Tuesday, April 12, 2011

ಮುತ್ಮರ್ಡು ಹಳ್ಳಿ ಲೇಖನ-೨



           ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಮುತ್ಮರ್ಡು ಊರಿನ ಸಾಧನೆ ಇಷ್ಟಕ್ಕೆ ಮುಗಿದಿಲ್ಲ ಇನ್ನೂ ಇದೆ. ಮೊದಲ  ಭಾಗದಲ್ಲಿ ವಿವರಿಸಿದ ವಿಶಿಷ್ಟ ವ್ಯಕ್ತಿಗಳ ಜೊತೆಗೆ ಮತ್ತಷ್ಟು ಸಾಧಕರ ಪರಿಚಯವನ್ನು ಈ ಭಾರಿ ಮಾಡಲು ಪ್ರಯತ್ನಿಸುತ್ತಿದ್ದೇನೆ.

                    ವಿಜ್ಞೇಶ್ವರ ಹೆಗಡೆ ತಮ್ಮ ಕಲಾಕೃತಿಯೊಂದಿಗೆ...

ಇವರು  ೪೫  ವರ್ಷದ  ವಿಜ್ಞೇಶ್ವರ ಹೆಗಡೆ ಎನ್ನುವವರು  ದೊಡ್ಡ ದೊಡ್ಡ ನಾಟಕ ಪರಧೆಗಳ ಚಿತ್ರಗಳನ್ನು  ಬರೆಯುವುದರಲ್ಲಿ ಪರಿಣಿತರು.  ಜಾತ್ರೆಗಳಲ್ಲಿ, ಉತ್ಸವಗಳಲ್ಲಿ ನಡೆಯುವ ದೊಡ್ದ ದೊಡ್ಡ ನಾಟಕಗಳಿಗೆ  ಬಳಸುವ  ದೊಡ್ಡ ಪರದೆಗಳ[ಕ್ಯಾನ್‌ವಸ್ ಬಟ್ಟೆ]ಪೌರಾಣಿಕ  ಚಿತ್ರಗಳನ್ನು  ಬರೆಯುವ  ಅದ್ವಿತೀಯ ಕಲಾವಿದರು.

ಯುವ ಸಂಗೀತಗಾರ.ವಿನಾಯಕ ಹೆಗಡೆ

          
ಇವರ ತಮ್ಮನಾದ  ವಿನಾಯಕ ಹೆಗಡೆ ಎನ್ನುವವರು ಹಿಂದುಸ್ಥಾನಿ ಸಂಗೀತ ಕಲಾವಿದರು.  ಇವರೆಂಥ  ಪ್ರತಿಭಾವಂತರೆಂದರೇ  ಕೇಂದ್ರ ಸರ್ಕಾರದಿಂದ  ಹಿಂದುಸ್ಥಾನಿ ಕ್ಲಾಸಿಕಲ್ ಸಂಗೀತ ಕಲಿಯಲು ಪ್ರತಿತಿಂಗಳಿಗೆ ಆರುಸಾವಿರ ರೂಪಾಯಿಯಂತೆ  ಎರಡುವರ್ಷಗಳವರೆಗೆ ಸ್ಕಾಲರ್‌ಷಿಪ್ ಸಿಕ್ಕಿದೆ. ಈ  ರೀತಿಯ ಕರ್ನಾಟಕದಿಂದ ಅವಕಾಶ ಸಿಕ್ಕಿರುವ  ಇಬ್ಬರಲ್ಲಿ  ಇವರೊಬ್ಬರು  ಅಂದರೇ  ಇವರ ಸಾಧನೆ ಎಂಥದ್ದು  ಎಂದು ಊಹಿಸಬಹುದು...


ಇಷ್ಟೆಲ್ಲಾ ಹೇಳಿದ ಮೇಲೆ  ಇಲ್ಲಿನ ಹೆಣ್ಣು ಮಕ್ಕಳು ಏನು ಸಾಧಿಸಿಲ್ವಾ  ಅಂತ ನಿಮಗನ್ನಿಸಬಹುದು...ಯಾಕಿಲ್ಲ. ಈ ಊರಿನ ಮಣ್ಣಿನಲ್ಲೇ ಕಲೆಯಾ ಗುಣವಿರುವಾಗ  ಅವರನ್ನು ಬಿಟ್ಟಿರಲು ಹೇಗೆ ಸಾಧ್ಯ.?  ...ಸ್ವಾತಿಯ ತಾಯಿ ಉಷಾ ಹೆಗಡೆ, ಮತ್ತು  ಜಯಂತ್ ತಾಯಿ ಜಯಲಕ್ಷ್ಮಿ ಹೆಗಡೆ ಇಬ್ಬರೂ ಸೊಗಸಾಗಿ ಬಟ್ಟೆ ಹೊಲೆಯುತ್ತಾರೆ.  ಸುತ್ತಮುತ್ತಲ ಊರಿಗೆಲ್ಲಾ  ಮಕ್ಕಳ ಮತ್ತು  ಹೆಣ್ಣು  ಮಕ್ಕಳ ಬಟ್ಟೆ ಹೊಲಿಯುವುದರಲ್ಲಿ  ಇವರು ತುಂಬಾ ಫ಼ೇಮಸ್ಸು....!

ಜಯಲಕ್ಷ್ಮಿ ಹೆಗಡೆ


 ಉಷಾ ಹೆಗಡೆ.
             

ನಾಗೇಂದ್ರರವರ ಶ್ರೀಮತಿ  ನಾಗರತ್ನ ಹೆಗಡೆಯವರು  ಆಡಿಕೆ  ಬೀಜಗಳನ್ನು  ಸಂಗ್ರಹಿಸಿ ಕಸಿ ಮಾಡಿ  ಪ್ರತಿವರ್ಷ ಸಾವಿರಾರು  ಆಡಿಕೆ ಸಸಿಗಳನ್ನು  ಸುತ್ತಲ ಊರಿಗೆ ಮಾರುತ್ತಾರೆ.  ಜೊತೆಗೆ  ಬೆಟ್ಟದಲ್ಲಿ ಸಿಗುವ  ಅಂಟುವಾಳ, ಕೋಕಮ್, ಬೆಟ್ಟದ ಹಲಸು,  ಮಾವು,  ವಾಟೆ, ಸೀಗೆಪುಡಿಗಿಡ, ಬೆಟ್ಟದ ನೆಲ್ಲಿಕಾಯಿ, ಆಳಲೇಕಾಯಿ......ಇನ್ನೂ ಅನೇಕ ಔಷದೀಯಾ ಗಿಡಗಳು ಇವರೇ  ಮನೆಯ ಸುತ್ತ ಮಾಡಿಕೊಂಡ  ನರ್ಸರಿಯಲ್ಲಿ  ಪ್ರತಿವರ್ಷ ಸಿದ್ಧವಾಗುತ್ತವೆ.  ಮತ್ತೆ ಇದೆಲ್ಲವನ್ನು   ಮನೆಯ ಕೆಲಸ, ಮಕ್ಕಳ ಓದು, ಅವರನ್ನು  ಸ್ಕೂಲಿನ ಸಮಯದಲ್ಲಿ ಸಿದ್ಧಮಾಡಿಕಳಿಸುವುದು, ಮನೆಯ ಹಿರಿಯರೆಲ್ಲರಿಗೆ ಆಡಿಗೆ ಊಟ ತಿಂಡಿ, ಇತ್ಯಾದಿ ಮನೆಕೆಲಸಗಳನ್ನು ಮಾಡುತ್ತಾ  ಮನೆಯ ಹಿರಿಯರ ಕೃಷಿಕೆಲಸದಲ್ಲಿ ಸಹಾಯ ಮಾಡುತ್ತಾ ಇಂಥ ನರ್ಸರಿ ನಡೆಸುತ್ತಾರೆಂದರೇ ನಂಬಲಿಕ್ಕೆ ಸಾಧ್ಯವಿಲ್ಲ ಅಲ್ಲವೇ....ಹಾಗೆ  ಇವರು  ಆಡಿಕೆ ಸುಲಿಯುವುದರಲ್ಲಿ  ಪಳಗಿದ ಕೈ ಕೂಡ...

ನಾಗರತ್ನ ಹೆಗಡೆ

ನಾನು ಇದುವರೆಗೆ ಹೇಳಿದ್ದೆಲ್ಲಾ ಇದೇ ಊರಿನಲ್ಲಿ ಇದ್ದು ಸಾದನೆ ಮಾಡಿದವರ ಬಗ್ಗೆ.   ಈಗ  ಈ ಊರಿನಲ್ಲಿ  ಹುಟ್ಟಿ ಬೆಳದು  ಹೊರರಾಜ್ಯ,  ವಿದೇಶಗಳಲ್ಲಿ ನೆಲಸಿ ದೊಡ್ಡ ಸಾಧನೆ ಮಾಡಿ  ಊರಿಗೆ  ಕೀರ್ತಿ ತಂದವರ ಬಗ್ಗೆ  ಮುಂದಿನ ಭಾಗದಲ್ಲಿ ಹೇಳುತ್ತೇನೆ.

ಚಿತ್ರಗಳು: ನಾಗೇಂದ್ರ ಮತ್ಮುರ್ಡು.
ಲೇಖನ :  ಶಿವು.ಕೆ


Sunday, April 10, 2011

ಫೋಟೋ ಸುಖ...ಪ್ರಜಾವಾಣಿ ದು:ಖ

       

          ದಿನಾಂಕ ೧೦-೪-೨೦೧೧ರ ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿನ ಮುಖಪುಟದಲ್ಲಿ ನನ್ನ ಆತ್ಮೀಯ ಗೆಳೆಯ ಚಿಕ್ಕಮಗಳೂರಿನ ಪ್ರಜಾವಾಣಿ ಮುಖ್ಯ ಪ್ರತಿನಿಧಿ ಡಿ.ಎಂ.ಘನಶ್ಯಾಮ ಬರೆದ "ಫೋಟೊ ಸುಖ... ಹಕ್ಕಿ ದು:ಖ"  ಲೇಖನವನ್ನು ಓದಿದೆ. ಓದಿದ ಮೇಲೆ ಅದು ಪ್ರಜಾವಾಣಿಯ ದು:ಖವೆನಿಸಿತ್ತು.  ಪ್ರತಿಷ್ಟಿತ ಪ್ರಜಾವಾಣಿಗೆ ಇಂಥ ಲೇಖನವನ್ನು ಪ್ರಕಟಿಸುವ ಮುನ್ನ ಆ ಲೇಖನದ ಹಿಂದೆ ಎಷ್ಟರ ಮಟ್ಟಿಗಿನ ಶ್ರಮವಿದೆ ಅಂತ ಏಕೆ ನೋಡಲಿಲ್ಲ.  ಘನಶ್ಯಾಮ ನನ್ನ ಆತ್ಮೀಯ ಗೆಳೆಯ. ಆತ ಹತ್ತಾರು ಉತ್ತಮ ಲೇಖನಗಳನ್ನು ಬರೆದಿದ್ದಾರೆ. ಅವರ ಬಗ್ಗೆ ಮೆಚ್ಚುಗೆ ಮತ್ತು ಗೌರವವಿದೆ.  ಪತ್ರಿಕೆಯಲ್ಲಿ ತನ್ನ ಲೇಖನ ಬಂದು ತುಂಬ ದಿನವಾಯಿತಲ್ಲ ಎನ್ನುವ ಹಫಾಹಫಿತನದಿಂದಾಗಿ ಬರೆದ ಲೇಖನವನ್ನು ಪ್ರಜಾವಾಣಿಯ ಸಾಪ್ತಾಹಿಕ ಸಂಪಾದಕರು ಅದನ್ನು ಪರಾಮರ್ಶಿಸದೆ ಪ್ರಕಟಿಸಿದ್ದಾರೆ. ಪ್ರಕಟಿಸುವುದರ ಜೊತೆಗೆ ನೂರಾರು ವನ್ಯಜೀವಿ ಛಾಯಾಗ್ರಾಹಕರನ್ನು ಅವಮಾನಿಸಿದ್ದಾರೆ. "ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೊಗ್ರಾಫರುಗಳೇ ದೊಡ್ಡ ಅಪತ್ತು. ಫೋಟೊ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ.............ಹೀಗೆ ಬರೆದಿರುವ ಘನಶ್ಯಾಮ್  ಎಷ್ಟು ಪಕ್ಷಿ ಛಾಯಾಗ್ರಾಹಕರು ಹಕ್ಕಿಗಳ ಗೂಡುಗಳನ್ನು ಹಾಳುಮಾಡುವುದನ್ನು ಖುದ್ದಾಗಿ ನೋಡಿದ್ದಾರೆ? ಹೋಗಲಿ ಕಲೆಹಾಕಿದ ಮಾಹಿತಿಯಿಂದ ಬರೆದಿರುವ ವಿಚಾರವೆಂದು ತಿಳಿಯೋಣವೆಂದರೆ ಆ ಮಾಹಿತಿಗೂ ತಲೆಬುಡ ಸರಿಯಿಲ್ಲ.  ಏಕೆಂದರೆ ಅವರೇ ಕೊಟ್ಟ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ   "ಚಿಕ್ಕಮಗಳೂರು-ಬೇಲೂರು ರಸ್ತೆಯಲ್ಲಿರುವ ಕೋಟೆಕೆರೆಯಲ್ಲಿ ಸಾಮಾನ್ಯವಾಗಿ ಬೆಳ್ಳಕ್ಕಿ ಹಿಂಡು ಬೀಡು ಬಿಟ್ಟಿರುತ್ತದೆ. ಕೆರೆಯ ಒಂದು ಬದಿಯಲ್ಲಿ ವಿಶ್ರಮಿಸುತ್ತಿರುವ ಬೆಳ್ಳಕ್ಕಿಗಳ ಫೋಟೊ ತೆಗೆದ ಫೋಟೊಗ್ರಾಫರ್ ಒಬ್ಬರಿಗೆ ಅವು ರೆಕ್ಕೆ ಬಿಚ್ಚಿ ಹಾರುವ ಫೋಟೊಗಳು ಬೇಕು ಎನಿಸಿತ್ತು. ಆದರೆ ಅವರು ಹಿಂದುಮುಂದು ಯೋಚಿಸದೆ ಕಲ್ಲು ತೆಗೆದು ಬೀಸಿದರು. ಕಲ್ಲೊಂದು ಬೆಳ್ಳಕ್ಕಿ ಕಾಲಿಗೆ ತಾಗಿ ಗಾಯವಾಯಿತು. ಉಳಿದವು ಹಾರಿದವು. ಈ ಮಹಾನುಭಾವ ಫೋಟೊ ತೆಗೆದು ಸಂಭ್ರಮಿಸಿದ."    ಹೀಗೆ ಬರೆದಿದ್ದಾರೆ.  ಒಬ್ಬ ಪಕ್ಷಿ ಫೋಟೋ ತೆಗೆಯುವ ಛಾಯಾಗ್ರಾಹಕ ಇದೇ ಬೆಳ್ಳಕ್ಕಿಗಳ ಫೋಟೊ ತೆಗೆಯುವ ಸಮಯದಲ್ಲಿ ತನ್ನ ಬಳಿಯಿರುವ ನಾಲ್ಕರಿಂದ ಆರುಕೇಜಿ ತೂಕವಿರುವ ಕ್ಯಾಮೆರ ಮತ್ತು ಜೊತೆಗಿರುವ ದೊಡ್ದ ಲೆನ್ಸ್ ಅನ್ನು ನೆಲದ ಮೇಲಿಟ್ಟು ಒಂದು ಕಲ್ಲನ್ನೆತ್ತಿಕೊಂಡು ಪಕ್ಷಿಗಳಿಗೆ ಗುರಿಯಿಟ್ಟು ಹೊಡೆದು ಮರುಕ್ಷಣ ಅಷ್ಟು ತೂಕವಿರುವ ಕ್ಯಾಮೆರ ಮತ್ತು ಲೆನ್ಸುಗಳನ್ನೆತ್ತಿ ಯಾವುದೋ ಒಂದು ಹಕ್ಕಿಯನ್ನು ಫೋಕಸ್ ಮಾಡಿ ಫೋಟೊ ತೆಗೆಯಲು ಸಾಧ್ಯವೇ? ಬಹುಶಃ ಇಂಥ ವರದಿಗಾಗಿ ಘನಶ್ಯಾಮ್ ತನ್ನ ಗೆಳೆಯರನ್ನು ಅದೇ ಜಾಗಕ್ಕೆ ಕಳಿಸಿ ಅಲ್ಲಿ ಹಕ್ಕಿಗಳಿಗೆ ಕಲ್ಲು ಹೊಡೆಸಿ ಗಾಯಮಾಡಿ ತಮ್ಮ ಪುಟ್ಟ ಕ್ಯಾಮೆರದಲ್ಲಿ ಫೋಟೊ ಕ್ಲಿಕ್ಕಿಸುವ ಹಾಗೆ ಮಾಡಿದ್ದಾರ ಅಂತ ಸಂಶಯ ಬರುವುದು ಖಂಡಿತ.  ಒಬ್ಬ ವನ್ಯ ಜೀವಿ ಅಥವ ಪಕ್ಷಿಗಳ ಛಾಯಾಗ್ರಾಹಕರು ಮೊದಲಿಗೆ ಅವರು ಪ್ರಕೃತಿ ಪ್ರೇಮಿಗಳಾಗಿರುತ್ತಾರೆ.  ಅವರು ಮೊದಲಿಗೆ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅವುಗಳ ಸಂರಕ್ಷಣೆಗಾಗಿ ಉಳಿವಿಗಾಗಿ ಮತ್ತು ಮಾಹಿತಿಗಾಗಿ ಫೋಟೊಗ್ರಫಿ ಮಾಡುತ್ತಾರೆ.  ಒಳ್ಳೆಯ ಮತ್ತು ಅದ್ಬುತ ಫೋಟೊಗ್ರಫಿ ಮಾಡಿ ಅದು ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಮಾದ್ಯಮಗಳಲ್ಲಿ ಬಂದರೆ ಪಕ್ಷಿವೀಕ್ಷಕರಿಗೆ ಅಧ್ಯಾಯನ ಮಾಡುವವರಿಗೆ, ಅದರ ಬಗ್ಗೆ ಆಸಕ್ತಿಯಿರುವವರಿಗೆ ಆಗುವ ಉಪಯೋಗಗಳು ನೂರಾರು. ಇಂಥ ಪ್ರಯತ್ನದಿಂದಾಗಿ ಆ ಛಾಯಾಗ್ರಹಕನಿಗೆ  ಹೆಸರು ಮತ್ತು ಖ್ಯಾತಿ ಬಂದರೆ ಅದು ಛಾಯಾಗ್ರಾಹಕನಿಗೆ ಬೋನಸ್ ಮಾತ್ರ.  ಆದು ಬಿಟ್ಟು ಘನಶ್ಯಾಮ್ ಬರೆದ ಹಾಗೆ ನಡೆದುಕೊಳ್ಳುವ ವನ್ಯಜೀವಿ ಛಾಯಾಗ್ರಾಹರಿರುವುದಿಲ್ಲ. 


ಮತ್ತೊಂದು ವಿಚಾರವೇನೆಂದರೆ ನಮ್ಮ ನಾಡಿನ ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕರು ಪಕ್ಷಿಗಳ ಫೋಟೊಗ್ರಫಿ ಮಾಡಿ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿ ಮತ್ತು ಫ್ಯಾರಿಸ್ಸಿನ "ಫೆಡರೇಷನ್ ಅಪ್ ಇಂಟರ್‌ನ್ಯಾಷನಲ್ ಡಿ ಲ ಅರ್ಟ್  ಫೋಟೊಗ್ರಫಿ" ಸಂಸ್ಥೆಗಳಿಂದ ಪ್ರತಿಷ್ಟಿತ ಡಿಸ್ಟಿಂಕ್ಷನ್ ಪಡೆದಿದ್ದಾರೆ.  ಆ ರೀತಿ 2011ರವರೆಗೆ 50ಕ್ಕೂ ಹೆಚ್ಚು ಕರ್ನಾಟಕದ ಛಾಯಾಗ್ರಾಹಕರು ಮತ್ತು  200ಕ್ಕೂ ಹೆಚ್ಚು ಡಿಸ್ಟಿಂಕ್ಷನ್ ಪಡೆದ ಛಾಯಾಗ್ರಾಹಕರು ಭಾರತದಾದ್ಯಂತ ಇದ್ದಾರೆ. ಹಾಗಾದರೆ ಇವರಿಗೆಲ್ಲಾ ಡಿಸ್ಟಿಂಕ್ಷನ್ ಕೊಟ್ಟ ಆ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಬುದ್ದಿಯಿಲ್ಲವೇ?   ಇವರೆಲ್ಲಾ ಘನಷ್ಯಾಮ್ ಬರೆದಂತೆ ಫೋಟೊಗ್ರಫಿಗಾಗಿ ಹಕ್ಕಿಗಳನ್ನು ಸಾಯಿಸಿದ್ದಾರೆಯೇ?  ಒಂದುವೇಳೆ  ಸಾಯಿಸಿದ್ದಾರೆ ಅಂತಲೇ ಅಂದುಕೊಂಡರೆ ಅವರು ಕ್ಲಿಕ್ಕಿಸಿದ ಹಕ್ಕಿಗಳ ಚಿತ್ರಗಳನ್ನು ನಿಮ್ಮದೇ ಪತ್ರಿಕೆಯಲ್ಲಿ ಇದುವರೆಗೂ ಪ್ರಕಟಿಸಿದ್ದೀರಲ್ಲ ಅದು ಎಷ್ಟು ಸರಿ? 

            ಯಾವುದೋ ಇಂಟರ್‍ನೆಟ್ ಲೇಖನವನ್ನು ಓದಿ ಹೀಗೆ ಬರೆಯುವ ಡಿ.ಎಂ ಘನಶ್ಯಾಂ ಈಗ ಪತ್ರಿಕೆಯ ಮುಖ್ಯ ವರಧಿಗಾರನಾಗಿರುವುದು ಚಿಕ್ಕಮಗಳೂರಿನಲ್ಲಿ. ಘನಶ್ಯಾಂ ಅವರು ಬರೆದ ಲೇಖನ ಪ್ರಕಟವಾಗಿದ್ದು ದಿನಾಂಕ 10-4-2011ರ ಭಾನುವಾರದಂದು. ಆದ್ರೆ ಅದೇ ದಿನಾಂಕದಂದು ಪ್ರಜಾವಾಣಿಯ ನಾಲ್ಕನೆ ಪುಟದಲ್ಲಿ "ಪ್ರಜಾವಾಣಿ ಕ್ಲಿಕ್" ಕಾಲಂನಲ್ಲಿ "ತುತ್ತಾ ಮುತ್ತಾ" ಕೆಂಪಕ್ಷರದ ಹೆಡ್ಡಿಂಗಿನಲ್ಲಿ "ನಗರದ ಕಬ್ಬನ್ ಉದ್ಯಾನದಲ್ಲಿನ ಮರದ ಪೊಟರೆಯಲ್ಲಿ ಗಿಳಿಯೊಂದು ತನ್ನ ಮರಿಗೆ ಗುಟುಕು ನೀಡಿದ ದೃಶ್ಯ ಶನಿವಾರ ಕಂಡುಬಂತು."  "ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ಧನ್." ಎನ್ನುವ ಪುಟ್ಟ ಶೀರ್ಷಿಕೆಯ ಮೇಲೆ ಒಂದು ಗಿಳಿ ತನ್ನ ಮರಿಗಿಳಿಗೆ ಗುಟುಕು ನೀಡುತ್ತಿರುವ ಸುಂದರ ಚಿತ್ರವನ್ನು ಪ್ರಕಟಿಸಿಬಿಟ್ಟಿದ್ದಾರೆ. ಈ ಚಿತ್ರದಿಂದಾಗಿ ಪ್ರಜಾವಾಣಿ ಪತ್ರಿಕೆಗೂ ಅದನ್ನು ತೆಗೆದ ಛಾಯಾಗ್ರಾಹಕನಿಗೂ ಹೆಸರು ಮತ್ತು ಕೀರ್ತಿ ಅವತ್ತಿನ ಮಟ್ಟಿಗೆ ಬಂದಿರುವುದಂತೂ ನಿಜ.  ಪಾಪ ಘನಶ್ಯಾಮರಿಗೆ ಮರದ ಪೊಟರೆಯಲ್ಲಿ ಗೂಡುಮಾಡಿರುವ ಆ ಗಿಳಿಯು ತನ್ನ ಮರಿಗೆ ಗುಟುಕು ನೀಡುವುದನ್ನು ಫೋಟೊ ತೆಗೆದ ತಮ್ಮ ಪ್ರಜಾವಾಣಿಯ ಛಾಯಾಗ್ರಾಹಕ ಬಿ.ಕೆ ಜನಾರ್ಧನ್ ಫೋಟೊಗ್ರಫಿ ಮಾಡುವ ಸಲುವಾಗಿ ಆ ಗಿಳಿ ಮತ್ತು ಅದರ ಮರಿಗೆ ತೊಂದರೆ ಕೊಡುತ್ತಿದ್ದಾರೆ ಅಂತ ಏಕೆ ಅನ್ನಿಸಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ಈ ಚಿತ್ರವನ್ನು ನೋಡಿ ಅಲ್ಲೊಂದು ಗಿಳಿಗೂಡಿದೆ. ಅದರಲ್ಲೊಂದು ಮರಿಯಿದೆ. ತಾಯಿ ಗಿಳಿಯಿದೆ. ಅದರಿಂದ ನಮಗೆ ಮಾಂಸ ಸಿಗುತ್ತದೆ ಅಂತ ಹಕ್ಕಿಗಳ ಬೇಟೆಗಾರರು ಖುಷಿಪಡುವುದಿಲ್ಲವೇ... ಇಂಥ ಚಿತ್ರಗಳನ್ನು ಪ್ರಕಟಿಸಿ ಆ  ಹಕ್ಕಿಗಳ ಸಾವಿಗೆ ಪತ್ರಿಕೆ ಪರೋಕ್ಷವಾಗಿ  ಕಾರಣವಾಗುವುದಿಲ್ಲವೇ?  ಪಾಪ ಆ ಛಾಯಾಗ್ರಾಹಕರಿಗೆ ಗೊತ್ತಿರದಿದ್ದರೂ ಘನಶ್ಯಾಂ ಲೇಖನವನ್ನು ಪ್ರಕಟಿಸುವ ಪ್ರಜಾವಾಣಿ ಪತ್ರಿಕೆಗೆ ಏಕೆ ಅನ್ನಿಸಲಿಲ್ಲ. ತಮ್ಮ ಪತ್ರಿಕೆಯ ಛಾಯಾಗ್ರಾಹಕರು ಇಂಥ ಫೋಟೊಗಳನ್ನು ಕ್ಲಿಕ್ಕಿಸಿದರೆ ಅದರಿಂದ ತಮ್ಮ ಪತ್ರಿಕೆಗೆ ಮತ್ತು ಛಾಯಾಗ್ರಾಹಕನಿಗೆ ಕೀರ್ತಿ. ಇತರ ವನ್ಯ ಜೀವಿ ಛಾಯಾಗ್ರಾಹಕರು ಇಂಥ ಫೋಟೊಗಳನ್ನು ಕ್ಲಿಕ್ಕಿಸಿದರೆ ಹಕ್ಕಿಗಳಿಗೆ ದು:ಖ ಅಲ್ಲವೇ....

ತಮ್ಮ ಪತ್ರಿಕೆಯ ವರದಿಗಾರ ಈ ಲೇಖನದ ಮೂಲಕ ಎಲ್ಲಾ ವನ್ಯಜೀವಿ ಛಾಯಾಗ್ರಾಹಕರನ್ನು ಅವಮಾನಿಸಿರುವುದಲ್ಲದೇ ಇಂಥ ಆಧಾರವಿಲ್ಲದ ಲೇಖನವನ್ನು ಪ್ರಕಟಿಸಿರುವ ಪ್ರಜಾವಾಣಿಯ ಸಾಪ್ತಾಹಿಕ ಪುರವಾಣಿಯ ಸಂಪಾದಕರು ಇದಕ್ಕೆ ಉತ್ತರಿಸುವರೆ?

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

http://220.227.178.12/prajavani/web/include/story.php?news=1591&section=54&menuid=13


ಲೇಖನ: ಶಿವು.ಕೆ


Friday, April 1, 2011

ನದಿತಟದಲ್ಲಿ



ಕಾಣದ ಅವಳಿಗಾಗಿ
ದಿನಕ್ಕೊಂದು ಕವನ ಬರೆಯುತ್ತಿದ್ದೆ
ನದಿತಟದಲ್ಲಿ ಕುಳಿತು
ದೋಣಿಗಳಲ್ಲಿ ಪದಗಳನ್ನು ತೇಲಿಬಿಡುತ್ತಿದ್ದೆ

ತುಂಟ ಮೀನೊಂದು ನೀರಿಂದ
ಚಿಮ್ಮಿ ಕಣ್ಣು ಮಿಟುಕಿಸಿ ಹಾರಿಳಿದಾಗ
ತುಂತುರು ಮಳೆಯಲ್ಲಿ ಕೋಲ್ಮಿಂಚು
ಭೂರಮೆಯ ಛಾಯಾಚಿತ್ರ ಕ್ಲಿಕ್ಕಿಸಿ ಮರೆಯಾದಾಗ
ಕೊಂಬೆಯಲ್ಲಿದ್ದ ಮೈನ ಹಕ್ಕಿ
ಇನಿಯನಿಗೆ ಕಿಸಕ್ಕನೆ ಕಚಗುಳಿಯಿಟ್ಟಾಗ
ಮಕರಂದವೀರಿದ ಪತಂಗವನ್ನೇ
ನೋಡುತ್ತಾ ಹೂ ಸಂಕೋಚದಿ ನಾಚಿಕೊಂಡಾಗ

ಅವಳ ಕಾಣಲೆತ್ನಿಸಿ ಕಾಣದೇ
ಕವನ ಬರೆದು ದೋಣಿಯಾಗಿ ತೇಲಿಬಿಡುತ್ತಿದ್ದೆ.

ಅಂದು ಹಾಗಾಗಲಿಲ್ಲ
ಮೈನ ಜೋಡಿಯಿಲ್ಲ, ಮಿಂಚೊಳೆಯಲಿಲ್ಲ,
ಪತಂಗ ಬರಲಿಲ್ಲ, ಮೀನು ಚಿಮ್ಮಲಿಲ್ಲ
ಪ್ರಕೃತಿಗೆ ಪ್ರತಿರೂಪವಾಗಿ ಎದುರಲ್ಲಿ
ಅವಳಲ್ಲಿ  ಎಲ್ಲಾ ಅಡಗಿರುವಾಗ ಪ್ರಕೃತಿಗೆಲ್ಲಿ ಬೆಲೆ
ಕ್ರಿಯಾಕರ್ಮಕ್ಕೆಲ್ಲಿ ನೆಲೆ?

ಲೇಖನಿ ತುಂಬಿದ್ದರೂ ದಂಡಿ ಪದಗುಚ್ಛಗಳು ಮನದಲ್ಲಿದ್ದರೂ
ದೋಣಿ ಇರಲಿ ಕವನ ಕಾಗದದ
ಮೇಲೆ ಇಳಿದು ತೇಲುತ್ತಿಲ್ಲ

ನಿಸರ್ಗ ನಿದ್ರಿಸುತ್ತಿತ್ತೆ? ನಾನದರಲ್ಲಿ ಸೇರಿದ್ದೆನೇ?
ಒಂದೇ ದಿನ ಅವಳು ಮಾಯ
 ಪ್ರಕೃತಿಗೆ ಸ್ಪರ್ಧಿಯೆಲ್ಲಿ, ನನ್ನ ಕವನಕ್ಕೆ ಕೊನೆ ಎಲ್ಲಿ

ಎಂದಿನಂತೆ ಕಾಣದ ನನ್ನವಳಿಗಾಗಿ
ದಿನಕ್ಕೊಂದು ಕವನ ಬರೆಯುತ್ತಿದ್ದೆ
ನದಿತಟದಲ್ಲಿ ಕುಳಿತು
ದೋಣಿಗಳನ್ನು ಪದಗಳನ್ನು ತೇಲಿಬಿಡುತ್ತಿದ್ದೆ.


       ಇದು ಈಗ ಬರೆದ ಕವನವಲ್ಲ.  2001 ನೇ ಜುಲೈ ತಿಂಗಳಲ್ಲಿ ಬರೆದಿದ್ದು.  ನಂತರ ಆಗ ಹೊಸ ದಿಗಂತ ಮಾಸಪತ್ರಿಕೆಯಲ್ಲಿ ದಿನಾಂಕ 22-12-2001 ರಲ್ಲಿ ಪ್ರಕಟವೂ ಆಗಿತ್ತು.   ಆಂಗ್ಲ ಕವಿಯೊಬ್ಬ ಹೇಳಿದಂತೆ ನಾವು ಬರೆದಿದ್ದನ್ನು ಒಂಬತ್ತು ವರ್ಷ ಎಲ್ಲೂ ಪ್ರಕಟಿಸದೆ...ಒಂಬತ್ತನೇ ವರ್ಷದ ನಂತರ ಮತ್ತೊಮ್ಮೆ ನಾವೇ ಓದಿದಾಗ ಅದು ನಿಜಕ್ಕೂ ಇಷ್ಟವಾದರೇ ನಂತರ ಅದು ಇಡೀ ಪ್ರಪಂಚಕ್ಕೆ ಇಷ್ಟವಾಗುತ್ತದಂತೆ...ಈ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ...ಒಂಬತ್ತು ವರ್ಷದ ಹಿಂದೆ ಬರೆದ ನನ್ನ ಕವಿತೆಗಳನ್ನು ಈಗ ಓದುತ್ತಿದ್ದೇನೆ. ಅವು ಯಾಕೋ ಇಷ್ಟವಾಗುತ್ತಿವೆ ಅದರಲ್ಲಿ ಇದು ಮೊದಲನೆಯದು. ಆಗ ಪ್ರಕಟವಾಗಿದ್ದರೂ ಈಗ ಮತ್ತೊಮ್ಮೆ ಓದಿದಾಗ ಒಂಥರ ಇಷ್ಟವಾಯಿತು. ಆಗ ಹುಡುಗಾಟದ ಮನಸ್ಥಿತಿಯಲ್ಲಿ ಬರೆದಿದ್ದರೂ ನಿಮಗೂ ಇಷ್ಟವಾಗಬಹುದು  ಅಂತ ಬ್ಲಾಗಿಗೆ ಹಾಕಿದ್ದೇನೆ.

 ಚಿತ್ರ ಮತ್ತು ಕವನ: ಶಿವು.ಕೆ