Wednesday, February 18, 2009

ಕೊನೇದು ಹೆಲಿಕಾಪ್ಟರು...ತವರುಮನೆ ಕಡೀಕೆ ತಿರಿಕತ್ತು.......


ನಾನು ಈ ಬಾರಿ ಏರ್ ಷೋಗೆ ಹೊರಗಿನ ವಾತವರಣದಲ್ಲಿ ಹೇಗಿರುತ್ತದೆ ಅಂತ ನೋಡಲು ಹೋಗಿದ್ದೆ......ಹೊರಗೂ ಕೂಡ ಸಿಕ್ಕಾಪಟ್ಟೆ ಜನ. ಮರಗಳ ಮೇಲೇರಿರುವವರು, ದೊಡ್ಡ ದೊಡ್ಡ ಜಾಹೀರಾತು ಪಲಕಗಳ ತುದಿಯಲ್ಲಿ, ಕೆಲವರು ಅಲ್ಲೇ ಕೆರೆಯ ದಂಡೆಯ ಮೇಲೆ ನಿಂತಿದ್ದರು. ಬಹುಶಃ ಇವರೆಲ್ಲಾ ಸುತ್ತಮುತ್ತಲ ಹಳ್ಳಿಜನರಿರಬಹುದು....ನಾನು ಇವರ ಮದ್ಯ ನನ್ನ ಕ್ಯಾಮೆರಾ ಹಿಡಿದು ನಿಂತಾಗ ಬಿಸಿಲು ನೆತ್ತಿ ಸುಡುತ್ತಿತ್ತು....

ಏರ್ ಷೋ ಜಾಹಿರಾತು ಪಲಕದ ಮೇಲೆ, ಹಿಂಬಾಗ ಕುಳಿತ ಜನ.
ಇಲ್ಲೋಬ್ಬ ಕುಳಿತಿರುವ ಪರಿ ನೋಡಿದರೆ ವಿಮಾನಗಳಿಗೆ ಸವಾಲೆಸೆಯುವಂತಿದೆಯಲ್ಲ !!
ಜನಮರುಳೋ....ಏರ್ ಷೋ ಮರುಳೋ....
ವಿಮಾನಗಳ ಹಾರಾಟಗಳ ಮದ್ಯ ಈ ಮಕ್ಕಳ ಐಸ್ ಕ್ರೀಂ ಚಪ್ಪರಿಕೆ!!
ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು.. ಈತನಿಗೆ ಹಸುರೆಲೆಗಳೇ ಟೋಪಿ !!
ನನಗೂ ಫೋಟೊ ತೆಗೆಯುವ ಕೆಲಸವಾಗಬೇಕಿದ್ದರಿಂದ...ಅವರ ಜೊತೆ ಸೇರಿಕೊಂಡು ನಿದಾನವಾಗಿ ಫೋಟೊ ತೆಗೆಯುತ್ತಿದ್ದರು....ಕಿವಿಗಳು ಮಾತ್ರ ತೆರೆದುಕೊಂಡಿದ್ದವು......ಆಗ ಕೇಳಿ ಬಂದ ಕೆಲವು ಮಾತುಗಳನ್ನು ಹಾಗೆ ನಿಮಗಿಲ್ಲಿ ಹೇಳುತ್ತಿದ್ದೇನೆ.....


"ಲೇ ಮಗಾ ಇದೇನ್ಲಾ ಒಂದು ಮೇಲಕ್ಕೆ ಹೋಗಲಿಲ್ಲ...."


"ಅಯ್ಯೋ ಇರಣ್ಣ, ಮೇಲಿರದು ಕೆಳಕ್ಕಿಳಿದ್ರೆ ಇನ್ನೊಂದು ಮೇಲಕ್ಕೆ ಹಾರೋದು......"


ಇಬ್ಬರು ಹೆಂಗಸರು ಇವರ ಜೊತೆ ಮಾತಿಗೆ ಸೇರಿಕೊಂಡರು...


"ಅಲ್ಲ ಕಣಣ, ಈ ಇಮಾನಗಳೆಲ್ಲಾ ನಮ್ಮನೆ ಹತ್ರನೇ ಬತ್ತವಲ್ಲ.....ಇಲ್ಲೇನು ನೋಡೋದು ಇಶೇಷ....? "


"ನಿಂಗೊತ್ತಿಲ್ಲ ಕಣ್ ಸಿಮ್ಕಿರಮ್ಮಿ, ಇಲ್ಲಿ ಈ ವಿಮಾನಗಳೆಲ್ಲಾ ಸರ್ಕಸ್‌ನಲ್ಲಿ ಲಾಗ ಹಾಕಿದಂತೆ ಪಲ್ಟಿ ಹೊಡೀತವಂತೆ.... ಅ ಪಲ್ಟಿ ನೋಡಾಕೆ ಈ ಪಾಟಿ ಜನ ಬಂದವ್ರೇ.... ಮತ್ತೆ ದುಡ್ಡಿರೋರು.....೫೦೦ ಸಾವಿರ ಅಂತ ಟಿಕಿಟ್ಟು, ಪಾಸ್, ತೊಗೊಂಡು ನೋಡೋಕೆ ಕಾರಲ್ಲಿ ಮೋಟರ ಬೈಕಲ್ಲಿ ಒಳಕ್ಕೆ ಹೋಗವರೆ ಗೊತ್ತಾ ?"


"ಹೇ ನಿನೊಂದು.....ಆಕಾಶದಲ್ಲಿ ಹಾರೋದು ನೋಡಾಕೆ ದುಡ್ಡು ಯಾಕೆ ಕೊಡಬೇಕು....ಅವಕ್ಕೆ ಬುದ್ದಿಯಿಲ್ಲ....ಇಲ್ಲಿಂದಾನೆ ವೈನಾಗಿ ಕಾಣ್ತವೇ.....".


"ಹೌದ್ ಕಣಕ್ಕ, ಒಳಿಗಿಂತ ಇಲ್ಲೇ ಪಲ್ಟಿ.....ಲಾಗಾಟಿ......ಚೆನ್ನಾಗಿ ಕಾಣ್ತವೆ.....ಜೊತೆಗಾತಿ ಮಾತು..."


ಆಷ್ಟರಲ್ಲಿ ಸುಖೋಯ್ ೩೫ ಯುದ್ಧವಿಮಾನ ಮೇಲೇರಿತು...ಇವರು ಸುಮ್ಮನಾದದ್ದು ಕಂಡು......" ಈ ವಿಮಾನ ಒಂದು ಸಲ ಮೇಲೇರಿ ಈ ರೀತಿ ಪ್ರದರ್ಶನ ಮಾಡಬೇಕು ಅಂದರೆ ಅದಕ್ಕೆ ಒಂದುವರೆ ಲಕ್ಷ ರೂಪಾಯಿಯಷ್ಟು ಪೇಟ್ರೋಲ್, ಇನ್ನಿತರ ಖರ್ಚು ಬರುತ್ತೆ...ನೋಡಿ....." ಮಾತಿನ ಕಿಡಿ ಅಂಟಿಸಿದೆ....


"ಹೌದಾ ಸರ, ಆಷ್ಟೊಂದು ರೊಕ್ಕ ಆಯ್ತದ........."


"ಹೂ ಕಣ್ಲ, ಅದಕ್ಕೆ ಹಾಕಾದು ಪ್ಯೂರ್ ಪೆಟ್ರೋಲ್ ಹಾಕದು.....ನಿನ್ನಂಗೆ ಆಟೋಗೆ ಸೀಮೀಣ್ಣಿ ಮಿಕ್ಸ್ ಮಾಡಿ ಓಡಿಸ್ತೀಯಲ್ಲ...ಅಂಗಲ್ಲ...".


"ಹೇ ಸುಮ್ಕಿರಣ್ಣೋ ಇಲ್ಲೆಲ್ಲಾ ಮಾನ ಮರ್ವಾದಿ ತೆಗೆಬೇಡ...."


ಮಾತಿನ ಮದ್ಯವೇ ಐಸ್ ಕ್ರೀಮ್, ಚುರುಮುರಿ,, ಇತ್ಯಾದಿಗಳ ವ್ಯಾಪಾರ ನಡೆದಿತು....ಮೇಲೆ ಮಿರಾಜ್ ೨೯, ಸಣ್ಣ ಸಣ್ಣ ವಿಮಾನಗಳು, ನಮ್ಮದೇ ದೇಶದ ತೇಜಸ್ ಯುದ್ದವಿಮಾನ, ಅಮೇರಿಕಾದ ಎಫ್ ೧೮, ಸ್ವೀಡನ್ನಿನ ವಿಮಾನಗಳು ಒಂದು ಸುತ್ತು ಪ್ರದರ್ಶನ ಮಾಡಿದವು.....


ಕೊನೆಯಲ್ಲಿ ಆರು ಸೂರ್ಯಕಿರಣ ವಿಮಾನಗಳು ಒಂದೊಂದಾಗಿ ಮೇಲೇರಿ...ಒಟ್ಟಾಗಿ ಸೇರಿ ತಮ್ಮ ಪ್ರದರ್ಶನ ಪ್ರಾರಂಬಿಸಿದವು.....


"ಈ ಆರು ವಿಮಾನಗಳು ಅವುಗಳ ಅಂಡಿಂದ ಹೊಗೆ ಬಿಡೋದು ನೋಡಿದ್ರೆ..".......ನಾಚಿಕೆ ಪಟ್ಟುಕೊಂಡಳು...


"ನೋಡಿದ್ರೆ ಏನು ನೋಡು ಎಷ್ಟು ವೈನಾಗಿ ಬಿಡ್ತಿವೆ...."


"ಅಲ್ಲ ಕಣಕ್ಕ, ಈ ಹೊಗೆ ನೋಡಿ..ನಮ್ಮ ಮಾವ ಅವಾಗವಾಗ ಅಂಡೆತ್ತಿ ಹೂಸು ಬಿಡೋದು ಗ್ಯಾಪಕ ಬಂತು..." ಇಬ್ಬರು ಮಾತು ಕೇಳಿ ಎಲ್ಲರೂ ಗೊಳ್ಳನೆ ನಕ್ಕರು.....


"ಅಲ್ನೋಡಣ್ಣ ಬಣ್ಣ ಬಣ್ಣದ್ ಹೊಗೆ !"



"ಹೂ ಕಣಮ್ಮಿ ಅವು ಕೆಂಪು ಬಿಳಿ ಹಸಿರು...ಬಣ್ಣದ್ದು. ನಮ್ಮ ದೇಶದ ಬಾವುಟ ಕಲರ್......".


ಇವರ ಮಾತು ಮುಗಿಯುವಷ್ಟರಲ್ಲಿ ಸೂರ್ಯಕಿರಣಗಳು ಲ್ಯಾಂಡ್ ಆಗಿ ನವಿಲು ಗರಿಯ ಕಣ್ಣಿನಂತೆ ಬಣ್ಣ ಹೊಂದಿದ ನಾಲ್ಕು ಹೆಲಿಕಾಪ್ಟರುಗಳು ಮೇಲೇರಿದವು.....


"ಇವೆಂತವಣ್ಣಾ ಇಂಗವೆ? ....".


"ಇವನ್ನು ಹೆಲಿಕಾಪ್ಟರು ಅಂತಾರೆ, ಇಮಾನಗಳಿಗಿಂತ ಸ್ಲೋ ಕಣಮ್ಮಿ,"


"ಹೌದ್ ಕಣಣ, ಆ ಒಂದುವರೆ ಲಕ್ಷ ರೊಕ್ಕ ನುಂಗುತ್ತಾ ಅದು ಕಣ್‌ಬಿಟ್ ಕಣ್ ತೆರೆಯೋದ್ರಲ್ಲಿ ಮಾಯಾವಾಗಿ ಬಿಡುತ್ತಲ್ಲಣ, ಇದೇ ಪರ್ವಾಗಿಲ್ಲ...ನಮ್ಮ ಹಳ್ಳಿ ಐಕಳ ಹಾಗೆ ಸುಲೋ..... "


"ಹೂ ಕಣಕ್ಕ ನೀನೇಳೋದು ದಿಟವೇ.....".


ಮೇಲೆ ಒಟ್ಟಿಗೆ ಹಾರಾಡುತ್ತಿದ್ದ ನಾಲ್ಕರಲ್ಲಿ ಒಂದು ಹೆಲಿಕಾಪ್ಟರ್ ಬೇರೆ ದಿಕ್ಕಿಗೆ ತಿರುಗಿತು....


"ಇದೇನಕ್ಕಾ ಅದೊಂದು ಅತ್ಲಾಗೊಯ್ತು...?"


"ಅಯ್ಯೋ ಸುಮ್ಕಿರಮ್ಮಿ, ನಿನ್ನ ತರ ಆ ಹೆಲಿಕಾಪ್ಟ್ರು ತವರು ಮನೆಕಡೀಗೆ ಹೋಗಿರಬೇಕು..."


ಕಳೆದ ಬಾರಿ ಒಂದು ದೊಡ್ಡ ಸಂಸ್ಥೆಗಾಗಿ ಅಲ್ಲಿಗೆ ಹೋಗಿದ್ದಾಗ ಕೆಲವೊಂದು ಅಪರೂಪದ ಫೋಟೊ ತೆಗೆಯುವ ಅವಕಾಶ ದೊರಕಿತ್ತು. ರನ್‌ವೇ ಹತ್ತಿರವೇ ಕುಳಿತು...ನಿಂತೂ.....ಎಲ್ಲಾ ಹೆಲಿಕಾಪ್ಟರ್, ವಿಮಾನಗಳ ಟೇಕಾಫ್......ಲ್ಯಾಂಡಿಂಗ್.....ಮತ್ತು ಎಲ್ಲಾ ವಿಮಾನಗಳನ್ನು ಹತ್ತಿರದಿಂದ ನೋಡುವ ಮುಟ್ಟುವ ಅವಕಾಶ ದೊರಕಿತ್ತು. ಸುಕೋಯ್ ೩೦ ವಿಮಾನದ ಏಣಿಯ ಮೇಲೆ ನಾನು ನಿಂತು ಅದೇ ಪೈಲಟ್ ಕೈಯಿಂದ ನನ್ನ ಫೋಟೊ ತೆಗೆಸಿಕೊಂಡಿದ್ದು ಒಂದು ವಿಶಿಷ್ಟ ಅನುಭವ.


ಆದ್ರೂ ಕೂಡ...ಒಳಗಿನ ಅದ್ದೂರಿ ವಾತಾವರಣ, ಅಲ್ಲಿ ಓಡಾಡುವ ವಿ.ಐ.ಪಿಗಳು ಅವರ ಮಾತು ಕತೆಗಳು ನಡುವಳಿಕೆಗಳಿಗಿಂತ ಹೊರಗಿನ ಹಳ್ಳಿಜನರ ಕುತೂಹಲ, ಮುಗ್ಧತೆ, ಮಾತುಗಳು ನನಗೆ ಅಚ್ಚುಮೆಚ್ಚಾಗಿತ್ತು.


ರಷ್ಯಾ ನಿರ್ಮಿತ ಸುಖೋಯ್ ೩೫ ಹೊಸ ಬಣ್ಣದಲ್ಲಿ...!!



ನಮ್ಮ ಹೆಮ್ಮೆಯ ಯುದ್ದವಿಮಾನ ತೇಜಸ್....೨೦೧೧ರಲ್ಲಿ ನಮ್ಮ ಸೈನ್ಯಕ್ಕೆ ಸೇರುತ್ತದೆ.....


ಮೀರಜ್ ೨೯ ಯುದ್ದವಿಮಾನಗಳು ಈಗ ತಾನೆ ಟೇಕಾಫ್ ಆಗುತ್ತಿವೆ.....



ಅದೋ ನೋಡಿ ನಮ್ಮ ಸೂರ್ಯ ಕಿರಣಗಳು ಟೇಕಾಫ್ ಆಗುತ್ತಿವೆ...!!!


ಅವುಗಳ ಅದ್ಬುತ ಪ್ರದರ್ಶನ ಶುರುವಾಯಿತಲ್ಲ...!



ನೀಲಾಕಾಶದಲ್ಲಿ ನಮ್ಮ ತ್ರಿವರ್ಣ ಬಣ್ಣಗಳು...!




ಇದು ನಿಜಕ್ಕೂ ಅದ್ಬುತ ಪಲ್ಟಿ........ಲಾಗಾಟಿಯೇ ಸರಿ...!!



ನಿಶ್ಯಬ್ದವಾದ ಶಾಂತವಾದ ಪಯಣ...!!



ಬಂದವಲ್ಲ ನವಿಲುಗರಿಯ ಬಣ್ಣ ಹೊಂದಿದ ಹೆಲಿಕಾಫ್ಟರುಗಳು!!


ವಿಮಾನಗಳ ಹಾರಾಟ ನೋಡಲು ಅಣ್ಣ ತಂಗಿಗೆ ಕುತೂಹಲ ಹೆಚ್ಚು!!



ಆಗೋಳಮ್ಮಿ ಹೊಡೀತು ನೋಡು ಒಂದು ಪಲ್ಟಿ.....!!
ಪ್ಯಾರಚ್ಯೂಟಿನಿಂದ ಕೆಳಗಿಳಿಯುತ್ತಿರುವ ನಮ್ಮ ಸೈನಿಕ...!!



ಸುಖೋಯ್ ೩೦ ಯುದ್ದ ವಿಮಾನ ಏರುವ ಏಣಿಯಲ್ಲಿ ನಾನು

ಚಿತ್ರ ಮತ್ತು ಲೇಖನ
ಶಿವು.

Thursday, February 12, 2009

ಈ ದೇಹದಿಂದ ದೂರನಾದೆ ಏಕೆ ಆತ್ಮನೇ....ಈ ಸಾವು ನ್ಯಾಯವೇ ?


ಕೂ...........ಚುಕ್‍ಬುಕ್...ಚುಕ್‌ಬುಕ್....ಕೂ..............ತುಂಬಾ ದೂರದಲ್ಲಿ ರೈಲಿನ ಶಬ್ದ ಕೇಳಿಸಿದಾಗ ಪ್ಲಾಟ್‌ಫಾರಂನ ಒಂದು ಮೂಲೆಯಲ್ಲಿ ಅರೆ ನಿದ್ರೆಯಲ್ಲಿದ್ದ ವಾಜಿದ್‌ಗೆ ಎಚ್ಚರವಾಯಿತು..."ಫಾತಿಮಾ... ಫಾತಿಮಾ....ಫಾತಿಮಾ......ಮೂರ್ನಾಲ್ಕು ಸಲ ಅವನು ಕೂಗಿದಾಗ ಯಾರೋ ಕೈಯಿಡಿದಂತಾಯಿತು......ಇದು ಖಂಡಿತ ನನ್ನ ತಂಗಿ ಫಾತಿಮಾ ಕೈಯಲ್ಲ. ಅರೆನಿದ್ರೆ...ಮತ್ತೊಮ್ಮೆ ಕೂಗಿದ..... "ಫಾತಿಮಾ ಇಲ್ಲ. ನಾನು ಗಿಡ್ಡಮ್ಮ ನಿನ್ನ ಗಿಡ್ಡಿ. ಇರು ನಾನೇ ರೈಲು ಹತ್ತಿಸ್ತೀನಿ...ಅಷ್ಟರಲ್ಲಿ ಫಾತಿಮ ಬರಬಹುದು....

ಗಿಡ್ಡಿ ಕೈಯನ್ನು ಒಮ್ಮೆ ಮೆದುವಾಗಿ ಅದುಮಿ ನಕ್ಕ. ಫಾತಿಮ ನನ್ನ ತೋಳನ್ನು ಹಿಡಿದರೆ ಮಗುವೇ ದಾರಿ ತೋರಿದ ಹಾಗೆ....ಗಿಡ್ಡಿ ಕೈ ಹಿಡಿದರೆ ಅಮ್ಮನೇ ಕೈಯಿಡಿದು ಮಗುವಿಗೆ ದಾರಿ ತೋರಿದಂತೆ.

ಗಿಡ್ಡಮ್ಮ ತನ್ನ ಫೋಲಿಯೋ ಪೀಡಿತ ಬಲಗಾಲಿನ ಸಹಾಯಕ್ಕೆ ಇದ್ದ ಊರುಗೋಲನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡು ಕಾಲೆಳೆಯುತ್ತಾ ಆತನ ಕೈಯಿಡಿದುಕೊಂಡು ಫ್ಲಾಟ್‌ಫಾರಂನತ್ತ ನಡೆದಳು.

" ಬಾಲೆ ತಮ್ಮದು ರೈಲಿನಲ್ಲಿ ಏನೂ ಕೆಲಸ ? " ವಾಜಿದ್ ಮಾತು ಪ್ರಾರಂಬಿಸುವುದು ಹೀಗೆ...

"ಸ್ವಾಮಿ ನಾನು ಪ್ರತಿ ಬೋಗಿಯ ನೆಲದ ಕಸವನ್ನು ಗುಡಿಸಿ, ಸ್ವಚ್ಚಮಾಡಿ....ಜನರು ಕೊಡುವ ಚಿಲ್ಲರೆ ಹಣವನ್ನು ಒಟ್ಟು ಕೂಡಿಸಿ ನನ್ನಮ್ಮನಿಗೆ ಗಂಜಿ ಮಾಡಿಕೊಡುತ್ತೇನೆ. ನಿನಗೂ ನಿನ್ನ ತಂಗಿಗೂ ಪಾಲು ಕೊಡುತ್ತೇನಲ್ಲ......ಅಂದ ಹಾಗೆ ತಮ್ಮದೇನು ಕೆಲಸ ?" ಅವಳ ಮಾತಿನಲ್ಲೂ ನಾಟಕೀಯತೆ ಇತ್ತು.

"ರಾಜಕುಮಾರಿ ನನಗೆ ಕಣ್ಣು ಕಾಣುವುದಿಲ್ಲ. ಅದ್ರೆ ಪ್ರತಿ ಬೋಗಿಯಲ್ಲೂ ಹಾಡು ಹಾಡುತ್ತೇನೆ. ತದನಂತರ ನನ್ನ ತಂಗಿಗೆ ಜನರು ಕೊಡುವ ಬಿಕ್ಷೆ ಕಾಸಿನಿಂದ ತಂಗಿ, ಅಮ್ಮನನ್ನು ಸಾಕುತ್ತೇನೆ......"

"ಎಲೈ ಬಾಲಕ, ಇಬ್ಬರಲ್ಲಿ ಒಬ್ಬಳು ನಿನ್ನ ತಂಗಿ ಯಾರೆಂದು ನನಗೆ ತಿಳಿದಿದೆ.. ಅಮ್ಮ ಯಾರೆಂದು ಹೇಳುವಂತವನಾಗು...

"ಸರಿ ಕೇಳು ಬಾಲೆ ನನ್ನ ಅಮ್ಮ ನೀನೇ ಅಲ್ಲವೇ"

ಇಬ್ಬರು ಜೋರಾಗಿ ನಕ್ಕರು...ನಗುತ್ತಿದ್ದರು... ನನಗಿಂತ ದೊಡ್ಡವನಾದ ಇವನಿಗೆ ನಾನು ಅಮ್ಮನಾದೆನೇ........ನಗುನಗುತ್ತಾ ಹಾಗೆ ಕಣ್ಣೀರಾದಳು....ವಾಜಿದ್ ನಗುತ್ತಲೇ ಇದ್ದ.

ಇವರಿಬ್ಬರೇ ಇದ್ದಾಗ ಒಂದು ಅದ್ಬುತ ಗೆಳೆತನದ ಅಲೆ ಅವರ ನಡುವೆ ಸುತ್ತುತ್ತಿರುತ್ತದೆ. ಶ್ರೀಮಂತರಿಗೆ ಶ್ರೀಮಂತರು, ಬಡವರಿಗೆ ಮತ್ತಷ್ಟು ಬಡವರು, ಬಿಕ್ಷುಕರಿಗೆ ಬಿಕ್ಷುಕರೆ ಜೊತೆಯಾಗುವಂತೆ ದೇವರು ಹೊಂದಿಸಿರುತ್ತಾನಾ ? ಅವಳು ಅಂದುಕೊಳ್ಳುವಷ್ಟರಲ್ಲಿ ಫಾತಿಮಾ ಇವರನ್ನು ಕೂಡಿಕೊಂಡಳು.


"ಈ ದೇಹದಿಂದ ದೂರನಾದೆ ಏಕೆ ಆತ್ಮನೇ, ಈ ಸಾವು ನ್ಯಾಯವೇ...ಈ ಸಾವು ನ್ಯಾಯವೇ....." ಬಲಗೈಯಲ್ಲಿ ಎರಡು ಪುಟ್ಟ ತೆಳು ಹಲಗೆ ತುಂಡುಗಳನ್ನೆ ತಾಳಬದ್ದವಾಗಿ ತಟ್ಟುತ್ತಾ...ಮೈಮರೆತು ತನ್ಮಯತೆಯಿಂದ ವಾಜಿದ್ ಹಾಡುತ್ತಿದ್ದರೆ........ ಇಡೀ ಬೋಗಿ ಜನರ ಗಮನವೆಲ್ಲಾ ಅವನ ಕಡೆ.

ಹುಟ್ಟು ಕುರುಡನಾದ ವಾಜಿದ್ ಮುಸ್ಲಿಮ್ ಕೇರಿಯಲ್ಲಿ ಬೆಳೆದವನು. ತನ್ನ ಹತ್ತನೆ ವಯಸ್ಸಿನಲ್ಲಿ ಹದಿನೈದು ವರ್ಷಗಳ ಹಿಂದೆ ಒಂದು ದಿನ ತಡೆಯಲಾರದ ಹಸಿವು. ಹಸಿವು ತಡೆಯಲು ಏನಾದರೂ ಮಾಡಬೇಕಿತ್ತು. ದೇವಸ್ಥಾನದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿದ್ದ ಇದೇ ಹಾಡು ಕೇಳುತ್ತಾ ಅವನಿಗರಿವಿಲ್ಲದಂತೆ ಮೈ ಮರೆತು ಜೀವ ಹಿಂಡುತ್ತಿದ್ದ ಹಸಿವನ್ನು ಮರೆತಿದ್ದ. ಜೊತೆಗೆ ತಾನು ಗುನುಗತೊಡಗಿದ್ದ. ಅಂದು ಹಾಡಲು ಶುರು ಮಾಡಿದವನು ಇಂದಿಗೂ ಅದೇ ಹಾಡನ್ನು ತನ್ಮಯನಾಗಿ ಹಾಡುತ್ತಾನೆ....ಹಾಡು ಮುಗಿದ ನಂತರ ಪುಟ್ಟ ಫಾತಿಮ ಒಡ್ಡಿದ ಸೆರಗಿನೊಳಗೆ ಅವತ್ತಿನ ಗಂಜಿ ಹಣ.

ತನ್ನ ದೇಹಕ್ಕೆ ಭಾರವೆನಿಸಿದ್ದ ತನ್ನ ಫೋಲಿಯೋ ಪೀಡಿತ ಕಾಲನ್ನು ಎಳೆದಾಡುತ್ತಾ ಬೋಗಿಗಳನ್ನು ಗುಡಿಸಬೇಕಾದರೆ ಗಿಡ್ಡಮ್ಮನಿಗೆ ಸಾಕು ಸಾಕಾಗುತ್ತಿತ್ತು....ಬೇಡಿದ ಬಿಕ್ಷೆ ಹಣ ಪುಡಿಗಾಸು. ಅದರಲ್ಲೇ ಜೀವನ.. ಎಷ್ಟೋ ದಿನ ಇಡಿ ಬೋಗಿಯಲ್ಲಿ ಒಂದೇ ಒಂದು ರೂಪಾಯಿಯೂ ಸಿಗುತ್ತಿರಲಿಲ್ಲ....ಉಪವಾಸ..ನಿಟ್ಟುಸಿರು..... ಈಗ ಆಗಿಲ್ಲ... "ಸ್ವಲ್ಪ ಕಾಲು ಎತ್ಕಳ್ಳಿ ಸಾ" .....ವಿನಯದಿಂದ ಹೇಳುತ್ತಾ ಒಂದೊಂದೆ ಕಂಪಾರ್ಟ್‌ಮೆಂಟುಗಳನ್ನು ಸುಲಭವಾಗಿ ಗುಡಿಸುತ್ತಿದ್ದಾಳೆ......ಭಾರವೆನಿಸುವ ಕಾಲನ್ನು ವಾಜಿದ್ ಹಾಡು ಮರೆಸುತ್ತದೆಯೆ ? ಅವಳಿಗೂ ಗೊತ್ತಿಲ್ಲ.

ಇಷ್ಟಕ್ಕೂ ಅವನು ಮತ್ತು ಅವನ ತಂಗಿ ಪರಿಚಯವಾಗಿದ್ದು ಎರಡು ವರ್ಷಗಳ ಹಿಂದೆ. ಬರ್ಬರವಾದ ನನ್ನ ಜೀವನಕ್ಕೆ ಊರುಗೋಲಂತೆ ಸಿಕ್ಕಿದ್ದ. ಇವತ್ತಿಗೂ ಆಗಿದ್ದಾನೆ. ಹಾಡಿ ನನ್ನ ನೋವು ಮರೆಸುತ್ತಾನೆ....ಹಣ, ಪ್ರೀತಿ, ನೋವು ನಲಿವು, ಮಾತು, ನಗು, ಅಳು...ಎಲ್ಲವನ್ನು ಹಂಚಿಕೊಳ್ಳುತ್ತಾನೆ. ಹಂಚಿಕೊಳ್ಳುವುದರಲ್ಲಿನ ಆನಂದ ತೋರಿಸಿದ್ದೆ ಅವನು. ಈಗೀಗ ನಾನು ಮತ್ತು ನನ್ನ ತಾಯಿ ಉಪವಾಸವಿಲ್ಲ.....ಕೊನೆ ಪಕ್ಷ ಎರಡು ಹೊತ್ತಿನ ಗಂಜಿ ಸಿಗುತ್ತಿದೆ. ಅಲ್ಪಸ್ವಲ್ಪ ಓದಿ ಬರೆಯಲು ಬಂದರೂ ಬೇರೆಲ್ಲೂ ಹೋಗುವ ಬದಲು ಇವನ ಹಾಡು ಕೇಳುತ್ತಾ ಬಿಕ್ಷೆ ಬೇಡುವ ಆನಂದವೇ ನನಗೆ ಸಾಕು. ಅವನ ಕಾಣದ ಕಣ್ಣಿಗೆ ಅದೇನೊ ಆಪರೇಷನ್ ಮಾಡಿಸಿದರೆ ಕಣ್ಣು ಬರುತ್ತದೆಂದು ಯಾರ್‍ಓ ಹೇಳಿದ ನೆನಪು. ಅವತ್ತಿನಿಂದ ಸ್ವಲ್ಪ ಸ್ವಲ್ಪ ಹಣವನ್ನು ಎತ್ತಿಡುತ್ತಿದ್ದಾಳೆ.

ಪಕ್ಕದ ಬೋಗಿಗೆ ತೆವಳಿಕೊಂಡು ಹೋದಳು.

"ನೋಡೇ ನನ್ನ ಬಾಯ್ ಪ್ರೆಂಡ್ ಸುಮಂತ್ ಸಿಕ್ಕಾ ಪಟ್ಟೆ ಕಂಜೂಸ್ ಕಣೆ...ಏನು ಕೊಡಿಸೊಲ್ಲ ... "

"ಹೌದಾ ನನ್ನ ಬಾಯ್ ಪ್ರೆಂಡ್ ಕಾರ್ತಿಕ್ ಆಗಿಲ್ಲಪ್ಪ...ಕೇಳಿದ್ದನೆಲ್ಲಾ ಕೊಡಿಸುತ್ತಾನೆ... "

"ಅಯ್ಯೋ ಇಲ್ಲಿ ಕೇಳು ನನ್ನ ಗೆಳೆಯ ರಾಜ್‌ ಇದ್ದಾನಲ್ಲ ಅವನು ತುಂಬಾ ಕ್ಯೂಟ್. ಅದಕ್ಕೆ ಅವನಿಗೆ ನಾನೇ ಖರ್ಚ್ ಮಾಡುತ್ತೇನೆ ಗೊತ್ತೆ ಅವನು ನಾನು ಹೇಳಿದ ಹಾಗೆ ಕೇಳುತ್ತಾನೆ"............ "

ಮೂವರು ಕಾಲೇಜು ಹುಡುಗಿಯರ ನಡುವೆ ಬಿರುಸಿನ ಮಾತುಕತೆ ನಡೆದಿತ್ತು......ಪ್ರೆಂಡ್-ಗೆಳೆಯ ಅಂದರೇನು.....ಕೇಳಿದ್ದನ್ನೆಲ್ಲಾ ಕೊಡಿಸಿದರೆ ಒಳ್ಳೆಯವನು...ಇಲ್ಲದಿದ್ದರೆ ಕೆಟ್ಟವನೇ ? ಇಷ್ಟಕ್ಕೂ ವಾಜಿದ್ ಬಳಿ ನಾನು ಏನು ಕೇಳಿಲ್ಲ. ಅವನು ನನ್ನನ್ನು ಏನು ಕೇಳಿಲ್ಲ. ಇದ್ದುದ್ದನ್ನು ಹಂಚಿಕೊಳ್ಳುತ್ತೇವೆ...ಇಲ್ಲದಿದ್ದಲ್ಲಿ ಉಪವಾಸವಿರುತ್ತೇವೆ.. ನನಗೆ ಮತ್ತು ನನ್ನ ಅಮ್ಮನಿಗಾಗಿ ಅವನ ಸಂಪಾದನೆಯಲ್ಲಿ ಹೆಚ್ಚಿನ ಪಾಲನ್ನು ನಾನು ಎಷ್ಟು ಬೇಡವೆಂದರೂ ಕೊಟ್ಟುಬಿಡುತ್ತಾನೆ. ಅವರಿಬ್ಬರು ಕಡಿಮೆ ಉಳಿಸಿಕೊಳ್ಳುತ್ತಾರೆ. ಕಣ್ಣಿಲ್ಲದ ಅವನಿಗೆ ನಾನು ಯಾವಾಗಲು ಸಹಾಯ ಮಾಡಬೇಕು. ಅದರೆ ಅವನು ನನ್ನಿಂದ ಎಂದಿಗೂ ಸಹಾಯವನ್ನೇ ಬೇಡುವುದಿಲ್ಲವಲ್ಲ.....ಹಾಗದರೆ ಅವನು ನನಗೆ ಏನಾಗಬೇಕು...? ಇವಳಲ್ಲಿ ಪ್ರಶ್ನೆಗಳೇಳುತ್ತಿದ್ದವು..

ತಂದೆಯಂತೆ ವಾತ್ಸಲ್ಯವಿದೆ .-ನನ್ನ ತಾಯಿಗೆ ನಾನೇ ತಾಯಿಯಾದರು ನನಗೂ ತಾಯಿಬೇಕೆನಿಸಿದರೆ ಅವನ ಮಡಿಲು ತಾಯಿತೂಕದ್ದು....ಅಣ್ಣನೇ ಆಗಿ ಕೈತುತ್ತು ತಿನ್ನಿಸುವನಲ್ಲ...ಬಂದುವಾಗಿ ಸದಾ ನನ್ನ ಕಾಳಜಿ.....ಹಾಡುವಾಗ ಮಗುವಿನಂತೆ ತನ್ಮಯನಾಗುವ ಇವನು ಮಗುವೇ ? ಇದೆಲ್ಲವನ್ನೂ ನೀಡುತ್ತಾನೆ ಒಟ್ಟೊಟ್ಟಿಗೆ. ಕೆಲವೊಮ್ಮೆ ಬಿಡಿ ಬಿಡಿಯಾಗಿ. ಮೂವರು ಆಡುತ್ತೇವೆ...ಕುಣಿಯುತ್ತೇವೆ...ರೇಗಿಸಿಕೊಳ್ಳುತ್ತಿರುತ್ತೇವೆ....ಒಟ್ಟಿಗೆ ನಗುತ್ತೇವೆ....ಅಳುತ್ತೇವೆ....ಆದರೂ ಅವನು ನನ್ನಿಂದ ಏನು ಬಯಸುವುದಿಲ್ಲ.....ಪರಿಶುದ್ಧ ಗೆಳೆತನವೆಂದರೆ ಇದೇನಾ ?...........ಗಿಡ್ಡಿಗೆ ಹಾಗೆ ಅನ್ನಿಸುತ್ತಿದ್ದಂತೆ....ಮುಖದಲ್ಲಿ ಚಿಮ್ಮಿದ ಮುಗುಳ್ನಗೆ ಯಾರಿಗೂ ಕಾಣಲಿಲ್ಲ...

ರೈಲು ನಿಂತಿತು...ಒಂದಷ್ಟು ಜನ ಹತ್ತಿಳಿದರು....ಮತ್ತೊಂದು ಬೋಗಿಯಲ್ಲಿ " ಈ ದೇಹದಿಂದ............ಹಾಡು ಕೇಳಿ ಕೆಲವು ಮಕ್ಕಳು ಮತ್ತು ಮಕ್ಕಳ ಮನಸ್ಸಿನವರು ಪ್ರೀತಿಯಿಂದ, ಇನ್ನೂ ಕೆಲ ದೊಡ್ಡ ಮನಸ್ಸಿನವರು ಕರುಣೆಯಿಂದ, ತಮ್ಮ ಗಂಬೀರ ಚರ್ಚೆಗೆ ತೊಂದರೆಯಾಯಿತೆಂದು ಬೇಸರದಿಂದ ಕೆಲವರು ಪುಡಿಗಾಸು ಹಾಕಿದರೆ, ಇನ್ನೂ ಕೆಲವರು ಹಾಕಬೇಕೆಂದು ಕೈಯನ್ನು ಜೇಬಿಗಿಳಿಸಿ ಮುಂದಿನ ನಿಲ್ದಾಣದಲ್ಲಿ ಸಿಗರೇಟಿಗೆ ಬೇಕಾಗುತ್ತದೆ ಅಂತ ಸುಮ್ಮನಾದರು......ಬರಿಕೈ ಹೊರತೆಗೆದರೆ ಕೈಗೆ ನಾಚಿಕೆಯಾಗುತ್ತದೆಂದು ಕೈಯನ್ನು ಜೀಬಿನಲ್ಲೇ ಬಿಟ್ಟರು......

"ನೋಡಯ್ಯ....ವ್ಯಾಲೆಂಟೇನ್ಸ್ ಡೇ ದಿನ ಪ್ರೇಮಿಗಳೆ ಒಬ್ಬರಿಗೊಬ್ಬರು ಪ್ರೀತಿಯನ್ನು ವ್ಯಕ್ತಪಡಿಸಬೇಕೆಂದೇನಿಲ್ಲ....."

"ಮತ್ತೆ ?......."

"ಪ್ರೀತಿಸುವ ಮನಸ್ಸುಳ್ಳವರು ಯಾರನ್ನು ಬೇಕಾದರೂ ಪ್ರೀತಿಸಬಹುದು."

"ಹೌದಾ! "

"ಇಂಥ ಪ್ರೀತಿಗಳಿಗೆ ತಾಯಿ-ಮಗುವಿನ ಪ್ರೀತಿ, ಗೆಳೆಯರ ನಡುವಿನ ಪ್ರೀತಿ, ಅಣ್ಣ-ತಂಗಿ, ಮಕ್ಕಳು-ಅಜ್ಜ ಅಜ್ಜಿಯರ ಪ್ರೀತಿ ......ಇತ್ಯಾದಿಗಳನ್ನು ಆ ದಿನ ವ್ಯಕ್ತಪಡಿಸಿ ಗಿಪ್ಟ್ ಕೊಡಬಹುದು.... "

ಕೆಲವರ ನಡುವೆ ಭಯಂಕರ ಚರ್ಚೆಯಾಗುತ್ತಿದ್ದ ಈ ವಿಚಾರ ವಾಜಿದ್ ಗಮನ ಸೆಳೆಯಿತು. ಆತನ ಕೈ ಬಿಕ್ಷೆ ಬೇಡುತ್ತಿದ್ದರು ವಾಜಿದ್ ಗಮನ ಮಾತ್ರ ಈ ವಿಚಾರದತ್ತಲೇ ಇತ್ತು ರಾತ್ರಿ ತನ್ನ ಗುಡಿಸಲಿನಲ್ಲೂ ಇದೇ ವಿಚಾರ ...

"ಫಾತಿಮಾ ನಾವು ಕೂಡಿಟ್ಟ ಹಣವೆಷ್ಟಿದೆ. ?"

"ಅಣ್ಣಾ ಈಗ ಇರುವ ಹಣದಲ್ಲಿ ಒಂದು ಚೆಂದವಾದ ಕ್ಯಾಲಿಪರ್ ಮತ್ತು ಷೂವನ್ನು ಗಿಡ್ಡಿಗೆ ಹಾಕಿಸಬಹುದು....." ಅದರಿಂದ ಈಗಿನ ತೆವಳುವ ಸ್ಥಿತಿಗಿಂತ ನಡೆದಾಡುವ ಸ್ಥಿತಿಗೆ ಬರುತ್ತಾಳೆಂದು ಡಾಕ್ಟರ್ ಹೇಳಿದಾರೆ ಅಣ್ಣ."

"ಹೌದಾ ! ಹಾಗಾದರೆ ಅದೆಂತದೊ ಪ್ರೇಮಿಗಳ ದಿನ ಇದೆಯಂತಲ್ಲ, ಅವತ್ತು ಏನ್ ಮಾಡಿದರೂ ಒಳ್ಳೆಯದಾಗುತ್ತಂತೆ !! ಅವಳಿಗೆ ಅವತ್ತು ಹಾಕಿಸೋಣ, ಅವಳು ಚೆನ್ನಾಗಿ ನಡೆದಾಡಿದರೇ ಎಷ್ಟು ಚೆನ್ನಾ ಅಲ್ವಾ........".

"ಹೌದು ಅಣ್ಣ. ನಾನು ನಾಳೇನೆ ಹೋಗಿ ಇರೋ ದುಡ್ಡನ್ನೆಲ್ಲಾ ಡಾಕ್ಟ್ರಪ್ಪನಿಗೆ ಕೊಟ್ಟು ಬರುತ್ತಿನಿ.....".

ಹೇಳುತ್ತಾ ತನ್ನ ತೊಡೆಯ ಮೇಲೆ ತಲೆಹಾಕಿದ್ದ ಅಣ್ಣನ ತಲೆಕೂದಲೊಳಗೆ ಕೈಯಾಡಿಸುತ್ತಿದ್ದರೆ ವಾಜಿದ್ ನಿದ್ದೆ ಹೋದ........ ಆಣ್ಣನ ಕಣ್ಣಿನ ಆಪರೇಷನ್‌ಗಾಗಿ ಕೂಡಿಟ್ಟ ಹಣವನ್ನು ಗಿಡ್ಡಿ ಒಮ್ಮೆ ತೋರಿಸಿ, ಕಳೆದ ವಾರ ನನ್ನನ್ನು ಕರೆದುಕೊಂಡು ಹೋಗಿ ಡಾಕ್ಡ್ರರಿಗೆ ಕೊಟ್ಟು ಬಂದ ವಿಚಾರವನ್ನು ವಾಜಿದ್‌ಗೆ ಹೇಳಬೇಡವೆಂದು ಅವಳು ಹೇಳಿದ್ದು ನೆನಪಾಗಿ ಕಣ್ತುಂಬಿ ಬಂದಿತ್ತು.


ಆ ದಿನ ಬಂದೇ ಬಿಟ್ಟಿತ್ತು. ಇಬ್ಬರೂ ಗಿಡ್ಡಮ್ಮನಿಗಾಗಿ ಫ್ಲಾಟ್‌ಪಾರಂನಲ್ಲಿ ಕಾಯುತ್ತಿದ್ದಾರೆ.......ಮುಖದಲ್ಲಿ ಸಂಬ್ರಮ. ಇವತ್ತು ತುಂಬಾ ಸಂತೋಷವಾಗಿರುವಾಗ ತನ್ನ ಮೆಚ್ಚಿನ ಹಾಡು ಹಾಡಬಾರದೆಂದು ವಾಜಿದ್ ಅಂದುಕೊಳ್ಳುತ್ತಿದ್ದರೆ....ನನ್ನ ಆಣ್ಣನ ಕಣ್ಣು ಮತ್ತು ಗೆಳತಿಯ ಕಾಲು ಎರಡು ಒಟ್ಟಿಗೆ ಬರುತ್ತಿರುವುದು ಕಲ್ಪಿಸಿಕೊಂಡು ಫಾತಿಮ ಮುಖದಲ್ಲಿ ಸಾವಿರ ಖುಷಿಗಳ ಮಿಂಚು.

ನಿಲ್ದಾಣದಲ್ಲಿ ನಿದಾನವಾಗಿ ಶುರುವಾದ ಗದ್ದಲ ತಾರಕಕ್ಕೇರತೊಡಗಿತ್ತು.

ಅಲ್ಲಲ್ಲೇ ಗುಸು ಗುಸು ಪಿಸಪಿಸ....ಮಾತುಗಳು. ಯಾರೋ ರೈಲಿಗೆ ಸಿಕ್ಕಿ ಸತ್ತು ಹೋಗಿದ್ದಾರೆ.....ಹಾಗೆ ಹೀಗೆ...ಮಾತು ಕೇಳಿ ಬರುತ್ತಿದ್ದಂತೆ ಕಲ್ಪನಾ ಲೋಕದಲ್ಲಿ ಮುಳುಗಿದ್ದ ಇಬ್ಬರಿಗೂ ಎಚ್ಚರವಾಯಿತು.......ಆಣ್ಣಾ ಯಾರೋ ರೈಲಿಗೆ ಸಿಕ್ಕಿ ಸತ್ತು ಹೋಗಿದ್ದರಂತೆ....ನೀನಿಲ್ಲೇ ಇರು ನಾನು ಹೋಗಿ ನೋಡಿ ಬರುತ್ತೇನೆ......ಅಂದವಳೇ ಅಲ್ಲಿಂದ ಓಡಿದಳು......

ತನ್ನ ಕಣ್ಣನ್ನು ತಾನೇ ನಂಬಲು ಆಗುತ್ತಿಲ್ಲ. ಅದು ಗಿಡ್ಡಿ. ಸಂಶಯವೇ ಇಲ್ಲ......ತುಂಬಾ ಖುಷಿಯಿಂದ ಬರುತ್ತಿದ್ದಳಂತೆ. ಅದೇ ಗುಂಗಿನಲ್ಲಿ ಮೈಮರೆತು ಬರುತ್ತಿರುವ ರೈಲನ್ನು ಗಮನಿಸಲಿಲ್ಲವಂತೆ......ಗುಂಪಿನಲ್ಲಿ ಮಾತುಗಳು ಹರಿದಾಡಿದವು.....ಫಾತಿಮಾ ಓಡಿಬಂದಳು ಅಣ್ಣನ ಬಳಿಗೆ. ವಾಜಿದ್‌ಗೆ ವಿಚಾರ ಗೊತ್ತಾಗುತ್ತಿದ್ದಂತೆ...ಭೂಮಿ ಬಿರಿದಂತಾಯಿತು......ಎಷ್ಟು ತಡೆದುಕೊಂಡರೂ ಆಗುತ್ತಿಲ್ಲ.....ಅವನಿಗರಿವಿಲ್ಲದಂತೆ ಒತ್ತರಿಸಿಕೊಂಡು ಬಂತು.....

" ಈ ದೇಹದಿಂದ ದೂರನಾದೆ ಏಕೆ ಆತ್ಮನೇ ಈ ಸಾವು ನ್ಯಾಯವೇ ಈ ಸಾವು ನ್ಯಾಯವೇ...................

[ನನ್ನ ಭಾವ ಸ್ಕೂಲ್ ಟೀಚರ್. ಪ್ರತಿದಿನ ಶಾಲೆಗೆ ರೈಲಿನಲ್ಲಿ ಹೋಗಿ ಬರುತ್ತಾರೆ. ಅವರು ಹೇಳಿದ ನಡೆದ ಘಟನೆಯನ್ನು ಆದಾರಿಸಿ ಬರೆದ ಪುಟ್ಟ ಕತೆ ಇದು. ನನ್ನ ಕಡೆಯಿಂದ ಇದು ಬ್ಲಾಗ್ ಗೆಳೆಯರಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟು ಆಂದುಕೊಳ್ಳುತ್ತೇನೆ.....]

ಲೇಖನ ಮತ್ತು ಚಿತ್ರ.
ಶಿವು.

Saturday, February 7, 2009

ಮತ್ತೆ ಟೋಪಿಗಳು ಬಂದವು ದಾರಿಬಿಡಿ !!

ನನಗೆ ಟೋಪಿ ಹಾಕುವ ಅಲ್ಲಲ್ಲ...ಟೋಪಿ ಫೋಟೊ ಬ್ಲಾಗಿಗೆ ಹಾಕುವ ವಿಚಾರ ಬಂದಾಗ ಮಾತ್ರ ಗೊಂದಲಕ್ಕೆ ಬೀಳುತ್ತೇನೆ.


"ದಿನಕ್ಕೊಂದು ಟೋಪಿ" ತೀರ್ಮಾನದಿಂದಾಗಿ ನನ್ನ ಬಳಿ ಒಂದೆರಡು ಸುತ್ತುಗಳಿಗಾಗುವಷ್ಟು ವೈವಿಧ್ಯಮಯ ಟೋಪಿಗಳ ಗೊಂಚಲಿದೆ......ಪರಿಸರ ಪ್ರೇಮಿಗಳಿಗಾಗಿಯೇ ಸಿದ್ಧಪಡಿಸಿದ ಕಣಜವಿದೆ.......ದೊಡ್ದ ಮಕ್ಕಳಿಗಾಗಿಯೇ[ನಮಗಾಗಿ] ವಿಭಿನ್ನ ಗೊಂಬೆ ಟೋಪಿಗಳಿವೆ.......ಇದಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮ, ಸಂತೆ, ಪ್ರವಾಸ, ಇತ್ಯಾದಿಗಳಿಗಾಗಿ ಬಂದ ವಿದೇಶಿಯರ ಟೋಪಿಗಳಿವೆ......ಹಾಗೂ ನಿಮ್ಮ ಕಲ್ಪನೆಗೂ ಬರದ ಮತ್ತೊಂದು ವಿಧದ ಟೋಪಿಗಳು ಸಿಧ್ದವಾಗುತ್ತಿವೆ.......


ಇದೇ ಸಮಯಕ್ಕೆ ದೂರದ ಆತ್ಮೀಯ ಗೆಳೆಯ[ಸದ್ಯಕ್ಕೆ ಕೆಲಸದ ನಿಮಿತ್ತ ವಿದೇಶದಲ್ಲಿದ್ದಾನೆ]ನನ್ನನ್ನು ಬೇಟಿಯಾಗಿ, ಉಭಯಕುಶೋಲೋಪರಿ.........ಉಕು......ಸಾಂಪ್ರತ....ಎಲ್ಲಾ ಆದ ಮೇಲೆ...ಟೋಪಿಗಳ ವಿಚಾರ ಬಂದ ತಕ್ಷಣ ಸರಿಯಾಗಿಯೇ ಧಮಕಿ ಹಾಕಿದ.........


"ನೋಡೋ ಟೋಪಿ ವಿಚಾರದಲ್ಲಿ ನಿನ್ನ ತರಲೆ ಅತಿಯಾಯಿತು. ನೀನು ಹಾಕಿದ ಟೋಪಿಗಳನ್ನೆಲ್ಲಾ ಹಾಕಿಕೊಳ್ಳೋದಿಕ್ಕೆ ನಾವೇನು ಮೂರ್ಖರು ಅಂದುಕೊಂಡಿದ್ದೀಯಾ ? ಮುಂದಿನ ಭಾರಿ ಟೋಪಿ ಫೋಟೊ ಜೊತೆಗೆ, ಟೋಪಿ ಹಾಕಿಕೊಂಡವರ ಮಾಹಿತಿಯನ್ನು ಕೊಡದಿದ್ದಲ್ಲಿ ಮಾಡುತ್ತೇನೆ ನೋಡು ........."


ಗೆಳೆಯನ ಮಾತಿಗೆ ಕಟ್ಟು ಬಿದ್ದೆನೋ ಅಥವ ನನಗೆ-ನಿಮಗೆ ಇಬ್ಬರಿಗೂ ಬೇಕಿತ್ತೋ.....ಗೊತ್ತಿಲ್ಲ. ಈ ಬಾರಿ ಸ್ವಲ್ಪ ಗಂಭೀರವಾಗಿ ಮತ್ತಷ್ಟು ಜಾನಪದ ಟೋಪಿಗಳ ಜೊತೆಗೆ, ಕಲಾವಿದರು, ಅವರ ಸ್ಥಳ, ಅವರ ಬಗ್ಗೆ ಒಂದೆರಡು ಸಾಲಿನ ವಿವರಣೆ ಕೊಡಲು ಪ್ರಯತ್ನಿಸಿದ್ದೇನೆ..................



ಹಗಲು ವೇಷದ ವಾದ್ಯಗಾರರ ಟೋಪಿ....................


ಇವರ ಮೂಲಸ್ಥಾನ ಹಂಪಿ. ಇವರು ಅಲೆಮಾರಿಗಳಂತೆ ಊರೂರು ಅಲೆಯುತ್ತಾ, ಅಲ್ಲಲ್ಲಿ ತಮ್ಮ ಬಿಡಾರ ಊಡಿ, ಬೀದಿ, ವೇದಿಕೆ......ಹೀಗೆ ಎಲ್ಲಾ ಕಡೆಯೂ ಪ್ರದರ್ಶನ ಮಾಡಿ ಹೊಟ್ಟೆ ಪಾಡು ನಡೆಸುತ್ತಾರೆ......


ಈ ಕಲೆಯಲ್ಲಿ ಮುಗ್ಧ ಅಭಿನಯದ ಜೊತೆಗೆ ಮೊದಲ ನೋಟಕ್ಕೆ ನಗು ತರಿಸುವ ಕುಣಿತವೇ ಇವರ ವಿಶೇಷ. ಇವರು ಹನುಮಾಯಣ ನಾಟಕ ಅಭಿನಯಿಸುತ್ತಾರೆ...................................


ಲಂಬಾಣಿ ಟೋಪಿ....


ಇವರು ಲಂಭಾಣಿಗರು. ರಾಜಸ್ಥಾನದಿಂದ ಇಲ್ಲಿಗೆ ಗುಳೇ ಬಂದ ಇವರು ಇಲ್ಲಿನವ ರೇ ಆಗಿಹೋಗಿದ್ದಾರೆ..........


ನಗರ ಹಳ್ಳಿಗಳೆನ್ನೆದೇ ಊರೂರು ಅಲೆಯುತ್ತಾ ತಮ್ಮದೇ ಭಾಷೆಯಲ್ಲಿ ಹಾಡು, ಹಿತ-ಮಿತವಾದ ಹೆಜ್ಜೆಹಾಕುತ್ತಾ ಕುಣಿಯುವ ಇವರು ತೊಡುವ ವಸ್ತ್ರಗಳು ಮಣಿ, ಗುಂಡಿ[ಬಟನ್] ಚಿಲ್ಲರೆ ಕಾಸು, ಕವಡೆ...ಇತ್ಯಾದಿಗಳಿಂದ ಸಂಪೂರ್ಣ ಅಲಂಕೃತಗೊಂಡಿರುತ್ತವೆ.................................



ಸೋಮನ ಕುಣಿತ ವಾದ್ಯಗಾರರ ಟೋಪಿಗಳು.


ಮದ್ದೂರಿನ ಈ ಜಾನಪದ ಕಲಾವಿದರು ರಾಕ್ಷಸ ಮುಖದ ಸೋಮನ ವೇಷ ಧರಿಸಿ ಕುಣಿಯುತ್ತಾರೆ. ಅವರ ಕುಣಿತಕ್ಕೆ ತಕ್ಕ ಹಾಗೆ ಡೋಲು ಬಾರಿಸುವ ಸಹ ವಾದ್ಯಗಾರರು ಅವರದೇ ಆದ ರೀತಿ ಟೋಪಿ ಧರಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ತಿಂಗಳಿಗೊಮ್ಮೆ ಈ ಎಲ್ಲಾ ಕಲಾವಿದರನ್ನು ಕರೆದು ಕಲೆ ಪ್ರಧರ್ಶಿಸಲು ಅವಕಾಶ ಕೊಟ್ಟರೆ ಈ ರೀತಿ ತನ್ಮಯರಾಗಿ ಕುಣಿಯುತ್ತಾರೆ. ಪ್ರೇಕ್ಷಕರಿಗೆ ರಸದೌತಣ ನೀಡುತ್ತಾರೆ.


ಆದರೆ ಅವಕಾಶವಿಲ್ಲದವರು ಶೇಷಾದ್ರಿಪುರಂ ಕಾಲೇಜಿನ ಎದುರು ಮದ್ಯರಸ್ತೆಯಲ್ಲಿ ಹುಡುಗ ಹುಡುಗಿರ ಮುಂದೆ ಹೊಟ್ಟೆ ಪಾಡಿಗೆ ಇದೇ ಸೋಮನ ವೇಷವನ್ನು ಧರಿಸಿ ಕೈಯಲ್ಲಿರುವ ಚಾಟಿಯಿಂದ ನೆಲಕೊಮ್ಮೆ, ಮತ್ತು ತಮ್ಮ ಮೈ ಮೇಲೊಮ್ಮೆ ಬಾರಿಸಿಕೊಳ್ಳುತ್ತಾ, ದೇಹ ದಂಡಿಸಿ ದೇವರ ಹೆಸರಿನಲ್ಲಿ ಬಿಕ್ಷೆ ಬೇಡುತ್ತಾರೆ..........


ಗುಜರಾತಿನ ಜನಪದ ಟೋಪಿಗಳು.


ಗರ್ಭಾ ನೃತ್ಯ ಗುಜರಾತಿನ ಬುಡಕಟ್ಟು ಜನಾಂಗದ ಒಂದು ಜಾನಪದ ಕಲೆ.


ಈಗ ಆ ರಾಜ್ಯವಲ್ಲದೇ ಗುಜರಾತಿ ಭಾಂಧವರು ದೇಶದ ಉದ್ದಗಲಕ್ಕೂ ನೆಲೆಸಿರುವುದರಿಂದ ಈ ಕಲೆ ಬೆಂಗಳೂರು ಮುಂಬೈ, ಇನ್ನಿತರ ಸ್ಥಳಗಳಲ್ಲಿ....... ಆಗಾಗ ನಡೆಯುತ್ತಿರುತ್ತದೆ. ನವರಾತ್ರಿ ಸಮಯದಲ್ಲಿ ದೊಡ್ಡ ಉತ್ಸವಗಳಾಗಿ ಮಾರ್ಪಟ್ಟಿವೆ....................................


ಕಂಸಾಳೆಯವರ ಜಾನಪದ ಟೋಪಿ.


ಮಲೈ ಮಾದೇಶ್ವರ ದೇವರನ್ನು ಹಾಡಿ ಹೊಗಳಿ ಕುಣಿದಾಡಲು ಕೊಳ್ಳೆಗಾಲ, ಮಳವಳ್ಳಿ, ಅದರ ಸುತ್ತಮುತ್ತಲಿನ ಜಾನಪದ ಕಲಾವಿದರಿಗೆ ಕಂಸಾಳೆ ನೃತ್ಯವೇ ಬೇಕು.


ಪ್ರತಿ ಹಾಡಿನಲ್ಲೂ " ಸಿದ್ದಯ್ಯ ಸ್ವಾಮಿ ಬನ್ನಿ" ಎನ್ನುತ್ತಾ ಕೈಯಲ್ಲಿ ಕಂಚಿನ ಕಂಸಾಳೆ ತಾಳವನ್ನು ಹಿಡಿದು ಕುಣಿಯುವ ಇವರ ಸಮೂಹ ನೃತ್ಯವೂ ನೋಡುಗನ ಮೈ ಮನಸ್ಸು ರೋಮಾಂಚನಗೊಳಿಸುತ್ತದೆ. ಅದಕ್ಕೆ ತಕ್ಕಂತೆ ಅದ್ಭುತ ತಾಳ, ರಾಗಸಂಯೋಜನೆಯ ಹಾಡು ನೋಡುತ್ತಾ...... ನೋಡುತ್ತಾ..... ಪ್ರೇಕ್ಷಕನೂ ಕುಣಿಯವಂತೆ ಪ್ರೇರೇಪಿಸುತ್ತದೆ ರೋಮಾಂಚನಗೊಳಿಸುತ್ತದೆ...........

ಮುತ್ತಪ್ಪನ್ ದೇವರ ಟೋಪಿ.


ಇದು ದೇವರ ವಿಚಾರವಾದ್ದರಿಂದ, ದೇವರ ತಲೆಯ ಮೇಲಿನ ಕಿರೀಟವನ್ನು ಟೋಪಿ ಅನ್ನುತ್ತಿರುವುದಕ್ಕೆ ಮೊದಲೇ ಕ್ಷಮೆ ಕೇಳಿಬಿಡುತ್ತೇನೆ. ಕೇರಳದ ಕಣ್ಣೂರಿನಲ್ಲಿರುವ ಮುತ್ತಪ್ಪನ್ ಬಡವರ ದೇವರಂತೆ. ಅಲ್ಲಿಗೆ ಹೋಗಲಿಕ್ಕಾಗದ ಸ್ಥಳೀಯಾ ಮಲೆಯಾಳಿ ಭಾಂದವರು ಯಶವಂತಪುರದಲ್ಲಿ ನಡೆಯುವ ಉತ್ಸವದಲ್ಲಿ ಸೇರುತ್ತಾರೆ.

ಅಲ್ಲಿನ ಪೂಜಾರಿಗಳು ಇಲ್ಲಿಗೆ ಬಂದು ಅರಿಸಿನ, ಕುಂಕುಮ, ವಿಭೂತಿ ಬಳಸಿ ದೇಹಕ್ಕೆ ಅವರದೇ ಆದ ಆಲಂಕಾರ, ವೇಷ ಭೂಷಣ, ಮತ್ತು ತಲೆಗೆ ವಿಶಿಷ್ಟವಾದ ಎಲೆ, ಹೂವು, ಗರಿಕೆ, ಇತ್ಯಾದಿಗಳನ್ನು ಬಳಸಿ ಸ್ವತಹ: ಅಲ್ಲೇ ತಯಾರಿಸಿದ ಕಿರೀಟ[ಟೋಪಿ]ವನ್ನು ತಲೆಗೆ ಧರಿಸಿಧರೆ ಮುತ್ತಪ್ಪನ್ ದೇವರು ಧರಿಸಿದವರ ಮೇಲೆ ಆವಾಹನೆಯಾಗುತ್ತಾನೆ ಎನ್ನುವ ನಂಬಿಕೆ..............
ಡೊಳ್ಳು ಕುಣಿತಗಾರರು


ಡೊಳ್ಳು ವಾದ್ಯ ಗಾರರ ಟೋಪಿಯನ್ನು ನಾನು ಹಿಂದಿನ ೪ನೇ ಟೋಪಿ ಸರಣಿಯಲ್ಲಿ ಹಾಕಿದ್ದೇನೆ. ಜಾನಪದ ಕಲೆಯ ಗಂಡುವಾದ್ಯವೆಂದೇ ಪ್ರಖ್ಯಾತವಾದ ಡೊಳ್ಳುವಾದ್ಯವನ್ನು ಸಾಗರದ ಜಾನಪದ ಕಲಾವಿದರು ಪ್ರದರ್ಶಿಸುತ್ತಾರೆ. ಡೊಡ್ಡ ಹೆಜ್ಜೆ ಹಾಕಿ ಆತ್ಮವಿಶ್ವಾಸದಿಂದ ಕುಣಿಯುತ್ತಾ, ಡೊಳ್ಳು ಭಾರಿಸುವುದನ್ನು ನೋಡುತ್ತಿದ್ದರೆ ಮೈ ಜುಮ್ಮೆನ್ನುತ್ತದೆ........ಡೊಳ್ಳು ವಾದ್ಯವನ್ನು ರಾಜ್ಯದ ನಾನಾ ಭಾಗದ ಜನಪದ ಕಲಾವಿದರು ಅವರದೇ ಆದ ಶೈಲಿಯಲ್ಲಿ ಪ್ರದರ್ಶಿಸುತ್ತಾರೆ................


ದಂಗೆಯ ಮುಂಚಿನ ದಿನಗಳಲ್ಲಿ ಬ್ರಿಟೀಷರ ಆಡಳಿತ ಕಾಲದಲ್ಲಿನ ಟೋಪಿಗಳನ್ನು ಫೋಟೊ ತೆಗೆಯುವ ಅವಕಾಶ ಸಿಕ್ಕಿತ್ತು...........

ರಾಜ, ಆಸ್ಥಾನ ಕವಿಗಳ ಟೋಪಿಗಳು....
ನಾಗರೀಕ, ಪರಂಗಿ ಆಡಳಿತಗಾರ, ಪರಂಗಿ ಸೈನಿಕನ ಟೋಪಿಗಳು.

ಪ್ರಮೋದ್ ಸಿಗ್ಗಾವಿ ನಿರ್ಧೇಶನ, ರಾಘವೇಂದ್ರರವರ ಹಿತಮಿತ ಬೆಳಕಿನ ಸಂಯೋಜನೆಯ ಈ ನಾಟಕ ರಂಗಶಂಕರದಲ್ಲಿ ನಡೆದಿತ್ತು.


೧೯೫೭ರ ದಂಗೆಯ ಮುಂಚಿನ ದಿನಗಳಲ್ಲಿ ಲಕ್ನೋ ನಗರದ ಮೀರ್ ಕಾಸಿಂ ಕಾಲದಲ್ಲಿ ಇದ್ದ ಪರಿಸ್ಥಿತಿಯ ಚಿತ್ರಣವನ್ನು ಈ ನಾಟಕ ತಿಳಿಹಾಸ್ಯ ಧಾಟಿಯಲ್ಲಿ ನೋಡಿಸಿಕೊಂಡು ಹೋಗುತ್ತದೆ.


ಆಗಿನ ಕಾಲದ ಸೈನಿಕರು, ರಾಜರು, ಅವರ ಆಸ್ಥಾನ ಕವಿಗಳು, ನಾಗರೀಕರು, ಪರಂಗಿ ಜನರ ಟೋಪಿಗಳನ್ನು ಒಂದು ನಾಟಕದಲ್ಲಿ ಕ್ಲಿಕ್ಕಿಸಿದ್ದೆ............


[ರಾಯಚೂರಿನ ಕಣಿಹಲಗೆ ಕಲಾವಿದರು, ಉತ್ತರ ಕನ್ನಡದ ಹಾಲಕ್ಕಿ ಜಾನಪದ ಕಲಾವಿದರು ಅವರ ಟೋಪಿಗಳನ್ನು ಇನ್ನಿತರರನ್ನು ಮುಂದೆಂದಾದರು ತೋರಿಸುತ್ತೇನೆ].
ಮುಂದಿನ ಬಾರಿ ಮತ್ತಷ್ಟು ವೈವಿಧ್ಯಮಯ ಟೋಪಿಗಳು...........
ಚಿತ್ರ ಮತ್ತು ಲೇಖನ.......

ಶಿವು.

Tuesday, February 3, 2009

ಪುಟ್ಟ ಪುಟ್ಟ ಪುಟಾಣಿ ಸಂತೋಷಗಳು......

ಜೀವನದಲ್ಲಿ ಪುಟ್ಟ ಪುಟ್ಟ ಸಂತೋಷಗಳನ್ನು ಅನುಭವಿಸಿದಾಗ ಅವುಗಳ ಕಡೆಗೆ ಕೃತಜ್ಞತೆಯಿಂದ....................

'ಖುಷಿಯಾಗಿದೆ ಯಾಕೋ ನಿಮ್ಮಿಂದಲೇ.......!! ಹಾಡಬೇಕೆನಿಸುತ್ತದೆ.............

ಇವು ಪ್ರತಿದಿನ ನಮ್ಮ ಜೀವನದಲ್ಲಿ ಮಿಂಚಾಗಿ ಬಂದು ಹೋಗುತ್ತಿರುತ್ತವೆ......


ಬಿಡಿ ಬಿಡಿ ಹೂಗಳ ಹಾಗೆ.....

ಮನಸ್ಸನ್ನು ನವಿರಾಗಿ ತಾಕಿ ಹೋಗುತ್ತಿರುತ್ತವೆ. ಪುಳಕಗೊಳಿಸುತ್ತಿರುತ್ತವೆ...............

ಆವುಗಳಲ್ಲಿ ಕೆಲವು ಇಲ್ಲಿವೆ.............


ಕಳೆದ ವಾರ ನನಗಿಷ್ಟವಿಲ್ಲದಿದ್ದರೂ ನನ್ನವಳ ಜೊತೆ ಹೊಸ ಬಟ್ಟೆ ಖರೀದಿಗೆ ಹೋಗಿದ್ದೆ. ಅವಳು ಇಷ್ಟಪಡುವ ಬಣ್ಣದ, ವಿನ್ಯಾಸದ ಬಟ್ಟೆಗಳನ್ನು ನಾನು ಹಾಕಿಕೊಳ್ಳಬೇಕೆಂಬ ಆಸೆ. ಆವಳು ಕೊಡಿಸಿದ ಬಟ್ಟೆಗಳನ್ನು ಹಾಕಿಕೊಂಡಾಗ ನನಗಿಷ್ಟವಾಗಿರದಿದ್ದರೂ ಹೊರಗೆ ಗೆಳೆಯ ಗೆಳತಿಯರು ಚೆನ್ನಾಗಿದೆ ಅಂದಿದ್ದರು.. ಮನೆಗೆ ಬಂದು ಇದನ್ನು ಅವಳಿಗೆ ಹೇಳಿದಾಗ ಅವಳ ಮುಖದಲ್ಲಿ ಖುಷಿಯ ಮಿಂಚು.........


ನೀವು ಟ್ರಾಫಿಕ್‌ನಲ್ಲಿ ನಿಂತಿರುತ್ತೀರಿ...... ಸುತ್ತಲು ದೂಳೂ, ಗಾಳಿ. ನಿಮಗೆ ಕಷ್ಟವಾಗುತ್ತಿರುತ್ತದೆ.... ಪಕ್ಕದಲ್ಲಿ ಒಂದು ಕಾರು ಬಂದು ನಿಲ್ಲುತ್ತದೆ... ನಿಮಗೆ ಗೊತ್ತಿಲ್ಲದ ಹಾಗೆ ಒಂದು ಕ್ಷಣ ಕಾರಿನ ಕಿಟಕಿಯ ಕಡೆಗೆ ನೋಡುತ್ತೀರಿ.. ಕಾರಿನಲ್ಲಿ ಅಮ್ಮನ ತೊಡೆಯಮೇಲೆ ಕುಳಿತಿದ್ದ ತುಂಟ ಮಗು ನೀವು ನೋಡುವುದನ್ನೇ ಕಾಯುತ್ತಿದ್ದು ತಕ್ಷಣ ನಿಮ್ಮೆಡೆಗೆ ಒಂದು ಕಿರುನಗೆ ಚಿಮ್ಮುತ್ತದೆ.........ಆಹಾ! ನಿಮ್ಮ ಮೈ ಮನಸೊಳಗೆ ಮಿಂಚಿನಂತೆ ಖುಷಿಯೊಂದು ಅವರಿಸಿದಂತಾಗುವುದಿಲ್ಲವೇ !...............


ಮನೆಯಲ್ಲಿ ಬಟ್ಟೆ ಬದಲಿಸಿಕೊಳ್ಳುವಾಗ ಪ್ಯಾಂಟಿನಿಂದ ಹತ್ತರ ನೋಟುಗಳು ಕೆಳಗೆ ಬಿದ್ದಾಗ ಅದನ್ನು ಗಮನಿಸಿದ ನನ್ನಾಕೆ, ಅದನ್ನು ಕೈಗಿತ್ತಿಕೊಳ್ಳುತ್ತಾಳೆ. ಓಹೋ ಇವತ್ತು ಹತ್ತು ರೂಪಾಯಿ ಹೋಯ್ತಲ್ಲ ಅನ್ನುವ ಅಲೋಚನೆ, ಅದು ಬಂದ ಮರುಕ್ಷಣದಲ್ಲಿಯೇ ತಪ್ಪಾಗುತ್ತದೆ. ಕೆಳಗೆ ಬಿದ್ದ ನೋಟನ್ನು ತೆಗೆದುಕೊಂಡು ನನ್ನ ಎರಡು ಕಣ್ಣುಗಳಿಗೊತ್ತಿ, ನಂತರ ನನ್ನ ಪ್ಯಾಂಟ್ ಜೇಬಿನೊಳಗೆ ಇಡುತ್ತಾಳೆ......ಇದ್ಯಾಕೆ ಹೀಗೆ ಎಂದರೆ ನೀವೆ ತಾನೆ ಬೀಳಿಸಿ ತಪ್ಪು ಮಾಡಿದ್ದು , ಆ ತಪ್ಪನ್ನು ಸರಿಮಾಡಬೇಕಾದರೆ ಆ ನೋಟನ್ನು ನಿಮ್ಮ ಕಣ್ಣಿಗೆ ಮುಟ್ಟಿಸುವುದೇ ಸರಿ ಎಂದಾಗ ಅಲ್ಲಿ ನಗೆ ಅಲೆ ಉಕ್ಕಿರುತ್ತದೆ.....


ಅಕ್ಕನ ಮಕ್ಕಳಾದ ಚೇತನ್ ಮತ್ತು ವರ್ಷಿಣಿ ೯ ಮತ್ತು ೭ ವರ್ಷದವರು. ನನ್ನ ಹುಟ್ಟಿದ ದಿನಕ್ಕಾಗಿ ಒಂದೊಂದು ಗ್ರೀಟಿಂಗ್ ಕಾರ್ಡುಗಳನ್ನು ಕೊಟ್ಟಿದ್ದು ನನಗೆ ಖುಷಿಯಾಗಿತ್ತು.


ಅವುಗಳನ್ನು ಅವರು ರಾತ್ರಿ ಒಂದು ಗಂಟೆಯವರಿಗೆ ಕೂತು ತಮ್ಮ ಕೈಯಾರೆ ಚಿತ್ರಬಿಡಿಸಿ....ಅಕ್ಷರ ಜೋಡಿಸಿದ್ದರಂತೆ........ ಅದನ್ನು ನೋಡಿದಾಗ ನನಗೆ ನಾನು ಬಾಲ್ಯದಲ್ಲಿ ಹೀಗೆ ಮಾಡುತ್ತಿದ್ದ ನೆನಪು ಮರುಕಳಿಸಿದ ಅನಂದವನ್ನು ಹೇಗೆ ವರ್ಣಿಸಲಿ.......!!




ಇದೇ ಮಾತನ್ನು ಕಾನ್ಸೂರಿನ ಹತ್ತಿರದ ಮುತ್ಮರ್ಡುನಲ್ಲಿರುವ ನಾಗೇಂದ್ರನ ಮಗನಾದ ಸುಹಾಸನ ಬಗ್ಗೆ ಹೇಳಬೇಕೆನಿಸುತ್ತದೆ........ಈ ಪೋರ ಪಾತ್ರದಾರಿಯಾಗಿರುವ ನನ್ನ ಆನೇಕ ಛಾಯಾಚಿತ್ರಗಳು ರಾಷ್ಟ್ರೀಯ ಅಂತರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿಕೊಟ್ಟಿವೆ......ಹೊಸ ವರ್ಷಕ್ಕೆ ಈತ ನನಗೆ ಕಳಿಸಿರುವ ಗ್ರೀಟೀಂಗ್ ಕಾರ್ಡು ಅವನೇ ಸ್ವತಃ ಅದರಲ್ಲಿ ಚಿತ್ರ ರಚಿಸಿ....ಬರೆದಿರುವುದು.....!!


ಇಂಥ ಸುಹಾಸನಂಥ ಸುಹಾಸನೇ ನಮ್ಮ ಮನೆಯಲ್ಲಿ ರಾಗಿ ಮುದ್ದೆಯನ್ನು ಎಷ್ಟು ಕಷ್ಟಪಟ್ಟರೂ ನುಂಗಲಾಗದೆ....ಅಗಿದು ನುಂಗಲೆತ್ನಿಸಿದ್ದು.......ಆ ಸಮಯದಲ್ಲಿ ಅವನ ಮುಖಭಾವ..........


"ಶಿವು ಮಾಮ...." ಅಂತ ಓಡಿ ಬಂದು ಪುಟ್ಟ ತೋಳುಗಳಿಂದ ನನ್ನ ಕುತ್ತಿಗೆ ಬಳಸುವ ನಾಗೇಂದ್ರನ ಎರಡನೇ ಮಗನಾದ ಆರುವರ್ಷದ ವಿಕಾಶನ ಮುಗ್ಧತೆ,........


ನಾನು " ಚಿಕ್ಕ ಬಿನ್ನೆತ್ತಿ" [ಎಲ್ ಕೆ ಜಿ] ಎನ್ನುತ್ತಾ ಹತ್ತಾರು ಮುಖಭಾವ ಪ್ರದರ್ಶಿಸುವ ೪ ವರ್ಷದ ಜಯಂತ......

ಜಯಂತ ಮತ್ತು ಆಶ್ವಿನಿ...ನನ್ನ ಕ್ಯಾಮೆರಾದಲ್ಲಿ ಈ ರೀತಿ ಸೆರೆಯಾದರು..........


ನಿಮ್ಮ ನೂರು ಮಾತಿಗೂ ಒಂದು ಮಾತು ಆಡದ ೪ ವರ್ಷದ ಆಶ್ವಿನಿ........

ಜೇಬಿನಲ್ಲೇ ತಿಂಡಿಯನ್ನು ಇಟ್ಟುಕೊಂಡು ಸ್ವಲ್ಪ ಸ್ವಲ್ಪ ತಿಂದು ಮತ್ತೆ ಜೇಬಿಗಿಳಿಸುವ ಅವನ ಅಣ್ಣ ಭರತ.............

ಫೋಟೋಗ್ರಫಿಯ ಬಗ್ಗೆ ಸದಾ ಕುತೂಹಲ ತೋರಿಸುವ ಅವಳಿಗಿಂತ ಎರಡೇ.... ವರ್ಷ ದೊಡ್ಡವ ಅವಳಣ್ಣ ಆಕ್ಷಯ....

ಇವರೆಲ್ಲರಿಗೂ ಲೀಡರಾಗಿ ಮುಂದಿರುವ ಸ್ವಾತಿ.......ಈ ಪುಟಾಣಿಗಳು........ಅವರ ಪುಟ್ಟ ಪುಟ್ಟ ಸಂತೋಷಗಳು.....

ದಿನಪತ್ರಿಕೆ ಕೆಲಸಗಳಿಗಾಗಿ ಕಛೇರಿಗಳಿಗೆ ನನ್ನ ಟೂ ವೀಲರ್‌ನಲ್ಲಿ ಓಡಾಡುವಾಗ, ಲಂಕೇಶ್, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಬಂದಿರುವ " ಸ್ಲಂ ಡಾಗ್ ಮಿಲಿಯನೇರ್ " ಲೇಖನವನ್ನು ಬೆಂಗಳೂರಿನ ಪ್ರತಿ ಟ್ರಾಫಕ್‌ನಲ್ಲೂ ನಿಂತಾಗ ಹತ್ತತ್ತು ಸಾಲುಗಳನ್ನು ಓದುವುದರಲ್ಲಿನ ಮಜಾ, ಆನಂದ......ಆಹಾ........[ಇದು ಪ್ರತಿದಿನ ಬೇರೆ ಬೇರೆ ಪತ್ರಿಕೆ, ವಿವಿಧ ವಿಚಾರಗಳು...........ಬೆಂಗಳೂರಿನ ಟ್ರಾಫಿಕ್ ನನಗೆಂದೂ ಕಿರಿಕಿರಿಯೆನಿಸಿಲ್ಲ.!!..........

"ಸಿಲಿಂಡರ್ ಮಾಡೋ, ಕಾಯಿ ಹೊಡಿ, ಹಣ್ಣು ಮಾಡೋ, ನಿದಾನವಾಗಿ ಫಾಲೋ ಮಾಡೋ.......!! " ಈ ಮಾತುಗಳು ನಾನು ಮೊನ್ನೆ ನಾಗಮಂಗಲ ರಸ್ತೆಯ ನಮ್ಮ ಹಳ್ಳಿಗೆ ಹೋಗುವ ತಿರುವಿನಲ್ಲಿ ಬಸ್ಸಿಗೆ ಕಾಯುವಾಗ ಅಲ್ಲಿರುವ ಅರಳಿಕಟ್ಟೆಯ ಮೇಲೆ ಹಿರಿಯರೆಲ್ಲಾ ಚೌಕಾಬಾರ ಆಡುತ್ತಾ ಹೇಳುತ್ತಿದ್ದ ಮಾತುಗಳು...ನಮ್ಮೂರಿನ ರಸ್ತೆ ಬದಿಯ ಚೌಕಾಬಾರ ಆಟನಿರತ ಗುಂಪು..........

ಇನ್ನಷ್ಟು ಹೊತ್ತು ನಿಂದಿದ್ದರೆ ಮತ್ತಷ್ಟು ಮಾತುಗಳು ಕೇಳಿಬರುತ್ತಿದ್ದವೇನೋ..........ಅವರ ತನ್ಮಯತೆ, ಕುತೂಹಲ, ಮಾತುಗಾರಿಕೆ.......ಆಹಾ...............

ನನ್ನೂರಿನಲ್ಲಿ ಚುಮುಚುಮು ಚಳಿಯಲ್ಲಿ, ದೊಡ್ಡ ಹಂಡೆಯ ತುಂಬಾ ತೆಂಗಿನ ಸೋಗೆಯಿಟ್ಟು ಕಾಯಿಸಿದ ನೀರು.....ನನ್ನಮ್ಮ ಬೆಳಗಿನ ಚಳಿಯಲ್ಲಿ ಎದ್ದೇಳಿಸಿ ಸ್ನಾನ ಮಾಡಿಕೊ ಅಂದಾಗ ಮನಸ್ಸಿಲ್ಲದ ಮನಸ್ಸಿನಲ್ಲಿ ಎದ್ದು ಹೋದೆ....ಗಣಗಣ ಕಾಯುತ್ತಿರುವ ನೀರು......ಹೊರಗೆ ಚಳಿಯಂಥ ಚಳಿ.....ಉರಿಯುವ ಹೊಲೆಮುಂದೆ ಕೂತು ಬೆಂಕಿ ಕಾಯಿಸಿಕೊಳ್ಳುತ್ತಿದ್ದರೇ.........

ಆ ಬೆಂಗಳೂರಿನ ಟೆನ್ಸನ್ ಜೀವನವನ್ನು ನೀವಾಳೀಸಿ ಎಸೆದುಬಿಡಬೇಕೆನ್ನಿದ್ದುನಿಜ....

ಸೂರ್ಯ ಮತ್ತು ಇತರ ಗ್ರಹಗಳಿಂದ ನಮ್ಮೆಡೆಗೆ ಹರಿದುಬರುವ ಫಲ ಫಲಾಗಳಿಗೂ, ದೆಹಲಿಯ ಪ್ರಧಾನ ಮಂತ್ರಿ ಫಂಡ್‌ನಿಂದ ಹರಿದುಬರುವ ಹಣ ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ತಲುಪಿ ಅದರಿಂದ ಆಗುವ ಜನಕಾರ್ಯಕ್ಕೂ ಲಿಂಕಿಸುವ ನಮ್ಮೂರಿನ ಅಡುಗೆ ಭಟ್ಟನ ಅಧ್ಬುತ ಮಾತೂಗಾರಿಕೆಗಳೂ.......

ವಿಂಧ್ಯಾಳಿಂದ ಆಗಾಗ ಬರುವ ಮಿಸ್ಸ್‌ಡ್ ಕಾಲುಗಳು...............ಎಸ್ ಎಮ್ ಎಸ್ ಜೊತೆಗೆ ಬರುವ ಕೈಗಳು......

ಗದ್ದೆ ಬಯಲಿನಲ್ಲಿ ಮುಂಜಾನೆ ನಡೆಯುತ್ತಿದ್ದರೆ.........ತೆಂಗಿನ ಮರಗಳ ನಡುವೆ ತೂರಿ ಬರುವ ಬಿಸಿಲ ಕೋಲುಗಳು.........

ಹಂಚಿಕಡ್ಡಿ ಮೇಲೆ ಕುಳಿತ ಚಿಟ್ಟೆಯ ಕಾಮನಬಿಲ್ಲಿನಂತ ರೆಕ್ಕೆಗಳ ಮೇಲೆ ಕುಳಿತ ತುಷಾರ ಬಿಂದುಗಳು.........


ಇವುಗಳನ್ನು ಎಂಜಾಯ್ ಮಾಡುವಷ್ಟೇ ಚೆನ್ನಾಗಿ........

ರಾಗಿ ಮುದ್ದೆ ನುಂಗುವುದಾ ಅಥವಾ ಅಗಿಯುವುದಾ.........

ನ್ಯೂಡಲ್ಸ್ ಕೈಯಲ್ಲಿ ತಿನ್ನೋದ ಅಥವ ಚಮಚದಲ್ಲಿ ತಿನ್ನೋದ...........ಅಂಥ ಅವರದೇ ಶೈಲಿಯಲ್ಲಿ ತರ್ಕಿಸುವ ಪ್ರಕಾಶ ಹೆಗಡೆಯವರ ಮಾತುಗಾರಿಕೆ.........

ಗೊತ್ತಿಲ್ಲದೇ ಪೂರ್ತಿ ಅಮುಕಿ ಹೊರಬಂದ ಟೂತ್ ಪೇಷ್ಟನ್ನು ಮತ್ತೆ ಬಂದದಾರಿಯಲ್ಲೇ ಒಳಹಾಕುವ ಪ್ರಯತ್ನದಲ್ಲಿ. ಗೊತ್ತಿಲ್ಲದಾ ಹಾಗೆ ನನ್ನ ಬಾಯಿಂದ ಗಾಳಿಯನ್ನು ಒಳಗೆ ಎಳೆದುಕೊಳ್ಳುತ್ತಾ............

ಪುಸ್ತಕ ಓದುತ್ತಾ ನಿದ್ರೆ ಮಾಡೋದ್ ಸರೀನಾ ? ಅಥವ ನಿದ್ರೆ ಮಾಡುತ್ತಾ ಪುಸ್ತಕ ಓದೋದ್ ಸರಿನಾ ?......

ಅಂತ ಕನ್‌ಪ್ಯೂಸನ್ ಮಾಡಿಕೊಳ್ಳುವ ಗೆಳೆಯರನ್ನು ನೋಡುವಾಗ ಆಗುವ ಪುಟ್ಟ...ಪುಟ್ಟ ಪುಟಾಣಿ ಸಂತೋಷಗಳಗೆ ಬೆಲೆಕಟ್ಟಲು ಸಾಧ್ಯವೇ ?

ಇನ್ನೂ ನನ್ನ ಮೆಚ್ಚಿನ ವೃತ್ತಿ ಮತ್ತು ಹವ್ಯಾಸವಾದ[ದಿನಪತ್ರಿಕೆ ಕೆಲಸವೂ ಮೆಚ್ಚಿನದೇ]ಫೋಟೋ ತೆಗೆಯುವಾಗ ಅದು ಮದುವೆ ಮನೆಯಿರಲಿ, ಚಿಟ್ಟೆ ಹುಳುಗಳಾಗಲಿ, ಪಕ್ಷಿಗಳಾಗಲಿ.....ಪಿಕ್ಟೋರಿಯಲ್ ಫೋಟೊಗ್ರಫಿಯ ನೆರಳು ಬೆಳಕಿನ ದೃಶ್ಯಗಳಾಗಲಿ................ನನ್ನ ಕಣ್ಣಿಗೂ-ಕ್ಯಾಮೆರಾ ಕಣ್ಣಿಗೂ ಸಲಿಗೆ.....ಸಲುಗೆಯಲ್ಲ....ಇಂಥ ಪುಟ್ಟ ಪುಟ್ಟ ಸಂತೋಷಗಳ ಸುಲಿಗೆ. ..........

ಇಂಥವು ಸಾವಿರಾರು. ಅವುಗಳಲ್ಲಿ ಕೆಲವನ್ನು ನಿಮಗಿಲ್ಲಿ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇನೆ.......ಎಂಜಾಯ್ ಮಾಡಿ....ನಿಮಗೂ ನೆನಪಾಗಬಹುದು.....ಹಂಚಿಕೊಳ್ಳಿ.........

ಚಿತ್ರ ಮತ್ತು ಲೇಖನ....
ಶಿವು......

Wednesday, January 14, 2009

ತಂಗಿ......ಇದೋ ನಿನಗೊಂದು ಪತ್ರ.....


ವಿಂಧ್ಯಾ ಪುಟ್ಟಿ........... ನಿನಗೇಕೆ ಪತ್ರ ಬರೆಯಬೇಕು ? ನೀನೇನು ಒಡಹುಟ್ಟಿದವಳಾ ? ಅಥವಾ ಹತ್ತಾರು ವರ್ಷದ ಆತ್ಮೀಯ ಗೆಳೆತಿಯ ?

ಈ ಪ್ರಶ್ನೆ ಇಂದು ಬೆಳಿಗ್ಗೆ ನೂರನೆ ಸಲ ಉದ್ಭವಿಸಿತ್ತು. ಅದೇ ಸಮಯಕ್ಕೆ

" ಅಣ್ಣಾ ಗುಡ್ ಮಾರ್ನಿಂಗ್, ಇವತ್ತು ಬೇಗ ಎದ್ದೆ. "

ನಿನ್ನಿಂದ ಮೆಸೇಜು....................

ಮತ್ತೊಂದು ಗಂಟೆ ಕಳೆದಿರಬಹುದು. ನಿನ್ನಿಂದ ಮಿಸ್‌ಡ್ ಕಾಲ್......................

ಇನ್ನೂ ತಡೆಯಲಾರದೆ ಸಿಟ್ಟಿನಿಂದ ಆ ಪ್ರಶ್ನೆಯನ್ನು ಮತ್ತು ಅದನ್ನು ಹುಟ್ಟಿಸಿದ ಬುದ್ಧಿಯನ್ನು ಕಸದ ಬುಟ್ಟಿಗೆ ಹಾಕಿ ನಿನಗೊಂದು ಪತ್ರ ಬರೆಯತೊಡಗಿದೆ.

ಅಂದ ಮಾತ್ರಕ್ಕೆ ನಾನೇನು ಮಹಾನ್ ಪತ್ರಗಾರನಲ್ಲ. ನಿಜ ಹೇಳಬೇಕೆಂದರೆ ಇದು ನನ್ನ ಜೀವನದ " ಮೂರನೆ " ಪತ್ರ.


ಮೊದಲನೆ ಪತ್ರ ಬರೆದಿದ್ದು ನಾನು ದ್ವಿತೀಯ ಪಿ, ಯು. ಸಿ. ಅಂತಿಮ ಪರೀಕ್ಷೆಯಲ್ಲಿ. ಒಂದು ಪತ್ರ ಬರೆದರೆ ೧೨ ಆಂಕ ಕೊಡುತ್ತಿದ್ದುದರಿಂದ ಬೇಕೊ ಬೇಡವೋ ಒಂದು ವ್ಯವಹಾರದ ಪತ್ರ ಬರೆದು ಎಂಟು ಆಂಕ ಗಿಟ್ಟಿಸಿದ್ದೆ. ಎರಡನೆಯ ಪತ್ರದ ಸಮಯವನ್ನು ಮುಂದೆ ಹೇಳುತ್ತೇನೆ.

ಇಂದಿಗೆ ಸರಿಯಾಗಿ ಒಂದು ತಿಂಗಳು ಹಿಂದೆ........... ಸೋಮವಾರ ನಾನು ಟೂ ವೀಲರ್‌ನಲ್ಲಿ ಹೋಗುತ್ತಿದ್ದಾಗ ಒಂದು ಫೋನ್ ಕಾಲ್!

" ಹಲೋ ಶಿವಣ್ಣ ನಾನು ವಿಂಧ್ಯಾ ... ಅಂತಾ........

ಮಗುವಿನಂತಹ ದ್ವನಿಯಿರುವ ಹುಡುಗಿಯ ಮಾತು ಮೊದಲ ಸಲ ಕೇಳಿದಾಗ ನನಗೆ ಗೊತ್ತಾಗಲಿಲ್ಲ. ನನ್ನ ಟೂ ವೀಲರ್ ಸೈಡಿಗೆ ಹಾಕಿ. "ಈಗ ಹೇಳಿ ಯಾರು ಅಂತಾ..........." ಎಂದೆ. ಮತ್ತೆ ನಿನ್ನಿಂದ ಅದೇ ಮಾತು.

ಮುಂದುವರಿದು " ನಿಮ್ಮ ನಂಬರನ್ನು ಇಂಟರ್‌ನೆಟ್‌ನಿಂದ ಕದ್ದೆ ನಿಮಗೆ ಬೇಸರವಿಲ್ಲವಲ್ಲ " ಎಂದು ಹೇಳಿ ನಿನ್ನ ಪರಿಚಯ ಮಾಡಿಕೊಂಡೆ. ಆಗ ನನಗೆ ಗೊತ್ತಾಗಿದ್ದು ನೀನು ನನ್ನ ಬ್ಲಾಗನ್ನು ಪ್ರತಿನಿತ್ಯ ಓದಿ ಬ್ಲಾಗಿನಲ್ಲಿ ಕಾಮೆಂಟ್ ಮಾಡದೇ ಮೇಲ್‌ನಲ್ಲಿ ಪ್ರತಿಕ್ರಿಯಿಸುತ್ತಿರುವ ಹುಡುಗಿ......ಅಂತ.

ಸ್ವಲ್ಪ ಹೊತ್ತು ಮಾತಾಡಿದ ನಂತರ ನಿಮ್ಮ ಫೋನ್ ನಂಬರನ್ನು ನಿಮ್ಮ ಗೆಳೆಯರೊಬ್ಬರಿಂದ ಕೇಳಿ ಪಡೆದುಕೊಂಡೆ ಎಂದು ಹೇಳಿ ನಿನ್ನ ನಂಬರನ್ನು ಮೆಸೇಜ್ ಮಾಡಿದೆ.

ಅಮೇಲೆ ಹರಿದಾಡಿತಲ್ಲ ಎಸ್ ಎಮ್ ಎಸ್ ಗಳು............... ಮೊದಲ ದಿನವೇ ನಿನ್ನ ವಿಚಾರ ಸ್ವಲ್ಪ ತಿಳಿಯಿತು. ದಿನದ ಕೊನೆಯಲ್ಲಿ ನಿನ್ನಿಂದ ಬಂತಲ್ಲ ಒಂದು ಮೆಸೇಜು.


" ನನಗೆ ಆಣ್ಣಾ ಇಲ್ಲಾ, ಅದಕ್ಕೆ ನಿಮ್ಮನ್ನೆ ಅಣ್ಣಾ ಅಂತೀನಿ "

"ನನಗೆ ತಂಗಿ ಇಲ್ಲ ನಿನ್ನನ್ನೇ ತಂಗಿ ಅಂತೀನಿ "

ನಾನು ತಕ್ಷಣ ಎಸ್ ಎಮ್ ಎಸ್ ಕಳುಹಿಸಿದ್ದೆ. ಆ ಕ್ಷಣ ಹಾಗೇಕೆ ಮಾಡಿದೆನೋ ಗೊತ್ತಿಲ್ಲ.

ಅನಿರೀಕ್ಷಿತವಾದದ್ದು ಲಭಿಸುವಾಗ
ಪ್ರತಿಕ್ಷಣದಲ್ಲೂ ಅಚ್ಚರಿ ಮತ್ತು ಆನಂದ......
ಆ ರೋಮಾಂಚನ ನಿರೀಕ್ಷಿತವಾದದ್ದು
ಸಿಗುವಾಗ ಇರಲಾರದು........................


ಇಲ್ಲಿ ನನ್ನ ಒಡಹುಟ್ಟಿದ ತಂಗಿಯ ವಿಚಾರವನ್ನು ಸ್ವಲ್ಪ ನಿನಗೆ ಹೇಳಬೇಕಿದೆ.

ಬಾಲ್ಯದಲ್ಲಿ ಅಪ್ಪ ನನಗೆ ಐದು ಪೈಸೆ ಕೊಟ್ಟು ಅವಳಿಗೆ ತಿಂಡಿ ಕೊಡಿಸು ಅಂತ ಕಳಿಸುತ್ತಿದ್ದರು. ನಾನು ಆ ಐದು ಪೈಸೆಯಲ್ಲಿ, ಪೈಸಕ್ಕೊಂದರಂತೆ ಸಿಗುವ ನಮ್ಮ ಪುಟ್ಟ ಪುಟ್ಟ ಕೈ ಬೆರಳುಗಳಿಗೆ ಸಿಕ್ಕಿಸಿಕೊಳ್ಳುವ ಕೋಡುಬಳೆಯನ್ನು ಕೊಂಡುಕೊಂಡು ಅವಳಿಗೆ ಮೂರು ಕೊಟ್ಟು ಎರಡನ್ನು ಜೇಬಿಗಿಳಿಸುತ್ತಿದ್ದೆ.

ಕಲ್ಮಶ ತುಸು ಇಲ್ಲ.......
ನಿರ್ಮಲ ಖುಷಿ ಎಲ್ಲಾ.........
ಒಂದು ಗೂಡಿ ಕಳೆಯುವ ಕ್ಷಣದಲ್ಲಿ.......
ಗೆಳೆತನ ಎಂಥ ಮೋಡಿ...............


ಅವಳಿಗೆ ಬುದ್ದಿ ಬರುವವರೆಗೆ "ಟೋಪಿ" ಹಾಕಿಸಿಕೊಳ್ಳುವ ತಂಗಿಯಾಗಿದ್ದ ಅವಳು ನಾನು ಕಾಲೇಜಿಗೆ ಹೋಗುವ ಸಮಯಕ್ಕೆ ಅಮ್ಮನಾಗತೊಡಗಿದಳು.


ನಮ್ಮ ಮನೆಯಲ್ಲಿ ಬಡತನ. ನಾನಾಗ ಬೆಳಿಗ್ಗೆ ೫ ಗಂಟೆಗೆ ಎದ್ದು ಮನೆ ಮನೆಗೆ ಪತ್ರಿಕೆ ಹಂಚಲು ಹೋಗುತ್ತಿದ್ದೆ. ೬-೩೦ ಕ್ಕೆ ವಾಪಸ್ಸು ಬಂದು ಅರ್ದ ಗಂಟೆಯಲ್ಲಿ ರೆಡಿಯಾಗಿ ೭-೩೦ರ ಹೊತ್ತಿಗೆ ಕಾಲೇಜಿಗೆ ಹೋಗಬೇಕಿತ್ತು.

ನನಗಾಗಿ ಬೇಗ ಎದ್ದೇಳುತ್ತಿದ್ದ ತಂಗಿ ರುಕ್ಕು[ರುಕ್ಮಿಣಿದೇವಿ] ಏನಾದರೂ ತಿಂಡಿ ಮಾಡಿಕೊಡುತ್ತಿದ್ದಳು. ಮನೆಯಲ್ಲಿ ರೇಷನ್ ಇಲ್ಲದ ದಿನ ರಾತ್ರಿ ಉಳಿದ ಅನ್ನ ಸಾರು ಬಿಸಿ ಮಾಡಿ ಅಮ್ಮನಂತೆ ಬಡಿಸುತ್ತಿದ್ದಳು.

ಕೆಲವೊಂದು ದಿನ ಏನು ಇಲ್ಲದೆ ನಾನು ಹಾಗೆ ಹೋಗುವಾಗ

" ಅಣ್ಣಾ ಏನು ಅಂದುಕೋಬೇಡ. ಇವತ್ತು ಏನು ಮಾಡಲಿಕ್ಕಾಗಲಿಲ್ಲ." ವೆಂದಾಗ ನಾನು ಮರು ಮಾತಾಡದೆ ಹೋಗಿಬಿಡುತ್ತಿದ್ದೆ.

ಮದ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಕಾಲೇಜು ಮುಗಿಸಿ ಹೊಟ್ಟೆ ಹಸಿದು ಸುಸ್ತಾಗಿ ಬಂದಾಗ ಬಿಸಿ ಬಿಸಿ ರಾಗಿ ಮುದ್ದೆ ಬಸ್ಸಾರು ಮಾಡಿ ಬಡಿಸಲು ಕಾಯುತ್ತಿದ್ದಳು.

ದೇವರು ಅವಳನ್ನು ನನಗೆ ಯಾಕೆ
ಪರಿಚಯಿಸಿದ ಎಂಬುದಕ್ಕಿಂತ ನನಗೊಂದು
ಪ್ರೀತಿಸುವ ಹೃದಯದ ಅಗತ್ಯವಿತ್ತು ಅಂತ
ದೇವರಿಗೆ ಗೊತ್ತಾದದ್ದಾದರೂ ಹೇಗೆ !!..............


ಹಾಗಂತ ನನಗೆ ಅಪ್ಪ.. ಅಮ್ಮ.. ಅಕ್ಕ.. ತಮ್ಮ.. ಯಾರು ಈ ರೀತಿ ನೋಡಿಕೊಳ್ಳುತ್ತಿರಲಿಲ್ಲವೇ ಅಂತ ನಿನಗೆ ಅನ್ನಿಸಬಹುದು. ಅಪ್ಪ ಸಂಸಾರದ ನೊಗ ಹೊತ್ತಿದ್ದರು. ಅಮ್ಮ ಅಪ್ಪನಿಗೆ ಸಾತಿಯಾಗಿದ್ದಳು. ಅಕ್ಕ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳಾದರೂ ಕೆಲವೇ ದಿನಗಳಲ್ಲಿ ಅಕ್ಕನ ಮದುವೆಯಾಗಿ ತಂಗಿಯೇ ಮನೆಯ ಒಳಗಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಎಲ್ಲರಿಗೂ ಅಮ್ಮ ಆಗಿದ್ದಳು.


ಇಂಥ ತಂಗಿಗೆ ಮದುವೆಯಾಗಿ ಗಂಡನ ಮನೆಗೆ ಹೋದಾಗ ನನ್ನ ಎರಡನೆ ಅಮ್ಮ ದೂರವಾದಳೇನೋ ಅನ್ನಿಸಿತ್ತು. ಕೆಲವೇ ದಿನಗಳಲ್ಲಿ ಅಪ್ಪನಿಗೆ ನಿವೃತ್ತಿಯಾಗಿ ಮನೆಯ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು.

ತಂಗಿಯ ಚೊಚ್ಚಲ ಹೆರಿಗೆ ಕಷ್ಟವಾಗಿ ತಾಯಿ-ಮಗು ಇಬ್ಬರ ಜೀವಕ್ಕೂ ಅಪಾಯ ಅಂತ ಡಾಕ್ಟರಮ್ಮ ಹೇಳಿದಾಗ ನನ್ನ ಪಾಲಿಗೆ ಭೂಮಿ ಬಿರಿದಂತಾಗಿತ್ತು.

ಅವಳಿಗೆ ರಕ್ತ ಕೊಡಬೇಕೆಂದಾಗ ನನ್ನ ರಕ್ತವನ್ನೇ ಕೊಟ್ಟಿದ್ದೆ. ನನ್ನದು " ಎ ಪಾಸಿಟೀವ್ " ಆಗಿದ್ದರಿಂದ ಹೆಚ್ಚು ಮೌಲ್ಯವುಳ್ಳದ್ದು ಅಂತ ಯಾರೋ ಹೇಳಿದ ನೆನಪು. ಆ ಬೆಲೆಯುಳ್ಳ ರಕ್ತವೂ ನನ್ನ ತಂಗಿಯನ್ನು, ಅವಳ ಮಗುವನ್ನು ಉಳಿಸಿಕೊಳ್ಳಲಾಗದೆ ಬೆಲೆ ಕಳೆದುಕೊಂಡಿತ್ತು...........

ಇನ್ನೊಬ್ಬರಿಗೆ ತಿಳಿಯಬಾರದೆಂದು ನಮ್ಮ
ನೋವನ್ನು ಎಷ್ಟು ಬಚ್ಚಿಟ್ಟರೂ..........
ಅದು ಪ್ರಕಟವಾಗದೆ ಇರದು.
ಅಂತೆಯೇ ಪ್ರೀತಿಯೂ.......... !!


ಶವಗಳನ್ನು ಮನೆಗೆ ತಂದ ರಾತ್ರಿ ನಾನು ನನ್ನ ಜೀವನದ ಎರಡನೆ ಪತ್ರವನ್ನು ಅಮ್ಮನ ಪಾತ್ರದಲ್ಲಿದ್ದ ತಂಗಿ ರುಕ್ಮಿಣಿಗೆ ಬರೆದಿದ್ದೆ.


ಆದರೆ ವಿಂಧ್ಯಾ ಪುಟ್ಟಿ............. ನಿನಗೆ ಈ ಮೂರನೆ ಪತ್ರವನ್ನು ಬರೆಯಬೇಕು ಅಂತ ಏಕೆ ಅನ್ನಿಸಿತೋ ಗೊತ್ತಿಲ್ಲ.


ಮೂರು ದಿನಗಳ ಹಿಂದೆ ರಾತ್ರಿ " ಆಣ್ಣಾ ನನಗೆ ಬೇಜಾರಾಗ್ತಿದೆ, ಜ್ವರಾನು ಬಂದಿದೆ " ಬಂತಲ್ಲ ನಿನ್ನಿಂದ ಒಂದು ಮೇಸೇಜು.

" ಯಾಕೊ ಮರಿ ಏನಾಯ್ತು " ನನ್ನ ಕಡೆಯಿಂದ.

" ನನ್ ತಮ್ಮ ನನಗೆ ಹೇಳದೆ ಅವನ ಪ್ರೆಂಡ್ ಮನೆಗೆ ಹೋದ. ನನಗೆ ಒಬ್ಬಳೇ ಅಂತ ಬೇಸರವಾಗಿದೆ ಅಣ್ಣಾ " ನಿನ್ನ ಕಡೆಯಿಂದ..


ನನಗೆ ನಗು ಬಂತು. ಚಿಕ್ಕಂದಿನಲ್ಲಿ ನನ್ನ ತಂಗಿಯೂ ಕೂಡ ಇಂಥದ್ದೇ ಕೆಲವು ಸಣ್ಣ [ಕ್ಷಮಿಸು ಸಣ್ಣದು ಅಂದಿದ್ದಕ್ಕೆ] ಸಣ್ಣ ಕಾರಣಗಳಿಗೆ ನನ್ನ ತಮ್ಮನ ಮೇಲೆ ದೂರು ಹೇಳುತ್ತಿದ್ದುದ್ದು ನೆನಪಾಯಿತು.........ಇದು ಹೀಗೆ ಮುಂದುವರಿದಿತ್ತು.


ನೀನು ಮತ್ತು ನಾನು ಪ್ರತಿದಿನ ಚಿಕ್ಕಮಕ್ಕಳ ಹಾಗೆ, ನಮ್ಮ ದಿನನಿತ್ಯದ ವಿಚಾರಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ನನ್ನೆಲ್ಲಾ ಕೆಲಸದ ನಡುವೆ ನಿನ್ನ ಒಂದು ಫೋನ್ ಕಾಲ್ ಅಥವ ಒಂದು ಎಸ್ ಎಮ್ ಎಸ್ ನನಗೊಂತರ ರಿಲೀಪ್ ಕೊಡಲಾರಂಭಿಸಿತು. ನಿನಗೆ ಹಾಗೆ ಆನ್ನಿಸುತ್ತಿತ್ತಾ ? ಗೊತ್ತಿಲ್ಲಾ.........


ಕೆಲವೊಮ್ಮೆ ನಿನ್ನ ಮಾತು ಕೇಳುತ್ತಿದ್ದಾಗ ಚಿಕ್ಕಂದಿನಲ್ಲಿ ನನ್ನ ತಂಗಿ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಇಬ್ಬರೂ ಹೊರಪ್ರಪಂಚದ ಹರಿವಿಲ್ಲದೆ ಮಾತಾಡುತ್ತಾ, .......ಒಂದು ಕ್ಷಣ............. ನಗು, ಮರುಕ್ಷಣ ಹುಸಿಮುನಿಸು...........ಟೂ ಟೂ..... ಶೇ..................................


ಮಲ್ಲಿಗೆ ಗುಲಾಬಿಗೆ ತನ್ನ ಪರಿಮಳದ
ಒಂದಂಶವನ್ನು ಕೊಟ್ಟಂತೆ................
ಗುಲಾಬಿ ಮಲ್ಲಿಗೆಗೆ ತನ್ನ ಸೌಂದರ್ಯದ

ಕೊಂಚ ಭಾಗವನ್ನು ಕೊಟ್ಟಂತೆ...............

ನೆನಪು ಮರುಕಳಿಸಿತ್ತು. ಅದಕ್ಕಾಗಿ ನಿನಗೆ ಸಾವಿರ ಸಾವಿರ ಥ್ಯಾಂಕ್ಸ್.............


ಇಷ್ಟಕ್ಕೂ ನಾವಿಬ್ಬರೂ ಮುಖಾ ಮುಖಿ ಭೇಟಿಯಾಗೆ ಇಲ್ಲ. ಫೋನಿನಲ್ಲಿ ನಿನ್ನ ಮಾತು ಮತ್ತು ದ್ವನಿ ಮಗುವಿನಂತೆ... ನಿನ್ನ ಕಾಮೆಂಟುಗಳನ್ನು ಓದಿದಾಗ ನನಗನ್ನಿಸಿದ್ದು ನೀನು ಬುದ್ಧಿವಂತೆ. ತುಂಬಾ ಪುಸ್ತಕ ಓದಿದ್ದೀಯಾ ನಿನ್ನ ವಯಸ್ಸಿಗೆ ಮೀರಿದ ಕಷ್ಟಗಳನ್ನು ಅನುಭವಿಸಿದ ಅಮ್ಮನ ಹಾಗೆ ಅಂತ. ನಾನಂತೂ ನಿನ್ನೆರಡೂ ಪಾತ್ರಗಳನ್ನು "Enjoy" ಮಾಡುತ್ತಿದ್ದೇನೆ.


ನನಗೆ ಇವತ್ತು ಬೆಳಿಗ್ಗೆ ಈ ಪತ್ರ ಬರೆಯುವ ತುಡಿತ ಹೆಚ್ಚಾದಾಗ ನಾನು ದಿನಪತ್ರಿಕೆಗಳ ಹಣ ವಸೂಲಿಗಾಗಿ ಮನೆ ಮನೆಗೆ ಅಲೆಯುತ್ತಿದ್ದೆ. ಈ ಪತ್ರ ಬರೆಯಲು ಕಾಗದವಿರಲಿಲ್ಲ. ಕೊನೆಗೆ ನನ್ನ ಹಣ ವಸೂಲಿಯ ಅಂಗೈ ಅಗಲದ ರಸೀತಿಯ ಹಿಂಭಾಗದಲ್ಲೇ ಮನೆ ಮನೆ ಅಲೆಯುತ್ತಾ ಈ ಪತ್ರ ಬರೆದು ಮುಗಿಸಿದೆ.


ಈ ಕಾರಣಕ್ಕೆ ರಸೀತಿಯೆಲ್ಲಾ ಖಾಲಿಯಾಗಿ ಪೂರ್ತಿ ಹಣ ವಸೂಲಿಯಾಗಲಿಲ್ಲ. ಇದಕ್ಕೆ ನೀನು ಕಾರಣ. ಹಣ ವಸೂಲಿ ಸರಿಯಾಗಿ ಆಗದಿದ್ದರೂ ರಸೀತಿಯ ಹಿಂದೆ ನನ್ನ ಭಾವನೆಗಳು ಸಂಪೂರ್ಣ ವಸೂಲಾಗಿದೆಯೆಂಬ ಖಾತ್ರಿಯಾಗಿದೆ........


ಕೊನೆಯ ಮಾತು. ನೀನು ಇದಕ್ಕೆ ಬೈಯಬಹುದು. ಮೊದಲೇ ಸಿಟ್ಟಿನ ಹುಡುಗಿಯೆಂದು ನಿನಗೆ ನೀನೆ ಸರ್ಟಿಫಿಕೇಟ್ ಕೊಟ್ಟುಕೊಂಡಿರುವುದರಿಂದ ಮತ್ತು ನಿನ್ನ ಮೆಸೇಜ್ ಹಾಗು ಮಿಸ್ಸ್‌ಡ್ ಕಾಲ್‌ಗೆ ನಾನು ಉತ್ತರಿಸದಿರುವ ಕಾರಣ ಇದೊಂದೆ ಎಂದು ಹೇಳಿದರೂ ನಿನ್ನ ಬಗ್ಗೆ ವಾತ್ಸಲ್ಯ ತುಂಬಿದ ಪ್ರೀತಿಯ ಜೊತೆಗೆ ಭಯವಿದೆಯೆಂದು ಹೇಳುತ್ತಾ ಈ ಪತ್ರವನ್ನು ಮುಗಿಸುತ್ತೇನೆ......
ಬೇಗ ಹುಷಾರಾಗು ತಂಗಿ.........ಇವತ್ತಿನ ದಿನ ನಿನ್ನದಾಗಲಿ...................


ನಿನ್ನ ಪ್ರೀತಿಯ ಅಣ್ಣ...........

ಶಿವು.

-------------------------------------

ನನ್ನ ತಂಗಿ ರುಕ್ಮಿಣಿ ದೇವಿ.





ಇಂದು ಜನವರಿ ೧೬. ನನ್ನ ತಂಗಿ ರುಕ್ಮಿಣಿಯ ಜನ್ಮ ದಿನ. ಅವಳಿದ್ದಿದ್ದರೆ ಇಂದಿಗೆ ೨೯ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಅವಳ ನೆನಪಿಗಾಗಿ ಮತ್ತೊಬ್ಬ ಸಹೋದರಿ ವಿಂಧ್ಯಾಳ ಅನುಮತಿ ಪಡೆದು ಈ ಪತ್ರವನ್ನು ಬ್ಲಾಗಿಗೆ ಹಾಕಿದ್ದೇನೆ......

ಧನ್ಯವಾದಗಳು.

ಶಿವು.

Thursday, January 8, 2009

ನಿಮ್ಮೆಂಗುಸ್ರೂ.......ಪಕ್ಕದ ಮನೆ ಹೆಂಗಸ್ರೂ..........

"ಬನ್ನಿ ಬನ್ನಿ.......ಎಲ್ಲರೂ ಬನ್ನಿ.....ಕೈ ತೊಳೆದುಕೊಳ್ಳಿ.....ನಿಮೆಂಗುಸ್ರೂ............. ಪಕ್ಕದ ಮನೆ ಹೆಂಗಸ್ರೂ ಕಾಯ್ತಿದ್ದಾರೆ.... ಬನ್ನಿ..... "!!

ಮೂರ್ತಿ ಕರೆದಾಗ ಅಂತ ಕೆಮ್ಮಣುಗುಂಡಿ ಗಿರಿಧಾಮದ ಕಡೆಗೆ ಹೋಗುವ ದಾರಿಯಲ್ಲಿ ಸಿಕ್ಕುವ ಹೊನ್ನಮ್ಮನ ಹಳ್ಳದ ಬಳಿ ಇಬ್ಬನಿ ತಬ್ಬಿದ ಚಳಿಯ ವಾತಾವರಣದಲ್ಲೂ ನಮಗೆಲ್ಲಾ ಮೈ ಬಿಸಿಯಾಯಿತು....

ಅದೇನೆಂದು ನೋಡಲು ಹೋದರೆ ಮೂರ್ತಿ ಒಬ್ಬಬ್ಬರಿಗೆ ಒಂದೊಂದು ಕವರ್ ಕೊಡುತ್ತಾ .,

"ನೋಡಿ ಇದರಲ್ಲಿ ಇಬ್ಬರೂ ಇದ್ದಾರೆ ನಿಮಗ್ಯಾವುದು ಬೇಕೊ ಅದನ್ನು ತಿನ್ನಿ........ "

ತೆಗೆದು ನೋಡಿದರೆ ಅದರಲ್ಲಿ ಉಪ್ಪಿಟ್ಟು ಮತ್ತು ಕೇಸರಿ ಬಾತಿನ ಪಟ್ಟಣವಿತ್ತು...

ಹೊಸ ಜಾಗದಲ್ಲಿ ಹೊಸವಿಚಾರವಿರುವ ಹಾಗಿದೆಯಲ್ಲ .....

ನಿಮ್ಮೆಂಗಸ್ರೂ......ಪಕ್ಕದಮನೆ ಹೆಂಗಸ್ರೂ.....ತಿನ್ನುತ್ತಿರುವ ಘನಶ್ಯಾಮ್ ಮತ್ತು ಕಿಶೋರ್‍


ನಮ್ಮ ಕುತೂಹಲವನ್ನು ತಣಿಸಲಿಕ್ಕಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ವರದಿಗಾರರಾದ ತಿಪ್ಪೆರುದ್ರಪ್ಪ ವಿವರಣೆ ಕೊಟ್ಟರು.

ನಿಮ್ಮ ಕೈಲಿರುವ ಉಪ್ಪಿಟ್ಟು ನಿಮ್ಮೆಂಗುಸ್ರೂ....... ಅದನ್ನು ಹೇಗಿದ್ರು ಸಹಿಸಿಕೊಂಡು ತಿನ್ನುತ್ತೀರಿ.....ಅದರೆ ಅದೇ ಕೇಸರಿ ಬಾತ್ ಪಕ್ಕದ ಮನೆಯ ಹೆಂಗಸರಿದ್ದ ಹಾಗೆ ನೋಡಿಕೊಂಡು ತಿನ್ನುತ್ತೇವಲ್ಲ.... ಅಂದಾಗ ನಮ್ಮ ಕುತೂಹಲ ತಣಿದಿತ್ತು...

ಕಾರ್ಯಗಾರದಲ್ಲಿ ಭಾಗವಹಿಸಿದ್ದ ಒಟ್ಟು ಹನ್ನೆರಡು ಜನ ಛಾಯಾಗ್ರಾಹಕರು.


ಚಿಕ್ಕಮಗಳೂರಿನ ಪತ್ರಿಕಾ ಛಾಯಾಗ್ರಾಹಕರಿಗೆ ಒಂದು ದಿನದ ಫೋಟೋಗ್ರಫಿ ಕಾರ್ಯಗಾರ ನಡೆಸಿಕೊಡುವಂತೆ ಚಿಕ್ಕಮಗಳೂರಿನ ಪತ್ರಿಕಾ ಛಾಯಾಗ್ರಾಹಕರ ಸಂಘ ನನಗೆ ಮತ್ತು ಮಲ್ಲಿಕಾರ್ಜುನ್‌ಗೆ ಆಹ್ವಾನ ನೀಡಿದ್ದರಿಂದ ಇಬ್ಬರೂ ಹೊರಟಿದ್ದೆವು. ಕಡೂರಿನವರೆಗೆ ಪ್ರಯಾಣ ಚೆನ್ನಾಗಿದ್ದು ಅಲ್ಲಿಂದ ಚಿಕ್ಕಮಗಳೂರಿಗೆ ತಲುಪುವ ಹೊತ್ತಿಗೆ ರಸ್ತೆ ತುಂಬಾ ಗಾಯಗಳಾಗಿದ್ದರಿಂದ ನಮ್ಮ ದೇಹದ ನಟ್ಟು ಬೋಲ್ಟುಗಳು ಸಡಿಲಗೊಂಡಿದ್ದವು.

ನಮ್ಮ ಕ್ಯಾಮೆರಾ ಬ್ಯಾಗನ್ನು ಮೊದಲೇ ನಮ್ಮ ತೊಡೆಯ ಮೇಲೆ ಇರಿಸಿದ್ದರಿಂದ ಅವುಗಳು ಆರೋಗ್ಯವಾಗಿದ್ದವು.

ಮರುದಿನ ಬೆಳಿಗ್ಗೆ ಆರು ಗಂಟೆಗೆ ಆಗಲೇ ನಮ್ಮನ್ನು ಕರೆದೊಯ್ಯುವ ಮಿನಿಬಸ್ ನಮಗಿಂತ ಮೊದಲೆ ಎದ್ದು ಸಿದ್ದವಾಗಿಬಿಟ್ಟಿದೆ. ಅದರ ಉತ್ಸಾಹಕ್ಕೆ ಬೆರಗಾಗಿ ನಾವು ಬೇಗನೆ ಸಿದ್ದರಾಗಿ ಬಂದು ಮಿನಿಬಸ್ಸಲ್ಲಿ ಕುಳಿತೆವು.

ಮುಂಜಾನೆ ಮಂಜಿನ ವಾತಾವರಣದಲ್ಲಿ ಎಲ್ಲರೂ ಫೋಟೋ ತೆಗೆಯುವ ಹುರುಪಿನಲ್ಲಿ !

ಈ ಕಾರ್ಯಗಾರಕ್ಕೆ ಚಿಕ್ಕಮಗಳೂರಿನ ಪ್ರಜಾವಾಣಿ ವರದಿಗಾರ ಘನಶ್ಯಾಮ್, ಛಾಯಾಗ್ರಾಹಕ ಎ.ಎನ್. ಮೂರ್ತಿ, ಜಿಲ್ಲೆ ಸುದ್ದಿಗಾರ ಪತ್ರಿಕೆಯ ವರದಿಗಾರ ಮತ್ತು ಛಾಯಾಗ್ರಾಹಕ ಜಗದೀಶ್ ಭಕ್ತನಕಟ್ಟೆ, ಕಲಾವಿದ-ಛಾಯಾಗ್ರಾಹಕ ದಯಾನಂದ್, ಜಿಲ್ಲಾ ಸಮಾಚಾರ ಪತ್ರಿಕೆಯ ಉಪ ಸಂಪಾದಕ ಶಂಕರಗೌಡ ಪಾಟೀಲ, ಟಿ.ವಿ. ೯ ಛಾಯಾಗ್ರಾಹಕ ಎಸ್.ಅನಿಲ್, ಹೆಗ್ಗುರುತು ಪತ್ರಿಕೆಯ ಛಾಯಾಗ್ರಾಹಕ ಎಸ್.ವಿ.ಗಜೇಂದ್ರ, ಕನ್ನಡಪ್ರಭ ಛಾಯಾಗ್ರಾಹಕ ಕೆ.ಎನ್. ಕಿಶೋರ್‍ ಕುಮಾರ್, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ವರದಿಗಾರರಾದ ಬಿ. ತಿಪ್ಪೆರುದ್ರಪ್ಪ, ಹೊಸದಿಗಂತ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕ ಸಿ. ಸುರೇಶ್ ಭಾಗವಹಿಸಿದ್ದರು.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ಸಿನ ಹಿರಿಯ ವರದಿಗಾರ ತಿಪ್ಪೆರುದ್ರಪ್ಪನವರು ತಿಳಿಬೆಳಕಿನಲ್ಲಿ ನನ್ನ ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ !!


ನಮಗಿಂತ ಹಿರಿಯರು ಅಂಥ ಚಳಿಯಲ್ಲೂ ಮುಂಜಾನೆ ಬೇಗನೆ ಸಿದ್ದವಾಗಿ ಹೊಸದೇನೊ ಕಲಿಯುವ ಉತ್ಸಾಹದಲ್ಲಿದ್ದುದ್ದು ನಮಗಂತೂ ಹೊಸ ಹುರುಪು ಬಂದಿತ್ತು. ಚಿಕ್ಕಮಗಳೂರಿನಿಂದ ಕೆಮ್ಮಣ್ಣುಗುಂಡಿಗೆ ಹೋಗುವ ದಾರಿಯುದ್ದಕ್ಕೂ ಪರಿಚಯ, ಛಾಯಾಚಿತ್ರಗಳ ಬಗ್ಗೆ ಮಾತುಕತೆ, ಚಿಕ್ಕಮಗಳೂರಿನಲ್ಲಿರುವ ಛಾಯಾಗ್ರಾಹಣದ ಅವಕಾಶಗಳು, ಪಿಕ್ಟೋರಿಯಲ್ ಫೋಟೋಗ್ರಫಿ, ಲ್ಯಾಂಡ್‌ಸ್ಕೇಪ್, ಹಿಮದ ವಾತಾವರಣದಲ್ಲಿ ಫೋಟೋ ತೆಗೆಯುವ ತಾಂತ್ರಿಕ ವಿಚಾರಗಳು, ಪತ್ರಿಕಾ ಛಾಯಾಗ್ರಹಣದ ಸವಾಲುಗಳು ಮತ್ತು ಅವಕಾಶಗಳು, ಕುರುಕುಲು ತಿಂಡಿಗಳು, ಹರಟೆ, ಅನುಭವ ಪ್ರಯಾಣದ ಜೊತೆಯಲ್ಲೇ ನಡೆದಿತ್ತು.

ಕೆಮ್ಮಣ್ಣುಗುಂಡಿಯ ಒಂದು ಮುಂಜಾವಿನ ಲ್ಯಾಂಡ್ ಸ್ಕೇಪ್ ಚಿತ್ರ !


ಹೀಗೊಂದು ಪಿಕ್ಟೋರಿಯಲ್ ಚಿತ್ರವೂ ನಮ್ಮ ಕ್ಯಾಮೆರಾದ ಒಡಲಲ್ಲಿ !!


ಮತ್ತೊಂದು ಲ್ಯಾಂಡ್‌ಸ್ಕೇಪ್ ಚಿತ್ರ "ಒಂಟಿ ಮರ ಮುಂಜಾನೆಯ ತಿಳಿಬಿಸಿಲಲ್ಲಿ" !
ಹೋಗುವ ದಾರಿಯಲ್ಲಿ ಅಲ್ಲಲ್ಲಿ ಲ್ಯಾಂಡ್ ಸ್ಕೇಪ್‌ಗಳು, ಪಿಕ್ಟೋರಿಯಲ್ ಫೋಟೋಗಳು, ನಮ್ಮೆಲ್ಲರ ಕ್ಯಾಮೆರಾಗಳಿಗೆ ಸೆರೆಯಾದವು.
ಕೆಮ್ಮಣ್ಣುಗುಂಡಿ ಗಿರಿದಾಮ ತಲುಪಿದಾಗ ೧೧ ಗಂಟೆಯಾಗಿತ್ತು. ಅಲ್ಲಿ ಒಂದಷ್ಟು ಹೂವು, ಪಕ್ಷಿಗಳು, ಮಕ್ಕಳ ಫೋಟೋಗಳು ಸಿಕ್ಕವು. ನಂತರ ನಡೆದ ಸಂವಾದದಲ್ಲಿ ನಾವು ತೆಗೆದ ಪಿಕ್ಟೋರಿಯಲ್, ವೈಲ್ಡ್ ಲೈಪ್, ಚಿಟ್ಟೆ ಮತ್ತು ಇತರ ಕೀಟಗಳು, ಜರ್ನಲಿಸಂ ಚಿತ್ರಗಳನ್ನು ಪ್ರದರ್ಶಿಸಿದೆವು. ಅವುಗಳ ಬಗ್ಗೆ ಒಂದಷ್ಟು ಆರೋಗ್ಯಕರ ಚರ್ಚೆಯೂ ಮನಸ್ಸಿಗೆ ಮುದ ನೀಡಿತ್ತು.

ಲ್ಯಾಪ್ ಟಾಪ್‌ನಲ್ಲಿ ಚಿತ್ರಗಳ ಪ್ರದರ್ಶನ ಮತ್ತು ಸಂವಾದದ್ದಲ್ಲಿ ಮಲ್ಲಿಕಾರ್ಜುನ್ ಮತ್ತು ನಾನು.




ಊಟ ಮುಗಿಸಿ ಚಿಕ್ಕಮಗಳೂರಿಗೆ ಬರುವ ದಾರಿಯುದ್ದಕ್ಕೂ ಎಲ್ಲಾ ಛಾಯಾಗ್ರಾಹಕರು ಮತ್ತಷ್ಟು ಹುರುಪಿನಿಂದ ತಮ್ಮ ಕ್ಯಾಮೆರಾಗಳಿಗೆ ಕೆಲಸ ಕೊಟ್ಟಿದ್ದರು.

ಕೆಮ್ಮೆಣ್ಣು ಗುಂಡಿ ಗಿರಿಧಾಮದಲ್ಲಿ ಹೀಗೊಂದು ಸ್ಕೂಲ್ ಮಕ್ಕಳ ಪ್ರವಾಸ ಮತ್ತು ಪ್ರಕೃತಿ ಜೊತೆಯಲ್ಲಿ ಊಟ! ಇದು ನಮ್ಮ ಬಾಲ್ಯದ ಪ್ರಾಥಮಿಕ ಶಾಲಾ ಪ್ರವಾಸವನ್ನು ನೆನಪಿಸಿತ್ತು.


ನಾನು ಮತ್ತು ಮಲ್ಲಿಕಾರ್ಜುನ್ ಇಬ್ಬರನ್ನು ಈ ಛಾಯಾಗ್ರಹಣ ಕಾರ್ಯಗಾರಕ್ಕೆ ಫ್ಯಾಕಲ್ಟಿಯಾಗಿ ಕರೆದಿದ್ದರೂ ನಾವು ಅವರಿಗೆ ಏನು ಹೇಳಿಕೊಟ್ಟೆವೋ, ಅವರೇನು ಕಲಿತುಕೊಂಡರೋ ಗೊತ್ತಿಲ್ಲ. ಆದರೆ ನಮಗಂತೂ ಹೊಸ ಗೆಳೆಯರು ಸಿಕ್ಕರು. ಚಿಕ್ಕಮಗಳೂರಿನ ಮತ್ತು ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿ ಸುಂದರ ಪ್ರಕೃತಿ ಚಿತ್ರಗಳು ನಮ್ಮ ಕ್ಯಾಮೆರಾಗಳಿಗೆ ಸಿಕ್ಕವು.

ಸೂರ್ಯಾಸ್ತದ ಸಮಯದಲ್ಲಿ ಕೆಮ್ಮಣ್ಣುಗುಂಡಿಯ ಇನ್ನೊಂದು ಲ್ಯಾಂಡ್‌ಸ್ಕೇಪ್ ಚಿತ್ರ

ಗಿರಿಧಾಮದ ಸುತ್ತಮುತ್ತಲ ಕಾಡುಗಳು ಅಲ್ಲಲ್ಲಿ ಬೋಳಾಗಿದ್ದುದ್ದು ನಮ್ಮ ಕುತೂಹಲ ಕೆರಳಿಸಿತು......

ಇದ್ಯಾಕೆ ಹೀಗೆ ಅಲ್ಲಲ್ಲಿ ಹೀಗೆ ಕೇಕ್ ಕತ್ತರಿಸಿದ ಹಾಗೆ ಕಾಡು ಕಡಿದಿದ್ದಾರಲ್ಲ ಅಂತ ಮಲ್ಲಿಕಾರ್ಜುನ್ ಕೇಳಿದರು. ತಕ್ಷಣ ಮೂರ್ತಿ "ಶೋಲಾ ಕಾಡು ಧಗ ಧಗ ಧಗ ಧಗ " ಅಂದರು.

ಗಣಿಗಾರಿಕೆಯಿಂದಾಗಿ ಮೇಲ್ಬಾಗದಲ್ಲಿ ಕಾಡು ನಾಶವಾಗಿರುವ ಚಿತ್ರ.


ಗಣಿಗಾರಿಕೆಯಿಂದಾಗಿ ಒಂದಷ್ಟು ಕಾಡುಗಳು, ಮತ್ತು ಅದಕ್ಕಾಗಿ ಮಾಡುವ ರಸ್ತೆಗಳಿಗಾಗಿ ಮತ್ತಷ್ಟು ಕಾಡುಗಳು, ನಂತರ ನಡೆವ ಗಣಿಗಾರಿಕೆಯ ದೂಳಿನಿಂದಾಗಿ ಇನ್ನೂಳಿದ ಕಾಡುಗಳು ನಾಶವಾಗುತ್ತಿರುವುದರ ದುರಂತವನ್ನು ಮೂರ್ತಿ ನಮಗೆಲ್ಲ ಮನದಟ್ಟು ಮಾಡಿಕೊಟ್ಟರು.

ರಾತ್ರಿ ಘನಶ್ಯಾಮ್ ಮಲ್ಲಿಕಾರ್ಜುನ್ ಮತ್ತು ನನ್ನನ್ನು ಚಿಕ್ಕಮಗಳೂರಿನ ಜಿಲ್ಲಾ ಅರಣ್ಯಾದಿಕಾರಿಗಳಾದ ಎಸ್.ಎಸ್.ಲಿಂಗರಾಜುರವರ ಮನೆಗೆ ಹೋದಾಗ ಅವರ ಮನೆ ತುಂಬಾ ಇದ್ದ ಪುಸ್ತಕಗಳು ಅವರೊಬ್ಬ ಸಾಹಿತ್ಯ ಪ್ರೇಮಿಯೆಂದು ಗೊತ್ತಾಯಿತು. ಅಷ್ಟೇ ಅಲ್ಲದೇ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕರು ಆಗಿರುವ ಅವರು ನಮೆಗೆಲ್ಲಾ ಕೆಲವು ಅಪರೂಪದ ವನ್ಯಜೀವಿಗಳ, ಪಕ್ಷಿಗಳ, ಲ್ಯಾಂಡ್ ಸ್ಕೇಪ್ ಫೋಟೊಗಳನ್ನು ತೋರಿಸಿದರು. ಮತ್ತು ನಮ್ಮ ಚಿತ್ರಗಳನ್ನು ನೋಡಿ ಸಂತೋಷ ಪಟ್ಟರು.

ಕೊನೆಯಲ್ಲಿ " ನನ್ನನ್ನೂ ಕರೆದಿದ್ದರೆ ನಾನು ಬರುತ್ತಿದ್ದೆನಲ್ಲಾ " ಎಂದರು.

ಮರುದಿನ ವಾಪಸ್ಸು ಬರುವಾಗ "ಕಡೂರು ಎರಡು ಕೊಡಿ " ನಾನು ಬಸ್ ನಿರ್ವಾಹಕನನ್ನು ಕೇಳಿದೆ.

ಕಡೂರು ಒಂದೇ ಇರೋದು...............ಬೇಕಿದ್ರೆ ನಿಮಗೆ ಎರಡು ಬಸ್ ಟಿಕೆಟ್ ಕೊಡುತ್ತೇನೆ............

ಆತ ಹೇಳಿದಾಗ ಆತನ ಹಾಸ್ಯ ಪ್ರಜ್ಞೆಗೆ ಮನಪೂರ್ತಿ ನಕ್ಕಿದ್ದೆವು. ಮತ್ತೆ ಚಿಕ್ಕಮಗಳೂರಿನಿಂದ ಕಡೂರಿಗೆ ಅದೇ ರಸ್ತೆಯಲ್ಲೇ ಹೋಗಬೇಕಾದ್ದರಿಂದ ನಮ್ಮ ದೇಹದ ನಟ್ಟು ಬೋಲ್ಟುಗಳು ಖಂಡಿತ ಸಡಿಲಗೊಳ್ಳುತ್ತವೆ ಎಂದು ಮನವರಿಕೆಯಾಗಿ ಮಾನಸಿಕವಾಗಿ ಅದಕ್ಕೆ ಸಿದ್ದರಾದೆವು.

------------------------------------


ಈ ಮದ್ಯೆ ಈ ಕಾರ್ಯಗಾರದ ಯಶಸ್ಸಿನ ಸ್ಪೂರ್ತಿಯಿಂದಾಗಿ ಘನಶ್ಯಾಮ್, ಪ್ರವೀಣ್ ಕುಮಾರ್, ನಾನು ಮಲ್ಲಿಕಾರ್ಜುನ್ ಒಂದು "ಇ-ಕನ್ನಡ ಛಾಯಾಗ್ರಹಣ ಪತ್ರಿಕೆ" ಮಾಡಿದರೆ ಹೇಗೆ ಎಂದು ಚರ್ಚೆ ಮಾಡಿದೆವು.

ಇದು ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ದೃಶ್ಯಮಾದ್ಯಮದಲ್ಲಿ ಕಟ್ಟಿಕೊಡುವ ಪ್ರಯತ್ನ. ಚಿತ್ರಕಲೆ ಮತ್ತು ಛಾಯಾಚಿತ್ರಕಲೆಯ ನಡುವಿನ ಸಂವಾದ, ಹಿರಿಯ ಛಾಯಾಗ್ರಾಹಕರ ಅನುಭವಗಳು ಮತ್ತು ಅವರ ಅಪರೂಪದ ಚಿತ್ರಗಳು. ಛಾಯಾಗ್ರಾಹಣದ ತಂತ್ರ ಮತ್ತು ತಾಂತ್ರಿಕತೆ ಬಗ್ಗೆ ತಿಳಿವಳಿಕೆ. ಈ ಕಲೆಯಲ್ಲಿ ಹೊಸ ಹೊಸ ವಿಧಾನಗಳ ಅಳವಡಿಕೆಯ ಸಾಧ್ಯತೆ. ಇನ್ನೂ ಅನೇಕ ವಿಚಾರಗಳು ಇದರಲ್ಲಿ ಒಳಗೊಂಡಿವೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಎಲ್ಲಾ ಛಾಯಾಗ್ರಾಹಕರನ್ನು ಬೆಸೆಯುವ ಇ-ಕೊಂಡಿ.

ಇದು ಬ್ಲಾಗಿನ ರೂಪದಲ್ಲಿರದೇ ಪಕ್ಕ ನಿಯತಕಾಲಿಕದ ಹಾಗೆ ಇರುತ್ತದೆ. ಹಾಗೂ ಇದು ಅಂತರ್ಜಾಲದಲ್ಲಿ ಮಾದ್ಯಮದಲ್ಲಿ ಇರುತ್ತದೆ.

ಯಾವುದೇ ಲಾಭದ ಆಥವ ವ್ಯಾಪಾರಿ ದೃಷ್ಟಿಯಿಟ್ಟುಕೊಳ್ಳದೆ ಎಲ್ಲರಿಗೂ ಛಾಯಾಗ್ರಾಹಣ ಭಾಷೆಯನ್ನು " ಕನ್ನಡ ಇ- ಮಾದ್ಯಮದ" ಮೂಲಕ ತಲುಪಿಸುವ ಆಶಯ.

ಹದಿನೈದು ದಿನಕ್ಕೊಮ್ಮೆ ಬರುವ ಇದು ಹೇಗಿರಬೇಕು. ಓದುಗರಾಗಿ ಮತ್ತು ಛಾಯಾಗ್ರಾಹಕರಾಗಿ ನೀವು ಇದರಲ್ಲಿ ಇನ್ನೂ ಏನೇನು ಬಯಸುತ್ತೀರಿ ? ಹೇಗಿರಬೇಕೆಂದು ಬಯಸುತ್ತೀರಿ ? ಸಾಧ್ಯವಾದರೆ ಇದಕೊಂದು ಹೆಸರನ್ನು ಸೂಚಿಸಿ ! ನಿಮ್ಮ ಸಲಹೆ ಮತ್ತು ಸೂಚನೆಗಳಿಗೆ ಎದುರು ನೋಡುತ್ತಿರುತ್ತೇವೆ.

ಫೋಟೊ ಮತ್ತು ಲೇಖನ
ಶಿವು.