Friday, January 6, 2012
Monday, January 2, 2012
ಹೊಸ ವರ್ಷದ ಮೊದಲ ದಿನವೇ ನನ್ನ ಹೊಸ ಕ್ಯಾಮೆರ ಮತ್ತು ಲೆನ್ಸುಗಳು ಮತ್ತು EFIAP ಫೋಟೊಗ್ರಫಿ Distinction
ಅತ್ಮೀಯ ಬ್ಲಾಗ್ ಗೆಳೆಯರೆ,
ಮೊದಲಿಗೆ ನಿಮಗೆಲ್ಲ ಹೊಸ ವರ್ಷದ ಶುಭಾಶಯಗಳು. 2011 ಎನ್ನುವ ಒಂದು ವರ್ಷ ನನ್ನ ಮಟ್ಟಿಗೆ ಹೀಗೆ ಬಂದು ಹಾಗೆ ಹೋಯ್ತು ಅನ್ನುವ ಆಗಿತ್ತು. ಕಳೆದ ವರ್ಷದ ಲೆಕ್ಕದಲ್ಲಿ ನೋಡಿದರೆ ಮೊದಲಿಗೆ ನನ್ನ ಶ್ರೀಮತಿಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ ಅಂದುಕೊಂಡಿದ್ದೇನೆ. ಏಕೆಂದರೆ ಅವಳು ಖುಷಿಯಾಗಿದ್ದಾಳೆ. ಅದು ಬಿಟ್ಟರೆ ನನ್ನ ವಿಚಾರಕ್ಕೆ ಬಂದರೆ ನನ್ನ ಮನೆ, ಪೇಪರ್ ಏಜೆನ್ಸಿ ಕೆಲಸ, ಇವೆಲ್ಲ ಎಂದಿನಂತೆ ಸಣ್ಣ ಪುಟ್ಟ ತೊಂದರೆಗಳೊಂದಿಗೆ ಸರಳ ಮತ್ತು ಸರಾಗ. ಮೂರು ಹೊತ್ತು ಊಟಕ್ಕೆ ಮತ್ತು ವರ್ಷಕ್ಕೆರಡು ಜೊತೆ ಬಟ್ಟೆಗೆ ನಮ್ಮ ಕುಟುಂಬಕ್ಕೆ ತೊಂದರೆಯಿಲ್ಲದ ವರ್ಷ. ಪೂರ್ತಿ ವರ್ಷದಲ್ಲಿ ಒಂದು "ಬೆಳಗಾಯ್ತು" ಕಿರುಚಿತ್ರ ಮತ್ತು ನನ್ನ ವೆಬ್ ಸೈಟು ಇವೆರಡು ಖುಷಿಯ ವಿಚಾರಗಳು. ಅದನ್ನು ಸಾಧನೆ ಎಂದು ನಾನು ಹೇಳಲು ಇಷ್ಟಪಡುವುದಿಲ್ಲ. ಏಕೆಂದರೆ ಅವೆರಡರ ಪಲಿತಾಂಶ ಬಂದ ಮೇಲೆಯೇ ಅವು ಸಾಧನೆಯೋ ಅಥವ ಸುಮ್ಮನೇ ಮಣ್ಣು ಹೊತ್ತಿದ್ದೋ ಅಂತ ಗೊತ್ತಾಗುತ್ತದೆ. ಅದೆಲ್ಲದರ ಪಲಿತಾಂಶ 2012ರಲ್ಲಿ ಗೊತ್ತಾಗುತ್ತದೆ. ಇನ್ನುಳಿದಂತೆ ಬರವಣಿಗೆ ವಿಚಾರಕ್ಕೆ ಬಂದರೆ ಆ ವರ್ಷದಲ್ಲಿ ನಾನು ವಾರ ವಾರ ವೀಕು. ಏಕೆಂದರೆ ಕಳೆದ ಮೂರು ತಿಂಗಳಿಂದ ಕಂಪ್ಯೂಟರಿನ ಬರಹವನ್ನು ಕುಟ್ಟುವುದು ಮರೆತೆ ಹೋಗಿದೆ. ಇದರ ನಡುವೆ ಖುಷಿಯ ವಿಚಾರವೆಂದರೆ ಅಜಾದ್ ಸಹಕಾರದಿಂದಾಗಿ ದೊಡ್ಡಮನಿ ಮಂಜು, ರೂಪ ಎಲ್ ರಾವ್, ಸುಧೇಶ್ ಶೆಟ್ಟಿ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದು ಒಂಥರ ಖುಷಿ ತಂದಿದೆ.
ಇದೆಲ್ಲವನ್ನು ಬಿಟ್ಟರೆ ಒಂದಷ್ಟು ಫೋಟೊಗ್ರಫಿ ಮತ್ತು ಅದರ ಲೇಖನಕ್ಕೆ ಸಂಭಂದಿಸಿದ ಕಿರಿಕಿರಿಗಳು, ಬೇಸರಗಳು ಇದರಿಂದಾಗಿ ನಾನು ಬರವಣಿಗೆಯನ್ನು ನಿಲ್ಲಿಸಿದ್ದು ನಿಮಗೆ ಗೊತ್ತೇ ಇದೆ. ಇದು ಒಂಥರ ಒಳ್ಳೆಯದೇ ಆಯಿತೇನೋ ಅನ್ನಿಸಿತ್ತು. ಏಕೆಂದರೆ ಅದರ ನಂತರ ನಾನು ಫೂರ್ತಿ ಫೋಟೊಗ್ರಫಿಯಲ್ಲಿ ಮುಳುಗಿಹೋದೆ. ಸಾವಿರಾರು ಫೋಟೊಗಳನ್ನು ಕ್ಲಿಕ್ಕಿಸಿದೆ. ಅವೆಲ್ಲಕ್ಕೂ ಅಕ್ಷರ ರೂಪ ಕೊಟ್ಟು ಬ್ಲಾಗು, ಬಜ್ ಮತ್ತು ಫೇಸ್ ಬುಕ್ ಗೆ ಪೋಸ್ಟ್ ಮಾಡಬೇಕೆನ್ನಿಸಿದರೂ ಅದ್ಯಾಕೋ ಎಲ್ಲವನ್ನು ತಡೆಹಿಡಿದುಬಿಟ್ಟೆ. ಕಾರಣ ಏಕೆಂದು ಗೊತ್ತಿಲ್ಲ. ಕೆಲವು ಗೆಳೆಯರ ಸಲಹೆಯನ್ನು ಕೇಳಿದಾಗ ಎಲ್ಲವನ್ನು ಫೋಸ್ಟ್ ಮಾಡಬೇಡಿ. ಪುಸ್ತಕ ರೂಪಕ್ಕೆ ಕಾಯ್ದಿರಿಸಿ ಎಂದರು. ಹಾಗೆ ಮಾಡಿದ್ದೇನೆ ಅಂದುಕೊಂಡಿದ್ದೇನೆ.
ಕಳೆದ ಮೂರು ತಿಂಗಳಿಂದ ಬರವಣಿಗೆಯನ್ನೇ ನಿಲ್ಲಿಸಿರುವವನು ಇದ್ದಕ್ಕಿದ್ದ ಹಾಗೆ ಏಕೆ ಈ ಲೇಖನವನ್ನು ಬರೆಯಲು ಪ್ರಾರಂಭಿಸಿದೆ ಅಂತ ನಿಮಗೆ ಅನ್ನಿಸಿರಬಹುದು. ನನಗೂ ಕೆಲಸ ಒತ್ತಡ, ಫೋಟೋಗ್ರಫಿ ಹೀಗೆ ಹತ್ತಾರು ಕಾರಣಗಳಿಂದಾಗಿ ಬರವಣಿಗೆಯೇ ನಿಂತುಹೋಗಿರುವ ಈ ಸಮಯದಲ್ಲಿ ಈ ವರ್ಷದ ಮೊದಲ ದಿನ ಘಟಿಸಿದ ಕೆಲವು ಸಂಗತಿಗಳು ಮತ್ತೆ ಬರೆಯುವಂತೆ ಮಾಡಿವೆ.
ನಿನ್ನೆ ಬೆಳಿಗ್ಗೆ ಎದ್ದೆನಲ್ಲ. ಮೊದಲಿಗೆ ಮುಂಜಾನೆ ಐದುಗಂಟೆಗೆ ನನ್ನ ಪೇಪರ್ ಹುಡುಗರೊಂದಿಗೆ ಹೊಸವರ್ಷವನ್ನು ಕೇಕ್ ಕಟ್ ಮಾಡಿ ತಿಂದು ಎಲ್ಲರೂ ಸಂಭ್ರಮಿಸಿದೆವು. ಅದರ ನಂತರ ನಮ್ಮ ಸಿದ್ಧ ಸಮಾಧಿ ಯೋಗದ ವೈವಿಧ್ಯಮಯ ಆಟದಲ್ಲಿ ಭಾಗವಹಿಸಿದ್ದು. ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನದವರೆಗೆ ನಡೆದ ಅನೇಕ ಆಟಗಳು ನಿಜಕ್ಕೂ ಮರೆಯಲಾಗದ್ದು. ನಾನು ಸೇರಿದಂತೆ ಅಕ್ಷರಶ: ಎಲ್ಲರೂ ಪುಟ್ಟ,ಮಕ್ಕಳಂತೆ ಭಾಗವಹಿಸಿ ಖುಷಿಪಟ್ಟೆವು. ನಾವು ಮಕ್ಕಳಾಗುವ ಅವಕಾಶ ನೀಡಿದ್ದಕ್ಕೆ ನಮ್ಮ ಸಿದ್ಧ ಸಮಾದಿ ಯೋಗ ಸಂಸ್ಥೆಗೆ ಧನ್ಯವಾದಗಳು.
ಅದನ್ನು ಮುಗಿಸಿ ಮನೆಗೆ ಬರುತ್ತಿದ್ದಂತೆ ನನ್ನ ಗೆಳೆಯನಿಂದ ಫೋನ್. "ನಿನ್ನ Canon 5D mark 2 Camera, 24-70 2.8 lens, Flash ಎಲ್ಲವೂ ಅಮೇರಿಕದಿಂದ ಬಂದಿದೆ ತೆಗೆದುಕೊಂಡು ಹೋಗು" ಅಲ್ಲಿಗೆ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.
ನನ್ನ ಬಹುದೊಡ್ಡ ಕನಸು ಇದು. Canon 5D mark 2 Camera, ಮತ್ತು ಅದಕ್ಕೆ ಸಂಭಂದಿಸಿದ ಉಪಕರಣಗಳು ಹೊಸವರ್ಷದ ದಿನ ನನ್ನವಾಗಿದ್ದು ನಾನು ಅವುಗಳ ಒಡೆಯನೆಂದುಕೊಳ್ಳುವುದಕ್ಕೆ ಒಮ್ಮೊಮ್ಮೆ ಖುಷಿಯಾಗುತ್ತಿದೆ, ಮತ್ತೊಮ್ಮೆ ಅಂತ ಅದ್ಬುತ ಕ್ಯಾಮೆರವನ್ನು ನಾನು ಚೆನ್ನಾಗಿ ನಿಭಾಯಿಸಬಲ್ಲೆನಾ ಮತ್ತು ಚೆನ್ನಾಗಿ ದುಡಿಸಿಕೊಳ್ಳಬಲ್ಲೆನಾ ಅಂತ ಅಳುಕು ಮನದೊಳಗೆ ಕಾಡುತ್ತಿದೆ. ಇದು ಒಂಥರ ಅಂತರರಾಷ್ಟ್ರೀಯ ಮಟ್ಟದ ಮಹಾನ್ ಕಲಾವಿದನನ್ನು ಸಾಮಾನ್ಯ ನಿರ್ಧೇಶಕನೊಬ್ಬ ಸಂಪೂರ್ಣವಾಗಿ ದುಡಿಸಿಕೊಳ್ಳಲು ಸಾಧ್ಯವೇ ಎನ್ನುವ ಜಿಜ್ಞಾಸೆಯಲ್ಲಿದ್ದೇನೆ. ಇವೆರಡು ಭಾವನೆಗಳು2012 ವರ್ಷದ ಕೊಡುಗೆ ಅಂತ ಅಂದುಕೊಂಡಿದ್ದೇನೆ. ಹಾಗೆ ಹೊಸ ವರ್ಷದ ಎರಡನೆ ದಿನವಾದ ಇವತ್ತು ನಾನು ತುಂಬಾ ಇಷ್ಟಪಡುವ Caon 70-200 f 2.8 L USM IS lens ಮನೆಗೆ ಬಂದಿದೆ
ಇದೆಲ್ಲವನ್ನು ಮೀರಿ ನನಗೆ ಆಕಾಶದಲ್ಲಿ ತೇಲಾಡುವಂತ ವಿಚಾರವೊಂದು ನನಗೆ ನಿನ್ನೆ ಫೋನ್ ಮೂಲಕ ಬಂದಿದ್ದು. ಮದ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ನಾನು ಸಂಪೂರ್ಣ ನಮ್ಮ ಸಿದ್ದ ಸಮಾಧಿ ಯೋಗದ ಆಟಗಳಲ್ಲಿ ಮೈಮರೆತಿದ್ದಾಗ ಒಂದು ಫೋನ್ ಬಂತು. ಆ ಸಮಯದಲ್ಲಿ ಫೋನ್ ತೆಗೆಯಬಾರದೆಂದು ನಮ್ಮ ಆಟದ ನಿಯಮವಿದ್ದರೂ ಅದ್ಯಾಕೋ ಅಬ್ಯಾಸಬಲದಿಂದಾಗಿ ಮರೆಯಲ್ಲಿ ಹೋಗಿ ನೋಡಿದರೆ ನಮ್ಮ Fedaration of Indian photography ಅದ್ಯಕ್ಷರ ಫೋನ್ ನಂಬರ್. "Hi Shivu, Happy new year, good news for you, you got EFIAP Distinction from Paris" ಅಂತ ಹೇಳಿದರಲ್ಲ, ಆ ಕ್ಷಣದ ಖುಷಿಯಿಂದಾಗಿ ಆ ಮೈದಾನದಲ್ಲಿ ಅಂಗಾತ ಮಲಗಿಬಿಟ್ಟೆ. ಮೇಲೆ ತಿಳಿ ಆಕಾಶ. ಅದರಲ್ಲಿ ತೇಲುತ್ತಿದ್ದೇನೆ ಅನ್ನಿಸಿತ್ತು. ನನ್ನ ಮಹತ್ವಾಕಾಂಕ್ಷೆಯ ಫೋಟೊಗ್ರಫಿ ಡಿಸ್ಟಿಂಕ್ಷನ್ ಆ ಸಮಯದಲ್ಲಿ ಹಾಗೆ ಬರುತ್ತಿದೆ ಅಂತ ನಾನು ಕನಸು ಮನಸ್ಸಿನಲ್ಲಿಯೂ ನೆನಸಿರಲಿಲ್ಲ. ಹತ್ತು ನಿಮಿಷ ಹಾಗೆ ಆಕಾಶ ನೋಡುತ್ತ ಅಂಗಾತ ಮಲಗಿದ್ದೆ. ಕಣ್ತೆರೆದು ಆಕಾಶದೊಳಗೆ ಒಂದಾಗುವಾಗಿನ ನನ್ನ ಭಾವನೆಗಳನ್ನು ವರ್ಣಿಸಲು ಇಲ್ಲಿ ಪದಗಳಿಲ್ಲ. ಇದೆಲ್ಲ ಆಗುವಷ್ಟರಲ್ಲಿ ನನ್ನ ಕ್ರೀಡಾ ಪಾರ್ಟನರ್ ನಾನೆಲ್ಲಿ ಹೋದೆ ಅಂತ ಹುಡುಕಿಕೊಂಡು ಬಂದು "ಶಿವು ಏನಾಯ್ತು ಹೀಗೆ ಅಂಗಾತ ಮಲಗಿದ್ದೀರಿ, ಎದ್ದೇಳಿ ನಾವಿಬ್ಬರೂ ಮೂರು ಕಾಲಿನ ಓಟದ ಸ್ಪರ್ಧೆಗೆ ಭಾಗವಹಿಸಬೇಕಿದೆ" ಅಂದಾಗಲೇ ನಾನು ವಾಸ್ತವ ಪ್ರಪಂಚಕ್ಕೆ ಬಂದಿದ್ದು. ಈ ಮೊದಲು ಜೋಡಿ ಆಟದ ಒಂದು ಸ್ಪರ್ಧೆಯಲ್ಲಿ ಗೆದ್ದಿದ್ದ ನಾವಿಬ್ಬರೂ, EFIAP Distinction ಬಂದ ಖುಷಿಯಲ್ಲಿ ನಾನು ಸರಿಯಾಗಿ ಭಾಗವಹಿಸದೇ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ಮೈಮರೆತು ಇಬ್ಬರು ಸೋತಿದ್ದೆವು.
1]ದಿವಂಗತ ಡಾ.ಜಿ. ಥಾಮಸ್
2]ದಿವಂಗತ ಸಿ. ರಾಜಗೋಪಾಲ್,
3]ದಿವಂಗತ ಎಂ ವೈ ಗೋರ್ಪಡೆ,
4]ದಿವಂಗತ ಒ.ಸಿ ಎಡ್ವರ್ಡ್,
5]ದಿವಂಗತ ಎಸ್.ನಾಗಭೂಷಣ್,6]ಶ್ರೀಯುತ ಟಿ.ಎನ್.ಎ ಪೆರುಮಾಳ್,
7]ಶ್ರೀಯುತ ಬಿ. ಶ್ರೀನಿವಾಸ,
8]ಶ್ರೀಯುತ ಎಚ್.ಸತೀಶ್
9]ಶ್ರೀಯುತ ಎಚ್.ವಿ ಪ್ರವೀಣ್ ಕುಮಾರ್
10]ಶ್ರೀಯುತ ಎಮ್.ಎನ್ ಜಯಕುಮಾರ್,
11]ಶ್ರೀಯುತ ಎಸ್. ತಿಪ್ಪೆಸ್ವಾಮಿ,
12]ಶ್ರೀಯುತ ದಿವಂಗತ ಬಿ.ಎಸ್. ಸುಂದರಂ,
13]ಶ್ರೀಯುತ ದಿವಂಗತ ಡಾ.ಡಿ.ವಿ. ರಾವ್,
14]ಶ್ರೀಯುತ ಜಿ.ಎಸ್.ರವಿ,
15]ಶ್ರೀಯುತ ಸಿ.ಅರ್ ಸತ್ಯನಾರಾಯಣ,
16]ಶ್ರೀಯುತ ಡಾ.ಪ್ರಮೋದ್ ಜಿ. ಶ್ಯಾನುಬಾಗ್,
17]ಶ್ರೀಯುತ ಜಿ.ಎಸ್ ಕೃಷ್ಣಮೂರ್ತಿ,
18]ಶ್ರೀಯುತ ಎ.ಜಿ.ಲಕ್ಷ್ಮಿ ನಾರಾಯಣ
..ಹೀಗೆ ಕರ್ನಾಟಕದ ಮಟ್ಟಿಗೆ ಇದುವರೆಗೆ 18 ಫೋಟೊಗ್ರಫಿ ಕಲಾವಿದರು ಈ EFIAP ಮನ್ನಣೆಯನ್ನು ಪಡೆದಿದ್ದಾರೆ. ಹೂವಿನೊಂದಿಗೆ ನಾರು ಎನ್ನುವಂತೆ ನಾನು ಹತ್ತೊಂಬತ್ತನೆಯವನಾಗಿ ಇವರೊಟ್ಟಿಗೆ ಸೇರಿದ್ದಕ್ಕೆ ಸಂತೋಷವಾಗುವುದರ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. .
ಹೊಸ ವರ್ಷದ ಮೊದಲದಿನವಾದ ಇವತ್ತಿನ ನಮ್ಮ SSY ವಿನೋದದ ಆಟದಲ್ಲಿ ಸಂಫೂರ್ಣ ಮಗುವಿನಂತಾಗಿದ್ದು, ನನ್ನ ಕನಸಿನಕ್ಯಾಮೆರ ಮತ್ತು ಇತರ ಉಪಕರಣಗಳ ಜೊತೆಗೆ Canon 70-200 f2.8 lens ನನ್ನವಾಗಿದ್ದು, ಮಹತ್ವಾಕಾಂಕ್ಷೆ EFIAP ಅಂತರರಾಷ್ಟ್ರಿಯ ಮನ್ನಣೆ ಇವತ್ತೆ ದಕ್ಕಿದ್ದು, ಮತ್ತೆ ಇವತ್ತಿನ ಉದಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಸಂಪದ ಪುಟದಲ್ಲಿ ಇಳಿಸಂಜೆ ಹೊತ್ತಿನ ಗೋದೂಳಿ ಸಮಯದಲ್ಲಿ ನಾನು ಕ್ಲಿಕ್ಕಿಸಿದ್ದ ಎತ್ತಿನ ಗಾಡಿಯ ಚಿತ್ರವು ಅರ್ಧಪುಟ ಪೂರ ಪ್ರಕಟವಾಗಿದ್ದು.... ಇದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲಾರೆ ಎನಿಸಿತ್ತು. ಬಹುಶಃ 2012ರಲ್ಲಿ ಇವೆಲ್ಲಕ್ಕಿಂತ ದೊಡ್ಡ ಕೊಡುಗೆ ಮತ್ತೊಂದು ಇರಲಾರದು ಅನ್ನಿಸಿ ಖುಷಿಯಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮತ್ತೊಮ್ಮೆ ನಿಮಗೆಲ್ಲರಿಗೂ ಹೊಸ ವರ್ಶದ ಶುಭಾಶಯಗಳು.
ಚಿತ್ರ ಮತ್ತು ಲೇಖನ
ಶಿವು.ಕೆ
Subscribe to:
Posts (Atom)