Wednesday, April 17, 2013

ಕೊಲ್ಕತ್ತದಿಂದ ಬಂದ ಆ ಫೋನ್ ಕರೆ

                
   ಕೊಲ್ಕತ್ತದಿಂದ ಆ ಫೋನ್ ಕರೆ ಬಂದಾಗ ಏನು ಉತ್ತರಿಸಬೇಕೆಂದು ನನಗೆ ಗೊತ್ತಾಗಲಿಲ್ಲ. ಆ ಕ್ಷಣ ನಾನು ಆಕಾಶದಲ್ಲಿ ತೇಲುತ್ತಿದ್ದೇನೇನೋ ಅನ್ನಿಸಿತ್ತು. ಆ ಕೆಲವು ಕ್ಷಣಗಳಲ್ಲಿ ನನಗಾದ ಖುಷಿಯನ್ನು ಇಲ್ಲಿ ವರ್ಣಿಸಲು ಸಾಧ್ಯವಿಲ್ಲ.  ಒಂದು ಕ್ಷಣ ಮಗುವಿನಂತೆ ಕುಣಿದಾಡಿದೆ. "ಹೇಮಾ, ಹೇಮಾ" ಎಂದು ನನ್ನ ಶ್ರೀಮತಿಯನ್ನು ಕೂಗಿದಾಗ ಅದ್ಯಾಕೆ ಅಷ್ಟು ಜೋರಾಗಿ ಕಿರುಚುತ್ತೀರಿ, ನಾನು ಇಲ್ಲೇ ಇದ್ದೀನಲ್ಲ, ಅದೇನು ಹೇಳಿ ಎಂದಳು. ಅವಳಿಗೆ ವಿಚಾರವನ್ನು ತಿಳಿಸಿದೆ...ಅವಳ ಕಣ್ಣುಗಳು ಅರಳಿತು.  "ನಾನು ಕಲ್ಕತ್ತಗೆ ಬರಬಹುದಾ" ಅಂದಳು. ಅದನ್ನು ಅಮೇಲೆ ಹೇಳುತ್ತೇನೆ ಮೊದಲು ಅವರೊಂದಿಗೆ ಮಾತಾಡುತ್ತೇನೆ ಎಂದು ವಾಸ್ತವಕ್ಕೆ ಬಂದೆ.

 "ಶಿವೂಜಿ, ನಾನು ಸಂತೋಷ್ ಕುಮಾರ್ ಜನ, ಕಲ್ಕತ್ತದಿಂದ ಮಾತಾಡುತ್ತಿದ್ದೇನೆ. ಹೇಗಿದ್ದೀರಿ"
ಹೀಗೊಂದು ಮೊಬೈಲ್ ಕರೆ ಬಂದಾಗ ಸಹಜವಾಗಿ ಎಂದಿನಂತೆ "ನಾನು ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ, ಕಲ್ಕತ್ತ ಹೇಗಿದೆ, ನಿಮ್ಮ ಛಾಯಾಗ್ರಾಹಕ ಗೆಳೆಯರೆಲ್ಲಾ ಹೇಗಿದ್ದಾರೆ?" ಹೀಗೆ ನಾನು ಅವರ ಮಾತಿಗೆ ಹಿಂದಿಯಲ್ಲೇ ಉತ್ತರಿಸಿದ್ದೆ. ಇದು ಎಂದಿನಂತೆ ಕಲ್ಕತ್ತ, ಲಕ್ನೊ, ಪಾಟ್ನ, ಮುಂಬೈ, ವಿಜಯವಾಡ ಇನ್ನಿತರ ಕಡೆಗಳಿಂದ ನನ್ನ ಛಾಯಾಗ್ರಾಹಕ ಗೆಳೆಯರಾದ ದೇಭಸಿಸ್ ತರಫ್ದಾರ್, ಅಭಿಜಿತ್ ಡೆ ಸರ್, ಸಂತೋಷ್ ಕುಮಾರ್ ಜನ, ಋತ್ವಿಕ್ ಚರ್ಕವರ್ತಿ, ಶ್ಯಾಮಲ ದಾಸ್ ಸರ್, ಬಿ.ಕೆ ಸಿನ್ಹ ಸರ್, ಬಬೂತಿ ಭೂಷನ್ ನಂದಿ, ಪರೋಮಿತ್ರ, ನಾಗೇಶ್ ಸಕ್ಪಾಲ್, ತಮ್ಮ ಶ್ರೀನಿವಾಸ್ ರೆಡ್ಡಿ, ಇನ್ನೂ ಅನೇಕರು ಪ್ರೀತಿಯಿಂದ ನನಗೆ ಫೋನ್ ಮಾಡುತ್ತಾರೆ. ಫೋಟೊಗ್ರಫಿ ಬಗ್ಗೆ ಮಾತಾಡುತ್ತಾರೆ. ಅನುಭವಗಳು ವಿನಿಮಯವಾಗುತ್ತಿರುತ್ತವೆ. ನಿಜಕ್ಕೂ ಹೇಳಬೇಕೆಂದರೆ ಫೋನಿನಲ್ಲಿ ಮಾತಾಡುವಾಗ ಎರಡು ಕಡೆಯೂ ಸಂತೋಷವೆನ್ನುವ ವಿಚಾರ ನಲಿದಾಡುತ್ತಿರುತ್ತದೆ.

 ಆದ್ರೆ ಈಗ ಉಬಯಕುಶಲೋಪರಿ ನಂತರ ಸಂತೋಷ್ ಕುಮಾರ್ ಜನ ಅವರಿಂದ ಕೇಳಿದ ವಿಚಾರವೇ ನನ್ನ ಬದುಕಿನ ಆ ಕ್ಷಣದಲ್ಲಿ ನಿಜಕ್ಕೂ ಥ್ರಿಲ್ ಕೊಟ್ಟಿತ್ತು.

   "ನೀವು ನಮ್ಮ ನಗರ ಕಲ್ಕತ್ತಕ್ಕೆ ಬರಬೇಕು" ಎಂದು ಹಿಂದಿಯಲ್ಲಿ ಸಂತೋಷ್ ಕುಮಾರ್ ಜನ ಹೇಳಿದಾಗ "ಹೌದಾ ಏಕೆ ಏನು ವಿಚಾರ" ಎಂದು ನಾನು ಸಹಜವಾಗಿ ಕೇಳಿದ್ದೆ. "ನಮ್ಮ ಫೋಟೊಗ್ರಫಿ ಕಮಿಟಿಯವರು ನಡೆಸುವ "ಇಂಡಿಯನ್ ಗೋಲ್ಡನ್ ಇಂಟರ್‍ನಾಷನಲ್ ಡಿಜಿಟಲ್ ಸರ್ಕ್ಯುಟ್" ಅಂತರರಾಷ್ಟ್ರೀಯ ಸ್ಪರ್ಧೆಗೆ ನಿಮ್ಮನ್ನು ಜ್ಯೂರಿಯಾಗಿ ಆಯ್ಕೆ ಮಾಡಿದ್ದಾರೆ. ಆ ವಿಚಾರವನ್ನು ನಿಮಗೆ ತಿಳಿಸಿ ನಿಮ್ಮ ಒಪ್ಪಿಗೆ ಪಡೆಯಲು ಫೋನ್ ಮಾಡಿದ್ದೇನೆ" ಎಂದರು.

 ನಾನು ಮರು ಮಾತಾಡದೇ ಒಪ್ಪಿಗೆ ಸೂಚಿಸಿದ್ದೆ. ಏಕೆಂದರೆ ಇದು ನನ್ನ ಬದುಕಿನ ಬಹುದೊಡ್ಡ ಕನಸು. ಒಮ್ಮೆ ಕಲ್ಕತ್ತಾಗೆ ಹೋಗಬೇಕು. ಸುಮ್ಮನೇ ಸುತ್ತಾಡಿ ಊರು ನೋಡುವುದಕ್ಕಲ್ಲ.....ಈಗ ಸಧ್ಯಕ್ಕೆ ಪಿಕ್ಟೋರಿಯಲ್ ಫೋಟೊಗ್ರಫಿಯಲ್ಲಿ ಅದ್ಬುತ ಸಾಧನೆಯನ್ನು ಮಾಡಿರುವ ಪಶ್ಚಿಮ ಬಂಗಾಲ ಅದರಲ್ಲೂ ಕಲ್ಕತ್ತ ನಗರದ ಛಾಯಾಗ್ರಾಹಕರನ್ನು ಬೇಟಿಯಾಗಬೇಕು ಎನ್ನುವುದು ನನ್ನ ದೊಡ್ದ ಕನಸು.  ಆದ್ರೆ ಈಗ ಅದನ್ನೂ ಮೀರಿ ಅಲ್ಲಿ ಪ್ಯಾರಿಸ್ಸಿನ "ಪೆಡರೇಶನ್ ಇಂಟರ್‌ನ್ಯಾಷನಲ್ ಡಿ ಲ ಆರ್ಟ್" ಅಮೇರಿಕಾದ "ಫೋಟೊಗ್ರಫಿ ಸೊಸೈಟಿ ಅಪ್ ಅಮೇರಿಕಾ" ಮತ್ತು ನಮ್ಮ ದೇಶದ "ಪೆಡರೇಷನ್ ಅಪ್ ಇಂಡಿಯನ್ ಫೋಟೊಗ್ರಫಿ" ಮನ್ನಣೆಗಳನ್ನು ಪಡೆದಿರುವ "ಇಂಡಿಯನ್ ಗೋಲ್ಡನ್ ಇಂಟರ್‌ನ್ಯಾಷನಲ್ ಡಿಜಿಟಲ್ ಸರ್ಕ್ಯುಟ್ ೨೦೧೩’ ನಂತ ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ನಾನು ಒಬ್ಬ ಜ್ಯೂರಿಯಾಗುತ್ತೇನೆಂದು ಕನಸು ಮನಸಿನಲ್ಲೂ ನೆನಸಿರಲಿಲ್ಲ. ವಿಶ್ವದಾದ್ಯಂತ ನೂರಾರು ದೇಶಗಳ ಪ್ರತಿಭಾನ್ವಿತ ಛಾಯಾಗ್ರಾಹಕರ ಕಲಾತ್ಮಕ ಛಾಯಾಚಿತ್ರಗಳನ್ನು ನೋಡಿ ಅವುಗಳಲ್ಲಿ ಉತ್ತಮವಾದುದನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕಾದ ಪ್ರಕ್ರಿಯೆಯಲ್ಲಿ ನಾನು ಒಬ್ಬನಾಗಿದ್ದೇನೆಂಬ ವಿಚಾರ ನನ್ನ ಫೋಟೋಗ್ರಫಿ ಜೀವನದಲ್ಲಿ ನಿಜಕ್ಕೂ ಮರೆಯಲಾಗದ ಕ್ಷಣ.

 ನನ್ನ ಸಂಪೂರ್ಣ ಬಯೋಡಾಟವನ್ನು ಕೇಳಿದರು. ಅದನ್ನು ಮೇಲ್ ಮಾಡಿದೆ. ಹೀಗೆ ಆಯ್ಕೆಯಾದ ಜ್ಯೂರಿಗಳೆಲ್ಲರ ಬಯೋಡಾಟ ಮತ್ತು ಫೋಟೊಗ್ರಫಿ ಸಾಧನೆಯನ್ನು ಅವರು ಪ್ಯಾರಿಸ್ಸಿನ "ಪೆಡರೇಶನ್ ಇಂಟರ್‌ನ್ಯಾಷನಲ್ ಡಿ ಲ ಆರ್ಟ್" ಮತ್ತು ಅಮೇರಿಕಾದ "ಫೋಟೊಗ್ರಫಿ ಸೊಸೈಟಿ ಅಪ್ ಅಮೇರಿಕಾ" ಕಳಿಸುತ್ತಾರೆ. ಅಲ್ಲಿಂದ ಈ ಜ್ಯೂರಿಗಳೆಲ್ಲರೂ ಅಪ್ರೂವಲ್ ಆದಮೇಲೆ ಅವರೆಲ್ಲರೂ ಜ್ಯೂರಿಯಾಗಿ ಕಾರ್ಯ ನಿರ್ವಹಿಸಬಹುದು. ಇದು ನಿಯಮವೆಂದು ಅವರು ತಿಳಿಸಿದಾಗ ನನಗೆ ಹೊಸ ವಿಚಾರವೊಂದನ್ನು ಕಲಿತಂತಾಗಿತ್ತು.

 ಯಶವಂತಪುರ ರೈಲು ನಿಲ್ದಾಣದಲ್ಲಿ ಸಂತೋಷ್ ಕುಮಾರ್ ಜನ ಜೊತೆ

 ಗೆಳೆಯ ಸಂತೋಷ್ ಕುಮಾರ್ ಜನ ಈ ವಿಚಾರದಲ್ಲಿ ನನ್ನೊಂದಿಗೆ ಆಗಾಗ ಸಂಪರ್ಕದಲ್ಲಿದ್ದರು. ಕಳೆದ ಮಾರ್ಚ್ ತಿಂಗಳ ಹನ್ನೆರಡರಂದು ನಾನು ಬೆಂಗಳೂರಿಗೆ ಬರುತ್ತೇನೆ. ನಂತರ ಮಾರ್ಚ್ ಹತ್ತೊಂಬತ್ತರವರೆಗೆ ಫೋಟೊಗ್ರಫಿಗಾಗಿ ಮೈಸೂರು, ಕಬಿನಿ, ರಂಗನತಿಟ್ಟು ಸುತ್ತಾಡುತ್ತಿರುತ್ತೇವೆ, ನಮಗೆ ಅ ಸ್ಥಳಗಳ ಮಾಹಿತಿ, ಇವಲ್ಲದೇ ರೈಲುಗಾಡಿಗಳ ವಿವರ, ಬಸ್ ಓಡಾಟ, ಉಳಿದುಕೊಳ್ಳುವ ಸ್ಥಳ ಇತ್ಯಾದಿಗಳಿಗಾಗಿ ಸ್ವಲ್ಪ ಮಾಹಿತಿ ಕೊಡಿ ಎಂದಿದ್ದರು. ನನಗೆ ತಿಳಿದ ಮಟ್ಟಿಗೆ ಎಲ್ಲಾ ವಿವರವನ್ನು ಅವರಿಗೆ ಒದಗಿಸಿದ್ದೆ. ಆ ಪ್ರಕಾರ ಅವರ ಕರ್ನಾಟಕ ಅದರಲ್ಲೂ ಮೈಸೂರು, ಕಬಿನಿ, ರಂಗನತಿಟ್ಟು ಫೋಟೊಗ್ರಫಿ ಯಶಸ್ವಿಯಾಯ್ತು ಎಂದು ನನಗೆ ಫೋನ್ ಮಾಡಿ ತಿಳಿಸಿದಾಗ ನನಗೂ ಖುಷಿಯಾಗಿತ್ತು.  ನಿಮ್ಮ ಪ್ರವಾಸದಲ್ಲಿ ಬಿಡುವು ಮಾಡಿಕೊಂಡು ನಮ್ಮ ಮನೆಗೆ ಬನ್ನಿ ಎಂದು ಅಹ್ವಾನಿಸಿದ್ದೆ.  ಸಂತೋಷ್ ಒಪ್ಪಿಗೆಯನ್ನು ನೀಡಿದ್ದರು.  ಆದ್ರೆ ಅವರ ಟೈಟ್ ಫೋಟೊಗ್ರಫಿ ಶೆಡ್ಯೂಲ್‍ನಿಂದಾಗಿ ಅದು ಸಾಧ್ಯವಾಗಲಿಲ್ಲ. ಆದ್ರೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಅವರೊಂದಿಗೆ ಒಂದು ಗಂಟೆ ಕಳೆಯುವ ಅವಕಾಶವಂತೂ ಸಿಕ್ಕಿತ್ತು.  ಸಂತೋಷ್ ಕುಮಾರ್ ಜನರನ್ನು ಅದೇ ಮೊದಲು ನೋಡಿದ್ದು. ನನ್ನಂತೆ ಸುಮಾರಾದ ಎತ್ತರ, ನನ್ನದೇ ವಯಸ್ಸಿನ ಆತ ಸೀದ ಸಾದ ಸರಳವೆನಿಸಿದ್ದು ಅವರನ್ನು ನೇರವಾಗಿ ನೋಡಿದಾಗಲೇ...

   "ಇಂಡಿಯನ್ ಗೋಲ್ಡನ್ ಇಂಟರ್‌ನ್ಯಾಷನಲ್ ಡಿಜಿಟಲ್ ಸರ್ಕ್ಯುಟ್ ೨೦೧೩" ಗೆ ಆಯ್ಕೆದಾರರು ಮತ್ತು ಸ್ಪರ್ಧೆಗೆ ಎರಡು ಅಂತರರಾಷ್ಟ್ರೀಯ ಛಾಯಚಿತ್ರ ಸಂಸ್ಥೆಗಳಿಂದ ಮನ್ನಣೆ ದೊರಕಿದೆ. ನಮ್ಮ ವೆಬ್‍ಸೈಟಿನಲ್ಲಿ ಏಪ್ರಿಲ್ ಹದಿನೈದನೇ ತಾರೀಖಿನಂದು ಎಲ್ಲವನ್ನು ಅಧಿಕೃತವಾಗಿ ಹಾಕುತ್ತೇವೆ. ಮತ್ತು ನಿಮಗೆ ಅಧಿಕೃತವಾಗಿ ಪತ್ರವನ್ನು ಕಳಿಸುತ್ತೇವೆ ಎಂದಿದ್ದರು.

  ಇದೇ ಏಪ್ರಿಲ್ ಹದಿನೈದರಿಂದ ಅವರ ವೆಬ್ ಸೈಟಿನಲ್ಲಿ ಸ್ಪರ್ಧೆಗ ಕಳಿಸಲು ಬೇಕಾದ ಮಾಹಿತಿ, ನಿಯಮಗಳು, ಹೇಗೆ ಕಳಿಸಬೇಕು ಇತ್ಯಾದಿ ವಿವರಗಳು ಪ್ರಕಟವಾಗಿವೆ.

    ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ಕಿಸಿ :  
http://www.goldencircuit.org/Information.aspx




 ಮಾಸ್ಟರ್ ಆಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಡಾ.ಬಿ.ಕೆ. ಸಿನ್ಹ ಸರ್, ಶುಶಾಂತ ಬ್ಯಾನರ್ಜಿ ಸರ್, ಅನುಪ್ ಪಾಲ್ ಸರ್,  ಇವರ ಜೊತೆಗೆ ಎಕ್ಸಲೆನ್ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಡಾ. ಆಶೋಕ್ ಘೋಷ್, ಸುಬ್ರತಾ ದಾಸ್, ಅಮಿತಾಬ ಸಿಲ್, ಅಭಿಜಿತ್ ಡೆ, ಡಾ.ದೇಬದಾಸ್ ಬುನಿಯಾ ರಂಥ ಅತಿರಥ ಮಹಾರಥರೆಲ್ಲಾ ಪಶ್ಚಿಮ ಬಂಗಾಲ, ಬಿಹಾರ ರಾಜ್ಯಗಳಂಥ ಈಶಾನ್ಯ ಭಾರತದವರು.  ದಕ್ಷಿಣ ಭಾರತದಿಂದ ನಾನು ಅವರಿಗೆ ಜೊತೆಯಾಗುತ್ತಿದ್ದೇನೆ. 

                                     ದಿಘ ನಗರದ ಸಮುದ್ರ ಕಿನಾರೆ


ಮೂರು ಕಡೆ ನಡೆಯುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲನೆಯದಾಗಿ ಪಶ್ಚಿಮ ಬಂಗಾಲ ದಕ್ಷಿಣದ ತುತ್ತತುದಿಯಲ್ಲಿ ಸಮುದ್ರಕ್ಕೆ ಹೊಂದಿಕೊಂಡಂತಿರುವ "ದಿಘಾ" ನಗರದಲ್ಲಿ ಪ್ರಾರಂಭವಾಗುತ್ತದೆ. ಆಗಸ್ಟ್ ಆರರಂದು ಬೆಂಗಳೂರಿನಿಂದ ೧೨ ಗಂಟೆಯ ವಿಮಾನದಲ್ಲಿ ಹೊರಟು ಕೊಲ್ಕತ್ತ ತಲುಪಿ ಅಲ್ಲಿಂದ ನೂರ ತೊಂಬತ್ತು ಕಿಲೋ ಮೀಟರ್ ದೂರದ ದಿಘ ತಲುಪಬೇಕು. ಏಳು, ಎಂಟು, ಒಂಬತ್ತು ಮೂರು ದಿನದ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಮತ್ತೆ ನಾನು ಕೊಲ್ಕತ್ತ ತಲುಪಿ ಅಲ್ಲಿಂದ ಮಧ್ಯಾಹ್ನ ಮೂರುವರೆಗೆ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್.  ಈಗಾಗಲೇ ನನ್ನ ಪ್ರಯಾಣದ ಟಿಕೆಟ್ಟುಗಳೆಲ್ಲಾ ತಲುಪಿವೆ. ಇನ್ನು ನಾನು ಆಗಸ್ಟ್ ಆರು ದಿನಾಂಕವನ್ನು ಕಾಯುತ್ತಿದ್ದೇನೆ.

   ನನ್ನ ಮಟ್ಟಿಗೆ ಇದು ದೊಡ್ಡದಾದ ಖುಷಿಯ ವಿಚಾರ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

   ಪ್ರೀತಿಯಿಂದ..

   ಶಿವು.ಕೆ

20 comments:

ಚಿನ್ಮಯ ಭಟ್ said...

ಅಭಿನಂದನೆಗಳು ಸರ್....
ಫೋಟೋಗ್ರಫಿ ಎಂದರೆ ಫೋಟೋ ತೆಗೆಯುವುದು ಎಂಬುದಷ್ಟೇ ಗೊತ್ತಿದ್ದವ ನಾನು...ನೀವು,ದಿಗ್ವಾಸಣ್ಣ,ಪ್ರಕಾಶಣ್ಣನವರ ಚಿತ್ರಗಳನ್ನು ನೋಡಿ ಹಿಂಗೂ ಚಿತ್ರಗಳನ್ನು ತೆಗೆಯಬಹುದು ಎಂಬುದನ್ನು ನೋಡಿದ್ದೆ...ಆದರೆ ಆ ಕ್ಷೇತ್ರದ ಬಗ್ಗೆ ಪರಿಚಯ ಇರಲಿಲ್ಲ..ಈಗೀಗ ಏನೋ ಅಲ್ಪ ಸ್ವಲ್ಪ ಗೊತ್ತಾಗುತ್ತಿದೆ..
ಒಂದು ಸ್ಪರ್ಧೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸಿಕೊಟ್ಟಿರಿ..ಧನ್ಯವಾದಗಳು ನಿಮಗೆ ಅದಕ್ಕಾಗಿ..
ಕಲ್ಕತ್ತೆಯ ಪ್ರಯಾಣ ಸುಖಕರವಾಗಿರಲಿ....
ಖುಷಿಯಾಯ್ತು...ಜ್ಯೂರಿ ಎಂಬ ಪದದ ಅರ್ಥವೂ ನನಗೆ ಹೊಸದು...
ವಂದನೆಗಳು..
ನಮಸ್ತೆ :)

Srikanth Manjunath said...

ಜೀವನದ ಹೊಂಗನಸುಗಳಲ್ಲಿ ನವಿರಾದ ಭಾವ ಇದೆ.. ಮತ್ತು ಅದಕ್ಕೆ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ನಿಮ್ಮ ಈ ಸಂತಸದ ಪದಗಳ ಝರಿ ಉತ್ತಮ ಉದಾಹರಣೆ. ಒಳ್ಳೆಯ ಮನಸು, ಸಾಹಸ ಪ್ರತಿಭೆ ಇವೆಲ್ಲ ಮೆಳೈಸಿರುವ ನಿಮಗೆ ಈ ರೀತಿಯ ಒಂದು ಅಭಿಮಾನದ ಕರೆ ಮತ್ತು ಪ್ರತಿಭೆಯನ್ನು ಗುರುತಿಸುವಿಕೆ ನಿಮ್ಮ ಜೀವನದ ಯಶಸ್ಸಿನ ಪಥದಲ್ಲಿ ಸಿಗುತ್ತಿರುವ ಸುವಾಸಿತ ಹೂವು. ನಿಮ್ಮ ಸಂತಸವನ್ನು ನಿಮ್ಮ ಪದಗಳಲ್ಲಿ ಓದಿ ಅನುಭಸಿದೆ. ಅಭಿನಂದನೆಗಳು ಶಿವೂ ಸರ್.

ಚುಕ್ಕಿಚಿತ್ತಾರ said...

ಅಭಿನಂದನೆಗಳು ಶಿವೂ ಸರ್..

Aravind GJ said...

ಅಭಿನಂದನೆಗಳು!!

nenapina sanchy inda said...

Congrats and good luck Shivu. enjoy ur trip
:-)
malathi shenoy

Badarinath Palavalli said...

ಹೃತ್ಪೂರ್ವಕ ಅಭಿನಂದನೆಗಳು ಶಿವೂ ಸಾರ್. ನಿಮ್ಮಂತಹ ಅತ್ಯುತ್ತಮ ಛಾಯಾಗ್ರಾಹಕರು ನಮಗೆ ಪರಿಚಿತರು ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ. ಹೀಗೆ ನಿಮ್ಮ ಪ್ರತಿಭೆಯೂ ಜಾಗ ಮಾನ್ಯವಾಗಲಿ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಪ್ರತಿಭೆಗೆ ಮಾನ್ಯತೆ ಸಿಗುತಿರಲಿ.

ವಂದೇ ಛಾಯಾಗ್ರಹಣಂ ಶಿವಂ ಶಿವಂ...

ಸುಮ said...

ಅಭಿನಂದನೆಗಳು .

shivu.k said...

ಚಿನ್ಮಯ ಭಟ್,
ಫೋಟೊಗ್ರಫಿ ಬಗ್ಗೆ ನಿಮಗಿರುವ ಕುತೂಹಲ ಇನ್ನೂ ಹೆಚ್ಚಾಗಲಿ. ನಾನು ಇಲ್ಲಿ ತಿಳಿಸಿರುವ ಸ್ಪರ್ಧೆ ಒಂದು ಅಂತರರಾಷ್ಟ್ರೀಯ ಸ್ಪರ್ಧೆ. ನೂರಾರು ದೇಶಗಳಿಂದ 8-10 ಸಾವಿರದವರೆಗೂ ಛಾಯಾಗ್ರಾಹಕರ ಛಾಯಚಿತ್ರಗಳು ಸ್ಪರ್ಧೆಗೆ ಬರುತ್ತವೆ. ಅವುಗಳ ಕಲಾತ್ಮಕತೆಯನ್ನು ಗುರುತಿಸಿ 8-10 ಪ್ರಶಸ್ತಿಯನ್ನು ಮಾತ್ರ ನೀಡಲಾಗುತ್ತದೆ. ಇವುಗಳ ಆಯ್ಕೆ ಪ್ರಕ್ರಿಯೆ ಎರಡು ಮೂರು ದಿನವನ್ನು ತೆಗೆದುಕೊಳ್ಳುತ್ತದೆ. ನಾನು ಅಲ್ಲಿಗೆ ಹೋಗಿ ಬಂದ ನಂತರ ಅದರ ಬಗ್ಗೆ ಬ್ಲಾಗಿನಲ್ಲಿ ಬರೆಯುತ್ತೇನೆ.
ಧನ್ಯವಾದಗಳು.

shivu.k said...

ಶ್ರೀಕಾಂತ್ ಸರ್,

ಕಾವ್ಯಾತ್ಮಕ ಮಾತುಗಳ ಮೂಲಕ ಪ್ರೋತ್ಸಾಹದ ಪ್ರತಿಕ್ರಿಯೆಯನ್ನು ನೀಡಿದ್ದೀರಿ. ನಿಮ್ಮ ಪ್ರೋತ್ಸಾಹ ಮತ್ತು ಅಭಿನಂದನೆಗಳಿಗೆ ಧನ್ಯವಾದಗಳು.

shivu.k said...

ಚುಕ್ಕಿ ಚಿತ್ತಾರ ಮೇಡಮ್,
ಧನ್ಯವಾದಗಳು.

shivu.k said...

Aravind GJ

ಧನ್ಯವಾದಗಳು

shivu.k said...

ಮಾಲತಿ ಶೆಣೈ ಮೇಡಮ್,

ಧನ್ಯವಾದಗಳು

shivu.k said...

ಬದರಿನಾಥ್ ಪಲವಳ್ಳಿ ಸರ್,
ನನ್ನು ಛಾಯಾಗ್ರಾಹಣವನ್ನು ಮೆಚ್ಚಿ ಪ್ರೋತ್ಸಾಹ ನೀಡುತ್ತಿರುವುದರಲ್ಲಿ ನೀವು ಸದಾ ಮೊದಲಿಗರೆಂದು ನನಗೆ ಗೊತ್ತು. ನಿಮ್ಮ ಅಭಿಮಾನ ಹೀಗೆ ಇರಲಿ...
ಧನ್ಯವಾದಗಳು.

shivu.k said...

ಸುಮಾ ಮೇಡಮ್,
ಥ್ಯಾಂಕ್ಸ್,

sunaath said...

ಶಿವೂ,
ಇದು ನನಗೂ ಅತ್ಯಂತ ಸಂತಸದ ದಿನ. ನೀವು ಅಂತರರಾಷ್ಟ್ರೀಯ ಸ್ತರದ ಫೋಟೋಗ್ರಾಫಿ ಸ್ಪರ್ಧೆಯ ಜ್ಯೂರಿ ಆಗುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ. ಅಲ್ಲಿಯ ಅನುಭವಗಳನ್ನು ನಮ್ಮೊಡನೆ ಹಂಚಿಕೊಳ್ಳಿರಿ. ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸ್ವೀಕರಿಸಿರಿ.

shivu.k said...

ಸುನಾಥ್ ಸರ್,
ನೀವು ನಾನು ಬ್ಲಾಗ್ ಪ್ರಾರಂಭಿಸಿದಂದಿನಿಂದಲೂ ನನ್ನ ಬರವಣಿಗೆ ಮತ್ತು ಫೋಟೊಗ್ರಫಿಯನ್ನು ಪ್ರೋತ್ಸಾಹಿಸುತ್ತಿದ್ದೀರಿ...
ನಿಮ್ಮ ಪ್ರೀತಿಗೆ ಧನ್ಯವಾದಗಳು.
ಖಂಡಿತವಾಗಿ ಅಲ್ಲಿನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ.

VENU VINOD said...

congrats..share your experiences

Sudeepa ಸುದೀಪ said...

ಶಿವೂ ಸರ್, ಶುಭವಾಗಲಿ...
ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳಿ...
ಸುಮತಿ ದೀಪ ಹೆಗ್ಡೆ ...

balasubramanya said...

ಬಹಳ ಒಳ್ಳೆಯ ವಿಚಾರ ಶಿವೂ ಸಾರ್, ತುಂಬಾ ಖುಷಿಯಾಯಿತು. ಕನ್ನಡದ ಮಣ್ಣಿನ ಮಗ ಕಲ್ಕತ್ತಾದಲ್ಲಿ ದಿಗ್ವಿಜಯ ಸಾಧಿಸಲಿ. ಯಾವುದೇ ಪ್ರತಿಭೆ ಬೆಳಗುತ್ತದೆ ಎಂಬುದಕ್ಕೆ ನೀವೇ ಸಾಕ್ಷಿ. ಒಳ್ಳೆಯದಾಗಲಿ. ನಿಮ್ಮ ಕಲ್ಕತ್ತಾ ಪ್ರವಾಸ ಸುಖವಾಗಿರಲಿ. ಮತ್ತೊಮ್ಮೆ ಅಭಿನಂದನೆಗಳು.

AntharangadaMaathugalu said...

ಅಭಿನಂದನೆಗಳು ಶಿವು ಸಾರ್... ಕೊಲ್ಕತ್ತಾ ನಗರ ತುಂಬಾ ಅಪ್ಯಾಯಮಾನವಾದ ಜಾಗ. ಆದರೆ ಅಲ್ಲಿ ನೀವು ಕೆಲವು ದಿನಗಳು ತಂಗಿದರೆ ಮಾತ್ರ ಅದರ ಘಮ ಸಿಕ್ಕುವುದು. ಈಗ ಮುಂಚಿನಂತಿಲ್ಲದೆ ತುಂಬಾ ನವೀಕರಿಸಲ್ಪಟ್ಟಿದೆಯಂತೆ, ಆದರೂ ಇನ್ನೂ ಕೆಲವು ಜಾಗಗಳು ತಮ್ಮ ಹಳೆಯ ಪರಿಮಳವನ್ನು ಕಳೆದುಕೊಂಡಿಲ್ಲ..!! ’ರಸಗೊಲ್ಲಾ’ ಮತ್ತು ಥರಹೇವಾರಿ ’ಸಂದೇಶ್’ ಜನಪ್ರಿಯ ಸಿಹಿತಿಂಡಿಗಳು.. :-)... ನಿಮ್ಮ ಪ್ರವಾಸ ನಿಮಗೆ ಖುಶಿ ಹಾಗೂ ಯಶಸ್ಸು ತರಲಿ..

ಶ್ಯಾಮಲಾ