
"ಸ್ವಾಮಿ ನೀವು ನಮಗೆ ಅನ್ಯಾಯ ಮಾಡುತ್ತಿದ್ದೀರಿ, ನಿಮ್ಮ ಪಕ್ಷಪಾತತನ ಹೆಚ್ಚಾಗುತ್ತಿದೆ"
ಮಾತನ್ನು ಕೇಳಿ ಸುತ್ತ ನೆರೆದಿದ್ದವರಿಗೆಲ್ಲಾ ಒಂದು ಕ್ಷಣ ಶಾಕ್ ಆಗಿತ್ತು.
ಇಷ್ಟಕ್ಕೂ ಈ ಮಾತನ್ನು ಹೇಳಿದ್ದು ಲಕ್ಷಾಂತರ ಮರಗಳ ಪರವಾಗಿ ಒಂದು ಅಂಗವಿಕಲ ಮರ. ಅದೊಂದು ದೊಡ್ಡ ಸಭೆ.
ಆ ಸಭೆಯಲ್ಲಿ ನೆರೆದಿದ್ದವರೆಲ್ಲಾ ಮಹಾನ್ ಘಟಾನುಘಟಿಗಳೇ. ಒಂದು ಕಡೇ ನೀರು ನಿಂತಿದ್ದರೇ, ಅದರ ಪಕ್ಕದಲ್ಲೇ ಗಾಳಿ ಕಂಡರೂ ಕಾಣದ ಹಾಗೆ ತೇಲುತ್ತಾ ನಿಲ್ಲುತ್ತಾ.. ಕುಳಿತಿತ್ತು. ಭೂಮಿಯೂ ನೆಲದ ಮೇಲೆ ಕುಳಿತಿದ್ದರೇ, ಅದರ ಮೇಲೆ ಅಕಾಶ ನಿಂತಿತ್ತು. ಅವೆರಡರ ನಡುವೆ ಶಾಂತವಾಗಿ ಕುಳಿತಿದ್ದ ಸಮುದ್ರ ಮರಗಳ ಅಹ್ವಾನದ ಮೇರೆಗೆ ಈ ಸಭೆಗೆ ಬಂದಿತ್ತು. ಇಷ್ಟಕ್ಕೂ ಈ ಸಭೆಯನ್ನು ಕರೆದಿದ್ದು ಮರಗಳು. ಇಡೀ ಭೂಮಿಯ ಮರಗಳೆಲ್ಲಾ ತಮಗೆ ಅನ್ಯಾಯವಾಗುತ್ತಿದೆಯೆಂದು, ಹೀಗೆ ಆದರೆ ನಮಗೆ ಉಳಿಗಾಲವಿಲ್ಲ, ನಮಗೆ ನ್ಯಾಯ ದೊರಕಿಸಿಕೊಡಿ ಅಂತ ನ್ಯಾಯ ಕೇಳಲು ಬಂದಿದ್ದವು. ಮರಗಳಿಗೆ ನ್ಯಾಯ ದೊರಕುತ್ತದೆಯೋ ಇಲ್ಲವೇ ನೋಡೋಣವೆಂದು ಭೂಮಿಯ ಪಂಚಭೂತಗಳೂ ಸೇರಿದಂತೆ ಎಲ್ಲವು ಸೇರಿದ್ದವು.
ಪ್ರತಿಯೊಂದು ಆಗುಹೋಗುಗಳನ್ನು ನಿಯಂತ್ರಿಸಿ ಇಡೀ ಪ್ರಪಂಚವನ್ನು ಸುಸ್ತಿತಿಯಲ್ಲಿಡುವ ಜವಾಬ್ದಾರಿಯನ್ನು ಹೊತ್ತಿದ್ದ ಪ್ರಕೃತಿ ದೇವತೆ ಅವತ್ತು ನ್ಯಾಯಾದೀಶನ ಸ್ಥಾನವನ್ನು ಅಲಂಕರಿಸಿತ್ತು. ಸಹಜವಾಗಿ ಯಾರಿಗೂ ಕಾಣದ ಹಾಗೆ ಇರುತ್ತಿದ್ದ ಪ್ರಕೃತಿ ದೇವತೆ ಅವತ್ತು ಮರಗಳು ಸಲ್ಲಿಸಿದ್ದ ಮನವಿಗಾಗಿ ಪ್ರತ್ಯಕ್ಷವಾಗಿತ್ತು.
"ಎಲೈ ಮರವೇ, ನೀನು ನೇರವಾಗಿ ನಿನ್ನ ದೂರು ಸಲ್ಲಿಸುವುದು ಬಿಟ್ಟು ನಮ್ಮನ್ನು ಅಪಾದಿಸುವುದು ಸರಿಯೇ?" ಪ್ರಕೃತಿ ದೇವತೆ ಕೇಳಿತು.
"ಮಹಾಸ್ವಾಮಿ, ನೀವೇ ನೋಡಿ, ಕಳೆದ ವಾರ ಬೆಂಗಳೂರಿನಲ್ಲಿ ಜೋರು ಮಳೆ ಬಿತ್ತಲ್ಲ, ಆಗ ಹೆಚ್ಚು ಬಲಿಯಾಗಿದ್ದು ನಾವು. ಬೆಂಗಳೂರಿನ ಪ್ರತಿಯೊಂದು ರಸ್ತೆಯಲ್ಲಿಯೂ ನಮ್ಮನ್ನು ಉರುಳಿಸಿ ಸಾಯಿಸಲಾಗಿತ್ತು. ಇಷ್ಟೇ ಅಲ್ಲದೇ ಇತ್ತೀಚೆಗೆ ನಡೆಯುತ್ತಿರುವ ಪ್ರತಿಯೊಂದು ವಿಕೋಪಕ್ಕೂ ಈ ಪ್ರಪಂಚದಲ್ಲಿ ನಾವು ಬಲಿಪಶುಗಳಾಗುತ್ತಿದ್ದೇವೆ, ನೀವೇ ನೋಡಿ ಬೆಂಗಳೂರಿನ ಮೆಟ್ರೋ ಸಲುವಾಗಿ, ರಸ್ತೆ ಅಗಲೀಕರಣಕ್ಕಾಗಿ, ಭೂಸ್ವಾಧೀನಕ್ಕಾಗಿ, ಪ್ಲೇಓವರಿಗಾಗಿ".........ಹೀಗೇ ರಾಜ್ಯದ, ದೇಶದ ವಿದೇಶಗಳಲ್ಲಿನ ವಿಧ್ಯಾಮಾನಗಳನ್ನು ಚಿತ್ರಗಳ ಸಹಿತ ಅಂಕಿ ಅಂಶ ನೀಡಿತು ಮರ.
ಅದನ್ನು ನೋಡಿದ ಪ್ರಕೃತಿ ದೇವತೆಗೆ ನಿಜಕ್ಕೂ ಅಶ್ಚರ್ಯ, ದಿಗಿಲು, ಒಟ್ಟಿಗೆ ಆಯಿತು.
"ನಿಮಗೆ ಇಡೀ ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸುವ ಶಕ್ತಿ ಇದೆ. ಎಲ್ಲೂ ಹೆಚ್ಚು ಕಡಿಮೆಯಾಗದಂತೆ ಸಮತೂಕ ಮಾಡಿಕೊಂಡು ಈ ಜಗತ್ತನ್ನು ಸುಸ್ತಿತಿಯಲ್ಲಿಡುವ ಜವಾಬ್ದಾರಿ ನಿಮ್ಮದು. ಒಂದು ಹುಲ್ಲು ಕಡ್ಡಿಯೂ ಕೂಡ ನಿಮ್ಮ ಅನುಮತಿಯಿಲ್ಲದೇ ಅಲುಗಾಡುವುದಿಲ್ಲ. ಒಂದು ಹುಳು ಪ್ಯೂಪ ಸೇರಿ ಸುಂದರ ಚಿಟ್ಟೆಯಾಗಿ ಬರುವಂತ ಅದ್ಬುತವನ್ನು, ಚಳಿರಾತ್ರಿಯಲ್ಲಿ ಗಾಳಿಯಲ್ಲಿರುವ ಕೋಟ್ಯಾಂತರ ನೀರಿನ ಕಣಗಳನ್ನು ಕತ್ತಲಲ್ಲಿ ಅಷ್ಟಷ್ಟೂ ಒಟ್ಟುಗೂಡಿಸಿ ಒಂದೊಂದೇ ಎಲೆಯ ಮೇಲೆ ನಿದಾನವಾಗಿ ಕತ್ತಲೆಯಲ್ಲೇ ಒಂದೊಂದು ಎಲೆಯ ಮೇಲೆ ಕೂರಿಸಿ, ಮುಂಜಾನೆಗೆ ಸೂರ್ಯನಿಂದ ಅವುಗಳ ಮೇಲೆ ತಿಳಿಯಾದ ಹದವಾದ ತಂಪು ಕಿರಣಗಳಿಂದ ಬಿಸಿಲ ಕೋಲುಗಳನ್ನು ಸೃಷ್ಟಿಸಿ, ನೋಡುಗರ ಕಣ್ಣಿಗೆ ಅದಮ್ಯ ಸೌಂದರ್ಯವನ್ನು ಸೃಷ್ಟಿಸುತ್ತೀರಿ. ಆದ್ರೆ ನಮ್ಮ ವಿಚಾರದಲ್ಲಿ ಏಕೆ ಹೀಗೆ ಅನ್ಯಾಯವಾಗುತ್ತಿದೆ ಮಹಾಸ್ವಾಮಿ?"
ಪ್ರಕೃತಿ ದೇವತೆ ಮರದ ದೂರನ್ನು ಪರಿಶೀಲಿಸಿದಾಗ ಇದೆಲ್ಲದಕ್ಕೂ ಕಾರಣ ಮಳೆ. ಅದರ ಕಡೆಗೆ ತಿರುಗಿ,
"ಮಳೆಯೇ ನಿನ್ನ ಕೆಲಸದಲ್ಲಿ ವ್ಯತ್ಯಾಸವಾಗಿರುವುದರಿಂದ ಈ ಅಚಾತುರ್ಯ ನಡೆದಿದೆಯೆಂದು ನನ್ನ ಅಭಿಪ್ರಾಯ. ಇದಕ್ಕೆ ನಿನ್ನ ಉತ್ತರವೇನು?" ಮಳೆಯನ್ನು ಉದ್ದೇಶಿಸಿ ಕೇಳಿತು ಪ್ರಕೃತಿ ದೇವತೆ.
"ಮಹಾಸ್ವಾಮಿ ಇದಕ್ಕೆ ಖಂಡಿತನಾನು ಕಾರಣನಲ್ಲ, ನಾನು ನನ್ನ ನಿತ್ಯ ಕೆಲಸವನ್ನು ಸರಿಯಾಗಿ ನಿಮ್ಮ ಆದೇಶದಂತೆ ಸರಿಯಾಗಿ ಮಾಡುತ್ತಿದ್ದೇನೆ. ಆದರೂ ಕೆಲವೊಮ್ಮೆ ನನ್ನ ಕೈ ಮೀರಿ ಕೆಲವು ಕಡೇ ಹೆಚ್ಚು ಸುರಿದಾಗ ಹೀಗೆ ಪ್ರವಾಹವಾಗುವುದುಂಟು, ಈ ಮರಗಳು ಬುಡಮೇಲಾಗಿ ಸಾಯುವುದುಂಟು. ಇದನ್ನೆಲ್ಲಾ ನಾನೇ ಮಾಡಿದರೂ ಇದರಲ್ಲಿ ನನ್ನ ಪಾತ್ರವೇನು ಇದಕ್ಕೆಲ್ಲಾ ಕಾರಣ ಈ ಮೋಡಗಳು." ಮೋಡಗಳ ಕಡೆ ಕೈತೋರಿಸಿ ತನ್ನ ವಾದ ಮಂಡಿಸಿತು ಮಳೆ.
ಇದುವರೆಗೂ ಅರಾಮವಾಗಿ ತಮಾಷೆಯಾಗಿ ಮಾತಾಡಿಕೊಂಡಿದ್ದ ಮೋಡವೂ ತನ್ನ ಮೇಲೆ ಗೂಬೆ ಕೂರಿಸುತ್ತಿರುವ ಮಳೆಯ ಮೇಲೆ ಕೋಪ ಬಂದರೂ ಆ ಸಭೆಯಲ್ಲಿ ಅದನ್ನು ತೋರ್ಪಡಿಸುವಂತಿರಲಿಲ್ಲ. ಆದರೂ ಈಗ ಆಗಿರುವ ತಪ್ಪಿಗೆ ಕಾರಣ ನಾನೆಂದು ಎಲ್ಲರೂ ಹೇಳುತ್ತಿದ್ದಾರೆ. ನಾನೇನು ಮಾತಾಡದಿದ್ದಲ್ಲಿ ನಾನೇ ತಪ್ಪಿತಸ್ಥನಾಗಿಬಿಡುತ್ತೇನೆ. ಹಾಗೆ ಪ್ರಾಮಾಣಿಕವಾಗಿ ನೋಡಿದರೆ ನಾನೂ ಈ ಅವಾಂತರಕ್ಕೆ ಕಾರಣನಲ್ಲವಲ್ಲ? ನಾನು ಹೇಗೆ ಇದಕ್ಕೆಲ್ಲಾ ಕಾರಣನಲ್ಲವೆಂದು ಇಲ್ಲಿ ವಿವರಿಸಬೇಕು ಅಂದುಕೊಂಡು,
"ಮಹಾಸ್ವಾಮಿ, ನಾನು ನಿಮ್ಮ ಆಜ್ಞೆಯಂತೆ ಸೂರ್ಯನಬೆಳಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾ, ತಿಳಿಮೋಡ, ಬೆಳ್ಳಿಮೋಡ,......ಹೀಗೆ ಸೌಂದರ್ಯವನ್ನು ಹೊಮ್ಮಿಸುತ್ತಾ ನೋಡುಗರ ಕಣ್ಣನ್ನು ಮನಸ್ಸನ್ನು ಸೂರೆಗೊಳ್ಳುತ್ತಿದ್ದೇನೆ. ಕತೆ ಕಾದಂಬರಿಕಾರರ, ಕವಿಗಳ, ಛಾಯಾಚಿತ್ರಕಾರರ, ಚಿತ್ರಕಲೆಗಾರರ ಕಲೆಗಳಿಗೆ ಸ್ಪೂರ್ತಿ ನೀಡುತ್ತಾ, ಅವರಿಂದ ಅದ್ಭುತ ಕಲಾಕೃತಿ ರಚನೆಗೆ ಕಾರಣನಾಗಿದ್ದೇನೆ. ಅಷ್ಟೇ ಅಲ್ಲದೇ ನೀವು ಹೇಳಿದ ಕಡೆ ಕರಿಮೋಡವಾಗಿ ಸಾಲುಗಟ್ಟಿ ಈ ಮಳೆ ಬೇಕಾದಷ್ಟು ಚೆನ್ನಾಗಿ ಸುರಿಯಲು ಅನುಕೂಲ ಮಾಡಿಕೊಟ್ಟಿದ್ದೇನೆ. ಅಂತದ್ದರಲ್ಲಿ ಈ ಮಳೆ ನನ್ನ ಮೇಲೆ ತಪ್ಪು ಹಾಕಿದೆ. ಆದರೂ ಈಗ ಈತನ ಅಭಿಪ್ರಾಯದಂತೆ ನನ್ನ ಕಡೆ ತಪ್ಪಾಗಿದೆಯೆಂದು ಅನ್ನಿಸಿದರೆ ಅದಕ್ಕೆ ಕಾರಣ ನಾನಲ್ಲ. ಈ ಸಮುದ್ರವೇ ಕಾರಣ" ತಪ್ಪನ್ನು ಸಮುದ್ರ ಮೇಲೆ ಹೊರಿಸಿ ಸುಮ್ಮನಾಯಿತು ಮೋಡ.
ಈಗ ಎಲ್ಲರ ಗಮನವೂ ಸಮುದ್ರದ ಕಡೆಗೆ ಬಿತ್ತು. ಶಾಂತವಾಗಿ ಸುಮ್ಮನೆ ಕುಳಿತಿದ್ದ ಸಮುದ್ರವೂ ದಿಡೀರ್ ಬಂದ ಹೊರೆಯಿಂದ ಈಗ ತಪ್ಪಿಸಿಕೊಳ್ಳಲೇಬೇಕಿತ್ತು.
"ಮಹಾಸ್ವಾಮಿ, ಇಲ್ಲಿ ತಮ್ಮ ತಪ್ಪುಗಳನ್ನು ಹೀಗೆ ಒಬ್ಬರ ಮೇಲೆ ಒಬ್ಬರೂ ಹೊರಿಸುತ್ತಾ ಈಗ ನನ್ನ ತಲೆಗೆ ಕಟ್ಟಿದ್ದಾರೆ. ನಾನು ಪ್ರಪಂಚದಲ್ಲಿನ ಸಕಲ ಜಲಚರಗಳಿಗೂ ಆಸರೆ ನೀಡುತ್ತಾ, ವಿಶ್ವದೆಲ್ಲೆಡೆ ಹರಡಿಕೊಂಡು ಸಾವಿರಾರು ಹಡಗು, ದೋಣಿಗಳು, ಸರಾಗವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಜೀವನದುದ್ದಕ್ಕೂ ಶ್ರಮಿಸುತ್ತಿದ್ದೇನೆ. ನನ್ನೊಳಗೆ ಸೇರಿಕೊಂಡ ನದಿಗಳ ನೀರನ್ನು ಆಗಾಗ ಆವಿರೂಪದಲ್ಲಿ ಸೃಷ್ಟಿಸಿ ಆಕಾಶಕ್ಕೆ ಕಳಿಸಿ ಮೋಡಗಳಾಗುವುದಕ್ಕೆ ಸಹಕರಿಸುತ್ತಿದ್ದೇನೆ. ನಾನು ಈ ಕೆಲಸವನ್ನು ಮಾಡಿದ ಮೇಲೆ ಅದನ್ನು ಮೇಲೆ ಸರಿಯಾದ ಸ್ಥಳಕ್ಕೆ ಕಳಿಸುವ ಜವಾಬ್ದಾರಿ ಈ ಗಾಳಿಯದು ಅದು ಸರಿಯಾಗಿ ಕೆಲಸ ಮಾಡದಿದ್ದ ಮೇಲೆ ಈ ರೀತಿ ಆಚಾತುರ್ಯವಾಗಿರಬಹುದು. ಆದ್ದರಿಂದ ನೀವು ಗಾಳಿಯನ್ನು ವಿಚಾರಿಸಿಕೊಳ್ಳುವುದು ಒಳ್ಳೆಯದು" ಅಂತ ತನ್ನ ವಾದವನ್ನು ಮಂಡಿಸಿತು.
ಇದು ನನ್ನ ಬುಡಕ್ಕೆ ಬರುತ್ತದೆಯೆಂದು ಸಿದ್ದನಾಗಿದ್ದ ಗಾಳಿಯೂ "ಮಹಾಸ್ವಾಮಿ ನಾನು ನನ್ನ ಕೆಲಸವನ್ನು ಸರಿಯಾಗಿಯೇ ನಿರ್ವಹಿಸುತ್ತಿದ್ದೇನೆ. ಆದರೆ ಈಗ್ಗೆ ಸುಮಾರು ಐವತ್ತು ವರ್ಷಗಳಿಂದ ನನ್ನನ್ನು ಈ ಮಾನವರು ಅದೆಷ್ಟು ಕಲುಷಿತಗೊಳಿಸಿದ್ದಾರೆಂದರೆ, ಅವರ ವಾಹನಗಳು, ಕಾರ್ಖಾನೆಗಳು....ಇತ್ಯಾದಿಗಳಿಂದ ಬಿಡುಗಡೆಯಾಗುವ ಹೊಗೆಯಲ್ಲಿ ಪ್ರತಿದಿನ ಟನ್‍ಗಟ್ಟಲೇ ಇಂಗಾಲವನ್ನು ನನ್ನೊಳಗೆ ಸೇರಿಸುತ್ತಿದ್ದಾರೆ. ಇದರಿಂದ ನನ್ನ ಆರೋಗ್ಯ ಸದಾ ಹದಗೆಟ್ಟು ನನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ ಸ್ವಾಮಿ,"
"ಗಾಳಿಯೂ ಹೇಳುವುದರಲ್ಲಿ ನೂರಕ್ಕೂ ನೂರರಷ್ಟು ಸತ್ಯವಿದೆ ಮಹಾಸ್ವಾಮಿ, ನಾವು ಕುಂಬಕರ್ಣನ ವಂಶದವರು. ನಿನ್ನ ಆಜ್ಞೆಯಂತೆ ನೂರಾರು ವರ್ಷಗಳಿಗೊಮ್ಮೆ ನಾವು ನಿದ್ರೆಯಿಂದ ನಿದಾನವಾಗಿ ಎದ್ದು, ಸಣ್ಣ ಪುಟ್ಟ ಆಘಾತಗಳನ್ನುಂಟು ಮಾಡಿ ಭೂತಾಯಿಯ ಸಮತೋಲನವನ್ನು ಕಾಪಾಡುತ್ತಿದ್ದೆವು. ಆದ್ರೆ ಈ ಮನುಷ್ಯರು ವಾತಾವರಣವನ್ನು ಎಷ್ಟು ಬಿಸಿಗೊಳಿಸುತ್ತಿದ್ದಾರೆಂದರೆ, ಅಂಟಾರ್ಟಿಕದಲ್ಲಿ, ಹಿಮಪ್ರದೇಶದಲ್ಲಿ, ಹಿಮಾಲಯದಲ್ಲಿನ ಹಿಮದ ನೀರ್ಗಲ್ಲುಗಳು ಕರಗುತ್ತಿವೆ, ಮತ್ತಷ್ಟು ನೀರು ಸಮುದ್ರಕ್ಕೆ ಸೇರಿ ಅನೇಕ ಭೂಭಾಗಗಳು ಮುಳುಗುತ್ತಿವೆ, ಈ ಬಿಸಿಯಿಂದಾಗಿ ಸಮುದ್ರದ ಕೆಳಗೆ, ಭೂಭಾಗದ ಒಳಗೆ ನೆಮ್ಮದಿಯಾಗಿ ನಿದ್ರಿಸುತ್ತಿರುವ ನಾವೆಲ್ಲಾ ಈ ಬಿಸಿಯಿಂದಾಗಿ ದಿಡೀರ್ ಅಂತ ಬೆಚ್ಚಿಬಿದ್ದು ಎದ್ದುಬಿಡುತ್ತೇವೆ. ಆಗ ನಮಗೆ ಗೊತ್ತಿಲ್ಲದ ಹಾಗೆ ಪ್ರಪಂಚದೆಲ್ಲೆಡೆ ಅಲ್ಲೋಲಕಲ್ಲೋಲವಾಗಿಬಿಡುತ್ತದೆ ಸ್ವಾಮಿ," ಅಲ್ಲಿಯವೆರೆಗೂ ಸುಮ್ಮನಿದ್ದ ಚಂಡಮಾರುತ, ಸುನಾಮಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಿದವು.
"ಹೌದು ಮಹಾಸ್ವಾಮಿ ಇದಕ್ಕೆಲ್ಲಾ ಕಾರಣ ಈ ಮನುಷ್ಯರು, ಹೆಣ್ಣು, ಹೊನ್ನು ಮಣ್ಣಿನ ಆಸೆಯಿಂದಾಗಿ ಎಲ್ಲಾ ಕಡೆ ಮರಗಳನ್ನು ಕತ್ತರಿಸುತ್ತಿದ್ದಾರೆ, ತಮ್ಮ ಅಧುನಿಕ ಬದುಕಿಗಾಗಿ ಇರುವ ನೀರನ್ನೆಲ್ಲಾ ಕಲುಷಿತಗೊಳಿಸುತ್ತಿದ್ದಾರೆ, ಗಾಳಿಗೆ ವಿಷಾನಿಲಗಳನ್ನು ಸೇರಿಸುತ್ತಿದ್ದಾರೆ. ಯಾವ ರೀತಿಯಿಂದಲೂ ಸಾಯಿಸಲಾಗದಂತ ಪ್ಲಾಸ್ಟಿಕನ್ನು ಟನ್‍ಗಟ್ಟಲೇ ತಯಾರಿಸುತ್ತಿದ್ದಾರೆ, ಇದಕ್ಕೆಲ್ಲಾ ಕಾರಣ ಈ ಮನಷ್ಯ, ಅವನ ದುರಾಸೆಗಳು, ಆಧುನಿಕ ಐಬೋಗಗಳು, ಎಲ್ಲವನ್ನೂ ಇವತ್ತೇ ಅನುಭವಿಸಿಬಿಡಬೇಕೆನ್ನುವ ದುರಾಸೆ............ಈ ಮನುಜನಿಂದಾಗಿಯೇ ನಾವೆಲ್ಲಾ ನಮ್ಮ ನಮ್ಮ ಕರ್ತವ್ಯಗಳನ್ನು ಅರೋಗ್ಯಕರವಾಗಿ ನಿರ್ವಹಿಸಲು ಆಗುತ್ತಿಲ್ಲ. ಅವನನ್ನು ಮಟ್ಟಹಾಕಬೇಕು" ಅಲ್ಲಿ ನೆರೆದಿದ್ದ ಎಲ್ಲವೂ ಒಕ್ಕೊರಲಿನಿಂದ ತಮ್ಮ ಮನವಿಯನ್ನು ಸಲ್ಲಿಸಿದವು.
ಸಭೆಯಲ್ಲಿ ಅಲ್ಲಿಯವರೆಗೆ ಎಲ್ಲರ ವಿಚಾರಗಳು, ತಪ್ಪುಗಳು, ಅಹವಾಲುಗಳು, ಮನವಿಗಳನ್ನು ಕೇಳುತ್ತಾ ಕುಳಿತಿದ್ದ ಪ್ರಕೃತಿ ದೇವತೆ, ಇದಕ್ಕೆಲ್ಲಾ ಕಾರಣ ಈ ನವರಸಗಳನ್ನು ಹೊಂದಿ, ನವಆಟಗಳನ್ನು ಆಡುತ್ತಾ ಮೆರೆಯುತ್ತಿರುವ ಮನುಜನೇ ಕಾರಣವೆಂದು ಗೊತ್ತಾದ ಮೇಲೆ ಚಿಂತಿಸತೊಡಗಿತು. ಇದಕ್ಕೆ ಪರಿಹಾರವೇನು? ಎಂದು ಯೋಚಿಸುತ್ತಿರುವಾಗಲೇ...ದೂರದಿಂದ ಕೂಗು ಬಂತು.
"ಮಹಾಸ್ವಾಮಿ, ಬೇಗನೇ ತಪ್ಪಿಸಿಕೊಳ್ಳಿ, ಇಲ್ಲದಿದ್ದರೇ ನಮಗೆ ಉಳಿಗಾಲವಿಲ್ಲ. ದೂರದಿಂದ ಅಣ್ವಸ್ತ್ರವೊಂದು ನಮ್ಮ ಸಭೆಯ ಕಡೆಗೆ ಹಾರಿಬರುತ್ತಿದೆ. ಅದನ್ನು ಕಂಡುಹಿಡಿದಿದ್ದು ಈ ಮನುಷ್ಯನೇ.....ನಾವೆಲ್ಲಾ ಈಗ ಓಡದಿದ್ದಲ್ಲಿ ನಾಶವಾಗಿಬಿಡುತ್ತೇವೆ.... ದೂರದಿಂದ ಕೂಗು ಕೇಳಿಬಂತು.
"ಆರೆರೆ....ಇದೇನಿದು, ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ ನನಗೆ ಇದ್ಯಾವುದು ನನಗೆ ತಿಳಿಯದಂತಾ ಅಣ್ವಸ್ತ್ರ,? ಅದನ್ನು ನಿಯಂತ್ರಿಸಲು ನೀವೆಲ್ಲಾ ಸೇರಿ ಪ್ರಯತ್ನಿಸಿ," ಆಜ್ಞಾಪಿಸಿತು ಪ್ರಕೃತಿ ದೇವತೆ.
"ಇಲ್ಲ ಮಹಾಸ್ವಾಮಿ, ಇದು ನಮ್ಮ ಕೈಮೀರಿದ್ದು, ಏಕೆಂದರೆ ಅದನ್ನು ನಾವು ಸೃಷ್ಟಿಸಿದ್ದಲ್ಲ. ಈ ಮಾನವ ಸೃಷ್ಟಿಸಿದ್ದು. ಅದರ ಶಕ್ತಿ ನಮ್ಮಳತೆಯನ್ನು ಮೀರಿದ್ದು. ಅದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ" ಅಲ್ಲಿ ಸೇರಿದ್ದ, ಸಮುದ್ರ, ಮೋಡ, ಗಾಳಿ, ಮರಗಳು, ನೀರು, ಸುನಾಮಿ, ಚಂಡಮಾರುತ, ಆಕಾಶ, ಭೂಮಿ ಎಲ್ಲವೂ ಒಕ್ಕೊರಲಿನಿಂದ ಹೇಳಿದವು.
ಈ ಮಾತನ್ನು ಕೇಳಿ ಅದುವರೆಗೂ ಎಲ್ಲರ ಅಹವಾಲುಗಳನ್ನು ಕೇಳುತ್ತಿದ್ದ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ದೂರದಿಂದಲೇ ಅದನ್ನು ನಿಸ್ಕ್ರೀಯಗೊಳಿಸಲು ಪ್ರಯತ್ನಿಸಿತು. ಅದರ ಯಾವ ಶಕ್ತಿಯೂ ಕೂಡ ಅಣ್ವಸ್ತ್ರವನ್ನು ನಿಯಂತ್ರಿಸಲಾಗಲಿಲ್ಲ....ಕೊನೆಗೆ ನಿಸ್ಸಾಯಕನಾಗಿ ಸೋತು ನೋವು ವಿಷಾದದಿಂದ ಪ್ರಕೃತಿದೇವತೆ ಕಣ್ಮರೆಯಾಗಿಬಿಟ್ಟಿತು. ತಮ್ಮ ಒಡೆಯನೇ ಹೀಗೆ ಕಣ್ಮರೆಯಾಗಿ ತಪ್ಪಿಸಿಕೊಂಡಿದ್ದು ನೋಡಿ ದಿಗಿಲಿನಿಂದ ತಮ್ಮೆಡೆಗೆ ತಮ್ಮ ನಾಶಕ್ಕೆ ಬರುತ್ತಿರುವ ಆಣ್ವಸ್ತ್ರ, ರಾಸಾಯನಿಕ ಅಸ್ತ್ರಗಳನ್ನು ನೋಡುತ್ತಾ ಸಾವಿರಾರು ಮರಗಳು, ನೀರು ಗಾಳಿ, ಮೋಡ, ಸಾಗರ, ಮಳೆ, ಭೂಮಿ, ಆಕಾಶಗೆಳೆಲ್ಲಾ ಅನಾಥರಾಗಿ ನಿಂತುಬಿಟ್ಟವು.
[ಈ ಪುಟ್ಟ ಕತೆಯನ್ನು ವಿಶ್ವ ಭೂದಿನ ಆಚರಣೆ ಸಲುವಾಗಿ ಏಪ್ರಿಲ್ ೨೨ರಂದು ಬ್ಲಾಗಿಗೆ ಹಾಕಲು ಬರೆದಿದ್ದೆ. ಕಾರಣಾಂತರದಿಂದ ಬ್ಲಾಗಿಗೆ ಹಾಕಿರಲಿಲ್ಲ. ಈಗ ಬ್ಲಾಗಿಗೆ ಹಾಕಿದ್ದೇನೆ. ನೀವು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ...]
ಚಿತ್ರ ಮತ್ತು ಲೇಖನ
ಶಿವು.ಕೆ