿಡಿಯೋ ಮಾಡಿ ಚೆನ್ನಾಗಿರುತ್ತದೆ". ಅದು ನೀರು ಕುಡಿದಷ್ಟು ಸುಲಭ ಎನ್ನುವಂತೆ ಹೇಳಿ ನನ್ನ ತಲೆಗೊಂದು ಕಾಫಿ ಬೀಜದ ಹುಳುವೊಂದನ್ನು ಬಿಟ್ಟು ಹೋಗಿಬಿಟ್ಟರು.

ಚಿತ್ರಗಳು ಮತ್ತು ಲೇಖನ:
ಶಿವು.ಕೆ
ಬೆಂಗಳೂರು.