" ಮೊಬೈಲಿನ ಮೇಲೆ ಅದರ ಮಾಡೆಲ್ ನಂಬರ್ ಯಾಕಿರೊಲ್ಲ.."
" ನಿನ್ ತಲೆ ನಿನ್ನ್ ಮುಖದ ಮೇಲೆ ನೀನು ಸುಬ್ಬ ಅಂತ ಹೆಸರಿದೆಯ...? ಇಲ್ಲವಲ್ಲ...ಹಾಗೇ ಅದರ ಮೇಲು ಇರಲ್ಲ..."
" ಆದ್ರೆ ಇದೇ ಮಾಡಲ್ ನಂಬರಿನ ಮೊಬೈಲ್ ಇವರತ್ರ ಇದೆ. ಹಾಗೇ ನಿಮ್ಮ ಅಪ್ಪನತ್ರನೂ ಇದೆ. ಇವೆರಡರು ನೋಡಲಿಕ್ಕೆ ಒಂದೇ ತರಹ ಇದೆ. ಅದ್ರೂ ಅದು ನಿಮ್ಮಪ್ಪನದು.....ಇದು ಇವರದು ಇದು ಹೇಗೆ ಗೊತ್ತಾಗುತ್ತೆ...."
"ಇವನು ಸಿಕ್ಕಾಪಟ್ಟೆ ತರಲೆ....ಆದ್ರೂ ಇವನು ಫೂರ್ಣ ಪ್ರಜ್ಞ. ನಮ್ಮ ಕ್ಲಾಸಲ್ಲಿ ಇವನ ತರಾನೇ ಇದ್ದಾನೆ. ನೋಡಲಿಕ್ಕೆ ಇವನೇ....ಅದ್ರೆ ಅವನು ಫೂರ್ಣಪ್ರಜ್ಞನಲ್ಲ. ಅವನು ಅಪ್ರಮೇಯ.....ಈಗ ಗೊತ್ತಾಯ್ತಲ್ಲ..ಮಾಡೆಲ್ ಒಂದೇ. ಅದ್ರೆ ತಂದೆ ತಾಯಿ ಬೇರೆ."
------------- ------------------------
" ಶೆಟಲ್ ಕಾಕ್ ಹೋದ್ರೆ ಹೊಸದು ತರಬಹುದು ಜೀವ ಹೋದ್ರೆ ತರಲಿಕ್ಕೆ ಆಗುತ್ತಾ..." ಬ್ಯಾಟ್‌ಮಿಂಟನ್ ಆಡುತ್ತಿದ್ದಾಗ ರಸ್ತೆಯಲ್ಲಿ ವೇಗವಾಗಿ ಬಂದ ಟೂವೀಲರ್ ನೋಡಿ ಎರಡನೇ ತರಗತಿಯ ಆಲೋಕ್ ಕೇಳಿದ...
" ಆಯ್ಯೋ....ಹೋಗೋ....ನಾನಿಲ್ಲ ಅಂದ್ರೆ ನನಗೆ ಇನ್ನೋಬ್ಬ ತಮ್ಮ ಇದ್ದಾನೆ.." ಗಣೇಶ ಪ್ರತಿಕ್ರಿಯಿಸಿದ್ದ....
ಇವರಿಬ್ಬರ ಮಾತನ್ನು ದೂರದಿಂದ ಗಮನಿಸಿದ್ದ ನಾನು ಆ ಕ್ಷಣ ದಂಗಾಗಿದ್ದೆ...
ಹಾಗೆ ಹೇಳಿದ ಗಣೇಶನ ಜೀವನದ ಮುಖ್ಯ ಗುರಿ ರೇಡಿಯೋ ಜಾಕಿ ಆಗುವುದಂತೆ.
-------------- ----------------------
" ಅಂಕಲ್ ನೀವು ನಿಮ್ಮ ಗಾಡಿ ಅಲ್ಲಿ ನಿಲ್ಲಿಸುವಂತಿಲ್ಲ.."
"ಯಾಕೋ ಪ್ರೇರಿತ್"
" ಅಂಕಲ್ ನಾನು ಸೈಕಲ್ ನಮ್ಮ ಓಣಿಯಲ್ಲಿ ಕಲಿತಿದ್ದೀನಲ್ವ...? ನಮ್ಮ ಮನೆಯಿಂದ ಓಣಿಯ ಗೇಟಿನವರೆಗೆ ಹೋಗಿ ಅಲ್ಲಿ ವಾಪಸ್ ಯೂ ಟರ್ನ್ ತೆಗೆದುಕೊಳ್ಳಲು ನಿಮ್ಮ ಗಾಡಿ ನನಗೆ ಆಡ್ಡವಾಗುತ್ತೆ. ಅದಕ್ಕೆ ಇಲ್ಲಿ ನಿಲ್ಲಿಸಿ" ಅವನು ವಯಸ್ಸು ನಾಲ್ಕು. ಆದ್ರೆ ಅವನಿಂದ ಬಂದ ಆರ್ಡರನ್ನು ನಾನು ಪ್ರತೀದಿನ ಪಾಲಿಸುತ್ತಿದ್ದೇನೆ.
---------- ---------------------- -------------
"ಯಾಕೇ ಇಷ್ಟು ತಡವಾಗಿ ಬಂದೆ ?" ಮೈಸೂರಿಂದ ಬೇಸಿಗೆ ರಜೆಗಾಗಿ ಬಂದಿದ್ದ ಅಮಿತ್ ಕೇಳಿದ್ದ. ಅವನು ೯ನೇ ತರಗತಿ.
"ಬಸ್ ವೆರಿ ಸ್ಲೋ. ಅದಕ್ಕೆ ಲೇಟಾಗಿಬಿಡ್ತು ಕಣೋ..." ಆಗ ತಾನೆ ಬಂದ ತೇಜಸ್ವಿನಿ ಉತ್ತರ. ಅವಳು ಮೊದಲ ಪಿ.ಯು.ಸಿ.
"ಮತ್ತೆ ನಿಮ್ಮ ಕಡೇ ಹೇಗೇ ಸಮಾಚಾರ ?"
"ನೋ ಪ್ರಾಬ್ಲಂ ಕಣೋ...ಚಲ್ತಾ ಹೈ...ಅದ್ಸರಿ ಅಲ್ಲಿ ವೆದರ್ ಹೇಗೇ ಕೂಲ್ ಆಗಿದೆಯಾ...?"
"ಪರ್ವಾಗಿಲ್ಲ.......ಆದ್ರೆ ನಿಮ್ಮ ಕಡೆಯಷ್ಟು ತಂಪಿಲ್ಲ ನೋಡು.....?"
"ಹೌದು ನಿಮ್ಮ ರೆಸಲ್ಟ್ ಯಾವಾಗ ಬರುತ್ತೆ?"
"ನಮ್ಮದು ಹದಿನೈದನೇ ತಾರೀಖು. ನಿಮ್ಮ ಪರೀಕ್ಷೆ ಪಲಿತಾಂಶ ಯಾವಾಗ ?"
"ನಮ್ಮದು ದಿಸ್ ಮಂಥ್ ಟೆಂತ್ ಗೆ ಬರುತ್ತೆ."
ಅವರಿಬ್ಬರ ನಡುವೆ ಮಾತು ಸಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಪ್ರಶಾಂತ್ ಬಂದ. ಅವನು ೭ನೇ ತರಗತಿ.
" ಹೇ ಪೌಡ್ರು......ಎಲ್ಲಿ ಹೋಗಿದ್ಯೋ..." ಅವನನ್ನು ನೋಡಿ ತೇಜಸ್ವಿನಿ ಕೇಳಿದಳು.
"ಮನೆಗೆ ಹೋಗಿದ್ದೆ ಕಣೆ ಸೆಂಟು....". ಅವಳ ಮಾತಿಗೆ ಪ್ರಶಾಂತನ ಉತ್ತರ.
"ಅರೆರೆ ಇದೇನೇ, ನೀನು ಇವನನ್ನು ಪೌಡ್ರು ಅಂತೀಯಾ..?" ಅಮಿತ್ ಕೇಳಿದ ಆಶ್ಚರ್ಯದಿಂದ.
"ಹೂ ಕಣೋ ಇವನು ಹುಡುಗ ಅಲ್ವಾ ಅದಕ್ಕೆ ಅವನ ಹೆಸರು ಪೌಡ್ರೂ...ಅಂತೀವಿ..".
"ಅಂಗಾದ್ರೆ ಹುಡುಗಿಯರಿಗೆ ಸೆಂಟ್ ಅನ್ನಬೇಕಾ...."
"ಹೌದು ನನಗಿವಳು ಪೌಡ್ರು ಅಂದ್ರೆ ನಾನು ಇವಳನ್ನು ಸೆಂಟು ಅಂತೀನಿ.."...ಪ್ರಶಾಂತ್ ತಟ್ಟನೆ ಹೇಳಿದ್ದ.
ಅಲ್ಲೇ ನಿಂತು ಇವರ ಮಾತು ಕೇಳಿಸಿಕೊಳ್ಳುತ್ತಿದ್ದ ನಾನು ಅವರ ಬಳಿ ಹೋದೆ.
ಅಮಿತ್ ಬಂದು ಒಂದು ವಾರವಾಗಿತ್ತು. ನನಗಾಗಲೇ ಗೆಳೆಯನಾಗಿಬಿಟ್ಟಿದ್ದ. ಇವರ ಮಾತುಗಳನ್ನೆಲ್ಲಾ ಕೇಳಿ ಅವನಿಗೆ ಸಿಟ್ಟು ಬಂದಿರಬೇಕು. ನಾನು ಬರುವುದನ್ನೇ ಕಾಯುತ್ತಿದ್ದವನು,
"ನೋಡಿ ಅಂಕಲ್ ಇವರಿಬ್ಬರ ಮಾತುಗಳು...! ಥೂ....ಇವರಿಬ್ಬರದೂ ಅದೇನು ಭಾಷೇನೋ.....ಇವಳು ಪೌಡ್ರು ಅಂತಾಳೆ..ಅವನು ಸೆಂಟು ಅಂತಾನೆ. ಮತ್ತೆ ಇವಳ ಮಾತಿನಲ್ಲಿ ಅದೇಷ್ಟು ಇಂಗ್ಲೀಷ್ ಪದಗಳು ಇವೆ ನೋಡಿ....ನಿಮ್ಮ ಬೆಂಗಳೂರಿನವರೇ ಹೀಗೆ! ಎಲ್ಲಾ ಭಾಷೆಯನ್ನು ಕನ್ನಡಕ್ಕೆ ಮಿಕ್ಸ್ ಮಾಡಿ ಮಾತಾಡೋದು....ಇಲ್ಲಿ ನೋಡಿ..ನಮ್ಮ ಮೈಸೂರಿನವರದೂ ಅಚ್ಚ ಕನ್ನಡ, ಮಂಗಳೂರಿನವರದು ಸ್ವಚ್ಚ ಕನ್ನಡ, ಅದ್ರೆ ನಿಮ್ಮ ಬೆಂಗಳೂರಿನವರದು ಕಚ್ಚಾ ಅಥವ ಮಿಕ್ಸ್ ಕನ್ನಡ ಕಣ್ರೀ...."
ಅಮಿತ್ ಮಾತನ್ನು ನಾನು ಒಪ್ಪಿಲೇ ಬೇಕಾಗಿತ್ತು...
-------------- -------------- --------------
ನಮ್ಮ ಓಣೀಯ ಮಕ್ಕಳಿಗೆ ನನ್ನ ಸ್ಕೂಟಿಯ ಮೇಲೆ ಕೂತುಕೊಳ್ಳಬೇಡಿ ಅಂದಿದ್ದೆ. ಅದರ ಸೆಂಟರ್ ಸ್ಟ್ಯಾಂಡ್ ಸರಿಯಾಗಿಲ್ಲದ ಕಾರಣ ಕೂತರೆ ಬಿದ್ದುಹೋಗುತ್ತದೆಂಬ ಭಯ ನನಗೆ. ಆದರೂ ನಾನಿಲ್ಲದಾಗ ಅವರು ಕೂತುಬಿಡುತ್ತಿದ್ದರು....ಅದನ್ನು ಬದಲಾಯಿಸಲು ಪ್ರಯತ್ನಿಸಿದರೂ ನನ್ನ ಗಾಡಿಯ ಮಾಡೆಲ್ ಈಗ ಬರುತ್ತಿಲ್ಲವಾದ್ದರಿಂದ ಅದರ ಸ್ಪೇರ್ ಪಾರ್ಟುಗಳು ಸಿಗುತ್ತಿರಲಿಲ್ಲವಾದ್ದರಿಂದ ನಾನು ಅದನ್ನೇ ಮೇನೇಜ್ ಮಾಡಬೇಕಿತ್ತು. ಇನ್ನೂ ಸೈಡ್ ಸ್ಟ್ಯಾಂಡ್ ಮೊದಲೇ ಹಾಳಾಗಿತ್ತು...ಅದರ ಕತೆಯೂ ಹೀಗೆ ಆಗಿತ್ತು.
ನಮ್ಮ ಹುಡುಗರಿಗೆ ಇದೆಲ್ಲಾ ಕತೆ ವಿವರಿಸಿದಾಗ ಅಲ್ಲೇ ಇದ್ದ ಅಮಿತ್ "ಬನ್ನಿ ಅಂಕಲ್ ನಾನು ಕೊಡಿಸುತ್ತೀನಿ" ಅಂದ.
ನನಗೆ ಸಿಗದಿರುವುದು ಮೈಸೂರಿನವನಾದ ಇವನಿಗೆ ಹೇಗೆ ಸಾಧ್ಯ ಅಂದುಕೊಂಡರೂ ಕುತೂಹಲಕ್ಕಾಗಿ ಅವನ ಜೊತೆ ಹೊರಟೆ. ಅಲ್ಲಿಗೆ ಹೋಗುವ ಮೊದಲು ನನ್ನ ಗಾಡಿಯ ಮಾಡೆಲ್ ತಯಾರಾದ ವರ್ಷ ಎಲ್ಲವನ್ನು ನನ್ನ ಬಳಿ ಕೇಳಿ ತಿಳಿದುಕೊಂಡಿದ್ದ. ಅಧಿಕೃತ ಸ್ಪೇರ್ ಪಾರ್ಟ್ ಷೋ ರೂಂಗೆ ಹೋದೆವು.
"ಸರ್ ಎರಡು ಸಾವಿರದ ಮೂರರಲ್ಲಿ ತಯಾರಾದ ಸ್ಕೂಟಿಯ ಸೆಂಟರ್ ಸ್ಟ್ಯಾಂಡ್ ಕೊಡಿ.!"
"ಅದು ಇಲ್ಲಪ್ಪ.."
" ಯಾಕಿಲ್ಲ..."
"ಆ ಮಾಡೆಲ್ ಬರುತ್ತಿಲ್ಲವಾದ್ದರಿಂದ ಅದರ ಸ್ಪೇರ್ಸ್ ಕೂಡ ಬರುತ್ತಿಲ್ಲ..."
"ಹಾಗಾದರೆ ಈ ಸ್ಕೂಟಿಯನ್ನೇನು ಮಾಡಬೇಕು ?"
"ಬೇಕಾದ್ರೆ ನೀವು ಬೇರೆ ಲೋಕಲ್ ಆಟೋ ಸ್ಪೇರ್ಸ್ ಅಂಗಡಿಯಲ್ಲಿ ಪ್ರಯತ್ನಿಸಬಹುದು.!"
"ನಿಮ್ಮ ಕಂಪನಿಯ ಗಾಡಿ ನೀವು ಮಾರಿದ ಮೇಲೆ ಅದು ರಸ್ತೆ ಮೇಲೆ ಓಡಾಡುವವರೆಗೂ ಅದರ ಸ್ಪೇರ್ಸ್ ತಯಾರಿಸುತ್ತಿರಬೇಕು ಮತ್ತು ಮಾರ್ರಬೇಕು ಅಲ್ವಾ ಸರ್ ?"
"ಹೌದಪ್ಪ ನಿನ್ನ ಮಾತು ಒಪ್ಪುತ್ತೀನಿ..ಅದ್ರೆ ಕಂಪನಿಯವರಿಗೆ ಮೇಲಾಧಿಕಾರಿಗಳಿಗೆ ಇದು ಗೊತ್ತಾಗಲ್ವಲ್ಲ..."
"ಅವರಿಗೆ ಗೊತ್ತಾಗಲಿಲ್ಲವೆಂದ ಮೇಲೆ ಅಂಗಡಿ ಯಾಕೆ ಇಟ್ಟುಕೊಂಡಿದ್ದೀರಿ...ಬಾಗಿಲು ಮುಚ್ಚಿಬಿಟ್ಟು ಮನೆಗೆ ಹೋಗಿ ಮಲಕ್ಕೊಳ್ಳಿ. !"
ಅಮಿತ್‌ನ ಪಟ್ ಪಟ್ ಪಟಾಕಿಯಂತ ಮಾತಿಗೆ ಅಂಗಡಿಯವನು ಚೆನ್ನಾಗಿ ಬೈಯ್ಯಬಹುದು ಅಂದುಕೊಂಡಿದ್ದೆ. ಅದರೆ ಅವನು ಈ ಹುಡುಗನ ಪಟಾಕಿಯಂತ ಮಾತಿಗೆ ಮಂಕಾಗಿದ್ದ. ಅಮಿತ್ ಮಾತ್ರವಲ್ಲ ನಮ್ಮ ಓಣಿಯ ಎಲ್ಲಾ ಮಕ್ಕಳು ಹೀಗೇನೇ. ಪಟ್ ಪಟ್ ಪಟಾಕಿಯ ಹಾಗೆ. ಯಾವಾಗಲು ಹೀಗೆ ಸಿಡಿಯುತ್ತಿರುತ್ತಾರೆ.[ನಮ್ಮ ಓಣಿಯ ಮಕ್ಕಳು ಮಾತ್ರವಲ್ಲ ನಿಮ್ಮ ಓಣಿಯ ಮಕ್ಕಳು ಹೀಗೇನೇ. ನೀವು ಗಮನಿಸಬೇಕಷ್ಟೆ.]
ಹೊಸಮನೆಗೆ ಬಂದು ಮೂರು ತಿಂಗಳಾಗಿತ್ತು. ಕೆಲಸದ ಒತ್ತಡದಿಂದ ಆಯಾಸ ಪರಿಹರಿಸಿಕೊಳ್ಳಲು ಸಂಜೆ ಒಂದು ಗಂಟೆ ಈ ಮಕ್ಕಳ ಜೊತೆ ಬ್ಯಾಟ್‌ಮಿಂಟನ್, ಕ್ರಿಕೆಟ್, ಮಾತುಕತೆಗಳು ಅಂತ ಕಳೆಯುತ್ತಿದ್ದೇನೆ. ಈಗ ಬೇಸಿಗೆ ರಜೆ. ಅದರ ಪರಿಣಾಮವೇ ಈ ಲೇಖನ.. ಬರೆದಷ್ಟು ದೊಡ್ಡದಾಗುತ್ತಾ ಹೋದ ಈ ಲೇಖನ ನಿಮಗೆಲ್ಲಾ ಓದಲು ಬೋರಾಗಬಾರದೆಂದು ಸಾಕಷ್ಟು ಟ್ರಿಂ ಮಾಡಿದ್ದೇನೆ. ಓದಿ ಖುಷಿಯಾದರೆ ನನಗೂ ಖುಷಿ...
ಲೇಖನ
ಶಿವು.ಕೆ ARPS.