Wednesday, January 14, 2009

ತಂಗಿ......ಇದೋ ನಿನಗೊಂದು ಪತ್ರ.....


ವಿಂಧ್ಯಾ ಪುಟ್ಟಿ........... ನಿನಗೇಕೆ ಪತ್ರ ಬರೆಯಬೇಕು ? ನೀನೇನು ಒಡಹುಟ್ಟಿದವಳಾ ? ಅಥವಾ ಹತ್ತಾರು ವರ್ಷದ ಆತ್ಮೀಯ ಗೆಳೆತಿಯ ?

ಈ ಪ್ರಶ್ನೆ ಇಂದು ಬೆಳಿಗ್ಗೆ ನೂರನೆ ಸಲ ಉದ್ಭವಿಸಿತ್ತು. ಅದೇ ಸಮಯಕ್ಕೆ

" ಅಣ್ಣಾ ಗುಡ್ ಮಾರ್ನಿಂಗ್, ಇವತ್ತು ಬೇಗ ಎದ್ದೆ. "

ನಿನ್ನಿಂದ ಮೆಸೇಜು....................

ಮತ್ತೊಂದು ಗಂಟೆ ಕಳೆದಿರಬಹುದು. ನಿನ್ನಿಂದ ಮಿಸ್‌ಡ್ ಕಾಲ್......................

ಇನ್ನೂ ತಡೆಯಲಾರದೆ ಸಿಟ್ಟಿನಿಂದ ಆ ಪ್ರಶ್ನೆಯನ್ನು ಮತ್ತು ಅದನ್ನು ಹುಟ್ಟಿಸಿದ ಬುದ್ಧಿಯನ್ನು ಕಸದ ಬುಟ್ಟಿಗೆ ಹಾಕಿ ನಿನಗೊಂದು ಪತ್ರ ಬರೆಯತೊಡಗಿದೆ.

ಅಂದ ಮಾತ್ರಕ್ಕೆ ನಾನೇನು ಮಹಾನ್ ಪತ್ರಗಾರನಲ್ಲ. ನಿಜ ಹೇಳಬೇಕೆಂದರೆ ಇದು ನನ್ನ ಜೀವನದ " ಮೂರನೆ " ಪತ್ರ.


ಮೊದಲನೆ ಪತ್ರ ಬರೆದಿದ್ದು ನಾನು ದ್ವಿತೀಯ ಪಿ, ಯು. ಸಿ. ಅಂತಿಮ ಪರೀಕ್ಷೆಯಲ್ಲಿ. ಒಂದು ಪತ್ರ ಬರೆದರೆ ೧೨ ಆಂಕ ಕೊಡುತ್ತಿದ್ದುದರಿಂದ ಬೇಕೊ ಬೇಡವೋ ಒಂದು ವ್ಯವಹಾರದ ಪತ್ರ ಬರೆದು ಎಂಟು ಆಂಕ ಗಿಟ್ಟಿಸಿದ್ದೆ. ಎರಡನೆಯ ಪತ್ರದ ಸಮಯವನ್ನು ಮುಂದೆ ಹೇಳುತ್ತೇನೆ.

ಇಂದಿಗೆ ಸರಿಯಾಗಿ ಒಂದು ತಿಂಗಳು ಹಿಂದೆ........... ಸೋಮವಾರ ನಾನು ಟೂ ವೀಲರ್‌ನಲ್ಲಿ ಹೋಗುತ್ತಿದ್ದಾಗ ಒಂದು ಫೋನ್ ಕಾಲ್!

" ಹಲೋ ಶಿವಣ್ಣ ನಾನು ವಿಂಧ್ಯಾ ... ಅಂತಾ........

ಮಗುವಿನಂತಹ ದ್ವನಿಯಿರುವ ಹುಡುಗಿಯ ಮಾತು ಮೊದಲ ಸಲ ಕೇಳಿದಾಗ ನನಗೆ ಗೊತ್ತಾಗಲಿಲ್ಲ. ನನ್ನ ಟೂ ವೀಲರ್ ಸೈಡಿಗೆ ಹಾಕಿ. "ಈಗ ಹೇಳಿ ಯಾರು ಅಂತಾ..........." ಎಂದೆ. ಮತ್ತೆ ನಿನ್ನಿಂದ ಅದೇ ಮಾತು.

ಮುಂದುವರಿದು " ನಿಮ್ಮ ನಂಬರನ್ನು ಇಂಟರ್‌ನೆಟ್‌ನಿಂದ ಕದ್ದೆ ನಿಮಗೆ ಬೇಸರವಿಲ್ಲವಲ್ಲ " ಎಂದು ಹೇಳಿ ನಿನ್ನ ಪರಿಚಯ ಮಾಡಿಕೊಂಡೆ. ಆಗ ನನಗೆ ಗೊತ್ತಾಗಿದ್ದು ನೀನು ನನ್ನ ಬ್ಲಾಗನ್ನು ಪ್ರತಿನಿತ್ಯ ಓದಿ ಬ್ಲಾಗಿನಲ್ಲಿ ಕಾಮೆಂಟ್ ಮಾಡದೇ ಮೇಲ್‌ನಲ್ಲಿ ಪ್ರತಿಕ್ರಿಯಿಸುತ್ತಿರುವ ಹುಡುಗಿ......ಅಂತ.

ಸ್ವಲ್ಪ ಹೊತ್ತು ಮಾತಾಡಿದ ನಂತರ ನಿಮ್ಮ ಫೋನ್ ನಂಬರನ್ನು ನಿಮ್ಮ ಗೆಳೆಯರೊಬ್ಬರಿಂದ ಕೇಳಿ ಪಡೆದುಕೊಂಡೆ ಎಂದು ಹೇಳಿ ನಿನ್ನ ನಂಬರನ್ನು ಮೆಸೇಜ್ ಮಾಡಿದೆ.

ಅಮೇಲೆ ಹರಿದಾಡಿತಲ್ಲ ಎಸ್ ಎಮ್ ಎಸ್ ಗಳು............... ಮೊದಲ ದಿನವೇ ನಿನ್ನ ವಿಚಾರ ಸ್ವಲ್ಪ ತಿಳಿಯಿತು. ದಿನದ ಕೊನೆಯಲ್ಲಿ ನಿನ್ನಿಂದ ಬಂತಲ್ಲ ಒಂದು ಮೆಸೇಜು.


" ನನಗೆ ಆಣ್ಣಾ ಇಲ್ಲಾ, ಅದಕ್ಕೆ ನಿಮ್ಮನ್ನೆ ಅಣ್ಣಾ ಅಂತೀನಿ "

"ನನಗೆ ತಂಗಿ ಇಲ್ಲ ನಿನ್ನನ್ನೇ ತಂಗಿ ಅಂತೀನಿ "

ನಾನು ತಕ್ಷಣ ಎಸ್ ಎಮ್ ಎಸ್ ಕಳುಹಿಸಿದ್ದೆ. ಆ ಕ್ಷಣ ಹಾಗೇಕೆ ಮಾಡಿದೆನೋ ಗೊತ್ತಿಲ್ಲ.

ಅನಿರೀಕ್ಷಿತವಾದದ್ದು ಲಭಿಸುವಾಗ
ಪ್ರತಿಕ್ಷಣದಲ್ಲೂ ಅಚ್ಚರಿ ಮತ್ತು ಆನಂದ......
ಆ ರೋಮಾಂಚನ ನಿರೀಕ್ಷಿತವಾದದ್ದು
ಸಿಗುವಾಗ ಇರಲಾರದು........................


ಇಲ್ಲಿ ನನ್ನ ಒಡಹುಟ್ಟಿದ ತಂಗಿಯ ವಿಚಾರವನ್ನು ಸ್ವಲ್ಪ ನಿನಗೆ ಹೇಳಬೇಕಿದೆ.

ಬಾಲ್ಯದಲ್ಲಿ ಅಪ್ಪ ನನಗೆ ಐದು ಪೈಸೆ ಕೊಟ್ಟು ಅವಳಿಗೆ ತಿಂಡಿ ಕೊಡಿಸು ಅಂತ ಕಳಿಸುತ್ತಿದ್ದರು. ನಾನು ಆ ಐದು ಪೈಸೆಯಲ್ಲಿ, ಪೈಸಕ್ಕೊಂದರಂತೆ ಸಿಗುವ ನಮ್ಮ ಪುಟ್ಟ ಪುಟ್ಟ ಕೈ ಬೆರಳುಗಳಿಗೆ ಸಿಕ್ಕಿಸಿಕೊಳ್ಳುವ ಕೋಡುಬಳೆಯನ್ನು ಕೊಂಡುಕೊಂಡು ಅವಳಿಗೆ ಮೂರು ಕೊಟ್ಟು ಎರಡನ್ನು ಜೇಬಿಗಿಳಿಸುತ್ತಿದ್ದೆ.

ಕಲ್ಮಶ ತುಸು ಇಲ್ಲ.......
ನಿರ್ಮಲ ಖುಷಿ ಎಲ್ಲಾ.........
ಒಂದು ಗೂಡಿ ಕಳೆಯುವ ಕ್ಷಣದಲ್ಲಿ.......
ಗೆಳೆತನ ಎಂಥ ಮೋಡಿ...............


ಅವಳಿಗೆ ಬುದ್ದಿ ಬರುವವರೆಗೆ "ಟೋಪಿ" ಹಾಕಿಸಿಕೊಳ್ಳುವ ತಂಗಿಯಾಗಿದ್ದ ಅವಳು ನಾನು ಕಾಲೇಜಿಗೆ ಹೋಗುವ ಸಮಯಕ್ಕೆ ಅಮ್ಮನಾಗತೊಡಗಿದಳು.


ನಮ್ಮ ಮನೆಯಲ್ಲಿ ಬಡತನ. ನಾನಾಗ ಬೆಳಿಗ್ಗೆ ೫ ಗಂಟೆಗೆ ಎದ್ದು ಮನೆ ಮನೆಗೆ ಪತ್ರಿಕೆ ಹಂಚಲು ಹೋಗುತ್ತಿದ್ದೆ. ೬-೩೦ ಕ್ಕೆ ವಾಪಸ್ಸು ಬಂದು ಅರ್ದ ಗಂಟೆಯಲ್ಲಿ ರೆಡಿಯಾಗಿ ೭-೩೦ರ ಹೊತ್ತಿಗೆ ಕಾಲೇಜಿಗೆ ಹೋಗಬೇಕಿತ್ತು.

ನನಗಾಗಿ ಬೇಗ ಎದ್ದೇಳುತ್ತಿದ್ದ ತಂಗಿ ರುಕ್ಕು[ರುಕ್ಮಿಣಿದೇವಿ] ಏನಾದರೂ ತಿಂಡಿ ಮಾಡಿಕೊಡುತ್ತಿದ್ದಳು. ಮನೆಯಲ್ಲಿ ರೇಷನ್ ಇಲ್ಲದ ದಿನ ರಾತ್ರಿ ಉಳಿದ ಅನ್ನ ಸಾರು ಬಿಸಿ ಮಾಡಿ ಅಮ್ಮನಂತೆ ಬಡಿಸುತ್ತಿದ್ದಳು.

ಕೆಲವೊಂದು ದಿನ ಏನು ಇಲ್ಲದೆ ನಾನು ಹಾಗೆ ಹೋಗುವಾಗ

" ಅಣ್ಣಾ ಏನು ಅಂದುಕೋಬೇಡ. ಇವತ್ತು ಏನು ಮಾಡಲಿಕ್ಕಾಗಲಿಲ್ಲ." ವೆಂದಾಗ ನಾನು ಮರು ಮಾತಾಡದೆ ಹೋಗಿಬಿಡುತ್ತಿದ್ದೆ.

ಮದ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಕಾಲೇಜು ಮುಗಿಸಿ ಹೊಟ್ಟೆ ಹಸಿದು ಸುಸ್ತಾಗಿ ಬಂದಾಗ ಬಿಸಿ ಬಿಸಿ ರಾಗಿ ಮುದ್ದೆ ಬಸ್ಸಾರು ಮಾಡಿ ಬಡಿಸಲು ಕಾಯುತ್ತಿದ್ದಳು.

ದೇವರು ಅವಳನ್ನು ನನಗೆ ಯಾಕೆ
ಪರಿಚಯಿಸಿದ ಎಂಬುದಕ್ಕಿಂತ ನನಗೊಂದು
ಪ್ರೀತಿಸುವ ಹೃದಯದ ಅಗತ್ಯವಿತ್ತು ಅಂತ
ದೇವರಿಗೆ ಗೊತ್ತಾದದ್ದಾದರೂ ಹೇಗೆ !!..............


ಹಾಗಂತ ನನಗೆ ಅಪ್ಪ.. ಅಮ್ಮ.. ಅಕ್ಕ.. ತಮ್ಮ.. ಯಾರು ಈ ರೀತಿ ನೋಡಿಕೊಳ್ಳುತ್ತಿರಲಿಲ್ಲವೇ ಅಂತ ನಿನಗೆ ಅನ್ನಿಸಬಹುದು. ಅಪ್ಪ ಸಂಸಾರದ ನೊಗ ಹೊತ್ತಿದ್ದರು. ಅಮ್ಮ ಅಪ್ಪನಿಗೆ ಸಾತಿಯಾಗಿದ್ದಳು. ಅಕ್ಕ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳಾದರೂ ಕೆಲವೇ ದಿನಗಳಲ್ಲಿ ಅಕ್ಕನ ಮದುವೆಯಾಗಿ ತಂಗಿಯೇ ಮನೆಯ ಒಳಗಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಎಲ್ಲರಿಗೂ ಅಮ್ಮ ಆಗಿದ್ದಳು.


ಇಂಥ ತಂಗಿಗೆ ಮದುವೆಯಾಗಿ ಗಂಡನ ಮನೆಗೆ ಹೋದಾಗ ನನ್ನ ಎರಡನೆ ಅಮ್ಮ ದೂರವಾದಳೇನೋ ಅನ್ನಿಸಿತ್ತು. ಕೆಲವೇ ದಿನಗಳಲ್ಲಿ ಅಪ್ಪನಿಗೆ ನಿವೃತ್ತಿಯಾಗಿ ಮನೆಯ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು.

ತಂಗಿಯ ಚೊಚ್ಚಲ ಹೆರಿಗೆ ಕಷ್ಟವಾಗಿ ತಾಯಿ-ಮಗು ಇಬ್ಬರ ಜೀವಕ್ಕೂ ಅಪಾಯ ಅಂತ ಡಾಕ್ಟರಮ್ಮ ಹೇಳಿದಾಗ ನನ್ನ ಪಾಲಿಗೆ ಭೂಮಿ ಬಿರಿದಂತಾಗಿತ್ತು.

ಅವಳಿಗೆ ರಕ್ತ ಕೊಡಬೇಕೆಂದಾಗ ನನ್ನ ರಕ್ತವನ್ನೇ ಕೊಟ್ಟಿದ್ದೆ. ನನ್ನದು " ಎ ಪಾಸಿಟೀವ್ " ಆಗಿದ್ದರಿಂದ ಹೆಚ್ಚು ಮೌಲ್ಯವುಳ್ಳದ್ದು ಅಂತ ಯಾರೋ ಹೇಳಿದ ನೆನಪು. ಆ ಬೆಲೆಯುಳ್ಳ ರಕ್ತವೂ ನನ್ನ ತಂಗಿಯನ್ನು, ಅವಳ ಮಗುವನ್ನು ಉಳಿಸಿಕೊಳ್ಳಲಾಗದೆ ಬೆಲೆ ಕಳೆದುಕೊಂಡಿತ್ತು...........

ಇನ್ನೊಬ್ಬರಿಗೆ ತಿಳಿಯಬಾರದೆಂದು ನಮ್ಮ
ನೋವನ್ನು ಎಷ್ಟು ಬಚ್ಚಿಟ್ಟರೂ..........
ಅದು ಪ್ರಕಟವಾಗದೆ ಇರದು.
ಅಂತೆಯೇ ಪ್ರೀತಿಯೂ.......... !!


ಶವಗಳನ್ನು ಮನೆಗೆ ತಂದ ರಾತ್ರಿ ನಾನು ನನ್ನ ಜೀವನದ ಎರಡನೆ ಪತ್ರವನ್ನು ಅಮ್ಮನ ಪಾತ್ರದಲ್ಲಿದ್ದ ತಂಗಿ ರುಕ್ಮಿಣಿಗೆ ಬರೆದಿದ್ದೆ.


ಆದರೆ ವಿಂಧ್ಯಾ ಪುಟ್ಟಿ............. ನಿನಗೆ ಈ ಮೂರನೆ ಪತ್ರವನ್ನು ಬರೆಯಬೇಕು ಅಂತ ಏಕೆ ಅನ್ನಿಸಿತೋ ಗೊತ್ತಿಲ್ಲ.


ಮೂರು ದಿನಗಳ ಹಿಂದೆ ರಾತ್ರಿ " ಆಣ್ಣಾ ನನಗೆ ಬೇಜಾರಾಗ್ತಿದೆ, ಜ್ವರಾನು ಬಂದಿದೆ " ಬಂತಲ್ಲ ನಿನ್ನಿಂದ ಒಂದು ಮೇಸೇಜು.

" ಯಾಕೊ ಮರಿ ಏನಾಯ್ತು " ನನ್ನ ಕಡೆಯಿಂದ.

" ನನ್ ತಮ್ಮ ನನಗೆ ಹೇಳದೆ ಅವನ ಪ್ರೆಂಡ್ ಮನೆಗೆ ಹೋದ. ನನಗೆ ಒಬ್ಬಳೇ ಅಂತ ಬೇಸರವಾಗಿದೆ ಅಣ್ಣಾ " ನಿನ್ನ ಕಡೆಯಿಂದ..


ನನಗೆ ನಗು ಬಂತು. ಚಿಕ್ಕಂದಿನಲ್ಲಿ ನನ್ನ ತಂಗಿಯೂ ಕೂಡ ಇಂಥದ್ದೇ ಕೆಲವು ಸಣ್ಣ [ಕ್ಷಮಿಸು ಸಣ್ಣದು ಅಂದಿದ್ದಕ್ಕೆ] ಸಣ್ಣ ಕಾರಣಗಳಿಗೆ ನನ್ನ ತಮ್ಮನ ಮೇಲೆ ದೂರು ಹೇಳುತ್ತಿದ್ದುದ್ದು ನೆನಪಾಯಿತು.........ಇದು ಹೀಗೆ ಮುಂದುವರಿದಿತ್ತು.


ನೀನು ಮತ್ತು ನಾನು ಪ್ರತಿದಿನ ಚಿಕ್ಕಮಕ್ಕಳ ಹಾಗೆ, ನಮ್ಮ ದಿನನಿತ್ಯದ ವಿಚಾರಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ನನ್ನೆಲ್ಲಾ ಕೆಲಸದ ನಡುವೆ ನಿನ್ನ ಒಂದು ಫೋನ್ ಕಾಲ್ ಅಥವ ಒಂದು ಎಸ್ ಎಮ್ ಎಸ್ ನನಗೊಂತರ ರಿಲೀಪ್ ಕೊಡಲಾರಂಭಿಸಿತು. ನಿನಗೆ ಹಾಗೆ ಆನ್ನಿಸುತ್ತಿತ್ತಾ ? ಗೊತ್ತಿಲ್ಲಾ.........


ಕೆಲವೊಮ್ಮೆ ನಿನ್ನ ಮಾತು ಕೇಳುತ್ತಿದ್ದಾಗ ಚಿಕ್ಕಂದಿನಲ್ಲಿ ನನ್ನ ತಂಗಿ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಇಬ್ಬರೂ ಹೊರಪ್ರಪಂಚದ ಹರಿವಿಲ್ಲದೆ ಮಾತಾಡುತ್ತಾ, .......ಒಂದು ಕ್ಷಣ............. ನಗು, ಮರುಕ್ಷಣ ಹುಸಿಮುನಿಸು...........ಟೂ ಟೂ..... ಶೇ..................................


ಮಲ್ಲಿಗೆ ಗುಲಾಬಿಗೆ ತನ್ನ ಪರಿಮಳದ
ಒಂದಂಶವನ್ನು ಕೊಟ್ಟಂತೆ................
ಗುಲಾಬಿ ಮಲ್ಲಿಗೆಗೆ ತನ್ನ ಸೌಂದರ್ಯದ

ಕೊಂಚ ಭಾಗವನ್ನು ಕೊಟ್ಟಂತೆ...............

ನೆನಪು ಮರುಕಳಿಸಿತ್ತು. ಅದಕ್ಕಾಗಿ ನಿನಗೆ ಸಾವಿರ ಸಾವಿರ ಥ್ಯಾಂಕ್ಸ್.............


ಇಷ್ಟಕ್ಕೂ ನಾವಿಬ್ಬರೂ ಮುಖಾ ಮುಖಿ ಭೇಟಿಯಾಗೆ ಇಲ್ಲ. ಫೋನಿನಲ್ಲಿ ನಿನ್ನ ಮಾತು ಮತ್ತು ದ್ವನಿ ಮಗುವಿನಂತೆ... ನಿನ್ನ ಕಾಮೆಂಟುಗಳನ್ನು ಓದಿದಾಗ ನನಗನ್ನಿಸಿದ್ದು ನೀನು ಬುದ್ಧಿವಂತೆ. ತುಂಬಾ ಪುಸ್ತಕ ಓದಿದ್ದೀಯಾ ನಿನ್ನ ವಯಸ್ಸಿಗೆ ಮೀರಿದ ಕಷ್ಟಗಳನ್ನು ಅನುಭವಿಸಿದ ಅಮ್ಮನ ಹಾಗೆ ಅಂತ. ನಾನಂತೂ ನಿನ್ನೆರಡೂ ಪಾತ್ರಗಳನ್ನು "Enjoy" ಮಾಡುತ್ತಿದ್ದೇನೆ.


ನನಗೆ ಇವತ್ತು ಬೆಳಿಗ್ಗೆ ಈ ಪತ್ರ ಬರೆಯುವ ತುಡಿತ ಹೆಚ್ಚಾದಾಗ ನಾನು ದಿನಪತ್ರಿಕೆಗಳ ಹಣ ವಸೂಲಿಗಾಗಿ ಮನೆ ಮನೆಗೆ ಅಲೆಯುತ್ತಿದ್ದೆ. ಈ ಪತ್ರ ಬರೆಯಲು ಕಾಗದವಿರಲಿಲ್ಲ. ಕೊನೆಗೆ ನನ್ನ ಹಣ ವಸೂಲಿಯ ಅಂಗೈ ಅಗಲದ ರಸೀತಿಯ ಹಿಂಭಾಗದಲ್ಲೇ ಮನೆ ಮನೆ ಅಲೆಯುತ್ತಾ ಈ ಪತ್ರ ಬರೆದು ಮುಗಿಸಿದೆ.


ಈ ಕಾರಣಕ್ಕೆ ರಸೀತಿಯೆಲ್ಲಾ ಖಾಲಿಯಾಗಿ ಪೂರ್ತಿ ಹಣ ವಸೂಲಿಯಾಗಲಿಲ್ಲ. ಇದಕ್ಕೆ ನೀನು ಕಾರಣ. ಹಣ ವಸೂಲಿ ಸರಿಯಾಗಿ ಆಗದಿದ್ದರೂ ರಸೀತಿಯ ಹಿಂದೆ ನನ್ನ ಭಾವನೆಗಳು ಸಂಪೂರ್ಣ ವಸೂಲಾಗಿದೆಯೆಂಬ ಖಾತ್ರಿಯಾಗಿದೆ........


ಕೊನೆಯ ಮಾತು. ನೀನು ಇದಕ್ಕೆ ಬೈಯಬಹುದು. ಮೊದಲೇ ಸಿಟ್ಟಿನ ಹುಡುಗಿಯೆಂದು ನಿನಗೆ ನೀನೆ ಸರ್ಟಿಫಿಕೇಟ್ ಕೊಟ್ಟುಕೊಂಡಿರುವುದರಿಂದ ಮತ್ತು ನಿನ್ನ ಮೆಸೇಜ್ ಹಾಗು ಮಿಸ್ಸ್‌ಡ್ ಕಾಲ್‌ಗೆ ನಾನು ಉತ್ತರಿಸದಿರುವ ಕಾರಣ ಇದೊಂದೆ ಎಂದು ಹೇಳಿದರೂ ನಿನ್ನ ಬಗ್ಗೆ ವಾತ್ಸಲ್ಯ ತುಂಬಿದ ಪ್ರೀತಿಯ ಜೊತೆಗೆ ಭಯವಿದೆಯೆಂದು ಹೇಳುತ್ತಾ ಈ ಪತ್ರವನ್ನು ಮುಗಿಸುತ್ತೇನೆ......
ಬೇಗ ಹುಷಾರಾಗು ತಂಗಿ.........ಇವತ್ತಿನ ದಿನ ನಿನ್ನದಾಗಲಿ...................


ನಿನ್ನ ಪ್ರೀತಿಯ ಅಣ್ಣ...........

ಶಿವು.

-------------------------------------

ನನ್ನ ತಂಗಿ ರುಕ್ಮಿಣಿ ದೇವಿ.





ಇಂದು ಜನವರಿ ೧೬. ನನ್ನ ತಂಗಿ ರುಕ್ಮಿಣಿಯ ಜನ್ಮ ದಿನ. ಅವಳಿದ್ದಿದ್ದರೆ ಇಂದಿಗೆ ೨೯ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಅವಳ ನೆನಪಿಗಾಗಿ ಮತ್ತೊಬ್ಬ ಸಹೋದರಿ ವಿಂಧ್ಯಾಳ ಅನುಮತಿ ಪಡೆದು ಈ ಪತ್ರವನ್ನು ಬ್ಲಾಗಿಗೆ ಹಾಕಿದ್ದೇನೆ......

ಧನ್ಯವಾದಗಳು.

ಶಿವು.

Thursday, January 8, 2009

ನಿಮ್ಮೆಂಗುಸ್ರೂ.......ಪಕ್ಕದ ಮನೆ ಹೆಂಗಸ್ರೂ..........

"ಬನ್ನಿ ಬನ್ನಿ.......ಎಲ್ಲರೂ ಬನ್ನಿ.....ಕೈ ತೊಳೆದುಕೊಳ್ಳಿ.....ನಿಮೆಂಗುಸ್ರೂ............. ಪಕ್ಕದ ಮನೆ ಹೆಂಗಸ್ರೂ ಕಾಯ್ತಿದ್ದಾರೆ.... ಬನ್ನಿ..... "!!

ಮೂರ್ತಿ ಕರೆದಾಗ ಅಂತ ಕೆಮ್ಮಣುಗುಂಡಿ ಗಿರಿಧಾಮದ ಕಡೆಗೆ ಹೋಗುವ ದಾರಿಯಲ್ಲಿ ಸಿಕ್ಕುವ ಹೊನ್ನಮ್ಮನ ಹಳ್ಳದ ಬಳಿ ಇಬ್ಬನಿ ತಬ್ಬಿದ ಚಳಿಯ ವಾತಾವರಣದಲ್ಲೂ ನಮಗೆಲ್ಲಾ ಮೈ ಬಿಸಿಯಾಯಿತು....

ಅದೇನೆಂದು ನೋಡಲು ಹೋದರೆ ಮೂರ್ತಿ ಒಬ್ಬಬ್ಬರಿಗೆ ಒಂದೊಂದು ಕವರ್ ಕೊಡುತ್ತಾ .,

"ನೋಡಿ ಇದರಲ್ಲಿ ಇಬ್ಬರೂ ಇದ್ದಾರೆ ನಿಮಗ್ಯಾವುದು ಬೇಕೊ ಅದನ್ನು ತಿನ್ನಿ........ "

ತೆಗೆದು ನೋಡಿದರೆ ಅದರಲ್ಲಿ ಉಪ್ಪಿಟ್ಟು ಮತ್ತು ಕೇಸರಿ ಬಾತಿನ ಪಟ್ಟಣವಿತ್ತು...

ಹೊಸ ಜಾಗದಲ್ಲಿ ಹೊಸವಿಚಾರವಿರುವ ಹಾಗಿದೆಯಲ್ಲ .....

ನಿಮ್ಮೆಂಗಸ್ರೂ......ಪಕ್ಕದಮನೆ ಹೆಂಗಸ್ರೂ.....ತಿನ್ನುತ್ತಿರುವ ಘನಶ್ಯಾಮ್ ಮತ್ತು ಕಿಶೋರ್‍


ನಮ್ಮ ಕುತೂಹಲವನ್ನು ತಣಿಸಲಿಕ್ಕಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ವರದಿಗಾರರಾದ ತಿಪ್ಪೆರುದ್ರಪ್ಪ ವಿವರಣೆ ಕೊಟ್ಟರು.

ನಿಮ್ಮ ಕೈಲಿರುವ ಉಪ್ಪಿಟ್ಟು ನಿಮ್ಮೆಂಗುಸ್ರೂ....... ಅದನ್ನು ಹೇಗಿದ್ರು ಸಹಿಸಿಕೊಂಡು ತಿನ್ನುತ್ತೀರಿ.....ಅದರೆ ಅದೇ ಕೇಸರಿ ಬಾತ್ ಪಕ್ಕದ ಮನೆಯ ಹೆಂಗಸರಿದ್ದ ಹಾಗೆ ನೋಡಿಕೊಂಡು ತಿನ್ನುತ್ತೇವಲ್ಲ.... ಅಂದಾಗ ನಮ್ಮ ಕುತೂಹಲ ತಣಿದಿತ್ತು...

ಕಾರ್ಯಗಾರದಲ್ಲಿ ಭಾಗವಹಿಸಿದ್ದ ಒಟ್ಟು ಹನ್ನೆರಡು ಜನ ಛಾಯಾಗ್ರಾಹಕರು.


ಚಿಕ್ಕಮಗಳೂರಿನ ಪತ್ರಿಕಾ ಛಾಯಾಗ್ರಾಹಕರಿಗೆ ಒಂದು ದಿನದ ಫೋಟೋಗ್ರಫಿ ಕಾರ್ಯಗಾರ ನಡೆಸಿಕೊಡುವಂತೆ ಚಿಕ್ಕಮಗಳೂರಿನ ಪತ್ರಿಕಾ ಛಾಯಾಗ್ರಾಹಕರ ಸಂಘ ನನಗೆ ಮತ್ತು ಮಲ್ಲಿಕಾರ್ಜುನ್‌ಗೆ ಆಹ್ವಾನ ನೀಡಿದ್ದರಿಂದ ಇಬ್ಬರೂ ಹೊರಟಿದ್ದೆವು. ಕಡೂರಿನವರೆಗೆ ಪ್ರಯಾಣ ಚೆನ್ನಾಗಿದ್ದು ಅಲ್ಲಿಂದ ಚಿಕ್ಕಮಗಳೂರಿಗೆ ತಲುಪುವ ಹೊತ್ತಿಗೆ ರಸ್ತೆ ತುಂಬಾ ಗಾಯಗಳಾಗಿದ್ದರಿಂದ ನಮ್ಮ ದೇಹದ ನಟ್ಟು ಬೋಲ್ಟುಗಳು ಸಡಿಲಗೊಂಡಿದ್ದವು.

ನಮ್ಮ ಕ್ಯಾಮೆರಾ ಬ್ಯಾಗನ್ನು ಮೊದಲೇ ನಮ್ಮ ತೊಡೆಯ ಮೇಲೆ ಇರಿಸಿದ್ದರಿಂದ ಅವುಗಳು ಆರೋಗ್ಯವಾಗಿದ್ದವು.

ಮರುದಿನ ಬೆಳಿಗ್ಗೆ ಆರು ಗಂಟೆಗೆ ಆಗಲೇ ನಮ್ಮನ್ನು ಕರೆದೊಯ್ಯುವ ಮಿನಿಬಸ್ ನಮಗಿಂತ ಮೊದಲೆ ಎದ್ದು ಸಿದ್ದವಾಗಿಬಿಟ್ಟಿದೆ. ಅದರ ಉತ್ಸಾಹಕ್ಕೆ ಬೆರಗಾಗಿ ನಾವು ಬೇಗನೆ ಸಿದ್ದರಾಗಿ ಬಂದು ಮಿನಿಬಸ್ಸಲ್ಲಿ ಕುಳಿತೆವು.

ಮುಂಜಾನೆ ಮಂಜಿನ ವಾತಾವರಣದಲ್ಲಿ ಎಲ್ಲರೂ ಫೋಟೋ ತೆಗೆಯುವ ಹುರುಪಿನಲ್ಲಿ !

ಈ ಕಾರ್ಯಗಾರಕ್ಕೆ ಚಿಕ್ಕಮಗಳೂರಿನ ಪ್ರಜಾವಾಣಿ ವರದಿಗಾರ ಘನಶ್ಯಾಮ್, ಛಾಯಾಗ್ರಾಹಕ ಎ.ಎನ್. ಮೂರ್ತಿ, ಜಿಲ್ಲೆ ಸುದ್ದಿಗಾರ ಪತ್ರಿಕೆಯ ವರದಿಗಾರ ಮತ್ತು ಛಾಯಾಗ್ರಾಹಕ ಜಗದೀಶ್ ಭಕ್ತನಕಟ್ಟೆ, ಕಲಾವಿದ-ಛಾಯಾಗ್ರಾಹಕ ದಯಾನಂದ್, ಜಿಲ್ಲಾ ಸಮಾಚಾರ ಪತ್ರಿಕೆಯ ಉಪ ಸಂಪಾದಕ ಶಂಕರಗೌಡ ಪಾಟೀಲ, ಟಿ.ವಿ. ೯ ಛಾಯಾಗ್ರಾಹಕ ಎಸ್.ಅನಿಲ್, ಹೆಗ್ಗುರುತು ಪತ್ರಿಕೆಯ ಛಾಯಾಗ್ರಾಹಕ ಎಸ್.ವಿ.ಗಜೇಂದ್ರ, ಕನ್ನಡಪ್ರಭ ಛಾಯಾಗ್ರಾಹಕ ಕೆ.ಎನ್. ಕಿಶೋರ್‍ ಕುಮಾರ್, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ವರದಿಗಾರರಾದ ಬಿ. ತಿಪ್ಪೆರುದ್ರಪ್ಪ, ಹೊಸದಿಗಂತ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕ ಸಿ. ಸುರೇಶ್ ಭಾಗವಹಿಸಿದ್ದರು.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ಸಿನ ಹಿರಿಯ ವರದಿಗಾರ ತಿಪ್ಪೆರುದ್ರಪ್ಪನವರು ತಿಳಿಬೆಳಕಿನಲ್ಲಿ ನನ್ನ ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ !!


ನಮಗಿಂತ ಹಿರಿಯರು ಅಂಥ ಚಳಿಯಲ್ಲೂ ಮುಂಜಾನೆ ಬೇಗನೆ ಸಿದ್ದವಾಗಿ ಹೊಸದೇನೊ ಕಲಿಯುವ ಉತ್ಸಾಹದಲ್ಲಿದ್ದುದ್ದು ನಮಗಂತೂ ಹೊಸ ಹುರುಪು ಬಂದಿತ್ತು. ಚಿಕ್ಕಮಗಳೂರಿನಿಂದ ಕೆಮ್ಮಣ್ಣುಗುಂಡಿಗೆ ಹೋಗುವ ದಾರಿಯುದ್ದಕ್ಕೂ ಪರಿಚಯ, ಛಾಯಾಚಿತ್ರಗಳ ಬಗ್ಗೆ ಮಾತುಕತೆ, ಚಿಕ್ಕಮಗಳೂರಿನಲ್ಲಿರುವ ಛಾಯಾಗ್ರಾಹಣದ ಅವಕಾಶಗಳು, ಪಿಕ್ಟೋರಿಯಲ್ ಫೋಟೋಗ್ರಫಿ, ಲ್ಯಾಂಡ್‌ಸ್ಕೇಪ್, ಹಿಮದ ವಾತಾವರಣದಲ್ಲಿ ಫೋಟೋ ತೆಗೆಯುವ ತಾಂತ್ರಿಕ ವಿಚಾರಗಳು, ಪತ್ರಿಕಾ ಛಾಯಾಗ್ರಹಣದ ಸವಾಲುಗಳು ಮತ್ತು ಅವಕಾಶಗಳು, ಕುರುಕುಲು ತಿಂಡಿಗಳು, ಹರಟೆ, ಅನುಭವ ಪ್ರಯಾಣದ ಜೊತೆಯಲ್ಲೇ ನಡೆದಿತ್ತು.

ಕೆಮ್ಮಣ್ಣುಗುಂಡಿಯ ಒಂದು ಮುಂಜಾವಿನ ಲ್ಯಾಂಡ್ ಸ್ಕೇಪ್ ಚಿತ್ರ !


ಹೀಗೊಂದು ಪಿಕ್ಟೋರಿಯಲ್ ಚಿತ್ರವೂ ನಮ್ಮ ಕ್ಯಾಮೆರಾದ ಒಡಲಲ್ಲಿ !!


ಮತ್ತೊಂದು ಲ್ಯಾಂಡ್‌ಸ್ಕೇಪ್ ಚಿತ್ರ "ಒಂಟಿ ಮರ ಮುಂಜಾನೆಯ ತಿಳಿಬಿಸಿಲಲ್ಲಿ" !
ಹೋಗುವ ದಾರಿಯಲ್ಲಿ ಅಲ್ಲಲ್ಲಿ ಲ್ಯಾಂಡ್ ಸ್ಕೇಪ್‌ಗಳು, ಪಿಕ್ಟೋರಿಯಲ್ ಫೋಟೋಗಳು, ನಮ್ಮೆಲ್ಲರ ಕ್ಯಾಮೆರಾಗಳಿಗೆ ಸೆರೆಯಾದವು.
ಕೆಮ್ಮಣ್ಣುಗುಂಡಿ ಗಿರಿದಾಮ ತಲುಪಿದಾಗ ೧೧ ಗಂಟೆಯಾಗಿತ್ತು. ಅಲ್ಲಿ ಒಂದಷ್ಟು ಹೂವು, ಪಕ್ಷಿಗಳು, ಮಕ್ಕಳ ಫೋಟೋಗಳು ಸಿಕ್ಕವು. ನಂತರ ನಡೆದ ಸಂವಾದದಲ್ಲಿ ನಾವು ತೆಗೆದ ಪಿಕ್ಟೋರಿಯಲ್, ವೈಲ್ಡ್ ಲೈಪ್, ಚಿಟ್ಟೆ ಮತ್ತು ಇತರ ಕೀಟಗಳು, ಜರ್ನಲಿಸಂ ಚಿತ್ರಗಳನ್ನು ಪ್ರದರ್ಶಿಸಿದೆವು. ಅವುಗಳ ಬಗ್ಗೆ ಒಂದಷ್ಟು ಆರೋಗ್ಯಕರ ಚರ್ಚೆಯೂ ಮನಸ್ಸಿಗೆ ಮುದ ನೀಡಿತ್ತು.

ಲ್ಯಾಪ್ ಟಾಪ್‌ನಲ್ಲಿ ಚಿತ್ರಗಳ ಪ್ರದರ್ಶನ ಮತ್ತು ಸಂವಾದದ್ದಲ್ಲಿ ಮಲ್ಲಿಕಾರ್ಜುನ್ ಮತ್ತು ನಾನು.




ಊಟ ಮುಗಿಸಿ ಚಿಕ್ಕಮಗಳೂರಿಗೆ ಬರುವ ದಾರಿಯುದ್ದಕ್ಕೂ ಎಲ್ಲಾ ಛಾಯಾಗ್ರಾಹಕರು ಮತ್ತಷ್ಟು ಹುರುಪಿನಿಂದ ತಮ್ಮ ಕ್ಯಾಮೆರಾಗಳಿಗೆ ಕೆಲಸ ಕೊಟ್ಟಿದ್ದರು.

ಕೆಮ್ಮೆಣ್ಣು ಗುಂಡಿ ಗಿರಿಧಾಮದಲ್ಲಿ ಹೀಗೊಂದು ಸ್ಕೂಲ್ ಮಕ್ಕಳ ಪ್ರವಾಸ ಮತ್ತು ಪ್ರಕೃತಿ ಜೊತೆಯಲ್ಲಿ ಊಟ! ಇದು ನಮ್ಮ ಬಾಲ್ಯದ ಪ್ರಾಥಮಿಕ ಶಾಲಾ ಪ್ರವಾಸವನ್ನು ನೆನಪಿಸಿತ್ತು.


ನಾನು ಮತ್ತು ಮಲ್ಲಿಕಾರ್ಜುನ್ ಇಬ್ಬರನ್ನು ಈ ಛಾಯಾಗ್ರಹಣ ಕಾರ್ಯಗಾರಕ್ಕೆ ಫ್ಯಾಕಲ್ಟಿಯಾಗಿ ಕರೆದಿದ್ದರೂ ನಾವು ಅವರಿಗೆ ಏನು ಹೇಳಿಕೊಟ್ಟೆವೋ, ಅವರೇನು ಕಲಿತುಕೊಂಡರೋ ಗೊತ್ತಿಲ್ಲ. ಆದರೆ ನಮಗಂತೂ ಹೊಸ ಗೆಳೆಯರು ಸಿಕ್ಕರು. ಚಿಕ್ಕಮಗಳೂರಿನ ಮತ್ತು ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿ ಸುಂದರ ಪ್ರಕೃತಿ ಚಿತ್ರಗಳು ನಮ್ಮ ಕ್ಯಾಮೆರಾಗಳಿಗೆ ಸಿಕ್ಕವು.

ಸೂರ್ಯಾಸ್ತದ ಸಮಯದಲ್ಲಿ ಕೆಮ್ಮಣ್ಣುಗುಂಡಿಯ ಇನ್ನೊಂದು ಲ್ಯಾಂಡ್‌ಸ್ಕೇಪ್ ಚಿತ್ರ

ಗಿರಿಧಾಮದ ಸುತ್ತಮುತ್ತಲ ಕಾಡುಗಳು ಅಲ್ಲಲ್ಲಿ ಬೋಳಾಗಿದ್ದುದ್ದು ನಮ್ಮ ಕುತೂಹಲ ಕೆರಳಿಸಿತು......

ಇದ್ಯಾಕೆ ಹೀಗೆ ಅಲ್ಲಲ್ಲಿ ಹೀಗೆ ಕೇಕ್ ಕತ್ತರಿಸಿದ ಹಾಗೆ ಕಾಡು ಕಡಿದಿದ್ದಾರಲ್ಲ ಅಂತ ಮಲ್ಲಿಕಾರ್ಜುನ್ ಕೇಳಿದರು. ತಕ್ಷಣ ಮೂರ್ತಿ "ಶೋಲಾ ಕಾಡು ಧಗ ಧಗ ಧಗ ಧಗ " ಅಂದರು.

ಗಣಿಗಾರಿಕೆಯಿಂದಾಗಿ ಮೇಲ್ಬಾಗದಲ್ಲಿ ಕಾಡು ನಾಶವಾಗಿರುವ ಚಿತ್ರ.


ಗಣಿಗಾರಿಕೆಯಿಂದಾಗಿ ಒಂದಷ್ಟು ಕಾಡುಗಳು, ಮತ್ತು ಅದಕ್ಕಾಗಿ ಮಾಡುವ ರಸ್ತೆಗಳಿಗಾಗಿ ಮತ್ತಷ್ಟು ಕಾಡುಗಳು, ನಂತರ ನಡೆವ ಗಣಿಗಾರಿಕೆಯ ದೂಳಿನಿಂದಾಗಿ ಇನ್ನೂಳಿದ ಕಾಡುಗಳು ನಾಶವಾಗುತ್ತಿರುವುದರ ದುರಂತವನ್ನು ಮೂರ್ತಿ ನಮಗೆಲ್ಲ ಮನದಟ್ಟು ಮಾಡಿಕೊಟ್ಟರು.

ರಾತ್ರಿ ಘನಶ್ಯಾಮ್ ಮಲ್ಲಿಕಾರ್ಜುನ್ ಮತ್ತು ನನ್ನನ್ನು ಚಿಕ್ಕಮಗಳೂರಿನ ಜಿಲ್ಲಾ ಅರಣ್ಯಾದಿಕಾರಿಗಳಾದ ಎಸ್.ಎಸ್.ಲಿಂಗರಾಜುರವರ ಮನೆಗೆ ಹೋದಾಗ ಅವರ ಮನೆ ತುಂಬಾ ಇದ್ದ ಪುಸ್ತಕಗಳು ಅವರೊಬ್ಬ ಸಾಹಿತ್ಯ ಪ್ರೇಮಿಯೆಂದು ಗೊತ್ತಾಯಿತು. ಅಷ್ಟೇ ಅಲ್ಲದೇ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕರು ಆಗಿರುವ ಅವರು ನಮೆಗೆಲ್ಲಾ ಕೆಲವು ಅಪರೂಪದ ವನ್ಯಜೀವಿಗಳ, ಪಕ್ಷಿಗಳ, ಲ್ಯಾಂಡ್ ಸ್ಕೇಪ್ ಫೋಟೊಗಳನ್ನು ತೋರಿಸಿದರು. ಮತ್ತು ನಮ್ಮ ಚಿತ್ರಗಳನ್ನು ನೋಡಿ ಸಂತೋಷ ಪಟ್ಟರು.

ಕೊನೆಯಲ್ಲಿ " ನನ್ನನ್ನೂ ಕರೆದಿದ್ದರೆ ನಾನು ಬರುತ್ತಿದ್ದೆನಲ್ಲಾ " ಎಂದರು.

ಮರುದಿನ ವಾಪಸ್ಸು ಬರುವಾಗ "ಕಡೂರು ಎರಡು ಕೊಡಿ " ನಾನು ಬಸ್ ನಿರ್ವಾಹಕನನ್ನು ಕೇಳಿದೆ.

ಕಡೂರು ಒಂದೇ ಇರೋದು...............ಬೇಕಿದ್ರೆ ನಿಮಗೆ ಎರಡು ಬಸ್ ಟಿಕೆಟ್ ಕೊಡುತ್ತೇನೆ............

ಆತ ಹೇಳಿದಾಗ ಆತನ ಹಾಸ್ಯ ಪ್ರಜ್ಞೆಗೆ ಮನಪೂರ್ತಿ ನಕ್ಕಿದ್ದೆವು. ಮತ್ತೆ ಚಿಕ್ಕಮಗಳೂರಿನಿಂದ ಕಡೂರಿಗೆ ಅದೇ ರಸ್ತೆಯಲ್ಲೇ ಹೋಗಬೇಕಾದ್ದರಿಂದ ನಮ್ಮ ದೇಹದ ನಟ್ಟು ಬೋಲ್ಟುಗಳು ಖಂಡಿತ ಸಡಿಲಗೊಳ್ಳುತ್ತವೆ ಎಂದು ಮನವರಿಕೆಯಾಗಿ ಮಾನಸಿಕವಾಗಿ ಅದಕ್ಕೆ ಸಿದ್ದರಾದೆವು.

------------------------------------


ಈ ಮದ್ಯೆ ಈ ಕಾರ್ಯಗಾರದ ಯಶಸ್ಸಿನ ಸ್ಪೂರ್ತಿಯಿಂದಾಗಿ ಘನಶ್ಯಾಮ್, ಪ್ರವೀಣ್ ಕುಮಾರ್, ನಾನು ಮಲ್ಲಿಕಾರ್ಜುನ್ ಒಂದು "ಇ-ಕನ್ನಡ ಛಾಯಾಗ್ರಹಣ ಪತ್ರಿಕೆ" ಮಾಡಿದರೆ ಹೇಗೆ ಎಂದು ಚರ್ಚೆ ಮಾಡಿದೆವು.

ಇದು ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ದೃಶ್ಯಮಾದ್ಯಮದಲ್ಲಿ ಕಟ್ಟಿಕೊಡುವ ಪ್ರಯತ್ನ. ಚಿತ್ರಕಲೆ ಮತ್ತು ಛಾಯಾಚಿತ್ರಕಲೆಯ ನಡುವಿನ ಸಂವಾದ, ಹಿರಿಯ ಛಾಯಾಗ್ರಾಹಕರ ಅನುಭವಗಳು ಮತ್ತು ಅವರ ಅಪರೂಪದ ಚಿತ್ರಗಳು. ಛಾಯಾಗ್ರಾಹಣದ ತಂತ್ರ ಮತ್ತು ತಾಂತ್ರಿಕತೆ ಬಗ್ಗೆ ತಿಳಿವಳಿಕೆ. ಈ ಕಲೆಯಲ್ಲಿ ಹೊಸ ಹೊಸ ವಿಧಾನಗಳ ಅಳವಡಿಕೆಯ ಸಾಧ್ಯತೆ. ಇನ್ನೂ ಅನೇಕ ವಿಚಾರಗಳು ಇದರಲ್ಲಿ ಒಳಗೊಂಡಿವೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಎಲ್ಲಾ ಛಾಯಾಗ್ರಾಹಕರನ್ನು ಬೆಸೆಯುವ ಇ-ಕೊಂಡಿ.

ಇದು ಬ್ಲಾಗಿನ ರೂಪದಲ್ಲಿರದೇ ಪಕ್ಕ ನಿಯತಕಾಲಿಕದ ಹಾಗೆ ಇರುತ್ತದೆ. ಹಾಗೂ ಇದು ಅಂತರ್ಜಾಲದಲ್ಲಿ ಮಾದ್ಯಮದಲ್ಲಿ ಇರುತ್ತದೆ.

ಯಾವುದೇ ಲಾಭದ ಆಥವ ವ್ಯಾಪಾರಿ ದೃಷ್ಟಿಯಿಟ್ಟುಕೊಳ್ಳದೆ ಎಲ್ಲರಿಗೂ ಛಾಯಾಗ್ರಾಹಣ ಭಾಷೆಯನ್ನು " ಕನ್ನಡ ಇ- ಮಾದ್ಯಮದ" ಮೂಲಕ ತಲುಪಿಸುವ ಆಶಯ.

ಹದಿನೈದು ದಿನಕ್ಕೊಮ್ಮೆ ಬರುವ ಇದು ಹೇಗಿರಬೇಕು. ಓದುಗರಾಗಿ ಮತ್ತು ಛಾಯಾಗ್ರಾಹಕರಾಗಿ ನೀವು ಇದರಲ್ಲಿ ಇನ್ನೂ ಏನೇನು ಬಯಸುತ್ತೀರಿ ? ಹೇಗಿರಬೇಕೆಂದು ಬಯಸುತ್ತೀರಿ ? ಸಾಧ್ಯವಾದರೆ ಇದಕೊಂದು ಹೆಸರನ್ನು ಸೂಚಿಸಿ ! ನಿಮ್ಮ ಸಲಹೆ ಮತ್ತು ಸೂಚನೆಗಳಿಗೆ ಎದುರು ನೋಡುತ್ತಿರುತ್ತೇವೆ.

ಫೋಟೊ ಮತ್ತು ಲೇಖನ
ಶಿವು.