Showing posts with label ಚಿತ್ರಸಂತೆ. Show all posts
Showing posts with label ಚಿತ್ರಸಂತೆ. Show all posts

Sunday, January 30, 2011

ಮಕ್ಕಳ ಚಿತ್ರಸಂತೆ



   ಒಂದು ವರ್ಷದಲ್ಲಿ ನಾನು ತಪ್ಪಿಸಕೊಳ್ಳಲೇಬಾರದೆಂದು ಪ್ಲಾನ್ ಮಾಡುವ ಹತ್ತು ಕಾರ್ಯಕ್ರಮಗಳ ಪಟ್ಟಿಮಾಡಿದರೆ ಮೊದಲ ಸ್ಥಾನ ಚಿತ್ರಸಂತೆಗೆ. ಎರಡನೇಯದು ಎರಡು ವರ್ಷಕ್ಕೊಮ್ಮೆ ನಡೆಯುವ "ಏರ್ ಷೋ"[ಮುಂದಿನ ತಿಂಗಳ 9 ರಿಂದ 13ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತದೆ.] ನಂತರ ಫೋಟೊಗ್ರಫಿ ಪ್ರವಾಸಗಳು,.....ಹೀಗೆ ಮುಂದುವರಿಯುತ್ತವೆ.

          ನಿನ್ನೆ ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆಯಲ್ಲಿ ನನ್ನದು ಕೆಲವು ಫೋಟೊಗಳನ್ನು ತರಕಾರಿ, ಸೊಪ್ಪುಗಳಂತೆ ಮಾರಾಟಕ್ಕೆ ಇಟ್ಟಿದ್ದೆ. ವ್ಯಾಪಾರದಲ್ಲಿ ಚೆನ್ನಾಗಿ ಲಾಭವೆ ಆಯ್ತು.  ಇನ್ನುಳಿದಂತೆ ಚಿತ್ರ ಕಲಾವಿದರೂ, ನನ್ನಂಥ ಛಾಯಾ ಕಲಾವಿದರಲ್ಲಾ ಹೀಗೆ ಚೌಕಾಸಿ ವ್ಯಾಪರದಲ್ಲಿ ತೊಡಗಿ ಕೊನೆಗೆ ನೀಟ್ ಆಗಿ ಪೇಪರ್ ಅಥವ ಕವರಿನಲ್ಲಿ ಕವರಿನಲ್ಲಿ ಹಾಕಿ ಪ್ಯಾಕ್ ಮಾಡಿ ಕೊಡುತ್ತಿದ್ದರು.  ಅಲ್ಲದೆ ಕೊಳ್ಳಲು ಬಂದ ಕಲಾಸ್ತಕರು,   ಬರೀ ಕಲೆಯನ್ನೇ ನೋಡಿ ಖುಷಿಪಡಲು ಬಂದ ಕಲಾಸಕ್ತರು, ಇವರನ್ನೆಲ್ಲಾ ಸೆರೆಯಿಡಿಯಲು, ಹಿಡಿದು ಬರೆಯಲು ಬಂದಿದ್ದ ಟಿವಿ ಕ್ಯಾಮೆರಾಮ್ಯಾನುಗಳು, ಪತ್ರಕರ್ತರು, [ಸಣ್ಣಕ್ಯಾಮೆರಾದಲ್ಲಿ ನನ್ನ ಚಿತ್ರಗಳ ಫೋಟೊ ತೆಗೆಯತ್ತಿದ್ದ ಪ್ರಜಾವಾಣಿ ಪತ್ರಕರ್ತರಿಗೆ "ಸಾರ್ ಫೋಟೊ ತೆಗೆಯಬೇಡಿ ಸರ್ ಅದರ ಉಪಯೋಗವಿಲ್ಲ" ಅಂದೆ ಅದಕ್ಕೆ ಅವರು ನಮ್ಮ ಜರ್ನಲಿಸ್ಟ್ ಬುದ್ದಿ ಸರ್ ಎಲ್ಲಾ ಫೋಟೊ ತೆಗೆಯಬೇಕೆನಿಸುತ್ತದೆ ಅಷ್ಟೇ": ಅಂದರು,  ಅದಕ್ಯಾಕೆ ಸರ್ ಹೀಗೆ ಫೋಟೊ ತೆಗೀತೀರಿ, ನಿಮ್ಮ ಪ್ರಜಾವಾಣಿಅಫೀಸಿನಲ್ಲೇ ಯಾರನ್ನಾದರೂ ಕೇಳಿದರೆ ನನ್ನ ಚಿತ್ರಗಳು ಹೈ ರೆಸಲ್ಯೂಷನಲ್ಲಿ ಸಿಗುತ್ತದೆ" ಅಂದೆ] ಜೊತೆಗೆ ಸುತ್ತಾಡಲು ಬಂದ ಸುಂದರ ಹುಡುಗಿಯರು, ಅವರನ್ನು ನೋಡಲು ಬಂದ ಹುಡುಗರು, ಅವರ ಜೇಬು ಕಾಲಿಮಾಡಲೆಂದೇ ಸಿದ್ದರಾಗಿದ್ದ ಐಸ್‍ಕ್ರೀಮ್, ಟೀ, ಕಡ್ಲೇಬೀಜ, ಚುರುಮುರಿ, ಕೈಗಾಡಿ ಹೋಟಲ್ಲುಗಳು[ಇವರೆಲ್ಲಾ ನೆನ್ನೆ ತಿನ್ನುವ ಪದಾರ್ಥಗಳನ್ನು ನ್ನು ದುಬಾರಿಬೆಲೆಗೆ ಮಾರಿದರು] , ಹಿತವಾದ ಬಿಸಿಲು ಇದೆಲ್ಲವೂ ಪ್ರತಿವರ್ಷವೂ ಇರುತ್ತದೆಯಾದ್ದರಿಂದ ಇವು ಯಾವುದು ನನಗೆ ವಿಶೇಷವೆನಿಸಲಿಲ್ಲ.  ಇಂಥ ಸಮಯದಲ್ಲಿ ನನ್ನ ಕಣ್ಣಿಗೆ ವಿಶೇಷವೆನಿಸಿದ್ದೇ ಪುಟ್ಟ ಮಕ್ಕಳು.

           ಚಿತ್ರಸಂತೆಯಲ್ಲಿ ಕಲಾವಿದರಿಗೆ ತಮ್ಮ ಕಲಾಕೃತಿಯನ್ನು ಉತ್ತಮಬೆಲೆಗೆ ಮಾರಬೇಕೆನ್ನುವ ಆಸೆಯಿದ್ದರೆ,. ಅದನ್ನು ಕೊಳ್ಳುವವರಿಗೆ ಅತೀ ಕಡಿಮೆಬೆಲೆಯಲ್ಲಿ ಉತ್ತಮ ಕಲಾಕೃತಿಯನ್ನು ಕೊಳ್ಳುವ ತವಕ, ಉಳಿದಂತೆ ಪತ್ರಕರ್ತರು, ಕ್ಯಾಮರಾಮೆನ್ನುಗಳು, ಹುಡುಗ-ಹುಡುಗಿಯರು, ದಂಪತಿಗಳು, ವ್ಯಾಪರಿಗಳು ಇವರೆಲ್ಲಾರಿಗೂ ಒಂದಲ್ಲ ಒಂದು ಉದ್ದೇಶ ಚಿತ್ರಸಂತೆಯಲ್ಲಿ ಇದ್ದೇ ಇರುತ್ತದೆ. ಆದ್ರೆ ಅವರ ಸೊಂಟದ ಮೇಲೆ, ಹೆಗಲಮೇಲೆ, ಹೊಟ್ಟೆಯ ಮೇಲೆ[ಬಸುರಿ ಹೊಟ್ಟೆಯಲ್ಲ ಗಂಡಸರ ಹೊಟ್ಟೆಯ ಮೇಲೆ ನೇತಾಡುವ ಮಕ್ಕಳು. ಮತ್ತೆ ಐದಾರು ಬಸುರಿ ಹೆಂಗಸರು ಬಂದಿದ್ದರು ಅನ್ನಿ] ಇದ್ದ ಮಕ್ಕಳಿಗೆಲ್ಲಾ ಏನು ಉದ್ದೇಶವಿರಬಹುದು? ಇಂಥ ಒಂದು ಪ್ರಶ್ನೆ ಆ ಕ್ಷಣದಲ್ಲಿ ಮೂಡಿತಲ್ಲ!  ಅದನ್ನು ತಿಳಿಯುವ ಉದ್ದೇಶವಾಗಿ ಅವರ ಫೋಟೊ ತೆಗೆಯಲು ಪ್ರಯತ್ನಿಸಿದೆ.  ಕೆಲವೊಂದರ ಉದ್ದೇಶವನ್ನು ನಾನು ನನಗನ್ನಿಸಿದಂತೆ ಕೊಟ್ಟಿದ್ದೇನೆ.  ನೀವು ಆ ಮಕ್ಕಳ ಚಿತ್ರಗಳನ್ನು ನೋಡಿದಾಗ ಅದನ್ನು ಮೀರಿದ ಬೇರೆ ಭಾವನೆಗಳು ನಿಮಗೆ ಬರಬಹುದು ಅಂದುಕೊಂಡಿದ್ದೇನೆ. ಈಗ ಚಿತ್ರಸಂತೆಯಲ್ಲಿನ ಮಕ್ಕಳ ಚಿತ್ರಗಳನ್ನು ನೋಡೋಣ ಬನ್ನಿ.

ನಾನು ಮನೆಯಲ್ಲೇ ಚೆನ್ನಾಗಿ ನಿದ್ದೆ ಮಾಡುತ್ತಿದ್ದೆ, ಇದರ ಮದ್ಯೆ ನಮ್ಮಪ್ಪ ಮೊಬೈಲ್ ಬೇರೆ


ಇಲ್ಲಿರುವ ಕಲಾವಿದರಿಗೆಲ್ಲಾ ನನ್ನ ಕಡೆಯಿಂದ ಹ್ಯಾಟ್ಸಪ್!


                  ಯಾರೋ ನನ್ ಫೋಟೊ ತೆಗಿತಾವರಲ್ಲ!


ವಾಹ್! ಈ ಚಿತ್ರ ಸೂಪರ್!

       
                                     

  ಯಾರದು!



ಅಯ್ಯೋ, ನಮ್ಮ ಅಪ್ಪ ಅಮ್ಮನಿಗೆ ಬುದ್ದಿಯಿಲ್ಲ, ಇಲ್ಲೆಲ್ಲೋ ಕರೆದುಕೊಂಡು ಬಂದಿದ್ದಾರೆ, ಮನೆಯಲ್ಲಿದ್ದಾರೆ ಮೊಬೈಲಿನಲ್ಲಿ ಗೇಮ್ ಅಥ್ವ  ಕಾರ್ಟೂನ್ ಚಾನಲ್ ನೋಡಬಹುದಿತ್ತು! 
                             

 ಚಿತ್ರಪಟ ತಗೊಳ್ಳಕ್ಕೆ ಬಂದ ನಮ್ಮಪ್ಪನಿಗೆ ಅಲ್ಲಿರುವ ಐಸ್ ಕ್ರೀಮ್ ಕೊಡಿಸಬೇಕು ಅನ್ನಿಸುತ್ತಿಲ್ಲವಲ್ಲ!
                 

ಆಕಾಶದಲ್ಲಿ ಹಾರಾಡುತ್ತಿರುವ ಏರೋಪ್ಲೇನಿನಲ್ಲಿ ನಾನು ಹೋಗೋದು ಯಾವಾಗ?
        

 ನೀನು ಎಲ್ಲಿಗೆ ಕರೆದುಕೊಂಡು ಹೋದ್ರೂ ನಾನು ನಿದ್ರೆ ಮಾಡೋದು ಹೀಗೇನೇ
           
 ನಾನು ಚೆನ್ನಾಗಿ ಕಾಣುತ್ತಿದ್ದಿನಲ್ವಾ? ಬೇಗ ಫೋಟೊ ತೆಗಿ
   
ಕುರಿ ಓಡಿಸಿಕೊಂಡು ಹೋಗುವ ಈ ಚಿತ್ರ ಸಕ್ಕತ್ ಆಗಿದೆ!


ಈ ರೀತಿ ಮೇಲೆ ಕುಳಿತುಕೊಂಡು ಲಾಲಿಪಪ್ ತಿನ್ನುತ್ತಿದ್ದರೇ......


ನಾನು ಬೀಳದಂತೆ ಗಟ್ಟಿಯಾಗಿ ಅಪ್ಪನ ತಲೆಯನ್ನು ಹೀಗೆ ಹಿಡಿದುಕೊಳ್ಳಬೇಕು 

ನನ್ನ ತರ ಇರೋ ಆ ಪಾಪು ಫೋಟೊ ಎಷ್ಟು ಚೆನ್ನಾಗಿದೆ!


       ಕೊನೆಯಲ್ಲಿ ಮತ್ತೊಂದು ವಿಚಾರ ನನ್ನ ಹಾಸನದ ಗೆಳೆಯನಾದ ಚಿತ್ರಕಲಾವಿಧ ಆರುಣ್ ಒಂದು ವರ್ಷದ ಹಿಂದೆ ನಮ್ಮ  ಮನೆಗೆ ಬಂದು ನಾನು ತೆಗೆದ ಅನೇಕ ಹಳ್ಳಿ ಜೀವನದ ಚಿತ್ರಗಳನ್ನು ತೆಗೆದುಕೊಂಡು ಹೋಗಿದ್ದ. ಅದರಲ್ಲಿ ಈ ಬಾರಿ ಚಿತ್ರಿಸಿದ್ದ ಮೇಕೆಗಳನ್ನು ಓಡಿಸಿಕೊಂಡು  ಬರುತ್ತಿರುವ ಹುಡುಗನ ಚಿತ್ರ "ಗೋಧೂಳಿ"  ಮುವತ್ತೊಂದು ಸಾವಿರಕ್ಕೆ ಮಾರಾಟವಾಗಿದ್ದು ನಿಜಕ್ಕೂ ಖುಷಿಯ ವಿಚಾರ ಆತನಿಗೆ ಅಭಿನಂದನೆಗಳು.

              ಹಾಸನದ ಗೆಳೆಯ ಮತ್ತು ಚಿತ್ರಕಲೆಗಾರ ಬಿಡಿಸಿದ "ಗೋಧೂಳಿ ಚಿತ್ರ"
                

     ಮುಂದಿನ ಲೇಖನದಲ್ಲಿ ಚಿತ್ರಸಂತೆ ವಿಭಿನ್ನ ಕ್ಯಾಮೆರಾಗಳ ಆಟಗಳನ್ನು ಬ್ಲಾಗಿನಲ್ಲಿ ಹಾಕುತ್ತೇನೆ.
 

      ಚಿತ್ರಗಳು ಮತ್ತು ಲೇಖನ
        ಶಿವು.ಕೆ




Tuesday, March 23, 2010

ಚಿತ್ರಸಂತೆಯಲ್ಲಿ ಪುಟ್ಟ ಪುಟ್ಟ ಕತೆಗಳು.


೧. ಚಿತ್ರಸಂತೆಯಲ್ಲಿ ಆತ ಗಾಂಧಿಭವನದ ಬಳಿ ಚಿತ್ರಗಳನ್ನು ನೋಡಲು ಪ್ರಾರಂಭಿಸಿದಾಗ ಮಧ್ಯಾಹ್ನ ೧೨ ಗಂಟೆ. ಇಡೀ ಚಿತ್ರಸಂತೆಯನ್ನು ನೋಡಿ ಮುಗಿಸಿ ನಮ್ಮ ಬಳಿಗೆ ಬರುವ ಹೊತ್ತಿಗೆ ಸಂಜೆ ಆರುಗಂಟೆ. ಆ ಕಲಾಭಿಮಾನಿ ಚಿತ್ರಸಂತೆಯಲ್ಲಿನ ಎಲ್ಲಾ ಚಿತ್ರಗಳನ್ನು ನೋಡಿ ಅದೆಷ್ಟು ಗೊಂದಲಗೊಂಡಿದ್ದನೆಂದರೆ ನನ್ನ ಫೋಟೊಗಳನ್ನು ಮುಟ್ಟಿ ನೋಡಿ "ಅಹಾ ಈ ಪೇಂಟಿಂಗ್ಸ್ ಎಷ್ಟು ಚೆನ್ನಾಗಿದೆ" ಅಂದವನೇ ಪಕ್ಕದಲ್ಲಿದ್ದ ನನ್ನ ಭಾವನ ದೊಡ್ಡ ಚಿತ್ರಕಲಾಕೃತಿಯನ್ನು ನೋಡಿ ಈ ಫೋಟೊ ಎಲ್ಲಿ ತೆಗೆದಿದ್ದು ಅಂತ ಕೇಳಿದ. ಅವನ ಮಾತನ್ನು ಕೇಳಿ ನಾವಿಬ್ಬರೂ ಅಚ್ಚರಿಯಿಂದ ಮುಖ ನೋಡಿಕೊಂಡೆವು.


೨. ಆ ಪ್ರೇಮಿಗಳು ಕಳೆದ ಚಿತ್ರಸಂತೆಗೂ ಬಂದಿದ್ದರು. ಈ ಬಾರಿಯೂ ಬಂದಿದ್ದಾರೆ. ಆದ್ರೆ ಚಿತ್ರಸಂತೆಯೊಂದು ಅವರಿಗೆ ನೆಪ. ಬೆಂಗಳೂರಿನ ಎಲ್ಲಾ ಜಾಗದಲ್ಲಿ ಆಡ್ಡಾಡಿ ಸಾಕಾಗಿ ಚಿತ್ರಸಂತೆಯಲ್ಲಿ ಮತ್ತಷ್ಟು ಪ್ರೇಮಿಗಳಾಗುತ್ತಿದ್ದಾರೆ. ಅವರಂದುಕೊಂಡಿದ್ದಾರೆ ನಮ್ಮನ್ಯಾರು ಗಮನಿಸುವುದಿಲ್ಲವೆಂದು. ಆದ್ರೆ ಆವನ್ಯಾವನೋ ಛಾಯಾಗ್ರಾಹಕ ಇವರ ಪ್ರೇಮದಾಟವನ್ನು ಫೋಟೊ ತೆಗೆದೇಬಿಟ್ಟಿದ್ದ. ಆ ಫೋಟೊ ಇನ್ನೊಬ್ಬ ಚಿತ್ರಕಾರನ ಕೈಸೇರಿ ಅದ್ಭುತ ಕಲಾಕೃತಿಯಾಗಿ ಈ ವರ್ಷದ ಸಂತೆಯಲ್ಲಿ ಮಾರಾಟಕ್ಕಿದೆ. ಮತ್ತೆ ಈ ಬಾರಿ ಇವರನ್ನು ನೋಡಿದ ಛಾಯಾಗ್ರಾಹಕ ಕ್ಯಾಮೆರಾ ಕೈಗೆತ್ತಿಕೊಂಡ. ಆದ್ರೆ ಇವರಿಬ್ಬರೂ ಇದ್ಯಾವುದರ ಪರಿವೆಯೂ ಇಲ್ಲದೇ ಮತ್ತಷ್ಟು ಪ್ರೇಮಿಗಳಾಗುತ್ತಿದ್ದರು.


೩. ಸಂಜೆಯಾಗುತ್ತಿತ್ತು. ಇನ್ನೊಂದು ಸಾವಿರ ವ್ಯಾಪಾರವಾದರೆ ಹತ್ತು ಸಾವಿರವಾಗುತ್ತದೆ ಅಂತ ಆ ಕಲಾವಿದನು ಜೇಬಿನಲ್ಲಿದ್ದ ಒಂಬತ್ತು ಸಾವಿರಗಳ ನೋಟುಗಳನ್ನು ಮುಟ್ಟಿನೋಡಿಕೊಳ್ಳುತ್ತಿದ್ದರೇ, ಉತ್ತಮ ಚಿತ್ರಕಲಾಕೃತಿಯನ್ನು ಕೊಳ್ಳಲು ಹೇಗೆ ಚೌಕಾಸಿ ಮಾಡುಬೇಕು ಅಂತ ಈ ಕಲಾಸಕ್ತ ಜೇಬಿನೊಳಗಿದ್ದ ಒಂದು ಸಾವಿರ ನೋಟನ್ನು ಮುಟ್ಟಿನೋಡಿಕೊಳ್ಳುತ್ತಿದ್ದ. ಹೀಗೆ ಆ ರಸ್ತೆಯಲ್ಲಿದ್ದ ಕಲಾವಿದರು, ನೋಡಲು-ಕೊಳ್ಳಲು ಬಂದ ಕಲಾಭಿಮಾನಿಗಳ ಕೈಗಳೆಲ್ಲಾ ತಮ್ಮ ತಮ್ಮ ಜೇಬುಗಳಲ್ಲಿದ್ದವು. ಇವೆಲ್ಲಾದರ ನಡುವೆ ಅಲ್ಲಲ್ಲಿ ಪುಟ್ಟ ಪುಟ್ಟ ಮಕ್ಕಳು ತಮ್ಮೆದುರಿಗಿದ್ದ ಚಿತ್ರಗಳನ್ನು ಮುಟ್ಟುತ್ತಾ, ಇನ್ನೂ ಹತ್ತಿರ ಹೋಗಿ ಮೂಗಿನಿಂದ ಬಣ್ಣಗಳ ವಾಸನೆಯನ್ನು ಆಹ್ಲಾದಿಸುತ್ತಾ, ಕಣ್ಣರಳಿಸಿ ನೋಡಿ, ಮನತುಂಬಿಕೊಳ್ಳುತ್ತಿದ್ದವು.

Add Image


೪.ಆತ ಕುಳಿತಲ್ಲೇ ಮುಖಚಿತ್ರ ರಚಿಸುವ ಕಲಾವಿದ. ಸಂಜೆ ಐದುಗಂಟೆಗೆ ಒಂದು ಪುಟ್ಟ ಹುಡುಗಿಯನ್ನು ಎದುರಿಗೆ ಕೂರಿಸಿ ಮುಖಚಿತ್ರ ಬರೆಯಲು ಶುರುಹಚ್ಚಿಕೊಂಡ. ಕಣ್ಣಮುಂದೆ ಕಂಡಿದ್ದನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಮುಖಚಿತ್ರ ಕಲಾವಿದನಾದರೂ ಅವನದು ನಿಧಾನವೇ ಪ್ರಧಾನ ಎನ್ನುವದು ಅವನ ಮಂತ್ರ. ಅದರ ಪರಿಣಾಮ ಆರುಗಂಟೆಯ ಹೊತ್ತಿಗೆ ಮುಖದ ಹೊರರೇಖೆಗಳನ್ನು ಎಳೆದಿದ್ದ. ೬-೩೦ರ ಹೊತ್ತಿಗೆ ಕತ್ತಲಾಗಿ ಆ ಬೆಳ್ಳಗಿನ ಮಗುವಿನ ಮುಖಕ್ಕೂ ಕತ್ತಲು ಆವರಿಸುತ್ತಿತ್ತು. ೭-೩೦ಕ್ಕೆ ಎದುರಿಗೆ ಕುಳಿತಿದ್ದ ಬೆಳ್ಳಂಬೆಳಗಿನ ಮಗುವಿನ ಮುಖ ಚಿತ್ರದಲ್ಲಿ ಕಪ್ಪಾಗಿತ್ತು.


೫. ಸದಾ ಹೊಸತರ ಬಗ್ಗೆ ಚಿಂತಿಸುವ ಕಲಾವಿದನಾಗಿದ್ದ ಆತ ಅವತ್ತು ಮಾರಾಟಕ್ಕೆ ಯಾವುದೇ ಕಲಾಕೃತಿಯನ್ನು ತಂದಿರಲಿಲ್ಲ. ಆದ್ರೆ ಕೈಯಲ್ಲಿ ಒಂದು ಕ್ಯಾನ್ವಸ್,ಬ್ರಷ್, ಬಣ್ಣಗಳನ್ನು ಹಿಡಿದಿದ್ದ. ಅರ್ಧದಿನ ಚಿತ್ರಸಂತೆ ಸುತ್ತಾಡಿದರೂ ಹೊಸತೇನು ಸ್ಪೂರ್ತಿ ಸಿಕ್ಕಲಿಲ್ಲವಾದ್ದರಿಂದ ಬೇಸರಗೊಂಡು ಇದೆಲ್ಲಾ ಗೊಡವೆಯೇ ಬೇಡವೆಂದು ಪಕ್ಕದಲ್ಲಿದ್ದ ಅಪಾರ್ಟ್‍ಮೆಂಟಿನ ಟೆರಸ್ ಮೇಲೆ ವಿಶ್ರಾಂತಿಗೆಂದು ಕುಳಿತವನು ಕೆಳಗೆ ನೋಡಿದ. ಸಾಗರೋಪಾದಿಯಲ್ಲಿ ಚಿತ್ರಸಂತೆ ನೋಡಲು ಬರುತ್ತಾಹೋಗುತ್ತಿದ್ದರು. ನೋಡನೋಡುತ್ತಿದ್ದಂತೆ ಅದನ್ನೆ ಕ್ಯಾನ್ವಸ್ ಮೇಲೆ ಬಿಡಿಸಿ ಬಣ್ಣದಿಂದ ಅಲಂಕರಿಸಿ ಕೆಳಗೆಬಂದು ತನ್ನ ಜಾಗದಲ್ಲಿ ಪ್ರದರ್ಶನಕ್ಕಿಟ್ಟ. ಇದು ನಿಜಕ್ಕೂ ಹೊಸತನವೆಂದು ಕಲಾಸಕ್ತರು ಅದನ್ನು ಕೊಳ್ಳಲು ಮುಗಿಬಿದ್ದರು.

ಈ ನ್ಯಾನೋ ಕತೆಗಳೆಲ್ಲಾ [14-3-2010]ಭಾನುವಾರ ವಿಜಯಕರ್ನಾಟಕದಲ್ಲಿ ಬಂದಿದ್ದವು.

ಚಿತ್ರಗಳು ಮತ್ತು ಲೇಖನ
ಶಿವು.ಕೆ.

Friday, January 29, 2010

ಮತ್ತಷ್ಟು ವೈವಿಧ್ಯಮಯ ಬಹುಮಾನಿತ ಚಿತ್ರಗಳು

೩೧ನೇ ರಾಷ್ಟ್ರಮಟ್ಟದ ಛಾಯಾಚಿತ್ರಗಳ ಪ್ರದರ್ಶನ ಮುಂದಿನ ತಿಂಗಳು ಫೆಬ್ರವರಿ ದಿನಾಂಕ 4ರ ಗುರುವಾರದಿಂದ 7ನೇಭಾನುವಾರದ ಸಂಜೆ ಎಂಟು ಗಂಟೆಯವರೆಗು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವುದರಿಂದ ಅದರ ಸಲುವಾಗಿ ಮತ್ತಷ್ಟು ವಿಭಾಗಗಳ ಬಹುಮಾನ ವಿಜೇತ ಚಿತ್ರಗಳನ್ನು ನೋಡೋಣ ಬನ್ನಿ.

ಪ್ರಕೃತಿ ಪ್ರಿಂಟ್ ವಿಭಾಗದಲ್ಲಿ ಬಹುಮಾನ ಪಡೆದ ಚಿತ್ರಗಳು.

ಮೊದಲ ಬಹುಮಾನ ಪಡೆದ ಚಿತ್ರ:"ಕ್ರೂಗರ್ ಹೊಳೆಯ ದಂಡೆಯಲ್ಲಿ ಚಿರತೆ"
ಛಾಯಾಗ್ರಾಹಕ ಎಸ್. ವಲ್ಲಾಳ್ ಮಲ್ಲಿಕಾರ್ಜುನ. ಬೆಂಗಳೂರು

ಎರಡನೇ ಬಹುಮಾನ ಪಡೆದ ಚಿತ್ರ:"ಬೇಟೆಯನ್ನು ಹೊತ್ತೆಯ್ಯುತ್ತಿರುವ ಚಿರತೆ"
ಛಾಯಾಗ್ರಾಹಕ ಎಸ್. ವಲ್ಲಾಳ್ ಮಲ್ಲಿಕಾರ್ಜುನ. ಬೆಂಗಳೂರು.


ಮೂರನೇ ಬಹುಮಾನ ಪಡೆದ ಚಿತ್ರ "ಬೇಟೆಯನ್ನು ಹೊತ್ತ ಸಿಂಹ"
ಛಾಯಾಗ್ರಾಹಕ: ಬಿ.ಕೆ.ಸಿನ್ಹ. ಪಾಟ್ನ.


ಅತ್ಯುತ್ತಮ ಹಕ್ಕಿ ಪ್ರಶಸ್ಥಿ ಪಡೆದ ಚಿತ್ರ: "ಪೈಡ್ ಕಿಂಗ್‍ಫಿಶರ್ ಹಾರಾಟದಲ್ಲಿ"
ಛಾಯಾಗ್ರಾಹಕ: "ಜಿ.ಎಸ್.ರವಿಶಂಕರ್. ಮೈಸೂರು.

ಅರ್ಹತಾ ಪತ್ರ ಪಡೆದ ಚಿತ್ರ: "ಸಾರಂಗ ಬೇಟೆ ಹಿಡಿದ ಹುಲಿ"
ಛಾಯಾಗ್ರಾಹಕ: "ಎಮ್.ವಿ.ಸಿದ್ಧಾರ್ಥ್ ಮಲ್ಲಿಕ್. ಬೆಂಗಳೂರು.


ಎರಡನೇ ಅರ್ಹತ ಪತ್ರ ಪಡೆದ ಚಿತ್ರ:"ರಿವರ್ ಟರ್ನ್ ಮರಿಯ ಜೊತೆ"
ಛಾಯಾಗ್ರಾಹಕ: "ಹೆಚ್.ಬಿ.ರಾಜೇಂದ್ರ" ಬೆಂಗಳೂರು.


ವರ್ಣ ಚಿತ್ರಗಳ ವಿಭಾಗದ ಬಹುಮಾನ ವಿಜೇತ ಚಿತ್ರಗಳು.

ಮೊದಲ ಬಹುಮಾನ ವಿಜೇತ ಚಿತ್ರ" ಮರಗಳ ಕಡೆಗೆ"
ಛಾಯಾಗ್ರಾಹಕ: ಸುಬ್ರತಾ ದಾಸ್. ಕೋಚ್ ಬಿಹಾರ


ದ್ವಿತೀಯ ಬಹುಮಾನ ವಿಜೇತ ಚಿತ್ರ: ಭುವಿಯ ಸ್ವರ್ಗ"
ಛಾಯಾಗ್ರಾಹಕ: ಎಸ್. ಲೋಕೇಶ್. ಬೆಂಗಳೂರು.

ಮೂರನೇ ಬಹುಮಾನ ವಿಜೇತ ಚಿತ್ರ: " ಶ್ಲೋಕ"
ಛಾಯಾಗ್ರಾಹಕ : ಸುಭಾಸ್ ಜೀರಂಗೆ. ಮುಂಬೈ

ಮೊದಲ ಆರ್ಹತ ಪತ್ರ ಪಡೆದ ಚಿತ್ರ "ಸೆಂಟಿಮೆಂಟಲಿಷ್ಟ್"
ಛಾಯಾಗ್ರಾಹಕ: ಬಿಜನ್ ಕುಮಾರ್ ಮಂಡಲ್. ಕೊಲ್ಕತ್ತ.

ಎರಡನೇ ಅರ್ಹತಾ ಪತ್ರ ಪಡೆದ ಚಿತ್ರ: "ಚಿನ್ನದ ಕೂದಲಿನ ಮಗು"
ಛಾಯಾಗ್ರಾಹಕ: ಕೆ.ಜಿ.ಪದ್ಮನಾಭ. ಬೆಂಗಳೂರು.

ಕಪ್ಪು-ಬಿಳುಪು ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.
ಅರ್ಹತಾ ಪತ್ರ ಪಡೆದ ಚಿತ್ರ: "ಸುಂದರ ಆಡುಗೆ"
ಛಾಯಾಗ್ರಾಹಕ: ಟಿ.ಶ್ರೀನಿವಾಸ ರೆಡ್ಡಿ. ವಿಜಯವಾಡ.

ಎರಡನೇ ಅರ್ಹತಾ ಪತ್ರ ಪಡೆದ ಚಿತ್ರ: "ಮೋನಿಷ"
ಛಾಯಾಗ್ರಾಹಕ: ಕೆ.ಎಸ್.ಶ್ರೀನಿವಾಸ್. ಬೆಂಗಳೂರು.

ಮೂರನೇ ಅರ್ಹತ ಪತ್ರ ಪಡೆದ ಚಿತ್ರ: "ರಾತ್ರಿ ದೃಶ್ಯ".
ಛಾಯಾಗ್ರಾಹಕ: ಸುಬ್ರತಾ ದಾಸ್. ಕೋಚ್ ಬಿಹಾರ್.


ಅತ್ಯುತ್ತಮ ಪೋರ್ಟ್ರೈಟ್ ಬಹುಮಾನ ಪಡೆದ ಚಿತ್ರ: "ಕನಸನ್ನು ಬೆಂಬತ್ತಿ"
ಛಾಯಾಗ್ರಾಹಕ:"ಪಾಲ್ ಅನೂಪ್" ಕೊಲ್ಕತ್ತ.


ದ್ವಿತೀಯ ಬಹುಮಾನ ವಿಜೇತ ಚಿತ್ರ: "ಶನಿವಾರ ರಾತ್ರಿ"
ಛಾಯಾಗ್ರಾಹಕ: :"ಪಾಲ್ ಅನೂಪ್" ಕೊಲ್ಕತ್ತ.


ಮೊದಲ ಬಹುಮಾನ ವಿಜೇತ: "ಕನಸಿನ ಮನೆ"
ಛಾಯಾಗ್ರಾಹಕ: ಶಿವು.ಕೆ. ಬೆಂಗಳೂರು.
ಫೆಬ್ರವರಿ ನಾಲ್ಕರಿಂದ ಏಳರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ಫೋಟೊಗಳ ಉತ್ಸವದಲ್ಲಿ ಬೇಟಿಯಾಗೋಣ. ಬರುತ್ತಿರಲ್ಲಾ!

\-------------------------\
\---------------------------------------------\
ಚಿತ್ರಸಂತೆಯ ಬಗ್ಗೆ ಒಂದು ವಿಚಾರ

ಈ ಕೆಳಗಿನ ಚಿತ್ರವನ್ನು ನೋಡಿ. ಸಂಜೆ ಸೂರ್ಯಮುಳುಗುವ ಹೊತ್ತಿಗೆ ಎತ್ತಿನ ಗಾಡಿ ಮನೆಕಡೆಗೆ ಬರುತ್ತಿರುವ ದೃಶ್ಯದ ಸುಂದರವಾದ ಕಲಾಕೃತಿ ಗೋಡೆಯನ್ನು ಆಲಂಕರಿಸಿದೆಯಲ್ಲವೇ. ಈ ಸುಂದರ ಪೇಂಟಿಂಗ್ ಮಾಡಿದ್ದು ನನ್ನ ಶ್ರೀಮತಿಯ ದೊಡ್ಡಪ್ಪನ ಮಗನಾದ ವಸಂತ್. ಅವರು ಇರುವುದು ಹಾಸನದಲ್ಲಿ . ಅಲ್ಲಿನ ಒಂದು ಶಾಲೆಯಲ್ಲಿ ಚಿತ್ರಕಲಾ ಉಪದ್ಯಾಯರಾಗಿರುವ ಅವರು ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಗೆ ಇಂಥ ಹತ್ತಾರು ಚಿತ್ರಗಳನ್ನು ತರುತ್ತಾರೆ. ನಾನು ಕ್ಲಿಕ್ಕಿಸಿದ ಚಿತ್ರಗಳನ್ನೆಲ್ಲಾ ಪಡೆದುಕೊಂಡು ಅವರು ಮತ್ತು ಅವರ ಶಿಷ್ಯಂದಿರು ಇಂಥ ಸುಂದರ ಪೇಂಟಿಂಗ್ ಮಾಡಿಕೊಂಡು ಚಿತ್ರ ಸಂತೆಗೆ ತರುತ್ತಾರೆ.
ಬಿಡದಿಯಲ್ಲಿರುವ ಈ ಮನೆಗೆ ಕಳೆದ ತಿಂಗಳು ಫೋಟೊ ಕ್ಲಿಕ್ಕಿಸಲು ಹೋದಾಗ ಈ ಚಿತ್ರಕಲಾಕೃತಿಯನ್ನು ನೋಡಿ ಅದನ್ನು ಪೇಂಟ್ ಮಾಡಿರುವುದು ನನ್ನ ಶ್ರೀಮತಿಯ ಅಣ್ಣನೆಂದು, ಹೇಳಿ ಅದರ ಮೂಲ ಚಿತ್ರವನ್ನು ಕೊಟ್ಟಾಗ ಅದನ್ನು ಮತ್ತೊಂದು ಕೋಣೆಯಲ್ಲಿ ಹಾಕಿದ್ದಾರೆ. ಅಲ್ಲಿಗೆ ನಾನೇ ಕ್ಲಿಕ್ಕಿಸಿದ ಫೋಟೊ ಮತ್ತು ಅದನ್ನು ನೋಡಿಕೊಂಡು ಬಿಡಿಸಿದ ಕಲಾಕೃತಿ ಎರಡು ಒಂದೇ ಮನೆಯಲ್ಲಿ ಸೇರಿರುವುದು ಎಂಥ ಕಾಕತಾಳಿಯವಲ್ಲವೇ...
ಆ ಮನೆಯವರು ಈಗಾಗಲೇ ದಿನಾಂಕ ಜನವರಿ ೩೧ರ ಭಾನುವಾರ ನಡೆಯುವ ಚಿತ್ರಸಂತೆಗೆ ಬಂದು ಮತ್ತಷ್ಟು ಛಾಯಾಚಿತ್ರ ಮತ್ತು ಪೇಂಟಿಂಗ್ ಕೊಳ್ಳುವುದಾಗಿ ಹೇಳಿದ್ದಾರೆ.
ಆಂದಹಾಗೆ ನಾಳೆ ಭಾನುವಾರ[ಜನವರಿ೩೧] ಹೇಮಾಶ್ರಿ ಅಣ್ಣ ವಸಂತ್ ಮತ್ತು ಆವರು ಶಿಷ್ಯಂದಿರು ರಚಿಸಿರುವ ಎಲ್ಲಾ ಕಲಾಕೃತಿಗಳನ್ನು ನೋಡಲು ಮತ್ತು ಕೊಂಡುಕೊಳ್ಳಲು ಚಿತ್ರ ಸಂತೆಗೆ ಬನ್ನಿ. ಕಳೆದ ನಾಲ್ಕುವರ್ಷದಿಂದ ಅವರಿಗೆ ಖಾದಿಭಂಡಾರದ ಮುಂದೆಯೇ ಸ್ಥಳ ಸಿಗುತ್ತಿರುವುದರಿಂದ ಖಚಿತವಾಗಿ ಈ ಬಾರಿಯೂ ಅಲ್ಲಿಯೇ ಸ್ಟಾಲ್ ಇಡುತ್ತಾರೆ. ಅಂಥ ದೊಡ್ಡ ಕಲಾಕೃತಿಗಳ ಪಕ್ಕದಲ್ಲಿ ನಾನಿರುತ್ತೇನೆ. ಹಾಗಾದರೆ ನಾಳೆ ಚಿತ್ರ ಸಂತೆಯಲ್ಲಿ ಬ್ಲಾಗ್ ಗೆಳೆಯರೆಲ್ಲಾ ಬೇಟಿಯಾಗುವ!

ಶಿವು.ಕೆ.