Thursday, December 2, 2010

ಬೇಸರಗೊಂಡು ಜಿಗುಪ್ಸೆಯಿಂದ ಕಪ್ಪುಬಣ್ಣಕ್ಕೆ ತಿರುಗಿ.....

         

             ಆಗಷ್ಟೇ ಕಾಫಿ ಪುರಾಣದ ಲೇಖನವನ್ನು ಬರೆಯಲು ಕುಳಿತಿದ್ದೆ.  ಐದಾರು ಸಾಲು ಬರೆಯುವಷ್ಟರಲ್ಲಿ ಅದ್ಯಾಕೋ ತಟ್ಟನೆ ನಿಂತು ಹೋಯಿತು. ಏನೇ ಪ್ರಯತ್ನಿಸಿದರೂ ಸರಾಗವಾಗಿ ಸಾಗುತ್ತಿಲ್ಲ. ಅಂತ ಸಮಯದಲ್ಲಿ ಕಂಪ್ಯೂಟರ್ ಬಿಟ್ಟು ಹೊರಗೆ ಬಂದು ಐದು ನಿಮಷ ರಸ್ತೆಯನ್ನು ನೋಡುತ್ತಾ ನಿಂತುಬಿಡುತ್ತೇನೆ. ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿತು ಅನ್ನಿಸಿದಾಗ ಮತ್ತೆ ಒಳಗೆ ಬಂದು ಕುಳಿತು ಬರೆಯಲು ಪ್ರಾರಂಭಿಸಿದರೆ ಎಂದಿನಂತೆ ಸಹಜವಾಗಿ ಬರವಣಿಗೆಯ ಅಕ್ಷರಗಳು ನೀರಿನಂತೆ ಹರಿಯಲಾರಂಭಿಸುತ್ತವೆ.  ಇದು ನಾನು ಕಂಡುಕೊಂಡ ಒಂದು ಸಣ್ಣ ಬರಹದ ಯುರೇಕ.  ಆದ್ರೆ ಅವತ್ತು ಅದ್ಯಾಕೋ ಈ ವಿಧಾನದಿಂದಲೂ ಬರಹ ವೇಗ ಪಡೆಯಲಿಲ್ಲ. ಸರಿ ಟೀ ಅಥವ ಕಾಫಿ ಕುಡಿದರೆ ಎಲ್ಲಾ ಸರಿಹೋಗುತ್ತದೆ ಎಂದುಕೊಂಡು ಅಡುಗೆ ಮನೆ ಕಡೆ ನೋಡಿದ್ರೆ ಹೇಮಾಶ್ರೀ ಇಲ್ಲ. ಅವಳು ಅಕ್ಕನ ಮನೆಗೆ ತುಮಕೂರಿಗೆ ಹೋಗಿದ್ದಾಳಲ್ಲ...ಅದು ಮರೆತೇಹೋಗಿತ್ತು. ಸರಿ ನಾನೇ ಹೋಗಿ ಮಾಡಿಕೊಳ್ಳೋಣವೆಂದುಕೊಂಡು ಅಡುಗೆಮನೆಗೆ ಹೋದೆ.   ನಮ್ಮ ಮನೆಯ ಕಾಫಿ ನನಗಿಷ್ಟವಾದರೂ ನನಗೆ ಹೇಮಾಶ್ರೀಯಷ್ಟು ಚೆನ್ನಾಗಿ ಮಾಡಲು ಬರುವುದಿಲ್ಲ.  ಬಿಸಿನೀರು ಕಾಯಿಸಿ ಅದಕ್ಕೆ ಸರಿಯಾದ ಅಳತೆಯ ಕಾಫಿಪುಡಿ ಹಾಕಿ ಫಿಲ್ಟರ್ ತೆಗೆದು ಸರಿಯಾದ ಪ್ರಮಾಣದಲ್ಲಿ ಸಕ್ಕರೆ ಮಿಶ್ರಿತ ಹಾಲನ್ನು ಹಾಕಿ ಹಬೆಯಾಡುವ ಕಾಫಿ ಮಾಡುವುದೇನಿದ್ದರೂ ಅವಳಿಗೆ ಸರಿ. ನನಗೆ ಅಷ್ಟೆಲ್ಲಾ ಮಾಡಿಕೊಳ್ಳುವ ತಾಳ್ಮೆಯೂ ಇರಲಿಲ್ಲವಾದ್ದರಿಂದ ಟೀ ಮಾಡಿಕೊಂಡು ಕುಡಿಯೋದು ಒಳ್ಳೆಯದು ಅಂದುಕೊಂಡೆ. ಮತ್ತೊಂದು ವಿಚಾರವೆಂದರೆ ನಾನು ತುಂಬಾ ಚೆನ್ನಾಗಿ ಟೀ ಮಾಡುತ್ತೇನೆ. ನನಗೇ ಬೇಕಾದ ಹಾಗೆ ಎರಡು ಅಥವ ಮೂರು ವಿಧಾನದ ಟೀ ಪುಡಿಗಳನ್ನು ತಂದಿಟ್ಟುಕೊಂಡು ಹೇಮಾಶ್ರೀ ಇಲ್ಲದಾಗ ನನಗೆ ಬೇಕಾದ ಹಾಗೆ ಸೊಗಸಾಗಿ ಅದ್ಬುತ ರುಚಿಯುಳ್ಳ ಟೀ ಮಾಡಿಕೊಂಡು ಕುಡಿಯುತ್ತಾ ಅನಂದಿಸುತ್ತೇನೆ. ಈ ವಿಚಾರದಲ್ಲಿ ನನ್ನನ್ನು ಹೊಗಳಿಕೊಳ್ಳುತ್ತಿಲ್ಲ. ಏಕೆಂದರೆ ನನ್ನ ಮನೆಗೆ ಅನೇಕ ಫೋಟೊಗ್ರಫಿ ಗೆಳೆಯರು ಮತ್ತು ಬ್ಲಾಗ್ ಗೆಳೆಯರು ಬಂದಾಗ ನಾನು ಮಾಡಿದ ಟೀ ರುಚಿಯನ್ನು ನೋಡಿರುವುದರಿಂದ ನೀವು ಅವರನ್ನು ಕೇಳಿ ನನಗೆ ಸರ್ಟಿಫಿಕೆಟ್ ಕೊಡಬಹುದು.


              ಗ್ಯಾಸ್ ಸ್ಟವ್ ಹತ್ತಿಸಿ ಹಾಲಿನ ಪಾತ್ರೆಯನ್ನು ಇಟ್ಟು ನನಗಿಷ್ಟವಾದ ಆಯುರ್ವೇದದ ಅನೇಕ ದ್ರವ್ಯಗಳನ್ನು ಸೇರಿಸಿ ತಯಾರಿಸಿದ ರೆಡ್ ಲೇಬಲ್ಲಿನ ನೇಚರ್ ಕೇರ್ ಟೀ ಪುಡಿಯನ್ನು ಸ್ವಲ್ಪ ಗಟ್ಟಿಹಾಲು, ನನಗೆ ಬೇಕಷ್ಟು ಸಕ್ಕರೆಯನ್ನು ಹಾಕಿ ಕುದಿಯಲು ಬಿಟ್ಟು ಕಂಪ್ಯೂಟರಿನ ಮುಂದೆ ಬಂದು ಕುಳಿತೆ. ಅದ್ಯಾವ ಮಾಯದಲ್ಲಿ ಕಾಫಿಯ ಅರೋಮ ತಲೆಗೇರಿತೋ ಗೊತ್ತಿಲ್ಲ. ಲೇಖನ ಹರಿಯುವ ನದಿಯಂತೆ ಅಡೆತಡೆಯಿಲ್ಲದೆ ಸಾಗಿ ಸರಿಸುಮಾರು ಒಂದು ತಾಸು ಅಲುಗಾಡದೇ ಬರೆದುಮುಗಿಸಿದ್ದೆ.


          ಒಂದು ಲೇಖನವನ್ನು ಬರೆದು ಮುಗಿಸಿ ಒಮ್ಮೆ ಎರಡು ಕೈಗಳನ್ನೆತ್ತಿ ಮೈಯನ್ನೆಲ್ಲಾ ಅತ್ತ ಇತ್ತ ಅಲುಗಾಡಿಸಿ ಮೈಮುರಿದು ರೆಲ್ಯಾಕ್ಸ್ ಆಗುವುದಿದೆಯಲ್ಲಾ ಅದು ಮತ್ತು ಮುಗಿಸಿದಾಗಿನ ಅನುಭವದಲ್ಲಿ ತೇಲಿಹೋಗುವುದಿದೆಯಲ್ಲಾ ಅದನ್ನು ಅನುಭವಿಸಿಯೇ ತೀರಬೇಕು. ಇಲ್ಲೂ ಹಾಗೆ ಮಾಡಿ ಒಂದು ಕ್ಷಣ ಹಾಗೆ ಕುಳಿತಲ್ಲಿಯೇ ಕಣ್ಣು ಮುಚ್ಚಿದೆನಲ್ಲಾ! ಎಷ್ಟು ಹೊತ್ತು ಹಾಗೆ ಇದ್ದೆನೋ ಗೊತ್ತಿಲ್ಲ ಎಚ್ಚರವಾದಾಗ ಯಾವುದೋ ಒಂದು ವಾಸನೆ ಮೂಗಿಗೆ ನಿದಾನವಾಗಿ ತಾಕುತ್ತಿದೆ! ಕಾಫಿಯ ಲೇಖನದಿಂದಾಗಿ ಕಾಫಿಯ ನೊರೆನೊರೆ ಮತ್ತು ಅದರ ಸ್ವಾದವನ್ನು ಮಾನಸಿಕವಾಗಿ ಅನುಭವಿಸುತ್ತಿದ್ದವನಿಗೆ ಇದ್ಯಾವುದೋ ಹೊಸ ವಾಸನೆ ಕಾಫಿಯ ಸುವಾಸನೆಯ ನಡುವೆ ಜಾಗಮಾಡಿಕೊಂಡು ಬಂದು ಮೂಗಿಗೆ ತೊಂದರೆ ಕೊಡುತ್ತಿದ್ದೆಯಲ್ಲಾ!  ಒಂಥರ ಸುಟ್ಟ ಕಮಟು ವಾಸನೆಯಂತಿದೆ! ಏನಿರಬಹುದು ಯೋಚಿಸಿದೆ. ಗೊತ್ತಾಗಲಿಲ್ಲ. ಸುಟ್ಟವಾಸನೆಯೆಂದರೆ ನಮ್ಮ ಓಣಿಯಲ್ಲಿ ಯಾರೋ ಸ್ಟವ್ ಮೇಲೆ ಏನನ್ನೋ ಬೇಯಿಸಲು ಇಟ್ಟು ಮರೆತಿರುವುದರಿಂದ ಈ ವಾಸನೆ ಬರುತ್ತಿರಬಹುದು ಇರಲಿಬಿಡಿ ನಮಗ್ಯಾಕೆ ಪಕ್ಕದ ಮನೆಯ ಚಿಂತೆ ಎಂದುಕೊಂಡು ಈಗ ಒಂದು ಸೊಗಸಾದ ಟೀ ಮಾಡಿಕೊಂಡು ಕುಡಿಯೋಣ ಎಂದು ಎದ್ದೆ. 


              ಓಹ್! ಟೀ ಮತ್ತೆ ಮಾಡುವುದೇನು ಬಂತು! ಆಗಲೇ ಟೀ ಮಾಡಲು ಸ್ಟವ್ ಮೇಲೆ ಇಟ್ಟಿದ್ದ ಪಾತ್ರೆ ನೆನಪಾಯಿತು. ಸಮಯ ನೋಡಿಕೊಂಡೆ. ಸರಿಸುಮಾರು ಒಂದುವರೆಗಂಟೆ ದಾಟಿಹೋಗಿದೆ! ತಕ್ಷಣ ಎದ್ದೆನೋ ಬಿದ್ದೆನೋ ಎನ್ನುವಂತೆ ಆಡುಗೆ ಮನೆಗೆ ನುಗ್ಗಿದೆ. ಏನು ಆಗಬಾರದಿತ್ತೋ ಅದು ಆಗಿಹೋಗಿತ್ತು. ಅರ್ಧ ಸ್ಪೂನ್ ಟೀಪುಡಿ ಮತ್ತು ಒಂದು ಸ್ಪೂನ್ ಸಕ್ಕರೆ ಬೆರೆತ ನೂರೈವತ್ತು ಎಂಎಲ್ ಹಾಲಿದ್ದ ಆ ಪುಟ್ಟ ಟೀ ಮಾಡುವ ಪಾತ್ರೆ ಒಂದುವರೆಗಂಟೆಗೂ ಹೆಚ್ಚುಕಾಲ  ಹೈ ವಾಲ್ಯೂಮ್ ಸಿಮ್‍ನಲ್ಲಿ ಬೆಂದು ಬೇಸತ್ತು ಸಿಟ್ಟಿನಿಂದ ಅನೇಕ ಬಾರಿ ಕುದ್ದು ಕೊನೆಗೆ ಅದರ ಸಿಟ್ಟನ್ನು ಗಮನಿಸುವವರು ಯಾರು ಇಲ್ಲದಿರುವಾಗ ಬೇಸರಗೊಂಡು ಜಿಗುಪ್ಸೆಯಿಂದ ಕಪ್ಪುಬಣ್ಣಕ್ಕೆ ತಿರುಗಿ ತಳಸೇರುವುದರ ಜೊತೆಗೆ ಪಾತ್ರೆಯ ಒಳಸುತ್ತೆಲ್ಲಾ ಕಾಂಕ್ರೀಟಿನಂತೆ ಮೆತ್ತಿಕೊಂಡುಬಿಟ್ಟಿದೆ!  ಟೀ ಸುಟ್ಟು ಕರಕಲಾದ ವಾಸನೆಯಂತೂ ಇಡೀ ಮನೆಯನ್ನು ಅವರಿಸಿಬಿಟ್ಟಿದೆ! ಅಯ್ಯೋ ಎಂಥ ಪ್ರಮಾದವಾಯಿತು!  ಏನು ಮಾಡುವುದು?  ಆಗ ತಕ್ಷಣ ಹೊಳೆದ ಉಪಾಯ ಪಾತ್ರೆಗೆ ನೀರು ಹಾಕುವುದು. ಹಾಕಿದೆ. ಇದರಿಂದಾಗಿ ಕಮಟು ಮತ್ತಷ್ಟು ಹೆಚ್ಚಾಗಿ ಮನೆಯಲ್ಲಾ ಮತ್ತಷ್ಟು ಆವರಿಸಿತೋ ವಿನಃ ಕಡಿಮೆಯಾಗಲಿಲ್ಲ. ಆ ಪಾತ್ರೆಯನ್ನು ಮನೆಯ ಹಾಲಿಗೆ ತಂದಿಟ್ಟು ಫ್ಯಾನ್ ಜೋರಾಗಿ ಹಾಕಿದೆ.


            ಅರ್ಧ ಗಂಟೆ ನಾನು ಚೇರಿನಲ್ಲಿ ಕುಳಿತಿದ್ದರೂ ಆ ಪಾತ್ರೆ ನನ್ನ ಮುಂದೆ ಪ್ಯಾನ್ ಕೆಳಗಿದ್ದರೂ ವಾತವರಣದಲ್ಲಿ ಎಳ್ಳಷ್ಟು ಬದಲಾವಣೆಯಾಗಲಿಲ್ಲ. ಇರಲಿ ಸವಾಲುಗಳು ನಮಗೆ ಬರದೇ ಇನ್ಯಾರಿಗೆ ಬರಲು ಸಾಧ್ಯ! ಎನ್ನುವ ಒಂದು ಅದ್ಯಾತ್ಮದ ಮಾತನ್ನು ನೆನೆಸಿಕೊಂಡು ಮನೆಯಲ್ಲಿರುವ ಎಲ್ಲಾ ತರಹದ ಪುಡಿಗಳಿಂದ ಉಜ್ಜಿ ತಿಕ್ಕಿ ತೊಳದು ಒಪ್ಪ ಮಾಡಿ ಯಾವುದಾದರೂ ಒಂದು ಸೆಂಟ್  ಹೊಡೆದುಬಿಟ್ಟರೆ ಮುಗೀತು ಇದು ಖಂಡಿತ ನನ್ನ ಶ್ರೀಮತಿಗೆ ಗೊತ್ತಾಗುವುದಿಲ್ಲವೆಂದುಕೊಂಡು ಒಂದೊಂದೇ ಪುಡಿಯನ್ನು ಹಾಕುವುದು ಚೆನ್ನಾಗಿ ಉಜ್ಜುವುದು ತಿಕ್ಕುವುದು ಪ್ರಾರಂಭಿಸಿದೆ.  ಅದು ಯಾವ ಪರಿ ಮೆತ್ತಿಕೊಂಡಿತ್ತೆಂದರೆ ಗೋಡೆಗೆ ಹಾಕಿದ ಕಾಂಕ್ರೀಟನ್ನಾದರೂ ಕೆತ್ತಿ ಹಾಕಬಹುದಿತ್ತೇನೋ! ಆದ್ರೆ ಇದು ಮಾತ್ರ ಅದಕ್ಕಿಂತ ಗಟ್ಟಿಯಾಗಿ ಪಾತ್ರೆಯ ಒಳಭಾಗಕ್ಕೆ ಅಂಟಿಕೊಂಡುಬಿಟ್ಟಿತ್ತು.  ಕೊನೆಗೆ ಮನೆಯಲ್ಲಿದ್ದ ಚಾಕು ಕತ್ತರಿ ಇನ್ನಿತರ ಆಯುಧಗಳಿಂದ ಉಜ್ಜಿ ಕೆತ್ತಿ ಬಿಡಿಸಲೆತ್ನಿಸಿದೆ.  ಉಹೂಂ! ಜಪ್ಪಯ್ಯ ಅಂದರೂ ಬಿಡಲಿಲ್ಲ. ಸ್ವಲ್ಪ ಜೋರಾಗಿ ಶಕ್ತಿಪ್ರಯೋಗ ಮಾಡಿದಾಗ ಪಾತ್ರೆಯು ಅಲ್ಲಲ್ಲಿ ತಗ್ಗಾಯಿತೋ ವಿನಃ "ನಾನಿನ್ನ ಬಿಡಲಾರೆ" ಅಂತ ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿತ್ತು. 


         ಇಷ್ಟೆಲ್ಲಾ ಅವಾಂತರದ ನಡುವೆ ಹೇಮಾಶ್ರೀ ನೆನಪಾದಳಲ್ಲ!  ಮೊದಲಿಂದಲೂ ಅವಳಿಗೆ ಅಡುಗೆ ಮನೆ ವಿಚಾರದಲ್ಲಿ ನನ್ನ ಬಗ್ಗೆ ಸಣ್ಣ ಗುಮಾನಿ ಇದ್ದೆ ಇತ್ತು.  ಅವಳು ಪ್ರತಿ ಭಾರಿ ಊರಿಗೆ ಹೋಗುವಾಗಲು ವಿಧವಿಧವಾದ ತರಾವರಿ ಎಚ್ಚರಿಕೆ ಕೊಟ್ಟೇ ಹೋಗುತ್ತಿದ್ದಳು.  ಅಷ್ಟು ಎಚ್ಚರಿಕೆ ಕೊಟ್ಟರೂ ನಾನು ಇಂಥ ಎಡವಟ್ಟು ಮಾಡಿಕೊಂಡುಬಿಟ್ಟೆನಲ್ಲಾ!  ಅವಳಿಗಂತೂ ಅಡುಗೆ ಮನೆಯ ಪಾತ್ರೆಗಳನ್ನು ಕಂಡರೇ ವಿಶೇಷ ಒಲವು ಮತ್ತು ಪ್ರೀತಿ. ತನಗಿಷ್ಟವಾದದ್ದನ್ನು ಹುಡುಕಿ ತಂದು ಇಟ್ಟುಕೊಳ್ಳುವವಳು. ಒಂದು ಚಮಚ ಕಣ್ಣಿಗೆ ಕಾಣಿಸದಿದ್ದರು ಅದು ಸಿಗುವವರೆಗೂ ಬಿಡುವುದಿಲ್ಲ ಹುಡುಕಾಟ ನಡೆಸುತ್ತಾಳೆ.  ಈಗ ಅವಳ ಕಣ್ಣಿಗೆ ಈ ತಳತಳ ಹೊಳೆಯುವ ಬೆಳ್ಳಿಯ ಹೊಳಪುಳ್ಳ  ಟೀಪಾತ್ರೆಗೆ ಬಂದಿರುವ ಸ್ಥಿತಿ ನೋಡಿದರೆ ನನ್ನ ಗತಿ ಏನು?  ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಲೇ ಬೇಕು ಅಂತ ಯೋಚಿಸಿದಾಗ ಹೊಳೆದಿದ್ದು ಇದನ್ನು ಯಾರಿಗೂ ಕಾಣದಂತೆ ಹೊರಗೆ ಹೋಗಿ ಬಿಸಾಡಿಬರುವುದು ಅಂತ.  ಸರಿ ಅದರಂತೆ ಕಾರ್ಯೋನ್ಮುಖನಾದೆ.
       
     
        ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರಿನೊಳಗೆ ಅದನ್ನು ಹಾಕಿಕೊಂಡು ಮನೆಯಿಂದ ಹೊರಬಂದಾಗ ನಮ್ಮ ಓಣಿಯವರು ಯಾರು ಕಾಣಲ್ಲಿಲ್ಲ. ಮನೆಯಲ್ಲಿ ನಾನೊಬ್ಬನೇ ಇದ್ದಿದ್ದರಿಂದ ಮನೆಗೆ ಬೀಗಹಾಕಿಕೊಂಡು ಹೊರಬಂದು ನಿದಾನವಾಗಿ ಓಣಿಯಲ್ಲಿ ನಡೆಯತೊಡಗಿದೆ. ಕವರಿನೊಳಗಿದ್ದ ವಸ್ತುವಿನಿಂದ ಬರುತ್ತಿದ್ದ ವಾಸನೆ ಎಷ್ಟು ದಟ್ಟವಾಗಿತ್ತೆಂದರೆ ಖಂಡಿತ ಇಷ್ಟು ಹೊತ್ತಿಗೆ ನಮ್ಮ ಓಣಿಯ ಹೆಂಗಸರ ನಾಸಿಕಕ್ಕೆ ತಲುಪಿ ಯಾರಾದರೂ ಬಂದು ಕೇಳುತ್ತಾರೇನೋ ಅಂದುಕೊಂಡೆ. ಸದ್ಯ ಯಾರು ಬರಲಿಲ್ಲ ಮತ್ತು ಕೇಳಲಿಲ್ಲವಾದ್ದರಿಂದ ಬಚಾವಾದೆನೆಂದುಕೊಂಡು ಮುಖ್ಯ ಗೇಟ್ ದಾಟಿ ರಸ್ತೆ ತಲುಪಿ ಸುತ್ತಲೂ ನೋಡಿದೆ ಯಾರೂ ಇರಲಿಲ್ಲ.  ಇಲ್ಲೇ ರಸ್ತೆಯಲ್ಲೇ ಹಾಕಿಬಿಡಲಾ? ಏಕೆಂದರೆ ನಮ್ಮ ರಸ್ತೆಯ ಎಲ್ಲಾ ಮನೆಯವರು ಬೆಳಿಗ್ಗೆ ಏಳುಗಂಟೆಗೆ ಸರಿಯಾಗಿ ತಮ್ಮ ಮನೆಯ ಕಸದ ಡಬ್ಬ ಅಥವ ಪ್ಲಾಸ್ಟಿಕ್ ಪೇಪರಿನಲ್ಲಿ ತುಂಬಿದ ಕಸವನ್ನು ರಸ್ತೆಯ ಬದಿಯಲ್ಲಿ ಇಟ್ಟುಬಿಡುತ್ತಾರೆ. ನಿತ್ಯ ಬೆಳಿಗ್ಗೆ ಏಳುಗಂಟೆಗೆ ಬಿಬಿಎಂಪಿಯ ಕೆಲಸದವರು ಗಂಟೆ ಬಾರಿಸುತ್ತ ಅದನ್ನೆಲ್ಲಾ ಒಂದು ಆಟೋದಲ್ಲಿ ತುಂಬಿಸಿಕೊಂಡು ಹೋಗಿಬಿಡುತ್ತಾರೆ. ನಾನು ಮಾಡುತ್ತಿರುವುದು ಸರಿಯಾಗಿದೆ ಎನಿಸಿ ನಾವು ಟೂವೀಲರುಗಳನ್ನು ಪಾರ್ಕ್ ಮಾಡುವ ಜಾಗದಲ್ಲಿಯೇ ಕಸವೆನ್ನುವ ರೀತಿಯಲ್ಲಿ ನೆಲದ ಮೇಲೆ ಇಟ್ಟು ನಮ್ಮ ಗೇಟಿನ ಬಳಿಬಂದು ಸಹಜವಾಗಿ ರಸ್ತೆಯಲ್ಲಿ ಹೋಗಿಬರುವ ಜನರನ್ನು ನೋಡತೊಡಗಿದೆ.  ಸ್ವಲ್ಪ ಹೊತ್ತಿಗೆ ಒಂಥರ ದಿಗಿಲಾಗತೊಡಗಿತ್ತು. ಏಕೆಂದರೆ ಅದು ಕಸವಲ್ಲ. ಕಸವನ್ನು ಮೀರಿದ ಒಂದು ಪಾತ್ರೆಯಿದೆ. ಅದರೊಳಗೆ ಕಮಟು ವಾಸನೆ ಬರುತ್ತಿದೆ. ನಮ್ಮ ಓಣಿಯ ಅಥವ ರಸ್ತೆಯ ಹಿರಿಯರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿ ಇದರ ಕಡೆ ಗಮನ ಕೊಡದಿದ್ದರೂ ನಮ್ಮ ಓಣಿಯ ಮಕ್ಕಳು ಸಾಮಾನ್ಯರಲ್ಲ. ಇಂಥವನ್ನು ಕಂಡುಹಿಡಿಯುವುದೇ ಅವರ ಕೆಲಸ. ಹೊಸ ವಾಸನೆ ಬಂತೆಂದರೆ ಸಾಕು ಅದೆಲ್ಲಿಂದ ಬಂತು ಹೇಗೆ ಬಂತು? ಅದರ ಕಾರಣಕರ್ತರು ಯಾರೂ? ಹೀಗೆ ಸಣ್ಣ ಹುಡುಕಾಟ ನಡೆಸುತ್ತಾ, ತಮ್ಮೊಳಗೆ ಕುತೂಹಲವನ್ನು ಬೆಳೆಸಿಕೊಳ್ಳುತ್ತಾ...ಅದರ ಬಗ್ಗೆ ಗಾಸಿಪ್ ಹಬ್ಬಿಸಿ ದೊಡ್ಡವರ ಗಮನವನ್ನು ಸೆಳೆದು ಕೊನೆಗೆ ಸುಮ್ಮನಾಗಿಬಿಡುತ್ತಾರೆ.

            ಅಲ್ಲಿಗೆ ಮುಗಿಯುತು. ದೊಡ್ಡವರು ಇದು ಎಲ್ಲಿಂದ ಬಂತು ಯಾರಮನೆಯದು? ಇತ್ಯಾದಿ ತಲಾಸು ಮಾಡಲು ಶುರುಮಾಡಿದರೆ! ಅಯ್ಯಯ್ಯೋ ಬೇಡವೇ ಬೇಡ! ...........

          ಮುಂದೇನಾಯಿತು.. ಇನ್ನುಳಿದ ತರಲೇ ತಾಪತ್ರಯಗಳು ಮುಂದಿನ ಭಾಗದಲ್ಲಿ ಅಲ್ಲಿಯವರೆಗೆ ಸುಟ್ಟ ಟೀ ಕಮಟುವಾಸನೆಯನ್ನು ಆನಂದಿಸುತ್ತಿರಿ...


ಲೇಖನ : ಶಿವು.ಕೆ


40 comments:

ಚುಕ್ಕಿಚಿತ್ತಾರ said...

ಹ್ಹ..ಹ್ಹ..ಹ್ಹಾ..

ಟೀ ಪುರಾಣ ಸೊಗಸಾಗಿದೆ. ಮು೦ದಿನ ಭಾಗ ಇನ್ನೂ ರೋಚಕವಾಗಿರಬಹುದು ಅನ್ನುವುದನ್ನು ನೆನಸಿಕೋ೦ಡು ನಗುತ್ತಿದ್ದೇನೆ. ಯಾವ ಹಾರರ್ ಸ್ಟೊರಿ ಇರಬಹುದೂ...ಅ೦ತ...

ಹ್ಹ..ಹ್ಹ..

PARAANJAPE K.N. said...

ಏನ್ರೀ ಇದು, ಟೀ ಪುರಾಣ ಜೋರಾಗಿಯೇ ಇದೆ, ಚೆನ್ನಾಗಿದೆ. ಮುಂದುವರಿಸಿ. "ಸೆಂಟು ಒಡೆದು" ಅ೦ದ ಇರೋದನ್ನು "ಸೆ೦ಟು ಹೊಡೆದು" ಅ೦ತ ಮಾಡಿ.

AntharangadaMaathugalu said...

ಶಿವು ಸಾರ್....
ನೀವು ಕಾಫಿ ಪುರಾಣ ಬರೆಯಲು ಶುರು ಮಾಡಿದ್ದಿರಿ ಅಲ್ವಾ..? ಹ್ಹ ಹ್ಹ ಟೀ ಪುರಾಣ ಒಳ್ಳೆ ಲಘು ಹರಟೆಯಂತೆ ಹಗುರವಾಗಿ ಸಕತ್ತಾಗಿದೆ. ನಾನು ಈ ರೀತಿ ಎಷ್ಟೋ ಸಾರಿ ಮಾಡಿಕೊಂಡಿದ್ದೇನೆ.. ಅದೆಲ್ಲಾ ನೆನಪಾಯ್ತು... :-)

ಶ್ಯಾಮಲ

sunaath said...

ಶಿವು,
ನಿಮ್ಮ ಪರಿಸ್ಥಿತಿಯನ್ನು ಕಲ್ಪಿಸಿಕೊಂಡರೆ, ತುಂಬಾ ಭಯವಾಗುತ್ತದೆ. ಇರಲಿ, ಜೀವನವೆಂದರೆ ಇಂತಹ ಕಠಿಣ ಸಮಸ್ಯೆಗಳನ್ನು ಎದುರಿಸುವದೇ ಆಗಿದೆ. ನಿಮಗೆ ಶುಭ ಹಾರೈಸುತ್ತೇನೆ.

shivu.k said...

ಚುಕ್ಕಿ ಚಿತ್ತಾರ,
ಟೀ ಪುರಾಣವನ್ನು ಓದಿ ಆನಂದಿಸಿದ್ದಕ್ಕೆ ಥ್ಯಾಂಕ್ಸ್. ಅದರ ನಗು ನಿಮಗಿನ್ನೂ ಕಾಡುತ್ತಿದೆಯೆಂದ ಮೇಲೆ ಮುಂದಿನ ಭಾಗವೂ ನಿಮಗೇ ಮತ್ತಷ್ಟು.........ಏನೆಂದು ಹೇಳಲಾರೆ. ಮುಂದಿನ ಭಾಗವನ್ನು ನೀವೇ ಓದುವಿರಂತೆ.
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪರಂಜಪೆ ಸರ್,

ಕಾಫಿಪುರಾಣಕ್ಕಿಂತ ಈ ಟೀಪುರಾಣ ನನ್ನನ್ನು ಅಲುಗಾಡಿಸಿದ್ದು ನಿಜ. ನೀವು ಗುರುತಿಸಿದ ತಪ್ಪನ್ನು ತಿದ್ದುತ್ತೇನೆ. ಅದಕ್ಕಾಗಿ ಥ್ಯಾಂಕ್ಸ್.

shivu.k said...

ಶ್ಯಾಮಲ ಮೇಡಮ್,

ನಾನು ಕಾಫಿ ಪುರಾಣವನ್ನು ಬರೆಯಲು ಪ್ರಾರಂಭಿಸಿದಾಗ ಆದ ಅವಾಂತರವೇ ಟೀಪುರಾಣವಾಗಿಬಿಟ್ಟಿತ್ತು. ಆಗಿರುವ ಅನುಭವವನ್ನು ನೇರವಾಗಿ ಸಹಜವಾಗಿ ಬರೆದಿದ್ದೇನೆ. ಲಗುಹರಟೆಯಂತೆ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್. ಮುಂದಿನ ಭಾಗ ಇನ್ನೂ ಮಜವಿದೆ ತಪ್ಪದೇ ಬನ್ನಿ.

shivu.k said...

ಸುನಾಥ್ ಸರ್,

ನನ್ನ ಪರಿಸ್ಥಿತಿ ಭಯ ಪಡುವ ಮಟ್ಟಕ್ಕೆ ಹೋಗಿರಲಿಲ್ಲ. ಆದ್ರೆ ಇಕ್ಕಟ್ಟಿಗೆ ಸಿಕ್ಕಿಕೊಂಡಂತೆ ಆಗಿತ್ತು. ಜೀವನದಲ್ಲಿ ಇಂಥವು ಬಂದರೆ ಅವನ್ನು ಎದುರಿಸುವುದು ಒಂಥರ ತಮಾಷೆಯ ಸವಾಲು ಅನ್ನಿಸುತ್ತದೆ. ನಿಮ್ಮ ಹಾರೈಕೆಗೆ ಥ್ಯಾಂಕ್ಸ್. ಮುಂದಿನ ಭಾಗಕ್ಕೆ ಖಂಡಿತ ಬನ್ನಿ.

balasubramanya said...

ಟೀ ಮಹಾತ್ಮೆ ನನ್ನ ಜೀವನದಲ್ಲೂ ನಡೆದಿದೆ , ನಾವು ಎಷ್ಟೇ ಜಂಬಪಟ್ಟರೂ ಅಡಿಗೆ ಮನೆಯಲ್ಲಿ ನಮ್ಮಾಟ ಕೆಲವೊಮ್ಮೆ ಹೀಗೆ ಕೈ ಕೊಡುತ್ತದೆ , ಹ ಹ ನಿಮ್ಮ ಹಾರರ್ ಕಥೆ ಗೆ ಹೇಮಶ್ರೀ ಮೇಡಂ ಯಾವ ತಿರುವು ನೀಡುತ್ತಾರೆಯೋ ಕಾಡು ನೋಡೋಣ . ಅಲ್ಲಿಯವರೆಗೆ ಟೀ ಸುಟ್ಟ ಸುವಾಸನೆ ಕುಡಿತಾ ಇರ್ತೇವೆ ಬಿಡಿ. ನಮ್ಕಥೆ ಬಿಡಿ ,ಮುಂದಿದೆ ಮಾರಿ ಹಬ್ಬ ನಿಮಗೆ !!

ಸುಮ said...

:) nice mundina bhaaga bega barali.

umesh desai said...

ಪಾಪ ವೈನಿಅವ್ರು ಊರಿಗ ಹೋಗಿದ್ದ ತಪ್ಪಾತು ಅನಿಸಿಬಿಡ್ತೀರಿ..ನಿಮ್ಮ ಟೀ ಪುರಾಣದ ಮುಂದಿನ ಕಂತಿಗೆ ಕಾಯುವೆ..

ದಿನಕರ ಮೊಗೇರ said...

sakattaagide sir nimma tea puraNa...

chennaagi odisikonDu hoyitu....

Chaithrika said...

ಡಿಟರ್ಜೆಂಟ ಪುಡಿಯನ್ನು ಸುಟ್ಟ ಪಾತ್ರೆಯ ಒಳಗೆಲ್ಲ ಚೆನ್ನಾಗಿ ಉದುರಿಸಿ ಹನಿ ನೀರು ಚಿಮುಕಿಸಿ ಇಡಿ. ಪುಡಿ ಸುಟ್ಟ ಜಾಗದಲ್ಲೆಲ್ಲ ಸರಿಯಾಗಿ ಅಂಟಿರಬೇಕು. ೨-೩ ದಿವಸ ನಂತರ ಮ್ಯಾಜಿಕ್ ನಂತೆ ಸೀದ ಭಾಗ ತಂತಾನೇ ಮೇಲೆದ್ದು ಬಂದಿರುತ್ತದೆ.

Prashanth Arasikere said...

hi,shivu

hum nanu saha nimma suttta patre anubava na anubavaside adre nimma mane yastu patre kappu agirlilla ankothini..

ಸಾಗರದಾಚೆಯ ಇಂಚರ said...

ಸರ್
ನಿಮ್ಮ ಚಹದ ಪುರಾಣ ಸೊಗಸಾಗಿದೆ
ಕೆಲವೊಮ್ಮೆ ನನಗು ಹೀಗೆ ಮರೆಯುವುದಿದೆ
ಹೆಂಡತಿಯಿಂದ ಬೈಸಿಕೊಂಡಿದ್ದೇನೆ ಆಗೆಲ್ಲ
ಒಳ್ಳೆಯ ಬರಹ

ದೀಪಸ್ಮಿತಾ said...

ಹ್ಹ ಹ್ಹ ಚೆನ್ನಾಗಿದೆ ಟೀ ಪುರಾಣ. ಬಹುಶಃ ನನ್ನ ಟೀ ಲೋಟದ ದೆವ್ವ ಭೂತಗಳೇ ನಿಮ್ಮಲ್ಲಿ ಬಂದು ಸುಟ್ಟು ಕರಕಲಾಗಿಸಿರಬೇಕು :-)

Shashi jois said...

ಶಿವೂ ಸರ್ ಟೀ ಪುರಾಣ ಚೆನ್ನಾಗಿದೆ ..ನಾನು ಕೂಡ ಹಾಗೇ ಮಾಡಿ ಕೊಂಡಿದ್ದೇನೆ....ಮುಂದಿನ ಕಂತಿಗೆ ಕಾಯುತ್ತಿದ್ದೇನೆ..

ಸುಧೇಶ್ ಶೆಟ್ಟಿ said...

ನಿಮ್ಮ ಲಲಿತ ಪ್ರಭಂಧ ನನಗೆ ತುಂಬ ಹಿಡಿಸಿತು ಶಿವಣ್ಣ...!

ನಾನು ಕೂಡ ಹಾಗೆ ಮಾಡಿದ್ದೆ... ಆ ದಿನ ಸಾರಿನ ಪಾತ್ರೆಯನ್ನು ಗ್ಯಾಸ್ ಸ್ಟವ್ ಮೇಲೆ ಕುದಿಯಲು ಇತ್ತು ಆಫೀಸಿಗೆ ಹೊರಡುತ್ತಿದ್ದೆ. ರೆಡಿಯಾದ ಮೇಲೆ ಹಾಗೆ ಆಫೀಸಿಗೆ ಹೋಗಿ ಬಿಟ್ಟೆ. ರಾತ್ರಿ ಹಿಂದೆ ಬಂದ ಮೇಲೆಯೇ ನೆನಪಾಗಿತ್ತು ಗ್ಯಾಸಿನ ಮೇಲೆ ಇಟ್ಟಿದ್ದ ಸಾರಿನ ಪಾತ್ರೆ! ಹತ್ತಿರ ಹತ್ತಿರ ಹತ್ತು ಗಂಟೆ ಗ್ಯಾಸ್ ಉರಿದಿತ್ತು. ಒ೦ದು ಸಲ ಮೈ ಜುಮ್ ಅನಿಸಿತ್ತು ಅವತ್ತು. ಪಾತ್ರೆಯ ಬಗ್ಗೆ ಕೇಳುವುದೇ ಬೇಡ :)

Roopa said...

haha sakkat anubhava!!

ಜಲನಯನ said...

ಶಿವು...ಬರೀ ಟೀ ಗೆ ಹೀಗೆಲ್ಲಾ ನೀವು ಆತಂಕ ಪಟ್ಟುಕೊಂಡ್ರಾ...?? ಆದ್ರೂ ನಿಮ್ಮ ಆತಂಕದ ಅಂತ್ಯ ಏನಾಯ್ತು...ಬೇಗ ತಿಳ್ಸಿ...ಅದರ ಕುತೂಹಲ ಅಂತೂ ಇರುತ್ತೆ...ಹಹಹಹ್

V.R.BHAT said...

ಕಾಗುಣಿತ ತೊಂದರೆ ಬಿಟ್ಟರೆ ಪುರಾಣ ಜೋರಾಗಿದೆ, ಅಂದಹಾಗೇ ಪುರಾಣದ ಮುಂದಿನಭಾಗದಲ್ಲಿ ಪ್ರಿಲ್ ಸಾಬೂನು ಹಾಕಿ ಮೆಟಲ್ ಸ್ಕ್ರ್ಯಾಪ್ ನಿಂದ ಉಜ್ಜುವುದಕ್ಕೆ ಮರೆಯಬೇಡಿ. ಯಾಕೆಂದರೆ ನಾನೂ ಅಪ್ಪಟ ಚಾ ಪ್ರಿಯನಾಗಿದ್ದು ಒಂದೆರಡು ಬಾರಿ ಈ ಚಿಕ್ಕ ಅನಾಹುತ ನಡೆದಿದೆ.ಅಂತೂ ನನ್ನ ರೀತಿಯಲ್ಲೇ ’ಪುರಾಣಿಕ’ರಾದಿರಿ, ಮುನ್ನಡೀಲಿ ಗಾಡಿ!

ಹಳ್ಳಿ ಹುಡುಗ ತರುಣ್ said...

sir.. nimma tee mado purana super agide sir..

aparopakke aduge manege enty koduva ellaru ondalla ondu saari ee ritiya tapatreyalli madikondiruttare...

mundina bagakaagi kayuttiruve... :)

KalavathiMadhusudan said...

ಶಿವು ಸರ್ ನಿಮ್ಮ ಟೀಪುರಾಣದ ಲ್ಲಿ ನಿಮ್ಮ ಪರದಾಟ,!...?..ನಿಮ್ಮ ಹೇಮಶ್ರೀ ಬಂದಮೇಲೆ ತಿಳಿಯೋದ ?,ಹುಷಾರಾಗಿರಿ,ನಿಮಗಿಂತ ಪ್ರೀತಿ ಪಾತ್ರೆ ಯಾಗಿರತ್ತೆ,ಟೀಪಾತ್ರೆ

prabhamani nagaraja said...

ನಿಮ್ಮ ಟೀ ಕಮಟು ವಾಸನೆ ಚೆನ್ನಾಗಿ ಬರ್ತಾ ಇದೆ. ಸುಲಲಿತವಾದ ಲೇಖನಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಬ೦ದು `ಜೇಬಾಯಣ’ ವನ್ನು ಓದುವ೦ಥವರಾಗಿರಿ.

shivu.k said...

ಬಾಲು ಸರ್,
ಟೀ ಮಹಾತ್ಮೆ ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನಡೆದಿರುತ್ತದೆ ಅಲ್ವಾ ಆದ್ರೆ ಅನುಭವಗಳು ವಿಭಿನ್ನ. ನಿಮ್ಮ ಅನುಭವವನ್ನು ಬರೆಯಿರಿ ಓದಲು ನಾವಿದ್ದೇವೆ. ನನ್ನ ಲೇಖನದಿಂದಾಗಿ ಟೀ ಕಮಟು ವಾಸನೆ ನಿಮಗೆ ಬರುತ್ತಿದೆಯೆಂದಮೇಲೆ ನನ್ನ ಲೇಖನ ಕೆಲಸ ಮಾಡುತ್ತಿದೆಯೆಂದಾಯಿತು. ಮತ್ತೆ ಈ ಕತೆಯ ಮುಂದಿನ ತಿರುವು...ನೀವೇ ಓದುವಿರಂತೆ. ಮತ್ತೆ ಈ ವಿಚಾರ ಹೇಮಾಗೆ ಗೊತ್ತಿಲ್ಲವಾದ್ದರಿಂದ ಇಲ್ಲಿಯವರೆಗೂ ನಾನು ಚೆನ್ನಾಗೇ ಇದ್ದೇನೆ..ಅಹ..ಅಹ..
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುಮಾ ಮೇಡಮ್,

ಥ್ಯಾಂಕ್ಸ್. ಸದ್ಯದಲ್ಲೇ ಮುಂದಿನ ಭಾಗವನ್ನು ಹಾಕುತ್ತೇನೆ.

shivu.k said...

ಉಮೇಶ್ ದೇಸಾಯ್ ಸರ್,

ನನ್ನ ಶ್ರೀಮತಿ ಊರಿಗೆ ಹೋಗಿದ್ದು ತಪ್ಪಾಗಿದೆ ಅಂತ ನಾನು ಹೇಳಲಿಲ್ರಿ..ಅನುಭವ ವಿವರಿಸಿದ್ದೇನೆ. ಸ್ವಲ್ಪ ಕೆಲಸದ ಒತ್ತಡದಲ್ಲಿ ಬ್ಲಾಗ್ update ಮಾಡಲಾಗುತ್ತಿಲ್ಲ..ಸಧ್ಯದಲ್ಲೇ ಮಾಡುತ್ತೇನೆ.

shivu.k said...

ದಿನಕರ್ ಸರ್,

ಥ್ಯಾಂಕ್ಸ್. ಮುಂದಿನ ಭಾಗವನ್ನು ಸಧ್ಯದಲ್ಲೇ ಹಾಕುತ್ತೇನೆ.

shivu.k said...

ಚೈತ್ರಿಕಾ ಮೇಡಮ್,

ನೀವು ಹೇಳಿದ ಟಿಪ್ಸ್ ತಡವಾಗಿದೆ. ಏಕೆಂದರೆ ನಾನು ಪಾತ್ರೆ.....ಬೇಡ ಬೇಡ ಅದನ್ನು ಮುಂದಿನ ಭಾಗದಲ್ಲಿ ನೀವೇ ಓದಿಕೊಳ್ಳಿ.
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪ್ರಶಾಂತ್,

ಟೀ ಪಾತ್ರೆಯನ್ನು ಸುಟ್ಟಮೇಲೆ ಅದು ಎಷ್ಟು ಸುಟ್ಟರೇನು, ಸುಟ್ಟಮೇಲೆ ಮುಗೀತು ಮುಂದೇನು ಮಾಡಿದ್ರಿ ಅನ್ನೋದನ್ನು ಹೇಳಿ..ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಗುರುಮೂರ್ತಿ ಸರ್,

ಎಲ್ಲಾ ಗಂಡಸರ ಈ ವಿಚಾರದಲ್ಲಿ ಹೀಗೆ ಅಲ್ವಾ...ನಾವು ತಪ್ಪು ಮಾಡುವುದು ಮತ್ತು ಬೈಸಿಕೊಳ್ಳುವುದು ಇದು ಜೀವನದಲ್ಲಿ ನಡೆಯುತ್ತಲೇ ಇರುತ್ತೇ ಅಲ್ವಾ...
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಕುಲದೀಪ್ ಸರ್,

ನಿಮ್ಮ ಟೀ ಲೋಟದ ದೆವ್ವಗಳು ಕಾರಣವಿರಬಹುದು. ಅದಕ್ಕೆ ಅಷ್ಟು ಚೆನ್ನಾಗಿ ಸುಟ್ಟು ಕರಕಲಾಗಿಬಿಟ್ಟಿದೆ. ಮುಂದಿನ ಭಾಗವನ್ನು ಮಿಸ್ ಮಾಡಿಕೊಳ್ಳಬೇಡಿ.
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಶಶಿಅಕ್ಕ,

ನಾವು ಹೀಗೆ ತಪ್ಪು ಮಾಡುವುದರಲ್ಲಿ ಅರ್ಥವಿದೆ ಮತ್ತು ಹಕ್ಕಿದೆ. ಆದ್ರೆ ನೀವು ಕೂಡ ಹೀಗೆ ಮಾಡವುದುಂಟೆ...ನನಗನ್ನಿಸುತ್ತೆ ಬಹುಶಃ "ಹೀಗೂ ಉಂಟೆ"
ಧನ್ಯವಾದಗಳು.

shivu.k said...

ಸುಧೇಶ್,

ಈ ಬರಹ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

ನಾನು ಒಂದುವರೆಗಂಟೆ ಗ್ಯಾಸ್ ಉರಿಸಿದ್ದಕ್ಕೇ ಹೀಗಾಗಿರಬೇಕಾದರೆ ನಿಮ್ಮ ಹತ್ತು ಗಂಟೆ ಗ್ಯಾಸ್ ಉರಿಸಿದ ದಾಖಲೆಯನ್ನು ನೆನಸಿಕೊಂಡರೆ ಭಯವಾಗುತ್ತೆ...ಏನು ಆಗಲಿಲ್ಲವಲ್ಲ ಸದ್ಯ.

ಮುಂದಿನ ಭಾಗಕ್ಕೆ ಬನ್ನಿ.

shivu.k said...

ಪುಟ್ಟಿಯ ಅಮ್ಮ,

ಧನ್ಯವಾದಗಳು.

shivu.k said...

ಅಜಾದ್,

ನಿಮ್ಮ ಪ್ರಕಾರ ಅದು ಬರೀ ಟೀ. ಆದ್ರೆ ನನಗದೂ ಟೀ ಮಾಡಿದ ಮೇಲೆ ಸುಟ್ಟ ಪಾತ್ರೆ..ಏನು ಮಾಡಲಿ ಹೇಳಿ. ಮುಂದೇನಾಯ್ತು ಬೇಗ ತಿಳಿಸುತ್ತೇನೆ..

ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಭಟ್ ಸರ್,

ಕಾಗುಣಿತ ಏನು ಮಾಡಿದರೂ ತಪ್ಪಾಗುತ್ತದೆ. ನನ್ನ ಕಣ್ಣಿಗೆ ಗೊತ್ತಾಗುವುದಿಲ್ಲ. ಆದರೂ ಮೊದಲಿಗಿಂತ ಕಡಿಮೆ ತಪ್ಪುಗಳನ್ನು ಮಾಡುತ್ತಿದ್ದೇನೆ ಅಂದುಕೊಳ್ಳುತ್ತೇನೆ.

ಅಂದಹಾಗೆ ಮುಂದಿನ ಭಾಗದ ಪುರಾಣ ನೀವು ಹೇಳಿದ ಹಾಗೆ ನಡೆದಿಲ್ಲ ಸರ್..ಬೇರೇನೇ ಸ್ವಾರಸ್ಯಕರ ಕತೆಯುಂಟು. ಮುಂದಿನ ಭಾಗದಲ್ಲಿ ಹಾಕುತ್ತೇನೆ.
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಹಳ್ಳಿಹುಡುಗ ತರುಣ್,

ಟೀ ಪುರಾಣ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

ಅಪರೂಪಕ್ಕೆ ಅಡುಗೆ ಮನೆಗೆ ಬೇಟಿಕೊಟ್ಟರೆ ಅನಾಹುತಗಳು ಖಚಿತ ಎನ್ನುವ ನಿಮ್ಮ ಮಾತು ಸರಿ.
ಬೇಗ ಮುಂದಿನ ಭಾಗವನ್ನು ಹಾಕುತ್ತೇನೆ.

shivu.k said...

ಕಲರವ,

ಟೀಪುರಾಣದಲ್ಲಿ ಪರದಾಟ ಇಷ್ಟವಾಯಿತಾ..ಥ್ಯಾಂಕ್ಸ್. ಹೆಂಗಸರಿಗೆ ಪತಿಗಿಂತ ಪಾತ್ರೆಗಳ ಮೇಲೆ ಪ್ರೀತಿ ಜಾಸ್ತಿ ಅಂತ ನನ್ನ ಅನುಭವಕ್ಕೆ ಬಂದಿದೆ. ಅದಕ್ಕೇ ಆ ಪಾತ್ರೆ ಏನಾಯಿತು...ಮುಂದಿನ ಭಾಗಕ್ಕೆ.
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪ್ರಭಾಮಣಿ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ನೀ ಕಮಟು ವಾಸನೆ ಲೇಖನಮೂಲಕ ನಿಮಗೆ ತಲುಪಿದೆಯೆಂದರೆ ನನ್ನ ಬರಹ ಸಾರ್ಥಕವೆಂದುಕೊಳ್ಳುತ್ತೇನೆ. ಮುಂದಿನ ಭಾಗವನ್ನು ಬೇಗ ಹಾಕುತ್ತೇನೆ. ಮತ್ತೆ ನಿಮ್ಮ ಬ್ಲಾಗಿನ ಲೇಖನಗಳು ನವಿರು ಹಾಸ್ಯದಿಂದ ಇರುವುದರಿಂದ ಚೆನ್ನಾಗಿವೆ.