
ಈ ರಸ್ತೆಯಲ್ಲಿ ನಮಗೆ ಫೋಟೊಗ್ರಫಿ ಏನು ಆಗಲಿಲ್ಲ. ಸುಮಾರು ಮುವತ್ತು ಕಿಲೋಮೀಟರ್ ಸಾಗಿ ಮಂಜುವಿನ ಆಸೆಯಂತೆ ಅರಣ್ಯ ಇಲಾಖೆಯವರ ದೊಡ್ಡ ಗೋಪರ ಹತ್ತಿ ಮೇಲೆ ನಿಂತು ಸುಮಾರು ಹತ್ತು ಕಿಲೋಮೀಟರ್ ದೂರದವರೆಗೆ ಕಾಣುವ ಕಾಡಿನ ದೃಶ್ಯವನ್ನು ನೋಡಿದ್ದಾಯಿತು. ನಮ್ಮ ಜೊತೆಗೆ ಬಂದಿದ್ದ ಗಾರ್ಡು ರಾತ್ರಿ ಇಲ್ಲೆಲ್ಲಾ ಆನೆಗಳು ಕಾಣುಪ್ರಾಣಿಗಳು ಬಂದು ಮಲಗುತ್ತವೆ ಅಂತ ಹೇಳಿದಾಗ ಅಲ್ಲಿಯೇ ತಂಗಬೇಕೆಂದುಕೊಂಡಿದ್ದ ಮಂಜುವಿನ ಆಸೆಗೆ ತಣ್ಣೀರು ಎರಚಿದಂತಾಗಿತ್ತು.
ಸಂಜೆಯ ಟ್ರಿಪ್ ಏನು ಉಪಯೋಗವಿಲ್ಲವೆಂದು ವಾಪಸ್ ಬರುತ್ತಿದ್ದೆವು. ಅಷ್ಟರಲ್ಲಿ ಇಡೀ ಮುನ್ನಾರಿಗೆ ಮುನ್ನಾರೇ ಹಸಿರು ಬಟ್ಟೆ ತೊಟ್ಟಂತೆ ಟೀ ಎಷ್ಟೇಟು ಹಸಿರಾಗಿ ಕಂಗೊಳಿಸುತ್ತಿದ್ದರೇ ಅಲ್ಲೊಂದು ಮರ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನುತ್ತಾ ಮೈತುಂಬ ಕೆಂಪುಬಣ್ಣದ ಬಟ್ಟೆ ತೊಟ್ಟು ಹೀರೋಯಿನ್ ಪೋಸ್ ಕೊಡುತ್ತಾ ನಿಂತಿತ್ತು. ಅಲ್ಲಿ ನಿಲ್ಲಿಸಿ ಅದರ ಫೋಟೊ ತೆಗೆದುಕೊಂಡೆವು. ನಡುವೆ ರಸ್ತೆಬದಿಯ ಟೀ ಅಂಗಡಿಯಲ್ಲಿ ಟೀ ಕುಡಿದು ಹೊರಡುವಷ್ಟರಲ್ಲಿ ಸಮಯವಾಗಲೇ ಸಂಜೆ ಐದುಗಂಟೆ. ಚಳಿಗಾಲದಲ್ಲಿ ಮುನ್ನಾರಿನಲ್ಲಿ ಬೇಗನೇ ಕತ್ತಲಾಗುತ್ತದೆ. ಇನ್ನೂ ನಮ್ಮ ಫೋಟೊಗ್ರಫಿ ಸಾಧ್ಯವಿಲ್ಲವೆಂದು ವಿಮಲ್‍ನನ್ನು ಪುಸಲಾಯಿಸುತ್ತಾ ಅವನ ವೈಯಕ್ತಿಕ ಬದುಕಿನ ಬಗ್ಗೆ, ಅವನ ಲವ್, ಇತ್ಯಾದಿ ವಿಚಾರಗಳನ್ನು ಉಮ್ಮಸ್ಸಿನಿಂದ ಅವನು ಹೇಳುತ್ತಿರುವಾಗಲೇ ಆಟೋ ಆಪ್ ಆಗಿಬಿಟ್ಟಿತು. ಅದುವರೆಗೂ ಅವನ ಸಂಭ್ರಮ ವಿಚಾರಗಳನ್ನು ಕೇಳುತ್ತಿದ್ದ ನಮಗೆ ಆಟೋ ಆಫ್ ಆಗಿದ್ದು ಒಂಥರ ದಿಗಿಲಾಯಿತು. "ಏನಾಯ್ತು ವಿಮಲ್" ಮಲ್ಲಿ ಕೇಳಿದರು.

"ಒಣ್ಣು ಇಲ್ಲೇ ಸಾರ್" ಅಂತ ಸ್ಟಾರ್ಟ್ ಮಾಡಿದ. ಅನೇಕ ಬಾರಿ ಪ್ರಯತ್ನಿಸಿದರೂ ಸ್ಟಾರ್ಟ್ ಆಗಲಿಲ್ಲ. ಕೊನೆಗೆ ಇಳಿದು ನೋಡಿದರೆ ಪೇಟ್ರೋಲ್ ಕಾಲಿಯಾಗಿತ್ತು. ನಾವು ಫೋಟೊಗ್ರಫಿಯ ವಿಚಾರ ಬಂದಾಗ ಹುಂಬರಂತೆ ಮುನ್ನುಗ್ಗುವುದು ಅವನಿಗೆ ಗೊತ್ತಾಗಿ ನಮ್ಮ ಸಹವಾಸದಿಂದ ಅವನು ಹುಂಬನಾಗಿ ಪೆಟ್ರೋಲ್ ಹಾಕಿಸಿಕೊಳ್ಳದೇ ಬಂದುಬಿಟ್ಟನೇ ಅನ್ನಿಸಿತು. ನಾವು ಅಂದುಕೊಂಡ ಹಾಗೇ ಅವನು ಪೆಟ್ರೋಲ್ ಹಾಕಿಸಿಕೊಂಡಿರಲಿಲ್ಲ. ಮೊದಲೇ ಕಾಡುರಸ್ತೆ. ಸಂಜೆಸಮಯ. ಕತ್ತಲಾಗುತ್ತಿತ್ತು. ಮುನ್ನಾರು ತಲುಪಲು ಇನ್ನೂ ಅರುಕಿಲೋಮೀಟರ್ ಸಾಗಬೇಕಿತ್ತು. ನಡುವೆ ಎಲ್ಲೂ ಪೆಟ್ರೋಲ್ ಬಂಕ್ ಇರಲಿಲ್ಲ. ಏನು ಮಾಡುವುದು. ಸಂಜೆಯಾಗುತ್ತಿದ್ದಂತೆ ಆನೆಗಳು ಬರುತ್ತವೆ ಅಂತ ಬೇರೆ ಹೇಳಿಬಿಟ್ಟಿದ್ದರಿಂದ ನಮಗೆ ದಿಗಿಲು ಶುರುವಾಗಿತ್ತು.
"ನಿಂಗ್ ಕವಲ್ ಪಡಾದೆ ಸರ್, ನಾನು ಮೇನೇಜ್ ಪಣ್ಣುವೆ" ಅಂದವನೇ ನಮ್ಮನ್ನೆಲ್ಲಾ ಕೆಳಗಿಳಿಸಿ ಒಂದುಬದಿಯ ಚಕ್ರವನ್ನು ನಾವೆಲ್ಲಾ ಮೇಲೆತ್ತುವಂತೆ ಹೇಳಿ ಸ್ವಲ್ಪ ಅಲುಗಾಡಿಸಿ ಇಳಿಸಿ, ತಕ್ಷಣ ಆಟೋ ಸ್ಟಾರ್ಟ್ ಮಾಡಿದ. ಸ್ಟಾರ್ಟ್ ಆಗಿಬಿಡ್ತು. ಅವನ ಚಾಕಚಕ್ಯತೆಗೆ ನಮಗೆಲ್ಲಾ ಬೆರಗು. "ವಕ್ಕಾರಂಗ್ ಸರ್" ಅಂದ ಆಟೋ ಸುಮಾರು ಅರ್ಧ ಕಿಲೋಮೀಟರ್ ಓಡಿತು. ಮತ್ತೊಂದು ವಿಚಾರವೇನೆಂದರೆ ಟಾಪ್ ಸ್ಟೇಷನ್ ರೂಟ್ ಎತ್ತರದ ಪ್ರದೇಶ. ಅಲ್ಲಿಂದ ವಾಪಸ್ಸು ಬರುವಾಗ ಹೆಚ್ಚಾಗಿ ಇಳಿಜಾರು. ಅದರಿಂದ ಇಳಿಜಾರಿನಲ್ಲಿ ಇಂಜಿನ್ ಆಫ್ ಮಾಡಿಕೊಳ್ಳುವುದು ಸಮರಸ್ತೆ ಬಂದಾಗ ಮತ್ತೆ ಆನ್ ಮಾಡಿಕೊಳ್ಳುವುದು ನಡೆಯಿತು. ಆದ್ರೆ ಇದು ಒಂದು ಕಿಲೋಮೀಟರ್ ವರೆಗೆ ಮಾತ್ರ ನಮ್ಮ ಸಾಹಸ. ಇನ್ನೂ ಐದು ಕಿಲೋಮೀಟರ್ ಇರುವಂತೆಯೇ ಕತ್ತಲಲ್ಲಿ ಇನ್ನು ನನ್ನ ಕೈಯಲ್ಲಿ ಆಗಲ್ಲ ಅಂತ ಆಟೋ ನಿಂತುಬಿಟ್ಟಿತು. ಸಂಜೆ ಆರುಗಂಟೆಯ ನಂತರ ಕಾಡುಪ್ರಾಣಿಗಳ ಭಯದಿಂದಾಗಿ ಒಂದು ವಾಹನವೂ ಓಡಾಡುವುದಿಲ್ಲ. ಮೊದಲೇ ಅಂಕುಡೊಂಕು ರಸ್ತೆ. ಆರುಗಂಟೆಗೆ ಕತ್ತಲಾಗಿಬಿಟ್ಟಿದೆ. ಏನು ಮಾಡುವುದು? ವಿಮಲ್ ಪೆಟ್ರೋಲ್ ಹಾಕಿಸದೇ ಇರುವುದು ನಮಗೆಲ್ಲಾ ಕೋಪ ಬಂದಿತ್ತು. ಆದ್ರೆ ಆ ಸಮಯದಲ್ಲಿ ಕೋಪ ಮಾಡಿಕೊಂಡರೇ ಏನು ಪ್ರಯೋಜನ.? ಮುನ್ನಾರು ತಲುಪುವುದು ಹೇಗೆ? ಅಷ್ಟರಲ್ಲಿ ವಿಮಲ್ ಒಂದು ಐಡಿಯಾ ಮಾಡಿದ. ತನ್ನ ಬಳಿಯಿದ್ದ ಒಂದು ಬ್ಯಾಟರಿಯನ್ನು ತನ್ನ ಅಟೋದ ಬಲಭಾಗಕ್ಕೆ ಕಟ್ಟಿ ಆನ್ ಮಾಡಿದ. ಅದರ ಬೆಳಕಿನಲ್ಲಿ ರಸ್ತೆಯನ್ನು ನೋಡಿಕೊಂಡು ಇಳೀಜಾರಿನಲ್ಲಿ ನಾವೆಲ್ಲಾ ಸಾಗುವುದು, ಇಳಿಜಾರು ಬಂದ ನಂತರ ಉಬ್ಬಿನ ರಸ್ತೆ ಬರಲೇಬೇಕಲ್ಲವೇ. ಸಾಧ್ಯವಾದಷ್ಟು ಬ್ರೇಕ್ ಹಿಡಿಯದೆ ಉಬ್ಬುರಸ್ತೆಯ ಕ್ರಮಿಸಿ ಆಟೋ ಐದುಸಿರು ಬಿಡುವಾಗ ಮತ್ತೆ ನಾವೆಲ್ಲಾ ಇಳಿದು ಕತ್ತಲ್ಲಲ್ಲಿ ಗೊತ್ತುಗುರಿಯಿಲ್ಲದೇ ತಳ್ಳುವುದು ಹೀಗೆ ಒಂದು ಕಿಲೋಮೀಟರ್ ಸಾಗಿತು. ಅಷ್ಟರಲ್ಲಿ ಬ್ಯಾಟರಿಯೂ ಕಣ್ಣುಕಾಣದ ಮುದುಕಿಯಂತೆ ನಿದಾನವಾಗಿ ಕಣ್ಣುಮುಚ್ಚಿತು. ಇನ್ನು ನಮಗೆ ದೇವರೇ ದಿಕ್ಕು. ಏನು ಮಾಡುವುದು, "ಸಾರ್ ಇನ್ನು ಒರೇ ಕಿಲೋಮೀಟರ್ ಸರ್, ಅಂಗೆ ಪ್ರೆಂಡ್ ಇರುಕ್ಕಾ, ಅಂದ ವೀಡಲ್ಲಿ ಪೆಟ್ರೋಲ್ ಇರುಕ್ಕು" ಅಂದ. ಅವನು ನಮ್ಮ ಸಮಾಧಾನಕ್ಕೆ ಹೇಳುತ್ತಿರಬಹುದು ಅಂದುಕೊಂಡು ರಾತ್ರಿ ಮುನ್ನಾರು ತಲುಪದಿದ್ದರೇ ನಾವು ಕಾಡಿನಲ್ಲಿ ಎಲ್ಲಾದರೂ ಮಲಗಬೇಕು ಅದಕ್ಕೆ ಏನು ಮಾಡಬೇಕು ಅನ್ನುವ ಅಲೋಚನೆಯಲ್ಲಿ ಮೂವರು ಮುಳುಗಿದ್ದೆವು. ನಮ್ಮನ್ನು ಉತ್ತೇಜಿಸಲು ವಿಮಲ್ ಅನೇಕ ಕಾಮಿಡಿಗಳನ್ನು ಮಾಡತೊಡಗಿದಾಗ ನಾವು ವಿಧಿಯಿಲ್ಲದೇ ಅವನ ಕಾಲೆಳೆಯುತ್ತಾ ಆಗು-ಹೀಗೂ ಮತ್ತೊಂದು ಕಿಲೋಮೀಟರ್ ಕತ್ತಲಲ್ಲಿ ತಳ್ಳು-ನೂಕು, ಹತ್ತು ನಡೆದೇ ಇತ್ತು. ಕೆಲವು ಮನೆಗಳು ದೀಪದಬೆಳಕಿನಲ್ಲಿ ಕಾಣಿಸಿದಾಗ ನಮಗೂ ಜೀವ ಬಂದಂತೆ ಆಗಿತ್ತು. "ಸರ್ ಪ್ರೆಂಡ್ ವೀಡ್ ಇಂಗೆ ಇರುಕ್ಕು" ಆಟೋ ಪಕ್ಕ ನಿಲ್ಲಿಸಿ ಅಲ್ಲೊಂದು ಮನೆಗೆ ಓಡಿದ. ಸಮಯವಾಗಲೇ ೭ ಗಂಟೆ ಮುವತ್ತು ನಿಮಿಷ. ಕಣ್ಣೆಷ್ಟೇ ಅಗಲಿಸಿದರೂ ಎದುರಿಗಿರುವವರು ಕಾಣದಿರುವಷ್ಟು ಕತ್ತಲು. ಒಂದು ಬಾಟಲಿಯಲ್ಲಿ ಪೆಟ್ರೋಲ್ ತಂದು ಹಾಕಿ ಮತ್ತೆ ಆಟೋ ಸ್ಟಾರ್ಟ್ ಮಾಡಿದನಲ್ಲ. ನಮಗೆಲ್ಲಾ ನಿಜಕ್ಕೂ ಮರುಜೀವ ಬಂದಂತೆ ಆಗಿತ್ತು. ಅಲ್ಲಿಂದ ಹತ್ತೇ ನಿಮಿಷದಲ್ಲಿ ಮುನ್ನಾರು ತಲುಪಿ ನಮ್ಮ ರೂಮು ತಲುಪಿದಾಗ ಆಗ ಹಸಿವಾಗುತ್ತಿದೆಯೆನ್ನಿಸಿತ್ತು. "ಸಾರಿ ಸರ್, ಮುಂದೆ ಇಂಗೆ ಆವಾದ್" ಅಂತ ವಿಮಲ್ ಸಂಕೋಚದಿಂದ ಕ್ಷಮೆ ಕೇಳಿದಾಗ, ನಮಗೆ ಅವನ ಮೇಲೆ ನಿಜಕ್ಕೂ ಕೋಪವಿರಲಿಲ್ಲ. ಅದಕ್ಕೆ ಬದಲಾಗಿ ಆರುಕಿಲೋಮೀಟರ್ ದೂರ ಆ ಕತ್ತಲಲ್ಲಿ ನಮಗೆಲ್ಲಾ ದೈರ್ಯ ತುಂಬಿ, ತಮಾಷೆ ಮಾತುಗಳನ್ನಾಡುತ್ತಾ ಸುರಕ್ಷಿತವಾಗಿ ತಲುಪಿಸಿದನಲ್ಲ ಅಂತ ಅವನ ಬಗ್ಗೆ ಖುಷಿಯೇ ಆಗಿತ್ತು. "ನಿನ್ನ ಸಾಹಸವನ್ನು ನಾವು ಮೆಚ್ಚಿದ್ದೇವೆ ನೀನು ಇವತ್ತು ನಮ್ಮ ಜೊತೇನೇ ಊಟ ಮಾಡು" ಅಂದೆವು. "ಇಲ್ಲೇ ಸರ್ ವೀಟಲ್ಲ್ ಎಲ್ಲಾ ಕಾತಿರಾಂಗ್" ಅಂದ. ನಾಳೆ ಮಾರ್ನಿಂಗ್ ಆರುವರೆಗೆ ವಾ" ಅಂತ ಹೇಳಿ ಕಳಿಸಿದೆವು.
ಮೊದಲೇ ಆಟೋ ತಳ್ಳಿ ನೂಕಿ ಸುಸ್ತಾಗಿದ್ದರಿಂದಾಲೋ ಅದೇ ರಸ್ತೆ ಬದಿಯಲ್ಲಿ ಆ ತಣ್ಣನೆ ಮೂರು ಡಿಗ್ರಿ ಚಳಿಯಲ್ಲಿ ಬಿಸಿಬಿಸಿ ದೋಸೆ ಇಡ್ಲಿ, ಸ್ಯಾವಿಗೆ ಪರಮಾನಂದವೆನಿಸಿತ್ತು. ಹೋಟಲ್ ರೂಮಿಗೆ ಬಂದು ಹಾಸಿಗೆ ಮೇಲೆ ಮೈಜಾಚುತ್ತಿದ್ದಂತೆ ಅದ್ಯಾವ ಮಾಯದಲ್ಲಿ ನಿದ್ರೆ ಆವರಿಸಿತೋ ಗೊತ್ತಿಲ್ಲ ಬೆಳಿಗ್ಗೆ ಐದುಗಂಟೆಗೆ ಮೊಬೈಲ್ ಅಲಾರಂ ಹೊಡೆದಾಗಲೇ ಎಚ್ಚರ.
ದೇವಿಕುಲಂ ರಸ್ತೆಯ ಬದಿಯಲ್ಲಿ ನಿಂತು ನೋಡಿದಾಗ ಕ್ಲಬ್ ಮಹೀಂದ್ರ ರೆಸಾರ್ಟ್ ನಮ್ಮ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.


ಅಂಥ ಅದ್ಬುತ ಕ್ಷಣವನ್ನು ಕ್ಲಿಕ್ಕಿಸಿದ ನಮಗೆ ಇನ್ಯಾವುದೇ ಫೋಟೊ ಕ್ಲಿಕ್ಕಿಸುವ ಮನಸ್ಸಿರಲಿಲ್ಲ. ಅಷ್ಟರ ಮಟ್ಟಿಗೆ ತೃಪ್ತಿ ನಮ್ಮ ಮುಖದಲ್ಲಿ ತುಂಬಿ ತುಳುಕುತ್ತಿತ್ತು. ವಿಮಲ್ ಕೂಡ ಖುಷಿಯಿಂದ ಆಟೊ ಓಡಿಸುತ್ತಿದ್ದ. ವಿಮಲನನ್ನು ಕೆಣಕಬೇಕೆನ್ನಿಸಿ "ವಿಮಲ್ ನೆಕ್ಸ್ಟ್ ನಾವ್ ಮುನ್ನಾರಿಕ್ಕೂ ಖಂಡಿತ ವರುವೆವು. ಅದಕ್ಕೂ ಪಿನಾಲೆ ನೀ ಒರು ಪಣ್ಣುವೆಯಾ? ಪ್ರಶ್ನಿಸಿದೆ. "ಖಂಡಿತ ಪಣ್ಣುವೆ ಸೊಲ್ಲುಂಗ್ ಸಾರ್" ಅಂದ. "ಅದು ಒಣ್ಣು ಇಲ್ಲೇ, ನೀ ಅಂದ ದೇವಸ್ಥಾನಕ್ಕೂ ಕೊಂಚ ಮಂಜ[ಆರೆಂಜ್]ಕಲರ್ ಪೇಂಟ್ ಪಣ್ಣು. ಅಪ್ರಮಾ ಅದು ಫೋಟೊಗ್ರಫಿಕ್ಕೂ ರೊಂಬ ನಲ್ಲ ಇರುಕುದು, ತೆರಿಮಾ" ಅಂದೆ. ನನ್ನ ಮಾತನ್ನು ಕೇಳಿ ಮಲ್ಲಿ, ಮಂಜು ವಿಮಲ್ ಎಲ್ಲರೂ ಜೋರಾಗಿ ನಕ್ಕರು. ಆಟೋ ನಿದಾನವಾಗಿ ಮುನ್ನಾರು ತಲುಪುತ್ತಿತ್ತು.
ಪ್ರವಾಸ ಕಥನ ತುಂಬಾ ದೊಡ್ಡದಾಯಿತೆಂದೂ ಇಲ್ಲಿಗೇ ನಿಲ್ಲಿಸಿದ್ದೇನೆ. ಇನ್ನೂ ಮುನ್ನಾರಿನ ನೀಲಗಿರಿ ಥಾರ್, ಕುರುಂಜಿ ಹೂ, ಮುನ್ನಾರು ನಗರ ಸುತ್ತಾಟ ಮುನ್ನಾರು ಚಾಕಲೆಟ್, ಕ್ಯಾರೆಟ್ಟು, ಸರೋವರದಲ್ಲಿ ಸಿಕ್ಕ ಸುಂದರ ಸಾಲು ಹುಡುಗಿಯರು, ಅಲ್ಲಿಂದ ಬೆಂಗಳೂರಿಗೆ ವಾಪಸ್ ಬಂದಿದ್ದು ಇತ್ಯಾದಿಗಳ ಬಗ್ಗೆ ಬರೆಯುವುದಿದೆ. ನಿಮಗೆಲ್ಲಾ ಬೇಸರವಾಗಬಹುದೆಂದು ಇಲ್ಲಿಗೆ ನಿಲ್ಲಿಸಿದ್ದೇನೆ. ನೀವು ಇಷ್ಟ ಪಟ್ಟರೆ ಮುಂದೆ ಅದನ್ನು ಬರೆಯುತ್ತೇನೆ. ಅದಕ್ಕಾಗಿ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಧನ್ಯವಾದಗಳು.
ಚಿತ್ರ ಮತ್ತು ಲೇಖನ.
ಶಿವು.ಕೆ.