Thursday, May 23, 2013

"ಮತ್ತೆ ಮತ್ತೆ ತೇಜಸ್ವಿ" ಒಂದು ಅದ್ಬುತವಾದ ಸಾಕ್ಷ್ಯಾಚಿತ್ರ


     "ಮತ್ತೆ ಮತ್ತೆ ತೇಜಸ್ವಿ" ಸಾಕ್ಷ್ಯಾಚಿತ್ರವನ್ನು ನೋಡಿದವನು ಒಂದರ್ಧ ಗಂಟೆ ಮೌನವಾಗಿ ಕುಳಿತುಬಿಟ್ಟೆ. ಎಂಥ ಅದ್ಬುತವಾದ ಪ್ರಯತ್ನವದು. ನಿಜಕ್ಕೂ ಇದನ್ನು ಹೊರತಂದ  "ಜೆಕೆ ಮೂವಿಸ್" ಮತ್ತು "ಟೋಟಲ್ ಕನ್ನಡ" ಸಂಸ್ಥೆಗೆ ನನ್ನ  ಸಾವಿರ ಸಲಾಂ. ಕೆ ಪಿ. ತೇಜಸ್ವಿಯವರನ್ನು ಇಷ್ಟು ಚೆನ್ನಾಗಿ ಕಣ್ಣಮುಂದೆ ಅವರಿಲ್ಲದೇಯೂ ಕಟ್ಟಿಕೊಟ್ಟಿರುವ ಪರಮೇಶ್ವರ್.ಕೆ ಮತ್ತು ಅವರ ತಂಡದ ಪರಿಶ್ರಮ, ಸಂಶೋಧನೆ ಎದ್ದುಕಾಣುತ್ತದೆ. ಸಾಹಿತ್ಯಾಸಕ್ತರು ಮಾತ್ರವಲ್ಲ, ಬೇರೆ ಇತರ ಕ್ಷೇತ್ರಗಳ ಅಭಿರುಚಿಯುಳ್ಳವರು ಕೂಡ ಒಮ್ಮೆ "ಮತ್ತೆ ಮತ್ತೆ ತೇಜಸ್ವಿ" ಸಾಕ್ಷಚಿತ್ರವನ್ನು ಹಾಕಿಕೊಂಡು ನೋಡಲು ಕುಳಿತುಬಿಟ್ಟರೆ ಸಾಕು. ಎರಡು ಗಂಟೆ ಇಪ್ಪತ್ತೇಳು ನಿಮಿಷ ನಿಮ್ಮ ಮೈಮನಸ್ಸಿನೊಳಗೆ ತೇಜಸ್ವಿ ಒಂದಾಗುತ್ತಾರೆ. ಬೈಯುತ್ತಾರೆ, ವ್ಯಂಗ್ಯ ಮಾಡುತ್ತಾರೆ, ನಿಮ್ಮ ಪಕ್ಕದಲ್ಲಿ ಕುಳಿತು ಗದರುತ್ತಾರೆ, ಬದುಕಿನ ಪುಟಗಳನ್ನು ತೆರೆದುಕೊಳ್ಳುತ್ತಲೇ ತಮ್ಮ ಕೋವಿಯ ದಾರಿ, ಫಿಷಿಂಗ್ ದಾರಿ, ಫೋಟೊಗ್ರಫಿಯ ದಾರಿಯಲ್ಲಿ ನಿಮ್ಮನ್ನು ಕೈಯಿಡಿದು ಕರೆದುಕೊಂಡು ಹೋಗುತ್ತಾರೆ. ಫಿಷಿಂಗ್ ನ ಮೌನದೊಳಗೆ ಕರೆದುಕೊಂಡು ಹೋಗುತ್ತಾರೆ. ಫೋಟೊಗ್ರಫಿಯ ದಾರಿಯಲ್ಲಿ ಕ್ಯಾಮೆರ ಮತ್ತು ಹಕ್ಕಿಗಳ ನಡುವಿನ ಮಾತು ತೋರಿಸುತ್ತಾರೆ..ಮತ್ತಷ್ಟು ಸರಳವಾಗುತ್ತಾ ಪರಿಸರದ ಕೌತುಕತೆಯನ್ನು ತೆರೆದಿಡುತ್ತಾರೆ, ಕತ್ತಲ ಜಗತ್ತನ್ನು ತೇಜಸ್ವಿಯವರು ನೋಡುವ ರೀತಿಗೆ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಗಳು ಸಿಗುತ್ತವೆ ಎನ್ನುವಾಗ ನನಗೆ ಜುಗಾರಿ ಕ್ರಾಸ್‍ನ ರಾತ್ರಿ ರೈಲು ಪ್ರಯಾಣ ನೆನಪಾಯ್ತು........ ಹೇಳುತ್ತಾ ಹೋದರೆ ಖಂಡಿತ ಮುಗಿಯುವುದಿಲ್ಲ.


  "ಅವರು ಇಷ್ಟಪಡುವ ಬಿರಿಯಾನಿ ತಿಂದು ಸ್ವಲ್ಪ ಹೊತ್ತಿನ ನಂತರ.......ನಮ್ಮ ತೋಟದ ದೊಡ್ಡ ಮರ ಬಿದ್ದು ಹೋಯ್ತು"  ಎಂದು ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಹೇಳುವಾಗ ನನಗರಿವಿಲ್ಲದಂತೆ ನನ್ನ ಕಣ್ತುಂಬಿಕೊಂಡವು.

    ಅವರ ಬದುಕಿನ ಒಡನಾಡಿಗಳು, ಗೆಳೆಯರು, ಮೇಷ್ಟ್ರು, ಕೆಲಸಗಾರರು, ಸಾಹಿತಿಗಳು ಇನ್ನಿತರರನ್ನು ಮಾತಾಡಿಸುತ್ತಲೇ....ಅದ್ಬುತವಾದ "ಮತ್ತೆ ಮತ್ತೆ ನೆನಪಿಸಿಕೊಳ್ಳುವ ತೇಜಸ್ವಿ"ಯವರನ್ನು ನಮ್ಮೊಳಗೆ ಒಂದಾಗಿಸುವ, ಪರಿಸರದ ಬಗೆಗಿನ ಉತ್ಸುಕತೆಯನ್ನು ಹೆಚ್ಚಿಸುವ, ಕುತೂಹಲ ಮೂಡಿಸುವ ಈ ಕಿರುಚಿತ್ರ ಖಂಡಿತ ಕನ್ನಡದ ಮಟ್ಟಿಗೆ ಅದರಲ್ಲೂ ಕನ್ನಡ ಸಾಹಿತ್ಯದ ಮಟ್ಟಿಗೆ ನಮ್ಮ ಮುಂದಿನ ಪೀಳಿಗೆಯವರಿಗೆ ಒಂದು ಅಮೋಘವಾದ ದಾಖಲೆಯಾಗುವುದು ಖಂಡಿತ.

    ಅವರನ್ನು ಹತ್ತಿರದಿಂದ ನೋಡಿದ ಕಡಿದಾಳ್ ಮಂಜಪ್ಪ, ಜಿ.ಎಚ್. ನಾಯಕ್, ಜಯಂತ್ ಕಾಯ್ಕಿಣಿ, ಬಾಪು ಗಣೇಶ್, ಧನಂಜಯ ಜೀವಾಳ, ಪ್ರದೀಪ್ ಕೆಂಜಿಗೆ, ರಾಘವೇಂದ್ರ, ಡಾ. ಚಂದ್ರಶೇಖರ್ ಕಂಬಾರ್, ತೇಜಸ್ವಿಯವರ ಅಕ್ಕ, ಶ್ರೀಮತಿ ರಾಜೇಶ್ವರಿ ತೇಜಸ್ವಿ, ಗಿರೀಶ್ ಕಾಸರವಳ್ಳಿ....ಇನ್ನೂ ಅನೇಕರು ಅವರೊಂದಿಗಿನ ಒಡನಾಟವನ್ನು ಆತ್ಮೀಯವಾಗಿ ಹಂಚಿಕೊಳ್ಳುವಾಗ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಇನ್ನತ್ತು ವರ್ಷವಾದರೂ ನಮ್ಮೊಂದಿಗೆ ಇರಬಾರದಿತ್ತಾ...ಅನ್ನಿಸುತ್ತದೆ.

   ಈ ಸಾಕ್ಷಚಿತ್ರವನ್ನು ಸ್ವಪ್ನ ಪುಸ್ತಕ ಮಳಿಗೆಯಲ್ಲಿ ಕೊಂಡಿದ್ದು ೧೨೫ ರೂಪಾಯಿಗಳಿಗೆ.  ಅದನ್ನು ಈಗ ನೋಡಿದ ಮೇಲೆ ಸಾವಿರ ರೂಪಾಯಿಯಷ್ಟರ ಅನುಭವವಾಗಿ ನಿಮ್ಮನ್ನು ಕಾಡತೊಡಗುತ್ತದೆ. ತೇಜಸ್ವಿಯವರನ್ನು ಮುಖತ: ದೂರದಿಂದ ನಾನು ನೋಡಿದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ. ಅವತ್ತು ನನ್ನ ಕೈಯಲ್ಲಿ ಕ್ಯಾಮೆರವಿರಲಿಲ್ಲ.  ಅವತ್ತು ತೇಜಸ್ವಿಯವರ ಜೊತೆ ಜಯಂತ್ ಕಾಯ್ಕಿಣಿಯವರು ಇದ್ದುದನ್ನು ನೋಡುವುದಷ್ಟೇ ನನ್ನ ಭಾಗ್ಯವಾಗಿತ್ತು.

     ಈಗ ನನ್ನ ಮುಂದಿನ ಪೀಳಿಗೆಯವರಿಗೆ ಈ ಸಾಕ್ಷ್ಯಚಿತ್ರವನ್ನು ತೋರಿಸಲು ಜೋಪಾನವಾಗಿ ಎತ್ತಿಟ್ಟಿದ್ದೇನೆ. ಕಡಿಮೆಯೆಂದರೂ ನಾನು ಸಾಯುವಷ್ಟವರಲ್ಲಿ ಒಂದು ಸಾವಿರ ಜನರಿಗಾದರೂ ಇದನ್ನು ತೋರಿಸಿ ತೇಜಸ್ವಿಯವರ ಬಗ್ಗೆ, ಅವರ ಪುಸ್ತಕಗಳು, ಬರವಣಿಗೆ, ಪರಿಸರ ಕಾಳಜಿ, ಫೋಟೊಗ್ರಫಿಗಳ ಬಗ್ಗೆ ಅರಿವು ಮೂಡಿಸಬೇಕೆಂದು ನಿರ್ಧರಿಸಿದ್ದೇನೆ.

   ಇಂಥದೊಂದು ಅದ್ಬುತವಾದ ಸಾಕ್ಷಚಿತ್ರವನ್ನು ನಿರ್ಮಿಸಿದ ಪರಮೇಶ್ವರ .ಕೆ  ತಂಡ ಮತ್ತು ಅದನ್ನು ಹೊರತಂದ ಟೋಟಲ್ ಕನ್ನಡ ಬಳಗದವರಿಗೆ ಮತ್ತೊಮ್ಮೆ ನನ್ನ ಸಾವಿರ ಸಾವಿರ ಸಲಾಂ.

  "ಅವರನ್ನು ಪುಸ್ತಕದಲ್ಲಿ ಓದುವುದೊಂದು ದೊಡ್ಡ ಸುಖ" ಯೋಗರಾಜ್ ಭಟ್ಟರ ಮಾತು ಕೇಳಿ ನಾನು ಮತ್ತೆ ಮತ್ತೆ ತೇಜಸ್ವಿಯವರ ನೆನಪಿಗಾಗಿ, ಈ ಮೊದಲು ಎಷ್ಟು ಸಲ ಓದಿದ್ದರೂ ಬೇಸರವಾಗದೇ ಸಿಗುವ ದೊಡ್ದ ಸುಖಕ್ಕಾಗಿ,  ತೇಜಸ್ವಿಯವರ ಪುಸ್ತಕ ಮತ್ತೆ ಹೋಗಲು ಹೋಗುತ್ತಿದ್ದೇನೆ.



ಪ್ರೀತಿಯಿಂದ..

ಶಿವು.ಕೆ

6 comments:

ಚಿನ್ಮಯ ಭಟ್ said...

ಶಿವು ಸರ್...
ಧನ್ಯವಾದಗಳು ಪರಿಚಯಕ್ಕಾಗಿ...:)

Srikanth Manjunath said...

ಸುಂದರ ಬರಹ. ಇತ್ತೀಚಿಗೆ ರವಿ ತಮ್ಮ ಕ್ರೇಜಿ ಸ್ಟಾರ್ ಚಿತ್ರದ ಧ್ವನಿ ಸುರುಳಿ ಹೇಳಿದ ಮಾತು ನೆನಪಿಗೆ ಬಂತು. ಮನುಷ್ಯ ಸತ್ತಾಗ ಸಾಯಲ್ಲ... ನೆನಪಿಸಿಕೊಳ್ಳದೆ ಹೋದರೆ ಸಾಯ್ತಾನೆ ಅಂತ . ಎಷ್ಟು ನಿಜ ತೇಜಸ್ವಿ ಅವರು ಅಜರಾಮರ. ಈ ಸಾಕ್ಷ್ಯಚಿತ್ರವನ್ನು ಪರಿಚಯಿಸಿರುವ ನಿಮ್ಮ ಬರಹ ತುಂಬಾ ಸುಂದರವಾಗಿದೆ. ತೇಜಸ್ವಿ ನೆನಪನ್ನು ಆ ಸಿ. ಡಿ ಯಲ್ಲಿ ಹಾಗು ಪುಸ್ತಕಗಳ ರೂಪದಲ್ಲಿ ಹಿಡಿದಿಡಬೇಕು. ಸುಂದರ ಪರಿಚಯಕ್ಕೆ ಧನ್ಯವಾದಗಳು ಶಿವೂ ಸರ್

shivu.k said...

ಚಿನ್ಮಯ್ ಭಟ್: ಧನ್ಯವಾದಗಳು

shivu.k said...

ಶ್ರಿಕಾಂತ್ ಮಂಜುನಾಥ್ ಸರ್,
ತೇಜಸ್ವಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೋ...ಇಂಥವನ್ನು ಮುಂದಿನ ಪೀಳಿಗೆಗೆ ಕಾಯ್ದಿರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.ಪ್ರೀತಿಫೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

chinmay.N said...

Idara bagge gottiralilla. Khanditha noduttini

chinmay.N said...

Idara bagge gottiralilla. Khanditha noduttini