Sunday, June 17, 2018

ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!





       

       ನಮ್ಮಪ್ಪನ್ನ  ಕರ್ಕೊಂಡು ಬರ್ತೀನಿ ತಾಳು.!

       "ನಮ್ಮಪ್ಪನ್ನ  ಕರ್ಕೊಂಡು ಬರ್ತೀನಿ ತಾಳು, ನಿನಗೆ ಮಾಡಿಸ್ತೀನಿ"   ಮಣೆಯಂತ ಉದ್ದ ಹಲಗೆಯ ಮೇಲೆ ನನಗಿಂತ ದಪ್ಪನಾಗಿ ನನ್ನ  ಪಕ್ಕ ಕುಳಿತಿದ್ದ ಹರೀಶ ನನ್ನ  ಸೀಮೆಸುಣ್ಣವನ್ನು ಕಿತ್ತುಕೊಂಡಾಗ ನಾನು  ಹೀಗೆ  ಅಂದಿದ್ದೆ. ನನಗೆ ನೆನಪಿರುವಂತೆ ಆಗ  ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದೆ.  ನಮಗಾಗ ಕ್ಲಾಸ್ ಅನ್ನುವುದು ಬರದೇ ಒಂದು ಗ್ಲಾಸ್, ಎರಡು ಗ್ಲಾಸ್ ಅನ್ನುತ್ತಿದ್ದೆವು.  ಪ್ರತಿಯೊಂದಕ್ಕೂ  ಆಗ ಅಪ್ಪ ಬೇಕಾಗಿತ್ತು. 

        ಪಕ್ಕದ ಮನೆಯ  ಆನಂದನಿಗೆ ಅವನಪ್ಪ  ಮಿಣಮಿಣ ಮಿನುಗಿ, ಸೊಯ್ ಸೊಯ್.....ಅಂತ  ಓಡುವ  ಆಟದ ಕಾರನ್ನು ತಂದಾಗ ನಾನು ನನ್ನಪ್ಪನಿಗೆ  ಅಂತದ್ದೇ  ನನಗೆ ತಂದುಕೊಡು ಅಂತ  ಯಾಕೆ  ಹಟ ಹಿಡಿಯಲಿಲ್ಲವೋ ಗೊತ್ತಿಲ್ಲ.  ಆದರೆ  ಮುರಿದು ಆಟ್ಟದ ಮೇಲೆ ಬಿಸಾಡಿದ್ದ ಕೊಡೆಯ  ಒಂದು ಕಂಬಿಯನ್ನು ತೆಗೆದುಕೊಂಡು,  ಅದರಲ್ಲಿ  ಒಂದು ಕಡೆ  "ವಿ" ಆಕಾರದಲ್ಲಿ   ಬಗ್ಗಿಸಿಕೊಡಲು ಹಟ ಮಾಡುತ್ತಿದ್ದೆ.  ಆಷ್ಟು ಮಾಡಿಕೊಟ್ಟರೆ,  ಎಲ್ಲೋ ಹೊಂಚಿಕೊಂಡಿದ್ದ ಕುಕ್ಕರಿನ ಗ್ಯಾಸ್ಕೆಟ್ ರಬ್ಬರನ್ನು  ವಿ ಅಕಾರದ ನಡುವೆ ಚಕ್ರ ಮಾಡಿಕೊಂಡು ರಸ್ತೆಯಲ್ಲಿ ಓಡಿಸಿಕೊಂಡು ನಾನು ಓಡುತ್ತಿದ್ದೆ. 


        ಯಾಕೋ ಆಗ ನಾನು ಅಪ್ಪನಿಗೆ  ಕತೆ ಹೇಳು ಅಂತ ಗಂಟು ಬೀಳಲಿಲ್ಲ.  ಆಗ ಮನೆಯಲ್ಲಿ  ವಟ ವಟ ಅನ್ನುತ್ತಿದ್ದ  ಅಜ್ಜಿಗೆ ದುಂಬಾಲು ಬೀಳುತ್ತಿದ್ದೆ.  ಬೆಳೆದು ದೊಡ್ಡವನಾದ ಮೇಲೆ ಅದೇ ಅಜ್ಜಿಯನ್ನು  ಕಾಡಿಸಿದ್ದು ಬೇರೆ ವಿಷಯ.  ಐದು-ಆರನೇ ತರಗತಿಗೆ ಬರುತ್ತಿದ್ದಂತೆ  ಯಾಕೋ ಅಪ್ಪನ ಮಡಿಲು ಬೇಕೆನಿಸುತ್ತಿರಲಿಲ್ಲ.  ಆತನ ಬಿಡುವಿಲ್ಲದ ದುಡಿತ ಮುಖದಲ್ಲಿ ಕಾಣತೊಡಗಿದಾಗ  ಆತನ ಮಡಿಲಿಗಿಂತ ಬೇರೇನೋ ಕಾಣತೊಡಗಿತ್ತು.  ನಂತರ ನನಗೆ ಹತ್ತಿರವಾದವರು ಅಜ್ಜಿ, ಅಮ್ಮ, ಅಕ್ಕ ಕೊನೆಯಲ್ಲಿ ತಂಗಿ. 

        ಒಮ್ಮೆ  ಸ್ಕೂಲಿನಲ್ಲಿ  ನಾನು ಸರಿಯಾಗಿ ಓದುತ್ತಿಲ್ಲವೆಂದು ಅಪ್ಪನನ್ನು ಬರಹೇಳಿದ್ದರು.  ಜೊತೆಯಲ್ಲಿ ನಾನು ಹೋದೆ.  ಆಟ ಜಾಸ್ತಿಯಾಗಿ  ಸರಿಯಾಗಿ ಓದುದೇ ಅಂಕ ಕಡಿಮೆ ತೆಗೆದಿದ್ದಾನೆಂದು ಮೇಷ್ಟ್ರು ಹೇಳಿದಾಗ ನನಗೆ ಬೇರೇನು ಹೇಳದೆ ಮನೆಗೆ ಕರೆದುಕೊಂಡು ಬಂದಿದ್ದರು. 

       ಬೆಂಕಿಪೊಟ್ಟಣ, ಸಿಗರೇಟು ಪ್ಯಾಕಿಗೆ ರಬ್ಬರ್ ಚಕ್ರಗಳನ್ನು ಹಾಕಿ ಲಾರಿ, ಬಸ್ಸು ಮಾಡುವುದು,  ರೈಲುಗಳನ್ನು ಮಾಡುವುದು ನಂತರ ಅದಕ್ಕೊಂದು ದಾರಕಟ್ಟಿ ಮನೆತುಂಬಾ ಎಳೆದಾಡುವುದು ನನಗಾಗ ತುಂಬಾ ಇಷ್ಟದ ವಿಚಾರವಾಗಿತ್ತು.  ಅದಕ್ಕಾಗಿ ಗ್ಯಾಸ್ಕೆಟ್ ರಬ್ಬರ್ ಚಕ್ರ ಓಡಿಸುತ್ತಾ  ರಸ್ತೆಗಳಲ್ಲಿ  ಸಿಗರೇಟು ಪ್ಯಾಕ್, ಮತ್ತು ಬೆಂಕಿಪಟ್ಟಣ, ಕ್ಲಿನಿಕ್‌ಗಳಲ್ಲಿ ಇಂಜೆಕ್ಷನ್ ಕೊಟ್ಟ ನಂತರ ಬಿಸಾಡಿದ ಸಣ್ಣಬಾಟಲಿಗೆ ಹಾಕಿರುತ್ತಿದ್ದ ರಬ್ಬರ್ ಮುಚ್ಚಳವನ್ನು[ಅದರಿಂದ ಚಕ್ರಗಳನ್ನು ಮಾಡುತ್ತಿದ್ದೆ] ಆರಿಸುತ್ತಿದ್ದೆ. ಒಮ್ಮೆ  ನನ್ನಪ್ಪ  ಒಮ್ಮೆ ನೋಡಿಬಿಟ್ಟರು.  ನಾನು ಮನೆಗೆ ಬರುತ್ತಿದ್ದಂತೆ  ನಾನು ಮನೆಯಲ್ಲಿ ಮಾಡಿಟ್ಟಿದ್ದ  ಲಾರಿ, ಬಸ್ಸು, ರೈಲು ಇತ್ಯಾದಿಗಳನ್ನು  ಹರಿದೆಸೆದು, ಆವರೇ ಮಾಡಿಕೊಟ್ಟಿದ್ದ  ಕೊಡೆಕಂಬಿಯನ್ನು  ಕಿತ್ತುಕೊಂಡು  ಗ್ಯಾಸ್ಕೆಟ್ ರಬ್ಬರನ್ನು ತುಂಡು ತುಂಡು ಮಾಡಿದ್ದರು. ನನಗೆ ಅಂಕ ಕಡಿಮೆ ಬಂದಿದ್ದ ಕಾರಣವೂ ಸೇರಿ  ಚೆನ್ನಾಗಿ ಬಡಿದ್ದಿದ್ದರು.

        ನನಗೆ ಏಟು ಬಿದ್ದಿದ್ದಕ್ಕಿಂತ ನಾನು ಮಾಡಿದ್ದೆಲ್ಲಾ ಹೋಯ್ತಲ್ಲ ಅಂತ ಕೆಲವು ದಿನ ಮಂಕಾಗಿಬಿಟ್ಟಿದ್ದೆ.  ಕೊನೆಗೊಂದು ದಿನ  ಅಪ್ಪನೇ ಹೋಗಿ ನನಗಿಷ್ಟವಾದ  ಸಿಗರೇಟುಪ್ಯಾಕ್‌ಗಳು, ಬೆಂಕಿಪೊಟ್ಟಣಗಳು, ಇಂಜೆಕ್ಷನ್ ರಬ್ಬರುಗಳು, ಇವುಗಳನ್ನೆಲ್ಲಾ ಕತ್ತರಿಸಿ ಅಂಟಿಸಲು ಬೇಕಾಗುವ ಕತ್ತರಿ, ಬ್ಲೇಡು,  ಗಮ್ ಇತ್ಯಾದಿಗಳನ್ನು ತಂದುಕೊಟ್ಟಿದರು.  ಮತ್ತೆ ಬೋನಸ್ ಆಗಿ  ನನಗೆ ಮತ್ತೊಂದು ಇಷ್ಟದ ವಸ್ತು ಥರ್ಮಕೋಲ್[ಅದರಿಂದ ಇನ್ನಷ್ಟು ಕೆಲವು ಕುಸುರಿ ಕೆಲಸಗಳನ್ನು ಮಾಡುತ್ತಿದ್ದೆ.]ಕೂಡ ತಂದುಕೊಟ್ಟಾಗ  ಅಂದು ನನಗೆ ಆಕಾಶವೇ ಕೈಗೆಟುಕಿದಂತಾಗಿತ್ತು.

 ಆ  ನಂತರ ಒಮ್ಮೆ  ಕದ್ದು ಮುಚ್ಚಿ ಸೈಕಲ್ ಕಲಿಯುವಾಗ  ಸಿಕ್ಕಿಬಿದ್ದು  ಏಟು ತಿಂದಿದ್ದೇ ಕೊನೆ.  ನಂತರ  ಅವರು ನನಗೆ ಹೊಡೆದಿದ್ದು ನೆನಪಿಲ್ಲ.

        ಅಪ್ಪ ನಿವೃತ್ತಿಯಾದ ಮೇಲೆ ಗೆಳೆಯನಂತೆ  ನನಗೆ  ಎಲ್ಲಾ ವಿಚಾರಗಳನ್ನು  ಮುಕ್ತವಾಗಿ ಚರ್ಚಿಸಲು ಇಷ್ಟಪಡುತ್ತಿದ್ದರು..  ಆದರೆ  ನನಗೆ ಆಗ  ಯುವ ವಯಸ್ಸಿನ ಅಮಲು ಹೆಚ್ಚಿದ್ದರಿಂದ  ಅವರ ಮಾತು ನನ್ನ ಕಿವಿಗೆ ಕೇಳುತ್ತಿರಲಿಲ್ಲ.  ನಾನು ಸ್ವಲ್ಪ  ದುಡಿಯುವಂತಾಗಿದ್ದು ಮತ್ತು ಅವರಿಗೆ  ವಯಸ್ಸಾಗಿದ್ದು  ಎರಡು ಸೇರಿ ಅವರನ್ನು ನಿರ್ಲಕ್ಷ ಮಾಡುವಂತ  ಆಹಂ ಬಂದುಬಿಟ್ಟಿತ್ತು.  ಆವರ ವಯಸ್ಸು ೬೫ ದಾಟುತ್ತಿದ್ದಂತೆ  ಕಾಯಿಲೆಗಳು ಅವರಿಸಿಕೊಂಡುಬಿಟ್ಟಿದ್ದವು.  ಆ ಸಮಯದಲ್ಲಿ  ತಮ್ಮ ಮಾತುಗಳನ್ನು  ಕೇಳಿಸಿಕೊಳ್ಳಲು ಒಬ್ಬ ಗೆಳೆಯ ಬೇಕಿತ್ತೋನೋ...ಮಗುವಿನಂತೆ ಮಾತಾಡುತ್ತಿದ್ದರು.  ಊರಿನ ವಿಚಾರವಾಗಿ,  ಹೊಲ ಗದ್ದೆ, ಮನೆಯ ವಿಚಾರವಾಗಿ  ಅಲ್ಲಿ ತಾವು ಮಾಡಿಸಿದ ಕೆಲಸವನ್ನು  ಹೇಳಿಕೊಂಡು  ನಾನು ಮೆಚ್ಚಿದರೇ  ಅವರಿಗೆ  ಸಂತೋಷವಾಗುತ್ತಿತ್ತು.  ಅವರಿಗೆ ಪ್ಯಾರಲೈಸ್ ಸ್ಟ್ರೋಕ್ ತಗುಲಿದಾಗ  ಮಾತನಾಡಲಾಗದೇ  ನನ್ನ ಕೈಯಿಡಿದು   ಅತ್ತುಬಿಟ್ಟಿದ್ದರು.  ಅಂತ ಅಪ್ಪ ಈಗ ಇಲ್ಲ. 

        ಇಂದು ಅಪ್ಪಂದಿರ ದಿನ[ Father’s day] ನನ್ನ ಅಪ್ಪನ ಜೊತೆಗೆ ಎಲ್ಲಾ  ಅಪ್ಪಂದಿರನ್ನು ನೆನಸಿಕೊಳ್ಳುತ್ತಾ.....ರಸ್ತೆಯಲ್ಲಿ ಜಾತ್ರೆಯಲ್ಲಿ, ಉತ್ಸವಗಳಲ್ಲಿ ಕೆಲವು ಅಪ್ಪ-ಮಕ್ಕಳ  ನಿಶ್ಕಲ್ಮಶ ಪ್ರೀತಿಯ  ಮಧುರ ಕ್ಷಣಗಳನ್ನು  ಕ್ಲಿಕ್ಕಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...

         ನೀವು ನೋಡಿ.  ನೋಡದಿದ್ದಲ್ಲಿ  "ನಮ್ಮಪ್ಪನ್ನ  ಕರ್ಕೊಂಡು ಬರ್ತೀನಿ...."



ಚಿತ್ರ-ಲೇಖನ.
ಶಿವು.ಕೆ.













2 comments:

ಹರೀಶ ಮಾಂಬಾಡಿ said...

nice

sunaath said...

ಶಿವು, ಬಾಲ್ಯಕಾಲದ ಅಪ್ಪ, ಹದಿಹರೆಯದಲ್ಲಿಯ ಅಪ್ಪ, ಕೊನೆಗೊಮ್ಮೆ ನಿಸ್ಸಹಾಯಕ ಅಪ್ಪ ಈ ಎಲ್ಲ ರೂಪಗಳನ್ನು ಹೃದ್ಯವಾಗಿ ನಿರೂಪಿಸಿದ್ದೀರಿ. ಅಪ್ಪ ಹಾಗು ಗಂಡುಮಕ್ಕಳ ಬಹುತೇಕ ಸಂಬಂಧವು ಹೀಗೇ ಇರುವುದರಿಂದ ನಿಮ್ಮ ಲೇಖನಕ್ಕೆ ಒಂದು ಸಾರ್ವಕಾಲಿಕ, ಸಾರ್ವದೇಶಿಕ ಸ್ವರೂಪ ಬಂದಿದೆ. ನಿಮ್ಮ ಭಾವನೆಗಳನ್ನು ನಾನೂ ಸಹ share ಮಾಡುತ್ತಿದ್ದೇನೆ.