ಜನವರಿ ೨೬ರ ರಾತ್ರಿ ಬೆಂಗಳೂರಿನ ಜಯಮಹಲ್ ಪ್ಯಾಲೆಸ್‍ನಿಂದ ಹೊರಬರುವಷ್ಟರಲ್ಲಿ ಆಗಲೇ ಸಮಯ ೯-೪೦. ಅದೊಂದು ತೆರೆದ ಉದ್ಯಾನವನದಲ್ಲಿ ನಡೆದ ಅದ್ದೂರಿ ಮದುವೆಯ ಅರತಕ್ಷತೆ. ಕಡಿಮೆಯೆಂದರೂ ಐದು ಸಾವಿರಕ್ಕೂ ಹೆಚ್ಚು ಜನರಿದ್ದ ಅಂತ ಮದುವೆಯಲ್ಲಿ ಊಟಮಾಡದೆ ಹೊರಬಂದಿದ್ದೆ, ಅದಕ್ಕೆ ಕಾರಣ ಅವತ್ತೇ ರಾತ್ರಿ ನಾನು ಪುತ್ತೂರಿಗೆ ಹೋಗುವ ವೋಲ್ವೋ ಬಸ್ ಸಮಯ ರಾತ್ರಿ ಹತ್ತು ಮುವತ್ತು. ಕೊನೆಯ ಕ್ಷಣದಲ್ಲಿ ನಿಗದಿಯಾದ ಈ ಕ್ಯಾಂಡಿಡ್ ಫೋಟೊಗ್ರಫಿಯನ್ನು ಪುತ್ತೂರಿಗೆ ಹೋಗುವ ಕಾರಣದಿಂದಾಗಿ ಕೇವಲ 6-30 ರಿಂದ 8-30ರ ವರೆಗೆ ಮಾತ್ರ ಮಾಡಿಕೊಡುತ್ತೇನೆ ಅಂತ ಒಪ್ಪಿಕೊಂಡಿದ್ದೆ. ಆದ್ರೆ ಈ ಕ್ಯಾಂಡಿಡ್ ಫೋಟೊಗ್ರಫಿ ಎನ್ನುವುದಿದೆಯಲ್ಲ. ಇದು ಒಂಥರ ಮೈಮರೆಯುವಂಥದ್ದೇ ಸರಿ! ಹತ್ತು ಅತ್ಯುತ್ತಮ ಫೋಟೊಗಳು ಬೇಕೆಂದರೆ ಕಡಿಮೆಯೆಂದರೂ 100-150 ಫೋಟೊಗಳನ್ನಾದರೂ ಕ್ಲಿಕ್ಕಿಸಬೇಕು! ಮತ್ತೆ ಅಷ್ಟು ತೆಗೆದರೂ ಸಮಾಧಾನವಾಗುವುದಿಲ್ಲ! ಇನ್ನೂ ಏನಾದರೂ ಹೊಸತು ಕಾಣಬಹುದು, ಸಿಗಬಹುದು ಅನ್ನುವ ಕುತೂಹಲದಲ್ಲಿ ಊಟ ತಿಂಡಿ ಸಮಯ ಮರೆತೇ ಹೋಗಿರುತ್ತದೆ! ಮೊದಲ ಬಾರಿಗೆ ಈ ರೀತಿ ತೆರೆದ ಉದ್ಯಾನವನದಲ್ಲಿ ಕೇವಲ ಸೀರಿಯಲ್ ಸೆಟ್ ಮತ್ತು ಕೆಲವೊಂದು ಲೈಟುಗಳು ಅಧಾರದಲ್ಲಿ ಕ್ಯಾಂಡಿಡ್ ಫೋಟೊಗ್ರಫಿ ಮಾಡುವುದು ನಿಜಕ್ಕೂ ಸವಾಲು! ಆದ್ರೆ ನನ್ನ ಬಳಿ ೫ಡಿ ಮಾರ್ಕ್ ೨ ಕ್ಯಾಮೆರ ಇತ್ತಲ್ಲ! ಫೋಟೊ ತೆಗೆಯುತ್ತಾ ಸಮಯ ರಾತ್ರಿ 9-40 ಆಗಿದ್ದು ಗೊತ್ತೇ ಆಗಲಿಲ್ಲ.
ಮನೆ ತಲುಪಿದಾಗ ಹತ್ತು ಗಂಟೆ. ಹತ್ತೇ ನಿಮಿಷಕ್ಕೆ ಊಟ ಮಾಡುವ ಶಾಸ್ತ್ರ ಮಾಡಿ ಅದೇ ಕ್ಯಾಮೆರ ಕಿಟ್ ಮತ್ತು ಬಟ್ಟೆಯ ಲಗೇಜ್ ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಹೊರಟೆನಲ್ಲ! ಹತ್ತೇ ನಿಮಿಷಕ್ಕೆ ನವರಂಗ್ ಬಸ್ ಸ್ಟಾಪ್. ಸಮಯಕ್ಕೆ ಸರಿಯಾಗಿ ಬಸ್ ಬಂತು. ಬಸ್‍ನೊಳಗೆ ಮಲಗಿದಷ್ಟೇ ಗೊತ್ತು. ಪುತ್ತೂರು ತಲುಪಿದಾಗ ಬೆಳಿಗ್ಗೆ ಏಳು ಗಂಟೆ. ಪುತ್ತೂರಿನ ವಿವೇಕಾನಂದ ಕಾಲೇಜಿನವರು ಕಾಯ್ದಿರಿಸಿದ್ದ ರಾಮ ಹೋಟಲಿನಲ್ಲಿ ತಲುಪಿ ಸ್ನಾನ ಮಾಡುವ ಹೊತ್ತಿಗೆ ಬಾಗಲಕೋಟೆಯ ಇಂದ್ರ ಕುಮಾರ್ ಫೋನು. ಇಂದ್ರಕುಮಾರ್ ಮತ್ತು ಮುಂಡರಗಿಯ ಸಲೀಂ ಇಬ್ಬರೂ ಪುತ್ತೂರು ತಲುಪಿದ್ದರು. ಕಾಲ್ನಡಿಯಲ್ಲೇ ಬನ್ನಿ ಕೇವಲ ಎರಡು ಐದು ನಿಮಿಷದಲ್ಲಿ ಹೋಟಲ್ ಸಿಗುತ್ತದೆ ಎಂದಿದ್ದೆ ಹಾಗೆ ಬಂದರು ಅವರ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಫೋಟೊಗ್ರಫಿ ಪ್ರದರ್ಶನದ ಉದ್ಘಾಟನೆ ಮತ್ತು ನನ್ನ ಫೋಟೊಗ್ರಫಿ ಸಂವಾದ ವಿಚಾರವನ್ನು ತಿಳಿದು ನನಗಿಂತ ದೂರದಲ್ಲಿರುವ ಬಾಗಲಕೋಟೆಯಿಂದ ಇಂದ್ರಕುಮಾರ್ ಮತ್ತು ಗದಗ್ ಜಿಲ್ಲೆ ಮುಂಡರಗಿ ತಾಲ್ಲೂಕಿನ ಸಲೀಂ ಬಾಳಬಟ್ಟಿ ಪುತ್ತೂರಿಗೆ ಆಗಮಿಸಿದ್ದರು. ನಮ್ಮ ಕರ್ನಾಟಕದ ಪೂರ್ತಿ ಹಿಂದುಳಿದ ಪ್ರದೇಶಗಳಿಂದ ಬಂದು ಫೋಟೊಗ್ರಫಿಯಲ್ಲಿನ ಶ್ರದ್ಧೆ, ಶ್ರಮ, ಭಕ್ತಿಯಿಂದ ಇವರು ಮಾಡುತ್ತಿರುವ ಸಾಧನೆಯಿಂದಾಗಿ ಮುಂದಿನ ವರ್‍ಷಗಳಲ್ಲಿ ಇವರು ಅಂತರರಾಷ್ಟ್ರೀಯ ಮಟ್ಟದ ಮನ್ನಣೆ ಪಡೆಯಲು ಸಿದ್ದರಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಅವರು ನನ್ನಂತೆ ಜನವರಿ ಇಪ್ಪತ್ತಾರ ಸಂಜೆ ಸಾಗರ ಫೋಟೊಗ್ರಫಿಯಲ್ಲಿನ ಬಹುಮಾನ ವಿತರಣೆ ಸಮಾರಂಭದಲ್ಲಿ ಬಹುಮಾನಗಳನ್ನು ಪಡೆದು ಅಲ್ಲಿಂದಲೇ ನೇರವಾಗಿ ರಾತ್ರಿ ಹೊರಟು ಪುತ್ತೂರಿಗೆ ಬಂದಿದ್ದರು. ಅವರು ಸಿದ್ದರಾದ ಮೇಲೆ ನಾವು ಬೆಳಗಿನ ತಿಂಡಿ ಮುಗಿಸುವ ಹೊತ್ತಿಗೆ ಹತ್ತು ಗಂಟೆಯಾಗಿತ್ತು. ಫೋಟೊಗ್ರಫಿ ಪ್ರದರ್ಶನ ಮತ್ತು ಸಂವಾದ ವಿಚಾರವನ್ನು ತಿಳಿದ ಮಂಗಳೂರಿನ ಕನ್ನಡ ಪ್ರಭ ಪತ್ರಕರ್ತರಾದ ಹರೀಶ್ ಮಾಂಬಾಡಿಯವರು ನನ್ನನ್ನು ಬೇಟಿಯಾಗಲು ನಾವು ಉಳಿದಕೊಂಡಿದ್ದ ರೂಮಿಗೆ ಬಂದಿದ್ದು ನನ್ನ ಸೌಭಾಗ್ಯವೇ ಅನಿಸಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಆತ್ಮೀಯ ಗೆಳೆಯರಾದ ಪುತ್ತೂರಿನ ವಿನಾಯಕ್ ನಾಯಕ್ ಕೂಡ ಬಂದರು. ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರೇ ಮುಖ್ಯ ಕಾರಣ. ಬೆಂಗಳೂರಿಗೆ ಬಂದಾಗಲೆಲ್ಲಾ ನನ್ನ ಮನೆಗೆ ಬೇಟಿಕೊಡುವ ಅವರು ಪುತ್ತೂರಿನ ಕಲಾತ್ಮಕ ಫೋಟೊಗ್ರಫಿಗೆ ಅವರ ಕೊಡುಗೆ ದೊಡ್ಡದು ಎನ್ನುವುದು ನನ್ನ ಭಾವನೆ.
ನಾನು, ಇಂದ್ರಕುಮಾರ್, ಸಲೀಂ, ಹರೀಶ್ ಮಾಂಬಾಡಿ, ವಿನಾಯಕ್ ನಾಯಕ್ ಎಲ್ಲರೂ ಮಾತಾಡಲು ಪ್ರಾರಂಭಿಸಿದೆವಲ್ಲ, ಬ್ಲಾಗ್, ಫೋಟೊಗ್ರಫಿ, ಪತ್ರಿಕಾರಂಗ, ಬರವಣಿಗೆ ಇನ್ನೂ ಅನೇಕ ವಿಚಾರಗಳಿಂದಾಗಿ ಹನ್ನೆರಡು ಗಂಟೆಯಾಗಿದ್ದೆ ಗೊತ್ತಾಗಲಿಲ್ಲ. ನಾವೆಲ್ಲಾ ಬಹು ಕಾಲದ ಹಳೆಯ ಗೆಳೆಯರೇನೋ ಅನ್ನುವಂತೆ ಅನೇಕ ಆರೋಗ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದೆವು. ಇನ್ನೂ ಮಾತಾಡಲು ಮುಗಿಯದ ಅನೇಕ ವಿಚಾರಗಳಿದ್ದರೂ ಸಮಯದ ಒತ್ತಡದಿಂದಾಗಿ ನಮ್ಮ ಮಾತುಗಳನ್ನು ನಿಲ್ಲಿಸಬೇಕಾಯ್ತು. ನಂತರ ಹೋಟಲ್ಲಿಗೆ ಹೋಗಿ ಊಟ ಮಾಡುವ ಶಾಸ್ತ್ರ ಮುಗಿಸಿ ಹೊರಬರುವಾಗ ಒಂದುಗಂಟೆ. ಒಂದು ಕಾಲಿಗೆ ಸರಿಯಾಗಿ ಕಾಲೇಜಿ ಕನ್ನಡ ಉಪನ್ಯಾಸಕರಾದ ಮಾನ್ಯ ಶ್ರೀಧರ್ ಸರ್ ನಮ್ಮನ್ನು ಕರೆದುಕೊಂಡು ಹೋಗಲು ಬಂದರು. ಪುತ್ತೂರಿನ ವಿವೇಕನಂದ ಕಾಲೇಜು ದೊಡ್ಡದು. ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ. ಅಲ್ಲಿ ವಿದ್ಯಾರ್ಥಿಗಳು ಮತ್ತು ಕೆಲವು ಅದ್ಯಾಪಕರ ಫೋಟೊಗಳೂ ಸೇರಿದಂತೆ ಒಟ್ಟು ನೂರೈವತ್ತನಾಲ್ಕು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಅವರಿಗೆ ಗೊತ್ತಿಲ್ಲದಂತೆ ಪಿಕ್ಟೋರಿಯಲ್, ಫೋಟೊಜರ್ನಲಿಸಂ, ಫೋಟೊಟ್ರಾವಲ್, ಕ್ಯಾಂಡಿಡ್, ವೈಲ್ಡ್ ಲೈಫ್, ಮ್ಯಾಕ್ರೋ, ಲ್ಯಾಂಡ್ಸ್ಕೇಪ್.....ಇತ್ಯಾದಿ ಛಾಯಾಚಿತ್ರಗಳಿದ್ದವು. ಪುತ್ತೂರಿನ ವಿವೇಕಾನಂದ ಕಾಲೇಜಿನ ವಿಧ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿವರ್ಷ ತಾವು ಕ್ಲಿಕ್ಕಿಸಿದ ಫೋಟೊಗ್ರಫಿಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ. ಒಂದು ಪುಟ್ಟ ಪುತ್ತೂರಿನಂತ ಪುತ್ತೂರಿನ ತಾಲ್ಲೂಕಿನಲ್ಲಿ ಇಂಥ ಫೋಟೊಗ್ರಫಿ ಪ್ರದರ್ಶನ ಅದರೆಡೆಗಿನ ಆಸಕ್ತಿ ಮತ್ತು ಫೋಟೊಗ್ರಫಿಯ ಬೆಳವಣಿಗೆ ನಿಜಕ್ಕೂ ಅನುಕರಣೀಯ ಎಂದು ನನ್ನ ಅನಿಸಿಕೆ. ಯಾವ ವಿಚಾರದ ಬಗ್ಗೆ ಮಾತಾಡಬೇಕೆಂದುಕೊಂಡವನಿಗೆ ಅಲ್ಲಿನ ಚಿತ್ರಗಳನ್ನು ನೋಡಿದ ತಕ್ಷಣ ಸಂವಾದಕ್ಕೆ ವಿಚಾರ ಸಿಕ್ಕಂತಾಗಿ ನನಗೆ ಖುಷಿಯಾಯ್ತು.
ಪುತ್ತೂರ್ ವಿವೇಕನಂದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಛಾಯಾಚಿತ್ರ ಪ್ರದರ್ಶನ
ಪಿಕ್ಟೋರಿಯಲ್ ಫೋಟೊಗ್ರಫಿ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ವಿವರಣೆ
ನಂತರ ಸಂವಾದ
ಬೆಂಗಳೂರಿನ ಫೋಟೊ ಜರ್ನಲಿಸಂ ವಿಧ್ಯಾರ್ಥಿಗಳಿಗೆ ಫೋಟೊಗ್ರಫಿ ಕಲಿಸಿದ್ದರೂ ಹೀಗೆ ನೇರವಾದ ಸಂವಾದದ ಅವಕಾಶ ಮೊದಲನೆಯದು. ಎರಡುಗಂಟೆಗಳ ಸಂವಾದದಲ್ಲಿ ಮೊದಲಿಗೆ ಒಂದು ಗಂಟೆ ನನ್ನ ಪಿಕ್ಟೋರಿಯಲ್ ಫೋಟೊಗ್ರಫಿ ಪ್ರದರ್ಶನ ಮತ್ತು ವಿವರಣೆ ನಂತರದ ಒಂದು ಗಂಟೆ ಸಂವಾದ ನನ್ನ ಮಟ್ಟಿಗೆ ಮರೆಯಲಾಗದ ಅನುಭವ. ವಿಧ್ಯಾರ್ಥಿಗಳಲ್ಲಿದ್ದ ಕುತೂಹಲ ಅದಕ್ಕೆ ಪೂರಕವಾಗಿ ಮೂಡುತ್ತಿದ್ದ ಪ್ರಶ್ನೆಗಳು, ಅದಕ್ಕೆ ನನಗೆ ತಿಳಿದ ಅನುಭವದ ಉತ್ತರ....ಹೀಗೆ ನಾಲ್ಕು ಗಂಟೆಯಾಗಿದ್ದು ಗೊತ್ತೇ ಆಗಲಿಲ್ಲ. ನಂತರ ಹದಿನೈದು ನಿಮಿಷ ವಿರಾಮ ಅದರ ನಂತರ ಫೋಟೊಗ್ರಫಿ ಉದ್ಘಾಟನ ಕಾರ್ಯಕ್ರಮ. ಎಂದಿನಂತೆ ದೀಪ ಹೊತ್ತಿಸುವುದೋ ಅಥವ ಟೇಪ್ ಕಟ್ ಮಾಡುವ ಬದಲಾಗಿ ಕ್ಯಾಮೆರ ಕ್ಲಿಕ್ ಮಾಡಿ ಫೋಟೊ ತೆಗೆಯುವ ಮೂಲಕ ಉದ್ಘಾಟನೆಯಾಗಿದ್ದು ವಿಭಿನ್ನವೆನಿಸಿತ್ತು. ಪುಟ್ಟ ಕಾರ್ಯದಲ್ಲಿ ಸಂವಾದ ವಿಚಾರಗಳು, ಫೋಟೊಗ್ರಫಿ ಇನ್ನಿತರ ವಿಚಾರಗಳು..ಹೀಗೆ ಒಂದು ವ್ಯವಸ್ಥಿತವಾದ ಸೊಗಸಾದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಐದುವರೆಯಾಗಿತ್ತು.
ಉದ್ಘಾಟಣೆ ಕಾರ್ಯಕ್ರಮ
ಅವರಿಂದ ಬೀಳ್ಕೊಟ್ಟು ರೂಮಿಗೆ ತಲುಪುವ ಹೊತ್ತಿಗೆ ಆರುಗಂಟೆ. ಅವತ್ತು ರಾತ್ರಿ ಅಲ್ಲಿದ್ದು ಮರುದಿನ ಬೆಳಿಗ್ಗೆ ಉಡುಪಿಗೆ ಹೋಗುವ ಯೋಜನೆ ಹಾಕಿಕೊಂಡು ರೂಮಿನಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳೋಣವೆಂದುಕೊಂಡಿದ್ದೆನಲ್ಲ, ಇಂದ್ರಕುಮಾರ್ ಮಾಡಿದ ಹೊಸ ಉಪಾಯದಿಂದಾಗಿ ಅದು ವಿಫಲವಾಯ್ತು. ಆದ್ರೂ ಅದು ಒಂಥರ ಒಳ್ಳೆಯದೇ ಆಯ್ತು. ಆತ ಹೊಸ ಅಲೋಚನೆ ಏನೆಂದರೆ ಇವತ್ತು ರಾತ್ರಿ ಪುತ್ತೂರಿನಲ್ಲಿ ಕಳೆಯುವ ಬದಲು ಈಗಲೇ ಉಡುಪಿಗೆ ಹೊರಟುಬಿಟ್ಟರೆ ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತೇವೆ ಅಲ್ಲಿ ರೂಮ್ ಮಾಡಿ ಮಲಗಿದ್ದು ಮರುದಿನ ಬೇಗನೆ ಎದ್ದು ಸಿದ್ದರಾಗಿ ಬೆಳಗಿನ ಸೂರ್ಯನ ಹಿತವಾದ ಬೆಳಕಿನಲ್ಲಿ ಏನಾದರೂ ಫೋಟೊಗ್ರಫಿ ಮಾಡೋಣ ಎನ್ನುವುದು ಇಂದ್ರಕುಮಾರ್ ಆಲೋಚನೆ. ಆತನ ಅಲೋಚನೆ ಸರಿಯೆನಿಸಿ ಮಂಗಳೂರು ಬಸ್ ಹತ್ತಿಯೇ ಬಿಟ್ಟೆವು. ಮತ್ತೆ ಮಂಗಳೂರಿನಿಂದ ಉಡುಪಿಗೆ ಪ್ರಯಾಣ. ನಾಳೆ ಬೆಳಿಗ್ಗೆ ಎಲ್ಲಿಗೆ ಹೋಗುವುದು, ಏನು ಫೋಟೊಗ್ರಫಿ ಮಾಡುವುದು ಹೀಗೆ ಅನೇಕ ವಿಚಾರಗಳಲ್ಲಿ ನಾನು ತಲ್ಲೀನನಾಗಿದ್ದರೆ ಇಂಥ ಅಲೋಚನೆಯನ್ನು ನಮ್ಮ ತಲೆಯೊಳಗೆ ಬಿಟ್ಟು ಪೂರ್ತಿ ಮೂರು ಗಂಟೆ ನೆಮ್ಮದಿಯಾಗಿ ಬಸ್ಸಿನಲ್ಲೇ ನಿದ್ರೆ ಮಾಡಿದ್ದ ಇಂದ್ರಕುಮಾರ್.
ಮರುದಿನ ಸ್ವಲ್ಪ ತಡವಾಗಿಯೇ ಎದ್ದಾಗ ಸಮಯ ಏಳುಗಂಟೆ. ಅರ್ಧಗಂಟೆಯಲ್ಲಿ ಸಿದ್ದರಾಗಿ ಉಡುಪಿ ಬಸ್ ಸ್ಟಾಂಡಿನಲ್ಲಿ ತಿಂಡಿ ಮುಗಿಸಿ ಉದ್ಯಾವರದ ಕಡೆಗೆ ಬಸ್ ಹತ್ತಿದ್ದೆವಲ್ಲ! ಅಷ್ಟರಲ್ಲಿ ಕಟ್ ಪಾಡಿಯಲ್ಲಿರುವ ಛಾಯಾಗ್ರಾಹಕ ಗೆಳೆಯ ವಿವೇಕ್‍ನಿಂದ ಫೋನ್ "ಎಲ್ಲಿದ್ದೀರಿ ಮಾರಾಯ್ರೆ! ಅಂತ ವಿಚಾರಿಸಿಕೊಂಡರು. ನಿನ್ನೆ ರಾತ್ರಿ ಉಡುಪಿಗೆ ಬಂದ ಕತೆಯನ್ನು ಹೇಳಿದಾಗ "ಅರೆರೆ ನೀವು ಎಂಥದ್ದು ಮಾಡಿದ್ದು ಸುಮ್ಮನೆ ಉಡುಪಿಗೆ ಹೋಗುವ ಬದಲು ನಮ್ಮ ಮನೆಗೆ ಬರಬಹುದಿತ್ತಲ್ವ! ನಾವು ಮುಂಬೈನಲ್ಲಿ ನೆಲೆಸಿರುವುದರಿಂದ ನನ್ನ ಕಟ್ ಪಾಡಿ ಮನೆ ಕಾಲಿಯುಂಟು ನಾಲ್ಕು ದಿನದಿಂದ ಪಡುಬಿದ್ರಿಯಲ್ಲಿ ಫೋಟೊಗ್ರಫಿ ಕಾರ್ಯಕ್ರಮವಿರುವುದರಿಂದ ಇಲ್ಲಿಯೇ ಇದ್ದೇನೆ. ನಿನ್ನೆಯೂ ಕಾರ್ಯಕ್ರಮವಿತ್ತು. ನಾನು ರಾತ್ರಿ ಬಂದಾಗ ಹನ್ನೊಂದು ಗಂಟೆ. ನೀವು ಮೊದಲೇ ಫೋನ್ ಮಾಡಿದ್ದರೆ ಮನೆಯ ಕೀಯನ್ನು ಕೆಳಗೆ ಕೊಟ್ಟು ಹೋಗಿತ್ತಿದ್ದೆನಲ್ಲ! ಹೋಗಲಿ ಬಿಡಿ ನೀವು ಬರುವ ಹೊತ್ತಿಗೆ ಉದ್ಯಾವರದ ಬಳಿಗೆ ನಾನು ಬರುತ್ತೇನೆ ಅಂದರು. ಅಲ್ಲಿಗೆ ನಮ್ಮ ಬೆಳಗಿನ ಫೋಟೊಗ್ರಫಿಗೆ ವಿವೇಕ್ ಕೂಡ ಸೇರಿಕೊಂಡರು.
ನನ್ನ ಆಸೆಯಿದ್ದದ್ದೂ ಏಳು ವರ್ಷದ ಹಿಂದೆ ಮೀನಿನ ಬಲೆಯ ಫೋಟೊ ತೆಗೆದ ಸಮಯದಲ್ಲಿ ಮೀನಿನ ಬಲೆ ಎಸೆದ ರವಿ, ಅವರ ಭಾವಮೈದ ಯೋಗೇಶನನ್ನು ಬೇಟಿಮಾಡಬೇಕೆನ್ನುವ ಆಸೆಯಿತ್ತು. ಏಳುವರ್ಷದ ಹಿಂದಿದ್ದ ಉದ್ಯಾವರ ಸ್ವಲ್ಪ ಬದಲಾಗಿದ್ದರಿಂದ ಅವರ ಮನೆ ಹುಡುಕುವುದು ಕಷ್ಟವಾಗಿತ್ತು. ಎರಡು ಕಡೆ ಹಿನ್ನೀರು. ಹಾಗೆ ಸಾಗಿದರೆ ಕೊನೆಗೆ ಹಿನ್ನೀರು ಸೇರುವ ಕೊನೆಯಲ್ಲಿ ಅವರ ಮನೆ. ಒಂದೊಂದೇ ಮನೆಯ ಬಳಿ ವಿಳಾಸವನ್ನು ಕೇಳಿಕೊಂಡು ತಲುಪುವ ಹೊತ್ತಿಗೆ ಒಂದುವರೆ ಕಿಲೋಮೀಟರ್ ದಾರಿ ಸಾಗಿಸಿದ್ದೆವು. ಅವರ ಅಕ್ಕ ಮಾತ್ರ ಇದ್ದರು. ನಾನು ಮೊದಲಿಗೆ ಮಾತಾಡಿಸಿದಾಗ ಅವರಿಗೆ ನೆನಪು ಹತ್ತಲಿಲ್ಲ. ಏಳುವರ್‍ಷದ ಹಿಂದೆ ನಾನು ಅಲ್ಲಿಗೆ ಬಂದಿದ್ದು, ಟೀ ಕುಡಿದಿದ್ದು ನಂತರ ಅವರ ಮಗ ಯೋಗೇಶನ ಜೊತೆ ಬೋಟಿನಲ್ಲಿ ಕುಳಿತು ಒಂದುಗಂಟೆ ಹಿನ್ನೀರಿನಲ್ಲಿ ಸುತ್ತಾಡಿದ್ದು, ಎಲ್ಲವನ್ನು ನೆನಪಿಸಿದಾಗ ಅವರಿಗೆ ಅದೆಲ್ಲಾ ನೆನಪಾಗಿ ಅವರ ಮುಖದಲ್ಲಿ ಅಚ್ಚರಿ ಮತ್ತು ಸಂತೋಷ ಒಟ್ಟಿಗೆ ಮೂಡಿತ್ತು. ಅಷ್ಟೆಲ್ಲವನ್ನು ನೆನಪಿಟ್ಟುಕೊಂಡಿದ್ದೀರಲ್ಲ! ಇರಿ ಕುಡಿಯಲು ಏನಾದರೂ ತರುತ್ತೇನೆ ಅಂತ ಹೋಗಿ ಪ್ರಿಡ್ಜಿನಿಂದ ತಣ್ಣಗಿನ ನೀರು ಕೊಟ್ಟರು. ಹತ್ತು ನಿಮಿಷ ಅವರೊಂದಿಗೆ ಮಾತಾಡಿ ನನ್ನ ಫೋನ್ ನಂಬರ್ ಕೊಟ್ಟು, ನಿಮ್ಮ ಮಗ ಯೋಗೇಶ್ ಬಂದರೆ ಫೋನ್ ಮಾಡಿಸಿ, ನಿಮ್ಮ ಮನೆಗೆ ಆ ಮೀನಿನ ಬಲೆಯ ಫೋಟೊವನ್ನು ಕಳಿಸಿಕೊಡುತ್ತೇನೆ. ಎಂದು ಹೇಳಿ ನಾವು ಮೂವರು ಅಲ್ಲಿಂದ ಹೊರಟೆವು. ಏಳು ವರ್ಷದ ಹಿಂದಿನ ಹಳೆಯ ನೆನಪುಗಳು ಆ ಮೀನಿನ ಬಲೆಯ ಫೋಟೊ, ನಂತರ ಅದು ಪಡೆದುಕೊಂಡ ಅಂತರರಾಷ್ಟ್ರಿಯ ಮಟ್ಟದ ಹತ್ತಾರು ಪ್ರಶಸ್ಥಿಗಳು ಇದಕ್ಕೆಲ್ಲಾ ಕಾರಣಕರ್ತರಾದ ಇವರು ಮತ್ತೆ ಈ ಮನೆ ಎಲ್ಲವೂ ಮತ್ತೆ ಮತ್ತೆ ಮರುಕಳಿಸಿದ್ದವು.
ಉದ್ಯಾವರದಲ್ಲಿ ಆಗಲೇ ವಿವೇಕ್ ಆಗಲೇ ತಮ್ಮ ಆಲ್ಟೋ ಕಾರಿನಲ್ಲಿ ನಮಗಾಗಿ ಕಾಯುತ್ತಿದ್ದರು. ಆಗಲೇ ಸಮಯ ಒಂಬತ್ತು ದಾಟಿತ್ತು. ಹಿನ್ನೀರು, ನಡುವೆ ಚಲಿಸುತ್ತಿದ್ದ ದೋಣಿಗಳು ಇತ್ಯಾದಿಗಳ ಫೋಟೊವನ್ನು ತೆಗೆದೆವು. ಅಲ್ಲಿಂದ ನೇರವಾಗಿ ವಿವೇಕ್ ಮನೆಗೆ. ಅವರ ಮನೆಯಲ್ಲಿದ್ದಷ್ಟು ಹೊತ್ತು ನಮ್ಮ ಫೋಟೊಗ್ರಫಿ ಜೀವನಗಳು, ಮುಂಬೈನಲ್ಲಿ ಅವರ ಫೋಟೊಗ್ರಫಿ ವ್ಯವಹಾರ, ಅಲ್ಲಿಗೂ ಇಲ್ಲಿಗೂ ಹೋಲಿಕೆ ಇತ್ಯಾದಿ ವಿಚಾರಗಳನ್ನೆಲ್ಲಾ ಮಾತಾಡುತ್ತಾ ಸಮಯವಾಗಿದ್ದೇ ಗೊತ್ತಾಗಲಿಲ್ಲ. ಊಟ ಮುಗಿಸಿ ವಿಶ್ರಾಂತಿ ತೆಗೆದುಕೊಂಡು ಕಂಬಳ ನಡೆಯುವ ಸ್ಥಳಕ್ಕೆ ತಲುಪುವ ಹೊತ್ತಿಗೆ ಆಗಲೇ ಸಮಯ ನಾಲ್ಕುಗಂಟೆ.
ಸರ್ ಕಂಬಳಕ್ಕೆ ಇನ್ನೂ ಬೇಗ ಬರಬೇಕಿತ್ತು ಅಂತ ಇಂದ್ರಕುಮಾರ್ ಯೋಚಿಸುತ್ತಿದ್ದರಲ್ಲ, ನೋಡಿ ನೀವು ಮದ್ಯಾಹ್ನ ಹನ್ನೆರಡು ಗಂಟೆಗೆ ಬಂದುಬಿಟ್ಟರೆ ಆಗಿನಿಂದಲೇ ಕಂಬಳ ಓಟದ ಫೋಟೊಗ್ರಫಿ ಮಾಡಲು ಶುರುಮಾಡಿಬಿಡುತ್ತೀರಿ. ಪ್ರತಿ ಓಟದ ಸ್ಪರ್ಧೆಯನ್ನು ಉತ್ಸಾಹ ಮತ್ತು ಹುರುಪಿನಿಂದ ಕ್ಲಿಕ್ಕಿಸುತ್ತಿರುತ್ತೀರಿ. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ನಿಮ್ಮ ಮೊಮೊರಿ ಕಾರ್ಡು ಮುಗಿಯುತ್ತಾ ಬಂದಿರುವುದು ನಿಮಗೆ ಗೊತ್ತಾಗುವುದಿಲ್ಲ. ಹಾಗೆ ನೋಡಿದರೆ ಸರಿಯಾದ ಫೋಟೊ ತೆಗೆಯಲು ನಿಮಗೆ ಸಾಧ್ಯವಾಗುವುದು ನಾಲ್ಕು-ಐದುಗಂಟೆಯ ನಂತರವೇ. ಹಿತವಾದ ತಿಳಿಬಿಸಿಲಿನ ಆ ಸಮಯದಲ್ಲಿ ಸರಿಯಾಗಿ ಹತ್ತು ಫೋಟೊ ತೆಗೆದರೆ ಸಾಕು, ಆದ್ರೆ ಬೆಳಗ್ಗಿನಿಂದ ಸತತವಾಗಿ ಕ್ಲಿಕ್ಕಿಸಿ ಮೊಮೊರಿಕಾರ್ಡು ಪುಲ್ ಆಗಿಬಿಟ್ಟಿರುತ್ತದೆ. ಮತ್ತೆ ಅತ್ಯುತ್ತಮ ಸಮಯದ ಫೋಟೊಗ್ರಫಿ ಸಮಯದಲ್ಲಿ ಪೇಚಾಡುವಂತಾಗುತ್ತದೆ. ಅದರ ಬದಲು ಈ ನಾಲ್ಕು ಗಂಟೆಯಿಂದ ಸಂಜೆ ಸೂರ್ಯ ಮುಳುಗುವ ಆರುವರೆಯವರೆಗೂ ಚೆನ್ನಾಗಿ ಫೋಟೊಗ್ರಫಿ ಮಾಡಬಹುದಲ್ವಾ...ನೀವೇ ನೋಡುವಿರಂತೆ ಇಂಥ ತೆಳು ಬಿಸಿಲಿನಲ್ಲಿ ಈ ಕೋಣದ ಓಟದ ಸ್ಪರ್ಧೆ ಹೇಗೆ ಕಾಣುತ್ತದೆ ಅಂತ ಹೇಳಿದಾಗ ಅವರಿಗೆ ಸಮಾಧಾನವಾಯಿತು.
ಇಲ್ಲಿಂದ ನಮ್ಮ ಕಂಬಳ ಫೋಟೊಗ್ರಫಿ ಶುರುವಾಗಿತ್ತು. ಸಲೀಂ ಸೈಡಿನಲ್ಲಿ ನಿಂತು ಪ್ಯಾನಿಂಗ್ ಫೋಟೊಗ್ರಫಿ ಮಾಡುತ್ತಿದ್ದರೆ ಇಂದ್ರಕುಮಾರ್ ಎದುರಿಗೆ ಬರುವ ಕಂಬಳ ಓಟದ ಫೋಟೊ ತೆಗೆಯುತ್ತಿದ್ದರು. ಕಳೆದ ಐದು ವರ್ಷಗಳ ನಂತರ ಮೊದಲ ಬಾರಿಗೆ ಕಂಬಳ ಫೋಟೊಗ್ರಫಿಗೆ ಹೋಗಿದ್ದೆನಲ್ಲ. ತುಂಬಾ ಖುಷಿಯಾಗಿತ್ತು. ಸಂಜೆ ಆರುವರೆಯಾಯಿತಲ್ಲ! ಸೂರ್ಯ ಮುಳುಗಿ ಪೂರ್ತಿ ಕತ್ತಲಾಯಿತು. ಸುತ್ತಲೂ ಪ್ಲೆಡ್ ಲೈಟುಗಳು ಹತ್ತಿಕೊಂಡವು. ಇಂದ್ರಕುಮಾರ್ ಮತ್ತು ಸಲೀಮ್ ಕ್ಯಾಮೆರ ಪ್ಯಾಕ್ ಮಾಡಿ ಹೋಗೋಣವೆಂದುಕೊಂಡರು. ಆದ್ರೆ ನನಗೆ ರಾತ್ರಿ ಬೆಳಕಿನಲ್ಲಿ ಕಂಬಳ ಫೋಟೊಗ್ರಫಿ ಅದರಲ್ಲೂ ಚಲನೆಯುಕ್ತ ಫೋಟೊಗ್ರಫಿ ಮಾಡಬೇಕು ಎನ್ನುವ ಆಸೆಯಿತ್ತಲ್ಲ ಇನ್ನರ್ಧ ಗಂಟೆ ಅಂತ ನನ್ನ ಫೋಟೊಗ್ರಫಿ ಮುಂದುವರಿಸಿದ್ದೆ. ಸಂಜೆ ಹೊತ್ತಿನಲ್ಲಿ ಫೋಟೊಗ್ರಫಿ ಮಾಡುವುದು ಒಂಥರ ಅನುಭವವಾದರೆ ರಾತ್ರಿ ಬೆಳಕಿನಲ್ಲಿ ಕಂಬಳ ಫೋಟೊಗ್ರಫಿ ಮಾಡುವುದು ನಿಜಕ್ಕೂ ಸವಾಲು ಆದ್ರೆ ನನ್ನ ೫ಡಿ ಮಾರ್ಕ್ ಕ್ಯಾಮೆರ ಇಂಥ ಪ್ರಯೋಗಗಳಿಗೆ ಸಿದ್ಧವಾಗಿತ್ತು. ಮೊದಲ ಬಾರಿಗೆ ಇಂಥಪ್ರಯೋಗದಲ್ಲಿ ಯಶಸ್ವಿಯಾಗಿದ್ದೇನೆ ಫೋಟೊಗಳೆಲ್ಲಾ ತುಂಬಾ ಚೆನ್ನಾಗಿ ಬಂದಿವೆ. ಕಂಬಳ ಫೋಟೊವನ್ನು ನಾನು ಯಾಕೆ ಹಾಕಿಲ್ಲವೆಂದರೆ ಅವೆಲ್ಲವನ್ನು ಆಯ್ಕೆಮಾಡಿ ಕರೆಕ್ಷನ್ ಮಾಡಬೇಕಿದೆ. ಮತ್ತೆ ಸ್ಪರ್ಧೆಗೆ ಕಳುಹಿಸುವ ಸಲುವಾಗಿ ಇರುವುದರಿಂದ ಇಲ್ಲಿ ಹಾಕಲಾಗಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ.
ಇಂದ್ರ ಪ್ರತಿ ಭಾರಿಯೂ ಕ್ಲಿಕ್ಕಿಸಿದ ಫೋಟೊವನ್ನು ತೋರಿಸಿ ಹೇಗಿದೆ ಅಂತ ಕೇಳಿ ಕಂಪೋಜಿಷನ್, ತಾಂತ್ರಿಕ ವಿವರಣೆಯನ್ನು ಚೆಕ್ ಮಾಡಿಕೊಳ್ಳುತ್ತಿದ್ದರಲ್ಲ, ಒಮ್ಮೆ ನಾನು ಅವರಿಂದ ಸ್ವಲ್ಪ ದೂರ ಪ್ಯಾನಿಂಗ್ ಫೋಟೊಗ್ರಫಿಗೆ ಸೈಡಿಗೆ ಹೋದಾಗ ತಾವು ಆಗ ತಾನೆ ಕ್ಲಿಕ್ಕಿಸಿದ ಫೋಟೊವನ್ನು ತಮ್ಮ ಪಕ್ಕದಲ್ಲಿದ್ದ ಹಿರಿಯರಿಗೆ ತೋರಿಸಿದ್ದಾರೆ. ಅವರು ಚೆನ್ನಾಗಿದೆಯೆಂದು ಹೇಳಿ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದಾರೆ. ಅಷ್ಟರಲ್ಲಿ ನಾನು ಪಕ್ಕ ಬಂದೆನಲ್ಲ, ನೋಡಿ ಸರ್ ಅಂತ ಅವರ ನನಗೆ ಕಾರ್ಡು ತೋರಿಸಿದರು. ಹೌದಾ, ಓಕೆ ಅಂತ ಮತ್ತೆ ನಾನು ಫೋಟೊಗ್ರಫಿಯಲ್ಲಿ ಮಗ್ನನಾಗಿಬಿಟ್ಟೆ. ಆದ್ರೆ ಮರುಕ್ಷಣದಲ್ಲಿಯೇ ಅ ಕಾರ್ಡಿನಲ್ಲಿ "ಟಿ. ಶ್ರೀನಿವಾಸ ರೆಡ್ಡಿ" ಅಂತ ಇದ್ದಿದ್ದು ನೆನಪಾಗಿ ಮತ್ತೊಮ್ಮೆ ಆ ಕಾರ್ಡನ್ನು ಕೊಡಿ ಇಲ್ಲಿ ಅಂತ ಪಡೆದು ನೋಡಿದೆ. "ಡೌಟೇ ಇಲ್ಲ ಇವರು ಅವರೇ...ಖುಷಿಯಿಂದ ಕುಣಿದಾಡುವಂತಾಗಿತ್ತು. ಆಂದ್ರಪ್ರದೇಶದ ವಿಜಯವಾಡದಲ್ಲಿರುವ ಇವರು ದಕ್ಷಿಣ ಭಾರತದ ಅತ್ಯುತ್ತಮ ಪಿಕ್ಟೋರಿಯಲ್ ಛಾಯಾಗ್ರಾಹಕರಲ್ಲಿ ಒಬ್ಬರು. ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಫೋಟೊಗ್ರಫಿಯಲ್ಲಿ ಅದ್ಬುತವೆನಿಸುವ ಸಾಧನೆ ಮಾಡಿದ್ದಾರೆ. ಒಂಥರ ಆಂದ್ರಪ್ರದೇಶದ ಪಿಕ್ಟೋರಿಯಲ್ ಐಕಾನ್ ಎಂದೆ ಹೇಳಬಹುದು. ಹತ್ತಿರ ಹೋಗಿ ನನ್ನ ಪರಿಚಯ ಮಾಡಿಕೊಂಡೆನಷ್ಟೆ. "ಒಹ್! ಶಿವು.ಕೆ ಬೆಂಗಳೂರು, ಐ ಅಮ್ ಸರ್ಪ್ರೈಸ್, ಯು ಅರ್ ಮ್ಯ ಫೇವರೇಟ್ ಫೋಟೊಗ್ರಫರ್ ಅನ್ನುತ್ತ ನನ್ನನ್ನು ಅಪ್ಪಿಕೊಂಡುಬಿಟ್ಟರು. ಅವರ ಗೆಳೆಯರನ್ನು ಕರೆದು ನನಗೆ ಪರಿಚಯಿಸಿದರಲ್ಲ...ಆಗ ಗೊತ್ತಾಯಿತು. ಮತ್ತೊಬ್ಬ ಗ್ರೇಟ್ ಪಿಕ್ಟೋರಿಯಲ್ ಫೋಟೊಗ್ರಫರ್ ಮುಸನಿ ವಿಜಯಭಾಸ್ಕರ್ ಅಂತ. ನಾವೆಲ್ಲ ಒಟ್ಟಿಗೆ ಫೋಟೊ ತೆಗೆಸಿಕೊಂಡೆವು. "ಇಂಡಿಯನ್ ಫೆಡರೇಷನ್ ಅಪ್ ಫೋಟೊಗ್ರಫಿ ನಡೆಸುವ ಕನ್‍ವೆನ್ಶನ್ ಗೆ ನನ್ನನ್ನು ಅಹ್ವಾನಿಸಿದರು. ಅವರನ್ನು ಬೇಟಿಯಾಗಿದ್ದು ನನಗಂತೂ ವರ್ಣಿಸಲಾಗದ ಅನುಭವ. ನಾವು ಛಾಯಾಗ್ರಾಹಕರು ಫೋಟೊ ತೆಗೆಯಲು ನಾ ಮುಂದು ತಾ ಮುಂದು ಅಂತ ಒಬ್ಬರಿಗೊಬ್ಬರು ಮುನ್ನುಗ್ಗುವುದು, ಅವನು ತನ್ಮಯನಾಗಿ ಫೋಟೊ ಕ್ಲಿಕ್ಕಿಸುವಾಗ ಇವನು ಅಡ್ಡಬರುವುದು ಅಮೇಲೆ ಸಾರಿ ಕೇಳುವುದು, ಈತ ಓಕೆ ಅಂತ ಹೇಳಿದರೂ ಮನಸ್ಸಿನಲ್ಲಿಯೇ ಬೈದುಕೊಳ್ಳುವುದು ನಡೆಯುತ್ತಿತ್ತಲ್ಲ, ಆಗ ನಾನು ಇವರನ್ನು ಎಷ್ಟು ಸಲ ಬೈದುಕೊಂಡಿದ್ದೆನೋ, ಅವರು ನಮ್ಮನ್ನು ಎಷ್ಟು ಸಲ ಬೈದುಕೊಂಡಿದ್ದರೋ....ಆದ್ರೆ ಕೊನೆಯಲ್ಲಿ ಹೀಗೆ ಅನಿರೀಕ್ಷಿತವಾಗಿ ಬೇಟಿಯಾಗಿದ್ದು ಮಾತ್ರ "ಯಾರೇ ನೀನು ಚಲುವೆ" ಸಿನಿಮಾ ಸನ್ನಿವೇಶದಂತೆ ನಾಯಕ ನಾಯಕಿಯ ಜೊತೆಗಿದ್ದರೂ ಆವಳನ್ನು ಗುರುತಿಸಲಾಗದಂತೆ, ಹಾಗೆ ನಾಯಕಿಯೂ ಕೂಡ ತನ್ನ ಪ್ರೇಮಿ ಜೊತೆಯಲ್ಲಿದ್ದರೂ ಗುರುತಿಸಲಾಗದಂತೆ ಓಡಾಡುತ್ತಿರುತ್ತಾರಲ್ಲ ಹಾಗೆ ಇಲ್ಲಿಯೂ ಆಗಿದ್ದು ಮಾತ್ರ ಕಾಕತಾಳಿಯ.
ಆಂದ್ರಪ್ರದೇಶದ ಫೋಟೊಗ್ರಫಿ ಐಕಾನ್‍ಗಳ ಜೊತೆ ನಾನು ಎಡದಿಂದ ನೀಲಿ ಅಂಗಿಯವರು ಶರೀಫ್, ಮುಸನಿ ವಿಜಯಭಾಸ್ಕರ್, ನಾನು, ಟಿ.ಶ್ರೀನಿವಾಸ ರೆಡ್ಡಿ ಮತ್ತು ಸಲೀಂ
ನಮ್ಮ ಇಂದ್ರಕುಮಾರ್ ಮತ್ತೆ ಜೊತೆಯಾದಾಗ
ಅವತ್ತು ರಾತ್ರಿ ಉಡುಪಿಯಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ಬೆಳಿಗ್ಗಿನ ಏಳುಗಂಟೆ. ಹಿಂದಿನ ದಿನ ಪೂರ್ತಿ ಸುತ್ತಾಡಿದ್ದರಿಂದ ಬಸ್ಸಿನ ಸ್ಲೀಪರ್ ಕೋಚಿನಲ್ಲಿ ಚೆನ್ನಾಗಿ ನಿದ್ರೆ ಬಂದಿತ್ತು. ಮನೆಗೆ ಬಂದವನೆ ಒಂದೇ ಗಂಟೆಯಲ್ಲಿ ಚಿತ್ರಸಂತೆಗೆ ಹೋಗಲು ಸಿದ್ದನಾಗಿದ್ದೆ.
ಲೇಖನ :ಶಿವು.ಕೆ
ಚಿತ್ರಗಳು: ಸಲೀಂ ಮತ್ತು ಇಂದ್ರಕುಮಾರ್
10 comments:
uttama anubhava, mattu saadhane...
all the best shivu sir..
ನಿನ್ನೆ ನಿಮ್ಮಬಳಿ ಚಾಟ್ ಮಾಡುವಾಗ ತಯಾರಾಗಿತ್ತಿದ್ದ ಲೇಖನ ..!! ಒಳ್ಳೆಯ ಅನುಭವ ಮತ್ತು ಕಂಬಳದ ಬಗ್ಗೆ ಮಾಹಿತಿ...
ಅಂದಹಾಗೆ ನಾವು ವಿದ್ಯಾಭ್ಯಾಸ ಮಾಡುವಾಗ ಕಂಬಳ ನೋಡಿದ್ದರೂ ಆ ನೆನಪುಗಳನ್ನು ಸೆರೆಹಿಡಿಯುವ ಸಾಧನವಾಗಲಿ ಅಥವಾ ಇಂದಿನಂತೆ ಡಿಜಿಟಲ್ ತಾಂತ್ರಿಕತೆಯಾಗಲಿ ಇರ್ಲಿಲ್ಲ...ಫೋಟೋ ತೆಗೆಯಲೂ ಲೆಕ್ಕಾಚಾರ.. ಒಂದು ರೋಲ್ ಹಾಕಿದ್ರೆ ೧೨ ೧೬ ಕ್ಲಿಕ್ ಮಾತ್ರಾ ಸಾಧ್ಯ...ಅದ್ರಲ್ಲೂ ಎಷ್ಟೋ ತುಸ್ ಆಗೋ ಸಾಧ್ಯತೆ ಇತ್ತು... ಹಂಚಿಕೊಂಡದ್ದಕ್ಕೆ ಧನ್ಯವಾದ ಶಿವು... ಹಾಂ.. ಸಲೀಂ..ನಮ್ಮ ಹುಬ್ಬಳ್ಳಿ ಟ್ರಿಪ್ಪಲ್ಲಿ ನಮಗೆ ಸಾಥ್ ನೀಡಿದವರು...ನೋಡಿ ಖುಷಿ ಆಯ್ತು.
ಹಲೋ ಶಿವು ಸರ್,
ಅನುಭವ ಚೆನ್ನಾಗಿದೆ. ನಾನು ಪುತ್ತೂರು ವಿವೇಕಾನಂದ ಕಾಲೇಜ್ ನ ಹಳೆ ವಿದ್ಯಾರ್ಥಿ. ನಮ್ಮ ಕಾಲೇಜ್ ಬಗ್ಗೆ ನಿಮ್ಮ ಮೆಚ್ಚುಗೆಯ ಮಾತು ಓದಿ ಸಂತಸವಾಯಿತು. ಅಂದೇ ಶ್ರೀಧರ ಭಟ್ ಅವರು ಹಿರಿಯ ಪತ್ರಕರ್ತರು, ಸಾಹಿತಿಗಳು ಇವರನೆಲ್ಲ ಕರೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿಸುತ್ತಿದ್ದರು. ಈಗ ಫೋಟೋಗ್ರಾಫಿ ಬಗ್ಗೆಯೂ ನಿಮ್ಮಂತವರನ್ನು ಕರೆಸಿಕೊಂಡು ಚಿತ್ರ ಪ್ರದರ್ಶನ ಮತ್ತು ಸಂವಾದಗಳನ್ನು ಏರ್ಪಡಿಸಿರುವುದು ಸಂತಸದ ವಿಚಾರ.
ಗ್ರೇಟ್ ಶಿವು ಸರ್... ಪುತ್ತೂರು ವಿವೇಕಾನಂದ ಕಾಲೇಜು, ನಾನು ಕಲಿತ ಕಾಲೇಜು. ನಾನು ಫೊಟೋಗ್ರಫಿಯ ಅಕ್ಷರ ಕಲಿತದ್ದೂ ಅಲ್ಲೇ. ನಮಗೆ ಕಲಿಸಿದ ರಾಮಮೋಹನ್ ರಾವ್ ಸರ್ ಈಗಿಲ್ಲವೆನ್ನಲು ಬೇಸರವಾಗುತ್ತಿದೆ. ಆದರೆ ಶ್ರೀಧರ್ ಸರ್ ಕೂಡ ಉತ್ತಮ ಫೊಟೋಗ್ರಾಫರ್. ಈಗಿನ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದೆ `ನಯನ' ಫೊಟೋಗ್ರಫಿ ಕ್ಲಬ್. ಅಲ್ಲಿ ನಿಮ್ಮನ್ನು ಭೇಟಿ ಮಾಡಿರುತ್ತಿದ್ದರೆ ನನಗೂ ಸಂತೋಷವಾಗುತ್ತಿತ್ತು.
ಶಿವಣ್ಣ,
ತುಂಬಾ ಸಂತೋಷವಾಗ್ತಾ ಇದೆ. ನಿಮ್ಮ ಪ್ರವಾಸದ ಅನುಭವ, ಕಂಬಳದ ಫೋಟೋಗ್ರಫಿಯ ಅನುಭವಗಳು ಮನಸ್ಸನ್ನು ರೋಮಾಂಚನಗೊಳಿಸುತ್ತವೆ.
ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನೀವು ಫೋಟೋಗ್ರಫಿ ಸಂವಾದದಲ್ಲಿ ಭಾಗವಹಿಸಿದ್ದು ಸಂತೋಷ ತಂದಿತು.
ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಶಿವು ಸರ್..ನಿಮ್ಮ ಅನುಭವವನ್ನು ನಮ್ಮೊಡನೆ ಹಂಚಿ ಕೊಂಡಿದ್ದಕ್ಕೆ ಧನ್ಯವಾದಗಳು....
ಒಳ್ಳೆಯ ಅನುಭವ. ಖುಷಿಯಾಯ್ತು ಶಿವು ಸರ್.
ಖುಷಿ ಆಯ್ತು ಶಿವು
uttama anubhava lekhana. tamma chayagrahaka nipunate adakkaagi tammannu todagisikolluva tamma aasthe jotege sundara baraha ellavu -atmeeyavaagibidutte.
tamma blog-ge comment maaduvadu tumbaa kashtavaagide tumba klishta chitragalu baruttive. taavu moderate maaduttiruvadarinda verification tegeyabahudalla?
Post a Comment