Monday, May 11, 2009

ಕೂತ ಜಾಗದಲ್ಲಿ ಕೂರುತ್ತಿಲ್ಲ...ನಿಂತ ಜಾಗದಲ್ಲಿ ನಿಲ್ಲುತ್ತಿಲ್ಲ.... ಆ ಭೂಪಟ.....!!

ಮೂಂಜಾನೆ ಏಳು ಗಂಟೆಗೆ ಶುರುವಾದ ನಾಂದಿ ಪೂಜೆಯ ಫೋಟೋಗಳನ್ನು ಮದುವೆಮನೆಯಲ್ಲಿ ಕ್ಲಿಕ್ಕಿಸುತ್ತಿದ್ದೆ. ಅನೇಕ ಅತಿಥಿಗಳಂತೆ ಆ ಬಾಲ್ಡಿ ತಲೆಯು ಬಂದಿತ್ತು. ಬಾಲ್ಡಿ ತಲೆ ಕಂಡಾಗ ನನ್ನ ಕ್ಯಾಮೆರಾ ಅತ್ತ ತಿರುಗುವುದು ಖಚಿತ.

ಆ ಬಾಲ್ಡಿ ತಲೆ ವಿಭಿನ್ನವಾಗಿತ್ತು. ಥೇಟ್ ಥೋತಾಪುರಿ ಮಾವಿನಕಾಯಿ ಆಗಿತ್ತು. ಖುಷಿಯಿಂದ ಕ್ಲಿಕ್ಕಿಸಲೆತ್ನಿಸಿದೆ. ಆಗಲಿಲ್ಲ...ಆ ಬಾಲ್ಡಿತಲೆಯ ವ್ಯಕ್ತಿ ಹತ್ತು ನಿಮಿಷ ಕುಂತಜಾಗದಲ್ಲಿ ಕೂರುತ್ತಿಲ್ಲ, ನಿಂತ ಜಾಗದಲ್ಲಿ ನಿಲ್ಲುತ್ತಿಲ್ಲ. ಕಾಲಿಗೆ ಚಕ್ರಹಾಕಿಕೊಂಡಂತೆ ಓಡಾಡುತ್ತಿದ್ದಾನೆ.

ಆತ ಕುಂತಾಗ...ಅಥವ ನಿಂತು ಯಾರೊಡನೆಯೋ ಮಾತಾಡುವಾಗ ನನಗೆ ಪೂಜೆ ಇತ್ಯಾದಿ ಫೋಟೋ ತೆಗೆಯುವ ಕೆಲಸವಿರುತ್ತಿತ್ತು. ಹೀಗೆ ಆತನ ಮಾವಿನಕಾಯಿ ಬಾಲ್ಡಿ ಮದ್ಯಾಹ್ನದವರೆಗೆ ತಪ್ಪಿಸಿಕೊಂಡಿತ್ತು.

ಸಂಪೂರ್ಣ ಎಣ್ಣೆಮಯವಾಗಿರುವ ಮದುವೆ ಊಟಗಳು ನಮಗೆ ಆಷ್ಟು ಇಷ್ಟವಾಗೊಲ್ಲ. ನಾಲ್ಕು ದಿನ ಸತತವಾಗಿ ಅದೇ ಊಟ ತಿಂದರೆ[ನಮಗೆ ಅದೇ ಗತಿ] ಖಂಡಿತ ದೇಹ ತೂಕ ಹೆಚ್ಚಾಗಿ ಆರೋಗ್ಯ ಅಲ್ಲೋಲಕಲ್ಲೋಲವಾಗುವುದು ಖಚಿತವಾಗುವುದರಿಂದ ಏನಾದರೂ ನೆಪಹೇಳಿ ಅಲ್ಲಿನ ಊಟದಿಂದ ತಪ್ಪಿಸಿಕೊಳ್ಳುತ್ತೇವೆ.

ಆ ಮದುವೆ ಇದ್ದುದ್ದು ಮೈಸೂರಲ್ಲಿ. ಮದ್ಯಾಹ್ನ ಮೂರು ಗಂಟೆಗೆ ಅವರೇ ವ್ಯವಸ್ಥೆ ಮಾಡಿದ್ದ ಬಸ್ಸಿನಲ್ಲಿ ಹೋಗಬೇಕಿತ್ತು. ನಾನು ಮೊದಲೇ ಬಸ್ಸು ಹತ್ತಿ ಕುಳಿತ್ತಿದ್ದೆ. ಮದುವೆ ಸಂಭ್ರಮ, ಗದ್ದಲ. ಅವುಗಳಿಂದ ತಪ್ಪಿಸಿಕೊಳ್ಳಲು ನಾನು ತೇಜಸ್ವಿಯವರ "ಅಲೆಮಾರಿ ಆಂಡಮಾನ್" ಎತ್ತಿಕೊಂಡಿದ್ದೆ. ಮತ್ತೆ ಕಣ್ಣಿಗೆ ಬಿತ್ತಲ್ಲ ಮಾವಿನಕಾಯಿ... ಆ ತಲೆಯೂ ಮೈಸೂರಿಗೆ ಬರಲು ಸಿದ್ದವಾಗಿತ್ತು. ಸದ್ಯ ನನ್ನ ಜೊತೆಯಲ್ಲೇ ಬರುತ್ತಿದೆಯಲ್ಲ ಮೈಸೂರಿನ ಮದುವೆ ಮಂಟಪದಲ್ಲಿ ಎಲ್ಲಾದರೂ ಕೂತಾಗ ಕ್ಲಿಕ್ಕಿಸಿಬಿಡಬೇಕು ಅಂದುಕೊಂಡು ಅಂಡಮಾನ್‌ನಲ್ಲಿ ಮುಳುಗಿದೆ.

ರಾತ್ರಿ ವರಪೂಜೆ, ಊಟ ಇತ್ಯಾದಿಗಳ ನಡುವೆ ಪ್ರಯತ್ನಿಸಿದೆ. ಆಗಲಿಲ್ಲ. ಮರುದಿನ ಬೆಳಿಗ್ಗೆಯಿಂದ ಕಾಶಿಯಾತ್ರೆ, ಗೌರಿಪೂಜೆ, ಮಹೂರ್ತ, ಹೋಮ, ಸಪ್ತಪದಿ, ಭೂಮದೂಟ, ಲಾಜವಾಮ್, ಹೆಣ್ಣೊಪ್ಪಿಸುವುದು, ಕೊನೆಯಲ್ಲಿ ಮನೆತುಂಬಿಸಿಕೊಳ್ಳುವುದು... ಎಲ್ಲಾ ಮುಗಿಯುವ ಹೊತ್ತಿಗೆ ಸಂಜೆ ನಾಲ್ಕು ಗಂಟೆ. ಒಂದು ಕಣ್ಣಲ್ಲಿ ಇವೆಲ್ಲಾ ಕ್ಲಿಕ್ಕಿಸುತ್ತಿದ್ದರೂ ಮತ್ತೊಂದು ಕಣ್ಣಲ್ಲಿ ಆ ಮಾವಿನ ಕಾಯಿ ಎಲ್ಲಿದೆ ಅಂತ ಹುಡುಕುತ್ತಲೇ ಇದ್ದೆ.

ಅದೋ ಅಲ್ಲಿ ಕುಳಿತಿದೆ. ಯಾರೊಂದಿಗೋ ಹರಟುತ್ತಿದೆ. ಈಗ ಹೋಗಿಬಿಡಬೇಕು ಅಂದುಕೊಂಡು ಅಲ್ಲಿ ಸಾಗುವಷ್ಟರಲ್ಲಿ ಜಾಗ ಬದಲಾಯಿಸಿಬಿಡುತ್ತಿತ್ತು. ಇಡೀದಿನ ಪ್ರಯತ್ನಿಸಿದರೂ ಆದು ಸಿಗಲಿಲ್ಲ. ಅದರ ಬದಲಾಗಿ ಬೇರೆ ಅನೇಕ ಭೂಪಟಗಳು ಸಿಕ್ಕಿದ್ದವು. ಕಣ್ಣ ಮುಂದೆ ಚಂಪಾಕಲಿ, ಮೈಸೂರ್‌ಪಾಕ್ ಇತ್ಯಾದಿ ಸಿಹಿತಿಂಡಿಗಳಿದ್ದರೂ........ಉಪ್ಪು ಹುಣಸೇಹಣ್ಣು ಮೆಣಸು ಹಾಕಿ ಮಾಡಿದ ಬಾಲ್ಯದ ಆ ತಿಂಡಿಯೇ ಬೇಕು ಅಂದಾಗ ಇವೆಲ್ಲಾ ನಗಣ್ಯವೆನಿಸುವ ಹಾಗೆ ನನಗೂ ಮಾವಿನಕಾಯಿ ಭೂಪಟವೇ ಬೇಕಾಗಿತ್ತು.

ಸಂಜೆ ಅರತಕ್ಷತೆ ಪ್ರಾರಂಭವಾಗುವ ಮುನ್ನ ಏನಾದರೂ ಮಾಡಬೇಕು. ಸತಾಯ ಗತಾಯ ಪ್ರಯತ್ನಿಸಿ ಕ್ಲಿಕ್ಕಿಸಬೇಕು ಅಂದುಕೊಂಡೆ.

ಸಮಯ ಸಂಜೆ ಆರುಗಂಟೆ. ರೇಷ್ಮೆ ಪಂಚೆ ಮತ್ತು ಜುಬ್ಬದಾರಿಯಾಗಿ ಪ್ರೆಶ್ಶಾಗಿ ರೆಡಿಯಾಗಿಬಂದಿದ್ದ ಮಾವಿನಕಾಯಿ ಬಾಲ್ಡಿ ತಲೆ ಬಂದು ಸುಮ್ಮನೆ ಕುಳಿತಿತ್ತು. ಎರಡು ದಿನದಿಂದ ಕುಳಿತಲ್ಲಿ ಕೂರದೆ ನಿಂತಲ್ಲಿ ನಿಲ್ಲದೇ ಎಡಬಿಡದೇ ಓಡಾಡಿಕೊಂಡಿದ್ದರಿಂದ ಸುಸ್ತಾಗಿತ್ತೇನೋ ಸುಮ್ಮನೇ ಕುಳಿತಿತ್ತು. ಇದೇ ಸಮಯವೆಂದು ನಾನು ಮದುವೆ ಮನೆಯ ಬಲಬಾಗಿಲಲ್ಲಿ ಹೋಗಿ ಊಟದ ಹಾಲ್ ದಾಟಿ ಮುಖ್ಯದ್ವಾರದಿಂದ ಕ್ಯಾಮೆರಾ ಸಿದ್ದವಾಗಿಟ್ಟುಕೊಂಡೇ ಆತನ ಹಿಂಬಾಗ ಬಂದು ಅರತಕ್ಷತೆಯ ಆಲಂಕಾರವನ್ನು ಕ್ಲಿಕ್ಕಿಸುವ ನೆಪದಲ್ಲಿ ಆ ಭೂಪಟವನ್ನು ನನಗೆ ಬೇಕಾದ ಹಾಗೆ ಕ್ಲಿಕ್ಕಿಸಿದ್ದೆ.

ಮನೆಯಲ್ಲಿ ನಕಾಶೆ ಪುಸ್ತಕ ತೆಗೆದುನೋಡಿ ಹೋಲಿಸಿದಾಗ ಅದು ಪಕ್ಕಾ ವೆಸ್ಟ್ ಇಂಡೀಸ್ ದ್ವೀಪಸಮಾಹ ರಾಷ್ಟವಾದ " ಗ್ರೆನೆಡ" ಆಗಿತ್ತು. ನನಗಂತೂ "ಗ್ರೆನೇಡ"ಗೆ ಹೋಗಿ ಬಂದಷ್ಟು ಖುಷಿಯಾಗಿತ್ತು.

ಸೂಡಾನ್ ದೇಶದ ಭೂಪಟ !



"ಗ್ರೆನೆಡ" ದೇಶದ ಭೂಪಟ.


ಭಾರ್ಬಡೋಸ್ ದ್ವೀಪ ದೇಶದ ಭೂಪಟ!

ಭೂತಾನ್ ದೇಶದ ಭೂಪಟ!


ಚಿತ್ರ ಮತ್ತು ಲೇಖನ
ಶಿವು.ಕೆ ARPS.

88 comments:

ಮನಸು said...

ಚೆನ್ನಾಗಿದೆ ಮದುವೆ ಮನೆಯಲ್ಲಿ ಹೆಣ್ಣು ಗಂಡಿನ ಫೋಟೋ ತೆಗೆಯುವ ಬದಲು ನೀವು ಈ ಕೆಲಸ ಮಾಡುತ್ತಿದ್ದಿರಾ ಹ ಹ ಹ..... ಎಲ್ಲ ಭೊಪಟಗಳು ಹೋಲಿಕೆಯಾಗುತ್ತಿವೆ. ನಿಮ್ಮ ಶ್ರಮಕ್ಕೆ ಪ್ರತಿಫಲವೇ ಹೋಲಿಕೆಯಾಗುತ್ತಿರುವ ಬಾಲ್ಡಿತಲೆಗಳು ಹ ಹಾ... ಎಲ್ಲದರಲ್ಲೊ ವೈವಿಧ್ಯತೆಯನ್ನು ಹುಡುಕುತ್ತೀರಿ ನೀವು ನಿಜಕ್ಕೊ ಕುಶಿ ಕೊಡುತ್ತದೆ.
ನಿಮ್ಮ ಬರಹದ ಶೈಲಿ ಎಲ್ಲವೊ ಚೆನ್ನಾಗಿದೆ. ಮದುವೆ ಮನೆಗೆ ಹೋಗಿ ಊಟಕ್ಕಿಂತ ಇಂತಹ ವಿಷಯ ಹುಡುಕುವುದೇ ನಿಮಗೆ ತೃಪ್ತಿ ಕೊಟ್ಟಿದೆ ಅಲ್ಲವೇ..?
ಧನ್ಯವಾದಗಳು ಸರ್, ನಮಗೊ ಇಂತಹ ಚಿತ್ರ ಭೊಪಟಾ ನೋಡೋ ಭಾಗ್ಯ ಬಂದಿದೆ....ಹಾ ಹಾ ಹಾ.....
ವಂದನೆಗಳು

shivu.k said...

ಮನಸು ಮೇಡಮ್,

ಭೂಪಟಗಳು ಮತ್ತು ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

ನಾನು ಎಲ್ಲಿಗೇ ಹೋದರೂ ನನ್ನ ಕಣ್ಣುಗಳು ಟೋಪಿ, ಭೂಪಟ... ಇತ್ಯಾದಿಗಳ ಕಡೆಗೆ ಹರಿದಾಡುತ್ತಿರುತ್ತವೆ...ಮತ್ತೆ ನಮಗೆ ಮದುವೆ ಊಟ ಖಂಡಿತ ಇಷ್ಟವಾಗೊಲ್ಲ...ಅದಕ್ಕೆ ಕಾರಣವನ್ನೂ ಬರೆದಿದ್ದೀನಿ...ಮತ್ತೆ ನಾನು ಯಾವುದೇ ಕೆಲಸವನ್ನು ಮಾಡಿದರೂ enjoy ಮಾಡುತ್ತೇನೆ...ಅದ್ರ ಪ್ರತಿಫಲವೇ ಈ ಲೇಖನ...

ಲೇಖನವನ್ನು ಬ್ಲಾಗಿಗೆ ಹಾಕಿದ ತಕ್ಷಣ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

:-) :-) :-)
ಚೆನ್ನಾಗಿದೆ ಶಿವೂ.. ! ಮುಂದುವರಿಯಲಿ ಸರಣಿ.

ಬಾಲು said...

super ide shivu avare, munduvareyali nimma Vrutti haagu pravrutti!!!

e havyasa galu kodo kushi ne bere!!!

PARAANJAPE K.N. said...

ಶಿವೂ,
ಚೆನ್ನಾಗಿದೆ ನಿಮ್ಮ ಭೂಪಟದ ಚರಿತ್ರೆ. ನಿಮಗೊ೦ದು ಹೊಸ ಬಿರುದು ಕೊಡುತ್ತಿದ್ದೇನೆ, "ಬೆನ್ನು ಬಿಡದ ಬೇತಾಳ"
ತಪ್ಪು ತಿಳಿಯಬೇಡಿ, ತಮಾಷೆಗೆ. ಮು೦ದುವರಿಸಿ ನಿಮ್ಮ ಭೂಪಟದ ಹುಡುಕಾಟ ಪ್ರಕ್ರಿಯೆ.

Unknown said...

ಶಿವು ಸಖತ್ತಾಗಿದೆ ನಿಮ್ಮ ಹುಡುಕಾಟ. ನೀವು ಕೊಡುವ ನಿರೂಪಣೆಯನ್ನು ಓದುತ್ತಾ ಓದುತ್ತಾ ನಾವೂ ಆ ಹುಡುಕಾಟದಲ್ಲಿ ಭಾಗಿಯಾಗಿಬಿಡುತ್ತೇವೆ. ಕೊನೆಯಲ್ಲಿ ಒಮ್ಮೆಲೆ ಜೋಡಿ ಚಿತ್ರಗಳನ್ನು ಕಂಡಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ನಿಮ್ಮ ಹುಡುಕಾಟಲ್ಲೆ, ತಾಳ್ಮೆಗೆ ಹ್ಯಾಟ್ಸಾಫ್.

PaLa said...

ಅದ್ಯಾಕೆ ಶಿವು ಇನ್ನೂ ಭೂಪಟಗಳ ಮೇಲೆ ಅಪ್ಡೇಡ್ ಮಾಡ್ತಾ ಇಲ್ಲ ಅಂದು ಕೊಳ್ತಾ ಇದ್ದೆ. ನಿಮ್ಮ ಬರಹ ಓದಿ ನಲಿವಾಯ್ತು, ಜೊತೆಗೆ ಉತ್ತರದ ಅರಿವೂ ಆಯ್ತು. ಒಂದು ಭೂಪಟ ತೆಗಿಯೋಕೆ ನೀವು ಪಟ್ಟ ಶ್ರಮದ ಹಿನ್ನೆಲೆಯಾಗಿ ಚೆನ್ನಾದ ಬರಹ ಒದಗಿಸಿದ್ದೀರಿ, ವಂದನೆಗಳು.

shivu.k said...

ಪೂರ್ಣಿಮ ಮೇಡಮ್,

ಭೂಪಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು...

ಗಿರಿ said...

ಬರಹದ ವಸ್ತು ಸ್ವರಸ್ಯಕರವಾಗಿತ್ತು... ಒಟ್ಟು ನಿರೂಪಣೆಯೂ ಪರವಾಗಿಲ್ಲ... ಅದರೆ, ಪ್ರಯೋಗದ ಭಾಷೆ ಯಾಕೋ ಆಯ ತಪ್ಪಿ ಬಿದ್ದ ಹಲ್ಲಿಯಂತಿತ್ತು...
ತಲೆಕೂದಲುದುರಿದವರನ್ನು ಕುರಿತು ಹೀಯಾಳಿಸಿದಂತಿತ್ತು... ಅದೂ ತ್ರಿತೀಯ ವಿಭಕ್ತಿಯಲ್ಲಿ(ದರ್ಜೆಯಲ್ಲಿ)...
ಉದಾ: "ಅದೋ ಅಲ್ಲಿ ಕುಳಿತಿದೆ. ಯಾರೊಂದಿಗೋ ಹರಟುತ್ತಿದೆ..."
"...ಬಾಲ್ಡಿ ತಲೆ ಬಂದು ಸುಮ್ಮನೆ ಕುಳಿತಿತ್ತು"

-ಗಿರಿ

shivu.k said...

ಬಾಲು ಸರ್,

ನನ್ನ ವೃತ್ತಿಯೊಳಗೆ ಪ್ರವೃತ್ತಿಯೂ ಸೇರಿಹೋಗಿರುವುದರಿಂದ ಎರಡನ್ನೂ ಚೆನ್ನಾಗಿ enjoy ಮಾಡುತ್ತೇನೆ...
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ಧನ್ಯವಾದಗಳು..

shivu.k said...
This comment has been removed by the author.
shivu.k said...

ಪರಂಜಪೆ ಸರ್,

ಭೂಪಟಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

ನಿಮ್ಮ ಬಿರುದನ್ನು ನಾನು ಪ್ರಾಮಾಣಿಕವಾಗಿ ಮತ್ತು ತಮಾಷೆಯಾಗಿಯೇ ಸ್ವೀಕರಿಸುತ್ತೇನೆ...ಆದರೆ ಇದನ್ನೇ ಬೇರೆಯವರು ದುರುಪಯೋಗಪಡಿಸಿಕೊಂಡರೇ ಅನ್ನುವ ಭಯವಿದೆ...

ಭೂಪಟಗಳ ಜೊತೆಗೆ ಎಲ್ಲಾ ವಿಚಾರಗಳಲ್ಲೂ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು..

Srinidhi said...

:-) :-) :-)

shivu.k said...

ಸತ್ಯನಾರಾಯಣ ಸರ್,

ನನ್ನ ಹುಡುಕಾಟವನ್ನು ಗುರುತಿಸಿದ್ದಕ್ಕೆ ಮತ್ತು ಲೇಖನದಲ್ಲಿ ನೀವು ನನ್ನ ಜೊತೆ ಹುಡುಕಾಟ ನಡೆಸಿದ್ದಕ್ಕೆ ...ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಸಂದೀಪ್ ಕಾಮತ್ said...

ಎಲ್ಲಾ ಭೂಪಟಗಳೂ ಸರಿಯಾಗಿ ಹೊಂದುತ್ತವೆ!

shivu.k said...

ಪಾಲಚಂದ್ರ,

ಭೂಪಟಗಳು ಸಿದ್ದವಾಗಿರಲಿಲ್ಲವಾದ್ದರಿಂದ ಮತ್ತು ಕಳೆದೊಂದು ತಿಂಗಳಿಂದ ಕೆಲಸ ಜಾಸ್ತಿ ಇದ್ದುದರಿಂದ ಭೂಪಟಗಳ ಒಳಗೆ ಹೊಕ್ಕಿರಲಿಲ್ಲ...

ನಾನು ಒಂದು ಭೂಪಟದ ಪರಿಶ್ರಮವನ್ನು ಮಾತ್ರ ವಿವರಿಸಿದ್ದೇನೆ. ಉಳಿದದ್ದನ್ನು ವಿವರಿಸಿದರೆ ದೊಡ್ಡ ಲೇಖನವಾಗಿ ನಿಮಗೆಲ್ಲಾ ಬೋರ್ ಆಗಿಬಿಡಬಹುದು ಅಂತ ಒಂದನ್ನು ಮಾತ್ರ ವಿವರಿಸಿದ್ದೇನೆ...

ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಹೀಗೆ ಬರುತ್ತಿರಿ...

Rakesh Holla said...

Very nice...

mukhaputa said...

nimma baldi puranada kathe super aadre bahushaha idu nimage adbutavaada season anta kaanutte idu heege munduvareyali

shivu.k said...

ಗಿರಿ,

ಭೂಪಟ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

ಇಲ್ಲಿ ನಾನು ಏನು ಹೇಳಿದ್ದೇನೆಂದರೆ ನನ್ನ ಮತ್ತು ಭೂಪಟದ ನಡುವೆ ಮಾತ್ರ ಮಾತು ಮತ್ತು ಮೌನದ ಸಂಭಾಷಣೆ ನಡೆದಿರುವುದು ಮತ್ತು ಓದುಗನ ದೃಷ್ಟಿಕೋನದಿಂದಲೂ ಕೂಡ ಆತನ ಗಮನ ಬೇರೆಡೆಗೆ ಹರಿಯದಿರಲು ಈ ರೀತಿ ಬರೆದಿದ್ದೇನೆ ಹೊರತು ಭೂಪಟದ ಬಗ್ಗೆಯಾಗಲಿ ಮತ್ತು ಆ ವ್ಯಕ್ತಿಯ ಬಗೆಗಾಗಲಿ ಮತ್ತು ಬರೆವಣಿಗೆ ದೃಷ್ಟಿಯಿಂದಾಗಲಿ ನನಗೆ ಯಾವುದೇ ಅಗೌರವವಿಲ್ಲ..ಮತ್ತು ಇದೊಂದು ಹೊಸ ರೀತಿಯ ಪ್ರಯೋಗವಷ್ಟೆ...

ಮತ್ತು ಮುಖ್ಯವಾಗಿ ನಾನು ಯಾರನ್ನು ಹೀಯಾಳಿಸಲು ಹೀಗೆ ಬರೆದಿಲ್ಲ...ಆದರೂ ನಿಮ್ಮ ಪ್ರತಿಕ್ರಿಯೆಯನ್ನು ಪ್ರಾಮಾಣಿಕವಾಗಿ ಸ್ವೀಕರಿಸುತ್ತೇನೆ..

ಹೀಗೆ ಬರುತ್ತಿರಿ...ನಿಮ್ಮ ಸೂಕ್ಷವಾದ ಪರಿಶೀಲನೆ ನನಗಿಷ್ಟವಾಯಿತು...

ಧನ್ಯವಾದಗಳು.

shivu.k said...

ಟಿ.ಜಿ.ಶ್ರೀನಿಧಿ,

ಥ್ಯಾಂಕ್ಸ್...

shivu.k said...

ಸಂದೀಪ್ ಕಾಮತ್,

ಭೂಪಟ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ರಾಕೇಶ್ ಹೊಳ್ಳ ಸರ್,

ನನ್ನ ಬ್ಲಾಗಿಗೆ ಸ್ವಾಗತ...ಭೂಪಟಗಳನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್...

ನನ್ನ ಇನ್ನಿತರ ಲೇಖನಗಳನ್ನು ಬಿಡುವು ಮಾಡಿಕೊಂಡು ನೋಡಿ ಖುಷಿಯಾಗಬಹುದು..

ಹೀಗೆ ಬರುತ್ತಿರಿ..ಧನ್ಯವಾದಗಳು...

shivu.k said...

ಅಜಿತ್,

ಭೂಪಟ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ನೀವು ಹೇಳಿದಂತೆ ನನಗೆ ಮದುವೆ ಸೀಸನ್ ಬಂದ್ರೆ ಎಲ್ಲಾದಕ್ಕೂ [ಟೋಪಿ, ಭೂಪಟ, ಇನ್ನಿತರ ಲೇಖನಗಳು]ಸಮೃದ್ದಿಯೇ...ಆದ್ರೆ ಬರೆಯೋದಿಕ್ಕೆ ಇನ್ನಿತರ ಕೆಲಸಗಳಿಗೆ ಸಮಯವೇ ಸಿಗೋಲ್ಲ..
ಆದ್ರೂ ಮಾಡುವ ಎಲ್ಲಾ ಕೆಲಸಗಳು ಖುಷಿ ಕೊಡುತ್ತವೆ...
ಹೀಗೆ ಬರುತ್ತಿರಿ...

ಸಾಗರದಾಚೆಯ ಇಂಚರ said...

ಶಿವೂ ಸರ್,
ಅಂತೂ ಎಲ್ಲ ಭೂಪಟ ಸಿಗ್ತಾ ಇದೆ, ನಿಮ್ಮ ಆಸಕ್ತಿಗೆ ಅಭಿನಂದನೆಗಳು.
ಹೀಗೆ ರಸಮಯ ವಿಶೇಷ ತಿಳಿಸುತ್ತಿರಿ

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮೆಲ್ಲರ ಪ್ರೋತ್ಸಾಹವೇ ನನಗೆ ಇನ್ನಷ್ಟು ಭೂಪಟ ಹುಡುಕಲು ಟಾನಿಕ್. ಹೀಗೆ ಬರುತ್ತಿರಿ...ಮತ್ತಷ್ಟು ವೈವಿಧ್ಯಮಯವಾದುದನ್ನು ಬ್ಲಾಗಿಗೆ ಕೊಡಲು ಪ್ರಯತ್ನಿಸುತ್ತಿರುತ್ತೇನೆ...

ಧನ್ಯವಾದಗಳು.

ಮುತ್ತುಮಣಿ said...

ಇದೇನು ಮತ್ತೆ ಎಂದುಕೊಂಡೆ, ಆದರೆ ಇದೊಂಥರ ಎವರ್ ಗ್ರೀನ್, ಎಷ್ಟು ನೋಡಿದರೂ ಬೇಜಾರಾಗುವುದಿಲ್ಲ...

shivu.k said...

ಮುತ್ತುಮಣಿ,

ಭೂಪಟ ಚಿತ್ರ-ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಮತ್ತೆ ನೀವು ನನ್ನ ಬ್ಲಾಗಿಗೆ ಅಪರೂಪಕ್ಕೆ ಬಂದಿದ್ದೀರಿ...ಸ್ವಾಗತ...ಹೀಗೆ ಬರುತ್ತಿರಿ....

ಧನ್ಯವಾದಗಳು..

Ittigecement said...

ಶಿವು ಸರ್....

ಈ ಥರಹ ತಲೆ ಕೂದಲು ಉದುರುವವರಿಗೆ ಹ್ರದಯಘಾತ ಆಗುತ್ತದಂತೆ...
ಇತ್ತೀಚೆಗಿನ ಸ್ಟಡಿಯೊಂದು ಹೇಳುತ್ತಿದೆಯಂತೆ...
ಇದನ್ನು ಇಂಟರ್ ನೆಟ್ಟಿನಲ್ಲಿ ಹುಡುಕಿದರೆ ಸಿಗಬಹುದು...

ಈ ಫೋಟೊಗಳು ನಿಮ್ಮ ಪರಿಶ್ರಮ, ಶ್ರದ್ಧೆಯನ್ನು ಹೇಳುತ್ತಿವೆ...
ನಿಮ್ಮ ಸಂಗಡ ನಾನೂ ಸ್ವಲ್ಪ ತಿರುಗಾಟ ಮಾಡಿದ್ದರಿಂದ
ಅದರ ಅನುಭವ ನನಗಾಗಿದೆ...

ಇನ್ನಷ್ಟು ಭೂಪಟಗಳು ಬರಲಿ...

ಅಭಿನಂದನೆಗಳು....

ಮಲ್ಲಿಕಾರ್ಜುನ.ಡಿ.ಜಿ. said...

ಒಳ್ಳೆ ಬಸುರಿ ಬಯಕೆಯಂತೆ ಮಾವಿನಕಾಯಿ ಬೆನ್ನತ್ತಿದಾರಲ್ಲ ಅಂದುಕೊಳ್ಳುವಷ್ಟರಲ್ಲಿ ಗ್ರೆನೆಡ್ ನಂತಹ ಗ್ರೆನೆಡಾ ದ್ವೀಪವನ್ನೇ ಹಿಡಿದಿದ್ದೀರ! ಇದೊಂಥರಾ ಇಂಡಿಯಾದಿಂದ ವೆಸ್ಟ್ ಇಂಡೀಸ್ ಗೆ ಪಯಣ! ಕೊಲಂಬಸ್ ಕಂಡುಹಿಡಿದದ್ದೇ ಒಂದು ತರಹವಾದರೆ, ಶಿವು ಕಂಡುಕೊಂಡು ನಮಗೆ ತೋರಿಸುವುದೇ ಮತ್ತೊಂದು ತರಹ. Simly marvelous.

Keshav.Kulkarni said...

ವಾವ್! ಬಕ್ಕತಲೆ ಮಹಾತ್ಮೆ!!

shivu.k said...

ಪ್ರಕಾಶ್ ಸರ್,

ಭೂಪಟಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...
ಮತ್ತೆ ನಿಮ್ಮ ಅಭಿಪ್ರಾಯವನ್ನು ನಾನು ಪ್ರಾಮಾಣಿಕವಾಗಿ ಒಪ್ಪಿದರೂ ನಮ್ಮ ssy ಋಷಿ ಪ್ರಭಾಕರ್ ಗುರೂಜಿಯವರನ್ನು ನೀವು ನೋಡಿದ್ದೀರಿ..ಅವರ ವಯಸ್ಸು ೬೦. ಅವರು ಪೂರ್ತಿ ಬಾಲ್ಡಿಯಾಗಿದ್ದಾರೆ. ಆದರೆ ಅವರು ಹೃದಯಘಾತ ಮಾತ್ರವಲ್ಲ ಎಲ್ಲಾ ರೋಗಗಳನ್ನು ದಾಟಿ ಬಂದಿದ್ದಾರೆ..ಮತ್ತೊಬ್ಬ ಗುರುಜಿ ಇದ್ದಾರೆ ಆಶ್ರಮದಲ್ಲಿ ಅವರ ವಯಸ್ಸು ೮೦ ದಾಟಿದೆ ಮತ್ತು ಪೂರ್ತಿ ಬಾಲ್ಡಿಯಾಗಿದೆ. ಅವರಿಗೆ ಯಾವ ರೋಗವೂ ಇಲ್ಲ ಹೃದಯಾಘಾತವಂತೂ ಇಲ್ಲವೇ ಇಲ್ಲ...ಬಹುಶಃ ಸರ್ವೆ ಮಾಡಿರುವವರಿಗೆ ಇವೆಲ್ಲಾ ಗೊತ್ತಿಲ್ಲವೆನಿಸುತ್ತದೆ...ನಮ್ಮ ಕಾಯಾಕಲ್ಪ, ಪ್ರಾಣಾಯಾಮ, ಧ್ಯಾನ, ನಿಯಮಿತ ಆಹಾರ ಇಷ್ಟು ಸಾಕು ಬಾಲ್ಡಿ ತಲೆಯಿರಲಿ ಇಲ್ಲದಿರಲಿ ಯಾವ ರೋಗವೂ ನಮ್ಮ ಬಳಿ ಸುಳಿಯುವುದಿಲ್ಲವೆಂದು ನನ್ನ ಅಭಿಪ್ರಾಯ...

ನಿಮ್ಮ ಸಲಹೆಗೆ ಧನ್ಯವಾದಗಳು

shivu.k said...

ಕುಲಕರ್ಣಿ ಸರ್, ಥ್ಯಾಂಕ್ಸ್...

shivu.k said...

ಮಲ್ಲಿಕಾರ್ಜುನ್,

ನನಗೆ ಭೂಪಟವೊಂದೇ ಅಲ್ಲ...ನಾನು ಯಾವ ವಿಷಯದ ಹಿಂದೆ ಬಿದ್ದರೂ ಅದು ಬಸುರಿ ಬಯಕೆಯಂತೆ ಆವರಿಸಿಕೊಳ್ಳುತ್ತದೆ...ಅದು ಸಿಗುವವರೆಗೂ ನಾನು ಬಿಡುವುದಿಲ್ಲ...ಸಿಕ್ಕಾಗ ಆಗುವ ಖುಷಿಯೇ ಬೇರೆ. ಅದಕ್ಕಾಗಿಯೆ ಇವೆಲ್ಲಾ ತುಡಿತ.

ಧನ್ಯವಾದಗಳು

sunaath said...

ಶಿವು,
ನಿಮ್ಮ ರೂಪದರ್ಶಿಗಳಿಗಾಗಿ ನಿಮ್ಮ ಹುಡುಕಾಟ, ತಡಕಾಟ, ಮಿಡುಕಾಟ ಇವೇ ಒಂದು ಸಾಹಸದ ಕತೆಯಾಗಿವೆ. ನಿಮಗೆ ಸ್ವಾರಸ್ಯಕರವಾದ ಇನ್ನೂ ಸಾವಿರ ತಲೆಗಳು ಸಿಗಲಿ ಎಂದು ಹಾರೈಸುತ್ತೇನೆ.

Umesh Balikai said...

ಆಹಾ! ಶಿವು ಸರ್, ಈ ಎಲ್ಲ ಭೂಪಟಗಳನ್ನು ಪುಸ್ತಕ ರೂಪಕ್ಕೆ ಇಳಿಸಿದರೆ ಹೇಗೆ!? ಮಕ್ಕಳಿಗೆ ವಿಶ್ವದ ಎಲ್ಲ ದೇಶಗಳ ಭೂಪಟಗಳ ಪರಿಚಯ ಮಾಡಿಸಿದ ಹಾಗೆ ಆಗುತ್ತದೆ. ಹಾಗೂ, ಹೊಸ ಭೂಪಟಗಳನ್ನು ಕಂಡು ಹಿಡಿಯಲು ಪ್ರೇರೇಪಿಸಿದಂತಾಗುತ್ತದೆ. :)

ಅಂತರ್ವಾಣಿ said...

ಸಕ್ಕತ್ ಕಷ್ಟ ಪಟ್ಟಿದ್ದೀರ ವೆಸ್ಟ್ ಇಂಡೀಸ್ಗೆ ಹೋಗೋಕೆ..
:)

shivu.k said...

ಸುನಾಥ್ ಸರ್,

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು

shivu.k said...

ಜಯಶಂಕರ್,

ಧನ್ಯವಾದಗಳು...ಹೀಗೆ ಬರುತ್ತಿರಿ...

shivu.k said...

ಉಮೇಶ್ ಸರ್,

ನಿಮ್ಮ ಅಭಿಪ್ರಾಯ ಸರಿಯೆನಿಸುತ್ತೆ...ನನ್ನದು ಕೂಡ...ಯಾರಾದರೂ ಪ್ರಕಾಶಕರೂ ಮುಂದೆ ಬಂದರೆ ನಾನು ಕೂಡ ಇನ್ನಷ್ಟು ಭೂಪಟಗಳ ಹಿಂದೆ ಬೀಳಬಹುದು...

ಭೂಪಟ ಮೆಚ್ಚಿದ್ದಕ್ಕೆ ಧನ್ಯವಾದಗಳು.

Lakshmi Shashidhar Chaitanya said...

:-) :-)

ವಿನುತ said...

ಅಬ್ಬಾ! ನಿಮ್ಮ ಆಸಕ್ತಿಯೇ! ಅದನ್ನು ಕಾರ್ಯಗತಗೊಳಿಸಲು ನಿಮ್ಮ ಪರಿಶ್ರಮವೇ! ಮೂಕವಿಸ್ಮಿತಗೊಳಿಸಿತು.

shivu.k said...

ಲಕ್ಷ್ಮಿ ಮೇಡಮ್,

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರಿ ಸ್ವಾಗತ..

ಥ್ಯಾಂಕ್ಸ್...

shivu.k said...

ವಿನುತಾ,

ಭೂಪಟಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....

Guruprasad said...

ಶಿವೂ ಸರ್,,
ತುಂಬ ಇಷ್ಟ ಆಯಿತು ನಿಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಭೂಪಟದ ಬಾಲ್ಡಿ ತಲೆಗಳು,,, ಅದಕ್ಕೆ ಹೊಂದುವಂತ ಬರಹ ಕೂಡ.... ಇನ್ನು ಎಷ್ಟು ಬಾಲ್ಡಿ ತಲೆಗಳು ನಿಮ್ಮ ಕ್ಯಾಮೆರಾ ಕಣ್ಣಿಗೆ ಹಾಗು ನಿಮ್ಮ ಕಣ್ಣಿಗೆ ಬೀಳುತ್ತೋ ಗೊತ್ತಿಲ್ಲ,,, ಅಂತು ನಮಗೆ ಎಲ್ಲ ದೇಶದ ಭೂಪಟ ಗಳ ಪರಿಚಯ ಆಗ್ತಾ ಇದೆ....
ಹೀಗೆ ಮುಂದುವರಿಸಿ.........
ಗುರು

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಸಕತ್ತಾಗಿವೆ ಮ್ಯಾಪುಗಳು ..

shivu.k said...

ಗುರು,

ಬಾಲ್ಡಿ ತಲೆಗಳ ಹುಡುಕಾಟ ನಿರಂತರ....ಸದ್ಯ ಮದುವೆ ಮನೆಯಲ್ಲಿ ಅದರ ಬೇಟೆ ಸಾಗಿದೆ...ನಂತರ ಇನ್ನೆಲ್ಲೋ...ಮತ್ತಷ್ಟು ಮುಂದಿನ ಬಾರಿ...

ಬರಹ ಇಷ್ಟಪಟ್ಟಿದ್ದಕ್ಕೆ

ಧನ್ಯವಾದಗಳು...

shivu.k said...

ಶಿವಪ್ರಕಾಶ್,

ಧನ್ಯವಾದಗಳು...

ರೂpaश्री said...

ಶಿವು ಅವರೆ,
ವಾಹ್ ಸೂಪರಾಗಿದೆ.. ಮ್ಯಾಪುಗಳನ್ನು ಕಲಿಯಲು ಹೊಸ ಮೋಜಿನ ವಿಧಾನ!! ನಾನು ಜಿಯಾಗ್ರಫಿಯಲ್ಲಿ ಬಹಳ ವೀಕು:((
ನಿಮ್ಮ ಬ್ಲಾಗ್ ನಲ್ಲಿರೋ ಎಲ್ಲಾ ಭೂಪಟಗಳನ್ನ ಈಗ ನೋಡಿದೆ, ಕಲಿತೆ:)) ಹೀಗೆ ಮುಂದುವರಿಸಿ...


ರೂpaश्री

ಬಿಸಿಲ ಹನಿ said...

ಶಿವು,
ಕೊನೆಗೂ ಆ ಬಾಲ್ಡಿ ತಲೆಯನ್ನು ಸೆರೆಹಿಡಿದು ಭೂಪಟವೊಂದಕ್ಕೆ ಮ್ಯಾಚ್ ಮಾಡಿ ನಮಗೂ ತೋರಿಸಿಬಿಟ್ಟಿರಲ್ಲ ತುಂಬಾ ಥ್ಯಾಂಕ್ಸ್.ನಿಮ್ಮ ಈ ಆಸಕ್ತಿ ಹಾಗೂ ಶ್ರದ್ಧೆಯನ್ನೇ ನಾನು ತುಂಬಾ ಮೆಚ್ಚಿಕೊಳ್ಳುವದು. ಅದಕೆಂದೇ ನಿಮ್ಮಂತವರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ.

shivu.k said...

ರೂಪಶ್ರೀ ಮೇಡಮ್,

ಭೂಪಟ ಮತ್ತು ಲೇಖನದ ಜೊತೆಗೆ ಹಳೆಯ ಭೂಪಟಗಳನ್ನು ನೋಡಿದ್ದಕ್ಕೆ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ಉದಯ್ ಸರ್,

ಭೂಪಟದ ಹಿಂದೆ ಬೀಳುವುದರಲ್ಲಿ ಅದೇನೋ ಒಂಥರ ಮಜವಿದೆ. ಮತ್ತಷ್ಟು ಭೂಪಟಗಳ ಹಿಂದೆ ಬಿದ್ದಿದ್ದೇನೆ ಸಾಧ್ಯವಾದಷ್ಟು ಬೇಗ ಬ್ಲಾಗಿಗೆ ಹಾಕುತ್ತೇನೆ....

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

ದೀಪಸ್ಮಿತಾ said...

ಶಿವು ಸರ್, ನಿಮ್ಮ ಹವ್ಯಾಸ ತಮಾಷೆಯಾಗಿದೆ. ಸ್ವಲ್ಪ ವರ್ಷದಲ್ಲಿ ನನ್ನ ತಲೆಯ ಹಿಂದೆಯೂ ಬರುತ್ತೀರೋ ಎಂದು ಭಯ ಆಗ್ತಾ ಇದೆ.

Naveen ಹಳ್ಳಿ ಹುಡುಗ said...

anna super..

shivu.k said...

ನವೀನ್,

ಥ್ಯಾಂಕ್ಸ್....ಹೀಗೆ ಬರುತ್ತಿರಿ...

shivu.k said...

ಕುಲದೀಪ್ ಸರ್,

ನನ್ನ ಹವ್ಯಾಸ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮ್ಮ ತಲೆ ವಿಭಿನ್ನವೆನಿಸಿದರೆ ಖಂಡಿತ ಹಿಂದೆ ಬೀಳುವುದು ಖಚಿತ...

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.

Roopa said...

ಚೆನ್ನಾಗಿದೆ . ಒಳ್ಲೆ ಭೂಪಟಗಳ ಅನ್ವೇಷಣೆ ನಡೆಸಿದ್ದೀರ.
ಓದುತ್ತಿದ್ದಂತೆ ನಮ್ಮೆಜಮನರ ತಲೆ ನೆನಪಿಗೆ ಬಂತು ಇವತ್ತು ನೋಡ್ತೇನೆ ಯಾವ ಭೂಪಟ ಅದು ಅಂತ

Prashanth Arasikere said...

en shivu papa baldi avranna bidode illa anthira,sadya navu bachav agidvi hagenadru adre full wig hakkondu odadthivi nimma munde..munnechharaki krama tagobekalva..ok..shivu hige mundu variyali nimma bandli payana..

shivu.k said...

ರೂಪ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ.

ನಿಮ್ಮನೆಯವರ ತಲೆ ಯಾವ ಭೂಪಟಕ್ಕೆ ಹೋಲುತ್ತೆ ಆಂತ., ಮತ್ತೆ ಹೊಸತೆನಿಸಿದರೆ ನನಗೆ ಹೇಳಿ..

ನನ್ನ ಭೂಪಟ ಮತ್ತು ಲೇಖನಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರಶಾಂತ್,

ಬಾಲ್ಡಿ ತಲೆಯವರನ್ನು ಹೇಗೆ ಬಿಡಲಿ...ಅದೊಂದು ಹೊಸ ತೆವಲು ಆಂಟಿಕೊಂಡುಬಿಟ್ಟಿದೆ. ಇನ್ಯಾವುದಾದರೂ ಹೊಸ ತೆವಲು ಬೆನ್ನು ಬೀಳುವವರೆಗೂ ಇದು ಮುಂದುವರಿಯುತ್ತೆ...

ನಿಮ್ಮ ಸಂಭಂದಿ ಮದುವೆಯಲ್ಲಿ ಎರಡು ಭೂಪಟಗಳು ಸಿಕ್ಕಿವೆ...ಅವುಗಳನ್ನು ಮುಂದೆಂದಾದರೂ ಹಾಕುತ್ತೇನೆ...ಮತ್ತೆ ಸಂತೋಷ್-ವಿದ್ಯಾ ಮನೆಗೆ ಬಂದಿದ್ದರು ಮದುವೆ ಫೋಟೋ ತುಂಬಾ ಇಷ್ಟಪಟ್ಟರು...

ಮತ್ತೆ ನೀವು ವಿಗ್ ಹಾಕಿದರೆ ಆಶಾಡ ಕಾಲದಲ್ಲಿ ಗಾಳಿಬಂದಾಗ ಹಾರಿಹೋಗುತ್ತಲ್ಲ ಆಗ ನನ್ನ ಕ್ಯಾಮೆರಾ ಹಾಜರಿರುತ್ತೆ...ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಜಲನಯನ said...

ಟೋಪಿಗಳು, ಈಗ ಟೋಪಿ ಹಾಕಿದ್ದೇಕೆ?? ಅಂತ ಟೋಪಿ ಎತ್ತಿ ಕೆಳಗಡೆ ಭೂಪಟಗಳೇ ಅಡಗಿವೆ ಅಂತ ..ಅದೂ ವೈವಿಧ್ಯಮಯ, ವಿಶಿಷ್ಟ ಬಾಂಡ್ಲಿಗಳಮೇಲೆ...ಹಹಹ
ನಿಮ್ಮ ಪ್ರಯತ್ನಗಳು ಬಹು ವೈವಿಧ್ಯಮಯ ಹಾಗೂ ಗುಣಮಟ್ಟದ್ದಾಗಿವೆ, ಶುಭವಾಗಲಿ.
ಶಿವು ಹಾಗೇ..ನಮ್ಮ ಕ್ಷೇತ್ರದ ಕಡೆಗೂ ಒಂದ್ಸೊಲ್ಪ ಕಣ್ಣ್ಹಾಕಿ ಸ್ವಾಮಿ..ಅಂದರೆ..ಜಲ, ಜಲಚರ, ಜಲಸಸ್ಯ ಇತ್ಯಾದಿ..ನಿಮ್ಮ ಕ್ಯಾಮರಾ ಕಣ್ಣಿಗೆ ವಿಶೇಷ ಗುಣ ಇದೆ..ನನಗೂ ಆಸೆ ಅಂತಹ ಸಂಗ್ರಹ ಮಾದ್ಬೇಕು ಅಂತ... ಸರೀನಾ....

shivu.k said...

ಜಲನಯನ ಸರ್,

ಟೋಪಿ, ಭೂಪಟ..ಇತ್ಯಾದಿಗಳನ್ನು ಮೆಚ್ಚಿದ್ದೀರಿ...ಧನ್ಯವಾದಗಳು...ಆದರೂ ಎಷ್ಟು ದಿನ ಅಂತ ಇವುಗಳ ಹಿಂದೆ ಬೀಳಲು ಸಾಧ್ಯ ? ನಿಮಗೆ ಬೇಸರವಾಗುವ ಮೊದಲು ನನಗೆ ಬೇಸರವಾಗಬೇಕು. ನಂತರ ಹೊಸದರೆಡೆಗೆ ತುಡಿತ ಪ್ರಾರಂಭವಾಗಬೇಕು ಅಲ್ಲವೇ..ಕಲಿಕೆಯೆನ್ನುವುದು ನಿರಂತರ ಹರಿಯುವ ನೀರಿನಂತೆ...ನಾನು ಹೊಸದನ್ನು ಹುಡುಕುತ್ತಿದ್ದೆ. ನಿಮ್ಮ ಆಹ್ವಾನದಂತೆ ನನಗೂ ನಿಮ್ಮ ಕ್ಷೇತ್ರಕ್ಕೆ ಬರಲು ಅಲ್ಲಿ ಹೊಸ ಹೊಸ ಫೋಟೋ..ಇತ್ಯಾದಿ ಪ್ರಯೋಗದಲ್ಲಿ ಭಾಗಿಯಾಗಿಯಾಗಲು ನನಗೂ ಇಷ್ಟ. ಆದ್ರೆ ನೀವು ಕುವೈಟ್ ನಾನು ಬೆಂಗಳೂರು..ಹೇಗೆ ಸಾಧ್ಯ ಸಾರ್...?

ಬ್ಲಾಗಿಗೆ ಬಂದು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.

SSK said...

ಶಿವೂ ಅವರೇ, ನಾನು ಲೇಖನ ಓದಿದ ನಂತರ ಅದೇ ಸಮಯದಲ್ಲಿ ನನ್ನ ಅಭಿಪ್ರಾಯ ತಿಳಿಸಲಾಗಲಿಲ್ಲ! ಇದಕ್ಕೆ ಕಾರಣ ಇದೆ!! ನಾನು ಮಲೇಶಿಯಾ ಪ್ರವಾಸ ಹೋಗಿದ್ದಾಗ ಅಲ್ಲಿ ಒಂದು ದ್ವೀಪದಲ್ಲಿ ನಾವು ಪ್ರವಾಸದಲ್ಲಿದ್ದಾಗ, ಅಲ್ಲಿನ ಛಾಯಾಗ್ರಾಹಕನೊಬ್ಬ ಹೀಗೆ.....ಹೋಗುವ ಬರುವ ಪ್ರತಿಯೊಬ್ಬ ಪ್ರವಾಸಿಗರನ್ನು ಅವರಿಗೆ ತಿಳಿಯದ ಹಾಗೆ ಫೋಟೋ ತೆಗೆಯುತ್ತಿದ್ದ! ನಾನು ಮತ್ತು ಸ್ನೇಹಿತೆಯ ಮಗಳು ಅವನನ್ನು ಅಕಸ್ಮಾತ್ತಾಗಿ ಗಮನಿಸಿ ನಾವಿಬ್ಬರೂ ಹೀಗೆ ಮಾತಾಡಿಕೊಂಡೆವು..., ಅವನೂ ಸಹ ಪ್ರವಾಸಿಗನಿರಬೇಕು ಮತ್ತು ಅವನಿದ್ದ ಈ ಗುಂಪಿನಲ್ಲಿರುವ ಪ್ರತಿಯೊಬ್ಬರ ಫೋಟೋ ಅವನ ನೆನಪಿಗೆ ಬೇಕಿದ್ದಿರಬೇಕು ಅದಕ್ಕೆ ಹೀಗೆ ಎಲ್ಲರ ಫೋಟೋ ತೆಗೆಯುತ್ತಿದ್ದಾನೆ ಎಂದು!! ನಮಗೆ ಅಲ್ಲಿ ಸುತ್ತಾಡಲು/ಬೋಟಿಂಗ್/ನೋಟ-ಆಟ ಇವಕ್ಕೆಲ್ಲಾ ಒಂದು ಗಂಟೆಯ ಸಮಯ ಕೊಟ್ಟಿದ್ದರು!
ಒಂದು ಗಂಟೆಯ ನಂತರ ಹೊರಟ ಜಾಗದಿಂದ ಮತ್ತೆ ಅಲ್ಲಿಗೆ ಬಂದು ನೋಡಿದರೆ, ಏನಾಶ್ಚರ್ಯಾ!!! ಪಿಂಗಾಣಿ ತಟ್ಟೆಯ ರೀತಿ ಇರುವ ಫೈಬರ್/ಪ್ಲಾಸ್ಟಿಕ್ ನ ಚಿಕ್ಕ ಚಿಕ್ಕ ತಟ್ಟೆಗಳಲ್ಲಿ ಪ್ರತಿಯೊಬ್ಬರದೂ ಭಾವ ಚಿತ್ರಗಳನ್ನು ಬೇರೆ ಬೇರೆ ತಟ್ಟೆ ಗಳಲ್ಲಿ ಅಂಟಿಸಿ ಮಾರಾಟಕ್ಕೆ ಇಟ್ಟಿದ್ದಾನೆ!!!!! ಸುಂದರ ಚಿತ್ತಾರವಿರುವ ಪ್ಲೇಟಿನಲ್ಲಿ ಅದೇ ಆಕಾರಕ್ಕೆ ಅಂಟಿಸಿದ್ದ ಫೋಟೋವನ್ನು ನಿಮಗೆ ಇಲ್ಲಿ ಫೋಟೋ ಸಮೇತ ಕಳಿಸೋಣವೆಂದು ಪ್ರಯತ್ನಿಸಿದೆ ಆದರೆ ಕಾರಣಾಂತರಗಳಿಂದ ಅದು ಸಾಧವಾಗಲಿಲ್ಲ. ತಡವಾಗಿ ಅಭಿಪ್ರಾಯ ತಿಳಿಸುತ್ತಿರುವುದಕ್ಕೆ ಕ್ಷಮೆ ಕೋರುತ್ತೇನೆ....!
ನಿಮ್ಮ ಸಾಹಸ, ಲೇಖನ ಮತ್ತು ಚಿತ್ರಗಳು ಅದ್ಭುತವಾಗಿವೆ, ಮತ್ತಷ್ಟು ಚಿತ್ರಗಳನ್ನು ನೋಡಲು ಕಾಯುತ್ತಿದ್ದೇವೆ!

SSK

ಧರಿತ್ರಿ said...

ಶಿವಣ್ಣ..

ಮರಳಿ ಭೂಪಟಗಳನ್ನು ನೋಡಿ ಖುಷಿಯಾಯಿತು. ನಿಮ್ಮ ಭೂಪಟಗಳನ್ನು ನೋಡಿ ನೋಡಿ ಮುಂದಿನ ತಲೆಮಾರುಗಳು 'ಭೂಪಟ'ಕ್ಕಾಗಿ ತಲೆ ಹುಡುಕದಿದ್ರೆ ಸಾಕು ಶಿವಣ್ಣ. ಅಭಿನಂದನೆಗಳು ಸುಂದರ ಬರಹಕ್ಕೆ..ಅದಕ್ಕಿಂತ ಹೆಚ್ಚಾಗಿ ಕ್ರಿಯಾಶೀಲತೆ, ಆಸಕ್ತಿಗೆ..
ಧನ್ಯವಾದಗಳೊಂದಿಗೆ
ಧರಿತ್ರಿ

ಮಾವೆಂಸ said...

ಪ್ರತಿಭಾನ್ವಿತರೇ,
ನಮಸ್ಕಾರ.
ನಮ್ಮ ಬ್ಲಾಗ್‌ನಲ್ಲಿ ಸುತ್ತಾಡಿದ್ದು ಮನಸ್ಸಿಗೆ ಆಹ್ಲಾದವನ್ನು ತಂದಿತು ಅಂದರೆ ಉತ್ಪ್ರೇಕ್ಷೆಯೇನಿಲ್ಲ. ನಿಜಕ್ಕೂ ಬಹುಪಾಲು ಫೋಟೋಗಳಿಗೆ ಬರಹಗಳ ಅಡಿಟಿಪ್ಪಣಿಯೇ ಬೇಕಿಲ್ಲ. ಉದಾಹರಣೆಗೆ, ಬೊಕ್ಕ ತಲೆ ಭೂಪಟ ಚಿತ್ರಸರಣಿಯೇ ಒಂದು ಅದ್ಭುತ ಲೇಖನ! ಎಂತೇ ಇರಲಿ, ನಮ್ಮ ಆ ತಲೆಗೆ ಸಲಾಂ. ಜೊಂಪೆ ಕೂದಲು ಹೋಗಿ ಭೂಪಟ ಬರದಿರಲಿ!!

shivu.k said...

SSK ಸರ್,

ನಿಮ್ಮ ಮಲೇಶಿಯ ಅನುಭವ ತುಂಬಾ ಚೆನ್ನಾಗಿದೆ...ಅಲ್ಲಿನ ಛಾಯಾಗ್ರಾಹಕನ ಚುರುಕುತನ, ಮಾರ್ಕೆಟಿಂಗ್ ಇತ್ಯಾದಿಗಳನ್ನು ಮೆಚ್ಚಬೇಕೆನಿಸುತ್ತದೆ...
ತಡವಾಗಿ ಬಂದರೂ ಪರ್ವಾಗಿಲ್ಲ. ಭೂಪಟಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu.k said...

ಧರಿತ್ರಿ,

ಭೂಪಟಗಳ ಫೋಟೋ ಮತ್ತು ಬರಹವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..ಹೀಗೆ ಬರುತ್ತಿರು...

shivu.k said...

ಮಾವೆಂಸ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಭೂಪಟಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗಿಗೆ ಹೋಗಿದ್ದೆ. ಲೇಖನಗಳೆಲ್ಲಾ ಇಷ್ಟವಾದವು..ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ....ಹೀಗೆ ಬರುತ್ತಿರಿ...
ಧನ್ಯವಾದಗಳು..

ಎಚ್. ಆನಂದರಾಮ ಶಾಸ್ತ್ರೀ said...

ವಾಹ್!
ಅದೇನು ಕಲ್ಪನೆ! ಅದೆಂಥ ಹೋಲಿಕೆ! ಅದ್ಭುತ!
ಛಾಯಾಚಿತ್ರಗ್ರಾಹಕನೊಬ್ಬ ಸಂವೇದನಾಶೀಲ ಮತ್ತು ಹಾಸ್ಯಪ್ರಜ್ಞಾಭರಿತ ಬರಹಗಾರನೂ ಆಗಿದ್ದಾಗ ಎಂಥ ಆಕರ್ಷಕ ಕೊಡುಗೆಗಳು ಸಾರಸ್ವತ ಲೋಕಕ್ಕೆ ದೊರೆಯುತ್ತವೆನ್ನುವುದಕ್ಕೆ ನಿಮ್ಮ ಬ್ಲಾಗ್‌ಗಳ ಚಿತ್ರಬರಹಗಳೇ ಸಾಕ್ಷಿ.
ಅಂದಹಾಗೆ, ನನ್ನ ’ಗುಳಿಗೆ’ ಬ್ಲಾಗ್‌ನ ತಾಜಾ ಮಾಹಿತಿಯನ್ನು ನಿಮ್ಮ ಬ್ಲಾಗ್‌ನಲ್ಲಿ ನೀಡಿರುವುದಕ್ಕಾಗಿ ಧನ್ಯವಾದ.

Unknown said...

Huh... Chennaagide nimma research

Anonymous said...

ನಿಜಕ್ಕೂ ಕಣ್ರೀ! ನಿಮ್ಮನ್ನು ಭೂಗೋಳ ಪಾಠ ಮಾಡಲು ಕಳಿಸಬೇಕು!! ನಿಮ್ಗೆ ಗೌರವ ದಾಕ್ಟರೇಟ್ ಸಿಕ್ಕಿದ್ರೆ ಅಚ್ಚರಿಯೇನಿಲ್ಲ! :-)
ಇನ್ನೂ ಉಳಿದ ದೇಷಗಳ ಭೂಪಟಗಳಿಗೆ ಕಾಯುತ್ತಿರುವೆ......

Godavari said...

ಶಿವೂ ಅವರೇ,
ಅಬ್ಬಾ.. ಎಷ್ಟೆಲ್ಲ ಭೂಪಟಗಳನ್ನು ಒಟ್ಟಿಗೆ ಕಲೆ ಹಾಕಿದ್ದಿರಲ್ಲಾ??ಅದ್ಭುತ!!

ನಾನೂ ಕೇಳಿದ್ದೇನೆ 'ಗೋದಾವರಿ' ಚಲನ ಚಿತ್ರ ಅತ್ತ್ಯುತ್ತಮವಾಗಿ ಮೂಡಿಬಂದಿದೆ ಅಂತ. ಇನ್ನೂ ನೋಡಿಲ್ಲ. ನೀವು ಆ ಬಗ್ಗೆ ಬರೆದ ಮೇಲೆ ನೋಡೋಣ ಎನ್ನಿಸಿತು. ಆ ಲೇಖನಕ್ಕೆ ಎದುರು ನೋಡುತ್ತಿದ್ದೇನೆ..

shivu.k said...

ಆನಂದ್ ಶಾಸ್ತ್ರಿ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಭೂಪಟದ ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...ನಿಮ್ಮ ಪ್ರೋತ್ಸಾಹದ ಮಾತುಗಳು ನನಗೆ ಸ್ಫೂರ್ತಿ ನೀಡುತ್ತಿವೆ....ಮತ್ತಷ್ಟು ಹೊಸತರಲ್ಲಿ ತೊಡಗಿಸಿಕೊಳ್ಳಲು ಮನಸ್ಸಾಗುತ್ತಿದೆ...

ನಿಮ್ಮ ಬ್ಲಾಗಿಗೆ ಹೋಗಿದ್ದೆ. ನಿಮ್ಮ ಲೇಖನಗಳು ಇಷ್ಟವಾಗುತ್ತವೆ...

ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

shivu.k said...

ಪ್ರದೀಪ್,

ಭೂಪಟಗಳನ್ನು ಮತ್ತೊಮ್ಮೆ ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀವು ನನಗೆ ಹೊಸ ಆಸೆ ಹುಟ್ಟಿಸಬೇಡಿ...ಈಗಿರುವ ತೆವಲುಗಳನ್ನು ಫೂರೈಸಿಕೊಳ್ಳಲು ಸಮಯ ಸಾಲುತ್ತಿಲ್ಲ...
ಮುಂದೆ ನಿಮ್ಮ ನಿರೀಕ್ಷೆಯಂತೆ ಇನ್ನಷ್ಟು ಭೂಪಟಗಳು ಬ್ಲಾಗಿಗೆ ಬರುತ್ತವೆ...

ಧನ್ಯವಾದಗಳು.

shivu.k said...

ಗೋದಾವರಿ ಮೇಡಮ್,

ಭೂಪಟದ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಮುಂದಿನ ಬಾರಿ ಇನ್ನಷ್ಟು ಭೂಪಟಗಳನ್ನು ನೋಡಲು ಬನ್ನಿ.

ಮತ್ತೆ ನನ್ನ ಮೆಚ್ಚಿನ ಸಿನಿಮಾಗಳಲ್ಲಿ ತೆಲುಗಿನ "ಗೋದಾವರಿ" ಕೂಡ ಒಂದು. ತುಂಬಾ ಸರಳವಾಗಿ ವಿಭಿನ್ನವಾದ ನಿರೂಪಣೆಯೊಂದಿಗೆ ಹೊಸರೀತಿಯ ಕತೆಯನ್ನು ಹೊಂದಿರುವ ಆ ಸಿನಿಮಾ ಬಗ್ಗೆ ಬರೆಯಬೇಕೆನ್ನುವ ಆಸೆಯಿದೆ. ಮುಂದೆ ಖಂಡಿತ ಬರೆಯುತ್ತೇನೆ...

ಧನ್ಯವಾದಗಳು

Pramod P T said...

he he shivu..
ellelli huDkiro ee bhoopatagalanna..

munduvarsi..:)

pramod pt

shivu.k said...

ಪ್ರಮೋದ್,

ಭೂಪಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

ಧನ್ಯವಾದಗಳು

Anonymous said...

ಶಿವು,

ಈಗ ನಾನಿರೋ ಮಾಲ್ಡೀವ್ಸ್ ನ್ನು ಹೇಗೆ ತೋರಿಸ್ತೀರಿ ಅಂತ ಕಾಯ್ತಿದೀನಿ..:)

shivu.k said...

ರಂಜಿತ್ ಸರ್,

ನೀವು ಹೇಳಿದ ಕೂಡಲೇ ಮಾಲ್ಡೀವ್ಸ್ ದ್ವೀಪಗಳ ನಕಾಶೆ ನೋಡಿದೆ. ಬಲು ಕಷ್ಟಸಾಧ್ಯ ಅನ್ನಿಸುತ್ತೆ. ಬಹುಶಃ ತಲೆಯಲ್ಲಾ ಗಾಯವಾಗಿ ನಂತರ ವಾಸಿಯಾದಮೇಲೆ ಆಗುವ ಬಾಲ್ಡಿ ತಲೆಯ ಕಲ್ಪನೆ ಬರುತ್ತಿದೆ. ನೋಡೋಣ ಕಲ್ಪನೆಯ ಜೊತೆಗೆ ನನ್ನ ಕ್ಯಾಮೆರಾ, ನಿಮ್ಮ ಬಯಕೆಯಿದೆ. ಇವುಗಳೆಲ್ಲದರ ಜೊತೆಗೆ ನನ್ನ ಹುಡುಕಾಟವಿದೆ...

ಧನ್ಯವಾದಗಳು.

ಅನಿಲ್ ರಮೇಶ್ said...

ಶಿವು,
ಇನ್ನಷ್ಟು ಭೂಪಟಗಳು ನಿಮ್ಮ ಕ್ಯಾಮೆರಾ ಕಣ್ಣಿಗೆ ಕಾಣಲಿ. ಅದನ್ನು ನೋಡುವ ಭಾಗ್ಯ ನಮ್ಮದಾಗಲಿ.

-ಅನಿಲ್

shivu.k said...

ಅನಿಲ್,

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.

Prabhuraj Moogi said...

ಭೂಪಟಗಳು ಬಹಳ ಚೆನ್ನಾಗಿವೆ, ಮದುವೆ ಮನೇಲೂ ಭೂಪತ ಕಂಡಿತಾ... ನಿಮ್ಮ ಸಂದರ್ಶನದಲ್ಲಿ ಹೇಳಿದಂತೆ, ಭೂಪಟಗಳನ್ನು ನೋಡಿ ನೋಡಿ ಇದು ಇದೇ ಭೂಪಟ ಅಂತನ್ನುವ ಕಲೆ ಚೆನ್ನಗಿ ಬೆಳೆಸಿಕೊಂಡಿದ್ದೀರಿ... ಮುಂದುವರೆಯಲು.. ಮುಂದೊಂದು ದಿನ ನಿಮ್ಮ ಭೂಪತಗಳನ್ನೆಲ್ಲ ಸೇರಿಸಿ ವರ್ಡ ಮ್ಯಾಪ ಮಾಡುವಂತಾಗಲಿ

NiTiN Muttige said...

ಶಿವೂ ಅವರೇ, ನಿಮ್ಮ ತಾಳ್ಮೆಗೆ,ಅದನ್ನು ವಸ್ತುವನ್ನಾಗಿಸುವ ನಿಮ್ಮ ಶೈಲಿಗೆ ಮೆಚ್ಚಲೆ ಬೇಕು...:)
ಎಲ್ಲೆ ಹೋದರು ಭೂಪಟ ಹುಡುಕುವ ನಿಮ್ಮ ಶೈಲಿ ಹೀಗೆ ಮುಂದುವರೆಯಲಿ... ನಿಮ್ಮಿಂದ ಅನೇಕ ದೇಶಗಳ ಪರಿಚತಾವಾಯ್ತು.!! ೧೦ ನೇ ತರಗತಿ ಆದಮೇಲೆ ೭ ವರ್ಷಗಳ ನಂತರ ವಿಶ್ವ ಭೂಪಟ ನೋಡಿದೆ!!!

shivu.k said...

ಪ್ರಭು,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...ನಿಮ್ಮ ಆಶಯದಂತೆ ಪ್ರಪಂಚದ ಎಲ್ಲಾ ನಕಾಶೆಗಳ ಭೂಪಟಗಳನ್ನು ಸೆರೆಯಿಡಿಯುವ ಆಸೆ ನನಗೂ ಇದೆ....ಪ್ರಯತ್ನ ನನ್ನದು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.

shivu.k said...

ನಿತಿನ್,

ಭೂಪಟಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಏಳು ವರ್ಷಗಳ ನಂತರ ಭೂಪಟ ನೋಡಿದ್ದೇನೆಂದಿರಿ...ಇದೇ ಮಾತನ್ನು ಅನೇಕ ಬ್ಲಾಗ್ ಗೆಳೆಯರು ಹೇಳಿದ್ದಾರೆ. ಈ ವಿಚಾರದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಸಾರ್ಥಕ ಅಂತ ಈಗ ಅನ್ನಿಸುತ್ತದೆ..ಹೀಗೆ ಬರುತ್ತಿರಿ..

ಧನ್ಯವಾದಗಳು.

Vidya S D said...

hi Shivu,

Soooooper sir neevu.. Excellent Idea!! inmele yaavde Bakka tale nodidru nimma Bhoopatagale nenapagutte.. nimagoo & intha tarle Idea'na exellent'aagi kotta nimma friend'gu Hats off..!! nimma ee anveshane heege munduvareyali!! :P

shivu.k said...

ವಿದ್ಯಾ ಮೇಡಮ್,

ವಿದ್ಯಾ ಮೇಡಮ್,
ನನ್ನ ಬ್ಲಾಗಿಗೆ ನಿಮಗೆ ಸ್ವಾಗತ. ನನ್ನ ಭೂಪಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ...ಮತ್ತೆ ನಿಮ್ಮ ಬ್ಲಾಗಿನಲ್ಲಿ ಆಡಿಗೆಯ ಮಹಾ ಪೂರವೇ ಇದೆ...ನಾನು ಬಿಡುವು ಮಾಡಿಕೊಂಡು ಎಲ್ಲಾ ನೋಡುತ್ತೇನೆ...ಧನ್ಯವಾದಗಳು..

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಭೂಗೋಳ ತರಗತಿ ಸಕತ್ತಾಗಿ ಮುಂದುವರೆಯುತ್ತಿದೆ... ಹೀಗೆ ಮುಂದುವರೆಯಲಿ.