ಇದೇನು ನನ್ನ ಮೆಚ್ಚಿನ Titanic ..ಅಥವ Tom hanks ನ Cast away, ಅಥವ The Terminal ಸಿನಿಮಾನ?
ಆದ್ರೂ ನನಗೆ ಯಾಕಿಷ್ಟು ಕಾಡುತ್ತಿದೆ ಅಂತ ಅನೇಕ ಭಾರಿ ಪ್ರಶ್ನಿಸಿಕೊಂಡರೂ ಉತ್ತರ ಸಿಗುತ್ತಿಲ್ಲ. ಈ ವಿಚಾರ ತಲೆಗೆ ಹೊಕ್ಕಮೇಲಂತೂ ಒಂದೆರಡು ದಿನ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ. ನಿದ್ರೆಯ ಕನಸಲ್ಲೂ ಅದೇ ಮರುಕ್ಷಣ ಎಚ್ಚರಗೊಂಡ ಮನಸಲ್ಲೂ ಅದೇ. ಮರುದಿನ ದಿನಾಂಕ ಜೂನ್ ೧ ನನ್ನ ದಿನಪತ್ರಿಕೆಯ ಹಣ ವಸೂಲಿ ಪ್ರಾರಂಭಿಸುವ ದಿನ. ಜೊತೆಗೊಂದಷ್ಟು ಬಿಳಿ ಕಾಗದ ಹಾಳೆಗಳನ್ನು ತೆಗೆದು ಜೇಬಿಗಿಟ್ಟು ನನ್ನ ಹಣ ವಸೂಲಿ ಕೆಲಸ ಪ್ರಾರಂಭಿಸಿದ್ದೆ. ಒಂದೆರಡು ಮನೆಗಳ ವಸೂಲಿ ಆಗುತ್ತಿದ್ದಂತೆ ಅದ್ಯಾಕೋ ಆ ನೈಜ ಕತೆ ನನ್ನನ್ನೂ ತುಂಬಾ ಕಾಡತೊಡಗಿತ್ತು. ವಿಧಿಯಿಲ್ಲದೇ ಜೇಬಿನಿಂದ ಬಿಳಿ ಪೇಪರನ್ನು ಹೊರತೆಗೆದು ಒಂದೆರಡು ಸಾಲುಗಳನ್ನು ಬರೆದೆ. ಅಲ್ಲಿಂದ ಮತ್ತೊಂದು ಮನೆಗೆ. ದಿನಪತ್ರಿಕೆ ಗ್ರಾಹಕರು ನನ್ನಿಂದ ಬಿಲ್ ಪಡೆದು ಹಣ ತರಲು ಒಳಗೆ ಹೋಗಿ ಬರುವ ಐದು-ಹತ್ತು ನಿಮಿಷಗಳಲ್ಲಿ ಮತ್ತಷ್ಟು ಸಾಲುಗಳನ್ನು ಗೀಚಿಕೊಳ್ಳುತ್ತಿದ್ದೆ. ಹೀಗೆ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ನನ್ನ ವಸೂಲಿ ಕೆಲಸ ಮುಗಿಯುವ ಹೊತ್ತಿಗೆ ನಾನು ತಂದಿದ್ದ ಬಿಳಿಹಾಳೆಗಳು ತುಂಬಿಹೋಗಿತ್ತು.
ತುಂಬಾ ಕಾಡುತ್ತಿದ್ದ ನನ್ನ ಹೊಸ ಕಿರುಚಿತ್ರದ ಕತೆಯ ಚಿತ್ರಕತೆಯನ್ನು ಬರೆದಿದ್ದು ಹೀಗೆ. ನಂತರ ಅದನ್ನು ಸಂಪೂರ್ಣವಾಗಿ ಪ್ರತಿಯೊಂದು ದೃಶ್ಯವನ್ನು ಬರೆದುಕೊಂಡು ಪಕ್ಕಾ ಮಾಡಿಕೊಂಡು ಎಲ್ಲರನ್ನು ಹೊಂದಿಸಿಕೊಂಡು ನಾನು ಶೂಟಿಂಗ್ ಪ್ರಾರಂಭಿಸಿದ್ದು ಹದಿನೈದು ದಿನಗಳ ನಂತರ.
ಎಲ್ಲಾ ಸರಿ ಈ ಕಿರುಚಿತ್ರ ತೆಗೆಯುವ ಹುಚ್ಚು ನನಗೆ ಯಾವಾಗ ತಗುಲಿಕೊಂಡಿತ್ತು ಎನ್ನುವ ವಿಚಾರವನ್ನು ಸ್ವಲ್ಪ ವಿವರಿಸಿಬಿಡುತ್ತೇನೆ. ಅದು ಏಪ್ರಿಲ್ ತಿಂಗಳ ೨೬ನೇ ತಾರೀಖು. ಸಂವಾದ.ಕಾಂನ ರವಿ ಅರೇಹಳ್ಳಿ ನನಗೆ ಅನಿರೀಕ್ಷಿತವಾಗಿ ಫೋನ್ ಮಾಡಿ "ಶಿವು ನಾವೊಂದು ಕಿರುಚಿತ್ರವನ್ನು ಚಿತ್ರೀಕರಿಸುತ್ತಿದ್ದೇವೆ. ನೀವು ಬಂದರೇ ಚೆನ್ನಾಗಿರುತ್ತೆ. ಅಂದರು. "ನಾನು ಅಲ್ಲಿ ಬಂದು ಏನು ಮಾಡಲಿ, ಫೋಟೊ ತೆಗೆಯಲು ಬರುತ್ತದೆ ಹೊರತು, ಸಿನಿಮಾಟೋಗ್ರಫಿಯಾಗಲಿ ಅಥವ ಇನ್ನಿತರ ಚಿತ್ರೀಕರಣದ ಪಾತ್ರವಾಗಲಿ ನನಗೆ ಗೊತ್ತಿಲ್ಲ" ಎಂದೆ. " ಅಯ್ಯೋ ಅದಕ್ಕ್ಯಾಕೆ ಚಿಂತಿಸುತ್ತೀರಿ, ನಮಗೇನು ಗೊತ್ತಿದೆಯಾ? ನಾವು ಎಲ್ಲಾ ಹೊಸಬರೇ. ನಿರ್ಧೇಶಕ, ಕ್ಯಾಮೆರ ಮನ್, ಪಾತ್ರಧಾರಿಗಳು, ಸಹಾಯಕ ನಿರ್ಧೇಶಕ, ಇತ್ಯಾದಿ ಯಾರು ಕೂಡ ವೃತ್ತಿಪರರಲ್ಲ. ಯಾರಿಗೂ ಒಂಚೂರು ಅನುಭವವಿಲ್ಲ. ಅದರೂ ಏನಾದರೂ ಮಾಡಬೇಕೆನ್ನುವ ಹಂಬಲ ಎಲ್ಲರಲ್ಲೂ ಇರುವುದರಿಂದ ನೀವು ನಮ್ಮ ತಂಡವನ್ನು ಸೇರಿಕೊಂಡರೆ ಚೆನ್ನಾಗಿರುತ್ತೆ" ಅಂದರು. ಹೀಗೆ ಯಾರಾದರೂ ನನ್ನನ್ನು ಕರೆದುಬಿಟ್ಟರೆ ಸಾಕು ಏನೋ ಹೊಸತು ಸಿಗುತ್ತದೆ ಎನ್ನುವ ಆಸೆಯಲ್ಲಿ ಇರುವ ಕೆಲಸವನ್ನು ಬಿಟ್ಟು ಹೋಗಿಬಿಡುವ ದುರ್ಬಲ ಗುಣ ನನ್ನದು. ಹೋಗಿ ಅವರೊಂದಿಗೆ ಸೇರಿಕೊಂಡೆ.
ಆ ಕಿರುಚಿತ್ರದ ಅವಧಿ ಎಂಟು ನಿಮಿಷ. ಚಿತ್ರೀಕರಣಕ್ಕಾಗಿ ನಿಗದಿಪಡಿಸಿದ್ದು ಎರಡು ದಿನಗಳು. ನಾನು ಅಲ್ಲಿಗೆ ಹೋಗುತ್ತಿದ್ದಂತೆ ನಾನೇನೋ ದೊಡ್ಡ ಸಿನಿಮಾಟೋಗ್ರಾಫರ್ ಇರಬಹುದು ಎನ್ನುವ ಭಾವನೆಯಲ್ಲಿ ತಕ್ಷಣ ನನ್ನ ಕೈಗೆ ಕ್ಯಾಮೆರವನ್ನೇ ಕೊಟ್ಟುಬಿಟ್ಟರು. ತಮಾಷೆಯೆಂದರೆ ನನಗೆ ಫೋಟೊ ತೆಗೆಯಲು ಮಾತ್ರ ಬರುತ್ತೆ ಅಂತ ಈ ಮೊದಲೇ ಹೇಳಿದ್ದೆನಲ್ಲ, ವಿಡಿಯೋ ರೆಕಾರ್ಡಿಂಗ್ ಮಾಡುವುದು ಹೇಗೆ ಎಂದು ತಿಳಿಯಲು ಕ್ಯಾಮರ ಹಿಂಭಾಗದಲ್ಲಿರುವ ಹತ್ತಾರು ಗುಂಡಿಗಳನ್ನು ಹುಡುಕತೊಡಗಿದೆ. ಸಿಗಲಿಲ್ಲ. ಮತ್ತೆ ನನಗೆ ಕಲಿಯುವ ವಿಚಾರದಲ್ಲಿ ಯಾವುದೇ ಸಂಕೋಚವಿರಲಿಲ್ಲವಾದ್ದರಿಂದ ಈ ಮೊದಲು ಸೂಟಿಂಗ್ ಮಾಡುತ್ತಿದ್ದ ಮುರಳಿ ಎನ್ನುವವರ ಬಳಿ ವಿಡಿಯೋ ರೆಕಾರ್ಡಿಂಗ್ ಬಟನ್, ಆನ್-ಅಪ್ ಫೋಕಸ್,....ಇತ್ಯಾದಿಗಳನ್ನು ಕೇಳಿ ತಿಳಿದುಕೊಂಡು ಹೇಗೆ ಅಪರೇಟ್ ಮಾಡಬೇಕೆಂದು ಅವರಿಂದ ಹೇಳಿಸಿಕೊಂಡೆ. ಈ ವಿಚಾರದಲ್ಲಿ ನಾನು ಆ ಮಟ್ಟದ ಹೊಸಬ ಮತ್ತು ದಡ್ಡನಾದರೂ ಅವರು ನನ್ನ ಕಡೆಯಿಂದಲೇ ಯಾಕೆ ಚಿತ್ರೀಕರಿಸಬೇಕೆಂದು ಕರೆದರೋ ನನಗೆ ಗೊತ್ತಿಲ್ಲ. ಮುರಳಿ ಮತ್ತು ನಾನು ಇಬ್ಬರೂ ಕ್ಯಾಮೆರ ಮ್ಯಾನುಗಳು. ಒಂದೆರಡು ಶಾಟ್ ಮುಗಿದ ನಂತರ ಅದ್ಯಾಕೋ ನನಗೆ ಹೊಸ ಹೊಸ ಕ್ಯಾಮೆರ ಯಾಂಗಲ್ಲುಗಳು ಹೊಳೆಯತೊಡಗಿದವು. ಅವುಗಳನ್ನು ಅವರಿಗೆ ವಿವರಿಸಿ ಹೀಗೆ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಬೇಕಾದರೆ ಪ್ರಯತ್ನಿಸಿ ನೋಡಿ ಎಂದೆನಲ್ಲ ಅಲ್ಲಿಗೆ ಮುಗೀತು. ಹತ್ತು ನಿಮಿಷಕ್ಕೊಂದು ಶಾಟ್ ಅಂತ ಚಿತ್ರೀಕರಿಸುತ್ತಿದ್ದ ಅವರು ನನ್ನ ಅನೇಕ ಪ್ರೇಮಿಂಗ್, ಯಾಂಗಲ್ಸುಗಳಿಂದಾಗಿ ಅರ್ಧಗಂಟೆಗೆ ಒಂದು ಶಾಟ್ ಕೂಡ ತೆಗೆಯಲು ಸಾಧ್ಯವಾಗದಂತಾಯಿತು. ಅವರ ಶೂಟಿಂಗ್ ಶೆಡ್ಯೂಲ್ ಎರಡು ದಿನವಿದ್ದಿದ್ದು ನನ್ನ ಪ್ರವೇಶದಿಂದಾಗಿ ಅದು ಆರು ದಿನಕ್ಕೆ ಎಳೆದುಕೊಂಡು ಹೋಗಿಬಿಟ್ಟಿತ್ತು. ಹಾಗೂ ಹೀಗೂ ಶೂಟಿಂಗ್ ಮುಗಿಸಿ ಚಿತ್ರೀಕರಣದ ನಂತರದ ಕೆಲಸಗಳನ್ನು ಪ್ರಾರಂಭಿಸುವ ಹಂತದಲ್ಲಿ ಎಲ್ಲರೂ ಅವರವರ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು. ಈ ಕಿರುಚಿತ್ರದಲ್ಲಿ ಕ್ಯಾಮೆರ ಮೆನ್ ಆಗಿ ಚಿತ್ರೀಕರಿಸುವಲ್ಲಿನ ಅನೇಕ ಅನುಭವಗಳು, ಪ್ರೇಮಿಂಗು, ಸಹಜ ಬೆಳಕನ್ನು ಚಿತ್ರೀಕರಣಕ್ಕೆ ಬಳಸಿಕೊಂಡ ರೀತಿ, ನಡುವೆ ಬಂದ ಮಳೆಯನ್ನು ಚಿತ್ರೀಕರಣದಲ್ಲಿ ಪಾತ್ರವಾಗಿಸಿದ ರೀತಿ, ಇತ್ಯಾದಿಗಳೆಲ್ಲಾ ನನ್ನ ಮರೆಯಲಾಗದ ನೆನಪುಗಳಾಗಿ ಆ ಕಿರುಚಿತ್ರ ಬೇಗನೇ ಸಿದ್ದವಾಗಿಬಿಟ್ಟರೆ ಹೊರಪ್ರಪಂಚಕ್ಕೆ ತೋರಿಸುವ ಆಸೆ ತುಂಬಾ ಕಾಡತೊಡಗಿತ್ತು. ಆ ಸಿನಿಮಾದ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕನಿಗೆ ಮದುವೆ ಗೊತ್ತಾಗಿ ಅವರು ಬ್ಯುಸಿಯಾಗಿಬಿಟ್ಟರು. ಉಳಿದವರು ಕೂಡ ಅವರವರ ವೈಯಕ್ತಿಕ ಕೆಲಸದ ಒತ್ತಡಗಳಿಂದಾಗಿ ಕೊನೆಗೆ ಆ ಸಿನಿಮಾ ಸಿದ್ದವಾಗಲೇ ಇಲ್ಲ.
ಆದರೂ ನಾನು ಚಿತ್ರೀಕರಿಸಿದ ಕೆಲವು ಶಾಟುಗಳು, ಪ್ರೇಮುಗಳು, ತಾಂತ್ರಿಕತೆಯಲ್ಲಿ ವಿಭಿನ್ನವೆನಿಸುವ ಫೋಕಸಿಂಗ್ ವಿಚಾರಗಳು ಇದ್ದ ಕೆಲವು ದೃಶ್ಯಗಳನ್ನು ನನ್ನ ಮನೆಯಲ್ಲಿ ಮತ್ತೆ ಮತ್ತೆ ನೋಡುವಾಗ ನನಗೆ ಗೊತ್ತಿಲ್ಲದಂತೆ ಅದೊಂತರ ಆತ್ಮವಿಶ್ವಾಸ ನನ್ನಲ್ಲಿ ಮೂಡತೊಡಗಿತ್ತು. ಎಲ್ಲರೂ ಒಟ್ಟುಗೂಡಿ ಮಾಡಿದ ಸಿನಿಮಾ ಸಿದ್ದವಾಗದಿರುವುದು ನನ್ನದೇ ಕೂಸು ಗರ್ಭದೊಳಗೆ ಇದ್ದು ಹೊರಬರಲಾಗದ ಪರಿಸ್ಥಿತಿ ಎನ್ನುವಂತೆ ನನ್ನನ್ನು ಕಾಡತೊಡಗಿತ್ತು. ಅದೇ ಗುಂಗಿನಲ್ಲಿದ್ದ ನನಗೆ ಕೆಲವೇ ದಿನಗಳ ಹಿಂದೆ ನಡೆದ ಒಂದು ನೈಜ ಘಟನೆಯನ್ನು ಆದರಿಸಿದ ಕಿರುಚಿತ್ರವನ್ನು ನಾನೇ ಏಕೆ ಮಾಡಬಾರದು ಅನ್ನಿಸತೊಡಗಿತ್ತು. ಅಷ್ಟು ಸಾಕಾಯಿತು. ಒಂದಾದ ಮೇಲೆ ಒಂದು ದೃಶ್ಯಗಳು ನನ್ನ ಮನಸ್ಸಿನ ಪಟಲದ ಮೂಡತೊಡಗಿದವು. ಪ್ರತಿಯೊಂದು ದೃಶ್ಯಗಳು ಕೊಂಡಿಗಳಂತೆ ಜೋಡಿಸಿಕೊಳ್ಳುತ್ತಾ ಚಲಿಸತೊಡಗಿದವು. ಇಷ್ಟೇಲ್ಲಾ ಆದ ಮೇಲೆ ನನಗೆ ನಿದ್ರೆ ಬರದಂತಾಗಿ ಮರುದಿನ ದಿನಪತ್ರಿಕೆ ವಸೂಲಿ ಸಮಯದಲ್ಲಿ ಮನೆ ಮನೆಗಳ ಬಾಗಿಲುಗಳ ಮುಂದೆ, ಅಪಾರ್ಟುಮೆಂಟಿನ ಮೆಟ್ಟಿಲುಗಳ ನಡುವೆ, ಲಿಫ್ಟುಗಳಲ್ಲಿ ಚಲಿಸುತ್ತಾ, ಅಲ್ಲಲ್ಲಿ ರಸ್ತೆ ಪಕ್ಕ ಸ್ಕೂಟಿಯನ್ನು ನಿಲ್ಲಿಸಿ ಕೈಗಾಡಿ ಅಂಗಡಿಯ ಟೀ ಕುಡಿಯುತ್ತಾ, ನನ್ನ ಕಿರುಚಿತ್ರದ ಚಿಕ್ಕ ದೃಶ್ಯಗಳನ್ನು ಬರೆದಿದ್ದೆ.
ಮೊದಲೇ ಕ್ಲೈಮ್ಯಾಕ್ಸ್ ದೃಶ್ಯಗಳು ಸಿದ್ದವಾಗಿತ್ತಲ್ಲ, ಉಳಿದ ದೃಶ್ಯಗಳಿಗಾಗಿ ಜೇಬಿನಲ್ಲಿಟ್ಟ ಪೇಪರುಗಳಲ್ಲಿ ಆತುರಾತುರವಾಗಿ ಗೀಚಿಕೊಂಡಿದ್ದ ದೃಶ್ಯಗಳನ್ನು ಜೋಡಿಸಿಕೊಳ್ಳುತ್ತಾ ಒಂದು ಪಕ್ಕಾ ಚಿತ್ರಕತೆಯನ್ನು ಸಿದ್ಧ ಮಾಡಿದೆ. ಈ ಕಿರುಚಿತ್ರದಲ್ಲಿ ಒಟ್ಟು ಹತ್ತು ದೃಶ್ಯಗಳು ಅಂತ ಯೋಜನೆ ಹಾಕಿಕೊಂಡು ಪ್ರತಿಯೊಂದು ದೃಶ್ಯದಲ್ಲೂ ಕ್ಯಾಮೆರ ಪ್ರೇಮಿಂಗ್, ಒಂದು ದೃಶ್ಯದ ಹತ್ತಾರು ಯಾಂಗಲ್ಲುಗಳು, ಟೇಕಿಂಗ್ಸ್, ಯಾವ ದೃಶ್ಯದಲ್ಲಿ ಮೂವಿಂಗ್ ಶಾಟ್, ಯಾವ ದೃಶ್ಯದಲ್ಲಿ ಕ್ಯಾಮೆರ ತಾಂತ್ರಿಕತೆ ಮೇಲುಗೈ ಸಾಧಿಸಬೇಕು, ಮತ್ಯಾವ ದೃಶ್ಯದಲ್ಲಿ ಮಾತು, ಭಾವನೆಗಳು ಮುಂದಿರಬೇಕು ಇತ್ಯಾದಿಗಳನ್ನು ಪಕ್ಕಾ ಆಗಿ ಪೇಪರ್ ವರ್ಕ್ ಮಾಡಿಕೊಂಡೆ. ಒಂದು ವಾರ್‍ಅ ಪೂರ್ತಿ ಈ ಪೇಪರ್ ವರ್ಕ್ ಮುಗಿಸಿದಾಗ ಅದರಲ್ಲಿ ವಿಧವಿಧವಾದ ದಿಕ್ಕುಗಳ ಪ್ರೇಮಿಂಗುಗಳು, ಕ್ಯಾಮೆರ ಯಾಂಗಲ್ಲುಗಳು, ತಾಂತ್ರಿಕ ವಿವರಗಳು, ದೃಶ್ಯದ ಹಿನ್ನೆಲೆ ಮುನ್ನಲೆಗಳು, ಪಾತ್ರಧಾರಿಗಳು, ಸಂಭಾಷಣೆ, ಚಿತ್ರೀಕರಣದ ಸಮಯ, ಬೆಳಕು...........ಹೀಗೆ ಎಲ್ಲಾ ತಾಂತ್ರಿಕ ವಿವರಗಳನ್ನು ಹೊಂದಿದ ಮುನ್ನೂರು ಪುಟ್ಟ ಪುಟ್ಟ ದೃಶ್ಯಗಳು ಸಿದ್ದವಾಗಿಬಿಟ್ಟವು.
ಓಹ್! ಸ್ವಲ್ಪ ತಡೆಯಿರಿ, ಟಿವಿ ೯ ಛಾನಲ್ಲಿನವರು ಮನೆಗೆ ಬಂದೇ ಬಿಟ್ಟರು. ಪೂರ್ತಿ ಸಿದ್ದವಾದ ಈ ಕಿರುಚಿತ್ರವನ್ನು ನೋಡಿ ನನ್ನನ್ನು ಮತ್ತು ನಮ್ಮ ಹುಡುಗರನ್ನು ಮಾತಾಡಿಸಲು ಬಂದಿದ್ದಾರೆ. ಸಿನಿಮ ವಸ್ತುವಿನ ಹಿನ್ನೆಲೆ, ಅದರ ಸೂಟ್ ಮಾಡಿದ ಕ್ಯಾಮೆರ ಬಗ್ಗೆ, ಏಕೆ ಈ ವಸ್ತುವನ್ನೆ ಕತೆಯನ್ನಾಗಿ ಚಿತ್ರ ಮಾಡಿದೆ ಎನ್ನುವುದರ ಬಗ್ಗೆ ಕೇಳಲು ಬಂದಿದ್ದಾರೆ. ಅವರ ಜೊತೆ ಮಾತಾಡಿ, ನೀವೆಲ್ಲಾ ನೋಡುವಂತೆ ಟಿವಿ ೯ ಛಾನಲ್ಲಿನಲ್ಲಿ ಒಂದಷ್ಟು ಫೋಸು ಕೊಟ್ಟು ಬಂದುಬಿಡುತ್ತೇನೆ.
ಅಮೇಲೆ ನಮ್ಮ ಕಿರುಚಿತ್ರ ಪ್ರಾರಂಭವಾದ ಬಗೆ, ಅದಕ್ಕೆ ಹೊಂದಿಸಿಕೊಂಡ ಕ್ಯಾಮೆರ, ಎಲ್ಲಿ ಶೂಟಿಂಗ್ ಮಾಡಿದೆವು, ಆ ಜಾಗದ ಹುಡುಕಾಟ, ತಡಕಾಟ, ಒಂದು ಬುಟ್ಟಿಯಲ್ಲಿ ಹಾಕಿದರೆ ಒಂದು ಕ್ಷಣ ಒಂದು ಕಡೆ ನಿಲ್ಲದ ಹಾಗೆ ನೆಗೆದಾಡುವ ಕಪ್ಪೆಗಳಂತ ನಮ್ಮ ಪಾತ್ರಧಾರಿ ಹುಡುಗರು, ಸೂಟಿಂಗ್ ಸಮಯದಲ್ಲಿ ಅವರು ಕೈ ಕೊಟ್ಟ ಬಗೆಗಳು, ಕದ್ದು ಮುಚ್ಚಿ ಅವರಿಗೆ ಗೊತ್ತಿಲ್ಲದ ಹಾಗೆ ಸೂಟ್ ಮಾಡಿದ ದೃಶ್ಯಗಳು, ನಂತರದ ಸಂಕಲನ ಕೆಲಸ, ನಮಗೆಲ್ಲಾ ಧ್ವನಿ ಮರುಮುದ್ರಣವೆನ್ನುವ ಕಬ್ಬಿಣದ ಅಗಿಯಲು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ವಿಯಾದೆವಾ?, ಪೂರ್ತಿ ಸಿದ್ಧವಾದ ಸಿನಿಮಾಗೆ ಮೊದಲು ಮಾಡಿದ ನಂತರ ಅದನ್ನು ಬದಲಾಯಿಸುವ ಸಲುವಾಗಿ ನನ್ನ ಗೆಳೆಯ ಮಹೇಶ್‍ಗೆ ನಾನು ಕೊಟ್ಟ ಕಾಟ,...............ಒಂದೇ ಎರಡೇ ಬರೆಯಲು ತುಂಬಾ ದೊಡ್ಡದಾದ ಸಾಲುಗಳಿವೆ....ಮುಂದಿನ ಭಾಗದಲ್ಲಿ ಬರೆಯುತ್ತೇನೆ.
ಅಂದಹಾಗೆ ಈ ಬರಹದ ನಡುವೆ ಟಿವಿ ೯ ಛಾನಲ್ಲಿನವರು ಕ್ಯಾಮೆರ ಹಿಡಿದುಕೊಂಡು ನಮ್ಮನ್ನು ಸೆರೆಯಿಡಿಯಲು ಬಂದರು ಅಂತ ನಿಲ್ಲಿಸಿದೆನಲ್ಲ...ಅದು ಗಿಮಿಕ್ ಏನೂ ಅಲ್ಲ. ಸತ್ಯ. ಇವತ್ತು [ದಿನಾಂಕ ೨೮-೮-೨೦೧೧]ಸಂಜೆ ಬಂದು ನಮ್ಮ ಕಿರುಚಿತ್ರದ ಬಗ್ಗೆ ನನ್ನನ್ನು ಮತ್ತು ನನ್ನ ಹುಡುಗರನ್ನು ಮಾತಾಡಿಸಿ ಹೋಗಿದ್ದಾರೆ. ಅದು ಪ್ರಸಾರವಾಗುವ ದಿನಾಂಕವಿನ್ನು ಗೊತ್ತಾಗಿಲ್ಲ. ಗೊತ್ತಾದ ತಕ್ಷಣ ನಿಮಗೆಲ್ಲಾ mail, massage, facebook, bazz...ಎಲ್ಲಾ ಕಡೆ ತಿಳಿಸುತ್ತೇನೆ. ತಪ್ಪದೇ ನೋಡಿ
ನಮ್ಮ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಿ.
ಅಂದಹಾಗೆ ನಮ್ಮ ಕಿರುಚಿತ್ರದ ಹೆಸರು..
ಬೆಳಗಾಯ್ತು....
Tag line : ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ?
ಸಮಯದ ಅವಧಿ : ಹದಿನೆಂಟು ನಿಮಿಷಗಳು...
ನಮ್ಮ ಕಿರುಚಿತ್ರದಲ್ಲಿ ಹೆಚ್ಚು ಇಲ್ಲಗಳು ಇವೆ.
ನಾನು ನಿರ್ಧೇಶಕನಲ್ಲ. ನಟನಲ್ಲ.
ಸಿನಿಮಾಟೋಗ್ರಾಫರ್ ಅಂತೂ ಅಲ್ಲವೇ ಅಲ್ಲ
ನನಗೆ ಸಿನಿಮಾ ಸಾಹಿತ್ಯ ಗೊತ್ತಿಲ್ಲ.
ಸಂಗೀತ ನೀಡಿರುವ ಮಹೇಶ್ ಸಂಗೀತ ಗಾರನಲ್ಲ.
ನಾವು ಕಿರುಚಿತ್ರಕ್ಕೆ ಬಳಸಿರುವ ಕ್ಯಾಮೆರಾ ಸಿನಿಮಾ ಸಿನಿಮಾಟೋಗ್ರಫಿ ಕ್ಯಾಮೆರ ಅಲ್ಲ
ಬೆಳಗಿನ ದಿನಪತ್ರಿಕೆ ಹಾಕುವ ಪಾತ್ರಧಾರಿ ಹುಡುಗರು ನಟರಲ್ಲ.
ಮೇಕಪ್ ಅಂತೂ ಯಾರಿಗೂ ಇಲ್ಲವೇ ಇಲ್ಲ.
ಈ ಎಲ್ಲಾ ಇಲ್ಲಗಳ ನಮ್ಮ ಕಿರುಚಿತ್ರ ಸಿದ್ದವಾಗಿದೆ.
ನಮ್ಮ ಕಿರುಚಿತ್ರದ ಚಿತ್ರೀಕರಣ ಸಮಯದಲ್ಲಿನ ಕೆಲವು ಫೋಟೊಗಳು.
ಪ್ರಾರಂಭದ ಹಂತದ ಚಿತ್ರೀಕರಣ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಿದೆ ಈ ಕ್ಯಾಮೆರದ ಚಿತ್ರೀಕರಣ ಪಲಿತಾಂಶ
ನಮ್ಮ ಚಿತ್ರದ ಕೆಲವು ಹೀರೋಗಳು
ಮಹೇಶ್ ಮತ್ತು ಶಿವಪ್ರಕಾಶ್ ಜೊತೆ ಚಿತ್ರೀಕರಣದ ನಡುವೆ ದೃಶ್ಯಗಳ ಚರ್ಚೆ
ಆಗಾಗ ಸ್ವಲ್ಪ ರಿಲ್ಯಾಕ್ಸ್..
ಇವರು ಕೂಡ ನಮ್ಮ ಕಿರುಚಿತ್ರದ ಹೀರೊಗಳು........ಸೂಟಿಂಗ್ ಸಮಯದಲ್ಲಿ ನನಗೆ ಸಕ್ಕತ್ ಕಾಟ ಕೊಟ್ಟ ವಿಲನ್ನುಗಳು.
ಅಷ್ಟೆಲ್ಲಾ ಹೀರೋಗಳಿದ್ದರೂ....ಇಲ್ಲಿ ಕತೆ ಮತ್ತು ಚಿತ್ರಕತೆಯೇ ನಿಜವಾದ ಹೀರೋ....
ಚಿತ್ರಗಳು ಮತ್ತು ಲೇಖನ.
ಶಿವು. ಕೆ