೨೦೧೪ ರ ಜುಲೈ ೨೮ ಸಂಜೆ ಐದು ಗಂಟೆ.
ಪಶ್ಚಿಮ ಬಂಗಾಲ ರಾಜ್ಯದ ದಕ್ಷಿಣಕ್ಕಿರುವ ಮಿಡ್ನಾಪುರ ಜಿಲ್ಲೆಯ "ಧಿಘ" ಬೀಚಿನೊಳಗೆ ಕಾಲಿಟ್ಟಾಗ ಎದುರಿಗೆ ವಿಶಾಲ ಬಂಗಾಲ ಕೊಲ್ಲಿ ಸಮುದ್ರ ಶಾಂತವಾಗಿತ್ತು. ಮೇಲೆ ನೀಲಾಕಾಶವೂ ಕೂಡ ತೆಳು ಮೋಡಗಳ ಚಿತ್ತಾರದಿಂದಾಗಿ ಕಣ್ಣಿಗೆ ಮತ್ತು ಕ್ಯಾಮೆರಕ್ಕೆ ಅಪ್ಯಾಯಮಾನವೆನಿಸಿತ್ತು. ಅಲೆಗಳಿಂದ ನೆನೆದ ಮರಳ ಮೇಲೆ ನಡೆಯುತ್ತ ಬಲಕ್ಕೆ ನೋಡಿದೆ. ಮೈಲು ಉದ್ದದ ಆ ಮರಳ ಬೀಚಿನಲ್ಲಿ ರಕ್ತ ಕೆಂಪಿನ ಬಣ್ಣದ ಕಣಿಗಲೆ ಹೂವುಗಳು! ಸೂರ್ಯನ ಹಿಂಬೆಳಕಿಗೆ ಮತ್ತಷ್ಟು ಹೊಳೆಯುತ್ತಿವೆ! ಎಡಭಾಗಕ್ಕೆ ನೋಡಿದೆ ಅಲ್ಲಿಯೂ ಕೂಡ ಕಣ್ಣಿಗೆ ಕಾಣುವಷ್ಟು ದೂರ ಅದೇ ರಕ್ತ ಕೆಂಪಿನ ಕಣಿಗಲೆ ಹೂಗಳು! ಅರೆರೆ ಇದೇನಿದು ಜನರೇ ಇರದ ಈ ಮರಳ ಬೀಚಿನಲ್ಲಿ ಹೀಗೆ ಮೈಲು ಉದ್ದಕ್ಕೂ ಈ ಕೆಂಪು ಕಣಿಗಲೆ ಹೂವುಗಳನ್ನು ತಂದು ಚೆಲ್ಲಿದವರು ಯಾರು? ಅದನ್ನೇ ಯೋಚಿಸುತ್ತಾ ನಿದಾನವಾಗಿ ಕೆಳಗೆ ನೋಡಿದರೆ ಸುಮಾರು ಐವತ್ತು ಅಡಿಯಷ್ಟು ನನ್ನ ಸುತ್ತಲು ಆ ಕಣಿಗಲೆ ಹೂವುಗಳಿಲ್ಲವಲ್ಲ! ನಾನು ಬೆಂಗಳೂರಿಂದ ಇಲ್ಲಿಗೆ ಬಂದು ನಿಂತು ಅವುಗಳನ್ನು ತುಳಿದುಹಾಕುತ್ತೇನೆಂದು ಮೊದಲೇ ಯಾರಿಗಾದರೂ ಇದು ಗೊತ್ತಿತ್ತಾ? ಅದಕ್ಕೆ ಅವರು ಇಲ್ಲಿ ಕಣಿಗಲೆ ಹೂಗಳನ್ನು ಹರಡಿಲ್ಲವೋ ಹೇಗೆ? ಇಂಥ ಅನೇಕ ಪ್ರಶ್ನೆಗಳು ಆ ಕ್ಷಣದಲ್ಲಿ ನನ್ನೊಳಗೆ ಮೂಡಿದವು. ಇರಲಿ ಬಿಡು ಅದರ ಬಗ್ಗೆ ಆಮೇಲೆ ಯೋಚಿಸಿದರಾಯ್ತು ಈಗ ಸದ್ಯ ಈ ಬೀಚಿನಲ್ಲಿ ಸ್ವಲ್ಪ ದೂರ ನಡೆಯೋಣ ಎಂದುಕೊಂಡು ಹತ್ತು ಹೆಜ್ಜೆ ಬಲಗಡೆಗೆ ನಡೆದೆನಷ್ಟೆ. ನನ್ನ ಕಣ್ಣಿಗೆ ಕಂಡ ರಕ್ತ ಕೆಂಪಿನ ಕಣಿಗಲೆ ಹೂಗಳೆಲ್ಲಾ ಮರಳೊಳಗೆ ಪುಳಕ್ ಪುಳಕ್ ಎಂದು ಕ್ಷಣಮಾತ್ರದಲ್ಲಿ ಮಾಯವಾದವು! ಇದೊಳ್ಳೆ ಕತೆಯಾಯ್ತಲ್ಲ ಎಂದು ಕೊಂಡು ಮತ್ತಷ್ಟು ದೂರ ನಡೆದೆ. ಇನ್ನಷ್ಟು ಹೂಗಳು ಹಾಗೆ ಮಾಯವಾದವು. ನನ್ನ ಕುತೂಹಲ ಹೆಚ್ಚಾಗಿ ನಡೆಯುವುದನ್ನು ನಿಲ್ಲಿಸಿ ಸುಮ್ಮನೇ ನಿದಾನವಾಗಿ ನಾನು ನಿಂತ ಜಾಗದಿಂದ ನೂರು ಅಡಿ ದೂರಕ್ಕೆ ದೃಷ್ಠಿ ಹಾಯಿಸುತ್ತ ವಾಸ್ತವಕ್ಕೆ ಬಂದು ಕಣ್ಣನ್ನು ಫೋಕಸ್ ಮಾಡುತ್ತಾ ನೋಡಿದರೆ ಅವು ಕಣಿಗಲೆ ಹೂವುಗಳಲ್ಲ! ರಕ್ತ ಕೆಂಪು ಬಣ್ಣದ "ಕೆಂಪು ಏಡಿಗಳು". ಸ್ವಲ್ಪವೂ ಅಲುಗಾಡದೆ ಕತ್ತನ್ನು ಮಾತ್ರ ತಿರುಗಿಸಿ ಕಣ್ಣನ್ನು ಮತ್ತಷ್ಟು ಫೋಕಸ್ ಮಾಡಿ ನೋಡಿದರೆ ನೂರಾರು ಏಡಿಗಳು ಆಂಟೇನಗಳಂತಿರುವ ತಮ್ಮ ಕಣ್ಣುಗಳಿಂದ ನನ್ನನ್ನೇ ನೋಡುತ್ತಿವೆ! ದೂರದ ಬೆಟ್ಟ ನುಣ್ಣಗಿರುವುದು ನಯವಾಗಿರುವುದು ಮತ್ತು ಸುಂದರವಾಗಿರುವುದರಿಂದ ನಾವೆಲ್ಲಾ ಯಾವಾಗಲೂ ಸಾಧ್ಯವಾದಷ್ಟು ದೂರದಲ್ಲಿರುವುದನ್ನೇ, ದೊಡ್ಡದನ್ನೆ, ವಿಶಾಲವಾಗಿರುವುದನ್ನೇ ನೋಡುತ್ತಿರುತ್ತೇವೆ. ಆದ್ರೆ ನಮ್ಮ ಕಾಲ ಕೆಳಗಿನ ಈ ಕೆಂಪು ಏಡಿಯಂತ ಸಣ್ಣ ಜೀವಿಗಳು ತಮ್ಮ ಅಕ್ಕ ಪಕ್ಕದ ಸೂಕ್ಷ್ಮತೆಯಂತ ಸಣ್ಣ ಸಣ್ಣ ವಿಚಾರಗಳನ್ನು ಗಮನಿಸುತ್ತಿರುತ್ತವೆ ! ನೋಡೋಣ ಏನಾಗಬಹುದು ಎಂದುಕೊಂಡು ನಿದಾನವಾಗಿ ನಡೆಯುತ್ತಾ ಹೋದಂತೆ ಅವುಗಳು ಒಂದೊಂದೇ ಮರಳಿನೊಳಗೆ ಮಾಯವಾಗುತ್ತಿದ್ದವು. ನಾನು ಎಷ್ಟು ದೂರ ನಡೆದರೂ ಇದೇ ಕ್ರಿಯೆ ನಡೆಯುತ್ತಿದ್ದುದರಿಂದ ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ಯೋಚಿಸಿದೆ. ಈ ಕೆಂಪು ಏಡಿಗಳು ಸಂಜೆಯ ಹೊತ್ತು ಹೊರಗೆ ಬಂದು ತಿಳಿಬಿಸಿಲು ಕಾಯುವ ಕಾರ್ಯಕ್ರಮವಿರಬಹುದು. ಅಥವ ದಿನವೆಲ್ಲಾ ಮರಳೊಳಗಿದ್ದು ಈ ಸಮಯದಲ್ಲಿ ಒಬ್ಬರನ್ನೊಬ್ಬರು ಬೇಟಿಯಾಗಿ ಉಬಯ ಕುಶಲೋಪರಿ, ಮಾತುಕತೆ, ಸಮಲೋಚನೆ, ಹರಟೆ, ಆಟ ಇತ್ಯಾದಿಗಳಿಗಾಗಿ ಹೊರಗೆ ಬಂದಿರಬಹುದು. ನಾನು ದಿಕ್ಕು ದೆಸೆಯಿಲ್ಲದೇ ಸುಮ್ಮನೇ ಹೀಗೆ ಈ ಮರಳ ಬೀಚಿನಲ್ಲಿ ಓಡಾಡುವುದರಿಂದ ಅವುಗಳ ಗೆಳೆತನಕ್ಕೆ ಏಕಾಂತಕ್ಕೆ ಭಂಗ ತರುತ್ತಿದ್ದೇನೆ ಅನ್ನಿಸಿ ನಿದಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡಿ ಮರಳ ಬೀಚಿನಿಂದ ಹೊರಬಂದು ಸ್ವಲ್ಪ ಹೊತ್ತು ದೂರದಿಂದ ನೋಡಿದೆ. ನಾನಂದುಕೊಂಡಿದ್ದ ರಕ್ತಕೆಂಪಿನ ಕಣಿಗಲೆ ಹೂವುಗಳು ಅಲ್ಲಲ್ಲ.., ರಕ್ತ ಕೆಂಪಿನ ಏಡಿಗಳು ನಿದಾನವಾಗಿ ಮರಳಿನಿಂದ ಬಂದು ಓಡಾಡತೊಡಗಿದವು.
೨೦೧೪ ರ ಜುಲೈ ೨೯ರ ಮಧ್ಯಾಹ್ನ ಮೂರು ಗಂಟೆ
ಹಾಗೆ ದೂರದಿಂದಲೇ ನೋಡಿದೆ. ಆಗಲೇ ಸಾವಿರಾರು ಕೆಂಪು ಏಡಿಗಳು ಹೊರಗೆ ಬಂದು ತಿಳಿಬಿಸಿಲು ಕಾಯಿಸುತ್ತಿವೆ! ಈ ಏಡಿಗಳ ಫೋಟೊ ಮತ್ತು ಸಾಧ್ಯವಾದರೆ ವಿಡಿಯೋ ಮಾಡಲೇಬೇಕು ಅಂತ ತೀರ್ಮಾನಿಸಿಯೇ ಬಂದಿದ್ದೆ. ಮುಂಜಾನೆ ಮುಕ್ಕಾಲು ಗಂಟೆ ಸಮುದ್ರ ಕಿನಾರೆಯ ಈ ಮರಳ ಬೀಚಿನಲ್ಲಿ ವಾಕಿಂಗ್ ಮಾಡುವಾಗ ನೋಡಿದರೆ ಒಂದೇ ಒಂದು ಕೆಂಪು ಏಡಿಯೂ ಕಂಡಿರಲಿಲ್ಲ. ಬಹುಶಃ ಅವುಗಳೆಲ್ಲಾ ಆ ಸಮಯದಲ್ಲಿ ತಮ್ಮ ತಮ್ಮ ಮರಳೊಳಗಿನ ಗೂಡಿನೊಳಗೆ ಹೆಂಡತಿ, ಗಂಡ ಮಕ್ಕಳ ಜೊತೆ ಸಂಸಾರ ಮಾಡುತ್ತಿರಬಹುದು, ಮತ್ತೆ ಮಧ್ಯಾಹ್ನವೂ ಕೂಡ ಹೊರಬಂದಿರಲಿಲ್ಲ. ಮೂರು ನಾಲ್ಕು ಗಂಟೆಯ ನಂತರ ಮಾತ್ರವೇ ಇವು ಮರಳಿನಿಂದ ಹೊರಬರುವುದು ಖಚಿತವಾಗಿತ್ತು. ಎಲ್ಲಾ ಓಕೆ ಆದ್ರೆ ಇವುಗಳನ್ನು ಹೇಗೆ ಫೋಟೊಗ್ರಫಿ ಮಾಡುವುದು? ಒಂದು ಹೆಜ್ಜೆ ಇಡುತ್ತಿದ್ದಂತೆ ಐವತ್ತು ಹೆಜ್ಜೆಗಳಷ್ಟು ದೂರದಲ್ಲಿರುವಂತವೇ ಕ್ಷಣಮಾತ್ರದಲ್ಲಿ ಮರಳೊಳಗೆ ಮಾಯವಾಗಿಬಿಡುತ್ತವೆ. ಅಂತದ್ದರಲ್ಲಿ ಇನ್ನು ಐದು ಹತ್ತು ಹೆಜ್ಜೆ ದೂರದಲ್ಲಿರುವವಂತೂ ಮೊದಲೇ ಮಾಯವಾಗಿರುತ್ತವೆ. ಒಂದುವರೆ ಎರಡು ಇಂಚು ಉದ್ದ ಅಗಲ ಗಾತ್ರದ ಈ ಕೆಂಪು ಏಡಿಗಳ ಫೋಟೊಗ್ರಫಿ ಮಾಡಬೇಕಾದರೆ ಉತ್ತಮ ಗುಣಮಟ್ಟದ ಡಿ ಎಸ್ಎಲ್ಅರ್ ಕ್ಯಾಮೆರದ ಜೊತೆಗೆ ಕಡಿಮೆಯೆಂದರೆ ೫೦೦-೬೦೦ ಎಂಎಂ ನ ಉತ್ತಮ ಟೆಲಿ ಲೆನ್ಸ್ ಅಂತೂ ಬೇಕೇ ಬೇಕು. ನಾನಿಲ್ಲಿಗೆ ಬಂದ ಕಾರಣವೇ ಬೇರೆಯಾಗಿತ್ತು. ಬೆಂಗಳೂರಿನಿಂದ ಇಲ್ಲಿಗೆ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯ ಆಯ್ಕೆ ಸಮಿತಿಯಲ್ಲೊಬ್ಬನಾಗಿ ಬಂದಿದ್ದೆ. ನಾವೆಲ್ಲ ಉಳಿದುಕೊಂಡಿದ್ದ ರಿಸಾರ್ಟ್ ಸಮುದ್ರದ ಬೀಚಿಗೆ ಕೇವಲ ನೂರು ಅಡಿ ದೂರದಲ್ಲಿತ್ತು. ಮೂರು ದಿನವೂ ಅದರ ಜವಾಬ್ದಾರಿಯೇ ಇರುವಾಗ ಫೋಟೊಗ್ರಫಿ ಮಾಡುವುದಕ್ಕೆ ಅವಕಾಶವಿರುವುದಿಲ್ಲವೆಂದು ನನ್ನ ಡಿಎಸ್ಎಲ್ಅರ್ ಕ್ಯಾಮೆರ ಮತ್ತು ಲೆನ್ಸುಗಳನ್ನೆಲ್ಲಾ ಬೆಂಗಳೂರಿನಲ್ಲಿಯೇ ಬಿಟ್ಟುಬಂದಿದ್ದೆ. ಸದ್ಯಕ್ಕೆ ನನ್ನ ಬಳಿ ಇದ್ದಿದ್ದು ಜೇಬಿನಲ್ಲಿಟ್ಟುಕೊಳ್ಳಬಹುದಾದ ಕ್ಯಾನನ್ ಪವರ್ಷಾಟ್ ಎಸ್ಎಕ್ಸ್ ೨೪೦ ಕಂಪ್ಯಾಕ್ಟ್ ಕ್ಯಾಮೆರವಷ್ಟೆ. ಅದರ ಫೋಟೊಗ್ರಫಿ ಗುಣಮಟ್ಟ ಹೊರಾಂಗಣದಲ್ಲಿ ಉತ್ತಮವಿದ್ದರೂ ಅದರ ಟೆಲಿಲೆನ್ಸ್ ಯೋಗ್ಯತೆ ತುಂಬಾ ಹತ್ತಿರದ್ದು. ಇಲ್ಲಿ ಕಾಣುವ ಒಂದು ಕೆಂಪು ಏಡಿಯ ಫೋಟೊಗ್ರಫಿಯನ್ನು ಮಾಡಬೇಕಾದರೆ ಹೆಚ್ಚೆಂದರೆ ಹತ್ತು ಆಡಿ ಹತ್ತಿರಕ್ಕೆ ಹೋದರೆ ಮಾತ್ರ ಸಾಧ್ಯ. ಆದರೆ ಇಲ್ಲಿ ನನ್ನನ್ನು ಕಂಡ ಮರುಕ್ಷಣವೇ ೫೦ ಅಡಿ ದೂರದಲ್ಲಿರುವ ಕೆಂಪು ಏಡಿಗಳು ಮರಳೊಳಗೆ ಮಾಯವಾಗಿಬಿಡುತ್ತವಲ್ಲ ಏನು ಮಾಡುವುದು? ಸ್ವಲ್ಪ ಹೊತ್ತು ಹಾಗೆ ಯೋಚಿಸುತ್ತಿರುವಾಗ ಹೊಳೆಯಿತೊಂದು ಉಪಾಯ. ಅದೇನೆಂದರೆ ಈ ಕೆಂಪು ಏಡಿಗಳ ಗೆಳೆತನ ಸಂಪಾದಿಸುವುದು! ಈ ಮೊದಲು ಹಕ್ಕಿಗಳು, ಇರುವೆಗಳು, ಚಿಟ್ಟೆಗಳು, ಇನ್ನಿತರ ಕೀಟಗಳ ಗೆಳೆತನ ಸಂಪಾದಿಸಿಯೇ ಅವುಗಳ ಫೋಟೊಗ್ರಫಿಯನ್ನು ಸುಲಭವಾಗಿ ಮಾಡಿದ್ದೆ. ಒಂದೊಂದು ಜೀವಿಯ ಜೊತೆಗೂ ಬೇರೆ ಬೇರೆ ರೀತಿಯದೇ ಆದ ಗೆಳೆತನ ಮುಖ್ಯವಾಗುತ್ತದೆ. ಈ ಕೆಂಪು ಏಡಿಯಂತ ಜೀವಿಯ ಗೆಳೆತನವನ್ನು ಹೇಗೆ ಸಂಪಾದಿಸವುದು, ಅದಕ್ಕೆ ಯಾವ ವಿಧಾನವನ್ನು ಅನುಸರಿಸಲಿ ಎಂದು ಯೋಚಿಸುತ್ತಾ ಸಮಯ ನೋಡಿದೆ ಆಗಲೇ ಹದಿನೈದು ನಿಮಿಷಗಳು ಕಳೆದಿತ್ತು. ನಮ್ಮ ಫೋಟೊಗ್ರಫಿ ಜಡ್ಜಿಂಗ್ ಪ್ರಾರಂಭವಾಗುವುದು ನಾಲ್ಕುಗಂಟೆಗೆ. ಅಲ್ಲಿಯವರೆಗೆ ಯಾವುದಾದರೂ ವಿಧಾನದಲ್ಲಿ ಈ ಕೆಂಪು ಏಡಿಗಳ ಗೆಳೆತನವನ್ನು ಸಂಪಾದಿಸೋಣವೆಂದುಕೊಂಡು ನಿದಾನವಾಗಿ ಬೀಚಿನ ಕಡೆಗೆ ನಡೆದೆ. ಸಹಜವಾಗಿ ಎಂದಿನಂತೆ ಒಂದಾದ ನಂತರ ಒಂದು ಕೆಂಪು ಏಡಿಗಳು ತಮ್ಮ ಮರಳ ಗೂಡಿನೊಳಗೆ ಹೋಗತೊಡಗಿದವು. ಐದು ನಿಮಿಷ ನಡೆದಾಡಿ ನನಗೆ ಬೇಕಾದ ಒಂದು ಜಾಗವನ್ನು ಆಯ್ಕೆಮಾಡಿಕೊಂಡೆ. ಆ ಜಾಗ ಹೇಗಿತ್ತೆಂದರೆ ಸುಮಾರು ಹತ್ತು ಅಡಿಯಷ್ಟು ಸುತ್ತಳತೆಯಲ್ಲಿ ಎಲ್ಲೂ ಈ ಕೆಂಪು ಏಡಿಗಳ ಗೂಡು ಇರಲಿಲ್ಲ. ಈ ಜಾಗವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ನಾನು ಅಲ್ಲಿ ಕುಳಿತುಕೊಂಡರೆ ನನ್ನ ಸುತ್ತ ಕನಿಷ್ಟ ಎಂಟು ಹತ್ತು ಅಡಿ ದೂರದಲ್ಲಿರುವ ಅವು ಗೂಡಿನಿಂದ ಇಣುಕಿದಾಗ ಅಥವ ಹೊರಬಂದು ನನ್ನನ್ನು ನೋಡಿದಾಗ ನನ್ನಿಂದ ಅವುಗಳಿಗೆ ತೊಂದರೆ ಉಂಟಾದರೆ ಅವು ತಕ್ಷಣ ಮರಳೊಳಗೆ ನುಗ್ಗಿ ತಪ್ಪಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಲ್ವ! ಈ ರೀತಿ ಅವು ಯೋಚಿಸಿದಲ್ಲಿ ಅದಕ್ಕೆ ಅವಕಾಶವಿರಬೇಕು, ಆಗ ಮಾತ್ರ ಅವು ಒಮ್ಮೆ ಒಳಹೋಗಿ ಮತ್ತೆ ಹೊರಬಂದು ಇಣುಕುವುದು, ನನ್ನನ್ನು ನೋಡುವುದು, ಮತ್ತೆ ಒಳಹೋಗುವುದು ಇಂಥ ಕಣ್ಣಾಮುಚ್ಚಾಲೆ ಆಟ ಆಡಲು ಅವುಗಳಿಗೆ ಸಾಧ್ಯ. ಇದು ಬಿಟ್ಟು ನಾನು ಅವುಗಳ ಗೂಡಿನ ಮೇಲೆ ಅಥವ ಅವುಗಳಿಂದ ಒಂದು ಎರಡು ಅಡಿಗಳ ಅಂತರದಲ್ಲಿ ಕುಳಿತರೆ ಅವು ದಿನ ಪೂರ್ತಿ ನನ್ನ ದೊಡ್ಡ ಗಾತ್ರದ ಭಯದಿಂದ ಖಂಡಿತವಾಗಿ ಹೊರಗೆ ಬರುವುದಿಲ್ಲ. ಹಾಗೇನಾದರೂ ಆದರೆ ಅವುಗಳ ಗೆಳೆತನವನ್ನು ಸಂಪಾದಿಸುವುದು ಹೇಗೆ ಮತ್ತು ಫೋಟೊಗ್ರಫಿ, ವಿಡಿಯೋ ಮಾಡುವುದು ಹೇಗೆ ಸಾಧ್ಯ? ಈ ಕಾರಣಕ್ಕಾಗಿ ಆ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಕುಳಿತುಕೊಳ್ಳುವ ಮೊದಲು ಕೆಲವು ಷರತ್ತುಗಳನ್ನು ನನಗೆ ನಾನೇ ವಿಧಿಸಿಕೊಂಡಿದ್ದೆ. ಅದೇನೆಂದರೆ ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಜೇಬಿನಲ್ಲಿರುವ ಪುಟ್ಟ ಕ್ಯಾಮೆರವನ್ನು ಹೊರತೆಗೆಯಬಾರದು. ಏಕೆಂದರೆ ನಮ್ಮಂಥ ಛಾಯಾಗ್ರಾಹಕರ ಕೈಯಲ್ಲಿ ಕ್ಯಾಮೆರವಿದ್ದರೆ ಅದು ಖಂಡಿತ ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತೆ. ನಾವು ಸುಮ್ಮನೆ ಕೂರುವುದೇ ಇಲ್ಲ. ಅಲ್ಲಿ ನೋಡುವುದು ಇಲ್ಲಿ ನೋಡುವುದು, ಅವುಗಳ ಫೋಟೊ ತೆಗೆಯುವುದು ಕ್ಯಾಮೆರ ಚೆಕ್ ಮಾಡುವುದು ಹೀಗೆ ನಾನಾ ರೀತಿಯಲ್ಲಿ ನಮ್ಮ ಕೈಕಾಲು, ದೇಹ, ಕುತ್ತಿಗೆ ಕಣ್ಣು ಇತ್ಯಾದಿಗಳು ಕ್ಯಾಮೆರ ಸಮೇತ ಚಲನೆಯಲ್ಲಿರುತ್ತವೆ. ಹೀಗೆ ಚಲನೆಯಲ್ಲಿದ್ದರೆ ಗೂಡಿನೊಳಗಿರುವ ಕೆಂಪು ಏಡಿಗಳು ಹೇಗೆ ಹೊರಬರಲು ಸಾಧ್ಯ? ಈ ಕಾರಣಕ್ಕಾಗಿ ಕ್ಯಾಮೆರವನ್ನು ಜೇಬಿನಿಂದ ಹೊರ ತೆಗೆಯುವಂತಿಲ್ಲ. ಎರಡನೆಯದು ಒಂದು ಕಡೆ ಕುಳಿತರೆ ಕಾಲು ಬೆರಳ ತುದಿಯಿಂದ ತಲೆ ಕೂದಲವರೆಗೆ ಕನಿಷ್ಟ ಪಕ್ಷ ಹತ್ತು ನಿಮಿಷ ಸ್ವಲ್ಪವೂ ಅಲುಗಾಡಬಾರದು. ಕುಳಿತುಕೊಳ್ಳುವ ಮೊದಲೇ ಯಾವ ದಿಕ್ಕಿನಲ್ಲಿರುವ ಗೂಡುಗಳನ್ನು ಗಮನಿಸಬೇಕು ಅದನ್ನು ಮೊದಲೇ ತೀರ್ಮಾನಿಸಿಕೊಂಡಿರಬೇಕು ಮತ್ತು ಅದೇ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು ಏಕೆಂದರೆ ಒಮ್ಮೆ ಕುಳಿತ ಮೇಲೆ ನಿಮ್ಮ ಕುತ್ತಿಗೆಯನ್ನು ಅತ್ತಿತ್ತ ತಿರುಗಿಸಬಾರದು ಅಲುಗಾಡಿಸಬಾರದು ಕೇವಲ ಕಣ್ಣುಗಳ ಚಲನೆಯಲ್ಲಿ ಮಾತ್ರ ಅವುಗಳನ್ನು ಗಮನಿಸಿಬೇಕು. ಮೂರನೆಯದು ಕಡಿಮೆಯೆಂದರೂ ಸುಮಾರು ಅರ್ಧಗಂಟೆ ಅಲುಗಾಡದೇ ಕುಳಿತುಕೊಳ್ಳಬೇಕು. ಈ ಮೂರು ಷರತ್ತುಗಳನ್ನು ನನಗೆ ನಾನೇ ವಿಧಿಸಿಕೊಂಡು ಚಕ್ಕಲಬಕ್ಕಲ ಹಾಕಿಕೊಂಡು ಕುಳಿತುಬಿಟ್ಟೆ.
ಹದಿನೈದು ನಿಮಿಷ ಕಳೆಯಿತು ಏನೂ ಬದಲಾವಣೆಯಿಲ್ಲ. ನನ್ನ ಎದುರಿಗೆ ಸಮುದ್ರ ಮತ್ತು ಅದರ ಅಲೆಗಳು. ಕನಿಷ್ಟ ನೂರು ಅಡಿ ಅಂತರದಲ್ಲಿ ಸುತ್ತಲೂ ಕೆಂಪು ಏಡಿಗಳ ಗೂಡುಗಳು. ಆದ್ರೆ ಗೂಡುಗಳಿಂದ ಒಂದಾದರೂ ಏಡಿ ಹೊರಗೆ ಬರಲಿಲ್ಲ. ಕನಿಷ್ಟಪಕ್ಷ ಇಣುಕಲಿಲ್ಲ. ಅದಕ್ಕಾಗಿ ಬೇಸರವಿಲ್ಲ ಏಕೆಂದರೆ ಇನ್ನೂ ಹದಿನೈದು ನಿಮಿಷ ಕಾಯುತ್ತಾ ನನ್ನ ಅದೃಷ್ಟವನ್ನು ಪರೀಕ್ಷೆ ಮಾಡಬೇಕಿದೆ. ಮತ್ತೆ ಐದು ನಿಮಿಷ ಕಳೆಯಿತು. ಬಲಭಾಗದ ಎದುರಿನಲ್ಲಿ ಮಬ್ಬಾಗಿ ಎರಡು ಸಣ್ಣ ಕಣ್ಣುಗಳು ಕಾಣಿಸಿದವು. ಅಲುಗಾಡದೆ ಕಣ್ಣನ್ನು ಮತ್ತಷ್ಟು ಫೋಕಸ್ ಮಾಡಿದೆ. ಹೌದು ಎರಡು ಸೂಜಿಗೆ ಉದ್ದದ ಒಂದೊಂದು ಬಿಳಿಮಣಿಯನ್ನು ಪೋಣಿಸಿದಂತೆ ಕಾಣುವ ಎರಡು ಅಂಟೇನದಂತ ಪುಟ್ಟ ಕಣ್ಣುಗಳು ನನ್ನನ್ನೇ ನೋಡುತ್ತಿವೆ! ಇದು ಖಂಡಿತವಾಗಿ ಕೆಂಪು ಏಡಿಯ ಕಣ್ಣುಗಳೇ ಅಂದುಕೊಂಡು ಅಲುಗಾಡದೇ ಅದನ್ನೇ ಗಮನಿಸುತ್ತಾ ಅದರ ದೇಹವೆಲ್ಲಿದೆ ಎಂದು ನೋಡಿದರೆ ಅದರ ಪೂರ್ತಿ ದೇಹ ಮರಳ ಗೂಡಿನೊಳಗೆ ಇದೆ! ತನ್ನ ಅಂಟೇನ ಮೇಲಕ್ಕೇರಿಸಿ ಅದರಲ್ಲಿರುವ ಕಣ್ಣುಗಳಿಂದ ನನ್ನನ್ನು ಗಮನಿಸುತ್ತಿದೆ! ಒಂದು ನಿಮಿಷ ಕಳೆದಿರಬಹುದು ಆ ಕಣ್ಣುಗಳು ನನ್ನ ಕಡೆಯಿಂದ ಎಡಕ್ಕೆ ತಿರುಗಿದವು. ನಾನು ಕೂಡ ಅಲುಗಾಡದೆ ಎಡಭಾಗಕ್ಕೆ ಕಣ್ಣೋಟವನ್ನು ತಿರುಗಿಸಿದೆ. ಅರೆರೆ! ಅದರ ಸಮಾನ ಅಂತರದಲ್ಲಿ ಅಲ್ಲೂ ಕೂಡ ಎರಡು ಕಣ್ಣುಗಳು ನನ್ನನ್ನು ನೋಡುತ್ತಿವೆ! ಮತ್ತೆ ಬಲಕ್ಕೆ ನೋಡುತ್ತಿವೆ! ಅಂದರೆ ಇವೆರಡು ಕೆಂಪು ಏಡಿಗಳು ಮರೆಯಲ್ಲಿಯೇ ನನ್ನ ನೋಡುತ್ತಾ, ಜೊತೆಗೆ ಅವೆರಡು ಒಂದಕ್ಕೊಂದು ತಮ್ಮ ಕಣ್ಣೋಟದಲ್ಲಿಯೇ ಮಾತಾಡಿಕೊಳ್ಳುತ್ತಿವೆ! ಇದೇ ಸರಿಯಾದ ಸಮಯವೆಂದುಕೊಂಡು ನಾನು ಅಲುಗಾಡದೇ ಅವುಗಳನ್ನೇ ಗಮನಿಸುತ್ತಿದ್ದೆ. ಮತ್ತೆರಡು ನಿಮಿಷ ಕಳೆಯಿತು. ಎಡಭಾಗದಲ್ಲಿ ಅಂಟೇನ ಕಣ್ಣುಗಳು ನಿದಾನವಾಗಿ ಮೇಲಕ್ಕೆ ಬಂದವು ಅವುಗಳ ಸಮೇತ ಕೆಂಪು ಏಡಿಯ ದೇಹವೂ ಮೇಲೆ ಬಂತು. ಅದನ್ನು ಗಮನಿಸಿದ ಬಲಭಾಗದಲ್ಲಿದ್ದ ಏಡಿಯೂ ಮೇಲಕ್ಕೆ ಬಂತು. ಮತ್ತೆ ಎರಡು ನಿಮಿಷ ಕಳೆಯಿತು.
ನನ್ನನ್ನೇ ನೋಡುತ್ತಿದ್ದ ಅವುಗಳಿಗೆ ಏನನ್ನಿಸಿತೋ ಏನೋ ಮತ್ತೆ ತಮ್ಮ ಗೂಡಿನೊಳಗೆ ಹೋಗಿಬಿಟ್ಟವು. ಮತ್ತೆ ಐದು ನಿಮಿಷ ಕಳೆಯಿತು. ಮತ್ತೆ ಅದೇ ರೀತಿ ತಮ್ಮ ಆಂಟೇನ ಕಣ್ಣುಗಳಿಂದ ನನ್ನನ್ನು ಗಮನಿಸುತ್ತಾ ನಿದಾನವಾಗಿ ಮೇಲೆ ಬಂದವು. ಈ ಭಾರಿ ದೈರ್ಯ ಮಾಡಿ ಎರಡು ಹೆಜ್ಜೆ ಮುಂದೆ ಬಂದು ನಿಂತು ನನ್ನನ್ನು ನೋಡುವುದು ಮತ್ತು ಅವುಗಳು ಒಂದಕ್ಕೊಂದು ನೋಡಿಕೊಳ್ಳುವುದು ಸ್ವಲ್ಪ ಹೊತ್ತು ನಡೆಯಿತು. ಬಹುಶ: ಅವುಗಳ ಮುಂದೆ ಕುಳಿತ ಈ ಪ್ರಾಣಿಯಿಂದ ನಮಗೇನು ತೊಂದರೆಯಿಲ್ಲ ಎಂದುಕೊಂಡವೇನೋ, ಅಥವ ಹೀಗೆ ಅವುಗಳ ಮುಂದೆ ಅಲುಗಾಡದೆ ಕುಳಿತಿರುವುದು ಜೀವವಿರುವ ವಸ್ತುವಲ್ಲ...ಯಾವುದೋ ಜಡವಸ್ತು ಇಲ್ಲಿ ಬಂದು ಬಿದ್ದಿದೆ ಎಂದುಕೊಂಡವೋ ಏನೋ..ನಿಧಾನವಾಗಿ ತಮ್ಮ ಪಾಡಿಗೆ ಎಡ ಬಲಕ್ಕೆ ಚಲಿಸತೊಡಗಿದವು. ಅರ್ಧಗಂಟೆಯವರೆಗೆ ಅಲುಗಾಡದೆ ಕುಳಿತಿದ್ದ ನಾನು ನಿದಾನವಾಗಿ ಕಂಡರೂ ಕಾಣದ ಹಾಗೆ ಹಿಂದಕ್ಕೆ ಕತ್ತನ್ನು ತಿರುಗಿಸಿದೆ. ಅರೆರೆ...ಅಲ್ಲೂ ಕೂಡ ಹತ್ತಿರದಲ್ಲಿಯೇ ಮೂರ್ನಾಲ್ಕು ಏಡಿಗಳು ಹೊರಬಂದು ತಮ್ಮ ಪಾಡಿಗೆ ಓಡಾಡುತ್ತಿವೆ. ಅಂದರೆ ನನ್ನ ಸುತ್ತ ಇರುವ ಇವೆಲ್ಲಾ ಏಡಿಗಳು ಒಂದಕ್ಕೊಂದು ಕಣ್ಣಲ್ಲೇ ಮಾತಾಡಿಕೊಂಡು ನನ್ನಂಥ ಜಡವಸ್ತುವಿನಿಂದ ಏನು ತೊಂದರೆಯಿಲ್ಲವೆಂದುಕೊಂಡು ಹೊರಬಂದಿವೆ. ಅಲ್ಲಿಗೆ ಒಂದು ಹಂತದ ಗೆಳೆತನವನ್ನು ಸಾಧಿಸಿದಂತಾಯಿತು ಎಂದುಕೊಂಡು ಹಾಗೆ ನಿದಾನವಾಗಿ ಕಾಲುಗಳನ್ನು ಮುಂದಕ್ಕೆ ಚಾಚಿದೆ, ಎರಡೂ ಕೈಗಳನ್ನು ನೆಲಕ್ಕೆ ಊರಿ ಅರಾಮವಾಗಿ ಕುಳಿತೆ. ನನ್ನ ಈ ಪುಟ್ಟ ಚಲನೆಯಿಂದ ಮತ್ತೆ ಅವೆಲ್ಲಾ ಒಳಗೆ ಓಡಿದವು. ಆದ್ರೆ ಜಾಸ್ತಿ ಹೊತ್ತೇನಿಲ್ಲ. ಎರಡು ನಿಮಿಷಗಳಲ್ಲೇ ಮತ್ತೆ ಹೊರಬಂದು ಆರಾಮವಾಗಿ ತಮ್ಮ ಕೆಲಸವನ್ನು ಮುಂದುವರಿಸಿದವು. ಸಮಯ ನೋಡಿದೆ. ಆಗಲೇ ನಾಲ್ಕು ಗಂಟೆ ದಾಟಿತ್ತು. ಅವುಗಳ ಜೊತೆ ಇನ್ನಷ್ಟು ಕಳೆಯುವ ಆಸೆಯಿದ್ದರೂ ಜಡ್ಜಿಂಗ್ ಕೆಲಸವಿದ್ದಿದ್ದರಿಂದ ವಿಧಿಯಿಲ್ಲದೇ ಎದ್ದು ಬಂದೆ.
ನಾನು ಎದ್ದು ಬರುತ್ತಿದ್ದಂತೆ ಮತ್ತೆ ಅವುಗಳೆಲ್ಲಾ ಒಳಗೆ ಓಡಿದವು. ನಿದಾನವಾಗಿ ನಡೆಯುತ್ತಾ ಸ್ವಲ್ಪ ದೂರ ಬಂದು ನಾನು ಕುಳಿತಿದ್ದ ಜಾಗವನ್ನು ಕಣ್ಣಿನಲ್ಲಿಯೇ ಅಂದಾಜು ಮಾಡಿಕೊಂಡೆ. ಏಕೆಂದರೆ ನಾಳೆ ಬೇರೆ ಜಾಗದಲ್ಲಿ ಕುಳಿತರೆ ಅಲ್ಲಿ ಹೊಸ ಏಡಿಗಳು ಜೊತೆ ಹೊಸದಾಗಿ ಮತ್ತೆ ಗೆಳೆತನ ಬೆಳೆಸುವ ಇದೇ ಸರ್ಕಸ್ ಮಾಡಬೇಕಾಗುತ್ತದೆ. ಮತ್ತೆ ನನಗೆ ಅಷ್ಟೊಂದು ಸಮಯವೂ ಇಲ್ಲ. ಈ ಕಾರಣಕ್ಕಾಗಿ ನಾಳೆಯೂ ಅಲ್ಲಿಯೇ ಕುಳಿತರೆ ಅಲ್ಲಿರುವ ಏಡಿಗಳಿಗೆ ನನ್ನ ದೇಹದ ಗಾತ್ರ, ಗುರುತು, ಪರಿಚಯ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ನನ್ನಿಂದ ಏನು ತೊಂದರೆಯಿಲ್ಲವೆನ್ನುವ ವಿಚಾರ ಅವುಗಳಿಗೆ ಮನವರಿಕೆಯಾಗಿರಬಹುದು. ನಾಳೆ ಸಾಧ್ಯವಾದರೆ ಅವುಗಳ ಫೋಟೊಗ್ರಫಿ ಮಾಡಬಹುದು ಎನ್ನುವ ನನ್ನ ಲೆಕ್ಕಾಚಾರವಾಗಿತ್ತು. ನಾನು ಇತ್ತ ಬರುತ್ತಿದ್ದಂತೆ ನಿದಾನವಾಗಿ ಎಲ್ಲ ಕೆಂಪು ಏಡಿಗಳು ಎಂದಿನಂತೆ ಹೊರಬಂದು ತಮ್ಮ ಕಾಯಕದಲ್ಲಿ ತೊಡಗಿದವು.
ಜುಲೈ ೩೦ ಮಧ್ಯಾಹ್ನ ಎರಡುವರೆ ಗಂಟೆ
ಊಟವಾಗಿತ್ತು. ಅದಕ್ಕೂ ಮೊದಲೇ ಮೂರು ದಿನದಿಂದ ನಡೆಯುತ್ತಿದ್ದ ಫೋಟೋಗ್ರಫಿ ಜಡ್ಜಿಂಗ್ ಕೆಲಸವೂ ಮುಗಿದಿತ್ತು. ಇನ್ನು ಉಳಿದ ಅರ್ಧ ದಿನ ಪೂರ್ತಿ ಏನು ಕೆಲಸವಿಲ್ಲವಾದ್ದರಿಂದ ಬೇಗನೇ ಬೀಚಿಗೆ ಬಂದಿದ್ದೆ. ಈ ಭಾರಿ ನಿನ್ನೆಯಂತ ಷರತ್ತುಗಳೇ ಇದ್ದರೂ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೆ. ಅಲ್ಲಿ ಹೋಗಿ ಕುಳಿತುಕೊಳ್ಳುವ ಮೊದಲೇ ನನ್ನ ಪುಟ್ಟ ಕ್ಯಾಮೆರದಲ್ಲಿನ ಮೊಮೊರಿ ಕಾರ್ಡು, ಫೋಟೊ ಕ್ಲಿಕ್ಕಿಸಲು ಸೆಟ್ ಮಾಡಿಕೊಳ್ಳಬೇಕಾದ ತಾಂತ್ರಿಕತೆ, ನಂತರ ವಿಡಿಯೋ ಮಾಡಲು ಅವಕಾಶ ಸಿಕ್ಕಲ್ಲಿ ಕೂಡಲೇ ಬದಲಿಸಿಕೊಳ್ಳಲು ಬೇಕಾದ ಸುಲಭ ವಿಧಾನ ಇತ್ಯಾದಿಗಳನ್ನೆಲ್ಲಾ ಮೊದಲೇ ಸ್ವಲ್ಪ ಪ್ರಯೋಗ ಮಾಡಿ ಸರಿಯಾಗಿದೆಯೆನ್ನುವುದನ್ನು ಖಚಿತಪಡಿಸಿಕೊಂಡು ನಿದಾನವಾಗಿ ಬೀಚಿನತ್ತ ನಡೆದೆ. ಆಗಲೇ ಸಾವಿರಾರು ಕೆಂಪು ಏಡಿಗಳು ಮೈಲುದ್ದದ ಬೀಚಿನಲ್ಲಿ ಹೊರಗೆ ಬಂದು ಬಿಸಿಲು ಕಾಯುತ್ತಿದ್ದವು. ಇವತ್ತು ಸಾಧ್ಯವಾದರೆ ಅವುಗಳ ವಿಡಿಯೋ ಡಾಕ್ಯುಮೆಂಟರಿ ಆಗದಿದ್ದಲ್ಲಿ ಕನಿಷ್ಟಪಕ್ಷ ಫೋಟೊಗಳನ್ನಾದರೂ ಕ್ಲಿಕ್ಕಿಸಬೇಕೆನ್ನುವ ಖಚಿತ ನಿರ್ಧಾರ ಮಾಡಿಕೊಂಡಿದ್ದರೂ ನನ್ನ ನಡೆ ನುಡಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಅವುಗಳೆಲ್ಲಾ ವಿಫಲವಾಗುವ ಸಾಧ್ಯತೆ ಹೆಚ್ಚಿತ್ತು. ಇವತ್ತು ಸ್ವಲ್ಪ ನನ್ನ ನಡೆಯಲ್ಲಿ ಸ್ವಲ್ಪ ಬದಲಾಯಿಸಿಕೊಳ್ಳುವುದು ಒಳ್ಳೆಯದು ಎಂದುಕೊಂಡು ಮೊದಲಿಗೆ ನಿನ್ನೆ ಕುಳಿತಿದ್ದ ಜಾಗಕ್ಕೆ ಬೇಗ ಹೋಗಿ ಕುಳಿತುಕೊಳ್ಳುವುದು ಬೇಡ, ನಿದಾನವಾಗಿ ಒಂದೊಂದೇ ಹೆಜ್ಜೆಯನ್ನು ಇಡುತ್ತಾ ಹೋಗುವ ಪ್ಲಾನ್ ಮಾಡಿಕೊಂಡು ನಿದಾನವಾಗಿ ಒಂದು ಹೆಜ್ಜೆ ಇಡುವುದು ಮತ್ತೆ ಹತ್ತು ಸೆಕೆಂಡ್ ನಿಲ್ಲುವುದು ಹೀಗೆ ಮಾಡುತ್ತಿದ್ದೆ. ಹೆಜ್ಜೆಗೊಮ್ಮೆ ಒಂದಷ್ಟು ಏಡಿಗಳು ಮರಳೊಳಗೆ ಹೋಗುತ್ತಿದ್ದವು. ಸ್ವಲ್ಪ ದೂರದಲ್ಲಿರುವಂತವೂ ನನ್ನನ್ನೇ ನೋಡುತ್ತಿದ್ದವುಗಳು ಅವುಗಳ ಹತ್ತಿರ ಹೋಗುತ್ತಿದ್ದಂತೆ ಅವು ಕೂಡ ಒಳಹೋಗುತ್ತಿದ್ದವು. ಈ ಪ್ರಕ್ರಿಯೆ ನಡೆಯುತ್ತಲೇ ಮೊದಲೇ ಗುರಿತಿಸಿದ್ದ ಜಾಗವನ್ನು ತಲುಪಿದ್ದೆ. ಅಲ್ಲೂ ಕೂಡ ಕ್ಷಣಮಾತ್ರದಲ್ಲಿ ನಿನ್ನೆ ನೋಡಿದ್ದ ಕೆಂಪು ಏಡಿಗಳೆಲ್ಲಾ ಒಳಹೋದವು. ನನಗೆ ತಿಳಿದಂತೆ ಅವುಗಳ ನೆನಪಿನ ಶಕ್ತಿ ಕಡಿಮೆಯಿದ್ದು ನನ್ನನ್ನು ಮರೆತಿದ್ದರೂ ಒಮ್ಮೆ ನಡೆದ ಕ್ರಿಯೆ ಮತ್ತೆ ನಡೆದರೆ ಅವುಗಳಿಗೆ ಹೊಂದಿಕೊಳ್ಳುವ ಗುಣವಂತೂ ಇದೆಯೆಂದು ನನಗೆ ಗೊತ್ತಿತ್ತು. ಅಂದರೆ ನಿನ್ನೆ ನಾನು ಇಲ್ಲಿ ಬಂದು ಮುಕ್ಕಾಲು ಗಂಟೆ ಕುಳಿತು ಅವುಗಳಿಗೆ ಏನೂ ತೊಂದರೆ ಕೊಡದೆ ದ್ದು ಹೋಗಿದ್ದು ಅದೇ ಕ್ರಿಯೆ ಇವತ್ತು ನಡೆದರೆ ಅವುಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆನ್ನುವ ಒಂದು ಆತ್ಮವಿಶ್ವಾಸ ನನ್ನೊಳಗಿತ್ತು. ಅದೇ ರೀತಿ ಹೋಗಿ ನೇರವಾಗಿ ಕುಳಿತುಬಿಟ್ಟೆ. ಹದಿನೈದು ನಿಮಿಷ ಕಳೆದರೂ ನನ್ನ ಸುತ್ತಲಿನ ಯಾವ ಕೆಂಪು ಏಡಿಯೂ ಹೊರಬರಲಿಲ್ಲ. ಇದೇ ಸಮಯವನ್ನು ಉಪಯೋಗಿಸಿಕೊಂಡು ನಾನು ನನ್ನ ಪುಟ್ಟ ಕ್ಯಾಮೆರವನ್ನು ಹೊರತೆಗೆದು ಮರಳ ನೆಲದ ಮೇಲೆ ಇಟ್ಟು ನನ್ನಿಂದ ಎಂಟು ಅಡಿ ದೂರವಿರುವ ಒಂದು ಕೆಂಪು ಏಡಿಯ ಗೂಡಿನಿಂದ ಏಡಿ ಹೊರಬಂದು ಅದು ನಿಲ್ಲುವ ಸ್ಥಳವನ್ನು ಅಂದಾಜು ಮಾಡಿ ಆ ಜಾಗಕ್ಕೆ ಕ್ಯಾಮೆರವನ್ನು ಫೋಕಸ್ ಮಾಡಿ, ಏಡಿಯ ಸುತ್ತಲು ಎಷ್ಟು ಜಾಗವಿರಬೇಕೆಂದು ಮೊದಲೇ ಅಂದಾಜು ಮಾಡಿ ಕ್ಯಾಮೆರವನ್ನು ಕಂಪೋಸ್ ಮಾಡಿ ಸಿದ್ದಮಾಡಿಕೊಂಡು ನನ್ನ ಬಲಗೈ ತೋರುಬೆರಳನ್ನು ಕ್ಯಾಮೆರ ಕ್ಲಿಕ್ ಬಟನ್ ಮೇಲೆ ಇಟ್ಟುಕೊಂಡು ಅದೇ ಸ್ಥಿತಿಯಲ್ಲಿ ಕುಳಿತುಬಿಟ್ಟೆ. ಮತ್ತೆ ಹತ್ತು ನಿಮಿಷ ಕಳೆದಿರಬಹುದು ಎಡಭಾಗದಲ್ಲಿರುವ ಗೂಡಿನಿಂದ ಒಂದು ಕೆಂಪು ಏಡಿ ತನ್ನ ಆಂಟೇನ ಕಣ್ಣುಗಳನ್ನು ಹೊರಚಾಚಿತು. ಮತ್ತೆರಡು ನಿಮಿಷ ಕಳೆಯುವಷ್ಟರಲ್ಲಿ ಅದು ಪೂರ್ತಿ ಹೊರಬಂದು ನನ್ನನ್ನು ನೋಡುವುದು ಮತ್ತು ಎಡಬಲ ನೋಡುವುದು ಮಾಡತೊಡಗಿತು. ಎಂಥ ವಿಪರ್ಯಾಸವೆಂದರೆ ನಾನು ಕ್ಯಾಮೆರ ಕ್ಲಿಕ್ ಬಟನ್ ಮೇಲೆ ತೋರುಬೆರಳಿಟ್ಟಿದ್ದರೂ ಕ್ಲಿಕ್ ಮಾಡುವಂತಿರಲಿಲ್ಲ, ಮಾಡಿದ್ದರೂ ಅದು ವೇಸ್ಟ್ ಆಗುತ್ತಿತ್ತು. ಏಕೆಂದರೆ ನಾನು ಕ್ಯಾಮೆರವನ್ನು ಸೆಟ್ ಮಾಡಿ ಫೋಕಸ್ ಮಾಡಿಟ್ಟಿರುವುದು ಬಲಭಾಗದ ಗೂಡಿನ ಕಡೆಗೆ. ಆದ್ರೆ ಇಲ್ಲಿ ಹೊರಬಂದಿರುವುದು ಎಡಭಾಗದ ಗೂಡಿನಲ್ಲಿರುವ ಏಡಿ. ಎಷ್ಟು ಸೂಕ್ಷ್ಮವಾಗಿ ಕ್ಯಾಮೆರವನ್ನು ತಿರುಗಿಸಿದರೂ ಕೂಡ ಅದಕ್ಕೆ ನನ್ನ ಚಲನೆ ಗೊತ್ತಾಗಿ ಮತ್ತೆ ಮರಳೊಳಗೆ ಹೋಗಿಬಿಡುವುದು ಖಚಿತವಾದ್ದರಿಂದ ಮುಂದೇನು ಮಾಡುವುದು ತೋಚದೆ ಕಾಯುವುದೊಂದೆ ದಾರಿ ಎಂದು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಐದು ನಿಮಿಷ ಕಳೆದಿರಬಹುದು ಬಲಭಾಗದ ಗೂಡಿನಿಂದ ನಿದಾನವಾಗಿ ತನ್ನ ಅಂಟೇನವನ್ನು ಹೊರಸೂಸಿತು. ಮರುನಿಮಿಷದಲ್ಲಿ ಇನ್ನಷ್ಟು ಹೊರಬಂದು ನನ್ನ ಕಡೆಗೆ ನೋಡತೊಡಗಿತು. ಮತ್ತೆರಡು ನಿಮಿಷ ಕಳೆಯುವಷ್ಟರಲ್ಲಿ ಅದು ಪೂರ್ತಿ ಹೊರಬಂದು ನನ್ನನ್ನು ಮತ್ತು ಎಡಭಾಗದಲ್ಲಿರುವ ಏಡಿಯನ್ನು ನೋಡತೊಡಗಿತು. ಬಹುಷ: ಈಗ ಅವೆರಡೂ ಏಡಿಗಳು ನಿನ್ನೆಯ ಪ್ರಕ್ರಿಯೆಯನ್ನು ನೆನಪಿಸಿಕೊಳ್ಳುತ್ತಾ ಕಣ್ಣುಗಳಲ್ಲೇ ಮಾತಾಡಿಕೊಳ್ಳುತ್ತಿರಬಹುದು ಎಂದುಕೊಂಡು ಇದೇ ಸರಿಯಾದ ಸಮಯವೆಂದು ಅಲುಗಾಡದೆ ಇಟ್ಟಿದ್ದ ಕ್ಯಾಮೆರದಲ್ಲಿ ಒಂದಷ್ಟು ಪೋಟೊವನ್ನು ಕ್ಲಿಕ್ಕಿಸಿದೆ. ಸ್ವಲ್ಪ ಹೊತ್ತು ಕಳೆಯುತ್ತಿದ್ದಂತೆ ನನ್ನಿಂದ ಏನು ತೊಂದರೆ ಇಲ್ಲವೆಂದು ಅವುಗಳಿಗೆ ಅರಿವಾಯ್ತೇನೋ ಅವು ನಿದಾನವಾಗಿ ಎಡಕ್ಕೆ ಮತ್ತು ಬಲಕ್ಕೆ ನಡೆಯತೊಡಗಿದವು. ಈಗ ಇನ್ನಷ್ಟು ಚೆನ್ನಾಗಿ ಫೋಟೊಗ್ರಫಿ ಮಾಡಬಹುದೆಂದುಕೊಂಡು ನಾನು ಕುಳಿತ ಜಾಗದಿಂದ ಸ್ವಲ್ಪವೂ ಅಲುಗಾಡದೆ ಕ್ಯಾಮೆರವನ್ನು ಸ್ವಲ್ಪವೇ ತಿರುಗಿಸಿ ಇನ್ನಷ್ಟು ಚೆನ್ನಾಗಿ ಫೋಟೊಗ್ರಫಿ ಮಾಡಿದ್ದಲ್ಲದೆ ಹಾಗೆ ಕ್ಯಾಮೆರವನ್ನು ಎಡಕ್ಕೆ ತಿರುಗಿಸಿ ಆ ಕಡೆ ಬಂದಿದ್ದ ಕೆಂಪು ಏಡಿಯ ಕೆಲವು ಫೋಟೊಗಳನ್ನು ಕ್ಲಿಕ್ಕಿಸಿದ್ದೆ.
ನನಗೆ ಬೇಕಾದ ಹಾಗೆ ಫೋಟೊಗ್ರಫಿಯನ್ನಂತೂ ಮಾಡಿದ್ದಾಯಿತು. ಈಗ ನನ್ನ ಮುಂದಿನ ಗುರಿ ಅವುಗಳ ನಡುವಳಿಕೆಯ ವಿಡಿಯೋಗ್ರಫಿ ಮಾಡುವುದು. ಅವುಗಳನ್ನೇ ಗಮನಿಸುತ್ತಾ ಕ್ಯಾಮೆರ ಮೇಲಿಟ್ಟಿದ್ದ ಬಲಗೈ ತೋರುಬೆರಳನ್ನು ತೆಗೆದು ಉಳಿದ ಬೆರಳುಗಳನ್ನು ಬಳಸಿಕೊಂಡು ವಿಡಿಯೋ ಮೋಡ್ ಸೆಟ್ ಮಾಡಿ ಸಿದ್ದನಾದೆ. ವಿಡಿಯೋ ಮಾಡಬೇಕಾದ ದೂರ ಮತ್ತು ಅದಕ್ಕೆ ತಕ್ಕಂತೆ ಫೋಕಸ್ ಸಿದ್ಧಮಾಡಿಕೊಂಡಿದ್ದರೂ ಬಲಭಾಗದ ಗೂಡಿನಿಂದ ಹೊರಬಂದಿದ್ದ ಕೆಂಪು ಏಡಿ ಅದರ ಗೂಡಿನಿಂದ ಎರಡು ಅಡಿ ದೂರಕ್ಕೆ ಬಂದು ಏನನ್ನೋ ಮಾಡುತ್ತಿದ್ದುದ್ದು ನನ್ನ ಬರಿ ಕಣ್ಣಿಗೆ ಗೊತ್ತಾಗುತ್ತಿರಲಿಲ್ಲ. ಆದ್ರೆ ನಾನು ಆತುರ ಪಡುವಂತಿರಲಿಲ್ಲ ಏಕೆಂದರೆ ಅದು ಖಂಡಿತ ಗೂಡಿನ ಕಡೆಗೆ ಬಂದೇ ಬರುತ್ತದೆ, ಅಲ್ಲಿಯವರೆಗೆ ಕಾಯ್ದು ಅಮೇಲೆ ಅದರ ವಿಡಿಯೋ ಮಾಡೋಣವೆಂದು ಸ್ವಲ್ಪ ಹೊತ್ತು ಕಾಯ್ದೆ. ಎರಡು ನಿಮಿಷ ಕಳೆದಿರಬಹುದು ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಅಂದುಕೊಂಡ ಅದು ನಿದಾನವಾಗಿ ಗೂಡಿನ ಕಡೆಗೆ ಬಂದು ತನ್ನ ಮುಂಭಾಗದಲ್ಲಿರುವ ಎರಡು ಕೈಗಳಿಂದ ಒಂದಷ್ಟು ಮರಳನ್ನು ತೆಗೆದುಕೊಳ್ಳುವುದು ಅದನ್ನು ತನ್ನ ಬಾಯಿಯ ಬಳಿ ತಂದು ಎಂಜಲಿಂದ ಉಂಡೆ ಮಾಡಿ ಮತ್ತೆ ನೆಲಕ್ಕೆ ಹಾಕುತ್ತಿತ್ತು. ಈ ಕ್ರಿಯೆಯ ಒಂದಷ್ಟು ವಿಡಿಯೋ ಮಾಡಿ ಮುಂದೇನು ಮಾಡಬಹುದೆಂದು ಕಾಯುತ್ತಿದ್ದೆ. ಆದ್ರೆ ಅದು ಮತ್ತೇನು ಮಾಡದೆ ನಡುವೆ ಸ್ವಲ್ಪ ರೆಸ್ಟ್ ತೆಗೆದುಕೊಂಡು ಮತ್ತೆ ಎರಡು ಕೈಗಳಿಂದ ಮರಳನ್ನು ತೆಗೆದುಕೊಂಡು ಬಾಯಿಗೆ ತಂದು ಎಂಜಲು ಹಾಕಿ ಉಂಡೆ ಮಾಡಿ ನೆಲಕ್ಕೆ ಹಾಕುತ್ತಿತ್ತು. ಅದನ್ನೇ ಎಷ್ಟು ಅಂತ ವಿಡಿಯೋ ಮಾಡುವುದು! ನನಗೇ ಬೋರ್ ಅನ್ನಿಸತೊಡಗಿ ವಿಡಿಯೋ ಮಾಡುವುದು ನಿಲ್ಲಿಸಿದೆ. ಆದ್ರೆ ಅದೂ ಮಾತ್ರ ಅದನ್ನೇ ಮಾಡುತ್ತಿತ್ತು. ಬಹುಶಃ ನಮಗೂ ಈ ಸಣ್ಣ ಸಣ್ಣ ಜೀವಿಗಳಿಗೂ ಇರುವ ವ್ಯತ್ಯಾಸ ಏನೆಂದರೆ ಅವು ಮಾಡುತ್ತಿರುವುದನ್ನೇ ಸಾವಿರಸಲ ಅಥವ ದಿನವೆಲ್ಲಾ, ವಾರ, ತಿಂಗಳು ವರ್ಷಗಟ್ಟಲೇ ಮಾಡಿದರೂ ಕೂಡ ಅವುಗಳಿಗೆ ತಮ್ಮ ಕಾಯಕ ಬೇಸರವಾಗುವುದಿಲ್ಲ. ಆದ್ರೆ ನಾವು ಮಾಡುವ ಕೆಲಸ ಒಂದರ್ಧ ಗಂಟೆ ಅಥವ ಒಂದು ಗಂಟೆ ಕಳೆಯುತ್ತಿದ್ದಂತೆ ಬೇಸರವಾಗಿ ಎದ್ದು ಹೋಗಿಬಿಡುತ್ತೇವೆ, ಅದನ್ನೇ ಮತ್ತೆ ಮತ್ತೆ ಮಾಡಬೇಕಲ್ಲ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ, ಒದ್ದಾಡುತ್ತೇವೆ, ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಏಕೆ ಹೀಗೆ? ಆ ಕ್ಷಣದಲ್ಲಿ ಹೀಗೆ ನನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರಿಸಲು ಪಕ್ಕದಲ್ಲಿ ಯಾರು ಇರಲಿಲ್ಲವಾದ್ದರಿಂದ ಅದರ ಯೋಚನೆ ಬಿಟ್ಟು ಅವುಗಳ ಪಾಡಿಗೆ ಅವು ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಲಿ, ನನಗೆ ಬೇಕಾದ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಸಿಕ್ಕಿದೆಯಲ್ಲ ಅಷ್ಟು ಸಾಕು ಎಂದುಕೊಂಡು ಕ್ಯಾಮೆರವನ್ನು ಆಫ್ ಮಾಡಿ ನಿದಾನವಾಗಿ ಎದ್ದು ನಿಂತೆ. ನಾನು ಎದ್ದ ತಕ್ಷಣ ನನ್ನ ಮುಂದಿದ್ದ ಎರಡು ಕೆಂಪು ಏಡಿಗಳು ಮತ್ತು ಹಿಂಭಾಗದಲ್ಲಿದ್ದ ಏಡಿಗಳು ತಕ್ಷಣ ಒಮ್ಮೆ ನಿಂತು ನನ್ನನ್ನೇ ನೋಡಿದವು. ಎರಡು ನಿಮಿಷ ಹಾಗೆ ನಿಂತೆ ಅವು ಕೂಡ ಹಾಗೆ ನನ್ನನ್ನೇ ನೋಡತೊಡಗಿದರೂ ಕೂಡ ಅವು ಎಂದಿನಂತೆ ನನ್ನನ್ನು ಕಂಡು ಹೆದರಿ ಗೂಡಿಗೆ ಹೋಗಲಿಲ್ಲವಾದ್ದರಿಂದ ಅಷ್ಟರಮಟ್ಟಿಗೆ ಅವುಗಳಿಗೆ ನಾನು ಹತ್ತಿರವಾಗಿದ್ದೇನೆ ಎಂದುಕೊಂಡು ನಿದಾನವಾಗಿ ಹಿಂದಕ್ಕೆ ನಾಲ್ಕು ಹೆಜ್ಜೆ ಇಟ್ಟು ಹಿಂದಕ್ಕೆ ತಿರುಗಿ ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲಿ ನನ್ನ ಕಾಲುಗಳ ಮುಂದೆ ಏನನ್ನೋ ನೋಡಿದಂತೆ ಅನಿಸಿ ಮತ್ತೆ ಹಾಗೆ ಎರಡು ನಿಮಿಷ ಅಲುಗಾಡದೆ ನಿಂತೆ.
ಬೋನಸ್.
ಮರಳ ಮೇಲೆ ಕೆಲವು ಕಡೆ ಹತ್ತಾರು ಕೆಲವು ಕಡೆ ನೂರಾರು, ಸಾವಿರಾರು ರಾಗಿ ಕಾಳಿನ ಗಾತ್ರದ ಮರಳ ಉಂಡೆಗಳು ಚಿತ್ರ ವಿಚಿತ್ರ ಆಕಾರದಲ್ಲಿ ರಂಗೋಲಿ ಬಿಡಿಸಿದಂತೆ ಒಂದಕ್ಕೊಂದು ಅಂಟಿಕೊಳ್ಳದೇ ಹರಡಿಕೊಂಡಿದ್ದವು. ಇವು ಈ ಮೊದಲು ನಾನು ನೋಡಿದ ಕೆಂಪು ಏಡಿಗಳಂತೂ ಎಂಜಲು ಹಾಕಿ ಉಂಡೆ ಮಾಡಿ ಹಾಕಿರುವುದಂತೂ ಅಲ್ಲ, ಏಕೆಂದರೆ ಅವು ಮಾಡಿದ ಮರಳ ಉಂಡೆಗಳು ಗಾತ್ರದಲ್ಲಿ ಇದಕ್ಕಿಂತೆ ಹತ್ತಾರು ಪಟ್ಟು ದೊಡ್ಡದಿದ್ದವು. ಹಾಗಾದರೆ ಇವುಗಳನ್ನು ಬೇರೆ ಯಾರೋ ಮಾಡಿರಬೇಕಲ್ಲವೇ...ಮತ್ತೆ ಈ ಸಣ್ಣ ಮರಳ ಉಂಡೆಗಳ ಒಂದು ಬದಿಯಲ್ಲಿ ಜೋಳದ ಗಾತ್ರದಷ್ಟೇ ದೊಡ್ಡದಾದ ಗೂಡು ಕಾಣಿಸುತ್ತಿದ್ದವು. ಸ್ವಲ್ಪ ಹೊತ್ತಿಗೆ ಗೂಡಿನಿಂದ ಏನೋ ಬಂದು ಮತ್ತೆ ಹಾಗೆ ಒಳಕ್ಕೆ ಹೋಯ್ತು. ಅದೇನೆಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಏಕೆಂದರೆ ಅದರ ಬಣ್ಣ ಮರಳಿನಂತೆಯೇ ಇದ್ದು ಗಾತ್ರದಲ್ಲಿ ಜೋಳಕ್ಕಿಂತ ಚಿಕ್ಕದಿತ್ತು. ಇನ್ನೂ ಸ್ವಲ್ಪ ಹೊತ್ತು ಕಾದರೆ ಇಲ್ಲಿಯೂ ಏನಾದರೂ ಸಿಗಬಹುದು ಎಂದುಕೊಂಡು ಕ್ಯಾಮೆರ ಆನ್ ಮಾಡಿ ವಿಡಿಯೋ ಮೋಡ್ ಸೆಟ್ ಮಾಡಿಕೊಂಡು ಅಲುಗಾಡದೇ ನಿಂತೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನಿದಾನವಾಗಿ ಒಂದು ಪುಟ್ಟ ಜೋಳದ ಕಾಳಿನ ಗಾತ್ರ ಏಡಿ ಆ ಸಣ್ಣ ತೂತಿನಿಂದ ಹೊರಬಂತು. ಹತ್ತು ಸೆಕೆಂಡ್ ಕಳೆದಿರಬಹುದು, ಮತ್ತೊಂದು ಅದಕ್ಕಿಂತ ಪುಟ್ಟ ಗಾತ್ರದ ಇನ್ನೊಂದು ಏಡಿ ಒಳಗಿನಿಂದ ಏನನ್ನೋ ತಂದು ಈ ದೊಡ್ಡ ಏಡಿಗೆ ಕೊಟ್ಟರೆ ಈ ದೊಡ್ಡ ಏಡಿ ಅದನ್ನು ಎತ್ತಿ ಪಕ್ಕಕ್ಕೆ ಉರುಳಿಸಿತು. ಮರಳಿನ ಬಣ್ಣಕ್ಕೆ ಹತ್ತಿರವಾಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅದರ ಪುಟ್ಟ ಬೆನ್ನಿನ ಕವಚದ ಮೇಲೆ ಸಣ್ಣ ಸಣ್ಣ ಬಾದಾಮಿ ಬಣ್ಣದ ಚುಕ್ಕೆಗಳು ಕಾಡುತ್ತಿದ್ದು ನನ್ನ ಕುತೂಹಲ ಹೆಚ್ಚಾಗಿ ಕ್ಯಾಮೆರವನ್ನು ನಿದಾನವಾಗಿ ಜೂಮ್ ಮಾಡಿ ಅಲುಗಾಡದೆ ವಿಡಿಯೋ ಮಾಡತೊಡಗಿದೆ.
ಎರಡೂ ಮೂರು ಕ್ಷಣಗಳಿಗೊಮ್ಮೆ ನೆಲದ ಮರಳ ಗೂಡಿನಿಂದ ಒಂದು ಮರಳ ಉಂಡೆಯನ್ನು ಹೊತ್ತು ತಂದ ಆ ಸಣ್ಣ ಏಡಿ ದೊಡ್ಡದಕ್ಕೆ ಕೊಡುತ್ತಿದ್ದರೆ ದೊಡ್ಡದು ಅದನ್ನು ಪಡೆದು ಪಕ್ಕಕ್ಕೆ ಉರುಳಿಸುತ್ತಿತ್ತು. ಇದನ್ನು ನೋಡುತ್ತಿದ್ದ ನನಗೆ ಆ ಕ್ಷಣದಲ್ಲಿ ಮನೆ ಕಟ್ಟಲು ಇಟ್ಟಿಗೆ, ಕಲ್ಲುಗಳನ್ನು ಒಬ್ಬರಿಂದ ಒಬ್ಬರಿಗೆ ಸಾಗಿಸುವುದು ನೆನಪಾದರೂ ನಮ್ಮ ಇಟ್ಟಿಗೆ ಅಥವ ಇನ್ನಿತರ ಮನೆ ಕಟ್ಟುವ ಸಾಮಾನುಗಳನ್ನು ಮೊದಲೇ ಎಲ್ಲೋ ತಯಾರಿಸಿರುತ್ತಾರೆ, ಅದನ್ನು ಲಾರಿ ಇನ್ನಿತರ ವಾಹನಗಳಲ್ಲಿ ತಂದು ಹಾಕಿದ ನಂತರ ಕಟ್ಟಲು ಬಳಸುತ್ತಾರೆ. ಆದ್ರೆ ಈ ಪುಟ್ಟ ಏಡಿಗಳು ತಮ್ಮ ಮನೆ ಅಂದರೆ ಗೂಡನ್ನು ಮರಳೊಳಗೆ ಕಟ್ಟಲು ಒಳಗಿನಿಂದ ಮರಳನ್ನು ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮರಳಿನ ಕಣಗಳು ಆ ಪುಟ್ಟ ಏಡಿಗಳಿಗೆ ಸಿಗುವುದಿಲ್ಲವಾದ್ದರಿಂದ ಅವು ಮರಳೊಳಗೆ ದೊಡ್ಡ ಕೆಂಪು ಏಡಿಯಂತೆ ಬಾಯಿಂದ ಎಂಜಲು ಹಾಕಿ ನಾವು ರಾಗಿ ಮುದ್ದೆ ಮಾಡುವಂತೆ ಉಂಡೆ ಮಾಡಿ ಮೇಲಕ್ಕೆ ತಂದು ಹಾಕುವ ತಂತ್ರವನ್ನು ಕಲಿತಿರಬೇಕು! ಏಕೆಂದರೆ ಹೊರಕ್ಕೆ ತಂದು ಹಾಕಿದ ಆ ಮರಳಿನ ಉಂಡೆಗಳು ಒಂದಕ್ಕೊಂದು ತಗುಲಿದರೂ ಅಂಟಿಕೊಳ್ಳದಂತೆ ಒಂದರ ಪಕ್ಕ ಮತ್ತೊಂದು ಇದ್ದು ನೋಡಲು ವಿವಿಧ ಕಲಾತ್ಮಕ ವಿನ್ಯಾಸದಂತೆ, ಚಿತ್ರ ವಿಚಿತ್ರ ರಂಗೋಲಿಯಂತೆ ಕಾಣುತ್ತಿವೆ!
ಇವುಗಳ ವಿಡಿಯೋ ಮಾಡಿ ಕ್ಯಾಮೆರ ಆಪ್ ಮಾಡಿ ಆ ಮರಳ ಬೀಚಿನಿಂದ ಹೊರಬರುವಾಗ ನೆನಪಾಗಿದ್ದು ಈ ಪುಟ್ಟ ಏಡಿಗಳ ಫೋಟೊಗ್ರಫಿಯನ್ನೇ ಮಾಡಲಿಲ್ಲವಲ್ಲ ಅಂತ. ಆದರೂ ಅದರ ವಿಡಿಯೋ ಚೆನ್ನಾಗಿ ಬಂದಿರುವುದು ಸಮಾಧಾನವಾಗಿತ್ತು. ಕೊನೆಯಲ್ಲಿ ನನ್ನ ಮೆಚ್ಚಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಒಂದು ಪುಸ್ತಕದಲ್ಲಿ ಬರೆದಿದ್ದ ಈ ಸಾಲುಗಳು ನೆನಪಾದವು.
ಇವುಗಳ ವಿಡಿಯೋ ಡಾಕ್ಯುಮೆಂಟರಿಯನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಇವುಗಳ ವಿಡಿಯೋ ಡಾಕ್ಯುಮೆಂಟರಿಯನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=VQY9li76pZs
"ನಾವು ಇವತ್ತು ಕಲಿತ ಮತ್ತು ಕಲಿಯುತ್ತಿರುವ ವಿಧ್ಯೆಗಳು, ಹುಡುಕಾಟಗಳು, ಕಲೆ ವಿಜ್ಞಾನ, ಹೊಸ ತಂತ್ರಗಾರಿಕೆಗಳು ಮತ್ತು ಅವುಗಳನ್ನು ಅನುಭವಿಸುತ್ತಿರುವುದನ್ನು ನಮಗಿಂತ ಮೊದಲೇ ಲಕ್ಷಾಂತರ ವರ್ಷಗಳ ಹಿಂದೆಯೇ ಇವು ಕಲಿತು ಜ್ಞಾನ ಸಂಪಾದಿಸಿ ಇವತ್ತಿಗೂ ಅನುಭವಿಸುತ್ತಿರಬಹುದು!
ಜೋಳದ ಕಾಳಿನ ಗಾತ್ರದ ಬೆನ್ನ ಮೇಲೆ ಬಿಳಿ ಚುಕ್ಕೆಗಳಿರುವ ಈ ಮರಳಿನ ಬಣ್ಣದ ಏಡಿಗಳ ಹೆಸರೇನೆಂದು ಅಂತರಜಾಲದಲ್ಲಿ ಹುಡುಕಿದಾಗ ಸಿಕ್ಕ ಹೆಸರು "ಸ್ಯಾಂಡ್ ಬಬ್ಲರ್ ಕ್ರಾಬ್"
ಕೊನೆಯ ಮಾತು:
ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಜ್ಯೋತಿಷ್ಯ ಶಾಸ್ತ್ರದ ಅನುಭವವುಳ್ಳ ಗೆಳೆಯರೊಬ್ಬರು ಬಂದವರು ಈ ಏಡಿಗಳ ಫೋಟೊಗಳು ಮತ್ತು ವಿಡಿಯೋವನ್ನು ನೋಡಿ ಹೇಳಿದರು, " ಶಿವು ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ. ಫೋಟೊ ಮತ್ತು ವಿಡಿಯೋ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದರ ನಡುವೆ ನಿಮಗೊಂದು ವಿಷಯವನ್ನು ತಿಳಿಸಬೇಕು. ನೀವು ಹಸುವಿನ ಸಗಣಿಯನ್ನು ನೋಡಿದ್ದರೆ ನಿಮಗೆ ಗೊತ್ತಿರುತ್ತದೆ. ಅದರೊಳಗೊಂದು ಕಂದು ಬಣ್ಣದ ಹುಳುವಿರುತ್ತದೆ. ಅದು ಥೇಟ್ ನಮ್ಮ ಕಾಫಿ ಬೀಜದ ಸೈಜಿನಲ್ಲಿ ಅದೆ ಬಣ್ಣದಲ್ಲಿರುತ್ತದೆ. ಅದನ್ನು ಮರಳಿನ ಮೇಲೆ ಬಿಟ್ಟರೆ ಶ್ರೀಚಕ್ರವನ್ನು ಬರೆಯುತ್ತದೆ ಗೊತ್ತಾ, ಅದು ಶ್ರೀಚಕ್ರ ಬರೆಯುವಾಗ ಅದರ ವಿಡಿಯೋ ಮಾಡಿ ಚೆನ್ನಾಗಿರುತ್ತದೆ". ಅದು ನೀರು ಕುಡಿದಷ್ಟು ಸುಲಭ ಎನ್ನುವಂತೆ ಹೇಳಿ ನನ್ನ ತಲೆಗೊಂದು ಕಾಫಿ ಬೀಜದ ಹುಳುವೊಂದನ್ನು ಬಿಟ್ಟು ಹೋಗಿಬಿಟ್ಟರು.
ಚಿತ್ರಗಳು ಮತ್ತು ಲೇಖನ:
ಶಿವು.ಕೆ
ಬೆಂಗಳೂರು.
9 comments:
welcome back to the blog sir,
ಧಿಘಾ ಬೀಚಿನ ತಮ್ಮ ಫೋಟೊಗ್ರಫಿ ಮತ್ತು ವಿಡಿಯೋ ಡಾಕ್ಯುಮೆಂಟರಿ ಮಾಡಿದ ಅನುಭವ ಲೇಖನ ಮನಸ್ಸಿಗೆ ಮುದ ನೀಡಿತು.
ರಕ್ತ ಕೆಂಪಿನ ಕಣಿಗಲೆ ಹೂವೂಗಳಂತಹ ಏಡಿಗಳನ್ನು ತಾವು ಛಾಯಾಗ್ರಹಣ ಮಾಡಲು ಪಟ್ಟ ಶ್ರಮ ಮತ್ತು ಏಕಾಗ್ರತೆ ನಮಗೆ ಪಾಠದಂತಿದೆ.
ತಾವು ಕೊಟ್ಟ youtube link ಅನ್ನು ಸಹ ನೋಡಿದೆ.
claps...
Badarinath Palavalli sir:
ಕೆಂಪು ಏಡಿಗಳ ಫೋಟೊಗ್ರಫಿ ಅಥವ ವಿಡಿಯೋ ಡಾಕ್ಯುಮೆಂಟರಿಯನ್ನು ಮಾಡುವ ಪ್ಲಾನ್ ನನಗಿರಲಿಲ್ಲ. ಇದ್ದಿದ್ದಲ್ಲಿ ಅದನ್ನು ಅದಕ್ಕಾಗಿ ಒಂದು Script ಮಾಡಿಕೊಂಡು ಸಿದ್ದನಾಗುತ್ತಿದ್ದೆನೇನೋ...ಇದು ನನಗೆ ಸಿಕ್ಕ ಬಿಡುವಿನ ಸಮಯದ ಪ್ರಯತ್ನವಿದು. ಮತ್ತೆ ಬರೆಯಲು ತುಂಬಾ ಸೋಮಾರಿತನ. ಗೆಳೆಯರ ಒತ್ತಾಯದ ಮೇರೆ ಬರೆದು ಅವಧಿಗೆ ಕಳಿಸಿದ್ದೆ. ವಿಡಿಯೋ ವಿಭಾಗದಲ್ಲಿ ನೀವು ಕೆಲಸ ಮಾಡುವುದರಿಂದ ನಿಮಗೆ ವಿಡಿಯೋ ಬಗ್ಗೆ ಏನು ಹೇಳುವಂತಿಲ್ಲ. ನನ್ನದೊಂದು ಪುಟ್ಟ ಪ್ರಯತ್ನವಷ್ಟೆ. ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
Photos are superb.But the fonts are not legible. Maybe they are not in unicode?
Sunath sir:
ಬರಹವನ್ನು Ansi ನಲ್ಲಿ ಹಾಕಿಬಿಟ್ಟಿದ್ದೆ. ಈಗ ಅದನ್ನು ಬದಲಾಯಿಸಿ Unicode ನಲ್ಲಿ update ಮಾಡಿದ್ದೇನೆ..ಈಗ ನಿಮಗೆ ಲೇಖನ ಓದಲು ಸಾಧ್ಯವಾಗಬಹುದು..
Thank you, Shivu.
ಶಿವು ಸರ್...ಧನ್ಯವಾದಗಳು ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ :)..ಒಂದಿಷ್ಟು ಹೊಸದನ್ನು ತಿಳಿದುಕೊಂಡ ತೃಪ್ತಿ :)..ಜೊತೆಗೆ ಆಂಟೆನಾ ಅಂತೆಲ್ಲಾ ಇರುವ ವೀಕ್ಷಕ ವಿವರಣೆ ಹೊಸದೆನಿಸಿತು :)..
ವಂದನೆಗಳು ಸರ್..ಬರೆಯುತ್ತಿರಿ..
ನಮಸ್ತೆ :)
ಚಿನ್ಮಯ ಭಟ್: ತುಂಬಾ ದಿನಗಳ ನಂತರ ಬರೆದಿದ್ದು. ಯಾಕೋ ಬರೆವಣಿಗೆಯತ್ತ ಸ್ವಲ್ಪ ಸೋಮಾರಿತನವಿದೆ...ಯಾವಾಗ ಹೋಗುತ್ತದೋ ಗೊತ್ತಿಲ್ಲ. ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.
ಕೆಂಪು ಏಡಿ ಇದುವರೆಗೆ ಚಿತ್ರದಲ್ಲೂ ನೋಡಿರಲಿಲ್ಲ. ನೋಡಿ ಓದಿ ಖುಷಿ ಪಟ್ಟೆ.
ಮಾಲಾ
This is very smart, really an intelligent idea. This is my first time in your blog and I really love it. Thanks for this awesome post,,,, kindly read
Next generation IRCTC
Onlinewatchs
Greetandra
MovieRulz
Epaper
Bankexam
Post a Comment