Showing posts with label ಮುಂಜಾನೆ ಧಾರವಾಡ ರಸ್ತೆಗಳು. Show all posts
Showing posts with label ಮುಂಜಾನೆ ಧಾರವಾಡ ರಸ್ತೆಗಳು. Show all posts

Thursday, November 4, 2010

ಒಂದೂವರೆದಿನದ ಧಾರವಾಡ ಅನುಭವ

        

        ನಾನು ದೂರದ ಪ್ರಯಾಣಕ್ಕಾಗಿ ಅದೆಷ್ಟೇ ವೇಗದ ರೈಲಿನ ಟಿಕೆಟ್ ಕಾಯ್ದಿರಿಸಿದರೂ ಅದ್ಯಾಕೋ ನಿದಾನವಾಗಿ ಪಕ್ಕಾ ಪ್ಯಾಸಿಂಜರ್ ಆಗಿಬಿಡುತ್ತದೆ. ಇಲ್ಲೂ ಹಾಗೇ ಆಯಿತು. ನಮ್ಮ ಅತ್ಯಂತ ವೇಗದ ರೈಲಾದ ಬೆಂಗಳೂರು-ಧಾರವಾಡ ಇಂಟರ್ ಸಿಟಿ ರೈಲನ್ನು ಮಧ್ಯಾಹ್ನ ಒಂದುಗಂಟೆಗೆ ಹತ್ತಿ ಕುಳಿತಾಗ ಅದು ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತದೆ. ನಾನು ಬೇಗ ಹೋಟಲ್ ರೂಮ್ ಸೇರಿ ಲಗ್ಗೇಜ್ ಇಟ್ಟು ಊಟ ಮುಗಿಸಿ ರಾತ್ರಿ ಒಂದು ಸುತ್ತು ಧಾರವಾಡವನ್ನು ಕ್ಯಾಮೆರಾ ಸಮೇತ ಸುತ್ತೋಣವೆಂದು ಮಾಸ್ಟರ್ ಪ್ಲಾನ್ ಮಾಡಿದ್ದೆ.  ಆದ್ರೆ ಈ ರೈಲು ರಾತ್ರಿ ಹತ್ತುಮುವತ್ತೈದಕ್ಕೆ ಧಾರವಾಡ ತಲುಪಿ ನನ್ನ ಲೆಕ್ಕಚಾರವನ್ನೆಲ್ಲಾ ತಲೆಕೆಳಗಾಗಿಸಿತ್ತು.  ನಾನು ರೈಲಿಳಿದು ಆಟೋ ಏರಿ ಅವರೇ ವ್ಯವಸ್ಥೆ ಮಾಡಿದ್ದ ಬೃಂದಾವನ ಲಾಡ್ಜ್ ಸೇರುವ ಹೊತ್ತಿಗೆ ಹನ್ನೊಂದು ಗಂಟೆಯಾಗಿದ್ದರಿಂದ ಕ್ಯಾಮೆರಾದೊಂದಿಗೆ ಸುತ್ತುವ ಆಸೆಯನ್ನು ಕೈಬಿಟ್ಟಿದ್ದೆ. ರೈಲಿನಲ್ಲಿ ಏನು ತಿಂದಿರಲಿಲ್ಲ.  ಹೊರಗೆ ಬಂದು ನೋಡಿದರೆ ಜನರ ಓಡಾಟವೇ ಇಲ್ಲ. ಧಾರವಾಡ ಆಗಲೇ ನಿದ್ರಿಸುತ್ತಿದೆ. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ತಿನ್ನಲು ಏನಾದರೂ ಸಿಗುತ್ತದೋ ಅಂತ ಹೋಟಲಿನ ಬಲಬದಿಯ ರಸ್ತೆಯ ಉದ್ದಕ್ಕೆ ಒಂದು ಪರ್ಲಾಂಗ್ ನಡೆದೆ. ಅಂಗಡಿ ಹೋಟಲ್ಲುಗಳೆಲ್ಲಾ ಮುಚ್ಚಿವೆ. ಮತ್ತೆ ಬಲಕ್ಕೆ ತಿರುಗಿ ಸ್ವಲ್ಪ ದೂರ ನಡೆದರೂ ಏನೂ ಪ್ರಯೋಜನವಿಲ್ಲ. ಮತ್ತೊಂದು ತಿರುವು ಬಲಕ್ಕೆ ಕಾಣಿಸಿತು. ತಿರುಗಿದೆ. ಅಲ್ಲಿ ರಸ್ತೆಯಲ್ಲಿ ಇಬ್ಬರು ಬೈಕ್ ಮೇಲೆ ಕುಳಿತು ಮಾತಾಡುತ್ತಿದ್ದರು. ಅವರನ್ನೇ ದೈರ್ಯಮಾಡಿ ಕೇಳಿದೆ. "ಇಲ್ಲಿ ಊಟದ ಹೋಟಲ್, ಖಾನವಾಳಿ ಏನಾದ್ರು ತೆರೆದಿದೆಯಾ" ಅಂತ.  ಅವರು "ಸ್ವಲ್ಪ ಮುಂದಕ್ಕೆ ಹೋಗಿ ಬಲಕ್ಕೆ ತಿರುಗಿ ಅಲ್ಲೊಂದು ಖಾನಾವಳಿ ಇದೆ. ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ" ಎಂದರು.  ಸಣ್ಣ ಆಸೆಯಿಂದ ಅಲ್ಲಿಗೆ ಹೋದೆ. ಅರ್ಧ ಬಾಗಿಲು ಮುಚ್ಚಿದ್ದ ಖಾನಾವಳಿಯ ಒಳಗೆ ಹೋಟಲ್ಲಿನವರೇ ಊಟ ಮಾಡುತ್ತಿದ್ದರು.  


 "ಊಟ ಸಿಗುತ್ತಾ" ಕೇಳಿದೆ.

 "ಎಲ್ಲಾ ಖಾಲಿಯಾಯ್ತಲ್ಲ" ಅಂದ ಒಬ್ಬ.


"ಹೌದಾ, ಛೇ ಎಂಥ ಕೆಲಸವಾಯ್ತು, ರೈಲು ತಡವಾಗಿದ್ದರಿಂದ ನನ್ನ ಊಟ ತಪ್ಪಿ ಹೋಯ್ತಲ್ಲ" ಅಂದ ನನ್ನಲ್ಲೇ ಗೊಣಗಿಕೊಂಡೆ.

"ಸ್ವಲ್ಪ ದೂರ ಅಲ್ಲಿ ಒಂದು ಖಾನಾವಳಿ ತೆರೆದಿದೆ ಅಲ್ಲಿ ಹೋಗಿ ನಿಮಗೆ ಊಟ ಸಿಗುತ್ತದೆ" ಅಂತ ಕೈತೋರಿಸುತ್ತ ಹೇಳಿದ ಮಗದೊಬ್ಬ.

 "ಆ ಖಾನಾವಳಿ ತುಂಬಾ ದೂರನಾ?" ನಾನು ಅರೆಮನಸ್ಸಿನಿಂದ ಕೇಳಿದೆ. ನನ್ನ ಅಷ್ಟು ದೂರ ಹೋಗಬೇಕಲ್ಲ ಅನ್ನುವ ಚಿಂತೆಯಿಂದ ಅಲ್ಲೇ ಅತ್ತಿತ್ತ ನೋಡುತ್ತಾ ನಿಂತೆ.

        "ಎಲ್ಲಿಂದ ಬಂದ್ರಿ"  ಹೋಟಲ್ ಒಡತಿ ಕೇಳಿದಳು.

"ಬೆಂಗಳೂರಿನಿಂದ" ಹೇಳಿದೆ.  "ರೊಟ್ಟಿ ಇಲ್ಲ ಚಪಾತಿ ಆಗುತ್ತಾ" ಕೇಳಿದಳು. ಪರ್ವಾಗಿಲ್ಲ ಏನಿದ್ದರೂ ಕೊಡಿ. ಎಂದೆ. ಸ್ವಲ್ಪ ಅನ್ನವೂ ಉಂಟು ಅಂದಳು. "ಚಪಾತಿ ಜೊತೆಗೆ ಅನ್ನವೂ ಸಿಗುತ್ತಾ"  ಹಸಿವನ್ನು ಅದುಮಿಟ್ಟುಕೊಂಡಿದ್ದ ನನಗೆ ಮತ್ತಷ್ಟು ಹಸಿವು ಹೆಚ್ಚಾಯಿತು. ಒಂದು ಊಟ ಪಾರ್ಸೆಲ್ ಕೊಟ್ಟುಬಿಡುತ್ತೇನೆ ಎಂದಳು. ಸದ್ಯ ಅಷ್ಟಾದರೂ ಸಿಕ್ಕಿತಲ್ಲ ನಿಮಗೆ ಪುಣ್ಯಬರಲಿ ಎಂದುಕೊಳ್ಳುತ್ತಾ "ಆಗಲಿ ಕೊಡಿ ಎಂದು ಹೇಳಿದೆನಾದರೂ ಅವರಿಗೆ ಉಳಿಸಿಕೊಂಡಿರುವ ಊಟವನ್ನು ನಾನು ದೂರದಿಂದ ಬಂದಿದ್ದೇನೆ ಅಂತ ನನಗೆ ಕೊಟ್ಟು ಅವರು ಅರೆಹೊಟ್ಟೆ ತಿಂದು ಮಲಗಬಹುದಾ ಅಂತ ಒಮ್ಮೆ ಅನ್ನಿಸಿತು. "ತಗೊಳ್ಳಿ ಸರ, ಪಲ್ಯ ಉಪ್ಪಿನಕಾಯಿ ಹಾಕಿದ್ದೇನೆ. ಚಟ್ನಿ ಹಪ್ಪಳ ಖಾಲಿಯಾಗಿದೆ, ಇಪ್ಪತ್ತೈದು ರೂಪಾಯಿ ಕೊಡ್ರಿ" ಅಂದಳು.


ನಮ್ಮ ಬೆಂಗಳೂರಿನಲ್ಲಿ ಇಂಥ ಹೊತ್ತಿನಲ್ಲಿ ಇಂಥ ಸಂದರ್ಭ ಬಂದಿದ್ದಲ್ಲಿ ಹೋಟಲ್ಲಿನ ಒಡೆಯ ಅಥವ ಕೆಲಸ ಮಾಡುವವರು ಹೀಗೆ ತಮ್ಮ ಊಟವನ್ನು ದೂರದವರೊಂದಿಗೆ ಹಂಚಿಕೊಳ್ಳುತ್ತಿದ್ದರೆ? ಖಂಡಿತ ಇಲ್ಲ. ಧಾರವಾಡದಲ್ಲಿ ಇನ್ನೂ ಮುಗ್ದತೆಯಿರುವುದರಿಂದ ಅಲ್ಲಿನ ಜನಗಳಿಗೆ ಹೊರಗಿನವರ ಮೇಲೆ ತುಂಬುಪ್ರೀತಿಯಿದೆ. ಅದರ ಪಲಿತಾಂಶವೇ ನನಗೆ ಊಟ ಸಿಕ್ಕಿರಬಹುದು ಎಂದುಕೊಳ್ಳುತ್ತಾ ನನ್ನ ರೂಮು ಸೇರುವ ಹೊತ್ತಿಗೆ ಸಮಯ ಹನ್ನೊಂದುವರೆಯಾಗಿತ್ತು.

ಲಾಡ್ಜಿನ ರೆಸೆಪ್ಟನ್‍ನಲ್ಲಿ ಒಂದು ಊಟದ ತಟ್ಟೆ ಮತ್ತು ನೀರಿನ ಲೋಟವನ್ನು ನನ್ನ ರೂಮಿಗೆ ಕಳಿಸಿ ಎಂದು ಹೇಳಿ ರೂಮಿಗೆ ಹೋದೆ. ಎರಡೂ ಬರಲಿಲ್ಲ. ಸಮಯವಾಗಲೇ ಮೀರಿಹೋಗುತ್ತಿದೆ. ನನ್ನ ರೂಮಿನ ಎದುರಿಗೆ ರೂಮ್ ಬಾಯ್‍ನ ರೂಮ್ ಇತ್ತು. ಅಲ್ಲಿ ಊಟದ ತಟ್ಟೆಗಳು, ಗಾಜಿನ ಲೋಟಗಳು ಹಾಸಿಗೆ ದಿಂಬು ಟವಲ್ಲುಗಳು ಎಲ್ಲಾ ಇದ್ದರೂ ರೂಮ್ ಬಾಯ್ ಇರಲಿಲ್ಲ. ನಾನೇ ಹೋಗಿ ಒಂದು ತಟ್ಟೆಯನ್ನು ಮತ್ತು ಲೋಟವನ್ನು ತೆಗೆದುಕೊಂಡು ಬಂದು ಊಟದ ಪಾರ್ಸೆಲ್ ತೆಗೆಯುತ್ತೇನೆ!  ಇಬ್ಬರು ಊಟಮಾಡುವಷ್ಟನ್ನು ಪಾರ್ಸೆಲ್ ಮಾಡಿಬಿಟ್ಟಿದ್ದಾರೆ.  ನನ್ನ ಊಟ ಮುಗಿದು ಮಲಗುವ ಹೊತ್ತಿಗೆ ರಾತ್ರಿ ಹನ್ನೆರಡು ದಾಟಿತ್ತು. ಅದ್ಯಾವ ಮಾಯದಲ್ಲಿ ನಿದ್ರೆ ಬಂತೋ ಬೆಳಿಗ್ಗೆ ಎಚ್ಚರವಾದಾಗ ಆರುವರೆಯಾಗಿತ್ತು


ಎದ್ದು ಕೈಕಾಲು ಮುಖ ತೊಳೆದುಕೊಂಡು ಕ್ಯಾಮೆರಾ ಬ್ಯಾಗ್ ಹೆಗಲಿಗೇರಿಸಿ ರೂಮಿನಿಂದ ಹೊರಬಿದ್ದೆ.  ಧಾರವಾಡ ಎದ್ದಿತ್ತಾದರೂ ಪೂರ್ತಿ ಎದ್ದಿರಲಿಲ್ಲ. ಸ್ವಲ್ಪ ದೂರ ನಡೆಯುವಷ್ಟರಲ್ಲಿ  ಒಂದು ಕಾಂಪ್ಲೆಕ್ಸ ಕೆಳಗೆ ನನ್ನ ವೃತ್ತಿ ಭಾಂದವರಾದ ದಿನಪತ್ರಿಕೆ ವಿತರಕರು ಅವರ ಬೀಟ್ ಹುಡುಗರು ಸೈಕಲ್ಲಿಗೆ ಕ್ಯಾರಿಯರಿಗೆ ಪೇಪರುಗಳನ್ನು ಜೋಡಿಸಿಕೊಳ್ಳುತ್ತಿದ್ದರು.


 ನಮ್ಮ  ವೃತ್ತಿ ಭಾಂದವರು ಎಲ್ಲಿದ್ದರೂ ನನ್ನ ಕಣ್ಣಿಗೆ ಕಾಣಲೇಬೇಕು!


 ಮಂಜು ಮುಸುಕಿದ ದಟ್ಟಮರಗಳ ಧಾರವಾಡ ರಸ್ತೆ!


 ಮುಂಜಾವಿನ ಧಾರವಾಡ ರಸ್ತೆ




  ಆಗಾಗ ಕಾಣುವ ದೂರದ ಊರಿನ ಬಸ್ಸುಗಳ ಜೊತೆಗೆ ಸಿಟಿಬಸ್ಸುಗಳು ಒಂದೊಂದಾಗಿ ಕಾಣತೊಡಗಿದವು. ರಸ್ತೆಗಳ ಎರಡೂ ಬದಿಯಲ್ಲೂ ದಟ್ಟಮರಗಳು ನಮ್ಮ ಹದಿನೈದು ವರ್ಷದ ಬೆಂಗಳೂರನ್ನು ನೆನಪಿಸಿದವು. ಅದ್ಯಾಕೋ ಖುಷಿಯಿಂದ ಒಂದಷ್ಟು ಮರಗಳ ಸಮೇತ ರಸ್ತೆಗಳ ಪೋಟೊಗಳನ್ನು ಕ್ಲಿಕ್ಕಿಸಿದೆ. ಹಾಗೇ ಸಾಗುತ್ತಿದ್ದಂತೆ ಆರ್.ಎನ್ ಸೆಟ್ಟಿ ಮೈದಾನ ಕಾಣಿಸಿತು. ಒಳಗೆ ಹೋದೆ. ಯುವಕ ಯುವತಿಯರು ಜಾಗಿಂಗ್ ಮಾಡುತ್ತಿದ್ದರು, ಬಾಲಕರು ಪುಟ್‍ಬಾಲ್ ಆಡುತ್ತಿದ್ದರು. ವಯಸ್ಸಾದವರು ವಾಕ್ ಮಾಡುತ್ತಿದ್ದರು. ದೂರದಲ್ಲೊಬ್ಬ ಪ್ರಾಣಯಾಮ ಮಾಡುತ್ತಾ ಉಸಿರು ಎಳೆದುಬಿಡುತ್ತಿದ್ದಾನೆ.  ಇದೆಲ್ಲವೂ ಏನು ವಿಶೇಷವಿಲ್ಲವೆಂದುಕೊಳ್ಳುವಷ್ಟರಲ್ಲಿ ಪಕ್ಕದಿಂದ ಕೆಲವು ವಯಸ್ಕ ಮಹಿಳೆಯರ ದ್ವನಿಗಳು ಕೇಳಿಬರತೊಡಗಿದವಲ್ಲ! ನಾನು ಅತ್ತ ತಿರುಗದೇ ಹಾಗೆ ಕೇಳಿಸಿಕೊಂಡೆ!




" ಅಲ್ಲ ಕಣ್ರಿ, ಈ ರಾಜಕೀಯ್ದೋವ್ರಿಗೆ ಏನು ಬಂದು ಸಾಯಲ್ವಾ? ನಮ್ಮ ದುಡ್ಡಲ್ಲಿ ರಿಸಾರ್ಟ್‍ನಲ್ಲಿ ಕೂತು ಮಜಮಾಡುತ್ತಾರಲ್ವಾ?
"ಹೌದು ಬಾಯೆರ್ರ...ಇವರಿಗೆ ದೊಡ್ಡ ರೋಗಬಡಿಬೇಕು ನೋಡ್ರಿ..’ ಹೇಳಿದಳು ಈಕೆ.

ಹೂ ಕಣ್ರಿ..ಇವರಿಗೆ ಚಿಕನ್ ಗುನ್ಯಗಿಂತ ದೊಡ್ಡದು ಅದೇನೋ ಮಟನ್ ಗುನ್ಯ ಅಂತ ಬಂದಿದೆಯಂತೆ ಅದು ಬಂದವರಿಗೆ ಆರುತಿಂಗಳು ನರಕದರ್ಶನವಂತೆ! ಅದು ಇವರಿಗಾದ್ರು ಬರಬಾರದಾ? ಶಾಪ ಹಾಕಿದಳು ಆಕೆ.


ಮತ್ತೆ ಇದು ಮುಂದುವರಿದು ಯಡಿಯೂರಪ್ಪ, ಕುಮಾರಸ್ವಾಮಿ,............ರೇಣುಕಾಚಾರ್ಯ....ಸಾಗುತ್ತಿತ್ತು.  ಹಾಗೆ ಮೈದಾನದಿಂದ ಹೊರಗೆ ಬಂದು ರಸ್ತೆಯಲ್ಲಿ ನಡೆಯತೊಡಗಿದೆ. ಕಾಲೇಜಿಗೆ ಹೋಗುವ ಸುಂದರ ಹುಡುಗಿಯರು ಕಾಣಿಸತೊಡಗಿದರು.

 ರಸ್ತೆ ಬದಿಯ ಹೋಟಲ್ ಹಿಂಭಾಗದಲ್ಲಿ ಮುಂಜಾವಿನಲ್ಲಿ ನೀರು ಕಾಯಿಸುತ್ತಿರುವ ವಯಸ್ಕ ಮಹಿಳೆ



ಅವರನ್ನೆಲ್ಲಾ ಹಾಗೆ ನೋಡಿ ಕಣ್ಣುತುಂಬಿಕೊಳ್ಳುತ್ತಾ, ಕನ್ನಡ ಸಂಸ್ಕೃತಿ ಇಲಾಖೆ ಕಟ್ಟಡ, ಮಂದಾರ ಹೋಟಲ್ ಸಾಗಿ ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಹೋಟಲ್ಲಿ ಚಾ ಕುಡಿದು ಹೋಟಲ್ಲಿಗೆ ಬರುವ ಹೊತ್ತಿಗೆ ಯಾರೋ ದೂರದಿಂದ ಕೈಯಾಡಿಸುತ್ತಿರುವುದು ಕಾಣಿಸಿತು. ಹತ್ತಿರ ಬರುವಷ್ಟರಲ್ಲಿ ಆತ ಚಿದಾನಂದ ಸಾಲಿ ಅಂತ ಗೊತ್ತಾಯಿತು.  ಕಳೆದ ನಾಲ್ಕು ತಿಂಗಳಿಂದ ಬರೀ ಫೋನಿನಲ್ಲಿ ನಮ್ಮ ಗೆಳೆತನ ಬೆಳೆದಿದ್ದರಿಂದ ನಾನು ಅವರನ್ನು ನೋಡಿರದಿದ್ದರೂ ಆತ ನನ್ನ ಬ್ಲಾಗಿನಲ್ಲಿ ನನ್ನ ಫೋಟೊ ನೋಡಿದ್ದರಿಂದ ಹತ್ತಿರ ಬಂದವರೇ ನನ್ನ ಅಪ್ಪಿಕೊಂಡುಬಿಟ್ಟರು.  ಮತ್ತೆ ಮಾತಾಡಿ ಪರಿಚಯಮಾಡಿಕೊಂಡ ಮೇಲೆ ಜೊತೆಗಿದ್ದವರು ಆರೀಪ್ ರಾಜ ಅಂತ ಪರಿಚಯ ಮಾಡಿಕೊಂಡರು.  ಅಲ್ಲಿಂದ ಮತ್ತೆ ನಮ್ಮ ರೂಮ್ ಸೇರಿ ಸಿದ್ದರಾಗಿ ಹೊರಬರುವ ಹೊತ್ತಿಗೆ ಸಮಯ ಒಂಬತ್ತುವರೆಯಾಗಿತ್ತು.
            
ಈ ಫೋಟೊ ಚೆನ್ನಾಗಿದೆಯಲ್ವಾ.....


ಮತ್ತೆ ಸ್ವಲ್ಪ ಹೊತ್ತಿನಲ್ಲೇ  ಮುಂಡರಗಿಯ ಸಲೀಂ ಮತ್ತು ಬಾಗಲಕೋಟದ ಇಂದ್ರಕುಮಾರ್ ಕೂಡಿಕೊಂಡರು. ಅವರು ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದ ಸಂತೋಷಕ್ಕೆ  ನನ್ನ ಮೇಲಿನ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಎಲ್ಲರೂ ಒಟ್ಟಿಗೆ ಬೆಳಗಿನ ಉಪಹಾರ ಮುಗಿಸಿ ದ.ರಾ.ಬೇಂದ್ರೆ ಭವನವನ್ನು ಸೇರುವ ಹೊತ್ತಿಗೆ ಹತ್ತುವರೆಯಾಗಿತ್ತು.

ಅರೀಫ್ ರಾಜರ "ಪಕೀರ ಜಂಗಮ ಜೋಳಿಗೆ, ಮತ್ತು ನನ್ನ ವೆಂಡರ್ ಕಣ್ಣು ಪುಸ್ತಕದ ಬಗ್ಗೆ ಅವಲೋಕಿಸಿದವರು ಡಾ.ರಂಗರಾಜ ವನದುರ್ಗ. ಸಂದೀಪ್ ನಾಯಕ್‍ರ "ಗೋಡೆಗೆ ಬರೆದ ನವಿಲು" ಚಿದಾನಂದ ಸಾಲಿಯವರ "ಯಜ್ಞ" ಅನುವಾದ ಕೃತಿ, ಮಾರ್ತಾಂಡಪ್ಪ ಕತ್ತಿಯವರ "ಬಸವರಾಜ ಮನ್ಸೂರರ ಜೀವನ ಚರಿತೆ" ಶ್ರೀಧರ ಹೆಗಡೆ ಭದ್ರನ್‍ರವರ "ವಿಸ್ತರಣೆ" ಕೃತಿಗಳ ಬಗ್ಗೆ ಜಗದೀಶ ಮಂಗಳೂರ್ ಮಠ್‍ರವರು ಮಾತಾಡಿದರು. ನಂತರ ಇಡೀ ಕಾರ್ಯಕ್ರಮವನ್ನು ಉದ್ದೇಶಿಸಿ ಮತ್ತು ಪುಸ್ತಕಗಳ ಬಗ್ಗೆ ಇಂದಿನ ಸಾಹಿತ್ಯದ ಬಗ್ಗೆ ಲವಲವಿಕೆಯಿಂದ ಮಾತಾಡಿದವರು ಜಯಂತ್ ಕಾಯ್ಕಿಣಿ.


ಕಾರ್ಯಕ್ರಮದ ನಡುವೆ ಪುಸ್ತಕ ಮಾರಾಟ ಹೊರಗೆ ನಡೆಯುತ್ತಿತ್ತು. ನಾನು ತೆಗೆದುಕೊಂಡು ಹೋಗಿದ್ದ ಹದಿನೈದು "ವೆಂಡರ್ ಕಣ್ಣು ಪುಸ್ತಕಗಳು ಮಾರಾಟವಾಗಿದ್ದು ನನಗೆ ಖುಷಿಯಾಗಿತ್ತು.  ಮದ್ಯಾಹ್ನ ಸಂಸ್ಥೆಯವರ ಜೊತೆ ಜಯಂತ್ ಕಾಯ್ಕಿಣಿ ಮತ್ತು ಬಹುಮಾನ ಪುರಸ್ಕೃತರಾದ ನಾವೆಲ್ಲಾ ಸಹಜವಾದ ಮಾತು, ಹರಟೆ, ತಮಾಷೆಗಳೊಂದಿಗೆ ಒಟ್ಟಿಗೆ ಊಟ ಮಾಡಿದ್ದು ಮರೆಯಲಾಗದ ಅನುಭವ.

ಸಂಜೆ ಧಾರವಾಡ ವಿಶ್ವವಿದ್ಯಾಲಯವನ್ನು ಸಲೀಂ ಮತ್ತು ಇಂದ್ರಕುಮಾರ್ ಜೊತೆ ನೋಡಲು ಹೋದಾದ ಅದರ ಆಗಾದವಾದ ಕ್ಯಾಂಪಸನ್ನು ನೋಡುವುದೇ ಒಂದು ಆನಂದ. ದಟ್ಟ ಮರಗಳ ನಡುವೆ ಅಲ್ಲಲ್ಲಿ ಇರುವ ವಿಭಾಗಗಳು, ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು,..........ಈಗ ಹತ್ತು ವರ್ಷ ಚಿಕ್ಕವನಾಗಿದ್ದರೆ ಇಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳುವ ಆಸೆ ಮನದಲ್ಲಿ ಮೂಡಿತ್ತು.

 ಸೂರ್ಯ ಮುಳುಗುವ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯ ಮುಖ್ಯ ಕಟ್ಟಡ.



 ದಟ್ಟ ಮರಗಳಿಂದ ಕೂಡಿದ ಕ್ಯಾಂಪಸಿನ ರಸ್ತೆ...


    ಸಂಜೆ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್.


ಅಲ್ಲಿಂದ ಹೊರಬಂದು ಬಸ್ ಹತ್ತಿ ನಮ್ಮ ಸಂಜೆ ಕಾರ್ಯಕ್ರಮವಿದ್ದ ಸೃಜನ ರಂಗಮಂದಿರಕ್ಕೆ ಬಂದೆವು ಅಲ್ಲಿ ನಮಗಾಗಿ ಸುನಾಥ್‍ರವರು ಕಾಯುತ್ತಿದ್ದರು. ಅವರನ್ನು ಬೇಟಿಯಾಗಿದ್ದು ಒಂದು ವಿಭಿನ್ನ ಅನುಭವ. ಸಂಜೆ ಕಾರ್ಯಕ್ರಮ ಮುಗಿದು ಎಲ್ಲರಿಂದಲೂ ಬೀಳ್ಕೊಡುವಾಗ ಎಲ್ಲರ ಮನತುಂಬಿಬಂದಿತ್ತು.  ವಾಪಸ್ಸು ರೂಮಿಗೆ ಬಂದು ನಮ್ಮ ಲಗ್ಗೇಜುಗಳನ್ನು ಪ್ಯಾಕ್ ಮಾಡಿಕೊಂಡು ಒಂದು ದೊಡ್ಡ ಮಿಶ್ರ ಪೇಡ ಅಂಗಡಿಯಲ್ಲಿ ಧಾರವಾಡ ಪೇಡವನ್ನು ಕೊಂಡು ಪಕ್ಕದಲ್ಲಿಯೇ ಇದ್ದ ೯೦ ವರ್ಷ ಹಳೆಯದಾದ ಬಸಪ್ಪ ಖಾನಾವಳಿಯಲ್ಲಿ ಊಟಮಾಡಿ ರೈಲು ನಿಲ್ದಾಣದ ಬಳಿಗೆ ಬರುವ ಹೊತ್ತಿಗೆ ೯-೩೦.  ನಾನು ಬೆಂಗಳೂರಿಗೆ ಬರುವ ರಾಣಿಚೆನ್ನಮ್ಮ ಎಕ್ಸ್‍ಪ್ರೆಸ್ ಬಂದುನಿಂತಿತ್ತು.

ಇಡೀ ದಿನದ ಧಾರವಾಡದ ಅನುಭವವನ್ನು ಮೆಲುಕು ಹಾಕುತ್ತಿರುವಾಗಲೇ ಅದ್ಯಾವಾಗ ನಿದ್ರೆ ಬಂತೊ ಗೊತ್ತಿಲ್ಲ.  ಬೆಳಿಗ್ಗೆ ಕಣ್ಣು ಬಿಟ್ಟಾಗ ರೈಲು ತುಮಕೂರು ದಾಟಿ ಬೆಂಗಳೂರಿನ ಕಡೆ ವೇಗವಾಗಿ ಚಲಿಸುತ್ತಿತ್ತು.


ಚಿತ್ರಗಳು ಮತ್ತು ಲೇಖನ:
ಶಿವು.ಕೆ