Sunday, August 28, 2011

ಬೆಳಗಾಯ್ತು....


        
          ಇದೇನು ನನ್ನ ಮೆಚ್ಚಿನ Titanic ..ಅಥವ Tom hanks Cast away, ಅಥವ The Terminal  ಸಿನಿಮಾನ?
  
            ಆದ್ರೂ ನನಗೆ ಯಾಕಿಷ್ಟು ಕಾಡುತ್ತಿದೆ ಅಂತ ಅನೇಕ ಭಾರಿ ಪ್ರಶ್ನಿಸಿಕೊಂಡರೂ ಉತ್ತರ ಸಿಗುತ್ತಿಲ್ಲ.  ಈ ವಿಚಾರ ತಲೆಗೆ ಹೊಕ್ಕಮೇಲಂತೂ ಒಂದೆರಡು ದಿನ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ. ನಿದ್ರೆಯ ಕನಸಲ್ಲೂ ಅದೇ ಮರುಕ್ಷಣ ಎಚ್ಚರಗೊಂಡ ಮನಸಲ್ಲೂ ಅದೇ.  ಮರುದಿನ ದಿನಾಂಕ ಜೂನ್ ೧  ನನ್ನ ದಿನಪತ್ರಿಕೆಯ ಹಣ ವಸೂಲಿ ಪ್ರಾರಂಭಿಸುವ ದಿನ. ಜೊತೆಗೊಂದಷ್ಟು ಬಿಳಿ ಕಾಗದ ಹಾಳೆಗಳನ್ನು ತೆಗೆದು ಜೇಬಿಗಿಟ್ಟು ನನ್ನ ಹಣ ವಸೂಲಿ ಕೆಲಸ ಪ್ರಾರಂಭಿಸಿದ್ದೆ.   ಒಂದೆರಡು ಮನೆಗಳ ವಸೂಲಿ ಆಗುತ್ತಿದ್ದಂತೆ ಅದ್ಯಾಕೋ ಆ ನೈಜ ಕತೆ ನನ್ನನ್ನೂ ತುಂಬಾ ಕಾಡತೊಡಗಿತ್ತು.  ವಿಧಿಯಿಲ್ಲದೇ ಜೇಬಿನಿಂದ ಬಿಳಿ ಪೇಪರನ್ನು ಹೊರತೆಗೆದು ಒಂದೆರಡು ಸಾಲುಗಳನ್ನು ಬರೆದೆ.  ಅಲ್ಲಿಂದ ಮತ್ತೊಂದು ಮನೆಗೆ.  ದಿನಪತ್ರಿಕೆ ಗ್ರಾಹಕರು ನನ್ನಿಂದ ಬಿಲ್ ಪಡೆದು ಹಣ ತರಲು ಒಳಗೆ ಹೋಗಿ ಬರುವ  ಐದು-ಹತ್ತು ನಿಮಿಷಗಳಲ್ಲಿ ಮತ್ತಷ್ಟು ಸಾಲುಗಳನ್ನು ಗೀಚಿಕೊಳ್ಳುತ್ತಿದ್ದೆ.  ಹೀಗೆ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ನನ್ನ ವಸೂಲಿ ಕೆಲಸ ಮುಗಿಯುವ ಹೊತ್ತಿಗೆ ನಾನು ತಂದಿದ್ದ ಬಿಳಿಹಾಳೆಗಳು ತುಂಬಿಹೋಗಿತ್ತು. 

     ತುಂಬಾ ಕಾಡುತ್ತಿದ್ದ ನನ್ನ ಹೊಸ ಕಿರುಚಿತ್ರದ ಕತೆಯ ಚಿತ್ರಕತೆಯನ್ನು ಬರೆದಿದ್ದು ಹೀಗೆ.  ನಂತರ ಅದನ್ನು ಸಂಪೂರ್ಣವಾಗಿ ಪ್ರತಿಯೊಂದು ದೃಶ್ಯವನ್ನು ಬರೆದುಕೊಂಡು ಪಕ್ಕಾ ಮಾಡಿಕೊಂಡು ಎಲ್ಲರನ್ನು ಹೊಂದಿಸಿಕೊಂಡು ನಾನು ಶೂಟಿಂಗ್ ಪ್ರಾರಂಭಿಸಿದ್ದು ಹದಿನೈದು ದಿನಗಳ ನಂತರ. 

      ಎಲ್ಲಾ ಸರಿ ಈ ಕಿರುಚಿತ್ರ ತೆಗೆಯುವ ಹುಚ್ಚು ನನಗೆ ಯಾವಾಗ ತಗುಲಿಕೊಂಡಿತ್ತು ಎನ್ನುವ ವಿಚಾರವನ್ನು ಸ್ವಲ್ಪ ವಿವರಿಸಿಬಿಡುತ್ತೇನೆ.  ಅದು ಏಪ್ರಿಲ್ ತಿಂಗಳ ೨೬ನೇ ತಾರೀಖು.  ಸಂವಾದ.ಕಾಂನ ರವಿ ಅರೇಹಳ್ಳಿ ನನಗೆ ಅನಿರೀಕ್ಷಿತವಾಗಿ ಫೋನ್ ಮಾಡಿ  "ಶಿವು ನಾವೊಂದು ಕಿರುಚಿತ್ರವನ್ನು ಚಿತ್ರೀಕರಿಸುತ್ತಿದ್ದೇವೆ.  ನೀವು ಬಂದರೇ ಚೆನ್ನಾಗಿರುತ್ತೆ. ಅಂದರು.  "ನಾನು ಅಲ್ಲಿ ಬಂದು ಏನು ಮಾಡಲಿ, ಫೋಟೊ ತೆಗೆಯಲು ಬರುತ್ತದೆ ಹೊರತು, ಸಿನಿಮಾಟೋಗ್ರಫಿಯಾಗಲಿ ಅಥವ ಇನ್ನಿತರ ಚಿತ್ರೀಕರಣದ ಪಾತ್ರವಾಗಲಿ ನನಗೆ ಗೊತ್ತಿಲ್ಲ" ಎಂದೆ.   " ಅಯ್ಯೋ ಅದಕ್ಕ್ಯಾಕೆ  ಚಿಂತಿಸುತ್ತೀರಿ, ನಮಗೇನು ಗೊತ್ತಿದೆಯಾ?  ನಾವು ಎಲ್ಲಾ ಹೊಸಬರೇ. ನಿರ್ಧೇಶಕ, ಕ್ಯಾಮೆರ ಮನ್, ಪಾತ್ರಧಾರಿಗಳು, ಸಹಾಯಕ ನಿರ್ಧೇಶಕ, ಇತ್ಯಾದಿ ಯಾರು ಕೂಡ ವೃತ್ತಿಪರರಲ್ಲ. ಯಾರಿಗೂ ಒಂಚೂರು ಅನುಭವವಿಲ್ಲ.  ಅದರೂ ಏನಾದರೂ ಮಾಡಬೇಕೆನ್ನುವ ಹಂಬಲ ಎಲ್ಲರಲ್ಲೂ ಇರುವುದರಿಂದ ನೀವು ನಮ್ಮ ತಂಡವನ್ನು ಸೇರಿಕೊಂಡರೆ ಚೆನ್ನಾಗಿರುತ್ತೆ"    ಅಂದರು.  ಹೀಗೆ ಯಾರಾದರೂ ನನ್ನನ್ನು ಕರೆದುಬಿಟ್ಟರೆ ಸಾಕು ಏನೋ ಹೊಸತು ಸಿಗುತ್ತದೆ ಎನ್ನುವ ಆಸೆಯಲ್ಲಿ ಇರುವ ಕೆಲಸವನ್ನು ಬಿಟ್ಟು ಹೋಗಿಬಿಡುವ ದುರ್ಬಲ ಗುಣ ನನ್ನದು.  ಹೋಗಿ ಅವರೊಂದಿಗೆ ಸೇರಿಕೊಂಡೆ.

       ಆ ಕಿರುಚಿತ್ರದ ಅವಧಿ ಎಂಟು ನಿಮಿಷ.  ಚಿತ್ರೀಕರಣಕ್ಕಾಗಿ ನಿಗದಿಪಡಿಸಿದ್ದು ಎರಡು ದಿನಗಳು.  ನಾನು ಅಲ್ಲಿಗೆ ಹೋಗುತ್ತಿದ್ದಂತೆ ನಾನೇನೋ ದೊಡ್ಡ ಸಿನಿಮಾಟೋಗ್ರಾಫರ್ ಇರಬಹುದು ಎನ್ನುವ ಭಾವನೆಯಲ್ಲಿ ತಕ್ಷಣ ನನ್ನ ಕೈಗೆ ಕ್ಯಾಮೆರವನ್ನೇ  ಕೊಟ್ಟುಬಿಟ್ಟರು.  ತಮಾಷೆಯೆಂದರೆ ನನಗೆ ಫೋಟೊ ತೆಗೆಯಲು ಮಾತ್ರ ಬರುತ್ತೆ ಅಂತ ಈ ಮೊದಲೇ ಹೇಳಿದ್ದೆನಲ್ಲ, ವಿಡಿಯೋ ರೆಕಾರ್ಡಿಂಗ್ ಮಾಡುವುದು ಹೇಗೆ ಎಂದು ತಿಳಿಯಲು ಕ್ಯಾಮರ ಹಿಂಭಾಗದಲ್ಲಿರುವ ಹತ್ತಾರು ಗುಂಡಿಗಳನ್ನು ಹುಡುಕತೊಡಗಿದೆ. ಸಿಗಲಿಲ್ಲ. ಮತ್ತೆ ನನಗೆ ಕಲಿಯುವ ವಿಚಾರದಲ್ಲಿ ಯಾವುದೇ ಸಂಕೋಚವಿರಲಿಲ್ಲವಾದ್ದರಿಂದ ಈ ಮೊದಲು ಸೂಟಿಂಗ್ ಮಾಡುತ್ತಿದ್ದ ಮುರಳಿ ಎನ್ನುವವರ ಬಳಿ ವಿಡಿಯೋ ರೆಕಾರ್ಡಿಂಗ್ ಬಟನ್, ಆನ್-ಅಪ್ ಫೋಕಸ್,....ಇತ್ಯಾದಿಗಳನ್ನು ಕೇಳಿ ತಿಳಿದುಕೊಂಡು ಹೇಗೆ ಅಪರೇಟ್ ಮಾಡಬೇಕೆಂದು ಅವರಿಂದ ಹೇಳಿಸಿಕೊಂಡೆ.  ಈ ವಿಚಾರದಲ್ಲಿ ನಾನು ಆ ಮಟ್ಟದ ಹೊಸಬ ಮತ್ತು ದಡ್ಡನಾದರೂ ಅವರು ನನ್ನ ಕಡೆಯಿಂದಲೇ ಯಾಕೆ ಚಿತ್ರೀಕರಿಸಬೇಕೆಂದು ಕರೆದರೋ ನನಗೆ ಗೊತ್ತಿಲ್ಲ.  ಮುರಳಿ ಮತ್ತು ನಾನು ಇಬ್ಬರೂ ಕ್ಯಾಮೆರ ಮ್ಯಾನುಗಳು.   ಒಂದೆರಡು ಶಾಟ್ ಮುಗಿದ ನಂತರ  ಅದ್ಯಾಕೋ ನನಗೆ ಹೊಸ ಹೊಸ ಕ್ಯಾಮೆರ ಯಾಂಗಲ್ಲುಗಳು ಹೊಳೆಯತೊಡಗಿದವು.  ಅವುಗಳನ್ನು ಅವರಿಗೆ ವಿವರಿಸಿ ಹೀಗೆ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ  ಬೇಕಾದರೆ ಪ್ರಯತ್ನಿಸಿ ನೋಡಿ ಎಂದೆನಲ್ಲ ಅಲ್ಲಿಗೆ ಮುಗೀತು.  ಹತ್ತು ನಿಮಿಷಕ್ಕೊಂದು ಶಾಟ್ ಅಂತ ಚಿತ್ರೀಕರಿಸುತ್ತಿದ್ದ ಅವರು  ನನ್ನ ಅನೇಕ ಪ್ರೇಮಿಂಗ್, ಯಾಂಗಲ್ಸುಗಳಿಂದಾಗಿ  ಅರ್ಧಗಂಟೆಗೆ ಒಂದು ಶಾಟ್ ಕೂಡ ತೆಗೆಯಲು ಸಾಧ್ಯವಾಗದಂತಾಯಿತು.  ಅವರ ಶೂಟಿಂಗ್ ಶೆಡ್ಯೂಲ್ ಎರಡು ದಿನವಿದ್ದಿದ್ದು ನನ್ನ ಪ್ರವೇಶದಿಂದಾಗಿ ಅದು ಆರು ದಿನಕ್ಕೆ ಎಳೆದುಕೊಂಡು ಹೋಗಿಬಿಟ್ಟಿತ್ತು.  ಹಾಗೂ ಹೀಗೂ ಶೂಟಿಂಗ್ ಮುಗಿಸಿ ಚಿತ್ರೀಕರಣದ ನಂತರದ ಕೆಲಸಗಳನ್ನು ಪ್ರಾರಂಭಿಸುವ ಹಂತದಲ್ಲಿ ಎಲ್ಲರೂ ಅವರವರ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು.   ಈ ಕಿರುಚಿತ್ರದಲ್ಲಿ ಕ್ಯಾಮೆರ ಮೆನ್ ಆಗಿ ಚಿತ್ರೀಕರಿಸುವಲ್ಲಿನ ಅನೇಕ ಅನುಭವಗಳು, ಪ್ರೇಮಿಂಗು, ಸಹಜ ಬೆಳಕನ್ನು ಚಿತ್ರೀಕರಣಕ್ಕೆ ಬಳಸಿಕೊಂಡ ರೀತಿ,  ನಡುವೆ ಬಂದ ಮಳೆಯನ್ನು ಚಿತ್ರೀಕರಣದಲ್ಲಿ ಪಾತ್ರವಾಗಿಸಿದ ರೀತಿ, ಇತ್ಯಾದಿಗಳೆಲ್ಲಾ ನನ್ನ ಮರೆಯಲಾಗದ ನೆನಪುಗಳಾಗಿ ಆ ಕಿರುಚಿತ್ರ ಬೇಗನೇ ಸಿದ್ದವಾಗಿಬಿಟ್ಟರೆ ಹೊರಪ್ರಪಂಚಕ್ಕೆ ತೋರಿಸುವ ಆಸೆ ತುಂಬಾ ಕಾಡತೊಡಗಿತ್ತು.  ಆ ಸಿನಿಮಾದ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕನಿಗೆ ಮದುವೆ ಗೊತ್ತಾಗಿ ಅವರು ಬ್ಯುಸಿಯಾಗಿಬಿಟ್ಟರು. ಉಳಿದವರು ಕೂಡ ಅವರವರ ವೈಯಕ್ತಿಕ ಕೆಲಸದ ಒತ್ತಡಗಳಿಂದಾಗಿ ಕೊನೆಗೆ ಆ ಸಿನಿಮಾ ಸಿದ್ದವಾಗಲೇ ಇಲ್ಲ. 

      ಆದರೂ ನಾನು ಚಿತ್ರೀಕರಿಸಿದ ಕೆಲವು ಶಾಟುಗಳು, ಪ್ರೇಮುಗಳು, ತಾಂತ್ರಿಕತೆಯಲ್ಲಿ ವಿಭಿನ್ನವೆನಿಸುವ ಫೋಕಸಿಂಗ್ ವಿಚಾರಗಳು ಇದ್ದ ಕೆಲವು ದೃಶ್ಯಗಳನ್ನು ನನ್ನ ಮನೆಯಲ್ಲಿ ಮತ್ತೆ ಮತ್ತೆ ನೋಡುವಾಗ  ನನಗೆ ಗೊತ್ತಿಲ್ಲದಂತೆ ಅದೊಂತರ ಆತ್ಮವಿಶ್ವಾಸ ನನ್ನಲ್ಲಿ ಮೂಡತೊಡಗಿತ್ತು.  ಎಲ್ಲರೂ ಒಟ್ಟುಗೂಡಿ ಮಾಡಿದ ಸಿನಿಮಾ ಸಿದ್ದವಾಗದಿರುವುದು ನನ್ನದೇ ಕೂಸು ಗರ್ಭದೊಳಗೆ ಇದ್ದು ಹೊರಬರಲಾಗದ ಪರಿಸ್ಥಿತಿ ಎನ್ನುವಂತೆ ನನ್ನನ್ನು ಕಾಡತೊಡಗಿತ್ತು.  ಅದೇ ಗುಂಗಿನಲ್ಲಿದ್ದ ನನಗೆ ಕೆಲವೇ ದಿನಗಳ ಹಿಂದೆ ನಡೆದ ಒಂದು ನೈಜ ಘಟನೆಯನ್ನು  ಆದರಿಸಿದ ಕಿರುಚಿತ್ರವನ್ನು ನಾನೇ ಏಕೆ ಮಾಡಬಾರದು ಅನ್ನಿಸತೊಡಗಿತ್ತು.  ಅಷ್ಟು ಸಾಕಾಯಿತು. ಒಂದಾದ ಮೇಲೆ ಒಂದು ದೃಶ್ಯಗಳು ನನ್ನ ಮನಸ್ಸಿನ ಪಟಲದ ಮೂಡತೊಡಗಿದವು. ಪ್ರತಿಯೊಂದು ದೃಶ್ಯಗಳು ಕೊಂಡಿಗಳಂತೆ ಜೋಡಿಸಿಕೊಳ್ಳುತ್ತಾ ಚಲಿಸತೊಡಗಿದವು.  ಇಷ್ಟೇಲ್ಲಾ ಆದ ಮೇಲೆ ನನಗೆ ನಿದ್ರೆ ಬರದಂತಾಗಿ ಮರುದಿನ ದಿನಪತ್ರಿಕೆ ವಸೂಲಿ ಸಮಯದಲ್ಲಿ ಮನೆ ಮನೆಗಳ ಬಾಗಿಲುಗಳ ಮುಂದೆ, ಅಪಾರ್ಟುಮೆಂಟಿನ ಮೆಟ್ಟಿಲುಗಳ ನಡುವೆ, ಲಿಫ್ಟುಗಳಲ್ಲಿ ಚಲಿಸುತ್ತಾ, ಅಲ್ಲಲ್ಲಿ ರಸ್ತೆ ಪಕ್ಕ ಸ್ಕೂಟಿಯನ್ನು ನಿಲ್ಲಿಸಿ ಕೈಗಾಡಿ ಅಂಗಡಿಯ ಟೀ ಕುಡಿಯುತ್ತಾ, ನನ್ನ ಕಿರುಚಿತ್ರದ ಚಿಕ್ಕ ದೃಶ್ಯಗಳನ್ನು ಬರೆದಿದ್ದೆ.

    ಮೊದಲೇ ಕ್ಲೈಮ್ಯಾಕ್ಸ್ ದೃಶ್ಯಗಳು ಸಿದ್ದವಾಗಿತ್ತಲ್ಲ,  ಉಳಿದ ದೃಶ್ಯಗಳಿಗಾಗಿ ಜೇಬಿನಲ್ಲಿಟ್ಟ ಪೇಪರುಗಳಲ್ಲಿ ಆತುರಾತುರವಾಗಿ ಗೀಚಿಕೊಂಡಿದ್ದ ದೃಶ್ಯಗಳನ್ನು ಜೋಡಿಸಿಕೊಳ್ಳುತ್ತಾ ಒಂದು ಪಕ್ಕಾ ಚಿತ್ರಕತೆಯನ್ನು ಸಿದ್ಧ ಮಾಡಿದೆ. ಈ ಕಿರುಚಿತ್ರದಲ್ಲಿ ಒಟ್ಟು ಹತ್ತು ದೃಶ್ಯಗಳು ಅಂತ ಯೋಜನೆ ಹಾಕಿಕೊಂಡು ಪ್ರತಿಯೊಂದು ದೃಶ್ಯದಲ್ಲೂ ಕ್ಯಾಮೆರ ಪ್ರೇಮಿಂಗ್, ಒಂದು ದೃಶ್ಯದ ಹತ್ತಾರು ಯಾಂಗಲ್ಲುಗಳು, ಟೇಕಿಂಗ್ಸ್,  ಯಾವ ದೃಶ್ಯದಲ್ಲಿ ಮೂವಿಂಗ್ ಶಾಟ್,  ಯಾವ ದೃಶ್ಯದಲ್ಲಿ ಕ್ಯಾಮೆರ ತಾಂತ್ರಿಕತೆ ಮೇಲುಗೈ ಸಾಧಿಸಬೇಕು,  ಮತ್ಯಾವ ದೃಶ್ಯದಲ್ಲಿ ಮಾತು, ಭಾವನೆಗಳು ಮುಂದಿರಬೇಕು ಇತ್ಯಾದಿಗಳನ್ನು ಪಕ್ಕಾ ಆಗಿ ಪೇಪರ್ ವರ್ಕ್ ಮಾಡಿಕೊಂಡೆ.  ಒಂದು ವಾರ್‍ಅ ಪೂರ್ತಿ ಈ ಪೇಪರ್ ವರ್ಕ್ ಮುಗಿಸಿದಾಗ ಅದರಲ್ಲಿ ವಿಧವಿಧವಾದ ದಿಕ್ಕುಗಳ ಪ್ರೇಮಿಂಗುಗಳು, ಕ್ಯಾಮೆರ ಯಾಂಗಲ್ಲುಗಳು, ತಾಂತ್ರಿಕ ವಿವರಗಳು, ದೃಶ್ಯದ ಹಿನ್ನೆಲೆ ಮುನ್ನಲೆಗಳು, ಪಾತ್ರಧಾರಿಗಳು, ಸಂಭಾಷಣೆ, ಚಿತ್ರೀಕರಣದ ಸಮಯ, ಬೆಳಕು...........ಹೀಗೆ ಎಲ್ಲಾ ತಾಂತ್ರಿಕ ವಿವರಗಳನ್ನು ಹೊಂದಿದ ಮುನ್ನೂರು ಪುಟ್ಟ ಪುಟ್ಟ ದೃಶ್ಯಗಳು ಸಿದ್ದವಾಗಿಬಿಟ್ಟವು.

        ಓಹ್!  ಸ್ವಲ್ಪ ತಡೆಯಿರಿ, ಟಿವಿ ೯ ಛಾನಲ್ಲಿನವರು ಮನೆಗೆ ಬಂದೇ ಬಿಟ್ಟರು.  ಪೂರ್ತಿ ಸಿದ್ದವಾದ ಈ ಕಿರುಚಿತ್ರವನ್ನು ನೋಡಿ ನನ್ನನ್ನು ಮತ್ತು ನಮ್ಮ ಹುಡುಗರನ್ನು ಮಾತಾಡಿಸಲು ಬಂದಿದ್ದಾರೆ.  ಸಿನಿಮ ವಸ್ತುವಿನ ಹಿನ್ನೆಲೆ, ಅದರ ಸೂಟ್ ಮಾಡಿದ ಕ್ಯಾಮೆರ ಬಗ್ಗೆ, ಏಕೆ ಈ ವಸ್ತುವನ್ನೆ ಕತೆಯನ್ನಾಗಿ ಚಿತ್ರ ಮಾಡಿದೆ ಎನ್ನುವುದರ ಬಗ್ಗೆ ಕೇಳಲು ಬಂದಿದ್ದಾರೆ.  ಅವರ ಜೊತೆ ಮಾತಾಡಿ, ನೀವೆಲ್ಲಾ ನೋಡುವಂತೆ  ಟಿವಿ ೯ ಛಾನಲ್ಲಿನಲ್ಲಿ ಒಂದಷ್ಟು ಫೋಸು ಕೊಟ್ಟು ಬಂದುಬಿಡುತ್ತೇನೆ.  

     ಅಮೇಲೆ ನಮ್ಮ ಕಿರುಚಿತ್ರ ಪ್ರಾರಂಭವಾದ ಬಗೆ, ಅದಕ್ಕೆ ಹೊಂದಿಸಿಕೊಂಡ ಕ್ಯಾಮೆರ, ಎಲ್ಲಿ ಶೂಟಿಂಗ್ ಮಾಡಿದೆವು,  ಆ ಜಾಗದ ಹುಡುಕಾಟ, ತಡಕಾಟ, ಒಂದು ಬುಟ್ಟಿಯಲ್ಲಿ ಹಾಕಿದರೆ ಒಂದು ಕ್ಷಣ ಒಂದು ಕಡೆ ನಿಲ್ಲದ ಹಾಗೆ ನೆಗೆದಾಡುವ ಕಪ್ಪೆಗಳಂತ ನಮ್ಮ ಪಾತ್ರಧಾರಿ ಹುಡುಗರು,  ಸೂಟಿಂಗ್ ಸಮಯದಲ್ಲಿ ಅವರು ಕೈ ಕೊಟ್ಟ ಬಗೆಗಳು, ಕದ್ದು ಮುಚ್ಚಿ ಅವರಿಗೆ ಗೊತ್ತಿಲ್ಲದ ಹಾಗೆ ಸೂಟ್ ಮಾಡಿದ ದೃಶ್ಯಗಳು, ನಂತರದ ಸಂಕಲನ ಕೆಲಸ, ನಮಗೆಲ್ಲಾ ಧ್ವನಿ ಮರುಮುದ್ರಣವೆನ್ನುವ ಕಬ್ಬಿಣದ ಅಗಿಯಲು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ವಿಯಾದೆವಾ?,  ಪೂರ್ತಿ ಸಿದ್ಧವಾದ ಸಿನಿಮಾಗೆ ಮೊದಲು ಮಾಡಿದ ನಂತರ ಅದನ್ನು ಬದಲಾಯಿಸುವ ಸಲುವಾಗಿ ನನ್ನ ಗೆಳೆಯ ಮಹೇಶ್‍ಗೆ ನಾನು ಕೊಟ್ಟ ಕಾಟ,...............ಒಂದೇ ಎರಡೇ ಬರೆಯಲು ತುಂಬಾ ದೊಡ್ಡದಾದ ಸಾಲುಗಳಿವೆ....ಮುಂದಿನ ಭಾಗದಲ್ಲಿ ಬರೆಯುತ್ತೇನೆ.

       ಅಂದಹಾಗೆ ಈ ಬರಹದ ನಡುವೆ ಟಿವಿ ೯ ಛಾನಲ್ಲಿನವರು ಕ್ಯಾಮೆರ ಹಿಡಿದುಕೊಂಡು ನಮ್ಮನ್ನು ಸೆರೆಯಿಡಿಯಲು ಬಂದರು ಅಂತ ನಿಲ್ಲಿಸಿದೆನಲ್ಲ...ಅದು ಗಿಮಿಕ್ ಏನೂ ಅಲ್ಲ.   ಸತ್ಯ. ಇವತ್ತು [ದಿನಾಂಕ ೨೮-೮-೨೦೧೧]ಸಂಜೆ ಬಂದು ನಮ್ಮ ಕಿರುಚಿತ್ರದ ಬಗ್ಗೆ ನನ್ನನ್ನು ಮತ್ತು ನನ್ನ ಹುಡುಗರನ್ನು ಮಾತಾಡಿಸಿ ಹೋಗಿದ್ದಾರೆ.  ಅದು ಪ್ರಸಾರವಾಗುವ ದಿನಾಂಕವಿನ್ನು ಗೊತ್ತಾಗಿಲ್ಲ. ಗೊತ್ತಾದ ತಕ್ಷಣ ನಿಮಗೆಲ್ಲಾ  mail, massage, facebook, bazz...ಎಲ್ಲಾ ಕಡೆ ತಿಳಿಸುತ್ತೇನೆ. ತಪ್ಪದೇ ನೋಡಿ
ನಮ್ಮ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಿ.

ಅಂದಹಾಗೆ ನಮ್ಮ ಕಿರುಚಿತ್ರದ ಹೆಸರು..

                               ಬೆಳಗಾಯ್ತು....
                           Tag line : ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ?

ಸಮಯದ ಅವಧಿ : ಹದಿನೆಂಟು ನಿಮಿಷಗಳು...

ನಮ್ಮ ಕಿರುಚಿತ್ರದಲ್ಲಿ ಹೆಚ್ಚು ಇಲ್ಲಗಳು ಇವೆ.

ನಾನು ನಿರ್ಧೇಶಕನಲ್ಲ. ನಟನಲ್ಲ.
ಸಿನಿಮಾಟೋಗ್ರಾಫರ್ ಅಂತೂ ಅಲ್ಲವೇ ಅಲ್ಲ
 ನನಗೆ ಸಿನಿಮಾ ಸಾಹಿತ್ಯ ಗೊತ್ತಿಲ್ಲ.
ಸಂಗೀತ ನೀಡಿರುವ ಮಹೇಶ್ ಸಂಗೀತ ಗಾರನಲ್ಲ.
ನಾವು ಕಿರುಚಿತ್ರಕ್ಕೆ ಬಳಸಿರುವ ಕ್ಯಾಮೆರಾ ಸಿನಿಮಾ ಸಿನಿಮಾಟೋಗ್ರಫಿ ಕ್ಯಾಮೆರ ಅಲ್ಲ
ಬೆಳಗಿನ ದಿನಪತ್ರಿಕೆ ಹಾಕುವ ಪಾತ್ರಧಾರಿ ಹುಡುಗರು ನಟರಲ್ಲ.
ಮೇಕಪ್ ಅಂತೂ ಯಾರಿಗೂ ಇಲ್ಲವೇ ಇಲ್ಲ.

ಈ ಎಲ್ಲಾ ಇಲ್ಲಗಳ ನಮ್ಮ ಕಿರುಚಿತ್ರ ಸಿದ್ದವಾಗಿದೆ.

           
ನಮ್ಮ ಕಿರುಚಿತ್ರದ ಚಿತ್ರೀಕರಣ ಸಮಯದಲ್ಲಿನ ಕೆಲವು ಫೋಟೊಗಳು.

         ಪ್ರಾರಂಭದ ಹಂತದ ಚಿತ್ರೀಕರಣ.
         

ಪ್ರೇಮಿಂಗ್ ಚೆನ್ನಾಗಿದೆಯಾ?  ಶಿವಪ್ರಕಾಶ್  ಜೊತೆ ಚರ್ಚೆ
 
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಿದೆ ಈ ಕ್ಯಾಮೆರದ ಚಿತ್ರೀಕರಣ ಪಲಿತಾಂಶ

     
ನಮ್ಮ ಚಿತ್ರದ ಕೆಲವು ಹೀರೋಗಳು

     

ಮಹೇಶ್ ಮತ್ತು ಶಿವಪ್ರಕಾಶ್  ಜೊತೆ ಚಿತ್ರೀಕರಣದ ನಡುವೆ ದೃಶ್ಯಗಳ ಚರ್ಚೆ

 ಆಗಾಗ ಸ್ವಲ್ಪ ರಿಲ್ಯಾಕ್ಸ್..


ಇವರು ಕೂಡ ನಮ್ಮ ಕಿರುಚಿತ್ರದ ಹೀರೊಗಳು........ಸೂಟಿಂಗ್ ಸಮಯದಲ್ಲಿ ನನಗೆ ಸಕ್ಕತ್ ಕಾಟ ಕೊಟ್ಟ ವಿಲನ್ನುಗಳು.

 ಅಷ್ಟೆಲ್ಲಾ ಹೀರೋಗಳಿದ್ದರೂ....ಇಲ್ಲಿ ಕತೆ ಮತ್ತು ಚಿತ್ರಕತೆಯೇ ನಿಜವಾದ ಹೀರೋ....


ಚಿತ್ರಗಳು ಮತ್ತು ಲೇಖನ.
ಶಿವು. ಕೆ


Saturday, August 13, 2011

ಬ್ಲಾಗಿಗರ ಪುಸ್ತಕಗಳ ಲೋಕಾರ್ಪಣೆ


ಹೌದು. ಮತ್ತೆ ನಮ್ಮ ಬ್ಲಾಗಿಗರು ಸಂಭ್ರಮಿಸುವ  ಕಾಲ ಬಂದಿದೆ.  ನಾವೆಲ್ಲ ಒಟ್ಟಿಗೆ ಸೇರಿ ನಲಿಯುವ ಕಾಲ ಬಂದಿದೆ.  
ಇದೇ ಆಗಸ್ಟ್ 21ರ ಭಾನುವಾರ ಚಾಮರಾಜ ಪೇಟೆಯಲ್ಲಿರುವ "ಕನ್ನಡ ಸಾಹಿತ್ಯ ಪರಿಷತ್ತ್ "ನಲ್ಲಿ ನಮ್ಮ ಬ್ಲಾಗಿಗರ ಮೂರು ವಿಭಿನ್ನ ಪುಸ್ತಕಗಳು ಲೋಕಾರ್ಪಣೆಯಾಗುತ್ತಿವೆ.

ಇದು ನಮ್ಮ ಅಹ್ವಾನ ಪತ್ರಿಕೆ ನಿಮಗೆಲ್ಲಾ ಆತ್ಮೀಯವಾದ ಸ್ವಾಗತ


ಸುಧೇಶ್ ಶೆಟ್ಟಿ ನಮ್ಮೆಲ್ಲರ ಮೆಚ್ಚಿನ ಯುವ ಬರಹಗಾರ.   ಬ್ಲಾಗಿರರ ಸ್ಪೂರ್ತಿ ಮತ್ತು ಒತ್ತಾಸೆಯಿಂದ ಆತ  "ಹೆಜ್ಜೆ ಮೂಡದ ಹಾದಿ" ಕಾದಂಬರಿ ಬರೆದಿದ್ದಾರೆ ಈಗ ಅವರ ಬರಹ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ.  ಇವರ ಪುಸ್ತಕದ ಕುರಿತು ನಮ್ಮೆಲ್ಲರ ಮೆಚ್ಚಿನ ಖ್ಯಾತ ಸಾಹಿತಿ ಕು.ವೀರಭದ್ರಪ್ಪನವರು ಮಾತನಾಡಲಿದ್ದಾರೆ.

ಸುಧೇಶ್ ‍ರ ಕಾದಂಬರಿ "ಹೆಜ್ಜೆ ಮೂಡದ ಹಾದಿ"


ಮತ್ತೊಬ್ಬ ಬ್ಲಾಗ್ ಬರಹಗಾರ್ತಿ ರೂಪ ರಾವ್[ "ತೆರೆದ ಮನ" ಬ್ಲಾಗಿನ ಒಡತಿ]ರವರ ಸಣ್ಣಕತೆಗಳು ಪುಸ್ತಕವೂ ಬಿಡುಗಡೆಯಾಗುತ್ತಿದೆ. ಈ ಪುಸ್ತಕದ ಬಗ್ಗೆ ಮಾತನಾಡುವವರು ಖ್ಯಾತ ಸಾಹಿತಿ, ವಿಜ್ಞಾನಿ, ವಾಸ್ತುತಜ್ಞರಾದ ಡಾ.ರಮೇಶ್ ಕಾಮತ್‍ರವರು.

ರೂಪಾ ರಾವ್ ರವರ ಸಣ್ಣ ಕಥಾ ಸಂಕಲನ "ಪ್ರೀತಿ ಏನನ್ನಲಿ ನಿನ್ನ"


ಹಾಗೆ ಇನ್ನೊಬ್ಬ ಗೆಳೆಯ ದೊಡ್ಡಮನಿ ಮಂಜು. ಮೂರ್ತಿ ಚಿಕ್ಕದಾದರೂ ಆತನ ಚಟುವಟಿಕೆ ಚುರುಕು. ಆತನ ಕವನ ಸಂಕಲನವನ್ನು ಖ್ಯಾತ ಸಿನಿಮಾ ಸಾಹಿತಿ ಹೃದಯಶಿವರವರು ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ.

ದೊಡ್ಡ ಮನಿ ಮಂಜುರವರ ಕವನ ಸಂಕಲನ "ಮಂಜು ಕರಗುವ ಮುನ್ನ"


   ಮೂರು ಬೇರೆ ಬೇರೆ ಪ್ರಕಾರದ ನಮ್ಮ ಬ್ಲಾಗಿಗರ ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವುದು ಒಂದು ವಿಶೇಷವಾದರೆ,  ಇದು ಸೃಷ್ಠಿ-ತುಂತುರು ಪ್ರಕಾಶನಗಳ ಸಂಯೋಗದಲ್ಲಿ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ. ಈ ಕಾರ್ಯಕ್ರಮಕ್ಕಾಗಿ ದೂರದ ನಾಡಾದ ಕುವೈಟಿನಿಂದ ಡಾ.ಆಜಾದ್,  ಸುಗುಣಕ್ಕ,[ಮೃದು ಮನಸ್ಸು ಬ್ಲಾಗ್] ಮಹೇಶ್ ಸರ್, ಅವರ ಮಗ ಮನುವಚನ್,  ದೆಹಲಿಯಿಂದ ಪ್ರವೀಣ್ [ಮನದಾಳದಿಂದ....ಬ್ಲಾಗ್], ಪೂನದಿಂದ ಚಿತ್ರಾಂಜಲಿ ಹೆಗಡೆ[ಮನಸ್ಸೆಂಬ ಹುಚ್ಚು ಹೊಳೆ]ಯವರು ಬರುತ್ತಿದ್ದಾರೆ.  ಗೆಳೆಯರಿಗೆ ಪ್ರೋತ್ಸಾಹಿಸುವುದಕ್ಕಾಗಿ ಅವರೊಂದಿಗೆ ಸಂಭ್ರಮಿಸುವುದಕ್ಕಾಗಿ ಆಷ್ಟು ದೂರದಿಂದ ಅವರೇ ಬರುತ್ತಿರಬೇಕಾದರೆ ಹತ್ತಿರದಲ್ಲಿರುವ ನಾವೆಲ್ಲರೂ ಕೂಡ ಹೋಗೋಣ ಅಲ್ವಾ....

ಇತರ ವಿವರಗಳಿಗೆ ಮೇಲೆ ಹಾಕಿರುವ ಅಹ್ವಾನ ಪತ್ರಿಕೆಯನ್ನು ನೋಡಿ. 
ಕಾರ್ಯಕ್ರಮಕ್ಕೆ ಮೊದಲು ಬೆಳಗಿನ ಉಪಹಾರ ಮತ್ತು ಕಾಫಿ ಟೀ ವ್ಯವಸ್ಥೆಯಿದೆ. 
ಖಂಡಿತ ಬರುತ್ತೀರಿ ಅಲ್ವಾ!


ಚಿತ್ರಗಳು ಮತ್ತು ಲೇಖನ
ಶಿವು.ಕೆ

     


Friday, August 5, 2011

ಪಾಂಡಿಚೇರಿ ಪ್ರವಾಸ

  
            ಕಂಡಕ್ಟರನ ಅಂಗೈಯಲ್ಲಿ ಎಣ್ಣೆ ಮಿಶ್ರಿತ ಅರಿಸಿನ, ಕುಂಕುಮ ಮತ್ತು ವಿಭೂತಿಯಿತ್ತು. ಡ್ರೈವರ್ ತನ್ನ ಉಂಗುರ ಬೆರಳ ತುದಿಯಲ್ಲಿ ಮೊದಲು ಸ್ವಲ್ಪ ಅರಿಸಿನವನ್ನು ತೆಗೆದುಕೊಂಡು ತನ್ನ ಹಣೆಗೆ ಇಟ್ಟುಕೊಂಡ.  ಮತ್ತೆ ಸ್ವಲ್ಪ ಕುಂಕುಮ, ಕೊನೆಯಲ್ಲಿ ವಿಭೂತಿಯನ್ನು ಸ್ವಲ್ಪ ಹೆಚ್ಚೇ ಬಲ ತೋರುಬೆರಳಿನಲ್ಲಿ  ತೆಗೆದುಕೊಂಡು ಎಡಗೈಯನ್ನು ಎದೆಯಮೇಲಿಟ್ಟುಕೊಂಡು ಹೆಚ್ಚು ಭಕ್ತಿಯನ್ನು ವ್ಯಕ್ತಪಡಿಸುತ್ತಾ ಹಣೆಯ ತುಂಬಾ ಹಚ್ಚಿಕೊಂಡು ಮತ್ತಷ್ಟು ತೆಗೆದುಕೊಂಡು ಕಂಡಕ್ಟರನ ಹಣೆಗೂ ಸ್ವಲ್ಪ ಉದ್ದವಾಗಿ ಬಳಿದ. ಡ್ರೈವರ್ ಹೀಗೆ ಕಂಡಕ್ಟರಿಗೆ ವಿಭೂತಿಯನ್ನು ಹಣೆಗೆ ಬಳಿಯುವಾಗ ಕಂಡಕ್ಟರ್‍ನಲ್ಲಿ ಗಾಢವಾದ ಭಕ್ತಿ ಮುಖದಲ್ಲಿ ವ್ಯಕ್ತವಾಗಿದ್ದು ನಾನು ನೋಡುತ್ತಲೇ ಇದ್ದೆ. ಈಗ ಕಂಡಕ್ಟರ್ ತನ್ನ ಬ್ಯಾಗಿನಲ್ಲಿದ್ದ ತುಂಡು ಹೂವನ್ನು ದೇವರ ಫೋಟೊಗೆ ಸಿಕ್ಕಿಸಿ,  ಊದುಬತ್ತಿಯನ್ನು ಅಂಟಿಸಿ ಮೊದಲು ದೇವರ ಫೋಟೊಗಳಿಗೆ, ಡ್ರೈವಿಂಗ್ ಚಕ್ರಕ್ಕೆ, ಗೇರಿಗೆ, ಕೊನೆಯಲ್ಲಿ ತನ್ನ ಟಿಕೆಟ್ ಮತ್ತು ಹಣದ ಚೀಲಕ್ಕೆ ಭಕ್ತಿಯಿಂದ ಪೂಜೆಮಾಡಿ,  ಊದುಬತ್ತಿಯನ್ನು ಇಂಜಿನ್ ಬಾಕ್ಸಿನ ಮೇಲ್ತುದಿಯಲ್ಲಿ ಸಿಕ್ಕಿಸಿ, ಬಸ್ಸಿನೊಳಗೆ ಆಗಲೇ ತುಂಬಿಕೊಂಡಿದ್ದ ಪ್ರಯಾಣಿಕರ ಕಡೆಗೆ ಒಮ್ಮೆ ತೃಪ್ತಿಯಿಂದ ನೋಡಿ, ಡ್ರೈವರ್‌ಗೆ ಸನ್ನೆ ಮಾಡಿ "ರೈಟ್ ರೈಟ್" ಅಂದ. ಬಸ್ಸು ಸ್ಟಾರ್ಟ್ ಆಯಿತು.  ಅದೇ ಸಮಯಕ್ಕೆ ಎಂಜಿನ್ ಮೇಲೆ ಹಾಕಿದ್ದ ಮಡಿಬಟ್ಟೆಗಳನ್ನು ತೆಗೆಯುತ್ತಾ, ಪಕ್ಕದಲ್ಲೇ ಇದ್ದ ಗಲ್ಲಪೆಟ್ಟಿಗೆಯನ್ನು ಕೈಗೆತ್ತಿಕೊಳ್ಳುವಾಗ ಊದುಬತ್ತಿಯ ಬೆಂಕಿ ಮೊಣಕೈಗೆ ಸುಟ್ಟುಬಿಡ್ತು.  "ತತ್ ತೇರಿ" ಅಂತ ಆ ಊದುಬತ್ತಿಯನ್ನು ಬೈದು ಕೋಪದಿಂದ ಅದನ್ನು ಎತ್ತಿ ಕಿಟಕಿಯಾಚೆ ಬಿಸಾಡಿಬಿಟ್ಟ. ಅರಿಸಿನ, ಕುಂಕುಮ, ವಿಭೂತಿ, ಊದುಬತ್ತಿಗಳೆಲ್ಲಾ ಅವರ ದೈವಭಕ್ತಿಯ ಪ್ರತೀಕವಾಗಿದ್ದನ್ನು ನೋಡುತ್ತಿದ್ದ ನಮಗೆ ಕೆಲವೇ ಕ್ಷಣಗಳಲ್ಲಿ ಪಾಪ ಊದುಬತ್ತಿಗಳು ಮಾತ್ರ ಕಂಡಕ್ಟರನ ಕೋಪಕ್ಕೆ ಬಲಿಯಾಗಿದ್ದು ನೋಡಿ ನಮಗೆ ನಗುತಡೆಯಲಾಗಲಿಲ್ಲ.

       ರಾತ್ರಿ ಬೆಂಗಳೂರಿನಿಂದ ಹೊರಟು ಮುಂಜಾನೆ ಪಾಂಡಿಚೇರಿ ಬಸ್ ನಿಲ್ದಾಣದಲ್ಲಿ ಇಳಿದು,  ನಾವು ಉಳಿದುಕೊಳ್ಳುವ ಅರಬಿಂದೋ ಆಶ್ರಮದ "ಕರ್ನಾಟಕ ನಿಲಯಂ" ಅತಿಥಿಗೃಹಕ್ಕೆ ಹೋಗಲು ಅಲ್ಲಿನ ಸಿಟಿ ಬಸ್‌ನಲ್ಲಿ ಕುಳಿತಾಗ ಇಂಥ ಸನ್ನಿವೇಶದ ಮೂಲಕ ನಮ್ಮ ಪಾಂಡಿಚೇರಿ ಪ್ರವಾಸ ಶುರುವಾಯ್ತು.

          ಕೇವಲ ಐದೇ ನಿಮಿಷದಲ್ಲಿ ಸರ್ಕಾರಿ ಆಸ್ಪತ್ರೆಯ ಬಳಿ ಬಸ್ ನಮ್ಮಿಬ್ಬರನ್ನು ಇಳಿಸಿ ಹೊರಟುಹೋಯ್ತು.  ಹೊರಗೆ ಬಂದು ನೋಡಿದರೆ ಬೇರೆ ಜಾಗದಲ್ಲಿ ಇಳಿದುಬಿಟ್ಟಿದ್ದೆವು.  ಕೊನೆಗೆ ಹತ್ತಾರು ಜನರನ್ನು ಕೇಳಿದರೂ  ಯಾರೂ ಕೂಡ ಸರಿಯಾಗಿ ನಾವು ತಲುಪಬೇಕಾದ ವಿಳಾಸವನ್ನು ಹೇಳಲಿಲ್ಲ.  ನಮ್ಮ ಪರದಾಟವನ್ನು ನೋಡಿ ಅಲ್ಲಿಯೇ ವಾಕಿಂಗ್ ಮಾಡುತ್ತಿದ್ದ ಒಬ್ಬ ಹಿರಿಯ ವ್ಯಕ್ತಿ, ಆತ ಆಶ್ರಮಕ್ಕೆ ಸಂಭಂದ ಪಟ್ಟವರಿರಬೇಕು ನಮಗೆ ಸರಿಯಾಗಿ ವಿಳಾಸ ಹೇಳಿ ಅರ್ಧ ಕಿಲೋಮೀಟರ್ ಆಗುತ್ತದೆ ನಡೆದು ಹೋಗಬಹುದು ಅಂದರು.  ನಾವು ಬೆಳಿಗ್ಗೆ ಆರುವರೆಯ ಒಳಗೆ ಅಲ್ಲಿಗೆ ತಲುಪಬೇಕಾದ್ದರಿಂದ ನಡೆಯಲು ಸಾಧ್ಯವಿಲ್ಲವೆಂದುಕೊಳ್ಳುತ್ತಿರುವಾಗ ಅಲ್ಲೊಬ್ಬ ಸೈಕಲ್ ರಿಕ್ಷಾದವನು ಬಂದ. ಅವನಿಗೆ ಆ ಹಿರಿಯವ್ಯಕ್ತಿಯೇ ವಿಳಾಸವನ್ನು ಹೇಳಿದಾಗ ಆತ ಇಪ್ಪತ್ತು ರೂಪಾಯಿ ಅಂದ.  "ಓಹ್! ಗ್ರೇಟ್ ಇಷ್ಟು ಕಡಿಮೆ ಆತ ಹೇಳಿರುವುದು ಇದೇ ಮೊದಲು ಹೋಗಿಬಿಡಿ" ಅಂತ ನಮಗೆ ಕಿವಿಮಾತು ಹೇಳಿದರು.  ಮೊದಲ ಬಾರಿಗೆ ನಾವು ನಮ್ಮ ಲಗ್ಗೇಜ್ ಹಾಕಿ ಸೈಕಲ್ ರಿಕ್ಷದಲ್ಲಿ ಕುಳಿತಿದ್ದೆವು.


                ನಾನು ಮೈಸೂರಿನಲ್ಲಿ ಸೈಕಲ್ ರಿಕ್ಷಾದವರನ್ನು ನೋಡಿದ್ದೇನೆ. ಮತ್ತು ಸಿನಿಮಾಗಳಲ್ಲೂ ನೋಡಿದ್ದೇನೆ. ಹೊರಗಿನಿಂದ ನೋಡುವುದು ಬೇರೆ, ಅದರಲ್ಲಿ ಕುಳಿತರೆ ಆಗುವ ಅನುಭವೇ ಬೇರೆ.  ನಾವು ಮತ್ತು ನಮ್ಮ ಲಗ್ಗೇಜ್ ಸೇರಿದಂತೆ ನೂರೈವತ್ತು ಕೇಜಿ ತೂಕವನ್ನು ಎಳೆದುಕೊಂಡು ಹೋಗಲು ಆತ ಸೈಕಲ್ ತುಳಿಯಲು ಪಡುತ್ತಿದ್ದ ಕಷ್ಟವನ್ನು ನೋಡಿದಾಗ ಮರುಕವುಂಟಾಯಿತು.  ಸುಮಾರು ನಲವತೈದು ದಾಟಿರಬೇಕು ಆತನಿಗೆ. ಸೈಕಲ್ ಸೀಟು ಸರಿಯಾಗಿ ಅರ್ಧಕ್ಕೆ ತುಂಡಾಗಿ ಅರ್ಧಮಾತ್ರ ಉಳಿದ್ದಿದ್ದರಿಂದ ಅವನು ಸೀಟಿನ ಮೇಲೆ ಕೂರದೆ ಬಾರ್ ತುಳಿಯುತ್ತಿದ್ದ.  "ಸೈಕಲ್ ಸೀಟ್ ಬದಲಾಯಿಸಬಾರದೇನಪ್ಪ" ಅಂತ ಅವನಿಗೆ ನನ್ನ ಅರೆ ತಮಿಳಿನಲ್ಲಿ ಕೇಳಿದಾಗ "ಬದಲಾಯಿಸಬೇಕು ಸರ್" ಅಂದ. ನೇರ ರಸ್ತೆಯಾಗಿದ್ದರಿಂದ ಐದೇ ನಿಮಿಷದಲ್ಲಿ ನಮ್ನನ್ನು ಗೆಸ್ಟ್ ಹೌಸ್ ತಲುಪಿಸಿದ. "ಸರ್ ಬೆಳಿಗ್ಗೆ ಬೋಣಿ ಐದು ರೂಪಾಯಿ ಸೇರಿಸಿಕೊಡಿ ಸರ್ ಕಾಫಿ ಕುಡಿಯುತ್ತೇನೆ"   ಅಂದಾಗ ನಮಗೆ ಇಲ್ಲವೆನ್ನಲಾಗಲಿಲ್ಲ.   ಆತನ ಮನೆಯಲ್ಲಿ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮಕ್ಕಳನ್ನು ಓದಿಸುತ್ತಿದ್ದೇನೆ ಅಂತ ಹೇಳುವಾಗ ಅವನ ಬಗ್ಗೆ ಹೆಮ್ಮೆ ಉಂಟಾಗಿತ್ತು.

            ಗೆಸ್ಟ್ ಹೌಸ್ ಒಳಗೆ ಹೋಗುತ್ತಿದಂತೆ ಕಪ್ಪು ಕನ್ನಡಕ ಧರಿಸಿದ್ದ ಹಿರಿಯಜ್ಜ ಎದುರಾದರು. ನನ್ನ ಹೆಸರನ್ನು ಹೇಳಿದೆ. "ಓಹ್!  ಬೆಂಗಳೂರಿಂದ ಫೋನ್ ಮಾಡಿದವರು  ನೀವೇ ಅಲ್ವಾ ಬನ್ನಿ ಬನ್ನಿ" ಅಂತ ಸ್ವಾಗತ ಕೋಣೆಯಲ್ಲಿ ಕೂರಿಸಿ ಡೈರಿಯಲ್ಲಿ ವಿಳಾಸ ಬರೆಸಿಕೊಂಡು ರೂಮು ಕೊಟ್ಟರು. ಪಾಂಡಿಚೇರಿಯಲ್ಲಿ ಕನ್ನಡ ಮಾತಾಡುವವರು ಸಿಕ್ಕರಲ್ಲ ಅಂತ ಖುಷಿಯಾಯ್ತು. ಅವರ ಹೆಸರು ಮಲ್ಲಿಕಾರ್ಜುನಪ್ಪ. ಹುಬ್ಬಳ್ಳಿಯವರಿರಬೇಕು. ಪ್ರೀತಿಯಿಂದ ಮಾತಾಡಿಸುತ್ತಾರೆ.  ಅರ್ಧಗಂಟೆಯೊಳಗೆ ನಾನು ಮತ್ತು ಹೇಮಾಶ್ರೀ ಸಿದ್ದರಾಗಿ ಹೊರಬಂದಾಗ ನಮಗೆ ಎರಡು ಊಟದ ಕೂಪನ್ ಕೊಟ್ಟು ನಲವತ್ತು ರೂಪಾಯಿಗಳನ್ನು ಪಡೆದುಕೊಂಡರು.  ಪಾಂಡಿಚೇರಿಗೆ ಹೋದವರು ಅರಬಿಂದೋ ಆಶ್ರಮದವರ ಗೆಸ್ಟ್ ಹೌಸುಗಳಲ್ಲಿ ಉಳಿದುಕೊಂಡು ಕೇವಲ ಇಪ್ಪತ್ತು ರೂಪಾಯಿ ಕೊಟ್ಟು ಈ ಕೂಪನ್ನುಗಳನ್ನು ಪಡೆದುಕೊಂಡರೆ ಆಶ್ರಮದ ಕ್ಯಾಂಟೀನಿನಲ್ಲಿ ಮೂರು ಹೊತ್ತು ಊಟ ತಿಂಡಿ ಕೊಡುತ್ತಾರೆ.  "ಇನ್ನು ಹದಿನೈದು ನಿಮಿಷವಿದೆ ಬೇಗ ಹೋಗಿ ಇಲ್ಲವಾದಲ್ಲಿ ಬೆಳಗಿನ ತಿಂಡಿ ಸಿಗುವುದಿಲ್ಲ"  ಅಂದು ಕ್ಯಾಂಟೀನ್ ದಾರಿಯನ್ನು ತೋರಿಸಿದರು.  ನಮಗೆ ಬೆಂಗಳೂರಿನಲ್ಲಿ ರಾತ್ರಿ ವಾಕಿಂಗ್ ಅಬ್ಯಾಸವಿತ್ತಲ್ಲ ಹತ್ತೇ ನಿಮಿಷದಲ್ಲೇ ಅಲ್ಲಿಗೆ ತಲುಪಿ ನೋಡಿದರೆ ಆಶ್ಚರ್ಯ!  ಏಕೆಂದರೆ ನಾವು ಈ ಮೊದಲು ಬಸ್ಸು ಇಳಿದು ವಿಳಾಸವನ್ನು ಕೇಳಿ  ಕೊನೆಗೆ ಸೈಕಲ್ ರಿಕ್ಷಾದಲ್ಲಿ ಬಂದಿದ್ದು ಇಲ್ಲಿಂದಲೇ ಅಂತ!   ಕ್ಯಾಂಟೀನ್ ಅಂದುಕೊಂಡಿದ್ದ ನಮಗೆ ಅಲ್ಲಿನ ವಾತಾವರಣವನ್ನು ನೋಡಿ ಮತ್ತಷ್ಟು ಅಚ್ಚರಿಯುಂಟಾಯಿತು. ಏನಿಲ್ಲವೆಂದರೂ ಪ್ರತಿನಿತ್ಯ ಸಾವಿರಾರು ಜನರು ಅಲ್ಲಿ ಊಟ ತಿಂಡಿ ಮಾಡುತ್ತಾರೆ. ಎಲ್ಲಿಯೂ ಸದ್ದು ಗದ್ದಲವಿಲ್ಲ, ಗಲಾಟೆಯಿಲ್ಲ. ಅಂತ ವಾತಾವರಣದಲ್ಲಿ ತಟ್ಟೇ ಲೋಟ ಚಮಚಗಳ ಸದ್ದು ಬಿಟ್ಟರೆ ಮತ್ತೆ ಇನ್ಯಾರು ಮಾತು ಕೇಳಿಸುವುದಿಲ್ಲ.  ಮತ್ತೆ ಯಾವುದೇ ಜಾತಿ ಬೇಧ ಮತ ಪಂಥ ಇತ್ಯಾದಿಗಳು ಇಲ್ಲದೇ ಎಲ್ಲರೂ ಸಮನಾಗಿ ಸರತಿಯಲ್ಲಿ ನಿಂತು ತಮ್ಮ ಊಟವನ್ನು ಪಡೆದುಕೊಳ್ಳಬೇಕು.  ವಿದೇಶಿಯರು ಸಾಕಷ್ಟು ಜನರಿದ್ದರು.  ಬೆಳಿಗ್ಗೆ ನಮಗೆ ಫ್ರೆಂಚ್ ಶೈಲಿಯ ತಿಂಡಿ ದೊರೆಯಿತು. ಎರಡು ದೊಡ್ಡ ಬ್ರೆಡ್ ತುಂಡು ದೊಡ್ಡ ಬಟ್ಟಲಿನಲ್ಲಿ ಹಾಲು ಮತ್ತು ಎರಡು ಬಾಳೆಹಣ್ಣು.  ಸ್ವಲ್ಪ ಹೊತ್ತಿಗೆ ನಮಗೆ ಬ್ರೆಡ್ಡು ತಿನ್ನುವುದು ಕಷ್ಟವೆನಿಸಿತ್ತು. ಆದರೆ ತಟ್ಟೆಯಲ್ಲಿ ಬಿಡಬಾರದೆಂದು ಮುಗಿಸಿ ಹಾಲು ಕುಡಿದು ಬಾಳೆಹಣ್ಣು ತಿಂದಾಗ ಹೊಟ್ಟೆ ಪುಲ್ ಆಗಿಬಿಟ್ಟಿತ್ತು.  "ಕಾಯಿಲೆ ಬಂದವರು ಮಾತ್ರ ಹಾಲು ಬ್ರೆಡ್ ತಿನ್ನೋದು ಅಲ್ವೇನ್ರೀ, ನಾವ್ಯಾಕೆ ಇದನ್ನು ತಿನ್ನಬೇಕು ನನ್ನ ಕೈಲಿ ಆಗೊಲ್ಲಪ್ಪ"   ಹೇಮಾಶ್ರಿ ಅಂದಾಗ ಕಷ್ಟಪಟ್ಟು ತಿನ್ನುತ್ತಿದ್ದ  ನನಗೆ ನಗು ಬಂತು.  

      ಹೇಗೋ ಬೆಳಗಿನ ತಿಂಡಿಯನ್ನು ಮುಗಿಸಿ ಹೊರಬಂದು ಅಲ್ಲಿರುವ ಕರ್ನಾಟಕ ಬ್ಯಾಂಕ್ ವಿಳಾಸವನ್ನು ಹುಡುಕಿಕೊಂಡು ಹೊರಟೆವು. ಅದು  ಪಕ್ಕದ ರೋಡಿನಲ್ಲೇ ಇತ್ತು. ಅದರ ಎದುರಿಗೆ ಬೈಕು ಮತ್ತು ಸ್ಕೂಟರ್ ಮೊಪೈಡುಗಳನ್ನು ದಿನದ ಮಟ್ಟಿಗೆ ಬಾಡಿಗೆಗೆ ಕೊಡುತ್ತಾರೆ. ನಾವು ಹೋಗಿ ವಿಚಾರಿಸಿ ನಮ್ಮ ಕ್ಯಾಮೆರ ಬ್ಯಾಗನ್ನು ಇಟ್ಟುಕೊಳ್ಳಲು ಅನುಕೂಲವಾಗುವಂತೆ ಆಕ್ಟೀವ್ ಹೋಂಡ ಪಡೆದುಕೊಂಡೆವು.  ಒಂದು ದಿನಕ್ಕೆ ಬಾಡಿಗೆ ೨೦೦ ರೂಪಾಯಿಗಳು. ನಮ್ಮಿಂದ ಒರಜಿನಲ್ ಡ್ರೈವಿಂಗ್ ಪಡೆದುಕೊಂಡು ಸಾವಿರ ರೂಪಾಯಿ ಡೆಪಾಸಿಟ್ ಮಾಡಿಸಿಕೊಂಡು ನಮಗೆ ಬೇಕಾದ ಗಾಡಿಯನ್ನು ಕೊಡುತ್ತಾರೆ. ವಾಪಸ್ಸು ಬಿಟ್ಟಾಗ ನಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ಉಳಿದಹಣವನ್ನು ವಾಪಸ್ಸು ಕೊಡುತ್ತಾರೆ.  ಅಲ್ಲಿಂದ ನೇರವಾಗಿ ಮೂರೇ ನಿಮಿಷಕ್ಕೆ ನಮ್ಮ ಗೆಸ್ಟ್ ಹೌಸಿಗೆ ವಾಪಸ್ ಬಂದೆವು. 

            ಪಾಂಡಿಚೇರಿಯಲ್ಲಿ ನಮ್ಮ ಪ್ರವಾಸ ಈ ರೀತಿ ಕರಾರುವಕ್ಕಾಗಿದೆಯಲ್ಲಾ ಅಂತ ನಿಮಗೆ ಅನ್ನಿಸಬಹುದು. ಅದಕ್ಕೆ ಕಾರಣ  ಕುಣಿಗಲ್ಲಿನಲ್ಲಿರುವ  ಫೋಟೊಗ್ರಫಿ ಗೆಳೆಯ ಸುಧೀಂದ್ರ.  ಆತ ಆಗಾಗ ಪಾಂಡಿಚೇರಿಗೆ ಹೋಗುತ್ತಿರುತ್ತಾನೆ.  ಅವನೇ ಪಾಂಡಿಚೇರಿಯಲ್ಲಿ ಬಾಡಿಗೆ ಬೈಕುಗಳು, ರಸ್ತೆ, ಆಶ್ರಮದ ಗೆಸ್ಟ್ ಹೌಸುಗಳು, ಅದರಲ್ಲೂ ಕರ್ನಾಟಕ ನಿಲಯಂ ಗೆಸ್ಟ್ ಹೌಸು, ಆಶ್ರಮದ ಊಟದ ವಿಚಾರ, ಅಲ್ಲಿ ನೋಡುವಂತ ಸ್ಥಳಗಳು, ಕಡಿಮೆ ಟಿಕೆಟ್ಟಿನ ಬಸ್ಸುಗಳು,  ದುಬಾರಿ ಆಟೋಗಳು, ಇನ್ನೂ ಅನೇಕ ವಿಚಾರಗಳನ್ನು ನಮಗೆ ಮಾಹಿತಿ ಸಮೇತ ತಿಳಿಸಿದ್ದರಿಂದ ಎಲ್ಲವೂ ನಮ್ಮ ಪ್ಲಾನಿನಂತೆ ಆಗಿತ್ತು.

           ಇಡೀ ಪಾಂಡಿಚೇರಿಯಲ್ಲಿ ಕನ್ನಡ ಅಕ್ಷರ ಕಾಣುವುದು ಕರ್ನಾಟಕ ನಿಲಯಂ ಅತಿಥಿ ಗೃಹದ ಬೋರ್ಡು ಮತ್ತು ಕನ್ನಡ ಮಾತಾಡುವವರು ಅಲ್ಲಿರುವ ಮಲ್ಲಿಕಾರ್ಜುನಪ್ಪ ಮತ್ತು ಅವರ ಕುಟುಂಬ. ಅವರ ಕುಟುಂಬ ಅಲ್ಲಿಯೇ ವಾಸವಾಗಿದ್ದಾರೆ. ಅಂದಹಾಗೆ  ಈ ಕರ್ನಾಟಕ ನಿಲಯಂ ಅತಿಥಿಗೃಹವೂ ಸೇರಿದಂತೆ ಎಲ್ಲಾ ಆಶ್ರಮದ ಗೆಸ್ಟ್ ಹೌಸುಗಳಲ್ಲಿಯೂ ಒಂದು ದಿನಕ್ಕೆ ಕೇವಲ  ೧೫೦ ರಿಂದ ೧೭೫ ರೂಪಾಯಿಗಳು ಮಾತ್ರ.


        ಆಕ್ಟೀವ್ ಹೊಂಡದಲ್ಲಿ ಪಾಂಡಿಚೇರಿ ಸುತ್ತಾಡಲು ಹೊರಟಾಗ ಬೆಳಿಗ್ಗೆ ಒಂಬತ್ತು ಗಂಟೆ.  ಆಷ್ಟರಲ್ಲಾಗಲೇ ಹೊರಗಿನ ವಾತಾವರಣದ ಬಿಸಿಗೆ ಬೆವರು ಸುರಿಯಲಾರಂಬಿಸಿತ್ತು.  ಅಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಸೆಕೆ.  ಪ್ಯಾನ್ ಇಲ್ಲದೇ ಇರುವುದಕ್ಕೆ ಆಗುವುದಿಲ್ಲ. ಹೊರಗೆ ಸುತ್ತಾಡಬೇಕೆಂದರೆ ಟೋಪಿ ಇರಲೇಬೇಕು ನಾವು ಮೊದಲೇ ತೆಗೆದುಕೊಂಡು ಹೋಗಿದ್ದರಿಂದ ಟೋಪಿಗಳನ್ನು ಹಾಕಿಕೊಂಡು ಹೊರಟೆವು.  ಅಲ್ಲಿರುವ ಎರಡು ಕಿಲೋ ಮೀಟರ್ ಉದ್ದದ ಬೀಚ್ ರಸ್ತೆಯಲ್ಲಿ ಬೈಕಿನಲ್ಲಿ ಸಾಗುತ್ತಿದ್ದರೆ ಯಾವುದೋ ವಿದೇಶದಲ್ಲಿ ಇದ್ದಂತೆ ಭಾಷವಾಗುತ್ತದೆ.  
             

ಬಲಭಾಗದಲ್ಲಿ ಬೀಚು ಎಡಭಾಗದಲ್ಲಿ ಹತ್ತಾರು ಪ್ರೆಂಚ್ ಶೈಲಿ ಕಟ್ಟಡಗಳು ಅವುಗಳಲ್ಲಿ ಸರ್ಕಾರಿ ಆಡಳಿತ ಕಚೇರಿಗಳು, ಹೋಟೆಲ್ಲುಗಳು.......ಹೀಗೆ ಆ ರಸ್ತೆಯಲ್ಲಿ ಸುತ್ತಾಡುವುದೇ ಬಲು ಸೊಗಸು.  



ಒಂದು ಗಂಟೆ ಸುತ್ತಾಡುವಷ್ಟರಲ್ಲಿ ಬಿಸಿಲಿಗೆ ಸುಸ್ತೋ ಸುಸ್ತು.   ಅಲ್ಲೊಂದು ಕಡೆ ನಮ್ಮ ಬಾಡಿಗೆ ಗಾಡಿಯನ್ನು ಪಾರ್ಕಿಂಗ್ ಮಾಡಿ ಕೈಗಾಡಿಯಲ್ಲಿ ಬರುತ್ತಿದ್ದ ಐಸ್ ಕ್ರೀಮ್ ತಗೊಂಡು ಸವಿಯತೊಡಗಿದೆವು.  ಅರ್ಧ ಐಸ್ ಕ್ರೀಮ್ ತಿಂದಿರಲಿಲ್ಲ. ಅಷ್ಟರಲ್ಲಿ ಅದೆಲ್ಲಿತ್ತೋ ಒಂದು ಕಾಗೆ ಹಾರಿ ಬಂದು ನಾವು ನಿಲ್ಲಿಸಿದ್ದ ಗಾಡಿ ಮಿರರ್ ಮೇಲೆ ಕುಳಿತು ನಮ್ಮನ್ನೇ ನೋಡುತ್ತಿತ್ತು. "ರೀ ಅದಕ್ಕೆ ದಾಹವಾಗಿರಬೇಕು ಸ್ವಲ್ಪ ಐಸ್ ಕ್ರೀಮ್ ಹಾಕೋಣ" ಅಂದಳು.   "ನೀನು ಬೇಕಾದರೆ ಹಾಕು ನಾನು ಹಾಕೊಲ್ಲ"  ಅಂತ ನನ್ನ ಪಾಡಿಗೆ ನಾನು ತಿನ್ನುತ್ತಿದ್ದೆ.  ಅವಳು ಮುಕ್ಕಾಲು ತಿಂದು ಕಾಲುಬಾಗವನ್ನು ಉಳಿಸಿ ಫುಟ್ ಬಾತ್ ಮೇಲೆ ಇಟ್ಟಳು.  ತಕ್ಷಣ  ಕಾಗೆ ಕೆಳಗೆ ಹಾರಿಬಂದು ಉಳಿದ ಐಸ್ ಕ್ರೀಮನ್ನು ಸೊರರ್...ಅಂತ ತನ್ನ ಕೊಕ್ಕಿನಲ್ಲಿ ಸೆಳೆದು ಗಂಟಿಲಿಗಿಳಿಸಿತು.  

                  ಐಸ್‍ಕ್ರೀಮ್ ತಿನ್ನುತ್ತಿರುವ ಪಾಂಡಿಚೇರಿ ಕಾಗೆ 

ಕಾಗೆಗಳು ಐಸ್ ಕ್ರೀಮ್ ತಿನ್ನುವುದಿಲ್ಲವೆಂದುಕೊಂಡಿದ್ದ ನನ್ನ ಊಹೆ ತಪ್ಪು ಮಾಡಿದ ಆ ಕಾಗೆ ಐಸ್ ಕ್ರಿಮ್ ತಿನ್ನುವಾಗ ಫೋಟೊ ತೆಗೆದೆ.  ಮತ್ತೆ ನಾನು ಕೂಡ ಸ್ವಲ್ಪ ಐಸ್ ಕ್ರಿಮ್ ಉಳಿಸಿ ಕಾಗೆಗೆ ಹಾಕಿದಾಗ ಅದನ್ನು ತಿಂದು ಮುಗಿಸಿ ಒಮ್ಮೆ ಕಾವ್ ಅಂದು ಹಾರಿಹೋಯಿತು.  ಬಹುಷಃ ಅದು ನಮಗೆ ಥ್ಯಾಂಕ್ಸ್ ಹೇಳಿರಬೇಕು ಅಂದುಕೊಂಡು ಅಲ್ಲಿಂದ ಮುಂದೆ ಹೊರಟೆವು. 


             ಆರಬಿಂದೋ ಆಶ್ರಮದ ದೊಡ್ಡ ಊಟದ ಕಟ್ಟಡ


    ಪಾಂಡಿಚೇರಿ ರಸ್ತೆಗಳು ಹೇಗೆ ಹೋದರು ನೇರವಾಗಿಯೆ ಇವೆ. ಮತ್ತೆ ಬೆಂಗಳೂರಿನಂತೆ ಏರುತಗ್ಗು ಮತ್ತು ಹಳ್ಳ ದಿಣ್ಣೆಗಳಿಲ್ಲ.   ನಿಮ್ಮಲ್ಲಿ ಒಂದು ಸೈಕಲ್ ಇದ್ದರೆ ಸಾಕು ಇಡೀ ಪಾಂಡಿಚೇರಿಯನ್ನು ಅದರಲ್ಲಿಯೇ ಸುತ್ತಾಡಬಹುದು. ನಮಗೂ ಸೈಕಲ್ ಇಷ್ಟವಾದರೂ ನಮ್ಮ ತೂಕದ ಕ್ಯಾಮೆರ ಲೆನ್ಸ್ ಇರುವ ಬ್ಯಾಗನ್ನು ಸೈಕಲ್ಲಲ್ಲಿ ಹಾಕಿಕೊಂಡು ಸೈಕಲ್ ತುಳಿಯುವುದು ಅಷ್ಟು ಒಳ್ಳೆಯ ಐಡಿಯವಲ್ಲ ಅಲ್ಲ ಅಂತ ನಾವು ಸ್ಕೂಟರ್ ತೆಗೆದುಕೊಂಡಿದ್ದೆವು.   ಆದರೆ ವಿದೇಶಿ ಪ್ರವಾಸಿಗಳು, ಇಲ್ಲೇ ನೆಲೆಸಿರುವ ಪ್ರೆಂಚ್ ಪ್ರಜೆಗಳು, ಮತ್ತೆ ಪಾಂಡಿಚೇರಿಯ ಪ್ರಜೆಗಳು ಸೈಕಲ್ಲುಗಳಲ್ಲಿ ಆರಾಮವಾಗಿ ಸುತ್ತಾಡುತ್ತಾರೆ ಮತ್ತು ತಮ್ಮ ನಿತ್ಯ ಕೆಲಸಗಳನ್ನು ಸೈಕಲ್ಲುಗಳಲ್ಲೇ ಓಡಾಡುತ್ತಾ ಮಾಡುತ್ತಾರೆ.



       ಸೂರ್ಯ ತಲೆ ಮೇಲೆ ಸುಡುತ್ತಿದ್ದರೂ ಪ್ರೆಂಚ್ ಕಾಲೋನಿಯಲ್ಲಿದ್ದ  ಪ್ರೆಂಚರು ನಿರ್ಮಿಸಿದ ರಸ್ತೆಗಳಲ್ಲಿ ಓಡಾಡುವಷ್ಟರಲ್ಲಿ ಆಗಲೇ ಸಮಯ ಹನ್ನೆರಡುಗಂಟೆ.  ಆಶ್ರಮದಲ್ಲಿ ಊಟದ ಸಮಯ.  ಐದೇ ನಿಮಿಷಕ್ಕೆ ಅಲ್ಲಿಗೆ ತಲುಪಿದೆವು.  ಟೋಕನ್ ತೋರಿಸಿದರೆ ಒಂದು ಪಂಚ್ ಮಾಡಿ ಒಳಗೆ ಬಿಡುತ್ತಾರೆ.  ನಮಗೆ ಬೇಕಾದಷ್ಟು ಅನ್ನ ಸಾರು, ಮತ್ತು ಒಂದು ದೊಡ್ಡ ಬೌಲಿನಲ್ಲಿ ಗಟ್ಟಿ ಮೊಸರು ಕೊಡುತ್ತಾರೆ.  ಜೊತೆಗೆ ಬಾಳೆಹಣ್ಣು ಅಥವ ಇನ್ಯಾವುದೇ ಹಣ್ಣನ್ನು ಕೊಡುತ್ತಾರೆ.  ಸ್ವಚ್ಚವಾದ ಮತ್ತು ತಂಪಾದ ಅಲ್ಲಿನ ವಾತಾವರಣದಲ್ಲಿ ನೆಲದ ಮೇಲೋ ಅಥವ ಟೇಬಲ್ಲಿನ ಮೇಲೋ ಕುಳಿತು ಊಟ ಮಾಡುವಾಗ ಆಗುವ ನೆಮ್ಮದಿ ಮತ್ತು ತೃಪ್ತಿ ನಿಮಗೆ ಯಾವ ದೊಡ್ಡ ಹೋಟಲ್ಲಿನಲ್ಲಿ ತಿಂದರು ಸಿಗದು. ರಾತ್ರಿಗೂ ಹೀಗೆ  ಅನ್ನ ಬೇರೆ ರೀತಿಯಾದ ಸಾರು,  ಗಟ್ಟಿ ಮೊಸರು, ಹಣ್ಣು ಹಾಗೂ ಯಾವುದಾದರೂ ರೀತಿಯ ಪಾಯಸವನ್ನು  ಕೊಡುತ್ತಾರೆ. ಇಷ್ಟಕ್ಕೆಲ್ಲ ನಮಗೆ ಇಪ್ಪತ್ತು ರೂಪಾಯಿಯ ಕೂಪನ್ ಸಾಕು.
                   
         ಅಲ್ಲಿಂದ ಮುಂದೆ ಆರೋವಿಲ್ಲಗೇ ಹೋಗಬೇಕಿತ್ತು.  ರಸ್ತೆಯಲ್ಲಿ ಸಾಗುತ್ತಾ ಹತ್ತಾರು ಜನರನ್ನು ಕೇಳಿದೆವು. ಯಾರೂ ಕೂಡ ಸರಿಯಾಗಿ ವಿಳಾಸವನ್ನು ಹೇಳಲಿಲ್ಲ.  ಏನಪ್ಪ ಇದು ವಿಶ್ವಖ್ಯಾತಿ ಆರೋವಿಲ್ಲ ಬಗ್ಗೆ ಇಲ್ಲಿನ ಜನರಿಗೆ ಗೊತ್ತಿಲ್ಲವಲ್ಲ?     "ಹೇಮ ಇವರೆಲ್ಲಾ ಇಲ್ಲೇ ಹುಟ್ಟಿ ಬೆಳೆದವರು. ಇವರಿಗೆ ಪಕ್ಕದ ಮನೆಯವನ ಹೆಸರು ಗೊತ್ತಿರುವುದಿಲ್ಲ.  ಅದನ್ನು ತಿಳಿದುಕೊಂಡು ಏನಾಗಬೇಕಿದೆ ಎನ್ನುವ ದೋರಣೆ ಇವರದು. ಅದಕ್ಕೆ  ಇವರಿಗೆ ಏನು ಗೊತ್ತಿರುವುದಿಲ್ಲ ಒಂಥರ ಮೂಲನಿವಾಸಿಗಳು. ಬಾವಿಯಲ್ಲಿನ ಕಪ್ಪೆಗಳ ಹಾಗೆ. ನಾವು ಬೇರೆಯವರನ್ನು ಕೇಳುವುದು ಒಳ್ಳೆಯದು" ಅಂದಾಗ,   ಮೂಲದಲ್ಲಿಯಾದರೂ ತಿಳಿದುಕೊಳ್ಳಿ ಅಥವ ವಿದೇಶದಲ್ಲಿಯಾದರೂ ತಿಳಿದುಕೊಳ್ಳಿ, ಏನೋ ಒಂದು ಮಾಡಿ. ಈ ಬಿಸಿಲು ತಡೆಯುವುದಕ್ಕಾಗುವುದಿಲ್ಲ" ಎಂದಳು.  ಸೈಕಲ್ಲಿನಲ್ಲಿ ಹೋಗುತ್ತಿದ್ದ ಒಬ್ಬ ವಿದೇಶಿ ಹುಡುಗಿಯನ್ನು ಕೇಳಿದೆ. ಅವಳು ನಾವು ಹೋಗಬೇಕಾದ ರಸ್ತೆ ಅಲ್ಲಿಂದ ಎಷ್ಟು ಕಿಲೋಮೀಟರ್ ಸಾಗಬೇಕು ಮತ್ತು ಅಲ್ಲಿ ಎಡಭಾಗಕ್ಕೆ ತಿರುಗಿ ಎಷ್ಟು ಕಿಲೋಮೀಟರ್ ಹೋಗಬೇಕು ಎಲ್ಲವನ್ನು ವಿವರವಾಗಿ ಹೇಳಿದಳು. "ನೋಡಿದ್ಯಾ ಈ ಪ್ರೆಂಚ್ ಹುಡುಗಿ ಎಷ್ಟು ಕರೆಕ್ಟ್ ಆಗಿ ಹೇಳಿದಳು. ಅವಳು ಇಲ್ಲಿ ಬದುಕುವ ಅವಶ್ಯಕತೆಯಿರುವುದರಿಂದ ಪ್ರತಿಯೊಂದನ್ನು ತಿಳಿದುಕೊಂಡಿರುತ್ತಾಳೆ. ಅವಳಿಗೆ ಗೊತ್ತಿರುವಷ್ಟು ಇಲ್ಲಿನವರಿಗೆ ಗೊತ್ತಿರುವುದಿಲ್ಲ ನೋಡು,  ಈಗ ಹೋಗೋಣ" ಅಂದುಕೊಂಡು ಅಲ್ಲಿಂದ ಹೊರಟೆವು. 

       ಪಾಂಡಿಚೇರಿ ನಗರದಿಂದ ಹದಿನೈದು ಕಿಲೋಮೀಟರ್ ದೂರವಿರುವ ಆರೋವಿಲ್ಲವನ್ನು ಎರಡು ಗಂಟೆಯ ಹೊತ್ತಿಗೆ ತಲುಪಿದೆವು.  ಮುಖ್ಯರಸ್ತೆಯಿಂದ ಆಡ್ಡರಸ್ತೆಯಲ್ಲಿ ಮೂರು ಕಿಲೋಮೀಟರ್ ಚಲಿಸಿದರೆ ಅಲ್ಲಿಂದ ಮುಂದಕ್ಕೆ ನಿಮಗೆ ಆರೋವಿಲ್ಲ ತಲುಪುವವರೆಗೂ ಮಲೆನಾಡಿನ ನೆನಪಾಗುತ್ತದೆ. ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಕಿಲೋಮೀಟರುಗಳಷ್ಟು ಉದ್ದಕ್ಕೆ ದಟ್ಟಮರಗಳು ನಮಗೆ ದೊಡ್ಡ ಚತ್ರಿಗಳಂತೆ ಹಬ್ಬಿಕೊಂಡಿರುವುದರಿಂದ ಪಾಂಡಿಚೇರಿಯಲ್ಲಾದ ಸೆಕೆ ಇಲ್ಲಾಗುವುದಿಲ್ಲ.  ಬೈಕಿನಲ್ಲಿ ಆ ರಸ್ತೆಯಲ್ಲಿ ಸಾಗುವುದು ನಿಜಕ್ಕೂ ವಿಭಿನ್ನ ಮತ್ತು ಮರೆಯಲಾಗದ ಅನುಭವ.  ಒಳಗೆ ಹೋದಮೇಲೆ ಅಲ್ಲಿ ಅರೋವಿಲ್ಲ ಬಗ್ಗೆ ವಿಡಿಯೋ ನೋಡಿದೆವು.  ಅರೋವಿಲ್ಲಗೆ ಸೇರಿದಂತೆ ಐದಾರು ಅಂಗಡಿಗಳಿವೆ. ಆದ್ರೆ ಅವುಗಳಲ್ಲಿ ವಸ್ತುಗಳೆಲ್ಲಾ ದುಬಾರಿ.  ಸಂದರ್ಶನ ಕೇಂದ್ರದಿಂದ ಒಂದು ಕಿಲೋಮೀಟರ್ ದೂರವಿರುವ ಮಾತೃಮಂದಿರವನ್ನು ನಾವೆಲ್ಲಾ ನೋಡಲೇ ಬೇಕು.  ಅದೊಂದು ಅದ್ಬುತವಾದ ಸ್ಥಳ.

ಆರೋವಿಲ್ಲದ ಮಾತೃಮಂದಿರ

         ಮಾತೃಮಂದಿರದಲ್ಲಿ ಒಳಗೆ ದ್ಯಾನ ಮಾಡುವ ಅವಕಾಶ ಸಿಕ್ಕರೆ ಪಡೆದುಕೊಂಡವರು ಧನ್ಯ.  ನಿತ್ಯ ಬೆಳಗಿನ ಒಂಬತ್ತು ಗಂಟೆಯಿಂದ ಹತ್ತು ಗಂಟೆಯವರೆಗೆ ಕೇವಲ ಮುವತ್ತು-ಮುವತ್ತೈದು ಜನರಿಗೆ ಮಾತ್ರ ದ್ಯಾನ ಮಾಡಲು ಅವಕಾಶ. ಅದಕ್ಕಾಗಿ ಒಂದು ವಾರ ಮೊದಲೇ ಫೋನ್ ಅಥವ ಮೇಲ್ ಮಾಡಿ ಬುಕ್ ಮಾಡಿಕೊಳ್ಳಬೇಕು.  ನಮ್ಮ ಪಾಂಡಿಚೇರಿ ಪ್ರವಾಸ ಮೂರು ದಿನದಲ್ಲಿ ತೀರ್ಮಾನವಾಗಿದ್ದರಿಂದ ನಮಗೆ ಮಾತೃಮಂದಿರದ ಒಳಗೆ ಹೋಗುವುದಕ್ಕೆ ಬುಕ್ ಮಾಡಲು ಆಗಲಿಲ್ಲ.  ಆದರೂ ಹೊರಗಿನಿಂದಲೇ ನೋಡಿ  ಖುಷಿಪಟ್ಟೆವು.  ಅಲ್ಲಿಂದ ವಾಪಸ್ಸು ಬರುವಾಗ ನಮ್ಮದೇ ಪೋಟೋ ಶೆಷನ್ ಮಾಡಿಕೊಂಡೆವು.  ನಾನು ಹೇಮಾಳ ಫೋಟೊಗಳನ್ನು ಕ್ಲಿಕ್ಕಿಸಿದರೇ ಹೇಮಾ ನನ್ನ ಫೋಟೊಗಳನ್ನು ಕ್ಲಿಕ್ಕಿಸಿದಳು.

      
           
                     

                           
ಮತ್ತೆ ಪೂರ್ತಿ ಆರೋವಿಲ್ಲವನ್ನು ನೋಡಬೇಕಾದರೆ ಅರ್ಧದಿನ ಬೇಕು. ಇಷ್ಟಾದರೂ ಆರೋವಿಲ್ಲದಲ್ಲಿ  ಯಾವುದಕ್ಕೂ ಹಣತೆಗೆದುಕೊಳ್ಳುವುದಿಲ್ಲವೆನ್ನುವುದು ವಿಶೇಷ.  ಆರೋವಿಲ್ಲದ ಸುತ್ತಮುತ್ತ ಹಳ್ಳಿಗಳಲ್ಲಿ ಅನೇಕ ಪ್ರೆಂಚರು ವಾಸವಾಗಿದ್ದಾರೆ. ಅವರು ನಮ್ಮ ಹಳ್ಳಿಗರಂತೆ ಬದುಕುತ್ತಿದ್ದಾರೆ.  ವಾಪಸ್ ಬರುವಾಗ ರಸ್ತೆ ಬದಿಯ ಒಂದು ಮನೆಯ ಮುಂದೆ ಮರಳಿನ ಆಟವಾಡುತ್ತಿದ್ದ ಇಬ್ಬರು ಪ್ರೆಂಚ್ ಮಕ್ಕಳ ಫೋಟೊವನ್ನು ಕ್ಲಿಕ್ಕಿಸಿದ್ದೆ.

        ಮತ್ತೆ ಪಾಂಡಿಚೇರಿಗೆ ವಾಪಸ್ ಬಂದಾಗ ಸಂಜೆ ಆರುಗಂಟೆ. ರೂಮಿಗೆ ಹೋಗಿ ಒಂದು ಗಂಟೆ ವಿರಾಮ.  ನಂತರ ಸಂಜೆ ಸ್ವಲ್ಪ ಪಾಂಡಿಚೇರಿ ರಸ್ತೆಗಳಲ್ಲಿ ಷಾಪಿಂಗ್. ರಾತ್ರಿ ಎಂಟಕ್ಕೆ ಆಶ್ರಮದಲ್ಲಿ ಊಟ. ಹಿಂದಿನ ದಿನ ರಾತ್ರಿ ಪೂರ್ತಿ ನಿದ್ರೆಯಿಲ್ಲದ ಬಸ್ ಪ್ರಯಾಣ ಮತ್ತೆ ಬಿಸಿಲಲ್ಲಿ ಸುತ್ತಾಟ ಇದೆಲ್ಲದರ ಪರಿಣಾಮ  ಮತ್ತೆ ರೂಮಿಗೆ ಬಂದು ಹಾಸಿಗೆ ಮೇಲೆ ಬಿದ್ದುಕೊಂಡವಷ್ಟೆ. ಮರುಕ್ಷಣದಲ್ಲಿ ಗಾಡನಿದ್ರೆ.   ಒಮ್ಮೆಯೂ ಎಚ್ಚರವಾಗದ ಅಪರೂಪದ ನಿದ್ರೆಯಾಗಿತ್ತು.

         ಮರುದಿನ ಬೆಳಿಗ್ಗೆ ಎದ್ದಾಗ ಎಂಟುಗಂಟೆ.  ಆರಾಮವಾಗಿ ಎದ್ದು ಸ್ನಾನ ಮುಗಿಸಿ ನಮ್ಮ ಬಾಡಿಗೆ ಆಕ್ಟೀವ್ ಹೋಂಡದಲ್ಲಿ ಹೊರಟಾಗ ಒಂಬತ್ತು ಗಂಟೆ.   ಹತ್ತಿರದ ಹೋಟಲ್ಲಿನಲ್ಲಿ ತಿಂಡಿ ಮುಗಿಸಿ  ಮೊದಲಿಗೆ ಬೀಚ್ ರಸ್ತೆಯಲ್ಲಿರುವ ಪ್ರವಾಸಿ ಮಾಹಿತಿ ಕೇಂದ್ರಕ್ಕೆ ಹೋಗಿ ನೋಡಬೇಕಾದ ಸ್ಥಳಗಳು ಮತ್ತು ಪಾಂಡಿಚೇರಿ ಮ್ಯಾಪ್  ಪಡೆದುಕೊಂಡೆವು.  ಅದನ್ನು ಅಲ್ಲಿ ಪ್ರವಾಸಿಗಳಿಗಾಗಿ ಉಚಿತವಾಗಿ ಕೊಡುತ್ತಾರೆ.  ಇವತ್ತು ಯಾರನ್ನು ಕೇಳುವುದು ಬೇಡ ಈ ಮ್ಯಾಪ್ ನೋಡಿಕೊಂಡೇ ಇಲ್ಲಿನ ಚರ್ಚು, ದೇವಸ್ಥಾನ ಮತ್ತು ಮಸೀದಿ ಇನ್ನಿತರ ಸ್ಥಳಗಳನ್ನು ನೋಡೋಣ ಅಂತ ತೀರ್ಮಾನಿಸಿಕೊಂಡೆವು. ಆ ಮ್ಯಾಪನ್ನು ಆಕ್ಟೀವ್ ಹೋಂಡದ ತಲೆಯ ಮೇಲೆ ಸಿಕ್ಕಿಸಿಕೊಂಡು ನಮ್ಮ ಎರಡನೆ ದಿನದ ಸವಾರಿ ಪ್ರಾರಂಭವಾಯಿತು.

 ಆಕ್ಟೀವ್ ಹೋಂಡ ತಲೆ ಮೇಲೆ ಪಾಂಡಿಚೇರಿ ರಸ್ತೆಗಳ ನಕ್ಷೆ

ಮತ್ತೆ ಪಾಂಡಿಚೇರಿ ನಗರದಲ್ಲಿ ಚಲಿಸುವ ಬಸ್ಸು ಕಾರು ವ್ಯಾನು ಲಾರಿ, ಜೀಪು, ಬೈಕು ಸ್ಕೂಟರು, ಮೊಪೆಡುಗಳು ಮತ್ತು ಅದನ್ನು ಓಡಿಸುವ ಜನರ ಬಗ್ಗೆ ಹೇಳಲೇ ಬೇಕು.  ನಾವು ಅಲ್ಲಿ ನಮ್ಮ ಸ್ಕೂಟರ್ ಓಡಿಸುವಾಗ ಆಡ್ರೆಸ್ಸುಗಳನ್ನು ಹುಡುಕುತ್ತಾ ರಸ್ತೆಗಳ ಹೆಸರು, ಅಡ್ಡದಾರಿಗಳು, ಉದ್ದದಾರಿಗಳು ಟ್ರಾಫಿಕ್ ಬೋರ್ಡುಗಳು, ಸಿಗ್ನಲ್ಲುಗಳು ಇವುಗಳನ್ನೆಲ್ಲಾ ನೋಡಿಕೊಂಡು ನಿದಾನವಾಗಿ ಓಡಿಸುತ್ತಿದ್ದೆ.  ಆದ್ರೆ ನಮ್ಮ ಹಿಂದೆ ಮುಂದೆ ಚಲಿಸುವ ಬೈಕು ಕಾರು, ಇತ್ಯಾದಿ ವಾಹನಗಳು ಯಾವುದೇ ರೂಲ್ಸು ಫಾಲೋ ಮಾಡೋದಿಲ್ಲ. ಅರ್ದಾತ್ ಅವರು ರೂಲ್ಸ್ ಇರುವುದೇ ಮುರಿಯುವುದಕ್ಕೆ ಅಂತ ತೀರ್ಮಾನಿಸಿಕೊಂಡುಬಿಟ್ಟಿದ್ದಾರೆ.  ನೀವು ಎಡಪಕ್ಕದಲ್ಲಿ ನಿದಾನವಾಗಿ ಹೋಗುತ್ತಿದ್ದರೆ ಜೋರಾಗಿ ನಿಮ್ಮ ಎಡಪಕ್ಕದಲ್ಲಿಯೇ ಜೋರಾಗಿ ನುಗ್ಗಿಹೋಗಿ ನಿಮ್ಮನ್ನು ಗಾಬರಿಗೊಳಿಸುತ್ತಾರೆ.  ಸಡನ್ನಾಗಿ ಎದುರಿಗೆ ಬಂದು ಎಡಕ್ಕೋ ಬಲಕ್ಕೋ ತಿರುಗಿಬಿಡುತ್ತಾರೆ.  ಮತ್ತೆ ಬಸ್ಸು ಕಾರುಗಳಂತ ವೇಗವಾಗಿ ನಮ್ಮ ಎದುರಿಗೆ ತೀರ ಎಡಪಕ್ಕಕ್ಕೆ ಜೋರಾಗಿ ಹಾರ್ನ್ ಮಾಡಿಕೊಂಡು ಬರುವುದನ್ನು ನೋಡಿದರೆ ನಮ್ಮ ಜೀವ ಬಾಯಿಗೆ ಬಂದಂತೆ ಆಗುತ್ತದೆ. ಆದ್ರೆ ಅವರಿಗೆ ಅದರ ಅರಿವೇ ಇರುವುದಿಲ್ಲ.  ಮತ್ತೆ ರಸ್ತೆಯಲ್ಲಿ ಹಾಕಿರುವ "ಹಾರ್ನ್ ಮಾಡಬೇಡಿ", ಬಲ ತಿರುವು ಇಲ್ಲ, ಎಡತಿರುವು ಇಲ್ಲ, ಒನ್ ವೇ, ಇತ್ಯಾದಿ ಬೋರ್ಡುಗಳಿಗೆ ಬೆಲೆಯೇ ಇಲ್ಲ.  ಅದ್ಯಾವುದೂ ಇಲ್ಲ ಯಾವ ರಸ್ತೆಯಲ್ಲಿ ಹೇಗೆ ಬೇಕಾದರೂ ಹೋಗಬಹುದು ಎಂದುಕೊಂಡು ಜೋರಾಗಿ ಹಾರ್ನ್ ಮಾಡುತ್ತಾ ವೇಗವಾಗಿ ಬೈಕುಗಳನ್ನು ಓಡಿಸುತ್ತಾರೆ. ಹೀಗೆ ಸಾವಿರಾರು ಜನರು ಟ್ರ್‍ಆಫಿಕ್ ನಿಯಮಗಳನ್ನು ಮುರಿಯುತ್ತಿದ್ದರೂ ಅಲ್ಲಿನ ಪೋಲಿಸರು ನಾನಿದ್ದ ಎರಡು ದಿನದಲ್ಲಿ ಒಮ್ಮೆಯೂ ಯಾರನ್ನು ತಡೆದು ನಿಲ್ಲಿಸಲಿಲ್ಲ, ನಿಲ್ಲಿಸಿ ದಂಡ ವಸೂಲಿ ಮಾಡಲಿಲ್ಲ.  ಇದೆಂಥ ಟ್ರಾಫಿಕ್ ವ್ಯವಸ್ಥೆ ಅಂತ ನಮ್ಮಂತ ಬೆಂಗಳೂರ್‍ಇಗೆ ಅನ್ನಿಸದಿರದು.  ನಾವೊಂದು ಟ್ರ್‍ಆಫಿಕ್‍ನಲ್ಲಿ ನಿಂತಿದ್ದೆವು ನೂರ ಇಪ್ಪತ್ತು ಸೆಕೆಂಡುಗಳು ಕಳೆದ ಮೇಲೆ ಹೋಗಬೇಕಿತ್ತು.  ಆದ್ರೆ ಒಬ್ಬೊಬ್ಬರೇ ನಿದಾನವಾಗಿ ಒಂದೊಂದು ಅಡಿ ಚಲಿಸುತ್ತಾ, ಸಿಗ್ನಲ್ಲಿಗೆ ಹತ್ತಿರ ಬಂದರು. ಅಷ್ಟರಲ್ಲಿ ಅರವತ್ತು  ಮುಗಿದು ಇನ್ನೂ ಅವರತ್ತು ಸೆಕೆಂಡು ಆಗಬೇಕಿತ್ತು.  ನಮ್ಮ ಬಲಗಡೆ ಅಡ್ಡರಸ್ತೆಯಲ್ಲಿ ಇನ್ನೂ ವಾಹನಗಳು ಚಲಿಸುತ್ತಿರುವಾಗಲೇ ಮುಂದೆ ಹೋಗಿದ್ದ ಇವರೆಲ್ಲಾ ನುಗ್ಗಿದರು. ಅವರ ಮತ್ತಷ್ಟು ಬೈಕುಗಳು...ಹೀಗೆ ಎಲ್ಲರೂ ಹೋಗಿಬಿಟ್ಟರು ಇನ್ನೂ ಐವತ್ತು ಸೆಕೆಂಡು ಮುಗಿಯಬೇಕಿತ್ತು. ಆದ್ರೆ ಉಳಿದುಕೊಂಡಿದು ನಾವು ಮಾತ್ರ!  ಆ ಕ್ಷಣದಲ್ಲಿ ಆ ವಾತಾವರಣದಲ್ಲಿ ನಾವು ದಡ್ಡರೋ ಅಥವ ಬುದ್ದಿವಂತರೋ...ಎನ್ನುವ ಗೊಂದಲ ಉಂಟಾಗಿಬಿಟ್ಟಿತ್ತು.

    "ಇವರನ್ನೆಲ್ಲಾ ಬೆಂಗಳೂರಿಗೆ ಕಳಿಸಿ ನಮ್ಮ  ಟ್ರಾಫಿಕ್ ಪೋಲಿಸರ ಕೈಲಿ ಸಿಕ್ಕಿಹಾಕಿಕೊಂಡು ಬರೆಹಾಕಿಸಿ ಸಾವಿರಾರು ರೂಪಾಯಿ ದಂಡಕಟ್ಟಿಸಬೇಕು ಕಣ್ರಿ ಆಗ ಇವರಿಗೆ ಬುದ್ದಿ ಬರುತ್ತದೆ" ಅಂತ ಹೇಮಾಶ್ರೀ  ಸಿಟ್ಟಿನಿಂದ ಹೇಳುವಾಗ ನನಗೂ ಹಾಗೆ ಅನ್ನಿಸಿತ್ತು.

            ಪಾಂಡಿಚೇರಿಯ ದಕ್ಷಿಣಕ್ಕೆ ಇರುವ ಒಂದು ಚರ್ಚು ವಾಸ್ತು ಶಿಲ್ಪ ಮತ್ತು ಕಲೆಯ ವಿಚಾರದಲ್ಲಿ ಅದ್ಬುತವಾದುದು. ಒಳಗೆ ಹೋದೆವು.  ತುಂಬಾ ಶಾಂತವಾದ ವಾತವರಣ.  ಅಲ್ಲಿನ ಸೆಕ್ಯುರಿಟಿಯನ್ನು ಫೋಟೊತೆಗೆಯಲು ಅನುಮತಿ ಪಡೆದು ಫೋಟೊಗಳನ್ನು ಕ್ಲಿಕ್ಸಿಸಿಕೊಂಡೆವು.


ಹೇಮಾಶ್ರಿ ಏಸುವಿನಲ್ಲಿ ಏನನ್ನು ಬೇಡಿಕೊಳ್ಳುತ್ತಿದ್ದಾಳೋ.. 


ಒಂದು ಗಂಟೆ ಆ ಚರ್ಚಿನಲ್ಲಿ ಕಳೆದು  ನಂತರ ಹತ್ತಿರದಲ್ಲಿದ್ದ ಎರಡು ಮಸೀದಿಗೆ ಹೋಗಿಬಂದೆವು. ಅಷ್ಟರಲ್ಲಾಗಲೇ ಹನ್ನೊಂದು ಗಂಟೆಯಾಗಿದ್ದರಿಂದ ಬಿಸಿಲು ಮತ್ತು ಸೆಕೆ ಜಾಸ್ತಿಯಾಗಿ ಬೆವರಿಳಿಯಲಾರಂಭಿಸಿತ್ತು.  ರಸ್ತೆಯ ಬದಿಯಲ್ಲಿ ನಮ್ಮ ಗಾಡಿ ನಿಲ್ಲಿಸಿ ತಣ್ಣಗಿನ ನೀರಿನ ಬಾಟಲ್ ತರುವಷ್ಟರಲ್ಲಿ ಅಲ್ಲೊಬ್ಬ ಬಿಕ್ಷುಕ ಹಾಜರ್!  ಮತ್ತೆ ಈ ಬಿಕ್ಷುಕರ ವಿಚಾರವನ್ನು ಇಲ್ಲಿ ಬರೆಯಲೇ ಬೇಕು. ಅಲ್ಲಿರುವ ಎಲ್ಲಾ ಪಾರ್ಕಿಂಗ್ ಜಾಗದಲ್ಲೂ ಒಬ್ಬೊಬ್ಬ ಬಿಕ್ಷುಕ ಇರುತ್ತಾನೆ. ನೀವು ವಾಪಸ್ಸು ಗಾಡಿ ತೆಗೆಯುವಾಗ ’ಸಾರ್. ಅಮ್ಮ, ತಂಬಿ,.....ಹೀಗೆ ಕೂಗುತ್ತಾ ನಿಮ್ಮ ಮುಂದೆ ಕೈಯೊಡ್ಡುತ್ತಾರೆ.  ನಾವು ಒಂದು ಅಥವ ಎರಡು ರೂಪಾಯಿ ಕೊಟ್ಟರೆ  ಒಂದು ನಮಸ್ಕಾರ, ಥ್ಯಾಂಕ್ಸ್ ಏನೂ ಹೇಳದೇ ಹಾಗೆ ಹೋಗಿಬಿಡುತ್ತಾರೆ. "ಎಲಾ ಇವನಾ, ಒಂದು ನಗು, ಅಥವ ಒಂದು ಥ್ಯಾಂಕ್ಸು, ನಮಸ್ಕಾರವನ್ನು ಹೇಳಲ್ಲವಲ್ಲ ಇವರು ಅಂತ ನಾನು ಬೈದುಕೊಂಡರೆ "ರೀ ಹೋಗ್ಲಿ ಬಿಡ್ರಿ, ಅವರು ಪಾರ್ಕಿಂಗ್ ಚಾರ್ಚು ತಗೊಂಡಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ಪಾರ್ಕಿಂಗ್ ಚಾರ್ಚ್ ಕೊಟ್ಟರೆ ಯಾರೂ ಕೂಡ ಥ್ಯಾಂಕ್ಸ್, ನಮಸ್ಕಾರ ಏನೂ ಹೇಳುವುದಿಲ್ಲವಲ್ಲ  ಇಲ್ಲೂ ಹಾಗೆ ಅಂದುಕೊಳ್ಳಿ" ಅಂತ ಅಂದಾಗ ಅವಳ ಸಮಯಸ್ಪೂರ್ತಿಯ ಹಾಸ್ಯಕ್ಕೆ ಇಬ್ಬರೂ ಜೋರಾಗಿ ನಕ್ಕಿದ್ದೆವು.  ಈ ಎರಡು ದಿನದಲ್ಲಿ ಬಿಕ್ಷುಕರಲ್ಲಿ ನಾವು ಥ್ಯಾಂಕ್ಸ್ ನಿರೀಕ್ಷೆಮಾಡಲಿಲ್ಲ.

   ಪಾಂಡಿಚೇರಿಯಲ್ಲಿನ ಮುಖ್ಯರಸ್ತೆಯಲ್ಲಿಯೇ ಇರುವ ಮತ್ತೊಂದು ದೊಡ್ಡ ಚರ್ಚ್ ಒಳಗೆ ಹೋದರೆ ಅಲ್ಲಿ ಇಡೀ ನೆಲವನ್ನು ಅಗೆದು ಮಟ್ಟಮಾಡುತ್ತಿದ್ದರು. ಬಹುಶಃ ನವೀಕರಿಸುತ್ತಿರಬಹುದು ಅಂದುಕೊಂಡು ಹೊರಗೆ ಬಂದರೆ ಅಲ್ಲೊಬ್ಬ ಎರಡು ವರ್ಷದ ಪುಟ್ಟ ಬಾಲಕ ನಮ್ಮ ದಾರಿಗೆ ಅಡ್ಡವಾಗಿ ನಿಂತು ಅಳುತ್ತಿದ್ದ.  ಅವನ ಎರಡು ಕೈಗಳಲ್ಲಿ ಬಿಸ್ಕೆಟ್ಟುಗಳಿದ್ದವು.

ನಾನು ತಮಿಳಿನಲ್ಲಿ ಏಕೆ ಅಳುತ್ತಿದ್ದೀಯಪ್ಪ ಅಂತ ಕೇಳಿದೆ.  ನನ್ನ ಮಾತನ್ನು ಕೇಳಿ ಮತ್ತಷ್ಟು ಜೋರಾಗಿ ಅಳಲಾರಂಭಿಸಿದ. ಹೋಗಲಿಬಿಡು ಅಂದುಕೊಂಡು ಅವನ ಫೋಟೊಗಳನ್ನು ಕ್ಲಿಕ್ಸಿಸಿದ್ದೆ.  ಅಷ್ಟರಲ್ಲಿ ಚರ್ಚಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವನ ತಾಯಿ ಓಡಿಬಂದಳು. ಅವನಿಗೆ ಏನು ಬೇಕು ಅಂತ ಕೇಳಿದಾಗ ಕೈಯಲ್ಲಿದ್ದ ಬಿಸ್ಕೆಟ್ಟುಗಳನ್ನು ಎಸೆದುಬಿಟ್ಟ.

ಆಕೆಗೆ ಏನು ಅರ್ಥವಾಯಿತೋ ತನ್ನ ಸೀರೆ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಎರಡು ಲಾಲಿಪಪ್ ಚಾಕಲೇಟನ್ನು ಕೊಟ್ಟಳು. ಅದನ್ನು ನೋಡಿ ಸುಮ್ಮನಾಗಿ ಬಾಯಲ್ಲಿ ಚೀಪತೊಡಗಿದ.  ಇವನು ಸುಮ್ಮನಾಗಿದ್ದು ನೋಡಿ ಮತ್ತೆ ಅವಳು ತನ್ನ ಕೆಲಸದ ಕಡೆಗೆ ಹೋದಳು. ಆ ಹುಡುಗನ ಫೋಟೊ ತೆಗೆಯುತ್ತಾ ಅವನ ಹೆಸರನ್ನು ಕೇಳುತ್ತಿರಬೇಕಾದರೆ ಹತ್ತಿರದಲ್ಲಿದ್ದ ಅಜ್ಜಿಯೊಬ್ಬಳು  "ಅವನ ಹೆಸರು  ಅಜಿತ್.   ಅವಳಮ್ಮನ ಹೆಸರು ಸೆಲ್ವಿ. ಇವನಪ್ಪ ಬಸುರಿಯಾದ ಅವಳನ್ನು ಅಸ್ಪತ್ರೆಗೆ ಸೇರಿಸಿ ಇವನು ಹುಟ್ಟುವ ಸಮಯದಲ್ಲಿ ಓಡಿಹೋದ. ಇನ್ನೂ ಪತ್ತೆ ಇಲ್ಲ"  ಅಂತ ತಮಿಳಿನಲ್ಲಿ ಹೇಳಿದಾಗ, ಈ ಮಗು ಹುಟ್ಟಿದಾಗ ಅವನ ತಾಯಿಯ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿಗಾಗಿ ಆಕೆಯತ್ತ ತಿರುಗಿ ನೋಡಿದರೆ ಚರ್ಚ್ ಮುಂಭಾಗದಲ್ಲಿ ಮಣ್ಣು ತುಂಬಿದ ಬಾಂಡ್ಲಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಳು. ಇತ್ತ ಈ ಪುಟ್ಟಮಗು ಲಾಲಿಪಪ್ ಸಿಹಿಯನ್ನು ಸವಿಯುತ್ತಿತ್ತು. .
              

          ಅಲ್ಲಿಂದ ಹೊರಟು  ಮಹಾತ್ಮ ಗಾಂಧಿ ರಸ್ತೆಯಲ್ಲಿನ ಶಿವನ ದೇವಾಲಯಕ್ಕೆ ಹೋದೆವು. ಅಲ್ಲಿ ನಮಸ್ಕಾರ ಪೂಜೆ ಇತ್ಯಾದಿ ಮುಗಿಯುವ ಹೊತ್ತಿಗೆ  ಹನ್ನೆರಡು ಗಂಟೆ. ಮತ್ತೆ ಆಶ್ರಮಕ್ಕೆ ಹೋಗಿ ಊಟಮಾಡಿದೆವು. ನಂತರ ಅರಬಿಂದೋ ಆಶ್ರಮ, ಅಲ್ಲಿನ ಸರ್ಕಾರಿ ಮ್ಯೂಸಿಯಂ ನೋಡಿಕೊಂಡು ಮತ್ತೆ ರೂಮಿಗೆ ಬಂದು ಸ್ವಲ್ಪ ಹೊತ್ತು ವಿರಮಿಸಿ ನಾಲ್ಕುಗಂಟೆಯ ಹೊತ್ತಿಗೆ ಪಾಂಡಿಚೇರಿ ಬೀಚಿಗೆ ಹೋದೆವು. ಆರುಗಂಟೆಯವರೆಗೆ ಚೆನ್ನಾಗಿ ಬೀಚಿನಲ್ಲಿ ಆಟವಾಡಿ ವಾಪಸ್ಸು ಬಂದು ಮತ್ತೊಮ್ಮೆ ಚೆನ್ನಾಗಿ ಸ್ನಾನ ಮಾಡಿದಾಗ ಸ್ವಲ್ಪ ಉಲ್ಲಾಸವೆನಿಸಿತು. ಸಂಜೆ ಒಂದಷ್ಟು ಶಾಪಿಂಗ್ ಮಾಡಿದೆವು.  ರಾತ್ರಿ ಊಟಕ್ಕೆ ಆಶ್ರಮದಲ್ಲಿ ಅನ್ನ ಸಾರು, ಮೊಸರು, ಮಾವಿನಹಣ್ಣು ಜೊತೆಗೆ ಗೋದಿ ಪಾಯಸವಿತ್ತು.  ಹೊಟ್ಟೆತುಂಬಾ ಊಟಮಾಡಿ ನಂತರ ಎರಡು ದಿನ  ಏನೂ ತೊಂದರೆಯಾಗದಂತೆ ಪಾಂಡಿಚೇರಿಯಲ್ಲೆಲ್ಲಾ ಸುತ್ತಾಡಿಸಿದ ಆಕ್ಟೀವ್ ಹೋಂಡವನ್ನು ವಾಪಸ್ಸು ಕೊಟ್ಟು ನಮ್ಮ ಡೆಪಾಸಿಟ್ ಹಣವನ್ನು ಮತ್ತು  ಡ್ರೈವಿಂಗ್ ಲೈಸೆನ್ಸ್ ವಾಪಸ್ ಪಡೆದು ನಿದಾನವಾಗಿ ನಮ್ಮ ಗೆಸ್ಟ್ ಹೌಸ್ ಕಡೆಗೆ ವಾಕಿಂಗ್ ಹೊರಟಾಗ ರಾತ್ರಿ ಎಂಟುವರೆ. ವಾಕಿಂಗ್ ಸಮಯದಲ್ಲಿ ರಾತ್ರಿ ಪಾಂಡಿಚೇರಿ ರಸ್ತೆಗಳ ಫೋಟೊ ಕ್ಲಿಕ್ಕಿಸಿದ್ದೆ.

ರಾತ್ರಿ ಪಾಂಡಿಚೇರಿ ರಸ್ತೆಗಳು


        ಮೊದಲೇ ಎಲ್ಲವನ್ನು ಪ್ಯಾಕ್ ಮಾಡಿದ್ದರಿಂದ "ಕರ್ನಾಟಕ ನಿಲಯಂ"  ಗೆಸ್ಟ್ ಹೌಸ್ ನೋಡಿಕೊಳ್ಳುವ ಮಲ್ಲಿಕಾರ್ಜುನಪ್ಪ ಮತ್ತು ಅವರ ಕುಟುಂಬವನ್ನು ಮಾತನಾಡಿಸಿ ಅವರಿಗೆ ಥ್ಯಾಂಕ್ಸ್ ಹೇಳಿ ನಾವು  ಪಾಂಡಿಚೇರಿ ಬಸ್ ನಿಲ್ದಾಣ ತಲುಪುವ ಹೊತ್ತಿಗೆ ಒಂಬತ್ತುವರೆಯಾಗಿತ್ತು. ನಮ್ಮ ಬಸ್ಸು ಹತ್ತಗಂಟೆ ಬರುವುದಿತ್ತು.  ಬಸ್ಸಿನ ಸೀಟಿಗೆ ತಲೆಕೊಟ್ಟಿದ್ದಷ್ಟೆ. ಬೆಳಿಗ್ಗೆ ಬೆಂಗಳೂರು ತಲುಪಿದಾಗಲೇ ಎಚ್ಚರ.

 ನಮ್ಮ ಪಾಂಡಿಚೇರಿ ಪ್ರವಾಸದ ಮತ್ತಷ್ಟು ಫೋಟೊಗಳು ನನ್ನ ಫೇಸ್ ಬುಕ್‍‍ನಲ್ಲಿ

ಚಿತ್ರಗಳು ಮತ್ತು ಲೇಖನ
ಶಿವು.ಕೆ