ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿಯಲು ಸಾಧ್ಯವೇ? ಈ ಮಾತು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಮೊದಲಿಗೆ ಆಕಾಶದಲ್ಲಿ ಮೊಲಗಳು ಹಾರಾಡಲು ಸಾಧ್ಯವೇ ಇಲ್ಲವೆನ್ನುವುದು ನಿಮ್ಮ ಮತ್ತು ಎಲ್ಲರ ಭಾವನೆಯೂ ಕೂಡ. ಏಕೆಂದರೆ ಅವುಗಳಿಗೆ ರೆಕ್ಕೆಗಳಿಲ್ಲವಲ್ಲ. ಬಹುಶಃ ಅವುಗಳಿಗೆ ರೆಕ್ಕೆ ಬಂದುಬಿಟ್ಟರೆ! ರೆಕ್ಕೆಗಳಿಲ್ಲದಿದ್ದರೂ ನೆಲದ ಮೇಲೆ ಚಂಗನೆ ಜಿಗಿದು ನಮ್ಮ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವ, ಕ್ಷಣಮಾತ್ರದಲ್ಲಿ ಮಾಯವಾಗುವ ಇವುಗಳನ್ನು ನೆಲದ ಮೇಲೆ ನಿಂತು ಹಿಡಿಯುವುದು ಹರಸಾಹಸವೇ ಸರಿ. ಅಂತದ್ದರಲ್ಲಿ ಅವುಗಳಿಗೆ ರೆಕ್ಕೆ ಬಂದು ಆಕಾಶದಲ್ಲಿ ಹಾರಾಡುತ್ತ ನಮ್ಮನ್ನು ಅಣಕಿಸಿದರೆ!….ಇಂಥ ಅಣಕಿಯಾಟದಲ್ಲಿ ನಾನು ಅವುಗಳನ್ನು ಹಿಡಿಯುವ ಪ್ರತಿಸ್ಪರ್ಧಿಯಾಗಿದ್ದೆ ಕಳೆದವಾರ. ನಾನು ಹಾರಾಡುವ ಮೊಲಗಳನ್ನು ಹಿಡಿದೆನಾ? ಅಥವ ವಿಫಲನಾದೆನಾ ಎನ್ನುವ ವಿಚಾರವನ್ನು ಮುಂದೆ ನಿಮಗೆ ಹೇಳುತ್ತೇನೆ.
ಮೊದಲಿಗೆ ನಾನು ದೀಪಾವಳಿ ಹಬ್ಬದಲ್ಲಿ ಹೊಡೆಯುವ ಅಥವ ಊದುಬತ್ತಿಯಿಂದ ಅಂಟಿಸುವ, ಢಂ ಢಂ ಎಂದು ಕಿವಿಗಡಚಿಕ್ಕುವ ಪಟಾಕಿಗಳ ವಿಚಾರಕ್ಕೆ ಖಂಡಿತ ಬರುವುದಿಲ್ಲ. ಏಕೆಂದರೆ ಅವುಗಳನ್ನು ನಾನು ಅಥವ ನೀವು ಹುಟ್ಟಿದಾಗಿನಿಂದ ಇವತ್ತಿನವರೆಗೆ ಪ್ರತಿವರ್ಷದ ದೀಪಾವಳಿಯಲ್ಲಿ, ರಾಜಕೀಯ ವ್ಯಕ್ತಿಗಳು ಗೆದ್ದಾಗ, ಕೆಲವೊಮ್ಮೆ ಇನ್ಯಾರೋ ಸತ್ತಾಗ [ಸತ್ತ ಮೇಲೆ ಶವವನ್ನು ಸ್ಮಶಾನಕ್ಕೆ ಹೊತ್ತೊಯ್ಯುವಾಗಲೂ ದೊಡ್ಡ ದೊಡ್ಡ ಪಟಾಕಿಗಳನ್ನು ಸಿಡಿಸುತ್ತಾರೆ ಶ್ರೀರಾಮಪುರಂನ ತಮಿಳಿನವರು], ಅಣ್ಣಮ್ಮ, ಜಲದಿಗೇರಮ್ಮ, ಕನ್ನಡ ರಾಜ್ಯೋತ್ಸವ, ಗಣೇಶ ಹಬ್ಬ ಹೀಗೆ ಅನೇಕ ಸಂದರ್ಭಗಳಲ್ಲಿ ದೇವರುಗಳನ್ನು ತರುವಾಗ ಮತ್ತು ವಾಪಸ್ಸು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವಾಗ ಇಂಥ ದೊಡ್ಡ ದೊಡ್ಡ ಕಿವಿಗಡಚಿಕ್ಕುವ ಪಟಾಕಿಗಳ ಸದ್ದು ಖಚಿತ ಮತ್ತು ಉಚಿತವಾದ್ದರಿಂದ ಅವುಗಳಲ್ಲಿ ವಿಶೇಷವೇನೋ ಇದೆಯೆಂದು ನನಗನ್ನಿಸುವುದಿಲ್ಲ. ಬದಲಾಗಿ ತುಂಬಾ ಮುಖ್ಯವಾದ ವಿಚಾರವಾಗಿ ಎಲ್ಲಿಗೋ ಹೋಗುತ್ತಿರುವಾಗ ಅನಿರೀಕ್ಷಿತವಾಗಿ ನಮ್ಮ ಪಕ್ಕದಲ್ಲಿಯೇ ಇಂಥ ದೊಡ್ಡ ಪಟಾಕಿಗಳು ಸಿಡಿಯುವುದರಿಂದ ಖುಷಿಯ ಬದಲಿಗೆ ಸಿಟ್ಟು ಮತ್ತು ಬೇಸರ ಉಂಟಾಗುವುದೇ ಹೆಚ್ಚು. ಇದೆಲ್ಲಕ್ಕಿಂತ ಹೆಚ್ಚಾಗಿ ಇವುಗಳೆಲ್ಲವೂ ನೆಲದ ಮೇಲೆ ಘಟಿಸಿ ನಮ್ಮನ್ನು ಬೆಚ್ಚಿಬೀಳಿಸುವುದರಿಂದ ಕುತೂಹಲವೆನ್ನುವುದು ಖಂಡಿತ ಉಂಟಾಗುವುದಿಲ್ಲ. ಹಾಗಾದರೆ ನಿಜವಾದ ಕುತೂಹಲವೆಲ್ಲಿದೆ!
ಆಕಾಶದಲ್ಲಿ!
ಹೌದು ನನಗೆ ತಿಳುವಳಿಕೆ ಬಂದಂತೆ ಪಟಾಕಿ ಎನ್ನುವ ಈ ಪಟಾಕಿ ನನಗೆ ಕುತೂಹಲ ಅರಳಿಸಿದ್ದು ನೆಲಕ್ಕಿಂತ ಆಕಾಶದಲ್ಲಿ. ನಾನು ಪಟಾಕಿಗೆ ಊದುಬತ್ತಿಯನ್ನು ತಗುಲಿಸಿ ಸುಮಾರು ಇಪ್ಪತ್ತೈದು ವರ್ಷಗಳೇ ಅಯ್ತು. ಆಗಿನಿಂದ ಇವತ್ತಿನವರೆಗೂ ನಾನು ಒಂದೇ ಒಂದು ಪಟಾಕಿಗೂ ಬೆಂಕಿಯಿರುವ ಊದುಬತ್ತಿಯನ್ನು ತಗುಲಿಸಿಲ್ಲ. ಏಕಿರಬಹುದೆಂದು ನೀವು ಕಾರಣವನ್ನು ಕೇಳಿದರೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಪರಿಸರ ಸಂರಕ್ಷಣೆ….ಹೀಗೆ ಎಲ್ಲರೂ ಹೇಳುವ ಕಾರಣಗಳನ್ನು ನಾನು ಹೇಳಬಹುದು. ಅಥವ ಆಗ ಚಿಕ್ಕಂದಿನಲ್ಲಿ ನನ್ನ ಅಪ್ಪ ಹಣವಿಲ್ಲದೇ ಪಟಾಕಿಗಳನ್ನು ಕೊಡಿಸಲಿಲ್ಲವಾದ್ದರಿಂದ ಅಕ್ಕ ಪಕ್ಕದ ಮನೆಯವರು ಸಿಡಿಸುವ ಪಟಾಕಿಗಳನ್ನು ನೋಡಿ ನನಗೂ ಹೀಗೆ ಪಟಾಕಿಗಳನ್ನು ಸಿಡಿಸಿ ಆನಂದಿಸುವ ಅವಕಾಶವಿಲ್ಲವಾಗಿದ್ದರಿಂದ ಆ ಪಟಾಕಿಗಳಿಂದ ಹಣ ಪೋಲು, ಪಟಾಕಿ ಹಬ್ಬದ ಸಮಯದಲ್ಲಿ ನಾನು ಕ್ರಿಕೆಟ್ ಆಡುವ ಮೈದಾನವನ್ನೆಲ್ಲಾ ಅಗೆದು ಅಂಗಡಿಗಳನ್ನಿಟ್ಟು ನಮಗೆ ಕ್ರಿಕೆಟ್ ಆಡದಂತೆ ಮಾಡುಬಿಡುತ್ತಾರೆ, ಪಟಾಕಿ ಹೊಡೆಯುವ ಸಮಯದಲ್ಲಿ ನನ್ನ ಗೆಳೆಯನ ಕೈ ಚರ್ಮ ಸುಟ್ಟು ಹೋಯ್ತು..ಹೀಗೆ ಹತ್ತಾರು ಕಾರಣಗಳನ್ನಿಟ್ಟುಕೊಂಡು ಕೈಗೆ ಸಿಗದ ದ್ರಾಕ್ಷಿ ಹುಳಿಯೆಂದುಕೊಂಡು ಹೊರಟ ನರಿಯಂತೆ ನಾನು ಕೂಡ ದೀಪಾವಳಿ ದಿನ ನನ್ನ ಕೈಗೆ ದಕ್ಕದ ಪಟಾಕಿಗಳನ್ನು ಹುಳಿ ಪಟಾಕಿಗಳೆಂದುಕೊಂಡು ಅದರೆಡೆಗಿನ ಬೇಸರದ ಜೊತೆಗೆ ತಿರಸ್ಕರಿಸಿದ್ದು ಸತ್ಯ.
ನನಗೆ ಬುದ್ದಿ ಬಂದಮೇಲೆ[ಹಾಗೆ ಅಂದುಕೊಂಡಿದ್ದೇನೆ]ಇವುಗಳನ್ನು ಸಿಡಿಸುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಪ್ರಾಣಿಪಕ್ಷಿಗಳಿಗೆ ತೊಂದರೆಗಳಾಗುತ್ತವೆಯೆಂದು ನಾನು ಹೇಳಿದರೂ,ನನಗಿಂತ ಚೆನ್ನಾಗಿ ನೀವು ಹೇಳಿದರೂ, ಪರಿಸರವಾದಿಗಳು ವೈಜ್ಞಾನಿಕ ಲೆಕ್ಕಾಚಾರವನ್ನು ಕೊಟ್ಟು ಆಗುವ ತೊಂದರೆಗಳನ್ನು ವಿವರಿಸಿದರೂ ಆ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಟಾಕಿ ಸಿಡಿಸಬೇಡಿ ಎಂದು ತಿಳಿಹೇಳಿದರೂ, ಪತ್ರಿಕೆಗಳಲ್ಲಿ ಬರೆದರೂ, ಟಿವಿ, ಫೇಸ್‍ಬುಕ್, ಬ್ಲಾಗ್ ಇನ್ನಿತರ ಎಲ್ಲಾ ಮಾಧ್ಯಮಗಳಲ್ಲಿ ಚಿತ್ರಸಹಿತ ಆಗಿರುವ ತೊಂದರೆಗಳನ್ನು ಹೇಳಿದರೂ ಕೂಡ ಅವತ್ತಿನಿಂದ ಇವತ್ತಿನವರೆಗೂ ಪಟಾಕಿ ಹೊಡೆಯುವರು ಹೊಡೆಯುತ್ತಲೇ ಇದ್ದಾರೆ. ಅದನ್ನು ಯಾರಿಂದಲೂ ತಪ್ಪಿಸಲಾಗಿಲ್ಲ.
ಹಾಗಾದರೆ ಮುಂದೇನು ಮಾಡಬಹುದು?
ನಿಮಗೆ ಬೇಸರವಾಗಿ ದೂರದ ರಿಸಾರ್ಟ್‍ಗೆ ಹೋಗಿ ರಿಲ್ಯಾಕ್ಸ್ ಮಾಡಬಹುದು, ಯುವಕ ಯುವತಿಯರು ಕೊಡಚಾದ್ರಿ, ಕುಮಾರ ಪರ್ವತ, ಪಶ್ಚಿಮ ಘಟ್ಟಗಳು, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುಬ್ರಮಣ್ಯ ರೈಲ್ವೇ ಲೈನು… ಹೀಗೆ ಅನೇಕ ಕಡೆ ಟ್ರಕ್ಕಿಂಗ್ ಹೋಗಿರಬಹುದು, ಇನ್ನೂ ಕೆಲವರು ಯಾವುದು ಬೇಡವೆಂದು ಪಟಾಕಿ ಶಬ್ದ ಕೇಳಿಸದಂತೆ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿ ಟಿವಿ ನೋಡುತ್ತಾ ಸಿಹಿತಿಂಡಿಮಾಡಿಕೊಂಡು ತಿಂದುಂಡು ಸುಖವಾಗಿ ಮಲಗಬಹುದು. ಕಳೆದ ಇಪ್ಪತ್ತೈದು ವರ್ಷಗಳಿಂದ ನನಗೂ ಇವರಂತೆ ಪಟಾಕಿ ಶಬ್ದ ಇಷ್ಟವಿಲ್ಲದಿದ್ದರೂ ಇವು ಯಾವುದು ಸಾಧ್ಯವಾಗಲಿಲ್ಲ. ಇಂಥ ಪರಿಸರ ಮಾಲಿನ್ಯದಿಂದ ದೂರವಾಗಿ ದೂರದ ಊರಿಗೆ ಅಥವ ರಿಸಾರ್ಟುಗಳಿಗೆ ಅಥವ ಟ್ರಕ್ಕಿಂಗ್ ಇತ್ಯಾದಿಗಳಿಗೆ ಹೋಗಿ ಅಲ್ಲಿ ಏಕಾಂಗಿಯಾಗಿ ಟೆಂಟ್ ನೊಳಗೆ ಮಲಗುವುದು ಅಥವ ರಾತ್ರಿಯಿಡೀ ಯಾವುದೇ ಶಬ್ದವಿಲ್ಲದ ನಿರ್ಮಲ ಆಕಾಶವನ್ನು ನೋಡುತ್ತಾ ರಾತ್ರಿಗಳನ್ನು ಕಳೆಯುವುದು ನನ್ನದೇ ಕೆಲಸ ಮತ್ತು ಇನ್ನಿತರ ಕಾರಣಗಳಿಂದ ಸಾಧ್ಯವಾಗಿಲ್ಲ. ಹಾಗಾದರೆ ನನ್ನಂಥ ಬಡಪಾಯಿ ಏನು ಮಾಡಲಿಕ್ಕಾಗುತ್ತದೆ?
ಏನು ಮಾಡಲಿಕ್ಕಾಗದಿದ್ದರೂ ದೀಪಾವಳಿಯ ಮೂರು ದಿನಗಳೂ ಕೂಡ ರಾತ್ರಿ ಆಕಾಶವನ್ನು ನೋಡುತ್ತ ಮೈಮರೆಯುತ್ತೇನೆ. ಆಕಾಶ ಯಾರ ಸ್ವತ್ತು ಕೂಡ ಅಲ್ಲ. ನಮ್ಮ ಕಣ್ಣಿಗೆ ನಿಲುಕುವಷ್ಟೇ ಮನಸ್ಸಿಗೂ ದಕ್ಕುತ್ತದೆ. ಅದರಲ್ಲೂ ದೀಪಾವಳಿಯ ರಾತ್ರಿಗಳಂದೂ ನನಗೆ ಕಾಣುವ ಆಕಾಶವೇ ಬೇರೆ. ನೀವು ಎತ್ತ ತಲೆ ಎತ್ತಿ ನೋಡಿದರೂ ಕೂಡ ಸಿನಿಮಾ ಸ್ಕೋಪ್, ೭೦ ಎಂಎಂಗಳಿಗಿಂತ ಹತ್ತಾರು, ನೂರಾರು ಪಟ್ಟು ದೊಡ್ಡದಿರುವ ಆಕಾಶದೊಳಗಿನ ದೊಡ್ಡ ಸಿನಿಮಾ ಪರದೆಯಲ್ಲಿ ಬಣ್ಣ ಬಣ್ಣದ ರಾಕೆಟ್ಟುಗಳು ಅರ್ಧಾತ್ ಕನ್ನಡದ ಆಕಾಶ ಬಾಣಗಳು ಸೃಷ್ಠಿಸುವ, ಕನಸಿನಲ್ಲೂ ಕಾಣಲಾಗದ ರಂಗು ರಂಗಿನ ಕಲ್ಪಿಸಿಕೊಳ್ಳಲಾಗದ ಬೆಳಕಿನ ಚಿತ್ತಾರಗಳನ್ನು ನೋಡುತ್ತ ನಿಂತುಬಿಡುತ್ತೇನೆ. ಆ ಸಮಯದಲ್ಲಿ ನೆಲದಿಂದ ಹಾರಿಸುವ ಇಂಥ ತರಾವರಿ ರಾಕೆಟ್ಟುಗಳಿಂದ ವಾಯುಮಾಲಿನ್ಯವಾಗುವುದಿಲ್ಲವೇ ಎಂದು ನೀವು ನನ್ನನ್ನು ಕೇಳಿದರೇ ಅದಕ್ಕೆ ನನ್ನಲ್ಲಿ ಉತ್ತರವಿಲ್ಲ. ಏಕೆಂದರೆ ವಾಯುಮಾಲಿನ್ಯವಾಗುತ್ತದೆಯೆಂದು ನನಗೆ ಮತ್ತು ನಿಮಗೆ ಗೊತ್ತಿದ್ದರೂ ಅದನ್ನು ನಿಲ್ಲಿಸಲು ನಿಮಗಾಗಲಿ ಅಥವ ನನಗಾಗಲಿ ಸಾಧ್ಯವಾಗಿಲ್ಲ. ಅದರ ಬದಲು ಇಂಥ ಕೈಗೆ ಸಿಗದ ಹುಳಿದ್ರಾಕ್ಷಿಯಂತ ನೆಲದ ಮೇಲೆ ಅಬ್ಬರಿಸುವ ಪಟಾಕಿಗಳನ್ನು ಮರೆತು ಸುಲಭವಾಗಿ ಕೈಗೆಟುಕುವ, ಸ್ವಲ್ಪ ಸಿಹಿ, ಸ್ವಲ್ಪ ಒಗರು, ಸ್ವಲ್ಪ ಸಪ್ಪೆ….ಇದ್ದರೂ ನೋಡಿದ ತಕ್ಷಣ ಇಷ್ಟವಾಗುವ ಗೋಲಿಗಿಂತ ಸಣ್ಣ ಆಕಾರದ ಗಸಗಸೆ ಹಣ್ಣುಗಳಂತೆ ಅನ್ನಿಸುತ್ತವೆ ಆಕಾಶದಲ್ಲಿ ಹಾರಿ ಮರೆಯಾಗುವ ಆಕಾಶಬಾಣಗಳು.
ಪ್ರತಿ ವರ್ಷ ಹೀಗೆ ಆಕಾಶದಲ್ಲಿ ಹಾರಾಡುವ ಬೆಳಕಿನ ಚಿತ್ತಾರದ ತರಾವರಿ ಆಕಾಶ ಬಾಣಗಳನ್ನು ದೀಪಾವಳಿ ದಿನಗಳಂದೂ ನೋಡಿ ಕಣ್ತುಂಬಿಕೊಳ್ಳುತ್ತಿದ್ದೆನಾದರೂ ಅದಕ್ಕಿಂತ ಹೆಚ್ಚೇನು ನನಗೆ ಮಾಡಲಾಗುತ್ತಿರಲಿಲ್ಲ. ಏಕೆಂದರೆ ಕಳೆದ ಹದಿನೈದು ವರ್ಷಗಳಲ್ಲಿ ಬದಲಾಯಿಸಿದ ಮನೆಗಳಲ್ಲಿ ಮೊದಲ ಮನೆಯ ಎರಡನೇ ಮಹಡಿಯಲ್ಲಿ ಟೆರೆಸ್ ಇದ್ದರೂ ಅದರ ಸುತ್ತ ಒಂದು ಕಡೆ ಮರ, ಮೂರು ಕಡೆ ನಮ್ಮ ಮನೆಗಿಂತ ದೊಡ್ಡ ಮನೆಗಳಿದ್ದು ಅಲ್ಲಿ ನನಗೆ ಕಾಣುತ್ತಿದ್ದ ಆಕಾಶ ಬಾವಿಯೊಳಗಿರುವ ಕಪ್ಪೆಗೆ ಕಂಡ ಆಕಾಶವಷ್ಟೆ. ನಾಲ್ಕು ವರ್ಷಗಳ ನಂತರ ಮತ್ತೊಂದು ಮನೆಗೆ ಬಂದರೂ ಅದು ಇದಕ್ಕಿಂತ ಕಳಪೆ. ಮೊದಲ ಮಹಡಿಯಲ್ಲಿ ನಮ್ಮ ಮನೆ. ಆಕಾಶ ನೋಡಬೇಕಾದಲ್ಲಿ ಮತ್ತೆರಡು ಮಹಡಿಯನ್ನು ಹತ್ತಬೇಕು. ಹಾಗೆ ಮೇಲೆ ಹೋದರೂ ನನ್ನ ಕಣ್ಣಿಗೆ ಪೂರ್ತಿ ಆಕಾಶ ದಕ್ಕುವುದು ಕಷ್ಜವೇ ಸರಿ.
ಹೇಳಿಕೊಳ್ಳಲು ನಮ್ಮ ಮನೆಯ ಪಕ್ಕದಲ್ಲಿ ರಾಧಿಕ ಪಂಡಿತ್ ಎನ್ನುವ ಪ್ರಖ್ಯಾತ ಕನ್ನಡ ಸಿನಿಮ ನಟಿಯ ಮನೆಯಿದೆ ಎನ್ನುವುದು ಸುಮ್ಮನೆ ಹೆಗ್ಗಳಿಕೆಯಷ್ಟೆ. ಹಾಗೆ ಸುಮ್ಮಸುಮ್ಮನೇ ಆಕಾಶವನ್ನು ನೋಡುತ್ತ ನಿಂತುಕೊಂಡಾಗ ನಮ್ಮ ಅಕ್ಕ ಪಕ್ಕದ ಮನೆಯವರು ನನ್ನನ್ನು ನೋಡಿ ಇವನಿಗೆ ತಲೆ ಕೆಟ್ಟಿರಬೇಕು ಎಂದುಕೊಳ್ಳುತ್ತಾರೆಂದೇ ನನಗೆ ಇಷ್ಟವಿದ್ದರೂ ಅನೇಕ ದೀಪಾವಳಿ ರಾತ್ರಿಗಳಲ್ಲಿ ಆಕಾಶ ನೋಡದೇ ತಪ್ಪಿಸಿಕೊಂಡಿದ್ದೇನೆ.
ಆದ್ರೆ ಈಗ ನಾಲ್ಕು ತಿಂಗಳ ಹಿಂದೆ ಮತ್ತೆ ಮನೆ ಬದಲಾಯಿಸಿ ಹೊಸ ಮನೆಗೆ ಬಂದಿದ್ದೆನಲ್ಲ ಈ ಮನೆ ಉಳಿದೆಲ್ಲಾ ನಮ್ಮ ಹಳೆಯ ಮನೆಗಳಿಗಿಂತ ಸ್ವಲ್ಪ ವಿಭಿನ್ನವೆನಿಸಿದೆ. ನಾವಿರುವ ಮೂರನೇ ಮಹಡಿಯಿಂದ ಮೇಲೆ ಹೋದಲ್ಲಿ ನಾಲ್ಕನೇ ಮಹಡಿ ಟೆರಸ್. ವಿಶಾಲವಾದ ಅದರಲ್ಲಿ ನಿಂತುಬಿಟ್ಟರೆ ಅರ್ಧ ಬೆಂಗಳೂರು ಕಾಣುತ್ತದೆ. ಮತ್ತೆ ಈಗ ಮೆಟ್ರೋ ರೈಲುಗಳಿಗಾಗಿ ಸಿದ್ದವಾಗಿ ದೊಡ್ಡ ಪಿಲ್ಲರುಗಳಿರುವ ರೈಲು ದಾರಿಯೂ ಸಿದ್ದವಾಗುತ್ತಿರುವ ಸಮಯದಲ್ಲಿ ದಿನಕ್ಕೆರಡು ಮೂರು ಭಾರಿ ಕೆಲವೊಮ್ಮೆ ಇನ್ನೂ ಹೆಚ್ಚು ಸಲ ಪ್ರಯೋಗಿಕವಾಗಿ ಚಲಿಸುತ್ತಿರುವ ಹಸಿರು ಬಣ್ಣದ ಮೂರು ಬೋಗಿಗಳ ಮೆಟ್ರೋ ರೈಲುಗಳನ್ನು ನೋಡುವುದೇ ಒಂದು ಚಂದ. ನಮ್ಮ ಅಕ್ಕಪಕ್ಕದ ಮನೆಗಳ ಪುಟ್ಟ ಮಕ್ಕಳಿಗೆಲ್ಲಾ ಮೆಟ್ರೋ ರೈಲು ಈಗ ಚೆನ್ನಾಗಿ ಪರಿಚಯ. ನಮ್ಮ ಪಕ್ಕದ ಮನೆಯ ಒಂದುವರೆ ವರ್ಷದ ಲಿಕಿತ್ ಎನ್ನುವ ಮಗುವಿಗೂ ಕೂಡ ಮೆಟ್ರೋ ರೈಲು ಬರುವಾಗ ಹಾರ್ನ್ ಮಾಡಿದರೇ ಸಾಕು ಅವನು “ಮೆಟ್ರೋ ರೈಲು ಬಂತು’ ಎಂದು ತೊದಲು ನುಡಿಯಲ್ಲಿ ಹೇಳುವಷ್ಟು ನಮ್ಮ ಟೆರಸ್ ಫೇಮಸ್ ಆಗಿದೆ. ಇಂಥ ಟೆರಸ್‌ನಲ್ಲಿ ದೀಪಾವಳಿಯ ರಾತ್ರಿ ನಿಂತರೆ ಹೇಗೆ ಕಾಣುಬಹುದು ಎನ್ನುವ ಅದಮ್ಯ ಕುತೂಹಲದಿಂದಿದ್ದ ನನಗೆ “ಆ ದಿನಗಳು” ಬಂದೇ ಬಿಟ್ಟಿತ್ತು.
ನರಕ ಚತುರ್ದಶಿಯ ರಾತ್ರಿ ಏಳುಗಂಟೆಗೆ ಬಂದವನು ಸುಮ್ಮನೇ ಆಕಾಶ ನೋಡುತ್ತಾ ನಿಂತೆನಷ್ಟೆ. “ರೀ….ಊಟಕ್ಕೆ ಬನ್ನಿ ಆಗಲೇ ಒಂಬತ್ತು ಗಂಟೆ ದಾಟಿದೆ” ಎಂದಾಗಲೇ ನನಗೆ ಗೊತ್ತಾಗಿದ್ದು. ಸುಮಾರು ಎರಡು ಗಂಟೆಗಳ ಕಾಲ ಮೈಮರೆತು ಮೊದಲ ದಿನದ ದೀಪಾವಳಿಯ ರಾತ್ರಿ ಏಕಾಂಗಿಯಾಗಿ ಸುತ್ತ ಕಾಣುವ ಆಕಾಶದಲ್ಲಿ ತಲೆ ಮೇಲೆ ಹಾರಿ ಮರೆಯಾಗುವ ರಾಕೆಟ್ಟುಗಳನ್ನು ನೋಡುತ್ತಾ ಮೈಮರೆತಿದ್ದೆ. ಊಟ ಮಾಡುವ ಸಮಯದಲ್ಲೂ ಆಕಾಶದಲ್ಲಿ ಕಂಡ ಬೆಳಕಿನ ರಾಕೆಟ್ಟುಗಳದೇ ನೆನಪು. ನಾಳೆ ಹೇಗಾದರೂ ಮಾಡಿ ಅವುಗಳನ್ನು ಕ್ಯಾಮೆರ ಕಣ್ಣಿನ ಮೂಲಕ ನೋಡಬೇಕು ಸಾಧ್ಯವಾದರೆ ಫೋಟೊಗ್ರಫಿ ಮಾಡಬೇಕು ಎಂದುಕೊಂಡು ತೀರ್ಮಾನಿಸಿ ಮಲಗಿದ್ದೆ.
ಮರುದಿನ ಬ್ಲಾಗಿಗರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ಬಂದವನು ರಾತ್ರಿ ಕ್ಯಾಮೆರ ಮತ್ತು ಲೆನ್ಸುಗಳೊಂದಿಗೆ ಏಳುಗಂಟೆಗೆ ಸಿದ್ದನಾಗಿದ್ದೆ. ಇವತ್ತು ರಾತ್ರಿ ಹೊಸ ಅದ್ಬುತವನ್ನು ಫೋಟೋಗ್ರಫಿಯಲ್ಲಿ ಸಾಧಿಸಿಬಿಡುತ್ತೇನೆ ಎಂದುಕೊಂಡು ರಾಕೆಟ್ಟುಗಳೊಂದಿಗೆ ಹಾರುತ್ತಿದ್ದ ಮನಸ್ಸು ಸ್ವಲ್ಪ ಹೊತ್ತಿಗೆ ಟುಸ್ ಪಟಾಕಿಯಾಗಿಬಿಟ್ಟಿತ್ತು. ಸುಮಾರು ಅರ್ಧಗಂಟೆಯಾದರೂ ಒಂದೇ ಒಂದು ರಾಕೆಟ್ ಪಟಾಕಿ ಬಿಡಿಸುವ ಚೆಲುವಿನ ಬೆಳಕಿನ ಚಿತ್ತಾರವನ್ನು ಕ್ಲಿಕ್ಕಿಸಲು ಸಾಧ್ಯವಾಗಲಿಲ್ಲ. ನನ್ನ ಸುತ್ತ ಇರುವ ಎಂಟು ದಿಕ್ಕುಗಳಲ್ಲಿಯೂ ಮೇಲೆ ಹಾರುತ್ತಿದ್ದ ಬೆಳಕಿನ ಚಿತ್ತಾರಗಳನ್ನು ಕ್ಲಿಕ್ಕಿಸಲು ಎಷ್ಟು ಪ್ರಯತ್ನಿಸಿದರೂ ವಿಫಲಯತ್ನವಾದಾಗ ಅನಿಸಿದ್ದು ಇವು ಖಂಡಿತವಾಗಿಯೂ ಆಕಾಶದಲ್ಲಿ ಹಾರಾಡುವ ಮೊಲಗಳು. ಅವುಗಳನ್ನು ಹಿಡಿಯಲು ಸಾಧ್ಯವೇ? ಅಂತ ಆ ಕ್ಷಣದಲ್ಲಿ ಅವು ಆಕಾಶದಲ್ಲಿ ಹಾರಾಡುವ ಮೊಲಗಳೇ ಅನ್ನಿಸಿದವು.
ಎದುರಿಗೆ ಹಾರಿದ ರಾಕೆಟ್ಟಿನ ಬೆಳಕನ್ನು ಕ್ಲಿಕ್ ಮಾಡಲು ಕ್ಯಾಮೆರವನ್ನು ಅತ್ತ ತಿರುಗಿಸುವಷ್ಟರಲ್ಲಿ ಮಿಂಚಿ ಮರೆಯಾಗುತ್ತಿದ್ದ ಅದನ್ನು ಶಪಿಸಿ ಬಲಭಾಗದಲ್ಲಿ ಹಾರಿದ ಇನ್ನೊಂದರ ಕಡೆ ಗಮನಿಸಿ ಕ್ಷಣಮಾತ್ರದಲ್ಲಿ ಅತ್ತ ಕ್ಯಾಮೆರ ತಿರುಗಿಸುವಷ್ಟರಲ್ಲಿ, ನನ್ನ ತಲೆಯ ಮೇಲೆ ದೊಡ್ಡದಾದ ಕೊಡೆಯಂತೆ ಚದುರಿದ ನಕ್ಷತ್ರಗಳನ್ನು ಕಂಡು ಮೇಲೆ ನೋಡಿದರೆ ಅದು ದಕ್ಕಿದ್ದು ಕಣ್ಣಿಗೆ ಮಾತ್ರ. ಕ್ಯಾಮೆರಕ್ಕೆ ಅದರ ಒಂದು ಕಿಡಿಯೂ ನಿಲುಕಲಿಲ್ಲ. ಹೋಗಲಿ ಇನ್ನಾದರೂ ಹುಷಾರಾಗಿ ಕ್ಯಾಮೆರವನ್ನು ಸ್ಟಡಿಯಾಗಿ ಇಟ್ಟುಕೊಂಡು ನೋಡೋಣವೆಂದುಕೊಂಡು ಸಿದ್ದನಾದೆ. ಅದೋ ದೂರದಲ್ಲಿ ಒಂದು ರಾಕೆಟ್ ಮೇಲೇರಿ ಚದುರಿತ್ತು. ಅದರ ಹಿಂದೆ ಮತ್ತೆರಡು ರಾಕೆಟ್ಟುಗಳು ಮಿಂಚಿ ಮರೆಯಾದವು. ಓಹ್! ಇಲ್ಲಿ ಒಂದರ ಹಿಂದೆ ಒಂದು ರಾಕೆಟ್ಟುಗಳು ಮೇಲೆ ಮೇಲೆ ಬರುತ್ತಿವೆ. ಇನ್ನಷ್ಟು ಬರಬಹುದು. ನಾನು ಮೊದಲೇ ಅಲ್ಲಿನ ಒಂದು ಜಾಗಕ್ಕೆ ಫೋಕಸ್ ಮಾಡಿ ಸಿದ್ದನಾಗಿರಬೇಕು. ಮತ್ತು ಸ್ವಲ್ಪ ತಾಂತ್ರಿಕವಾಗಿಯೂ ಉತ್ತಮವಾಗಿ ಕ್ಯಾಮೆರವನ್ನು ಸೆಟ್ ಮಾಡಿಕೊಳ್ಳಬೇಕು ಎಂದು ತಯಾರಾಗಿ ಅದನ್ನೇ ಕಾಯುತ್ತಾ ತದೇಕ ಚಿತ್ತದಿಂದ ಅಲುಗಾಡದೇ ತಪಸ್ವಿಯಂತೆ ಅದೊಂದೇ ದೃಶ್ಯದತ್ತ ಧ್ಯಾನಾಸಕ್ತನಂತೆ ಕಾಯುತ್ತಾ, ಕ್ಯಾಮೆರ ಕಣ್ಣಿನೊಳಗೆ ನೋಡುತ್ತಾ ನಿಂತೆ. ಆ ಕ್ಷಣದಲ್ಲಿ ಮತ್ತೊಂದು ತೀರ್ಮಾನವನ್ನು ಮಾಡಿದ್ದೆ. ಅಕ್ಕ ಪಕ್ಕ ಎಷ್ಟೆ ರಾಕೆಟ್ಟುಗಳು ಹಾರಿದರೂ ಅದನ್ನು ಗಮನಿಸಬಾರದು ಕೇವಲ ಇದೊಂದನ್ನೇ ಗಮನಿಸಿ ಸಾಧ್ಯವಾದಷ್ಟು ಉತ್ತಮವಾದ ಫೋಟೊವನ್ನು ಕ್ಲಿಕ್ಕಿಸಲೇಬೇಕು ಎನ್ನುವ ಖಚಿತ ತೀರ್ಮಾನದೊಂದಿಗೆ ಸಿದ್ಧನಾಗಿ ನಿಂತಿದ್ದೆ. ಒಂದು ನಿಮಿಷ ಎರಡು ನಿಮಿಷ, ಐದು ನಿಮಿಷ, ಕೊನೆಗೆ ಹತ್ತು ನಿಮಿಷವಾದರೂ ಒಂದೇ ಒಂದು ರಾಕೆಟ್ಟು ಕೂಡ ಅತ್ತ ಕಡೆ ಹಾರಲಿಲ್ಲ. ಬದಲಾಗಿ ನನ್ನ ಎಡಬಲದಲ್ಲಿ ನಿಮಿಷಕ್ಕೆ ಹತ್ತು ಹದಿನೈದು ರಾಕೆಟ್ಟುಗಳು ಬೆಳಕಿನ ಚಿತ್ತಾರವನ್ನು ಮೂಡಿಸಿ ನನ್ನನ್ನು ಅಣಕಿಸಿದಂತೆ ಆಗಿತ್ತು.
ತತ್…ಎದುರಿಗಿರುವವರು ಮತ್ತು ಅವರು ಬಿಡುತ್ತಿರುವ ರಾಕೆಟ್ಟುಗಳು ನನ್ನನ್ನು ಯಾಮಾರಿಸುತ್ತಿವೆ…ಅವರ ಸಹವಾಸವೇ ಬೇಡ ಇತ್ತ ಎಡಬದಿಯಲ್ಲಿ ಒಂದರ ಮೇಲೊಂದರಂತೆ ಮೇಲೇರುತ್ತಿರುವ ರಾಕೆಟ್ಟುಗಳನ್ನು ಸುಲಭವಾಗಿ ಫೋಟೊ ಕ್ಲಿಕ್ಕಿಸಬಹುದು ಅಂತ ಅತ್ತ ಕ್ಯಾಮೆರ ತಿರುಗಿಸಿದೆ. ಅವು ನನ್ನ ಕಣ್ಣಿಗೆ ಚೆನ್ನಾಗಿ ಕಂಡು ಅತ್ತ ಕ್ಯಾಮೆರ ತಿರುಗಿಸಿ ಸತತವಾಗಿ ಫೋಟೊಗಳನ್ನು ಕ್ಲಿಕ್ಕಿಸಿದೆನಾದರೂ ನಂತರ ನೋಡಿದಾಗ ಒಂದೂ ಕೂಡ ಫೋಕಸ್ ಆಗಿರಲಿಲ್ಲ. ಎಲ್ಲವೂ ಬ್ಲರ್ ಆಗಿತ್ತು. ಮತ್ತೆ ಫೋಕಸ್ ಎಲ್ಲ ಸರಿಮಾಡಿಕೊಂಡು ಅತ್ತ ಕ್ಯಾಮೆರ ತಿರುಗಿಸಿ ಸಿದ್ದನಾದೆ. ಹದಿನೈದು ನಿಮಿಷವಾದರೂ ಒಂದೇ ರಾಕೆಟ್ ಆ ದಿಕ್ಕಿನಲ್ಲಿ ಮತ್ತೆ ಮೇಲೆ ಹಾರಲಿಲ್ಲ. ಬಹುಷ: ಆ ದಿಕ್ಕಿನಲ್ಲಿರುವವರ ಬಳಿ ರಾಕೆಟ್ಟುಗಳು ಖಾಲಿಯಾಯ್ತ? ಇನ್ನೊಂದೆರಡಾದರೂ ನನ್ನ ಫೋಟೊಗ್ರಫಿಗಾಗಿ ಹಾರಿಸಬಾರದಾ? ಎಂದುಕೊಂಡರೂ ನಾನು ಇಲ್ಲಿ ಫೋಟೊ ತೆಗೆಯುತ್ತಿದ್ದೇನೆಂದು ಅವರಿಗಾದರೂ ಹೇಗೆ ಗೊತ್ತಾಗಬೇಕು? ಹೋದರೆ ಹೋಗಲಿ ಪರ್ವಾಗಿಲ್ಲ ಇತ್ತ ನನ್ನ ಹಿಂಬದಿಯಲ್ಲಿ ಒಂದರ ಮೇಲೆ ಒಂದು ರಾಕೆಟ್ಟುಗಳು ಬರುತ್ತಿವೆ ಎಂದು ಅತ್ತ ಕ್ಯಾಮೆರವನ್ನು ತಿರುಗಿಸಿದೆ. ಈ ಭಾರಿ ಸರಿಯಾಗಿ ಎಲ್ಲವನ್ನು ಸಿದ್ದ ಮಾಡಿಕೊಂಡು ಅವುಗಳನ್ನು ನೋಡುತ್ತಾ ಸತತವಾಗಿ ಫೋಟೊಗಳನ್ನು ಕ್ಲಿಕ್ಕಿಸಿದ್ದೆ. ಈ ಭಾರಿಯಾದರೂ ಕೆಲವು ಉತ್ತಮವಾದ ಚಿತ್ರಗಳು ನನ್ನ ಕ್ಯಾಮೆರದೊಳಗೆ ಸೆರೆಯಾಗಿರಬಹುದು ಎಂದುಕೊಂಡು ನೋಡಿದರೆ ಮತ್ತೊಂದು ಹೊಸ ನಿರಾಶೆ.
ಈ ಭಾರಿ ತೊಂದರೆ ಕೊಟ್ಟಿದ್ದು ನನ್ನ ಕ್ಯಾಮೆರವಲ್ಲ ಅಥವ ಅಲ್ಲಿ ಹಾರಿದ ಆಕಾಶಬಾಣಗಳಲ್ಲ. ಬದಲಾಗಿ ಸಹಸ್ರಾರು ಬೆಳಕಿನ ಕಿಡಿಗಳ ಎದುರು ಬೆದರು ಬೊಂಬೆಗಳಂತೆ ಅಡ್ಡಬಂದಿದ್ದು ಏರ್‌ಟೆಲ್, ವಡಾಫೋನ್, ಎಂಟಿಎಸ್, ಐಡಿಯ ಇನ್ನಿತರ ಮೊಬೈಲ್ ಫೋನ್ ಟವರುಗಳು….ಛೇ ಎಂಥ ಕೆಲಸವಾಯ್ತು. ಈ ಟವರುಗಳು ಎಲ್ಲಾ ಸಮಯದಲ್ಲೂ ಹೀಗೆ ಅಡ್ಡ ಬರುವುದೇ ಆಯ್ತು…ಈ ದೀಪಾವಳಿ ಸಮಯದಲ್ಲಾದರೂ ಕೂಡ ಸ್ವಲ್ಪ ಹೊತ್ತು ಮಲಗಿರಬಾರದೇ…..ಅನ್ಯಾಯವಾಗಿ ಒಳ್ಳೊಳ್ಳೆಯ ಫೋಟೊಗಳು ಹಾಳಾಗಿ ಹೋದವು” ಎಂದು ಅವುಗಳನ್ನು ಶಪಿಸುತ್ತಾ, ಫೋಟೊಗ್ರಫಿ ಮಾಡಲೇ ಸಾಧ್ಯವಾಗುತ್ತಿಲ್ಲವಲ್ಲ? ಇವು ನಿಜಕ್ಕೂ ಆಕಾಶದಲ್ಲಿ ಹಾರಾಡುವ ಮೊಲಗಳೇ ಅನ್ನಿಸಿತ್ತು. ಅಷ್ಟರಲ್ಲಿ ದೀಪಾವಳಿಯ ಎರಡನೇ ರಾತ್ರಿಯೂ ಮುಗಿದಿತ್ತು.
ಮೂರನೆ ದಿನ ಬಲಿಪಾಡ್ಯಮಿ. ಬಲಿಚಕ್ರವರ್ತಿಯನ್ನು ಬಲಿ ತೆಗೆದುಕೊಂಡಂತೆ ಇವತ್ತು ನನ್ನ ಕ್ಯಾಮೆರದೊಳಗೆ ಆಕಾಶಬಾಣಗಳನ್ನು ಬಲಿ ಹಾಕಬೇಕು ಎನ್ನುವ ದೃಡ ನಿರ್ಧಾರದಿಂದ ಸಿದ್ದನಾಗಿ ರಾತ್ರಿ ಸ್ವಲ್ಪ ತಡವಾಗಿ ಎಂಟುಗಂಟೆಯ ಹೊತ್ತಿಗೆ ಕ್ಯಾಮೆರ ಸಹಿತ ಟೆರಸ್ ಸೇರಿಕೊಂಡಿದ್ದೆ. ಫೋಟೊ ತೆಗೆಯುವ ಮೊದಲು ನಮ್ಮ ಸುತ್ತ ಎತ್ತ ಕಡೆ ಹೆಚ್ಚಾಗಿ ಫೋಟೊಗ್ರಫಿ ಮಾಡಲು ಸುಲಭವಾಗುವಂತೆ ಆಕಾಶ ಬಾಣಗಳನ್ನು ಹಾರಿಸುತ್ತಿದ್ದಾರೆಂದು ಸ್ವಲ್ಪ ಹೊತ್ತು ಗಮನಿಸಿ ಅತ ಕಡೆ ಕ್ಯಾಮೆರವನ್ನು ಸಿದ್ದಮಾಡಿಕೊಂಡು ನಿಂತಿದ್ದೆ. ಬಲಬದಿಯಲ್ಲಿ ಉತ್ತರದ ಕಡೆ ಹೆಚ್ಚು ಆಕಾಶ ಬಾಣಗಳು ಬರುತ್ತಿವೆ…ಅವನ್ನು ಸೆರೆಹಿಡಿಯಲೇಬೇಕು ಎಂದುಕೊಂಡು ತದೇಕ ದೃಷ್ಠಿಯಿಂದ ಸತತವಾಗಿ ಫೋಟೊ ಕ್ಲಿಕ್ಕಿಸತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಫೋಟೊಗಳು ಸೆರೆಯಾದವಾದರೂ ನನಗೆ ಬೇಕಾದ ಹಾಗೆ ನಿಖವಾಗಿ ಫೋಕಸ್, ಎಕ್ಸ್‍ಪೋಸರ್ ಇತ್ಯಾದಿಗಳು ಚೆನ್ನಾಗಿಲ್ಲದೇ ತೆಗೆದ ಫೋಟೊಗಳು ಸಪ್ಪೆ ಸಪ್ಪೆ ಎನಿಸಿತ್ತು. ಕಳೆದ ಮೂರುದಿನಗಳಿಂದ ಹೀಗೆ ಫೋಟೊಗ್ರಫಿಯಲ್ಲಿ ವಿಫಲನಾಗುತ್ತಿದ್ದೇನಲ್ಲ, ನನಗೆ ಇವುಗಳನ್ನು ಕ್ಯಾಮೆರ ಮೂಲಕ ಖಚಿತವಾಗಿ ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲವಲ್ಲ? ಏನು ಮಾಡುವುದು? ಸ್ವಲ್ಪ ಹೊತ್ತು ಕ್ಯಾಮೆರವನ್ನು ಬಗಲಿಗಿರಿಸಿ ಆಕಾಶವನ್ನೇ ನೋಡುತ್ತಾ ನಿದಾನವಾಗಿ ಯೋಚಿಸಿದೆ. ಮೇಲೆ ಸತತವಾಗಿ ಆಕಾಶಬಾಣಗಳು ಎಲ್ಲಾ ದಿಕ್ಕುಗಳಿಂದಲೂ ಆಕಾಶವನ್ನು ಸೀಳುತ್ತಾ…ಕೊನೆಯಲ್ಲಿ ಚಿತ್ತಾರದ ಬಣ್ಣಗಳ ನಕ್ಷತಗಳನ್ನು ಚೆಲ್ಲಿ ಮರೆಯಾಗುತ್ತಿದ್ದವು.
ಹೊಳೆಯಿತೊಂದು ಹೊಸ ಐಡಿಯ!
“ಇಷ್ಟಪಟ್ಟಿದ್ದು ದಕ್ಕದಿರುವಾಗ,
ದಕ್ಕಿದ್ದನ್ನೇ ಇಷ್ಟಪಡಬೇಕು!”
ಈ ವಿಚಾರ ತಲೆಯಲ್ಲಿ ಬರುತ್ತಿದ್ದಂತೆ ನನ್ನ ನಿರೀಕ್ಷೆಗಳು ಕಲ್ಪನೆಗಳನ್ನೆಲ್ಲಾ ಮರೆತು, ಆಕಾಶದಲ್ಲಿ ಹಾರಾಡುವ ಎಲ್ಲಾ ರೀತಿಯ ಆಕಾಶಬಾಣಗಳನ್ನು ಸುಮ್ಮನೇ ನೋಡುತ್ತಾ ನಿಂತೆ. ಸ್ವಲ್ಪ ಹೊತ್ತಿಗೆ ಅವು ಪುಟ್ಟ ಪುಟ್ಟ ಮಕ್ಕಳಂತೆ ಕಾಣತೊಡಗಿದವು. ಒಂದಕ್ಕಿಂತ ಒಂದು ಚೆಂದವೆನಿಸತೊಡಗಿದವು. ಪುಟ್ಟ ಮಕ್ಕಳು ಅತ್ತರೆ, ನಕ್ಕರೆ, ಅಂಬೆಗಾಲಿಟ್ಟರೆ, ತೊದಲು ನುಡಿದರೆ, ಕೀಟಲೆ ಮಾಡಿದರೆ, ಕಳ್ಳಾಟ ಗುಮ್ಮನಾಟವಾಡಿದರೆ, ನಮ್ಮನ್ನೇ ಅಣಕಿಸಿದರೆ, ಕೈಗೆ ಸಿಗದಂತೆ ತಪ್ಪಿಸ್ಕೊಂಡು ಓಡಿದರೆ, ಮಾಡಿದ ತಪ್ಪನ್ನು ಅರಿತು ದೇವರೇ ಪ್ರತ್ಯಕ್ಷವಾಗಿ ನಮ್ಮೆದುರಿಗೆ ಸಾರಿ ಕೇಳಿದಂತೆ ಸಾರಿ ಕೇಳಿದರೆ, ಸುಖವಾಗಿ ಮಲಗಿದರೆ, ನಿದ್ರೆಯಲ್ಲಿ ಮುಗುಳ್ನಕ್ಕರೆ,…ಇನ್ನೂ ಏನೇನೋ ಮಾಡಿದರೂ ಕೂಡ ನಮಗೆ ಇಷ್ಟವೇ. ಅದೇ ರೀತಿ ಒಂದು ಆಕಾಶ ಬಾಣ ಸದ್ದು ಮಾಡದೇ ಮೇಲೆ ಮೇಲೆ ಸದ್ದಿಲ್ಲದೇ ಹೋಗಿ ಅಲ್ಲಿ ದೊಡ್ಡದಾಗಿ ಸಿಡಿದು ತನ್ನ ನೂರಾರು ಕೈಗಳಿಂದ ಸುತ್ತಲೂ ಮಿಣಮಿಣಕುವ ನಕ್ಷತ್ರಗಳನ್ನು ಚೆಲ್ಲಿದಂತೆ ಕಾಣಿಸಿತ್ತು. ಅದೋ ಮತ್ತೊಂದು ಮೇಲೆ ಮೇಲೆ ಹೋಗುತ್ತಿದೆ!
ಇನ್ನೇನು ಸಿಡಿದು ಹಿಂದಿನದರಂತೆ ಮಾಡುತ್ತದೆ ಎಂದುಕೊಂಡರೆ ಹೂಂ…ಇದು ಬೇರೆಯದನ್ನೇ ಮಾಡಿತು. ಸಿಡಿದ ತಕ್ಷಣ ತನ್ನೊಳಗಿಂದ ತೆಂಗಿನ ಮರದ ಗರಿಗಳಂತೆ ಚದುರಿ ಉದ್ದುದ್ದದ ಚಿನ್ನದ ಬೆಳಕಿನ ಪುಟ್ಟ ಪುಟ್ಟ ಕೋಲುಗಳನ್ನು ಚೆಲ್ಲುತ್ತಾ ಮಾಯವಾಯ್ತು…
ಮಗದೊಂದು ಇವೆರಡಕ್ಕಿಂತ ಬೇರೆಯ ರೀತಿಯಲ್ಲಿ ನೇರಳೆ ಬಣ್ಣದ ಬೆಳಕಿನೊಳಗೆ ನೂರಾರು ನಕ್ಷತ್ರಗಳನ್ನು ಸುತ್ತಲು ಲಯಬದ್ಧವಾಗಿ ಎಸೆದ ಮೇಲೆ ಅವು ಲಯಬದ್ಧವಾಗಿ ಪ್ಯಾರಚ್ಯೂಟುಗಳಂತೆ ಕೆಳಗಿಳಿಯುವಾಗ ನನ್ನ ಕಣ್ಣಿಗೆ ಕಂಡಷ್ಟು ಆಕಾಶಕ್ಕೆ ರಂಗೋಲಿ ಇಟ್ಟು ಮಾಯವಾಯ್ತೇನೋ ಅನ್ನಿಸಿತ್ತು. ಇವುಗಳನ್ನು ಫೋಟೊಗ್ರಫಿ ಮಾಡಬೇಕಾದರೆ ಈಗ ಫೋಕಸ್, ಸರಿಯಾದ ತಾಂತ್ರಿಕತೆ, ಇತ್ಯಾದಿಗಳನ್ನು ಗಮನಿಸದೆ ಅವು ಹೇಗಿದೆಯೋ ಹಾಗೆ ಫೋಟೊಗಳನ್ನು ಕ್ಲಿಕ್ಕಿಸಿಬಿಡೋಣವೆಂದುಕೊಂಡು ಸುಮ್ಮನೇ ಕ್ಲಿಕ್ಕಿಸತೊಡಗಿದೆ. …ಕೆಲ ಸಮಯದ ಹೊತ್ತಿಗೆ ಫೋಕಸ್ ಆಗಿರದ ಆಕಾಶ ಬಾಣಗಳೆಲ್ಲಾ, ಚಿನ್ನದ ಕೋಲುಗಳಂತೆ, ಇಳಿಬಿಸಿಲಿನ ನಡುವೆ ಬಿದ್ದ ತುಂತುರು ಮಳೆಯಲ್ಲಿ ಕಾಣುವ ಬೆಳಕಿನ ಕೋಲುಗಳಂತೆ, ಕೆಲವು ಮಿಣಕು ಹುಳುಗಳಂತೆ, ಕೆಲವೊಂದು ಆಗಾದ ಬೆಳಕಿನ ಸಾಗರದಂತೆ…ಹೀಗೆ ಎಲ್ಲವನ್ನು ಕ್ಲಿಕ್ಕಿಸತೊಡಗಿದ್ದೆ.
ಇದೇ ರೀತಿ ತಲ್ಲೀನನಾಗಿ ಮೈಮರೆತು ಫೋಟೊಗ್ರಫಿ ಮಾಡುತ್ತಿದ್ದವನಿಗೆ ಅರಿವಿಲ್ಲದಂತೆ ಕೆಲವೊಂದು ಆಕಾಶಬಾಣಗಳ ಚಿತ್ರಗಳು ನನಗೆ ಗೊತ್ತಿಲ್ಲದಂತೆ ಫೋಕಸ್ ಆಗಿ ಒಂದರ ಹಿಂದೆ ಒಂದರಂತೆ ಮೋಟರ್ ಡ್ರೈವ್ ಮೋಡ್‍ನಲ್ಲಿ ಕ್ಲಿಕ್ಕಿಸುತ್ತಿರುವಾಗ ದೊಡ್ಡ ನಕ್ಷತ್ರವೊಂದು ಸಿಡಿದು ಅದರ ಎಲ್ಲಾ ದಿಕ್ಕುಗಳಿಗೂ ಚದುರಿದ ಬಣ್ಣ ಬಣ್ಣದ ನಕ್ಷತ್ರಗಳು, ಮತ್ತೊಂದರಲ್ಲಿ ಹಸಿರಾಗಿ ಸಿಡಿದು ಚದುರಿದ ಆಕಾರಗಳಲ್ಲಿ ಲವ್ ಸಿಂಬಲು.
ತೇಲುವ ಬೆಲೂನು. ಕೆಲವಂತೂ ಹುಣ್ಣಿಮೆಯಲ್ಲಿ ಸಾಗರದಲ್ಲಿ ತೇಲುವ ದೋಣಿಗಳಂತೆ ಕಂಡು ತೇಲಿಕೊಂಡು ಕಂಡು ಮಾಯವಾದವು.
ಮಗದೊಂದರಲ್ಲಿ ಚಿಮ್ಮಿದ ಕಿತ್ತಳೆ ಬಣ್ಣದ ಚಿತ್ತಾರದೊಳಗಿಂದ ಬಿಲ್ಲಿನ ಆಕಾರದಲ್ಲಿ ಚಿಮ್ಮಿದ ಕೋಲುಗಳು ಆಗ ತಾನೆ ತಾನೆ ಹರಳಿದ ದಾಸವಾಳ ಹೂವಿನ ಪಕಳೆಗಳ ನಡುವೆ ಅದರೊಳಗೆ ನಿಂತ ಕೆಂಪು ಕೆಂಪು ಕೋಲುಗಳ ತಲೆಯ ಮೇಲೆ ಬೆಳಕಿನ ಕಿರೀಟವನ್ನು ತೊಟ್ಟ ಕೋಲುಗಳಂತೆ ಕಂಡು ಮಾಯವಾದವು. ಕೆಲವಂತೂ ಥೇಟ್ ನಾಚಿಕೆ ಮುಳ್ಳಿನಲ್ಲಿ ಹರಳಿದ ಕೆಂಪು ಮಿಶ್ರಿತ ನೇರಳ ಬಣ್ಣದ ಹೂವುಗಳ ಪತಿಬಿಂಬವನ್ನು ತೋರಿಸುತ್ತ ಮರೆಯಾದವು.
ಒಂದಂತೂ ತನ್ನ ಎಂಟು ಬಾಹುಗಳಲ್ಲಿ ಬೆಂಕಿಯನ್ನು ತುಂಬಿಕೊಂಡು ಮಿಂಚುತ್ತಾ ಸಾಗುವ ಸಾಗರದಾಳದ ಆಕ್ಟೋಪಸ್ ನಂತೆ ಕಂಡು ಮರುಕ್ಷಣದಲ್ಲಿ ತನ್ನೆಲ್ಲಾ ಬೆಂಕಿಯ ಬಾಹುಗಳಲ್ಲಿನ ಕೊಂಡಿ ಕಳಚಿಕೊಂಡು ದಿಗಂತದಲ್ಲಿ ಮರೆಯಾಯ್ತು. ಮಗದೊಂದು ಹಾರಿ ಕೆಳಗೆ ಬೀಳುವಾಗ ಅವಮಾಸ್ಯೆಯ ನಾಲ್ಕು ದಿನಗಳ ಹಿಂದಿನ ಚಂದ್ರಾಕೃತಿಗಳ ಹತ್ತಾರು ನೂರಾರು ತದ್ರೂಪುಗಳನ್ನು ಸೃಷ್ಠಿಸಿದರೆ, ಅದರೊಳಗೆ ಕೆಲವೊಂದು ಬೆಳಕನ್ನು ಚಿನ್ನದ ಬಣ್ಣವನ್ನು ಮೈಗೆ ಸವರಿಕೊಂಡ ಅರ್ಧ ಕೋಡುಬಳೆಗಳಂತೆ, ನಮ್ಮ ವಾಹನಗಳ ಷಾಕ್ ಅಬ್ಸರ್ವರುಗಳ ಸ್ಪ್ರಿಂಗುಗಳಂತೆ ಕಂಡು ಕಣ್ಮರೆಯಾದವು.
ಅಗೋ ಅಲ್ಲೊಂದು ನನ್ನ ಕಣ್ಣ ಮುಂದೆಯೇ ಲೈಪ್ ಅಫ್ ಪೈ ಸಿನಿಮಾದಲ್ಲಿ ಕಂಡಂತೆ ರಾತ್ರಿ ಸಮಯದಲ್ಲಿ ಸಾಗರದಲ್ಲಿ ತೇಲುತ್ತಾ ನನ್ನ ಮುಂಭಾಗದಲ್ಲೇ ಹಾರಿ ನಿದಾನವಾಗಿ ಸಾಗರ ತಳದಲ್ಲಿ ತನ್ನ ಬಣ್ಣ ಬಣ್ಣದ ರೆಕ್ಕೆಗಳನ್ನು ಹರಡಿಕೊಂಡು ಚಲಿಸುವ ಸುಂದರ ನೂರಾರು ಮೀನುಗಳಂತೆ ಕಂಡು ನಿದಾನವಾಗಿ ಮರೆಯಾಯ್ತು.
“ರೀ….ಎಲ್ಲಿದ್ದೀರಿ.. ಒಹ್! ಇಲ್ಲಿದ್ದೀರಾ!…ಈಗ ಟೈಮ್ ಎಷ್ಟು ಗೊತ್ತಾ? ರಾತ್ರಿ ಹತ್ತುಗಂಟೆ. ಮಾಡಿದ ಅಡುಗೆಯೆಲ್ಲಾ ತಣ್ಣಗಾಯ್ತು. ಇನ್ನೂ ಊಟಕ್ಕೆ ಬರುತ್ತೀರೋ ಅಥವ ಇಲ್ವೋ? ಎಂದು ನನ್ನ ಶ್ರೀಮತಿ ಕರೆದಾಗಲೇ ನಾನು ಈ ಬೆಳಕಿನ ನಕ್ಷತ್ರ ಲೋಕದಿಂದ ಹೊರಬಂದಿದ್ದು. ಊಟ ಮಾಡಿ ಮಲಗಿದ್ದಷ್ಟೆ. ಸ್ವಲ್ಪ ಹೊತ್ತಿಗೆ ಎಚ್ಚರವಾಗಿತ್ತು. ಹೇಮ ಮಲಗಿದ್ದಳು ನಾನು ನಿದಾನವಾಗಿ ಹೊರಗೆ ಬಂದು ಟೆರೆಸ್ ಮೇಲೆ ನಿಂತೆ. ಸ್ವಲ್ಪ ಹೊತ್ತಿಗೆ ಒಂದು ದೊಡ್ಡ ಆಕಾಶ ಬಾಣ ಸಿಡಿದು ಅದರೊಳಗೆ ನೂರಾರು ಬೆಳಕಿನ ಬಣ್ಣ ಬಣ್ಣದ ಕೊಡೆಗಳು ಪ್ಯಾರಚ್ಯೂಟುಗಳಂತೆ ಕೆಳಗಿಳಿಯತೊಡಗಿದವು. ನನ್ನ ಪಕ್ಕದಲ್ಲಿಯೇ ಬರುತ್ತಿದ್ದ ಕೊಡೆಯನ್ನು ಹಾರಿ ಹಿಡಿದುಕೊಳ್ಳುವಷ್ಟರಲ್ಲಿ ಅದು ನಿದಾನವಾಗಿ ಮತ್ತೆ ಮೇಲೆ ತೇಲತೊಡಗಿತು. ಆ ತೇಲುವಿಕೆಯಲ್ಲಿ ಎಂಥ ಮಜವಿತ್ತು ಗೊತ್ತಾ!
ಸ್ವಲ್ಪ ಹೊತ್ತಿಗೆ ಕೆಳಗೆ ನೋಡಿದರೆ ಭೂಮಿಯೆಂಬ ಭೂಮಿಯೆಲ್ಲ ಮಿಣುಕುಹುಳ ಬೆಳಕಿನಲ್ಲಿ ಮಿಣುಕುತ್ತಿದೆ! ಕೊಡೆ ನನ್ನನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯುತ್ತಿದೆ….ಇವುಗಳನ್ನು ನೋಡುತ್ತಾ ಅದೆಷ್ಟು ಹೊತ್ತು ಮೈಮರೆತಿದ್ದೆನೋ ಗೊತ್ತಿಲ್ಲ ಹಾಗೆ ನಿದ್ರೆ ಬಂದಿತ್ತು. ಎಚ್ಚರವಾದಾಗ ನೋಡುತ್ತೇನೆ ಇಡೀ ಪ್ರಪಂಚವೇ ಕತ್ತಲು. ನಾನೆಲ್ಲಿದ್ದೇನೆ ಎಂದುಕೊಂಡು ಸುತ್ತಲು ನೋಡಿದರೆ ಬರೀ ಕತ್ತಲು. ನನಗೆ ಗೊತ್ತಿಲ್ಲದಂತೆ ಹಿಡಿದಿದ್ದ ಕೊಡೆಯ ಕೈಬಿಟ್ಟೆನಲ್ಲ, ದಪ್ ಎಂದು ಕೆಳಗೆ ಬಿದ್ದಿದಷ್ಟೇ ಗೊತ್ತು.. “ರೀ..ರೀ….ಆವಾಗಿನಿಂದ ಮೊಬೈಲ್ ಆಲರಂ ಹೊಡೆದುಕೊಳ್ಳುತ್ತಿರುವುದು ನಿಮಗೆ ಕೇಳಿಸುತ್ತಿಲ್ಲವಾ….ಟೈಮ್ ನಾಲ್ಕುವರೆ..ಪೇಪರ್ ಕೆಲಸಕ್ಕೆ ಹೋಗೋಲ್ವಾ..” ಎಂದು ನನ್ನನ್ನು ಅಲುಗಾಡಿಸಿ ಎಬ್ಬಿಸಿದಾಗ ಕನಸಿನಿಂದ ಎಚ್ಚರವಾಗಿದ್ದೆ. ಪೇಪರ್ ಏಜೆನ್ಸಿ ಕೆಲಸವನ್ನು ಮುಗಿಸಿ ಮನೆಗೆ ಬಂದು ರಾತ್ರಿ ತೆಗೆದ ಫೋಟೊಗಳನ್ನು ನೋಡಿದಾಗ ಅನ್ನಿಸಿದ್ದು.
“ಕೊನೆಗೂ ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿದೆ”
(ಚಿತ್ರಗಳು ಮತ್ತು ಲೇಖನ)
ಕೆ ಶಿವು
2 comments:
ನಿಜವಾಗಲೂ ದೀಪಾವಳಿ ಆಚರಣೆ ಮಾಡುವುದು ಹೇಗೆ ಎನ್ನುವುದು ನಿಮ್ಮಿಂದ ಕಲಿಯಬೇಕು. ಸಾರ್ಥಕ ಛಾಯಾಗ್ರಾಹಕನ ಹಬ್ಬ. ಆಗಸದಲ್ಲಿ ತುಸುವೇ ಸಮಯ ಪ್ರತ್ಯಕ್ಷವಾಗಿ ಬೆಳಕಿನ ಚಿತ್ತಾರವನ್ನು ಬಿಡಿಸುವ ಪಟಾಸುಗಳನ್ನು ಸೆರೆ ಹಿಡಿಯುವ ನಿಮ್ಮ ಪ್ರಯತ್ನ ಯಶಸ್ವಿಯಾಗಿದೆ.
ಅರೆ ವಾಹ್! ಒಬ್ಬ ಛಾಯಾಗ್ರಾಹಕ ತನ್ನಿಷ್ಟದ ಫೋಟೋ ತೆಗೆಯಲು ಎಷ್ಟೆಲ್ಲಾ ಹೋರಾಡುತ್ತಾನೆ ಎಂಬುದರ ಚಿತ್ರಣವಿಲ್ಲಿದೆ. ತಮಗೂ ಒಮ್ಮೆ ಇಂಥ ಅನುಭವವಾದ ಛಾಯಾಗ್ರಾಹಕರು ಮಾತ್ರ ಇದನ್ನು ಅರ್ಥಮಾಡಿಕೊಳ್ಳಬಲ್ಲರು ಎಂದು ಅನ್ನಿಸುತ್ತದೆ... ಕತ್ತಲಿನಲ್ಲಿ ಫೋಟೊ ತೆಗೆಯಬೇಕಾದರೆ low shutter speed ಇರಬೇಕು, ವೇಗವಾಗಿ ಚಲಿಸುವ ಇಲ್ಲವೆ ಕ್ಷಣ ಮಾತ್ರ ಕಾಣುವ ದೃಶ್ಯಗಳನ್ನು ಸೆರೆ ಹಿಡಿಯಲು high shutter speed ಇರಬೇಕು, ಸಾಕಷ್ಟು ಬೆಳಕೂ ಇರಬೇಕು. ಇವೆರಡೂ ಕಷ್ಟಗಳನ್ನು ಎದುರಿಸ ಬೇಕಾಗುವುದು ನಿಮ್ಮಂತೆ ಕತ್ತಲೆಯಲ್ಲಿ ಸಿಡಿಯುವ ಆಕಾಶ ಬಾಣಗಳ ಚಿತ್ರ ತೆಗೆಯಬೇಕಾದಾಗ.. ಆ ಸಂದರ್ಭದ ವಿವರಣೆ ತುಂಬಾ ಇಷ್ಟವಾಯಿತು. ಫ಼ೋಕಸ್ ಛಾಯಾಗ್ರಾಹಕನಿಗೆ ಬಹಳ ಸಲ ಕೈ ಕೊಡುವ ವಿಷಯ ಎಂಬುದು ನಿಜ... ನಿಮ್ಮಂತಹ ನುರಿತ ಛಾಯಾಗ್ರಾಹಕರನ್ನು ಅದು ಗೋಳು ಹೊಯ್ಕೊಂಡಿದೆ ಅಂದರೆ ನಮ್ಮಂತಹವರನ್ನು ಬಿಡುತ್ತದೆಯೆ? ಅಂತೂ ಕೊನೆಯಲ್ಲಿ ನಿಮ್ಮ ಪರಿಶ್ರಮ ಫಲಿಸಿದ್ದು ಕಂಡು ಖುಷಿಯಾಯ್ತು! ಫ಼ೋಟೊಗಳು ಬಹಳಷ್ಟು ಚೆನ್ನಾಗಿ ಬಂದಿವೆ... ಮತ್ತೊಮ್ಮೆ ದೀಪಾವಳಿಯ ನೆನಪಾಯ್ತು... ಕೊನೆಯಲ್ಲಿ ನೀವು "ಕೊನೆಗೂ ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿದೆ" ಎಂದಾಗ ನಾನೂ ಮನದಲ್ಲೇ ಒಮ್ಮೆ ಹುರ್ರೇ ಎಂದಿದ್ದೆ! ಛಾಯಾಗ್ರಹಣದ ಆಸಕ್ತಿ ಇರುವವರಿಗೆ ಹೇಳಿಮಾಡಿಸಿದ ಲೇಖನ.. ಇಷ್ಟ ಆಯ್ತು!
Post a Comment