ಜೂನ್ ಹದಿನೆಂಟನೇ ತಾರೀಖು ಯಾವ ಗಳಿಗೆಯಲ್ಲಿ ನನ್ನ ಕಿರುಚಿತ್ರದ ಚಿತ್ರೀಕರಣ ಪ್ರಾರಂಭಿಸಿದೆನೋ...ಅದರಿಂದ ಏನೇನ್ ಆಗೋಯ್ತು..ಗೊತ್ತಾ? ಅನುಕೂಲ ಮತ್ತು ಅನಾನುಕೂಲಗಳೆರಡೂ ಆಗಿಬಿಟ್ಟಿವೆ
ಮೊದಲಿಗೆ ಅದರಿಂದಾದ ಅನುಕೂಲಗಳನ್ನು ಹೇಳಿಬಿಡುತ್ತೇನೆ.
ಕಿರುಚಿತ್ರದ ವಿಚಾರ ಸೆಪ್ಟಂಬರ್ ನಾಲ್ಕರ ವೆಂಡರ್ಸ್ ಡೇ ದಿನ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾಯ್ತಲ್ಲ, ಕನ್ನಡಪ್ರಭದಲ್ಲಿ ಪೋನ್ ನಂಬರ್ ಹಾಕಿಬಿಟ್ಟಿದ್ದರಿಂದ ಅವತ್ತು ನೂರಾರು ಫೋನ್ ಕರೆಗಳಲ್ಲಿ. ಅಭಿನಂದನೆಗಳ ಮಹಾಪೂರವೇ ಆಗಿಹೋಯ್ತು. ಕರ್ನಾಟಕದಾದ್ಯಂತ ಇರುವ ದಿನಪತ್ರಿಕೆ ವೆಂಡರುಗಳು ಫೋನ್ ಮಾಡಿ ಅಭಿನಂದಿಸಿದರು. ಮತ್ತೆ ಇದೇ ರೀತಿ ಕರ್ನಾಟಕದಾದ್ಯಂತ ಅದೆಷ್ಟೋ ಛಾಯಾಸಕ್ತರು ಈ ಸಿನಿಮಾ ಬಗ್ಗೆ ಫೋನ್ ಮಾಡಿ ವಿಚಾರಿಸಿದರು. ಕೆಲವು ನಾವು ಇಂಥ ಕಿರುಚಿತ್ರ ತೆಗೆಯಬೇಕು ನಮ್ಮಲ್ಲಿ ಕತೆ ಸಿದ್ದವಾಗಿದೆ, ನೀವು ತಯಾರು ಮಾಡಿದ ರೀತಿ ವಿವರಿಸಿ ಅಂತ ಕೇಳಿದರೆ ಇನ್ನೂ ಕೆಲವರು ನಾವು ಡಾಕ್ಯುಮೆಂಟರಿ ಮಾಡಬೇಕಿದೆ, ಬಂಡವಾಳ ನಾವೇ ಹಾಕುತ್ತೇವೆ, ನೀವು ಪೂರ್ತಿ ಜವಾಬ್ದಾರಿ ತೆಗೆದುಕೊಂಡು ನಮಗೆ ಹೊಸ ಕಿರುಚಿತ್ರ, ಡಾಕ್ಯುಮೆಂಟರಿ ಮಾಡಿಕೊಡಿ ಕೇಳಿದವರು ಅನೇಕರು. ಮತ್ತೆ ಬಳಸಿದ ಕ್ಯಾಮೆರ ಇತ್ಯಾದಿಗಳ ಬಗ್ಗೆ ತಿಳಿದುಕೊಂಡರು. ಬಹುಶಃ ನನಗೆ ಬಂದ ಮಾಹಿತಿ ಪ್ರಕಾರ ಸುಮಾರು ಇಪ್ಪತ್ತಕ್ಕೂ ಹೆಚ್ಚು Canon 550D ಕ್ಯಾಮೆರಗಳು ಮಾರಾಟವಾಗಿವೆ ಎಂದು ತಿಳಿದುಬಂತು. ಇದನ್ನು ತಿಳಿದ ಬೆಂಗಳೂರಿನಲ್ಲಿರುವ ಬ್ರಿಗೇಡ್ ರಸ್ತೆಯಲ್ಲಿರುವ ಕ್ಯಾನನ್ ಕ್ಯಾಮೆರ ಕಛೇರಿಯವರು ಈ ಸಿನಿಮಾ ನೋಡುವ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಮತ್ತಷ್ಟು ಗೆಳೆಯರು ಈ ಕ್ಯಾಮೆರ ಬಗ್ಗೆ, ಬೆಲೆಯ ಬಗ್ಗೆ, ಮಾರುಕಟ್ಟೆಯಲ್ಲಿ ದೊರೆಯುವ ಬಗ್ಗೆ ನನಗೆ ಫೋನ್ ಕರೆ ಮಾಡುತ್ತಿದ್ದಾರೆ.
ಈ ಚಿತ್ರದ ಸ್ಫೂರ್ತಿಯಿಂದ ದಾವಣೆಗೆರೆಯಲ್ಲಿ ಒಂದು ತಂಡ ಕಿರುಚಿತ್ರದ ಚಿತ್ರೀಕರಣದಲ್ಲ್ಲಿ ಮಗ್ನವಾಗಿದೆ. ಮುಂಡರಗಿ ಗೆಳೆಯ ಸಲೀಂ ಕಡೆಯ ಗೆಳೆಯರು ಕತೆಯನ್ನು ಸಿದ್ದಮಾಡಿಕೊಂಡು ಕಿರುಚಿತ್ರ ಮಾಡಲು ಸಿದ್ದರಾಗುತ್ತಿದ್ದಾರೆ. ಹೀಗೆ ಹತ್ತಾರು ಕಿರುಚಿತ್ರದ ತಯಾರಿಗಳು ನಡೆದಿವೆ. ನವೆಂಬರ್ ಅಥವ ಡಿಸೆಂಬರ್‍ನಲ್ಲಿ ನಮ್ಮ ಮಣಿಕಾಂತ್ ಚಿತ್ರವನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿದ್ದಾರೆ.
ಹೊಸಪೇಟೆಯ ಆಕಾಶವಾಣಿ ರೇಡಿಯೋ ಕೇಂದ್ರವೂ ನನಗೆ ಫೋನ್ ಮಾಡಿ ಭಾನುವಾರ ಬೆಳಿಗ್ಗೆ ಬರುವ "ಉಪಹಾರ್" ಎನ್ನುವ ಕಾರ್ಯಕ್ರಮಕ್ಕಾಗಿ ಬೆಳಗಾಯ್ತು.... ಕಿರುಚಿತ್ರ ಮತ್ತು ನನ್ನ ವೃತ್ತಿಬದುಕಿನ ಬಗ್ಗೆ ೪೫ ನಿಮಿಷಗಳ ಕಾರ್ಯಕ್ರಮ ಮತ್ತು ಸಂದರ್ಶನವನ್ನು ದೂರವಾಣಿ ಮೂಲಕವೇ ನಡೆಸಿತ್ತು. ಅದು ಪ್ರಸಾರವಾದ ದಿನಾಂಕ ಸೆಪ್ಟಂಬರ್ ಹದಿನೆಂಟರ್ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆ.
ಪತ್ರಿಕೆಯಲ್ಲಿ ಈ ವಿಚಾರವನ್ನು ಓದಿದ ಆಕಾಶವಾಣಿ ರೈನ್‍ಬೌ ಎಫ್ ಎಂ ರೇಡಿಯೋ ವಾಹಿನಿಯವರು ನನ್ನನ್ನು ಕರೆದು ಪ್ರಖ್ಯಾತ "ಕಾಕಂಬಿ" ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಅದರಿಂದಾಗ ಪರಿಣಾಮ ಮಾತ್ರ ಅಪಾರವಾದದು. ಅವತ್ತು ಬೆಳಿಗ್ಗೆ ೯ ಗಂಟೆಯಿಂದ ಅಭಿನಂದನೆ ಕರೆಗಳು ಪ್ರಾರಂಭವಾಗಿ ಪೂರ್ತಿ ದಿನ ಫೋನಿನಲ್ಲಿ ಮುಳುಗುವಂತಾಗಿತ್ತು. ನಂತರದ ಎರಡು-ಮೂರು ದಿನಗಳು ಈ ವಿಚಾರವಾಗಿ ಕರೆಗಳು ಬರುತ್ತಲೇ ಇದ್ದವು. ಫೋನ್ ಮಾಡಿದ ಎಲ್ಲರೂ "ವೆಂಡರ್ ಕಣ್ಣು" ಪುಸ್ತಕವನ್ನು ಕೇಳುವವರೇ ಆಗಿದ್ದರು. ಪುಸ್ತಕವನ್ನು ಕೊಡೋಣವೆಂದರೆ ನನ್ನ ಬಳಿ ಒಂದೂ ಪುಸ್ತಕವಿರಲಿಲ್ಲ. ಎಲ್ಲಾ ಖಾಲಿಯಾಗಿಬಿಟ್ಟಿತ್ತು. ನಮ್ಮ ಪ್ರಕಾಶಕರನ್ನು ಕೇಳಿದರೆ ಅವರ ಬಳಿಯೂ ಖಾಲಿ. ಮತ್ತೆ ಯಾವ ಪುಸ್ತಕದ ಅಂಗಡಿಯಲ್ಲಿಯೂ ಇರಲಿಲ್ಲ. ಮೂರು ದಿನ ನನಗೆ ಬಂದ ಫೋನ್ ಕರೆಗಳನ್ನೆಲ್ಲಾ ಕಂಫ್ಯೂಟರಿನಲ್ಲಿ ಬರೆದು ಕೆಲ ಹಾಕಿದ್ದೆ. ಸುಮಾರು ಇನ್ನೂರು ವೆಂಡರ್ ಕಣ್ಣು ಪುಸ್ತಕಕ್ಕೆ ಬೇಡಿಕೆ ಬಂತಲ್ಲ! ಮರು ಯೋಚಿಸದೇ ನಾನೇ ಮೂರನೇ ಮರುಮುದ್ರಣಕ್ಕೆ ಸಿದ್ಧನಾಗಿಬಿಟ್ಟೆ. ಈ ಮೊದಲು ಮುದ್ರಣವಾದ ಪುಸ್ತಕಗಳಲ್ಲಿ ತುಂಬಾ ಅಕ್ಷರಗಳ ತಪ್ಪುಗಳಿದ್ದರಿಂದ ಮತ್ತೊಮ್ಮೆ ತಿದ್ದುಪಡಿಗಾಗಿ ಹಿರಿಯ ಆತ್ಮೀಯ ಗೆಳೆಯರಾದ ಸುನಾಥ್ ಸರ್ ಅವರನ್ನು ಕೇಳಿಕೊಂಡಾಗ ಅವರು ಪ್ರೀತಿಯಿಂದ ಮಾಡಿಕೊಟ್ಟರು. ಮೂರು ಹೊಸ ಲೇಖನಗಳು ಸೇರಿದಂತೆ ಈಗ ಪುಸ್ತಕದ ಗಾತ್ರ ದೊಡ್ಡದಾಯಿತು. ಇಷ್ಟೆಲ್ಲಾ ಬದಲಾವಣೆಯಾದ ಮೇಲೆ ಮುಖಪುಟವನ್ನು ಬದಲಾಯಿಸಬೇಕು ಅನ್ನಿಸಿತು. ಅದಕ್ಕಾಗಿ ಹೊಸ ಫೋಟೊ ತೆಗೆದು ಮುಖಪುಟವನ್ನು ಬದಲಾಯಿಸಿದೆ. ಕಳೆದ ಒಂದು ವಾರದಿಂದ ಆಗುತ್ತಿರುವ ವಿದ್ಯುತ್ ಕಣ್ಣು ಮುಚ್ಚಾಲೆಯ ನಡುವೆಯೇ ಮತ್ತೊಬ್ಬ ಆತ್ಮೀಯ ಗೆಳೆಯರಾದ ಡಾ.ಸತ್ಯನಾರಾಯಣರವರು ಖುಷಿಯಿಂದ ಪುಟವಿನ್ಯಾಸವನ್ನು ಮಾಡಿಕೊಟ್ಟರು. ನಿನ್ನೆ ಮದ್ಯಾಹ್ನದ ಹೊತ್ತಿಗೆ ಪುಸ್ತಕದ ಕೆಲಸ ಮುಗಿಸಿ ಪ್ರಿಂಟಿಗೆ ಕೊಟ್ಟು, ಸಂಜೆ ಈಟಿವಿಯವರ ರವಿ ಬೆಳಗೆರೆಯವರು ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೊಗ್ರಫಿ ಅಸೈನ್ ಮೆಂಟಿಗೆ ಹೋಗಿದ್ದೆ. ದಸರ ಮುಗಿಯುವ ಹೊತ್ತಿಗೆ ಹೊಸ ಮುಖಪುಟ ವಿನ್ಯಾಸದ "ವೆಂಡರ್ ಕಣ್ಣು" ಪುಸ್ತಕದ ಪ್ರತಿಗಳು ಮನೆಗೆ ತಲುಪಿರುತ್ತವೆ.
ವೆಂಡರ್ ಕಣ್ಣು ಮೂರನೆ ಮರುಮುದ್ರಣದ ಹೊಸ ಮುಖಪುಟ
ಮತ್ತೆ ಇಷ್ಟೆಲ್ಲಾ ಹೇಳಿಯೂ ನೀವು ಕಿರುಚಿತ್ರವನ್ನು ನೋಡಲು ಅದನ್ನು ಫೇಸ್‍ಬುಕ್, ಯು ಟ್ಯೂಬ್‍ನಲ್ಲಿ ನನಗೆ ಹಾಕಲಾಗಿಲ್ಲ. ಕಾರಣ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವ ನಿಯಮಗಳ ಪ್ರಕಾರ ಅದು ಪ್ರದರ್ಶನವಾಗುವವರೆಗೆ ಎಲ್ಲಿಯೂ ಹಾಕುವಂತಿಲ್ಲವಾದ್ದರಿಂದ ಕೇವಲ ಒಂದು ನಿಮಿಷದ ಪೊಮೋ ಮಾತ್ರ ಹಾಕಿದ್ದೇನೆ. ಇದನ್ನು ಬೆಂಗಳೂರು, ನ್ಯೂಯಾರ್ಕ್, ಪ್ಯಾರಿಸ್, ಫಿಲಿಡೆಲ್ಫಿಯ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವಗಳಿಗೆ ಬೆಳಗಾಯ್ತು ಕಿರುಚಿತ್ರವನ್ನು ಕಳಿಸಿದ್ದೇನೆ.
ಇದೆಲ್ಲದರ ನಡುವೆ ನನ್ನ ಫೋಟೊಗ್ರಫಿಯ ವೆಬ್‍ಸೈಟ್ ಸಿದ್ದವಾಗುತ್ತಿದೆ. ಅದನ್ನು ಬ್ಲಾಗ್ ಗೆಳೆಯರೊಬ್ಬರು ಪ್ರೀತಿಯಿಂದ ಮಾಡಿಕೊಡುತ್ತಿದ್ದಾರೆ. ಇದೆಲ್ಲಾ ಕಿರುಚಿತ್ರದ ಪರಿಣಾಮದಿಂದಾದ ಅನುಕೂಲಗಳು. ಆದ್ರೆ ಅನಾನುಕೂಲಗಳು ಆಗಿವೇ ಆದ್ರೆ ನೀವು ನಂಬಲೇಬೇಕು. ಏನೇನು ಅನಾನುಕೂಲಗಳಾದವು ಅನ್ನುವುದನ್ನು ವಿವರಿಸಿಬಿಡುತ್ತೇನೆ.
ಈ ಕಿರುಚಿತ್ರದ ತಯಾರಿಕೆಗೆ ಸಿದ್ದನಾದೆನಲ್ಲ....ಒಂದು ಫೋಟೊ ತೆಗೆಯಬೇಕೆಂದರೆ ಅದೆಷ್ಟೋ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವಲ್ವಾ, ಅಂತದ್ದರಲ್ಲಿ ಈ ಕಿರುಚಿತ್ರದ ದೃಶ್ಯವಳಿಗಳನ್ನು ಚಿತ್ರಿಸಲು ಚಿತ್ರಕತೆ ಬೇಕಲ್ಲ, ನನ್ನ ಮನಸ್ಸಿನ ಕಲ್ಪನೆಯ ಚಿತ್ರಕತೆಯನ್ನು ಬರೆಯಲಾರಂಭಿಸಿದೆ. ಸುಮಾರು ಮುನ್ನೂರಕ್ಕೂ ಹೆಚ್ಚು ದೃಶ್ಯಗಳನ್ನು ಬರೆಯಬೇಕಿತ್ತು. ನೂರಕ್ಕೂ ಹೆಚ್ಚು ಪುಟಗಳಿದ್ದ ಇದನ್ನು ಬರೆದು ಮುಗಿಸಲು ಹತ್ತು ದಿನಗಳು ಬೇಕಾಯ್ತು. ಅಲ್ಲಿಗೆ ನನ್ನ ಎಲ್ಲಾ ಫೋಟೊಗ್ರಫಿ, ಬ್ಲಾಗ್, ಬಜ್, ಇತ್ಯಾದಿಗಳು ಬಂದ್. ಮತ್ತೆ ಅದನ್ನು ಚಿತ್ರೀಕರಿಸಿದ ಹತ್ತು ದಿನಗಳು, ಅದರ ಸಂಕಲನ, ಸಂಗೀತ, ಇತ್ಯಾದಿಗಳಿಂದಾಗಿ ಎರಡು ತಿಂಗಳೇ ಕಳೆದುಬಿಟ್ಟವು. ಹದಿನೆಂಟು ನಿಮಿಷದ ಕಿರುಚಿತ್ರಕ್ಕೆ ಎರಡು ತಿಂಗಳುಗಳು ಬೇಕಾ ಅನ್ನಿಸಬಹುದು ನಿಮಗೆ. ಈ ವಿಚಾರದಲ್ಲಿ ನಾನು ಪಕ್ಕಾ ವೃತ್ತಿಪರನಲ್ಲ. ನನ್ನ ವೃತ್ತಿಯೇ ಬೇರೆ ಇದು ಪ್ರವೃತ್ತಿ ಮಾತ್ರ ತಾನೆ. ಆ ಕಾರಣಕ್ಕೆ ನನ್ನ ವೃತ್ತಿಯ ನಡುವೆ ಬಿಡುವು ಮತ್ತು ನನಗೆ ಕೆಲಸ ಮಾಡಿಕೊಡುವವರ ಬಿಡುವು ನೋಡಿಕೊಂಡು ಅವರಿಂದ ಕೆಲಸ ತೆಗೆಸಬೇಕಿತ್ತಲ್ಲ ಅದಕ್ಕಾಗಿ ಚಿತ್ರ ಇಷ್ಟು ದಿನವಾಯ್ತು. ಪೂರ್ತಿ ಸಿದ್ದವಾಗುವವರೆಗೆ ನಾನು ಈ ಚಿತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗದ್ದರಿಂದ ನಮ್ಮ ಬ್ಲಾಗ್ ಬಜ್, ಬರೆಯುವುದಿರಲಿ, ಬೇರೆಯವರ ಬ್ಲಾಗುಗಳನ್ನು ಓದುವುದಕ್ಕೂ ಆಗಿರಲಿಲ್ಲ. ಈಗ ಅದೆಲ್ಲ ಗುಂಗಿನಿಂದ ಹೊರಬಂದಿದ್ದೇನೆ[ಹಾಗೆ ಅಂದುಕೊಂಡಿದ್ದೇನೆ]. ಮಾಡುವ ಕೆಲಸ ಬೇಕಾದಷ್ಟಿದೆ ಅನ್ನಿಸುತ್ತಿದೆ. ಮೊದಲಿಗೆ ಬ್ಲಾಗ್ ಲೋಕದೊಳಗೆ ಇಳಿಯಬೇಕು. ಗೆಳೆಯರ ಲೇಖನಗಳನ್ನು ಓದಬೇಕು. ಅದರಿಂದ ಸ್ಪೂರ್ತಿ ಪಡೆದು ಮತ್ತೆ ಬರೆಯಲು ಪ್ರಾರಂಭಿಸಬೇಕು. ಕಿರುಚಿತ್ರಕ್ಕೆ ಮೊದಲು ಐದಾರು ವಿಚಾರಗಳಿಗಾಗಿ ಲೇಖನಗಳನ್ನು ಪ್ರಾರಂಭಿಸಿದ್ದೆ. ಎಲ್ಲವೂ ಒಂದೊಂದು ಪ್ಯಾರ ಬರೆಸಿಕೊಂಡು ನಿಂತುಬಿಟ್ಟಿವೆ. ಅವೆಲ್ಲಾ ಈಗ ಔಟ್ ಡೇಟೆಡ್ ಆಗಿಬಿಟ್ಟಿದೆಯಾ? ಈಗಿನ ಪ್ರಸ್ತುತಕ್ಕೆ ತಕ್ಕಂತೆ ಬರೆಯಬಹುದಾ ನೋಡಬೇಕು. ಎರಡು ಸಿನಿಮಾಗಳ ಅವಲೋಕನ ಅರ್ಧದಷ್ಟಾಗಿದೆ. ಮತ್ತೊಮ್ಮೆ ಆ ಸಿನಿಮಗಳನ್ನು ನೋಡಬೇಕು. ಅದೆಲ್ಲಕ್ಕಿಂತ ನನ್ನ ಎರಡು ಫೋಟೊಗ್ರಫಿ ಪುಸ್ತಕಗಳಿಗಾಗಿ ಬರೆಯುತ್ತಿದ್ದ ಬರವಣಿಗೆ ನಿಂತು ಹೋಗಿದೆ. ಇದು ಅದೆಲ್ಲಕ್ಕಿಂತ ಮುಖ್ಯವಾದ್ದರಿಂದ ಅದನ್ನು ಶುರುಮಾಡಬೇಕು......
ಮತ್ತೆ ಈ ಮೂರು ತಿಂಗಳಿನಲ್ಲಿ ನನಗಿಷ್ಟವಾದ ಫಿಕ್ಟೋರಿಯಲ್, ಮ್ಯಾಕ್ರೋ...ಇತ್ಯಾದಿ ಫೋಟೊಗ್ರಫಿಯನ್ನು ಮಾಡಲಾಗಿಲ್ಲ. ಆದ್ರೆ ಸಾಲು ಸಾಲು ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಗಳು ಬರುತ್ತಿವೆ. ಫೋಟೊಗ್ರಫಿ ಗೆಳೆಯರೆಲ್ಲಾ ಕರೆದರೂ ಹೋಗಲಾಗಿರಲಿಲ್ಲ.
ಈ ಕಿರುಚಿತ್ರ ನನ್ನ ಇಷ್ಟೆಲ್ಲ ಬರೆವಣಿಗೆಯನ್ನು, ಫೋಟೊಗ್ರಫಿಯನ್ನು ನುಂಗಿ ನೀರು ಕುಡಿದಿದೆಯಲ್ಲಾ! ಇದೆಲ್ಲಾ ಅನಾನುಕೂಲಗಳೇ ತಾನೇ...
ಸದ್ಯ ಆ ಗುಂಗಿನಿಂದ ಹೊರಬಂದಿದ್ದೇನೆ. ಬರವಣಿಗೆಯನ್ನು ಎಲ್ಲಿಂದ ಪ್ರಾರಂಭಿಸಲಿ, ಬ್ಲಾಗ್ ಲೇಖನವನ್ನು ಬರೆಯಲಾ?, ಪುಸ್ತಕಗಳಿಗಾಗಿ ಫೋಟೊಗ್ರಫಿ ಲೇಖನವನ್ನು ಪ್ರಾರಂಭಿಸಲಾ? ಸ್ಪೂರ್ತಿಯನ್ನು ಎಲ್ಲಿಂದ ಪಡೆಯಲಿ? ಅಥವ ಹೊರಗೆ ಲೈಟಿಂಗ್ ತುಂಬಾ ಚೆನ್ನಾಗಿದೆ ಅಂತ ಒತ್ತಾಯ ಮಾಡುತ್ತಿರುವ ಫೋಟೊಗ್ರಫಿ ಗೆಳೆಯರೊಂದಿಗೆ ಓಡಿಹೋಗಲಾ?
ಯೋಚಿಸುತ್ತಿದ್ದೇನೆ........
ಹೊಸಪೇಟೆಯ ಆಕಾಶವಾಣಿ ಕೇಂದ್ರವೂ ನನ್ನ " ಬೆಳಗಾಯ್ತು....ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ" ಕಿರುಚಿತ್ರಕ್ಕಾಗಿ ದೂರವಾಣಿಯ ಮೂಲಕ ಸಂದರ್ಶಿಸಿದ "ಉಪಹಾರ್ ಕಾರ್ಯಕ್ರಮ. ಇದು ಪ್ರಸಾರವಾಗಿದ್ದು ಸೆಪ್ಟಂಬರ್ 18ರಂದು.
ಸಂದರ್ಶನವನ್ನು ಪೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ..
http://soundcloud.com/shivuk/track
ಬೆಂಗಳೂರಿನ ಆಕಾಶವಾಣಿಯ FM Rainbow ರೇಡಿಯೋ ವಾಹಿನಿಯವರು ನಡೆಸಿಕೊಡುವ ಜನಪ್ರಿಯ "ಕಾಕಂಬಿ" ಕಾರ್ಯಕ್ರಮದಲ್ಲಿ ನನ್ನನ್ನು ಸಂದರ್ಶಿಸಿದರು. ಸೆಪ್ಟಂಬರ್ 14 ರ ಬುದವಾರ ಪ್ರಸಾರವಾದ ಈ ಕಾರ್ಯಕ್ರಮವನ್ನು ಫೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ...
http://soundcloud.com/omshivaprakash/shivu-k-in-fm-radio
ಚಿತ್ರಗಳು ಮತ್ತು ಲೇಖನ
ಶಿವು.ಕೆ
36 comments:
ಶಿವು ಸರ್..
ಅನುಕೂಲತೆ ಹೆಚ್ಹಾದರೆ ಕೆಲವೊಮ್ಮೆ ಅದೇ ಅನಾನುಕೂಲತೆಯಾಗಿ ಕಾಡಬಹುದು.. ಎನ್ನುವುದು ಈಗ ಗೊತ್ತಾಯಿತು.. !! ತು೦ಬಾ ಸ೦ತಸವಾಯಿತು ನಿಮ್ಮ ಸಾಹಸಗಾಥೆಯನ್ನು ಓದಿ.. ಮತ್ತಷ್ಟು ಈ ರೀತಿಯ ಅವಕಾಶಗಳು ಸಿಗಲಿ.. ಎ೦ಬುದು ಹಾರೈಕೆ.
ಧನ್ಯವಾದಗಳು.
ಶಿವಣ್ಣ,
ತುಂಬಾ ಸಂತೋಷದ ಸಂಗತಿ!
ನೀವು ಇಷ್ಟೆಲ್ಲಾ ಬ್ಯುಸಿ ಆಗಿರುವುದು ನಮಗೆಲ್ಲಾ ಸಂತೋಷವೇ.............
ಇನ್ನಷ್ಟು ಪ್ರಶಸ್ತಿ ಬಿರುದುಗಳು ನಿಮ್ಮತ್ತ ಹರಿದು ಬರಲಿ.........
All the best sir,
God Bless You
ಶಿವು,
ನೀವು ಲೇಖಕ, ಚಿತ್ರನಿರ್ಮಾಪಕ, blogger ಏನೆಲ್ಲ ಆಗುತ್ತ
ಉತ್ತರೋತ್ತರ ಸಾಧನೆ ಮಾಡುತ್ತಿದ್ದೀರಿ. ನಿಮಗೆ ಶುಭಾಶಯಗಳು.
ಶಿವು,
ನಿಮ್ಮ ಬ್ಲಾಗನ್ನು ತುಂಬ ಹಿಂದಿನಿಂದ ಓದುತ್ತ ಬಂದಿದ್ದೇನೆ. ನೀವು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ವೇಗವನ್ನು ರೀತಿಯನ್ನು ಓದುತ್ತ ತುಂಬ ಹೆಮ್ಮೆ ಅನಿಸುತ್ತದೆ. ನಿಮ್ಮನ್ನು ಒಮ್ಮೆಯೂ ನೋಡಿಲ್ಲ, ಮಾತಾಡಿಸಿಲ್ಲ, ಆದರೂ ನಿಮ್ಮ ಒಂದೊಂದು ಸಾಧನೆಯ ಬಗ್ಗೆ ಓದಿದಾದಲೂ ತುಂಬಾ ಖುಷಿಯಾಗುತ್ತೆ.
ಕೇಶವ್,ಸುನಾಥ್ ಅವರ ಮಾತುಗಳನ್ನೇ ಹೇಳಲು ಇಚ್ಚಿಸುತ್ತೇನೆ,ಅಭಿನಂದನೆಗಳು.
ಬಹಳ ಸಂತಸದ ವಿಷಯ ನಿಮ್ಮ ಬೆಳವಣಿಗೆ ನಮ್ಮೆಲರಿಗೂ ಸಂತಸ ನೀಡಿದೆ ಶುಭವಾಗಲಿ
ಶಿವೂ,,,
ನಿಮ್ಮ ಬಗ್ಗೆ ನಿಜವಾಗ್ಲೂ ಹೆಮ್ಮೆ ಅನಿಸ್ತ ಇದೆ..... ಇನ್ನೇನು ಹೇಳಲಾರೆ... All the Best. ಇನ್ನು ಎತ್ತರಕ್ಕೆ ಬೆಳೆಯಿರಿ... ಇದೆ ನಮ್ಮ ಆಶಯ......
ಗುರು
ಫುಲ್ ಡಿಮಾಂಡ್ ಶಿವು.. ಈಗ..!
ಆಗಲಿ.. ಆಗಲಿ.. ಎಲ್ಲಾ ಒಳ್ಳೆಯದೇ ಆಗಲಿ..!
ತುಂಬಾ ಸಂತೋಷ..!
All the best Shivu sir:):)
innasht anaanukula (anukula...avakaasha) hecchaagali sir...
best of luck...
ಸೌಂಡ್ ಮಾಡುದ್ರೆ ಹೀಗೆ ಮಾಡ್ಬೇಕಪ್ಪಾ! ಕಂಗ್ರಾಟ್ಸ್ ಸರ್.
ಶಿವು ಸರ್..
ತಮ್ಮ ದಾರಿಯೆ ನಮಗೆಲ್ಲಾ ದಾರಿದೀಪ..
ನಮಸ್ಕಾರ..
ಬನ್ನಿ ನಮ್ಮನೆಗೂ.
http://chinmaysbhat.blogspot.com/
ಇತಿ ನಿಮ್ಮನೆ ಹುಡುಗ ,
ಚಿನ್ಮಯ ಭಟ್
ಚುಕ್ಕಿಚಿತ್ತಾರ,
ನಿಮ್ಮ ಮಾತು ನಿಜ.ನಿಮ್ಮ ಅಭಿಪ್ರಾಯವನ್ನು ಪರಿಗಣಿಸುತ್ತೇನೆ. ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರವೀಣ್,
ನಾನು ಬ್ಯುಸಿಯಾಗಿರುವುದು ಸರಿ...ಆದ್ರೆ ಮತ್ತೇನೋ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸುತ್ತಿದೆಯಲ್ಲ...ಇರಲಿ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ಪ್ರತಿ ಪ್ರಯತ್ನದ ಯಶಸ್ಸಿಗೆ ನಿಮ್ಮ ಪ್ರಾಮಾಣಿಕ ಪ್ರಯತ್ನ, ನೆರವಿಗೆ ಬರುವಂತೆ ಬೆಳೆಸಿಕೊಂಡು ಬಂದಿರುವ ಗೆಳೆಯರ ಬಳಗ, ನಿಮ್ಮ ಶ್ರಧ್ದಾಸಕ್ತಿ ಮತ್ತು ಹೇಮಾಶ್ರೀ ಸಹಕಾರ ಮತ್ತು ಪ್ರಾರ್ಥನೆ ಎಲ್ಲ ಕಾರಣ ಎನ್ನಬಹುದಲ್ಲವೇ ಶಿವು...?? ನಿಮ್ಮೆಲ್ಲ ಪ್ರಯತ್ನಗಳಿಗೆ ನಮ್ಮದೂ ಕಿರುಕಾಣಿಕೆ ಶುಭವಾಗಲೆಂಬ ಪ್ರಾರ್ಥನೆ ಹಾಗೂ ಹಾರೈಕೆ ಮೂಲಕ..
ಗುರುಮೂರ್ತಿ ಹೆಗಡೆ ಸರ್,
ಥ್ಯಾಂಕ್ಸ್.
ಸುನಾಥ್ ಸರ್,
ಎಲ್ಲಾ ಓಕೆ ಆದ್ರೆ ನನಗೆ ಚಿತ್ರ ನಿರ್ಮಾಪಕ ಎನ್ನುವ ಟೈಟಲ್ ಸರಿಯಿಲ್ಲವೆನಿಸುತ್ತೆ...ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ಕುಲಕರ್ಣಿಸರ್,
ನನ್ನನ್ನು ನೀವು ಫೋಟೊಗಳಲ್ಲಿ ನೋಡಿರಬಹುದು..ನಾನು ನಿಮ್ಮನ್ನು ಫೋಟೊಗಳಲ್ಲಿ ನೋಡಿದ್ದೇನೆ. ನಮಗೆ ಮುಖ ಪರಿಚಯವಿಲ್ಲದಿದ್ದರೇನಂತೆ, ತುಂಬಾ ಆತ್ಮೀಯರಂತೆ ಆಗಿಬಿಟ್ಟಿದ್ಡೇವೆ ಅಂತ ನನ್ನ ಭಾವನೆ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ವಿಚಲಿತ..
ಥ್ಯಾಂಕ್ಸ್.
ಸುಗುಣಕ್ಕ,
ನಿಮ್ಮಲ್ಲರ ಸಂತೋಷ ಮತ್ತು ಪ್ರೋತ್ಸಾಹ ನನಗೆ ಸ್ಪೂರ್ತಿ..ಧನ್ಯವಾದಗಳು.
ಗುರು,
ನಿಮ್ಮ ಅಭಿನಂದನೆಗೆ ಥ್ಯಾಂಕ್ಸ್.
ಸತ್ಯ ಚರಣ್,
ನೀವು ಅಂದುಕೊಂಡಷ್ಟು ಡಿಮ್ಯಾಂಡ್ ಇಲ್ಲ ಚರಣ್. ಆದ್ರೆ ಒಂಥರ ಖುಷಿಯಲ್ಲಿದ್ದೇನೆ ಅಂತ ಹೇಳಬಲ್ಲೆ..ಥ್ಯಾಂಕ್ಸ್.
ಶ್ವೇತ...
ಥ್ಯಾಂಕ್ಸ್.
ದಿನಕರ್ ಸರ್,
ನಿಮ್ಮ ಅಭಿಪ್ರಾಯ ಸರಿಯಾಗಿದೆ. ಯಾವುದು ಅತಿಯಾಗುತ್ತದೋ ಅದು ಆನಾನುಕೂಲ...ಈಗ ಮತ್ತೆ ಬ್ಲಾಗ್ ಲೋಕಕ್ಕೆ ಬಂದಿದ್ದೇನೆ. ಇದು ಅತಿಯಾದರೆ ಮತ್ತೆಲ್ಲೋ ಖಂಡಿತ ಹಾರಿಹೋಗುತ್ತೇನೆ..
ಧನ್ಯವಾದಗಳು.
ಗುಬ್ಬಚ್ಚಿ ಸತೀಶ್ ಸರ್,
ಸೌಂಡ್ ತುಮಕೂರಿಗೂ ಕೇಳಿಸ್ತಾ...ನಾನು ಐದನೇ ತಾರೀಖು ಅಣ್ಣನ ಮನೆಗೆ ತುಮಕೂರಿಗೆ ಬರುತ್ತಿದ್ದೇನೆ. ಸಾಧ್ಯವಾದರೆ ಬೇಟಿಯಾಗುತ್ತೇನೆ.
ಧನ್ಯವಾದಗಳು.
ಚಿನ್ಮಯ ಭಟ್,
ಇದು ನಿಮ್ಮ ಅಭಿಪ್ರಾಯ. ನನಗೆಲ್ಲಾ ಬ್ಲಾಗ್ ಗೆಳೆಯರು ಸ್ಪೂರ್ತಿ ಅನ್ನೋದು ನಿಮಗೆ ಗೊತ್ತಿರಲಿ..
ಧನ್ಯವಾದಗಳು.
ಅಜಾದ್,
ನನ್ನೆಲ್ಲ ಪ್ರಯತ್ನಕ್ಕೆ ಗೆಳೆಯರ ಸಹಕಾರ ಮತ್ತು ಪ್ರೋತ್ಸಾಹ ಇಲ್ಲದಿದ್ದಲ್ಲಿ ಇದೆಲ್ಲಾ ಆಗುತ್ತಿರಲಿಲ್ಲ..ಆ ಗೆಳೆಯರಲ್ಲಿ ನೀವು ಇದ್ದೀರಿ ಎನ್ನುವುದನ್ನು ಮರೆಯಬೇಡಿ. ನಾನು ಮಾಡಿದ ಹೊಸತು ನಿಮಗೆಲ್ಲಾ ಇಷ್ಟವಾದರೂ ನನ್ನ ಶ್ರೀಮತಿಗೆ ಇಷ್ಟವಾಗುವುದಿಲ್ಲ. ಅವಳನ್ನು ಮೆಚ್ಚಿಸುವುದು ಕಷ್ಟ. ಆದ್ರೆ ನನ್ನ ಯಾವ ಹೊಸ ಸಾಹಸಕ್ಕೂ ಅಡ್ಡ ಮಾಡುವುದಿಲ್ಲವೆನ್ನುವುದು ಸತ್ಯ.
ನಿಮ್ಮ ಅಭಿನಂದನೆಗೆ ಧನ್ಯವಾದಗಳು.
ನಿಮ್ಮ ಹುಚ್ಚು..ನನಗಂತೂ ತುಂಬ ಮೆಚ್ಚಿಗೆ.
NImma ella prayatna galigu..nanna shuabashyagalu..
Shivu sir, good to hear your "Vendor kannu" book got re-printed with some more articles... Congragulations....
ಶಿವು, ಅಭಿನಂದನೆಗಳು. ನಿಜ, ಒಂದು ಸಾಧನೆ ಮಾಡಿದಾಗ ಅನುಕೂಲತೆಗಳಾದಂತೆ ಸ್ವಲ್ಪ ಅನಾನುಕೂಲತೆಗಳೂ ಇವೆ. ಆದರೆ ಇವೆಲ್ಲ blessing in disguise ಎನ್ನುತ್ತಾರಲ್ಲ, ಹಾಗೆ. ಎಷ್ಟೆಲ್ಲ ಸಹಾಯ (ಹಣ, ಸಮಯ, ಜನಬಲ, ವಿದ್ಯೆ...) ಇದ್ದರೂ ಅನೇಕರು ಏನೂ ಮಾಡದೆ ಕಾಲಹರಣ ಮಾಡುತ್ತಾರೆ. ಈಗ ಅನೇಕರನ್ನು ನೋಡಿ, ಮೊಬೈಲ್‍ನಲ್ಲಿ ಆಟ ಆಡುವುದೋ, ಮೆಸೇಜ್ ಮಾಡುವುದೋ, ಕಂಪ್ಯೂಟರ್‍ನಲ್ಲಿ facebook ಮುಂತಾದ ತಾಣಗಳಲ್ಲಿ ಮುಳುಗಿಹೋಗುವುದೋ, ಟಿವಿ ಯಲ್ಲಿ ಎಂತದ್ದೋ reality show, serial ನೋಡುವುದೋ, ಬರೀ ಇಂಥದ್ದರಲ್ಲೇ ಸಮಯ, ಶ್ರಮ ವ್ಯರ್ಥ ಮಾಡುತ್ತಾರೆ. ನೀವು ಇದ್ದುದರಲ್ಲೆ ಎಷ್ಟೆಲ್ಲ ಕೆಲಸ ಮಾಡುತ್ತೀರಿ, ನಿಜಕ್ಕೂ ಸಂತೋಷವಾಗುತ್ತದೆ.
ಶಿವು
ವೆಂಡರ್ ಕಣ್ಣು muರನೆ ಮುದ್ರಣ ಕಾಣುತ್ತಿರುವುದು ಬಹಳ ಸಂತೋಷ.
ಒಂದು ಮನವಿ. ಪ್ರಶಸ್ತಿ ವಿಜೇತ ಅಂತ ಉಪಯೋಗಿಸುವ ಬದಲು ಪ್ರಶಸ್ತಿ ಪುರಸ್ಕೃತ ಎಂದು ಬರೆಯುವುದು ಯುಕ್ತವೇನೊ. ವಿಜೇತ ಅಂದರೆ ಆಟದ ಸ್ಪರ್ಧೆಯಲ್ಲಿ ವಿಜಯ ಸಿಗುತ್ತಲ್ಲ ಅದು. ಈ ಪ್ರಶಸ್ತಿಗಳೆಲ್ಲ ಪುರಸ್ಕೃತ ಅಲ್ಲವೆ? ದಯವಿಟ್ಟು ಈ ವಿಚಾರ ತಿಳಿದಿರುವವರನ್ನು ಕೇಳಿ ಮುಂದಿನ ಮುದ್ರಣದಲ್ಲಾದರೂ ಪುರಸ್ಕೃತ ಎಂದು ಬರೆಯುವಂತಾಗಲಿ.
narayana bhat thanks
Prasanth arasikere
dhanyaadagalu
Girsh
thanks for your wishes
Post a Comment