Friday, February 25, 2011

ರಾಗಿಮುದ್ದೆ


                                                                        
" ಇದು ಕಷ್ಟ ಕಣ್ರೀ, ನನ್ನ ಕೈಯಲ್ಲಿ ಆಗೋಲ್ಲ"

   "ಅರೆರೆ ಅದ್ಯಾಕೆ ಭಯ ಪಡುತ್ತೀರಿ, ಇದು ನೀರು ಕುಡಿದಷ್ಟೇ ಸುಲಭ"


"ನೀರು ಬೇಕಾದ್ರೆ ಹಾಗೆ ಕುಡಿಯಬಹುದು, ಬೇಕಾದ್ರೆ ನುಂಗಿಬಿಡಬಹುದು, ಆದ್ರೆ ಇದು ಮಾತ್ರ ನನ್ನ ಕೈಯಲ್ಲಿ ನುಂಗಲು ಸಾಧ್ಯವೇ ಇಲ್ಲ"   ಖಡಾಖಂಡಿತವಾಗಿ ಹೇಳಿಬಿಟ್ಟರು.

ಆದ್ರೆ ಇಷ್ಟಕ್ಕೆ ನಾನು ಬಿಡುತ್ತೇನೆಯೇ? ನನ್ನ ಪ್ರಯತ್ನವನ್ನು ಮುಂದುವರಿಸಿದೆ.

"ನೋಡ್ರಿ ಉದಯ್ ನಾವು ಇದನ್ನು ಜಾಮೂನ್ ಗಾತ್ರ ಮಾಡಿಕೊಂಡು ಸುಲಭವಾಗಿ ನುಂಗುತ್ತೇವೆ. ನೀವು ಕೊನೇ ಪಕ್ಷ ಗೋಲಿ ಗಾತ್ರ ಮಾಡಿಕೊಂಡು ಆದ್ರೂ ನುಂಗಲೇಬೇಕು" 

"ನೋಡಿ ಇದೊಂದು ಬಿಟ್ಟು ಬೇರೆ ಏನು ಬೇಕಾದ್ರು ಹೇಳಿ ಮಾಡುತ್ತೇನೆ. ಬೇಕಾದ್ರೆ ನಿಮಗೆ ಎಂಥ ಸಾಪ್ಟ್  ವೇರ್ ಬೇಕು ಹೇಳಿ ಸಿದ್ಧಮಾಡಿಕೊಟ್ಟುಬಿಡುತ್ತೇನೆ. ಇದನ್ನು ನುಂಗಲು ಮಾತ್ರ ಒತ್ತಾಯಮಾಡಬೇಡಿ"  ಹೀಗೆ ಹೇಳುತ್ತಾ ಬಂದ ಉದಯ ಹೆಗ್ಡೆ  ಕೊನೆಗೂ ನನ್ನ ಮಾತನ್ನು ಒಪ್ಪಲೇ ಇಲ್ಲ.

ಈ ಸಂಭಾಷಣೆ ನಡೆದಿದ್ದು ನನ್ನ ಮನೆಯಲ್ಲಿ ಉದಯ ಹೆಗ್ಡೆ ಜೊತೆ.  ಉದಯ ಹೆಗ್ಡೆ ಪರಿಚಯವಾಗಿ ಎಂಟು ತಿಂಗಳಾಗಿರಬಹುದು.  ಅವರು ವೃತ್ತಿಯಲ್ಲಿ ಸಾಪ್ಟ್ ವೇರಿ.  ನಾನೇ ಸದಾ ಏನಾದರೂ ಮಾಡುತ್ತಿರುವವನು ಅಂದುಕೊಂಡರೇ ಇವರು ನನ್ನನ್ನೂ ಮೀರಿಸಿದ ಸಾಹಸ ಪ್ರವೃತ್ತಿಯವರು.  ಊರು ಸಿರಸಿಯ ಹತ್ತಿರ ಹಳ್ಳಿಯಲ್ಲೇ ಹುಟ್ಟಿ ಬೆಳೆದವರು.  ಅವರಿಗೆ ಫೋಟೊಗ್ರಫಿ ಹವ್ಯಾಸವಿದ್ದುದರಿಂದ ನನ್ನ ಮತ್ತೊಬ್ಬ ಗೆಳೆಯ ವಿ.ಡಿ.ಭಟ್ ಕಡೆಯಿಂದ ಪರಿಚಯವಾದವರು. ಅವರಿಗೊಂದು ಕ್ಯಾಮೆರಾ, ಅದಕ್ಕ ತಕ್ಕಂತ ಒಂದು ಟೆಲಿ ಲೆನ್ಸ್, ಚಿಟ್ಟೆ ಮತ್ತು ಕೀಟಗಳ ಫೋಟೋಗ್ರಫಿ ತುಂಬಾ ಇಷ್ಟವಾದ್ದರಿಂದ ಇತ್ತೀಚೆಗೆ ಒಂದು ಮ್ಯಾಕ್ರೋ ಲೆನ್ಸ್ ಕೂಡ ಕೊಂಡುಕೊಂಡಿದ್ದಾರೆ.  ಅವರಿಗೆ ನನ್ನ ಶೈಲಿಯ ಫೋಟೊಗ್ರಫಿ ತುಂಬಾ ಇಷ್ಟ. ನನ್ನ ಶೈಲಿಯೆಂದರೆ ಅದರಲ್ಲೇನು ವಿಶೇಷವಿಲ್ಲ. ಇದ್ದಕ್ಕಿದ್ದಂತೆ ಎಲ್ಲಿಗಾದರೂ ಹೋಗಬೇಕೆನಿಸಿದರೆ ಹೊರಟುಬಿಡುವುದು, ನನಗೆ ಇಂಥದ್ದೇ ಫೋಟೊ ತೆಗೆಯಬೇಕೆನ್ನುವ ಗುರಿಯಿಲ್ಲ. ಸುಮ್ಮನೇ ರಸ್ತೆಯಲ್ಲೋ, ಕಾಡಿನಲ್ಲೋ ಹೋಗುತ್ತಿರುವುದು, ನಡುವೆ ಹೊಸತೆನಿಸುವುದು ಫೋಟೊ ತೆಗೆಯಲು ಸಿಕ್ಕರೆ ಕ್ಲಿಕ್ಕಿಸುವುದು  ಇಲ್ಲದಿದ್ದಲ್ಲಿ ಸುಮ್ಮನೇ ಖುಷಿಯಿಂದ ಓಡಾಡಿಬರುವುದು. ಇದು ನನ್ನ ಫೋಟೊಗ್ರಫಿ ಶೈಲಿ. ಅದು ಅವರಿಗೆ ಇಷ್ಟವಾಗಿದ್ದರಿಂದ ಒಮ್ಮೆ ಇಬ್ಬರೂ ಮಾಗಡಿ ಕಡೆ ಹೋಗಿ ಅರ್ಧದಿನ ಸುತ್ತಾಡಿ ಬಂದವು. ಒಂದಷ್ಟು ಫೋಟೊಗ್ರಫಿಯನ್ನು ಮಾಡಿ ನಮ್ಮ ಮನೆಗೆ ಬರುವ ಹೊತ್ತಿಗೆ ರಾತ್ರಿ ಎಂಟಾಗಿತ್ತು.  ಅದು ನಮಗೆ ಊಟದ ಸಮಯ.  ನನ್ನ ಶ್ರೀಮತಿ ಊಟಕ್ಕೆ ಸಿದ್ಧವಾಯಿತು ಕೈತೊಳೆದುಕೊಳ್ಳಿ ಅಂದಳು. ಬನ್ನಿ ನಮ್ಮ ಮನೆಯ ರಾಗಿಮುದ್ದೆ ರುಚಿನೋಡಿ ಅಂತ ಅವರನ್ನು ಊಟಕ್ಕೆ ಕರೆದೆ.




 ರಾಗಿಮುದ್ದೆಯೆಂದ ತಕ್ಷಣ ಅದನ್ನು ನುಂಗಬೇಕಲ್ಲ ಅದಕ್ಕಾಗಿ ನಮ್ಮಿಬ್ಬರ ನಡುವೆ ಇಷ್ಟೆಲ್ಲಾ ಸಂಭಾಷಣೆ ನಡೆಯಿತು.  ಅಷ್ಟರಲ್ಲಿ ನಮ್ಮ ಬಳಿಗೆ ಬಂದ ಹೇಮಾಶ್ರೀ,

 "ನೋಡಿ ಉದಯ್,  ನಮ್ಮನೆ ರಾಗಿಮುದ್ದೆ ತುಂಬಾ ಡಿಫರೆಂಟು, ತೆಳ್ಳಗೆ ಬಿಸಿಬಿಸಿಯಾಗಿ ಮಾಡಿದ್ದೇನೆ.  ಅದಕ್ಕೆ  ಕಾಂಬಿನೇಷನ್ ಆಗಿ ಸೊಪ್ಪಿನ ಬಸ್ಸಾರು ಮಾಡಿದ್ದೇನೆ. ಎರಡರದೂ ಸೂಪರ್ ಕಾಂಬಿನೇಷನ್ ನೀವು ರುಚಿ ನೋಡಲೇಬೇಕು" ಅಂದಳು

 "ಇಲ್ಲ ಬಿಡ್ರೀ, ಖಂಡಿತ ಸಾಧ್ಯವಾಗೋಲ್ಲ. ನೀವು ಅದ್ಯಾಗೆ ನುಂಗುತ್ತೀರೊ ನನಗೆ ಗೊತ್ತಿಲ್ಲ. ನೋಡ್ರಿ ಬಾಯಿಗೆ ಹಾಕಿಕೊಂಡ ಯಾವುದೇ ತಿನ್ನುವ ವಸ್ತುವು ಸಹಜವಾಗಿ ಅಗಿಯಲೆ ಬೇಕೆನ್ನುವುದು ಇರೋ ಕಾನ್ಸೆಪ್ಟ್. ಅದು ಬಿಟ್ಟು ಅದ್ಯಾಗೆ ನೇರವಾಗಿ ನುಂಗಲು ಸಾಧ್ಯ"?

 "ಅಯ್ಯೋ ಅದು ತುಂಬಾ ಸುಲಭ, ನೋಡಿ ನಿಮಗೆ ಕಷ್ಟವೆನಿಸಿದ್ರೆ ರುದ್ರಾಕ್ಷಿಮಣಿಯಷ್ಟು ಸಣ್ಣ ಸಣ್ಣ ತುತ್ತುಗಳನ್ನು ಮಾಡಿಕೊಂಡು ಸುಲಭವಾಗಿ ನುಂಗಬಹುದು?" 

 ವಂಡರ್ ಲಾದಲ್ಲಿ ಮೇಲೆ ಕುಳಿತು ಜಾರಿದರೆ ಸರ್ರನೆ ಜಾರಿ ನೀರಿಗೆ ಬೀಳುವ ರಾಕ್ಷಸಗಾತ್ರದ ಪೈಪುಗಳಂತೆ ನಮ್ಮ ಗಂಟಲ ವಿನ್ಯಾಸವಿರುವುದರಿಂದ ನಾವು ರಾಗಿಮುದ್ದೆಯನ್ನಷ್ಟೆ ಅಲ್ಲ ಏನನ್ನು ಬೇಕಾದರೂ ನುಂಗಿ ಹಾಕಬಹುದು ಎನ್ನುವುದು ಎಲ್ಲಾ ರಾಗಿಮುದ್ದೆ ತಿನ್ನುವವರ ಅಲ್ಲಲ್ಲ ನುಂಗುವವರ ಕಾನ್ಸೆಪ್ಟ್. ನಾವು ಇದನ್ನೆಲ್ಲಾ ವರ್ಣಿಸಿದಮೇಲೆ ನಮ್ಮ ಒತ್ತಾಯದ ಮೇರೆಗೆ ಕೊನೆಯ ಪ್ರಯತ್ನವೆನ್ನುವಂತೆ ಗೋಲಿಗಾತ್ರದ ರಾಗಿಮುದ್ದೆಯನ್ನು ಸೊಪ್ಪಿನ ಬಸ್ಸಾರಿನಲ್ಲಿ ಉರುಳಾಡಿಸಿ ಕೈಗೆತ್ತಿಕೊಂಡು ಬಾಯಿ ತೆಗೆದು ಕಣ್ಣುಮುಚ್ಚಿ ನೇರವಾಗಿ ಗಂಟಲೊಳಗೆ ಇಳಿಬಿಟ್ಟರು. ಓಹ್! ಸೂಪರ್ ಸಕ್ಸಸ್ ಕಣ್ರಿ! ಅಂತ ಖುಷಿಯಿಂದ ಮತ್ತೊಂದು ನುಂಗಲು ಹೇಳಿದೆವು. ಆದ್ರೆ ಅವರ ಮುಖವಾಗಲೇ ಕಿವುಚಿಕೊಂಡಿತ್ತು. ಯಾಕೆಂದರೆ ಅದು ಗಂಟಲ ಬಳಿ ಜಾರಿಬಿಟ್ಟರೂ ಇಳಿಜಾರಿನಲ್ಲಿ ಜಾರಿಹೋಗದೆ ಅದ್ಯಾಗೋ ವಾಪಸ್ ಬಂದು ಹಲ್ಲುಗಳ ಮದ್ಯೆ ಸಿಕ್ಕಿಕೊಂಡುಬಿಟ್ಟಿದೆ!  ಅರೆರೆ ಅದು ಹೇಗೆ ವಾಪಸ್ ಬರಲು ಸಾಧ್ಯ?  ವಂಡರ್ ಲಾ ಕಾನ್ಸೆಪ್ಟ್ ಇವರಿಗೆ ವರ್ಕೌಟ್ ಆಗಲಿಲ್ಲ.

 "ಬಾಯಲ್ಲೇ ಸಿಕ್ಕಿಕೊಂಡು ಹಲ್ಲಿನ ನಡುವೆ ಅಂಟಿಕೊಂಡುಬಿಟ್ಟಿದೆ ಕಣ್ರೀ, ಏನ್ ಮಾಡೋದು ಈಗ ಅಂತ ಯಾವುದೋ ರಿಯಾಲಿಟಿ ಷೋನಲ್ಲಿ ಟಾಸ್ಕಲ್ಲಿ ಸಿಕ್ಕಿಹಾಕಿಕೊಂಡಂತೆ" ಅನ್ನುತ್ತಾ ಮುಖಮಾಡಿಕೊಂಡರು.   

   "ಹೋಗಲಿಬಿಡಿ, ಒಂದೆರಡು ಚಮಚ ಸಾಂಬಾರು ಬಾಯಿಗೆ ಬಿಟ್ಟುಕೊಳ್ಳಿ, ಹಲ್ಲಿಗೆ ಅಂಟಿಕೊಳ್ಳುವುದು ತಪ್ಪುತ್ತದೆ, ಕೊನೆಪಕ್ಷ ಅಗಿದು ನಿಂಗಿಬಿಡಿ"  ಐಡಿಯ ಕೊಟ್ಟೆ.  ನಾನು ಹೇಳಿದ್ದನ್ನೂ ಹೇಗೋ ಕಷ್ಟಪಟ್ಟು ಮಾಡಿ, "ಇದರ ಸಹವಾಸ ಬೇಡಪ್ಪ" ಎಂದರು.

 ಇವರ ಕತೆ ಇಷ್ಟಾದರೇ ಮೂರು ವರ್ಷದ ಹಿಂದೆ ಕುಟುಂಬ ಸಮೇತ ನಮ್ಮ ಮನೆಗೆ ಬಂದಿದ್ದ ನಾಗೇಂದ್ರ ಮತ್ಮರ್ಡು ಕುಟುಂಬದವರಿಗೂ ರಾಗಿಮುದ್ದೆ ರಸ್ತೆಗಳಲ್ಲಿನ ಹಂಪ್ಸುಗಳಂತೆ ಕಾಡಿತ್ತು.  ಅವತ್ತು ನಮ್ಮ ಮನೆಯಲ್ಲಿ ಹೇಮಾಶ್ರೀ ಮತ್ತು ನಾಗೇಂದ್ರ ಶ್ರೀಮತಿ ಇಬ್ಬರೂ ಸೇರಿಕೊಂಡು ಅವರ ಇಷ್ಟದ ಸಿರಸಿ ಕಡೆಯ ಅಡುಗೆಯನ್ನೇ ಸಿದ್ದಮಾಡಿದ್ದರು.  ಜೊತೆಗೆ ರಾಗಿಮುದ್ದೆಯೂ ಊಟದಲ್ಲಿರಲಿ ಅಂತ ಅವರು ಆಸೆಪಟ್ಟಾಗ ಹೇಮಾ ಅದನ್ನು ಮಾಡಿದ್ದಳು. ಸಹಜವಾಗಿ ಊಟದಲ್ಲಿ ಮುದ್ದೆಯನ್ನೇ ಮೊದಲು ಮುಗಿಸಿಬೇಕು ಎನ್ನುವುದು ಆಗಿನಕಾಲದಿಂದ ನಡೆದುಬಂದ ಪದ್ದತಿ. ಎಲ್ಲರೂ ಒಟ್ಟಾಗಿ ಊಟಕ್ಕೆ ಕುಳಿತೆವಲ್ಲ  ನನ್ನ ತಟ್ಟೆಯಲ್ಲಿ ರಾಗಿಮುದ್ದೆ ತಿರುಪತಿ ಲಾಡುಗಾತ್ರದಲ್ಲಿದ್ದರೇ ಅವರಿಗೆ ಬೆಂಗಳೂರ್‍ಇನ ಸ್ವೀಟ್ ಅಂಗಡಿಗಳಲ್ಲಿ ಸಿಗುವ ಲಾಡುಗಳಷ್ಟು ಗಾತ್ರದ್ದು ಮಾತ್ರ ಹೇಮಾ ಬಡಿಸಿದ್ದಳು. ಸಾಂಬಾರಿನೊಳಗೆ ಉಂಡೆಮಾಡಿದ ಮುದ್ದೆ ಗೋಲಿಗಳನ್ನು ನಾಲಗೆಯ ರುಚಿಗಾಗಿ ತುಪ್ಪದಲ್ಲಿಯೂ ಒಮ್ಮೆ ಹೊರಳಾಡಿಸಿ ಬಾಯೊಳಗೆ ಹಾಕಿಕೊಂಡರೆ ಅವರಿಗೆ ಇಷ್ಟವಾಗಬಹುದು ಎಂದುಕೊಂಡು ಅವರೆಲ್ಲರ ತಟ್ಟೆಯಲ್ಲಿಯೂ ಸಾಕಷ್ಟು ತುಪ್ಪವನ್ನು ಬಡಿಸಲಾಗಿತ್ತು. ಮೊದಲಿಗೆ ಎಲ್ಲರಿಗೂ ಹೇಗೆ ಅದನ್ನು ತಿನ್ನಬೇಕು ಅಲ್ಲಲ್ಲ ನುಂಗಬೇಕು ಮತ್ತು ನುಂಗುವುದರ ನಡುವೆ ಸಿಗುವ ರುಚಿಯ ಅಹ್ಲಾದವನ್ನು ಹೇಗೆ ಸವಿಯಬೇಕು ಎನ್ನುವುದನ್ನು ನಾನು ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಮಾಡಿ ತೋರಿಸಿದ್ದೆ. ಒಹ್! ಇದು ಇಷ್ಟ ಸುಲಭ ಅಂತ ಗೊತ್ತೇ ಇರಲಿಲ್ಲವೆಂದುಕೊಂಡು  ಊಟ ಪ್ರಾರಂಭಿಸಿದರು.  ನಾಗೇಂದ್ರನ ಮೊದಲ ಮಗ ಸುಹಾಸ ಖುಷಿಯಿಂದ ಬಾಯಿಗೆ ಹಾಕಿಕೊಂಡ. ಈ ವಿಚಾರದಲ್ಲಿ ಮೊದಲ ಬ್ಯಾಟ್ಟ್ ಮ್ಯಾನ್ ಆಗಿ ಅವನು ಆತ್ಮವಿಶ್ವಾಸದಿಂದ ಮೈದಾನಕ್ಕೆ ಪ್ರವೇಶ ಮಾಡಿದ್ದು ನಮಗೆಲ್ಲಾ ಖುಷಿಯಾಗಿತ್ತು.  ಆವನನ್ನು ನೋಡಿ ಬಹುಶಃ ಈತ ನುಂಗುವ ಮುದ್ದೆ ಗೋಲಿಗಳು ಶತಕ ಬಾರಿಸಬಹುದು ಅಂತ ಮಾತಾಡಿಕೊಂಡೆವು. ಅಷ್ಟರಲ್ಲಿ "ಅಪ್ಪಾಜಿ" ಅಂತ ಜೋರಾಗಿ ಕೂಗಿದ.

 "ಎಂತ ಆತು?  ನಾಗೇಂದ್ರ ಮಗನ ಕಿವುಚಿಕೊಂಡ ಮುಖ ನೋಡುತ್ತ ಕೇಳಿದರು!"

 "ಇದು ನುಂಗಕ್ಕೆ ಬರ್ತಿಲ್ಲೇ....ಬಾಯಲ್ಲೇ ಉಳಿದೋಯ್ತು..." ಅಂದ ಸುಹಾಸ.

 "ಬಾಯಿಗೆ ಸ್ವಲ್ಪ ಸಾಂಬಾರು ಮತ್ತು ತುಪ್ಪವನ್ನು ಹಾಕಿಕೋ..ಅದರ ರುಚಿಯನ್ನು ಸವಿಯುತ್ತಾ ಅದರ ಬ್ಯಾಲೆನ್ಸಿನಲ್ಲೇ ನುಂಗಿಬಿಡು" ಅಂದಳು ಹೇಮಾ.

" ಹೌದೋ ಸುಹಾಸ್, ನೋಡು ನಿನಗೆ ನಿಮ್ಮೂರಿನ ಇಷ್ಟದ ಪ್ರಸಂಗವನ್ನು ನೆನೆಸಿಕೊಂಡು ಜೊತೆಗೆ ಬೇಕಾದರೆ ಮಜ್ಜಿಗೆ ಉಳಿಯನ್ನು ಸ್ವಲ್ಪ ಕುಡಿದು ಹಾಗೆ ನಿದಾನವಾಗಿ ನುಂಗು" ಅಂದೆ.


 "ಇಲ್ಲ ಶಿವು ಮಾಮ, ಏನನ್ನು ನೆನಸಿಕೊಂಡರೂ ಆಗುತ್ತಿಲ್ಲ! ಬಾಯೊಳಗಿನ ರಾಗಿಮುದ್ದೆಯನ್ನು ಬಿಟ್ಟು ಬೇರೇನು ನೆನಪಾಗುತ್ತಿಲ್ಲ" ಅಂದ.

 "ನೋಡುತಮ್ಮ ನಿನಗೆ ಜ್ವರ ಬಂದಾಗ ಗುಳಿಗಿ ನುಂಗಿ ನೀರು ಕುಡಿಯುತ್ತೀಯಲ್ಲ ಹಾಗೆ ನುಂಗಿಬಿಡು" ಹೊಸ ಐಡಿಯ ಕೊಟ್ಟರು ನಾಗೇಂದ್ರ ಶ್ರೀಮತಿಯವರು. 

 "ಆತಿಲ್ಲೇ ಹೋಗೇ, ಇದು ಕಷ್ಟ ಗೊತ್ತಾ, ನೀನು ಒಂದು ನುಂಗಿ ತೋರಿಸೆ" ಅಂದ

 ಇದುವರೆಗೂ ಮಗನಿಗೆ ತಿಳುವಳಿಕೆ ಕೊಡುತ್ತಿದ್ದ ಆಕೆಗೆ ತಾನೇ ಫೀಲ್ಡಿಗೆ ಇಳಿಯಬೇಕಾದ ಅನಿರೀಕ್ಷಿತ ಪ್ರಸಂಗ ಬಂದಿದ್ದರಿಂದ ಸಂದಿಗ್ಧಕ್ಕೆ ಒಳಗಾದರೂ ಅದನ್ನು ಮುಖದಲ್ಲಿ ತೋರಿಸಿಕೊಳ್ಳದೇ ನಮ್ಮ ಕಡೆಗೊಮ್ಮೆ ನೋಡಿದರು.  ಒಮ್ಮೆ ದೇಸಾವರಿ ನಗು ನಕ್ಕು ಸಣ್ಣ ಗೋಲಿಗಾತ್ರದ ರಾಗಿ ಮುದ್ದೆಯನ್ನು ತುಪ್ಪ ಮತ್ತು ಸೊಪ್ಪಿನ ಸಾರಿನಲ್ಲಿ ಒಮ್ಮೆ ಮುಳುಗಿಸಿ, ಉರುಳಿಸಿ, ತಲೆಕೆಳಗು ಮಾಡಿ,  ಹಾಗೆ ಬಾಯಿಗೆ ಹಾಕಿಕೊಂಡರು.  ಒಂದೆರಡು ಕ್ಷಣ ಎಲ್ಲರೂ ಅವರನ್ನೇ ನೋಡುತ್ತಾ ಯಾರು ಮಾತಾಡಲಿಲ್ಲ.  ನಾಗೇಂದ್ರನಿಗಂತೂ ತಮ್ಮ ಶ್ರೀಮತಿ ಮೊದಲ ಬಾರಿಗೆ ರಾಗಿ ಮುದ್ದೆಯನ್ನು ನುಂಗುವುದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ನುಂಗುವುದರಲ್ಲಿ ಫೇಲ್ ಆದ ಸುಹಾಸ ಅಮ್ಮ ಯಶಸ್ವಿಯಾಗುವಳೇ ಅಂತ ಆಕೆಯನ್ನೇ ನೋಡುತ್ತಿದ್ದ. ಎರಡನೆ ಮಗ ವಿಕಾಸನಂತೂ ತನ್ನಮ್ಮ ಕಡೆಗೆ ಅಚ್ಚರಿಯಿಂದ ನೋಡುತ್ತಲೇ ಇದ್ದ.

" ಜಾರಿಹೋಯ್ತ?" ಕುತೂಹಲದಿಂದ ಕೇಳಿದಳು ಹೇಮಾ.

ಅವರು ಮಾತಾಡಲಿಲ್ಲ.  ನಮ್ಮ ಕಡೆಗೊಮ್ಮೆ ಹುಸಿನಗೆ ಬೀರುತ್ತಾ ತಲೆಅಲ್ಲಾಡಿಸಿದರು.

"ಹಾಗಾದರೆ ಮತ್ತೆಲ್ಲಿ ಹೋಯ್ತು" ನಾನು ಕೇಳಿದೆ.

           "ಬೆಂಗಳೂರಿನ ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿಕೊಂಡಂತೆ ಬಾಯಲ್ಲೇ ಇರಬೇಕು!" ನಾಗೇಂದ್ರ ನಗುತ್ತಾ ಹೇಳಿದಾಗ ನಮಗೆಲ್ಲಾ ನಗು.  ನಾಗೇಂದ್ರ ಮುದ್ದೆ ನುಂಗುವ ಸರಧಿ ಬಂತಲ್ಲ,  ನನಗೂ ಮತ್ತು ಹೇಮಾಗೂ ಇದೊಂತರ ತಮಾಷೆಯ ಪ್ರಸಂಗವಾದರೆ,  ಉಳಿದವರಿಗೆಲ್ಲಾ ಇದೊಂದರ ನೂರಹತ್ತು ಮೀಟರ್ ರನ್ನಿಂಗ್ ರೇಸಿನಲ್ಲಿ ನಡುನಡುವೆ ಸಿಗುವ ಹರ್ಡಲ್ಸುಗಳನ್ನು ಹಾರಿ ಗುರಿ ಮುಟ್ಟಬೇಕಾದ ಪರಿಸ್ಥಿತಿ.  ವಿಕಾಸನಂತೂ ನಮ್ಮಲ್ಲೆರನ್ನು ಮುಗ್ದವಾಗಿ ನೋಡುತ್ತಾ ಎಲ್ಲರ ಪ್ರಯತ್ನ, ಯಶಸ್ಸು ವಿಫಲತೆಯನ್ನು ಸೂಕ್ಷ್ಮವಾಗಿ ಮಾತಾಡದೇ ಗಮನಿಸುತ್ತಿದ್ದ.  ಎಲ್ಲರ ಪ್ರಯತ್ನವೂ ವಿಫಲವಾಗಿದ್ದು ನೋಡಿ ಇದೊಳ್ಳೆ ಭಯಂಕರ ಸಾಹಸವಿರಬಹುದು ಅಂತ ಊಹಿಸಿಕೊಳ್ಳುತ್ತಿದ್ದ. ತನ್ನ ಮನೆಯವರೆಲ್ಲಾ ರಾಗಿ ಮುದ್ದೆ ಬಾಯೊಳಗಿನ ಹಲ್ಲುಗಳ ನಡುವೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವುದನ್ನು ನೋಡಿದ ವಿಕಾಸನಿಗೆ ತನ್ನ ಹಲ್ಲುಗಳ ನಡುವೆ ಹೀಗೆ ಫೆವಿಕಾಲ್ ತರ ಅಂಟಿಕೊಂಡು ಮುಂದೆ ನಾನು ಬಾಯನ್ನು ಬಿಡದ ಪರಿಸ್ಥಿತಿ ಬಂದುಬಿಟ್ಟರೆ ಮತ್ತೆ ಚಾಕ್‍ಲೇಟು ತಿನ್ನಲಾಗದಂತೆ ಬಾಯಿ ಸೀಲ್ ಆಗಿಬಿಟ್ಟರೆ.......ಇಂಥ ಭಯಂಕರ ಕಲ್ಪನೆಯಿಂದಾಗಿ ಅವನು ರಾಗಿಮುದ್ದೆಯನ್ನು ನುಂಗುವ ಪ್ರಯತ್ನವನ್ನೇ ಮಾಡಲಿಲ್ಲ.

      ಕೊನೆಗೆ ಅವತ್ತಿನ ಊಟದಲ್ಲಿ ಅವರ್ಯಾರು ರಾಗಿಮುದ್ದೆಯನ್ನು ಉಣ್ಣಲಿಲ್ಲ, ಅದರ ರುಚಿಯನ್ನು ಸವಿಯಲಿಲ್ಲ ಕೊನೆಯ ಪಕ್ಷ ನುಂಗಲಿಲ್ಲ.  ಸಿರಸಿಯ ಗೆಳೆಯರು ನಮ್ಮ ಮನೆಗೆ ಬಂದಾಗಲೆಲ್ಲಾ ಹೀಗೆ ವೈವಿಧ್ಯಮಯವಾದ ರಾಗಿಮುದ್ದೆ ಪ್ರಸಂಗಗಳು ನಡೆಯುತ್ತಿರುತ್ತವೆ. ಬರೆದರೆ ಪ್ರಕಾಶ್ ಹೆಗಡೆ ಸೇರಿದಂತೆ ನನ್ನ ಅನೇಕ ಸಿರಸಿ ಗೆಳೆಯರು ರಾಗಿ ಮುದ್ದೆ ನುಂಗುವುದರ ಬಗ್ಗೆ ಹೊಂದಿರುವ ಅಭಿಪ್ರಾಯವನ್ನೆಲ್ಲಾ ಬರೆದರೆ ಲೇಖನ ದೊಡ್ಡದಾಗಿ ಅದನ್ನೆಲ್ಲಾ ಓದಿ ಮುಗಿಸುವ ಹೊತ್ತಿಗೆ ರಾಗಿಮುದ್ದೆ ನುಂಗುವುದು ನಿಮಗೆಲ್ಲಾ ನುಂಗಲಾರದ ತುತ್ತಾಗಿ ಪರಿಣಾಮ ಬೀರಬಾರದೆಂದು ಇಲ್ಲಿಗೆ ಮುಗಿಸುತ್ತಿದ್ದೇನೆ. ಓದಿದ ನಂತರ ನೀವು ನಿಮ್ಮ ನುಂಗುವ ಪ್ರಸಂಗಗಳನ್ನು ನೆನಪಿಸಿಕೊಂಡು ಪ್ರತಿಕ್ರಿಯಿಸಬಹುದು.

ಚಿತ್ರಗಳ ಕೃಪೆ: ಅಂತರ್ಜಾಲ.
ಲೇಖನ : ಶಿವು.ಕೆ


  

59 comments:

ಚುಕ್ಕಿಚಿತ್ತಾರ said...

ಶಿವು ಸಾರ್..
ನಿಜಕ್ಕೂ ಮುದ್ದೆ ನು೦ಗಲು ಒ೦ದು ಪ್ರೊಫೆಶನಾಲಿಸಮ್ ಬೇಕೇ ಬೇಕು..
ಮುದ್ದೆ ಉಣವುದರ ಪರಿಯನ್ನು ಓದುತ್ತಾ ನನಗೂ ಮುದ್ದೆ ನು೦ಗುವುದರ ಅನುಭವವಾದ೦ತೆ ಆಯಿತು...!!!

Sushrutha Dodderi said...

ನಂಗೂ ಇದೊಂದ್ ಆಗಲ್ಲ ನೋಡಿ ಶಿವು.. ನಂಗೂ ಏನನ್ನೇ ತಿನ್ನಬೇಕಾದ್ರೂ ಅಗಿದು ತಿನ್ಬೇಕು ಅಂತ.. ನುಂಗೋದು ಅಂದ್ರೆ ಆಗಲ್ಲ (ಮಾತ್ರೆ ಒಂದು ಬಿಟ್ಟು!).. ಅದಕ್ಕೇ ಇಷ್ಟ್ರೊಳಗೆ ರಾಗಿಮುದ್ದೆ ತಿಂದಿಲ್ಲ. :-)

ಚಿನ್ಮಯ ಭಟ್ said...

ತೆಳ್ಳೇವು ಬೇಕಾದರೆ ಬೆಲ್ಲದಲ್ಲಿ ಮುಳುಗಿಸಿ ತಿನ್ನುತ್ತೇವೆ ಸಾರ್,ಆದ್ರೆ ಮುದ್ದೆ ಕಷ್ಟಾ...
ಅದ್ಕೆ "ಸಿರ್ಸಿ ಮಂದಿ ಮುದ್ದೆ ತಿಂದ್ರು"ಷೋನೇ ಬೇಕೇನೋ!!!

ನಾನೂ ಚಿಕ್ಕಮಗಳೂರಿಗೆ ಬಂದ ಹೊಸದರಲ್ಲಿ ಇದೆ ಪ್ರಯತ್ನವನ್ನು ನಾಲ್ಕೈದು ಬಾರಿ ಮಾಡಿ,ಮುದ್ದೆ ನುಂಗಲಾರದೆ ಪಿಜಿ ಆಂಟಿಯ ಮೇಲೆ ಚಾರ್ಜ್ ಶೀಟು ಹಾಕಿದ್ದೇನೆ!!!!

ಸದ್ಯಕ್ಕೆ ಮುದ್ದೆ ನುಂಗಲಾರದ ತುತ್ತು...
ನೋಡೋಣ, ಇಂಜಿನಿಯರಿಂಗ್ ಮುಗಿಯುವುದರೊಳಗೆ,ಏನು ಕಲಿಯುತ್ತೆನೋ ಇಲ್ಲೋ, ಕೇಳಿದಾಗ ಕಾಫಿ ಕುಡಿಯುವುದು,ಕರೆದಾಗ ಮುದ್ದೆ ತಿನ್ನುವುದು ಎರಡು ಕಲಿಯಲೇಬೇಕು!!!

ಸುಮ said...

:) ಚೆನ್ನಾಗಿದೆ ಶಿವು ಸರ್ ರಾಗಿಮುದ್ದೆ ಪುರಾಣ . ನಮ್ಮ ಮನೆಯಲ್ಲಿ ನಾನು , ಸುಧಾಕಿರಣ್ ರಾಗಿಮುದ್ದೆ ನುಂಗುವುದನ್ನು ಕಷ್ಟಪಟ್ಟು ಕಲಿತಿದ್ದೇವೆ. ಮಗಳಿಗಿನ್ನೂ ಕಲಿಸಲಾಗಿಲ್ಲ.

ಮನಸಿನ ಮಾತುಗಳು said...

ನಮ್ಮನೆಲಿ ನಾವು ಇದನ್ನ ಮಾಡೋದಿಲ್ಲ . ಗೆಳೆಯರ ಮನೆಯಲ್ಲಿ ಒಂದೆರಡು ಬಾರಿ ತಿಂದಿದ್ದೇನೆ....ನೋಡೋಕೆ ಚಂದ ಅದು..:-)

balasubramanya said...

ಹ ಹ ಹ ಶಿವೂ "ರಾಗಿ ಮುದ್ದೆ" ಪುರಾಣ ಸೊಗಸಾಗಿದೆ.ಒಂದು ಗಾದೆ ಮಾತಿದೆ "ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ " [ಆಲ್ವಾ ರಾಗಿ ಮುದ್ದೆ ತಿಂದವನು ಬೆಟ್ಟವನ್ನು ಬೇಕಾದ್ರೆ ಕೀಳಬಲ್ಲಾ] ಅಂತ. ಇದು ದೇಹಕ್ಕೆ ತಂಪು ನೀಡಿ ಶಕ್ತಿ ನೀಡುತ್ತದೆ.ಆದ್ರೆ ಒಂದು ಮಾತ್ರ ನಿಜ "ಪಿಜ್ಜಾ ವನ್ನು ಎಳೆದಾಡಿ ತಿನ್ನುವ ಬದಲು ರಾಗಿ ಮುದ್ದೆ ನುಂಗುವುದು ಒಳ್ಳೆಯದು. ನಾನೂ ಸಹ ನನ್ನ ವಿದೇಶಿ ಗೆಳೆಯ "ಸ್ಯಾಮ್ಯುಎಲ್ ಸ್ಟ್ಯಾಂಡ್ ಬರ್ಗ್ " ನಿಗೆ ಇದನ್ನು ತಿನ್ನಿಸಿದ್ದೇನೆ. "so nice to have this. its amazing" balu you know its healthier than pizza" ಅಂದಿದ್ದ ಮಹಾಶಯ. ವರ್ಷಕೊಮ್ಮೆ ಬರುವ ಇವನು ರಾಗಿ ಮುದ್ದೆ ಪ್ರಿಯ. ಇನ್ನೊಂದು ವಿಷ್ಯ ಮಂಡ್ಯ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ರಾಗಿ ಮುದ್ದೆ ತಿನ್ನುವ ಅಲ್ಲಾ ನುಂಗುವ ಸ್ಪರ್ಧೆ ಇಡುತ್ತಾರೆ.ಇದರಲ್ಲಿ ಒಬೋಬ್ಬ್ರೂ ಕನಿಷ್ಠ ಹತ್ತರಿಂದ ಹದಿನೈದು ಮುದ್ದೆ ನುಂಗಿ ಗೆಲುವಿನ ನಗೆ ನಕ್ಕ ಮಹನೀಯರು ಇದ್ದಾರೆ. ಮುದ್ದೆ ಗಾತ್ರ ಗೊತ್ತ ಕೇವಲ ಅರ್ಧ ಕೆಜಿಯ ಗೋಲಿ ಅಷ್ಟೇ!!! ನಮ್ಮ ಬ್ಲಾಗರ್ಸ್ ಗೂ ಈ ಸ್ಪರ್ಧೆ ಇಡೋಣ ಬಿಡಿ. ಲೇಖನ ಚೆನ್ನಾಗಿದೆ.

shridhar said...

ಶಿವು ಸರ್ ,
ಸಿರ್ಸಿ ಮಂದಿಯ ಮಾನ ಉಳಿಸಲು ನಾನಿದ್ದೇನೆ ..
ನಂಗೆ ಮುದ್ದೆ ನುಂಗುವುದು ಯಾವುದೇ ರೀತಿಯ ಸಾಹಸವೇ ಅನ್ನಿಸಲ್ಲಿಲ್ಲ ..[ ನನ್ನನ್ನು ಬಿಟ್ಟರೆ ನಮ್ಮ ಮನೆಯಲ್ಲಿ
ಅಂದರೆ ನನ್ನಮ್ಮ , ಅಕ್ಕ , ಭಾವ ಕಡೆಗೆ ನನ್ನ ಶ್ರೀಮತಿಗೂ ಸಹ ಅದು ಸಾಹಸವೇ ಸರಿ ]
ಮುದ್ದೆ ಮೇಲೆ ತುಪ್ಪ ಹಾಕಿ .. ಬತ್ತು ಸಾರಿನಲ್ಲಿ ನೆನೆಸಿ ಗುಳುಂ ಅಂತಾ ನುಂಗಿ ಬಿಡ್ತೇನೆ ...
ಜೊತೆಗೆ ಕಚ್ಚಲು ಈರುಳ್ಳಿ , ಮೆಣಸಿನ ಕಾಯಿ ಇದ್ದರಂತು .. ಆಹಾ...
ಹೋಗ್ಲಿ ಬಿಡಿ ಈಗಾ ಅದ್ಯಾಕೆ ..
ನಮ್ಮಮ್ಮ ಹೇಳ್ತಾನೆ ಇರ್ತಾರೆ ನಾನು ಚಿಕ್ಕವನಿದ್ದಾಗ ಅನ್ನವನ್ನು ಸಹ ಅಗಿಯದೆ ನುಂಗಿ
ಬಿಡ್ತಿದ್ನಂತೆ ..[ ಆಟ ಆಡಲು ಸಿಗದೆ ಹೋದರೆ ಎಂದು ] .ಅದೇ ನನಗೆ ಮುದ್ದೆ ನುಂಗಲು ಸಹಾಯ ಮಾಡಿದೆ ಅನ್ಕೋತಿನಿ ..

ನನ್ನ ಮೈಸೂರಿನಲ್ಲಿರುವ ಚಿಕ್ಕಮ್ಮನಿಗೆ ಬಿಟ್ಟರೆ ಮತ್ತೆ ಯಾರಿಗೂ ನಮ್ಮಲ್ಲಿ ಮುದ್ದೆ ಮಾಡಲು ಬರಲ್ಲ ..
ಸೊ ಯಾವಾಗ ಅಲ್ಲಿ ಹೋದರು ಮುದ್ದೆ ಗ್ಯಾರಂಟಿ ..

ಮುದ್ದೆ ವಿಷಯ ಬಂದಿದ್ದೆ ನಾನು ಎಷ್ಟೊಂದು ನೆನಪಿಗೆ ಜಾರಿ ಬಿಟ್ಟೆ ...

ನಿಮ್ಮ ಲೇಖನ ಹಾಸ್ಯಮಯವಾಗಿದೆ ..

ಮುದ್ದೆ ಪುರಾಣ ಸೂಪರ್ ....ಹ್ಹ ಹ್ಹ ಹ್ಹ ...

ಅನಿಲ್ ಬೇಡಗೆ said...

ಶಿವಣ್ಣ,
ಆರು ವರ್ಷಗಳ ಹಿಂದೆ,
ನಾನು ತುಮಕೂರ್ ಬಂದಾಗ ಒಮ್ಮೆ ಕೆಲವು ಹಾಸ್ಟೆಲ್ ಗೆಳೆಯರು ಸೇರಿ ಒಬ್ಬ ಗೆಳೆಯನ ಮನೆಗೆ ಹೋಗಿದ್ವಿ.
ಮೊದಲು "ಮುದ್ದೆ" ನಾನು ಆರಾಮಾಗಿ ತಿಂದೆ.. ಅಂದ್ರೆ ನುಂಗಿದೆ..
ಅಲ್ಲಿರುವ ಕೆಲವರಿಗೆ ಹಾಗು ನಮ್ಮೂರ ಕಡೆಯ ಗೆಳೆಯರಿಗೆ ಆಶ್ಚರ್ಯ..!
"ಜೋಳದ ರೊಟ್ಟಿ" ತಿಂದ ನಾನು ಅದು ಹೆಂಗೆ ಮುದ್ದೆ ಅಷ್ಟೊಂದು ಸಲಿಸಾಗಿ ನುಂಗಿದ ಅಂತ
ಅವರು ಹ್ಯಾಂಗೋ ದೋಸ್ತ...? ಅಂದ್ರು.. ಹಂಗೆ ಅಂತ ನಾನು ನಕ್ಕೆ. :)
ಆದ್ರೆ,
ವಿಷಯ ಬೇರೇನೆ ಇದೆ. ಅವರಿಗೆ ಹೇಳಲಿಲ್ಲ..
ನನಗೆ ಅವತ್ತೆ ಮೊದಲ 'ಮುದ್ದೆ' ಊಟ ಆಗಿರಲಿಲ್ಲ.. !!
ನಾನು ಮೊದಲ ಸಲ ಮುದ್ದೆ ರುಚಿ ನೋಡಿದ್ದು..
ನನ್ನ ತಂದೆಯ ಸಹೋದ್ಯೋಗಿ, ಆತ್ಮೀಯ ಗೆಳೆಯರು ಆಗಿದ್ದ
ಹಾಸನ ಮೂಲದ, ಶ್ರೀ.ಗೋವಿಂದ ರಾಜ್ ಗೌಡ ಅವರ ಮನೆಯಲ್ಲಿ.. ಇದಾಗಿ ಈಗ ೧೪-೧೫ ವರ್ಷ ಆಯ್ತು.. !!! ಹ ಹ..
ಆಮೇಲೆ ನಮ್ಮ ತಾಯಿ ಅವರಿಂದ "ಮುದ್ದೆ" ಹಾಗು ಅವರು "ಜೋಳದ ರೊಟ್ಟಿ" ವಿದ್ಯೆ ಅದಲು ಬದಲಾದವು..
ನಮ್ಮ ಮನೆಯಲ್ಲಿ ಅವಾಗಾವಾಗ ಅಮ್ಮ ಮಾಡ್ತಿರ್ತಾರೆ.

ಆದ್ರೆ,
"ಜೋಳದ ರೊಟ್ಟಿ" ೫-೬ ಸಲೀಸಾಗಿ ತಿನ್ತೇನೆ. ಮುದ್ದೆ ೧ ಇಲ್ಲ ೨ ಅಷ್ಟೇ..
ನನಗೆ 'ಮುದ್ದೆ' ಅಭ್ಯಾಸ ಹೀಗೆ..:)

Dr.Nagesh.KM. said...

shivu nanage nimma haage photo thegeyalu ondu olle camera configuration suggest maadthera plZ

Gubbachchi Sathish said...

ರಾಗಿ ಮುದ್ದೆ ನುಂಗೋಕು ಕಷ್ಟಪಡೋ ಜನ ಇದ್ದಾರಲ್ಲಪ್ಪ! ನಂಬಲೇಬೇಕು.

ಜಲನಯನ said...

ಶಿವು ಅಂತೂ ಉದಯ್ ಗೆ ಸರ್ಕಸ್ ಮಾಡಿಸಿಬಿಟ್ರಾ,,,?? ಆದ್ರೆ ಇದು ಮೋಸಾನಪ್ಪಾ...ಹೇಮನೂ ನನಗೆ ಮುದ್ದೆ ಮಾಡ್ತೀನಿ ಬನ್ನಿ ಬನ್ನಿ ಅಂತ ಹೇಳ್ತಾನೆ ಇದ್ದುಬಿಟ್ರು...
ಹಹಹ ನಿಮ್ಮ ಫೋಟೋನೂ ಸೂಪರ್ ಬಸ್ಸರಿನಲ್ಲಿ ಒದ್ದಾಡಿ ಗಂಟಲಲ್ಲಿ ಜಾರುವ ಮುದ್ದೆ ಗೋಲಿ...ನನ್ನ ಬಾಯಲ್ಲೂ ನೀರು ತರಿಸ್ತು...ಹಹಹ

umesh desai said...

ಶಿವು ಸರ್ ಹಿಂದೆನೂ ಈ ಮಾತು ಹೇಳಿದ್ದೆ. ನಿಮ್ಮ ಶೈಲಿ ಅದೂ ಈ ಪ್ರಬಂಧ ಪ್ರಕಾರದಾಗ ಭಾಳ ವಿಶಿಷ್ಟ ಅದ.
ಇನ್ನು ಮುದ್ದಿ ನಮ್ಮನಿಯೊಳಗೂ ಆಗಾಗ ಮಾಡ್ತಾರ್ (ಬೆಂಗಳೂರಿಗೆ) ಬಂದ ಮ್ಯಾಲ ನಮ್ಮನಿಯವ್ರು ಕಲತಕೊಂಡ ವಿದ್ಯಾ ಅದು.
ನಂಗ ಮುದ್ದಿ ನುಂಗೂದು ಸೇರತದ

shivu.k said...

ವಿಜಯಶ್ರೀ ಮೇಡಮ್,

ರಾಗಿಮುದ್ದೆ ಮೊದಲ ಕಾಮೆಂಟಿಗೆ ಧನ್ಯವಾದಗಳು. ಇದೇನು ಬ್ರಹ್ಮವಿದ್ಯೆಯಲ್ಲ.. ಏನು ಯೋಚಿಸದೇ ನುಂಗಿದರೆ ಆಯ್ತು..ಆಷ್ಟೆ...ಲೇಖನವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್.

shivu.k said...

ಸುಶ್ರುತ,
ತಲೆಯೊಳಗಿರುವ ಯೋಚನೆಗಳನ್ನೆಲ್ಲಾ ಒಮ್ಮೆ ಜೀರೋ ಮಾಡಿಕೊಂಡು ಒಮ್ಮೆ ಮುದ್ದೆಯನ್ನು ನುಂಗಿನೋಡಿ ಆಗುತ್ತದೆ. ಒಮ್ಮೆ ಪ್ರಯತ್ನಿಸಿ..all the best!

shivu.k said...

ಚಿನ್ಮಯ್,
ತೆಳ್ಳೆವನ್ನು ನಾನು ತಿಂದಿದ್ದೇನೆ. ಅದನ್ನೇ ಆಗಿದು ತಿನ್ನಬೇಕು ಅದನ್ನೇ ನುಂಗುತ್ತೀರೆಂದಮೇಲೆ ಮುದ್ದೆ ಇನ್ನೂ ಸುಲಭ. ನಿಮ್ಮ ಪಿಜಿ ಆಂಟಿಯ ಮೇಲೆ ಚಾರ್ಜ್ ಸೀಟ್ ಹಾಕುವುದನ್ನು ಬಿಟ್ಟು ಪ್ರಯತ್ನಿಸಿ..ಮುಂದಿನ ಭಾರಿ ಕಲಿತು ಅದರ ಬಗ್ಗೆ ನಿಮ್ಮ ಅನುಭವವನ್ನು ಬರೆಯಿರಿ...
ಲೇಖನವನ್ನು ಓದಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಸುಮಾ ಮೇಡಮ್.
ಮುದ್ದೆ ನುಂಗುವುದನ್ನು ಕಲಿಯಲು ಕಷ್ಟಪಡಬೇಕಿಲ್ಲ. ಆದ್ರೂ ಕಲಿತಿದ್ದೀರಿ. ನಿಮ್ಮ ಮಗಳಿಗೂ ಬೇಗ ಕಲಿಸಿ. ಇಲ್ಲವಾದಲ್ಲಿ ನಾನು ಬರೆದ ಕತೆಯಾದೀತು.....

shivu.k said...

ದಿವ್ಯ,

ನಿನಗೆ ರಾಗಿ ಮುದ್ದೆ ಅದ್ಯಾವ ಪರಿಯಲ್ಲಿ ನೋಡೋ ಚೆಂದ ಕಂಡಿತೋ ನಾ ಕಾಣೆ. ಅದನ್ನು ನೋಡುತ್ತಲೇ ಇರಬಾರದು ಮೊದಲು ನುಂಗಿಹಾಕಬೇಕು. ನಿನ್ನ ಗೆಳೆಯರ ಮನೆಯಲ್ಲಿಯೇ ಒಮ್ಮೆ ಪ್ರಯತ್ನಿಸು..ಇಷ್ಟವಾದರೆ ಹೇಮಾ ಕೈಯಲ್ಲಿ ರೆಸಿಪಿ ಬರೆಸುತ್ತೇನೆ.

shivu.k said...

ಬಾಲು ಸರ್,

ರಾಗಿಮುದ್ದೆ ಬಗ್ಗೆ ಹತ್ತಾರು ಗಾದೆಗಳಿವೆ.
ಆರೋಗ್ಯದ ದೃಷ್ಟಿಯಿಂದ ರಾಗಿಮುದ್ದೆ ತುಂಬಾ ಒಳ್ಳೆಯದು. ನಿಮ್ಮ ವಿದೇಶಿ ಗೆಳೆಯ "ಸ್ಯಾಮ್ಯುಎಲ್ ಸ್ಟ್ಯಾಂಡ್ ಬರ್ಗ್ " ನಿಮ್ಮೂರಿಗೆ ಬಂದಾಗ ನಮ್ಮ ಮನೆಗೆ ಕರೆದುಕೊಂಡು ಬನ್ನಿ. ಅವನು ನಮ್ಮ ಮನೆಯ ರಾಗಿಮುದ್ದೆಯ ಅಭಿಮಾನಿಯಾಗದಿದ್ದರೆ ಕೇಳಿ.

ಮತ್ತೆ ಮಂಡ್ಯದಲ್ಲಿ ರಾಗಿಮುದ್ದೆ ನುಂಗುವ ಸ್ಪರ್ಧೆಯ ಬಗ್ಗೆ ನಾನೂ ಕೇಳಿದ್ದೇನೆ. ಅದರ ಬಗ್ಗೆ ಚಿತ್ರಸಹಿತ ವಿವರವನ್ನು ಕಲೆಹಾಕಿ ಬ್ಲಾಗಿನಲ್ಲಿ ಬರೆಯಿರಿ..ನಿಮ್ಮೂರಿನ ಬಗ್ಗೆ ಬರೆಯಲು ನಿಮಗಿಂತ ಇನ್ಯಾರು ಸೂಕ್ತ..ಅಲ್ವಾ...
ಮತ್ತೆ ನಮ್ಮ ಬ್ಲಾಗರ್ಸುಗಳೆಲ್ಲಾ ಮುದ್ದೆ ನುಂಗುವ ಸ್ಪರ್ಧೆಗೆ ಬರುವಂತಿದ್ದರೆ ಅದಕ್ಕೆ ನಮ್ಮ ಮನೆಯಿಂದಲೇ ಮುದ್ದೆ ಸ್ಪಾನ್ಸರ್ ಮಾಡಿಸುವ ಜವಾಬ್ದಾರಿ ನನ್ನದು. ಇದರ ಬಗ್ಗೆ ಬ್ಲಾಗರ್ಸುಗಳು ಪ್ಲಾನ್ ಮಾಡಲಿ...ಈ ವಿಚಾರವನ್ನು ನೀವೆ ಬಜ್‍ನಲ್ಲಿ ಪ್ರಸ್ತಾಪ ಮಾಡಿಬಿಡಿ...

sunaath said...

ಶಿವು,
ರಾಗಿಮುದ್ದೆಪುರಾಣ ಚೆನ್ನಾಗಿದೆ. ನಿಜ ಹೇಳಬೇಕೆಂದರೆ, ಈ ಮುದ್ದೇನ್ನ ನುಂಗೋಕೆ ನಾನೂ ಪ್ರಯತ್ಮಪಟ್ಟು ಸೋತಿದ್ದೇನೆ.

ಚಿತ್ರಾ said...

ಶಿವೂ,

ಚೆನ್ನಾಗಿದೆ ರಾಗಿಮುದ್ದೆ ಕಥೆ ! ಹಳೆಯ ಒಂದು ಪ್ರಸಂಗ ನೆನಪಾಯಿತು .

ನಾನು ಬೆಂಗಳೂರಲ್ಲಿ ಮೂರು - ನಾಲ್ಕು ಜನ ಹುಡುಗಿಯರು ರೂಂ ಮಾಡಿಕೊಂಡಿದ್ದೆವು . ಒಮ್ಮೆ ನಮ್ಮ ಮನೆ ಓನರ್ ಗೆ ನಮ್ಮ ಮೇಲೆ ಪ್ರೀತಿ ಉಕ್ಕಿ , ರಾಗಿಮುದ್ದೆ ಮತ್ತು ಸೊಪ್ಪಿನ ಸಾರು ತಂದು ಕೊಟ್ಟು "ತಿನ್ರಮ್ಮಾ , ನಮ್ಮ ಊಟದ್ದೂ ರುಚಿ ನೋಡಿ. ಆಮೇಲೆ ಮನೆಗೆ ಹೋಗಿ ನಿಮ್ಮ ತಾಯಿಗೂ ರಾಗಿ ಮುದ್ದೆ ಮಾಡಿ ಹಾಕು ಅಂತೀರಾ " ಅಂತ ಹೇಳಿದ್ರು . ನಮ್ಮಲ್ಲಿಬ್ಬರು ಮಲೆನಾಡಿನವರು ಮತ್ತಿಬ್ಬರು ಕರಾವಳಿಯವರು . ಮುದ್ದೆಯ ಬಗ್ಗೆ ಕೇಳಿ ಮಾತ್ರ ಗೊತ್ತಿದ್ದವರು ! ಓನರ್ ಗೆ ಇಲ್ಲ ಎನ್ನಲಾಗುತ್ತದೆಯೇ ? ಪ್ರಯತ್ನ ಮಾಡಿಯೇ ಬಿಡೋಣ ಎಂದು ತಿನ್ನಲು ಕುಳಿತೆವು ಮುಂದಿನ ಭಾಗವನ್ನು ನೀವೇ ಊಹಿಸಬಹುದು !! ಹಾ ಹಾ ಹಾ .... ನಗಲೂ ಆಗದಂತೆ ಅಂಟಿಕೊಂಡು ಬಿಟ್ಟಿತ್ತು ಕಣ್ರೀ .... ಹಿ ಹಿ ಹಿ

Ittigecement said...

ಶಿವು ಸರ್...

ನೀವು.. ಮಲ್ಲಿಕಾರ್ಜುನ್ ಎಲ್ಲರೂ ನಮ್ಮ ಮನೆಗೆ ಬಂದಾಗ ನಕ್ಕು ನಕ್ಕು ಸುಸ್ತಾದ ಘಟನೆ ನೆನಪಾಯಿತು...

ನನಗಂತೂ ರಾಗಿ ಮುದ್ದೆ ತಿನ್ನೋದು ಜಗತ್ತಿನ ಒಂದು ಸೋಜಿಗ... !

ರಾಗಿಮುದ್ದೆಯನ್ನು ಒಂದು ಪೇಸ್ಟ್ ಟ್ಯೂಬಿನಲ್ಲಿ ಹಾಕುವ ವ್ಯವಸ್ಥೆ ಮಾಡಿಕೊಂಡು...
ಸೀದಾ ಗಂಟಲಿಗೆ ಹಾಕಿ ಪೇಸ್ಟ್ ಟ್ಯೂಬ್ ಒತ್ತಿದರೆ ...
ರಾಗಿ ಮುದ್ದೆ ತಿನ್ನುವ ಕೆಲಸ ಬಹಳ ಸುಲಭವಲ್ಲವೆ?....

ಹ್ಹಾ...ಹ್ಹಾ... !!

ನಮ್ಮನ್ನೆಲ್ಲ ನಗಿಸಿದ್ದಕ್ಕೆ ಜೈ .. ಜೈ.. ಜೈ ಹೋ.. !

ನಿಮ್ಮ ಮನೆಗೆ ಬಂದಾಗ ರಾಗಿ ಮುದ್ದೆ ಮಾಡುವದಾದರೆ ನಾವಂತೂ ಬರೋದಿಲ್ಲ... !!

ಹ್ಹಾ...ಹ್ಹಾ...ಹ್ಹಾ... ! ಆದರೆ ನೀವು ಮಾಡುವ ಸಾರು ಮಾತ್ರ ಸೂಪರ್... !!

KalavathiMadhusudan said...

ಶಿವು ಸರ್, ನೀವೂ ಎಂತಹ ಸಾಮಾನ್ಯವಾದ ವಿಷಯವನ್ನು ಇಷ್ಟು ಸ್ವಾರಸ್ಯಕರವಾಗಿ ಬರೆಯುತ್ತಿರಲ್ಲ,ಅದುಹೇಗೆ ?ಅಂತೂ ನಿಮ್ಮ ಊಟದ ಫೋಟೋ ನೋಡೇ ಬಾಯಲ್ಲಿ ನೀರೂರಿಸಿತು. ಅಭಿನಂದನೆಗಳು.

ತೇಜಸ್ವಿನಿ ಹೆಗಡೆ said...

:) ನಾನು ಈವರೆಗೂ ರಾಗಿ ಮುದ್ದೆಯೊಂದನ್ನು ಮಾತ್ರ ತಿಂದಿಲ್ಲ... ಅಲ್ಲಲ್ಲಾ... ನುಂಗಿಲ್ಲ! :)

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ,
ನಮ್ಮ ಪಕ್ಕದಮನೆಯವರು ಬೆಂಗಳೂರಿನವರು. ಅವರ ಹತ್ರ ರಾಗಿಮುದ್ದೆ ಮಾಡೋದು ಕಲಿತುಕೊಂಡು ಈಗ ನಮ್ಮನೆಯಲ್ಲೂ ಆಗಾಗ ರಾಗಿಮುದ್ದೆ ಮಾಡುತ್ತಿರುತ್ತೇನೆ. ಸೊಪ್ಪಿನ ಸಾರು ರಾಗಿ ಮುದ್ದೆ ನಮ್ಮನೆಲ್ಲಿ ಎಲ್ರಿಗೂ ಇಷ್ಟವಾಗಿದೆ. ನನ್ನ ಮಗನಿಗೆ ಎಲ್ಲರಿಗಿಂತ ಇಷ್ಟ. ಅನ್ನಕ್ಕಿಂತ ರಾಗಿಮುದ್ದೆನ್ನ ಪ್ರೀತಿಯಿಂದ ತಿಂತಾನೆ.

ಪ್ರೀತಿಯಿಂದ,
-ಶಾಂತಲಾ ಭಂಡಿ

ವಿದ್ಯಾ ರಮೇಶ್ said...

ಶಿವು ಸರ್, ಒಳ್ಳೆಯ ಲೇಖನ. ಅಂದ ಹಾಗೆ ನನಗೂ ರಾಗಿ ಮುದ್ದೆ ತುಂಬಾ ಇಷ್ಟ. ಹಳೆ ಆಫೀಸ್ ಅಲ್ಲಿ ಇದ್ದಾಗ ಮೆಜೆಸ್ಟಿಕ್ ಹತ್ತಿರ ಇರೋ ಮಾದಪ್ಪ ಮೆಸ್ಸ್ ಗೆ ನಾನು ದಿನಾ ಹೋಗ್ತಾ ಇದ್ದೆ.

Prashanth Arasikere said...

hi shivu....hum mudde purana odi nagu banthu..adre namge adra abayaasa ide hagagi tondre enu kottilla...

Ashok.V.Shetty, Kodlady said...

Shivu sir,

ee anubhava nangu aagide, adke naanu innu raagi mudde tindilla...Chennagide baraha...

PARAANJAPE K.N. said...

ಮುದ್ದೆ ಪುರಾಣ ಚೆನ್ನಾಗಿದೆ, ಎ೦ದೂ ನಗದ ದೇವೇಗೌಡರು ಕೂಡ ನಿಮ್ಮ ಬ್ಲಾಗ್ ಓದಿ ನಕ್ಕ ಸುದ್ದಿ ಪದ್ಮನಾಭನಗರದಿ೦ದ ಬ೦ದಿದೆ. ಅ೦ದ ಹಾಗೆ ಬಾಲೂ ಸರ್ ಹೇಳಿದ ನುಡಿಗಟ್ಟನ್ನು ಸ್ವಲ್ಪ ಬದಲಿಸುತ್ತೇನೆ.
ಹಿಟ್ಟ೦ ತಿ೦ದ೦ ದಿಟ್ಟ೦ - ಹಿಟ್ಟ೦ ಬಿಟ್ಟ೦ ಕೆಟ್ಟ೦

ದಿನಕರ ಮೊಗೇರ said...

hha hha... chennaagi barediddiraa sir...

naanU tinnalu prayatna paTTiddEne....

svalpa maTTige yashasvi aagiddEne...

ದೀಪಸ್ಮಿತಾ said...

ನನಗೂ ಮುದ್ದೆ ನುಂಗಲು ಬರುವುದಿಲ್ಲ. ಏನಾದರೂ ಬಾಯಿಗೆ ಹಾಕಿದ ಕೂಡಲೆ ಹಲ್ಲು ತನ್ನ ಕೆಲಸ ಆರಂಭಿಸುತ್ತದೆ, ಹಾಗೆ ಇಲ್ಲೂ ಮಾಡಲಿ ಹೋಗಿ ಮುದ್ದೆ ಸಿಕ್ಕಿಬಿಡುತ್ತದೆ. ಸ್ವಲ್ಪ ಸಪ್ಪೆ, ಮೃದು ಆಹಾರವೇ ಜಾಸ್ತಿ ತಿನ್ನುವ ನಮ್ಮಂತಹ ಮಲೆನಾಡು, ಕರಾವಳಿ ಜನರಿಗೆ ಸ್ವಲ್ಪ ಕಷ್ಟವೇ.

nuthan g bhatt said...

chennagide mudde mahaatme... Nakku nakkuu sakaytu...
Adre nanguu mudde nungoodu bhalaa kastappa... Ondsari nan friend maneli mudde nungoo saahasakke kai haki,, alla baayi haaki, mudde gantalalli sikkakikpndu jeevaane bayige bandange agittu.... avaginda nanu mudde andre saaku avaramma bechchi beeltare..!

ಗಿರೀಶ್.ಎಸ್ said...

Nangu munche goli sizena tutu bekittu...ivaga jamoon sizedu beku....
Ragi mudde purana chennagide shivanna...
ragi muddeya gammattu thumba janakke gottilla ansutte....

ಸುಧೇಶ್ ಶೆಟ್ಟಿ said...

vaaw... raagi mudde nodi baayalli neeroorithu... :)

nange thumba ishta adu... nungiyaagali, agidu aagali, hegaadaru thinnuttene :)

ಸಾಗರದಾಚೆಯ ಇಂಚರ said...

Shivu sir
nange naanu mudde undiddu nenapu ayitu

tumbaa sundara baraha
late agiddakke kshamisi

Suresh said...

Nimma upame bhaari chennagide. Adarallu annanala mattu wonderlada pipe ...wow

shivu.k said...

ಶ್ರೀಧರ್ ಸರ್,

ನೀವು ಸಿರಸಿಯವರಾಗಿ ರಾಗಿಮುದ್ದೆಯನ್ನು ನಮ್ಮಂತೆ ಊಟ ಮಾಡುವ ವಿಚಾರ ತಿಳಿದು ಖುಷಿಯಾಯ್ತು.
ನಿಮ್ಮ ಬಾಲ್ಯದ ಅನುಭವ ಮತ್ತು ಮೈಸೂರು ಮುದ್ದೆ ಅನುಭವವನ್ನು ಹಂಚಿಕೊಂಡಿದ್ದೀರಿ..
ರಾಗಿಮುದ್ದೆಯ ಬರಹವನ್ನು ಓದುತ್ತಾ enjoy ಮಾಡಿದ್ದಕ್ಕೆ ಥ್ಯಾಂಕ್ಸ್.

shivu.k said...

ಅನಿಲ್,

ನೀವು ಗುಲ್ಬರ್ಗದವರಾಗಿ ಸುಲಭವಾಗಿ ರಾಗಿ ಮುದ್ದೆ ನುಂಗುವುದು ಒಂದು ಸಾಧನೆ. ನಿಮ್ಮ ತುಮಕೂರಿನ ಅನುಭವ ಚೆನ್ನಾಗಿದೆ. ಮತ್ತೆ ನೀವು ಮುದ್ದೆ ನುಂಗುವುದನ್ನು ಕಲಿತ ವಿಚಾರವನ್ನು ಹಂಚಿಕೊಂಡಿದ್ದೀರಿ..
ಬಾಲ್ಯದಲ್ಲಿ ಅದನ್ನು ಕಲಿತುಬಿಟ್ಟರೆ ಮತ್ತೆ ಮರೆಯಲು ಸಾಧ್ಯವೆ ಇಲ್ಲ ಅಲ್ವಾ..ಒಟ್ಟಾರೆ ಈ ರಾಗಿ ಮುದ್ದೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವ ಕೊಟ್ಟಿದೆ ಅಂದರೆ ತಪ್ಪಾಗಲಾರದು.

ನಿಮ್ಮ ಬಾಲ್ಯದ ನೆನಪು, ಅನುಭವ ಹಂಚಿಕೊಳ್ಳುವುದಲ್ಲದೇ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

Dr. Nagesh KM sir,

nimage photography vicharavannu tilisalu neevu nanage mail madi.
nanna mail id

shivuu.k@gmail.com

shivu.k said...

ಗುಬ್ಬಚ್ಚಿ ಸತೀಶ್ ಸರ್,

ಮುದ್ದೆ ನುಂಗೋಕು ಕಷ್ಟ ಪಡುತ್ತಾರೆ ಎನ್ನುವ ವಿಚಾರ ಈಗ ಗೊತ್ತಾಯಿತಲ್ಲ...ಎಂದಾದರೂ ಒಂದು ದಿನ ಒಬ್ಬ ವಿದೇಶಿಯವ ನಮ್ಮ ಮನೆಗೆ ಬಂದಾಗ ಅವನಿಗೆ ನಮ್ಮ ರಾಗಿ ಮುದ್ದೆ ತಿನಿಸಿ ಅದರ ಅನುಭವ ಬರೆಯುತ್ತೇನೆ..
ಧನ್ಯವಾದಗಳು.

shivu.k said...

ಅಜಾದ್,

ಉದಯ್ ಮಾತ್ರವಲ್ಲ..ನಮ್ಮ ಮನೆಯಲ್ಲಿ ರಾಗಿಮುದ್ದೆ ಸರ್ಕಸ್ ತುಂಬಾ ಜನಕ್ಕೆ ಮಾಡಿಸಿದ್ದೇನೆ. ನೀವು ನಮ್ಮ ಮನೆಗೆ ಬಂದಾಗಲೆಲ್ಲಾ ದೋಸೆ ಕಾರ್ಯಕ್ರಮವಿತ್ತು. ಮುಂದಿನ ಭಾರಿ ನೀವು ಬಂದಾಗ ನಿಮಗಾಗಿ ಸೊಗಸಾದ ರಾಗಿಮುದ್ದೆ ಅದಕ್ಕೆ ಸೊಪ್ಪಿನ ಬಸ್ಸಾರು, ತುಪ್ಪ..ಇತ್ಯಾದಿ ಬಿಸಿಬಿಸಿ ಖಂಡಿತ. ಅದಕ್ಕೆ ನನ್ನದೊಂದು ಖಂಡಿಷನ್. ನೀವು ಕುದುರೆ ಮೇಲೆ ಮಾತ್ರ ಬರಬಾರದು..ನಿದಾನವಾಗಿ ಬಂದು ಸೊಗಸಾದ ಊಟಮಾಡಿ ಒಂದು ಸಣ್ಣ ನಿದ್ರೆ ತೆಗೆದು ಒಂದಷ್ಟು ಹೊತ್ತು ಹರಟೆ ಹೊಡೆದು ಹೋಗುವುದಾದರೆ ಅವತ್ತಿನ ರಾಗಿ ಮುದ್ದೆ ನಿಜಕ್ಕೂ ಸ್ವರ್ಗ ಸೇರುತ್ತದೆ ಏನಂತೀರಿ...

ಲೇಖನ ಮೆಚ್ಚಿ ನಕ್ಕಿದ್ದಕ್ಕೆ ಥ್ಯಾಂಕ್ಸ್.

shivu.k said...

ಉಮೇಶ್ ದೇಸಾಯ್ ಸರ್,

ನನ್ನ ಶೈಲಿಯ ಪ್ರಭಂದವನ್ನು ನೀವು ಮೆಚ್ಚುತ್ತೀರಿ..ಅದು ನನಗೆ ಮತ್ತಷ್ಟು ಬರೆಯಲು ಟಾನಿಕ್ ಕೊಟ್ಟಂತೆ.
ಮತ್ತೆ ನಿಮ್ಮ ಮನೆಯಲ್ಲೂ ರಾಗಿ ಮುದ್ದೆ ಮಾಡೋದು ತಿಳಿದು ಖುಷಿಯಾಯ್ತು..ನಮ್ಮ ರಾಗಿಮುದ್ದೆಯನ್ನು ಎಲ್ಲರೂ ನುಂಗುವಂತಾಗಲಿ...
ಧನ್ಯವಾದಗಳು.

shivu.k said...

ಸುನಾಥ್ ಸರ್,
ರಾಗಿಮುದ್ದೆಯನ್ನು ನುಂಗುವ ಪ್ರಯತ್ನವನ್ನು ಬಿಡಬೇಡಿ. ಯಶಸ್ಸು ಖಂಡಿತ ಸಿಗುತ್ತದೆ...ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಚಿತ್ರಾ,

ರಾಗಿಮುದ್ದೆ ಲೇಖನದಿಂದಾಗಿ ನಿಮ್ಮ ಬೆಂಗಳೂರು ಗೆಳೆತಿಯರ ಜೊತೆ ರಾಗಿ ಊಟದ ಅನುಭವ ನೆನಪಾಯಿತಾ? ಅದನ್ನು ಒಮ್ಮೆ ಬ್ಲಾಗಿನಲ್ಲಿ ಬರೆದುಬಿಡಿ..
ರಾಗಿಮುದ್ದೆ ಊಟ ಒಂಥರ ನಾವು ಟೂವೀಲರಿನಲ್ಲಿ ರಸ್ತೆಯಲ್ಲಿ ನಿಂತ ಟ್ರಾಫಿಕ್ ಫೋಲೀಸ್ ದಾಟಿ ಹೋಗುವ ಹಾಗೆ.
ಸುಮ್ಮನೆ ಮುದ್ದೆ ನುಂಗುತ್ತಿದ್ದರೆ ಅಂದ್ರೆ ಸರಾಗವಾಗಿ ದೈರ್ಯದಿಂದ ಗಾಡಿ ನಡೆಸುತ್ತಿದ್ದರೆ ಆತ ನಮ್ಮನ್ನು ಸಂಶಯದಿಂದ ನೋಡುವುದಿಲ್ಲ. ಆದ್ರೆ ನೀವು ರಾಗಿಮುದ್ದೆಯನ್ನು ನುಂಗುವ ಬದಲು ಅಗಿಯಲು ಪ್ರಾರಂಭಸಿದರೆ ಅಲ್ಲಿನಲ್ಲಿ ಸಿಕ್ಕಿಕೊಂಡು ಫೆವಿಕಾಲ್ ಇದೊಂತರ ಅದೇ ಪೋಲಿಸ್ ನಿಮ್ಮನ್ನು ನಿಲ್ಲಿಸಿ ಎಲ್ಲಾ ತಪಾಷಣೆ..ಇದೆಲ್ಲಾ ಬೇಕಾ...ಅದಕ್ಕೆ ಸುಮ್ಮನೇ ನುಂಗಿಬಿಡುವುದು..
ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಪ್ರಕಾಶ್ ಸರ್,

ರಾಗಿಮುದ್ದೆಯ ವಿಚಾರವಾಗಿ ನನಗಾದ ಅನುಭವವನ್ನು ಮಾತ್ರ ಬರೆದಿದ್ದೇನೆ. ನಿಮಗಾದ ಅನುಭವವನ್ನು ನೀವು ಬರೆಯಿರಿ..ರಾಗಿಮುದ್ದೆ ಒಂಥರ ಯುನಿವರ್ಸಲ್ ಸಬ್ಜೆಕ್ಟ್ ಅನ್ನಿಸುತ್ತೆ ಅಲ್ವಾ...ನೋಡಲು ಗುಂಡಗಿದ್ದರೂ ಅದನ್ನು ತಿಂದವರ ನುಂಗಿದವರ, ನೋಡುವವರ ಮತ್ತು ಮಾಡುವವರ ದೃಷ್ಟಿಕೋನದಲ್ಲಿ ಅದು ನಿಜಕ್ಕೂ ವೈವಿಧ್ಯವೇ ಸರಿ...

ರಾಗಿಮುದ್ದೆಗಾಗಿ ನೀವು ಮಾಡುವ ಹೊಸ ಐಡಿಯಗಳನ್ನು ಹಂಚಿಕೊಳ್ಳಿ. ಮತ್ತೆ ನೀವು ಬಂದಾಗ ರಾಗಿ ಮುದ್ದೆ ಇರುವುದಿಲ್ಲ. ನಿಮಗಿಷ್ಟವಾದ ಸಾರು ಖಂಡಿತ ಇರುತ್ತೆ...ಲೇಖನ ಓದಿ ನಕ್ಕಿದ್ದಕ್ಕೆ ಥ್ಯಾಂಕ್ಸ್..

shivu.k said...

ಕಲರವ,

ರಾಗಿಮುದ್ದೆ ವಿಚಾರ ಸಾಮಾನ್ಯವಾದರೂ ಅದರ ಅನುಭವ ಸಾಮಾನ್ಯವಲ್ಲವಲ್ಲ..ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ತೇಜಸ್ವಿನಿ ಮೇಡಮ್,

ನೀವು ಒಮ್ಮೆ ರಾಗಿಮುದ್ದೆ ನುಂಗಿಬಿಡಿ...

shivu.k said...

ಶಾಂತಲ ಮೇಡಮ್,

ನಿಮ್ಮನೆಯಲ್ಲೂ ರಾಗಿಮುದ್ದೆ ಮಾಡುವ ವಿಚಾರ ನಿಜಕ್ಕೂ ಖುಷಿ ವಿಚಾರ..ನಿಮ್ಮ ಮಗನೂ ಅದನ್ನು ಇಷ್ಟಪಟ್ಟು ತಿನ್ನುವುದರಿಂದ ನೀವು ಅಭ್ಯಾಸ ಮಾಡಿಕೊಂಡುಬಿಡಿ..ಸೊಪ್ಪಿನ ಸಾರು ಎಲ್ಲರಿಗೂ ಫೇವರೇಟ್ ಅಲ್ವಾ...
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ವಿದ್ಯಾರಮೇಶ್ ಮೇಡಮ್,

ನೀವು ನನಗೆ ಮತ್ತೆ ಮುದ್ದೆ ಮಾದಪ್ಪ ಮೆಸ್ ನೆನಪಿಸಿಬಿಟ್ರಲ್ಲ...ಆಗ ನನಗಂತೂ ಅಲ್ಲಿನ ಮುದ್ದೆ ಊಟವೆಂದರೆ ಸ್ವರ್ಗಸುಖವೆನ್ನುವಷ್ಟರ ಮಟ್ಟಿಗೆ ಪ್ರೀತಿ..ಈಗಲೂ ನಾನು ಹೇಮಾಶ್ರಿಯೊಂದಿಗೆ ಗಾಂಧಿನಗರಕ್ಕೆ ಹೋದಾಗ ಕುತೂಹಲದಿಂದ ಅಲ್ಲಿಗೆ ಊಟಕ್ಕೆ ಹೋಗೋಣವೆನ್ನುತ್ತಾಳೆ..ಅಯ್ಯೋ ಬೇಡ ಅಲ್ಲಿನ ಪುಲ್ ಮೀಲ್ಸ್ ಊಟಮಾಡಲು ನಿನ್ನಿಂದ ಸಾಧ್ಯವಿಲ್ಲವೆಂದು ತಪ್ಪಿಸುತ್ತೇನೆ...ಒಮ್ಮೆ ಅಲ್ಲಿ ಪುಲ್ ಮೀಲ್ಸ್ ರಾಗಿಮುದ್ದೆ ಊಟವನ್ನು ಮಾದಪ್ಪ ಮೆಸ್‍ನಲ್ಲಿ ಮಾಡಿಬಿಟ್ಟರೆ ಮುಗೀತು..ನಂತರ ಸಕ್ಕತ್ ನಿದ್ರೆ...
ರಾಗಿಮುದ್ದೆ ಲೇಖನದ ಹಾಸ್ಯವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಪ್ರಶಾಂತ್,

ರಾಗಿಮುದ್ದೆ ಅಬ್ಯಾಸ ನಿಮಗಿದೆಯಲ್ಲಾ..ನಿಮ್ಮ ಮಗಳು ಅಧಿತಿ ನಮ್ಮ ಮನೆಗೆ ಬಂದಾಗ ಒಮ್ಮೆ ಅವಳಿಗೆ ರಾಗಿ ಮುದ್ದೆ ಊಟ ಮಾಡಿಸೋಣ..ಅಲ್ವಾ...ನೀವು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಆಶೋಕ್ ಸರ್,
ನಿಮ್ಮ ರಾಗಿಮುದ್ದೆ ಊಟದ ಅನುಭವವನ್ನು ಹಂಚಿಕೊಳ್ಳಿ ಸರ್...ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪರಂಜಪೆ ಸರ್,

ಈ ರಾಗಿಮುದ್ದೆ ಪುರಾಣವನ್ನು ಓದಿ ಗೌಡರು ನಕ್ಕರೆಂದರೆ ನನ್ನ ಪ್ರಯತ್ನ ಸಾರ್ಥಕ.
ಮತ್ತೆ ನಿಮ್ಮ ನುಡಿಗಟ್ಟು ಚೆನ್ನಾಗಿದೆ...
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ದಿನಕರ್ ಸರ್,
ನಿಮ್ಮ ರಾಗಿಮುದ್ದೆ ನುಂಗುವ ಪ್ರಯತ್ನ ಅಲ್ಪ ಯಶಸ್ವಿಯಾಗಿದೆಯಲ್ಲಾ..ಪೂರ್ತಿ ಯಶಸ್ವಿಯಾಗುವವರೆಗೆ ನುಂಗುತ್ತಲೇ ಇರಿ...ನಕ್ಕಿದ್ದಕ್ಕೆ ಥ್ಯಾಂಕ್ಸ್.

shivu.k said...

ಕುಲದೀಪ್ ಸರ್,

ಈ ವಿಚಾರದಲ್ಲಿ ನಿಮ್ಮದೂ ಇದೇ ಕಥೇನಾ? ಇರಲಿ..ಮುಂದೆ ನಿಮ್ಮ ಪ್ರಯತ್ನಕ್ಕೆ all the best!

shivu.k said...

Nuthan bhat sir,

ನನ್ನ ಬ್ಲಾಗಿಗೆ ಸ್ವಾಗತ...ನೀವು ರಾಗಿಮುದ್ದೆ ಪುರಾಣವನ್ನು ಓದಿ ಸಕ್ಕತ್ ನಕ್ಕಿದ್ದೀರಿ..

ನಿಮ್ಮ ಮುದ್ದೆ ನುಂಗುವ ಪ್ರಸಂಗ ಓದಿ ನನಗೂ ಸ್ವಲ್ಪ ಭಯವಾದರೂ ಏನು ಆಗಲಿಲ್ಲವಲ್ಲ..ನೀವು ಮುಂದೆ ಜೀವನದಲ್ಲಿ ಎಂದೂ ಕೂಡ ಮುದ್ದೆ ನುಂಗುವುದಿಲ್ಲವೆಂದು ತೀರ್ಮಾನಿಸಿರಬೇಕು..ಅಲ್ವಾ...ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಗಿರೀಶ್ ಎಸ್,

ನೀವು ಮುದ್ದೆ ನುಂಗುವುದರಲ್ಲಿ improve ಆಗಿದ್ದೀರಿ ಅನ್ನಿಸುತ್ತೆ. ಹೌದು ರಾಗಿಮುದ್ದೆ ಗಮ್ಮತ್ತು ಎಷ್ಟೋ ಜನಕ್ಕೆ ಗೊತ್ತಿಲ್ಲ. ನೀವು ರಾಗಿಮುದ್ದೆ ಪುರಾಣವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಸುಧೇಶ್,

ನೀವು ರಾಗಿಮುದ್ದೆ ಇಷ್ಟಪಡುತ್ತೇನೆ ಅಂದ್ರಿ...ಆದ್ರೆ ನೀವು ಖಚಿತವಾಗಿ ನುಂಗುತ್ತೀರೋ..ಅಥವ ಅಗಿಯುತ್ತೀರೋ..ತಿಳಿಯದು...
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಶಿವಪ್ರಕಾಶ್,

ಥ್ಯಾಂಕ್ಸ್.

shivu.k said...

ಗುರುಮೂರ್ತಿ ಹೆಗಡೆ ಸರ್,

ಈ ಲೇಖನದಿಂದಾಗಿ ನಿಮಗೆ ಮುದ್ದೆ ನುಂಗಿದ್ದ ನೆನಪಾಗಿದೆಯಾ..ನಮ್ಮೊಂದಿಗೆ ಹಂಚಿಕೊಳ್ಳಿ. ಮತ್ತೆ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಸುರೇಶ್ ಸರ್,

ರಾಗಿಮುದ್ದೆಯ ಲೇಖನದ ಉಪಮೇಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..