"ರೀ ಈ ಸಲ ಏನಾದ್ರು ಒಂದು ಕೂದಲು ನಿಮ್ಮ ಬಟ್ಟೆ ಮೇಲಿದ್ರೆ ನಾನು ಸುಮ್ಮನಿರೋಲ್ಲ ನೋಡಿ."
"ಯಾಕೆ ? ಏನಾಯ್ತು?"
"ತಲೆಕೂದಲು ಕಟ್ ಮಾಡಿಸಿದ ಮೇಲೆ ನಿಮ್ಮ ಅಂಗಿ ಮೇಲೆ ಉದುರಿದ ಕೂದಲು ಎಷ್ಟೇ ಚೆನ್ನಾಗಿ ಬಟ್ಟೆ ಒಗೆದರೂ ಹಾಗೆ ಕಚ್ಚಿಕೊಂಡಿರುತ್ತೆ, ಥೂ.. ನೋಡಲು ಎಷ್ಟು ಅಸಹ್ಯವೆನಿಸುತ್ತೆ, ನಿಮಗಿದೆಲ್ಲಾ ಎಲ್ಲಿ ಗೊತ್ತಾಗುತ್ತೇ,"
"ಸರಿ ನಾನು ಈಗ ಏನು ಮಾಡಬೇಕು ಹೇಳು?"
"ಮಾಡೋದೇನು, ನೀವು ಕಟಿಂಗ್ ಷಾಪ್‍ನವನಿಗೆ ದುಡ್ಡು ಕೊಡೋದಿಲ್ವಾ, ಕಟಿಂಗ್ ಮಾಡುವ ಮೊದಲು ದೊಡ್ಡದಾದ ಚೆನ್ನಾಗಿರುವ ಬಟ್ಟೆಯನ್ನು ನಿಮ್ಮ ಮೈಸುತ್ತ ಹಾಕಲಿಕ್ಕೆ ಅವನಿಗೇನು ದಾಡಿ, ನಾವು ಬ್ಯೂಟಿ ಪಾರ್ಲರಿಗೆ ಹೋಗಿ ನಮ್ಮ ಕೂದಲು ಕಟ್ ಮಾಡಿಸಿಕೊಂಡರೆ ಒಂದೇ ಒಂದು ಕೂದಲ ತುಣುಕು ಕೂಡ ಮೈಮೇಲೆ ಬೀಳದಂತೆ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಈ ವಿಚಾರವನ್ನು ಅವನಿಗೆ ಹೇಳಿ." ಅಂತ ತಾಕೀತು ಮಾಡಿದಳು.
ಕುರ್ಚಿಯ ಮೇಲೆ ಕುಳಿತೆ. ಅವನು ಸುಮಾರಾದ ಒಂದು ಬಟ್ಟೆಯನ್ನು ನನ್ನ ಸುತ್ತ ಸುತ್ತಿ ಕುತ್ತಿಗೆ ಹಿಂಬಾಗ ಒಂದು ಗಂಟು ಹಾಕಿ, ತಲೆಗೆ ನೀರು ಚಿಮುಕಿಸಿ ಒಂದು ಸಾರಿ ಬಾಚಣಿಗೆಯಿಂದ ಬಾಚಿದ. ಅದುವರೆಗೂ ಹೇಗೇಗೋ ಎತ್ತೆತ್ತಲೋ ಅಡ್ಡಾದಿಡ್ಡಿಯಾಗಿ ಸಂತೆಯೊಳಗಿನ ಜನಗಳಂತೆ ಹರಡಿಕೊಂಡಿದ್ದ ಕೂದಲುಗಳೆಲ್ಲಾ ಆತನ ಬಾಚಣಿಗೆ ಸ್ಪರ್ಶಕ್ಕೆ ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥನೆಗೆ ಸಾಲಾಗಿ ಭಯಭಕ್ತಿಯಿಂದ ರೋಸ್ ಮತ್ತು ಕಾಲಂ ಎರಡೂ ಕಡೆಯಿಂದ ಸರಿಯಾಗಿ ಸಮವಸ್ತ್ರಸಹಿತರಾಗಿ ನಿಲ್ಲುವಂತೆ ತಲೆಬಾಗಿ ನಿಂತುಬಿಟ್ಟವು. ನಾವು ಮನೆಯಲ್ಲಿ ಸುಹಾಸನೆಬರಿತ ದುಬಾರಿ ಷಾಂಪು ಹಾಕಿ ಕೂದಲಿಗೆ ಸ್ನಾನ ಮಾಡಿಸಿ, ತುಂಬಾ ಚೆನ್ನಾದ ಒಳ್ಳೆಯ ಬಾಚಣಿಕೆಯಲ್ಲಿ ತಲೆಬಾಚಿದರೂ ನಮಗೆ ಬೇಕಾದ ಹಾಗೆ ಮುಂದೆ ಕ್ರಾಪು, ಕಿವಿಗಳ ಮೇಲೆ, ನೆತ್ತಿ ತಲೆ, ಹಿಂಭಾಗದಲ್ಲೆಲ್ಲಾ ನಮಗೆ ಬೇಕಾದ ಹಾಗೆ ಕೂರುವುದೇ ಇಲ್ಲ. ನಾವೆಷ್ಟೇ ಅದುಮಿ ಬಾಚಿದರೂ, ಮತ್ತಷ್ಟು ಎಣ್ಣೆಹಾಕಿ ಮಾಲೀಶ್ ಮಾಡಿದರೂ ನಾವಿರುದೇ ಹೀಗೆ ಅಂತ ಮೊಂಡು ಹಿಡಿದ ಮಕ್ಕಳ ಹಾಗೆ ನಿಂತುಬಿಡುತ್ತಿದ್ದ ಇದೇ ಕೂದಲುಗಳು ಈ ಕಟಿಂಗ್ ಷಾಪ್‍ನವನ ಮಾತನ್ನು ಸುಲಭವಾಗಿ ಕೇಳುತ್ತವಲ್ಲ! ಈ ವಿಚಾರ ನನಗೂ ಬಿಡಿಸಲಾಗದ ಕಗ್ಗಂಟು.
ನನ್ನ ಆಲೋಚನೆ ತುಂಡರಿಸುವಂತೆ "ಸರ್, ಟ್ರಿಮ್ಮಾ, ಮೀಡಿಯಮ್ಮಾ, " ಕೇಳಿದ.
ನಾವು ಟ್ರಿಮ್ ಅಂದುಬಿಟ್ಟರೆ ಮುಗೀತು. ಖುಷಿಯಿಂದ ಸುಮ್ಮನೆ ಒಮ್ಮೆ ತಲೆಮೇಲೆಲ್ಲಾ "ಕಚ್ ಕಚ್ ಕಚ್ ಕಚ್" ಅಂತ ಚೆನ್ನಾಗಿ ಶಬ್ದ ಬರುವಂತೆ ಕತ್ತರಿ ಆಡಿಸಿ ಶಾಸ್ತ್ರಕ್ಕೆ ನೆತ್ತಿ ಮೇಲೆ, ಕಿವಿಗಳ ಮೇಲೆ, ಹಿಂಭಾಗ ಮತ್ತು ಮುಂಭಾಗ ಚೂರೇ ಚೂರು ಕೂದಲು ಕತ್ತರಿಸಿ ಕಳಿಸಿಬಿಡುತ್ತಾನೆ. ಎರಡು ವಾರಗಳ ನಂತರ ಮತ್ತೆ ನೀವು ಅವನ ಬಳಿಗೆ ಹೋಗಲೇಬೇಕು. ಇನ್ನೂ ಮೀಡಿಯಮ್ ಅಂದರೆ ಇನ್ನೂ ಸ್ವಲ್ಪ ಹೆಚ್ಚಾಗಿ ಎಲ್ಲಾ ಕಡೆಯೂ ಕತ್ತರಿಸಿ [ಕತ್ತರಿಸಿದಂತೆ ಮಾಡಿ] ಒಂದು ತಿಂಗಳ ಒಳಗಾಗಿ ಮತ್ತೆ ಬರುವಂತೆ ನೋಡಿಕೊಳ್ಳುವುದು. ಆತನೆಂದೂ ಷಾರ್ಟ್ ಮಾಡಿಬಿಡಲಾ ಅಂತ ಕೇಳುವುದಿಲ್ಲ. ಅದು ಅವರ ವೃತ್ತಿಗೆ ಲಾಭದಾಯಕವಲ್ಲ. ಹಾಗೆ ಆತ ಕೇಳಿದಾಗ ನಾವು ಹೂ ಅಂದುಬಿಟ್ಟರೆ ಅಥವ ನಾನೇ ಷಾರ್ಟ್ ಮಾಡಿಬಿಡು ಅಂದುಬಿಟ್ಟರೆ ವಿಧಿಯಿಲ್ಲದೇ ಆತ ನುಣ್ಣಗೆ ಕತ್ತರಿಸಬೇಕಾಗುತ್ತದೆ. ಮತ್ತೆ ಕೂದಲುಗಳೆಲ್ಲಾ ಉದ್ದ ಬೆಳೆದು ಆತನ ಬಳಿಗೆ ಮತ್ತೊಮ್ಮೆ ಕಟಿಂಗ್ ಬರುವ ಹೊತ್ತಿಗೆ ಎರಡು ತಿಂಗಳು ದಾಟಿಬಿಟ್ಟಿರುತ್ತದಲ್ಲ!
ಮೀಡಿಯಮ್ಮಾಗಿರಲಿ ಅಂತ ಹೇಳಿ ನನ್ನ ಶ್ರೀಮತಿ ಹೇಳಿದ ವಿಚಾರವನ್ನು ಅವನಿಗೆ ನೆನಪಿಸಿದೆ.
" ಅಯ್ಯೋ ಬಿಡಿ ಅಣ್ಣಾ, ನಿಮಗಿದೆಲ್ಲಾ ಗೊತ್ತಾಗೊಲ್ಲ! ಈ ಕೂದಲುಗಳೆಲ್ಲಾ ಒಂಥರ! ಭಲೇ ಆಕ್ಟಿಂಗ್ ಮಾಡ್ತಾವೆ!
ಆಹಾಂ! ಕೂದಲು ಆಕ್ಟಿಂಗ್ ಮಾಡ್ತವ! ಇದೆಂಥದಪ್ಪ ಇದು ಹೊಸ ವಿಚಾರ ಅಂದುಕೊಳ್ಳುತ್ತಿದ್ದಂತೆ ಇದುವರೆಗೆ ಭಯಭಕ್ತಿಯಿಂದ ತಲೆಬಾಗಿದ್ದ ನನ್ನ ತಲೆಕೂದಲುಗಳೆಲ್ಲಾ ಗಕ್ಕನೆ ನಿಂತುಕೊಂಡವು.
"ಇದೇನಣ್ಣಾ ನೀನು ಹೇಳೋದು? ಕೂದಲು ಆಕ್ಟಿಂಗ್ ಸ್ವಲ್ಪ ಬಿಡಿಸಿ ಹೇಳಬಾರದಾ?"
"ನೋಡಣ್ಣ, ಗಂಡ್ಸು ಅಫೀಸಿಂದ ಸಂಜೆ ಮನೆಗೆ ಸುಸ್ತಾಗಿ ಬರುತ್ತಿದ್ದಂತೆ ಹೆಂಡ್ತಿ ಬಿಸಿಬಿಸಿ ಒಂದು ಲೋಟ ಕಾಫಿ ಕೊಟ್ಟು ಗಂಡನ ತಲೆಸವರಿ ತನಗೆ ಬೇಕಾದ ಎಲ್ಲವನ್ನು ವಸೂಲಿ ಮಾಡಿಕೊಂಡುಬಿಡುತ್ತಾಳೆ. ಹಿರಿಯಕ್ಕನ ಚಾಲು ಮನೆಮಕ್ಕಳಿಗೆ ಅನ್ನುವಂತೆ ಅವಳ ಇಂಥ ನಯ, ನಾಜೂಕು, ವೈಯ್ಯಾರದಂತ ಗುಣಗಳನ್ನು ದೇಹದ ಎಲ್ಲಾ ಅಂಗಾಗಗಳು ಕಲಿತುಕೊಂಡಂತೆ ಅವಳ ತಲೆಯ ಕೂದಲುಗಳು ಕೂಡ ಚೆನ್ನಾಗಿ ಕಲಿತುಬಿಡುತ್ತವೆ. ಕಲಿತ ಮೇಲೆ ನಟಿಸೋದು ಸುಲಭ ತಾನೆ! ಅವರ ಬ್ಯೂಟಿ ಪಾರ್ಲರ್‍ನಲ್ಲಿ ಕತ್ತರಿಸಿದಾಗ ಅವರ ಬಟ್ಟೆಗೆ ಅಂಟಿಕೊಳ್ಳದೇ ನಾಜೂಕಾಗಿ ಜಾರಿಬಿದ್ದುಬಿಡುತ್ತವೆ . ಆದ್ರೆ ಗಂಡಸರು ಕೆಲಸ ಕಾರ್ಯ ಅಂತ ಹೊರಗೆ ಹೋಗಿ ಸುತ್ತಾಡಿ ಜಡ್ಡು ಹಿಡಿದು ಕುಲಗೆಟ್ಟು ಹೋಗಿರುವುದರಿಂದ ಅವರ ತಲೆಕೂದಲುಗಳು ವೀಕ್ ಆಗಿಬಿಡುತ್ತವೆ. ಹೀಗಾಗಿ ಕಟಿಂಗ್ ಮಾಡಿದಾಗ ಹಾರಾಡಿ ತೂರಾಡಿ ಸುಸ್ತಾಗಿ ಹೀಗೆ ಬಟ್ಟೆಗೆ ಸಿಕ್ಕಿಹಾಕಿಕೊಳ್ಳುತ್ತವೆ. ಮತ್ತೊಂದು ವಿಚಾರ ಸರ್, ಹೆಂಗಸರು ತಲೆಕೂದಲನ್ನು ಏನೇನೋ ಹಾಕಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅನೇಕ ಎಣ್ಣೆಗಳನ್ನು ಹಾಕಿ ತಿದ್ದಿ ತೀಡಿ ನೀವಿ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಆದ್ರೆ ಗಂಡಸರು ಬೇರೆ ಎಣ್ಣೆಗಳನ್ನು ತಲೆಗಾಕದೇ ಬಾಯಿಗೆ ಹಾಕುವುದರಿಂದ ಗಂಡಸರು ಕೂದಲುಗಳಿಗೆ ಈ ಗತಿ ಬಂದಿದೆ ನೋಡಿ". ಅವನ ವಾದಕ್ಕೆ ನಾನು ಮರು ಉತ್ತರ ನೀಡಲಿಲ್ಲ. ಸುಮ್ಮನೇ ಮುಖ ನೋಡುತ್ತಿದ್ದೆ.
"ಅದ್ಯಾಕಣ್ಣ ನನ್ನ ಮುಖ ಹಾಗೆ ನೋಡ್ತಿಯಾ, ನಾನೇನಾದ್ರು ಹೇಳಿದ್ರಲ್ಲಿ ತಪ್ಪಿದಿಯಾ? ಈ ಭೂಮಿ ಮೇಲೆ ನಡೀತಿರೋ ವೈಯ್ಯಾರ, ನಾಜೂಕೆಲ್ಲಾ ಹೆಂಗಸರಿಂದ್ಲೇ ಆಗ್ತಿರೋದು, ಈ ಭೂಮಿ ನಡೀತಿರೋದು ಅವರಿಂದ್ಲೆ ಅಂದ್ರೆ ತಪ್ಪಾಗಿ ತಿಳಿಬೇಡಿ" ಅಂದ. ಓಹ್! ಇವತ್ತೇನೋ ವಿಭಿನ್ನವಾದ ಮೂಡ್‍ನಲ್ಲಿದ್ದಾನೆ ಅನ್ನಿಸುತ್ತೆ, ಇರಲಿ ಯಾವುದೋ ಹೊಸ ವಿಚಾರವನ್ನು ಹೇಳಲೆತ್ನಿಸುತ್ತಿದ್ದಾನೆ, ಮದ್ಯ ನಾನು ಮಾತಾಡಿದರೆ ಆವನ ಮಾತಿನ ದಾರಿ ದಿಕ್ಕು ತಪ್ಪಬಹುದು ಅಂತ ಸುಮ್ಮನೆ ಅವನ ಮುಖವನ್ನು ನೋಡುತ್ತಾ ಕುತೂಹಲದಿಂದ ಕಣ್ಣ ಹುಬ್ಬೇರಿಸಿದೆ. ಒತ್ತಾಗಿ ಬೆಳೆದಿದ್ದ ನನ್ನ ಕಣ್ಣ ಹುಬ್ಬು ಕಂಡರೆ ಅವನಿಗೆ ಇಷ್ಟ. ಅವನಿಗೆ ಅಷ್ಟೇ ಸಾಕಾಯಿತು. ಅದನ್ನು ನೀವುತ್ತಾ.....
"ಹೂ ಕಣಣ್ಣ.....ಅದನ್ನ ನಿಮಗೆ ಅರ್ಥವಾಗುವಂತೆ ಹೇಳ್ತೀನಿ ಇರಿ"....ಅಂದು ಸ್ವಲ್ಪ ಹೊರಗೆ ಅತ್ತ ಇತ್ತ ನೋಡಿದ. ದೂರದಲ್ಲಿ ಒಬ್ಬ ಮುವ್ವತೈದರ ಆಜುಬಾಜು ವಯಸ್ಸಿನ ವ್ಯಕ್ತಿ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದುತ್ತಿದ್ದ. ತನ್ನ ಕತ್ತರಿ ಕೆಲಸ ನಿಲ್ಲಿಸಿ "ಅದೋ ಅಲ್ಲಿ ಕುಳಿತಿದ್ದಾನಲ್ಲ ಅವನನ್ನೊಮ್ಮೆ ನೋಡಿ, ಅವನು ಯಾವಾಗಲೂ ಹೀಗೆ ಅಲ್ಲಿ ಬಂದು ಕುಳಿತು ಬೀಡಿ ಸೇದುತ್ತಿರುತ್ತಾನೆ. ಅವ್ನ ಮನೇಲಿ ಅವನೆಂಡ್ತಿ, ಮತ್ತೆ ಅವನ ತಾಯಿ ಸೇರಿ ಮೂರೆ ಜನ ಇರೋದು. ಒಂದು ದಿನ ಅವನ ತಾಯಿ ಅರ್ಧ ಕೇಜಿ ಸೇಬು ತಗೊಂಬಾ ಮಗ ತಿನ್ನೋ ಆಸೆಯಾಗ್ತಿದೆ ಅಂತ ಕೇಳಿದ್ಲು. ಅದಕ್ಕೆ ಇವನು, ಓ ಆಸೆ ನೋಡು, ಸಾಯೋ ಮುದ್ಕಿ ನೀನು ಅದನ್ನ ತಿಂದು ಯಾವ ರಾಜ್ಯಭಾರ ಮಾಡಬೇಕಾಗಿದೆ, ಸುಮ್ನೆ ಬಿದ್ಕೋ" ಅಂತ ಬೈದುಬಿಟ್ಟ. ಆ ಯಮ್ಮ ನನ್ನ ಮಗ ಇಂಗಂದುಬಿಟ್ನಲ್ಲ ಅಂತ ಬೇಜಾರು ಮಾಡಿಕೊಂಡುಬಿಟ್ಲು. ಆದ್ರೆ ಅವನ ಹೆಂಡ್ತಿ ರೇಶ್ಮೆ ಸೀರೆ ಕೇಳಿದ್ದಕ್ಕೆ "ನೋಡಮ್ಮಿ ನೀನು ಕೇಳೋದು ಹೆಚ್ಚಾ, ನಾನು ತರೋದು ಹೆಚ್ಚಾ, ತಂದುಕೊಡ್ತೀನಿ ಆದ್ರೆ ಈಗಲ್ಲ ಮುಂದಿನ ಮಾರನವಮಿಗೆ ತಂದುಕೊಟ್ಟುಬಿಡ್ತೀನಿ" ಅಂತ ಹೇಳಿದ್ದಕ್ಕೆ ಅವಳು ಸುಮ್ಮನಾದಳು. ಇಲ್ಲೇ ಇರೋದು ನೋಡಿ ಯತ್ವಾಸ. ತಾಯಿಗೆ ಹೇಳಿದ ಹಾಗೆ ಹೆಂಡ್ತಿಗೆ ಹೇಳಲಿಕ್ಕೆ ಅವನಿಗೆ ಆಗಲಿಲ್ಲವಲ್ಲ, ಯಾಕಂದ್ರೆ ತಾಯಿ ಕೂದಲು ಬೆಳ್ಳಗಾಗಿ ಅವಳಂತೆ ಈಗಲೋ ಆಗಲೋ ಅಂತ ಸಾಯುವ ಸ್ಥಿತಿಗೆ ಬಂದುಬಿಟ್ಟಿದೆ, ಆದ್ರೆ ಹೆಂಡತಿ ಕೂದಲಲ್ಲಿ ವೈಯಾರ, ಯವ್ವನ ತುಂಬಿ ತುಳುಕಾಡುತ್ತಲ್ವಾ ಅದೇನೇ ಅದೇ ಸ್ವಾಮಿ ಆಕರ್ಷಣೆ" ಈ ಕೂದಲು ವಿಚಾರದಲ್ಲಿ ತಿಳಿದುಕೊಳ್ಳೋದು ಬಾಳ ಇದೆ. ಇದೇ ವಿಚಾರದಲ್ಲಿ ಸ್ವಲ್ಪ ಆಳಕ್ಕಿಳಿದು ನೋಡಿದ್ರೆ ಏನೇನೋ ತಿಳಿಯುತ್ತೆ" ಗೊತ್ತಾಣ್ಣ ಅಂದ.
ಅವನ ಮಾತಿಗೆ ನಾನು ಮರುಉತ್ತರ ನೀಡದೇ ಕೇಳಿಸಿಕೊಳ್ಳುತ್ತಿದ್ದೆ. "ಟರ್ರ್ ರ್ರ್... ಟಕ್ ಟಕ್...ಟಕ್ ಟಕ್."...ಎಂದು ಪಕ್ಕದಲ್ಲಿ ಚಿಕ್ಕ ಹುಡುಗನ ತಲೆಕೂದಲು ಕತ್ತರಿಸುತ್ತಿದ್ದ ಮಿಷಿನ್ ಶಬ್ದಮಾಡುತ್ತಿತ್ತು. ಇದ್ದಕ್ಕಿದ್ದಂತೆ ಡರರ್..ರ್......ಅಂತ ಸದ್ದು ಮಾಡಿ ಎಲ್ಲರ ಗಮನವನ್ನು ಸೆಳೆಯಿತು.
"ನೋಡಿದ್ರಾ, ಈ ನಮ್ಮ ಮಿಷಿನ್ ಏನು ಹೇಳ್ತು ನೋಡಿ," ಅಂದು ಅ ಹುಡುಗನ ಕಡೆ ತಿರುಗಿ "ರಾತ್ರಿ ಏನು ತಿಂದ್ಯೋ ಮರಿ" ಕೇಳಿದ. ಹುಡುಗ ಭಯಭಕ್ತಿಯಿಂದ ಹೆದರಿಕೊಂಡು "ಮೊಟ್ಟೆ ತಿಂದೆ" ಅಂದ "ನೋಡಿದ್ರಾ ನಾನು ಹೇಳಲಿಲ್ಲವಾ...ಇವನು ರಾತ್ರಿ ತಿಂದ ಮೊಟ್ಟೆಯಲ್ಲಿನ ಗ್ಯಾಸ್ ದೇಹದ ಮೂಲಕ ತಲೆಗೂ ಹತ್ತಿದೆ. ತಲೆಗೆ ಹತ್ತಿದ ಮೇಲೆ ಕೂದಲಿಗೂ ಬರಲೇಬೇಕಲ್ವಾ.........ಯಾವಾಗ ಅವನ ತಲೆಕೂದಲನ್ನು ನಮ್ಮ ಕಟಿಂಗ್ ಮಿಷಿನ್ ಕತ್ತರಿಸತೊಡಗಿತೊ, ಅದುವರೆಗೂ ಕೂದಲೊಳಗೆ ಕುಳಿತಿದ್ದ ಈ ಮೊಟ್ಟೆ ಗ್ಯಾಸ್ ಮಿಷಿನ್ನಿನ ಹಲ್ಲುಗಳಿಗೆ ತಾಗಿ ಡರರ್....ರ್.....ಅಂದ ಶಬ್ದ ಮಾಡಿದೆ. ಚಿಕನ್ ಮಟನ್ ತಿಂದಿದ್ದರೆ ಇನ್ನೂ ಬೇರೆ ತರ ಶಬ್ದ ಮಾಡುತ್ತೆ ಕಣಣ್ಣ," ಅಂತ ನಕ್ಕ. ಅವನ ಮಾತಿಗೆ ಅಲ್ಲಿ ಕುಳಿತಿದ್ದವರೆಲ್ಲಾ ಜೋರಾಗಿ ನಕ್ಕರು. ಬದುಕಿನ ಪ್ರತಿಯೊಂದು ವಿಚಾರಗಳಿಗೂ, ಆ ಕ್ಷಣದಲ್ಲಿ ನಡೆದ ಸನ್ನಿವೇಶಗಳಿಗೂ ತಲೆಕೂದಲನ್ನು ಲಿಂಕ್ ಮಾಡಿ ತನ್ನದೇ ಒಂದು ಶೈಲಿಯಲ್ಲಿ ವಿಚಾರವನ್ನು ಮಂಡಿಸುತ್ತಿದ್ದ ಅವನ ಚಾಕಚಕ್ಯತೆಗೆ ನಾನು ತಲೆದೂಗಬೇಕಾಯಿತು.
ಅಷ್ಟರಲ್ಲಿ ನನ್ನ ತಲೆಕೂದಲುಗಳೆಲ್ಲಾ ಅವನ ಹದ್ದುಬಸ್ತಿಗೆ ಬಂದು ಗಂಬೀರವಾಗಿರುವಂತೆ ನನಗೆ ಅನ್ನಿಸಿತು. ಬಹುಶಃ ಕಟಿಂಗ್ ಶಾಪ್‍ನಲ್ಲಿರುವವರೆಗೆ ಮಾತ್ರ ಹೀಗಿರಬಹುದು, ನಮ್ಮ ಮತ್ತೆ ನಮ್ಮ ಮನೆಯ ಕನ್ನಡಿಯ ಮುಂದೆ ನಿಂತು ತಲೆ ಬಾಚುವಾಗ ಆಡ್ನಾಡಿ ಬುದ್ದಿ ತೋರಿಸಬಹುದು ಅಂದುಕೊಳ್ಳುತ್ತಾ ಅವನಿಗೆ ಹಣಕೊಟ್ಟು ಹೊರಬರುವಾಗ ನನ್ನ ಬಟ್ಟೆಯನ್ನು ನೋಡಿಕೊಂಡೆ. ಒಂದು ಕೂದಲ ತುಣುಕು ಕೂಡ ಕಾಣಲಿಲ್ಲವಾದ್ದರಿಂದ ಮನಸ್ಸಿಗೆ ಸಮಾಧಾನವಾಗಿತ್ತು. ಆದರೂ ಎಲ್ಲೋ ಅನುಮಾನ. ನನಗೆ ಕಾಣಿಸದೇ ಇದ್ದ ಕೂದಲು ನನ್ನ ಶ್ರೀಮತಿಗೆ ಕಾಣಿಸಿದರೆ! ಅನ್ನಿಸುತ್ತಿದ್ದಂತೆ ಕುತ್ತಿಗೆ ಮೇಲೆ ಮುಲಮುಲವೆಂದಿತು. ಸಂಶಯವಾಗಿ ಮತ್ತೊಮ್ಮೆ ಒಳಗೋಗಿ ದೊಡ್ಡಕನ್ನಡಿಯಲ್ಲಿ ಕುತ್ತಿಗೆಯನ್ನು ನೋಡಿಕೊಂಡೆ. ಒಂದು ಕೂದಲು ಕೂಡ ಕಾಣಲಿಲ್ಲ. ಓಹ್! ಭ್ರಮೆಗೊಳಗಾಗಿರಬೇಕು ಅಂದುಕೊಳ್ಳುತ್ತಾ ಹೊರಬಂದು ಮನೆ ಕಡೆಗೆ ನಡೆಯುತ್ತಿದ್ದೆ. ನಿದಾನವಾಗಿ ಬುಜ, ತೋಳುಗಳು, ಬೆನ್ನಬಾಗವೆಲ್ಲಾ ಮುಲಮುಲ ನವೆ ಪ್ರಾರಂಭವಾಗಿತ್ತು.
ಲೇಖನ: ಶಿವು.ಕೆ