ಕಳೆದ ಒಂದು ತಿಂಗಳಿಂದ ಇಡೀ ಕಾರ್ಯಕ್ರವನ್ನು ಒಂದು ಸಿನಿಮಾದ ಚಿತ್ರಕತೆಯಂತೆ ರೂಪರೇಷೆಗಳನ್ನು ಪಕ್ಕಾ ಮಾಡಿಕೊಂಡು ಕೊನೆಯಲ್ಲಿ ನಮ್ಮ ಹುಡುಗರಾದ ಅನಿಲ್, ನಾಗರಾಜ್, ನವೀನ್, ಪ್ರವೀಣ್, ಶಿವಪ್ರಕಾಶ್, ಉದಯ್ ಹೆಗಡೆ ಇವರೆಲ್ಲರ ಜೊತೆ ಸೇರಿ ಚರ್ಚಿಸಿದ್ದೆ. ಚಿತ್ರಕತೆ ಚೆನ್ನಾಗಿದ್ದಿದ್ದರಿಂದ ಕಾರ್ಯಕ್ರಮವೂ ಚೆನ್ನಾಗಿ ಆಯಿತು. ಇಡೀ ಕಾರ್ಯಕ್ರಮದಲ್ಲಿ ಕುವೈಟಿನ ಮೃದುಮನಸ್ಸಿನ ಸುಗುಣಕ್ಕ ಮತ್ತು ದೆಹಲಿಯ ಮನದಾಳದ ಪ್ರವೀಣ್ ಎನ್ನುವ ಸುಂದರಾಂಗನ ನಿರೂಪಣೆ ಸೇರಿದಂತೆ ಇತರ ವ್ಯವಸ್ಥೆಗಳು ಚೆನ್ನಾಗಿದ್ದು ನಾವು ನಿರೀಕ್ಷಿಸಿದ ಎಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿಬಿಟ್ಟಿದರು. ಆ ನಂತರ ನಡೆದಿದ್ದನ್ನು ನಾನು ಈಗ ಹೇಳಲೇಬೇಕಾಗಿದೆ. ಇನ್ನೇನು ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ನಮ್ಮ ಹುಡುಗರು ತಮ್ಮ ತರಲೆ ಬುದ್ದಿಯನ್ನು ಹೊರಹಾಕಿಬಿಟ್ಟಿದ್ದರು. ಮತ್ತೆ ನನಗೆ "ದಿ ಮಿರರ್" [ಇರಾನಿ ಸಿನಿಮಾ]ನೆನಪಾಗತೊಡಗಿತು. ಏಕೆಂದರೆ ನಾನು ಆ ಚಿತ್ರದ ನಿರ್ಧೇಶಕನ ಸ್ಥಿತಿಗೆ ಬಂದುಬಿಟ್ಟಿದ್ದೆ. ಆ ಸಿನಿಮಾದ ಅರ್ಧದಲ್ಲೇ ಬಾಲನಟಿ ತನ್ನಿಂದ ಇದು ಸಾಧ್ಯವಿಲ್ಲವೆಂದು ತನ್ನ ಕೈಗೆ ಕಟ್ಟಿದ ಬ್ಯಾಂಡೇಜನ್ನು ಕಿತ್ತೆಸೆದು ನಾನು ನಟಿಸಲಾರೆ ಎಂದು ಹೊರನಡೆದಾಗ ಆ ನಿರ್ಧೇಶಕ ಜಾಫರ್ ಫನಾಯ್ ಅನುಭವಿಸಿದ ಸ್ಥಿತಿಯನ್ನು ನನಗೆ ತಂದೊಡ್ಡಿದ್ದರು.
ಇಷ್ಟಕ್ಕೂ ಅವರು ಮಾಡಿದ್ದೇನೆಂದರೆ ನನಗೆ ಗೊತ್ತಿಲ್ಲದಂತೆ ಅವರು ಹೊಸದೊಂದು ವಿಭಿನ್ನತೆಯನ್ನು ತೋರಿಸಿದ್ದು. ಇರಾನಿ ನಿರ್ಧೇಶಕ ಜಾಫರ್ ಫನಾಯ್‍ನಂತೆ ಮುಂದೆ ಏನಾಗುತ್ತದೆಯೆನ್ನುವುದನ್ನು ನೋಡೇ ಬಿಡೋಣ ಅಂತ ಆತ ನಿರ್ಧರಿಸಿದಂತೆ ನಾನು ಕೂಡ ಮಗುವಿನಂತೆ ಕುತೂಹಲಗೊಂಡಿದ್ದೆ. ಆ ಸಿನಿಮಾದಂತೆ ಮುಂದೆ ಆಗಿದ್ದೆಲ್ಲಾ ನನ್ನ ಮನಸ್ಸಿಗೆ, ಕನಸಿಗೆ, ಕಲ್ಪನೆಗೆ, ಮೀರಿದ್ದು. ಮತ್ತೆ ನಿಮ್ಮ ಮನಸ್ಸಿಗೆ, ಕನಸಿಗೆ, ಕಲ್ಪನೆಗೆ ಮೀರಿದ್ದು ಕೂಡ.
ಕಾರ್ಯಕ್ರಮ ಮುಗಿದ ಮೇಲೆ ಬ್ಲಾಗ್ ಗೆಳೆಯರೆಲ್ಲರೂ ಸ್ವಲ್ಪ ಹೊತ್ತು ಇರಬೇಕು ಮತ್ತೊಂದು ಬಹುಮಾನ ವಿತರಣೆ ಕಾರ್ಯಕ್ರಮವಿದೆಯೆಂದು ಮೈಕಿನಲ್ಲಿ ಹೇಳಿದ್ದರಿಂದ ವಿದೇಶಗಳಿಂದ ಬಂದ ಬ್ಲಾಗಿಗರೂ ಸೇರಿದಂತೆ ಎಲ್ಲರೂ ಹಾಗೆ ತಮ್ಮ ತಮ್ಮ ಆಸನದಲ್ಲಿ ಕುಳಿತರು.
ಶುರುವಾಯಿತಲ್ಲ ಬಹುಮಾನ ವಿತರಣೆ ಕಾರ್ಯಕ್ರಮ. ಬಹುಮಾನ ವಿತರಣೆಗಾಗಿ ಮತ್ತೆ ಸುಗುಣಕ್ಕ ಮೈಕ್ ಹಿಡಿದರು. ಒಬ್ಬೊಬ್ಬರಾಗಿ ಬಂದು ಬಹುಮಾನವನ್ನು ಪಡೆದುಕೊಂಡರು. ನಾನು ನಾಲ್ಕು ಬ್ಲಾಗಿಗರಿಗೆ ಕೊಡುವಷ್ಟರಲ್ಲಿ ಸುಸ್ತಾಗಿಬಿಟ್ಟೆ. ಏಕೆಂದರೆ ಒಂದೊಂದು ಬಹುಮಾನವೂ ಟಿ.ವಿ ಬಾಕ್ಸುಗಳಷ್ಟು ದೊಡ್ಡದಾಗಿದ್ದು ಬಾರವಾಗಿದ್ದವು. ನನಗೆ ಸುಸ್ತಾಗಿ ನಂತರ ಬಹುಮಾನ ಕೊಡಲು ವಿ.ಅರ್.ಭಟ್ ಮತ್ತು ಡಾ.ಕೃಷ್ಣಮೂರ್ತಿಯವರನ್ನು ವೇದಿಕೆಗೆ ಕರೆದು ನಾನು ತಪ್ಪಿಸಿಕೊಂಡೆ. ಅವರಿಗೂ ಭಾರವನ್ನು ಹೊರಲಾರದೆ ಕೊನೆಗೆ ಪ್ರಕಾಶ್ ಹೆಗೆಡೆ ಬಂದರು. ಕೊನೆಗೆ ನೋಡಿದರೆ ನಾನು ಮತ್ತು ನನ್ನ ಶ್ರೀಮತಿ ಹೇಮಾಶ್ರೀ ಸೇರಿದಂತೆ ಪ್ರತಿಯೊಬ್ಬ ಬ್ಲಾಗಿಗನೂ ಬಹುಮಾನ ವಿಜೇತ ಆಗಿದ್ದರು. ಎಲ್ಲರ ಕೈಯಲ್ಲೂ ದೊಡ್ಡ ಬಹುಮಾನದ ಬಾಕ್ಸುಗಳು. ಇಷ್ಟು ದೊಡ್ಡದಾದ ಬಾಕ್ಸುಗಳನ್ನು ಬಹುಮಾನವಾಗಿ ಕೊಟ್ಟಿದ್ದಾರಲ್ಲ ಇದರೊಳಗೆ ಏನಿರಬಹುದು? ಟಿ.ವಿ, ಡಿವಿಡಿ ಪ್ಲೆಯರ್, ಸ್ಪೀಕರ್ ಬಾಕ್ಸ್, ಮಿಕ್ಸರ್ ಗ್ರೈಂಡರ್, ಮಿಕ್ಸಿ................ಹೀಗೆ ಎಲ್ಲರ ಕಲ್ಪನೆಗಳೂ ಆಕಾಶಕ್ಕೆ ಹಾರಾಡುತ್ತಿದ್ದವು.
ನಮ್ಮ ಸಂಭ್ರಮ ಹೇಗಿತ್ತೆಂದರೆ ನಾವು ಬುಕ್ ಮಾಡಿದ್ದ ನಯನ ಸಭಾಂಗಣದ ಸಮಯ ಮುಗಿದಿದ್ದು ಗೊತ್ತಾಗಲಿಲ್ಲ. ಎಲ್ಲರೂ ಹೊರಗೆ ಬಂದೆವು. ಹೊರಗೆ ಬಂದಾಗ ಅಲ್ಲೊಂದು ವಿಶಾಲ ಜಾಗದ ನಡುವೆ ಹತ್ತು ಮೆಟ್ಟಿಲುಗಳ ಜಾಗವೇ ನಮಗೆ ಒಂಥರ ವೇದಿಕೆಯಾಗಿಬಿಟ್ಟಿತ್ತು. ಒಬ್ಬೊಬ್ಬರಾಗಿ ತಮಗೆ ಬಂದ ಬಾಕ್ಸುಗಳನ್ನು ಬಿಚ್ಚಿ ತಮ್ಮ ಗಿಫ್ಟುಗಳನ್ನು ಹೊರತೆಗೆಯತೊಡಗಿದರು. ಅದನ್ನು ನಾನು ಬರೆದು ವಿವರಿಸುವುದಕ್ಕಿಂತ ನೀವೇ ಫೋಟೊಗಳನ್ನು ನೋಡಿಬಿಡಿ. ನಕ್ಕು ನಕ್ಕು ಹೊಟ್ಟೆಯಲ್ಲಿ ಹುಣ್ಣಾದರೆ ನಾನು ಜವಾಬ್ದಾರನಲ್ಲ...........
ಭಾರವಾದ ತಮ್ಮ ಉಡುಗೊರೆ ಬಾಕ್ಸುಗಳನ್ನು ಹೊತ್ತು ಹೊರತರುತ್ತಿರುವ ಬ್ಲಾಗಿಗರು.
ತುಂಟ ರಾಘವೇಂದ್ರನಿಗೆ ಹುಡುಗಿಯರಿಗೆ ಲೈನ್ ಹೊಡೆಯಲು ಬಿಳಿಹಾಳೆಯ ಮೇಲೆ ಒಂದು ಸ್ಕೇಲು ಮತ್ತು ಗುರಿಯಿಡಲು ಒಂದು ಚಾಟರಬಿಲ್ಲು
ವಿ.ಅರ್.ಭಟ್ ರವರಿಗೆ ಸಿಕ್ಕಿದ್ದು ಗಣೇಶ ಬೀಡಿ ಮತ್ತು ಬೆಂಕಿಪೊಟ್ಟಣ. ಅದನ್ನು ಸೇದಲು ಜೊತೆಯಾದದ್ದು ಡಾ.ಡಿ.ಟಿ.ಕೆ ಕೃಷ್ಣಮೂರ್ತಿ ಸರ್.[ಇದೆಲ್ಲಾ ತಮಾಷೆಗಾಗಿ ಮಾಡಿದ್ದರಿಂದ ಭಟ್ಟರ ಗೆಳೆಯರು ಮತ್ತು ಅಭಿಮಾನಿಗಳು ಮತ್ತು ಡಾ.ಡಿ.ಟಿ.ಕೆ ಕೃಷ್ಣಮೂರ್ತಿಯವರ ಗೆಳೆಯರು, ಮನೆಯವರು, ಮತ್ತು ಅವರ ಗ್ರಾಹಕರು ತಪ್ಪುತಿಳಿಯಬಾರದಾಗಿ ವಿನಂತಿ]
ಮದುಮಗ ಶಿವಪ್ರಕಾಶನಿಗೆ ಬಹ್ಮಚರ್ಯವೇ ಜೀವನ ಪುಸ್ತಕ
ಕುವೈಟಿನಿಂದ ಬಂದಿರುವ ಮೃದುಮನಸ್ಸಿನ ಸುಗಣಕ್ಕನಿಗೆ ಪ್ಲಾಸ್ಟಿಕ್ ಬಳೆ, ಪ್ಲಾಸ್ಟಿಕ್ ಏರ್‍ಪಿನ್, ಕಿವಿಯೋಲೆ, ಜೊತೆಗೊಂದು ಕರವಸ್ತ್ರ
ಶಶಿ ಅಕ್ಕನಿಗೆ ಮಗ್ಗಿ ಪುಸ್ತಕ ಮತ್ತು ಮ್ಯಾಗಿ ಪೊಟ್ಟಣ.
ಮೇಸ್ಟು ನವೀನ್‍ಗೆ[ಹಳ್ಳಿಹುಡುಗ] ಸಿಕ್ಕಿದ್ದು ಸೀಮೆ ಸುಣ್ಣ
ಲಂಡನ್ನಿನ ಚೇತನ ಭಟ್ ಮತ್ತು ನಂಜುಂಡ ಭಟ್ ದಂಪತಿಗಳಿಗೆ ಸಿಕ್ಕಿದ್ದು ಮಕ್ಕಳಾಟದ ಪೀಪಿ.
ನನಗೆ ಸಿಕ್ಕಿದ್ದು ಮಕ್ಕಳಾಟದ ಪೀಪಿ
ಉಡುಗೊರೆ ಬಾಕ್ಸ್ ಬಿಚ್ಚುತ್ತಿರುವ ಮಂಗಳೂರಿನ ದಿನಕರ್ ಮೊಗರ್ ಸರ್,
ದಿನಕರ್ ಸರ್‍ಗೆ ಹಾಕಿಕೊಳ್ಳಲು ಶಾಂಪು, ಬಾಚಿಕೊಳ್ಳಲು ಬಾಚಣಿಕೆ.[ಆದ್ರೆ ಬಾಚಿಕೊಳ್ಳಲು ಕೂದಲೇ ಇಲ್ಲವಲ್ಲ!]
ಕುವೈಟಿನ ಮಹೇಶ್ ಸರ್‍ಗೆ ಸಿಕ್ಕಿದ್ದು ಈ ಬಫೂನ್ ಮುಖವಾಡ
ನಾವೆಲ್ಲಾ ಮನಃಪೂರ್ವಕವಾಗಿ ಆನಂದಿಸಿದ್ದು ಹೀಗೆ......
ನನ್ನ ಶ್ರೀಮತಿ ಹೇಮಾಶ್ರಿಗೆ ಸಿಕ್ಕಿದ್ದು ಯಶವಂತಪುರದ ಸೌತೆಕಾಯಿ, ಟಮೋಟೊ, ಬೆಂಡೆಕಾಯಿ........
ಸಿನಿಮಾ ಸಾಹಿತ್ಯ ಬರೆಯುತ್ತಿರುವ ಗೌತಮ್ ಹೆಗಡೆಗೆ ರಿಫಿಲ್ ಇಲ್ಲದ ಕಾಲಿಪೆನ್ನು ಬಹುಮಾನ.
ಜಲನಯನದ ಡಾ.ಅಜಾದ್‍ಗೆ ಸಿಕ್ಕಿದ್ದು ಭಾರತ ಬಾವುಟ,. ಮತ್ಸ್ಯ ಗೊಂಬೆಗಳು.
ಹೊಸಪೇಟೆಯ ಸೀತರಾಮ್ ಸರ್‍ಗೆ ಸಿಕ್ಕಿದ್ದು ಕೂದಲಿಲ್ಲದ ತಮ್ಮ ತಲೆ ಬಾಚಿಕೊಳ್ಳಲು ಬಾಚಣಿಗೆ ಮತ್ತು ಹಾಕಿಕೊಳ್ಳಲು ಶಾಂಪು.
ತಮ್ಮ ಬ್ಲಾಗ್ ಬರಹದಲ್ಲಿ ದೊಡ್ದ ಗದ್ದಲವೆಬ್ಬಿಸಿದರೂ ನಮ್ಮ ಜೊತೆಯಲ್ಲಿದ್ದಾಗಲೆಲ್ಲಾ ಪರಂಜಪೆ ಸದಾ ಮೌನಿ. ಅದಕ್ಕಾಗಿ ಜೋರಾಗಿ ಸದ್ದು ಮಾಡಿ ಗದ್ದಲವೆಬ್ಬಿಸಲು, ಗಲಾಟೆ ಮಾಡಲು ಸಿಕ್ಕಿದ್ದು ಮಕ್ಕಳಾಟದ ಗನ್ನುಗಳು.
ದೆಹಲಿಯಿಂದ ಬಂದಿರುವ ಮನದಾಳದ ಪ್ರವೀಣ್ ಸದಾ ಶೇವಿಂಗ್ ಮಾಡಿಕೊಂಡು ಮಿಂಚುವ ಸುಂದರಾಂಗ. ಆದಕ್ಕೆ ಆತ ಮತ್ತಷ್ಟು ಮಿಂಚಲಿಕ್ಕಾಗಿ ಸಿಕ್ಕಿದ್ದು ಶೇವಿಂಗ್ ಬ್ರಶ್
ಎಪ್ಪತ್ತೈದು ವರ್ಷದ ಚಿರಯುವಕ ನಮ್ಮ ಹೆಬ್ಬಾರ್ ಸರ್‍ಗೆ ಸಿಕ್ಕಿದ್ದು ಕೊಂಪ್ಲಾನ್ ಬಾಕ್ಸ್. ಅದನ್ನು ಕಂಡು ಅವರು ಸಂಭ್ರಮಿಸಿದ್ದು ಹೀಗೆ. " I am a complan boy"
ನವದಂಪತಿಗಳಾದ ದಿಲೀಪ್ ಹೆಗಡೆ ಮತ್ತು ಪ್ರಗತಿ ಹೆಗಡೆಯವರ ಮಿಲನಕ್ಕಾಗಿ ಅವರಿಗೆ ಈ ಮಿಲನ.
ಹೇಗಿದೆ ನಮ್ಮ ಬ್ಲಾಗ್ ಕುಟುಂಬ!
ಮತ್ತೆ ಕೆಲವು ಚಿತ್ರಗಳು ನಮ್ಮ ಸಂತೋಷದಲ್ಲಿ ಕ್ಲಿಕ್ಕಿಸಲಾಗಿಲ್ಲವಂತೆ. ಅದರಲ್ಲಿ ಮುಖ್ಯವಾಗಿ ಪ್ರಕಾಶ್ ಹೆಗಡೆಯವರಿಗೆ ಚಪಾತಿ ಮಣೆ ಮತ್ತು ಲಟ್ಟಾಣಿಗೆ...........ಮುಂದೆ ಕೆಲವು ಚಿತ್ರಗಳು ಸಿಕ್ಕರೆ ಬ್ಲಾಗಿಗೆ ಹಾಕುತ್ತೇನೆ. ಅಲ್ಲಿಯವರೆಗೆ ನಗುತ್ತಾ ಇರಿ....
ಚಿತ್ರಗಳು: ಕೇಶವ, ಮಲ್ಲಿಕಾರ್ಜುನ್,
ಲೇಖನ : ಶಿವು.ಕೆ